ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
Contents
Toggle೨೨೧
ಶ್ರೀ-ವಾಸವ ಸಂವಾದ
ದೈತ್ಯರನ್ನು ತ್ಯಜಿಸಿ ಲಕ್ಷ್ಮಿಯು ಇಂದ್ರನನ್ನು ಸೇರಿದುದು; ದೈತ್ಯರಲ್ಲಿ ಸದ್ಗುಣಗಳಿದ್ದಾಗ ತಾನು ಅವರೊಂದಿಗೆ ಇದ್ದೆನೆಂದೂ, ಕಾಲದ ಬದಲಾವಣೆಯಿಂದಾಗಿ ಅವರಲ್ಲಿ ಅಧರ್ಮವುಂಟಾದುದರಿಂದ ಅವರನ್ನು ತ್ಯಜಿಸಿ ದೇವತೆಗಳಲ್ಲಿಗೆ ಬಂದಿದ್ದೇನೆಂದೂ ಲಕ್ಷ್ಮಿಯು ಹೇಳಿದುದು (1-94).
12221001 ಯುಧಿಷ್ಠಿರ ಉವಾಚ|
12221001a ಪೂರ್ವರೂಪಾಣಿ ಮೇ ರಾಜನ್ಪುರುಷಸ್ಯ ಭವಿಷ್ಯತಃ|
12221001c ಪರಾಭವಿಷ್ಯತಶ್ಚೈವ ತ್ವಂ ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ರಾಜನ್! ಪಿತಾಮಹ! ಔನ್ನತ್ಯವನ್ನು ಹೊಂದಲಿರುವ ಮತ್ತು ಅಧೋಗತಿಯನ್ನು ಹೊಂದಲಿರುವ ಪುರುಷನ ಪೂರ್ವಲಕ್ಷಣಗಳು ಯಾವುವೆಂಬುದನ್ನು ನನಗೆ ಹೇಳು.”
12221002 ಭೀಷ್ಮ ಉವಾಚ|
12221002a ಮನ ಏವ ಮನುಷ್ಯಸ್ಯ ಪೂರ್ವರೂಪಾಣಿ ಶಂಸತಿ|
12221002c ಭವಿಷ್ಯತಶ್ಚ ಭದ್ರಂ ತೇ ತಥೈವ ನಭವಿಷ್ಯತಃ||
ಭೀಷ್ಮನು ಹೇಳಿದನು: “ನಿನಗೆ ಮಂಗಳವಾಗಲಿ. ಮನಸ್ಸೇ ಮನುಷ್ಯನ ಉನ್ನತಿ ಮತ್ತು ಅವನತಿಯ ಪೂರ್ವಲಕ್ಷಣಗಳನ್ನು ಪ್ರಕಾಶಿಸುತ್ತದೆ.
12221003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12221003c ಶ್ರಿಯಾ ಶಕ್ರಸ್ಯ ಸಂವಾದಂ ತನ್ನಿಬೋಧ ಯುಧಿಷ್ಠಿರ||
ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾಗಿರುವ ಶ್ರೀ ಮತ್ತು ಶಕ್ರರ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.
12221004a ಮಹತಸ್ತಪಸೋ ವ್ಯುಷ್ಟ್ಯಾ ಪಶ್ಯಽಲ್ಲೋಕೌ ಪರಾವರೌ|
12221004c ಸಾಮಾನ್ಯಮೃಷಿಭಿರ್ಗತ್ವಾ ಬ್ರಹ್ಮಲೋಕನಿವಾಸಿಭಿಃ||
12221005a ಬ್ರಹ್ಮೈವಾಮಿತದೀಪ್ತೌಜಾಃ ಶಾಂತಪಾಪ್ಮಾ ಮಹಾತಪಾಃ|
12221005c ವಿಚಚಾರ ಯಥಾಕಾಮಂ ತ್ರಿಷು ಲೋಕೇಷು ನಾರದಃ||
ಮಹಾತಪಸ್ವಿ, ಪಾಪರಹಿತ, ಬ್ರಹ್ಮನಂತೆಯೇ ಅಮಿತ ತೇಜಸ್ಸಿನಿಂದ ಬೆಳಗುತ್ತಿದ್ದ, ಬ್ರಹ್ಮಲೋಕನಿವಾಸಿಗಳೊಡನೆ ಸಮಾನತೆಯನ್ನು ಹೊಂದಿದ್ದ ನಾರದನು ತನ್ನ ಮಹಾತಪಸ್ಸಿನ ಪ್ರಭಾವದಿಂದ ಮೇಲಿನ ಮತ್ತು ಕೆಳಗಿನ ಲೋಕಗಳೆರಡನ್ನೂ ಸಂದರ್ಶಿಸುತ್ತಾ ತನ್ನ ಇಚ್ಛಾನುಸಾರವಾಗಿ ಮೂರು ಲೋಕಗಳಲ್ಲಿಯೂ ಸಂಚರಿಸುತ್ತಿದ್ದನು.
12221006a ಕದಾ ಚಿತ್ಪ್ರಾತರುತ್ಥಾಯ ಪಿಸ್ಪೃಕ್ಷುಃ ಸಲಿಲಂ ಶುಚಿ|
12221006c ಧ್ರುವದ್ವಾರಭವಾಂ ಗಂಗಾಂ ಜಗಾಮಾವತತಾರ ಚ||
ಒಮ್ಮೆ ಪ್ರಾತಃಕಾಲದಲ್ಲಿ ಎದ್ದು ಪವಿತ್ರ ತೀರ್ಥದಲ್ಲಿ ಸ್ನಾನಮಾಡುವ ಇಚ್ಛೆಯಿಂದ ಧ್ರುವನ ದ್ವಾರದಲ್ಲಿ ಹುಟ್ಟುವ ಗಂಗಾನದಿಯಲ್ಲಿ ಇಳಿದನು.
12221007a ಸಹಸ್ರನಯನಶ್ಚಾಪಿ ವಜ್ರೀ ಶಂಬರಪಾಕಹಾ|
12221007c ತಸ್ಯಾ ದೇವರ್ಷಿಜುಷ್ಟಾಯಾಸ್ತೀರಮಭ್ಯಾಜಗಾಮ ಹ||
ಆಗ ಸಹಸ್ರನಯನ ವಜ್ರೀ ಶಂಬರ-ಪಾಕರನ್ನು ಸಂಹರಿಸಿದ ಇಂದ್ರನೂ ಕೂಡ ದೇವರ್ಷಿ ನಾರದನು ಇಳಿದಿದ್ದ ಗಂಗಾತೀರಕ್ಕೆ ಆಗಮಿಸಿದನು.
12221008a ತಾವಾಪ್ಲುತ್ಯ ಯತಾತ್ಮಾನೌ ಕೃತಜಪ್ಯೌ ಸಮಾಸತುಃ|
12221008c ನದ್ಯಾಃ ಪುಲಿನಮಾಸಾದ್ಯ ಸೂಕ್ಷ್ಮಕಾಂಚನವಾಲುಕಮ್||
12221009a ಪುಣ್ಯಕರ್ಮಭಿರಾಖ್ಯಾತಾ ದೇವರ್ಷಿಕಥಿತಾಃ ಕಥಾಃ|
12221009c ಚಕ್ರತುಸ್ತೌ ಕಥಾಶೀಲೌ ಶುಚಿಸಂಹೃಷ್ಟಮಾನಸೌ|
12221009e ಪೂರ್ವವೃತ್ತವ್ಯಪೇತಾನಿ ಕಥಯಂತೌ ಸಮಾಹಿತೌ||
ನದಿಯಲ್ಲಿ ಮುಳುಗಿ ಏಕಾಗ್ರಚಿತ್ತರಾಗಿ ಜಪಾದಿಗಳನ್ನು ಮುಗಿಸಿ ಇಂದ್ರ-ನಾರದರಿಬ್ಬರೂ ಸೂಕ್ಷ್ಮ ಸುವರ್ಣಮಯ ಕಣಗಳಿಂದ ಕೂಡಿದ್ದ ನದೀತೀರದ ಮರಳಿನ ಮೇಲೆ ಕುಳಿತು ಪುಣ್ಯಾತ್ಮರು-ಮಹರ್ಷಿಗಳು-ದೇವರ್ಷಿಗಳು ಹೇಳಿದ್ದ ಕಥೆಗಳನ್ನು ಅತ್ಯಂತ ಪವಿತ್ರ ಮತ್ತು ಪ್ರಸನ್ನ ಮನಸ್ಸಿನಿಂದ ಕೇಳಲು ಇಚ್ಛಿಸಿ ಪರಸ್ಪರ ಹೇಳತೊಡಗಿದರು. ಇಬ್ಬರೂ ಸಮಾಹಿತರಾಗಿ ಹಿಂದೆ ನಡೆದಿದ್ದ ಕಥೆಗಳನ್ನು ಹೇಳುತ್ತಿದ್ದರು.
12221010a ಅಥ ಭಾಸ್ಕರಮುದ್ಯಂತಂ ರಶ್ಮಿಜಾಲಪುರಸ್ಕೃತಮ್|
12221010c ಪೂರ್ಣಮಂಡಲಮಾಲೋಕ್ಯ ತಾವುತ್ಥಾಯೋಪತಸ್ಥತುಃ||
ಅಷ್ಟರಲ್ಲಿಯೇ ಕಿರಣಜಾಲಗಳೊಂದಿಗೆ ಪೂರ್ಣಮಂಡಲಯುಕ್ತನಾಗಿ ಉದಯಿಸುತ್ತಿದ್ದ ಭಾಸ್ಕರನನ್ನು ನೋಡಿ ಅವರಿಬ್ಬರೂ ಎದ್ದು ಅವನನ್ನು ಪೂಜಿಸಿದರು.
12221011a ಅಭಿತಸ್ತೂದಯಂತಂ ತಮರ್ಕಮರ್ಕಮಿವಾಪರಮ್|
12221011c ಆಕಾಶೇ ದದೃಶೇ ಜ್ಯೋತಿರುದ್ಯತಾರ್ಚಿಃಸಮಪ್ರಭಮ್||
ಆಗ ಆಕಾಶದಲ್ಲಿ ಉದಯಿಸುತ್ತಿರುವ ಸೂರ್ಯನ ಸಮ್ಮುಖದಲ್ಲಿ ಇನ್ನೊಂದು ಸೂರ್ಯನೋ ಎನ್ನುವಂತೆ ಒಂದು ಪ್ರಜ್ವಲಿತ ಅಗ್ನಿಸಮಾನಪ್ರಭೆಯಿದ್ದ ದಿವ್ಯ ಜ್ಯೋತಿಯು ಕಾಣಿಸಿತು.
12221012a ತಯೋಃ ಸಮೀಪಂ ಸಂಪ್ರಾಪ್ತಂ ಪ್ರತ್ಯದೃಶ್ಯತ ಭಾರತ|
12221012c ತತ್ಸುಪರ್ಣಾರ್ಕಚರಿತಮಾಸ್ಥಿತಂ ವೈಷ್ಣವಂ ಪದಮ್|
12221012e ಭಾಭಿರಪ್ರತಿಮಂ ಭಾತಿ ತ್ರೈಲೋಕ್ಯಮವಭಾಸಯತ್||
ಭಾರತ! ಗರುಡ ಮತ್ತು ಸೂರ್ಯರ ಮಾರ್ಗವನ್ನೇ ಅನುಸರಿಸಿ ಬರುತ್ತಿದ್ದ, ಮೂರು ಲೋಕಗಳನ್ನೂ ಬೆಳಗುವ ಅಪ್ರತಿಮ ಕಾಂತಿಯಿಂದ ಬೆಳಗುತ್ತಿದ್ದ ಆ ವೈಷ್ಣವ ವಿಮಾನವು ಅವರಿಬ್ಬರ ಸಮೀಪ ಬರುತ್ತಿರುವಂತೆ ಕಂಡಿತು.
