Shanti Parva: Chapter 207

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೭

ಬ್ರಹ್ಮಚರ್ಯ-ವೈರಾಗ್ಯಗಳಿಂದ ಮುಕ್ತಿ (1-29).

12207001 ಗುರುರುವಾಚ|

12207001a ಅತ್ರೋಪಾಯಂ ಪ್ರವಕ್ಷ್ಯಾಮಿ ಯಥಾವಚ್ಚಾಸ್ತ್ರಚಕ್ಷುಷಾ|

12207001c ತದ್ವಿಜ್ಞಾನಾಚ್ಚರನ್ಪ್ರಾಜ್ಞಃ ಪ್ರಾಪ್ನುಯಾತ್ಪರಮಾಂ ಗತಿಮ್||

ಗುರುವು ಹೇಳಿದನು: “ಈಗ ನಾನು ಶಾಸ್ತ್ರದೃಷ್ಟಿಯಿಂದ ಬಳಸಬಹುದಾದ ಉಪಾಯವನ್ನು ಹೇಳುತ್ತೇನೆ. ಆ ವಿಜ್ಞಾನವನ್ನು ಆಚರಿಸಿ ಪ್ರಾಜ್ಞನು ಪರಮ ಗತಿಯನ್ನು ಹೊಂದುತ್ತಾನೆ.

12207002a ಸರ್ವೇಷಾಮೇವ ಭೂತಾನಾಂ ಪುರುಷಃ ಶ್ರೇಷ್ಠ ಉಚ್ಯತೇ|

12207002c ಪುರುಷೇಭ್ಯೋ ದ್ವಿಜಾನಾಹುರ್ದ್ವಿಜೇಭ್ಯೋ ಮಂತ್ರವಾದಿನಃ||

ಸರ್ವಭೂತಗಳಲ್ಲಿಯೂ ಮನುಷ್ಯನೇ ಶ್ರೇಷ್ಠನೆಂದು ಹೇಳಿದ್ದಾರೆ. ಮನುಷ್ಯರಲ್ಲಿ ದ್ವಿಜರು ಶ್ರೇಷ್ಠರೆಂದೂ ದ್ವಿಜರಲ್ಲಿ ಮಂತ್ರಗಳನ್ನು ತಿಳಿದವರು ಶ್ರೇಷ್ಠರೆಂದು ಹೇಳುತ್ತಾರೆ.

12207003a ಸರ್ವಭೂತವಿಶಿಷ್ಟಾಸ್ತೇ ಸರ್ವಜ್ಞಾಃ ಸರ್ವದರ್ಶಿನಃ|

12207003c ಬ್ರಾಹ್ಮಣಾ ವೇದತತ್ತ್ವಜ್ಞಾಸ್ತತ್ತ್ವಾರ್ಥಗತಿನಿಶ್ಚಯಾಃ||

ವೇದತತ್ತ್ವಜ್ಞ ಬ್ರಾಹ್ಮಣರು ಎಲ್ಲದರ ಗುರಿ-ಸಾಧನೆಗಳನ್ನು ನಿಶ್ಚಯಿಸಬಲ್ಲರು. ಅವರು ಎಲ್ಲವನ್ನೂ ನೋಡಬಲ್ಲರು ಮತ್ತು ಎಲ್ಲವನ್ನೂ ತಿಳಿದಿರುತ್ತಾರೆ. ಸರ್ವಭೂತಗಳಲ್ಲಿಯೂ ಅವರು ವಿಶಿಷ್ಟರು.

12207004a ನೇತ್ರಹೀನೋ ಯಥಾ ಹ್ಯೇಕಃ ಕೃಚ್ಚ್ರಾಣಿ ಲಭತೇಽಧ್ವನಿ|

12207004c ಜ್ಞಾನಹೀನಸ್ತಥಾ ಲೋಕೇ ತಸ್ಮಾಜ್ ಜ್ಞಾನವಿದೋಽಧಿಕಾಃ||

ಒಬ್ಬಂಟಿಗನಾಗಿ ಪ್ರಯಾಣಿಸುತ್ತಿರುವ ನೇತ್ರಹೀನನು ಹೇಗೆ ಮಾರ್ಗದಲ್ಲಿ ಕಷ್ಟಗಳನ್ನನುಭವಿಸುತ್ತಾನೋ ಹಾಗೆ ಜ್ಞಾನಹೀನನೂ ಲೋಕದಲ್ಲಿ ಕಷ್ಟಗಳನ್ನನುಭವಿಸುತ್ತಾನೆ. ಆದುದರಿಂದ ಜ್ಞಾನವಿದನು ಹೆಚ್ಚಿನವನು.

