Shanti Parva: Chapter 210

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೧೦

ಪರಮಾತ್ಮ, ವ್ಯಕ್ತ, ಪ್ರಕೃತಿ ಮತ್ತು ಪುರುಷ ಈ ನಾಲ್ಕರ ಜ್ಞಾನದಿಂದ ಮುಕ್ತಿ; ಪರಮಾತ್ಮ ಪ್ರಾಪ್ತಿಗೆ ಇತರ ಸಾಧನೆಗಳ ವರ್ಣನೆ (1-36).

12210001 ಗುರುರುವಾಚ|[1]

12210001a ನ ಸ ವೇದ ಪರಂ ಧರ್ಮಂ ಯೋ ನ ವೇದ ಚತುಷ್ಟಯಮ್|

12210001c ವ್ಯಕ್ತಾವ್ಯಕ್ತೇ ಚ ಯತ್ತತ್ತ್ವಂ ಸಂಪ್ರಾಪ್ತಂ[2] ಪರಮರ್ಷಿಣಾ||

ಗುರುವು ಹೇಳಿದನು: “ಅವ್ಯಕ್ತ, ವ್ಯಕ್ತ, ಪ್ರಕೃತಿ ಮತ್ತು ಪುರುಷ – ಈ ನಾಲ್ಕನ್ನೂ ತಿಳಿದುಕೊಂಡಿರದ ಮನುಷ್ಯನು ಪರಮಋಷಿಗಳು ಪಡೆದುಕೊಂಡಿರುವ ಪರಮ ಜ್ಞಾನವನ್ನು ಮತ್ತು ಧರ್ಮವನ್ನು ತಿಳಿಯಲಾರನು.

12210002a ವ್ಯಕ್ತಂ ಮೃತ್ಯುಮುಖಂ ವಿದ್ಯಾದವ್ಯಕ್ತಮಮೃತಂ ಪದಮ್|

12210002c ಪ್ರವೃತ್ತಿಲಕ್ಷಣಂ ಧರ್ಮಮೃಷಿರ್ನಾರಾಯಣೋಽಬ್ರವೀತ್||

ವ್ಯಕ್ತವನ್ನು ಮೃತ್ಯುಮುಖವೆಂದೂ ಅವ್ಯಕ್ತವನ್ನು ಅಮೃತಪದವೆಂದೂ ತಿಳಿಯಬೇಕು. ಋಷಿ ನಾರಾಯಣನು ಪ್ರವೃತ್ತಿಲಕ್ಷಣ ಧರ್ಮವನ್ನು ಹೇಳಿದ್ದಾನೆ.

12210003a ಅತ್ರೈವಾವಸ್ಥಿತಂ ಸರ್ವಂ ತ್ರೈಲೋಕ್ಯಂ ಸಚರಾಚರಮ್|

12210003c ನಿವೃತ್ತಿಲಕ್ಷಣಂ ಧರ್ಮಮವ್ಯಕ್ತಂ ಬ್ರಹ್ಮ ಶಾಶ್ವತಮ್||

ಆ ಪ್ರವೃತ್ತಿಧರ್ಮದಲ್ಲಿಯೇ ಮೂರೂ ಲೋಕಗಳ ಸರ್ವ ಚರಾಚರಗಳೂ ಪ್ರತಿಷ್ಠಿತಗೊಂಡಿವೆ. ನಿವೃತ್ತಿ ಲಕ್ಷಣ ಧರ್ಮವು ಅವ್ಯಕ್ತವಾದ ಶಾಶ್ವತ ಬ್ರಹ್ಮವು.

12210004a ಪ್ರವೃತ್ತಿಲಕ್ಷಣಂ ಧರ್ಮಂ ಪ್ರಜಾಪತಿರಥಾಬ್ರವೀತ್|

12210004c ಪ್ರವೃತ್ತಿಃ ಪುನರಾವೃತ್ತಿರ್ನಿವೃತ್ತಿಃ ಪರಮಾ ಗತಿಃ||

ಪ್ರಜಾಪತಿ ಬ್ರಹ್ಮನು ಪ್ರವೃತ್ತಿಲಕ್ಷಣ ಧರ್ಮದ ಕುರಿತು ಹೀಗೆ ಹೇಳಿದ್ದಾನೆ: ಪ್ರವೃತ್ತಿ ಧರ್ಮವು ಪುನರಾವೃತ್ತಿಯನ್ನುಂಟುಮಾಡುತ್ತದೆ ಮತ್ತು ನಿವೃತ್ತಿ ಧರ್ಮವು ಪರಮ ಗತಿಯನ್ನು ನೀಡುತ್ತದೆ.

12210005a ತಾಂ ಗತಿಂ ಪರಮಾಮೇತಿ ನಿವೃತ್ತಿಪರಮೋ ಮುನಿಃ|

12210005c ಜ್ಞಾನತತ್ತ್ವಪರೋ ನಿತ್ಯಂ ಶುಭಾಶುಭನಿದರ್ಶಕಃ||

ನಿತ್ಯವೂ ಶುಭಾಶುಭಗಳನ್ನು ಸಮನಾಗಿ ಕಾಣುವ ಜ್ಞಾನತತ್ತ್ವಪರ ನಿವೃತ್ತಿಪರ ಮುನಿಯು ಆ ಪರಮ ಗತಿಯನ್ನು ಹೊಂದುತ್ತಾನೆ.

