Shanti Parva: Chapter 225

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೨೫

ಬ್ರಾಹ್ಮ ಪ್ರಳಯ ಮತ್ತು ಮಹಾ ಪ್ರಳಯಗಳ ವರ್ಣನೆ (1-16).

12225001 ವ್ಯಾಸ ಉವಾಚ|

12225001a ಪೃಥಿವ್ಯಾಂ ಯಾನಿ ಭೂತಾನಿ ಜಂಗಮಾನಿ ಧ್ರುವಾಣಿ ಚ|

12225001c ತಾನ್ಯೇವಾಗ್ರೇ ಪ್ರಲೀಯಂತೇ ಭೂಮಿತ್ವಮುಪಯಾಂತಿ ಚ||

ವ್ಯಾಸನು ಹೇಳಿದನು: “ಆ ಸಮಯದಲ್ಲಿ ಮೊದಲು ಪೃಥ್ವಿಯಲ್ಲಿರುವ ಚರಾಚರಪ್ರಾಣಿಗಳೆಲ್ಲವೂ ಅದರಲ್ಲಿ ಲೀನವಾಗಿ ಭೂಮಿತ್ವವನ್ನು ಪಡೆದುಕೊಳ್ಳುತ್ತವೆ.

12225002a ತತಃ ಪ್ರಲೀನೇ ಸರ್ವಸ್ಮಿನ್ ಸ್ಥಾವರೇ ಜಂಗಮೇ ತಥಾ|

12225002c ಅಕಾಷ್ಠಾ[1] ನಿಸ್ತೃಣಾ ಭೂಮಿರ್ದೃಶ್ಯತೇ ಕೂರ್ಮಪೃಷ್ಠವತ್||

ಸ್ಥಾವರ-ಜಂಗಮಗಳೆಲ್ಲವೂ ಅದರಲ್ಲಿ ಲೀನವಾಗಲು ಮರ-ಹುಲ್ಲುಗಳಿಲ್ಲಿದ ಭೂಮಿಯು ಆಮೆಯ ಬೆನ್ನಿನಂತೆ ಬೋಳಾಗಿ ಕಾಣುತ್ತದೆ.

12225003a ಭೂಮೇರಪಿ ಗುಣಂ ಗಂಧಮಾಪ ಆದದತೇ ಯದಾ|

12225003c ಆತ್ತಗಂಧಾ ತದಾ ಭೂಮಿಃ ಪ್ರಲಯತ್ವಾಯ ಕಲ್ಪತೇ||

ಆಗ ಜಲವು ಭೂಮಿಯ ಗುಣವಾದ ಗಂಧವನ್ನು ತೆಗೆದುಕೊಳ್ಳುತ್ತದೆ. ಗಂಧಹೀನವಾದ ಭೂಮಿಯು ತನ್ನ ಅಸ್ತಿತ್ವಕ್ಕೆ ಕಾರಣಭೂತವಾದ ಜಲದಲ್ಲಿ ಲೀನಗೊಳ್ಳಲು ಕಲ್ಪಿಸುತ್ತದೆ.

12225004a ಆಪಸ್ತತಃ ಪ್ರತಿಷ್ಠಂತಿ ಊರ್ಮಿಮತ್ಯೋ ಮಹಾಸ್ವನಾಃ|

12225004c ಸರ್ವಮೇವೇದಮಾಪೂರ್ಯ ತಿಷ್ಠಂತಿ ಚ ಚರಂತಿ ಚ||

ಆಗ ನೀರು ದೊಡ್ಡ-ದೊಡ್ಡ ಅಲೆಗಳಿಂದಲೂ ಘೋರ ಶಬ್ದದಿಂದಲೂ ಕೂಡಿ ಎಲ್ಲವನ್ನೂ ತನ್ನಲ್ಲಿ ಮುಳುಗಿಸಿಕೊಂಡು ಪ್ರವಹಿಸುತ್ತದೆ.

12225005a ಅಪಾಮಪಿ ಗುಣಾಂಸ್ತಾತ ಜ್ಯೋತಿರಾದದತೇ ಯದಾ|

12225005c ಆಪಸ್ತದಾ ಆತ್ತಗುಣಾ ಜ್ಯೋತಿಷ್ಯುಪರಮಂತಿ ಚ||

ಆಗ ಜಲದ ಗುಣವನ್ನೂ ಜ್ಯೋತಿಯು ತೆಗೆದುಕೊಳ್ಳುತ್ತದೆ. ತನ್ನ ಗುಣವನ್ನು ಕಳೆದುಕೊಂಡ ಜಲವೂ ಕೂಡ ಜ್ಯೋತಿಯಲ್ಲಿ ವಿಲೀನವಾಗುತ್ತದೆ.

