Shanti Parva: Chapter 216

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೬

ಬಲಿ-ವಾಸವ ಸಂವಾದ

ರಾಜ್ಯವನ್ನು ಕಳೆದುಕೊಂಡು ಕತ್ತೆಯ ರೂಪದಲ್ಲಿ ಶೂನ್ಯಗೃಹದಲ್ಲಿ ವಾಸಿಸುತ್ತಿದ್ದ ಬಲಿಚಕ್ರವರ್ತಿಯನ್ನು ಇಂದ್ರನು ಮೂದಲಿಸಿ ಮಾತನಾಡಿಸಿದುದು (1-37).

12216001 ಯುಧಿಷ್ಠಿರ ಉವಾಚ|

12216001a ಯಯಾ ಬುದ್ಧ್ಯಾ ಮಹೀಪಾಲೋ ಭ್ರಷ್ಟಶ್ರೀರ್ವಿಚರೇನ್ಮಹೀಮ್|

12216001c ಕಾಲದಂಡವಿನಿಷ್ಪಿಷ್ಟಸ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಕಾಲದಂಡದ ಹುಡಿತಕ್ಕೆ ಪುಡಿಪುಡಿಯಾಗಿ ರಾಜ್ಯವನ್ನು ಕಳೆದುಕೊಂಡ ಮಹೀಪಾಲನು ಯಾವ ಬುದ್ಧಿಯಿಂದ ಮಹಿಯಲ್ಲಿ ವಿಚರಿಸಬಹುದು ಎನ್ನುವುದನ್ನು ಹೇಳು.”

12216002 ಭೀಷ್ಮ ಉವಾಚ|

12216002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12216002c ವಾಸವಸ್ಯ ಚ ಸಂವಾದಂ ಬಲೇರ್ವೈರೋಚನಸ್ಯ ಚ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ವಾಸವ ಮತ್ತು ಬಲಿ ವೈರೋಚನರ ಸಂವಾದವನ್ನು ಉದಾಹರಿಸುತ್ತಾರೆ.

12216003a ಪಿತಾಮಹಮುಪಾಗತ್ಯ ಪ್ರಣಿಪತ್ಯ ಕೃತಾಂಜಲಿಃ|

12216003c ಸರ್ವಾನೇವಾಸುರಾನ್ ಜಿತ್ವಾ ಬಲಿಂ ಪಪ್ರಚ್ಚ ವಾಸವಃ||

ಸರ್ವ ಅಸುರರನ್ನೂ ಬಲಿಯನ್ನೂ ಗೆದ್ದು ವಾಸವನು ಪಿತಾಮಹನ ಬಳಿಬಂದು ನಮಸ್ಕರಿಸಿ ಕೃತಾಂಜಲಿಯಾಗಿ ಕೇಳಿದನು:

12216004a ಯಸ್ಯ ಸ್ಮ ದದತೋ ವಿತ್ತಂ ನ ಕದಾ ಚನ ಹೀಯತೇ|

12216004c ತಂ ಬಲಿಂ ನಾಧಿಗಚ್ಚಾಮಿ ಬ್ರಹ್ಮನ್ನಾಚಕ್ಷ್ವ ಮೇ ಬಲಿಮ್||

“ಬ್ರಹ್ಮನ್! ಎಷ್ಟು ದಾನವನ್ನಿತ್ತರೂ ಯಾರ ಬೊಕ್ಕಸವು ಬರಿದಾಗುತ್ತಿರಲಿಲ್ಲವೋ ಆ ಬಲಿಯನ್ನು ನಾನು ಕಾಣುತ್ತಿಲ್ಲ. ಬಲಿಯು ಎಲ್ಲಿರುವನೆಂದು ಹೇಳು.

