Shanti Parva: Chapter 211

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೧

ಜನಕ-ಪಂಚಶಿಖ ಸಂವಾದ

ನಾಸ್ತಿಕ ಮತವನ್ನು ಖಂಡಿಸಿ ದೇಹಕ್ಕೂ ಭಿನ್ನವಾದ ಅತ್ಮವನ್ನು ಪ್ರತಿಪಾದಿಸುವ ಜನಕ-ಪಂಚಶಿಖರ ಸಂವಾದ (1-48).

12211001 ಯುಧಿಷ್ಠಿರ ಉವಾಚ|

12211001a ಕೇನ ವೃತ್ತೇನ ವೃತ್ತಜ್ಞೋ ಜನಕೋ ಮಿಥಿಲಾಧಿಪಃ|

12211001c ಜಗಾಮ ಮೋಕ್ಷಂ ಧರ್ಮಜ್ಞೋ ಭೋಗಾನುತ್ಸೃಜ್ಯ ಮಾನುಷಾನ್||

ಯುಧಿಷ್ಠಿರನು ಹೇಳಿದನು: “ಮಿಥಿಲಾಧಿಪ ವೃತ್ತಜ್ಞ ಧರ್ಮಜ್ಞ ಜನಕನು ಯಾವ ಆಚರಣೆಯಿಂದ ಮಾನುಷ ಭೋಗಗಳನ್ನು ತೊರೆದು ಮೋಕ್ಷವನ್ನು ಹೊಂದಿದನು?”

12211002 ಭೀಷ್ಮ ಉವಾಚ|

12211002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12211002c ಯೇನ ವೃತ್ತೇನ ವೃತ್ತಜ್ಞಃ ಸ ಜಗಾಮ ಮಹತ್ಸುಖಮ್||

ಭೀಷ್ಮನು ಹೇಳಿದನು: “ಯಾವ ಆಚರಣೆಯಿಂದ ವೃತ್ತಜ್ಞ ಜನಕನು ಮಹಾ ಸುಖವನ್ನು ಪಡೆದನು ಎನ್ನುವುದಕ್ಕೆ ಪುರಾತನ ಇತಿಹಾಸವಾದ ಇದನ್ನು ಉದಾಹರಿಸುತ್ತಾರೆ.

12211003a ಜನಕೋ ಜನದೇವಸ್ತು ಮಿಥಿಲಾಯಾಂ ಜನಾಧಿಪಃ|

12211003c ಔರ್ಧ್ವದೇಹಿಕಧರ್ಮಾಣಾಮಾಸೀದ್ಯುಕ್ತೋ ವಿಚಿಂತನೇ||

ಮಿಥಿಲೆಯ ಜನಾಧಿಪ ಜನಕ ಜನದೇವನಾದರೋ ಔರ್ಧ್ವದೇಹಿಕ ಧರ್ಮಗಳ ಕುರಿತೇ ಆಸಕ್ತನಾಗಿ ಅದರ ಚಿಂತನೆಯಲ್ಲಿಯೇ ತೊಡಗಿದ್ದನು.

12211004a ತಸ್ಯ ಸ್ಮ ಶತಮಾಚಾರ್ಯಾ ವಸಂತಿ ಸತತಂ ಗೃಹೇ|

12211004c ದರ್ಶಯಂತಃ ಪೃಥಗ್ಧರ್ಮಾನ್ನಾನಾಪಾಷಂಡವಾದಿನಃ||

ಬೇರೆ ಬೇರೆ ಆಶ್ರಮಗಳಲ್ಲಿದ್ದ ಭಿನ್ನ-ಭಿನ್ನ ಧರ್ಮಗಳನ್ನು ಉಪದೇಶಿಸುತ್ತಿದ್ದ ನೂರು ಆಚಾರ್ಯರು ಸತತವೂ ಅವನ ಗೃಹದಲ್ಲಿ ವಾಸಿಸುತ್ತಿದ್ದರು.

12211005a ಸ ತೇಷಾಂ ಪ್ರೇತ್ಯಭಾವೇ ಚ ಪ್ರೇತ್ಯಜಾತೌ ವಿನಿಶ್ಚಯೇ|

12211005c ಆಗಮಸ್ಥಃ ಸ ಭೂಯಿಷ್ಠಮಾತ್ಮತತ್ತ್ವೇ ನ ತುಷ್ಯತಿ||

ಶರೀರತ್ಯಾಗದ ನಂತರ ಜೀವದ ಅಸ್ತಿತ್ವವು ಇರುತ್ತದೆಯೋ ಇಲ್ಲವೋ ಅಥವಾ ದೇಹತ್ಯಾಗದ ನಂತರ ಅದರ ಪುನರ್ಜನ್ಮವಾಗುತ್ತದೆಯೋ ಇಲ್ಲವೋ ಈ ವಿಷಯದಲ್ಲಿ ಆ ಆಚಾರ್ಯರ ಸುನಿಶ್ಚಿತ ಸಿದ್ಧಾಂತಗಳಿಂದ ಮತ್ತು ಆತ್ಮತತ್ತ್ವದ ವಿಷಯವನ್ನು ಅವರು ಹೇಗೆ ಮಂಡಿಸುತ್ತಿದ್ದರೋ ಅದರಿಂದ ಶಾಸ್ತ್ರಾನುಯಾಯೀ ರಾಜಾ ಜನದೇವನು ವಿಶೇಷ ಸಂತುಷ್ಟನಾಗಿರಲಿಲ್ಲ.

12211006a ತತ್ರ ಪಂಚಶಿಖೋ ನಾಮ ಕಾಪಿಲೇಯೋ ಮಹಾಮುನಿಃ|

12211006c ಪರಿಧಾವನ್ಮಹೀಂ ಕೃತ್ಸ್ನಾಂ ಜಗಾಮ ಮಿಥಿಲಾಮಪಿ||

ಕಪಿಲೆಯ ಮಗ ಪಂಚಶಿಖ[1] ಎಂಬ ಹೆಸರಿನ ಮಹಾಮುನಿಯು ಸಂಪೂರ್ಣ ಪೃಥ್ವಿಯನ್ನು ಸುತ್ತಾಡುತ್ತಾ ಮಿಥಿಲಾನಗರಿಗೂ ಹೋದನು.

12211007a ಸರ್ವಸಂನ್ಯಾಸಧರ್ಮಾಣಾಂ ತತ್ತ್ವಜ್ಞಾನವಿನಿಶ್ಚಯೇ|

12211007c ಸುಪರ್ಯವಸಿತಾರ್ಥಶ್ಚ ನಿರ್ದ್ವಂದ್ವೋ ನಷ್ಟಸಂಶಯಃ||

ಅವನು ಸರ್ವಸಂನ್ಯಾಸ ಧರ್ಮಗಳನ್ನೂ ತಿಳಿದಿದ್ದನು. ತತ್ತ್ವಜ್ಞಾನ ನಿರ್ಣಯದಲ್ಲಿ ಒಂದು ಸುನಿಶ್ಚಿತ ಸಿದ್ಧಾಂತವನ್ನು ಹೊಂದಿದ್ದನು. ನಿರ್ದ್ವಂದ್ವನಾಗಿದ್ದನು ಮತ್ತು ಎಲ್ಲ ಸಂಶಯಗಳನ್ನೂ ಕಳೆದುಕೊಂಡಿದ್ದನು.

12211008a ಋಷೀಣಾಮಾಹುರೇಕಂ ಯಂ ಕಾಮಾದವಸಿತಂ ನೃಷು|

12211008c ಶಾಶ್ವತಂ ಸುಖಮತ್ಯಂತಮನ್ವಿಚ್ಚನ್ಸ ಸುದುರ್ಲಭಮ್||

ಋಷಿಗಳಲ್ಲಿಯೇ ಅದ್ವಿತೀಯನೆಂದೆನಿಸಿಕೊಂಡಿದ್ದನು. ಕಾಮನೆಗಳಿಂದ ಸರ್ವಥಾ ಶೂನ್ಯನಾಗಿದ್ದನು. ಅವನು ಮನುಷ್ಯರ ಹೃದಯದಲ್ಲಿ ತನ್ನ ಉಪದೇಶದ ಮೂಲಕ ಅತ್ಯಂತ ದುರ್ಲಭವಾದ ಸನಾತನ ಸುಖವನ್ನು ಪ್ರತಿಷ್ಠಾಪಿಸಲು ಇಚ್ಛಿಸಿದ್ದನು.