12207005a ತಾಂಸ್ತಾನುಪಾಸತೇ ಧರ್ಮಾನ್ಧರ್ಮಕಾಮಾ ಯಥಾಗಮಮ್|

12207005c ನ ತ್ವೇಷಾಮರ್ಥಸಾಮಾನ್ಯಮಂತರೇಣ ಗುಣಾನಿಮಾನ್||

ಧರ್ಮವನ್ನು ಅನುಸರಿಸ ಬಯಸುವ ಆದರೆ ಧರ್ಮದ ಕುರಿತು ತಿಳಿಯದೇ ಇರುವವರು ಶಾಸ್ತ್ರಗಳಲ್ಲಿರುವಂತೆ ಮಾಡುತ್ತಾರೆ. ಆದರೆ ಆ ಕರ್ಮಗಳಲ್ಲಿ ಮುಂದೆ ಹೇಳುವ ಈ ಗುಣಗಳಿಲ್ಲದಿದ್ದರೆ ಅವರು ಕೇವಲ ಅಲ್ಪ ಪ್ರಮಾಣದಲ್ಲಿಯೇ ಸಿದ್ಧಿಯನ್ನು ಪಡೆಯುತ್ತಾರೆ.

12207006a ವಾಗ್ದೇಹಮನಸಾಂ ಶೌಚಂ ಕ್ಷಮಾ ಸತ್ಯಂ ಧೃತಿಃ ಸ್ಮೃತಿಃ|

12207006c ಸರ್ವಧರ್ಮೇಷು ಧರ್ಮಜ್ಞಾ ಜ್ಞಾಪಯಂತಿ ಗುಣಾನಿಮಾನ್||

ಮಾತು-ದೇಹ-ಮನಸ್ಸುಗಳ (ತ್ರಿಕರಣ) ಶುದ್ಧಿ, ಕ್ಷಮೆ, ಸತ್ಯ, ಧೃತಿ, ಸ್ಮೃತಿ – ಇವು ಸರ್ವಧರ್ಮಗಳಲ್ಲಿಯೂ ಧರ್ಮಜ್ಞರ ಗುಣಗಳೆಂದು ಹೇಳಿದ್ದಾರೆ. 

12207007a ಯದಿದಂ ಬ್ರಹ್ಮಣೋ ರೂಪಂ ಬ್ರಹ್ಮಚರ್ಯಮಿತಿ ಸ್ಮೃತಮ್|

12207007c ಪರಂ ತತ್ಸರ್ವಭೂತೇಭ್ಯಸ್ತೇನ ಯಾಂತಿ ಪರಾಂ ಗತಿಮ್||

ಶಾಸ್ತ್ರಗಳಲ್ಲಿ ಹೇಳಿರುವ ಬ್ರಹ್ಮಚರ್ಯವು ಬ್ರಹ್ಮನ ರೂಪವೇ ಆಗಿದೆ. ಸರ್ವಭೂತಗಳಿಗೂ ಇದು ಪರಮ ಗತಿಯನ್ನು ನೀಡುವ ಪರಮ ಮಾರ್ಗವು.

