Shanti Parva: Chapter 212

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೨

ಪಂಚಶಿಖನು ಮಿಥಿಲನರೇಶನಿಗೆ ಮೋಕ್ಷತತ್ತ್ವವನ್ನು ಉಪದೇಶಿಸಿದುದು (1-52).

12212001 ಭೀಷ್ಮ ಉವಾಚ|

12212001a ಜನಕೋ ಜನದೇವಸ್ತು ಜ್ಞಾಪಿತಃ ಪರಮರ್ಷಿಣಾ|

12212001c ಪುನರೇವಾನುಪಪ್ರಚ್ಚ ಸಾಂಪರಾಯೇ ಭವಾಭವೌ||

ಭೀಷ್ಮನು ಹೇಳಿದನು: “ಪರಮಋಷಿಯು ಹಾಗೆ ಉಪದೇಶಿಸಲು ಜನಕ ಜನದೇವನು ಮರಣಾನಂತರ ಇರುವಿಕೆ ಮತ್ತು ಇಲ್ಲದಿರುವಿಕೆಯ ಕುರಿತು ಪುನಃ ಪ್ರಶ್ನಿಸಿದನು:

12212002a ಭಗವನ್ಯದಿದಂ ಪ್ರೇತ್ಯ ಸಂಜ್ಞಾ ಭವತಿ ಕಸ್ಯ ಚಿತ್|

12212002c ಏವಂ ಸತಿ ಕಿಮಜ್ಞಾನಂ ಜ್ಞಾನಂ ವಾ ಕಿಂ ಕರಿಷ್ಯತಿ||

“ಭಗವನ್! ಮರಣಾನಂತರ ಯಾರಿಗೂ ಯಾವುದೇ ರೀತಿಯ ಸಂಜ್ಞೆಗಳೇ ಇಲ್ಲದಿರುವಾಗ ಜ್ಞಾನ ಅಥವಾ ಅಜ್ಞಾನವಾದರೋ ಏನು ತಾನೇ ಮಾಡಬಲ್ಲವು?

12212003a ಸರ್ವಮುಚ್ಚೇದನಿಷ್ಠಂ ಸ್ಯಾತ್ಪಶ್ಯ ಚೈತದ್ದ್ವಿಜೋತ್ತಮ|

12212003c ಅಪ್ರಮತ್ತಃ ಪ್ರಮತ್ತೋ ವಾ ಕಿಂ ವಿಶೇಷಂ ಕರಿಷ್ಯತಿ||

ದ್ವಿಜೋತ್ತಮ! ಸಾವಿನೊಂದಿಗೆ ಎಲ್ಲ ಸತ್ಕರ್ಮಗಳೂ ನಾಶವಾಗಿಹೋಗುತ್ತವೆ ಎಂದು ಗಮನಿಸಿದರೆ ಅಪ್ರಮತ್ತನಾಗಿಯೂ ಪ್ರಮತ್ತನಾಗಿಯೂ ಇರುವುದರಲ್ಲಿ ಯಾವ ವ್ಯತ್ಯಾಸವಿದೆಯೆಂದಾಯಿತು?

12212004a ಅಸಂಸರ್ಗೋ ಹಿ ಭೂತೇಷು ಸಂಸರ್ಗೋ ವಾ ವಿನಾಶಿಷು|

12212004c ಕಸ್ಮೈ ಕ್ರಿಯೇತ ಕಲ್ಪೇನ ನಿಶ್ಚಯಃ ಕೋಽತ್ರ ತತ್ತ್ವತಃ||

ಜೀವಗಳಿಗೆ ಸಂಸರ್ಗವಿದ್ದಿರಲಿ ಅಥವಾ ಸಂಸರ್ಗವಿಲ್ಲದಿದ್ದಿರಲಿ, ಎಲ್ಲವೂ ನಾಶವಾಗುತ್ತವೆ. ಹಾಗಿರುವಾಗ ಯಾರು ಏಕೆ ಕರ್ಮಗಳನ್ನು ಮಾಡಬೇಕು? ಸಂಕಲ್ಪ-ನಿಶ್ಚಯಗಳನ್ನು ಏಕೆ ಮಾಡಬೇಕು? ಇದರ ಕುರಿತಾದ ಸತ್ಯವೇನು?”

12212005a ತಮಸಾ ಹಿ ಪ್ರತಿಚ್ಚನ್ನಂ ವಿಭ್ರಾಂತಮಿವ ಚಾತುರಮ್|

12212005c ಪುನಃ ಪ್ರಶಮಯನ್ವಾಕ್ಯೈಃ ಕವಿಃ ಪಂಚಶಿಖೋಽಬ್ರವೀತ್||

ಅಜ್ಞಾನದ ಅಂಧಕಾರದಿಂದ ಆಚ್ಛಾದಿತನಾಗಿ ಭ್ರಾಂತನೂ ವ್ಯಾಕುಲನೂ ಆಗಿದ್ದ ಅವನಿಗೆ ಕವಿ ಪಂಚಶಿಖನು ಪುನಃ ಈ ಮಾತುಗಳಿಂದ ಸಮಾಧಾನಪಡಿಸಿದನು:

12212006a ಉಚ್ಚೇದನಿಷ್ಠಾ ನೇಹಾಸ್ತಿ ಭಾವನಿಷ್ಠಾ ನ ವಿದ್ಯತೇ|

12212006c ಅಯಂ ಹ್ಯಪಿ ಸಮಾಹಾರಃ ಶರೀರೇಂದ್ರಿಯಚೇತಸಾಮ್|

12212006e ವರ್ತತೇ ಪೃಥಗನ್ಯೋನ್ಯಮಪ್ಯಪಾಶ್ರಿತ್ಯ ಕರ್ಮಸು||

“ಮರಣದೊಂದಿಗೆ ಸಾಧನೆಗಳು ನಷ್ಟವಾಗುವುದಿಲ್ಲ. ಅವುಗಳಲ್ಲಿನ ಭಾವನಿಷ್ಠೆಯೂ ಇರುವುದಿಲ್ಲ. ಇದು ಶರೀರ, ಇಂದ್ರಿಯ ಮತ್ತು ಚೇತನಗಳ ಒಕ್ಕೂಟವು. ಇವುಗಳು ಪ್ರತ್ಯೇಕವಾಗಿರುವಂತೆ ಕಂಡುಬಂದರೂ ಅನ್ಯೋನ್ಯಾಶ್ರಯದಿಂದ ಕರ್ಮಗಳಲ್ಲಿ ಪ್ರವೃತ್ತವಾಗಿರುತ್ತವೆ.

12212007a ಧಾತವಃ ಪಂಚಶಾಖೋಽಯಂ ಖಂ ವಾಯುರ್ಜ್ಯೋತಿರಂಬು ಭೂಃ|

12212007c ತೇ ಸ್ವಭಾವೇನ ತಿಷ್ಠಂತಿ ವಿಯುಜ್ಯಂತೇ ಸ್ವಭಾವತಃ||

ಆಕಾಶ, ವಾಯು, ತೇಜಸ್ಸು, ಜಲ ಮತ್ತು ಪೃಥ್ವಿಗಳೆಂಬ ಧಾತುಗಳು ಪಂಚಶಾಖೆಗಳು. ಅವು ತಮ್ಮದೇ ಸ್ವಭಾವದಿಂದ ಸೇರುತ್ತವೆ ಮತ್ತು ತಮ್ಮದೇ ಸ್ವಭಾವದಿಂದ ಬೇರೆಯಾಗುತ್ತವೆ.

12212008a ಆಕಾಶಂ ವಾಯುರೂಷ್ಮಾ ಚ ಸ್ನೇಹೋ ಯಚ್ಚಾಪಿ ಪಾರ್ಥಿವಮ್|

12212008c ಏಷ ಪಂಚಸಮಾಹಾರಃ ಶರೀರಮಿತಿ ನೈಕಧಾ|

12212008e ಜ್ಞಾನಮೂಷ್ಮಾ ಚ ವಾಯುಶ್ಚ ತ್ರಿವಿಧಃ ಕರ್ಮಸಂಗ್ರಹಃ||

ಆಕಾಶ, ವಾಯು, ಉಷ್ಣತೆ, ತೇವ ಮತ್ತು ಭೂಮಿ – ಈ ಐದು ಸೇರಿ ಒಂದಾದಾಗ ಶರೀರವೆಂದಾಗುತ್ತವೆ. ಜ್ಞಾನ (ಬುದ್ಧಿ), ಉಷ್ಣತೆ (ಜಠರಾಗ್ನಿ) ಮತ್ತು ವಾಯು (ಪ್ರಾಣವಾಯು) – ಈ ಮೂರು ಸೇರಿ ಎಲ್ಲ ಕರ್ಮಗಳಿಗೆ ಕಾರಣಗಳಾಗುತ್ತವೆ.

12212009a ಇಂದ್ರಿಯಾಣೀಂದ್ರಿಯಾರ್ಥಾಶ್ಚ ಸ್ವಭಾವಶ್ಚೇತನಾ ಮನಃ|

12212009c ಪ್ರಾಣಾಪಾನೌ ವಿಕಾರಶ್ಚ ಧಾತವಶ್ಚಾತ್ರ ನಿಃಸೃತಾಃ||

ಇವುಗಳಿಂದಲೇ ಇಂದ್ರಿಯಗಳು, ಇಂದ್ರಿಯವಿಷಯಗಳು, ಸ್ವಭಾವ, ಚೈತನ್ಯ, ಮನಸ್ಸು, ಪ್ರಾಣ, ಅಪಾನ, ವಿಕಾರಗಳು ಮತ್ತು ಧಾತುಗಳು ಪ್ರಕಟವಾಗಿವೆ.