12211009a ಯಮಾಹುಃ ಕಪಿಲಂ ಸಾಂಖ್ಯಾಃ ಪರಮರ್ಷಿಂ ಪ್ರಜಾಪತಿಮ್|

12211009c ಸ ಮನ್ಯೇ ತೇನ ರೂಪೇಣ ವಿಸ್ಮಾಪಯತಿ ಹಿ ಸ್ವಯಮ್||

ಸಾಂಖ್ಯದ ವಿದ್ವಾಂಸರು ಅವನನ್ನು ಸಾಕ್ಷಾತ್ ಪ್ರಜಾಪತಿ ಪರಮ ಋಷಿ ಕಪಿಲನ ಸ್ವರೂಪವೆಂದೇ ಹೇಳುತ್ತಾರೆ. ಅವನನ್ನು ನೋಡಿದರೆ ಸ್ವಯಂ ಕಪಿಲ ಮಹರ್ಷಿಯೇ ಪಂಚಶಿಖನ ರೂಪದಲ್ಲಿ ಬಂದು ಜನರನ್ನು ವಿಸ್ಮಿತಗೊಳಿಸುತ್ತಿದ್ದಾನೋ ಎನ್ನುವಂತೆ ತೋರುತ್ತಿತ್ತು.

12211010a ಆಸುರೇಃ ಪ್ರಥಮಂ ಶಿಷ್ಯಂ ಯಮಾಹುಶ್ಚಿರಜೀವಿನಮ್|

12211010c ಪಂಚಸ್ರೋತಸಿ ಯಃ ಸತ್ರಮಾಸ್ತೇ ವರ್ಷಸಹಸ್ರಿಕಮ್||

ಆಸುರಿಯ ಪ್ರಥಮ ಶಿಷ್ಯನಾದ ಅವನನ್ನು ಚಿರಂಜೀವಿಯೆಂದು ಹೇಳುತ್ತಾರೆ. ಅವನು ಒಂದು ಸಾವಿರ ವರ್ಷಗಳು ಮಾನಸ ಯಜ್ಞದ ಅನುಷ್ಠಾನವನ್ನು ಮಾಡಿದ್ದನು.

12211011a ತಂ ಸಮಾಸೀನಮಾಗಮ್ಯ ಮಂಡಲಂ ಕಾಪಿಲಂ ಮಹತ್|

[2]12211011c ಪುರುಷಾವಸ್ಥಮವ್ಯಕ್ತಂ ಪರಮಾರ್ಥಂ ನಿಬೋಧಯತ್||

ಒಮ್ಮೆ ಆಸುರಿ ಮುನಿಯು ತನ್ನ ಆಶ್ರಮದಲ್ಲಿ ಕುಳಿತಿದ್ದಾಗ ಕಪಿಲಮತಾವಲಂಬೀ ಮುನಿಗಳ ಮಹಾ ಸಮುದಾಯವು ಅಲ್ಲಿಗೆ ಆಗಮಿಸಿತು ಮತ್ತು ಪ್ರತ್ಯೇಕ ಪುರುಷನ ಒಳಗಿರುವ ಅವ್ಯಕ್ತ ಮತ್ತು ಪರಮಾರ್ಥ ತತ್ತ್ವದ ವಿಷಯದ ಕುರಿತು ಹೇಳಬೇಕೆಂದು ಅವನಲ್ಲಿ ಕೇಳಿಕೊಂಡಿತು.

12211012a ಇಷ್ಟಿಸತ್ರೇಣ ಸಂಸಿದ್ಧೋ ಭೂಯಶ್ಚ ತಪಸಾ ಮುನಿಃ|

12211012c ಕ್ಷೇತ್ರಕ್ಷೇತ್ರಜ್ಞಯೋರ್ವ್ಯಕ್ತಿಂ ಬುಬುಧೇ ದೇವದರ್ಶನಃ||

ಆಸುರೀ ಮುನಿಯು ತಪೋಬಲದಿಂದ ದಿವ್ಯದೃಷ್ಟಿಯನ್ನು ಪಡೆದುಕೊಂಡಿದ್ದನು. ಜ್ಞಾನಯಜ್ಞದ ಮೂಲಕ ಸಿದ್ಧಿಯನ್ನು ಪಡೆದುಕೊಂಡು ಅವನು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಭೇದಸ್ವರೂಪಗಳನ್ನು ಅರ್ಥಮಾಡಿಕೊಂಡಿದ್ದನು.

12211013a ಯತ್ತದೇಕಾಕ್ಷರಂ ಬ್ರಹ್ಮ ನಾನಾರೂಪಂ ಪ್ರದೃಶ್ಯತೇ|

12211013c ಆಸುರಿರ್ಮಂಡಲೇ ತಸ್ಮಿನ್ಪ್ರತಿಪೇದೇ ತದವ್ಯಯಮ್||

ನಾನಾ ರೂಪಗಳಲ್ಲಿ ಕಾಣುವ ಆ ಏಕಮಾತ್ರ ಅಕ್ಷರ ಅವ್ಯಯ ಬ್ರಹ್ಮನ ಜ್ಞಾನವನ್ನು ಆಸುರಿಯು ಆ ಮುನಿಮಂಡಲದಲ್ಲಿ ಪ್ರತಿಪಾದಿಸಿದನು.

12211014a ತಸ್ಯ ಪಂಚಶಿಖಃ ಶಿಷ್ಯೋ ಮಾನುಷ್ಯಾ ಪಯಸಾ ಭೃತಃ|

12211014c ಬ್ರಾಹ್ಮಣೀ ಕಪಿಲಾ ನಾಮ ಕಾ ಚಿದಾಸೀತ್ಕುಟುಂಬಿನೀ||

12211015a ತಸ್ಯಾಃ ಪುತ್ರತ್ವಮಾಗಮ್ಯ ಸ್ತ್ರಿಯಾಃ ಸ ಪಿಬತಿ ಸ್ತನೌ|

12211015c ತತಃ ಸ ಕಾಪಿಲೇಯತ್ವಂ ಲೇಭೇ ಬುದ್ಧಿಂ ಚ ನೈಷ್ಠಿಕೀಮ್||

ಮನುಷ್ಯ ಸ್ತ್ರೀಯ ಹಾಲಿನಿಂದ ಪಾಲಿತಗೊಂಡಿದ್ದ ಪಂಚಶಿಖನು ಅವನ ಶಿಷ್ಯನಾಗಿದ್ದನು. ಕಪಿಲಾ ಎಂಬ ಹೆಸರಿನವಳು ಓರ್ವ ಬ್ರಾಹ್ಮಣೀ ಕುಟುಂಬಿನಿಯಾಗಿದ್ದಳು. ಆ ಸ್ತ್ರೀಯ ಪುತ್ರತ್ವವನ್ನು ಪಡೆದುಕೊಂಡು ಅವನು ಅವಳ ಸ್ತನಗಳನ್ನು ಕುಡಿದಿದ್ದನು. ಆದುದರಿಂದ ಕಾಪಿಲೇಯತ್ವವನ್ನು ಪಡೆದುಕೊಂಡನು. ಅವನು ಬ್ರಹ್ಮನಲ್ಲಿ ನಿಷ್ಠಾಬುದ್ಧಿಯನ್ನಿಟ್ಟಿದ್ದನು.

12211016a ಏತನ್ಮೇ ಭಗವಾನಾಹ ಕಾಪಿಲೇಯಾಯ ಸಂಭವಮ್|

12211016c ತಸ್ಯ ತತ್ಕಾಪಿಲೇಯತ್ವಂ ಸರ್ವವಿತ್ತ್ವಮನುತ್ತಮಮ್||

ಕಾಪಿಲೇಯನ ಹುಟ್ಟಿನ ಕುರಿತಾದ ಈ ವಿಷಯವನ್ನು ಭಗವಾನನು ನನಗೆ ಹೇಳಿದ್ದನು. ಅವನ ಕಾಪಿಲೇಯತ್ವ ಮತ್ತು ಸರ್ವವಿದುತ್ವದ ಅನುತ್ತಮ ವೃತ್ತಾಂತವಿದು.

12211017a ಸಾಮಾನ್ಯಂ ಕಪಿಲೋ[3] ಜ್ಞಾತ್ವಾ ಧರ್ಮಜ್ಞಾನಾಮನುತ್ತಮಮ್|

12211017c ಉಪೇತ್ಯ ಶತಮಾಚಾರ್ಯಾನ್ಮೋಹಯಾಮಾಸ ಹೇತುಭಿಃ||

ಕಪಿಲ ಮಹರ್ಷಿಯ ಅನುತ್ತಮ ಜ್ಞಾನವನ್ನು ಪಡೆದಿದ್ದ ಧರ್ಮಜ್ಞ ಪಂಚಶಿಖನು ರಾಜಾ ಜನಕನ ನೂರು ಆಚಾರ್ಯರು ಸಮಾನಭಾವದಿಂದಿರುವರೆಂದು ತಿಳಿದು ಅಲ್ಲಿಗೆ ಹೋಗಿ ತನ್ನ ಯುಕ್ತಿಯುಕ್ತ ಮಾತುಗಳಿಂದ ಅವರನ್ನು ಮೋಹಿತಗೊಳಿಸಿದನು.

