Shanti Parva: Chapter 226

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೨೬

ಬ್ರಾಹ್ಮಣರ ಕರ್ತವ್ಯ ಮತ್ತು ದಾನದ ಮಹಿಮೆ (1-38).

12226001 ವ್ಯಾಸ ಉವಾಚ|

12226001a ಭೂತಗ್ರಾಮೇ ನಿಯುಕ್ತಂ ಯತ್ತದೇತತ್ಕೀರ್ತಿತಂ ಮಯಾ|

12226001c ಬ್ರಾಹ್ಮಣಸ್ಯ ತು ಯತ್ಕೃತ್ಯಂ ತತ್ತೇ ವಕ್ಷ್ಯಾಮಿ ಪೃಚ್ಚತೇ||

ವ್ಯಾಸನು ಹೇಳಿದನು: “ಭೂತಗ್ರಾಮಗಳ ಕುರಿತು ನಾನು ಹೇಳಿದೆ. ಈಗ ನೀನು ಕೇಳಿದ ಬ್ರಾಹ್ಮಣನ ಕರ್ತವ್ಯಗಳ ಕುರಿತು ಹೇಳುತ್ತೇನೆ.

12226002a ಜಾತಕರ್ಮಪ್ರಭೃತ್ಯಸ್ಯ ಕರ್ಮಣಾಂ ದಕ್ಷಿಣಾವತಾಮ್|

12226002c ಕ್ರಿಯಾ ಸ್ಯಾದಾ ಸಮಾವೃತ್ತೇರಾಚಾರ್ಯೇ ವೇದಪಾರಗೇ||

ಜಾತಕರ್ಮದಿಂದ ಪ್ರಾರಂಭಿಸಿ ಸಮಾವರ್ತನದವರೆಗಿನ ಕರ್ಮಗಳನ್ನೂ ದಕ್ಷಿಣೆಗಳನ್ನಿತ್ತು ವೇದಪಾರಂಗತ ಆಚಾರ್ಯದಿಂದ ನಡೆಸಬೇಕು.

12226003a ಅಧೀತ್ಯ ವೇದಾನಖಿಲಾನ್ಗುರುಶುಶ್ರೂಷಣೇ ರತಃ|

12226003c ಗುರೂಣಾಮನೃಣೋ ಭೂತ್ವಾ ಸಮಾವರ್ತೇತ ಯಜ್ಞವಿತ್||

ಗುರುಶುಶ್ರೂಷಣೆಯಲ್ಲಿ ನಿರತನಾಗಿದ್ದುಕೊಂಡು ಅಖಿಲ ವೇದಗಳನ್ನೂ ಅಧ್ಯಯನ ಮಾಡಿ, ಗುರುಋಣದಿಂದ ಮುಕ್ತನಾಗಿ ಯಜ್ಞಪ್ರಕ್ರಿಯೆಗಳನ್ನು ತಿಳಿದು ಸಮಾವರ್ತನ ಸಂಸ್ಕಾರವನ್ನು ಪಡೆಯಬೇಕು.

12226004a ಆಚಾರ್ಯೇಣಾಭ್ಯನುಜ್ಞಾತಶ್ಚತುರ್ಣಾಮೇಕಮಾಶ್ರಮಮ್|

12226004c ಆ ವಿಮೋಕ್ಷಾಚ್ಚರೀರಸ್ಯ ಸೋಽನುತಿಷ್ಠೇದ್ಯಥಾವಿಧಿ||

12226005a ಪ್ರಜಾಸರ್ಗೇಣ ದಾರೈಶ್ಚ ಬ್ರಹ್ಮಚರ್ಯೇಣ ವಾ ಪುನಃ|

12226005c ವನೇ ಗುರುಸಕಾಶೇ ವಾ ಯತಿಧರ್ಮೇಣ ವಾ ಪುನಃ||

ಆಚಾರ್ಯನ ಅನುಮತಿಯನ್ನು ಪಡೆದು ನಾಲ್ಕು ಆಶ್ರಮಗಳಲ್ಲಿ – ಪತ್ನಿಯಿಂದ ಮಕ್ಕಳನ್ನು ಪಡೆಯುವುದು, ಪುನಃ ಬ್ರಹ್ಮಚರ್ಯವನ್ನು ಪಾಲಿಸುವುದು, ವನದಲ್ಲಿಯೇ ಗುರುವಿನ ಬಳಿಯಿರುವುದು ಅಥವಾ ಪುನಃ ಯತಿಧರ್ಮವನ್ನು ಪಾಲಿಸುವುದು – ಯಾವುದಾದರೂ ಒಂದನ್ನು ಶರೀರವನ್ನು ತೊರೆಯುವವರೆಗೆ ಯಥಾವಿಧಿಯಾಗಿ ಅನುಷ್ಠಾನಮಾಡಬೇಕು.

