Shanti Parva: Chapter 208

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೮

ಸಂಸಾರದಲ್ಲಿ ಆಸಕ್ತಿಯನ್ನು ತೊರೆದು ಬ್ರಹ್ಮಪದದ ಪ್ರಾಪ್ತಿಗೆ ಪ್ರಯತ್ನಿಸಲು ಉಪದೇಶ (1-26).

12208001 ಗುರುರುವಾಚ|[1]

12208001a ದುರಂತೇಷ್ವಿಂದ್ರಿಯಾರ್ಥೇಷು ಸಕ್ತಾಃ ಸೀದಂತಿ ಜಂತವಃ|

12208001c ಯೇ ತ್ವಸಕ್ತಾ ಮಹಾತ್ಮಾನಸ್ತೇ ಯಾಂತಿ ಪರಮಾಂ ಗತಿಮ್||

ಗುರುವು ಹೇಳಿದನು: “ದುರಂತಕ್ಕೀಡುಮಾಡುವ ಇಂದ್ರಿಯಾರ್ಥಗಳಲ್ಲಿ ಆಸಕ್ತಗೊಂಡು ಜಂತುಗಳು ನಾಶಹೊಂದುತ್ತವೆ. ಆದರೆ ಇವುಗಳಲ್ಲಿ ಆಸಕ್ತಿಯನ್ನಿಡದ ಮಹಾತ್ಮರು ಪರಮ ಗತಿಯನ್ನು ಹೊಂದುತ್ತಾರೆ.

12208002a ಜನ್ಮಮೃತ್ಯುಜರಾದುಃಖೈರ್ವ್ಯಾಧಿಭಿರ್ಮನಸಃ ಕ್ಲಮೈಃ|

12208002c ದೃಷ್ಟ್ವೇಮಂ ಸಂತತಂ ಲೋಕಂ ಘಟೇನ್ಮೋಕ್ಷಾಯ ಬುದ್ಧಿಮಾನ್||

ಈ ಲೋಕವು ಸತತವೂ ಜನ್ಮ, ಮೃತ್ಯು, ಮುಪ್ಪು, ದುಃಖ, ವ್ಯಾಧಿ ಮತ್ತು ಮಾನಸಿಕ ಕ್ಲೇಶಗಳಿಂದ ತುಂಬಿರುವುದನ್ನು ನೋಡಿ ಬುದ್ಧಿವಂತನು ತನ್ನ ಮೋಕ್ಷಕ್ಕೆ ಪ್ರಯತ್ನಿಸಬೇಕು.

12208003a ವಾಙ್ಮನೋಭ್ಯಾಂ ಶರೀರೇಣ ಶುಚಿಃ ಸ್ಯಾದನಹಂಕೃತಃ|

12208003c ಪ್ರಶಾಂತೋ ಜ್ಞಾನವಾನ್ಭಿಕ್ಷುರ್ನಿರಪೇಕ್ಷಶ್ಚರೇತ್ಸುಖಮ್||

ಅವನು ತನ್ನ ಮಾತು, ಮನಸ್ಸು ಮತ್ತು ಶರೀರಗಳಲ್ಲಿ ಶುಚಿಯಾಗಿ, ಅನಹಂಕಾರಿಯಾಗಿರಬೇಕು. ಅವನು ಪ್ರಶಾಂತನೂ, ಜ್ಞಾನವಾನನೂ, ನಿರಪೇಕ್ಷನೂ ಆದ ಭಿಕ್ಷುವಾಗಿರಬೇಕು. ಅವನು ಸುಖವಾಗಿ ಸಂಚರಿಸುತ್ತಿರಬೇಕು.