12221013a ದಿವ್ಯಾಭಿರೂಪಶೋಭಾಭಿರಪ್ಸರೋಭಿಃ ಪುರಸ್ಕೃತಾಮ್|
12221013c ಬೃಹತೀಮಂಶುಮತ್ಪ್ರಖ್ಯಾಂ ಬೃಹದ್ಭಾನೋರಿವಾರ್ಚಿಷಮ್||
12221014a ನಕ್ಷತ್ರಕಲ್ಪಾಭರಣಾಂ ತಾರಾಭಕ್ತಿಸಮಸ್ರಜಮ್|
12221014c ಶ್ರಿಯಂ ದದೃಶತುಃ ಪದ್ಮಾಂ ಸಾಕ್ಷಾತ್ಪದ್ಮತಲಸ್ಥಿತಾಮ್||
ಆ ವಿಮಾನದಲ್ಲಿ ಅವರು ತನ್ನಂತೆಯೇ ದಿವ್ಯ ರೂಪ-ಶೋಭೆಗಳನ್ನು ಹೊಂದಿದ್ದ ಅಪ್ಸರೆಯರಿಂದ ಸುತ್ತುವರೆಯಲ್ಪಟ್ಟ, ಅಂಶುಮಾಲಿ ಸೂರ್ಯನ ತೇಜಸ್ಸಿಗೆ ಸಮಾನ ತೇಜಸ್ಸಿನಿಂದ ಕೂಡಿ ಅಗ್ನಿಯ ಜ್ವಾಲೆಯಂತೆ ಜಾಜ್ಜ್ವಲ್ಯಮಾನಳಾಗಿದ್ದ, ನಕ್ಷತ್ರಗಳಂತೆ ಥಳಥಳಿಸುವ ಆಭರಣಗಳನ್ನೂ, ಮುತ್ತು-ರತ್ನಗಳ ಹಾರಗಳನ್ನೂ ಧರಿಸಿದ್ದ, ಕಮಲದ ಮಧ್ಯದಲ್ಲಿ ಕುಳಿತಿದ್ದ ಬೃಹದಾಕಾರದ ಸಾಕ್ಷಾತ್ ಶ್ರೀಯನ್ನು ನೋಡಿದರು.
12221015a ಸಾವರುಹ್ಯ ವಿಮಾನಾಗ್ರಾದಂಗನಾನಾಮನುತ್ತಮಾ|
12221015c ಅಭ್ಯಗಚ್ಚತ್ತ್ರಿಲೋಕೇಶಂ ಶಕ್ರಂ ಚರ್ಷಿಂ ಚ ನಾರದಮ್||
ಅಂಗನೆಯರಲ್ಲಿಯೇ ಅನುತ್ತಮಳಾಗಿದ್ದ ಅವಳು ವಿಮಾನದಿಂದ ಇಳಿದು ತ್ರಿಲೋಕೇಶ ಶಕ್ರ ಮತ್ತು ಋಷಿ ನಾರದರ ಬಳಿಸಾರಿದಳು.
12221016a ನಾರದಾನುಗತಃ ಸಾಕ್ಷಾನ್ಮಘವಾಂಸ್ತಾಮುಪಾಗಮತ್|
12221016c ಕೃತಾಂಜಲಿಪುಟೋ ದೇವೀಂ ನಿವೇದ್ಯಾತ್ಮಾನಮಾತ್ಮನಾ||
ನಾರದನು ಮುಂದೆ ಮತ್ತು ಹಿಂದೆ ಸಾಕ್ಷಾತ್ ಮಘವಾನ ಇಂದ್ರನು ಕೈಮುಗಿದು ದೇವಿಯ ಸಮೀಪ ಹೋಗಿ ಸ್ವಯಂ ಆತ್ಮಸಮರ್ಪಣೆಯನ್ನು ಮಾಡಿಕೊಂಡರು.
12221017a ಚಕ್ರೇ ಚಾನುಪಮಾಂ ಪೂಜಾಂ ತಸ್ಯಾಶ್ಚಾಪಿ ಸ ಸರ್ವವಿತ್|
12221017c ದೇವರಾಜಃ ಶ್ರಿಯಂ ರಾಜನ್ವಾಕ್ಯಂ ಚೇದಮುವಾಚ ಹ||
ರಾಜನ್! ಸರ್ವವಿದು ದೇವರಾಜನು ಶ್ರೀಗೆ ಅನುಪಮ ಪೂಜೆಯನ್ನು ಸಲ್ಲಿಸಿ ಈ ಮಾತನ್ನಾಡಿದನು.
12221018a ಕಾ ತ್ವಂ ಕೇನ ಚ ಕಾರ್ಯೇಣ ಸಂಪ್ರಾಪ್ತಾ ಚಾರುಹಾಸಿನಿ|
12221018c ಕುತಶ್ಚಾಗಮ್ಯತೇ ಸುಭ್ರು ಗಂತವ್ಯಂ ಕ್ವ ಚ ತೇ ಶುಭೇ||
“ಚಾರುಹಾಸಿನಿ! ನೀನು ಯಾರು ಮತ್ತು ಯಾವ ಕಾರ್ಯಕ್ಕಾಗಿ ಇಲ್ಲಿಗೆ ಬಂದಿರುವೆ? ಸುಭ್ರು! ಶುಭೇ! ಎಲ್ಲಿಂದ ಬರುತ್ತಿರುವೆ ಮತ್ತು ನಿನಗೆ ಎಲ್ಲಿಗೆ ಹೋಗಬೇಕಾಗಿದೆ?”
12221019 ಶ್ರೀರುವಾಚ|
12221019a ಪುಣ್ಯೇಷು ತ್ರಿಷು ಲೋಕೇಷು ಸರ್ವೇ ಸ್ಥಾವರಜಂಗಮಾಃ|
12221019c ಮಮಾತ್ಮಭಾವಮಿಚ್ಚಂತೋ ಯತಂತೇ ಪರಮಾತ್ಮನಾ||
ಶ್ರೀಯು ಹೇಳಿದಳು: “ಪುಣ್ಯ ಮೂರು ಲೋಕಗಳಲ್ಲಿಯ ಎಲ್ಲ ಸ್ಥಾವರ-ಜಂಗಮಗಳೂ ನನ್ನ ಆತ್ಮೀಯತೆಯನ್ನು ಇಚ್ಛಿಸುತ್ತವೆ ಮತ್ತು ನನ್ನನ್ನು ಪಡೆಯಲು ಪರಮ ಪ್ರಯತ್ನಗಳನ್ನು ಮಾಡುತ್ತಾರೆ.
12221020a ಸಾಹಂ ವೈ ಪಂಕಜೇ ಜಾತಾ ಸೂರ್ಯರಶ್ಮಿವಿಬೋಧಿತೇ|
12221020c ಭೂತ್ಯರ್ಥಂ ಸರ್ವಭೂತಾನಾಂ ಪದ್ಮಾ ಶ್ರೀಃ ಪದ್ಮಮಾಲಿನೀ||
ಸರ್ವಪ್ರಾಣಿಗಳ ಐಶ್ವರ್ಯಕ್ಕಾಗಿಯೇ ನಾನು ಸೂರ್ಯನ ಕಿರಣಗಳಿಂದ ಅರಳುವ ಕಮಲದಲ್ಲಿ ಹುಟ್ಟಿದವಳು. ನಾನೇ ಪದ್ಮೆಯು. ಶ್ರೀಯು. ಪದ್ಮಮಾಲಿನಿಯು.
12221021a ಅಹಂ ಲಕ್ಷ್ಮೀರಹಂ ಭೂತಿಃ ಶ್ರೀಶ್ಚಾಹಂ ಬಲಸೂದನ|
12221021c ಅಹಂ ಶ್ರದ್ಧಾ ಚ ಮೇಧಾ ಚ ಸನ್ನತಿರ್ವಿಜಿತಿಃ ಸ್ಥಿತಿಃ||
ಬಲಸೂದನ! ನಾನು ಲಕ್ಷ್ಮೀ. ನಾನು ಭೂತಿ. ನಾನು ಶ್ರೀ. ನಾನು ಶ್ರದ್ಧಾ, ಮೇಧಾ, ಸನ್ನತಿ, ವಿಜಿತಿ ಮತ್ತು ಸ್ಥಿತಿ.
12221022a ಅಹಂ ಧೃತಿರಹಂ ಸಿದ್ಧಿರಹಂ ತ್ವಿಡ್ಭೂತಿರೇವ ಚ|
12221022c ಅಹಂ ಸ್ವಾಹಾ ಸ್ವಧಾ ಚೈವ ಸಂಸ್ತುತಿರ್ನಿಯತಿಃ ಕೃತಿಃ||
ನಾನು ಧೃತಿ. ನಾನು ಸಿದ್ಧಿ. ನಾನು ಕಾಂತಿ, ಸಮೃದ್ಧಿ, ಸ್ವಾಹಾ, ಸ್ವಧಾ, ಸಂಸ್ತುತಿ, ನಿಯತಿ ಮತ್ತು ಕೃತಿ.
12221023a ರಾಜ್ಞಾಂ ವಿಜಯಮಾನಾನಾಂ ಸೇನಾಗ್ರೇಷು ಧ್ವಜೇಷು ಚ|
12221023c ನಿವಾಸೇ ಧರ್ಮಶೀಲಾನಾಂ ವಿಷಯೇಷು ಪುರೇಷು ಚ||
ವಿಜಯೇಚ್ಛು ರಾಜರ ಸೇನೆಗಳ ಅಗ್ರಭಾಗದಲ್ಲಿಯೂ, ಧ್ವಜಗಳಲ್ಲಿಯೂ, ಮತ್ತು ಧರ್ಮಶೀಲರ ರಾಜ್ಯ-ಪುರಗಳಲ್ಲಿ ವಾಸಿಸುವವಳು ನಾನು.
12221024a ಜಿತಕಾಶಿನಿ ಶೂರೇ ಚ ಸಂಗ್ರಾಮೇಷ್ವನಿವರ್ತಿನಿ|
12221024c ನಿವಸಾಮಿ ಮನುಷ್ಯೇಂದ್ರೇ ಸದೈವ ಬಲಸೂದನ||
ಬಲಸೂದನ! ಸಂಗ್ರಾಮದಿಂದ ವಿಮುಖನಾಗಿ ಹಿಂದಿರುಗದ, ವಿಜಯದಿಂದ ಬೆಳಗುವ, ಶೂರ ಮನುಷ್ಯೇಂದ್ರರಲ್ಲಿ ನಾನು ಸದೈವ ವಾಸಿಸುತ್ತೇನೆ.
12221025a ಧರ್ಮನಿತ್ಯೇ ಮಹಾಬುದ್ಧೌ ಬ್ರಹ್ಮಣ್ಯೇ ಸತ್ಯವಾದಿನಿ|
12221025c ಪ್ರಶ್ರಿತೇ ದಾನಶೀಲೇ ಚ ಸದೈವ ನಿವಸಾಮ್ಯಹಮ್||
ಧರ್ಮನಿತ್ಯ ಬ್ರಹ್ಮಣ್ಯ ಸತ್ಯವಾದಿನೀ ಮಹಾಬುದ್ಧಿಯಿರುವವರಲ್ಲಿ, ವಿನಯಶೀಲ ಮತ್ತು ದಾನಶೀಲರಲ್ಲಿ ನಾನು ಸದೈವ ವಾಸಿಸುತ್ತೇನೆ.