12226006a ಗೃಹಸ್ಥಸ್ತ್ವೇವ ಸರ್ವೇಷಾಂ ಚತುರ್ಣಾಂ ಮೂಲಮುಚ್ಯತೇ[1]|

12226006c ತತ್ರ ಪಕ್ವಕಷಾಯೋ ಹಿ ದಾಂತಃ ಸರ್ವತ್ರ ಸಿಧ್ಯತಿ||

ಗೃಹಸ್ಥಾಶ್ರಮವೇ ಎಲ್ಲ ನಾಲ್ಕು ಆಶ್ರಮಗಳ ಮೂಲ ಎನ್ನುತ್ತಾರೆ. ಅದರಿಂದ ಪರಿಪಕ್ವನಾದ ದಾಂತನು ಸರ್ವತ್ರ ಸಿದ್ಧಿಯನ್ನು ಪಡೆಯುತ್ತಾನೆ.

12226007a ಪ್ರಜಾವಾನ್ ಶ್ರೋತ್ರಿಯೋ ಯಜ್ವಾ ಮುಕ್ತೋ ದಿವ್ಯೈಸ್ತ್ರಿಭಿರೃಣೈಃ|

12226007c ಅಥಾನ್ಯಾನಾಶ್ರಮಾನ್ಪಶ್ಚಾತ್ಪೂತೋ ಗಚ್ಚತಿ ಕರ್ಮಭಿಃ||

ಸಂತಾನದಿಂದ, ಅಧ್ಯಯನದಿಂದ ಮತ್ತು ಯಜ್ಞಗಳಿಂದ ಗೃಹಸ್ಥನು ಮೂರು ದಿವ್ಯ ಋಣಗಳಿಂದ ಮುಕ್ತನಾಗುತ್ತಾನೆ[2]. ಈ ಕರ್ಮಗಳಿಂದ ಪೂತನಾದ ನಂತರ ಅವನು ಇತರ ಆಶ್ರಮಗಳನ್ನು ಸ್ವೀಕರಿಸಬಹುದು.

12226008a ಯತ್ಪೃಥಿವ್ಯಾಂ ಪುಣ್ಯತಮಂ ವಿದ್ಯಾಸ್ಥಾನಂ ತದಾವಸೇತ್|

12226008c ಯತೇತ ತಸ್ಮಿನ್ ಪ್ರಾಮಾಣ್ಯಂ ಗಂತುಂ ಯಶಸಿ ಚೋತ್ತಮೇ||

ಪೃಥ್ವಿಯಲ್ಲಿ ಪುಣ್ಯತಮವೂ ಉತ್ತಮವೂ ಆಗಿರುವಲ್ಲಿ ವಾಸಿಸಬೇಕು. ಅಲ್ಲಿ ಉತ್ತಮ ಯಶಸ್ಸಿನಿಂದ ಆದರ್ಶನಾಗಲು ಪ್ರಯತ್ನಿಸಬೇಕು.

12226009a ತಪಸಾ ವಾ ಸುಮಹತಾ ವಿದ್ಯಾನಾಂ ಪಾರಣೇನ ವಾ|

12226009c ಇಜ್ಯಯಾ ವಾ ಪ್ರದಾನೈರ್ವಾ ವಿಪ್ರಾಣಾಂ ವರ್ಧತೇ ಯಶಃ||

ಮಹಾ ತಪಸ್ಸಿನಿಂದ ಅಥವಾ ವಿದ್ಯೆಯ ಪಾಂಡಿತ್ಯದಿಂದ, ಯಜ್ಞದಿಂದ ಅಥವಾ ದಾನದಿಂದ ವಿಪ್ರನ ಯಶಸ್ಸು ವರ್ಧಿಸುತ್ತದೆ.

