Shanti Parva: Chapter 222

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೨೨

ಜೈಗೀಶವ್ಯಾಸಿತ ಸಂವಾದ

ಜೈಗೀಶವ್ಯನು ಅಸಿತ-ದೇವಲನಿಗೆ ಸಮತ್ವಬುದ್ಧಿಯನ್ನು ಉಪದೇಶಿಸಿದುದು (1-24).

12222001 ಯುಧಿಷ್ಠಿರ ಉವಾಚ|

12222001a ಕಿಂಶೀಲಃ ಕಿಂಸಮಾಚಾರಃ ಕಿಂವಿದ್ಯಃ ಕಿಂಪರಾಯಣಃ[1]|

12222001c ಪ್ರಾಪ್ನೋತಿ ಬ್ರಹ್ಮಣಃ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್||

ಯುಧಿಷ್ಠಿರನು ಹೇಳಿದನು: “ಮನುಷ್ಯನು ಎಂಥಹ ಶೀಲ, ಎಂತಹ ಆಚರಣೆ, ಎಂತಹ ವಿದ್ಯೆ ಮತ್ತು ಯಾವುದರ ಆಶ್ರಯದಿಂದ ಪ್ರಕೃತಿಗಿಂತಲೂ ಶ್ರೇಷ್ಠವಾಗಿರುವ ಅವಿನಾಶೀ ಬ್ರಹ್ಮಸ್ಥಾನವನ್ನು ಪಡೆದುಕೊಳ್ಳುತ್ತಾನೆ?”

12222002 ಭೀಷ್ಮ ಉವಾಚ|

12222002a ಮೋಕ್ಷಧರ್ಮೇಷು ನಿಯತೋ ಲಘ್ವಾಹಾರೋ ಜಿತೇಂದ್ರಿಯಃ|

12222002c ಪ್ರಾಪ್ನೋತಿ ಬ್ರಹ್ಮಣಃ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್||

ಭೀಷ್ಮನು ಹೇಳಿದನು: “ನಿಯತನೂ, ಅಲ್ಪಾಹಾರಿಯೂ, ಜಿತೇಂದ್ರಿಯನೂ ಆಗಿ ಮೋಕ್ಷಧರ್ಮವನ್ನು ಪಾಲಿಸುವವನು ಪ್ರಕೃತಿಗಿಂತಲೂ ಶ್ರೇಷ್ಠವಾಗಿರುವ ಅವಿನಾಶೀ ಬ್ರಹ್ಮಸ್ಥಾನವನ್ನು ಪಡೆಯುತ್ತಾನೆ.

12222003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12222003c ಜೈಗೀಷವ್ಯಸ್ಯ ಸಂವಾದಮಸಿತಸ್ಯ ಚ ಭಾರತ||

ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾಗಿರುವ ಜೈಗೀಷವ್ಯ ಮತ್ತು ಅಸಿತರ[2] ಸಂವಾದವನ್ನು ಉದಾಹರಿಸುತ್ತಾರೆ.

12222004a ಜೈಗೀಷವ್ಯಂ ಮಹಾಪ್ರಾಜ್ಞಂ ಧರ್ಮಾಣಾಮಾಗತಾಗಮಮ್|

12222004c ಅಕ್ರುಧ್ಯಂತಮಹೃಷ್ಯಂತಮಸಿತೋ ದೇವಲೋಽಬ್ರವೀತ್||

ಮಹಾಪ್ರಾಜ್ಞ, ಧರ್ಮಶಾಸ್ತ್ರಗಳನ್ನು ತಿಳಿದಿದ್ದ, ಕ್ರೋಧಿತನಾಗದಿದ್ದ ಮತ್ತು ಹರ್ಷಿತನೂ ಆಗದಿದ್ದ ಜೈಗೀಷವ್ಯನನ್ನು ಅಸಿತ-ದೇವಲನು ಕೇಳಿದನು:

12222005a ನ ಪ್ರೀಯಸೇ ವಂದ್ಯಮಾನೋ ನಿಂದ್ಯಮಾನೋ ನ ಕುಪ್ಯಸಿ|

12222005c ಕಾ ತೇ ಪ್ರಜ್ಞಾ ಕುತಶ್ಚೈಷಾ ಕಿಂ ಚೈತಸ್ಯಾಃ ಪರಾಯಣಮ್||

“ವಂದಿಸಿದರೆ ನೀನು ಪ್ರೀತನಾಗುವುದಿಲ್ಲ; ನಿಂದಿಸಿದರೆ ಕುಪಿತನಾಗುವುದಿಲ್ಲ. ನಿನಗಿರುವ ಈ ಪ್ರಜ್ಞೆಯು ಎಂಥಹುದು? ಇದು ನಿನಗೆ ಎಲ್ಲಿಂದ ಹೇಗೆ ಬಂದಿದೆ? ಇದರ ಆಶ್ರಯವಾದರೂ ಏನು?”