12212010a ಶ್ರವಣಂ ಸ್ಪರ್ಶನಂ ಜಿಹ್ವಾ ದೃಷ್ಟಿರ್ನಾಸಾ ತಥೈವ ಚ|

12212010c ಇಂದ್ರಿಯಾಣೀತಿ ಪಂಚೈತೇ ಚಿತ್ತಪೂರ್ವಂಗಮಾ ಗುಣಾಃ||

ಕಿವಿಗಳು, ಚರ್ಮ, ನಾಲಿಗೆ, ಕಣ್ಣು, ಮತ್ತು ಮೂಗು – ಈ ಐದು ಜ್ಞಾನೇಂದ್ರಿಯಗಳು. ಶಬ್ದಾದಿ ಗುಣಗಳು ಮನಸ್ಸಿನೊಡನೆ ಬೆರೆತು[1] ಇಂದ್ರಿಯಗಳಿಗೆ ವಿಷಯಗಳಾಗುತ್ತವೆ.

12212011a ತತ್ರ ವಿಜ್ಞಾನಸಂಯುಕ್ತಾ ತ್ರಿವಿಧಾ ವೇದನಾ ಧ್ರುವಾ|

12212011c ಸುಖದುಃಖೇತಿ ಯಾಮಾಹುರದುಃಖೇತ್ಯಸುಖೇತಿ ಚ||

ಅದು ಬುದ್ಧಿಯೊಡನೆ ಸೇರಿದಾಗ ಮೂರು ರೀತಿಯ ವೇದನೆಗಳುಂಟಾಗುವುದು ನಿಶ್ಚಿತ ಎಂದು ಹೇಳುತ್ತಾರೆ: ಸುಖ, ದುಃಖ ಮತ್ತು ಸುಖ-ದುಃಖಗಳೆರಡೂ ಆಗದೇ ಇರುವುದು[2].

12212012a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ಮೂರ್ತ್ಯಥ|

12212012c ಏತೇ ಹ್ಯಾಮರಣಾತ್ಪಂಚ ಷಡ್ಗುಣಾ ಜ್ಞಾನಸಿದ್ಧಯೇ||

ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧ – ಈ ಐದು ಮರಣದವರೆಗೂ ಇರುತ್ತವೆ. ಆರನೆಯ ಬುದ್ಧಿಯೊಂದಿಗೆ ಸೇರಿ ಇವು ಎಲ್ಲ ಅನುಭವಗಳನ್ನೂ ಉಂಟುಮಾಡುತ್ತವೆ[3].

12212013a ತೇಷು ಕರ್ಮನಿಸರ್ಗಶ್ಚ ಸರ್ವತತ್ತ್ವಾರ್ಥನಿಶ್ಚಯಃ|

12212013c ತಮಾಹುಃ ಪರಮಂ ಶುಕ್ರಂ ಬುದ್ಧಿರಿತ್ಯವ್ಯಯಂ ಮಹತ್||

ಕರ್ಮಸಂನ್ಯಾಸವೂ ಸರ್ವತತ್ತ್ವಾರ್ಥನಿಶ್ಚಯವೂ ಇವುಗಳ ಮೇಲೆಯೇ ಅವಲಂಬಿಸಿವೆ. ಆದುದರಿಂದ ಬುದ್ಧಿಯನ್ನು ಪರಮ ಬೀಜವೆಂದೂ, ಅವ್ಯಯವೆಂದೂ, ಮಹತ್ತೆಂದೂ ಕರೆಯುತ್ತಾರೆ[4].

12212014a ಇಮಂ ಗುಣಸಮಾಹಾರಮಾತ್ಮಭಾವೇನ ಪಶ್ಯತಃ|

12212014c ಅಸಮ್ಯಗ್ದರ್ಶನೈರ್ದುಃಖಮನಂತಂ ನೋಪಶಾಮ್ಯತಿ||

ಈ ಗುಣಗಳ ಸಮೂಹವಾದ ಶರೀರವನ್ನೇ ಆತ್ಮನೆಂದು ತಿಳಿದರೆ ಅದು ಸರಿಯಾದ ಜ್ಞಾನವಲ್ಲ ಮತ್ತು ಅಂಥವನ ಅನಂತ ದುಃಖವು ನಾಶವಾಗುವುದಿಲ್ಲ.

12212015a ಅನಾತ್ಮೇತಿ ಚ ಯದ್ದೃಷ್ಟಂ ತೇನಾಹಂ ನ ಮಮೇತ್ಯಪಿ|

12212015c ವರ್ತತೇ ಕಿಮಧಿಷ್ಠಾನಾ ಪ್ರಸಕ್ತಾ ದುಃಖಸಂತತಿಃ||

ಇವುಗಳು ಆತ್ಮವೆಲ್ಲವೆಂದು ನೋಡುವವನಿಗೆ ಮಮತ್ವವು ಇರುವುದಿಲ್ಲ. ಹೀಗೆ ಇರುವವನನ್ನು ದುಃಖಸಂತತಿಗಳು ಹೇಗೆ ತಾನೆ ಅಂಟಿಕೊಳ್ಳುತ್ತವೆ? ಎಲ್ಲಿ ನೆಲೆಗೊಳ್ಳುತ್ತವೆ?

12212016a ತತ್ರ ಸಮ್ಯಙ್ಮನೋ[5] ನಾಮ ತ್ಯಾಗಶಾಸ್ತ್ರಮನುತ್ತಮಮ್|

12212016c ಶೃಣು ಯತ್ತವ ಮೋಕ್ಷಾಯ ಭಾಷ್ಯಮಾಣಂ ಭವಿಷ್ಯತಿ||

ಈ ವಿಷಯದಲ್ಲಿ ಸಮ್ಯಙ್ಮನ ಎಂಬ ಹೆಸರಿನ ಅನುತ್ತಮ ತ್ಯಾಗಶಾಸ್ತ್ರವಿದೆ. ನಾನು ಹೇಳುವ ಅದನ್ನು ಕೇಳು. ಅದು ನಿನ್ನ ಮೋಕ್ಷಕ್ಕೆ ಕಾರಣವಾಗುತ್ತದೆ.

12212017a ತ್ಯಾಗ ಏವ ಹಿ ಸರ್ವೇಷಾಮುಕ್ತಾನಾಮಪಿ[6] ಕರ್ಮಣಾಮ್|

12212017c ನಿತ್ಯಂ ಮಿಥ್ಯಾವಿನೀತಾನಾಂ ಕ್ಲೇಶೋ ದುಃಖಾವಹೋ ಮತಃ||

ಕರ್ಮಗಳಿಂದ ಮುಕ್ತರಾಗಲು ಬಯಸುವ ಇಲ್ಲರಿಗೂ ತ್ಯಾಗವನ್ನೇ ಹೇಳುತ್ತಾರೆ. ಅದರೆ ಮಿಥ್ಯಾಮತಗಳನ್ನು ಅನುಸರಿಸುವವರು ನಿತ್ಯವೂ ಕ್ಲೇಶ-ದುಃಖಗಳನ್ನು ಅನುಭವಿಸಬೇಕಾಗುತ್ತದೆ.

12212018a ದ್ರವ್ಯತ್ಯಾಗೇ ತು ಕರ್ಮಾಣಿ ಭೋಗತ್ಯಾಗೇ ವ್ರತಾನ್ಯಪಿ|

12212018c ಸುಖತ್ಯಾಗೇ ತಪೋಯೋಗಃ ಸರ್ವತ್ಯಾಗೇ ಸಮಾಪನಾ||

ದ್ರವ್ಯತ್ಯಾಗಕ್ಕೆ ಕರ್ಮಗಳಿವೆ. ಭೋಗತ್ಯಾಗಕ್ಕೆ ವ್ರತಗಳಿವೆ. ಸುಖತ್ಯಾಗಕ್ಕೆ ತಪೋಯೋಗವಿದೆ. ಇದರಲ್ಲಿ ಎಲ್ಲ ತ್ಯಾಗಗಳೂ ಸಮಾಪ್ತವಾಗುತ್ತವೆ[7].

12212019a ತಸ್ಯ ಮಾರ್ಗೋಽಯಮದ್ವೈಧಃ ಸರ್ವತ್ಯಾಗಸ್ಯ ದರ್ಶಿತಃ|

12212019c ವಿಪ್ರಹಾಣಾಯ ದುಃಖಸ್ಯ ದುರ್ಗತಿರ್ಹ್ಯನ್ಯಥಾ ಭವೇತ್||

ವಿದ್ವಾಂಸರು ತೋರಿಸಿಕೊಟ್ಟ ಸರ್ವತ್ಯಾಗದ ಮಾರ್ಗವನ್ನು ವರ್ಣಿಸುತ್ತೇನೆ. ಇದರಿಂದ ದುಃಖವು ನಾಶವಾಗುತ್ತದೆ. ಅನ್ಯಥಾ ದುರ್ಗತಿಯುಂಟಾಗುತ್ತದೆ.