12210006a ತದೇವಮೇತೌ ವಿಜ್ಞೇಯಾವವ್ಯಕ್ತಪುರುಷಾವುಭೌ|

12210006c ಅವ್ಯಕ್ತಪುರುಷಾಭ್ಯಾಂ ತು ಯತ್ ಸ್ಯಾದನ್ಯನ್ಮಹತ್ತರಮ್||

12210007a ತಂ ವಿಶೇಷಮವೇಕ್ಷೇತ ವಿಶೇಷೇಣ ವಿಚಕ್ಷಣಃ|

ಆದುದರಿಂದ ಮೊದಲು ಅವ್ಯಕ್ತ[3]ವನ್ನೂ ಪುರುಷನನ್ನೂ ತಿಳಿದುಕೊಳ್ಳಬೇಕು. ಅನಂತರ ಈ ಅವ್ಯಕ್ತ ಪ್ರಕೃತಿ ಮತ್ತು ಪುರುಷ ಇವೆರಡಕ್ಕಿಂತಲೂ ಮಹತ್ತರವಾದುದನ್ನು ತಿಳಿಯಬೇಕು. ವಿಶೇಷ ಬುದ್ಧಿಯಿಂದ ಅವುಗಳ ಅಂತರವನ್ನು ತಿಳಿಯಬೇಕು.

12210007c ಅನಾದ್ಯಂತಾವುಭಾವೇತಾವಲಿಂಗೌ ಚಾಪ್ಯುಭಾವಪಿ||

12210008a ಉಭೌ ನಿತ್ಯೌ ಸೂಕ್ಷ್ಮತರೌ ಮಹದ್ಭ್ಯಶ್ಚ ಮಹತ್ತರೌ|

12210008c ಸಾಮಾನ್ಯಮೇತದುಭಯೋರೇವಂ ಹ್ಯನ್ಯದ್ವಿಶೇಷಣಮ್||

ಅವ್ಯಕ್ತ ಪ್ರಕೃತಿ ಮತ್ತು ಪುರುಷ ಇಬ್ಬರೂ ಆದಿ ಅಂತ್ಯಗಳಿಲ್ಲದವರು[4]. ಇಬ್ಬರೂ ಆಕಾರರಹಿತರು. ಇಬ್ಬರೂ ನಿತ್ಯರು. ಅವಿಚಲರು. ಮಹತ್ತುಗಳಿಗಿಂತಲೂ ಮಹತ್ತರದವರು. ಈ ವಿಶೇಷಗಳೆಲ್ಲವೂ ಅವ್ಯಕ್ತ ಮತ್ತು ಪುರುಷರಲ್ಲಿ ಒಂದೇ ಸಮನಾಗಿವೆ. ಆದರೆ ಇವೆರಡರ ಅಂತರ ಅಥವಾ ವೈಲಕ್ಷಣ್ಯವು ಹೀಗಿದೆ.

12210009a ಪ್ರಕೃತ್ಯಾ ಸರ್ಗಧರ್ಮಿಣ್ಯಾ ತಥಾ ತ್ರಿವಿಧಸತ್ತ್ವಯಾ[5]|

12210009c ವಿಪರೀತಮತೋ ವಿದ್ಯಾತ್ ಕ್ಷೇತ್ರಜ್ಞಸ್ಯ ಚ ಲಕ್ಷಣಮ್||

ಅವ್ಯಕ್ತ ಪ್ರಕೃತಿಯ ಧರ್ಮವೇ ಸೃಷ್ಟಿಮಾಡುವುದು. ಅದು ಸೃಷ್ಟಿಯಲ್ಲಿ ಮೂರೂ ಗುಣಗಳನ್ನು ಬಳಸುತ್ತದೆ. ಆದರೆ ಕ್ಷೇತ್ರಜ್ಞ ಪುರುಷನ ಲಕ್ಷಣವು ಇದಕ್ಕಿಂತಲೂ ಭಿನ್ನವಾಗಿದೆಯೆಂದು ತಿಳಿಯಬೇಕು.

12210010a ಪ್ರಕೃತೇಶ್ಚ ವಿಕಾರಾಣಾಂ ದ್ರಷ್ಟಾರಮಗುಣಾನ್ವಿತಮ್|

12210010c ಅಗ್ರಾಹ್ಯೌ ಪುರುಷಾವೇತಾವಲಿಂಗತ್ವಾದಸಂಹಿತೌ||

ಗುಣಗಳೇ ಇಲ್ಲದ ಪುರುಷನು ಪ್ರಕೃತಿಯ ಗುಣವಿಕಾರಗಳನ್ನು ನೋಡುತ್ತಾನೆ ಮಾತ್ರ. ಪುರುಷ-ಪ್ರಕೃತಿ ಇಬ್ಬರೂ ಆಕಾರಗಳಿಲ್ಲದೇ ಇರುವುದರಿಂದ ಗ್ರಹಿಸಲು ಅಸಾಧ್ಯರು. ಇಬ್ಬರೂ ಅವ್ಯಕ್ತ ಸ್ಥಿತಿಯಲ್ಲಿಯೇ ಇದ್ಧರೂ ಒಬ್ಬರಿಗೊಬ್ಬರು ವಿಲಕ್ಷಣ ಗುಣಗಳನ್ನು ಹೊಂದಿರುತ್ತಾರೆ.

