Shanti Parva: Chapter 213

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೩

ದಮೆಯ ಪ್ರಶಂಸೆ (1-16).

[1]12213001 ಯುಧಿಷ್ಠಿರ ಉವಾಚ|

12213001a ಕಿಂ ಕುರ್ವನ್ಸುಖಮಾಪ್ನೋತಿ ಕಿಂ ಕುರ್ವನ್ದುಃಖಮಾಪ್ನುತೇ|

12213001c ಕಿಂ ಕುರ್ವನ್ನಿರ್ಭಯೋ ಲೋಕೇ ಸಿದ್ಧಶ್ಚರತಿ ಭಾರತ||

ಯುಧಿಷ್ಠಿರನು ಹೇಳಿದನು: “ಭಾರತ! ಯಾವ ಕರ್ಮಗಳನ್ನು ಮಾಡಿ ಮನುಷ್ಯನು ಸುಖವನ್ನು ಪಡೆಯುತ್ತಾನೆ? ಯಾವುದನ್ನು ಮಾಡಿ ದುಃಖವನ್ನು ಹೊಂದುತ್ತಾನೆ? ಮತ್ತು ಯಾವ ಕರ್ಮಗಳನ್ನು ಮಾಡಿ ಲೋಕದಲ್ಲಿ ಸಿದ್ಧರಂತೆ ನಿರ್ಭಯನಾಗಿ ವಿಚರಿಸುತ್ತಾನೆ?”

12213002 ಭೀಷ್ಮ ಉವಾಚ|

12213002a ದಮಮೇವ ಪ್ರಶಂಸಂತಿ ವೃದ್ಧಾಃ ಶ್ರುತಿಸಮಾಧಯಃ|

12213002c ಸರ್ವೇಷಾಮೇವ ವರ್ಣಾನಾಂ ಬ್ರಾಹ್ಮಣಸ್ಯ ವಿಶೇಷತಃ||

ಭೀಷ್ಮನು ಹೇಳಿದನು: “ಮನೋಯೋಗಪೂರ್ವಕ ವೇದಾರ್ಥಗಳನ್ನು ವಿಚಾರಿಸುವ ವೃದ್ಧರು ಎಲ್ಲವರ್ಣದವರಿಗೂ, ಅದರಲ್ಲಿಯೂ ವಿಶೇಷವಾಗಿ ಬ್ರಾಹ್ಮಣರಿಗೆ, ಮನ ಮತ್ತು ಇಂದ್ರಿಯ ಸಂಯಮ ದಮೆಯನ್ನೇ ಪ್ರಶಂಸಿಸುತ್ತಾರೆ.

12213003a ನಾದಾಂತಸ್ಯ ಕ್ರಿಯಾಸಿದ್ಧಿರ್ಯಥಾವದುಪಲಭ್ಯತೇ|

12213003c ಕ್ರಿಯಾ ತಪಶ್ಚ ವೇದಾಶ್ಚ[2] ದಮೇ ಸರ್ವಂ ಪ್ರತಿಷ್ಠಿತಮ್||

ಮನಸ್ಸು-ಇಂದ್ರಿಯಗಳನ್ನು ನಿಗ್ರಹಸದೇ ಇರುವ ಅದಾಂತನ ಕರ್ಮಗಳು ಯಥೋಚಿತ ಫಲಗಳನ್ನು ನೀಡುವುದಿಲ್ಲ. ಏಕೆಂದರೆ ಕ್ರಿಯೆ, ತಪಸ್ಸು ಮತ್ತು ವೇದಗಳು ಎಲ್ಲವೂ ದಮೆಯನ್ನೇ ಆಧರಿಸಿ ಪ್ರತಿಷ್ಠಿತಗೊಂಡಿವೆ.

12213004a ದಮಸ್ತೇಜೋ ವರ್ಧಯತಿ ಪವಿತ್ರಂ ದಮ ಉಚ್ಯತೇ|

12213004c ವಿಪಾಪ್ಮಾ ನಿರ್ಭಯೋ ದಾಂತಃ ಪುರುಷೋ ವಿಂದತೇ ಮಹತ್||

ದಮೆಯು ತೇಜಸ್ಸನ್ನು ವರ್ಧಿಸುತ್ತದೆ. ದಮೆಯು ಪವಿತ್ರ ಎಂದು ಹೇಳುತ್ತಾರೆ. ದಾಂತ ಪುರುಷನು ಪಾಪಗಳನ್ನು ಕಳೆದುಕೊಂಡು ನಿರ್ಭಯನಾಗಿ ಮಹತ್ ಪದವನ್ನು ಪಡೆಯುತ್ತಾನೆ.