12211018a ಜನಕಸ್ತ್ವಭಿಸಂರಕ್ತಃ ಕಾಪಿಲೇಯಾನುದರ್ಶನಾತ್|

12211018c ಉತ್ಸೃಜ್ಯ ಶತಮಾಚಾರ್ಯಾನ್ಪೃಷ್ಠತೋಽನುಜಗಾಮ ತಮ್||

ಆಗ ಮಹಾರಾಜ ಜನಕನು ಕಾಪಿಲೇಯನ ಜ್ಞಾನವನ್ನು ಕಂಡು ಅವನ ಮೇಲೆ ಆಕರ್ಷಿತನಾಗಿ ತನ್ನ ನೂರು ಆಚಾರ್ಯರನ್ನು ಬಿಟ್ಟು ಅವನ ಹಿಂದೆಯೇ ಹೋದನು.

12211019a ತಸ್ಮೈ ಪರಮಕಲ್ಪಾಯ ಪ್ರಣತಾಯ ಚ ಧರ್ಮತಃ|

12211019c ಅಬ್ರವೀತ್ಪರಮಂ ಮೋಕ್ಷಂ ಯತ್ತತ್ಸಾಂಖ್ಯಂ ವಿಧೀಯತೇ||

ಧರ್ಮಾನುಸಾರ ತನ್ನ ಚರಣಗಳಲ್ಲಿ ನಮಸ್ಕರಿಸಿದ ಅವನನ್ನು ಯೋಗ್ಯ ಅಧಿಕಾರಿಯೆಂದು ತಿಳಿದು ಪಂಚಶಿಖನು ಅವನಿಗೆ ಸಾಂಖ್ಯಶಾಸ್ತ್ರದಲ್ಲಿ ತಿಳಿಸಿರುವ ಪರಮ ಮೋಕ್ಷದ ಕುರಿತು ಹೇಳಿದನು.

12211020a ಜಾತಿನಿರ್ವೇದಮುಕ್ತ್ವಾ ಹಿ ಕರ್ಮನಿರ್ವೇದಮಬ್ರವೀತ್|

12211020c ಕರ್ಮನಿರ್ವೇದಮುಕ್ತ್ವಾ ಚ ಸರ್ವನಿರ್ವೇದಮಬ್ರವೀತ್||

ಅವನು ಹುಟ್ಟುವುದರಿಂದ ಮೋಕ್ಷಗೊಳಿಸುವ ಜಾತಿನಿರ್ವೇದ[4]ವನ್ನು ಹೇಳಿ ಕರ್ಮಗಳಿಂದ ಮೋಕ್ಷಗೊಳಿಸುವ ಕರ್ಮನಿರ್ವೇದ[5]ವನ್ನು ಹೇಳಿದನು. ಕರ್ಮನಿರ್ವೇದವನ್ನು ಹೇಳಿ ಎಲ್ಲವುಗಳಿಂದಲೂ ಮೋಕ್ಷವನ್ನು ಪಡೆಯುವ ಸರ್ವನಿರ್ವೇದ[6]ವನ್ನೂ ಹೇಳಿದನು.

12211021a ಯದರ್ಥಂ ಕರ್ಮ[7]ಸಂಸರ್ಗಃ ಕರ್ಮಣಾಂ ಚ ಫಲೋದಯಃ|

12211021c ತದನಾಶ್ವಾಸಿಕಂ ಮೋಘಂ[8] ವಿನಾಶಿ ಚಲಮಧ್ರುವಮ್||

“ಇಹ ಪರಗಳಲ್ಲಿ ದೊರೆಯುವ ಕರ್ಮಫಲಗಳ ಭೋಗಕ್ಕಾಗಿ ಯಾವ ಕರ್ಮಗಳನ್ನು ಮಾಡುತ್ತೇವೋ ಅವು ನಶ್ವರವು. ಅವುಗಳ ಮೇಲೆ ವಿಶ್ವಾಸವನ್ನಿಡುವುದು ಉಚಿತವಲ್ಲ. ಅದು ನಿಷ್ಫಲವಾದುದು. ವಿನಾಶವಾಗುವಂಥಹುದು. ಚಂಚಲವಾದುದು ಮತ್ತು ಅಸ್ಥಿರವಾದುದು.

12211022a ದೃಶ್ಯಮಾನೇ ವಿನಾಶೇ ಚ ಪ್ರತ್ಯಕ್ಷೇ ಲೋಕಸಾಕ್ಷಿಕೇ|

12211022c ಆಗಮಾತ್ಪರಮಸ್ತೀತಿ ಬ್ರುವನ್ನಪಿ ಪರಾಜಿತಃ||

ಕೆಲವರು ಇದನ್ನು ಹೇಳುತ್ತಾರೆ: “ದೇಹರೂಪಿಯಾದ ಆತ್ಮನ ವಿನಾಶವನ್ನು ಪ್ರತ್ಯಕ್ಷವಾಗಿಯೇ ಕಾಣಬಹುದು. ಲೋಕವೇ ಇದಕ್ಕೆ ಸಾಕ್ಷಿಯಾಗಿದೆ. ಯಾರಾದರೂ ಶಾಸ್ತ್ರಪ್ರಮಾಣವನ್ನು ತೋರಿಸಿ ದೇಹ ನಾಶವಾದರೂ ಆತ್ಮವು ನಾಶವಾಗುವುದಿಲ್ಲ ಎನ್ನುವುದನ್ನು ಹೇಳಿದರೆ ಅವರು ಸೋಲುತ್ತಾರೆ. ಏಕೆಂದರೆ ಅಂತಹ ಮಾತು ಲೋಕಾನುಭವಕ್ಕೆ ವಿರುದ್ಧವಾಗಿದೆ.

12211023a ಅನಾತ್ಮಾ ಹ್ಯಾತ್ಮನೋ ಮೃತ್ಯುಃ ಕ್ಲೇಶೋ ಮೃತ್ಯುರ್ಜರಾಮಯಃ|

12211023c ಆತ್ಮಾನಂ ಮನ್ಯತೇ ಮೋಹಾತ್ತದಸಮ್ಯಕ್ಪರಂ ಮತಮ್||

ಆತ್ಮವೆನ್ನುವುದು ಬೇರೆಯಲ್ಲ. ಅದರ ಸ್ವರೂಪವಾದ ಶರೀರವು ನಾಶವಾಗುವುದೇ ಮೃತ್ಯು. ದೇಹದೊಡನೆ ಆತ್ಮವೂ ವಿನಾಶವಾಗುತ್ತದೆ. ಹೀಗೆ ದುಃಖ, ಮುಪ್ಪು ಮತ್ತು ರೋಗಗಳು ಅಂಶಮಾತ್ರ ಮೃತ್ಯುಗಳು. ಆತ್ಮವೆಂಬ ಬೇರೆಯದಿದೆ ಎಂದು ತಿಳಿಯುವುದು ಮೂಢತನ ಮತ್ತು ಅಸಂಗತವಾದುದು.

12211024a ಅಥ ಚೇದೇವಮಪ್ಯಸ್ತಿ ಯಲ್ಲೋಕೇ ನೋಪಪದ್ಯತೇ|

12211024c ಅಜರೋಽಯಮಮೃತ್ಯುಶ್ಚ ರಾಜಾಸೌ ಮನ್ಯತೇ ತಥಾ||

ಲೋಕದಲ್ಲಿ ಎಲ್ಲಿಯೂ ಸಿಗದಿರುವ, ಶರೀರದಿಂದ ಭಿನ್ನವಾದ ಆತ್ಮ ಎಂಬ ವಸ್ತುವಿರುವುದಾದರೆ ಶಾಸ್ತ್ರಗಳನ್ನೇ ಆಧರಿಸಿ ಅಂತಹ ಆತ್ಮವನ್ನು ಅಜರ-ಅಮರ ಎಂದು ಹೊಗಳುವುದಾದರೆ ವಂಧಿ-ಮಾಗಧರು ಹೇಳುವಂತೆ ರಾಜನೂ ಅಜರ-ಅಮರನಾಗಬೇಕಿತ್ತು!”