12208004a ಅಥ ವಾ ಮನಸಃ ಸಂಗಂ ಪಶ್ಯೇದ್ಭೂತಾನುಕಂಪಯಾ|

12208004c ಅತ್ರಾಪ್ಯುಪೇಕ್ಷಾಂ ಕುರ್ವೀತ ಜ್ಞಾತ್ವಾ ಕರ್ಮಫಲಂ ಜಗತ್||

ಒಂದು ವೇಳೆ ಅನುಕಂಪದಿಂದಾಗಿ ಪ್ರಾಣಿಗಳ ಮೇಲಿನ ಸ್ನೇಹವು ಅವನ ಮನಸ್ಸಿನಲ್ಲಿ ಉಂಟಾದರೆ ಜಗತ್ತಿನಲ್ಲಿ ಎಲ್ಲರೂ ತಮ್ಮ ತಮ್ಮ ಕರ್ಮಫಲವನ್ನು ಅನುಭವಿಸುತ್ತಾರೆ ಎಂದು ತಿಳಿದು ಅದನ್ನೂ ಉಪೇಕ್ಷಿಸಬೇಕು.

12208005a ಯತ್ಕೃತಂ ಪ್ರಾಕ್ಶುಭಂ ಕರ್ಮ ಪಾಪಂ ವಾ ತದುಪಾಶ್ನುತೇ|

12208005c ತಸ್ಮಾಚ್ಚುಭಾನಿ ಕರ್ಮಾಣಿ ಕುರ್ಯಾದ್ವಾಗ್ಬುದ್ಧಿಕರ್ಮಭಿಃ||

ಅದು ಪಾಪ ಅಥವಾ ಶುಭ ಕರ್ಮವೇ ಆಗಿರಲಿ, ಮೊದಲು ಮಾಡಿದ ಕರ್ಮಗಳ ಫಲಗಳನ್ನು ಅನುಭವಿಸಲೇ ಬೇಕು. ಆದುದರಿಂದ ಮಾತು, ಬುದ್ಧಿ ಮತ್ತು ಕರ್ಮಗಳಿಂದ ಶುಭ ಕರ್ಮಗಳನ್ನೇ ಮಾಡಬೇಕು.

12208006a ಅಹಿಂಸಾ ಸತ್ಯವಚನಂ ಸರ್ವಭೂತೇಷು ಚಾರ್ಜವಮ್|

12208006c ಕ್ಷಮಾ ಚೈವಾಪ್ರಮಾದಶ್ಚ ಯಸ್ಯೈತೇ ಸ ಸುಖೀ ಭವೇತ್||

ಅಹಿಂಸೆ, ಸತ್ಯವಚನ, ಸರ್ವಭೂತಗಳಲ್ಲಿ ಸರಳತೆ, ಕ್ಷಮೆ, ಮತ್ತು ಅಪ್ರಮಾದ ಇವುಗಳನ್ನು ಅಳವಡಿಸಿಕೊಂಡಿರುವವನು ಸುಖಿಯಾಗಿರುತ್ತಾನೆ.

12208007a ಯಶ್ಚೈನಂ ಪರಮಂ ಧರ್ಮಂ ಸರ್ವಭೂತಸುಖಾವಹಮ್|

12208007c ದುಃಖಾನ್ನಿಃಸರಣಂ ವೇದ ಸ ತತ್ತ್ವಜ್ಞಃ ಸುಖೀ ಭವೇತ್||

ಸರ್ವಭೂತಗಳಿಗೂ ಸುಖವನ್ನೀಯುವ ಇದೇ ಪರಮ ಧರ್ಮವು. ಇದು ಎಲ್ಲ ದುಃಖಗಳನ್ನೂ ತೆಗೆದುಹಾಕುತ್ತದೆ ಎಂದು ತಿಳಿ. ಈ ತತ್ತ್ವವನ್ನು ತಿಳಿದವನು ಸುಖಿಯಾಗುತ್ತಾನೆ.