12222006a ಇತಿ ತೇನಾನುಯುಕ್ತಃ ಸ ತಮುವಾಚ ಮಹಾತಪಾಃ|

12222006c ಮಹದ್ವಾಕ್ಯಮಸಂದಿಗ್ಧಂ ಪುಷ್ಕಲಾರ್ಥಪದಂ ಶುಚಿ||

ಹೀಗೆ ಪ್ರಶ್ನಿಸಿದ ಅಸಿತ-ದೇವಲನಿಗೆ ಮಹಾತಪಸ್ವಿ ಜೈಗೀಷವ್ಯನು ಅಸಂದಿಗ್ಧವಾದ ಪುಷ್ಕಲ ಅರ್ಥಗಳನ್ನು ಕೊಡುವ ಶುಚಿಯಾದ ಈ ಮಹಾವಾಕ್ಯವನ್ನು ಹೇಳಿದನು:

12222007a ಯಾ ಗತಿರ್ಯಾ ಪರಾ ನಿಷ್ಠಾ ಯಾ ಶಾಂತಿಃ ಪುಣ್ಯಕರ್ಮಣಾಮ್|

12222007c ತಾಂ ತೇಽಹಂ ಸಂಪ್ರವಕ್ಷ್ಯಾಮಿ ಯನ್ಮಾಂ ಪೃಚ್ಚಸಿ ವೈ ದ್ವಿಜ||

“ದ್ವಿಜ! ನೀನು ಪ್ರಶ್ನಿಸುವ ಆ ಪುಣ್ಯಕರ್ಮಿಗಳಿಗೆ ಗತಿಯಾದ, ಪರಮ ನಿಷ್ಠೆಯಾದ ಮತ್ತು ಶಾಂತಿಯುಕ್ತವಾದ ಪ್ರಜ್ಞೆಯ ಕುರಿತು ಹೇಳುತ್ತೇನೆ.

12222008a ನಿಂದತ್ಸು ಚ ಸಮೋ ನಿತ್ಯಂ ಪ್ರಶಂಸತ್ಸು ಚ ದೇವಲ|

12222008c ನಿಹ್ನುವಂತಿ ಚ ಯೇ ತೇಷಾಂ ಸಮಯಂ ಸುಕೃತಂ ಚ ಯೇ||

ದೇವಲ! ಪುಣ್ಯಕರ್ಮಿಗಳು ತಮ್ಮನ್ನು ನಿಂದಿಸುವವರಲ್ಲಿಯೂ, ಪ್ರಶಂಸಿಸುವವರಲ್ಲಿಯೂ ಮತ್ತು ತಮ್ಮ ಸುಕೃತಗಳನ್ನು ಮುಚ್ಚಿಡುವವರಲ್ಲಿಯೂ ಸಮಭಾವದಿಂದಿರುತ್ತಾರೆ.

12222009a ಉಕ್ತಾಶ್ಚ ನ ವಿವಕ್ಷಂತಿ ವಕ್ತಾರಮಹಿತೇ ರತಮ್|

12222009c ಪ್ರತಿಹಂತುಂ ನ ಚೇಚ್ಚಂತಿ ಹಂತಾರಂ ವೈ ಮನೀಷಿಣಃ||

ಅಹಿತರು ಕಠೋರವಾಗಿ ಮಾತನಾಡಿದರೂ ಮನೀಷಿಣರು ತಿರುಗಿ ಕಠೋರವಾಗಿ ಮಾತನಾಡುವುದಿಲ್ಲ. ಹೊಡೆಯುವವರನ್ನು ಪ್ರತಿಯಾಗಿ ಹೊಡೆಯಲು ಇಚ್ಛಿಸುವುದಿಲ್ಲ.