12226010a ಯಾವದಸ್ಯ ಭವತ್ಯಸ್ಮಿಽಲ್ಲೋಕೇ ಕೀರ್ತಿರ್ಯಶಸ್ಕರೀ|

12226010c ತಾವತ್ಪುಣ್ಯಕೃತಾಽಲ್ಲೋಕಾನನಂತಾನ್ಪುರುಷೋಽಶ್ನುತೇ||

ಎಲ್ಲಿಯವರೆಗೆ ಅವನ ಕೀರ್ತಿಯು ಈ ಲೋಕದಲ್ಲಿ ಮೊಳಗುತ್ತಿರುವುದೋ ಅಲ್ಲಿಯವರೆಗೆ ಅವನು ಪುಣ್ಯಕೃತರ ಲೋಕಗಳನ್ನು ಭೋಗಿಸುತ್ತಾನೆ.

12226011a ಅಧ್ಯಾಪಯೇದಧೀಯೀತ ಯಾಜಯೇತ ಯಜೇತ ಚ|

12226011c ನ ವೃಥಾ ಪ್ರತಿಗೃಹ್ಣೀಯಾನ್ನ ಚ ದದ್ಯಾತ್ಕಥಂ ಚನ||

ಅಧ್ಯಯನ ಮಾಡಬೇಕು. ಅಧ್ಯಯನ ಮಾಡಿಸಬೇಕು. ಯಜ್ಞಮಾಡಬೇಕು. ಯಜ್ಞಮಾಡಿಸಬೇಕು. ಎಂದೂ ವೃಥಾ ದಾನವನ್ನು ಸ್ವೀಕರಿಸಬಾರದು ಮತ್ತು ವೃಥಾ ದಾನವನ್ನು ಕೊಡಬಾರದು ಕೂಡ.

12226012a ಯಾಜ್ಯತಃ ಶಿಷ್ಯತೋ ವಾಪಿ ಕನ್ಯಯಾ ವಾ ಧನಂ ಮಹತ್|

12226012c ಯದ್ಯಾಗಚ್ಚೇದ್ಯಜೇದ್ದದ್ಯಾನ್ನೈಕೋಽಶ್ನೀಯಾತ್ಕಥಂ ಚನ||

ಯಜ್ಞಮಾಡಿಸುವಾಗ, ವಿದ್ಯಾಭ್ಯಾಸಮಾಡಿಸುವಾಗ ಅಥವಾ ಕನ್ಯಾದಾನ ಮಾಡುವಾಗ ಮಹಾ ಧನವು ದೊರಕಿದರೆ ಅದನ್ನು ಯಜ್ಞಕ್ಕೆ ಬಳಸಬೇಕು. ದಾನಮಾಡಬೇಕು. ಅಂಥಹ ಧನವನ್ನು ಎಂದೂ ತಾನೊಬ್ಬನೇ ಭೋಗಿಸಬಾರದು.

12226013a ಗೃಹಮಾವಸತೋ ಹ್ಯಸ್ಯ ನಾನ್ಯತ್ತೀರ್ಥಂ ಪ್ರತಿಗ್ರಹಾತ್|

12226013c ದೇವರ್ಷಿಪಿತೃಗುರ್ವರ್ಥಂ ವೃದ್ಧಾತುರಬುಭುಕ್ಷತಾಮ್||

ದೇವ-ಋಷಿ-ಪಿತೃಗಳು ಮತ್ತು ಗುರುಗಳಿಗೋಸ್ಕರ ಹಾಗೂ ವೃದ್ಧರು-ಆತುರರನ್ನು ಪಾಲಿಸಲಿಕ್ಕೋಸ್ಕರ ಗೃಹಸ್ಥ ಬ್ರಾಹ್ಮಣನಿಗೆ ದಾನವನ್ನು ಸ್ವೀಕರಿಸುವುದರ ಹೊರತಾಗಿ ಬೇರೆ ಪವಿತ್ರ ಮಾರ್ಗವಿಲ್ಲ.

12226014a ಅಂತರ್ಹಿತಾಭಿತಪ್ತಾನಾಂ ಯಥಾಶಕ್ತಿ ಬುಭೂಷತಾಮ್|

12226014c ದ್ರವ್ಯಾಣಾಮತಿಶಕ್ತ್ಯಾಪಿ ದೇಯಮೇಷಾಂ ಕೃತಾದಪಿ||

ಒಳಗಿಂದೊಳಗೇ ತಪಿಸುತ್ತಿರುವವರಿಗೆ ಯಥಾಶಕ್ತಿ ಮತ್ತು ಶಕ್ತಿ ಮೀರಿಯಾದರೂ ದಾನವನ್ನಿತ್ತು ಪೊರೆಯಬೇಕು.

