Shanti Parva: Chapter 206

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೬

ಜೀವೋತ್ಪತ್ತಿಯ ವರ್ಣನೆ; ದೋಷ-ಬಂಧನಗಳ ಮುಕ್ತಿಗೋಸ್ಕರ ವಿಷಯಾಸಕ್ತಿಯನ್ನು ತ್ಯಜಿಸಲು ಉಪದೇಶ (1-21).

12206001 ಗುರುರುವಾಚ|

12206001a ರಜಸಾ ಸಾಧ್ಯತೇ ಮೋಹಸ್ತಮಸಾ ಚ ನರರ್ಷಭ|

12206001c ಕ್ರೋಧಲೋಭೌ ಭಯಂ ದರ್ಪ ಏತೇಷಾಂ ಸಾಧನಾಚ್ಚುಚಿಃ||

12206002a ಪರಮಂ ಪರಮಾತ್ಮಾನಂ ದೇವಮಕ್ಷಯಮವ್ಯಯಮ್|

12206002c ವಿಷ್ಣುಮವ್ಯಕ್ತಸಂಸ್ಥಾನಂ ವಿಶಂತೇ[1] ದೇವಸತ್ತಮಮ್||

ಗುರುವು ಹೇಳಿದನು: “ನರರ್ಷಭ! ರಜೋಗುಣದಿಂದ ಮೋಹವುಂಟಾಗುತ್ತದೆ. ತಮೋಗುಣದಿಂದ ಕ್ರೋಧ, ಲಾಭ, ಭಯ ಮತ್ತು ದರ್ಪಗಳುಂಟಾಗುತ್ತವೆ. ಶುಚಿತ್ವವು ಪರಮ ಪರಮಾತ್ಮ ದೇವ ಅಕ್ಷಯ ಅವ್ಯಯ ವಿಷ್ಣು ಅವ್ಯಕ್ತ ದೇವಸತ್ತಮನ ಸಂಸ್ಥಾನವನ್ನು ಪ್ರವೇಶಿಸಲು ಸಾಧಕವಾಗುತ್ತದೆ.

12206003a ತಸ್ಯ ಮಾಯಾವಿದಗ್ಧಾಂಗಾ ಜ್ಞಾನಭ್ರಷ್ಟಾ ನಿರಾಶಿಷಃ[2]|

12206003c ಮಾನವಾ ಜ್ಞಾನಸಂಮೋಹಾತ್ತತಃ ಕಾಮಂ[3] ಪ್ರಯಾಂತಿ ವೈ||

ಅವನದೇ ಮಾಯೆಯಿಂದ ಆವೃತರಾದ ಮನುಷ್ಯರು ಜ್ಞಾನಭ್ರಷ್ಟರೂ ಗುರಿಯಿಲ್ಲವರೂ ಆಗುತ್ತಾರೆ. ಜ್ಞಾನಸಂಮೋಹದಿಂದಾಗಿ ಅವರು ಕಾಮದೆಡೆ ಸೆಳೆಯಲ್ಪಡುತ್ತಾರೆ.

12206004a ಕಾಮಾತ್ಕ್ರೋಧಮವಾಪ್ಯಾಥ ಲೋಭಮೋಹೌ ಚ ಮಾನವಾಃ|

12206004c ಮಾನದರ್ಪಾದಹಂಕಾರಮಹಂಕಾರಾತ್ತತಃ ಕ್ರಿಯಾಃ||

ಮಾನವರು ಕಾಮದಿಂದ ಕ್ರೋಧವನ್ನೂ, ಲೋಭ-ಮೋಹಗಳನ್ನೂ ಪಡೆದುಕೊಳ್ಳುತ್ತಾರೆ. ಮಾನ-ದರ್ಪಗಳಿಂದ ಅಹಂಕಾರ ಮತ್ತು ಅಹಂಕಾರದಿಂದಲೇ ಕ್ರಿಯೆಗಳನ್ನು ಮಾಡುತ್ತಿರುತ್ತಾರೆ.

12206005a ಕ್ರಿಯಾಭಿಃ ಸ್ನೇಹಸಂಬಂಧಃ ಸ್ನೇಹಾಚ್ಚೋಕಮನಂತರಮ್|

12206005c ಸುಖದುಃಖಸಮಾರಂಭಾಜ್ಜನ್ಮಾಜನ್ಮಕೃತಕ್ಷಣಾಃ||

ಕ್ರಿಯೆಗಳಿಂದ ಸ್ನೇಹಸಂಬಂಧ ಮತ್ತು ನಂತರ ಸ್ನೇಹದಿಂದ ಶೋಕ. ಹೀಗೆ ಸುಖ-ದುಃಖಗಳನ್ನುಂಟುಮಾಡುವ ಕ್ರಿಯೆಗಳಲ್ಲಿ ತೊಡಗುವುದರಿಂದ ಜನ್ಮ-ಮೃತ್ಯುಗಳನ್ನು ಅನುಭವಿಸುತ್ತಿರುತ್ತಾರೆ.