12207008a ಲಿಂಗಸಂಯೋಗಹೀನಂ ಯಚ್ಚರೀರಸ್ಪರ್ಶವರ್ಜಿತಮ್[1]|

12207008c ಶ್ರೋತ್ರೇಣ ಶ್ರವಣಂ ಚೈವ ಚಕ್ಷುಷಾ ಚೈವ ದರ್ಶನಮ್||

12207009a ಜಿಹ್ವಯಾ ರಸನಂ ಯಚ್ಚ ತದೇವ ಪರಿವರ್ಜಿತಮ್[2]|

12207009c ಬುದ್ಧ್ಯಾ ಚ ವ್ಯವಸಾಯೇನ ಬ್ರಹ್ಮಚರ್ಯಮಕಲ್ಮಷಮ್||

ಬ್ರಹ್ಮಚರ್ಯವೆಂದರೆ ಲಿಂಗಸಂಯೋಗರಹಿತನಾಗಿರುವುದು. ಶರೀರಸ್ಪರ್ಶವನ್ನು ಬಿಟ್ಟಿರುವುದು. ಕಿವಿಯಿಂದ ಕೇಳುವುದನ್ನು, ಕಣ್ಣುಗಳಿಂದ ನೋಡುವುದನ್ನು, ಮತ್ತು ನಾಲಿಗೆಯಿಂದ ರುಚಿನೋಡುವುದನ್ನು ವರ್ಜಿಸುವುದು. ಬುದ್ಧಿಯನ್ನುಪಯೋಗಿಸಿ ಈ ಅಕಲ್ಮಷ ಬ್ರಹ್ಮಚರ್ಯವನ್ನು ಅಭ್ಯಾಸಮಾಡಬೇಕು.

12207010a ಸಮ್ಯಗ್ವೃತ್ತಿರ್ಬ್ರಹ್ಮಲೋಕಂ ಪ್ರಾಪ್ನುಯಾನ್ಮಧ್ಯಮಃ ಸುರಾನ್|

12207010c ದ್ವಿಜಾಗ್ರ್ಯೋ ಜಾಯತೇ ವಿದ್ವಾನ್ಕನ್ಯಸೀಂ ವೃತ್ತಿಮಾಸ್ಥಿತಃ||

ಈ ರೀತಿ ಬ್ರಹ್ಮಚರ್ಯವನ್ನು ಚೆನ್ನಾಗಿ ಪರಿಪಾಲಿಸಿದವನು ಬ್ರಹ್ಮಲೋಕವನ್ನು ಪಡೆಯುತ್ತಾನೆ. ಮಧ್ಯಮ ಶ್ರೇಣಿಯಲ್ಲಿ ಇದನ್ನು ಪರಿಪಾಲಿಸಿದವನು ಸುರಲೋಕವನ್ನು ಪಡೆಯುತ್ತಾನೆ. ಈ ಬ್ರಹ್ಮಚರ್ಯವನ್ನು ಕಡಿಮೆ ಮಟ್ಟದಲ್ಲಿ ಆಚರಿಸುವವನು ವಿದ್ವಾಂಸ ಬ್ರಾಹ್ಮಣನಾಗಿ ಹುಟ್ಟುತ್ತಾನೆ.

12207011a ಸುದುಷ್ಕರಂ ಬ್ರಹ್ಮಚರ್ಯಮುಪಾಯಂ ತತ್ರ ಮೇ ಶೃಣು|

12207011c ಸಂಪ್ರವೃತ್ತಮುದೀರ್ಣಂ ಚ ನಿಗೃಹ್ಣೀಯಾದ್ದ್ವಿಜೋ ಮನಃ[3]||

ಬ್ರಹ್ಮಚರ್ಯವು ಸುದುಷ್ಕರವಾದುದು. ಅದರ ಉಪಾಯವನ್ನು ನನ್ನಿಂದ ಕೇಳು. ಸದಾ ಪ್ರವೃತ್ತವಾಗಿರುವ ಮತ್ತು ಮತ್ತೆ ಮತ್ತೆ ಉಲ್ಭಣಗೊಳ್ಳುವ ಮನಸ್ಸನ್ನು ದ್ವಿಜನು ನಿಯಂತ್ರಿಸಬೇಕು.

12207012a ಯೋಷಿತಾಂ ನ ಕಥಾಃ ಶ್ರಾವ್ಯಾ ನ ನಿರೀಕ್ಷ್ಯಾ ನಿರಂಬರಾಃ|

12207012c ಕದಾ ಚಿದ್ದರ್ಶನಾದಾಸಾಂ ದುರ್ಬಲಾನಾವಿಶೇದ್ರಜಃ||

ಸ್ತ್ರೀಯರಿಗೆ ಸಂಬಂಧಿಸಿದ ವಿಷಯಗಳನ್ನು ಕೇಳಬಾರದು. ನಗ್ನರಾಗಿರುವಾಗ ಅವರನ್ನು ನೋಡಬಾರದು. ಒಂದುವೇಳೆ ಹಾಗೆ ಅವರನ್ನು ನೋಡಿದರೆ ದುರ್ಬಲಮನಸ್ಸುಳ್ಳವರನ್ನು ರಜೋಗುಣವು ಆವರಿಸುತ್ತದೆ.