12226015a ಅರ್ಹತಾಮನುರೂಪಾಣಾಂ ನಾದೇಯಂ ಹ್ಯಸ್ತಿ ಕಿಂ ಚನ|

12226015c ಉಚ್ಚೈಃಶ್ರವಸಮಪ್ಯಶ್ವಂ ಪ್ರಾಪಣೀಯಂ ಸತಾಂ ವಿದುಃ||

ಅರ್ಹರಿಗೆ ಕೊಡಬಾರದೆನ್ನುವುದು ಯಾವುದೂ ಇಲ್ಲ. ಸತ್ಪಾತ್ರರಿಗೆ ಉಚ್ಚೈಃಶ್ರವವನ್ನೂ ದಾನವಾಗಿ ಕೊಡಬಹುದೆಂದು ಸತ್ಪುರುಷರ ಅಭಿಮತವು.

12226016a ಅನುನೀಯ ತಥಾ ಕಾವ್ಯಃ ಸತ್ಯಸಂಧೋ ಮಹಾವ್ರತಃ|

12226016c ಸ್ವೈಃ ಪ್ರಾಣೈರ್ಬ್ರಾಹ್ಮಣಪ್ರಾಣಾನ್ ಪರಿತ್ರಾಯ ದಿವಂ ಗತಃ||

ಮಹಾವ್ರತ ಸತ್ಯಸಂಧನು ತನ್ನ ಪ್ರಾಣಗಳಿಂದ ಬ್ರಾಹ್ಮಣನನ್ನು ಕಾಪಾಡಿ ದಿವಕ್ಕೆ ಹೋದನು.

12226017a ರಂತಿದೇವಶ್ಚ ಸಾಂಕೃತ್ಯೋ ವಸಿಷ್ಠಾಯ ಮಹಾತ್ಮನೇ|

12226017c ಅಪಃ ಪ್ರದಾಯ ಶೀತೋಷ್ಣಾ ನಾಕಪೃಷ್ಠೇ ಮಹೀಯತೇ||

ಸಂಕೃತಿಯ ಮಗ ರಂತಿದೇವನು ಮಹಾತ್ಮ ವಸಿಷ್ಠನಿಗೆ ಶೀತೋಷ್ಣ ಜಲವನ್ನು ದಾನಮಾಡಿ ನಾಕಪೃಷ್ಠದಲ್ಲಿ ಮೆರೆಯುತ್ತಾನೆ.

12226018a ಆತ್ರೇಯಶ್ಚಂದ್ರದಮಯೋರರ್ಹತೋರ್ವಿವಿಧಂ ಧನಮ್|

12226018c ದತ್ತ್ವಾ ಲೋಕಾನ್ಯಯೌ ಧೀಮಾನನಂತಾನ್ಸ ಮಹೀಪತಿಃ||

ಧೀಮಾನ್ ಮಹೀಪತಿ ಅತ್ರಿವಂಶಜ ಚಂದ್ರದಮನು ಅರ್ಹನಿಗೆ ವಿವಿಧ ಧನವನ್ನಿತ್ತು ಅಕ್ಷಯ ಲೋಕಗಳನ್ನು ಪಡೆದುಕೊಂಡನು.

12226019a ಶಿಬಿರೌಶೀನರೋಽಂಗಾನಿ ಸುತಂ ಚ ಪ್ರಿಯಮೌರಸಮ್|

12226019c ಬ್ರಾಹ್ಮಣಾರ್ಥಮುಪಾಕೃತ್ಯ ನಾಕಪೃಷ್ಠಮಿತೋ ಗತಃ||

ಉಶೀನರನ ಮಗ ಶಿಬಿಯು ಬ್ರಾಹ್ಮಣನಿಗೆ ತನ್ನ ಶರೀರವನ್ನೂ ಪ್ರಿಯನಾದ ತನ್ನ ಔರಸಪುತ್ರನನ್ನೂ ದಾನಮಾಡಿ ಸ್ವರ್ಗಕ್ಕೆ ಹೋದನು.

