Shanti Parva: Chapter 215

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೫

ಇಂದ್ರ-ಪ್ರಹ್ರಾದ ಸಂವಾದ

ಮನುಷ್ಯನು ಶುಭಾಶುಭ ಕರ್ಮಗಳ ಕರ್ತೃವೋ ಅಥವಾ ಅಲ್ಲವೋ ಎನ್ನುವುದರ ಕುರಿತಾದ ಇಂದ್ರ-ಪ್ರಹ್ರಾದರ ಸಂವಾದ (1-37).

[1]12215001 ಯುಧಿಷ್ಠಿರ ಉವಾಚ|

12215001a ಯದಿದಂ ಕರ್ಮ ಲೋಕೇಽಸ್ಮಿನ್ಶುಭಂ ವಾ ಯದಿ ವಾಶುಭಮ್|

12215001c ಪುರುಷಂ ಯೋಜಯತ್ಯೇವ ಫಲಯೋಗೇನ ಭಾರತ||

ಯುಧಿಷ್ಠಿರನು ಹೇಳಿದನು: “ಭಾರತ! ಈ ಲೋಕದಲ್ಲಿ ನಡೆಯುವ ಶುಭಾಶುಭ ಕರ್ಮಗಳು ಮನುಷ್ಯನನ್ನು ಫಲಭೋಗದಲ್ಲಿ ನಿಯೋಜಿಸುತ್ತವೆ.

12215002a ಕರ್ತಾ ಸ್ವಿತ್ತಸ್ಯ ಪುರುಷ ಉತಾಹೋ ನೇತಿ ಸಂಶಯಃ|

12215002c ಏತದಿಚ್ಚಾಮಿ ತತ್ತ್ವೇನ ತ್ವತ್ತಃ ಶ್ರೋತುಂ ಪಿತಾಮಹ||

ಪಿತಾಮಹ! ಆದರೆ ಮನುಷ್ಯನು ಈ ಕರ್ಮಗಳ ಕರ್ತೃವು ಹೌದೋ ಅಥವಾ ಅಲ್ಲವೋ ಎಂದು ಸಂಶಯವಾಗುತ್ತಿದೆ. ಇದರ ಕುರಿತಾಗಿ ತತ್ತ್ವತಃ ನಿನ್ನಿಂದ ತಿಳಿಯ ಬಯಸುತ್ತೇನೆ.”

12215003 ಭೀಷ್ಮ ಉವಾಚ|

12215003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12215003c ಪ್ರಹ್ರಾದಸ್ಯ ಚ ಸಂವಾದಮಿಂದ್ರಸ್ಯ ಚ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಪ್ರಹ್ರಾದ ಮತ್ತು ಇಂದ್ರರ ಈ ಸಂವಾದವನ್ನು ಉದಾಹರಿಸುತ್ತಾರೆ.