12222010a ನಾಪ್ರಾಪ್ತಮನುಶೋಚಂತಿ ಪ್ರಾಪ್ತಕಾಲಾನಿ ಕುರ್ವತೇ|

12222010c ನ ಚಾತೀತಾನಿ ಶೋಚಂತಿ ನ ಚೈನಾನ್ ಪ್ರತಿಜಾನತೇ||

ದೊರೆಯದೇ ಇದ್ದುದಕ್ಕೆ ಶೋಕಿಸುವುದಿಲ್ಲ. ಆ ಕಾಲದಲ್ಲಿ ಯಾವುದು ದೊರಕಿದೆಯೋ ಅದರಿಂದಲೇ ಜೀವನ ನಡೆಸಿಕೊಳ್ಳುತ್ತಾರೆ. ಹಿಂದೆ ನಡೆದುಹೋದುದರ ಕುರಿತು ಶೋಕಿಸುವುದಿಲ್ಲ. ಅವುಗಳನ್ನು ಸ್ಮರಿಸಿಕೊಳ್ಳುವುದೂ ಇಲ್ಲ.

12222011a ಸಂಪ್ರಾಪ್ತಾನಾಂ ಚ ಪೂಜ್ಯಾನಾಂ ಕಾಮಾದರ್ಥೇಷು ದೇವಲ|

12222011c ಯಥೋಪಪತ್ತಿಂ ಕುರ್ವಂತಿ ಶಕ್ತಿಮಂತಃ ಕೃತವ್ರತಾಃ||

ದೇವಲ! ಶಕ್ತಿವಂತರಾದ ವ್ರತಾನುಷ್ಠಾನುಗಳನ್ನು ಮಾಡುತ್ತಿರುವ ಪೂಜ್ಯರು ಯಾರಾದರೂ ಯಾವುದಾದರೂ ಕಾಮನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿಶೇಷ ಪ್ರಯೋಜನ ಸಿದ್ಧಿಗಾಗಿ ತಮ್ಮ ಬಳಿ ಬಂದರೆ ಅವರಿಗೆ ಅವರು ಯಥೋಚಿತ ಸಹಾಯವನ್ನು ಮಾಡುತ್ತಾರೆ.

12222012a ಪಕ್ವವಿದ್ಯಾ ಮಹಾಪ್ರಾಜ್ಞಾ ಜಿತಕ್ರೋಧಾ ಜಿತೇಂದ್ರಿಯಾಃ|

12222012c ಮನಸಾ ಕರ್ಮಣಾ ವಾಚಾ ನಾಪರಾಧ್ಯಂತಿ ಕಸ್ಯ ಚಿತ್||

ವಿದ್ಯೆಯು ಪಕ್ವವಾಗಿರುವ, ಮಹಾಪ್ರಾಜ್ಞ ಜಿತಕ್ರೋಧ ಜಿತೇಂದ್ರಿಯರು ಎಂದೂ ಮನಸಾರೆ ಅಥವಾ ಕರ್ಮಗಳ ಮೂಲಕ ಅಥವಾ ಮಾತಿನಲ್ಲಿ ಪಾಪಗಳನ್ನೆಸಗುವುದಿಲ್ಲ.

12222013a ಅನೀರ್ಷವೋ ನ ಚಾನ್ಯೋನ್ಯಂ ವಿಹಿಂಸಂತಿ ಕದಾ ಚನ|

12222013c ನ ಚ ಜಾತೂಪತಪ್ಯಂತೇ ಧೀರಾಃ ಪರಸಮೃದ್ಧಿಭಿಃ||

ಅವರು ಎಂದೂ ಅನ್ಯೋನ್ಯರಲ್ಲಿ ಈರ್ಷ್ಯೆಯನ್ನು ತಾಳುವುದಿಲ್ಲ. ಅನ್ಯೋನ್ಯರನ್ನು ಹಿಂಸಿಸುವುದಿಲ್ಲ. ಅಂಥಹ ಧೀರರು ಇನ್ನೊಬ್ಬರ ಸಮೃದ್ಧಿಯನ್ನು ನೋಡಿ ಹೊಟ್ಟೇಕಿಚ್ಚು ಪಡುವುದಿಲ್ಲ.