12221026a ಅಸುರೇಷ್ವವಸಂ ಪೂರ್ವಂ ಸತ್ಯಧರ್ಮನಿಬಂಧನಾ|
12221026c ವಿಪರೀತಾಂಸ್ತು ತಾನ್ಬುದ್ಧ್ವಾ ತ್ವಯಿ ವಾಸಮರೋಚಯಮ್||
ಸತ್ಯಧರ್ಮಗಳಿಂದ ಬಂಧಿತಳಾಗಿದ್ದ ನಾನು ಇದೂವರೆಗೆ ಅಸುರರ ಬಳಿ ವಾಸಿಸುತ್ತಿದ್ದೆ. ಈಗ ಅವರು ವಿಪರೀತರಾಗಿರುವುದನ್ನು ತಿಳಿದು ನಿನ್ನ ಬಳಿ ವಾಸಿಸಲು ಅಪೇಕ್ಷಿಸಿದ್ದೇನೆ.”
12221027 ಶಕ್ರ ಉವಾಚ|
12221027a ಕಥಂವೃತ್ತೇಷು ದೈತ್ಯೇಷು ತ್ವಮವಾತ್ಸೀರ್ವರಾನನೇ|
12221027c ದೃಷ್ಟ್ವಾ ಚ ಕಿಮಿಹಾಗಾಸ್ತ್ವಂ ಹಿತ್ವಾ ದೈತೇಯದಾನವಾನ್||
ಶಕ್ರನು ಹೇಳಿದನು: “ವರಾನನೇ! ಯಾವರೀತಿ ಆಚಾರ-ವ್ಯವಹಾರಗಳನ್ನಿಟ್ಟುಕೊಂಡಿದ್ದ ದೈತ್ಯರಲ್ಲಿ ನೀನು ವಾಸಮಾಡಿಕೊಂಡಿದ್ದೆ? ದೈತ್ಯ-ದಾನವರಲ್ಲಿ ಈಗ ಏನನ್ನು ಕಂಡು ಅವರನ್ನು ತ್ಯಜಿಸಿ ಇಲ್ಲಿಗೆ ಬಂದಿರುವೆ?”
12221028 ಶ್ರೀರುವಾಚ|
12221028a ಸ್ವಧರ್ಮಮನುತಿಷ್ಠತ್ಸು ಧೈರ್ಯಾದಚಲಿತೇಷು ಚ|
12221028c ಸ್ವರ್ಗಮಾರ್ಗಾಭಿರಾಮೇಷು ಸತ್ತ್ವೇಷು ನಿರತಾ ಹ್ಯಹಮ್||
ಶ್ರೀಯು ಹೇಳಿದಳು: “ಸ್ವಧರ್ಮನಿರತರಾಗಿರುವ, ಧೈರ್ಯದಿಂದ ವಿಚಲಿತರಾಗದ, ಸ್ವರ್ಗಪ್ರಾಪ್ತಿಯ ಸಾಧನೆಗಳಲ್ಲಿ ಆನಂದಪಡುವ ಸತ್ತ್ವಗಳಲ್ಲಿ ನಾನು ಸದಾ ವಾಸಿಸುತ್ತೇನೆ.
12221029a ದಾನಾಧ್ಯಯನಯಜ್ಞೇಜ್ಯಾ ಗುರುದೈವತಪೂಜನಮ್|
12221029c ವಿಪ್ರಾಣಾಮತಿಥೀನಾಂ ಚ ತೇಷಾಂ ನಿತ್ಯಮವರ್ತತ||
ದಾನವರಲ್ಲಿ ನಿತ್ಯವೂ ದಾನ-ಅಧ್ಯಯನ-ಯಜ್ಞ-ಯಾಗಾದಿಗಳೂ, ಗುರು-ದೈವತ ಪೂಜೆಗಳೂ, ವಿಪ್ರರು-ಅತಿಥಿಯರ ಪೂಜೆಗಳೂ ನಡೆಯುತ್ತಿದ್ದವು.
12221030a ಸುಸಂಮೃಷ್ಟಗೃಹಾಶ್ಚಾಸನ್ ಜಿತಸ್ತ್ರೀಕಾ ಹುತಾಗ್ನಯಃ|
12221030c ಗುರುಶುಶ್ರೂಷವೋ ದಾಂತಾ ಬ್ರಹ್ಮಣ್ಯಾಃ ಸತ್ಯವಾದಿನಃ||
ಚೆನ್ನಾಗಿ ಗುಡಿಸಿ-ಸಾರಿಸಿ ಶುದ್ಧವಾದ ಮನೆಗಳಲ್ಲಿ ಅವರು ಇರುತ್ತಿದ್ದರು. ತಮ್ಮ ಪತ್ನಿಯರ ಅಂತಃಕರಣಗಳನ್ನು ಪ್ರೀತಿಯಿಂದ ಜಯಿಸಿದ್ದರು. ಅಗ್ನಿಹೋತ್ರಿಗಳಾಗಿದ್ದರು. ಗುರುಶುಶ್ರೂಷೆಯಲ್ಲಿ ಆಸಕ್ತಿಯುಳ್ಳವರೂ, ಜಿತೇಂದ್ರಿಯರೂ, ಬ್ರಾಹ್ಮಣಪ್ರಿಯರೂ ಮತ್ತು ಸತ್ಯವಾದಿಗಳೂ ಆಗಿದ್ದರು.
12221031a ಶ್ರದ್ದಧಾನಾ ಜಿತಕ್ರೋಧಾ ದಾನಶೀಲಾನಸೂಯಕಾಃ|
12221031c ಭೃತಪುತ್ರಾ ಭೃತಾಮಾತ್ಯಾ ಭೃತದಾರಾ ಹ್ಯನೀರ್ಷವಃ||
ಅವರು ಶ್ರದ್ದಧಾನರೂ, ಜಿತಕ್ರೋಧರೂ, ದಾನಶೀಲರೂ, ಅನಸೂಯಕರೂ ಆಗಿದ್ದರು. ಪುತ್ರರು, ಅಮಾತ್ಯರು ಮತ್ತು ಪತ್ನಿಯರ ಭರಣ-ಪೋಷಣೆಗಳನ್ನು ಯಥೋಚಿತವಾಗಿ ಮಾಡುತ್ತಿದ್ದರು.
12221032a ಅಮರ್ಷಣಾ ನ ಚಾನ್ಯೋನ್ಯಂ ಸ್ಪೃಹಯಂತಿ ಕದಾ ಚನ|
12221032c ನ ಚ ಜಾತೂಪತಪ್ಯಂತೇ ಧೀರಾಃ ಪರಸಮೃದ್ಧಿಭಿಃ||
ಕ್ರೋಧದಿಂದ ಅನ್ಯೋನ್ಯರ ಸಂಪತ್ತಿಗೆ ಎಂದೂ ಆಸೆಪಡುತ್ತಿರಲಿಲ್ಲ. ಆ ಧೀರರು ಇತರರ ಸಮೃದ್ಧಿಯಿಂದ ಎಂದೂ ಪರಿತಾಪಪಡುತ್ತಿರಲಿಲ್ಲ.
12221033a ದಾತಾರಃ ಸಂಗೃಹೀತಾರ ಆರ್ಯಾಃ ಕರುಣವೇದಿನಃ|
12221033c ಮಹಾಪ್ರಸಾದಾ ಋಜವೋ ದೃಢಭಕ್ತಾ ಜಿತೇಂದ್ರಿಯಾಃ||
ದಾನ ಮಾಡುತ್ತಿದ್ದರು. ಸನ್ಮಾರ್ಗದಿಂದ ಧನವನ್ನು ಸಂಗ್ರಹಿಸುತ್ತಿದ್ದರು. ಆರ್ಯರಂತಿದ್ದರು. ಕಾರುಣ್ಯವನ್ನು ತೋರಿಸಲು ತಿಳಿದಿದ್ದರು. ಅನುಗ್ರಹಬುದ್ಧಿಯುಳ್ಳವರಾಗಿದ್ದರು. ಸರಳಸ್ವಭಾವದವರೂ, ದೃಢಭಕ್ತರೂ, ಜಿತೇಂದ್ರಿಯರೂ ಆಗಿದ್ದರು.
12221034a ಸಂತುಷ್ಟಭೃತ್ಯಸಚಿವಾಃ ಕೃತಜ್ಞಾಃ ಪ್ರಿಯವಾದಿನಃ|
12221034c ಯಥಾರ್ಥಮಾನಾರ್ಥಕರಾ ಹ್ರೀನಿಷೇಧಾ[1] ಯತವ್ರತಾಃ||
ಸೇವಕರೂ-ಸಚಿವರೂ ಸಂತುಷ್ಟರಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಕೃತಜ್ಞರೂ ಪ್ರಿಯವಾದಿಗಳೂ ಆಗಿದ್ದರು. ಯಥಾರ್ಥರನ್ನು ಯಥಾರ್ಥವಾಗಿ ಸಮ್ಮಾನಿಸುತ್ತಿದ್ದರು. ಲಜ್ಜಾಶೀಲರಾಗಿದ್ದರು. ಯಥಾವ್ರತರಾಗಿದ್ದರು.
12221035a ನಿತ್ಯಂ ಪರ್ವಸು ಸುಸ್ನಾತಾಃ ಸ್ವನುಲಿಪ್ತಾಃ ಸ್ವಲಂಕೃತಾಃ|
12221035c ಉಪವಾಸತಪಃಶೀಲಾಃ ಪ್ರತೀತಾ ಬ್ರಹ್ಮವಾದಿನಃ||
ಪರ್ವಗಳಲ್ಲಿ ನಿತ್ಯವೂ ಸುಸ್ನಾತರಾಗಿ, ಅಂಗಾಗಗಳಿಗೆ ಲೇಪಿಸಿಕೊಳ್ಳುತ್ತಿದ್ದರು ಮತ್ತು ಸ್ವಲಂಕೃತರಾಗುತ್ತಿದ್ದರು. ಉಪವಾಸ-ತಪಃಶೀಲರಾಗಿದ್ದ ಅವರು ಬ್ರಹ್ಮವಾದಿಗಳೂ ವಿಶ್ವಸ್ತರೂ ಆಗಿದ್ದರು.
12221036a ನೈನಾನಭ್ಯುದಿಯಾತ್ಸೂರ್ಯೋ ನ ಚಾಪ್ಯಾಸನ್ ಪ್ರಗೇನಿಶಾಃ|
12221036c ರಾತ್ರೌ ದಧಿ ಚ ಸಕ್ತೂಂಶ್ಚ ನಿತ್ಯಮೇವ ವ್ಯವರ್ಜಯನ್||
ದೈತ್ಯರು ಏಳುವ ಮೊದಲು ಸೂರ್ಯನು ಉದಯಿಸುತ್ತಲೇ ಇರಲಿಲ್ಲ. ರಾತ್ರಿಯಲ್ಲಿ ನಿತ್ಯವೂ ಅವರು ಮೊಸರು ಮತ್ತು ಹುರಿದ ಹಿಟ್ಟನ್ನು ತಿನ್ನುತ್ತಿರಲಿಲ್ಲ.
12221037a ಕಾಲ್ಯಂ ಘೃತಂ ಚಾನ್ವವೇಕ್ಷನ್ ಪ್ರಯತಾ ಬ್ರಹ್ಮಚಾರಿಣಃ|
12221037c ಮಂಗಲಾನಪಿ ಚಾಪಶ್ಯನ್ ಬ್ರಾಹ್ಮಣಾಂಶ್ಚಾಪ್ಯಪೂಜಯನ್||
ಮನಸ್ಸು-ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿದ್ದ ಆ ಬ್ರಹ್ಮಚಾರಿಗಳು ಬೆಳಿಗ್ಗೆ ಎದ್ದು ತುಪ್ಪದಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುತ್ತಿದ್ದರು ಮತ್ತು ಇತರ ಮಂಗಳಕರ ವಸ್ತುಗಳನ್ನು ನೋಡುತ್ತಿದ್ದರು. ಬ್ರಾಹ್ಮಣರನ್ನು ಪೂಜಿಸುತ್ತಿದ್ದರು ಕೂಡ.