12215004a ಅಸಕ್ತಂ ಧೂತಪಾಪ್ಮಾನಂ ಕುಲೇ ಜಾತಂ ಬಹುಶ್ರುತಮ್|

12215004c ಅಸ್ತಂಭಮನಹಂಕಾರಂ ಸತ್ತ್ವಸ್ಥಂ ಸಮಯೇ ರತಮ್||

12215005a ತುಲ್ಯನಿಂದಾಸ್ತುತಿಂ ದಾಂತಂ ಶೂನ್ಯಾಗಾರನಿವೇಶನಮ್|

12215005c ಚರಾಚರಾಣಾಂ ಭೂತಾನಾಂ ವಿದಿತಪ್ರಭವಾಪ್ಯಯಮ್||

12215006a ಅಕ್ರುಧ್ಯಂತಮಹೃಷ್ಯಂತಮಪ್ರಿಯೇಷು ಪ್ರಿಯೇಷು ಚ|

12215006c ಕಾಂಚನೇ ವಾಥ ಲೋಷ್ಟೇ ವಾ ಉಭಯೋಃ ಸಮದರ್ಶನಮ್||

12215007a ಆತ್ಮನಿಃಶ್ರೇಯಸಜ್ಞಾನೇ ಧೀರಂ ನಿಶ್ಚಿತನಿಶ್ಚಯಮ್|

12215007c ಪರಾವರಜ್ಞಂ ಭೂತಾನಾಂ ಸರ್ವಜ್ಞಂ ಸಮದರ್ಶನಮ್||

[2]12215008a ಶಕ್ರಃ ಪ್ರಹ್ರಾದಮಾಸೀನಮೇಕಾಂತೇ ಸಂಯತೇಂದ್ರಿಯಮ್|

12215008c ಬುಭುತ್ಸಮಾನಸ್ತತ್ ಪ್ರಜ್ಞಾಮಭಿಗಮ್ಯೇದಮಬ್ರವೀತ್||

ಅಸಕ್ತನೂ, ಪಾಪಗಳನ್ನು ತೊಳೆದುಕೊಂಡವನೂ, ಕುಲೀನನೂ, ವಿದ್ವಾಂಸನೂ, ಮಮಕಾರ-ಅಹಂಕಾರರಹಿತನೂ, ಸತ್ತ್ವದಲ್ಲಿಯೇ ನೆಲೆಸಿದವನೂ, ಧರ್ಮದ ಮರ್ಯಾದೆಯನ್ನು ಪಾಲಿಸುವುದರಲ್ಲಿ ತತ್ಪರನೂ, ಸ್ತುತಿ-ನಿಂದೆಗಳನ್ನು ಸಮನಾಗಿ ಕಾಣುವವನೂ, ಮನಸ್ಸು-ಇಂದ್ರಿಯಗಳನ್ನು ನಿಗ್ರಹಿಸಿದ ದಾಂತನೂ, ಚರಾಚರಭೂತಗಳ ಉತ್ಪತ್ತಿ-ಲಯಗಳನ್ನು ತಿಳಿದವನೂ, ಪ್ರಿಯ-ಅಪ್ರಿಯಗಳ ಕುರಿತು ಹರ್ಷ-ಕ್ರೋಧಗಳನ್ನು ತಾಳದವನೂ, ಏಕಾಂತಗೃಹದಲ್ಲಿ ವಾಸಿಸುತ್ತಿದ್ದವನೂ, ಚಿನ್ನ-ಮಣ್ಣುಹೆಂಟೆಗಳೆರಡನ್ನೂ ಸಮನಾಗಿ ಕಾಣುವವನೂ, ಆನಂದಮಯ ಆತ್ಮಜ್ಞಾನದಲ್ಲಿ ನಿತ್ಯನಿಶ್ಚಯವುಳ್ಳವನೂ, ಧೀರನೂ, ಪ್ರಾಣಿಗಳ ಭೂತ-ಭವಿಷ್ಯಗಳನ್ನು ತಿಳಿದವನೂ, ಸರ್ವಜ್ಞನೂ, ಸಮದರ್ಶನನೂ, ಸಂಯತೇಂದ್ರಿಯನೂ ಆದ ಪ್ರಹ್ರಾದನು ಏಕಾಂತದಲ್ಲಿ ಕುಳಿತುಕೊಂಡಿರಲು, ಅವನ ಬುದ್ಧಿ-ವಿಚಾರಗಳನ್ನು ತಿಳಿಯಲೋಸುಗ ಶಕ್ರನು ಅವನ ಬಳಿಸಾರಿ ಇಂತೆಂದನು:

12215009a ಯೈಃ ಕೈಶ್ಚಿತ್ಸಂಮತೋ ಲೋಕೇ ಗುಣೈಃ ಸ್ಯಾತ್ಪುರುಷೋ ನೃಷು|

12215009c ಭವತ್ಯನಪಗಾನ್ಸರ್ವಾಂಸ್ತಾನ್ಗುಣಾಽಲ್ಲಕ್ಷಯಾಮಹೇ||

“ಲೋಕದ ಜನರು ಪುರುಷನ ಯಾವ ಗುಣಗಳನ್ನು ಸಮ್ಮಾನಿಸುತ್ತಾರೋ ಆ ಎಲ್ಲ ಗುಣಗಳೂ ನಿನ್ನಲ್ಲಿ ಸ್ಥಿರಗೊಂಡಿರುವುದನ್ನು ನಾನು ನೋಡುತ್ತಿದ್ದೇನೆ.

12215010a ಅಥ ತೇ ಲಕ್ಷ್ಯತೇ ಬುದ್ಧಿಃ ಸಮಾ ಬಾಲಜನೈರಿಹ|

12215010c ಆತ್ಮಾನಂ ಮನ್ಯಮಾನಃ ಸನ್ ಶ್ರೇಯಃ ಕಿಮಿಹ ಮನ್ಯಸೇ||

ಆತ್ಮಾನುಭವವನ್ನು ಪಡೆದಿರುವ ನಿನ್ನ ಬುದ್ಧಿಯು ಬಾಲಜನರ ಬುದ್ಧಿಯಂತೆ ತೋರುತ್ತದೆ. ನೀನು ಯಾವುದನ್ನು ಶ್ರೇಯಸ್ಕರವೆಂದು ಮನ್ನಿಸುತ್ತೀಯೆ?

12215011a ಬದ್ಧಃ ಪಾಶೈಶ್ಚ್ಯುತಃ ಸ್ಥಾನಾದ್ದ್ವಿಷತಾಂ ವಶಮಾಗತಃ|

12215011c ಶ್ರಿಯಾ ವಿಹೀನಃ ಪ್ರಹ್ರಾದ ಶೋಚಿತವ್ಯೇ ನ ಶೋಚಸಿ||

ಪ್ರಹ್ರಾದ! ಪಾಶಗಳಿಂದ ಬಂಧಿತನಾಗಿರುವೆ. ಚಕ್ರವರ್ತಿಯ ಸ್ಥಾನದಿಂದ ಚ್ಯುತನಾಗಿದ್ದೀಯೆ. ಶತ್ರುಗಳ ವಶನಾಗಿದ್ದೀಯೆ. ಸಂಪತ್ತಿನಿಂದ ವಿಹೀನನಾಗಿದ್ದೀಯೆ. ಶೋಕಿಸಬೇಕಾದ ಪರಿಸ್ಥಿತಿಯಲ್ಲಿದ್ದರೂ ನೀನು ಶೋಕಿಸುತ್ತಿಲ್ಲ!