12208008a ತಸ್ಮಾತ್ಸಮಾಹಿತಂ ಬುದ್ಧ್ಯಾ ಮನೋ ಭೂತೇಷು ಧಾರಯೇತ್|

12208008c ನಾಪಧ್ಯಾಯೇನ್ನ ಸ್ಪೃಹಯೇನ್ನಾಬದ್ಧಂ ಚಿಂತಯೇದಸತ್||

ಆದುದರಿಂದ ಬುದ್ಧಿಯ ಮೂಲಕ ಮನಸ್ಸನ್ನು ಏಕಾಗ್ರಗೊಳಿಸಿ ಸಮಸ್ತ ಪ್ರಾಣಿಗಳಲ್ಲಿಯೂ ಇರುವ ಪರಮಾತ್ಮನಲ್ಲಿ ಸಮಾವೇಷಗೊಳಿಸಬೇಕು. ಯಾರಿಗೂ ಅಹಿತವನ್ನು ಯೋಚಿಸಬಾರದು. ಅಪೇಕ್ಷೆಪಡಬಾರದು. ಅಬದ್ಧವಾದುದನ್ನು ಮತ್ತು ಕೆಟ್ಟವಿಷಯಗಳನ್ನು ಯೋಚಿಸಬಾರದು[2].

12208009a ಅವಾಗ್ಯೋಗಪ್ರಯೋಗೇಣ ಮನೋಜ್ಞಂ ಸಂಪ್ರವರ್ತತೇ[3]|

12208009c ವಿವಕ್ಷತಾ ವಾ ಸದ್ವಾಕ್ಯಂ ಧರ್ಮಂ ಸೂಕ್ಷ್ಮಮವೇಕ್ಷತಾ|

12208009e ಸತ್ಯಾಂ ವಾಚಮಹಿಂಸ್ರಾಂ ಚ ವದೇದನಪವಾದಿನೀಮ್||

ಮಾತು ಮತ್ತು ಮನಸ್ಸುಗಳನ್ನು ಅಂಥಹ ಕರ್ಮಗಳಲ್ಲಿಯೇ ತೊಡಗಿಸಿಕೊಳ್ಳಬೇಕು. ಸದಾ ಉತ್ತಮ ಮಾತುಗಳನ್ನೇ ಆಡಬೇಕು. ಧರ್ಮದ ಸೂಕ್ಷ್ಮತೆಯನ್ನು ಅವಲೋಕಿಸಿ ಸತ್ಯವಾದ ಮತ್ತು ಹಿಂಸಾರಹಿತ ಪರನಿಂದಾರಹಿತ ಮಾತುಗಳನ್ನೇ ಆಡಬೇಕು.

12208010a ಕಲ್ಕಾಪೇತಾಮಪರುಷಾಮನೃಶಂಸಾಮಪೈಶುನಾಮ್|

12208010c ಈದೃಗಲ್ಪಂ ಚ ವಕ್ತವ್ಯಮವಿಕ್ಷಿಪ್ತೇನ ಚೇತಸಾ||

ಶಾಠ್ಯ, ಕಠೋರತೆ, ಕ್ರೌರ್ಯ, ಮತ್ತು ಚಾಡಿಕೋರತನ ಮೊದಲಾದ ದೋಷಗಳಿಲ್ಲದ ಮಾತುಗಳನ್ನಾಡಬೇಕು. ಹೀಗಿರುವ ಮಾತನ್ನು ಸ್ವಲ್ಪವೇ ಆಡಬೇಕು. ಮಾತನಾಡುವಾಗ ಸುಸ್ಥಿರ ಮನಸ್ಸಿನಿಂದ ಕೂಡಿರಬೇಕು.

12208011a ವಾಕ್ಪ್ರಬುದ್ಧೋ ಹಿ ಸಂರಾಗಾ[4]ದ್ವಿರಾಗಾದ್ವ್ಯಾಹರೇದ್ಯದಿ|

12208011c ಬುದ್ಧ್ಯಾ ಹ್ಯನಿಗೃಹೀತೇನ ಮನಸಾ ಕರ್ಮ ತಾಮಸಮ್|

12208011e ರಜೋಭೂತೈರ್ಹಿ ಕರಣೈಃ ಕರ್ಮಣಾ ಪ್ರತಿಪದ್ಯತೇ||

ಮಾತು ಸಂರಾಗವನ್ನು ಹೆಚ್ಚಿಸುತ್ತದೆ. ವಿರಾಗದಿಂದ ವ್ಯವಹರಿಸಬೇಕು. ಬುದ್ಧಿ ಮತ್ತು ಮನಸ್ಸಿನಿಂದ ತಾಮಸಕರ್ಮಗಳನ್ನು ತೊರೆಯಬೇಕು. ರಜೋಗುಣದಿಂದಾಗಿ ಕರ್ಮಗಳಲ್ಲಿ ತೊಡಗಿದರೆ ಅದರ ಫಲಗಳನ್ನು ಅನುಭವಿಸಬೇಕಾಗುತ್ತದೆ.