12216005a ಸ ಏವ ಹ್ಯಸ್ತಮಯತೇ ಸ ಸ್ಮ ವಿದ್ಯೋತತೇ ದಿಶಃ|

12216005c ಸ ವರ್ಷತಿ ಸ್ಮ ವರ್ಷಾಣಿ ಯಥಾಕಾಲಮತಂದ್ರಿತಃ|

12216005e ತಂ ಬಲಿಂ ನಾಧಿಗಚ್ಚಾಮಿ ಬ್ರಹ್ಮನ್ನಾಚಕ್ಷ್ವ ಮೇ ಬಲಿಮ್||

ಅವನೇ ಅಸ್ತನಾಗುತ್ತಿದ್ದನು. ಅವನೇ ದಿಕ್ಕುಗಳನ್ನು ಬೆಳಗಿಸುತ್ತಿದ್ದನು. ಆಲಸ್ಯರಹಿತನಾಗಿ ಅವನು ಯಥಾಕಾಲದಲ್ಲಿ ಮಳೆಗಳನ್ನು ಸುರಿಸುತ್ತಿದ್ದನು. ಆ ಬಲಿಯನ್ನು ನಾನು ಕಾಣದಂತಾಗಿದ್ದೇನೆ. ಬ್ರಹ್ಮನ್! ಬಲಿಯು ಎಲ್ಲಿರುವನೆಂದು ಹೇಳು.

12216006a ಸ ವಾಯುರ್ವರುಣಶ್ಚೈವ ಸ ರವಿಃ ಸ ಚ ಚಂದ್ರಮಾಃ|

12216006c ಸೋಽಗ್ನಿಸ್ತಪತಿ ಭೂತಾನಿ ಪೃಥಿವೀ ಚ ಭವತ್ಯುತ|

12216006e ತಂ ಬಲಿಂ ನಾಧಿಗಚ್ಚಾಮಿ ಬ್ರಹ್ಮನ್ನಾಚಕ್ಷ್ವ ಮೇ ಬಲಿಮ್||

ಅವನೇ ವಾಯುವಾಗಿದ್ದನು. ವರುಣನೂ ಅವನೇ ಆಗಿದ್ದನು. ರವಿ ಮತ್ತು ಚಂದ್ರಮರೂ ಅವನೇ ಆಗಿದ್ದನು. ಅವನೇ ಅಗ್ನಿಯಾಗಿ ಭೂತಗಳನ್ನು ಸುಡುತ್ತಿದ್ದನು ಮತ್ತು ಪೃಥ್ವಿಯೂ ಅವನೇ ಆಗಿದ್ದನು. ಆ ಬಲಿಯನ್ನು ನಾನು ಕಾಣುತ್ತಿಲ್ಲ. ಬ್ರಹ್ಮನ್! ಬಲಿಯು ಎಲ್ಲಿರುವನೆಂದು ಹೇಳು.”

12216007 ಬ್ರಹ್ಮೋವಾಚ|

12216007a ನೈತತ್ತೇ ಸಾಧು ಮಘವನ್ಯದೇತದನುಪೃಚ್ಚಸಿ|

12216007c ಪೃಷ್ಟಸ್ತು ನಾನೃತಂ ಬ್ರೂಯಾತ್ತಸ್ಮಾದ್ವಕ್ಷ್ಯಾಮಿ ತೇ ಬಲಿಮ್||

ಬ್ರಹ್ಮನು ಹೇಳಿದನು: “ಮಘವನ್! ನೀನು ಹೀಗೆ ಕೇಳುವುದು ಸರಿಯಲ್ಲ. ಆದರೂ ಕೇಳಿದಾಗ ಸುಳ್ಳನ್ನು ಹೇಳಬಾರದು. ಆದುದರಿಂದ ನಿನಗೆ ಬಲಿಯಲ್ಲಿರುವನೆಂದು ಹೇಳಿಬಿಡುತ್ತೇನೆ.

12216008a ಉಷ್ಟ್ರೇಷು ಯದಿ ವಾ ಗೋಷು ಖರೇಷ್ವಶ್ವೇಷು ವಾ ಪುನಃ|

12216008c ವರಿಷ್ಠೋ ಭವಿತಾ ಜಂತುಃ ಶೂನ್ಯಾಗಾರೇ ಶಚೀಪತೇ||

ಶಚೀಪತೇ! ಯಾವುದಾದರೂ ಒಂದು ಶೂನ್ಯಗೃಹದಲ್ಲಿರುವ ಒಂಟೆ, ಹಸು, ಕತ್ತೆ ಅಥವಾ ಕುದುರೆ ಈ ಜಾತಿಯ ಪ್ರಾಣಿಗಳಲ್ಲಿ ಶ್ರೇಷ್ಠವಾದ ಯಾವುದಾದರೂ ಒಂದು ಬಲಿ ಎಂದು ತಿಳಿ.”