12222014a ನಿಂದಾಪ್ರಶಂಸೇ ಚಾತ್ಯರ್ಥಂ ನ ವದಂತಿ ಪರಸ್ಯ ಯೇ|

12222014c ನ ಚ ನಿಂದಾಪ್ರಶಂಸಾಭ್ಯಾಂ ವಿಕ್ರಿಯಂತೇ ಕದಾ ಚನ||

ಅವರು ಇತರರನ್ನು ನಿಂದಿಸುವ ಮತ್ತು ಪ್ರಶಂಸಿಸುವ ಮಾತನ್ನು ಆಡುವುದಿಲ್ಲ. ಅವರು ಎಂದೂ ತಮ್ಮದೇ ನಿಂದನೆ ಮತ್ತು ಪ್ರಶಂಸೆಯನ್ನು ಮಾಡಿಕೊಳ್ಳುವುದಿಲ್ಲ.

12222015a ಸರ್ವತಶ್ಚ ಪ್ರಶಾಂತಾ ಯೇ ಸರ್ವಭೂತಹಿತೇ ರತಾಃ|

12222015c ನ ಕ್ರುಧ್ಯಂತಿ ನ ಹೃಷ್ಯಂತಿ ನಾಪರಾಧ್ಯಂತಿ ಕಸ್ಯ ಚಿತ್|

12222015e ವಿಮುಚ್ಯ ಹೃದಯಗ್ರಂಥೀಂಶ್ಚಂಕಮ್ಯಂತೇ ಯಥಾಸುಖಮ್||

ಅವರು ಎಲ್ಲರೀತಿಯಲ್ಲಿ ಪ್ರಶಾಂತರಾಗಿರುತ್ತಾರೆ. ಸರ್ವಭೂತಗಳ ಹಿತದಲ್ಲಿಯೇ ನಿರತರಾಗಿರುತ್ತಾರೆ. ಅವರು ಎಂದೂ ಕ್ರೋಧಿಸುವುದಿಲ್ಲ, ಹರ್ಷಿಸುವುದಿಲ್ಲ, ಮತ್ತು ಅಪರಾಧವನ್ನೆಸಗುವುದಿಲ್ಲ. ಅವರು ಹೃದಯದಲ್ಲಿರುವ ಅಜ್ಞಾನವೆಂಬ ಗಂಟನ್ನು ಬಿಚ್ಚಿ ಎಸೆದು ಆನಂದದಿಂದ ಸರ್ವತ್ರ ಸಂಚರಿಸುತ್ತಿರುತ್ತಾರೆ.

12222016a ನ ಯೇಷಾಂ ಬಾಂಧವಾಃ ಸಂತಿ ಯೇ ಚಾನ್ಯೇಷಾಂ ನ ಬಾಂಧವಾಃ|

12222016c ಅಮಿತ್ರಾಶ್ಚ ನ ಸಂತ್ಯೇಷಾಂ ಯೇ ಚಾಮಿತ್ರಾ ನ ಕಸ್ಯ ಚಿತ್||

ಅವರಿಗೆ ಬಾಂಧವರ್ಯಾರೂ ಇರುವುದಿಲ್ಲ. ಅವರು ಯಾರಿಗೂ ಬಂಧುಗಳಾಗಿರುವುದಿಲ್ಲ. ಅವರಿಗೆ ಶತ್ರುಗಳೂ ಇರುವುದಿಲ್ಲ. ಮಿತ್ರರು ಯಾರೂ ಇರುವುದಿಲ್ಲ.

12222017a ಯ ಏವಂ ಕುರ್ವತೇ ಮರ್ತ್ಯಾಃ ಸುಖಂ ಜೀವಂತಿ ಸರ್ವದಾ|

12222017c ಧರ್ಮಮೇವಾನುವರ್ತಂತೇ[3] ಧರ್ಮಜ್ಞಾ ದ್ವಿಜಸತ್ತಮ|

12222017e ಯೇ ಹ್ಯತೋ ವಿಚ್ಯುತಾ ಮಾರ್ಗಾತ್ತೇ ಹೃಷ್ಯಂತ್ಯುದ್ವಿಜಂತಿ ಚ||

ದ್ವಿಜಸತ್ತಮ! ಹೀಗೆ ಮಾಡುವ ಮನುಷ್ಯರು ಸರ್ವದಾ ಸುಖದಿಂದ ಜೀವಿಸುತ್ತಾರೆ. ಇದೇ ಧರ್ಮವನ್ನು ಅನುಸರಿಸುವವರು ಧರ್ಮಜ್ಞರು. ಈ ಧರ್ಮಮಾರ್ಗದಿಂದ ಚ್ಯುತರಾದವರು ಸುಖಬಂದಾಗ ಹರ್ಷಿಸುತ್ತಾರೆ ಮತ್ತು ಕಷ್ಟವು ಬಂದಾಗ ಉದ್ವಿಗ್ನರಾಗುತ್ತಾರೆ.

