Shanti Parva: Chapter 214

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೪

ವ್ರತ, ತಪಸ್ಸು, ಉಪವಾಸ, ಬ್ರಹ್ಮಚರ್ಯೆ ಮತ್ತು ಅತಿಥಿಸೇವೆ ಇವುಗಳ ವಿವೇಚನೆ ಮತ್ತು ಯಜ್ಞಶಿಷ್ಠ ಅನ್ನದ ಭೋಜನದಿಂದ ದೊರೆಯುವ ಪರಮ ಉತ್ತಮ ಗತಿಯ ಕಥನ (1-16).

12214001 ಯುಧಿಷ್ಠಿರ ಉವಾಚ|

12214001a ದ್ವಿಜಾತಯೋ ವ್ರತೋಪೇತಾ ಯದಿದಂ ಭುಂಜತೇ ಹವಿಃ|

12214001c ಅನ್ನಂ ಬ್ರಾಹ್ಮಣಕಾಮಾಯ ಕಥಮೇತತ್ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ವ್ರತವನ್ನು ಪಾಲಿಸುತ್ತಿರುವ ಬ್ರಾಹ್ಮಣರು ಇತರರ ಮನೆಗಳಲ್ಲಿ ಬ್ರಾಹ್ಮಣರಾಗಿ ಆಮಂತ್ರಿಸಲ್ಪಟ್ಟು ಹವಿಷ್ಯಾನ್ನದ ಭೋಜನಮಾಡುತ್ತಾರೆ. ವ್ರತದ ದೃಷ್ಟಿಯಿಂದ ಇದು ಸರಿಯೇ ಹೇಗೆ?[1]

12214002 ಭೀಷ್ಮ ಉವಾಚ|

12214002a ಅವೇದೋಕ್ತವ್ರತೋಪೇತಾ ಭುಂಜಾನಾಃ ಕಾರ್ಯಕಾರಿಣಃ|

12214002c ವೇದೋಕ್ತೇಷು ಚ ಭುಂಜಾನಾ ವ್ರತಲುಪ್ತಾ[2] ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಅವೈದಿಕ ವ್ರತದಲ್ಲಿ ತೊಡಗಿ ಪರಾನ್ನಭೋಜನ ಮಾಡುವವರು ಸ್ವೇಚ್ಛಾಚಾರಿಗಳು. ವೇದೋಕ್ತ ವ್ರತಗಳನ್ನಾಚರಿಸುವವರೂ ಕೂಡ ಇತರರ ಮನೆಗಳಲ್ಲಿ ಹವಿಷ್ಯಾನ್ನವನ್ನು ಊಟಮಾಡಿದರೆ ಅವರು ವ್ರತಲುಪ್ತರಾಗುತ್ತಾರೆ.”

12214003 ಯುಧಿಷ್ಠಿರ ಉವಾಚ|

12214003a ಯದಿದಂ ತಪ ಇತ್ಯಾಹುರುಪವಾಸಂ ಪೃಥಗ್ಜನಾಃ|

12214003c ಏತತ್ತಪೋ ಮಹಾರಾಜ ಉತಾಹೋ ಕಿಂ ತಪೋ ಭವೇತ್||

ಯುಧಿಷ್ಠಿರನು ಹೇಳಿದನು: “ಮಹಾರಾಜ! ಸಾಮಾನ್ಯವಾಗಿ ಜನರು ಉಪವಾಸವನ್ನೇ ತಪಸ್ಸೆಂದು ಹೇಳುತ್ತಾರೆ. ಇದು ತಪಸ್ಸೇ? ತಪಸ್ಸಿನ ಸ್ವರೂಪವೇನು?”

12214004 ಭೀಷ್ಮ ಉವಾಚ|

12214004a ಮಾಸಪಕ್ಷೋಪವಾಸೇನ ಮನ್ಯಂತೇ ಯತ್ತಪೋ ಜನಾಃ|

12214004c ಆತ್ಮತಂತ್ರೋಪಘಾತಃ ಸ ನ ತಪಸ್ತತ್ಸತಾಂ ಮತಮ್||

12214004e ತ್ಯಾಗಶ್ಚ ಸನ್ನತಿಶ್ಚೈವ ಶಿಷ್ಯತೇ ತಪ ಉತ್ತಮಮ್||

ಭೀಷ್ಮನು ಹೇಳಿದನು: “ಜನರು ತಪಸ್ಸೆಂದು ತಿಳಿಯುವ ಮಾಸ-ಪಕ್ಷಗಳ ಉಪವಾಸವು ಶರೀರ ಶೋಷಣೆಗೆ ಕಾರಣವಾಗುತ್ತದೆ ಮತ್ತು ಆತ್ಮಘಾತವಾಗುತ್ತದೆ. ಸತ್ಪುರುಷರು ಅದನ್ನು ತಪಸ್ಸೆಂದು ಮನ್ನಿಸುವುದಿಲ್ಲ. ಅವರ ಪ್ರಕಾರ ತ್ಯಾಗ ಮತ್ತು ವಿನಯವೇ ಉತ್ತಮ ತಪಸ್ಸು.