12226020a ಪ್ರತರ್ದನಃ ಕಾಶಿಪತಿಃ ಪ್ರದಾಯ ನಯನೇ ಸ್ವಕೇ|

12226020c ಬ್ರಾಹ್ಮಣಾಯಾತುಲಾಂ ಕೀರ್ತಿಮಿಹ ಚಾಮುತ್ರ ಚಾಶ್ನುತೇ||

ಕಾಶಿಪತಿ ಪ್ರತರ್ದನನು ಬ್ರಾಹ್ಮಣನಿಗೆ ತನ್ನ ಕಣ್ಣುಗಳನ್ನು ದಾನಮಾಡಿ ಇಹದಲ್ಲಿ ಮತ್ತು ಪರದಲ್ಲಿ ಅತುಲ ಕೀರ್ತಿಯನ್ನು ಪಡೆದುಕೊಂಡನು.

12226021a ದಿವ್ಯಂ ಮೃಷ್ಟಶಲಾಕಂ ತು ಸೌವರ್ಣಂ ಪರಮರ್ದ್ಧಿಮತ್|

12226021c ಚತ್ರಂ ದೇವಾವೃಧೋ ದತ್ತ್ವಾ ಸರಾಷ್ಟ್ರೋಽಭ್ಯಪತದ್ದಿವಮ್||

ದೇವಾವೃಧನು ಎಂಟು ಕಡ್ಡಿಗಳಿಂದ ಕೂಡಿದ ಸುವರ್ಣಮಯ ಬಹುಮೂಲ್ಯ ಛತ್ರಿಯನ್ನು ದಾನಮಾಡಿ ತನ್ನ ರಾಷ್ಟ್ರದೊಂದಿಗೆ ದಿವವನ್ನು ಸೇರಿದನು.

12226022a ಸಾಂಕೃತಿಶ್ಚ ತಥಾತ್ರೇಯಃ ಶಿಷ್ಯೇಭ್ಯೋ ಬ್ರಹ್ಮ ನಿರ್ಗುಣಮ್|

12226022c ಉಪದಿಶ್ಯ ಮಹಾತೇಜಾ ಗತೋ ಲೋಕಾನನುತ್ತಮಾನ್||

ಮಹಾತೇಜಸ್ವೀ ಅತ್ರೇಯ ಸಾಂಕೃತಿಯೂ ಕೂಡ ಶಿಷ್ಯರಿಗೆ ನಿರ್ಗುಣ ಬ್ರಹ್ಮತತ್ತ್ವವನ್ನು ಉಪದೇಶಿಸಿ ಉತ್ತಮ ಲೋಕಗಳನ್ನು ಹೊಂದಿದನು.

12226023a ಅಂಬರೀಷೋ ಗವಾಂ ದತ್ತ್ವಾ ಬ್ರಾಹ್ಮಣೇಭ್ಯಃ ಪ್ರತಾಪವಾನ್|

12226023c ಅರ್ಬುದಾನಿ ದಶೈಕಂ ಚ ಸರಾಷ್ಟ್ರೋಽಭ್ಯಪತದ್ದಿವಮ್||

ಪ್ರತಾಪವಂತ ಅಂಬರೀಷನು ಬ್ರಾಹ್ಮಣರಿಗೆ ಹನ್ನೊಂದು ಅರ್ಬುದ (ನೂರಾಹತ್ತು ಕೋಟಿ) ಗೋವುಗಳನ್ನು ದಾನವನ್ನಾಗಿತ್ತು ರಾಷ್ಟ್ರದೊಡನೆ ದಿವವನ್ನು ಸೇರಿದನು.

12226024a ಸಾವಿತ್ರೀ ಕುಂಡಲೇ ದಿವ್ಯೇ ಶರೀರಂ ಜನಮೇಜಯಃ|

12226024c ಬ್ರಾಹ್ಮಣಾರ್ಥೇ ಪರಿತ್ಯಜ್ಯ ಜಗ್ಮತುರ್ಲೋಕಮುತ್ತಮಮ್||

ಬ್ರಾಹ್ಮಣರಿಗಾಗಿ ಸಾವಿತ್ರಿಯು ದಿವ್ಯ ಕುಂಡಲಗಳನ್ನು ಮತ್ತು ಜನಮೇಜಯನು ಶರೀರವನ್ನು ಪರಿತ್ಯಜಿಸಿ ಉತ್ತಮ ಲೋಕಗಳಿಗೆ ಹೋದರು.

