Shanti Parva: Chapter 209

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೯

ಸ್ವಪ್ನ-ಸುಷುಪ್ತಿಗಳಲ್ಲಿ ಮನಸ್ಸಿನ ಸ್ಥಿತಿ; ಗುಣಾತೀತ ಬ್ರಹ್ಮಪ್ರಾಪ್ತಿಗೆ ಉಪಾಯ (1-20).

12209001 ಗುರುರುವಾಚ[1]|

12209001a ನಿಷ್ಕಲ್ಮಷಂ ಬ್ರಹ್ಮಚರ್ಯಮಿಚ್ಚತಾ ಚರಿತುಂ ಸದಾ|

12209001c ನಿದ್ರಾ ಸರ್ವಾತ್ಮನಾ ತ್ಯಾಜ್ಯಾ ಸ್ವಪ್ನದೋಷಾನವೇಕ್ಷತಾ||

ಗುರುವು ಹೇಳಿದನು: “ಸದಾ ನಿಷ್ಕಲ್ಮಷ ಬ್ರಹ್ಮಚರ್ಯವನ್ನು ಆಚರಿಸಲು ಇಚ್ಛಿಸುವವನು ಸ್ವಪ್ನದೋಷಗಳನ್ನು ಅವೇಕ್ಷಿಸಿ ಸರ್ವಪ್ರಕಾರಗಳಿಂದಲೂ ನಿದ್ರೆಯನ್ನು ತ್ಯಜಿಸಬೇಕು.

12209002a ಸ್ವಪ್ನೇ ಹಿ ರಜಸಾ ದೇಹೀ ತಮಸಾ ಚಾಭಿಭೂಯತೇ|

12209002c ದೇಹಾಂತರಮಿವಾಪನ್ನಶ್ಚರತ್ಯಪಗತಸ್ಮೃತಿಃ[2]||

ಸ್ವಪ್ನಸಮಯದಲ್ಲಿ ಪ್ರಾಯಶಃ ರಜೋಗುಣ ತಮೋಗುಣಗಳು ಜೀವವನ್ನು ಆವೇಶಿಸುತ್ತವೆ. ಕಾಮನಾಯುಕ್ತನಾಗಿ ಅವನು ಇನ್ನೊಂದು ಶರೀರವನ್ನು ಪಡೆದುಕೊಂಡಿರುವನೋ ಎನ್ನುವಂತೆ ಸಂಚರಿಸುತ್ತಾನೆ.

12209003a ಜ್ಞಾನಾಭ್ಯಾಸಾಜ್ಜಾಗರತೋ ಜಿಜ್ಞಾಸಾರ್ಥಮನಂತರಮ್|

12209003c ವಿಜ್ಞಾನಾಭಿನಿವೇಶಾತ್ತು ಜಾಗರತ್ಯನಿಶಂ ಸದಾ||

ಜ್ಞಾನಾಭ್ಯಾಸಕ್ಕಾಗಿ ಮತ್ತು ಅನಂತರ ಜಿಜ್ಞಾಸೆಗಾಗಿ ಜಾಗೃತನಾಗಿರಬೇಕು. ವಿಜ್ಞಾನವು ಅಭಿವ್ಯಕ್ತಗೊಂಡಾಗ ಸದಾ ರಾತ್ರಿಯಲ್ಲಿ ಜಾಗೃತನಾಗಿಯೇ ಇರಬೇಕಾಗುತ್ತದೆ.

12209004a ಅತ್ರಾಹ ಕೋ ನ್ವಯಂ ಭಾವಃ ಸ್ವಪ್ನೇ ವಿಷಯವಾನಿವ|

12209004c ಪ್ರಲೀನೈರಿಂದ್ರಿಯೈರ್ದೇಹೀ ವರ್ತತೇ ದೇಹವಾನಿವ||

ಸ್ವಪ್ನದಲ್ಲಿ ಕಾಣುವ ವಿಷಯಗಳು ಯಾವುವು ಎಂಬ ಪ್ರಶ್ನೆಯು ಇಲ್ಲಿ ಹುಟ್ಟಿಕೊಳ್ಳುತ್ತದೆ. ಇಂದ್ರಿಯಗಳು ಮನಸ್ಸಿನಲ್ಲಿ ಲೀನವಾಗಿರುವಾಗ ಆ ದೇಹದಲ್ಲಿದ್ದ ಜೀವವು ಇನ್ನೊಂದು ದೇಹವನ್ನು ಪಡೆದುಕೊಂಡಂತೆ ವರ್ತಿಸುತ್ತದೆ.