12215012a ಪ್ರಜ್ಞಾಲಾಭಾತ್ತು ದೈತೇಯ ಉತಾಹೋ ಧೃತಿಮತ್ತಯಾ|

12215012c ಪ್ರಹ್ರಾದ ಸ್ವಸ್ಥರೂಪೋಽಸಿ ಪಶ್ಯನ್ವ್ಯಸನಮಾತ್ಮನಃ||

ದೈತೇಯ! ವ್ಯಸನದಲ್ಲಿರುವುದನ್ನು ನೋಡಿಯೂ ನೀನು ಹೇಗೆ ಸ್ವಸ್ಥರೂಪನಾಗಿರುವೆ? ನಿನ್ನ ಈ ನಿಶ್ಚಲ ಸಮಸ್ಥಿತಿಗೆ ಆತ್ಮಜ್ಞಾನವು ಕಾರಣವೋ ಅಥವಾ ಧೈರ್ಯವು ಕಾರಣವೋ?”

12215013a ಇತಿ ಸಂಚೋದಿತಸ್ತೇನ ಧೀರೋ ನಿಶ್ಚಿತನಿಶ್ಚಯಃ|

12215013c ಉವಾಚ ಶ್ಲಕ್ಷ್ಣಯಾ ವಾಚಾ ಸ್ವಾಂ ಪ್ರಜ್ಞಾಮನುವರ್ಣಯನ್||

ಇಂದ್ರನು ಹೀಗೆ ಸಂಚೋದಿಸಲು ನಿಶ್ಚಿತನಿಶ್ಚಯಿ ಧೀರ ಪ್ರಹ್ರಾದನು ಪ್ರಜ್ಞೆಯನ್ನು ವರ್ಣಿಸುತ್ತಾ ಈ ಸುಮಧುರ ಮಾತುಗಳನ್ನಾಡಿದನು:

12215014a ಪ್ರವೃತ್ತಿಂ ಚ ನಿವೃತ್ತಿಂ ಚ ಭೂತಾನಾಂ ಯೋ ನ ಬುಧ್ಯತೇ|

12215014c ತಸ್ಯ ಸ್ತಂಭೋ ಭವೇದ್ಬಾಲ್ಯಾನ್ನಾಸ್ತಿ ಸ್ತಂಭೋಽನುಪಶ್ಯತಃ||

“ಭೂತಗಳ ಪ್ರವೃತ್ತಿ-ನಿವೃತಿಗಳನ್ನು ತಿಳಿಯದೇ ಇರುವವನಲ್ಲಿ ಅವಿವೇಕದ ಕಾರಣದಿಂದ ಜಡತೆ ಮತ್ತು ಮೋಹವುಂಟಾಗುತ್ತದೆ. ಆದರೆ ಅವುಗಳನ್ನು ತಿಳಿದುಕೊಂಡಿರುವವನಿಗೆ ಜಡತೆ-ಮೋಹಗಳುಂಟಾಗುವುದಿಲ್ಲ.

12215015a ಸ್ವಭಾವಾತ್ಸಂಪ್ರವರ್ತಂತೇ ನಿವರ್ತಂತೇ ತಥೈವ ಚ|

12215015c ಸರ್ವೇ ಭಾವಾಸ್ತಥಾಭಾವಾಃ ಪುರುಷಾರ್ಥೋ ನ ವಿದ್ಯತೇ||

ಸರ್ವ ಭಾವ-ಅಭಾವಗಳೂ ಸ್ವಭಾವದಿಂದಲೇ ಬರುತ್ತಿರುತ್ತವೆ ಮತ್ತು ಹೋಗುತ್ತಿರುತ್ತವೆ. ಅದರಲ್ಲಿ ಪುರುಷಪ್ರಯತ್ನವೇನೂ ಇಲ್ಲ[3].

12215016a ಪುರುಷಾರ್ಥಸ್ಯ ಚಾಭಾವೇ ನಾಸ್ತಿ ಕಶ್ಚಿತ್ ಸ್ವಕಾರಕಃ|

12215016c ಸ್ವಯಂ ತು[4] ಕುರ್ವತಸ್ತಸ್ಯ ಜಾತು ಮಾನೋ ಭವೇದಿಹ||

ಪುರುಷಪ್ರಯತ್ನವಿಲ್ಲದೇ ಇರುವಾಗ ಮನುಷ್ಯನು ಸ್ವತಃ ಕರ್ತೃವಾಗುವುದಿಲ್ಲ. ಆದರೆ ತಾನೇ ಮಾಡುತ್ತಿದ್ದೇನೆಂದು ಅವನಿಗೆ ಅಭಿಮಾನವುಂಟಾಗುತ್ತದೆ.