12221038a ಸದಾ ಹಿ ದದತಾಂ[2] ಧರ್ಮಃ ಸದಾ ಚಾಪ್ರತಿಗೃಹ್ಣತಾಮ್|
12221038c ಅರ್ಧಂ ಚ ರಾತ್ರ್ಯಾಃ ಸ್ವಪತಾಂ ದಿವಾ ಚಾಸ್ವಪತಾಂ ತಥಾ||
ಸದಾ ದಾನಮಾಡುವುದೇ ಅವರ ಧರ್ಮವಾಗಿತ್ತು. ಎಂದೂ ಅವರು ದಾನವನ್ನು ಸ್ವೀಕರಿಸುತ್ತಿರಲಿಲ್ಲ. ರಾತ್ರಿಯ ಅರ್ಧಭಾಗವು ಕಳೆದ ನಂತರವೇ ಮಲಗುತ್ತಿದ್ದರು. ಹಗಲಿನಲ್ಲಿ ನಿದ್ರಿಸುತ್ತಿರಲಿಲ್ಲ.
12221039a ಕೃಪಣಾನಾಥವೃದ್ಧಾನಾಂ ದುರ್ಬಲಾತುರಯೋಷಿತಾಮ್|
12221039c ದಾಯಂ ಚ ಸಂವಿಭಾಗಂ ಚ ನಿತ್ಯಮೇವಾನುಮೋದತಾಮ್||
ಕೃಪಣರು, ಅನಾಥರು, ವೃದ್ಧರು, ದುರ್ಬಲರು ಮತ್ತು ಸ್ತ್ರೀಯರ ವಿಷಯದಲ್ಲಿ ದಯೆಯನ್ನು ತೋರಿಸುತ್ತಿದ್ದರು. ಅವರಿಗೆ ಬೇಕಾದುದನ್ನು ವಿಭಜಿಸಿ ಕೊಡುತ್ತಿದ್ದರು. ನಿತ್ಯವೂ ಈ ಸತ್ಕಾರ್ಯಗಳನ್ನು ಅನುಮೋದಿಸುತ್ತಿದ್ದರು.
12221040a ವಿಷಣ್ಣಂ ತ್ರಸ್ತಮುದ್ವಿಗ್ನಂ ಭಯಾರ್ತಂ ವ್ಯಾಧಿಪೀಡಿತಮ್|
12221040c ಹೃತಸ್ವಂ ವ್ಯಸನಾರ್ತಂ ಚ ನಿತ್ಯಮಾಶ್ವಾಸಯಂತಿ ತೇ||
ನಿತ್ಯವೂ ಅವರು ವಿಷಾದಗೊಂಡವರಿಗೆ, ಭಯಗೊಂಡವರಿಗೆ, ಉದ್ವಿಗ್ನರಾದವರಿಗೆ, ಭಯಾರ್ತರಿಗೆ, ವ್ಯಾಧಿಪೀಡಿತರಿಗೆ, ತಮ್ಮದನ್ನು ಕಳೆದುಕೊಂಡವರಿಗೆ ಮತ್ತು ವ್ಯಸನಿಗಳಿಗೆ ಆಶ್ವಾಸನೆಯನ್ನು ನೀಡುತ್ತಿದ್ದರು.
12221041a ಧರ್ಮಮೇವಾನ್ವವರ್ತಂತ ನ ಹಿಂಸಂತಿ ಪರಸ್ಪರಮ್|
12221041c ಅನುಕೂಲಾಶ್ಚ ಕಾರ್ಯೇಷು ಗುರುವೃದ್ಧೋಪಸೇವಿನಃ||
ಧರ್ಮವನ್ನೇ ಅನುಸರಿಸಿ ನಡೆಯುತ್ತಿದ್ದರು. ಪರಸ್ಪರರನ್ನು ಹಿಂಸಿಸುತ್ತಿರಲಿಲ್ಲ. ಎಲ್ಲ ಕಾರ್ಯಗಳಲ್ಲಿಯೂ ಪರಸ್ಪರರ ಅನುಕೂಲರಾಗಿದ್ದರು. ಗುರು-ವೃದ್ಧರ ಸೇವೆಗೈಯುತ್ತಿದ್ದರು.
12221042a ಪಿತೃದೇವಾತಿಥೀಂಶ್ಚೈವ ಯಥಾವತ್ತೇಽಭ್ಯಪೂಜಯನ್|
12221042c ಅವಶೇಷಾಣಿ ಚಾಶ್ನಂತಿ ನಿತ್ಯಂ ಸತ್ಯತಪೋರತಾಃ||
ನಿತ್ಯವೂ ಸತ್ಯತಪೋರತರಾಗಿದ್ದ ಅವರು ಪಿತೃಗಳು, ದೇವತೆಗಳು ಮತ್ತು ಅಥಿತಿಗಳನ್ನು ಯಥಾವತ್ತಾಗಿ ಪೂಜಿಸಿ, ಉಳಿದ ಅನ್ನವನ್ನೇ ಊಟಮಾಡುತ್ತಿದ್ದರು.
12221043a ನೈಕೇಽಶ್ನಂತಿ ಸುಸಂಪನ್ನಂ ನ ಗಚ್ಚಂತಿ ಪರಸ್ತ್ರಿಯಮ್|
12221043c ಸರ್ವಭೂತೇಷ್ವವರ್ತಂತ ಯಥಾತ್ಮನಿ ದಯಾಂ ಪ್ರತಿ||
ಮೃಷ್ಟಾನ್ನವನ್ನು ಒಬ್ಬರೇ ತಿನ್ನುತ್ತಿರಲಿಲ್ಲ. ಪರಸ್ತ್ರೀಯರನ್ನು ಕೂಡುತ್ತಿರಲಿಲ್ಲ. ಇತರರನ್ನು ತಮ್ಮಂತೆಯೇ ಕಂಡುಕೊಂಡು ಸರ್ವಭೂತಗಳೊಂದಿಗೆ ದಯಾಪರರಾಗಿರುತ್ತಿದ್ದರು.
12221044a ನೈವಾಕಾಶೇ ನ ಪಶುಷು ನಾಯೋನೌ ನ ಚ ಪರ್ವಸು|
12221044c ಇಂದ್ರಿಯಸ್ಯ ವಿಸರ್ಗಂ ತೇಽರೋಚಯಂತ ಕದಾ ಚನ||
ಅವರು ಎಂದೂ ಆಕಾಶದಲ್ಲಾಗಲೀ, ಪಶುಯೋನಿಗಳಲ್ಲಾಗಲೀ, ಪರ್ವಗಳಲ್ಲಾಗಲೀ ವೀರ್ಯೋತ್ಸರ್ಜನೆಮಾಡಲು ಇಷ್ಟಪಡುತ್ತಿರಲಿಲ್ಲ.
12221045a ನಿತ್ಯಂ ದಾನಂ ತಥಾ ದಾಕ್ಷ್ಯಮಾರ್ಜವಂ ಚೈವ ನಿತ್ಯದಾ|
12221045c ಉತ್ಸಾಹಶ್ಚಾನಹಂಕಾರಃ ಪರಮಂ ಸೌಹೃದಂ ಕ್ಷಮಾ||
12221046a ಸತ್ಯಂ ದಾನಂ ತಪಃ ಶೌಚಂ ಕಾರುಣ್ಯಂ ವಾಗನಿಷ್ಠುರಾ|
12221046c ಮಿತ್ರೇಷು ಚಾನಭಿದ್ರೋಹಃ ಸರ್ವಂ ತೇಷ್ವಭವತ್ ಪ್ರಭೋ||
ಪ್ರಭೋ! ನಿತ್ಯವೂ ಅವರು ದಾನ, ದಕ್ಷತೆ, ಸರಳತೆ, ಉತ್ಸಾಹ, ಅನಹಂಕಾರ, ಪರಮ ಸೌಹಾರ್ದತೆ, ಕ್ಷಮೆ, ಸತ್ಯ, ದಾನ, ತಪಸ್ಸು, ಶೌಚ, ಕಾರುಣ್ಯ, ಮಾತಿನಲ್ಲಿ ಅನಿಷ್ಠುರತೆ, ಮಿತ್ರರಿಗೆ ದ್ರೋಹವನ್ನೆಸಗದೇ ಇರುವುದು – ಇವೆಲ್ಲ ಗುಣಗಳನ್ನೂ ಹೊಂದಿದ್ದರು.
12221047a ನಿದ್ರಾ ತಂದ್ರೀರಸಂಪ್ರೀತಿರಸೂಯಾ ಚಾನವೇಕ್ಷಿತಾ|
12221047c ಅರತಿಶ್ಚ ವಿಷಾದಶ್ಚ ನ ಸ್ಪೃಹಾ ಚಾವಿಶಂತ ತಾನ್||
ನಿದ್ರೆ, ಆಲಸ್ಯ, ಅಪ್ರಸನ್ನತೆ, ದೋಷದೃಷ್ಟಿ, ಅವಿವೇಕ, ಅಪ್ರೀತಿ, ವಿಷಾದ ಮತ್ತು ಕಾಮನೆ – ಇವುಗಳು ಅವರನ್ನು ಪ್ರವೇಶಿಸುತ್ತಲೂ ಇರಲಿಲ್ಲ.
12221048a ಸಾಹಮೇವಂಗುಣೇಷ್ವೇವ ದಾನವೇಷ್ವವಸಂ ಪುರಾ|
12221048c ಪ್ರಜಾಸರ್ಗಮುಪಾದಾಯ ನೈಕಂ ಯುಗವಿಪರ್ಯಯಮ್||
ಹೀಗೆ ಸೃಷ್ಟಿಯಾದಾಗಿನಿಂದ ಅನೇಕ ಯುಗ ಪರ್ಯಂತ ಉತ್ತಮ ಗುಣಗಳನ್ನು ಹೊಂದಿದ್ದ ದಾನವರಲ್ಲಿ ನಾನು ವಾಸಿಸಿಕೊಂಡಿದ್ದೆನು.
12221049a ತತಃ ಕಾಲವಿಪರ್ಯಾಸೇ ತೇಷಾಂ ಗುಣವಿಪರ್ಯಯಾತ್|
12221049c ಅಪಶ್ಯಂ ವಿಗತಂ ಧರ್ಮಂ ಕಾಮಕ್ರೋಧವಶಾತ್ಮನಾಮ್||
ಕಾಲವು ಉರುಳುತ್ತಿದ್ದಂತೆ ಅವರ ಗುಣಗಳಲ್ಲಿಯೂ ಬದಲಾವಣೆಗಳುಂಟಾದವು. ಒಳ್ಳೆಯ ಗುಣಗಳು ಕೆಟ್ಟ ಗುಣಗಳಾಗಿ ಪರಿವರ್ತಿತವಾದವು. ಕಾಮಕ್ರೋಧಗಳಿಗೆ ವಶರಾದ ಅವರಲ್ಲಿ ಧರ್ಮವು ಹೊರಟುಹೋದುದನ್ನು ನೋಡಿದೆನು.
12221050a ಸಭಾಸದಾಂ ತೇ ವೃದ್ಧಾನಾಂ ಸತ್ಯಾಃ ಕಥಯತಾಂ ಕಥಾಃ|
12221050c ಪ್ರಾಹಸನ್ನಭ್ಯಸೂಯಂಶ್ಚ ಸರ್ವವೃದ್ಧಾನ್ಗುಣಾವರಾಃ||
ಸಭಾಸದರಲ್ಲಿದ್ದ ವೃದ್ಧರು ಸತ್ಯ ಕಥೆಗಳನ್ನು ಹೇಳುತ್ತಿರುವಾಗ ಕೀಳು ಗುಣಗಳ ದಾನವರೆಲ್ಲರೂ ವೃದ್ಧರ ಮಾತುಗಳನ್ನು ಕೇಳಿ ಹಗಹಿಸಿ ನಗುತ್ತಾರೆ. ಅವರ ಮಾತುಗಳಲ್ಲಿ ದೋಷಗಳನ್ನೇ ಕಾಣುತ್ತಿದ್ದಾರೆ.
