Shanti Parva: Chapter 227

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೨೭

ಬ್ರಾಹ್ಮಣರ ಕರ್ತವ್ಯಗಳ ಪ್ರತಿಪಾದನೆ; ಕಾಲಸ್ವರೂಪ ನದಿಯನ್ನು ದಾಟುವ ಉಪಾಯ (1-31).

12227001 ವ್ಯಾಸ ಉವಾಚ|

12227001a ತ್ರಯೀವಿದ್ಯಾಮವೇಕ್ಷೇತ ವೇದೇಷೂಕ್ತಾಮಥಾಂಗತಃ|

12227001c ಋಕ್ಸಾಮವರ್ಣಾಕ್ಷರತೋ ಯಜುಷೋಽಥರ್ವಣಸ್ತಥಾ||

ವ್ಯಾಸನು ಹೇಳಿದನು: “ಬ್ರಾಹ್ಮಣನು ವೇದದಲ್ಲಿ ಹೇಳಿರುವ ತ್ರಯೀವಿದ್ಯೆಯನ್ನು ಅಂಗಗಳ ಸಮೇತ ಅಧ್ಯಯನ ಮಾಡಬೇಕು. ಋಕ್, ಸಾಮ, ವರ್ಣ, ಅಕ್ಷರ, ಯಜುಸ್ ಮತ್ತು ಅಥರ್ವ ಈ ಷಟ್ಕರ್ಮಗಳಲ್ಲಿ ಪಾಂಡಿತ್ಯವಿರಬೇಕು.

12227002a ವೇದವಾದೇಷು ಕುಶಲಾ ಹ್ಯಧ್ಯಾತ್ಮಕುಶಲಾಶ್ಚ ಯೇ|

12227002c ಸತ್ತ್ವವಂತೋ ಮಹಾಭಾಗಾಃ ಪಶ್ಯಂತಿ ಪ್ರಭವಾಪ್ಯಯೌ||

ವೇದವಾದದಲ್ಲಿ ಕುಶಲರಾಗಿರುವ, ಅಧ್ಯಾತ್ಮವಿಷಯದಲ್ಲಿ ಕುಶಲರಾಗಿರುವ ಸತ್ತ್ವವಂತ ಮಹಾಭಾಗರು ಸೃಷ್ಟಿ-ಲಯಗಳನ್ನು ಕಾಣುತ್ತಾರೆ.

12227003a ಏವಂ ಧರ್ಮೇಣ ವರ್ತೇತ ಕ್ರಿಯಾಃ ಶಿಷ್ಟವದಾಚರೇತ್|

12227003c ಅಸಂರೋಧೇನ ಭೂತಾನಾಂ ವೃತ್ತಿಂ ಲಿಪ್ಸೇತ ವೈ ದ್ವಿಜಃ||

ಹೀಗೆ ಧರ್ಮದಿಂದ ನಡೆದುಕೊಂಡು ಶಿಷ್ಟಾಚಾರ ಕ್ರಿಯೆಗಳನ್ನು ಆಚರಿಸಬೇಕು. ಭೂತಗಳಿಗೆ ವಿರುದ್ಧವಾಗದ ವೃತ್ತಿಯಲ್ಲಿ ದ್ವಿಜನು ತೊಡಗಿರಬೇಕು.

12227004a ಸದ್ಭ್ಯ ಆಗತವಿಜ್ಞಾನಃ ಶಿಷ್ಟಃ ಶಾಸ್ತ್ರವಿಚಕ್ಷಣಃ|

12227004c ಸ್ವಧರ್ಮೇಣ ಕ್ರಿಯಾ ಲೋಕೇ ಕುರ್ವಾಣಃ ಸತ್ಯಸಂಗರಃ||

ಶಿಷ್ಟ ಶಾಸ್ತ್ರವಿಚಕ್ಷಣ ಸತ್ಪುರುಷರಿಂದ ಶಾಸ್ತ್ರಜ್ಞಾನವನ್ನು ಪಡೆದುಕೊಳ್ಳಬೇಕು. ಲೋಕದಲ್ಲಿ ಸ್ವಧರ್ಮದ ಕ್ರಿಯೆಗಳನ್ನೇ ಮಾಡುತ್ತಾ ಸತ್ಯಸಂಗರನಾಗಿರಬೇಕು.