12216009 ಶಕ್ರ ಉವಾಚ|

12216009a ಯದಿ ಸ್ಮ ಬಲಿನಾ ಬ್ರಹ್ಮನ್ ಶೂನ್ಯಾಗಾರೇ ಸಮೇಯಿವಾನ್|

12216009c ಹನ್ಯಾಮೇನಂ ನ ವಾ ಹನ್ಯಾಂ ತದ್ಬ್ರಹ್ಮನ್ನನುಶಾಧಿ ಮಾಮ್||

ಶಕ್ರನು ಹೇಳಿದನು: “ಬ್ರಹ್ಮನ್! ಶೂನ್ಯಾಗಾರದಲ್ಲಿರುವ ಬಲಿಯನ್ನು ನಾನು ಭೇಟಿಮಾಡಿದಾಗ ಅವನನ್ನು ನಾನು ಕೊಲ್ಲಬೇಕೇ ಅಥವಾ ಕೊಲ್ಲಬಾರದೇ ಎನ್ನುವುದನ್ನು ನನಗೆ ಉಪದೇಶಿಸು.”

12216010 ಬ್ರಹ್ಮೋವಾಚ|

12216010a ಮಾ ಸ್ಮ ಶಕ್ರ ಬಲಿಂ ಹಿಂಸೀರ್ನ ಬಲಿರ್ವಧಮರ್ಹತಿ|

12216010c ನ್ಯಾಯಾಂಸ್ತು ಶಕ್ರ ಪ್ರಷ್ಟವ್ಯಸ್ತ್ವಯಾ ವಾಸವ ಕಾಮ್ಯಯಾ||

ಬ್ರಹ್ಮನು ಹೇಳಿದನು: “ಶಕ್ರ! ಬಲಿಯನ್ನು ನೀನು ಹಿಂಸಿಸಬಾರದು. ಬಲಿಯು ವಧಾರ್ಹನಲ್ಲ. ಶಕ್ರ! ವಾಸವ! ನೀನು ಅವನಲ್ಲಿ ತತ್ತ್ವಗಳ ಕುರಿತು ಬೇಕಾದ್ದನ್ನು ಕೇಳಬಹುದು.””

12216011 ಭೀಷ್ಮ ಉವಾಚ|

12216011a ಏವಮುಕ್ತೋ ಭಗವತಾ ಮಹೇಂದ್ರಃ ಪೃಥಿವೀಂ ತದಾ|

12216011c ಚಚಾರೈರಾವತಸ್ಕಂಧಮಧಿರುಹ್ಯ ಶ್ರಿಯಾ ವೃತಃ||

ಭೀಷ್ಮನು ಹೇಳಿದನು: “ಭಗವಂತನು ಹೀಗೆ ಹೇಳಲು ಮಹೇಂದ್ರನು ಐರಾವತದ ಹೆಗಲನ್ನೇರಿ ಶ್ರೀಯಿಂದ ಆವೃತನಾಗಿ ಬಲಿಯನ್ನು ಹುಡುಕುತ್ತಾ ಸಂಚರಿಸತೊಡಗಿದನು.

12216012a ತತೋ ದದರ್ಶ ಸ ಬಲಿಂ ಖರವೇಷೇಣ ಸಂವೃತಮ್|

12216012c ಯಥಾಖ್ಯಾತಂ ಭಗವತಾ ಶೂನ್ಯಾಗಾರಕೃತಾಲಯಮ್||

ಅನಂತರ ಅವನು ಭಗವಂತನು ಹೇಳಿದ್ದಂತೆ ಶೂನ್ಯಾಗಾರವೊಂದರಲ್ಲಿ ವಾಸಿಸುತ್ತಿದ್ದ ಕತ್ತೆಯ ವೇಷದಲ್ಲಿದ್ದ ಬಲಿಯನ್ನು ಕಂಡನು.

