Shanti Parva: Chapter 223

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೨೩

ವಾಸುದೇವ-ಉಗ್ರಸೇನ ಸಂವಾದ

ನಾರದನ ಲೋಕಪ್ರಿಯತೆಗೆ ಕಾರಣವಾದ ಅವನ ಗುಣಗಳನ್ನು ಕೃಷ್ಣನು ಉಗ್ರಸೇನನಿಗೆ ನಿರೂಪಿಸಿದುದು (1-23).

12223001 ಯುಧಿಷ್ಠಿರ ಉವಾಚ|

12223001a ಪ್ರಿಯಃ ಸರ್ವಸ್ಯ ಲೋಕಸ್ಯ ಸರ್ವಸತ್ತ್ವಾಭಿನಂದಿತಾ|

12223001c ಗುಣೈಃ ಸರ್ವೈರುಪೇತಶ್ಚ ಕೋ ನ್ವಸ್ತಿ ಭುವಿ ಮಾನವಃ||

ಯುಧಿಷ್ಠಿರನು ಹೇಳಿದನು: “ಲೋಕದ ಎಲ್ಲರಿಗೂ ಪ್ರಿಯನಾದ, ಸರ್ವಸತ್ತ್ವಗಳಿಂದಲೂ ಆನಂದದಾಯಕನಾದ, ಸರ್ವಸದ್ಗುಣಸಂಪನ್ನನಾದ ಮಾನವನು ಈ ಭುವಿಯಲ್ಲಿ ಯಾರಿದ್ದಾನೆ?”

12223002 ಭೀಷ್ಮ ಉವಾಚ|

12223002a ಅತ್ರ ತೇ ವರ್ತಯಿಷ್ಯಾಮಿ ಪೃಚ್ಚತೋ ಭರತರ್ಷಭ|

12223002c ಉಗ್ರಸೇನಸ್ಯ ಸಂವಾದಂ ನಾರದೇ ಕೇಶವಸ್ಯ ಚ||

ಭೀಷ್ಮನು ಹೇಳಿದನು: “ಭರತರ್ಷಭ! ನಿನ್ನ ಪ್ರಶ್ನೆಗೆ ಉತ್ತರವಾಗಿ ನಾರದರ ವಿಷಯದಲ್ಲಿ ಕೇಶವನಿಗೂ ಉಗ್ರಸೇನ[1]ನಿಗೂ ನಡೆದ ಸಂವಾದವನ್ನು ಹೇಳುತ್ತೇನೆ.

12223003 ಉಗ್ರಸೇನ ಉವಾಚ|

12223003a ಪಶ್ಯ[2] ಸಂಕಲ್ಪತೇ ಲೋಕೋ ನಾರದಸ್ಯ ಪ್ರಕೀರ್ತನೇ|

12223003c ಮನ್ಯೇ ಸ ಗುಣಸಂಪನ್ನೋ ಬ್ರೂಹಿ ತನ್ಮಮ ಪೃಚ್ಚತಃ||

ಉಗ್ರಸೇನನು ಹೇಳಿದನು: “ನೋಡು! ಲೋಕವೇ ನಾರದನ ಗುಣಗಾನಮಾಡಲು ಬಯಸುತ್ತದೆ. ಅವನು ಗುಣಸಂಪನ್ನನೆಂದು ನನಗೂ ಅನಿಸುತ್ತದೆ. ನಾನು ಕೇಳಿದುದಕ್ಕೆ ಅವನ ಗುಣಗಳನ್ನು ಹೇಳು.”

12223004 ವಾಸುದೇವ ಉವಾಚ|

12223004a ಕುಕುರಾಧಿಪ ಯಾನ್ಮನ್ಯೇ ಶೃಣು ತಾನ್ಮೇ ವಿವಕ್ಷತಃ|

12223004c ನಾರದಸ್ಯ ಗುಣಾನ್ಸಾಧೂನ್ಸಂಕ್ಷೇಪೇಣ ನರಾಧಿಪ||

ವಾಸುದೇವನು ಹೇಳಿದನು: “ಕುಕುರಾಧಿಪ! ನರಾಧಿಪ! ನಾನು ನಾರದನಲ್ಲಿ ಕಂಡ ಸಾಧುಗುಣಗಳನ್ನು ಸಂಕ್ಷೇಪವಾಗಿ ಕೇಳು.