12211025a ಅಸ್ತಿ ನಾಸ್ತೀತಿ ಚಾಪ್ಯೇತತ್ತಸ್ಮಿನ್ನಸತಿ ಲಕ್ಷಣೇ|

12211025c ಕಿಮಧಿಷ್ಠಾಯ ತದ್ಬ್ರೂಯಾಲ್ಲೋಕಯಾತ್ರಾವಿನಿಶ್ಚಯಮ್||

ಒಂದು ವಸ್ತುವು ಇದೆ ಅಥವಾ ಇಲ್ಲ ಎನ್ನುವುದನ್ನು ಅದರ ಅಸ್ತಿತ್ವದ ಲಕ್ಷಣಗಳ ಆಧಾರದ ಮೇಲೆ ನಿರ್ಧರಿಸಬೇಕು. ಆತ್ಮವು ಇದೆ ಅಥವಾ ಇಲ್ಲ ಎಂದು ಸಂಶಯವುಂಟಾದಾಗ ಅನುಮಾನದಿಂದ ಅದರ ಅಸ್ತಿತ್ವವನ್ನು ಸಾಧಿಸಬೇಕಾದರೂ ಅದಕ್ಕೆ ಯಾವ ಲಕ್ಷಣಗಳೂ ಇಲ್ಲ. ಹೀಗಿರುವಾಗ ಲೋಕವ್ಯವಹಾರದಲ್ಲಿ ಇದರ ನಿಶ್ಚಯವನ್ನಾದರೂ ಯಾವುದನ್ನು ಆಧರಿಸಿ ಮಾಡಲು ಸಾಧ್ಯವಾಗುತ್ತದೆ?

12211026a ಪ್ರತ್ಯಕ್ಷಂ ಹ್ಯೇತಯೋರ್ಮೂಲಂ ಕೃತಾಂತೈತಿಹ್ಯಯೋರಪಿ|

12211026c ಪ್ರತ್ಯಕ್ಷೋ ಹ್ಯಾಗಮೋಽಭಿನ್ನಃ ಕೃತಾಂತೋ ವಾ ನ ಕಿಂ ಚನ||

ನಿಶ್ಚಯಗಳು ಪ್ರತ್ಯಕ್ಷ ಪ್ರಮಾಣಗಳನ್ನು ಆಧರಿಸಿರಬೇಕು. ಆಗಮ-ಶಾಸ್ತ್ರಗಳು ಬೇರೆಯೇ ನಿಶ್ಚಯವನ್ನು ಹೇಳಿದರೂ, ಪ್ರತ್ಯಕ್ಷ ಪ್ರಮಾಣವಿಲ್ಲದೇ ಅದೇ ಸರಿಯೆಂದು ಹೇಳಲಾಗದು[9].

12211027a ಯತ್ರ ತತ್ರಾನುಮಾನೇಽಸ್ತಿ ಕೃತಂ ಭಾವಯತೇಽಪಿ ವಾ|

12211027c ಅನ್ಯೋ ಜೀವಃ ಶರೀರಸ್ಯ ನಾಸ್ತಿಕಾನಾಂ ಮತೇ ಸ್ಮೃತಃ||

ಭಾವನೆಗಳು ಅನುಮಾನವನ್ನು ಆಧರಿಸಿರಬಾರದು. ಆದುದರಿಂದ ಶರೀರಕ್ಕಿಂತಲೂ ಭಿನ್ನವಾದ ಜೀವವಿದೆ ಎನ್ನುವುದು ನಾಸ್ತಿಕರ ಮತವೆಂದು ತಿಳಿಯಬೇಕಾಗುತ್ತದೆ[10].

12211028a ರೇತೋ ವಟಕಣೀಕಾಯಾಂ ಘೃತಪಾಕಾಧಿವಾಸನಮ್|

12211028c ಜಾತಿಸ್ಮೃತಿರಯಸ್ಕಾಂತಃ ಸೂರ್ಯಕಾಂತೋಽಂಬುಭಕ್ಷಣಮ್||

ವಟವೃಕ್ಷವು ಒಂದೇ ಒಂದು ಬೀಜದಿಂದ ಉತ್ಪನ್ನವಾಗುತ್ತದೆ. ತುಪ್ಪವು ಬೆಣ್ಣೆಯನ್ನು ಕಾಯಿಸುವುದರಿಂದ ದೊರೆಯುತ್ತದೆ. ಇವು ಬೇರೆ ಬೇರೆ ಜಾತಿಗಳಿಗೆ ಸೇರಿದ ವಸ್ತುಗಳು. ಅಯಸ್ಕಾಂತ ಮತ್ತು ಸೂರ್ಯಕಾಂತಗಳು ನೀರನ್ನು ಕುಡಿಯುತ್ತವೆ[11].

12211029a ಪ್ರೇತ್ಯ ಭೂತಾತ್ಯಯಶ್ಚೈವ ದೇವತಾಭ್ಯುಪಯಾಚನಮ್|

12211029c ಮೃತೇ ಕರ್ಮನಿವೃತ್ತಿಶ್ಚ ಪ್ರಮಾಣಮಿತಿ ನಿಶ್ಚಯಃ||

ಸತ್ತನಂತರ ದೇವತೆಗಳನ್ನು ಯಾಚಿಸಲು ಹೋಗುವ ಯಾವುದಾದರೂ ಹೇಗಿರುತ್ತದೆ? ಮೃತನ ಕರ್ಮಗಳು ನಿಂತುಹೋಗುತ್ತವೆ ಎನ್ನುವುದು ಪ್ರಮಾಣಪೂರ್ವಕ ನಿಶ್ಚಯವು[12].

12211030a ನ ತ್ವೇತೇ ಹೇತವಃ ಸಂತಿ ಯೇ ಕೇ ಚಿನ್ಮೂರ್ತಿಸಂಸ್ಥಿತಾಃ|

12211030c ಅಮರ್ತ್ಯಸ್ಯ ಹಿ ಮರ್ತ್ಯೇನ ಸಾಮಾನ್ಯಂ ನೋಪಪದ್ಯತೇ||

ಆದರೆ ಯಾವುದಕ್ಕೆ ಆಕಾರವೇ ಇಲ್ಲವೋ ಅದರ ವಿಷಯದಲ್ಲಿ ಈ ರೀತಿಯ ವಾದವು ಸರಿಯಲ್ಲ. ಸಾಯದೇ ಇರುವುದನ್ನು ಸಾಯುವಂಥಹ ಸಾಮಾನ್ಯ ದೇಹವು ನೋಡಲಾರದು[13].

12211031a ಅವಿದ್ಯಾಕರ್ಮಚೇಷ್ಟಾನಾಂ[14] ಕೇ ಚಿದಾಹುಃ ಪುನರ್ಭವಮ್|

12211031c ಕಾರಣಂ ಲೋಭಮೋಹೌ ತು ದೋಷಾಣಾಂ ಚ ನಿಷೇವಣಮ್||

ಅವಿದ್ಯೆ ಮತ್ತು ಮಾಡಿದ ಕರ್ಮಗಳು – ಇವು ಪುನಃಜನ್ಮಕ್ಕೆ ಕಾರಣಗಳೆಂದು ಕೆಲವರು ಹೇಳುತ್ತಾರೆ. ಲೋಭ-ಮೋಹಗಳು ಮತ್ತು ದೋಷಗಳನ್ನುಂಟುಮಾಡಿಕೊಳ್ಳುವುದು ಇದಕ್ಕೆ ಕಾರಣವು.

12211032a ಅವಿದ್ಯಾಂ ಕ್ಷೇತ್ರಮಾಹುರ್ಹಿ ಕರ್ಮ ಬೀಜಂ ತಥಾ ಕೃತಮ್|

12211032c ತೃಷ್ಣಾಸಂಜನನಂ ಸ್ನೇಹ ಏಷ ತೇಷಾಂ ಪುನರ್ಭವಃ||

ಅವಿದ್ಯೆಯನ್ನು ಕ್ಷೇತ್ರವೆಂದೂ ಮಾಡುವ ಕರ್ಮಗಳು ಬೀಜವೆಂದೂ ಹೇಳುತ್ತಾರೆ. ಬೀಜವು ಮೊಳಕೆಗೊಳ್ಳಲು ಸಹಾಯಕವಾದ ತೇವಾಂಶವೇ ತೃಷ್ಣೆಯು. ಇವುಗಳಿಂದಲೇ ಪುನರ್ಜನ್ಮವುಂಟಾಗುತ್ತದೆ.