12212020a ಪಂಚ ಜ್ಞಾನೇಂದ್ರಿಯಾಣ್ಯುಕ್ತ್ವಾ ಮನಃಷಷ್ಠಾನಿ ಚೇತಸಿ|

12212020c ಮನಃಷಷ್ಠಾನಿ[8] ವಕ್ಷ್ಯಾಮಿ ಪಂಚ ಕರ್ಮೇಂದ್ರಿಯಾಣಿ ತು||

ಚೇತನದಲ್ಲಿರುವ ಪಂಚಜ್ಞಾನೇಂದ್ರಿಯಗಳು ಮತ್ತು ಆರನೆಯ ಮನಸ್ಸಿನ ಕುರಿತು ಇದಾಗಲೇ ಹೇಳಿದ್ದೇನೆ. ಈಗ ಆರನೆಯ ಮನಸ್ಸು ಮತ್ತು ಐದು ಕರ್ಮೇಂದ್ರಿಯಗಳ ಕುರಿತು ಹೇಳುತ್ತೇನೆ[9].

12212021a ಹಸ್ತೌ ಕರ್ಮೇಂದ್ರಿಯಂ ಜ್ಞೇಯಮಥ ಪಾದೌ ಗತೀಂದ್ರಿಯಮ್|

12212021c ಪ್ರಜನಾನಂದಯೋಃ ಶೇಫೋ ವಿಸರ್ಗೇ ಪಾಯುರಿಂದ್ರಿಯಮ್||

ಎರಡು ಕೈಗಳು ಕಾರ್ಯಮಾಡುವ ಕರ್ಮೇಂದ್ರಿಯಗಳು. ಎರಡು ಪಾದಗಳು ಚಲಿಸಲಿರುವ ಕರ್ಮೇಂದ್ರಿಯಗಳು. ಲಿಂಗವು ಸಂತಾನೋತ್ಪತ್ತಿಗೆ ಮತ್ತು ಆನಂದವನ್ನುಂಟುಮಾಡಲಿರುವ ಕರ್ಮೇಂದ್ರಿಯಗಳು. ಗುದವು ಮಲವನ್ನು ಹೊರಹಾಕುವ ಕರ್ಮೇಂದ್ರಿಯ ಎಂದು ತಿಳಿದುಕೋ.

12212022a ವಾಕ್ತು ಶಬ್ದವಿಶೇಷಾರ್ಥಂ ಗತಿಂ[10] ಪಂಚಾನ್ವಿತಾಂ ವಿದುಃ|

12212022c ಏವಮೇಕಾದಶೈತಾನಿ ಬುದ್ಧ್ಯಾ ತ್ವವಸೃಜೇನ್ಮನಃ[11]||

ಮಾತು ವಿಶೇಷವಾಗಿ ಶಬ್ದಗಳ ಉಚ್ಚಾರಗಳಿಗಿದೆ. ಈ ಐದರಲ್ಲಿಯೂ ಗತಿಯಿದೆ ಎನ್ನುವುದನ್ನು ತಿಳಿದುಕೋ. ಮನಸ್ಸನ್ನೂ ಸೇರಿದ ಈ ಹನ್ನೊಂದನ್ನು ಬುದ್ಧಿಯ ಮೂಲಕ ತ್ಯಜಿಸಬೇಕು.

12212023a ಕರ್ಣೌ ಶಬ್ದಶ್ಚ ಚಿತ್ತಂ ಚ ತ್ರಯಃ ಶ್ರವಣಸಂಗ್ರಹೇ|

12212023c ತಥಾ ಸ್ಪರ್ಶೇ ತಥಾ ರೂಪೇ ತಥೈವ ರಸಗಂಧಯೋಃ||

ಕಿವಿಗಳು, ಶಬ್ದ ಮತ್ತು ಚಿತ್ತ ಈ ಮೂರು ಕೇಳುವ ಕ್ರಿಯೆಗೆ ಬೇಕಾದವುಗಳು. ಹಾಗೆಯೇ ಸ್ಪರ್ಶ, ರೂಪ, ರಸ, ಮತ್ತು ಗಂಧಗಳ ಕ್ರಿಯೆಗೂ ಮೂರರ– ಜ್ಞಾನೇಂದ್ರಿಯ, ಇಂದ್ರಿಯವಿಷಯ ಮತ್ತು ಚಿತ್ತ –ಅವಶ್ಯಕತೆಯಿದೆ.

12212024a ಏವಂ ಪಂಚತ್ರಿಕಾ ಹ್ಯೇತೇ ಗುಣಾಸ್ತದುಪಲಬ್ಧಯೇ|

12212024c ಯೇನ ಯಸ್ತ್ರಿವಿಧೋ ಭಾವಃ ಪರ್ಯಾಯಾತ್ಸಮುಪಸ್ಥಿತಃ||

ಹೀಗೆ ಮೂರರ ಐದು ಸಮುದಾಯಗಳಿಂದ ಶಬ್ದಾದಿ ವಿಷಯಗಳ ಗ್ರಹಣವಾಗುತ್ತದೆ. ಈ ಕ್ರಿಯೆಯಲ್ಲಿ ಪರ್ಯಾಯವಾಗಿ ಮೂರು ವಿಧದ ಭಾವಗಳು ಉಪಸ್ಥಿತವಾಗುತ್ತವೆ[12].

12212025a ಸಾತ್ತ್ವಿಕೋ ರಾಜಸಶ್ಚೈವ ತಾಮಸಶ್ಚೈವ ತೇ ತ್ರಯಃ|

12212025c ತ್ರಿವಿಧಾ ವೇದನಾ ಯೇಷು ಪ್ರಸೂತಾ ಸರ್ವಸಾಧನಾ||

ಈ ಮೂರು ಸಾತ್ತ್ವಿಕ, ರಾಜಸ ಮತ್ತು ತಾಮಸಗಳು. ಸರ್ವಸಾಧನಗಳಲ್ಲಿಯೂ ಇವು ಮೂರು ವಿಧದ ವೇದನೆಗಳನ್ನು ಹುಟ್ಟಿಸುತ್ತವೆ.

12212026a ಪ್ರಹರ್ಷಃ ಪ್ರೀತಿರಾನಂದಃ ಸುಖಂ ಸಂಶಾಂತಚಿತ್ತತಾ|

12212026c ಅಕುತಶ್ಚಿತ್ಕುತಶ್ಚಿದ್ವಾ ಚಿತ್ತತಃ ಸಾತ್ತ್ವಿಕೋ ಗುಣಃ||

ಹರ್ಷ, ಪ್ರೀತಿ, ಆನಂದ, ಸುಖ ಮತ್ತು ಶಾಂತಚಿತ್ತ ಇವು ಎಲ್ಲಿಂದಲೇ ಬಂದಿರಲಿ ಅಥವಾ ಯಾವುದರಿಂದಲೇ ಉಂಟಾಗಿರಲಿ ಇವುಗಳು ಸಾತ್ತ್ವಿಕ ಗುಣಗಳು.

12212027a ಅತುಷ್ಟಿಃ ಪರಿತಾಪಶ್ಚ ಶೋಕೋ ಲೋಭಸ್ತಥಾಕ್ಷಮಾ|

12212027c ಲಿಂಗಾನಿ ರಜಸಸ್ತಾನಿ ದೃಶ್ಯಂತೇ ಹೇತ್ವಹೇತುತಃ||

ಕಾರಣವಿದ್ದು ಅಥವಾ ಕಾರಣವಿಲ್ಲದೇ ಕಂಡುಬಂದ ಅಸಂತೋಷ, ಪರಿತಾಪ, ಶೋಕ, ಲೋಭ, ಅಕ್ಷಮೆ ಇವುಗಳು ರಜಸ್ಸಿನ ಗುಣಗಳು.

12212028a ಅವಿವೇಕಸ್ತಥಾ ಮೋಹಃ ಪ್ರಮಾದಃ ಸ್ವಪ್ನತಂದ್ರಿತಾ|

12212028c ಕಥಂ ಚಿದಪಿ ವರ್ತಂತೇ ವಿವಿಧಾಸ್ತಾಮಸಾ ಗುಣಾಃ||

ಅವಿವೇಕ, ಮೋಹ, ಪ್ರಮಾದ, ಸ್ವಪ್ನ ಮತ್ತು ಆಲಸ್ಯ ಇವುಗಳು ಹೇಗೇ ಉಂಟಾಗಲಿ ಅವು ತಾಮಸದ ಗುಣಗಳು.

12212029a ತತ್ರ ಯತ್ ಪ್ರೀತಿಸಂಯುಕ್ತಂ ಕಾಯೇ ಮನಸಿ ವಾ ಭವೇತ್|

12212029c ವರ್ತತೇ ಸಾತ್ತ್ವಿಕೋ ಭಾವ ಇತ್ಯಪೇಕ್ಷೇತ ತತ್ತಥಾ||

ಶರೀರ ಅಥವಾ ಮನಸ್ಸಿನಲ್ಲಿ ಪ್ರೀತಿಸಂಯುಕ್ತ ಭಾವವುಂಟಾದರೆ ಅದು ಸಾತ್ತ್ವಿಕಭಾವ ಎಂದು ತಿಳಿಯಬೇಕು.