12215017a ಯಸ್ತು ಕರ್ತಾರಮಾತ್ಮಾನಂ ಮನ್ಯತೇ ಸಾಧ್ವಸಾಧುನೋಃ|

12215017c ತಸ್ಯ ದೋಷವತೀ ಪ್ರಜ್ಞಾ ಸ್ವಮೂರ್ತ್ಯಜ್ಞೇತಿ[5] ಮೇ ಮತಿಃ||

ಶುಭಾಶುಭಗಳ ಕರ್ತೃವು ತಾನೇ ಎಂದು ತಿಳಿಯುವವನ ಪ್ರಜ್ಞೆಯು ದೋಷಯುಕ್ತವಾದುದು ಮತ್ತು ತನ್ನ ಸ್ವರೂಪದ ಕುರಿತಾದ ಅಜ್ಞಾನವೆಂದು ನನ್ನ ಮತವು.

12215018a ಯದಿ ಸ್ಯಾತ್ಪುರುಷಃ ಕರ್ತಾ ಶಕ್ರಾತ್ಮಶ್ರೇಯಸೇ ಧ್ರುವಮ್|

12215018c ಆರಂಭಾಸ್ತಸ್ಯ ಸಿಧ್ಯೇರನ್ನ ಚ ಜಾತು ಪರಾಭವೇತ್||

ಶಕ್ರ! ಒಂದು ವೇಳೆ ಪುರುಷನೇ ಕರ್ತೃವಾಗಿದ್ದರೆ ನಿಶ್ಚಿತವಾಗಿ ಅವನು ತನ್ನ ಶ್ರೇಯಸ್ಸಿಗೆ ಪ್ರಯತ್ನಿಸುತ್ತಿದ್ದನು. ಅವನು ಆರಂಭಿಸಿದ ಕಾರ್ಯಗಳೆಲ್ಲವೂ ಸಿದ್ಧಿಯಾಗುತ್ತಿದ್ದವು. ಅವನಿಗೆ ಪರಾಭವವೇ ಆಗುತ್ತಿರಲಿಲ್ಲ.

12215019a ಅನಿಷ್ಟಸ್ಯ ಹಿ ನಿರ್ವೃತ್ತಿರನಿವೃತ್ತಿಃ ಪ್ರಿಯಸ್ಯ ಚ|

12215019c ಲಕ್ಷ್ಯತೇ ಯತಮಾನಾನಾಂ ಪುರುಷಾರ್ಥಸ್ತತಃ ಕುತಃ||

ಆದರೆ ಇಷ್ಟಸಿದ್ಧಿಗಾಗಿ ಪ್ರಯತ್ನಿಸುವವರಿಗೆ ಅನಿಷ್ಟಪ್ರಾಪ್ತಿಯಾಗುವುದೂ ಮತ್ತು ಅವರು ಪ್ರಿಯವಾದುದರಿಂದ ವಂಚಿತಗೊಳ್ಳುವುದೂ ಕಂಡುಬರುತ್ತದೆ. ಹೀಗಿರುವಾಗ ಪುರುಷ ಪ್ರಯತ್ನವು ಎಲ್ಲಿ ಹೋಯಿತು?

12215020a ಅನಿಷ್ಟಸ್ಯಾಭಿನಿರ್ವೃತ್ತಿಮಿಷ್ಟಸಂವೃತ್ತಿಮೇವ ಚ|

12215020c ಅಪ್ರಯತ್ನೇನ ಪಶ್ಯಾಮಃ ಕೇಷಾಂ ಚಿತ್ತತ್ಸ್ವಭಾವತಃ||

ಇನ್ನು ಕೆಲವರಿಗೆ ಯಾವ ಪ್ರಯತ್ನವೂ ಇಲ್ಲದೇ ಅನಿಷ್ಟವು ನಿವಾರಣೆಯಾಗುವುದನ್ನೂ ಇಷ್ಟವು ಪ್ರಾಪ್ತವಾಗುವುದನ್ನೂ ಕಾಣುತ್ತೇವೆ. ಇದು ಸ್ವಾಭಾವಕವಾಗಿಯೇ ನಡೆದುಹೋಗುತ್ತದೆ.

12215021a ಪ್ರತಿರೂಪಧರಾಃ ಕೇ ಚಿದ್ದೃಶ್ಯಂತೇ ಬುದ್ಧಿಸತ್ತಮಾಃ|

12215021c ವಿರೂಪೇಭ್ಯೋಽಲ್ಪಬುದ್ಧಿಭ್ಯೋ ಲಿಪ್ಸಮಾನಾ ಧನಾಗಮಮ್||

ಹೆಚ್ಚುಬುದ್ಧಿವಂತರು ಮತ್ತು ಹೆಚ್ಚು ರೂಪವಂತರಲ್ಲಿ ಕೆಲವರು ವಿರೂಪರು ಮತ್ತು ಅಲ್ಪಬುದ್ಧಿಯವರಿಂದ ಹಣವನ್ನು ಪಡೆದುಕೊಳ್ಳಲು ಅಪೇಕ್ಷಿಸುವುದು ಕಂಡುಬರುತ್ತದೆ.