12213005a ಸುಖಂ ದಾಂತಃ ಪ್ರಸ್ವಪಿತಿ ಸುಖಂ ಚ ಪ್ರತಿಬುಧ್ಯತೇ|

12213005c ಸುಖಂ ಲೋಕೇ ವಿಪರ್ಯೇತಿ ಮನಶ್ಚಾಸ್ಯ ಪ್ರಸೀದತಿ||

ದಾಂತನಾದವನು ಸುಖವಾಗಿ ನಿದ್ರಿಸುತ್ತಾನೆ. ಸುಖವಾಗಿ ಏಳುತ್ತಾನೆ. ಸುಖದಿಂದಲೇ ಲೋಕದಲ್ಲಿ ವಿಚರಿಸುತ್ತಾನೆ ಮತ್ತು ಅವನ ಮನಸ್ಸೂ ಕೂಡ ಪ್ರಸನ್ನವಾಗಿರುತ್ತದೆ.

12213006a ತೇಜೋ ದಮೇನ ಧ್ರಿಯತೇ ನ ತತ್ತೀಕ್ಷ್ಣೋಽಧಿಗಚ್ಚತಿ|

12213006c ಅಮಿತ್ರಾಂಶ್ಚ ಬಹೂನ್ನಿತ್ಯಂ ಪೃಥಗಾತ್ಮನಿ ಪಶ್ಯತಿ||

ದಮೆಯಿಂದಲೇ ತೇಜಸ್ಸನ್ನು ಧರಿಸಿಕೊಳ್ಳಬಹುದು. ತೀಕ್ಷ್ಣಪ್ರಕೃತಿಯಿರುವವನಲ್ಲಿ ತೇಜಸ್ಸಿರುವುದಿಲ್ಲ. ಅದಾಂತನು ನಿತ್ಯವೂ ಕಾಮ-ಕ್ರೋಧಾದಿ ಅನೇಕ ಶತ್ರುಗಳನ್ನು ತನ್ನಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಅನುಭವಿಸುತ್ತಿರುತ್ತಾನೆ.

12213007a ಕ್ರವ್ಯಾದ್ಭ್ಯ ಇವ ಭೂತಾನಾಮದಾಂತೇಭ್ಯಃ ಸದಾ ಭಯಮ್|

12213007c ತೇಷಾಂ ವಿಪ್ರತಿಷೇಧಾರ್ಥಂ ರಾಜಾ ಸೃಷ್ಟಃ ಸ್ವಯಂಭುವಾ||

ಮಾಂಸಾಹಾರೀ ಪ್ರಾಣಿಗಳಿಂದ ಹೇಗೋ ಹಾಗೆ ಅದಾಂತರಿಂದ ಭೂತಗಳಿಗೆ ಸದಾ ಭಯವಿರುತ್ತದೆ. ಅಂಥವರನ್ನು ಹತೋಟಿಯಲ್ಲಿಡಲೆಂದೇ ಸ್ವಯಂಭುವು ರಾಜನನ್ನು ಸೃಷ್ಟಿಸಿದನು.

12213008a ಆಶ್ರಮೇಷು ಚ ಸರ್ವೇಷು ದಮ ಏವ ವಿಶಿಷ್ಯತೇ|

12213008c ಯಚ್ಚ ತೇಷು ಫಲಂ ಧರ್ಮೇ ಭೂಯೋ ದಾಂತೇ ತದುಚ್ಯತೇ||

ಚತುರಾಶ್ರಮಗಳೆಲ್ಲವುಗಳಲ್ಲಿಯೂ ದಮೆಯೇ ಶ್ರೇಷ್ಠವೆಂದು ಹೇಳಿದ್ದಾರೆ. ಆಶ್ರಮಧರ್ಮವನ್ನು ಪಾಲಿಸಿದುದಕ್ಕಿಂತ ಹೆಚ್ಚಿನ ಫಲವು ದಾಂತರಿಗೆ ದೊರೆಯುತ್ತದೆ ಎಂದು ಹೇಳುತ್ತಾರೆ.