12227005a ತಿಷ್ಠತ್ಯೇತೇಷು ಗೃಹವಾನ್ ಷಟ್ಸು ಕರ್ಮಸು ಸ ದ್ವಿಜಃ|

12227005c ಪಂಚಭಿಃ ಸತತಂ ಯಜ್ಞೈಃ ಶ್ರದ್ದಧಾನೋ ಯಜೇತ ಚ||

ಗೃಹಸ್ಥ ದ್ವಿಜನು ಈ ಆರು ಕರ್ಮಗಳಲ್ಲಿಯೇ ತೊಡಗಿರಬೇಕು. ಶದ್ಧದಾನನಾಗಿ ಸತತವೂ ಐದು ಯಜ್ಞಗಳಿಂದ[1] ಆರಾಧಿಸಬೇಕು.

12227006a ಧೃತಿಮಾನಪ್ರಮತ್ತಶ್ಚ ದಾಂತೋ ಧರ್ಮವಿದಾತ್ಮವಾನ್|

12227006c ವೀತಹರ್ಷಭಯಕ್ರೋಧೋ ಬ್ರಾಹ್ಮಣೋ ನಾವಸೀದತಿ||

ಧೃತಿಮಾನನೂ, ಅಪ್ರಮತ್ತನೂ, ದಾಂತನೂ, ಧರ್ಮವಿದುವೂ, ಆತ್ಮವಂತನೂ ಆಗಿರಬೇಕು. ಹರ್ಷ-ಭಯ-ಕ್ರೋಧಗಳನ್ನು ತೊರೆದಿರುವ ಬ್ರಾಹ್ಮಣನು ನಾಶಹೊಂದುವುದಿಲ್ಲ.

12227007a ದಾನಮಧ್ಯಯನಂ ಯಜ್ಞಸ್ತಪೋ ಹ್ರೀರಾರ್ಜವಂ ದಮಃ|

12227007c ಏತೈರ್ವರ್ಧಯತೇ ತೇಜಃ ಪಾಪ್ಮಾನಂ ಚಾಪಕರ್ಷತಿ||

ದಾನ, ಅಧ್ಯಯನ, ಯಜ್ಞ, ತಪಸ್ಸು, ಲಜ್ಜೆ, ಸರಳತೆ, ಇಂದ್ರಿಯ ನಿಗ್ರಹ – ಇವು ತೇಜಸ್ಸನ್ನು ವರ್ಧಿಸುತ್ತವೆ ಮತ್ತು ಪಾಪಗಳನ್ನು ನಾಶಗೊಳಿಸುತ್ತವೆ.

12227008a ಧೂತಪಾಪ್ಮಾ ತು ಮೇಧಾವೀ ಲಘ್ವಾಹಾರೋ ಜಿತೇಂದ್ರಿಯಃ|

12227008c ಕಾಮಕ್ರೋಧೌ ವಶೇ ಕೃತ್ವಾ ನಿನೀಷೇದ್ ಬ್ರಹ್ಮಣಃ ಪದಮ್||

ಮೇಧಾವಿಯು ಹೀಗೆ ಪಾಪಗಳನ್ನು ಕಳೆದುಕೊಂಡು ಅಲ್ಪಾಹಾರಿಯೂ ಜಿತೇಂದ್ರಿಯನೂ ಆಗಿದ್ದು, ಕಾಮ-ಕ್ರೋಧಗಳನ್ನು ವಶಪಡಿಸಿಕೊಂಡು ಬ್ರಹ್ಮಪದವನ್ನು ಬಯಸಬೇಕು.