12210011a ಸಂಯೋಗಲಕ್ಷಣೋತ್ಪತ್ತಿಃ ಕರ್ಮಜಾ ಗೃಹ್ಯತೇ ಯಯಾ|

12210011c ಕರಣೈಃ ಕರ್ಮನಿರ್ವೃತ್ತೈಃ ಕರ್ತಾ ಯದ್ಯದ್ವಿಚೇಷ್ಟತೇ|

12210011e ಕೀರ್ತ್ಯತೇ ಶಬ್ದಸಂಜ್ಞಾಭಿಃ ಕೋಽಹಮೇಷೋಽಪ್ಯಸಾವಿತಿ||

ಪ್ರಕೃತಿ ಮತ್ತು ಪುರುಷರ ಸಂಯೋಗದಿಂದಲೇ ಚರಾಚರ ಜಗತ್ತಿನ ಉತ್ಪತ್ತಿಯಾಗುತ್ತದೆ. ಇದನ್ನು ಕರ್ಮದಿಂದಲೇ ಗ್ರಹಿಸಬಹುದು. ಜೀವವು ಮನ-ಇಂದ್ರಿಯಗಳ ಮೂಲಕ ಕರ್ಮಗಳನ್ನು ಮಾಡುತ್ತದೆ. ಅದು ಯಾವ ಯಾವ ಕರ್ಮಗಳನ್ನು ಮಾಡುತ್ತದೆಯೋ ಅದು ಅವುಗಳ ಕರ್ತ ಎನ್ನಿಸಿಕೊಳ್ಳುತ್ತದೆ. “ಯಾರು”, “ನಾನು”, “ಇದು” ಮತ್ತು “ಅದು” ಎನ್ನುವ ಶಬ್ಧ-ಸಂಜ್ಞೆಗಳ ಮೂಲಕವೇ ಅದರ ವರ್ಣನೆಯನ್ನು ಮಾಡಬಹುದು.

12210012a ಉಷ್ಣೀಷವಾನ್ಯಥಾ ವಸ್ತ್ರೈಸ್ತ್ರಿಭಿರ್ಭವತಿ ಸಂವೃತಃ|

12210012c ಸಂವೃತೋಽಯಂ ತಥಾ ದೇಹೀ ಸತ್ತ್ವರಾಜಸತಾಮಸೈಃ||

ಮುಂಡಾಸನ್ನು ಸುತ್ತಿಕೊಂಡಿರುವವನು ಹೇಗೆ ಮೂರು ವಸ್ತ್ರಗಳಿಂದ (ಉಡುವ ಪಂಚೆ, ಹೊದೆಯುವ ಪಂಚೆ ಮತ್ತು ಮುಂಡಾಸು) ಸುತ್ತುಗಟ್ಟಲ್ಪಟ್ಟಿರುವನೋ ಹಾಗೆ ಜೀವನು ಸತ್ತ್ವ-ರಜಸ್ತಮೋಗುಣಗಳಿಂದ ಸಂವೃತನಾಗಿದ್ದಾನೆ.

12210013a ತಸ್ಮಾಚ್ಚತುಷ್ಟಯಂ ವೇದ್ಯಮೇತೈರ್ಹೇತುಭಿರಾಚಿತಮ್|

12210013c ಯಥಾಸಂಜ್ಞೋ ಹ್ಯಯಂ ಸಮ್ಯಗಂತಕಾಲೇ ನ ಮುಹ್ಯತಿ||

ಆದುದರಿಂದ ಸತ್ತ್ವ-ರಜಸ್ತಮೋಗುಣಗಳಿಂದ ಆವೃತವಾಗಿರುವ ಚತುಷ್ಟಯವನ್ನು (ಪರಮಾತ್ಮಾ, ವ್ಯಕ್ತ, ಪ್ರಕೃತಿ ಮತ್ತು ಪುರುಷ) ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಂಡವನು ಮರಣಸಮಯದಲ್ಲಿ ಮೂಢನಂತೆ ವಿಮೋಹಗೊಳ್ಳುವುದಿಲ್ಲ.

12210014a ಶ್ರಿಯಂ ದಿವ್ಯಾಮಭಿಪ್ರೇಪ್ಸುರ್ಬ್ರಹ್ಮ ವಾಙ್ಮನಸಾ ಶುಚಿಃ[6]|

12210014c ಶಾರೀರೈರ್ನಿಯಮೈರುಗ್ರೈಶ್ಚರೇನ್ನಿಷ್ಕಲ್ಮಷಂ ತಪಃ||

ದಿವ್ಯ ಶ್ರೀ ಬ್ರಹ್ಮಜ್ಞಾನವನ್ನು ಪಡೆದುಕೊಳ್ಳ ಬಯಸುವವನು ತನ್ನ ಮಾತು-ಮನಸ್ಸುಗಳನ್ನು ಶುಚಿಯಾಗಿಟ್ಟುಕೊಂಡು ಶರೀರನಿಯಮಗಳಿಂದ ನಿಕ್ಷಲ್ಮಷವಾದ ಉಗ್ರ ತಪಸ್ಸನ್ನು ಆಚರಿಸಬೇಕು.