12213009a ತೇಷಾಂ ಲಿಂಗಾನಿ ವಕ್ಷ್ಯಾಮಿ ಯೇಷಾಂ ಸಮುದಯೋ ದಮಃ|

12213009c ಅಕಾರ್ಪಣ್ಯಮಸಂರಂಭಃ ಸಂತೋಷಃ ಶ್ರದ್ದಧಾನತಾ||

12213010a ಅಕ್ರೋಧ ಆರ್ಜವಂ ನಿತ್ಯಂ ನಾತಿವಾದೋ ನ ಮಾನಿತಾ|

12213010c ಗುರುಪೂಜಾನಸೂಯಾ ಚ ದಯಾ ಭೂತೇಷ್ವಪೈಶುನಮ್||

12213011a ಜನವಾದಮೃಷಾವಾದಸ್ತುತಿನಿಂದಾವಿವರ್ಜನಮ್|

12213011c ಸಾಧುಕಾಮಶ್ಚಾಸ್ಪೃಹಯನ್ನಾಯಾತಿ ಪ್ರತ್ಯಯಂ ನೃಷು||

ದಮೆಯ ಕಾರಣದಿಂದ ಉಂಟಾಗುವ ಲಕ್ಷಣಗಳ ಕುರಿತು ಹೇಳುತ್ತೇನೆ. ಕೃಪಣತೆಯಿಲ್ಲದಿರುವುದು, ಉತ್ತೇಜನವಿಲ್ಲದೇ ಇರುವುದು, ಸಂತೋಷ, ಶ್ರದ್ಧೆ, ಕ್ರೋಧವುಂಟಾಗದಿರುವುದು, ನಿತ್ಯ ಸರಳತೆ, ಅತಿಯಾಗಿ ವಾದಿಸದೇ ಇರುವುದು, ದುರಭಿಮಾನವಿಲ್ಲದೇ ಇರುವುದು, ಗುರುಪೂಜನ, ಅಸೂಯೆಯಿಲ್ಲದೇ ಇರುವುದು, ಸರ್ವ ಭೂತಗಳ ಮೇಲಿನ ದಯೆ, ಚಾಡಿಹೇಳದೇ ಇರುವುದು, ಇನ್ನೊಬ್ಬರ ಮೇಲೆ ಅಪವಾದವನ್ನು ಹೊರಿಸದೇ ಇರುವುದು, ಸುಳ್ಳನ್ನು ಹೇಳದೇ ಇರುವುದು, ಸ್ತುತಿ-ನಿಂದೆಗಳನ್ನು ತೊರೆಯುವುದು, ಸತ್ಪುರುಷರ ಸಂಗವನ್ನು ಬಯಸುವುದು, ಮುಂದೆ ಬರುವ ಸುಖಕ್ಕಾಗಿ ಆಸೆಪಡದೇ ಇರುವುದು ಮತ್ತು ದುಃಖಕ್ಕಾಗಿ ಚಿಂತಿಸದೇ ಇರುವುದು – ಇವು ದಾಂತನ ಲಕ್ಷಣಗಳು.

12213012a ಅವೈರಕೃತ್ಸೂಪಚಾರಃ ಸಮೋ ನಿಂದಾಪ್ರಶಂಸಯೋಃ|

12213012c ಸುವೃತ್ತಃ ಶೀಲಸಂಪನ್ನಃ ಪ್ರಸನ್ನಾತ್ಮಾತ್ಮವಾನ್ಬುಧಃ|

12213012e ಪ್ರಾಪ್ಯ ಲೋಕೇ ಚ ಸತ್ಕಾರಂ ಸ್ವರ್ಗಂ ವೈ ಪ್ರೇತ್ಯ ಗಚ್ಚತಿ||

ದಾಂತನು ಯಾರೊಡನೆಯೂ ವೈರವನ್ನಿಟ್ಟುಕೊಂಡಿರುವುದಿಲ್ಲ. ಅವನು ಎಲ್ಲರೊಡನೆಯೂ ಚೆನ್ನಾಗಿಯೇ ವರ್ತಿಸುತ್ತಾನೆ. ಸ್ತುತಿ-ನಿಂದೆಗಳಲ್ಲಿ ಸಮಭಾವವನ್ನು ಇರಿಸಿಕೊಂಡಿರುವ ಆ ಸದಾಚಾರೀ ಶೀಲವಂತ ಪ್ರಸನ್ನಚಿತ್ತ ಧೈರ್ಯವಾನನು ದೋಷಗಳನ್ನು ದಮನಗೊಳಿಸುವುದರಲ್ಲಿ ಸಮರ್ಥನಾಗಿರುತ್ತಾನೆ. ಅವನು ಇಹದಲ್ಲಿ ಸನ್ಮಾನಿತನಾಗುತ್ತಾನೆ ಮತ್ತು ಪರಲೋಕದಲ್ಲಿ ಸ್ವರ್ಗವನ್ನು ಸೇರುತ್ತಾನೆ.