12207013a ರಾಗೋತ್ಪತ್ತೌ ಚರೇತ್ಕೃಚ್ಚ್ರಮಹ್ನಸ್ತ್ರಿಃ[4] ಪ್ರವಿಶೇದಪಃ|

12207013c ಮಗ್ನಃ ಸ್ವಪ್ನೇ ಚ ಮನಸಾ ತ್ರಿರ್ಜಪೇದಘಮರ್ಷಣಮ್||

ಬ್ರಹ್ಮಚಾರಿಯಲ್ಲಿ ರಾಗೋತ್ಪತ್ತಿಯಾದರೆ ಕೃಚ್ಛ್ರವ್ರತ[5]ವನ್ನು ಆಚರಿಸಿ ಮೂರು ದಿನ ನೀರನ್ನು ಪ್ರವೇಶಿಸಬೇಕು. ಸ್ವಪ್ನದಲ್ಲಿ ಕಾಮಮಗ್ನನಾದರೆ ಮನಸಾ ಮೂರುಬಾರಿ ಅಘಮರ್ಷಣಮಂತ್ರ[6]ವನ್ನು ಜಪಿಸಬೇಕು.

12207014a ಪಾಪ್ಮಾನಂ ನಿರ್ದಹೇದೇವಮಂತರ್ಭೂತಂ ರಜೋಮಯಮ್|

12207014c ಜ್ಞಾನಯುಕ್ತೇನ ಮನಸಾ ಸಂತತೇನ ವಿಚಕ್ಷಣಃ||

ವಿವೇಕಿಯಾದವನು ಹೀಗೆ ಜ್ಞಾನಯುಕ್ತ ಸಂಯಮಶೀಲ ಮನಸ್ಸಿನ ಮೂಲಕ ಅಂತಃಕರಣದಲ್ಲಿ ಪ್ರಕಟವಾಗುವ ರಜೋಮಯ ಪಾಪಮಯ ಕಾಮವಿಕಾರವನ್ನು ಭಸ್ಮಮಾಡಬೇಕು.

12207015a ಕುಣಪಾಮೇಧ್ಯಸಂಯುಕ್ತಂ ಯದ್ವದಚ್ಚಿದ್ರಬಂಧನಮ್|

12207015c ತದ್ವದ್ದೇಹಗತಂ ವಿದ್ಯಾದಾತ್ಮಾನಂ ದೇಹಬಂಧನಮ್||

ವಾಸನಾಯುಕ್ತ ಮಲವನ್ನು ಕರುಳು ದೃಢವಾಗಿ ಬಂಧಿಸಿಟ್ಟಿರುವ ಹಾಗೆ ಆತ್ಮನನ್ನು ದೇಹವು ದೃಢವಾಗಿ ಬಂಧಿಸಿದೆಯೆಂದು ತಿಳಿಯಬೇಕು.

12207016a ವಾತಪಿತ್ತಕಫಾನ್ರಕ್ತಂ ತ್ವಘ್ಮಾಂಸಂ ಸ್ನಾಯುಮಸ್ಥಿ ಚ|

12207016c ಮಜ್ಜಾಂ ಚೈವ ಸಿರಾಜಾಲೈಸ್ತರ್ಪಯಂತಿ ರಸಾ ನೃಣಾಮ್||

ಅನ್ನ ರಸಗಳು ನರರ ನಾಡೀಸಮೂಹಗಳ ಮೂಲಕ ವಾತ-ಪಿತ್ಥ-ಕಫಗಳನ್ನೂ ರಕ್ತ-ಚರ್ಮ-ಮಾಂಸ-ಸ್ನಾಯು-ಮೂಳೆ-ಮಜ್ಜೆ ಮತ್ತು ಸಂಪೂರ್ಣದೇಹವನ್ನು ತೃಪ್ತಿಗೊಳಿಸುತ್ತವೆ.

12207017a ದಶ ವಿದ್ಯಾದ್ಧಮನ್ಯೋಽತ್ರ ಪಂಚೇಂದ್ರಿಯಗುಣಾವಹಾಃ|

12207017c ಯಾಭಿಃ ಸೂಕ್ಷ್ಮಾಃ ಪ್ರತಾಯಂತೇ ಧಮನ್ಯೋಽನ್ಯಾಃ ಸಹಸ್ರಶಃ||

ಪಂಚೇಂದ್ರಿಯಗಳಿಗೆ ಶಬ್ದಾದಿ ಗುಣಗಳನ್ನು ಕೊಂಡೊಯ್ಯುವ ಹತ್ತು ನಾಡಿಗಳಿವೆ ಎಂದು ತಿಳಿಯಬೇಕು. ಅವುಗಳಿಂದ ಸೂಕ್ಷ್ಮಾತಿಸೂಕ್ಷ್ಮ ಸಾವಿರಾರು ನಾಡಿಗಳು ದೇಹಾದ್ಯಂತ ಪಸರಿಸಿಕೊಂಡಿವೆ.