12214005a ಸದೋಪವಾಸೀ ಚ ಭವೇದ್ಬ್ರಹ್ಮಚಾರೀ ಸದೈವ ಚ|

12214005c ಮುನಿಶ್ಚ ಸ್ಯಾತ್ಸದಾ ವಿಪ್ರೋ ದೈವತಂ ಚ ಸದಾ ಭಜೇತ್||

ಸದಾ ತ್ಯಾಗ-ವಿನಯಗಳನ್ನು ಪಾಲಿಸುವವನು ಸದೋಪವಾಸಿಯೂ ಬ್ರಹ್ಮಚಾರಿಯೂ ಆಗುತ್ತಾನೆ. ತ್ಯಾಗೀ ಮತ್ತು ವಿನಯೀ ಬ್ರಾಹ್ಮಣನು ಸದಾ ಮುನಿಯೂ ದೇವತೆಯೂ ಆಗಿರುತ್ತಾನೆ.

12214006a ಕುಟುಂಬಿಕೋ ಧರ್ಮಕಾಮಃ ಸದಾಸ್ವಪ್ನಶ್ಚ ಭಾರತ|

12214006c ಅಮಾಂಸಾಶೀ ಸದಾ ಚ ಸ್ಯಾತ್ಪವಿತ್ರಂ ಚ ಸದಾ ಜಪೇತ್[3]||

ಭಾರತ! ಕುಟುಂಬಿಕನಾಗಿದ್ದರೂ ಅವನು ಧರ್ಮಕಾಮನಾಗಿರುತ್ತಾನೆ. ನಿದ್ರಾಲಸ್ಯಗಳು ಅವನಿಗಿರುವುದಿಲ್ಲ. ಅವನು ಎಂದೂ ಮಾಂಸವನ್ನು ತಿನ್ನುವುದಿಲ್ಲ. ಸದಾ ಪರಿಶುದ್ಧನಾಗಿ ಜಪಿಸುತ್ತಿರುತ್ತಾನೆ.

12214007a ಅಮೃತಾಶೀ ಸದಾ ಚ ಸ್ಯಾನ್ನ ಚ ಸ್ಯಾದ್ವಿಷಭೋಜನಃ|

12214007c ವಿಘಸಾಶೀ ಸದಾ ಚ ಸ್ಯಾತ್ಸದಾ ಚೈವಾತಿಥಿಪ್ರಿಯಃ[4]||

ಸದಾ ದೇವತಾಥಿಗಳನ್ನು ಪೂಜಿಸಿ ವೈಶ್ವದೇವಾದಿಯಜ್ಞಗಳಲ್ಲಿ ಉಳಿಯುವ ಅಮೃತರೂಪದ ಅನ್ನವನ್ನು ಊಟಮಾಡುತ್ತಾನೆ. ಸದಾ ಯಜ್ಞಶಿಷ್ಠ ಅನ್ನವನ್ನು ಉಟಮಾಡುತ್ತಾನೆ. ಮತ್ತು ಸದಾ ಅತಿಥಿಪ್ರಿಯನಾಗಿರುತ್ತಾನೆ.”

12214008 ಯುಧಿಷ್ಠಿರ ಉವಾಚ|

12214008a ಕಥಂ ಸದೋಪವಾಸೀ ಸ್ಯಾದ್ ಬ್ರಹ್ಮಚಾರೀ ಕಥಂ ಭವೇತ್|

12214008c ವಿಘಸಾಶೀ ಕಥಂ ಚ ಸ್ಯಾತ್ಸದಾ ಚೈವಾತಿಥಿಪ್ರಿಯಃ||

ಯುಧಿಷ್ಠಿರನು ಹೇಳಿದನು: “ಅವನು ಹೇಗೆ ಸದೋಪವಾಸಿಯಾಗಬಹುದು? ಅವನು ಹೇಗೆ ಬ್ರಹ್ಮಚಾರಿಯಾಗುತ್ತಾನೆ? ವಿಘಸಾಶಿಯೂ ಮತ್ತು ಸದಾ ಅತಿಥಿಪ್ರಿಯನು ಹೇಗಾಗಬಲ್ಲನು?”