12221051a ಯೂನಃ ಸಹಸಮಾಸೀನಾನ್[3] ವೃದ್ಧಾನಭಿಗತಾನ್ಸತಃ|
12221051c ನಾಭ್ಯುತ್ಥಾನಾಭಿವಾದಾಭ್ಯಾಂ ಯಥಾಪೂರ್ವಮಪೂಜಯನ್||
ಆಸನಗಳಲ್ಲಿ ಕುಳಿತಿರುವ ಯುವ ಪುರುಷರು ಮೊದಲಿನಂತೆ ಆಗಮಿಸಿದ ಸಾಧು ಮತ್ತು ವೃದ್ಧಜನರನ್ನು ನೋಡಿ ಮೇಲೆದ್ದು ನಮಸ್ಕರಿಸಿ ಅವರ ಸನ್ಮಾನ-ಆದರಗಳನ್ನು ಮಾಡುವುದಿಲ್ಲ.
12221052a ವರ್ತಯಂತ್ಯೇವ ಪಿತರಿ ಪುತ್ರಾಃ ಪ್ರಭವತಾಽಽತ್ಮನಃ|
12221052c ಅಮಿತ್ರಭೃತ್ಯತಾಂ ಪ್ರಾಪ್ಯ ಖ್ಯಾಪಯಂತೋಽನಪತ್ರಪಾಃ||
ತಂದೆಯು ಇರುವಾಗಲೇ ಪುತ್ರರು ಪ್ರಭುತ್ವವನ್ನು ತೋರಿಸಲು ತೊಡಗಿದ್ದಾರೆ. ಶತ್ರುವಿಗೆ ಅಡಿಯಾಳಾಗಿರುವುದು ಮಾತ್ರವಲ್ಲದೇ ತಾವು ಅಡಿಯಾಳಾಗಿರುವುದನ್ನು ನಾಚಿಕೆಯೇ ಇಲ್ಲದೇ ಇತರರೊಡನೆಯೂ ಹೇಳಿಕೊಳ್ಳುತ್ತಾರೆ.
12221053a ತಥಾ ಧರ್ಮಾದಪೇತೇನ ಕರ್ಮಣಾ ಗರ್ಹಿತೇನ ಯೇ|
12221053c ಮಹತಃ ಪ್ರಾಪ್ನುವಂತ್ಯರ್ಥಾಂಸ್ತೇಷ್ವೇಷಾಮಭವತ್ ಸ್ಪೃಹಾ||
ಧರ್ಮಪಥಕ್ಕೆ ವಿರುದ್ಧವಾದ ನಿಂದಿತ ಕರ್ಮಗಳ ಮೂಲಕ ಮಹಾ ಧನಸಂಪತ್ತನ್ನು ಗಳಿಸುತ್ತಿದ್ದಾರೆ. ಅವರಲ್ಲಿ ಇಂತಹ ಧನೋಪಾರ್ಜನೆಯಲ್ಲಿಯೇ ಅಭಿಲಾಷೆಯುಂಟಾಗಿಬಿಟ್ಟಿದೆ.
12221054a ಉಚ್ಚೈಶ್ಚಾಪ್ಯವದನ್ರಾತ್ರೌ ನೀಚೈಸ್ತತ್ರಾಗ್ನಿರಜ್ವಲತ್|
12221054c ಪುತ್ರಾಃ ಪಿತೃನಭ್ಯವದನ್ಭಾರ್ಯಾಶ್ಚಾಭ್ಯವದನ್ ಪತೀನ್||
ರಾತ್ರಿ ಗಟ್ಟಿಯಾಗಿ ಕಿರುಚಾಡಿಕೊಳ್ಳುತ್ತಾರೆ. ಅವರ ಮನೆಗಳಲ್ಲಿ ಅಗ್ನಿಹೋತ್ರವು ಸಣ್ಣದಾಗಿ ಉರಿಯುತ್ತಿದೆ. ಮಕ್ಕಳು ತಂದೆಯನ್ನೂ, ಸ್ತ್ರೀಯರು ಪತಿಯನ್ನೂ ಅತಿಕ್ರಮಿಸಿ ಹೋಗುತ್ತಿದ್ದಾರೆ.
12221055a ಮಾತರಂ ಪಿತರಂ ವೃದ್ಧಮಾಚಾರ್ಯಮತಿಥಿಂ ಗುರುಮ್|
12221055c ಗುರುವನ್ನಾಭ್ಯನಂದಂತ ಕುಮಾರಾನ್ನಾನ್ವಪಾಲಯನ್||
ತಂದೆ-ತಾಯಿಯರನ್ನು, ವೃದ್ಧ ಆಚಾರ್ಯ, ಅತಿಥಿ, ಗುರುಗಳನ್ನು ಹಿರಿಯರೆಂದೂ ಅಭಿನಂದಿಸುವುದಿಲ್ಲ. ಕುಮಾರರನ್ನು ಪಾಲಿಸುತ್ತಿಲ್ಲ.
12221056a ಭಿಕ್ಷಾಂ ಬಲಿಮದತ್ತ್ವಾ ಚ ಸ್ವಯಮನ್ನಾನಿ ಭುಂಜತೇ|
12221056c ಅನಿಷ್ಟ್ವಾ ಸಂವಿಭಜ್ಯಾಥ ಪಿತೃದೇವಾತಿಥೀನ್ಗುರೂನ್||
ಭಿಕ್ಷೆ-ಬಲಿಗಳನ್ನು ವಿಭಜಿಸಿ ಪಿತೃ-ದೇವತೆ-ಅತಿಥಿ-ಗುರುಗಳಿಗೆ ನೀಡದೆಯೇ ಸ್ವಯಂ ತಾವೇ ಅನ್ನವನ್ನು ಉಣ್ಣುತ್ತಾರೆ.
12221057a ನ ಶೌಚಮನುರುಧ್ಯಂತ ತೇಷಾಂ ಸೂದಜನಾಸ್ತಥಾ|
12221057c ಮನಸಾ ಕರ್ಮಣಾ ವಾಚಾ ಭಕ್ತಮಾಸೀದನಾವೃತಮ್||
ಅವರು ಮತ್ತು ಅವರ ಅಡುಗೆಮಾಡುವವರು ಮನ, ಕರ್ಮ ಮತ್ತು ವಾಣಿಯಲ್ಲಿ ಪವಿತ್ರತೆಯನ್ನು ಪಾಲಿಸಿಕೊಂಡಿಲ್ಲ. ಅವರು ಭೋಜನವನ್ನು ಮುಚ್ಚದೆಯೇ ಇಡುತ್ತಿದ್ದಾರೆ.
12221058a ವಿಪ್ರಕೀರ್ಣಾನಿ ಧಾನ್ಯಾನಿ ಕಾಕಮೂಷಕಭೋಜನಮ್|
12221058c ಅಪಾವೃತಂ ಪಯೋಽತಿಷ್ಠದುಚ್ಚಿಷ್ಟಾಶ್ಚಾಸ್ಪೃಶನ್ ಘೃತಮ್||
ಅವರ ಮನೆಗಳಲ್ಲಿ ಧಾನ್ಯಗಳು ಹರಡಿಕೊಂಡಿರುತ್ತವೆ ಮತ್ತು ಕಾಗೆ-ಇಲಿಗಳು ಅವುಗಳನ್ನು ತಿನ್ನುತ್ತಿರುತ್ತವೆ. ಹಾಲಿನ ಪಾತ್ರೆಯನ್ನು ಮುಚ್ಚಿಡುವುದಿಲ್ಲ. ಎಂಜಲು ಕೈಯಿಂದಲೇ ತುಪ್ಪದ ಪಾತ್ರೆಯನ್ನು ಮುಟ್ಟುತ್ತಾರೆ.
12221059a ಕುದ್ದಾಲಪಾಟೀಪಿಟಕಂ ಪ್ರಕೀರ್ಣಂ ಕಾಂಸ್ಯಭಾಜನಮ್|
12221059c ದ್ರವ್ಯೋಪಕರಣಂ ಸರ್ವಂ ನಾನ್ವವೈಕ್ಷತ್ ಕುಟುಂಬಿನೀ||
ಅವರ ಮನೆಗಳಲ್ಲಿ ಗುದ್ದಲಿ, ಕುಡುಗೋಲು, ಬುಟ್ಟಿ, ಕಂಚಿನ ಪಾತ್ರೆ, ಹೋಮದ್ರವ್ಯಗಳು ಮತ್ತು ಇತರ ಉಪಕರಣಗಳು ಅಸ್ತವ್ಯಸ್ತವಾಗಿ ಬಿದ್ದಿದ್ದರೂ ಮನೆಯ ಯಜಮಾನಿಯು ಅವುಗಳ ಕಡೆ ಗಮನ ಕೊಡುತ್ತಿಲ್ಲ.
12221060a ಪ್ರಾಕಾರಾಗಾರವಿಧ್ವಂಸಾನ್ನ ಸ್ಮ ತೇ ಪ್ರತಿಕುರ್ವತೇ|
12221060c ನಾದ್ರಿಯಂತೇ ಪಶೂನ್ಬದ್ಧ್ವಾ ಯವಸೇನೋದಕೇನ ಚ||
ಪ್ರಾಕಾರ-ಆಗಾರಗಳು ಮುರಿದು ಬಿದ್ದಿದ್ದರೂ ಅವುಗಳನ್ನು ಸರಿಮಾಡುತ್ತಿಲ್ಲ. ಕೊಟ್ಟಿಗೆಯಲ್ಲಿ ಕಟ್ಟಿರುವ ಪಶುಗಳಿಗೆ ಮೇವು-ನೀರನ್ನಿತ್ತು ಉಪಚರಿಸುತ್ತಿಲ್ಲ.
12221061a ಬಾಲಾನಾಂ ಪ್ರೇಕ್ಷಮಾಣಾನಾಂ ಸ್ವಯಂ ಭಕ್ಷಾನಭಕ್ಷಯನ್|
12221061c ತಥಾ ಭೃತ್ಯಜನಂ ಸರ್ವಂ ಪರ್ಯಶ್ನಂತಿ ಚ ದಾನವಾಃ||
ಮಕ್ಕಳು ನೋಡುತ್ತಿದ್ದಂತೆಯೇ ಸ್ವಯಂ ತಾವೇ ಭಕ್ಷ್ಯಗಳನ್ನು ಭಕ್ಷಿಸುತ್ತಾರೆ. ಅದೇ ರೀತಿಯಲ್ಲಿ ದಾನವರು ಸೇವಕರು-ಪರಿವಾರದವರನ್ನು ತೃಪ್ತಿಗೊಳಿಸದೆಯೇ ತಾವು ಮಾತ್ರ ಸುಖೋಪಭೋಗಗಳಲ್ಲಿ ಆಸಕ್ತರಾಗಿರುತ್ತಾರೆ.
12221062a ಪಾಯಸಂ ಕೃಸರಂ ಮಾಂಸಮಪೂಪಾನಥ ಶಷ್ಕುಲೀಃ|
12221062c ಅಪಾಚಯನ್ನಾತ್ಮನೋಽರ್ಥೇ ವೃಥಾಮಾಂಸಾನ್ಯಭಕ್ಷಯನ್||
ಪಾಯಸ, ಎಳ್ಳನ್ನ, ಮಾಂಸ, ಅಪೂಪ, ಚಕ್ಕುಲಿ – ಇವುಗಳನ್ನು ತಾವು ತಿನ್ನಲು ಮಾತ್ರವೇ ಮಾಡಿಕೊಳ್ಳುತ್ತಾರೆ. ವೃಥಾ ಮಾಂಸವನ್ನು ತಿನ್ನುತ್ತಾರೆ.