12207018a ಏವಮೇತಾಃ ಸಿರಾನದ್ಯೋ ರಸೋದಾ ದೇಹಸಾಗರಮ್|

12207018c ತರ್ಪಯಂತಿ ಯಥಾಕಾಲಮಾಪಗಾ ಇವ ಸಾಗರಮ್||

ನದಿಗಳು ಕಾಲಾನುಗುಣವಾಗಿ ತುಂಬಿದ ಪ್ರವಾಹಗಳಿಂದ ಸಮುದ್ರವನ್ನು ತೃಪ್ತಿಗೊಳಿಸುವಂತೆ ರಸವಾಹಿನಿಗಳಾದ ಈ ನಾಡೀರೂಪದ ನದಿಗಳು ದೇಹವೆಂಬ ಸಾಗರವನ್ನು ತೃಪ್ತಿಪಡಿಸುತ್ತವೆ.

12207019a ಮಧ್ಯೇ ಚ ಹೃದಯಸ್ಯೈಕಾ ಸಿರಾ ತ್ವತ್ರ ಮನೋವಹಾ|

12207019c ಶುಕ್ರಂ ಸಂಕಲ್ಪಜಂ ನೃಣಾಂ ಸರ್ವಗಾತ್ರೈರ್ವಿಮುಂಚತಿ||

ಹೃದಯದ ಮಧ್ಯದಲ್ಲಿ ಮನಸ್ಸನ್ನು ಸುಪ್ರೀತಗೊಳಿಸುವ ಮನೋವಹಾ[7]ಎಂಬ ನಾಡಿಯಿದೆ. ಕಾಮವಿಷಯಕ ಸಂಕಲ್ಪವುಂಟಾದಾಗ ಅದು ಶರೀರದ ಅಂಗಾಂಗಗಳಿಂದ ವೀರ್ಯವನ್ನು ಸಂಗ್ರಹಿಸಿ ಹೊರಬೀಳಿಸುತ್ತದೆ.

12207020a ಸರ್ವಗಾತ್ರಪ್ರತಾಯಿನ್ಯಸ್ತಸ್ಯಾ ಹ್ಯನುಗತಾಃ ಸಿರಾಃ|

12207020c ನೇತ್ರಯೋಃ ಪ್ರತಿಪದ್ಯಂತೇ ವಹಂತ್ಯಸ್ತೈಜಸಂ ಗುಣಮ್||

ಮನೋವಹ ನಾಡಿಯನ್ನೇ ಅನುಸರಿಸಿ ಹೋಗುವ, ಶರೀರಾದ್ಯಂತ ಪಸರಿಸಿರುವ ನಾಡಿಗಳು ತೇಜಸ್ಸಿನ ಗುಣವನ್ನು ಸಂಗ್ರಹಿಸಿ ಕಣ್ಣುಗಳಿಗೆ ಕೊಂಡೊಯ್ಯುತ್ತವೆ.

12207021a ಪಯಸ್ಯಂತರ್ಹಿತಂ ಸರ್ಪಿರ್ಯದ್ವನ್ನಿರ್ಮಥ್ಯತೇ ಖಜೈಃ|

12207021c ಶುಕ್ರಂ ನಿರ್ಮಥ್ಯತೇ ತದ್ವದ್ದೇಹಸಂಕಲ್ಪಜೈಃ ಖಜೈಃ||

ಹಾಲಿನಲ್ಲಿ ಅಡಗಿರುವ ಬೆಣ್ಣೆಯನ್ನು ಕಡಗೋಲಿನಿಂದ ಹೇಗೆ ಕಡೆದು ತೆಗೆಯಲಾಗುತ್ತದೆಯೋ ಹಾಗೆ ದೇಹ-ಸಂಕಲ್ಪಗಳಿಂದ ಹುಟ್ಟಿದ ಕಡೆಗೋಲಿನಿಂದ ಅನ್ನರಸವನ್ನು ಕಡೆದು ಶುಕ್ರದ ಉತ್ಪತ್ತಿಯಾಗುತ್ತದೆ.