12209005a ಅತ್ರೋಚ್ಯತೇ ಯಥಾ ಹ್ಯೇತದ್ವೇದ ಯೋಗೇಶ್ವರೋ ಹರಿಃ|

12209005c ತಥೈತದುಪಪನ್ನಾರ್ಥಂ ವರ್ಣಯಂತಿ ಮಹರ್ಷಯಃ||

ಇದು ಹೇಗಾಗುತ್ತದೆ ಎನ್ನುವುದನ್ನು ಯೋಗೇಶ್ವರ ಹರಿಯೊಬ್ಬನೇ ತಿಳಿದುಕೊಂಡಿದ್ದಾನೆ ಎಂದು ಹೇಳುತ್ತಾರೆ. ಅವನು ಹೇಳಿದ್ದನ್ನೇ ಮಹರ್ಷಿಗಳು ಅರ್ಥಪೂರ್ಣವಾಗಿ ವರ್ಣಿಸಿದ್ದಾರೆ.

12209006a ಇಂದ್ರಿಯಾಣಾಂ ಶ್ರಮಾತ್ಸ್ವಪ್ನಮಾಹುಃ ಸರ್ವಗತಂ ಬುಧಾಃ|

12209006c ಮನಸಸ್ತು ಪ್ರಲೀನತ್ವಾತ್ತತ್ತದಾಹುರ್ನಿದರ್ಶನಮ್||

ಇಂದ್ರಿಯಗಳು ಆಯಾಸಗೊಂಡಾಗ ಎಲ್ಲರೂ ಸ್ವಪ್ನವನ್ನು ಕಾಣುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ. ಆದರೆ ಮನಸ್ಸು ಆಯಾಸಗೊಂಡಿರುವುದಿಲ್ಲ. ತನ್ನಲ್ಲಡಗಿರುವ ಇಂದ್ರಿಯಗಳ ವಿಷಯವನ್ನು ಮನಸ್ಸೊಂದೇ ಅನುಭವಿಸುತ್ತಿರುತ್ತದೆ. ಇದೇ ಸ್ವಪ್ನಕ್ಕೆ ಕಾರಣ ಎಂದು ನಿದರ್ಶಿಸುತ್ತಾರೆ.

12209007a ಕಾರ್ಯವ್ಯಾಸಕ್ತಮನಸಃ ಸಂಕಲ್ಪೋ ಜಾಗ್ರತೋ ಹ್ಯಪಿ|

12209007c ಯದ್ವನ್ಮನೋರಥೈಶ್ವರ್ಯಂ ಸ್ವಪ್ನೇ ತದ್ವನ್ಮನೋಗತಮ್||

ಮನುಷ್ಯನು ಜಾಗ್ರತನಾಗಿ ಕಾರ್ಯಾಂತರದಲ್ಲಿ ಉತ್ಕಟವಾಗಿ ಆಸಕ್ತನಾಗಿದ್ದಾಗ ಅವನ ಮನೋರಥಗಳು ಫಲಿಸಿದಂತೆ ಮನಸ್ಸಿಗೆ ಹೇಗೆ ಕಂಡುಬರುವುದೋ ಹಾಗೆ ಸ್ವಪ್ನಾವಸ್ಥೆಯಲ್ಲಿ ಇಂದ್ರಿಯಗಳ ವಿಷಯಾನುಭವವು ಮನಸ್ಸಿಗಾಗುತ್ತದೆ.

12209008a ಸಂಸಾರಾಣಾಮಸಂಖ್ಯಾನಾಂ[3] ಕಾಮಾತ್ಮಾ ತದವಾಪ್ನುಯಾತ್|

12209008c ಮನಸ್ಯಂತರ್ಹಿತಂ ಸರ್ವಂ ವೇದ ಸೋತ್ತಮಪೂರುಷಃ||

ಕಾಮಾತ್ಮ ಮನಸ್ಸು ಅಸಂಖ್ಯ ಸಂಸಾರಗಳ ಅನುಭವವನ್ನು ಹೊಂದಿರುತ್ತದೆ. ಮನಸ್ಸಿನಲ್ಲಿ ಅಡಗಿರುವ ಆ ಸರ್ವವನ್ನೂ ಒಳಗಿರುವ ಪುರುಷಶ್ರೇಷ್ಠನು ತಿಳಿದಿರುತ್ತಾನೆ.