12208012a ಸ ದುಃಖಂ ಪ್ರಾಪ್ಯ ಲೋಕೇಽಸ್ಮಿನ್ನರಕಾಯೋಪಪದ್ಯತೇ|

12208012c ತಸ್ಮಾನ್ಮನೋವಾಕ್ಶರೀರೈರಾಚರೇದ್ಧೈರ್ಯಮಾತ್ಮನಃ||

ಅಂಥವನು ಈ ಲೋಕದಲ್ಲಿ ದುಃಖವನ್ನು ಹೊಂದಿ ನರಕಕ್ಕೆ ಹೋಗುತ್ತಾನೆ. ಆದುದರಿಂದ ಮನಸ್ಸು, ಮಾತು ಮತ್ತು ಶರೀರಗಳಿಂದ ಸಹನೆಯನ್ನು ತೋರಿಸಿ ಅದರಂತೆಯೇ ವರ್ತಿಸಬೇಕು.

12208013a ಪ್ರಕೀರ್ಣಮೇಷಭಾರೋ ಹಿ ಯದ್ವದ್ಧಾರ್ಯೇತ ದಸ್ಯುಭಿಃ|

12208013c ಪ್ರತಿಲೋಮಾಂ ದಿಶಂ ಬುದ್ಧ್ವಾ ಸಂಸಾರಮಬುಧಾಸ್ತಥಾ||

ಕತ್ತರಿಸಿದ ಕುರಿಗಳ ಮಾಂಸದ ಭಾರವನ್ನು ಹೊತ್ತುಕೊಂಡು ಹೋಗುತ್ತಿರುವ ದರೋಡೆಕೋರರು ತಮ್ಮನ್ನು ಯಾರಾದರೂ ಬೆನ್ನಟ್ಟಿ ಬರುತ್ತಾರೆಂಬ ಭಯದಿಂದ ದಿಗ್ಭ್ರಾಂತರಾಗಿ ಓಡುತ್ತಿರುತ್ತಾರೆ. ಅದೇ ರೀತಿ ಅಜ್ಞಾನಿಯು ಸಂಸಾರದ ಭಾರವನ್ನು ಹೊತ್ತಿರುವವರೆಗೆ ಅವನಿಗೆ ದುಃಖ-ಭಯಗಳು ತಪ್ಪಿದ್ದಲ್ಲ.

12208014a ತಾನೇವ ಚ ಯಥಾ ದಸ್ಯೂನ್ ಕ್ಷಿಪ್ತ್ವಾ ಗಚ್ಚೇಚ್ಚಿವಾಂ ದಿಶಮ್|

12208014c ತಥಾ ರಜಸ್ತಮಃಕರ್ಮಾಣ್ಯುತ್ಸೃಜ್ಯ ಪ್ರಾಪ್ನುಯಾತ್ಸುಖಮ್||

ಕಳ್ಳರು ಆ ಭಾರವನ್ನು ಬಿಸುಟು ಅನಾಯಾಸವಾಗಿ ಯಾವ ಭಯವೂ ಇಲ್ಲದೆ ತಮಗೆ ಬೇಕಾದಲ್ಲಿಗೆ ಹೇಗೆ ಹೋಗಬಲ್ಲರೋ ಹಾಗೆ ಮನುಷ್ಯನು ರಾಜಸ-ತಾಮಸ ಕರ್ಮಗಳನ್ನು ತ್ಯಜಿಸಿ ಸುಖವನ್ನು ಪಡೆಯುತ್ತಾನೆ.