12215022a ಸ್ವಭಾವಪ್ರೇರಿತಾಃ ಸರ್ವೇ ನಿವಿಶಂತೇ ಗುಣಾ ಯದಾ|

12215022c ಶುಭಾಶುಭಾಸ್ತದಾ ತತ್ರ ತಸ್ಯ ಕಿಂ ಮಾನಕಾರಣಮ್||

ಹೀಗೆ ಸರ್ವ ಶುಭಾಶುಭಕರ್ಮಗಳು ಸ್ವಭಾವಪ್ರೇರಿತ ಗುಣಗಳಿಂದಲೇ ನಡೆಯುತ್ತವೆ. ಹೀಗಿರುವಾಗ ಅಭಿಮಾನ ಪಡುವ ಕಾರಣವೇನೂ ಇಲ್ಲ.

12215023a ಸ್ವಭಾವಾದೇವ ತತ್ಸರ್ವಮಿತಿ ಮೇ ನಿಶ್ಚಿತಾ ಮತಿಃ|

12215023c ಆತ್ಮಪ್ರತಿಷ್ಠಿತಾ ಪ್ರಜ್ಞಾ ಮಮ ನಾಸ್ತಿ ತತೋಽನ್ಯಥಾ||

ಸ್ವಭಾವದಿಂದಲೇ ಎಲ್ಲವೂ ನಡೆಯುತ್ತದೆ ಎನ್ನುವುದು ನನ್ನ ನಿಶ್ಚಿತ ಮತವು. ಇದಕ್ಕೆ ಬೇರೆಯಾದ ಆತ್ಮನಿಷ್ಠೆಯಾಗಲೀ ಪ್ರಜ್ಞೆಯಾಗಲೀ ನನಗಿಲ್ಲ.

12215024a ಕರ್ಮಜಂ ತ್ವಿಹ ಮನ್ಯೇಽಹಂ ಫಲಯೋಗಂ ಶುಭಾಶುಭಮ್|

12215024c ಕರ್ಮಣಾಂ ವಿಷಯಂ ಕೃತ್ಸ್ನಮಹಂ ವಕ್ಷ್ಯಾಮಿ ತಚ್ಚೃಣು||

ಶುಭಾಶುಭಫಲಗಳ ಯೋಗವು ಕರ್ಮದಿಂದಲೇ ಹುಟ್ಟುತ್ತವೆ ಎಂದು ನನ್ನ ಮತವು. ಕರ್ಮಗಳ ವಿಷಯವನ್ನು ಸಂಪೂರ್ಣವಾಗಿ ಹೇಳುತ್ತೇನೆ. ಅದನ್ನು ಕೇಳು.

12215025a ಯಥಾ ವೇದಯತೇ ಕಶ್ಚಿದೋದನಂ ವಾಯಸೋ ವದನ್|

12215025c ಏವಂ ಸರ್ವಾಣಿ ಕರ್ಮಾಣಿ ಸ್ವಭಾವಸ್ಯೈವ ಲಕ್ಷಣಮ್||

ಕಾಗೆಯೊಂದು ಎಲ್ಲಿಯೋ ಬಿದ್ದಿರುವ ಅನ್ನವನ್ನು ತಿನ್ನುವಾಗ ಕಾ ಕಾ ಎಂದು ಕೂಗಿ ಅನ್ನವು ಎಲ್ಲಿದೆಯೆಂದು ಅನ್ಯ ಕಾಗೆಗಳಿಗೆ ಸೂಚನೆ ನೀಡುವಂತೆ ಸಮಸ್ತ ಕರ್ಮಗಳೂ ತಮ್ಮ ಸ್ವಭಾವವನ್ನೇ ಸೂಚಿಸುತ್ತವೆ[6].

12215026a ವಿಕಾರಾನೇವ ಯೋ ವೇದ ನ ವೇದ ಪ್ರಕೃತಿಂ ಪರಾಮ್|

12215026c ತಸ್ಯ ಸ್ತಂಭೋ ಭವೇದ್ಬಾಲ್ಯಾನ್ನಾಸ್ತಿ ಸ್ತಂಭೋಽನುಪಶ್ಯತಃ||

ಕಾರ್ಯರೂಪದ ವಿಕಾರಗಳನ್ನು ಮಾತ್ರ ತಿಳಿದಿರುವ ಮತ್ತು ಪರಮ ಪ್ರಕೃತಿ ಸ್ವಭಾವವನ್ನು ತಿಳಿಯದಿರುವ ಮನುಷ್ಯನಿಗೆ ಅವಿವೇಕದ ಕಾರಣದಿಂದ ಮೋಹ ಅಥವಾ ಅಭಿಮಾನವುಂಟಾಗುತ್ತದೆ. ಈ ವಿಷಯವನ್ನು ಚೆನ್ನಾಗಿ ತಿಳಿದಿರುವವನಿಗೆ ಮೋಹವುಂಟಾಗುವುದಿಲ್ಲ.