12223005a ನ ಚಾರಿತ್ರನಿಮಿತ್ತೋಽಸ್ಯಾಹಂಕಾರೋ ದೇಹಪಾತನಃ[3]|

12223005c ಅಭಿನ್ನಶ್ರುತಚಾರಿತ್ರಸ್ತಸ್ಮಾತ್ಸರ್ವತ್ರ ಪೂಜಿತಃ||

ತನ್ನ ಸದಾಚಾರದ ಕಾರಣದಿಂದ ಅವನಿಗೆ ಶರೀರವನ್ನು ಸಂತಪ್ತಗೊಳಿಸುವ ಅಹಂಕಾರವಿಲ್ಲ. ಅವನಲ್ಲಿ ಯಾವ ಶಾಸ್ತ್ರಜ್ಞಾನವಿದೆಯೋ ಅವನ ಚಾರಿತ್ರ್ಯವೂ ಅದರಂತೆಯೇ ಇದೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗಿದ್ದಾನೆ[4].

[5]12223006a ತಪಸ್ವೀ[6] ನಾರದೋ ಬಾಢಂ ವಾಚಿ ನಾಸ್ಯ ವ್ಯತಿಕ್ರಮಃ|

12223006c ಕಾಮಾದ್ವಾ ಯದಿ ವಾ ಲೋಭಾತ್ತಸ್ಮಾತ್ಸರ್ವತ್ರ ಪೂಜಿತಃ||

ನಿಶ್ಚಿತವಾಗಿಯೂ ನಾರದನು ತಪಸ್ವಿಯು. ಕಾಮದಿಂದಾಗಲೀ ಅಥವಾ ಲೋಭದಿಂದಾಗಲೀ ಅವನ ಮಾತು ಬದಲಾಗುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನಾಗಿದ್ದಾನೆ.

12223007a ಅಧ್ಯಾತ್ಮವಿಧಿತತ್ತ್ವಜ್ಞಃ ಕ್ಷಾಂತಃ ಶಕ್ತೋ ಜಿತೇಂದ್ರಿಯಃ|

12223007c ಋಜುಶ್ಚ ಸತ್ಯವಾದೀ ಚ ತಸ್ಮಾತ್ಸರ್ವತ್ರ ಪೂಜಿತಃ||

ಅವನು ಆಧ್ಯಾತ್ಮವಿಧಿಗಳನ್ನು ತತ್ತ್ವತಃ ತಿಳಿದುಕೊಂಡಿದ್ದಾನೆ. ಕ್ಷಮಾಶೀಲನೂ, ಶಕ್ತನೂ, ಜಿತೇಂದ್ರಿಯನೂ, ಸರಳಸ್ವಭಾವದವನೂ, ಸತ್ಯವಾದಿಯೂ ಆಗಿದ್ದಾನೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223008a ತೇಜಸಾ ಯಶಸಾ ಬುದ್ಧ್ಯಾ ನಯೇನ ವಿನಯೇನ ಚ|

12223008c ಜನ್ಮನಾ ತಪಸಾ ವೃದ್ಧಸ್ತಸ್ಮಾತ್ಸರ್ವತ್ರ ಪೂಜಿತಃ||

ಅವನು ತೇಜಸ್ಸು, ಯಶಸ್ಸು, ಬುದ್ಧಿ, ನಯ-ವಿನಯಗಳು, ಜನ್ಮ ಮತ್ತು ತಪಸ್ಸಿನಲ್ಲಿ ವೃದ್ಧನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223009a ಸುಖಶೀಲಃ ಸುಸಂಭೋಗಃ ಸುಭೋಜ್ಯಃ ಸ್ವಾದರಃ ಶುಚಿಃ[7]|

12223009c ಸುವಾಕ್ಯಶ್ಚಾಪ್ಯನೀರ್ಷ್ಯಶ್ಚ ತಸ್ಮಾತ್ಸರ್ವತ್ರ ಪೂಜಿತಃ||

ಅವನು ಸುಖಶೀಲನು. ಸುಖವಾಗಿ ಭೋಗಿಸುತ್ತಾನೆ. ಪವಿತ್ರವಾದುದನ್ನು ತಿನ್ನುತ್ತಾನೆ. ಪವಿತ್ರಹೃದಯವುಳ್ಳವನು. ಒಳ್ಳೆಯ ಮಾತನ್ನಾಡುತ್ತಾನೆ. ಈರ್ಷ್ಯಾರಹಿತನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223010a ಕಲ್ಯಾಣಂ ಕುರುತೇ ಬಾಢಂ ಪಾಪಮಸ್ಮಿನ್ನ ವಿದ್ಯತೇ|