12221063a ಉತ್ಸೂರ್ಯಶಾಯಿನಶ್ಚಾಸನ್ಸರ್ವೇ ಚಾಸನ್ ಪ್ರಗೇನಿಶಾಃ|
12221063c ಅವರ್ತನ್ಕಲಹಾಶ್ಚಾತ್ರ ದಿವಾರಾತ್ರಂ ಗೃಹೇ ಗೃಹೇ||
ಸೂರ್ಯೋದಯವಾದಾಗಲೂ ಮಲಗಿಕೊಂಡಿರುತ್ತಾರೆ. ಪ್ರಾತಃಕಾಲವನ್ನೂ ರಾತ್ರಿಯೆಂದೇ ಭಾವಿಸುತ್ತಾರೆ. ಮನೆ-ಮನೆಗಳಲ್ಲಿ ಹಗಲು-ರಾತ್ರಿ ಯಾವುದಾದರೊಂದು ಕಲಹವು ನಡೆಯುತ್ತಲೇ ಇರುತ್ತವೆ.
12221064a ಅನಾರ್ಯಾಶ್ಚಾರ್ಯಮಾಸೀನಂ ಪರ್ಯುಪಾಸನ್ನ ತತ್ರ ಹ|
12221064c ಆಶ್ರಮಸ್ಥಾನ್ವಿಕರ್ಮಸ್ಥಾಃ ಪ್ರದ್ವಿಷಂತಿ ಪರಸ್ಪರಮ್|
12221064e ಸಂಕರಾಶ್ಚಾಪ್ಯವರ್ತಂತ ನ ಚ ಶೌಚಮವರ್ತತ||
ಆ ಅನಾರ್ಯರು ಮನೆಯಲ್ಲಿರುವ ಆರ್ಯರನ್ನು ಗೌರವಿಸುತ್ತಿಲ್ಲ. ಅಧರ್ಮಿಗಳು ಆಶ್ರಮಧರ್ಮಗಳನ್ನು ಪಾಲಿಸುವವರನ್ನು ದ್ವೇಷಿಸುತ್ತಾರೆ. ವರ್ಣಸಂಕರವು ಹೆಚ್ಚಾಗುತ್ತಿದೆ. ಪವಿತ್ರ ಆಚಾರಗಳು ಲುಪ್ತವಾಗುತ್ತಿವೆ.
12221065a ಯೇ ಚ ವೇದವಿದೋ ವಿಪ್ರಾ ವಿಸ್ಪಷ್ಟಮನೃಚಶ್ಚ ಯೇ|
12221065c ನಿರಂತರವಿಶೇಷಾಸ್ತೇ ಬಹುಮಾನಾವಮಾನಯೋಃ||
ವೇದವಿದರಲ್ಲಿ ಮತ್ತು ವೇದದ ಒಂದು ಋಕ್ಕನ್ನೂ ತಿಳಿಯದಿರುವವರಲ್ಲಿ, ಬಹುಮಾನ-ಅಪಮಾನಗಳಲ್ಲಿ, ಯಾವ ವ್ಯತ್ಯಾಸವನ್ನೂ ಕಾಣುತ್ತಿಲ್ಲ.
12221066a ಹಾವ[4]ಮಾಭರಣಂ ವೇಷಂ ಗತಿಂ ಸ್ಥಿತಿಮವೇಕ್ಷಿತುಮ್|
12221066c ಅಸೇವಂತ ಭುಜಿಷ್ಯಾ ವೈ ದುರ್ಜನಾಚರಿತಂ ವಿಧಿಮ್||
ದಾಸಿಯರು ಆಭರಣ-ವೇಷಗಳನ್ನು ಧರಿಸಿ ಹಾವಭಾವಗಳಿಂದ ವ್ಯಭಿಚಾರಿಣಿಯರಂತೆ ನಿಲ್ಲುತ್ತಾರೆ, ನಡೆಯುತ್ತಾರೆ ಮತ್ತು ಕಾಣುತ್ತಾರೆ. ಅವರು ದುರ್ಜನರು ಆಚರಿಸುವ ವಿಧಿಗಳನ್ನು ಅನುಕರಣ ಮಾಡುತ್ತಿದ್ದಾರೆ.
12221067a ಸ್ತ್ರಿಯಃ ಪುರುಷವೇಷೇಣ ಪುಂಸಃ ಸ್ತ್ರೀವೇಷಧಾರಿಣಃ|
12221067c ಕ್ರೀಡಾರತಿವಿಹಾರೇಷು ಪರಾಂ ಮುದಮವಾಪ್ನುವನ್||
ಸ್ತ್ರೀಯರು ಪುರುಷವೇಷವನ್ನು ಧರಿಸುತ್ತಾರೆ. ಪುರುಷರು ಸ್ತ್ರೀಯರ ವೇಷಧಾರಣೆ ಮಾಡಿ ಕ್ರೀಡೆ-ರತಿ-ವಿಹಾರಗಳಲ್ಲಿ ತೊಡಗಿ ಆನಂದಹೊಂದುತ್ತಾರೆ.
12221068a ಪ್ರಭವದ್ಭಿಃ ಪುರಾ ದಾಯಾನರ್ಹೇಭ್ಯಃ ಪ್ರತಿಪಾದಿತಾನ್|
12221068c ನಾಭ್ಯವರ್ತಂತ ನಾಸ್ತಿಕ್ಯಾದ್ವರ್ತಂತಃ ಸಂಭವೇಷ್ವಪಿ||
ಹಿಂದಿನವರು ಅರ್ಹ ಬ್ರಾಹ್ಮಣರಿಗೆ ಉಂಬಳಿಯಾಗಿ ಕೊಟ್ಟಿದ್ದ ಭೂಮಿ-ಕಾಣಿಕೆಗಳನ್ನು ನಾಸ್ತಿಕ್ಯದ ಕಾರಣದಿಂದ ಅವರ ಬಳಿಯಲ್ಲಿರಲು ಅವಕಾಶಕೊಡುತ್ತಿಲ್ಲ. ತಮ್ಮ ಜೀವನಿರ್ವಹಣೆಗೆ ಬೇರೆ ದಾರಿಗಳಿದ್ದರೂ ಬ್ರಾಹ್ಮಣರ ಉಂಬಳಿಗಳನ್ನು ಹಿಂದೆ ತೆಗೆದುಕೊಳ್ಳುತ್ತಿದ್ದಾರೆ.
12221069a ಮಿತ್ರೇಣಾಭ್ಯರ್ಥಿತಂ ಮಿತ್ರಮರ್ಥೇ ಸಂಶಯಿತೇ ಕ್ವ ಚಿತ್|
12221069c ವಾಲಕೋಟ್ಯಗ್ರಮಾತ್ರೇಣ ಸ್ವಾರ್ಥೇನಾಘ್ನತ ತದ್ವಸು||
ಧನ-ಸಂಪತ್ತುಗಳು ಇಬ್ಬರಲ್ಲಿ ಯಾರಿಗೆ ಸೇರಬೇಕೆಂದು ಸಂಶಯವುಂಟಾದಾಗ ಮಿತ್ರನನ್ನು ಕೇಳಿದರೆ ಆ ಮಿತ್ರನು ಕೂದಲಿನ ತುದಿಗೆ ಸಮಾನ ಸ್ವಾರ್ಥದಿಂದ ತಾನೇ ಅದನ್ನು ಕಬಳಿಸಿಬಿಡುತ್ತಾನೆ.
12221070a ಪರಸ್ವಾದಾನರುಚಯೋ ವಿಪಣ್ಯವ್ಯವಹಾರಿಣಃ|
12221070c ಅದೃಶ್ಯಂತಾರ್ಯವರ್ಣೇಷು ಶೂದ್ರಾಶ್ಚಾಪಿ ತಪೋಧನಾಃ||
ಪರರ ಸ್ವತ್ತಿನಲ್ಲಿಯೇ ರುಚಿಯನ್ನಿಟ್ಟುಕೊಂಡಿದ್ದಾರೆ. ಮೋಸದ ವ್ಯವಹಾರಗಳು ಕಂಡುಬರುತ್ತಿವೆ. ಉಚ್ಚ ವರ್ಣದವರೊಡನೆ ಸೇರಿ ಶೂದ್ರರೂ ತಪೋಧನರಾಗುತ್ತಿದ್ದಾರೆ.
12221071a ಅಧೀಯಂತೇಽವ್ರತಾಃ ಕೇ ಚಿದ್ವೃಥಾವ್ರತಮಥಾಪರೇ|
12221071c ಅಶುಶ್ರೂಷುರ್ಗುರೋಃ ಶಿಷ್ಯಃ ಕಶ್ಚಿಚ್ಚಿಷ್ಯಸಖೋ ಗುರುಃ||
ವ್ರತಹೀನರು ವೇದಾಭ್ಯಾಸಮಾಡುತ್ತಿದ್ದಾರೆ. ಮತ್ತೆ ಕೆಲವರು ವ್ರತಗಳನ್ನು ಆಚರಿಸುತ್ತಿದ್ದರೂ ವೇದಾಧ್ಯಯನ ಮಾಡುತ್ತಿಲ್ಲ. ಗುರುಶುಶ್ರೂಷೆಯನ್ನು ಮಾಡುತ್ತಿಲ್ಲ. ಕೆಲವು ಕಡೆ ಶಿಷ್ಯನು ಗುರುವಿನ ಮಿತ್ರನೇ ಆಗಿರುತ್ತಾನೆ.
12221072a ಪಿತಾ ಚೈವ ಜನಿತ್ರೀ ಚ ಶ್ರಾಂತೌ ವೃತ್ತೋತ್ಸವಾವಿವ|
12221072c ಅಪ್ರಭುತ್ವೇ ಸ್ಥಿತೌ ವೃದ್ಧಾವನ್ನಂ ಪ್ರಾರ್ಥಯತಃ ಸುತಾನ್||
ತಂದೆ-ತಾಯಿಗಳು ಉತ್ಸವಹೀನರಾಗಿದ್ದಾರೆ. ಬಳಲಿದ್ದಾರೆ. ಪ್ರಭುತ್ವವನ್ನು ಕಳೆದುಕೊಂಡ ಆ ವೃದ್ಧರು ಮಕ್ಕಳನ್ನೇ ಬೇಡುವಂಥವರಾಗಿದ್ದಾರೆ.
12221073a ತತ್ರ ವೇದವಿದಃ ಪ್ರಾಜ್ಞಾ ಗಾಂಭೀರ್ಯೇ ಸಾಗರೋಪಮಾಃ|
12221073c ಕೃಷ್ಯಾದಿಷ್ವಭವನ್ಸಕ್ತಾ ಮೂರ್ಖಾಃ ಶ್ರಾದ್ಧಾನ್ಯಭುಂಜತ||
ಅವರಲ್ಲಿ ಸಾಗರದಂತೆ ಗಂಭೀರವಾಗಿರುವ ವೇದವಿದ ಪ್ರಾಜ್ಞರು ಈಗ ಕೃಷ್ಯಾದಿಗಳಲ್ಲಿ ಆಸಕ್ತರಾಗಿದ್ದಾರೆ. ಮೂರ್ಖರು ಶ್ರಾದ್ಧಾನ್ನವನ್ನು ಉಣ್ಣುತ್ತಿದ್ದಾರೆ.