12222018a ಆಸ್ಥಿತಸ್ತಮಹಂ ಮಾರ್ಗಮಸೂಯಿಷ್ಯಾಮಿ ಕಂ ಕಥಮ್|

12222018c ನಿಂದ್ಯಮಾನಃ ಪ್ರಶಸ್ತೋ ವಾ ಹೃಷ್ಯೇಯಂ ಕೇನ ಹೇತುನಾ||

ಅಂಥಹ ಧರ್ಮಮಾರ್ಗವನ್ನೇ ಅನುಸರಿಸುತ್ತಿರುವ ನಾನು ಯಾವ ಕಾರಣಕ್ಕಾಗಿ ಯಾರನ್ನು ತಾನೇ ದ್ವೇಷಿಸಲಿ? ಒಬ್ಬನಿಂದ ನಿಂದಿಸಲ್ಪಟ್ಟು ಮತ್ತೊಬ್ಬನಿಂದ ಪ್ರಶಂಸಿತನಾದರೆ ಯಾವ ಕಾರಣಕ್ಕಾಗಿ ನಾನು ಸಂತೋಷಿಸಲಿ?

12222019a ಯದ್ಯದಿಚ್ಚಂತಿ ತನ್ಮಾರ್ಗಮಭಿಗಚ್ಚಂತಿ ಮಾನವಾಃ|

12222019c ನ ಮೇ ನಿಂದಾಪ್ರಶಂಸಾಭ್ಯಾಂ ಹ್ರಾಸವೃದ್ಧೀ ಭವಿಷ್ಯತಃ||

ಮನುಷ್ಯರಿಗೆ ಇತರರನ್ನು ನಿಂದಿಸುವುದರಿಂದ ಅಥವಾ ಪ್ರಶಂಸಿಸುವುದರಿಂದ ಲಾಭವುಂಟಾಗುವುದಾದರೆ ಆಗಲಿ. ಆದರೆ ಅವರ ನಿಂದೆಯಿಂದ ನಾನು ಕುಗ್ಗುವುದೂ ಇಲ್ಲ. ಪ್ರಶಂಸನೆಯಿಂದ ಹಿಗ್ಗುವುದೂ ಇಲ್ಲ.

12222020a ಅಮೃತಸ್ಯೇವ ಸಂತೃಪ್ಯೇದವಮಾನಸ್ಯ ತತ್ತ್ವವಿತ್|

12222020c ವಿಷಸ್ಯೇವೋದ್ವಿಜೇನ್ನಿತ್ಯಂ ಸಂಮಾನಸ್ಯ ವಿಚಕ್ಷಣಃ||

ತತ್ತ್ವವಿದು ವಿಚಕ್ಷಣನು ಇತರರು ಮಾಡುವ ಅಪಮಾನವನ್ನು ಅಮೃತವೆಂದೇ ಭಾವಿಸಿ ತೃಪ್ತನಾಗಬೇಕು. ಹಾಗೆಯೇ ಇತರರು ಮಾಡುವ ಸಮ್ಮಾನವನ್ನು ವಿಷವೆಂದೇ ಭಾವಿಸಿ ಉದ್ವಿಗ್ನನಾಗಬೇಕು.

12222021a ಅವಜ್ಞಾತಃ ಸುಖಂ ಶೇತೇ ಇಹ ಚಾಮುತ್ರ ಚೋಭಯೋಃ|

12222021c ವಿಮುಕ್ತಃ ಸರ್ವಪಾಪೇಭ್ಯೋ ಯೋಽವಮಂತಾ ಸ ಬಧ್ಯತೇ||

ಸರ್ವದೋಷಗಳಿಂದ ವಿಮುಕ್ತನಾದವನು ಅಪಮಾನಿಸಲ್ಪಟ್ಟರೂ ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಸುಖವಾಗಿ ನಿದ್ರಿಸುತ್ತಾನೆ. ಆದರೆ ಅಂಥವನನ್ನು ಅಪಮಾನಿಸುವವನು ಪಾಪದಿಂದ ಬಂಧಿತನಾಗುತ್ತಾನೆ.