12209009a ಗುಣಾನಾಮಪಿ ಯದ್ಯತ್ತತ್ಕರ್ಮ ಜಾನಾತ್ಯುಪಸ್ಥಿತಮ್|

12209009c ತತ್ತಚ್ಚಂಸಂತಿ ಭೂತಾನಿ ಮನೋ ಯದ್ಭಾವಿತಂ ಯಥಾ||

ಸ್ವಪ್ನಾವಸ್ಥೆಯಲ್ಲಿ ಆ ಕರ್ಮಗಳು ಮತ್ತು ಅವುಗಳ ಗುಣಗಳು ಅರಿವೆಗೆ ಬರುತ್ತವೆ ಮತ್ತು ಕಾಣಿಸಿಕೊಳ್ಳುತ್ತವೆ. ಮನಸ್ಸು ಯಾವರೀತಿಯಲ್ಲಿ ಹೇಗೆ ಅವುಗಳನ್ನು ಅನುಭವಿಸಿತ್ತೋ ಅದನ್ನು ಮನಸ್ಸು ಮೆಲಕುಹಾಕುತ್ತದೆ.

12209010a ತತಸ್ತಮುಪವರ್ತಂತೇ ಗುಣಾ ರಾಜಸತಾಮಸಾಃ|

12209010c ಸಾತ್ತ್ವಿಕೋ ವಾ ಯಥಾಯೋಗಮಾನಂತರ್ಯಫಲೋದಯಃ||

ಆಗ ಅನಂತ ಕರ್ಮಗಳ ಫಲರೂಪದ ರಾಜಸ-ತಾಮಸ-ಸಾತ್ತ್ವಿಕ ಗುಣಗಳು ಕಾಣಿಸಿಕೊಳ್ಳುತ್ತವೆ.

12209011a ತತಃ ಪಶ್ಯತ್ಯಸಂಬದ್ಧಾನ್ವಾತಪಿತ್ತಕಫೋತ್ತರಾನ್|

12209011c ರಜಸ್ತಮೋಭವೈರ್ಭಾವೈಸ್ತದಪ್ಯಾಹುರ್ದುರನ್ವಯಮ್||

ವಾತ-ಪಿತ್ತ-ಕಫಗಳನ್ನು ಉತ್ತೇಜಿಸುವ ದೃಶ್ಯಗಳು ಕಾಣುತ್ತವೆ. ರಜೋಗುಣ-ತಮೋಗುಣಗಳ ಭಾವಗಳನ್ನು ತಪ್ಪಿಸಿಕೊಳ್ಳುವುದು ಕಷ್ಟ ಎಂದು ಹೇಳುತ್ತಾರೆ.

12209012a ಪ್ರಸನ್ನೈರಿಂದ್ರಿಯೈರ್ಯದ್ಯತ್ಸಂಕಲ್ಪಯತಿ ಮಾನಸಮ್|

12209012c ತತ್ತತ್ಸ್ವಪ್ನೇಽಪ್ಯುಪರತೇ ಮನೋದೃಷ್ಟಿರ್ನಿರೀಕ್ಷತೇ||

ಇಂದ್ರಿಯಗಳು ಪ್ರಸನ್ನಗೊಂಡಿದ್ದರೂ ಮನಸ್ಸು ಸಂಕಲ್ಪಿಸುತ್ತಿರುತ್ತದೆ. ಸ್ವಪ್ನಗಳಲ್ಲಿ ಮನಸ್ಸು ತನ್ನದೇ ದೃಷ್ಟಿಯಿಂದ ಇವುಗಳನ್ನು ಅನುಭವಿಸುತ್ತದೆ.

12209013a ವ್ಯಾಪಕಂ ಸರ್ವಭೂತೇಷು ವರ್ತತೇಽಪ್ರತಿಘಂ ಮನಃ|

[4]12209013c ಮನಸ್ಯಂತರ್ಹಿತಂ ದ್ವಾರಂ ದೇಹಮಾಸ್ಥಾಯ ಮಾನಸಮ್[5]||

ಸರ್ವಭೂತಗಳಲ್ಲಿಯೂ ಮನಸ್ಸು ವ್ಯಾಪಕವಾಗಿರುತ್ತದೆ ಮತ್ತು ತಡೆಯಿಲ್ಲದೇ ನಡೆಯುತ್ತಿರುತ್ತದೆ. ಸ್ವಪ್ನದರ್ಶನದ ದ್ವಾರವಾಗಿರುವ ಸ್ಥೂಲ ದೇಹವು ಸುಷುಪ್ತಿ ಅವಸ್ಥೆಯಲ್ಲಿ ಮನಸ್ಸಿನಲ್ಲಿ ಲೀನವಾಗುತ್ತದೆ.