12210015a ತ್ರೈಲೋಕ್ಯಂ ತಪಸಾ ವ್ಯಾಪ್ತಮಂತರ್ಭೂತೇನ ಭಾಸ್ವತಾ|

12210015c ಸೂರ್ಯಶ್ಚ ಚಂದ್ರಮಾಶ್ಚೈವ ಭಾಸತಸ್ತಪಸಾ ದಿವಿ||

ಅಂತರಂಗದಲ್ಲಿ ಮಾಡುವ ಪ್ರಕಾಶಮಾನ ತಪಸ್ಸಿನಿಂದ ಮೂರು ಲೋಕಗಳೂ ವ್ಯಾಪ್ತವಾಗಿವೆ. ಸೂರ್ಯ-ಚಂದ್ರರೂ ತಮ್ಮ ತಪಸ್ಸಿನಿಂದಲೇ ಆಕಾಶದಲ್ಲಿ ಬೆಳಗುತ್ತಾರೆ.

12210016a ಪ್ರತಾಪಸ್ತಪಸೋ ಜ್ಞಾನಂ ಲೋಕೇ ಸಂಶಬ್ದಿತಂ ತಪಃ|

12210016c ರಜಸ್ತಮೋಘ್ನಂ ಯತ್ಕರ್ಮ ತಪಸಸ್ತತ್ ಸ್ವಲಕ್ಷಣಮ್||

ಲೋಕದಲ್ಲಿ ತಪಸ್ಸೆಂಬ ಶಬ್ದವು ಪ್ರಸಿದ್ಧವಾಗಿದೆ. ತಪಸ್ಸಿನ ಪ್ರತಾಪವೇ ಜ್ಞಾನವು. ರಜಸ್ತಮೋಗುಣಗಳನ್ನು ನಾಶಗೊಳಿಸುವುದೇ ತಪಸ್ಸಿನ ಉತ್ತಮ ಸ್ವಲಕ್ಷಣವಾಗಿದೆ.

12210017a ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ|

12210017c ವಾಙ್ಮನೋನಿಯಮಃ ಸಾಮ್ಯಂ ಮಾನಸಂ[7] ತಪ ಉಚ್ಯತೇ||

ಬ್ರಹ್ಮಚರ್ಯ ಮತ್ತು ಅಹಿಂಸೆಗಳು ಶಾರೀರಿಕ ತಪಸ್ಸೆಂದು ಹೇಳುತ್ತಾರೆ. ಮಾತು-ಮನಸ್ಸುಗಳ ನಿಯಮ ಮತ್ತು ಸಾಮ್ಯತ್ವವನ್ನು ಮಾನಸ ತಪಸ್ಸೆಂದು ಹೇಳುತ್ತಾರೆ.

12210018a ವಿಧಿಜ್ಞೇಭ್ಯೋ ದ್ವಿಜಾತಿಭ್ಯೋ ಗ್ರಾಹ್ಯಮನ್ನಂ ವಿಶಿಷ್ಯತೇ|

12210018c ಆಹಾರನಿಯಮೇನಾಸ್ಯ ಪಾಪ್ಮಾ ನಶ್ಯತಿ ರಾಜಸಃ||

ವೈದಿಕ ವಿಧಿಯಗಳನ್ನು ತಿಳಿದಿರುವ ದ್ವಿಜಾತಿಯರವರಿಂದಲೇ ಅನ್ನಗ್ರಹಣಮಾಡುವುದು ಉತ್ತಮವೆಂದು ಹೇಳುತ್ತಾರೆ. ಇಂತಹ ಆಹಾರನಿಯಮದಿಂದ ರಾಜಸಗುಣದಿಂದ ಉಂಟಾಗುವ ಪಾಪಗಳು ನಶಿಸುತ್ತವೆ.

12210019a ವೈಮನಸ್ಯಂ ಚ ವಿಷಯೇ ಯಾಂತ್ಯಸ್ಯ ಕರಣಾನಿ ಚ|

12210019c ತಸ್ಮಾತ್ತನ್ಮಾತ್ರಮಾದದ್ಯಾದ್ಯಾವದತ್ರ ಪ್ರಯೋಜನಮ್||

ಆಹಾರನಿಯಮದಿಂದ ಇಂದ್ರಿಯಗಳೂ ತಮ್ಮ ವಿಷಯಗಳಿಂದ ವಿರಕ್ತಗೊಳ್ಳುತ್ತವೆ. ಆದುದರಿಂದ ಜೀವರಕ್ಷಣೆಗೆ ಬೇಕಾಗುವಷ್ಟು ಆಹಾರವನ್ನು ಮಾತ್ರ ಪಡೆದುಕೊಳ್ಳಬೇಕು.

12210020a ಅಂತಕಾಲೇ ವಯೋತ್ಕರ್ಷಾಚ್ಚನೈಃ ಕುರ್ಯಾದನಾತುರಃ|

12210020c ಏವಂ ಯುಕ್ತೇನ ಮನಸಾ ಜ್ಞಾನಂ ತದುಪಪದ್ಯತೇ||

ಹೀಗೆ ಯೋಗಯುಕ್ತ ಮನಸ್ಸಿನಿಂದ ಪ್ರಾಪ್ತವಾಗುವ ಜ್ಞಾನವನ್ನು ಅಂತ್ಯಕಾಲದಲ್ಲಿ ಸಂಪೂರ್ಣಶಕ್ತಿಯನ್ನುಪಯೋಗಿಸಿ ಸ್ವಲ್ಪ-ಸ್ವಲ್ಪವಾಗಿ ಸ್ಮರಣೆಗೆ ತಂದುಕೊಳ್ಳಬೇಕು.