12212030a ಯತ್ತು ಸಂತಾಪಸಂಯುಕ್ತಮಪ್ರೀತಿಕರಮಾತ್ಮನಃ|

12212030c ಪ್ರವೃತ್ತಂ ರಜ ಇತ್ಯೇವ ತತಸ್ತದಭಿಚಿಂತಯೇತ್||

ಸಂತಾಪಯುಕ್ತವಾದ ಮತ್ತು ಮನಸ್ಸಿಗೆ ಅಪ್ರೀತಿಕರವಾದ ಭಾವವುಂಟಾದರೆ ಅದು ರಜಸ್ಸಿನ ಭಾವ ಎಂದು ತಿಳಿಯಬೇಕು.

12212031a ಅಥ ಯನ್ಮೋಹಸಂಯುಕ್ತಂ ಕಾಯೇ ಮನಸಿ ವಾ ಭವೇತ್|

12212031c ಅಪ್ರತರ್ಕ್ಯಮವಿಜ್ಞೇಯಂ ತಮಸ್ತದುಪಧಾರಯೇತ್||

ಶರೀರದಲ್ಲಿ ಅಥವಾ ಮನಸ್ಸಿನಲ್ಲಿ ಮೋಹಸಂಯುಕ್ತವಾದ ಭಾವವು – ಅದು ತಿಳಿದಿದ್ದರೂ ಅಥವಾ ತಿಳಿಯದಿದ್ದರೂ – ಉಂಟಾದರೆ ಅದು ತಮಸ್ಸಿನಿಂದ ಉಂಟಾಗಿದೆ ಎಂದು ತಿಳಿಯಬೇಕು.

12212032a ತದ್ಧಿ ಶ್ರೋತ್ರಾಶ್ರಯಂ ಭೂತಂ[13] ಶಬ್ದಃ ಶ್ರೋತ್ರಂ ಸಮಾಶ್ರಿತಃ|

12212032c ನೋಭಯಂ ಶಬ್ದವಿಜ್ಞಾನೇ ವಿಜ್ಞಾನಸ್ಯೇತರಸ್ಯ ವಾ||

ಶಬ್ದದಿಂದ ಕೇಳುವುದುಂಟಾಗುತ್ತದೆ. ಕಿವಿಗಳು ಶಬ್ದವನ್ನು ಕೇಳುವುದರಿಂದ ಶಬ್ದದ ಗ್ರಹಿಕೆಯುಂಟಾಗುತ್ತದೆ. ಆದರೆ ಇವೆರಡೂ ಪರಸ್ಪರರನ್ನು ಅರಿತುಕೊಂಡಿರುವುದಿಲ್ಲ. ಇವೆರಡನ್ನೂ ತಿಳಿದುಕೊಳ್ಳುವುದು ಬೇರೆಯದೇ ಇದೆ.

12212033a ಏವಂ ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚೈವ ಪಂಚಮೀ|

12212033c ಸ್ಪರ್ಶೇ ರೂಪೇ ರಸೇ ಗಂಧೇ ತಾನಿ ಚೇತೋ ಮನಶ್ಚ ತತ್||

ಹೀಗೆ ಇಂದ್ರಿಯ ವಿಷಯಗಳಾದ ಸ್ಪರ್ಶ, ರೂಪ, ರಸ, ಗಂಧಗಳನ್ನು ಇಂದ್ರಿಯಗಳಾದ ಚರ್ಮ, ಕಣ್ಣುಗಳು, ನಾಲಿಗೆ, ಮತ್ತು ಮೂಗು ಇವು ಪರಸ್ಪರರನ್ನು ಅರಿತಿರುವುದಿಲ್ಲ. ಮನಸ್ಸು ಅವೆಲ್ಲವನ್ನೂ ಅರಿತುಕೊಳ್ಳುತ್ತದೆ.

12212034a ಸ್ವಕರ್ಮಯುಗಪದ್ಭಾವೋ ದಶಸ್ವೇತೇಷು ತಿಷ್ಠತಿ|

12212034c ಚಿತ್ತಮೇಕಾದಶಂ ವಿದ್ಧಿ ಬುದ್ಧಿರ್ದ್ವಾದಶಮೀ ಭವೇತ್||

ಹತ್ತು ಇಂದ್ರಿಯಗಳು ತಮ್ಮ ತಮ್ಮ ಕೆಲಸಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ಮಾಡುತ್ತಿರುತ್ತವೆ. ಮನಸ್ಸು ಹನ್ನೊಂದನೆಯದು ಎಂದು ತಿಳಿ. ಬುದ್ಧಿಯು ಹನ್ನೆರಡನೆಯದಾಗುತ್ತದೆ.

12212035a ತೇಷಾಮಯುಗಪದ್ಭಾವೇ ಉಚ್ಚೇದೋ ನಾಸ್ತಿ ತಾಮಸಃ|

12212035c ಆಸ್ಥಿತೋ ಯುಗಪದ್ಭಾವೇ ವ್ಯವಹಾರಃ ಸ ಲೌಕಿಕಃ||

ಇವು ಒಟ್ಟಾಗಿ ಕೆಲಸಮಾಡುತ್ತಿರುವ ವರೆಗೆ ತಾಮಸವನ್ನು ನಾಶಗೊಳಿಸಲಾಗುವುದಿಲ್ಲ. ಅವರು ಒಟ್ಟಾಗಿ ಕೆಲಸಮಾಡುವುದನ್ನೇ ಲೌಕಿಕ ವ್ಯವಹಾರವೆಂದು ತಿಳಿಯುತ್ತೇವೆ[14].

12212036a ಇಂದ್ರಿಯಾಣ್ಯವಸೃಜ್ಯಾಪಿ[15] ದೃಷ್ಟ್ವಾ ಪೂರ್ವಂ ಶ್ರುತಾಗಮಮ್|

12212036c ಚಿಂತಯನ್ನಾನುಪರ್ಯೇತಿ ತ್ರಿಭಿರೇವಾನ್ವಿತೋ ಗುಣೈಃ||

ಶ್ರುತಿ-ಆಗಮಗಳು ಹಿಂದೆಯೇ ಇಂದ್ರಿಯಗಳ ಕಾರ್ಯಗಳ ಕುರಿತು ಮತ್ತು ತ್ರಿಗುಣಗಳ ಕುರಿತು ಆಲೋಚಿಸಿ ನಿರ್ಧರಿಸಿವೆ[16].

12212037a ಯತ್ತಮೋಪಹತಂ ಚಿತ್ತಮಾಶು ಸಂಚಾರಮಧ್ರುವಮ್|

12212037c ಕರೋತ್ಯುಪರಮಂ ಕಾಲೇ ತದಾಹುಸ್ತಾಮಸಂ ಸುಖಮ್||

ಮೋಹಪರವಶವಾದ ಚಿತ್ತವು ಚಂಚಲವಾಗಿರುವುದರ ಸುತ್ತ ಮುತ್ತ ತಿರುಗುತ್ತಿರುತ್ತದೆ. ಹಾಗೆ ಮಾಡುವುದರಿಂದ ಸ್ವಲ್ಪ ಕಾಲ ಪರಮ ಸುಖವನ್ನು ಕಂಡರೂ ಅದನ್ನು ತಾಮಸ ಸುಖವೆಂದು ಹೇಳುತ್ತಾರೆ[17].

12212038a ಯದ್ಯದಾಗಮಸಂಯುಕ್ತಂ ನ ಕೃತ್ಸ್ನಮುಪಶಾಮ್ಯತಿ[18]|

12212038c ಅಥ ತತ್ರಾಪ್ಯುಪಾದತ್ತೇ ತಮೋ ವ್ಯಕ್ತಮಿವಾನೃತಮ್||

ಶಾಸ್ತ್ರ-ಆಗಮಗಳಲ್ಲಿ ಹೇಳಿರುವಂತೆ ಎಲ್ಲವನ್ನೂ ಮಾಡದೇ ಇದ್ದರೆ ಅವನು ತಮಸ್ಸಿನಿಂದ ಮುಸುಕಲ್ಪಡುತ್ತಾನೆ ಮತ್ತು ವ್ಯಕ್ತವೂ ಅನೃತವೂ ಆದುದನ್ನು ಸೇವಿಸುತ್ತಿರುತ್ತಾನೆ[19].

12212039a ಏವಮೇಷ ಪ್ರಸಂಖ್ಯಾತಃ ಸ್ವಕರ್ಮಪ್ರತ್ಯಯೀ ಗುಣಃ|

12212039c ಕಥಂ ಚಿದ್ವರ್ತತೇ ಸಮ್ಯಕ್ಕೇಷಾಂ ಚಿದ್ವಾ ನ ವರ್ತತೇ||

ಗುಣಗಳನ್ನು ಅವಲಂಬಿಸಿ ಸ್ವಕರ್ಮಗಳು ಹೇಗೆ ಉಂಟಾಗುತ್ತವೆ ಎನ್ನುವುದರ ಕುರಿತಾದ ಆಲೋಚನೆಗಳು. ಕೆಲವರು ಇದನ್ನು ಸಂಪೂರ್ಣವಾಗಿ ಅನುಸರಿಸುತ್ತಾರೆ. ಇನ್ನು ಕೆಲವರು ಇದನ್ನು ಅನುಸರಿಸುವುದೇ ಇಲ್ಲ[20].