12215027a ಸ್ವಭಾವಭಾವಿನೋ ಭಾವಾನ್ಸರ್ವಾನೇವೇಹ ನಿಶ್ಚಯೇ|

12215027c ಬುಧ್ಯಮಾನಸ್ಯ ದರ್ಪೋ ವಾ ಮಾನೋ ವಾ ಕಿಂ ಕರಿಷ್ಯತಿ||

ಎಲ್ಲ ಭಾವಗಳೂ ಸ್ವಭಾವದಿಂದಲೇ ಹುಟ್ಟುತ್ತವೆ ಎನ್ನುವುದನ್ನು ನಿಶ್ಚಯವಾಗಿ ತಿಳಿದವರಿಗೆ ದರ್ಪವಾಗಲೀ ಅಭಿಮಾನವಾಗಲೀ ಏನು ಮಾಡೀತು?

12215028a ವೇದ ಧರ್ಮವಿಧಿಂ ಕೃತ್ಸ್ನಂ ಭೂತಾನಾಂ ಚಾಪ್ಯನಿತ್ಯತಾಮ್|

12215028c ತಸ್ಮಾಚ್ಚಕ್ರ ನ ಶೋಚಾಮಿ ಸರ್ವಂ ಹ್ಯೇವೇದಮಂತವತ್||

ಶಕ್ರ! ಸಂಪೂರ್ಣ ಧರ್ಮವಿಧಿಯನ್ನೂ ಭೂತಗಳ ಅನಿತ್ಯತೆಯನ್ನೂ ತಿಳಿದುಕೊಂಡಿದ್ದೇನೆ. ಆದುದರಿಂದ ಸರ್ವವೂ ಅಂತ್ಯಗೊಳ್ಳುತ್ತವೆ ಎನ್ನುವುದನ್ನು ತಿಳಿದು ನಾನು ಶೋಕಿಸುವುದಿಲ್ಲ.

12215029a ನಿರ್ಮಮೋ ನಿರಹಂಕಾರೋ ನಿರೀಹೋ[7] ಮುಕ್ತಬಂಧನಃ|

12215029c ಸ್ವಸ್ಥೋಽವ್ಯಪೇತಃ ಪಶ್ಯಾಮಿ ಭೂತಾನಾಂ ಪ್ರಭವಾಪ್ಯಯೌ||

ನಿರ್ಮಮನಾಗಿ, ನಿರಹಂಕಾರನಾಗಿ, ಆಸೆಗಳಿಲ್ಲದೇ ಬಂಧನಗಳಿಂದ ಮುಕ್ತನಾಗಿ ಆತ್ಮನಿಷ್ಟನಾಗಿ ನಾನು ಭೂತಗಳ ಉತ್ಪತ್ತಿ-ವಿನಾಶಗಳನ್ನು ನೋಡುತ್ತಲೇ ಇರುತ್ತೇನೆ.

12215030a ಕೃತಪ್ರಜ್ಞಸ್ಯ ದಾಂತಸ್ಯ ವಿತೃಷ್ಣಸ್ಯ ನಿರಾಶಿಷಃ|

12215030c ನಾಯಾಸೋ ವಿದ್ಯತೇ ಶಕ್ರ ಪಶ್ಯತೋ ಲೋಕವಿದ್ಯಯಾ[8]||

ಶಕ್ರ! ಕೃತಪ್ರಜ್ಞ, ದಾಂತ, ತೃಷ್ಣೆಗಳಿಲ್ಲದ, ಆಶೆಗಳಿಲ್ಲದ ನನಗೆ ಲೋಕದ ವಿದ್ಯಮಾನಗಳನ್ನು ನೋಡಿ ಆಯಾಸವಾಗುವುದಿಲ್ಲ[9].

12215031a ಪ್ರಕೃತೌ ಚ ವಿಕಾರೇ ಚ ನ ಮೇ ಪ್ರೀತಿರ್ನ ಚ ದ್ವಿಷೇ|

12215031c ದ್ವೇಷ್ಟಾರಂ ನ ಚ ಪಶ್ಯಾಮಿ ಯೋ ಮಮಾದ್ಯ ಮಮಾಯತೇ||

ಪ್ರಕೃತಿ ಮತ್ತು ಅದರ ಕಾರ್ಯಗಳ ವಿಷಯವಾಗಿ ನನಗೆ ಪ್ರೀತಿಯೂ ಇಲ್ಲ ದ್ವೇಷವೂ ಇಲ್ಲ. ಯಾರನ್ನೂ ನಾನು ನನ್ನ ದ್ವೇಷಿಯೆಂದಾಗಲೀ ಆತ್ಮೀಯನೆಂದಾಗಲೀ ಭಾವಿಸುವುದಿಲ್ಲ.

12215032a ನೋರ್ಧ್ವಂ ನಾವಾಙ್ನ ತಿರ್ಯಕ್ಚ ನ ಕ್ವ ಚಿಚ್ಚಕ್ರ ಕಾಮಯೇ|

12215032c ನ ವಿಜ್ಞಾನೇ ನ ವಿಜ್ಞೇಯೇ ನಾಜ್ಞಾನೇ ಶರ್ಮ ವಿದ್ಯತೇ[10]||

ಮೇಲಾಗಲೀ, ಕೆಳಗಾಗಲೀ, ಅಡ್ಡಡ್ಡವಾಗಲೀ, ಯಾವುದೇ ಸ್ಥಳದಲ್ಲಿಯಾಗಲೀ ನಾನು ಏನನ್ನೂ ಅಪೇಕ್ಷಿಸುವುದಿಲ್ಲ. ವಿಜ್ಞಾನದಲ್ಲಾಗಲೀ, ವಿಜ್ಞೇಯದಲ್ಲಾಗಲೀ ಮತ್ತು ಅಜ್ಞಾನದಲ್ಲಾಗಲೀ ನನ್ನ ನೆಲೆಯಿಲ್ಲ.”