12223010c ನ ಪ್ರೀಯತೇ ಪರಾನರ್ಥೈಸ್ತಸ್ಮಾತ್ಸರ್ವತ್ರ ಪೂಜಿತಃ||

ಅವನು ಎಲ್ಲರಿಗೂ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ. ಅವನಲ್ಲಿ ಪಾಪವೆನ್ನುವುದೇ ಇಲ್ಲ. ಇತರರಿಗುಂಟಾದ ಅನರ್ಥಗಳಿಂದ ಅವನು ಹರ್ಷಿತನಾಗುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223011a ವೇದಶ್ರುತಿಭಿರಾಖ್ಯಾನೈರರ್ಥಾನಭಿಜಿಗೀಷತೇ|

12223011c ತಿತಿಕ್ಷುರನವಜ್ಞಶ್ಚ ತಸ್ಮಾತ್ಸರ್ವತ್ರ ಪೂಜಿತಃ||

ಅವನು ವೇದ, ಶ್ರುತಿ ಮತ್ತು ಆಖ್ಯಾನಗಳ ಮೂಲಕ ಎಲ್ಲವನ್ನೂ ತಿಳಿಸಲು ಬಯಸುತ್ತಾನೆ. ಅವನು ಸಹನಶೀಲನು ಮತ್ತು ಯಾರನ್ನೂ ಅಪಮಾನಿಸುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223012a ಸಮತ್ವಾದ್ಧಿ ಪ್ರಿಯೋ ನಾಸ್ತಿ ನಾಪ್ರಿಯಶ್ಚ ಕಥಂ ಚನ|

12223012c ಮನೋನುಕೂಲವಾದೀ ಚ ತಸ್ಮಾತ್ಸರ್ವತ್ರ ಪೂಜಿತಃ||

ಸಮತ್ವದಿಂದಾಗಿ ಅವನಿಗೆ ಯಾರೂ ಪ್ರಿಯರಲ್ಲ. ಯಾರೂ ಅಪ್ರಿಯರೂ ಅಲ್ಲ. ಎಲ್ಲರ ಮನಸ್ಸಿಗೂ ಹಿತವಾಗುವಂತೆ ಮಾತನಾಡುತ್ತಾನೆ[8]. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223013a ಬಹುಶ್ರುತಶ್ಚೈತ್ರಕಥಃ ಪಂಡಿತೋಽನಲಸೋಽಶಠಃ|

12223013c ಅದೀನೋಽಕ್ರೋಧನೋಽಲುಬ್ಧಸ್ತಸ್ಮಾತ್ಸರ್ವತ್ರ ಪೂಜಿತಃ||

ಅವನು ಸಕಲಶಾಸ್ತ್ರಗಳಲ್ಲಿಯೂ ಪಾಂಡಿತ್ಯವುಳ್ಳವನು. ವಿಚಿತ್ರ ಕಥೆಗಳನ್ನು ಹೇಳುತ್ತಾನೆ[9]. ಅವನು ಪಂಡಿತನು. ನಿರಾಲಸಿಯು. ಶಠತ್ವವಿಲ್ಲದವನು. ದೈನ್ಯ-ಕ್ರೋಧ-ಲೋಭಗಳಿಲ್ಲದವನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223014a ನಾರ್ಥೇ ನ ಧರ್ಮೇ ಕಾಮೇ ವಾ ಭೂತಪೂರ್ವೋಽಸ್ಯ ವಿಗ್ರಹಃ|

12223014c ದೋಷಾಶ್ಚಾಸ್ಯ ಸಮುಚ್ಚಿನ್ನಾಸ್ತಸ್ಮಾತ್ಸರ್ವತ್ರ ಪೂಜಿತಃ||

ಯಾವುದಾದರೂ ವಸ್ತುವಿನ ವಿಷಯದಲ್ಲಾಗಲೀ, ಧನಕ್ಕಾಗಲೀ ಅಥವಾ ಕಾಮಕ್ಕಾಗಲೀ ಅವನು ಹಿಂದೆ ಯಾರೊಡನೆಯೂ ಜಗಳವಾಡಿದ್ದಿಲ್ಲ. ಅವನ ಸರ್ವದೋಷಗಳೂ ನಷ್ಟವಾಗಿ ಹೋಗಿವೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223015a ದೃಢಭಕ್ತಿರನಿಂದ್ಯಾತ್ಮಾ ಶ್ರುತವಾನನೃಶಂಸವಾನ್|