12209014a ಯತ್ತತ್ಸದಸದವ್ಯಕ್ತಂ ಸ್ವಪಿತ್ಯಸ್ಮಿನ್ನಿದರ್ಶನಮ್|

12209014c ಸರ್ವಭೂತಾತ್ಮಭೂತಸ್ಥಂ ತದಧ್ಯಾತ್ಮಗುಣಂ ವಿದುಃ||

ಅದೇ ದೇಹವನ್ನಾಶ್ರಯಿಸಿ ಮನಸ್ಸು ಅವ್ಯಕ್ತ ಸದಸತ್ಸ್ವರೂಪ ಮತ್ತು ಸಾಕ್ಷೀಭೂತ ಆತ್ಮನನ್ನು ಪ್ರಾಪ್ತಗೊಳ್ಳುತ್ತದೆ. ಆ ಆತ್ಮವು ಸರ್ವಭೂತಗಳ ಆತ್ಮಸ್ವರೂಪನು. ಜ್ಞಾನಿಯು ಅದನ್ನು ಅಧ್ಯಾತ್ಮಗುಣಯುಕ್ತನೆಂದು ತಿಳಿದಿರುತ್ತಾನೆ.

12209015a ಲಿಪ್ಸೇತ ಮನಸಾ ಯಶ್ಚ ಸಂಕಲ್ಪಾದೈಶ್ವರಂ ಗುಣಮ್|

12209015c ಆತ್ಮಪ್ರಭಾವಾತ್ತಂ ವಿದ್ಯಾತ್ಸರ್ವಾ ಹ್ಯಾತ್ಮನಿ ದೇವತಾಃ||

ಮನಸ್ಸಿನ ಮೂಲಕ ಸಂಕಲ್ಪಮಾತ್ರದಿಂದಲೇ ಈಶ್ವರೀಯ ಗುಣಗಳನ್ನು ಪಡೆಯಲು ಇಚ್ಛಿಸುವ ಯೋಗಿಯು ಆ ಆತ್ಮಪ್ರಸಾದವನ್ನು ಪಡೆದುಕೊಳ್ಳುತ್ತಾನೆ; ಏಕೆಂದರೆ ಸಂಪೂರ್ಣ ದೇವತೆಗಳೂ ಆತ್ಮನಲ್ಲಿಯೇ ಸ್ಥಿತವಾಗಿದ್ದಾರೆ.

12209016a ಏವಂ ಹಿ ತಪಸಾ ಯುಕ್ತಮರ್ಕವತ್ತಮಸಃ ಪರಮ್|

12209016c ತ್ರೈಲೋಕ್ಯಪ್ರಕೃತಿರ್ದೇಹೀ ತಪಸಾ ತಂ ಮಹೇಶ್ವರಮ್||

ಹೀಗೆ ತಪಸಾಯುಕ್ತ ಮನಸ್ಸು ಅಜ್ಞಾನಾಂಧಕಾರದ ಮೇಲೆದ್ದು ಸೂರ್ಯನಂತೆ ಜ್ಞಾನಮಯ ಪ್ರಕಾಶದಿಂದ ಪ್ರಕಾಶಿತಗೊಳ್ಳುತ್ತದೆ. ಜೀವಾತ್ಮನು ಮೂರೂ ಲೋಕಗಳ ಕಾರಣಭೂತ ಬ್ರಹ್ಮನೇ ಆಗಿದ್ದಾನೆ. ಅಜ್ಞಾನವು ನಿವೃತ್ತಿಯಾದ ನಂತರ ಅವನು ಮಹೇಶ್ವರ ರೂಪದಲ್ಲಿ ಪ್ರತಿಷ್ಠಿತನಾಗುತ್ತಾನೆ.

12209017a ತಪೋ ಹ್ಯಧಿಷ್ಠಿತಂ ದೇವೈಸ್ತಪೋಘ್ನಮಸುರೈಸ್ತಮಃ|

12209017c ಏತದ್ದೇವಾಸುರೈರ್ಗುಪ್ತಂ ತದಾಹುರ್ಜ್ಞಾನಲಕ್ಷಣಮ್||

ದೇವತೆಗಳು ತಪಸ್ಸನ್ನೇ ಆಶ್ರಯಿಸಿರುವರು ಮತ್ತು ಅಸುರರು ತಪಸ್ಸಿಗೆ ವಿಘ್ನವನ್ನುಂಟುಮಾಡುವ ದಂಭ, ದರ್ಪಾದಿ ತಮೋಗುಣವನ್ನು ಅನುಸರಿಸುತ್ತಾರೆ. ಆದರೆ ಬ್ರಹ್ಮತತ್ತ್ವವು ದೇವತೆಗಳು ಮತ್ತು ಅಸುರರು ಇಬ್ಬರಿಗೂ ತೋರದಂತಿದೆ. ತತ್ತ್ವಜ್ಞರು ಇದನ್ನು ಜ್ಞಾನಸ್ವರೂಪ ಎಂದು ಹೇಳುತ್ತಾರೆ.