12227009a ಅಗ್ನೀಂಶ್ಚ ಬ್ರಾಹ್ಮಣಾಂಶ್ಚಾರ್ಚೇದ್ದೇವತಾಃ ಪ್ರಣಮೇತ ಚ|

12227009c ವರ್ಜಯೇದ್ರುಷತೀಂ ವಾಚಂ ಹಿಂಸಾಂ ಚಾಧರ್ಮಸಂಹಿತಾಮ್||

ಅಗ್ನಿಗಳನ್ನು, ಬ್ರಾಹ್ಮಣರನ್ನು, ಮತ್ತು ದೇವತೆಗಳನ್ನು ಅರ್ಚಿಸಬೇಕು ಮತ್ತು ನಮಸ್ಕರಿಸಬೇಕು. ಹಿಂಸೆ ಮತ್ತು ಅಧರ್ಮಯುಕ್ತ ಕಟುವಾಣಿಯನ್ನು ವರ್ಜಿಸಬೇಕು.

12227010a ಏಷಾ ಪೂರ್ವತರಾ ವೃತ್ತಿರ್ಬ್ರಾಹ್ಮಣಸ್ಯ ವಿಧೀಯತೇ|

12227010c ಜ್ಞಾನಾಗಮೇನ ಕರ್ಮಾಣಿ ಕುರ್ವನ್ಕರ್ಮಸು ಸಿಧ್ಯತಿ||

ಇದೇ ಹಿಂದಿನಿಂದ ನಡೆದುಕೊಂಡು ಬಂದಿರುವ ವೃತ್ತಿಯನ್ನು ಬ್ರಾಹ್ಮಣನಿಗೆ ವಿಧಿಸಲಾಗಿದೆ. ಜ್ಞಾನಮಾರ್ಗದಿಂದ ಕರ್ಮಗಳನ್ನು ಮಾಡುವುದರಿಂದ ಕರ್ಮಗಳು ಸಿದ್ಧಿಸುತ್ತವೆ.

12227011a ಪಂಚೇಂದ್ರಿಯಜಲಾಂ ಘೋರಾಂ ಲೋಭಕೂಲಾಂ ಸುದುಸ್ತರಾಮ್|

12227011c ಮನ್ಯುಪಂಕಾಮನಾಧೃಷ್ಯಾಂ ನದೀಂ ತರತಿ ಬುದ್ಧಿಮಾನ್||

ಪಂಚೇಂದ್ರಿಯಗಳೇ ಘೋರ ನೀರಾಗಿರುವ, ಲೋಭವೇ ದುಸ್ತರ ತೀರಗಳಾಗಿರುವ, ಕೋಪವೇ ಕೆಸರಾಗಿರುವ ಮತ್ತು ದಾಟಲು ಕಷ್ಟಕರವಾಗಿರುವ ಈ ಸಂಸಾರವೆಂಬ ನದಿಯನ್ನು ಬುದ್ಧಿವಂತನೇ ದಾಟಬಲ್ಲನು.

12227012a ಕಾಮಮನ್ಯೂದ್ಧತಂ ಯತ್ ಸ್ಯಾನ್ನಿತ್ಯಮತ್ಯಂತಮೋಹಿತಮ್|

12227012c ಮಹತಾ ವಿಧಿದೃಷ್ಟೇನ ಬಲೇನಾಪ್ರತಿಘಾತಿನಾ|

12227012e ಸ್ವಭಾವಸ್ರೋತಸಾ ವೃತ್ತಮುಹ್ಯತೇ ಸತತಂ ಜಗತ್||

ಕಾಮ-ಕ್ರೋಧಗಳಿಂದ ಹುಟ್ಟುವ ಆ ನದಿಯು ಅತ್ಯಂತ ಮೋಹಗೊಳಿಸುವಂಥಹುದು. ಆ ವಿಧಿಧೃಷ್ಟ ಮಹಾಬಲಶಾಲೀ ಪ್ರವಾಹವು ಜಗತ್ತನ್ನು ಸತತವೂ ತನ್ನ ಸುಳಿಗಳಲ್ಲಿ ಸಿಲುಕಿಸಿಕೊಂಡು ಮೋಹಗೊಳಿಸಿ ತನ್ನದೇ ಪ್ರವಾಹದಲ್ಲಿ ಕೊಂಡೊಯ್ಯುತ್ತಿರುತ್ತದೆ.