12226025a ಸರ್ವರತ್ನಂ ವೃಷಾದರ್ಭೋ ಯುವನಾಶ್ವಃ ಪ್ರಿಯಾಃ ಸ್ತ್ರಿಯಃ|

12226025c ರಮ್ಯಮಾವಸಥಂ ಚೈವ ದತ್ತ್ವಾಮುಂ ಲೋಕಮಾಸ್ಥಿತಃ||

ವೃಷದರ್ಭಿಯ ಮಗ ಯುವನಾಶ್ವನು ಸರ್ವರತ್ನಗಳನ್ನೂ, ಪ್ರಿಯ ಸ್ತ್ರೀಯರನ್ನೂ, ರಮ್ಯ ಭವನಗಳನ್ನೂ ದಾನಮಾಡಿ ಸ್ವರ್ಗಲೋಕದಲ್ಲಿ ನೆಲೆಸಿದನು.

12226026a ನಿಮೀ ರಾಷ್ಟ್ರಂ ಚ ವೈದೇಹೋ ಜಾಮದಗ್ನ್ಯೋ ವಸುಂಧರಾಮ್|

12226026c ಬ್ರಾಹ್ಮಣೇಭ್ಯೋ ದದೌ ಚಾಪಿ ಗಯಶ್ಚೋರ್ವೀಂ ಸಪತ್ತನಾಮ್||

ವಿದೇಹರಾಜ ನಿಮಿಯು ರಾಷ್ಟ್ರವನ್ನೂ, ಜಾಮದಗ್ನಿ ರಾಮನು ವಸುಂಧರೆಯನ್ನೂ ಮತ್ತು ಗಯನೂ ಕೂಡ ಪಟ್ಟಗಳೊಂದಿಗೆ ಇಡೀ ಭೂಮಿಯನ್ನು ಬ್ರಾಹ್ಮಣರಿಗೆ ದಾನಮಾಡಿದರು.

12226027a ಅವರ್ಷತಿ ಚ ಪರ್ಜನ್ಯೇ ಸರ್ವಭೂತಾನಿ ಚಾಸಕೃತ್|

12226027c ವಸಿಷ್ಠೋ ಜೀವಯಾಮಾಸ ಪ್ರಜಾಪತಿರಿವ ಪ್ರಜಾಃ||

ಪರ್ಜನ್ಯನು ಮಳೆಸುರಿಸದೇ ಇದ್ದಾಗ ವಸಿಷ್ಠನು ಪ್ರಜೆಗಳನ್ನು ಸೃಷ್ಟಿಸುವ ಪ್ರಜಾಪತಿಯಂತೆ ಸರ್ವಭೂತಗಳನ್ನೂ ಜೀವದಿಂದಿರಿಸಿದನು.

12226028a ಕರಂಧಮಸ್ಯ ಪುತ್ರಸ್ತು ಮರುತ್ತೋ ನೃಪತಿಸ್ತಥಾ|

12226028c ಕನ್ಯಾಮಂಗಿರಸೇ ದತ್ತ್ವಾ ದಿವಮಾಶು ಜಗಾಮ ಹ||

ಕರಂಧಮನ ಪುತ್ರ ನೃಪತಿ ಮರುತ್ತನಾದರೋ ತನ್ನ ಕನ್ಯೆಯನ್ನು ಅಂಗಿರಸನಿಗಿತ್ತು ದಿವಕ್ಕೆ ಹೋದನು.

12226029a ಬ್ರಹ್ಮದತ್ತಶ್ಚ ಪಾಂಚಾಲ್ಯೋ ರಾಜಾ ಬುದ್ಧಿಮತಾಂ ವರಃ|

12226029c ನಿಧಿಂ ಶಂಖಂ ದ್ವಿಜಾಗ್ರ್ಯೇಭ್ಯೋ ದತ್ತ್ವಾ ಲೋಕಾನವಾಪ್ತವಾನ್||

ಬುದ್ಧಿವಂತರಲ್ಲಿ ಶ್ರೇಷ್ಠ ಪಾಂಚಾಲ್ಯ ರಾಜಾ ಬ್ರಹ್ಮದತ್ತನು ಬ್ರಾಹ್ಮಣರಿಗೆ ಒಂದು ಶಂಖ (ನೂರು ಶತಕೋಟಿ) ನಿಧಿಯನ್ನು ನೀಡಿ ಲೋಕಗಳನ್ನು ಪಡೆದುಕೊಂಡನು.