12222022a ಪರಾಂ ಗತಿಂ ಚ ಯೇ ಕೇ ಚಿತ್ ಪ್ರಾರ್ಥಯಂತಿ ಮನೀಷಿಣಃ|

12222022c ಏತದ್ವ್ರತಂ ಸಮಾಶ್ರಿತ್ಯ ಸುಖಮೇಧಂತಿ ತೇ ಜನಾಃ||

ಪರಮ ಗತಿಯನ್ನು ಬಯಸುವ ಮನೀಷಿಣರು ಈ ವ್ರತವನ್ನು ಆಶ್ರಯಿಸಿ ಸುಖವನ್ನು ಹೊಂದುತ್ತಾರೆ.

12222023a ಸರ್ವತಶ್ಚ ಸಮಾಹೃತ್ಯ ಕ್ರತೂನ್ಸರ್ವಾನ್ ಜಿತೇಂದ್ರಿಯಃ|

12222023c ಪ್ರಾಪ್ನೋತಿ ಬ್ರಹ್ಮಣಃ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್||

ಎಲ್ಲ ರೀತಿಯ ಕಾಮನಾ ಸಂಕಲ್ಪಗಳನ್ನು ಪರಿತ್ಯಜಿಸಿದ ಜಿತೇಂದ್ರಿಯನು ಪ್ರಕೃತಿಗಿಂತಲೂ ಶ್ರೇಷ್ಠವಾದ ಶಾಶ್ವತ ಬ್ರಹ್ಮಸ್ಥಾನವನ್ನು ಪಡೆಯುತ್ತಾನೆ.

12222024a ನಾಸ್ಯ ದೇವಾ ನ ಗಂಧರ್ವಾ ನ ಪಿಶಾಚಾ ನ ರಾಕ್ಷಸಾಃ|

12222024c ಪದಮನ್ವವರೋಹಂತಿ ಪ್ರಾಪ್ತಸ್ಯ ಪರಮಾಂ ಗತಿಮ್||

ಪರಮ ಗತಿಯನ್ನು ಪಡೆದ ಇಂಥವನ ದಿವ್ಯಪದವಿಯನ್ನು ದೇವತೆಗಳಾಗಲೀ, ಗಂಧರ್ವ-ಪಿಶಾಚ-ರಾಕ್ಷಸರಾಗಲೀ ಅನುಸರಿಸಲಾರರು[4].””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಿಗೀಷವ್ಯಾಸಿತಸಂವಾದೇ ದ್ವಾವಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಿಗೀಷವ್ಯಾಸಿತಸಂವಾದ ಎನ್ನುವ ಇನ್ನೂರಾಇಪ್ಪತ್ತೆರಡನೇ ಅಧ್ಯಾಯವು.

[1] ಕಿಂಪರಾಕ್ರಮಃ (ಭಾರತ ದರ್ಶನ/ಗೀತಾ ಪ್ರೆಸ್).

[2] ಅಸಿತದೇವಲ ಮತ್ತು ಜೈಗೀಷವ್ಯರ ಕಥೆಯು ಈಗಾಗಲೇ ಶಲ್ಯಪರ್ವದ ಸಾರಸ್ವತ ಪರ್ವದ ಅಧ್ಯಾಯ 49 ರಲ್ಲಿ ಬಂದಿದೆ. ಅಸಿತ-ದೇವಲನು ವ್ಯಾಸಕೃತ ಮಹಾಭಾರತವನ್ನು ಪಿತೃಗಳಿಗೆ ಹೇಳಿದನೆಂದಿದೆ (ಆದಿಪರ್ವ, ಅನುಕ್ರಮಣಿಕಾ ಪರ್ವ, ಅಧ್ಯಾಯ 1, ಶ್ಲೋಕ 64).

[3] ಯೇ ಧರ್ಮಂ ಚಾನುರುಧ್ಯಂತೇ (ಭಾರತ ದರ್ಶನ/ಗೀತಾ ಪ್ರೆಸ್).

[4] ಹೀಗಿರುವುದು ಮನುಷ್ಯರಿಗೆ ಮಾತ್ರ ಸಾಧ್ಯ.

Comments are closed.