12227013a ಕಾಲೋದಕೇನ ಮಹತಾ ವರ್ಷಾವರ್ತೇನ ಸಂತತಮ್|

12227013c ಮಾಸೋರ್ಮಿಣರ್ತುವೇಗೇನ ಪಕ್ಷೋಲಪತೃಣೇನ ಚ||

ಕಾಲವೇ ಮಹಾನದವು. ವರ್ಷಗಳೇ ಸುಳಿಗಳು. ಮಾಸಗಳು ಅಲೆಗಳು. ಋತುಗಳು ಅದರ ವೇಗ. ಪಕ್ಷಗಳು ತೀರದಲ್ಲಿ ಬೆಳೆಯುವ ಸಸ್ಯಗಳು.

12227014a ನಿಮೇಷೋನ್ಮೇಷಫೇನೇನ ಅಹೋರಾತ್ರಜವೇನ ಚ|

12227014c ಕಾಮಗ್ರಾಹೇಣ ಘೋರೇಣ ವೇದಯಜ್ಞಪ್ಲವೇನ ಚ||

ನಿಮೇಷ-ಉನ್ಮೇಷಗಳು ಅದರ ನೊರೆ. ಹಗಲು-ರಾತ್ರಿಗಳು ಅದರ ವೇಗವು. ಕಾಮಗಳು ಘೋರ ಮೊಸಳೆಗಳು. ವೇದ-ಯಜ್ಞಗಳು ತೆಪ್ಪ.

12227015a ಧರ್ಮದ್ವೀಪೇನ ಭೂತಾನಾಂ ಚಾರ್ಥಕಾಮರವೇಣ ಚ|

12227015c ಋತಸೋಪಾನತೀರೇಣ ವಿಹಿಂಸಾತರುವಾಹಿನಾ||

ಭೂತಗಳಿಗೆ ಧರ್ಮವು ದ್ವೀಪವಿದ್ದಂತೆ. ಅರ್ಥ-ಕಾಮಗಳು ಚಿಲುಮೆಗಳು. ಸತ್ಯವು ತೀರದಲ್ಲಿರುವ ಸೋಪಾನ. ಮತ್ತು ಅಹಿಂಸೆಯು ತೀರದಲ್ಲಿರುವ ಮರಗಳು.

12227016a ಯುಗಹ್ರದೌಘಮಧ್ಯೇನ ಬ್ರಹ್ಮಪ್ರಾಯಭವೇನ ಚ|

12227016c ಧಾತ್ರಾ ಸೃಷ್ಟಾನಿ ಭೂತಾನಿ ಕೃಷ್ಯಂತೇ ಯಮಸಾದನಮ್||

ಯುಗಗಳು ಮಧ್ಯದಲ್ಲಿರುವ ಕೊಳಗಳು. ಬ್ರಹ್ಮವೆಂಬ ಪರ್ವತದಲ್ಲಿ ಆ ಕಾಲನದವು ಹುಟ್ಟಿ ಹರಿಯುತ್ತದೆ. ಬ್ರಹ್ಮನು ಸೃಷ್ಟಿಸಿದ ಎಲ್ಲಪ್ರಾಣಿಗಳೂ ಆ ಕಾಲನದದಲ್ಲಿ ಬಿದ್ದು ಯಮಲೋಕದ ಕಡೆ ಸೆಳೆಯಲ್ಪಡುತ್ತವೆ.