12208015a ನಿಃಸಂದಿಗ್ಧಮನೀಹೋ ವೈ ಮುಕ್ತಃ ಸರ್ವಪರಿಗ್ರಹೈಃ|

12208015c ವಿವಿಕ್ತಚಾರೀ ಲಘ್ವಾಶೀ ತಪಸ್ವೀ ನಿಯತೇಂದ್ರಿಯಃ||

12208016a ಜ್ಞಾನದಗ್ಧಪರಿಕ್ಲೇಶಃ ಪ್ರಯೋಗರತಿರಾತ್ಮವಾನ್|

12208016c ನಿಷ್ಪ್ರಚಾರೇಣ ಮನಸಾ ಪರಂ ತದಧಿಗಚ್ಚತಿ||

ಅಂಥವನು ಸಂದಿಗ್ಧಮನಸ್ಸುಳ್ಳವನಾಗಿರುವುದಿಲ್ಲ. ಏನನ್ನೂ ಬಯಸುವುದಿಲ್ಲ. ಸರ್ವ ಸಂಗ್ರಹಗಳಿಂದಲೂ ಮುಕ್ತನಾಗಿರುತ್ತಾನೆ. ಒಬ್ಬನೇ ಸಂಚರಿಸುತ್ತಿರುತ್ತಾನೆ. ಲಘು ಆಹಾರವನ್ನು ಸೇವಿಸುತ್ತಾನೆ. ಅವನು ತಪಸ್ವಿಯೂ ಜಿತೇಂದ್ರಿಯನೂ ಆಗಿರುತ್ತಾನೆ. ಜ್ಞಾನದಿಂದ ದುಃಖಗಳನ್ನು ಸುಟ್ಟಿರುತ್ತಾನೆ. ಯೋಗದಲ್ಲಿ ರಮಿಸುತ್ತಾನೆ. ಅಂಥವನು ಸ್ಥಿರವಾದ ಮನಸ್ಸಿನಿಂದ ಪರಮ ಪದವನ್ನು ಪಡೆಯುತ್ತಾನೆ.

12208017a ಧೃತಿಮಾನಾತ್ಮವಾನ್ಬುದ್ಧಿಂ ನಿಗೃಹ್ಣೀಯಾದಸಂಶಯಮ್|

12208017c ಮನೋ ಬುದ್ಧ್ಯಾ ನಿಗೃಹ್ಣೀಯಾದ್ವಿಷಯಾನ್ಮನಸಾತ್ಮನಃ||

ಧೃತಿಮಾನನು ತನ್ನ ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು ಎನ್ನುವುದರಲ್ಲಿ ಸಂಶಯವೇ ಇಲ್ಲ. ಬುದ್ಧಿಯ ಮೂಲಕ ಮನಸ್ಸನ್ನು ನಿಗ್ರಹಿಸಬೇಕು. ಮನಸ್ಸಿನಿಂದ ಇಂದ್ರಿಯಗಳನ್ನು ಇಂದ್ರಿಯಾರ್ಥಗಳಿಂದ ನಿರೋಧಿಸಬೇಕು.

12208018a ನಿಗೃಹೀತೇಂದ್ರಿಯಸ್ಯಾಸ್ಯ ಕುರ್ವಾಣಸ್ಯ ಮನೋ ವಶೇ|

12208018c ದೇವತಾಸ್ತಾಃ ಪ್ರಕಾಶಂತೇ ಹೃಷ್ಟಾ ಯಾಂತಿ ತಮೀಶ್ವರಮ್||

ಹೀಗೆ ಮನಸ್ಸನ್ನು ವಶಪಡಿಸಿಕೊಂಡು ಇಂದ್ರಿಯಗಳನ್ನು ನಿಗ್ರಹಿಸಿಕೊಂಡವನಿಗೆ ಇಂದ್ರಿಯಗಳ ಅಧಿದೇವತೆಗಳು ಪ್ರಕಾಶಮಾನರಾಗುತ್ತಾರೆ ಮತ್ತು ಹೃಷ್ಟರಾಗಿ ತಮಗೆ ಸಂಬಂಧಿಸಿದ ಇಂದ್ರಿಯಗಳೊಡನೆ ಸಾಧಕನ ಹೃದಯಗುಹೆಯಲ್ಲಿರುವ ಈಶ್ವರನನ್ನು ಹೊಂದುತ್ತಾರೆ.