12216013 ಶಕ್ರ ಉವಾಚ|

12216013a ಖರಯೋನಿಮನುಪ್ರಾಪ್ತಸ್ತುಷಭಕ್ಷೋಽಸಿ ದಾನವ|

12216013c ಇಯಂ ತೇ ಯೋನಿರಧಮಾ ಶೋಚಸ್ಯಾಹೋ ನ ಶೋಚಸಿ||

ಶಕ್ರನು ಹೇಳಿದನು: “ದಾನವ! ನೀನು ಕತ್ತೆಯ ಯೋನಿಯನ್ನು ಪಡೆದು ಧಾನ್ಯದ ಹೊಟ್ಟನ್ನು ತಿನ್ನುತ್ತಿರುವೆ! ಇಂತಹ ಅಧಮ ಯೋನಿಯಲ್ಲಿದ್ದುಕೊಂಡೂ ನೀನು ಶೋಕಿಸುತ್ತಿರುವೆಯೋ ಅಥವಾ ಶೋಕಿಸುವುದಿಲ್ಲವೋ?

12216014a ಅದೃಷ್ಟಂ ಬತ ಪಶ್ಯಾಮಿ ದ್ವಿಷತಾಂ ವಶಮಾಗತಮ್|

12216014c ಶ್ರಿಯಾ ವಿಹೀನಂ ಮಿತ್ರೈಶ್ಚ ಭ್ರಷ್ಟವೀರ್ಯಪರಾಕ್ರಮಮ್||

ಮೊದಲೆಂದೂ ನೋಡಿರದ ನಿನ್ನ ಈ ಅವಸ್ಥೆಯನ್ನು ನಾನು ನೋಡುತ್ತಿದ್ದೇನೆ[1]. ಶತ್ರುಗಳ ವಶನಾಗಿದ್ದೀಯೆ. ಸಂಪತ್ತು ಮತ್ತು ಮಿತ್ರರಿಂದ ವಿಹೀನನಾಗಿದ್ದೀಯೆ. ವೀರ್ಯ-ಪರಾಕ್ರಮಗಳನ್ನು ಕಳೆದುಕೊಂಡಿದ್ದೀಯೆ.

12216015a ಯತ್ತದ್ಯಾನಸಹಸ್ರೇಣ ಜ್ಞಾತಿಭಿಃ ಪರಿವಾರಿತಃ|

12216015c ಲೋಕಾನ್ಪ್ರತಾಪಯನ್ಸರ್ವಾನ್ಯಾಸ್ಯಸ್ಮಾನವಿತರ್ಕಯನ್||

ಮೊದಲು ನೀನು ನಿನ್ನ ಸಹಸ್ರ ವಾಹನಗಳು ಮತ್ತು ಸಜಾತೀಯ ಬಂಧುಗಳಿಂದ ಪರಿವೃತನಾಗಿ ಲೋಕಗಳನ್ನು ತಾಪಗೊಳಿಸುತ್ತಾ ನಮ್ಮನ್ನು ಕಡೆಗಾಣಿಸಿ ಸಂಚರಿಸುತ್ತಿದ್ದೆ.

12216016a ತ್ವನ್ಮುಖಾಶ್ಚೈವ ದೈತೇಯಾ ವ್ಯತಿಷ್ಠಂಸ್ತವ ಶಾಸನೇ|

12216016c ಅಕೃಷ್ಟಪಚ್ಯಾ ಪೃಥಿವೀ ತವೈಶ್ವರ್ಯೇ ಬಭೂವ ಹ|

12216016e ಇದಂ ಚ ತೇಽದ್ಯ ವ್ಯಸನಂ ಶೋಚಸ್ಯಾಹೋ ನ ಶೋಚಸಿ||

ದೈತ್ಯರೆಲ್ಲರೂ ನಿನ್ನ ಮುಖವನ್ನೇ ನೋಡುತ್ತಾ ನಿನ್ನದೇ ಶಾಸದಡಿಯಲ್ಲಿರುತ್ತಿದ್ದರು. ನಿನ್ನ ಶಾಸನದಲ್ಲಿ ಭೂಮಿಯು ಕೃಷಿಯಿಲ್ಲದೇ ಪೈರನ್ನು ಕೊಡುತ್ತಿತ್ತು. ಆದರೆ ಇಂದು ನೀನು ವ್ಯಸನದಲ್ಲಿ ಸಿಲುಕಿದ್ದೀಯೆ. ಇದರ ಕುರಿತು ನೀನು ಶೋಕಿಸುತ್ತಿರುವೆಯೋ ಅಥವಾ ಶೋಕಿಸುತ್ತಿಲ್ಲವೋ?