12210021a ರಜಸಾ ಚಾಪ್ಯಯಂ[8] ದೇಹೀ ದೇಹವಾನ್ ಶಬ್ದವಚ್ಚರೇತ್|

12210021c ಕಾರ್ಯೈರವ್ಯಾಹತಮತಿರ್ವೈರಾಗ್ಯಾತ್ ಪ್ರಕೃತೌ ಸ್ಥಿತಃ|

12210021e ಆ ದೇಹಾದಪ್ರಮಾದಾಚ್ಚ ದೇಹಾಂತಾದ್ವಿಪ್ರಮುಚ್ಯತೇ||

ಯೋಗಿಯ ಬುದ್ಧಿಯು ಕಾರ್ಯಗಳಿಂದ ತಡೆಯಲ್ಪಡುವುದಿಲ್ಲ. ಅದು ವೈರಾಗ್ಯವಶ ತನ್ನ ಸ್ವಭಾವದಲ್ಲಿಯೇ ನೆಲಸಿರುತ್ತದೆ. ರಜೋಗುಣವನ್ನು ಕಳೆದುಕೊಂಡು ದೇಹಧಾರಿಯಾಗಿದ್ದರೂ ಶಬ್ದದಂತೆ ಅಡೆತಡೆಯಿಲ್ಲದೇ ಸರ್ವತ್ರ ಸಂಚರಿಸುತ್ತದೆ. ದೇಹತ್ಯಾಗಪರ್ಯಂತ ಪ್ರಮಾದಗೊಳ್ಳದೇ ಇದ್ದರೆ ಯೋಗಿಯು ದೇಹಾವಸಾನದ ನಂತರ ಮೋಕ್ಷವನ್ನು ಹೊಂದುತ್ತಾನೆ.

12210022a ಹೇತುಯುಕ್ತಃ ಸದೋತ್ಸರ್ಗೋ ಭೂತಾನಾಂ ಪ್ರಲಯಸ್ತಥಾ|

12210022c ಪರಪ್ರತ್ಯಯಸರ್ಗೇ ತು ನಿಯತಂ ನಾತಿವರ್ತತೇ||

ಆದರೆ ಬಂಧನಕ್ಕೆ ಕಾರಣಭೂತವಾದ ಅಜ್ಞಾನದಿಂದ ಇರುವ ಪ್ರಾಣಿಗಳು ಸದಾ ಜನ್ಮ ಮತ್ತು ಮರಣಗಳನ್ನು ಪಡೆಯುತ್ತಿರುತ್ತವೆ. ಬ್ರಹ್ಮಜ್ಞಾನವು ಪ್ರಾಪ್ತವಾಗಿರುವವರನ್ನು ಪ್ರಾರಬ್ಧವು ಅನುಸರಿಸಿಹೋಗುವುದಿಲ್ಲ.

12210023a ಭವಾಂತಪ್ರಭವಪ್ರಜ್ಞಾ ಆಸತೇ ಯೇ ವಿಪರ್ಯಯಮ್|

12210023c ಧೃತ್ಯಾ ದೇಹಾನ್ಧಾರಯಂತೋ ಬುದ್ಧಿಸಂಕ್ಷಿಪ್ತಮಾನಸಾಃ|

12210023e ಸ್ಥಾನೇಭ್ಯೋ ಧ್ವಂಸಮಾನಾಶ್ಚ ಸೂಕ್ಷ್ಮತ್ವಾತ್ತಾನುಪಾಸತೇ||

ಆದರೆ ಅಜ್ಞಾನವು ದೂರವಾಗದೇ ವಿಪರೀತಸ್ಥಿತಿಯಲ್ಲಿರುವವರು ಪ್ರಾರಬ್ಧವಶರಾಗಿ ಜನ್ಮ-ಮೃತ್ಯುಗಳ ಚಕ್ರದಲ್ಲಿ ಸಿಲುಕಿರುತ್ತಾರೆ. ಯೋಗಿಗಳು ಬುದ್ಧಿಯಿಂದ ತಮ್ಮ ಚಿತ್ತ[9]ವನ್ನು ವಿಷಯಗಳಿಂದ ಹಿಂತೆಗೆದುಕೊಂಡು ಆಸನದ ದೃಢತೆಯಿಂದ ಸ್ಥಿರತಾಪೂರ್ವಕ ದೇಹಧಾರಣೆಮಾಡಿಕೊಂಡು ಇಂದ್ರಿಯ ಸಂಬಂಧಗಳನ್ನು ತ್ಯಜಿಸಿ ಸೂಕ್ಷ್ಮ ಬುದ್ಧಿಯಿಂದ ಬ್ರಹ್ಮನ ಉಪಾಸನೆಯನ್ನು ಮಾಡುತ್ತಾರೆ.