12212040a ಏವಮಾಹುಃ ಸಮಾಹಾರಂ ಕ್ಷೇತ್ರಮಧ್ಯಾತ್ಮಚಿಂತಕಾಃ|

12212040c ಸ್ಥಿತೋ ಮನಸಿ ಯೋ ಭಾವಃ ಸ ವೈ ಕ್ಷೇತ್ರಜ್ಞ ಉಚ್ಯತೇ||

ಶರೀರ ಮತ್ತು ಇಂದ್ರಿಯಗಳ ಒಕ್ಕೂಟವನ್ನೇ ಕ್ಷೇತ್ರ ಎಂದು ಆಧ್ಯಾತ್ಮಚಿಂತಕರು ಹೇಳುತ್ತಾರೆ. ಮನಸ್ಸಿನಲ್ಲಿ ಸ್ಥಿತವಾಗಿರುವ ಚಿದ್ಭಾವವನ್ನು ಕ್ಷೇತ್ರಜ್ಞ ಎಂದು ಕರೆಯುತ್ತಾರೆ.[21]

12212041a ಏವಂ ಸತಿ ಕ ಉಚ್ಚೇದಃ ಶಾಶ್ವತೋ ವಾ ಕಥಂ ಭವೇತ್|

12212041c ಸ್ವಭಾವಾದ್ವರ್ತಮಾನೇಷು ಸರ್ವಭೂತೇಷು ಹೇತುತಃ||

ಹೀಗಿರುವಾಗ ಯಾವುದು ನಾಶವಾಗುತ್ತದೆ? ಅಥವಾ ಯಾವುದು ಶಾಶ್ವತವಾಗಿರುತ್ತದೆ? ಸರ್ವಭೂತಗಳೂ ಈ ಕಾರಣಗಳಿಂದ ಮತ್ತು ಸ್ವಭಾವಗಳಿಂದ ನಡೆದುಕೊಳ್ಳುತ್ತವೆ[22].

12212042a ಯಥಾರ್ಣವಗತಾ ನದ್ಯೋ ವ್ಯಕ್ತೀರ್ಜಹತಿ ನಾಮ ಚ|

12212042c ನ ಚ ಸ್ವತಾಂ ನಿಯಚ್ಚಂತಿ[23] ತಾದೃಶಃ ಸತ್ತ್ವಸಂಕ್ಷಯಃ||

ಸಮುದ್ರವನ್ನು ಸೇರಿದ ನದಿಗಳು ಹೇಗೆ ತಮ್ಮ ವ್ಯಕ್ತಿತ್ವ ಮತ್ತು ಹೆಸರುಗಳನ್ನು ಕಳೆದುಕೊಳ್ಳುತ್ತವೆಯೋ ಹಾಗೆ ಜೀವವು ಹೋಗಲು ಅದು ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತದೆ[24].

12212043a ಏವಂ ಸತಿ ಕುತಃ ಸಂಜ್ಞಾ ಪ್ರೇತ್ಯಭಾವೇ ಪುನರ್ಭವೇತ್|

12212043c ಪ್ರತಿಸಂಮಿಶ್ರಿತೇ ಜೀವೇ ಗೃಹ್ಯಮಾಣೇ ಚ ಮಧ್ಯತಃ||

ಹೀಗಿರುವಾಗ ಮರಣಾನಂತರ ಜೀವವು ಸಮ್ಮಿಶ್ರವಾಗಿ ಮಧ್ಯದಲ್ಲಿ ಏನಾಗುತ್ತದೆಯೆಂದು ತಿಳಿಯದಿರುವಾಗ ಪುನಃ ಸಂಜ್ಞೆಯು ಎಲ್ಲಿಂದ ಬರುತ್ತದೆ?[25]

12212044a ಇಮಾಂ ತು ಯೋ ವೇದ ವಿಮೋಕ್ಷಬುದ್ಧಿಮ್

ಆತ್ಮಾನಮನ್ವಿಚ್ಚತಿ ಚಾಪ್ರಮತ್ತಃ|

12212044c ನ ಲಿಪ್ಯತೇ ಕರ್ಮಫಲೈರನಿಷ್ಟೈಃ

ಪತ್ರಂ ಬಿಸಸ್ಯೇವ ಜಲೇನ ಸಿಕ್ತಮ್||

ಮೋಕ್ಷಬುದ್ಧಿಯಿರುವ ಮತ್ತು ಮೋಕ್ಷವನ್ನು ತಿಳಿದಿರುವವನು ಅಪ್ರಮತ್ತನಾಗಿ ಆತ್ಮತತ್ತ್ವವನ್ನು ಅನುಸಂಧಾನ ಮಾಡುತ್ತಾನೆ. ಅಂಥವನು ತಾವರೆಯ ಎಲೆಯು ನೀರಿನಿಂದ ಹೇಗೆ ಒದ್ದೆಯಾಗುವುದಿಲ್ಲವೋ ಹಾಗೆ ಅನಿಷ್ಟ ಕರ್ಮಫಲಗಳಿಂದ ಲಿಪ್ತನಾಗುವುದಿಲ್ಲ.

12212045a ದೃಢೈಶ್ಚ ಪಾಶೈರ್ಬಹುಭಿರ್ವಿಮುಕ್ತಃ

ಪ್ರಜಾನಿಮಿತ್ತೈರಪಿ ದೈವತೈಶ್ಚ|

12212045c ಯದಾ ಹ್ಯಸೌ ಸುಖದುಃಖೇ ಜಹಾತಿ

ಮುಕ್ತಸ್ತದಾಗ್ರ್ಯಾಂ ಗತಿಮೇತ್ಯಲಿಂಗಃ|

12212045e ಶ್ರುತಿಪ್ರಮಾಣಾಗಮಮಂಗಲೈಶ್ಚ

ಶೇತೇ ಜರಾಮೃತ್ಯುಭಯಾದತೀತಃ||

ಅವನು ಸಂತಾನ ಅಥವಾ ದೈವನಿಮಿತ್ತ ದೃಢ ಬಂಧನಗಳಿಂದ ವಿಮುಕ್ತನಾಗುತ್ತಾನೆ. ಯಾವಾಗ ಅವನು ಸುಖದುಃಖಗಳನ್ನು ತ್ಯಜಿಸುತ್ತಾನೋ ಆಗ ಅವನು ಅಲಿಂಗನಾಗಿ ಸರ್ವಶ್ರೇಷ್ಠ ಮುಕ್ತಿಯನ್ನು ಪಡೆಯುತ್ತಾನೆ. ಶ್ರುತಿ-ಆಗಮಗಳ ಪ್ರಮಾಣದಲ್ಲಿರುವ ಮಂಗಲ ಕರ್ಮಗಳಿಂದ ಅವನು ಮುಪ್ಪು-ಮೃತ್ಯು-ಭಯಗಳಿಂದ ದೂರನಾಗಿ ಸುಖವಾಗಿ ನಿದ್ರಿಸುತ್ತಾನೆ.

12212046a ಕ್ಷೀಣೇ ಚ ಪುಣ್ಯೇ ವಿಗತೇ ಚ ಪಾಪೇ

ತತೋನಿಮಿತ್ತೇ ಚ ಫಲೇ ವಿನಷ್ಟೇ|

12212046c ಅಲೇಪಮಾಕಾಶಮಲಿಂಗಮೇವಮ್

ಆಸ್ಥಾಯ ಪಶ್ಯಂತಿ ಮಹದ್ಧ್ಯಸಕ್ತಾಃ||

ಪುಣ್ಯವು ಕ್ಷೀಣಿಸಲು ಮತ್ತು ಪಾಪವು ಹೊರಟು ಹೋಗಲು ಅವುಗಳಿಂದ ಉಂಟಾಗುವ ಫಲಗಳೂ ನಾಶವಾಗಲು ನಿರ್ಲಿಪ್ತನೂ, ಪ್ರಕಾಶಸ್ವರೂಪನೂ, ಲಿಂಗರಹಿತನೂ ಆದ ಪರಮಾತ್ಮನಲ್ಲಿಯೇ ಮನಸ್ಸನ್ನು ಸ್ಥಾಪಿಸಿ ಅವನ ಸಾಕ್ಷಾತ್ಕಾರವನ್ನು ಪಡೆದುಕೊಳುತ್ತಾನೆ.

12212047a ಯಥೋರ್ಣನಾಭಿಃ ಪರಿವರ್ತಮಾನಸ್

ತಂತುಕ್ಷಯೇ ತಿಷ್ಠತಿ ಪಾತ್ಯಮಾನಃ|

12212047c ತಥಾ ವಿಮುಕ್ತಃ ಪ್ರಜಹಾತಿ ದುಃಖಂ

ವಿಧ್ವಂಸತೇ ಲೋಷ್ಟ ಇವಾದ್ರಿಮರ್ಚ್ಚನ್||

ಜೇಡರ ಹುಳವು ಹೇಗೆ ಸುತ್ತಲೂ ತಿರುಗುತ್ತಾ ಬಲೆಯನ್ನು ನೇಯ್ದುಕೊಂಡು ಆ ತಂತುಮಯ ಮನೆಯ ಮಧ್ಯದಲ್ಲಿ ಕುಳಿತುಕೊಳ್ಳುತ್ತದೆಯೋ ಹಾಗೆ ಅವಿದ್ಯಾವಶ ಜೀವನು ಕರ್ಮತಂತುಮಯ ಮನೆಯಲ್ಲಿ ಕುಳಿತಿರುತ್ತಾನೆ. ಕಲ್ಲಿನ ಮೇಲೆ ಅಪ್ಪಳಿಸಿದ ಮಣ್ಣುಹೆಂಟೆಯು ಹೇಗೆ ಪುಡಿಪುಡಿಯಾಗುವುದೋ ಹಾಗೆ ಕರ್ಮತಂತುಮಯವಾದ ಆ ಮನೆಯು ನಾಶವಾದೊಡನೆಯೇ ಅವನ ಎಲ್ಲ ದುಃಖಗಳೂ ನಾಶವಾಗುತ್ತವೆ.[26]