12216017a ಯದಾತಿಷ್ಠಃ ಸಮುದ್ರಸ್ಯ ಪೂರ್ವಕೂಲೇ ವಿಲೇಲಿಹನ್|

12216017c ಜ್ಞಾತಿಭ್ಯೋ ವಿಭಜನ್ವಿತ್ತಂ ತದಾಸೀತ್ತೇ ಮನಃ ಕಥಮ್||

ಯಾವಾಗ ನೀನು ಸಮುದ್ರದ ಪೂರ್ವತೀರದಲ್ಲಿ ವಿವಿಧ ಭೋಗಗಳನ್ನು ಆಸ್ವಾದಿಸುತ್ತಾ, ನಿನ್ನ ಕುಟುಂಬದವರಿಗೆ ಐಶ್ವರ್ಯವನ್ನು ಹಂಚಿಕೊಡುತ್ತಿದ್ದೆಯೋ ಆಗ ನಿನ್ನ ಮನಸ್ಸು ಹೇಗಿದ್ದಿರಬಹುದು!

12216018a ಯತ್ತೇ ಸಹಸ್ರಸಮಿತಾ ನನೃತುರ್ದೇವಯೋಷಿತಃ|

12216018c ಬಹೂನಿ ವರ್ಷಪೂಗಾನಿ ವಿಹಾರೇ ದೀಪ್ಯತಃ ಶ್ರಿಯಾ||

12216019a ಸರ್ವಾಃ ಪುಷ್ಕರಮಾಲಿನ್ಯಃ ಸರ್ವಾಃ ಕಾಂಚನಸಪ್ರಭಾಃ|

12216019c ಕಥಮದ್ಯ ತದಾ ಚೈವ ಮನಸ್ತೇ ದಾನವೇಶ್ವರ||

ದಾನವೇಶ್ವರ! ನೀನು ಅನೇಕ ವರ್ಷಗಳ ಕಾಲ ರಾಜ್ಯಲಕ್ಷ್ಮಿಯಿಂದ ಸುಶೋಭಿತನಾಗಿ ವಿಹರಿಸುತ್ತಿದ್ದೆ. ಆಗ ಕಾಂಚನಪ್ರಭೆಯ ಸಹಸ್ರಾರು ದೇವಾಂಗನೆಯರು – ಎಲ್ಲರೂ ಪದ್ಮಮಾಲೆಗಳನ್ನು ಧರಿಸಿ – ನಿನ್ನ ಎದಿರು ನರ್ತಿಸುತ್ತಿದ್ದರು. ಆಗ ಮತ್ತು ಈಗ ನಿನ್ನ ಮನಃಸ್ಥಿತಿಯು ಹೇಗಿರಬಹುದು?

12216020a ಚತ್ರಂ ತವಾಸೀತ್ಸುಮಹತ್ಸೌವರ್ಣಂ ಮಣಿಭೂಷಿತಮ್|

12216020c ನನೃತುರ್ಯತ್ರ ಗಂಧರ್ವಾಃ ಷಟ್ಸಹಸ್ರಾಣಿ ಸಪ್ತಧಾ||

ಆಗ ಮಹಾ ಸುವರ್ಣ-ಮಣಿಭೂಷಿತ ಚತ್ರವು ನಿನ್ನ ತಲೆಯ ಮೇಲೆ ಕಂಗೊಳಿಸುತ್ತಿತ್ತು. ಆರು ಸಾವಿರ ಗಂಧರ್ವರು ಸಪ್ತಸ್ವರಗಳಲ್ಲಿ ಹಾಡುತ್ತಾ ನರ್ತಿಸುತ್ತಿದ್ದರು.

12216021a ಯೂಪಸ್ತವಾಸೀತ್ಸುಮಹಾನ್ಯಜತಃ ಸರ್ವಕಾಂಚನಃ|

12216021c ಯತ್ರಾದದಃ ಸಹಸ್ರಾಣಾಮಯುತಾನಿ ಗವಾಂ ದಶ[2]||

ನೀನು ಯಜ್ಞಮಾಡುತ್ತಿದ್ದಾಗ ದೊಡ್ಡ ದೊಡ್ಡ ಸರ್ವಕಾಂಚನಮಯ ಯೂಪಸ್ತಂಭವಿರುತ್ತಿತ್ತು. ಆಗ ನೀನು ಹತ್ತು-ಹತ್ತು ಕೋಟಿ ಹಸುಗಳನ್ನು ದಾನಮಾಡುತ್ತಿದ್ದೆ.