12208019a ತಾಭಿಃ ಸಂಸಕ್ತಮನಸೋ ಬ್ರಹ್ಮವತ್ಸಂಪ್ರಕಾಶತೇ|

12208019c ಏತೈಶ್ಚಾಪಗತೈಃ ಸರ್ವೈರ್ಬ್ರಹ್ಮಭೂಯಾಯ ಕಲ್ಪತೇ||

ಇಂದ್ರಿಯ ಅಧಿದೇವತೆಗಳಿಂದ ಸಂಸಕ್ತವುಳ್ಳ ಮನಸ್ಸಿಗೆ ಬ್ರಹ್ಮವಸ್ತುವು ಪ್ರಕಾಶಿಸುತ್ತದೆ. ಹೀಗೆ ಎಲ್ಲವೂ ನಿಯಂತ್ರಣದಲ್ಲಿರುವಾಗ ಬ್ರಹ್ಮನು ಕಾಣಿಸಿಕೊಳ್ಳುತ್ತಾನೆ.

12208020a ಅಥ ವಾ ನ ಪ್ರವರ್ತೇತ ಯೋಗತಂತ್ರೈರುಪಕ್ರಮೇತ್|

12208020c ಯೇನ ತಂತ್ರಮಯಂ ತಂತ್ರಂ ವೃತ್ತಿಃ ಸ್ಯಾತ್ತತ್ತದಾಚರೇತ್||

ಇದನ್ನು ಸುಲಭವಾಗಿ ಮಾಡಲು ಸಾಧ್ಯವಾಗದೇ ಇದ್ದಾಗ ಸಾಧಕನು ಯೋಗತಂತ್ರಗಳನ್ನು ಆರಂಭಿಸಬೇಕು. ಯಾವ ಯೋಗತಂತ್ರದಿಂದ ಬ್ರಹ್ಮಜ್ಞಾನವುಂಟಾಗುವುದೋ ಅದೇ ವಿಧಾನವನ್ನು ಅನುಸರಿಸಿ ಅಭ್ಯಾಸಮಾಡಬೇಕು.[5]

12208021a ಕಣಪಿಣ್ಯಾಕಕುಲ್ಮಾಷಶಾಕಯಾವಕಸಕ್ತವಃ|

12208021c ತಥಾ ಮೂಲಫಲಂ ಭೈಕ್ಷಂ ಪರ್ಯಾಯೇಣೋಪಯೋಜಯೇತ್||

ಅಕ್ಕಿಯ ನುಚ್ಚು, ಅಂಬಲಿ, ಹಿಂಡಿ, ಕಾಯಿಪಲ್ಯ, ಗಂಜಿ, ಗೋಧಿಹಿಟ್ಟು, ಗೆಡ್ಡೆ-ಗೆಣಸು, ಫಲ – ಇವುಗಳಲ್ಲಿ ಯಾವುದು ಭಿಕ್ಷಾರೂಪದಲ್ಲಿ ದೊರೆಯುತ್ತದೆಯೋ ಅವುಗಳನ್ನು ತನ್ನ ಜೀವನ ನಿರ್ವಹಣೆಗೆ ಉಪಯೋಗಿಸಿಕೊಳ್ಳಬೇಕು.

12208022a ಆಹಾರಂ ನಿಯತಂ[6] ಚೈವ ದೇಶೇ ಕಾಲೇ ಚ ಸಾತ್ತ್ವಿಕಮ್|

12208022c ತತ್ಪರೀಕ್ಷ್ಯಾನುವರ್ತೇತ ಯತ್ಪ್ರವೃತ್ತ್ಯನುವರ್ತಕಮ್||

ದೇಶ-ಕಾಲಗಳಿಗನುಗುಣವಾಗಿ ನಿಯತವಾಗಿ ಸಾತ್ತ್ವಿಕ ಆಹಾರವನ್ನೇ ಸೇವಿಸಬೇಕು. ಆಹಾರಪದಾರ್ಥಗಳನ್ನು ಪರೀಕ್ಷಿಸಿ ಯೋಗಸಿದ್ಧಿಗೆ ಅನುಕೂಲವಾಗುವುದಾದರೆ ಮಾತ್ರವೇ ಅವುಗಳನ್ನು ಸೇವಿಸಬೇಕು.