[3]12213013a ಸರ್ವಭೂತಹಿತೇ ಯುಕ್ತೋ ನ ಸ್ಮಯಾದ್ದ್ವೇಷ್ಟಿ ವೈ ಜನಮ್|

12213013c ಮಹಾಹ್ರದ ಇವಾಕ್ಷೋಭ್ಯ ಪ್ರಜ್ಞಾತೃಪ್ತಃ ಪ್ರಸೀದತಿ||

ಸರ್ವಭೂತಗಳ ಹಿತದಲ್ಲಿ ನಿರತನಾಗಿರುವ ಮತ್ತು ಯಾರೊಡನೆಯೂ ದ್ವೇಷವಿಲ್ಲದಿರುವವನು ಯಾವುದೇ ಕ್ಷೋಭೆಗೊಳಗಾಗದ ಮಹಾ ಜಲಾಶಯದಂತೆ ಗಂಭೀರನಾಗಿರುತ್ತಾನೆ. ಯಾವಾಗಲೂ ಜ್ಞಾನದಿಂದ ತೃಪ್ತನಾಗಿ ಪ್ರಸನ್ನಚಿತ್ತನಾಗಿರುತ್ತಾನೆ.

12213014a ಅಭಯಂ ಸರ್ವಭೂತೇಭ್ಯಃ ಸರ್ವೇಷಾಮಭಯಂ ಯತಃ|

12213014c ನಮಸ್ಯಃ ಸರ್ವಭೂತಾನಾಂ ದಾಂತೋ ಭವತಿ ಜ್ಞಾನವಾನ್||

ಸರ್ವಭೂತಗಳಿಗೂ ಅಭಯನಾದ ಮತ್ತು ಸರ್ವರಿಂದಲೂ ಅಭಯನಾದ ಜ್ಞಾನಿ ದಾಂತನು ಸರ್ವಭೂತಗಳಿಂದಲೂ ನಮಸ್ಕೃತನಾಗುತ್ತಾನೆ.

12213015a ನ ಹೃಷ್ಯತಿ ಮಹತ್ಯರ್ಥೇ ವ್ಯಸನೇ ಚ ನ ಶೋಚತಿ|

12213015c ಸ ವೈ ಪರಿಮಿತಪ್ರಜ್ಞಃ ಸ ದಾಂತೋ ದ್ವಿಜ ಉಚ್ಯತೇ||

ದಾಂತನು ಮಹಾ ಸಂಪತ್ತೊದಗಿದರೂ ಹರ್ಷಗೊಳ್ಳುವುದಿಲ್ಲ ಮತ್ತು ಮಹಾ ವ್ಯಸನಬಂದೊದಗಿದರೂ ಶೋಕಿಸುವುದಿಲ್ಲ. ಅಂಥಹ ದ್ವಿಜನು ಸೂಕ್ಷ್ಮಬುದ್ಧಿಯುಳ್ಳವನು ಎಂದು ಹೇಳುತ್ತಾರೆ.

12213016a ಕರ್ಮಭಿಃ ಶ್ರುತಸಂಪನ್ನಃ ಸದ್ಭಿರಾಚರಿತೈಃ ಶುಭೈಃ|

12213016c ಸದೈವ ದಮಸಂಯುಕ್ತಸ್ತಸ್ಯ ಭುಂಕ್ತೇ ಮಹತ್ಫಲಮ್||

ಶ್ರುತಸಂಪನ್ನ ದಾಂತನು ಸದೈವವೂ ದಮಸಂಯುಕ್ತನಾಗಿ ಸತ್ಪುರುಷರು ಆಚರಿಸುವ ಶುಭ ಕರ್ಮಗಳಿಂದ ಮಹಾಫಲವನ್ನು ಭೋಗಿಸುತ್ತಾನೆ.