12225006a ಯದಾದಿತ್ಯಂ ಸ್ಥಿತಂ ಮಧ್ಯೇ ಗೂಹಂತಿ ಶಿಖಿನೋಽರ್ಚಿಷಃ|

12225006c ಸರ್ವಮೇವೇದಮರ್ಚಿರ್ಭಿಃ ಪೂರ್ಣಂ ಜಾಜ್ವಲ್ಯತೇ ನಭಃ||

ಅಗ್ನಿಯ ಜ್ವಾಲೆಗಳು ಮಧ್ಯದಲ್ಲಿರುವ ಆದಿತ್ಯನನ್ನು ಮುಚ್ಚಿಬಿಡಲು ಆಕಾಶವೆಲ್ಲವೂ ಜ್ವಾಲೆಗಳಿಂದ ವ್ಯಾಪ್ತವಾಗಿ ಪ್ರಜ್ವಲಿಸುತ್ತದೆ.

12225007a ಜ್ಯೋತಿಷೋಽಪಿ ಗುಣಂ ರೂಪಂ ವಾಯುರಾದದತೇ ಯದಾ|

12225007c ಪ್ರಶಾಮ್ಯತಿ ತದಾ ಜ್ಯೋತಿರ್ವಾಯುರ್ದೋಧೂಯತೇ ಮಹಾನ್||

ಆಗ ಜ್ಯೋತಿಯ ಗುಣವಾದ ರೂಪವನ್ನು ವಾಯುವು ತೆಗೆದುಕೊಳ್ಳಲು ಜ್ಯೋತಿಯು ಆರಿಹೋಗಿ ವಾಯುವು ಮಹತ್ತರ ವೇಗದಿಂದ ಆಕಾಶವೆಲ್ಲವನ್ನೂ ಕ್ಷೋಭೆಗೊಳಿಸುತ್ತದೆ.

12225008a ತತಸ್ತು ಮೂಲಮಾಸಾದ್ಯ[2] ವಾಯುಃ ಸಂಭವಮಾತ್ಮನಃ|

12225008c ಅಧಶ್ಚೋರ್ಧ್ವಂ ಚ ತಿರ್ಯಕ್ಚ ದೋಧವೀತಿ ದಿಶೋ ದಶ||

ತನ್ನ ಹುಟ್ಟಿಗೆ ಕಾರಣವಾದ ತನ್ನ ಮೂಲ ಆಕಾಶವನ್ನು ಸೇರಿ ವಾಯುವು ಮೇಲೆ-ಕೆಳಗೆ, ಅಕ್ಕ-ಪಕ್ಕಗಳಲ್ಲಿ ಮತ್ತು ಹತ್ತುದಿಕ್ಕುಗಳಲ್ಲಿಯೂ ಬಲವಾಗಿ ಬೀಸುತ್ತದೆ.

12225009a ವಾಯೋರಪಿ ಗುಣಂ ಸ್ಪರ್ಶಮಾಕಾಶಂ ಗ್ರಸತೇ ಯದಾ|

12225009c ಪ್ರಶಾಮ್ಯತಿ ತದಾ ವಾಯುಃ ಖಂ ತು ತಿಷ್ಠತಿ ನಾನದತ್||

ವಾಯುವಿನ ಗುಣವಾದ ಸ್ಪರ್ಶವನ್ನೂ ಆಕಾಶವು ನುಂಗಿಕೊಳ್ಳಲು ವಾಯುವು ಉಪಶಮನಗೊಳ್ಳುತ್ತದೆ. ಶಬ್ದದಿಂದ ಕೂಡಿದ ಆಕಾಶವೊಂದೇ ಆಗ ಉಳಿದಿರುತ್ತದೆ.

[3]12225010a ಆಕಾಶಸ್ಯ ಗುಣಂ ಶಬ್ದಮಭಿವ್ಯಕ್ತಾತ್ಮಕಂ ಮನಃ|

12225010c ಮನಸೋ ವ್ಯಕ್ತಮವ್ಯಕ್ತಂ ಬ್ರಾಹ್ಮಃ ಸ ಪ್ರತಿಸಂಚರಃ||

ಆಕಾಶದ ಗುಣ ಶಬ್ದವನ್ನು ಅವ್ಯಕ್ತಾತ್ಮಕ ಮನಸ್ಸು, ಮತ್ತು ವ್ಯಕ್ತ ಮನಸ್ಸನ್ನು ಅವ್ಯಕ್ತ ಬ್ರಹ್ಮನು ಲೀನಗೊಳಿಸಿಕೊಳ್ಳುತ್ತಾರೆ. ಇದನ್ನೇ ಬ್ರಾಹ್ಮಪ್ರಳಯ ಎನ್ನುತ್ತಾರೆ.