12226030a ರಾಜಾ ಮಿತ್ರಸಹಶ್ಚಾಪಿ ವಸಿಷ್ಠಾಯ ಮಹಾತ್ಮನೇ|

12226030c ಮದಯಂತೀಂ ಪ್ರಿಯಾಂ ದತ್ತ್ವಾ ತಯಾ ಸಹ ದಿವಂ ಗತಃ||

ರಾಜಾ ಮಿತ್ರಸಹನೂ ಕೂಡ ಮಹಾತ್ಮಾ ವಸಿಷ್ಠನಿಗೆ ಪ್ರಿಯೆ ಮದಯಂತಿಯನ್ನು ನೀಡಿ ಅವಳೊಂದಿಗೆ ದಿವಕ್ಕೆ ಹೋದನು.

12226031a ಸಹಸ್ರಜಿಚ್ಚ ರಾಜರ್ಷಿಃ ಪ್ರಾಣಾನಿಷ್ಟಾನ್ಮಹಾಯಶಾಃ|

12226031c ಬ್ರಾಹ್ಮಣಾರ್ಥೇ ಪರಿತ್ಯಜ್ಯ ಗತೋ ಲೋಕಾನನುತ್ತಮಾನ್||

ಮಹಾಯಶಸ್ವೀ ರಾಜರ್ಷಿ ಸಹಸ್ರಜಿತುವು ಬ್ರಾಹ್ಮಣನಿಗಾಗಿ ಇಷ್ಟವಾದ ಪ್ರಾಣವನ್ನು ಪರಿತ್ಯಜಿಸಿ ಅನುತ್ತಮ ಲೋಕಗಳಿಗೆ ಹೋದನು.

12226032a ಸರ್ವಕಾಮೈಶ್ಚ ಸಂಪೂರ್ಣಂ ದತ್ತ್ವಾ ವೇಶ್ಮ ಹಿರಣ್ಮಯಮ್|

12226032c ಮುದ್ಗಲಾಯ ಗತಃ ಸ್ವರ್ಗಂ ಶತದ್ಯುಮ್ನೋ ಮಹೀಪತಿಃ||

ಮಹೀಪತಿ ಶತದ್ಯುಮ್ನನು ಸರ್ವಕಾಮಗಳಿಂದಲೂ ಸಂಪೂರ್ಣವಾದ ಹಿರಣ್ಮಯ ಭವನವನ್ನು ಮುದ್ಗಲನಿಗಿತ್ತು ಸ್ವರ್ಗಕ್ಕೆ ಹೋದನು.

12226033a ನಾಮ್ನಾ ಚ ದ್ಯುತಿಮಾನ್ನಾಮ ಶಾಲ್ವರಾಜಃ ಪ್ರತಾಪವಾನ್|

12226033c ದತ್ತ್ವಾ ರಾಜ್ಯಮೃಚೀಕಾಯ ಗತೋ ಲೋಕಾನನುತ್ತಮಾನ್||

ದ್ಯುತಿಮಾನ್ ಎಂಬ ಪ್ರತಾಪವಾನ ಶಾಲ್ವರಾಜನು ಋಚೀಕನಿಗೆ ರಾಜ್ಯವನ್ನಿತ್ತು ಅನುತ್ತಮ ಲೋಕಗಳಿಗೆ ಹೋದನು.

12226034a ಮದಿರಾಶ್ವಶ್ಚ ರಾಜರ್ಷಿರ್ದತ್ತ್ವಾ ಕನ್ಯಾಂ ಸುಮಧ್ಯಮಾಮ್|

12226034c ಹಿರಣ್ಯಹಸ್ತಾಯ ಗತೋ ಲೋಕಾನ್ದೇವೈರಭಿಷ್ಟುತಾನ್||

ರಾಜರ್ಷಿ ಮದಿರಾಶ್ವನು ತನ್ನ ಸುಮಧ್ಯಮೆ ಕನ್ಯೆಯನ್ನು ಹಿರಣ್ಯಹಸ್ತನಿಗೆ ದಾನಮಾಡಿ ದೇವತೆಗಳೂ ಸಮ್ಮಾನಿಸುವ ಪುಣ್ಯಲೋಕಗಳನ್ನು ಪಡೆದುಕೊಂಡನು.