12213017a ಅನಸೂಯಾ ಕ್ಷಮಾ ಶಾಂತಿಃ ಸಂತೋಷಃ ಪ್ರಿಯವಾದಿತಾ|

12213017c ಸತ್ಯಂ ದಾನಮನಾಯಾಸೋ ನೈಷ ಮಾರ್ಗೋ ದುರಾತ್ಮನಾಮ್||

ಅಸೂಯೆಪಡದಿರುವುದು, ಕ್ಷಮೆ, ಶಾಂತಿ, ಸಂತೋಷ, ಪ್ರಿಯ ಮಾತನ್ನಾಡುವುದು, ಸತ್ಯ, ದಾನ, ಅನಾಯಾಸ – ಇವು ದುರಾತ್ಮರ ಮಾರ್ಗವಲ್ಲ.

[4]12213018a ಕಾಮಕ್ರೋಧೌ ವಶೇ ಕೃತ್ವಾ ಬ್ರಹ್ಮಚಾರೀ ಜಿತೇಂದ್ರಿಯಃ|

12213018c ವಿಕ್ರಮ್ಯ ಘೋರೇ ತಪಸಿ ಬ್ರಾಹ್ಮಣಃ ಸಂಶಿತವ್ರತಃ|

12213018e ಕಾಲಾಕಾಂಕ್ಷೀ ಚರೇಲ್ಲೋಕಾನ್ನಿರಪಾಯ ಇವಾತ್ಮವಾನ್||

ಕಾಮಕ್ರೋಧಗಳನ್ನು ವಶೀಕರಿಸಿ, ಬ್ರಹ್ಮಚಾರಿಯಾಗಿಯೂ ಜಿತೇಂದ್ರಿಯನಾಗಿಯೂ ಇದ್ದುಕೊಂಡು ವಿಕ್ರಮದಿಂದ ಘೋರತಪಸ್ಸಿನಲ್ಲಿ  ತೊಡಗಿರುವ ಸಂಶಿತವ್ರತ ಬ್ರಾಹ್ಮಣನು ಮೃತ್ಯುಕಾಲವನ್ನು ಪ್ರತೀಕ್ಷಿಸುತ್ತಾ ಯಾವ ವಿಘ್ನ-ಬಾಧೆಗಳೂ ಇಲ್ಲದೇ ಧೈರ್ಯಪೂರ್ವಕವಾಗಿ ಸಂಪೂರ್ಣ ಜಗತ್ತಿನಲ್ಲಿ ವಿಚರಿಸುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ದಮಪ್ರಶಂಸಾಯಾಂ ತ್ರಯೋದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ದಮಪ್ರಶಂಸಾ ಎನ್ನುವ ಇನ್ನೂರಾಹದಿಮೂರನೇ ಅಧ್ಯಾಯವು.

[1] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಶ್ವೇತಕೇತು ಮತ್ತು ಸುವರ್ಚಲೆಯರ ಆಧ್ಯಾತ್ಮಿಕವಿಷಯದ ಸಂವಾದ ಮತ್ತು ಗೃಹಸ್ಥಧರ್ಮವನ್ನು ಪಾಲಿಸುತ್ತಾ ಆ ಪತಿ-ಪತ್ನಿಯರು ಪರಮಾತ್ಮನನ್ನು ಸೇರಿದ ವಿಷಯವುಳ್ಳ 108 ಶ್ಲೋಕಗಳು ಇವೆ (ಗೀತಾ ಪ್ರೆಸ್). ಇವನ್ನು ಅನುಬಂಧದಲ್ಲಿ ನೀಡಲಾಗಿದೆ.

[2] ಸತ್ಯಂ ಚ (ಗೀತಾ ಪ್ರೆಸ್).

[3] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ದುರ್ಗಮಂ ಸರ್ವಭೂತಾನಾಂ ಪ್ರಾಪಯನ್ಮೋದತೇ ಸುಖೀ| (ಗೀತಾ ಪ್ರೆಸ್/ಭಾರತ ದರ್ಶನ).

[4] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಕಾಮಕ್ರೋಧೌ ಚ ಲೋಭಶ್ಚ ಪರಸ್ಯೇರ್ಷ್ಯಾವಿಕತ್ಥನಾ| (ಗೀತಾ ಪ್ರೆಸ್/ಭಾರತ ದರ್ಶನ).

Comments are closed.