12212048a ಯಥಾ ರುರುಃ ಶೃಂಗಮಥೋ ಪುರಾಣಂ

ಹಿತ್ವಾ ತ್ವಚಂ ವಾಪ್ಯುರಗೋ ಯಥಾವತ್|

12212048c ವಿಹಾಯ ಗಚ್ಚತ್ಯನವೇಕ್ಷಮಾಣಸ್

ತಥಾ ವಿಮುಕ್ತೋ ವಿಜಹಾತಿ ದುಃಖಮ್||

ರುರು ಮೃಗವು ಹೇಗೆ ತನ್ನ ಹಳತಾದ ಕೋಡುಗಳನ್ನು ಕಳೆದುಕೊಳ್ಳುತ್ತದೆಯೋ ಮತ್ತು ಸರ್ಪವು ಹೇಗೆ ತನ್ನ ಪೊರೆಯನ್ನು ಕಳಚಿಕೊಳ್ಳುತ್ತದೆಯೋ ಹಾಗೆ ಮಮತೆ-ಅಭಿಮಾನಗಳನ್ನು ತೊರೆದವನು ಮುಕ್ತನಾಗಿ ದುಃಖವನ್ನು ಕಳೆದುಕೊಳ್ಳುತ್ತಾನೆ.

12212049a ದ್ರುಮಂ ಯಥಾ ವಾಪ್ಯುದಕೇ ಪತಂತಮ್

ಉತ್ಸೃಜ್ಯ ಪಕ್ಷೀ ಪ್ರಪತತ್ಯಸಕ್ತಃ|

12212049c ತಥಾ ಹ್ಯಸೌ ಸುಖದುಃಖೇ ವಿಹಾಯ

ಮುಕ್ತಃ ಪರಾರ್ಧ್ಯಾಂ ಗತಿಮೇತ್ಯಲಿಂಗಃ||

ಮರವು ನೀರಿನಲ್ಲಿ ಬೀಳುತ್ತಿರುವಾಗ ಅದರಲ್ಲಿ ವಾಸಿಸುತ್ತಿದ್ದ ಪಕ್ಷಿಯು ಹೇಗೆ ಅದನ್ನು ತೊರೆದು ಹಾರಿಹೋಗುವುದೋ ಹಾಗೆ ಮುಕ್ತ ಪುರುಷನು ಸುಖ-ದುಃಖಗಳನ್ನು ತ್ಯಜಿಸಿ ಶರೀರವನ್ನು ಬಿಟ್ಟು ಶ್ರೇಷ್ಠತಮ ಗತಿಯನ್ನು ಹೊಂದುತ್ತಾನೆ.”

[27]12212050a ಅಪಿ ಚ ಭವತಿ ಮೈಥಿಲೇನ ಗೀತಂ

ನಗರಮುಪಾಹಿತಮಗ್ನಿನಾಭಿವೀಕ್ಷ್ಯ|

12212050c ನ ಖಲು ಮಮ ತುಷೋಽಪಿ ದಹ್ಯತೇಽತ್ರ

ಸ್ವಯಮಿದಮಾಹ ಕಿಲ ಸ್ಮ ಭೂಮಿಪಾಲಃ||

ಮಿಥಿಲ ರಾಜನ ಕುರಿತಾಗಿ ಒಂದು ಗೀತೆಯೇ ಇದೆ: ನಗರವು ಸುಟ್ಟುಹೋಗುತ್ತಿರುವಾಗ ಮಿಥಿಲೆಯ ಭೂಮಿಪಾಲನು ನಗುತ್ತಾ “ನನ್ನದು ಯಾವುದೂ ಸುಟ್ಟು ಹೋಗಲಿಲ್ಲ!” ಎನ್ನಲಿಲ್ಲವೇ?

12212051a ಇದಮಮೃತಪದಂ ವಿದೇಹರಾಜಃ

ಸ್ವಯಮಿಹ ಪಂಚಶಿಖೇನ ಭಾಷ್ಯಮಾಣಃ|

12212051c ನಿಖಿಲಮಭಿಸಮೀಕ್ಷ್ಯ ನಿಶ್ಚಿತಾರ್ಥಂ

ಪರಮಸುಖೀ ವಿಜಹಾರ ವೀತಶೋಕಃ||

ಸ್ವಯಂ ಪಂಚಶಿಖನು ಹೇಳಿದ ಈ ಅಮೃತಪದ ಮಾತುಗಳನ್ನು ಕೇಳಿ ವಿದೇಹರಾಜನು ಎಲ್ಲವನ್ನೂ ಚೆನ್ನಾಗಿ ಸಮೀಕ್ಷಿಸಿ ಅರ್ಥವನ್ನು ನಿಶ್ಚಯಿಸಿ ಶೋಕವನ್ನು ಕಳೆದುಕೊಂಡು ಪರಮಸುಖಿಯಾಗಿ ವಿಹರಿಸಿದನು.

12212052a ಇಮಂ ಹಿ ಯಃ ಪಠತಿ ವಿಮೋಕ್ಷನಿಶ್ಚಯಂ

ನ ಹೀಯತೇ ಸತತಮವೇಕ್ಷತೇ ತಥಾ|

12212052c ಉಪದ್ರವಾನ್ನಾನುಭವತ್ಯದುಃಖಿತಃ

ಪ್ರಮುಚ್ಯತೇ ಕಪಿಲಮಿವೈತ್ಯ ಮೈಥಿಲಃ||[28]

ಈ ಮೋಕ್ಷನಿಶ್ಚಯವನ್ನು ಯಾರು ಓದುತ್ತಾರೋ ಮತ್ತು ಇದರ ಕುರಿತು ಸತತವೂ ಚಿಂತನೆಮಾಡುತ್ತಾರೋ ಅವರು ಉಪದ್ರವಗಳನ್ನು ಅನುಭವಿಸಿ ದುಃಖಿತರಾಗುವುದಿಲ್ಲ. ಮತ್ತು ಕಾಪಿಲನನ್ನು ಭೇಟಿಮಾಡಿದ ಮಿಥಿಲಾಧಿಪನು ಹೇಗೋ ಹಾಗೆ ಮುಕ್ತರಾಗುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪಂಚಶಿಖವಾಕ್ಯಂ ನಾಮ ದ್ವಾದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪಂಚಶಿಖವಾಕ್ಯ ಎನ್ನುವ ಇನ್ನೂರಾಹನ್ನೆರಡನೇ ಅಧ್ಯಾಯವು.

[1] ಚಿತ್ತದೊಡನೆ ಕಲೆತು (ಭಾರತ ದರ್ಶನ).

[2] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ವಿಜ್ಞಾನಯುಕ್ತವಾದ ಶಾಶ್ವತವಾದ ಚೇತನವು ಅದುಃಖ, ಅಸುಖ ಮತ್ತು ಸುಖ-ದುಃಖ ಎಂದು ಮುರು ಪ್ರಕಾರವಾಗಿರುವುದೆಂದು ಹೇಳುತ್ತಾರೆ. (ಭಾರತ ದರ್ಶನ)

[3] ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಮತ್ತು ರೂಪಾಶ್ರಯದ್ರವ್ಯಗಳೆಂಬ ಆರು ಗುಣಗಳು ಆಮರಣಾಂತವಾಗಿ ಜೀವನಿಗೆ ಇಂದ್ರಿಯಜನ್ಯ ಜ್ಞಾನಕ್ಕೆ ಸಾಧಕಗಳಾಗಿರುತ್ತವೆ. (ಭಾರತ ದರ್ಶನ)

[4] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಶ್ರೋತ್ರಾದಿ ಇಂದ್ರಿಯಗಳಲ್ಲಿ ಅವುಗಳ ವಿಷಯಗಳನ್ನು ವಿಸರ್ಜನ ಅಥವಾ ತ್ಯಾಗ ಮಾಡುವುದರಿಂದ ಸಂಪೂರ್ಣ ತತ್ತ್ವಗಳ ಯಥಾರ್ಥ ನಿಶ್ಚಯರೂಪ ಮೋಕ್ಷದ ಪ್ರಾಪ್ತಿಯಾಗುತ್ತದೆ. ಆ ತತ್ತ್ವನಿಶ್ಚಯವನ್ನು ಅತ್ಯಂತ ನಿರ್ಮಲ, ಉತ್ತಮ ಜ್ಞಾನ ಮತ್ತು ಅವಿನಾಶೀ ಮಹಾನ್ ಬ್ರಹ್ಮಪದವೆಂದು ಕರೆಯುತ್ತಾರೆ. (ಗೀತಾ ಪ್ರೆಸ್/ಭಾರತ ದರ್ಶನ)

[5] ಸಮ್ಯಗ್ವಧೋ (ಭಾರತ ದರ್ಶನ/ಗೀತಾ ಪ್ರೆಸ್).

[6] ಸರ್ವೇಷಾಂ ಯುಕ್ತಾನಾಮಪಿ (ಭಾರತ ದರ್ಶನ/ಗೀತಾ ಪ್ರೆಸ್).