12211033a ತಸ್ಮಿನ್ವ್ಯೂಢೇ[15] ಚ ದಗ್ಧೇ ಚ ಚಿತ್ತೇ ಮರಣಧರ್ಮಿಣಿ|

12211033c ಅನ್ಯೋಽನ್ಯಾಜ್ಜಾಯತೇ ದೇಹಸ್ತಮಾಹುಃ ಸತ್ತ್ವಸಂಕ್ಷಯಮ್||

ಅದು ಚಿತ್ತದಲ್ಲಿ ಅಡಗಿರುತ್ತದೆ. ಮರಣಧರ್ಮವಿರುವ ದೇಹವನ್ನು ಸುಟ್ಟರೂ ಅದು ಸತ್ತ್ವವನ್ನು ಉಳಿಸಿಕೊಂಡು ಇನ್ನೊಂದು ದೇಹದಲ್ಲಿ ಹುಟ್ಟುತ್ತದೆ ಎನ್ನುತ್ತಾರೆ.[16]

12211034a ಯದಾ ಸ ರೂಪತಶ್ಚಾನ್ಯೋ ಜಾತಿತಃ ಶ್ರುತಿತೋಽರ್ಥತಃ|

12211034c ಕಥಮಸ್ಮಿನ್ಸ ಇತ್ಯೇವ ಸಂಬಂಧಃ ಸ್ಯಾದಸಂಹಿತಃ||

ಅನ್ಯ ದೇಹವು ಬೇರೆಯೇ ರೂಪದ್ದಾಗಿರುವಾಗ ಮೊದಲಿನ ಮತ್ತು ನಂತರದ ದೇಹಗಳ ನಡುವೆ ಹೇಗೆ ತಾನೇ ಸಂಬಂಧಗಳನ್ನು ಕಲ್ಪಿಸಬಹುದು?

12211035a ಏವಂ ಸತಿ ಚ ಕಾ ಪ್ರೀತಿರ್ದಾನವಿದ್ಯಾತಪೋಬಲೈಃ|

12211035c ಯದನ್ಯಾಚರಿತಂ ಕರ್ಮ ಸರ್ವಮನ್ಯಃ ಪ್ರಪದ್ಯತೇ||

ಒಂದು ದೇಹವು ಆಚರಿಸಿದ ಕರ್ಮಫಲಗಳೆಲ್ಲವನ್ನೂ ಇನ್ನೊಂದು ದೇಹವು ಅನುಭವಿಸುತ್ತದೆ ಎಂದಾದರೆ ದಾನ, ವಿದ್ಯೆ ಮತ್ತು ತಪೋಬಲಗಳಲ್ಲಿ ಯಾರಿಗೆ ತಾನೇ ಯಾವ ಆಸಕ್ತಿಯುಂಟಾಗಬಹುದು?

12211036a ಯದಾ ಹ್ಯಯಮಿಹೈವಾನ್ಯೈಃ ಪ್ರಾಕೃತೈರ್ದುಃಖಿತೋ ಭವೇತ್|

12211036c ಸುಖಿತೈರ್ದುಃಖಿತೈರ್ವಾಪಿ ದೃಶ್ಯೋಽಪ್ಯಸ್ಯ ವಿನಿರ್ಣಯಃ||

ಅನ್ಯರು ಒಂದು ದೇಹದಲ್ಲಿ ಹಿಂದೆ ಮಾಡಿದ ಕರ್ಮಗಳಿಂದ ಅದೇ ದೇಹದಲ್ಲಿರುವಾಗಲೇ ದುಃಖಿತರಾಗುತ್ತಾರೆ. ಆದುದರಿಂದ ಸುಖ-ದುಃಖಗಳನ್ನು ನೋಡಿಕೊಂಡೇ ನಿರ್ಣಯಕ್ಕೆ ಬರಬೇಕಾಗುತ್ತದೆ.

12211037a ತಥಾ ಹಿ ಮುಸಲೈರ್ಹನ್ಯುಃ ಶರೀರಂ ತತ್ಪುನರ್ಭವೇತ್|

12211037c ಪೃಥಗ್ ಜ್ಞಾನಂ ಯದನ್ಯಚ್ಚ ಯೇನೈತನ್ನೋಪಲಭ್ಯತೇ||

ಮುಸಲದಿಂದ ಹೊಡೆದು ತೀರಿಕೊಂಡ ಶರೀರವು ಪುನಃ ಹುಟ್ಟಿಕೊಳ್ಳುತ್ತದೆ ಎಂದಾದರೂ ಅವುಗಳ ಜ್ಞಾನವು ಬೇರೆ ಬೇರೆಯಾಗಿರುತ್ತದೆ. 

12211038a ಋತುಃ ಸಂವತ್ಸರಸ್ತಿಥ್ಯಃ ಶೀತೋಷ್ಣೇ ಚ ಪ್ರಿಯಾಪ್ರಿಯೇ|

12211038c ಯಥಾತೀತಾನಿ ಪಶ್ಯಂತಿ ತಾದೃಶಃ ಸತ್ತ್ವಸಂಕ್ಷಯಃ||

ಋತುಗಳು, ಸಂವತ್ಸರಗಳು, ತಿಥಿಗಳು, ಛಳಿಗಾಲ ಬೇಸಗೆ ಕಾಲಗಳು ಮತ್ತು ಪ್ರಿಯ-ಅಪ್ರಿಯ ಸಮಯಗಳು ಹೇಗೆ ಕಳೆಯುತ್ತಾ ಹೋಗುತ್ತದೆಯೋ ಹಾಗೆ ಶರೀರಗಳೂ ಒಂದಾದ ಮೇಲೆ ಇನ್ನೊಂದರಂತೆ ಕಳೆಯುತ್ತಾ ಹೋಗುತ್ತವೆ. ಆದರೆ ಸತ್ತ್ವವು ಮಾತ್ರ ಬೀಜರೂಪದಲ್ಲಿ ಉಳಿದುಕೊಂಡಿರುತ್ತದೆ.

12211039a ಜರಯಾ ಹಿ ಪರೀತಸ್ಯ ಮೃತ್ಯುನಾ ವಾ ವಿನಾಶಿನಾ|

12211039c ದುರ್ಬಲಂ ದುರ್ಬಲಂ ಪೂರ್ವಂ ಗೃಹಸ್ಯೇವ ವಿನಶ್ಯತಿ||

ಶರೀರವಾದರೋ ಮುಪ್ಪಿನಿಂದ ಪೀಡಿತವಾಗಿ ಮೃತ್ಯುವಿನಿಂದ ನಾಶವಾಗುತ್ತದೆ. ದುರ್ಬಲವಾಗುತ್ತಿರುವ ಮನೆಯು ಕಾಲಕ್ರಮೇಣ ಕುಸಿದು ಬೀಳುವಂತೆ ಪದೇ ಪದೇ ದುರ್ಬಲವಾಗುವ ದೇಹವೂ ನಾಶವಾಗುತ್ತದೆ.

12211040a ಇಂದ್ರಿಯಾಣಿ ಮನೋ ವಾಯುಃ ಶೋಣಿತಂ ಮಾಂಸಮಸ್ಥಿ ಚ|

12211040c ಆನುಪೂರ್ವ್ಯಾ ವಿನಶ್ಯಂತಿ ಸ್ವಂ ಧಾತುಮುಪಯಾಂತಿ ಚ||

ಇಂದ್ರಿಯಗಳು, ಮನಸ್ಸು, ವಾಯು, ರಕ್ತ, ಮಾಂಸ ಮತ್ತು ಎಲುಬುಗಳು ಎಲ್ಲವೂ ಒಂದಾದ ಮೇಲೆ ಒಂದರಂತೆ ನಾಶಹೊಂದಿ ಯಾವುದರಿಂದ ಉತ್ಪನ್ನವಾಗಿದ್ದವೋ ಆ ಮೂಲಧಾತುಗಳನ್ನು ಸೇರುತ್ತವೆ.