12207022a ಸ್ವಪ್ನೇಽಪ್ಯೇವಂ ಯಥಾಭ್ಯೇತಿ ಮನಃಸಂಕಲ್ಪಜಂ ರಜಃ|

12207022c ಶುಕ್ರಮಸ್ಪರ್ಶಜಂ ದೇಹಾತ್ ಸೃಜಂತ್ಯಸ್ಯ ಮನೋವಹಾ||

ಸ್ವಪ್ನದಲ್ಲಿ ಶರೀರಸಂಪರ್ಕವಾಗದಿದ್ದರೂ ಮನಸ್ಸಿನ ಸಂಕಲ್ಪದಿಂದಲೇ ರಜೋಗುಣವು ಉತ್ತೇಜಿತಗೊಂಡು ಮನೋವಹಾ ನಾಡಿಯು ವೀರ್ಯವನ್ನು ದೇಹದಿಂದ ವಿಸರ್ಜಿಸುತ್ತದೆ.

12207023a ಮಹರ್ಷಿರ್ಭಗವಾನತ್ರಿರ್ವೇದ ತಚ್ಚುಕ್ರಸಂಭವಮ್|

12207023c ತ್ರಿಬೀಜಮಿಂದ್ರದೈವತ್ಯಂ ತಸ್ಮಾದಿಂದ್ರಿಯಮುಚ್ಯತೇ||

ಮಹರ್ಷಿ ಭಗವಾನ್ ಅತ್ರಿಯು ಆ ವೀರ್ಯದ ಉತ್ಪತ್ತಿ-ಗತಿಗಳನ್ನು ತಿಳಿದಿದ್ದಾನೆ. ವೀರ್ಯಕ್ಕೆ ಮೂರು ಬೀಜಗಳಿವೆ – ಮನೋವಹ ನಾಡಿ, ಸಂಕಲ್ಪ ಮತ್ತು ಅನ್ನರಸ. ವೀರ್ಯಕ್ಕೆ ಇಂದ್ರನೇ ದೇವತೆ. ಆದುದರಿಂದ ವೀರ್ಯವನ್ನು ಇಂದ್ರಿಯವೆಂದೂ ಕರೆಯುತ್ತಾರೆ.

12207024a ಯೇ ವೈ ಶುಕ್ರಗತಿಂ ವಿದ್ಯುರ್ಭೂತಸಂಕರಕಾರಿಕಾಮ್|

12207024c ವಿರಾಗಾ ದಗ್ಧದೋಷಾಸ್ತೇ ನಾಪ್ನುಯುರ್ದೇಹಸಂಭವಮ್||

ವೀರ್ಯದ ಗತಿಯು ಉದ್ರೇಕದ ಕಾರಣದಿಂದ ಅವಿವೇಕದ ಭೂತಸಂಕರಕಾರ್ಯವನ್ನು ಮಾಡುತ್ತದೆ ಎಂದು ತಿಳಿದು ವಿರಾಗಿಗಳಾಗುವವರು ತಮ್ಮಲ್ಲಿರುವ ದೋಷಗಳನ್ನು ಸುಟ್ಟು ದೇಹಬಂಧನದಿಂದ ಮುಕ್ತರಾಗುತ್ತಾರೆ. ಅವರು ಪುನಃ ಜನ್ಮವನ್ನು ಪಡೆಯುವುದಿಲ್ಲ.

12207025a ಗುಣಾನಾಂ ಸಾಮ್ಯಮಾಗಮ್ಯ ಮನಸೈವ ಮನೋವಹಮ್|

12207025c ದೇಹಕರ್ಮಾನುದನ್ಪ್ರಾಣಾನಂತಕಾಲೇ ವಿಮುಚ್ಯತೇ||

ದೇಹಕರ್ಮಗಳನ್ನು ತ್ಯಜಿಸಬೇಕಾದ ಅಂತ್ಯಕಾಲದಲ್ಲಿ ಗುಣಸಾಮ್ಯವನ್ನು ಹೊಂದಿ ಮನಸ್ಸನ್ನು ಮನೋವಹನಾಡಿಯಲ್ಲಿ ಇರಿಸುವವನು ಮುಕ್ತನಾಗುತ್ತಾನೆ.