[7] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಶಾಸ್ತ್ರದಲ್ಲಿ ದ್ರವ್ಯತ್ಯಾಗಕ್ಕಾಗಿ ಯಜ್ಞಾದಿಕರ್ಮಗಳನ್ನೂ, ಭೋಗತ್ಯಾಗಕ್ಕಾಗಿ ಕೃಚ್ಛ್ರ-ಚಾಂದ್ರಾಯಣಾದಿ ವ್ರತಗಳನೂ, ದೈಹಿಕಸುಖತ್ಯಾಗಕ್ಕಾಗಿ ತಪಸ್ಸನ್ನೂ, ಸರ್ವತ್ಯಾಗಕ್ಕಾಗಿ ಯೋಗಾನುಷ್ಠಾನವನ್ನೂ ಹೇಳಿದ್ದಾರೆ. ಹಾಗೆ ಸರ್ವವನ್ನೂ ತ್ಯಾಗಮಾಡಿದರೆ ಮುಕ್ತಿಯು ದೊರೆಯುತ್ತದೆ. (ಭಾರತ ದರ್ಶನ/ಗೀತಾ ಪ್ರೆಸ್).

[8] ಬಲಷಷ್ಠಾನಿ (ಭಾರತ ದರ್ಶನ/ಗೀತಾ ಪ್ರೆಸ್).

[9] ಬುದ್ಧಿಯಲ್ಲಿರುವ ಮನಸ್ಸಿನಿಂದ ಯುಕ್ತವಾದ ಐದು ಜ್ಞಾನೇಂದ್ರಿಯಗಳ ವಿಷಯವನ್ನು ಹೇಳಿದ ನಂತರ ಐದು ಕರ್ಮೇಂದ್ರಿಯಗಳ ವಿಷಯವನ್ನೂ ಹೇಳುತ್ತೇನೆ. ಅದರೊಡನೆ ಆರನೆಯ ಪ್ರಾಣಶಕ್ತಿಯ ವಿಷಯವನ್ನೂ ಹೇಳುತ್ತೇನೆ (ಭಾರತ ದರ್ಶನ/ಗೀತಾ ಪ್ರೆಸ್).

[10] ವಾಕ್ಚ ಶಬ್ದವಿಶೇಷಾರ್ಥಮಿತಿ ಪಂಚಾನ್ವಿತಂ ವಿದುಃ| (ಗೀತಾ ಪ್ರೆಸ್/ಭಾರತ ದರ್ಶನ).

[11] ಬುಧ್ಯಾಽಽಶು ವಿಸೃಜೇನ್ಮನಃ| (ಗೀತಾ ಪ್ರೆಸ್/ಭಾರತ ದರ್ಶನ).

[12] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಹೀಗೆ ಮೂರು-ಮೂರರಂತೆ ಐದು ಸಮುದಾಯಗಳಿವೆ. ಇದಕ್ಕೆ ಗುಣಗಳೆನ್ನುತ್ತಾರೆ. ಈ ಗುಣಗಳಿಂದ ಶಬ್ದಾದಿ ವಿಷಯಗಳ ಗ್ರಹಣವಾಗುತ್ತದೆ. ಅನುಭವವನ್ನು ತಿಳಿಯಪಡಿಸುವ ಕಾರಣದಿಂದ ಇದು ಕರ್ತಾ, ಕರ್ಮ ಮತ್ತು ಕರಣಗಳೆಂಬ ಮೂರು ವಿಧವಾದ ಭಾವವನ್ನು ಹೊಂದಿದೆ. ಅವು ಪರ್ಯಾಯವಾಗಿ ಉಪಸ್ಥಿತವಾಗುತ್ತವೆ. (ಭಾರತ ದರ್ಶನ/ ಗೀತಾ ಪ್ರೆಸ್)

[13] ಶ್ರೋತ್ರಂ ವ್ಯೋಮಾಶ್ರಿತಂ ಭೂತಂ (ಭಾರತ ದರ್ಶನ/ ಗೀತಾ ಪ್ರೆಸ್).

[14] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ತಮೋಗುಣ ಜನಿತವಾದ ಸುಷುಪ್ತಿಕಾಲದಲ್ಲಿ ಇಂದ್ರಿಯಗಳೆಲ್ಲವೂ ಮನಸ್ಸಿನಲ್ಲಿ ಲೀನವಾಗಿರುವುದರಿಂದ ವಿಷಯಗಳನ್ನು ಗ್ರಹಿಸುವುದಿಲ್ಲ. ಆದರೆ ಆ ಸಮದಲ್ಲಿ ಅವುಗಳ ನಾಶವಾಗುವುದಿಲ್ಲ. ಇಂದ್ರಿಯಗಳು ವಿಷಯಗಳನ್ನು ಏಕಕಾಲದಲ್ಲಿ ಗ್ರಹಣಮಾಡುತ್ತವೆಯೆಂಬುದು ಲೌಕಿಕ ವ್ಯವಹಾರದಲ್ಲಿಯೇ ಕಂಡುಬರುತ್ತದೆ. ಸುಷುಪ್ತಿ ಕಾಲದಲ್ಲಿ ಮಾತ್ರ ಅವು ಹಾಗೆ ಮಾಡಲಾರವು. (ಭಾರತ ದರ್ಶನ/ಗೀತಾ ಪ್ರೆಸ್).

[15] ಇಂದ್ರಿಯಾಣ್ಯಪಿ ಸೂಕ್ಷ್ಮಾಣಿ (ಭಾರತ ದರ್ಶನ/ಗೀತಾ ಪ್ರೆಸ್).

[16] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಜಾಗ್ರದವಸ್ಥೆಯಲ್ಲಿ ಶ್ರವಣ-ದರ್ಶನಾದಿಗಳ ಮೂಲಕ ಶಬ್ದಾದಿ ವಿಷಯಗಳ ಪ್ರಾಪ್ತಿಯುಂಟಾಗುವುದರಿಂದ ಸ್ವಪ್ನಾವಸ್ಥೆಯಲ್ಲಿಯೂ ಪುರುಷನು ಸೂಕ್ಷ್ಮವಾದ ಇಂದ್ರಿಯಗಳನ್ನು ನೋಡಿ ವಿಷಯಸಂಗದಲ್ಲಿ ಆಸಕ್ತಿಯನ್ನು ಹೊಂದಿ ಸತ್ತ್ವಾದಿ ಮೂರು ಗುಣಗಳಿಂದ ಯುಕ್ತನಾಗಿ ಶರೀರದಲ್ಲಿ ತಿರುಗುತ್ತಿರುತ್ತಾನೆ (ಭಾರತ ದರ್ಶನ/ಗೀತಾ ಪ್ರೆಸ್).

[17] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಸುಷುಪ್ತಿ ಕಾಲದಲ್ಲಿ ಮನಸ್ಸು ತಮೋಗುಣದಿಂದ ಕೂಡಿ ತನ್ನ ಪ್ರಕೃತಿ-ಪ್ರಕಾಶ-ಸ್ವಭಾವಗಳನ್ನು ಶೀಘ್ರವಾಗಿ ಉಪಸಂಹರಿಸಿ ಸ್ವಲ್ಪ ಹೊತ್ತು ಇಂದ್ರಿಯವ್ಯಾಪಾರಗಳನ್ನೂ ನಿಲ್ಲಿಸಿರುತ್ತದೆ. ಆ ಸಮಯದಲ್ಲಿ ಶರೀರಕ್ಕೆ ಉಂಟಾಗುವ ಸುಖವನ್ನು ವಿದ್ವಾಂಸರು ತಾಮಸಸುಖವೆನ್ನುತ್ತಾರೆ. (ಭಾರತ ದರ್ಶನ/ಗೀತಾ ಪ್ರೆಸ್).

[18] ನ ಕೃಚ್ಛ್ರಮನುಪಶ್ಯತಿ (ಭಾರತ ದರ್ಶನ/ಗೀತಾ ಪ್ರೆಸ್).

[19] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಸ್ವಪ್ನವನ್ನು ಕಾಣುವ ಮನುಷ್ಯನು ಕನಸಿನಲ್ಲಿ ಕಷ್ಟಗಳನ್ನು ಕಾಣುವಂತೆ ಸುಷುಪ್ತಾವಸ್ಥೆಯಲ್ಲಿರುವವನು ಕಷ್ಟಗಳನ್ನು ಕಾಣುವುದಿಲ್ಲ. ಆದುದರಿಂದ ಸುಷುಪ್ತಿಯಲ್ಲಿಯೂ ತಮೋಗುಣಯುಕ್ತವಾದ ಮಿಥ್ಯಾಸುಖವನ್ನು ಜೀವನು ಅನುಭವಿಸುತ್ತಾನೆ. (ಭಾರತ ದರ್ಶನ/ಗೀತಾ ಪ್ರೆಸ್)

[20] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಹೀಗೆ ಕರ್ಮಾನುಸಾರವಾಗಿ ಗುಣವು ಪ್ರಾಪ್ತವಾಗುವುದೆಂಬ ವಿಷಯವನ್ನು ಹೇಳಿಯಾಯಿತು. ಕೆಲವರಲ್ಲಿ (ಅಜ್ಞಾನಿಗಳಲ್ಲಿ) ಈ ತಮೋ ಗುಣವು ಬೃಹದ್ರೂಪದಲ್ಲಿರುತ್ತದೆ. ಕೆಲವರಿಂದ (ಜ್ಞಾನಿಗಳಿಂದ) ಇದು ದೂರವಾಗಿರುತ್ತದೆ. (ಭಾರತ ದರ್ಶನ/ಗೀತಾ ಪ್ರೆಸ್).