12215033 ಶಕ್ರ ಉವಾಚ|

12215033a ಯೇನೈಷಾ ಲಭ್ಯತೇ ಪ್ರಜ್ಞಾ ಯೇನ ಶಾಂತಿರವಾಪ್ಯತೇ|

12215033c ಪ್ರಬ್ರೂಹಿ ತಮುಪಾಯಂ ಮೇ ಸಮ್ಯಕ್ ಪ್ರಹ್ರಾದ ಪೃಚ್ಚತೇ||

ಶಕ್ರನು ಹೇಳಿದನು: “ಪ್ರಹ್ರಾದ! ಯಾವುದರಿಂದ ಪ್ರಜ್ಞೆಯು ದೊರೆಯುತ್ತದೆಯೋ, ಯಾವುದರಿಂದ ಶಾಂತಿಯು ದೊರೆಯುತ್ತದೆಯೋ ಆ ಉಪಾಯವನ್ನು ಹೇಳು. ಕೇಳುತ್ತಿರುವ ನನಗೆ ಅದನ್ನು ಸರಿಯಾಗಿ ಹೇಳು.”

12215034 ಪ್ರಹ್ರಾದ ಉವಾಚ|

12215034a ಆರ್ಜವೇನಾಪ್ರಮಾದೇನ ಪ್ರಸಾದೇನಾತ್ಮವತ್ತಯಾ[11]|

12215034c ವೃದ್ಧಶುಶ್ರೂಷಯಾ ಶಕ್ರ ಪುರುಷೋ ಲಭತೇ ಮಹತ್||

ಪ್ರಹ್ರಾದನು ಹೇಳಿದನು: “ಶಕ್ರ! ಸರಳತೆಯಿಂದ, ಅಪ್ರಮಾದದಿಂದ, ಆತ್ಮವಂತನಾಗಿ ಪ್ರಶಾಂತನಾಗಿರುವುದರಿಂದ ಮತ್ತು ವೃದ್ಧರ ಶುಶ್ರೂಷೆಗೈಯುವುದರಿಂದ ಪುರುಷನು ಪರಮಪದವನ್ನು ಪಡೆದುಕೊಳ್ಳುತ್ತಾನೆ.

12215035a ಸ್ವಭಾವಾಲ್ಲಭತೇ ಪ್ರಜ್ಞಾಂ ಶಾಂತಿಮೇತಿ ಸ್ವಭಾವತಃ|

12215035c ಸ್ವಭಾವಾದೇವ ತತ್ಸರ್ವಂ ಯತ್ಕಿಂ ಚಿದನುಪಶ್ಯಸಿ||

ಸ್ವಭಾವದಿಂದಲೇ ಪ್ರಜ್ಞೆಯುಂಟಾಗುತ್ತದೆ. ಶಾಂತಿಯೂ ಸ್ವಭಾವತಃ ದೊರೆಯುತ್ತದೆ. ನೀನು ಏನೆಲ್ಲ ನೋಡುತ್ತೀಯೋ ಅವೆಲ್ಲವೂ ಸ್ವಭಾವದಿಂದಲೇ ಉಂಟಾಗಿವೆ.”

12215036 ಭೀಷ್ಮ ಉವಾಚ|

12215036a ಇತ್ಯುಕ್ತೋ ದೈತ್ಯಪತಿನಾ ಶಕ್ರೋ ವಿಸ್ಮಯಮಾಗಮತ್|

12215036c ಪ್ರೀತಿಮಾಂಶ್ಚ ತದಾ ರಾಜಂಸ್ತದ್ವಾಕ್ಯಂ ಪ್ರತ್ಯಪೂಜಯತ್||

ಭೀಷ್ಮನು ಹೇಳಿದನು: “ದೈತ್ಯಪತಿಯು ಹೀಗೆ ಹೇಳಲು ಶಕ್ರನು ವಿಸ್ಮಿತನಾದನು. ರಾಜನ್! ಪ್ರೀತಿಮಾನನಾಗಿ ಅವನ ಆ ಮಾತನ್ನು ಇಂದ್ರನು ಗೌರವಿಸಿದನು.