12211041a ಲೋಕಯಾತ್ರಾವಿಧಾನಂ[17] ಚ ದಾನಧರ್ಮಫಲಾಗಮಃ|

12211041c ಯದರ್ಥಂ[18] ವೇದಶಬ್ದಾಶ್ಚ ವ್ಯವಹಾರಾಶ್ಚ ಲೌಕಿಕಾಃ||

12211042a ಇತಿ ಸಮ್ಯಘ್ ಮನಸ್ಯೇತೇ ಬಹವಃ ಸಂತಿ ಹೇತವಃ|

12211042c ಏತದಸ್ತೀದಮಸ್ತೀತಿ ನ ಕಿಂ ಚಿತ್ ಪ್ರತಿಪದ್ಯತೇ||

ಲೋಕಯಾತ್ರಾವಿಧಾನಗಳು, ದಾನ-ಧರ್ಮಗಳ ಫಲಗಳನ್ನು ಪಡೆಯುವುದು, ವೇದಶಬ್ದಗಳನ್ನು ಅರ್ಥೈಸುವುದು ಮತ್ತು ಲೌಕಿಕ ವ್ಯವಹಾರಗಳು – ಇವೆಲ್ಲವುಗಳಿಂದ ಮನಸ್ಸಿನಲ್ಲಿ ಅನೇಕ ತರ್ಕಗಳುಂಟಾಗುತ್ತವೆ. ಆದರೆ ಈ ತರ್ಕಗಳಿಂದ ಆತ್ಮವೆನ್ನುವುದು ಇದೆ ಅಥವಾ ಇಲ್ಲ ಎನ್ನುವುದನ್ನು ಪ್ರತಿಪಾದಿಸಲು ಸಾಧ್ಯವಿಲ್ಲ[19].

12211043a ತೇಷಾಂ ವಿಮೃಶತಾಮೇವಂ ತತ್ತತ್ಸಮಭಿಧಾವತಾಮ್|

12211043c ಕ್ವ ಚಿನ್ನಿವಿಶತೇ ಬುದ್ಧಿಸ್ತತ್ರ ಜೀರ್ಯತಿ ವೃಕ್ಷವತ್||

ಇವುಗಳ ಕುರಿತು ವಿಮರ್ಶೆಮಾಡುತ್ತಲೇ ಜನರು ಬೇರೆ ಬೇರೆ ದಿಕ್ಕುಗಳಲ್ಲಿ ಹೋಗುತ್ತಾರೆ. ಕೆಲವರು ಈ ವಿಷಯದಲ್ಲಿ ತಮ್ಮ ಬುದ್ಧಿಯನ್ನೇ ಮುಳುಗಿಸುತ್ತಾರೆ. ಇನ್ನುಕೆಲವರು ವೃಕ್ಷಗಳಂತೆ ಮುಪ್ಪಾಗುತ್ತಾರೆ[20].

12211044a ಏವಮರ್ಥೈರನರ್ಥೈಶ್ಚ ದುಃಖಿತಾಃ ಸರ್ವಜಂತವಃ|

12211044c ಆಗಮೈರಪಕೃಷ್ಯಂತೇ ಹಸ್ತಿಪೈರ್ಹಸ್ತಿನೋ ಯಥಾ||

ಹೀಗೆ ಎಲ್ಲ ಮನುಷ್ಯರೂ ಅರ್ಥ-ಅನರ್ಥಗಳಿಂದ ದುಃಖಿತರಾಗುತ್ತಾರೆ. ಮಾವಟಿಗನು ಆನೆಗಳನ್ನು ಅಂಕುಶದಿಂದ ನಿಯಂತ್ರಿಸುವಂತೆ ಆಗಮ ಶಾಸ್ತ್ರಗಳು ಮಾತ್ರ ಮನುಷ್ಯರನ್ನು ಸನ್ಮಾರ್ಗದಲ್ಲಿರುವಂತೆ ನಿಯಂತ್ರಿಸುತ್ತವೆ.

12211045a ಅರ್ಥಾಂಸ್ತಥಾತ್ಯಂತಸುಖಾವಹಾಂಶ್ಚ

ಲಿಪ್ಸಂತ ಏತೇ ಬಹವೋ ವಿಶುಲ್ಕಾಃ|

12211045c ಮಹತ್ತರಂ ದುಃಖಮಭಿಪ್ರಪನ್ನಾ

ಹಿತ್ವಾಮಿಷಂ ಮೃತ್ಯುವಶಂ ಪ್ರಯಾಂತಿ||

ಹೀಗೆ ಅತ್ಯಂತ ಸುಖವನ್ನು ಪಡೆಯಲಿಚ್ಛಿಸುವವರು ಬಹುಮಂದಿ ಇದ್ದಾರೆ, ಆದರೆ ಅವರು ಅದನ್ನು ಯಾವುದೇ ಶುಲ್ಕವಿಲ್ಲದೇ ಪಡೆಯಲು ಬಯಸುತ್ತಾರೆ. ಇದರಿಂದಾಗಿ ಅವರು ಮಹತ್ತರ ದುಃಖವನ್ನು ಎದುರಿಸಿ ಕೊನೆಗೆ ಸುಖೋಪಭೋಗಗಳೆಲ್ಲವನ್ನು ತೊರೆದು ಮೃತ್ಯುವಶರಾಗುತ್ತಾರೆ.

12211046a ವಿನಾಶಿನೋ ಹ್ಯಧ್ರುವಜೀವಿತಸ್ಯ

ಕಿಂ ಬಂಧುಭಿರ್ಮಿತ್ರಪರಿಗ್ರಹೈಶ್ಚ|

12211046c ವಿಹಾಯ ಯೋ ಗಚ್ಚತಿ ಸರ್ವಮೇವ

ಕ್ಷಣೇನ ಗತ್ವಾ ನ ನಿವರ್ತತೇ ಚ||

ನಾಶವು ನಿಶ್ಚಿತವಾಗಿರುವ ಈ ಜೀವಿಗೆ ಬಂಧುಗಳು, ಮಿತ್ರರು ಮತ್ತು ಸಂಗ್ರಹಗಳಿಂದ ಯಾವ ಪ್ರಯೋಜನವಿದೆ? ತಕ್ಷಣವೇ ಇವೆಲ್ಲವನ್ನೂ ಬಿಟ್ಟು ಹೊರಟುಹೋಗುವವನು ಪುನಃ ಹಿಂದಿರುಗುವುದಿಲ್ಲ.

12211047a ಭೂವ್ಯೋಮತೋಯಾನಲವಾಯವೋ ಹಿ

ಸದಾ ಶರೀರಂ ಪರಿಪಾಲಯಂತಿ|

12211047c ಇತೀದಮಾಲಕ್ಷ್ಯ ಕುತೋ ರತಿರ್ಭವೇದ್

ವಿನಾಶಿನೋ ಹ್ಯಸ್ಯ ನ ಶರ್ಮ ವಿದ್ಯತೇ||

ಭೂಮಿ, ಆಕಾಶ, ನೀರು, ಅಗ್ನಿ ಮತ್ತು ವಾಯುಗಳು ಸದಾ ಶರೀರವನ್ನು ಪರಿಪಾಲಿಸುತ್ತಿರುತ್ತವೆ. ಇದನ್ನು ನೋಡಿದರೆ ಶರೀರದ ಮೇಲೆ ಅನುರಾಗವಾದರೂ ಹೇಗೆ ಇರುತ್ತದೆ? ನಾಶವಾಗುವ ಈ ಶರೀರದಿಂದ ಯಾವ ಸುಖವೂ ಇಲ್ಲ.”

12211048a ಇದಮನುಪಧಿ ವಾಕ್ಯಮಚ್ಚಲಂ

ಪರಮನಿರಾಮಯಮಾತ್ಮಸಾಕ್ಷಿಕಮ್|

12211048c ನರಪತಿರಭಿವೀಕ್ಷ್ಯ ವಿಸ್ಮಿತಃ

ಪುನರನುಯೋಕ್ತುಮಿದಂ ಪ್ರಚಕ್ರಮೇ||

ಭ್ರಮೆಯನ್ನು ಹೋಗಲಾಡಿಸುವ, ವಂಚನಾರಹಿತವಾದ, ದೋಷರಹಿತವಾದ ಮತ್ತು ಆತ್ಮಸಾಕ್ಷಾತ್ಕಾರವನ್ನು ಹೊಂದಿಸುವ ಪಂಚಶಿಖನ ಈ ಮಾತುಗಳನ್ನು ಕೇಳಿ ನರಪತಿ ಜನಕನು ವಿಸ್ಮಿತನಾದನು. ಪುನಃ ಅವನು ಈ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪಂಚಶಿಖವಾಕ್ಯೇ ಪಾಖಂಡಖಂಡನೇ ಏಕಾದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪಂಚಶಿಖವಾಕ್ಯೇ ಪಾಖಂಡಖಂಡನ ಎನ್ನುವ ಇನ್ನೂರಾಹನ್ನೊಂದನೇ ಅಧ್ಯಾಯವು.