12221074a ಪ್ರಾತಃ ಪ್ರಾತಶ್ಚ ಸುಪ್ರಶ್ನಂ ಕಲ್ಪನಂ ಪ್ರೇಷಣಕ್ರಿಯಾಃ|
12221074c ಶಿಷ್ಯಾನುಪ್ರಹಿತಾಸ್ತಸ್ಮಿನ್ನಕುರ್ವನ್ಗುರವಶ್ಚ ಹ||
ಪ್ರತಿದಿನವೂ ಬೆಳಿಗ್ಗೆ “ಸುಖನಿದ್ರೆಯಾಯಿತೇ?” ಎಂದು ಗುರುಗಳೇ ಶಿಷ್ಯರನ್ನು ಕೇಳತೊಡಗಿದ್ದಾರೆ. ಸೇವಕರು ಮಾಡುವ ಕೆಲಸಗಳನ್ನು ಗುರುಗಳೇ ಶಿಷ್ಯರಿಗೆ ಮಾಡಿಕೊಡುತ್ತಿದ್ದಾರೆ. ಗುರುಗಳು ತಾವಾಗಿಯೇ ಶಿಷ್ಯರ ವಾರ್ತಾವಾಹಕರಾಗಿ ಅಲ್ಲಿಂದಿಲ್ಲಿಗೆ ಹೋಗಿ ಬರುತ್ತಿರುತ್ತಾರೆ.
12221075a ಶ್ವಶ್ರೂಶ್ವಶುರಯೋರಗ್ರೇ ವಧೂಃ ಪ್ರೇಷ್ಯಾನಶಾಸತ|
12221075c ಅನ್ವಶಾಸಚ್ಚ ಭರ್ತಾರಂ ಸಮಾಹೂಯಾಭಿಜಲ್ಪತೀ||
ಅತ್ತೆ-ಮಾವಂದಿರ ಎದಿರೇ ಸೊಸೆಯು ಸೇವಕರಿಗೆ ಅಪ್ಪಣೆಮಾಡತೊಡಗಿದ್ದಾಳೆ. ಗಂಡನಿಗೂ ಅಪ್ಪಣೆಮಾಡುತ್ತಾಳೆ. ಅವನನ್ನು ಕರೆದು ಮಾತನಾಡತೊಡಗುತ್ತಾಳೆ.
12221076a ಪ್ರಯತ್ನೇನಾಪಿ ಚಾರಕ್ಷಚ್ಚಿತ್ತಂ ಪುತ್ರಸ್ಯ ವೈ ಪಿತಾ|
12221076c ವ್ಯಭಜಂಶ್ಚಾಪಿ ಸಂರಂಭಾದ್ದುಃಖವಾಸಂ ತಥಾವಸನ್||
ತಂದೆಯು ಮಗನ ಚಿತ್ತವನ್ನು ರಕ್ಷಿಸತೊಡಗಿದ್ದಾನೆ[5]. ಮಕ್ಕಳ ಕೋಪಕ್ಕೆ ಹೆದರಿ ತನ್ನಲ್ಲಿರುವುದೆಲ್ಲವನ್ನೂ ಮಕ್ಕಳಲ್ಲಿ ಹಂಚಿಕೊಟ್ಟು ತನ್ನ ಜೀವನವನ್ನು ದುಃಖದಲ್ಲಿಯೇ ಕಳೆಯುತ್ತಾನೆ.
12221077a ಅಗ್ನಿದಾಹೇನ ಚೋರೈರ್ವಾ ರಾಜಭಿರ್ವಾ ಹೃತಂ ಧನಮ್|
12221077c ದೃಷ್ಟ್ವಾ ದ್ವೇಷಾತ್ ಪ್ರಾಹಸಂತ ಸುಹೃತ್ಸಂಭಾವಿತಾ ಹ್ಯಪಿ||
ಅಗ್ನಿದಾಹ, ಕಳ್ಳರು ಅಥವಾ ರಾಜಪುರುಷರಿಂದ ಯಾರದ್ದಾದರೂ ಧನವು ನಷ್ಟವಾದುದನ್ನು ನೋಡಿದರೆ, ಅವರು ತಮ್ಮ ಮಿತ್ರರೇ ಆಗಿದ್ದರೂ, ದ್ವೇಷದ ಕಾರಣದಿಂದ ಅಪಹಾಸ್ಯಮಾಡುತ್ತಾರೆ.
12221078a ಕೃತಘ್ನಾ ನಾಸ್ತಿಕಾಃ ಪಾಪಾ ಗುರುದಾರಾಭಿಮರ್ಶಿನಃ|
12221078c ಅಭಕ್ಷ್ಯಭಕ್ಷಣರತಾ ನಿರ್ಮರ್ಯಾದಾ ಹತತ್ವಿಷಃ||
ಅವರು ಕೃತಘ್ನರೂ, ನಾಸ್ತಿಕರೂ, ಪಾಪಿಷ್ಟರೂ, ಗುರುಪತ್ನಿಯನ್ನು ಬಯಸುವವರೂ, ಅಭಕ್ಷ್ಯಗಳನ್ನು ತಿನ್ನುವವರೂ, ಮರ್ಯಾದೆಯಿಲ್ಲದವರೂ, ತೇಜಸ್ಸನ್ನು ಕಳೆದುಕೊಂಡವರೂ ಆಗಿದ್ದಾರೆ.
12221079a ತೇಷ್ವೇವಮಾದೀನಾಚಾರಾನಾಚರತ್ಸು ವಿಪರ್ಯಯೇ|
12221079c ನಾಹಂ ದೇವೇಂದ್ರ ವತ್ಸ್ಯಾಮಿ ದಾನವೇಷ್ವಿತಿ ಮೇ ಮತಿಃ||
ದೇವೇಂದ್ರ! ಕಾಲ ವಿಪರ್ಯಾಸದಿಂದಾಗಿ ದಾನವರು ಹೀಗೆ ಧರ್ಮಕ್ಕೆ ವಿರುದ್ಧವಾದ ಆಚರಣೆಗಳಲ್ಲಿ ತೊಡಗಿದ್ದಾರೆ. ಇನ್ನು ನಾನು ಅವರೊಡನೆ ವಾಸಿಸಲಾರೆನು. ಇದೇ ನನ್ನ ನಿಶ್ಚಯವು.
12221080a ತಾಂ ಮಾಂ ಸ್ವಯಮನುಪ್ರಾಪ್ತಾಮಭಿನಂದ ಶಚೀಪತೇ|
12221080c ತ್ವಯಾರ್ಚಿತಾಂ ಮಾಂ ದೇವೇಶ ಪುರೋಧಾಸ್ಯಂತಿ ದೇವತಾಃ||
ಶಚೀಪತೇ! ಸ್ವಯಂ ನಾನೇ ನಿನ್ನ ಬಳಿ ಬಂದಿದ್ದೇನೆ. ನನ್ನನ್ನು ಅಭಿನಂದಿಸು. ದೇವೇಶ! ನಿಮ್ಮಿಂದ ಅರ್ಚಿತಳಾದ ನನ್ನನ್ನು ದೇವತೆಗಳೂ ಪೂಜಿಸುತ್ತಾರೆ.
12221081a ಯತ್ರಾಹಂ ತತ್ರ ಮತ್ಕಾಂತಾ ಮದ್ವಿಶಿಷ್ಟಾ ಮದರ್ಪಣಾಃ|
12221081c ಸಪ್ತ ದೇವ್ಯೋ ಮಯಾಷ್ಟಮ್ಯೋ[6] ವಾಸಂ ಚೇಷ್ಯಂತಿ ಮೇಽಷ್ಟಧಾ||
ನಾನೆಲ್ಲಿ ಇರುತ್ತೇನೋ ಅಲ್ಲಿ ನನಗೆ ಪ್ರಿಯರಾದ, ನನಗೆ ಅಂಟಿಕೊಂಡಿರುವ, ತಮ್ಮನ್ನು ನನಗೇ ಸಮರ್ಪಿಸಿಕೊಂಡಿರುವ ಏಳು ದೇವಿಯರು ಮತ್ತು ಎಂಟನೆಯವಳು ನನ್ನೊಂದಿಗೇ ವಾಸಮಾಡುತ್ತಾರೆ.
12221082a ಆಶಾ ಶ್ರದ್ಧಾ ಧೃತಿಃ ಕಾಂತಿ[7]ರ್ವಿಜಿತಿಃ ಸನ್ನತಿಃ ಕ್ಷಮಾ|
12221082c ಅಷ್ಟಮೀ ವೃತ್ತಿರೇತಾಸಾಂ ಪುರೋಗಾ ಪಾಕಶಾಸನ||
ಪಾಕಶಾಸನ! ಆಶಾ, ಶ್ರದ್ಧಾ, ಧೃತಿ, ಕಾಂತಿ, ವಿಜಿತಿ, ಸನ್ನತಿ, ಕ್ಷಮಾ, ಮತ್ತು ಎಂಟನೆಯವಳು, ಇವೆಲ್ಲರಿಗಿಂತಲೂ ಮುಂದಿರುವವಳು, ವೃತ್ತಿ.
12221083a ತಾಶ್ಚಾಹಂ ಚಾಸುರಾಂಸ್ತ್ಯಕ್ತ್ವಾ ಯುಷ್ಮದ್ವಿಷಯಮಾಗತಾ|
12221083c ತ್ರಿದಶೇಷು ನಿವತ್ಸ್ಯಾಮೋ ಧರ್ಮನಿಷ್ಠಾಂತರಾತ್ಮಸು||
ನಾನು ಮತ್ತು ಆ ಅಷ್ಟದೇವತೆಗಳೂ ಅಸುರರನ್ನು ತ್ಯಜಿಸಿ ನಿನ್ನ ರಾಜ್ಯಕ್ಕೆ ಆಗಮಿಸಿದ್ದೇವೆ. ಧರ್ಮನಿಷ್ಠ ಅಂತರಾತ್ಮವುಳ್ಳ ದೇವತೆಗಳಲ್ಲಿ ನಾವಿನ್ನು ವಾಸಿಸುತ್ತೇವೆ.””
12221084 ಭೀಷ್ಮ ಉವಾಚ|
12221084a ಇತ್ಯುಕ್ತವಚನಾಂ ದೇವೀಮತ್ಯರ್ಥಂ ತೌ ನನಂದತುಃ|
12221084c ನಾರದಶ್ಚ ತ್ರಿಲೋಕರ್ಷಿರ್ವೃತ್ರಹಂತಾ ಚ ವಾಸವಃ||
ಭೀಷ್ಮನು ಹೇಳಿದನು: “ದೇವಿಯು ಹೀಗೆ ಹೇಳಲು ತ್ರಿಲೋಕ ಋಷಿ ನಾರದ ಮತ್ತು ವೃತ್ರಹಂತಕ ವಾಸವರು ಆನಂದಿತರಾದರು.
12221085a ತತೋಽನಲಸಖೋ ವಾಯುಃ ಪ್ರವವೌ ದೇವವೇಶ್ಮಸು|
12221085c ಇಷ್ಟಗಂಧಃ ಸುಖಸ್ಪರ್ಶಃ ಸರ್ವೇಂದ್ರಿಯಸುಖಾವಹಃ||
ಆಗ ಅನಲಸಖ ವಾಯುವು ದೇವತೆಗಳ ಮನೆಗಳಲ್ಲಿ ಇಷ್ಟಗಂಧಗಳನ್ನು ಹೊತ್ತು ಸುಖಸ್ಪರ್ಶನಾಗಿ ಸರ್ವೇಂದ್ರಿಯಗಳಿಗೂ ಸುಖವನ್ನು ನೀಡುತ್ತಾ ಬೀಸತೊಡಗಿದನು.
12221086a ಶುಚೌ ಚಾಭ್ಯರ್ಚಿತೇ ದೇಶೇ ತ್ರಿದಶಾಃ ಪ್ರಾಯಶಃ ಸ್ಥಿತಾಃ|
12221086c ಲಕ್ಷ್ಮ್ಯಾ ಸಹಿತಮಾಸೀನಂ ಮಘವಂತಂ ದಿದೃಕ್ಷವಃ||
ಶುಚಿಯಾಗಿದ್ದ ಮತ್ತು ಅರ್ಚಿತಗೊಂಡಿದ್ದ ಆ ಪ್ರದೇಶದಲ್ಲಿ ಲಕ್ಷ್ಮಿಯ ಸಹಿತ ಕುಳಿತಿದ್ದ ಮಘವಂತ ಇಂದ್ರನನ್ನು ನೋಡಲು ಬಯಸಿ ಪ್ರಾಯಶಃ ಎಲ್ಲ ದೇವತೆಗಳೂ ಸೇರಿದ್ದರು.