12210024a ಯಥಾಗಮಂ ಚ ತತ್ಸರ್ವಂ[10] ಬುದ್ಧ್ಯಾ ತನ್ನೈವ ಬುಧ್ಯತೇ|

12210024c ದೇಹಾಂತಂ ಕಶ್ಚಿದನ್ವಾಸ್ತೇ ಭಾವಿತಾತ್ಮಾ ನಿರಾಶ್ರಯಃ|

12210024e ಯುಕ್ತೋ ಧಾರಣಯಾ ಕಶ್ಚಿತ್ಸತ್ತಾಂ ಕೇ ಚಿದುಪಾಸತೇ||

ಆಗಮಗಳಲ್ಲಿ ಹೇಳಿರುವ ಎಲ್ಲ ಕ್ರಮಗಳನ್ನೂ ಬಳಸಿ ಬುದ್ಧಿಯ ಮೂಲಕ ಬ್ರಹ್ಮನನ್ನು ಅನುಭವಿಸುತ್ತಾರೆ. ತಮ್ಮ ಬುದ್ಧಿಯನ್ನು ಶುದ್ಧಗೊಳಿಸಿಕೊಂಡ ಯೋಗಿಗಳು ದೇಹವಿರುವ ತನಕ ನಿರಾಶ್ರಯರಾಗಿ ತಮ್ಮದೇ ಮಹಿಮೆಗಳಲ್ಲಿ ಪ್ರತಿಷ್ಠಿತ ಬ್ರಹ್ಮನಲ್ಲಿ ನೆಲೆಸಿರುತ್ತಾರೆ. ಕೆಲವರು ಯೋಗಧಾರಣೆಯ ಮೂಲಕ ಸಗುಣ ಬ್ರಹ್ಮನನ್ನು ಉಪಾಸಿಸುತ್ತಾರೆ.

12210025a ಅಭ್ಯಸ್ಯಂತಿ ಪರಂ ದೇವಂ ವಿದ್ಯುತ್ಸಂಶಬ್ದಿತಾಕ್ಷರಮ್|

12210025c ಅಂತಕಾಲೇ ಹ್ಯುಪಾಸನ್ನಾಸ್ತಪಸಾ ದಗ್ಧಕಿಲ್ಬಿಷಾಃ||

ಇನ್ನು ಕೆಲವರು ವಿದ್ಯುತ್ತಿನಂತೆ ಜ್ಯೋತಿರ್ಮಯ ಮತ್ತು ಅವಿನಾಶಿಯೆಂದು ಹೇಳಿರುವ ಪರಮ ದೇವನ ಚಿಂತನೆಯನ್ನು ಮಾಡುತ್ತಾರೆ. ಕೆಲವರು ತಪಸ್ಸಿನಿಂದ ತಮ್ಮ ಪಾಪಗಳನ್ನು ಸುಟ್ಟು ಅಂತ್ಯಕಾಲದಲ್ಲಿ ಬ್ರಹ್ಮನನ್ನು ಸೇರುತ್ತಾರೆ.

12210026a ಸರ್ವ ಏತೇ ಮಹಾತ್ಮಾನೋ ಗಚ್ಚಂತಿ ಪರಮಾಂ ಗತಿಮ್|

12210026c ಸೂಕ್ಷ್ಮಂ ವಿಶೇಷಣಂ ತೇಷಾಮವೇಕ್ಷೇಚ್ಚಾಸ್ತ್ರಚಕ್ಷುಷಾ||

ಈ ಎಲ್ಲ ಮಹಾತ್ಮರೂ ಪರಮ ಗತಿಯನ್ನೇ ಪಡೆಯುತ್ತಾರೆ. ಶಾಸ್ತ್ರದೃಷ್ಟಿಯಲ್ಲಿ ಆ ಮಹಾತ್ಮರಲ್ಲಿರುವ ಸೂಕ್ಷ್ಮ ವಿಶೇಷತೆಗಳನ್ನು ನೋಡಬೇಕು.

12210027a ದೇಹಂ ತು[11] ಪರಮಂ ವಿದ್ಯಾದ್ವಿಮುಕ್ತಮಪರಿಗ್ರಹಮ್|

12210027c ಅಂತರಿಕ್ಷಾದನ್ಯತರಂ ಧಾರಣಾಸಕ್ತಮಾನಸಮ್||

ಎಲ್ಲ ಸಂಗ್ರಹಗಳಿಂದ ವಿಮುಕ್ತನಾದವನು ಆ ಪರಮ ದೇಹವನ್ನು ತಿಳಿದುಕೊಳ್ಳುತ್ತಾನೆ. ಧಾರಣಾಸಕ್ತ ಮನಸ್ಸಿನಿಂದ ಒಳಗಿರುವುದನ್ನು ತಿಳಿದುಕೊಳ್ಳುತ್ತಾನೆ.

12210028a ಮರ್ತ್ಯಲೋಕಾದ್ವಿಮುಚ್ಯಂತೇ ವಿದ್ಯಾಸಂಯುಕ್ತಮಾನಸಾಃ[12]|

12210028c ಬ್ರಹ್ಮಭೂತಾ ವಿರಜಸಸ್ತತೋ ಯಾಂತಿ ಪರಾಂ ಗತಿಮ್||

ವಿದ್ಯಾಸಂಯುಕ್ತ ಮಾನಸರು ಮರ್ತ್ಯಲೋಕದಿಂದ ಮುಕ್ತರಾಗುತ್ತಾರೆ. ರಜೋಗುಣರಹಿತರಾಗಿ ಬ್ರಹ್ಮಸ್ವರೂಪರಾಗಿ ಶ್ರೇಷ್ಠ ಗತಿಯನ್ನು ಹೊಂದುತ್ತಾರೆ.