12216022a ಯದಾ ತು ಪೃಥಿವೀಂ ಸರ್ವಾಂ ಯಜಮಾನೋಽನುಪರ್ಯಯಾಃ|

12216022c ಶಮ್ಯಾಕ್ಷೇಪೇಣ ವಿಧಿನಾ ತದಾಸೀತ್ಕಿಂ ನು ತೇ ಹೃದಿ||

ಹಿಂದೆ ನೀನು ಶಮ್ಯಾಕ್ಷೇಪವಿಧಿಯಿಂದ ಯಜ್ಞಮಾಡಲು ಸಂಕಲ್ಪಿಸಿ ಯಜ್ಞದ ಯಜಮಾನನಾಗಿ ಅಖಂಡ ಭೂಮಂಡಲವನ್ನೇ ಸಂಚರಿಸಿದೆ. ಆಗ ನಿನ್ನ ಹೃದಯದಲ್ಲಿ ಎಂತಹ ಉತ್ಸಾಹವಿದ್ದಿತ್ತು!

12216023a ನ ತೇ ಪಶ್ಯಾಮಿ ಭೃಂಗಾರಂ ನ ಚತ್ರಂ ವ್ಯಜನಂ ನ ಚ|

12216023c ಬ್ರಹ್ಮದತ್ತಾಂ ಚ ತೇ ಮಾಲಾಂ ನ ಪಶ್ಯಾಮ್ಯಸುರಾಧಿಪ||

ಅಸುರಾಧಿಪ! ಈಗ ನಿನ್ನ ಬಳಿ ಚಿನ್ನದ ಗಿಂಡಿಯನ್ನಾಗಲೀ, ಚತ್ರ-ಚಾಮರಗಳನ್ನಾಗಲೀ, ಬ್ರಹ್ಮನು ಕೊಟ್ಟಿದ್ದ ಮಾಲೆಯನ್ನಾಗಲೀ ನಾನು ಕಾಣುತ್ತಿಲ್ಲ!”

[3]12216024 ಬಲಿರುವಾಚ|

12216024a ನ ತ್ವಂ ಪಶ್ಯಸಿ ಭೃಂಗಾರಂ ನ ಚತ್ರಂ ವ್ಯಜನಂ ನ ಚ|

12216024c ಬ್ರಹ್ಮದತ್ತಾಂ ಚ ಮೇ ಮಾಲಾಂ ನ ತ್ವಂ ದ್ರಕ್ಷ್ಯಸಿ ವಾಸವ||

ಬಲಿಯು ಹೇಳಿದನು: “ವಾಸವ! ನೀನು ಇಂದು ನನ್ನಲ್ಲಿ ಚಿನ್ನದ ಗಿಂಡಿಯನ್ನಾಗಲೀ, ಚತ್ರ-ಚಾಮರಗಳನ್ನಾಗಲೀ, ಬ್ರಹ್ಮನು ಕೊಟ್ಟಿದ್ದ ಮಾಲೆಯನ್ನಾಗಲೀ ಕಾಣುತ್ತಿಲ್ಲ.

12216025a ಗುಹಾಯಾಂ ನಿಹಿತಾನಿ ತ್ವಂ ಮಮ ರತ್ನಾನಿ ಪೃಚ್ಚಸಿ|

12216025c ಯದಾ ಮೇ ಭವಿತಾ ಕಾಲಸ್ತದಾ ತ್ವಂ ತಾನಿ ದ್ರಕ್ಷ್ಯಸಿ||

ನೀನು ಕೇಳಿದ ಎಲ್ಲ ರತ್ನಗಳೂ ಗುಹೆಯಲ್ಲಿ ಸುರಕ್ಷಿತವಾಗಿವೆ. ನನಗೆ ಕಾಲಬಂದೊದಗಿದಾಗ ನೀನು ಅವುಗಳನ್ನು ನೋಡುವೆಯಂತೆ.