[1] ಪಂಚಶಿಖ ಋಷಿಯು ಸಾಂಖ್ಯಸಿದ್ಧಾಂತದ ಪ್ರತಿಪಾದಕ ಕಪಿಲ ಮಹರ್ಷಿಯ ಶಿಷ್ಯ ಆಸುರೀ ಎಂಬ ಋಷಿಯ ಶಿಷ್ಯನು. 60,000 ಶ್ಲೋಕಗಳಿರುವ ಷಷ್ಟಿ ತಂತ್ರ ಎಂಬ ಕೃತಿಯು ಪಂಚಶಿಖ ಮುನಿಯದ್ದೆಂಬ ಪ್ರತೀತಿಯಿದೆ. ಇದರಲ್ಲಿ ಪ್ರಕೃತಿ ಮತ್ತು ಪುರುಷರ ವಿಷದ ವರ್ಣನೆಯಿದೆ. ಕೃಷ್ಣನಿಗೆ ಉಪದೇಶವನ್ನಿತ್ತ ಉಲೂಕ ಅಥವಾ ಕಾನಡ, ವೈಶೇಷಿಕ ಸೂತ್ರ ಎಂಬ ಕೃತಿಯ ಕರ್ತೃವು ಪಂಚಶಿಖನ ಶಿಷ್ಯನಾಗಿದ್ದನು. ಕಪಿಲೆಯೆಂಬ ಬ್ರಾಹ್ಮಣಿಯು ತನ್ನ ಹಾಲಿನಿಂದ ಪಂಚಶಿಖನನ್ನು ಪೋಷಿಸಿದ್ದಳು. ವೇದೋಕ್ತ ತರ್ಪಣವಿಧಿಯಲ್ಲಿ ಮನುಷ್ಯ ತರ್ಪಣದ ಮಂತ್ರವು ಪಂಚಶಿಖನನ್ನು ಗೌರವಿಸುತ್ತದೆ: ಓಂ ಸನಕಶ್ಚ ಸನಂದಶ್ಚ ತೃತೀಯಶ್ಚ ಸನಾತನಃ| ಕಪಿಲಶ್ಚಾಸುರೀಶ್ಚೈವ ವೋಢುಃ ಪಂಚಶಿಖಸ್ತಥಾ| ಸರ್ವೇ ತೇ ತೃಪ್ತಿಮಾಯಾಂತು ಮದ್ದತ್ತೇನಾಂಬುನಾ ಸದಾ||

[2] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಪಂಚಸ್ರೋತಸಿ ನಿಷ್ಣಾತಃ ಪಂಚರಾತ್ರವಿಶಾರದಃ| ಪಂಚಜ್ಞಃ ಪಂಚಕೃತ್ಪಂಚಗುಣಃ ಪಂಚಶಿಖಃ ಸ್ಮೃತಃ|| ಅರ್ಥಾತ್ ಅವನು ಐದು ಇಂದ್ರಿಯಗಳ ಪ್ರವಾಹಗಳನ್ನು ತಿಳಿದಿದ್ದನು. ಪಂಚರಾತ್ರ ಆಗಮದ ವಿಶೇಷಜ್ಞನಾಗಿದ್ದನು. ಐದು ಕೋಶಗಳನ್ನು ಮತ್ತು ಅವುಗಳನ್ನು ಉಪಾಸನೆಯ ಐದು ವಿಧಿಗಳನ್ನು ತಿಳಿದಿದ್ದನು. ಶಮ, ದಮ, ಉಪರತಿ, ತಿತಿಕ್ಷಾ, ಮತ್ತು ಸಮಾಧಾನ ಈ ಐದು ಗುಣಗಳನ್ನು ಹೊಂದಿದ್ದನು. ಆದುದರಿಂದ ಅವನು ಪಂಚಶಿಖನೆಂದೆನಿಸಿಕೊಂಡಿದ್ದನು. (ಗೀತಾ ಪ್ರೆಸ್/ಭಾರತ ದರ್ಶನ)

[3] ಜನಕಂ (ಗೀತಾ ಪ್ರೆಸ್/ಭಾರತ ದರ್ಶನ).

[4] ಗರ್ಭಾವಾಸದಲ್ಲಿ ಆಗುವ ಎಷ್ಟೋ ಯಾತನೆಗಳನ್ನು ತಿಳಿದು ವಿಚಾರಿಸಿ ಶರೀರದ ಮೇಲೆ ಜುಗುಪ್ಸೆಯನ್ನು ತಾಳುವುದು ಜಾತಿನಿರ್ವೇದ (ಭಾರತ ದರ್ಶನ/ಗೀತಾ ಪ್ರೆಸ್).

[5] ನಾನಾಯೋನಿಗಳನ್ನು ಹುಟ್ಟುವುದನ್ನೂ ಮತ್ತು ಪಾಪಕರ್ಮಗಳಿಂದ ಪ್ರಾಪ್ತವಾಗುವ ನರಕಯಾತನೆಯನ್ನೂ ಪರಿಶೀಲಿಸಿ ಕಾಮ್ಯಕರ್ಮಗಳಿಂದ ವಿರತನಾಗುವುದು ಕರ್ಮನಿರ್ವೇದ (ಭಾರತ ದರ್ಶನ/ಗೀತಾ ಪ್ರೆಸ್).

[6] ಜಗತ್ತಿನ ಎಲ್ಲವೂ ಅಶಾಶ್ವತವೆಂದೂ ದುಃಖಜನಕವೆಂದೂ ವಿಮರ್ಶಿಸಿ ಎಲ್ಲದರಿಂದಲೂ ವಿರಕ್ತನಾಗುವುದು ಸರ್ವನಿರ್ವೇದ (ಭಾರತ ದರ್ಶನ/ಗೀತಾ ಪ್ರೆಸ್).

[7] ಧರ್ಮ (ಭಾರತ ದರ್ಶನ/ಗೀತಾ ಪ್ರೆಸ್).

[8] ಮೋಹಂ (ಭಾರತ ದರ್ಶನ/ಗೀತಾ ಪ್ರೆಸ್).

[9] ಕೃತಾಂತ (ಅದೃಷ್ಟ ಅಥವಾ ಅನುಮಾನ) ಮತ್ತು ಆಗಮಗಳಿಗೆ ಹೇಗೋ ಹಾಗೆ ಈ ಆಸ್ತಿಕ-ನಾಸ್ತಿಕವಾದಗಳಿಗೂ ಪ್ರತ್ಯಕ್ಷವೇ ಮೂಲ ಪ್ರಮಾಣವು. ಪ್ರತ್ಯಕ್ಷಕ್ಕೆ ಹೊರತಾದ ಬೇರೆ ಅನುಮಾನವಾಗಲೀ ಆಗಮವಾಗಲೀ ಇಲ್ಲ. (ಭಾರತ ದರ್ಶನ)

[10] ದೇಹಾತಿರಿಕ್ತನಾದ ಆತ್ಮನು ಪ್ರತ್ಯಕ್ಷಪ್ರಮಾಣದಲ್ಲಿ ದೊರೆಯುವುದಿಲ್ಲ. ಯಾವುದಾದರೂ ಅನುಮಾನದಿಂದ ಆತ್ಮನ ಅಸ್ತಿತ್ವವನ್ನು ಭಾವಿಸುವುದಾದರೆ ಅದು ವ್ಯರ್ಥ. ಆದುದರಿಂದ ದೇಹಕ್ಕಿಂತ ಅನ್ಯನಾದ ಜೀವಾತ್ಮವೊಂದು ಇಲ್ಲ ಎನ್ನುವುದೇ ನಾಸ್ತಿಕರ ಮತವಾಗಿದೆ. (ಭಾರತ ದರ್ಶನ).

[11] ವಟವೃಕ್ಷದ ಬೀಜದಲ್ಲಿ ಎಲೆ, ಪುಷ್ಪ, ಫಲ, ಬೇರು ಮತ್ತು ತೊಗಟೆಗಳು ಹೇಗೆ ಅಡಗಿರುತ್ತವೆಯೋ, ಗೋವು ತಿನ್ನುವ ಹುಲ್ಲಿನಿಂದ ಹೇಗೆ ತುಪ್ಪ, ಹಾಲು ಮೊದಲಾದವುಗಳು ಪ್ರಕಟವಾಗುತ್ತವೆಯೋ ಮತ್ತು ಅನೇಕ ಔಷಧ ದ್ರವ್ಯಗಳನ್ನು ಬೇಯಿಸಿ ಸ್ವಲ್ಪ ದಿನ ಇಟ್ಟರೆ ಅವುಗಳಲ್ಲಿ ಹೇಗೆ ನಶೆಯ ಪದಾರ್ಥವು ಉತ್ಪನ್ನವಾಗುತ್ತದೆಯೋ ಅದೇ ಪ್ರಕಾರವಾಗಿ ವೀರ್ಯದಿಂದಲೇ ಶರೀರಾದಿಗಳೊಡನೆ ಚೇತನವೂ ಪ್ರಕಟವಾಗುತ್ತದೆ. ಸ್ಮೃತಿ, ಅಯಸ್ಕಾಂತ, ಸೂರ್ಯಕಾಂತಮಣಿ, ಮತ್ತು ನೀರನ್ನು ಭಕ್ಷಿಸುವ ಬಡವಾನಲ ಇವುಗಳ ದೃಷ್ಟಾಂತಗಳನ್ನು ಕೊಟ್ಟು ದೇಹಾತಿರಿಕ್ತವಾದ ಚೈತ್ಯನ್ಯವಿದೆ ಎನ್ನುವುದು ಸಿದ್ಧವಾಗುವುದಿಲ್ಲ. (ಭಾರತ ದರ್ಶನ).