12214009 ಭೀಷ್ಮ ಉವಾಚ|

12214009a ಅಂತರಾ ಪ್ರಾತರಾಶಂ ಚ ಸಾಯಮಾಶಂ ತಥೈವ ಚ|

12214009c ಸದೋಪವಾಸೀ ಚ ಭವೇದ್ಯೋ ನ ಭುಂಕ್ತೇ ಕಥಂ ಚನ||

ಭೀಷ್ಮನು ಹೇಳಿದನು: “ಪ್ರತಿದಿನ ಪ್ರಾತಃಕಾಲದಲ್ಲಿ ಬಿಟ್ಟರೆ ಪುನಃ ಸಾಯಂಕಾಲದಲ್ಲಿಯೇ ಭೋಜನ ಮಾಡುವ ಮತ್ತು ಮಧ್ಯ ಏನನ್ನೂ ತಿನ್ನದಿರುವವನು ಸದೋಪವಾಸಿಯಾಗುತ್ತಾನೆ.

12214010a ಭಾರ್ಯಾಂ ಗಚ್ಚನ್ ಬ್ರಹ್ಮಚಾರೀ ಋತೌ ಭವತಿ ಬ್ರಾಹ್ಮಣಃ|

12214010c ಋತವಾದೀ ಸದಾ ಚ ಸ್ಯಾಜ್ಜ್ಞಾನನಿತ್ಯಶ್ಚ ಯೋ ನರಃ||

ಋತುಕಾಲದಲ್ಲಿ ಮಾತ್ರ ಭಾರ್ಯೆಯನ್ನು ಕೂಡುವ, ಸದಾ ಸತ್ಯವನ್ನೇ ನುಡಿಯುವ ಮತ್ತು ಜ್ಞಾನದಲ್ಲಿ ಸ್ಥಿರನಾಗಿರುವ ಬ್ರಾಹ್ಮಣನು ಸದಾ ಬ್ರಹ್ಮಚಾರಿಯಾಗುತ್ತಾನೆ.

12214011a ಅಭಕ್ಷಯನ್ ವೃಥಾಮಾಂಸಮಮಾಂಸಾಶೀ ಭವತ್ಯುತ|

12214011c ದಾನನಿತ್ಯಃ ಪವಿತ್ರಶ್ಚ ಅಸ್ವಪ್ನಶ್ಚ ದಿವಾಸ್ವಪನ್||

ವೃಥಾಮಾಂಸವನ್ನು ತಿನ್ನದವನು ಅಮಾಂಸಾಶಿಯಾಗುತ್ತಾನೆ. ನಿತ್ಯವೂ ದಾನಮಾಡುವವನು ಪವಿತ್ರನೂ, ಹಗಲಿನಲ್ಲಿ ನಿದ್ರಿಸದಿರುವವನು ಅಸ್ವಪ್ನನೂ ಆಗುತ್ತಾನೆ.

12214012a ಭೃತ್ಯಾತಿಥಿಷು ಯೋ ಭುಂಕ್ತೇ ಭುಕ್ತವತ್ಸು ಸದಾ ಸ ಹ|

12214012c ಅಮೃತಂ ಸಕಲಂ ಭುಂಕ್ತ ಇತಿ ವಿದ್ಧಿ ಯುಧಿಷ್ಠಿರ||

ಯುಧಿಷ್ಠಿರ! ಸದಾ ಭೃತ್ಯರು ಮತ್ತು ಅತಿಥಿಗಳು ಊಟಮಾಡಿದ ನಂತರವೇ ಊಟಮಾಡುವವನು ಸದಾ ಅಮೃತವನ್ನೇ ಊಟಮಾಡುತ್ತಾನೆ ಎಂದು ತಿಳಿ.

[5]12214013a ಅಭುಕ್ತವತ್ಸು ನಾಶ್ನಾನಃ ಸತತಂ ಯಸ್ತು ವೈ ದ್ವಿಜಃ|

12214013c ಅಭೋಜನೇನ ತೇನಾಸ್ಯ ಜಿತಃ ಸ್ವರ್ಗೋ ಭವತ್ಯುತ||

ಭೃತ್ಯರು ಮತ್ತು ಅತಿಥಿಗಳ ಭೋಜನವಾಗದೇ ಸ್ವಯಂ ತಾನು ಅನ್ನಗ್ರಹಣಮಾಡದ ದ್ವಿಜನು ಭೋಜನ ಮಾಡದೇ ಇರುವುದರ ಆ ಪುಣ್ಯದಿಂದ ಸ್ವರ್ಗವನ್ನು ಜಯಿಸುತ್ತಾನೆ.