12227017a ಏತತ್ ಪ್ರಜ್ಞಾಮಯೈರ್ಧೀರಾ ನಿಸ್ತರಂತಿ ಮನೀಷಿಣಃ|

12227017c ಪ್ಲವೈರಪ್ಲವವಂತೋ ಹಿ ಕಿಂ ಕರಿಷ್ಯಂತ್ಯಚೇತಸಃ||

ಧೀರ ಮನೀಷಿಣರು ಇದನ್ನು ಪ್ರಜ್ಞೆಯೆಂಬ ನೌಕೆಯಿಂದ ದಾಟುತ್ತಾರೆ. ಅಂತಹ ನೌಕೆಗಳಿಲ್ಲದ ಅಜ್ಞಾನಿಗಳು ಏನು ಮಾಡಬಲ್ಲರು?

12227018a ಉಪಪನ್ನಂ ಹಿ ಯತ್ ಪ್ರಾಜ್ಞೋ ನಿಸ್ತರೇನ್ನೇತರೋ ಜನಃ|

12227018c ದೂರತೋ ಗುಣದೋಷೌ ಹಿ ಪ್ರಾಜ್ಞಃ ಸರ್ವತ್ರ ಪಶ್ಯತಿ||

ಪ್ರಾಜ್ಞನು ಇದನ್ನು ದಾಟುತ್ತಾನೆ ಮತ್ತು ಇತರರು ಇದನ್ನು ದಾಟಲಾರರು ಎನ್ನುವುದು ಯುಕ್ತಿಸಂಗತವಾಗಿಯೇ ಇದೆ. ಏಕೆಂದರೆ, ಪ್ರಾಜ್ಞನು ಎಲ್ಲದರ ಗುಣ-ದೋಷಗಳನ್ನು ದೂರದಿಂದಲೇ ವಿವೇಚಿಸುತ್ತಾನೆ.

12227019a ಸಂಶಯಾತ್ಮಾ ಸ ಕಾಮಾತ್ಮಾ ಚಲಚಿತ್ತೋಽಲ್ಪಚೇತನಃ|

12227019c ಅಪ್ರಾಜ್ಞೋ ನ ತರತ್ಯೇವ ಯೋ ಹ್ಯಾಸ್ತೇ ನ ಸ ಗಚ್ಚತಿ||

ಅಪ್ರಾಜ್ಞನು ಅಲ್ಪಚೇತನನೂ, ಸಂಶಯಾತ್ಮನೂ, ಕಾಮಾತ್ಮನೂ, ಚಂಚಲಚಿತ್ತನೂ ಆಗಿರುವುದರಿಂದ ಕಾಲನದವನ್ನು ದಾಟಲು ಅವನಿಗೆ ಸಾಧ್ಯವಾಗುವುದಿಲ್ಲ.

12227020a ಅಪ್ಲವೋ ಹಿ ಮಹಾದೋಷಮುಹ್ಯಮಾನೋಽಧಿಗಚ್ಚತಿ|

12227020c ಕಾಮಗ್ರಾಹಗೃಹೀತಸ್ಯ ಜ್ಞಾನಮಪ್ಯಸ್ಯ ನ ಪ್ಲವಃ||

ಜ್ಞಾನದ ನೌಕೆಯಿಲ್ಲದವನು ವಿಮೋಹಗೊಂಡು ಮಹಾದೋಷವನ್ನು ಹೊಂದುತ್ತಾನೆ. ಕಾಮವೆಂಬ ಮೊಸಳೆಯಿಂದ ಹಿಡಿಯಲ್ಪಟ್ಟವನಿಗೆ ಜ್ಞಾನವೂ ನೌಕೆಯಾಗುವುದಿಲ್ಲ.