12208023a ಪ್ರವೃತ್ತಂ ನೋಪರುಂಧೇತ ಶನೈರಗ್ನಿಮಿವೇಂಧಯೇತ್|

12208023c ಜ್ಞಾನೇಂಧಿತಂ ತತೋ ಜ್ಞಾನಮರ್ಕವತ್ ಸಂಪ್ರಕಾಶತೇ||

ಯೋಗಸಾಧನೆಯನ್ನು ಪ್ರಾರಂಭಿಸಿದ ನಂತರ ಮಧ್ಯದಲ್ಲಿ ನಿಲ್ಲಿಸಬಾರದು. ಕಟ್ಟಿಗೆಯಲ್ಲಿರುವ ಬೆಂಕಿಯು ಸ್ವಲ್ಪ-ಸ್ವಲ್ಪವಾಗಿ ಹೊತ್ತಿಕೊಳ್ಳುತ್ತಾ ಮೆಲ್ಲನೇ ಧಗಧಗಿಸಿ ಉರಿಯುವಂತೆ ಯೋಗಸಾಧಕನು ಜ್ಞಾನಾಗ್ನಿಯನ್ನು ಸ್ವಲ್ಪ-ಸ್ವಲ್ಪವಾಗಿ ಉದ್ದೀಪನಗೊಳಿಸುತ್ತಾ ಪ್ರಜ್ವಲಿಸುವಂತೆ ಮಾಡಬೇಕು. ಹೀಗೆ ಮಾಡಿದರೆ ಜ್ಞಾನವು ಸೂರ್ಯನಂತೆ ಪ್ರಕಾಶಿಸುತ್ತದೆ.

12208024a ಜ್ಞಾನಾಧಿಷ್ಠಾನಮಜ್ಞಾನಂ ತ್ರೀಽಲ್ಲೋಕಾನಧಿತಿಷ್ಠತಿ|

12208024c ವಿಜ್ಞಾನಾನುಗತಂ ಜ್ಞಾನಮಜ್ಞಾನಾದಪಕೃಷ್ಯತೇ||

ಮೂರುಲೋಕಗಳನ್ನೂ ಆಶ್ರಯಿಸಿರುವ ಅಜ್ಞಾನಕ್ಕೂ ಜ್ಞಾನವೇ ಆಶ್ರಯವು. ವಿಜ್ಞಾನದಿಂದ ಪಡೆದುಕೊಂಡ ಜ್ಞಾನವು ಅಜ್ಞಾನದಿಂದ ಹಿಂದೆ ಸೆಳೆಯಲ್ಪಡುತ್ತದೆ.

12208025a ಪೃಥಕ್ತ್ವಾತ್ಸಂಪ್ರಯೋಗಾಚ್ಚ ನಾಸೂಯುರ್ವೇದ ಶಾಶ್ವತಮ್|

12208025c ಸ ತಯೋರಪವರ್ಗಜ್ಞೋ ವೀತರಾಗೋ ವಿಮುಚ್ಯತೇ||

ಬೇರೆಬೇರೆಯಾಗಿ ಹೇಳಿರುವುದರಿಂದ ಶಾಶ್ವತವನ್ನು ತಿಳಿಯುವುದು ಕಷ್ಟ. ಇವೆರಡರ ಪ್ರತ್ಯೇಕತೆಯನ್ನು ತಿಳಿದು ರಾಗವನ್ನು ಕಳೆದುಕೊಂಡವನು ಮುಕ್ತನಾಗುತ್ತಾನೆ[7].