12207026a ಭವಿತಾ ಮನಸೋ ಜ್ಞಾನಂ ಮನ ಏವ ಪ್ರತಾಯತೇ|

12207026c ಜ್ಯೋತಿಷ್ಮದ್ವಿರಜೋ ದಿವ್ಯಮತ್ರ ಸಿದ್ಧಂ[8] ಮಹಾತ್ಮನಾಮ್||

ಗುಣಸಾಮ್ಯವನ್ನು ಸಾಧಿಸಿದ ಮನಸ್ಸು ರಜೋಗುಣರಹಿತಗೊಂಡು ಕಾಂತಿಯುಕ್ತವಾಗಿ ಹೊಳೆಯುತ್ತದೆ. ಮಹಾತ್ಮರಿಗೆ ಅದೇ ದಿವ್ಯ ಸಿದ್ಧಿಯನ್ನೂ ನೀಡುತ್ತದೆ.

12207027a ತಸ್ಮಾತ್ತದವಿಘಾತಾಯ ಕರ್ಮ ಕುರ್ಯಾದಕಲ್ಮಷಮ್|

12207027c ರಜಸ್ತಮಶ್ಚ ಹಿತ್ವೇಹ ನ ತಿರ್ಯಗ್ಗತಿಮಾಪ್ನುಯಾತ್||

ಆದುದರಿಂದ ಮನಸ್ಸನ್ನು ಸಂಯಮದಲ್ಲಿಟ್ಟುಕೊಳ್ಳಲು ದೋಷರಹಿತ ಕರ್ಮಗಳನ್ನೇ ಮಾಡಬೇಕು. ರಜ-ತಮೋ ಗುಣಗಳನ್ನು ತ್ಯಜಿಸಿದ ನಂತರವೇ ಮನುಷ್ಯನು ಉತ್ತಮ ಗತಿಯನ್ನು ಹೊಂದಬಲ್ಲನು.

12207028a ತರುಣಾಧಿಗತಂ ಜ್ಞಾನಂ ಜರಾದುರ್ಬಲತಾಂ ಗತಮ್|

12207028c ಪರಿಪಕ್ವಬುದ್ಧಿಃ ಕಾಲೇನ ಆದತ್ತೇ ಮಾನಸಂ ಬಲಮ್||

ತಾರುಣ್ಯದಲ್ಲಿ ಪಡೆದ ಜ್ಞಾನವು ವೃದ್ಧಾಪ್ಯದಲ್ಲಿ ದುರ್ಬಲಗೊಳ್ಳುತ್ತದೆ. ಆದರೆ ವಯಸ್ಸಾದಂತೆ ಪರಿಪಕ್ವವಾಗುವ ಬುದ್ಧಿಯಿಂದ ಮಾನಸಿಕ ಬಲವನ್ನು ಪಡೆದುಕೊಳ್ಳಬಹುದು.

12207029a ಸುದುರ್ಗಮಿವ ಪಂಥಾನಮತೀತ್ಯ ಗುಣಬಂಧನಮ್|

12207029c ಯದಾ ಪಶ್ಯೇತ್ತದಾ ದೋಷಾನತೀತ್ಯಾಮೃತಮಶ್ನುತೇ||

ಆದರೆ ಇದು ಅತ್ಯಂತ ಕಷ್ಟಕರ ಮಾರ್ಗವು. ಗುಣಬಂಧನಗಳನ್ನು ದಾಟಿಹೋಗಬೇಕಾಗುತ್ತದೆ. ಕಂಡ ದೋಷಗಳನ್ನೆಲ್ಲಾ ಅತಿಕ್ರಮಿಸಿ ಮುಂದುವರೆದು ಕಡೆಯಲ್ಲಿ ಅಮೃತತ್ವವನ್ನು ಹೊಂದುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ಸಪ್ತಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಏಳನೇ ಅಧ್ಯಾಯವು.

[1] ಯಚ್ಛಬ್ದಸ್ಪರ್ಶವಿವರ್ಜಿತಮ್| (ಭಾರತ ದರ್ಶನ/ಗೀತಾ ಪ್ರೆಸ್).

[2] ವಾಕ್ಸಂಭಾಷಾಪ್ರವೃತ್ತಂ ಯತ್ತನ್ಮನಃಪರಿವರ್ಜಿತಮ್| (ಭಾರತ ದರ್ಶನ/ಗೀತಾ ಪ್ರೆಸ್).

[3] ರಜಃ (ಭಾರತ ದರ್ಶನ/ಗೀತಾ ಪ್ರೆಸ್).