12221087a ತತೋ ದಿವಂ ಪ್ರಾಪ್ಯ ಸಹಸ್ರಲೋಚನಃ
ಶ್ರಿಯೋಪಪನ್ನಃ ಸುಹೃದಾ ಸುರರ್ಷಿಣಾ|
12221087c ರಥೇನ ಹರ್ಯಶ್ವಯುಜಾ ಸುರರ್ಷಭಃ
ಸದಃ ಸುರಾಣಾಮಭಿಸತ್ಕೃತೋ ಯಯೌ||
ಅನಂತರ ಸಹಸ್ರಲೋಚನ ಸುರರ್ಷಭನು ತನ್ನ ಸುಹೃದಯಿ ಸುರರ್ಷಿ ನಾರದ ಮತ್ತು ಶ್ರೀಯೊಂದಿಗೆ ಹಸಿರುಬಣ್ಣದ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ಸುರರಿಂದ ಸತ್ಕೃತನಾಗಿ ಸ್ವರ್ಗವನ್ನು ಸೇರಿ ತನ್ನ ಸಭೆಗೆ ಆಗಮಿಸಿದನು.
12221088a ಅಥೇಂಗಿತಂ ವಜ್ರಧರಸ್ಯ ನಾರದಃ
ಶ್ರಿಯಾಶ್ಚ ದೇವ್ಯಾ ಮನಸಾ ವಿಚಾರಯನ್|
12221088c ಶ್ರಿಯೈ ಶಶಂಸಾಮರದೃಷ್ಟಪೌರುಷಃ
ಶಿವೇನ ತತ್ರಾಗಮನಂ ಮಹರ್ದ್ಧಿಮತ್||
ಆಗ ವಜ್ರಧರ ಮತ್ತು ದೇವಿ ಶ್ರೀಯರ ಇಂಗಿತವನ್ನು ಮನಸ್ಸಿನಲ್ಲಿಯೇ ವಿಚಾರಿಸಿ ಅಮರರ ಪೌರುಷವನ್ನು ಕಂಡಿದ್ದ ನಾರದನು ಶ್ರೀಯನ್ನು ಪ್ರಶಂಸಿಸಿದನು ಮತ್ತು ಅವಳ ಆಗಮನದಿಂದ ಮಹಾ ಮಂಗಳವುಂಟಾಯಿತೆಂದು ಹೇಳಿದನು.
12221089a ತತೋಽಮೃತಂ ದ್ಯೌಃ ಪ್ರವವರ್ಷ ಭಾಸ್ವತೀ
ಪಿತಾಮಹಸ್ಯಾಯತನೇ ಸ್ವಯಂಭುವಃ|
12221089c ಅನಾಹತಾ ದುಂದುಭಯಶ್ಚ ನೇದಿರೇ
ತಥಾ ಪ್ರಸನ್ನಾಶ್ಚ ದಿಶಶ್ಚಕಾಶಿರೇ||
ಆಗ ನಿರ್ಮಲ ಪ್ರಕಾಶಪೂರ್ಣ ಆಕಾಶವು ಸ್ವಯಂಭೂ ಪಿತಾಮಹನ ಲೋಕದಲ್ಲಿ ಅಮೃತವನ್ನು ಸುರಿಸಿತು. ಬಾರಿಸದೆಯೇ ದೇವದುಂದುಭಿಗಳು ಮೊಳಗಿದವು. ಎಲ್ಲ ದಿಕ್ಕುಗಳೂ ಪ್ರಸನ್ನಗೊಂಡು ಪ್ರಕಾಶಿಸಿದವು.
12221090a ಯಥರ್ತು ಸಸ್ಯೇಷು ವವರ್ಷ ವಾಸವೋ
ನ ಧರ್ಮಮಾರ್ಗಾದ್ವಿಚಚಾಲ ಕಶ್ಚನ|
12221090c ಅನೇಕರತ್ನಾಕರಭೂಷಣಾ ಚ ಭೂಃ
ಸುಘೋಷಘೋಷಾ ಭುವನೌಕಸಾಂ ಜಯೇ||
ಋತುವಿಗೆ ತಕ್ಕಂತೆ ವಾಸವನು ಸಸ್ಯಗಳ ಮೇಲೆ ಮಳೆಸುರಿಸಿದನು. ಧರ್ಮಮಾರ್ಗದಿಂದ ಎಂದೂ ವಿಚಲಿತನಾಗಲಿಲ್ಲ. ಅನೇಕ ರತ್ನಾಕರ ಸಮುದ್ರಗಳಿಂದ ಭೂಷಿತವಾದ ಭೂಮಿಯು ಭುವನೌಕಸರ ವಿಜಯದಿಂದಾಗಿ ಸುಂದರ ಜಯಘೋಷವನ್ನು ಮಾಡಿತು.
12221091a ಕ್ರಿಯಾಭಿರಾಮಾ ಮನುಜಾ ಯಶಸ್ವಿನೋ
ಬಭುಃ ಶುಭೇ ಪುಣ್ಯಕೃತಾಂ ಪಥಿ ಸ್ಥಿತಾಃ|
12221091c ನರಾಮರಾಃ ಕಿಂನರಯಕ್ಷರಾಕ್ಷಸಾಃ
ಸಮೃದ್ಧಿಮಂತಃ ಸುಖಿನೋ ಯಶಸ್ವಿನಃ||
ಆಗ ಮನುಷ್ಯರು ಪುಣ್ಯಕೃತರ ಶುಭಮಾರ್ಗಗಳಲ್ಲಿ ಸ್ಥಿತರಾಗಿ ಕ್ರಿಯೆಗಳಲ್ಲಿಯೇ ಅನುರಕ್ತರಾಗಿ ಯಶಸ್ವಿಗಳಾದರು. ನರರು, ಅಮರರು, ಕಿನ್ನರ-ಯಕ್ಷ-ರಾಕ್ಷಸರು ಸಮೃದ್ಧಿಮಂತರೂ ಸುಖಿಗಳೂ ಮತ್ತು ಯಶಸ್ವಿಗಳೂ ಆದರು.
12221092a ನ ಜಾತ್ವಕಾಲೇ ಕುಸುಮಂ ಕುತಃ ಫಲಂ
ಪಪಾತ ವೃಕ್ಷಾತ್ಪವನೇರಿತಾದಪಿ|
12221092c ರಸಪ್ರದಾಃ ಕಾಮದುಘಾಶ್ಚ ಧೇನವೋ
ನ ದಾರುಣಾ ವಾಗ್ವಿಚಚಾರ ಕಸ್ಯ ಚಿತ್||
ಗಾಳಿಯು ಬೀಸುತ್ತಿದ್ದರೂ ಅಕಾಲದಲ್ಲಿ ಎಂದೂ ಮರಗಳಿಂದ ಕುಸುಮಗಳಾಗಲೀ ಫಲಗಳಾಗಲೀ ಬೀಳುತ್ತಿರಲಿಲ್ಲ. ಹಸುಗಳು ಕೇಳಿದಷ್ಟು ಸತ್ತ್ವಪೂರ್ಣ ಹಾಲನ್ನು ಕೊಡುತ್ತಿದ್ದವು. ಯಾರ ಬಾಯಿಯಿಂದಲೂ ಕಠೋರವಾದ ಮಾತು ಹೊರಬರುತ್ತಿರಲಿಲ್ಲ.
12221093a ಇಮಾಂ ಸಪರ್ಯಾಂ ಸಹ ಸರ್ವಕಾಮದೈಃ
ಶ್ರಿಯಾಶ್ಚ ಶಕ್ರಪ್ರಮುಖೈಶ್ಚ ದೈವತೈಃ|
12221093c ಪಠಂತಿ ಯೇ ವಿಪ್ರಸದಃ ಸಮಾಗಮೇ
ಸಮೃದ್ಧಕಾಮಾಃ ಶ್ರಿಯಮಾಪ್ನುವಂತಿ ತೇ||
ಸರ್ವಕಾಮಗಳನ್ನೂ ಪೂರೈಸುವ ಇಂದ್ರಪ್ರಮುಖರ ದೇವತೆಗಳಿಂದ ಸ್ತುತಿಸಲ್ಪಟ್ಟ ಶ್ರೀಯ ಈ ಪೂಜಾಪ್ರಕರಣವನ್ನು ಬ್ರಾಹ್ಮಣರ ಸಭೆಯಲ್ಲಿ ಪಠಿಸುವವರು ಸಮೃದ್ಧಕಾಮರಾಗಿ ಶ್ರೀಯನ್ನು ಹೊಂದುತ್ತಾರೆ.
12221094a ತ್ವಯಾ ಕುರೂಣಾಂ ವರ ಯತ್ಪ್ರಚೋದಿತಂ
ಭವಾಭವಸ್ಯೇಹ ಪರಂ ನಿದರ್ಶನಮ್|
12221094c ತದದ್ಯ ಸರ್ವಂ ಪರಿಕೀರ್ತಿತಂ ಮಯಾ
ಪರೀಕ್ಷ್ಯ ತತ್ತ್ವಂ ಪರಿಗಂತುಮರ್ಹಸಿ||
ಕುರುಶ್ರೇಷ್ಠ! ನೀನು ಪ್ರಶ್ನಿಸಿದ ಉನ್ನತಿ ಮತ್ತು ಅವನತಿಗಳ ಪೂರ್ವಲಕ್ಷಣಗಳನ್ನು ಪರಮ ನಿದರ್ಶನವನ್ನಿತ್ತು ಹೇಳಿದ್ದೇನೆ. ಈಗ ನೀನೇ ನಾನು ಹೇಳಿದುದೆಲ್ಲವನ್ನೂ ತತ್ತ್ವತಃ ಪರೀಕ್ಷಿಸಿ ನಿಶ್ಚಯಿಸಲು ಸಮರ್ಥನಾಗಿರುವೆ.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶ್ರೀ-ವಾಸವಸಂವಾದೋ ನಾಮ ಏಕವಿಂಶಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶ್ರೀ-ವಾಸವಸಂವಾದ ಎನ್ನುವ ಇನ್ನೂರಾಇಪ್ಪತ್ತೊಂದನೇ ಅಧ್ಯಾಯವು.
[1] ಹ್ರೀನಿಷೇವಾ (ಭಾರತ ದರ್ಶನ/ಗೀತಾ ಪ್ರೆಸ್).
[2] ವದತಾಂ (ಭಾರತ ದರ್ಶನ/ಗೀತಾ ಪ್ರೆಸ್).
[3] ಯುವಾನಶ್ಚ ಸಮಾಸೀನಾ (ಭಾರತ ದರ್ಶನ/ಗೀತಾ ಪ್ರೆಸ್).
[4] ಹಾರ (ಭಾರತ ದರ್ಶನ/ಗೀತಾ ಪ್ರೆಸ್).
[5] ಮಗನಿಗೆ ಸಿಟ್ಟುಬಾರದ ರೀತಿಯಲ್ಲಿ, ಅವನಿಗೆ ವಿಧೇಯನಾಗಿ ನಡೆದುಕೊಳ್ಳುತ್ತಿದ್ದಾನೆ (ಭಾರತ ದರ್ಶನ).
[6] ಜಯಾಷ್ಟಮ್ಯೋ (ಭಾರತ ದರ್ಶನ/ಗೀತಾ ಪ್ರೆಸ್).
[7] ಶಾಂತಿ (ಭಾರತ ದರ್ಶನ/ಗೀತಾ ಪ್ರೆಸ್).