12227021a ತಸ್ಮಾದುನ್ಮಜ್ಜನಸ್ಯಾರ್ಥೇ ಪ್ರಯತೇತ ವಿಚಕ್ಷಣಃ|

12227021c ಏತದುನ್ಮಜ್ಜನಂ ತಸ್ಯ ಯದಯಂ ಬ್ರಾಹ್ಮಣೋ ಭವೇತ್||

ಆದುದರಿಂದ ಆ ಕಾಲನದವನ್ನು ದಾಟಲು ಸತತವಾಗಿ ಪ್ರಯತ್ನಿಸಬೇಕು. ಇದರಿಂದ ಪಾರಾಗುವವನು ಬ್ರಾಹ್ಮಣನಾಗಬೇಕು.

12227022a ತ್ರ್ಯವದಾತೇ ಕುಲೇ ಜಾತಸ್ತ್ರಿಸಂದೇಹಸ್ತ್ರಿಕರ್ಮಕೃತ್|

12227022c ತಸ್ಮಾದುನ್ಮಜ್ಜನಸ್ತಿಷ್ಠೇನ್ನಿಸ್ತರೇತ್ ಪ್ರಜ್ಞಯಾ ಯಥಾ||

ಮೂರು ವಿಷಯಗಳ ಕುರಿತು ಮಾತನಾಡುವ[2], ಉತ್ತಮ ಕುಲದಲ್ಲಿ ಜನಿಸಿದ, ಸಂದೇಹಗಳಿಲ್ಲದ, ಮೂರು ಕರ್ಮಗಳನ್ನು ಮಾಡುವವನು[3] ಕಾಲನದದಲ್ಲಿ ಮುಳುಗುವುದಿಲ್ಲ ಮತ್ತು ಪ್ರಜ್ಞೆಯಿಂದ ದಾಟುತ್ತಾನೆ.

12227023a ಸಂಸ್ಕೃತಸ್ಯ ಹಿ ದಾಂತಸ್ಯ ನಿಯತಸ್ಯ ಕೃತಾತ್ಮನಃ|

12227023c ಪ್ರಾಜ್ಞಸ್ಯಾನಂತರಾ ಸಿದ್ಧಿರಿಹ ಲೋಕೇ ಪರತ್ರ ಚ||

ಸಂಸ್ಕಾರಸಂಪನ್ನನಾಗಿರುವ ದಾಂತ ನಿಯತ ಕೃತಾತ್ಮ ಪ್ರಾಜ್ಞನಿಗೆ ಇಹದಲ್ಲಿಯೂ ಪರದಲ್ಲಿಯೂ ಸಿದ್ಧಿಯುಂಟಾಗುತ್ತದೆ.

12227024a ವರ್ತತೇ ತೇಷು ಗೃಹವಾನಕ್ರುಧ್ಯನ್ನನಸೂಯಕಃ|

12227024c ಪಂಚಭಿಃ ಸತತಂ ಯಜ್ಞೈರ್ವಿಘಸಾಶೀ ಯಜೇತ ಚ||

ಗೃಹಸ್ಥಬ್ರಾಹ್ಮಣನು ಕ್ರೋಧರಹಿತನಾಗಿ ಅನಸೂಯಕನಾಗಿ ಸತತವೂ ಪಂಚಯಜ್ಞಗಳಿಂದ ಪೂಜಿಸುತ್ತ ವಿಘಸಾಶಿಯಾಗಿರಬೇಕು.

12227025a ಸತಾಂ ವೃತ್ತೇನ ವರ್ತೇತ ಕ್ರಿಯಾಃ ಶಿಷ್ಟವದಾಚರೇತ್|

12227025c ಅಸಂರೋಧೇನ ಧರ್ಮಸ್ಯ ವೃತ್ತಿಂ ಲಿಪ್ಸೇದಗರ್ಹಿತಾಮ್||

ಸತ್ಪುರುಷರ ನಡತೆಯಂತೆ ನಡೆದುಕೊಳ್ಳಬೇಕು. ಶಿಷ್ಟರ ಆಚಾರಗಳನ್ನು ಪಾಲಿಸಬೇಕು. ಧರ್ಮವನ್ನು ವಿರೋಧಿಸದ ನಿಂದನೀಯವಲ್ಲದ ವೃತ್ತಿಯನ್ನು ಕೈಗೊಳ್ಳಬೇಕು.