12214014a ದೇವತಾಭ್ಯಃ ಪಿತೃಭ್ಯಶ್ಚ ಭೃತ್ಯೇಭ್ಯೋಽತಿಥಿಭಿಃ ಸಹ|

12214014c ಅವಶಿಷ್ಟಂ ತು ಯೋಽಶ್ನಾತಿ ತಮಾಹುರ್ವಿಘಸಾಶಿನಮ್||

ದೇವತೆಗಳು, ಪಿತೃಗಳು, ಅತಿಥಿಗಳೊಂದಿಗೆ ಭೃತ್ಯರು ಊಟಮಾಡಿದ ನಂತರ ಉಳಿದ ಅನ್ನವನ್ನು ತಿನ್ನುವವನನ್ನು ವಿಘಸಾಶಿ ಎಂದು ಹೇಳುತ್ತಾರೆ.

12214015a ತೇಷಾಂ ಲೋಕಾ ಹ್ಯಪರ್ಯಂತಾಃ ಸದನೇ ಬ್ರಹ್ಮಣಾ ಸಹ|

12214015c ಉಪಸ್ಥಿತಾಶ್ಚಾಪ್ಸರೋಭಿಃ ಪರಿಯಾಂತಿ ದಿವೌಕಸಃ||

ಅಂಥವರಿಗೆ ಅನಂತ ಲೋಕಗಳು ಪ್ರಾಪ್ತವಾಗುತ್ತವೆ. ಬ್ರಹ್ಮನಿಂದಲೂ ಅಪ್ಸರೆಯರಿಂದಲೂ ಸಹಿತರಾದ ದೇವತೆಗಳು ಅವನ ಮನೆಯನ್ನು ಪರಿಕ್ರಮಿಸುತ್ತಿರುತ್ತಾರೆ.

12214016a ದೇವತಾಭಿಶ್ಚ ಯೇ ಸಾರ್ಧಂ ಪಿತೃಭಿಶ್ಚೋಪಭುಂಜತೇ|

12214016c ರಮಂತೇ ಪುತ್ರಪೌತ್ರೈಶ್ಚ ತೇಷಾಂ ಗತಿರನುತ್ತಮಾ||

ದೇವತೆಗಳು ಮತ್ತು ಪಿತೃಗಳ ಜೊತೆಗೆ[6] ಭೋಜನ ಮಾಡುವವರು ಈ ಲೋಕದಲ್ಲಿ ಪುತ್ರ-ಪೌತ್ರರೊಂದಿಗೆ ರಮಿಸುತ್ತಾರೆ ಮತ್ತು ಪರಲೋಕದಲ್ಲಿ ಉತ್ತಮ ಗತಿಯನ್ನು ಪಡೆಯುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅಮೃತಪ್ರಾಶನಿಕೋ ನಾಮ ಚತುರ್ದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಅಮೃತಪ್ರಾಶನಿಕ ಎನ್ನುವ ಇನ್ನೂರಾಹದಿನಾಲ್ಕನೇ ಅಧ್ಯಾಯವು.

[1] ವ್ರತಯುಕ್ತ ದ್ವಿಜರು ವೇದೋಕ್ತ ಸಕಾಮಕಾಮದ ಫಲದ ಇಚ್ಛೆಯಿಂದ ಹವಿಷ್ಯಾನ್ನದ ಭೋಜನ ಮಾಡುತ್ತಾರೆ. ಅವರ ಈ ಕಾರ್ಯವು ಉಚಿತವಾಗಿದೆಯೋ ಅಥವಾ ಅಲ್ಲವೋ? (ಗೀತಾ ಪ್ರೆಸ್).

[2] ವ್ರತಲುಬ್ಧಾ (ಭಾರತ ದರ್ಶನ/ಗೀತಾ ಪ್ರೆಸ್).

[3] ಮಾಂಸಾದೀ ಸದಾ ಚ ಸ್ಯಾತ್ ಪ್ರವಿತ್ರಶ್ಚ ಸದಾ ಭವೇತ್| (ಗೀತಾ ಪ್ರೆಸ್).

[4] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿ: ಶ್ರದ್ಧದಾನಃ ಸದಾ ಚ ಸ್ಯಾದ್ದೇವತಾದ್ವಿಜಪೂಜಕಃ| (ಭಾರತ ದರ್ಶನ).

[5] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅದತ್ತ್ವಾ ಯೋಽತಿಥಿಭ್ಯೋಽನ್ನಂ ನ ಭುಂಕ್ತೇ ಸೋಽತಿಥಿಪ್ರಿಯಃ| ಅದತ್ತ್ವಾನ್ನಂ ದೈವತೇಭ್ಯೋ ಯೋ ನ ಭುಂಕ್ತೇ ಸ ದೈವತಮ್|| (ಗೀತಾ ಪ್ರೆಸ್).

[6] ಅವರಿಗೆ ಅವರ ಭಾಗಗಳನ್ನು ಸಮರ್ಪಿಸಿದ ನಂತರ (ಗೀತಾ ಪ್ರೆಸ್/ಭಾರತ ದರ್ಶನ).

Comments are closed.