12223015c ವೀತಸಂಮೋಹದೋಷಶ್ಚ ತಸ್ಮಾತ್ಸರ್ವತ್ರ ಪೂಜಿತಃ||

ಅವನು ದೃಢಭಕ್ತಿಯನ್ನಿಟ್ಟುಕೊಂಡಿದ್ದಾನೆ. ಶುದ್ಧಾತ್ಮನು. ವಿದ್ವಾಂಸನು. ದಯಾಳುವು. ಸಮ್ಮೋಹಾದಿ ದೋಷಗಳಿಂದ ವರ್ಜಿತನಾದವನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223016a ಅಸಕ್ತಃ ಸರ್ವಸಂಗೇಷು[10] ಸಕ್ತಾತ್ಮೇವ ಚ ಲಕ್ಷ್ಯತೇ|

12223016c ಅದೀರ್ಘಸಂಶಯೋ ವಾಗ್ಮೀ ತಸ್ಮಾತ್ಸರ್ವತ್ರ ಪೂಜಿತಃ||

ಸರ್ವಸಂಬಂಧಗಳಲ್ಲಿ ಅನಾಸಕ್ತನಾಗಿದ್ದರೂ ಅವನು ಆಸಕ್ತನಾಗಿರುವಂತೆಯೇ ತೋರುತ್ತಾನೆ. ವಾಗ್ಮಿಯಾದ ಅವನಲ್ಲಿ ಸಂಶಯಗಳು ಹೆಚ್ಚುಕಾಲ ಇರುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223017a ಸಮಾಧಿರ್ನಾಸ್ಯ ಮಾನಾರ್ಥೇ[11] ನಾತ್ಮಾನಂ ಸ್ತೌತಿ ಕರ್ಹಿ ಚಿತ್|

12223017c ಅನೀರ್ಷ್ಯುರ್ದೃಢ[12]ಸಂಭಾಷಸ್ತಸ್ಮಾತ್ಸರ್ವತ್ರ ಪೂಜಿತಃ||

ಅವನು ಮಾನ-ಸಮ್ಮಾನಗಳಲ್ಲಿ ಮುಳುಗಿರುವುದಿಲ್ಲ. ಎಂದೂ ಆತ್ಮಸ್ತುತಿಯನ್ನು ಮಾಡಿಕೊಳ್ಳುವುದಿಲ್ಲ. ಈರ್ಷ್ಯೆಯಿಲ್ಲದೇ ದೃಢವಾಗಿ ಮಾತನಾಡುತ್ತಾನೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223018a ಲೋಕಸ್ಯ ವಿವಿಧಂ ವೃತ್ತಂ[13] ಪ್ರಕೃತೇಶ್ಚಾಪ್ಯಕುತ್ಸಯನ್|

12223018c ಸಂಸರ್ಗವಿದ್ಯಾಕುಶಲಸ್ತಸ್ಮಾತ್ಸರ್ವತ್ರ ಪೂಜಿತಃ||

ಲೋಕದ ವಿವಿಧ ವೃತ್ತಿಗಳನ್ನು ನೋಡುತ್ತಾನೆ. ಆದರೂ ಯಾವುದನ್ನೂ ನಿಂದಿಸುವುದಿಲ್ಲ. ಸಂಸರ್ಗವಿದ್ಯೆ[14]ಯಲ್ಲಿ ಅವನು ಕುಶಲನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223019a ನಾಸೂಯತ್ಯಾಗಮಂ ಕಂ ಚಿತ್ಸ್ವಂ ತಪೋ ನೋಪಜೀವತಿ[15]|