12226035a ಲೋಮಪಾದಶ್ಚ ರಾಜರ್ಷಿಃ ಶಾಂತಾಂ ದತ್ತ್ವಾ ಸುತಾಂ ಪ್ರಭುಃ|

12226035c ಋಷ್ಯಶೃಂಗಾಯ ವಿಪುಲೈಃ ಸರ್ವಕಾಮೈರಯುಜ್ಯತ||

ರಾಜರ್ಷಿ ಪ್ರಭು ಲೋಮಪಾದನು ತನ್ನ ಮಗಳು ಶಾಂತೆಯನ್ನು ಋಷ್ಯಶೃಂಗನಿಗೆ ದಾನಮಾಡಿ ಸರ್ಮಕಾಮನೆಗಳನ್ನು ಪಡೆದುಕೊಂಡನು.

12226036a ದತ್ತ್ವಾ ಶತಸಹಸ್ರಂ ತು ಗವಾಂ ರಾಜಾ ಪ್ರಸೇನಜಿತ್|

12226036c ಸವತ್ಸಾನಾಂ ಮಹಾತೇಜಾ ಗತೋ ಲೋಕಾನನುತ್ತಮಾನ್||

ಮಹಾತೇಜಸ್ವೀ ರಾಜಾ ಪ್ರಸೇನಜಿತುವು ಕರುಗಳ ಸಹಿತ ಒಂದು ಲಕ್ಷ ಗೋವುಗಳನ್ನು ದಾನಮಾಡಿ ಅನುತ್ತಮ ಲೋಕಗಳಿಗೆ ಹೋದನು.

12226037a ಏತೇ ಚಾನ್ಯೇ ಚ ಬಹವೋ ದಾನೇನ ತಪಸಾ ಚ ಹ|

12226037c ಮಹಾತ್ಮಾನೋ ಗತಾಃ ಸ್ವರ್ಗಂ ಶಿಷ್ಟಾತ್ಮಾನೋ ಜಿತೇಂದ್ರಿಯಾಃ||

ಇವರು ಮತ್ತು ಇನ್ನೂ ಅನೇಕ ಶಿಷ್ಟಾತ್ಮ ಜಿತೇಂದ್ರಿಯ ಮಹಾತ್ಮರು ದಾನ ಮತ್ತು ತಪಸ್ಸುಗಳಿಂದ ಸ್ವರ್ಗಕ್ಕೆ ಹೋಗಿದ್ದಾರೆ.

12226038a ತೇಷಾಂ ಪ್ರತಿಷ್ಠಿತಾ ಕೀರ್ತಿರ್ಯಾವತ್ ಸ್ಥಾಸ್ಯತಿ ಮೇದಿನೀ|

12226038c ದಾನಯಜ್ಞಪ್ರಜಾಸರ್ಗೈರೇತೇ ಹಿ ದಿವಮಾಪ್ನುವನ್||

ಎಲ್ಲಿಯವರೆಗೆ ಈ ಭೂಮಿಯಿರುತ್ತದೆಯೋ ಅಲ್ಲಿಯವರೆಗೂ ಅವರ ಕೀರ್ತಿಯು ಪ್ರತಿಷ್ಠಿತವಾಗಿರುತ್ತದೆ. ಇವರೆಲ್ಲರೂ ದಾನ, ಯಜ್ಞ, ಮತ್ತು ಸಂತಾನಗಳಿಂದಲೇ ಸ್ವರ್ಗವನ್ನು ಪಡೆದುಕೊಂಡಿದ್ದಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಷಟ್ವಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ತಾರನೇ ಅಧ್ಯಾಯವು.

[1] ಗೃಹಸ್ಥಸ್ತ್ವೇಷ ಧರ್ಮಾಣಾಂ ಸರ್ವೇಷಾಂ ಮೂಲಮುಚ್ಯತೇ| (ಭಾರತ ದರ್ಶನ).

[2] ಸಂತಾನದಿಂದ ಪಿತೃಋಣ, ಸ್ವಾಧ್ಯಾಯದಿಂದ ಋಷಿಋಣ ಮತ್ತು ಯಜ್ಞಗಳಿಂದ ದೇವಋಣಗಳ ಮುಕ್ತಿಯಾಗುತ್ತದೆ. (ಭಾರತ ದರ್ಶನ)

Comments are closed.