[13]12210029a ಕಷಾಯವರ್ಜಿತಂ ಜ್ಞಾನಂ ಯೇಷಾಮುತ್ಪದ್ಯತೇಽಚಲಮ್[14]|

12210029c ತೇ ಯಾಂತಿ ಪರಮಾಽಲ್ಲೋಕಾನ್ವಿಶುಧ್ಯಂತೋ ಯಥಾಬಲಮ್||

ರಾಗ-ದ್ವೇಷಗಳನ್ನು ತೊರೆದು ಅಚಲ ಜ್ಞಾನವನ್ನು ಪಡೆದುಕೊಂಡಿರುವವರು ಯಥಾ ಬಲ ವಿಶುದ್ಧರಾಗಿ ಪರಮ ಲೋಕಗಳನ್ನು ಹೊಂದುತ್ತಾರೆ.

12210030a ಭಗವಂತಮಜಂ ದಿವ್ಯಂ ವಿಷ್ಣುಮವ್ಯಕ್ತಸಂಜ್ಞಿತಮ್|

12210030c ಭಾವೇನ ಯಾಂತಿ ಶುದ್ಧಾ ಯೇ ಜ್ಞಾನತೃಪ್ತಾ ನಿರಾಶಿಷಃ||

12210031a ಜ್ಞಾತ್ವಾತ್ಮಸ್ಥಂ ಹರಿಂ ಚೈವ ನಿವರ್ತಂತೇ ನ ತೇಽವ್ಯಯಾಃ|

12210031c ಪ್ರಾಪ್ಯ ತತ್ಪರಮಂ ಸ್ಥಾನಂ ಮೋದಂತೇಽಕ್ಷರಮವ್ಯಯಮ್||

ಅಜ, ದಿವ್ಯ, ಅವ್ಯಕ್ತನೆಂದೆನಿಸಿಕೊಂಡಿರುವ ಭಗವಂತ ವಿಷ್ಣುವನ್ನು ಶುದ್ಧಭಾವದಿಂದ ತಿಳಿದಿರುವ ಆಶಾರಹಿತ ಜ್ಞಾನತೃಪ್ತರು ತಮ್ಮಲ್ಲಿಯೇ ಇರುವ ಹರಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಅವ್ಯಯ ಸ್ಥಾನವನ್ನು ಪಡೆದ ಅವರು ಮರಳಿ ಬರುವುದಿಲ್ಲ. ಅಕ್ಷರವೂ ಅವ್ಯಯವೂ ಆದ ಆ ಪರಮ ಸ್ಥಾನವನ್ನು ಹೊಂದಿ ಅಲ್ಲಿಯೇ ಆನಂದಿಸುತ್ತಾರೆ.

12210032a ಏತಾವದೇತದ್ವಿಜ್ಞಾನಮೇತದಸ್ತಿ ಚ ನಾಸ್ತಿ ಚ|

12210032c ತೃಷ್ಣಾಬದ್ಧಂ ಜಗತ್ಸರ್ವಂ ಚಕ್ರವತ್ಪರಿವರ್ತತೇ||

ಇದೇ ಆಧ್ಯಾತ್ಮದ ವಿಜ್ಞಾನವು. ಇದು ಇದೆ ಮತ್ತು ಇಲ್ಲ ಕೂಡ. ಈ ಪ್ರಪಂಚವು ಆಶೆಯೆಂಬ ಪಾಶದಿಂದ ನಿಬದ್ಧವಾಗಿ ಚಕ್ರದಂತೆ ತಿರುಗುತ್ತಿರುತ್ತದೆ.

12210033a ಬಿಸತಂತುರ್ಯಥೈವಾಯಮಂತಃಸ್ಥಃ ಸರ್ವತೋ ಬಿಸೇ|

12210033c ತೃಷ್ಣಾತಂತುರನಾದ್ಯಂತಸ್ತಥಾ ದೇಹಗತಃ ಸದಾ||

ಕಮಲದ ನಾಳದಲ್ಲಿರುವ ತಂತುವು ಹೇಗೆ ನಾಳದಾದ್ಯಂತ ಹರಡಿಕೊಂಡಿರುವುದೋ ಹಾಗೆ ಆದಿ-ಅಂತ್ಯಗಳಿಲ್ಲ ತೃಷ್ಣಾತಂತುವು ದೇಹಧಾರಿಯ ಮನಸ್ಸನ್ನು ಸರ್ವಕಾಲದಲ್ಲಿಯೂ ವ್ಯಾಪಿಸಿರುತ್ತದೆ.

12210034a ಸೂಚ್ಯಾ ಸೂತ್ರಂ ಯಥಾ ವಸ್ತ್ರೇ ಸಂಸಾರಯತಿ ವಾಯಕಃ|

12210034c ತದ್ವತ್ಸಂಸಾರಸೂತ್ರಂ ಹಿ ತೃಷ್ಣಾಸೂಚ್ಯಾ ನಿಬಧ್ಯತೇ||

ನೇಯುವವನು ಹೇಗೆ ಸೂಜಿಯ ಮೂಲಕ ದಾರವನ್ನು ವಸ್ತ್ರದಲ್ಲಿ ತೂರಿಸುವವನೋ ಹಾಗೆ ತೃಷ್ಣಾ ಎಂಬ ಸೂಜಿಯಿಂದ ಸಂಸಾರರೂಪದ ದಾರವು ನೇಯಲ್ಪಡುತ್ತದೆ.