12208026a ವಯೋತೀತೋ ಜರಾಮೃತ್ಯೂ ಜಿತ್ವಾ ಬ್ರಹ್ಮ ಸನಾತನಮ್|

12208026c ಅಮೃತಂ ತದವಾಪ್ನೋತಿ ಯತ್ತದಕ್ಷರಮವ್ಯಯಮ್||

ಅಂತಹ ವಿರಾಗಿಯು ಮುಪ್ಪನ್ನು ದಾಟಿ ಮೃತ್ಯುವನ್ನು ಗೆದ್ದು ಆ ಸನಾತನ ಬ್ರಹ್ಮ ಅಮೃತ ಅಕ್ಷರ ಅವ್ಯಯವನ್ನು ಸೇರುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ಅಷ್ಟಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಎಂಟನೇ ಅಧ್ಯಾಯವು.

[1] ಭೀಷ್ಮ ಉವಾಚ| (ಗೀತಾ ಪ್ರೆಸ್/ಭಾರತ ದರ್ಶನ)

[2] One must use one’s intelligence to control one’s mind and sustain all beings. One must not desire to injure them and one must not allow one’s thoughts to bind one down. (Bibek Debroy)

[3] ಅಥಾಮೋಘಪ್ರಯತ್ನೇನ ಮನೋ ಜ್ಞಾನೇ ನಿವೇಶಯೇತ್| ವಾಚಾಮೋಘಪ್ರಯಾಸೇನ ಮನೋಜ್ಞಂ ತತ್ಪ್ರವರ್ತತೇ|| (ಗೀತಾ ಪ್ರೆಸ್/ಭಾರತ ದರ್ಶನ).

[4] ವಾಕ್ಪ್ರಬದ್ಧೋ ಹಿ ಸಂಸಾರೋ (ಭಾರತ ದರ್ಶನ/ಗೀತಾ ಪ್ರೆಸ್).

[5] One must not engage in yoga and tantra, in any form at all. Instead, one must act so that one’s conduct is permeated by the warp of that tantra. (Bibek Debroy)

[6] ಆಹಾರನಿಯಮಂ (ಭಾರತ ದರ್ಶನ/ಗೀತಾ ಪ್ರೆಸ್).

[7] ಈ ಜ್ಞಾನ ಮತ್ತು ಅಜ್ಞಾನ (ಕರ್ಮ) ಗಳನ್ನು ಎರಡನ್ನೂ ಸೇರಿಸಿ ಹೇಳಿರುವುದೂ ಉಂಟು. ಇವುಗಳನ್ನು ಹೇಗೆ ಮೋಕ್ಷಕ್ಕೆ ವಿನಿಯೋಗಿಸಿಕೊಳ್ಳಬೇಕು ಎಂಬ ಅರಿವಿಲ್ಲದೇ ಅಪಾರ್ಥಮಾಡಿಕೊಳ್ಳುವ ಅಸೂಯಾಪರನು ಶಾಶ್ವತ ಬ್ರಹ್ಮವಸ್ತುವನ್ನು ತಿಳಿಯಲಾರನು. ಅವೆರಡರಿಂದ ಮೋಕ್ಷವನ್ನರಿತ ವಿರಾಗಿಯು ಮೋಕ್ಷವನ್ನು ಪಡೆಯುತ್ತಾನೆ. (ಭಾರತ ದರ್ಶನ)

शास्त्रॊमें कहीं जीवात्मा और परमात्माकी पृथक्ताका प्रतिपादन करनॆवालॆ वचन उपलब्ढ हॊतॆ हैं और कहीं उनकी ऎकताका । यह परस्पर विरॊध दॆखकर दॊषदृष्टि न करतॆ हुयॆ सनातन ज्ञानकॊ प्राप्त करॆ । जॊ उन दॊनॊं प्रकारकॆ वचनॊंका तात्पर्य समझकर मॊक्षकॆ तत्त्वकॊ जाल लॆता है, वह वीतराग पुरुष संसारबंधनसॆ मुक्त हॊ जाता है। (ಗೀತಾ ಪ್ರೆಸ್)

One does not know the eternal because they seem to be separate. A person who knows about renunciation is devoid of attachment and is freed. (Bibek Debroy)

Comments are closed.