12223019c ಅವಂಧ್ಯಕಾಲೋ ವಶ್ಯಾತ್ಮಾ ತಸ್ಮಾತ್ಸರ್ವತ್ರ ಪೂಜಿತಃ||

ಅವನು ಆಗಮಗಳಲ್ಲಿ ದೋಷವನ್ನು ಹುಡುಕುವುದಿಲ್ಲ. ತನ್ನ ತಪಸ್ಸಿನಿಂದಲೇ ಜೀವನ ನಡೆಸುತ್ತಾನೆ. ಸಮಯವನ್ನು ಕಳೆಯುವುದಿಲ್ಲ. ಚಿತ್ತವನ್ನು ವಶದಲ್ಲಿಟ್ಟುಕೊಂಡಿರುತ್ತಾನೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223020a ಕೃತಶ್ರಮಃ ಕೃತಪ್ರಜ್ಞೋ ನ ಚ ತೃಪ್ತಃ ಸಮಾಧಿತಃ|

12223020c ನಿಯಮಸ್ಥೋಽಪ್ರಮತ್ತಶ್ಚ ತಸ್ಮಾತ್ಸರ್ವತ್ರ ಪೂಜಿತಃ||

ಅವನು ಆಧ್ಯಾತ್ಮವಿದ್ಯೆಗಾಗಿ ಬಹಳ ಶ್ರಮಿಸಿದ್ದಾನೆ. ಕೃತಪ್ರಜ್ಞನಾಗಿದ್ದಾನೆ. ಸಮಾಧಿಯಲ್ಲಿ ಅವನಿಗೆ ತೃಪ್ತಿಯೆನ್ನುವುದೇ ಇಲ್ಲ. ನಿಯಮಸ್ಥನು ಮತ್ತು ಅಪ್ರಮತ್ತನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223021a ಸಾಪತ್ರಪಶ್ಚ[16] ಯುಕ್ತಶ್ಚ ಸುನೇಯಃ ಶ್ರೇಯಸೇ ಪರೈಃ|

12223021c ಅಭೇತ್ತಾ ಪರಗುಹ್ಯಾನಾಂ ತಸ್ಮಾತ್ಸರ್ವತ್ರ ಪೂಜಿತಃ||

ನಾರದನು ದ್ವೇಷರಹಿತನು. ಯೋಗಯುಕ್ತನು. ಇತರರ ಶ್ರೇಯಸ್ಸಿನಲ್ಲಿಯೇ ತೊಡಗಿರುವವನು. ನೀತಿಮಾನನು ಮತ್ತು ಇನ್ನೊಬ್ಬರ ಗುಪ್ತ ವಚನವನ್ನು ಬಹಿರಂಗಪಡಿಸುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನು.

12223022a ನ ಹೃಷ್ಯತ್ಯರ್ಥಲಾಭೇಷು ನಾಲಾಭೇಷು ವ್ಯಥತ್ಯಪಿ|

12223022c ಸ್ಥಿರಬುದ್ಧಿರಸಕ್ತಾತ್ಮಾ ತಸ್ಮಾತ್ಸರ್ವತ್ರ ಪೂಜಿತಃ||

ಧನಲಾಭವಾದರೆ ಹರ್ಷಿಸುವುದಿಲ್ಲ. ನಷ್ಟವಾದಾಗ ವ್ಯಥಿಸುವುದಿಲ್ಲ. ಅನಾಸಕ್ತನಾಗಿದ್ದಾನೆ. ಸ್ಥಿರಬುದ್ಧಿಯುಳ್ಳವನಾಗಿದ್ದಾನೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.

12223023a ತಂ ಸರ್ವಗುಣಸಂಪನ್ನಂ ದಕ್ಷಂ ಶುಚಿಮಕಾತರಮ್|

12223023c ಕಾಲಜ್ಞಂ ಚ ನಯಜ್ಞಂ ಚ ಕಃ ಪ್ರಿಯಂ ನ ಕರಿಷ್ಯತಿ||

ಇಂತಹ ಸರ್ವಗುಣಸಂಪನ್ನನೂ, ದಕ್ಷನೂ, ಶುಚಿಯೂ, ನಿರ್ಭಯನೂ, ಕಾಲಜ್ಞನೂ, ನಯಜ್ಞನೂ ಆದ ಅವನನ್ನು ಯಾರುತಾನೇ ಪ್ರೀತಿಸುವುದಿಲ್ಲ?””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾಸುದೇವೋಗ್ರಸೇನಸಂವಾದೇ ತ್ರಿವಿಂಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾಸುದೇವೋಗ್ರಸೇನಸಂವಾದ ಎನ್ನುವ ಇನ್ನೂರಾಇಪ್ಪತ್ಮೂರನೇ ಅಧ್ಯಾಯವು.