12225011a ತದಾತ್ಮಗುಣಮಾವಿಶ್ಯ ಮನೋ ಗ್ರಸತಿ ಚಂದ್ರಮಾಃ|

12225011c ಮನಸ್ಯುಪರತೇಽಧ್ಯಾತ್ಮಾ ಚಂದ್ರಮಸ್ಯವತಿಷ್ಠತೇ||

ಮಹಾಪ್ರಳಯದ ಸಮಯದಲ್ಲಿ ಅವ್ಯಕ್ತಮನಸ್ಸಾದ ಚಂದ್ರಮಸನು ವ್ಯಕ್ತ ಮನಸ್ಸನ್ನು ನುಂಗಿಬಿಡುತ್ತಾನೆ. ಇದರಿಂದ ಮನಸ್ಸು ಶಾಂತವಾದರೂ ಅದು ಅವ್ಯಕ್ತ ಮನಸ್ಸು ಚಂದ್ರಮನಲ್ಲಿ ಪ್ರತಿಷ್ಠಿತವಾಗಿರುತ್ತದೆ.[4]

12225012a ತಂ ತು ಕಾಲೇನ ಮಹತಾ ಸಂಕಲ್ಪಃ ಕುರುತೇ ವಶೇ|

12225012c ಚಿತ್ತಂ ಗ್ರಸತಿ ಸಂಕಲ್ಪಸ್ತಚ್ಚ ಜ್ಞಾನಮನುತ್ತಮಮ್||

ಬಹಳ ಸಮಯದ ನಂತರ ಸಂಕಲ್ಪವು ಅವ್ಯಕ್ತ ಮನಸ್ಸನ್ನು ವಶಪಡಿಸಿಕೊಳ್ಳುತ್ತದೆ. ಅನಂತರ ಸಮಷ್ಟಿ ಬುದ್ಧಿಯಾದ ಚಿತ್ತವು ಸಂಕಲ್ಪವನ್ನು ನುಂಗುತ್ತದೆ. ಅದೇ ಅನುತ್ತಮ ಜ್ಞಾನವು.

12225013a ಕಾಲೋ ಗಿರತಿ ವಿಜ್ಞಾನಂ ಕಾಲೋ ಬಲಮಿತಿ ಶ್ರುತಿಃ|

12225013c ಬಲಂ ಕಾಲೋ ಗ್ರಸತಿ ತು ತಂ ವಿದ್ವಾನ್ಕುರುತೇ ವಶೇ||

ಕಾಲವು ಸಮಷ್ಟಿ ಬುದ್ಧಿ ವಿಜ್ಞಾನವನ್ನು ನುಂಗುತ್ತದೆ. ಶಕ್ತಿಯು ಕಾಲನನ್ನು ನುಂಗುತ್ತದೆ. ಮಹಾಕಾಲನು ಶಕ್ತಿಯನ್ನು ನುಂಗುತ್ತಾನೆ. ಮಹಾಕಾಲನನ್ನು ವಿದ್ವತ್ ಶಬ್ದವಾಚ್ಯನಾದ ಪರಬ್ರಹ್ಮನು ತನ್ನ ಅಧೀನಕ್ಕೆ ಒಳಪಡಿಸಿಕೊಳ್ಳುತ್ತಾನೆ.

12225014a ಆಕಾಶಸ್ಯ ತದಾ ಘೋಷಂ ತಂ ವಿದ್ವಾನ್ಕುರುತೇಽಽತ್ಮನಿ|

12225014c ತದವ್ಯಕ್ತಂ ಪರಂ ಬ್ರಹ್ಮ ತಚ್ಚಾಶ್ವತಮನುತ್ತಮಮ್|

12225014e ಏವಂ ಸರ್ವಾಣಿ ಭೂತಾನಿ ಬ್ರಹ್ಮೈವ ಪ್ರತಿಸಂಚರಃ||

ಆಕಾಶದ ಗುಣವಾದ ಶಬ್ದವನ್ನು ವ್ಯಕ್ತ ಮನಸ್ಸು ಹೇಗೆ ತನ್ನಲ್ಲಿ ಲಯಮಾಡಿಕೊಳ್ಳುವುದೋ ಹಾಗೆ ಅವ್ಯಕ್ತ, ಶಾಶ್ವತ, ಪರಮಶ್ರೇಷ್ಠ ಬ್ರಹ್ಮವಸ್ತುವು ಮಹಾಕಾಲನನ್ನು ತನ್ನಲ್ಲಿಯೇ ಲೀನಮಾಡಿಕೊಳ್ಳುತ್ತದೆ. ಹೀಗೆ ಪ್ರಳಯಾನಂತರ ಸರ್ವಭೂತಗಳೂ ಪರಬ್ರಹ್ಮ ಪರಮಾತ್ಮನಲ್ಲಿಯೇ ಆಶ್ರಯವನ್ನು ಪಡೆಯುತ್ತವೆ.