12215037a ಸ ತದಾಭ್ಯರ್ಚ್ಯ ದೈತ್ಯೇಂದ್ರಂ ತ್ರೈಲೋಕ್ಯಪತಿರೀಶ್ವರಃ|

12215037c ಅಸುರೇಂದ್ರಮುಪಾಮಂತ್ರ್ಯ ಜಗಾಮ ಸ್ವಂ ನಿವೇಶನಮ್||

ಅನಂತರ ಆ ತ್ರೈಲೋಕ್ಯಪತಿ ಈಶ್ವರ ಇಂದ್ರನು ದೈತ್ಯೇಂದ್ರನನ್ನು ಪೂಜಿಸಿ, ಅಸುರೇಂದ್ರನ ಅನುಮತಿಯನ್ನು ಪಡೆದು ತನ್ನ ನಿವೇಶನಕ್ಕೆ ತೆರಳಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶಕ್ರಪ್ರಹ್ರಾದಸಂವಾದೋ ನಾಮ ಪಂಚದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶಕ್ರಪ್ರಹ್ರಾದಸಂವಾದ ಎನ್ನುವ ಇನ್ನೂರಾಹದಿನೈದನೇ ಅಧ್ಯಾಯವು.

[1] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಸನತ್ಕುಮಾರನು ಋಷಿಗಳಿಗೆ ಭಗವಂತನ ಸ್ವರೂಪದ ಕುರಿತು ಉಪದೇಶ ನೀಡುವ 45 ಅಧಿಕ ಶ್ಲೋಕಗಳಿವೆ (ಗೀತಾ ಪ್ರೆಸ್). ಈ ಶ್ಲೋಕಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

[2] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಭಕ್ತಂ ಭಗವತಂ ನಿತ್ಯಂ ನಾರಾಯಣಪರಾಯಣಮ್| ಧ್ಯಾಯಂತಂ ಪರಮಾತ್ಮಾನಂ ಹಿರಣ್ಯಕಶಿಪೋಃ ಸುತಮ್|| (ಗೀತಾ ಪ್ರೆಸ್).

[3] ಹಸುವು ಗರ್ಭಧರಿಸಿ ಕರುವನ್ನು ಹೆರುವ ಮೊದಲೇ ಕೆಚ್ಚಲಿನಲ್ಲಿ ಹಾಲು ತುಂಬಿರುತ್ತದೆ. ಕರುವು ಇನ್ನೂ ಹುಟ್ಟಿಲ್ಲವಾದುದರಿಂದ ಹಾಗಾಗಲು ಕರುವಿನ ಮೇಲಿನ ವಾತ್ಸಲ್ಯವು ಕಾರಣವಾಗಿರುವುದಿಲ್ಲ. ಕರುವಿನ ಅಭಾವವಿದ್ದರೂ ಕೆಚ್ಚಲಿನಲ್ಲಿ ಹಾಲಿನ ಭಾವ – ಈ ಎರಡೂ ಸ್ವಾಭಾವಿಕವಾಗಿಯೇ ನಡೆಯುವಂಥವು. ಇಲ್ಲಿ ಪುರುಷಪ್ರಯತ್ನವೇನೂ ಇಲ್ಲ. (ಭಾರತ ದರ್ಶನ)

[4] ನ (ಭಾರತ ದರ್ಶನ/ಗೀತಾ ಪ್ರೆಸ್).

[5] ಅತತ್ವಜ್ಞೇತಿ (ಭಾರತ ದರ್ಶನ/ಗೀತಾ ಪ್ರೆಸ್).

[6] ಯಾವ ರೀತಿಯಲ್ಲಿ ಒಂದು ಕಾಗೆಯು ಎಲ್ಲಿಯೋ ಹಾಕಿದ ಅನ್ನವನ್ನು ತಿನ್ನುತ್ತಿರುವಾಗ ಇತರ ಕಾಗೆಗಳು ಕಾ ಕಾ ಎಂದು ಕೂಗಿಕೊಂಡು ಆ ಪಿಂಡದ ಬಳಿ ಹೋಗುವವೋ ಅದೇ ರೀತಿಯಲ್ಲಿ ಎಲ್ಲ ಕರ್ಮಗಳೂ ಸ್ವಭಾವಲಕ್ಷಣಗಳಿಂದಲೇ ಕೂಡಿವೆ (ಭಾರತ ದರ್ಶನ).

[7] ನಿರಾಶೀ (ಭಾರತ ದರ್ಶನ/ಗೀತಾ ಪ್ರೆಸ್).

[8] ಲೋಕಮವ್ಯಯಮ್ (ಭಾರತ ದರ್ಶನ/ಗೀತಾ ಪ್ರೆಸ್).

[9] ರಾಜ್ಯ-ಕೋಶಾದಿಗಳನ್ನು ಕಳೆದುಕೊಂಡಿದುದರಿಂದ ಯಾವ ಕಷ್ಟವೂ ಕಾಣುತ್ತಿಲ್ಲ (ಭಾರತ ದರ್ಶನ).

[10] ನ ಹಿ ಜ್ಞೇಯೇ ನ ವಿಜ್ಞಾನೇ ನ ಜ್ಞಾನೇ ಕರ್ಮ ವಿದ್ಯತೇ| (ಭಾರತ ದರ್ಶನ/ಗೀತಾ ಪ್ರೆಸ್).

[11] ಬುದ್ಧಿಯ ನೈರ್ಮಲ್ಯ, ಚಿತ್ತದ ಸ್ಥಿರತೆ (ಭಾರತ ದರ್ಶನ).

Comments are closed.