[21] There are those who have thought about adhyatma. They speak of this accumulation as kshetra and what exists in the mind as kshetrajna. (Bibek Debroy)

[22] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಹೀಗಿರುವಾಗ ಆತ್ಮನ ವಿನಾಶವು ಹೇಗಾಗುತ್ತದೆ? ಅಥವಾ ಹೇತುಪೂರ್ವಕವಾದ ಪ್ರಕೃತಿಗೆ ಅನುಸಾರವಾಗಿ ಪ್ರವೃತ್ತವಾಗುವ ಪಂಚಮಹಾಭೂತಗಳೊಡನೆ ಆತ್ಮದ ಸಂಸರ್ಗವು ಹೇಗೆ ತಾನೇ ಶಾಶ್ವತವಾಗಿರುತ್ತದೆ? (ಭಾರತ ದರ್ಶನ/ಗೀತಾ ಪ್ರೆಸ್).

[23] ನದಾಶ್ಚ ತಾ ನಿಯಚ್ಛಂತಿ (ಭಾರತ ದರ್ಶನ/ಗೀತಾ ಪ್ರೆಸ್).

[24] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಸತ್ತ್ವಗಳು ತಮ್ಮ ಮೂಲಕಾರಣದಲ್ಲಿ ಸೇರಿ ತಮ್ಮ ವ್ಯಕ್ತಿತ್ವಗಳನ್ನೂ, ಹೆಸರುಗಳನ್ನೂ ಕಳೆದುಕೊಳ್ಳುತ್ತವೆ ಮತ್ತು ಮೂಲಕಾರಣವು ಅವುಗಳನ್ನು ತನ್ನಲ್ಲಿ ಸಂಗ್ರಹಿಸಿಕೊಳ್ಳುತ್ತದೆ (ಭಾರತ ದರ್ಶನ/ಗೀತಾ ಪ್ರೆಸ್).

[25] ಈ ಶ್ಲೋಕಕ್ಕೆ ಇನ್ನೊಂದು ಅನುವಾದವಿದೆ: ಹೀಗೆ ಮರಣಾನಂತರ ಆ ಜೀವದ ನಾಮರೂಪಗಳನ್ನು ಪುನಃ ಯಾವುದೇ ಕಾರಣದಿಂದಲೂ ಗುರುತಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಮರಣಾನಂತರ ಜೀವಕ್ಕೆ ಸಂಜ್ಞೆಯು ಹೇಗೆ ತಾನೆ ಇರುತ್ತದೆ? (ಭಾರತ ದರ್ಶನ/ಗೀತಾ ಪ್ರೆಸ್).

[26] When the strands are severed, a spider that has been stationed there, falls down. Like that, he is freed from his miseries, which are crushed like rocks on a mountain. (Bibek Debroy)

[27] ಇಲ್ಲಿ ಭೀಷ್ಮ ಉವಾಚ| ಎಂದಿದೆ (ಭಾರತ ದರ್ಶನ/ಗೀತಾ ಪ್ರೆಸ್).

[28] ದಕ್ಷಿಣಾತ್ಯ ಪಾಠದಲ್ಲಿ ಇದರ ನಂತರ, ಮಿಥಿಲಾನಗರಿಯು ಏಕೆ ಸುಟ್ಟುಹೋಯಿತು ಎನ್ನುವುದರ ಕುರಿತಾದ ಈ 10 ಅಧಿಕ ಶ್ಲೋಕಗಳಿವೆ: ಶ್ರೂಯತಾಂ ನೃಪಶಾರ್ದೂಲ ಯದರ್ಥಂ ದೀಪಿತಾ ಪುರಾ| ವಹ್ನಿನಾ ದೀಪಿತಾ ಸಾ ತು ತನ್ಮೇ ಶೃಣು ಮಹಾಮತೇ|| ಜನಕೋ ಜನದೇವಸ್ತು ಕರ್ಮಾಣ್ಯಾಧಾಯ ಚಾತ್ಮನಿ| ಸರ್ವಭಾವಮನುಪ್ರಾಪ್ಯ ಭಾವೇನ ವಿಚಚಾರ ಸಃ|| ಯಜನ್ ದದಂಸ್ತಥಾ ಜುಹ್ವನ್ ಪಾಲಯನ್ ಪೃಥಿವೀಮಿಮಾಮ್| ಅಧ್ಯಾತ್ಮವಿನ್ಮಹಾಪ್ರಾಜ್ಞಸ್ತನ್ಮಯತ್ವೇನ ನಿಷ್ಠಿತಃ|| ಸ ತಸ್ಯ ಹೃದಿ ಸಂಕಲ್ಪ್ಯಂ ಜ್ಞಾತುಮೈಚ್ಛತ್ಸ್ವಯಂ ಪ್ರಭುಃ| ಸರ್ವಲೋಕಾಧಿಪಸ್ತತ್ರ ದ್ವಿಜರೂಪೇಣ ಸಂಯುತಃ|| ಮಿಥಿಲಾಯಾಂ ಮಹಾಬುದ್ಧಿರ್ವಲೀಕಂ ಕಿಂಚಿದಾಚರನ್| ಸ ಗೃಹೀತ್ವಾ ದ್ವಿಜಶ್ರೇಷ್ಠೈರ್ನೃಪಾಯ ಪ್ರತಿವೇದಿತಃ|| ಅಪರಾಧಂ ಸಮುದ್ಧಿಶ್ಯ ತಂ ರಾಜಾ ಪ್ರತ್ಯಭಾಷತ| ಜನಕ ಉವಾಚ| ನ ತ್ವಾಂ ಬ್ರಾಹ್ಮಣ ದಂಡೇನ ನಿಯೋಕ್ಷ್ಯಾಮಿ ಕಥಂಚನ| ಮಮ ರಾಜಾದ್ವಿನಿರ್ಗಚ್ಛ ಯಾವತ್ ಸೀಮಾ ಭುವೋ ಮಮ|| ಇತ್ಯುಕ್ತಃ ಸ ತಥಾ ತೇನ ಮೈಥಿಲೇನ ದ್ವಿಜೋತ್ತಮಃ| ಅಬ್ರವೀತ್ತಂ ಮಹಾತ್ಮಾನಂ ರಾಜಾನಂ ಮಂತ್ರಿಭಿರ್ವೃತಮ್|| ತ್ವಮೇವಂ ಪದ್ಮನಾಭಸ್ಯ ನಿತ್ಯಂ ಪಕ್ಷಪದಾಹಿತಃ| ಅಹೋ ಸಿದ್ಧಾರ್ಥರೂಪೋಽಸಿ ಸ್ವಸ್ತಿ ತೇಽಸ್ತು ವೈ|| ಇತ್ಯುಕ್ತ್ವಾ ಪ್ರಯಯೌ ವಿಪ್ರಸ್ತಂಜಿಜ್ಞಾಸುರ್ದ್ವಿಜೋತ್ತಮಃ| ಅದಹಚ್ಚಾಗ್ನಿನಾ ತಸ್ಯ ಮಿಥಿಲಾಂ ಭಗವಾನ್ ಸ್ವಯಮ್|| ಪ್ರದೀಪ್ಯಮಾನಾಂ ಮಿಥಿಲಾಂ ದೃಷ್ಟ್ವಾ ರಾಜ ನ ಕಂಪಿತಃ| ಜನೈಃ ಸ ಪರಿಪೃಷ್ಠಸ್ತು ವಾಕ್ಯಮೇತದುವಾಚ ಹ|| ಅನಂತಂ ಬತ ಮೇ ವಿತ್ತಂ ಭಾವ್ಯಂ ಮೇ ನಾಸ್ತಿ ಕಿಂಚನ| ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ಕಿಂಚನ ದಹ್ಯತೇ|| ತದಸ್ಯ ಭಾಷಮಾಣಸ್ಯ ಶೃತ್ವಾ ಶೃತ್ವಾ ಹೃದಿ ಸ್ಥಿತಮ್| ಪುನಃ ಸಂಜೀವಯಾಮಾಸ ಮಿಥಿಲಾಂ ತಾಂ ದ್ವಿಜೋತ್ತಮಃ|| ಆತ್ಮಾನಂ ದರ್ಶಯಾಮಾಸ ವರಂ ಚಾಸ್ಮೈ ದದೌ ಪುನಃ| ಧರ್ಮೇ ತಿಷ್ಠತು ಸದ್ಭಾವೋ ಬುದ್ಧಿಸ್ತೇಽರ್ಥೇ ನರಾಧಿಪ|| ಸತ್ಯೇ ತಿಷ್ಠಸ್ವ ನಿರ್ವಿಣ್ಣಃ ಸ್ವಸ್ತಿ ತೇಽಸ್ತು ವ್ರಜಾಮ್ಯಹಮ್| ಇತ್ಯುಕ್ತ್ವಾ ಭಗವಾಂಶ್ಚೈನಂ ತತ್ರೈವಾಂತರಧೀಯತ| ಏತತ್ತೇ ಕಥಿತಂ ರಾಜನ್ ಕಿಂ ಭೂಯಃ ಶ್ರೋತುಮಿಚ್ಛಸಿ|| (ಗೀತಾ ಪ್ರೆಸ್).

Comments are closed.