12227026a ಶ್ರುತಿವಿಜ್ಞಾನತತ್ತ್ವಜ್ಞಃ ಶಿಷ್ಟಾಚಾರೋ ವಿಚಕ್ಷಣಃ|

12227026c ಸ್ವಧರ್ಮೇಣ ಕ್ರಿಯಾವಾಂಶ್ಚ ಕರ್ಮಣಾ ಸೋಽಪ್ಯಸಂಕರಃ||

ಶ್ರುತಿವಿಜ್ಞಾನತತ್ತ್ವಜ್ಞ, ಶಿಷ್ಟಾಚಾರೀ ವಿಚಕ್ಷಣನು ಸ್ವಧರ್ಮದ ಪ್ರಕಾರವೇ ಕ್ರಿಯೆಗಳನ್ನು ಮಾಡಬೇಕು. ಕರ್ಮಗಳಲ್ಲಿ ಸಂಕರಗಳನ್ನುಂಟುಮಾಡಬಾರದು.

12227027a ಕ್ರಿಯಾವಾನ್ ಶ್ರದ್ದಧಾನಶ್ಚ ದಾತಾ ಪ್ರಾಜ್ಞೋಽನಸೂಯಕಃ|

12227027c ಧರ್ಮಾಧರ್ಮವಿಶೇಷಜ್ಞಃ ಸರ್ವಂ ತರತಿ ದುಸ್ತರಮ್||

ಕ್ರಿಯಾವಂತ, ಶ್ರದ್ಧದಾನ, ದಾತ, ಪ್ರಾಜ್ಞ, ಅನಸೂಯಕ, ಮತ್ತು ಧರ್ಮಾಧರ್ಮಗಳ ಅಂತರವನ್ನು ತಿಳಿದಿರುವವನು ದಾಟಲು ಕಷ್ಟವಾದ ಎಲ್ಲವನ್ನೂ ದಾಟುತ್ತಾನೆ.

12227028a ಧೃತಿಮಾನಪ್ರಮತ್ತಶ್ಚ ದಾಂತೋ ಧರ್ಮವಿದಾತ್ಮವಾನ್|

12227028c ವೀತಹರ್ಷಭಯಕ್ರೋಧೋ ಬ್ರಾಹ್ಮಣೋ ನಾವಸೀದತಿ||

ಧೃತಿಮಾನ, ಅಪ್ರಮತ್ತ, ದಾಂತ, ಧರ್ಮವಿದು, ಆತ್ಮವಾನ್, ಮತ್ತು ಹರ್ಷ-ಭಯ-ಕ್ರೋಧರಹಿತನಾದ ಬ್ರಾಹ್ಮಣನು ನಾಶಹೊಂದುವುದಿಲ್ಲ.

12227029a ಏಷಾ ಪೂರ್ವತರಾ ವೃತ್ತಿರ್ಬ್ರಾಹ್ಮಣಸ್ಯ ವಿಧೀಯತೇ|

12227029c ಜ್ಞಾನವಿತ್ತ್ವೇನ ಕರ್ಮಾಣಿ ಕುರ್ವನ್ಸರ್ವತ್ರ ಸಿಧ್ಯತಿ||

ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ವೃತ್ತಿಯು ಬ್ರಾಹ್ಮಣನಿಗೆ ವಿಧಿಸಲ್ಪಟ್ಟಿದೆ. ಜ್ಞಾನಪೂರ್ವಕವಾಗಿ ಮಾಡಿದ ಕರ್ಮಗಳೆಲ್ಲವೂ ಸಿದ್ಧಿಸುತ್ತವೆ.