12209018a ಸತ್ತ್ವಂ ರಜಸ್ತಮಶ್ಚೇತಿ ದೇವಾಸುರಗುಣಾನ್ವಿದುಃ|

12209018c ಸತ್ತ್ವಂ ದೇವಗುಣಂ ವಿದ್ಯಾದಿತರಾವಾಸುರೌ ಗುಣೌ||

ಸತ್ತ್ವ, ರಜ, ತಮೋಗುಣಗಳನ್ನು ದೇವಾಸುರರ ಗುಣಗಳೆಂದು ತಿಳಿದಿದ್ದಾರೆ. ಸತ್ತ್ವವು ದೇವಗುಣ ಮತ್ತು ಉಳಿದೆರಡು ಅಸುರೀ ಗುಣಗಳೆಂದು ತಿಳಿಯಬೇಕು.

12209019a ಬ್ರಹ್ಮ ತತ್ಪರಮಂ ವೇದ್ಯಮಮೃತಂ[6] ಜ್ಯೋತಿರಕ್ಷರಮ್|

12209019c ಯೇ ವಿದುರ್ಭಾವಿತಾತ್ಮಾನಸ್ತೇ ಯಾಂತಿ ಪರಮಾಂ ಗತಿಮ್||

ಬ್ರಹ್ಮವು ಈ ಮೂರು ಗುಣಗಳಿಗೂ ಅತೀತವಾದುದು. ಅಕ್ಷರ, ಅಮೃತ, ಸ್ವಯಂಪ್ರಕಾಶಿತ ಮತ್ತು ವೇದ್ಯವು. ಶುದ್ಧ ಅಂತಃಕರಣದ ಮಹಾತ್ಮರು ಇದನ್ನು ತಿಳಿದು ಪರಮ ಗತಿಯನ್ನು ಹೊಂದುತ್ತಾರೆ.

12209020a ಹೇತುಮಚ್ಚಕ್ಯಮಾಖ್ಯಾತುಮೇತಾವಜ್ಜ್ಞಾನಚಕ್ಷುಷಾ|

12209020c ಪ್ರತ್ಯಾಹಾರೇಣ ವಾ ಶಕ್ಯಮವ್ಯಕ್ತಂ ಬ್ರಹ್ಮ ವೇದಿತುಮ್||

ಜ್ಞಾನದ ಕಣ್ಣುಳ್ಳವರೇ ಬ್ರಹ್ಮದ ವಿಷಯದಲ್ಲಿ ಯುಕ್ತಿಸಹಿತ  ಮಾತನಾಡಲು ಶಕ್ಯರು. ಮನಸ್ಸು ಮತ್ತು ಇಂದ್ರಿಯಗಳನ್ನು ವಿಷಯಗಳಿಂದ ಹಿಂತೆಗೆದುಕೊಂಡು ಅವ್ಯಕ್ತ ಬ್ರಹ್ಮವನ್ನು ತಿಳಿಯಲು ಶಕ್ಯವಿದೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ನವಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಒಂಭತ್ತನೇ ಅಧ್ಯಾಯವು.

[1] ಭೀಷ್ಮ ಉವಾಚ| (ಭಾರತ ದರ್ಶನ/ಗೀತಾ ಪ್ರೆಸ್).

[2] ಸ್ಪೃಹಃ (ಭಾರತ ದರ್ಶನ/ಗೀತಾ ಪ್ರೆಸ್).

[3] ಸಂಸ್ಕಾರಾಣಾಮಸಂಖ್ಯಾನಂ (ಭಾರತ ದರ್ಶನ).

[4] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಆತ್ಮಪ್ರಭಾವಾತ್ತದ್ವಿದ್ಯಾತ್ಸರ್ವಾ ಹ್ಯಾತ್ಮನಿ ದೇವತಾಃ| (ಭಾರತ ದರ್ಶನ/ಗೀತಾ ಪ್ರೆಸ್).

[5] ಮಾನುಷಮ್| (ಭಾರತ ದರ್ಶನ/ಗೀತಾ ಪ್ರೆಸ್).

[6] ಜ್ಞಾನಮಮೃತಂ (ಗೀತಾ ಪ್ರೆಸ್/ಭಾರತ ದರ್ಶನ).

Comments are closed.