12225015a ಯಥಾವತ್ಕೀರ್ತಿತಂ ಸಮ್ಯಗೇವಮೇತದಸಂಶಯಮ್|

12225015c ಬೋಧ್ಯಂ ವಿದ್ಯಾಮಯಂ ದೃಷ್ಟ್ವಾ ಯೋಗಿಭಿಃ ಪರಮಾತ್ಮಭಿಃ||

ಪರಮಾತ್ಮ ಯೋಗಿಗಳು ಜ್ಞಾನಮಯ ಪರಬ್ರಹ್ಮನನ್ನು ಜ್ಞಾನದೃಷ್ಟಿಯಿಂದ ನೋಡಿ ಅದನ್ನು ಯಥಾವತ್ತಾಗಿ ಸಂದೇಹವೇ ಇಲ್ಲದಂತೆ ಹೇಗೆ ಚೆನ್ನಾಗಿ ವರ್ಣಿಸಿದ್ದಾರೋ ಹಾಗೆಯೇ ಬ್ರಹ್ಮವಸ್ತುವಿನ ಸ್ವರೂಪವಿದೆ.

12225016a ಏವಂ ವಿಸ್ತಾರಸಂಕ್ಷೇಪೌ ಬ್ರಹ್ಮಾವ್ಯಕ್ತೇ ಪುನಃ ಪುನಃ|

12225016c ಯುಗಸಾಹಸ್ರಯೋರಾದಾವಹ್ನೋ ರಾತ್ರ್ಯಾಸ್ತಥೈವ ಚ||

ಹೀಗೆ ಒಂದು ಸಾವಿರ ಚತುರ್ಯುಗ ಪರ್ಯಂತದ ಹಗಲಿನಲ್ಲಿ ಮತ್ತು ಅಷ್ಟೇ ಕಾಲದ ರಾತ್ರಿಯಲ್ಲಿ ಅವ್ಯಕ್ತ ಬ್ರಹ್ಮನು ವಿಸ್ತಾರ-ಸಂಕ್ಷೇಪಗಳನ್ನು ಪುನಃ ಪುನಃ ಹೊಂದುತ್ತಿರುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಪಂಚವಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ತೈದನೇ ಅಧ್ಯಾಯವು.

[1] ನಿರ್ವೃಕ್ಷಾ (ಭಾರತ ದರ್ಶನ).

[2] ಸ್ವನಮಾಸಾದ್ಯ (ಭಾರತ ದರ್ಶನ).

[3] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅರೂಪಮರಸಸ್ಪರ್ಶಮಗಂಧಂ ನ ಚ ಮೂರ್ತಿಮತ್| ಸರ್ವಲೋಕಪ್ರಣದಿತಂ ಖಂ ತು ತಿಷ್ಠತಿ ನಾದವತ್|| (ಭಾರತ ದರ್ಶನ).

[4] ಆಗ ಚಂದ್ರಮವು ಆತ್ಮಗುಣ ಅರ್ಥಾತ್ ನಿಃಸ್ಸೀಮ ಜ್ಞಾನ, ವೈರಾಗ್ಯ ಮತ್ತು ಐಶ್ವರ್ಯ ಹಾಗೂ ಧರ್ಮರೂಪ ಕರ್ಮಗಳಲ್ಲಿ ಅವಿಷ್ಟನಾಗಿ ಹಿರಣ್ಯಗರ್ಭ ಸಂಬಂಧದ ಸಮಷ್ಟಿ ಮನಸ್ಸನ್ನು ನಷ್ಟಗೊಳಿಸುತ್ತದೆ. ಮನಸ್ಸು ಶಾಂತವಾದಾಗಲೂ ಆತ್ಮಗುಣವು ಚಂದ್ರಮದಲ್ಲಿ ಇರುತ್ತದೆ. (ದಾಮೋದರ್ ಸತ್ವಾಲೇಕರ್: ಸ್ವಾಧ್ಯಾಯ ಮಂಡಲ)

Comments are closed.