12216026a ನ ತ್ವೇತದನುರೂಪಂ ತೇ ಯಶಸೋ ವಾ ಕುಲಸ್ಯ ವಾ|

12216026c ಸಮೃದ್ಧಾರ್ಥೋಽಸಮೃದ್ಧಾರ್ಥಂ ಯನ್ಮಾಂ ಕತ್ಥಿತುಮಿಚ್ಚಸಿ||

ಸಮೃದ್ಧಶಾಲಿಯಾಗಿರುವ ನೀನು ಸಮೃದ್ಧಿಯನ್ನು ಕಳೆದುಕೊಂಡಿರುವ ನನ್ನ ಎದಿರು ಹೀಗೆ ಕೊಚ್ಚಿಕೊಳ್ಳುವುದು ನಿನ್ನ ಯಶಸ್ಸು ಮತ್ತು ಕುಲಕ್ಕೆ ಅನುರೂಪವಾಗಿಲ್ಲ.

12216027a ನ ಹಿ ದುಃಖೇಷು ಶೋಚಂತಿ ನ ಪ್ರಹೃಷ್ಯಂತಿ ಚರ್ದ್ಧಿಷು|

12216027c ಕೃತಪ್ರಜ್ಞಾ ಜ್ಞಾನತೃಪ್ತಾಃ ಕ್ಷಾಂತಾಃ ಸಂತೋ ಮನೀಷಿಣಃ||

ಕೃತಪ್ರಜ್ಞ ಮತ್ತು ಜ್ಞಾನತೃಪ್ತ ಕ್ಷಮಾಶೀಲ ಸಂತ ಮನೀಷಿಣರು ದುಃಖಬಂದಾಗ ಶೋಕಿಸುವುದಿಲ್ಲ ಮತ್ತು ವೃದ್ಧಿಯಾಗುತ್ತಿರುವಾಗ ಹರ್ಷಿಸುವುದಿಲ್ಲ.

12216028a ತ್ವಂ ತು ಪ್ರಾಕೃತಯಾ ಬುದ್ಧ್ಯಾ ಪುರಂದರ ವಿಕತ್ಥಸೇ|

12216028c ಯದಾಹಮಿವ ಭಾವೀ ತ್ವಂ ತದಾ ನೈವಂ ವದಿಷ್ಯಸಿ||

ಪುರಂದರ! ನೀನಾದರೋ ಅಶುದ್ಧ ಬುದ್ಧಿಯಿಂದ ಆತ್ಮಪ್ರಶಂಸೆಮಾಡಿಕೊಳ್ಳುತ್ತಿರುವೆ. ನನ್ನದಂತಹ ಸ್ಥಿತಿಯು ನಿನ್ನದೂ ಆದಾಗ ನೀನು ಈ ರೀತಿ ಮಾತನಾಡುವುದಿಲ್ಲ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಬಲಿವಾಸವಸಂವಾದೋ ನಾಮ ಷೋಡಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಬಲಿವಾಸವಸಂವಾದ ಎನ್ನುವ ಇನ್ನೂರಾಹದಿನಾರನೇ ಅಧ್ಯಾಯವು.

[1] ಇದೂವರೆಗೆ ನೀನು ನನ್ನ ಕಣ್ಣಿಗೇ ಬಿದ್ದಿರಲಿಲ್ಲ (ಭಾರತ ದರ್ಶನ).

[2] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಅನಂತರಂ ಸಹಸ್ರೇಣ ತದಾಽಽಸಿದ್ದೈತ್ಯ ಕಾ ಮತಿಃ| (ಭಾರತ ದರ್ಶನ/ಗೀತಾ ಪ್ರೆಸ್).

[3] ದಕ್ಷಿಣಾತ್ಯಪಾಠದಲ್ಲಿ ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಭೀಷ್ಮ ಉವಾಚ| ತತಃ ಪ್ರಹಸ್ಯ ಸ ಬಲಿರ್ವಾಸವೇನ ಸಮೀರಿತಮ್| ನಿಶಮ್ಯ ಭಾವಗಂಭೀರಂ ಸುರರಾಜಮಥಾಬ್ರವೀತ್|| ಬಲಿರುವಾಚ| ಅಹೋ ಹಿ ತವ ಬಾಲಿಶ್ಯಮಿಹ ದೇವಗಣಾಧಿಪ| ಅಯುಕ್ತಂ ದೇವರಾಜಸ್ಯ ತವ ಕಷ್ಟಮಿದಂ ವಚಃ|| (ಗೀತಾ ಪ್ರೆಸ್).

Comments are closed.