12227030a ಅಧರ್ಮಂ ಧರ್ಮಕಾಮೋ ಹಿ ಕರೋತೀಹಾವಿಚಕ್ಷಣಃ|

12227030c ಧರ್ಮಂ ಚಾಧರ್ಮಸಂಕಾಶಂ ಶೋಚನ್ನಿವ ಕರೋತಿ ಸಃ||

ಮೂಢನಾದವನು ಧರ್ಮಕಾರ್ಯವನ್ನು ಮಾಡಲಿಚ್ಛಿಸಿ ಅಧರ್ಮವನ್ನೇ ಮಾಡುತ್ತಾನೆ. ಅಥವಾ ಶೋಕಿಸುತ್ತಿರುವವನಂತೆ ಅಧರ್ಮಸದೃಶವಾದ ಧರ್ಮವನ್ನು ಮಾಡುತ್ತಾನೆ.

12227031a ಧರ್ಮಂ ಕರೋಮೀತಿ ಕರೋತ್ಯಧರ್ಮಮ್

ಅಧರ್ಮಕಾಮಶ್ಚ ಕರೋತಿ ಧರ್ಮಮ್|

12227031c ಉಭೇ ಬಾಲಃ ಕರ್ಮಣೀ ನ ಪ್ರಜಾನನ್

ಸ ಜಾಯತೇ ಮ್ರಿಯತೇ ಚಾಪಿ ದೇಹೀ||

ಧರ್ಮವನ್ನು ಮಾಡುತ್ತೇನೆಂದು ಅಧರ್ಮವನ್ನು ಮಾಡುವನು ಮತ್ತು ಅಧರ್ಮವನ್ನು ಬಯಸಿ ಧರ್ಮವನ್ನು ಮಾಡುವವನು ಈ ಇಬ್ಬರೂ ಅವಿವೇಕದಿಂದ ಕಾರ್ಯಮಾಡುತ್ತಾ ಹುಟ್ಟುತ್ತಿರುತ್ತಾರೆ ಮತ್ತು ಸಾಯುತ್ತಿರುತ್ತಾರೆ. ಅಂಥವರಿಗೆ ಮೋಕ್ಷವೆಂಬುದೇ ಇಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಸಪ್ತವಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ತೇಳನೇ ಅಧ್ಯಾಯವು.

[1] ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞ, ಭೂತಯಜ್ಞ ಮತ್ತು ಮನುಷ್ಯಯಜ್ಞ. ಅಧ್ಯಾಪನಂ ಬ್ರಹ್ಮಯಜ್ಞಃ ಪಿತೃಯಜ್ಞಸ್ತು ತರ್ಪಣಮ್| ಹೋಮ ದೈವೋ ಬಲಿರ್ಭೌತೋ ನೃಯಜ್ಞೋಽತಿಥಿಪೂಜನಮ್|| (ಮನುಸ್ಮೃತಿ) ವೇದಗಳನ್ನು ಹೇಳುವುದು ಬ್ರಹ್ಮಯಜ್ಞ, ತರ್ಪಣಕೊಡುವುದು ಪಿತೃಯಜ್ಞ, ಹೋಮಮಾಡುವುದು ದೇವಯಜ್ಞ, ವೈಶ್ವದೇವಬಲಿಯನ್ನು ಕೊಡುವುದು ಭೂತಯಜ್ಞ ಮತ್ತು ಅತಿಥಿಸತ್ಕಾರವು ಮನುಷ್ಯಯಜ್ಞ. (ಭಾರತ ದರ್ಶನ)

[2] ಮೂರು ವೇದಗಳನ್ನು ಹೇಳುವ.

[3] ವೇದಗಳಿಗೆ ಸಂಬಂಧಿಸಿದಂತೆ ಅಧ್ಯಯನ, ಯಜ್ಞ ಮತ್ತು ದಾನಕರ್ಮಗಳು.

Comments are closed.