12210035a ವಿಕಾರಂ ಪ್ರಕೃತಿಂ ಚೈವ ಪುರುಷಂ ಚ ಸನಾತನಮ್|

12210035c ಯೋ ಯಥಾವದ್ವಿಜಾನಾತಿ ಸ ವಿತೃಷ್ಣೋ ವಿಮುಚ್ಯತೇ||

ಅವ್ಯಕ್ತ ಪ್ರಕೃತಿಯನ್ನೂ, ವ್ಯಕ್ತವಾದ ಪ್ರಕೃತಿಯ ವಿಕಾರಗಳನ್ನೂ, ಪುರುಷ (ಜೀವಾತ್ಮ) ನನ್ನೂ ಮತ್ತು ಸನಾತನ ಪರಬ್ರಹ್ಮ ವಸ್ತುವನ್ನೂ ತಿಳಿದಿರುವವನು ತೃಷ್ಣಾರಹಿತನಾಗಿ ಸಂಸಾರಬಂಧನದಿಂದ ವಿಮುಕ್ತನಾಗುತ್ತಾನೆ.

12210036a ಪ್ರಕಾಶಂ ಭಗವಾನೇತದೃಷಿರ್ನಾರಾಯಣೋಽಮೃತಮ್|

12210036c ಭೂತಾನಾಮನುಕಂಪಾರ್ಥಂ ಜಗಾದ ಜಗತೋ ಹಿತಮ್||

ಭೂತಗಳ ಮೇಲಿನ ಅನುಕಂಪದಿಂದಾಗಿ ಮತ್ತು ಜಗತ್ತಿನ ಹಿತಕ್ಕಾಗಿ ಭಗವಾನ್ ಋಷಿ ನಾರಾಯಣನು ಅಮೃತಮಯವಾದ ಈ ಆಧ್ಯಾತ್ಮಜ್ಞಾನವನ್ನು ಪ್ರಕಾಶಿಸಿದನು.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಹತ್ತನೇ ಅಧ್ಯಾಯವು.

[1] ಭೀಷ್ಮ ಉವಾಚ| (ಗೀತಾ ಪ್ರೆಸ್/ಭಾರತ ದರ್ಶನ)

[2] ಸಂಪ್ರೋಕ್ತಂ (ಗೀತಾ ಪ್ರೆಸ್/ಭಾರತ ದರ್ಶನ).

[3] ಈ ಅಧ್ಯಾಯದ ಮೊದಲ ಮೂರು ಶ್ಲೋಕಗಳಲ್ಲಿ ಬಂದಿರುವ ಅವ್ಯಕ್ತ ಶಬ್ದವು ಪರಮಾತ್ಮ ವಾಚಕವಾಗಿದೆ. ಆದರೆ ಇಲ್ಲಿ ಅವ್ಯಕ್ತಕ್ಕೆ ಮೂಲಪ್ರಕೃತಿ ಎಂಬ ಅರ್ಥವಿದೆ (ಭಾರತ ದರ್ಶನ).

[4] ಪ್ರಕೃತಿಯು ಪ್ರವಾಹರೂಪದಲ್ಲಿ ಅನಾದಿ ಮತ್ತು ಅನಂತವಾಗಿದೆ ಮತ್ತು ಪುರುಷ (ಜೀವಾತ್ಮ)ನು ಸ್ವರೂಪದಲ್ಲಿ ಅನಾದಿ ಮತ್ತು ಅನಂತನಾಗಿದ್ದಾನೆ. (ಗೀತಾ ಪ್ರೆಸ್)

[5] ತ್ರಿಗುಣಧರ್ಮಯಾ| (ಭಾರತ ದರ್ಶನ)

[6] ಶ್ರಿಯಂ ದಿವ್ಯಾಮಭಿಪ್ರೇಪ್ಸುರ್ವರ್ಷ್ಮವಾನ್ಮನಸಾ ಶುಚಿಃ| (ಭಾರತ ದರ್ಶನ/ಗೀತಾ ಪ್ರೆಸ್).

[7] ಸಮ್ಯಙ್ಮಾನಸಂ (ಭಾರತ ದರ್ಶನ/ಗೀತಾ ಪ್ರೆಸ್).

[8] ರಜೋವರ್ಜ್ಯೋಽಪ್ಯಯಂ (ಭಾರತ ದರ್ಶನ/ಗೀತಾ ಪ್ರೆಸ್).

[9] ಇಂದ್ರಿಯ ಸಹಿತ ಮನಸ್ಸು.

[10] ಗತ್ವಾ ವೈ (ಭಾರತ ದರ್ಶನ/ಗೀತಾ ಪ್ರೆಸ್).

[11] ದೇಹಾಂತಂ (ಭಾರತ ದರ್ಶನ/ಗೀತಾ ಪ್ರೆಸ್).

[12] ವಿದ್ಯಾಸಂಸಕ್ತಚೇತಸಃ| ಭಾರತ ದರ್ಶನ/ಗೀತಾ ಪ್ರೆಸ್).

[13] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಏವಮೀಕಾಯನಂ ಧರ್ಮಮಾಹುರ್ವೇದವಿದೋ ಜನಾಃ| ಯಥಾಜ್ಞಾನಮುಪಾಸಂತಃ ಸರ್ವೇ ಯಾಂತಿ ಪರಾಂ ಗತಿಮ್|| (ಭಾರತ ದರ್ಶನ/ಗೀತಾ ಪ್ರೆಸ್).

[14] ಯೇಷಾಮುತ್ಪದ್ಯತೇ ಚಲಮ್| (ಭಾರತ ದರ್ಶನ/ಗೀತಾ ಪ್ರೆಸ್).

Comments are closed.