[12] ಸತ್ತವನ ಶರೀರದಲ್ಲಿ ಚೈತನ್ಯವಿಲ್ಲದಿರುವುದೇ ದೇಹಕ್ಕಿಂತಲೂ ಭಿನ್ನವಾದ ಚೈತನ್ಯವಿರುವುದೆಂಬುದಕ್ಕೆ ಪ್ರಮಾಣವಾಗಿದೆ. ಚೇತನವು ಶರೀರದಲ್ಲಿ ಇರುವವರೆಗೂ ಯಾರೂ ಅವನು ಸತ್ತನೆಂದು ಹೇಳುವುದಿಲ್ಲ. ಚೇತನವು ಹೋದನಂತರವೇ ಮನುಷ್ಯನು ಸತ್ತನೆಂದು ಹೇಳುತ್ತಾರೆ. ಆದುದರಿಂದ ದೇಹವು ಆತ್ಮಕ್ಕಿಂತಲೂ ಭಿನ್ನವೆನ್ನುವುದು ಸ್ಪಷ್ಟವಾಗುತ್ತದೆ. (ಭಾರತ ದರ್ಶನ).

[13] ಸ್ವಾಭಾವಿಕವಾಗಿ ಮೂರ್ತವಾದ ಜಡಪದಾರ್ಥದಿಂದ ಮೂರ್ತವಾದ ಜಡಪದಾರ್ಥವೇ ಹುಟ್ಟುತ್ತದೆ. ಉದಾಹರಣೆಗೆ ಎರಡು ಕಟ್ಟಿಗೆಗಳನ್ನು ಮಥಿಸಿದರೆ ಮೂರ್ತವಾದ ಅಗ್ನಿಯು ಹುಟ್ಟಿಕೊಳ್ಳುತ್ತದೆ. ಆದರೆ ಮೂರ್ತ ಪದಾರ್ಥಗಳಿಂದ ಅಮೂರ್ತ ಅಥವಾ ಅವ್ಯಕ್ತ ಪದಾರ್ಥಗಳು ಎಂದೂ ಹುಟ್ಟುವುದಿಲ್ಲ. ಹಾಗೆ ಹುಟ್ಟುವುದಾಗಿದ್ದರೆ ಮೂರ್ತವಾದ ಪೃಥ್ವಿ, ನೀರು, ತೇಜಸ್ಸು, ಮತ್ತು ವಾಯುಗಳಿಂದ ಅಮೂರ್ತವಾದ ಆಕಾಶವು ಹುಟ್ಟಬೇಕಾಗಿತ್ತು. ಆದರೆ ಅದು ಹಾಗಾಗುವುದಿಲ್ಲ. ಅದೇ ರೀತಿ ಮೂರ್ತವಾದ ದೇಹವು ಅಮೂರ್ತವಾದ ಆತ್ಮಕ್ಕೆ ಕಾರಣವಾಗುವುದಿಲ್ಲ. ಆತ್ಮವು ಅವ್ಯಕ್ತ ಪದಾರ್ಥವು ಮತ್ತು ದೇಹವು ವ್ಯಕ್ತಪದಾರ್ಥವು. ಇವೆರಡಕ್ಕೂ ಸಮಾನತೆಯಿಲ್ಲ. ದೇಹ ಮತ್ತು ಆತ್ಮ ಒಂದೇ ಆಗುವುದಿಲ್ಲ. ದೇಹಕ್ಕಿಂತಲೂ ಆತ್ಮವು ಭಿನ್ನವಾಗಿದೆ. (ಭಾರತ ದರ್ಶನ).

[14] ಅವಿದ್ಯಾ ಕರ್ಮ ತೃಷ್ಣಾ ಚ| (ಭಾರತ ದರ್ಶನ).

[15] ತಸ್ಮಿನ್ಗೂಢೇ (ಭಾರತ ದರ್ಶನ).

[16] ಸಾಯುವ ಧರ್ಮವುಳ್ಳ ಈ ದೇಹವನ್ನು ಹೂತರೂ, ಸುಟ್ಟುಹಾಕಿದರೂ ಅಧವಾ ಭೇದಿಸಿದರೂ ಶುಭಾಶುಭ ಕರ್ಮಬೀಜದಿಂದ ಮತ್ತೊಂದು ದೇಹವು ಉಂಟಾಗುತ್ತದೆ. ಆ ಬೀಜವು ಜ್ಞಾನದಿಂದ ನಾಶಹೊಂದಿದರೆ ಮರುಹುಟ್ಟೂ ನಾಶವಾಗುತ್ತದೆ. (ಭಾರತ ದರ್ಶನ)

[17] ಲೋಕಯಾತ್ರಾವಿಘಾತಶ್ಚ (ಭಾರತ ದರ್ಶನ).

[18] ತದರ್ಥಂ (ಭಾರತ ದರ್ಶನ).

[19] ಶರೀರಭಿನ್ನವಾದ ಆತ್ಮದ ಅಸ್ತಿತ್ವವನ್ನು ಒಪ್ಪಿಕೊಳ್ಳದೇ ಇದ್ದರೆ ಲೋಕ ವ್ಯವಹಾರದ ನಿರ್ವಹಣೆಯೇ ಆಗುವುದಿಲ್ಲ. ದಾನ ಮತ್ತು ಇತರ ಧರ್ಮಗಳಿಂದ ಫಲವನ್ನು ಪಡೆದುಕೊಳ್ಳುವ ಆಸ್ಥೆಯೇ ಯಾರಿಗೂ ಇರುವುದಿಲ್ಲ. ವೈದಿಕ ಶಬ್ದಗಳೂ ಮತ್ತು ಲೌಕಿಕ ವ್ಯವಹಾರಗಳೂ ಆತ್ಮಕ್ಕೆ ಸುಖವನ್ನುಂಟುಮಾಡುವ ಸಲುವಾಗಿಯೇ ಹೇಳಲ್ಪಟ್ಟಿವೆ. ಹೀಗೆ ಮನಸ್ಸಿನಲ್ಲಿ ಆತ್ಮನಿಗೆ ಸಂಬಂಧಿಸಿದಂತೆ ಅನೇಕ ವಿಧವಾದ ತರ್ಕ-ವಿತರ್ಕಗಳು ಹುಟ್ಟುತ್ತಲೇ ಇರುತ್ತವೆ. ಆದರೆ “ಏತದಸ್ತಿ” ಇದು ಇದೆ ಮತ್ತು “ಇದಮಸ್ತಿ” ಈ ಆತ್ಮವಿದೆ ಎಂದು ಹೇಳುವುದರಿಂದಾಗಲೀ ನಿರ್ಧಾರ ಮಾಡುವುದರಿಂದಾಗಲೀ ಆತ್ಮವನ್ನು ಹೊಂದಲು ಸಾಧ್ಯವಾಗುವುದಿಲ್ಲ. (ಭಾರತ ದರ್ಶನ/ಗೀತಾ ಪ್ರೆಸ್).

[20] ಹೀಗೆ ಅನೇಕ ಪ್ರಕಾರವಾಗಿ ಆತ್ಮನ ಸತ್ತೆಯನ್ನು ವಿಮರ್ಶಿಸುತ್ತಾ ನಾನಾ ಮತಗಳ ಕಡೆಗೆ ಧಾವಿಸುತ್ತಾ ಯಾವುದೋ ಒಂದು ಸಿದ್ಧಾಂತಕ್ಕೆ ಅಂಟಿಕೊಂಡ ಬುದ್ಧಿಯು ವೃಕ್ಷದಂತೆ ಜಡಭಾವವನ್ನು ಹೊಂದಿ ಜೀರ್ಣವಾಗಿ ಹೋಗುತ್ತದೆ (ಬುದ್ಧಿಯ ಕಸರತ್ತಿನಿಂದ ಆತ್ಮವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ). (ಭಾರತ ದರ್ಶನ/ಗೀತಾ ಪ್ರೆಸ್).

Comments are closed.