[1] ಉಗ್ರಸೇನನು ಕಂಸ ಮತ್ತು ದೇವಕಿಯರ ತಂದೆ, ಕೃಷ್ಣನ ಅಜ್ಜ. ಕಂಸನನ್ನು ಕೊಂದ ನಂತರ ಕೃಷ್ಣನು ಉಗ್ರಸೇನನನ್ನೇ ಮಥುರೆಯ ರಾಜನನ್ನಾಗಿ ಅಭಿಷೇಕಿಸಿದನು.

[2] ಯಸ್ಯ (ಭಾರತ ದರ್ಶನ/ಗೀತಾ ಪ್ರೆಸ್).

[3] ದೇಹತಾಪನಃ (ಭಾರತ ದರ್ಶನ).

[4] ನಾರದರಲ್ಲಿ ಶಾಸ್ತ್ರಜ್ಞಾನ-ಸದಾಚಾರಗಳು ಒಟ್ಟಾಗಿ ನೆಲೆಸಿವೆ. ಅವುಗಳಿಂದ ಭಿನ್ನರಾಗಿ ನಾರದರಿರುವುದಿಲ್ಲ. ಆದರೆ ಶಾಸ್ತ್ರಜ್ಞಾನ-ಸದಾಚಾರಗಳೆರಡೂ ಅವರಲ್ಲಿ ಮನೆಮಾಡಿಕೊಂಡಿದ್ದರೂ ಅವರಿಗೆ ಶರೀರವನ್ನು ಪರಿತಾಪಗೊಳಿಸುವ ಅಹಂಕಾರವಿಲ್ಲ. ಈ ಕಾರಣದಿಂದಲೇ ಅವರು ಸವತ್ರ ಪೂಜ್ಯರಾಗಿದ್ದಾರೆ. (ಭಾರತ ದರ್ಶನ)

[5] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅರತಿಃ ಕ್ರೋಧಚಾಪಲ್ಯೇ ಭಯಂ ನೈತಾನಿ ನಾರದೇ| ಅದೀರ್ಘಸೂತ್ರಃ ಶೂರಶ್ಚ ತಸ್ಮಾತ್ಸರ್ವತ್ರ ಪೂಜಿತಃ|| (ಭಾರತ ದರ್ಶನ)

[6] ಉಪಾಸ್ಯೋ (ಭಾರತ ದರ್ಶನ).

[7] ಸುಶೀಲಃ ಸುಖಸಂವೇಶಃ ಸುಭೋಜಃ ಸ್ವಾದರಃ ಶುಚಿಃ| (ಭಾರತ ದರ್ಶನ)

[8] ಅವನು ಮನಸ್ಸಿಗೆ ಅನುಕೂಲವಾಗುವ ಮಾತುಗಳನ್ನಾಡುತ್ತಾನೆ. (ದಾಮೋದರ್ ಸತ್ವಾಲೇಕರ್, ಸ್ವಾಧ್ಯಾಯ ಮಂಡಲ)

[9] ಅವನು ಕಥೆಗಳನ್ನು ವಿಚಿತ್ರರೀತಿಯಲ್ಲಿ ಹೇಳುತ್ತಾನೆ. (ದಾಮೋದರ್ ಸತ್ವಾಲೇಕರ್, ಸ್ವಾಧ್ಯಾಯ ಮಂಡಲ)

[10] ಸರ್ವಭೂತೇಷು (ಭಾರತ ದರ್ಶನ).

[11] ಕಾಮಾರ್ಥೇ (ಭಾರತ ದರ್ಶನ).

[12] ಮೃದು (ಭಾರತ ದರ್ಶನ).

[13] ಚಿತ್ತಂ (ಭಾರತ ದರ್ಶನ).

[14] ಸಹವಾಸದ ಗುಣ-ದೋಷಗಳ ತಿಳುವಳಿಕೆ (ಭಾರತ ದರ್ಶನ).

[15] ಕಂಚಿತ್ಸ್ವನಯೇನೋಪಜೀವತಿ (ಭಾರತ ದರ್ಶನ).

[16] ನಾಪತ್ರಪಶ್ಚ (ಭಾರತ ದರ್ಶನ).

Comments are closed.