[4] ಮಹಾರ್ತಿಃ (ಭಾರತ ದರ್ಶನ/ಗೀತಾ ಪ್ರೆಸ್).

[5] ಕೃಚ್ಛ್ರ ಅಥವಾ ಪ್ರಾಜಾಪತ್ಯಕೃಚ್ಛ್ರದ ನಿಯಮವು ಹೀಗಿದೆ: ತ್ರ್ಯಹಂ ಪ್ರಾತಸ್ತ್ರಹಂ ಸಾಯಂ ತ್ರ್ಯಹ ಮದ್ಯಾದಯಾಚಿತಮ್| ತ್ರಹಂ ಪರಂ ಚ ನಾಶ್ನೀಯಾತ್ಪ್ರಾಜಾಪತ್ಯೋಽಯಮುಚ್ಯತೇ|| (ಮನುಸ್ಮೃತಿ 11-12) ಅರ್ಥಾತ್ ಮೂರು ದಿವಸಗಳು ಪ್ರಾತಃಕಾಲದಲ್ಲಿಯೂ ಮೂರು ದಿವಸಗಳು ಸಾಯಂಕಾಲದಲ್ಲಿಯೂ ಭೋಜನ ಮಾಡಬೇಕು. ಮುಂದೆ ಮೂರು ದಿವಸಗಳು ಆಯಾಚಿತವಾದ (ಯಾರಾದರೂ ಕರೆದು ಹಾಕಿದರೆ) ಊಟಮಾಡಬೇಕು. ಇಲ್ಲದಿದ್ದರೆ ಊಟವನ್ನೇ ಮಾಡಬಾರದು. ಅನಂತರ ಮೂರು ದಿವಸಗಳು ಉಪವಾಸವಿರಬೇಕು. ಒಟ್ಟು ಹನ್ನೆರಡು ದಿವಸಗಳ ವ್ರತವಿದೆ. ಇದಕ್ಕೆ ಪ್ರಾಜಾಪತ್ಯಕೃಚ್ಛ್ರವೆನ್ನುತ್ತಾರೆ. (ಭಾರತ ದರ್ಶನ)

[6] ಋತಂ ಚ ಸತ್ಯಂ ಚಾಭೀದ್ಧಾತ್ತಪಸೋಽಧ್ಯಜಾಯತ| ತತೋ ರಾತ್ರಿರಜಾಯತ ತತಃ ಸಮುದ್ರೋ ಆರ್ಣವಃ| ಸಮುದ್ರಾದರ್ಣವಾದಧಿಸಂವತ್ಸರೋ ಅಜಾಯತ| ಆಹೋರಾತ್ರಾಣಿ ವಿದಧದ್ವಿಶ್ವಸ್ಯ ಮಿಷತೋ ವಶೀ| ಸೂರ್ಯಾಚಂದ್ರಮಸೌ ಧಾತಾಯಥಾಪೂರ್ವಮಕಲ್ಪಯತ್| ದಿವಂ ಚ ಪೃಥಿವೀಂ ಜಾಂತರಿಕ್ಷಮಥೋಸುವಃ|| (ಭಾರತ ದರ್ಶನ)

[7] ಅಶ್ವತ್ಥಪತ್ರನಾಡೀವದ್ದ್ವಿಸಪ್ತತಿಶತಾಧಿಕಾ| ನಾಡೀ ಮನೋವಹೇತ್ಯುಕ್ತಂ ಯೋಗಶಾಸ್ತ್ರವಿಶಾರದೈಃ|| (ನಾಡೀಶಾಸ್ತ್ರ) ಅಶ್ವತ್ಥದ ಎಲೆಯಲ್ಲಿ ಕಾಣುವ ನಾರುಗಳಂತೆ ಸೂಕ್ಷ್ಮಾತಿಸೂಕ್ಷ್ಮದ 127ಕ್ಕಿಂತಲೂ ಹೆಚ್ಚು ನರಗಳ ಸಮೂಹಕ್ಕೆ ಮನೋವಹಾ ಎಂದು ಹೆಸರು. (ಭಾರತ ದರ್ಶನ)

[8] ನಿತ್ಯಂ ಮಂತ್ರಸಿದ್ಧಂ (ಭಾರತ ದರ್ಶನ/ಗೀತಾ ಪ್ರೆಸ್).

Comments are closed.