12206006a ಜನ್ಮತೋ ಗರ್ಭವಾಸಂ ತು ಶುಕ್ರಶೋಣಿತಸಂಭವಮ್|

12206006c ಪುರೀಷಮೂತ್ರವಿಕ್ಲೇದಶೋಣಿತಪ್ರಭವಾವಿಲಮ್||

ಜನ್ಮವಾದರೋ ಶುಕ್ರ-ಶೋಣಿತಗಳ ಮಿಶ್ರಣದಿಂದುಂಟಾದ ಗರ್ಭವಾಸದಿಂದ ಆಗುತ್ತದೆ. ಆಗ ಜೀವಿಗೆ ಮಲ-ಮೂತ್ರಗಳಿಂದ ನಾರುತ್ತಿರುವ ರಕ್ತದ ವಿಕಾರದಿಂದ ಮಲಿನವಾಗಿರುವ ಗರ್ಭದಲ್ಲಿರಬೇಕಾಗುತ್ತದೆ.

12206007a ತೃಷ್ಣಾಭಿಭೂತಸ್ತೈರ್ಬದ್ಧಸ್ತಾನೇವಾಭಿಪರಿಪ್ಲವನ್|

12206007c ಸಂಸಾರತಂತ್ರವಾಹಿನ್ಯಸ್ತತ್ರ ಬುಧ್ಯೇತ ಯೋಷಿತಃ||

ತೃಷ್ಣೆಗಳಿಂದ ಪೀಡಿತನಾಗಿ ಅವುಗಳಿಂದ ಬಂಧಿಸಲ್ಪಟ್ಟು ಅವುಗಳನ್ನೇ ಅನುಸರಿಸಿ ಹೋಗುವ ಈ ಸಂಸಾರದ ತಂತುವನ್ನು ಸ್ತ್ರೀಯರೇ ನೇಯುತ್ತಿರುತ್ತಾರೆ ಎಂದು ತಿಳಿಯಬೇಕು.

12206008a ಪ್ರಕೃತ್ಯಾ ಕ್ಷೇತ್ರಭೂತಾಸ್ತಾ ನರಾಃ ಕ್ಷೇತ್ರಜ್ಞಲಕ್ಷಣಾಃ|

12206008c ತಸ್ಮಾದೇತಾ ವಿಶೇಷೇಣ ನರೋಽತೀಯುರ್ವಿಪಶ್ಚಿತಃ[4]||

ಪ್ರಕೃತಿಗೆ ಸಮಾನರಾದ ಸ್ತ್ರೀಯರು ಕ್ಷೇತ್ರಸ್ಥಾನದಲ್ಲಿರುತ್ತಾರೆ. ಪುರುಷರು ಕ್ಷೇತ್ರಜ್ಞನ ಲಕ್ಷಣವುಳ್ಳವರಾಗುತ್ತಾರೆ. ಆದುದರಿಂದ ವಿದ್ವಾಂಸ ಪುರುಷರು ಸ್ತ್ರೀಯರ ಹಿಂದೆ ವಿಶೇಷವಾಗಿ ಹೋಗಬಾರದು.

12206009a ಕೃತ್ಯಾ ಹ್ಯೇತಾ ಘೋರರೂಪಾ ಮೋಹಯಂತ್ಯವಿಚಕ್ಷಣಾನ್|

12206009c ರಜಸ್ಯಂತರ್ಹಿತಾ ಮೂರ್ತಿರಿಂದ್ರಿಯಾಣಾಂ ಸನಾತನೀ||

ಅವರು ಘೋರರೂಪೀ ಕೃತ್ಯೆ[5]ಗೆ ಸಮಾನರು. ವಿದ್ವಾಂಸರಲ್ಲದವರನ್ನು ಮೋಹಗೊಳಿಸುತ್ತಾರೆ. ಇಂದ್ರಿಯಗಳಲ್ಲಿ ವಿಕಾರಗಳನ್ನುಂಟುಮಾಡುವ ಸನಾತನೀ ನಾರೀಮೂರ್ತಿಯು ರಜೋಗುಣದಲ್ಲಿ ಅಡಗಿಕೊಂಡಿರುತ್ತದೆ.

12206010a ತಸ್ಮಾತ್ತರ್ಷಾತ್ಮಕಾದ್ರಾಗಾದ್ಬೀಜಾಜ್ಜಾಯಂತಿ ಜಂತವಃ|

12206010c ಸ್ವದೇಹಜಾಸ್ವಸಂಜ್ಞಾನ್ಯದ್ವದಂಗಾತ್ಕೃಮೀಂಸ್ತ್ಯಜೇತ್|

12206010e ಸ್ವಸಂಜ್ಞಾಸ್ವಜಾಂಸ್ತದ್ವತ್ಸುತಸಂಜ್ಞಾನ್ಕೃಮೀಂಸ್ತ್ಯಜೇತ್||

ಅವರ ಆಕರ್ಷಣೆ-ಅನುರಾಗದ ಕಾರಣದಿಂದಲೇ ಪುರುಷನ ವೀರ್ಯ ಮತ್ತು ಜೀವಿಗಳು ಹುಟ್ಟುತ್ತವೆ. ತನ್ನ ದೇಹದಲ್ಲಿ ಹುಟ್ಟಿದ ಕ್ರಿಮಿಗಳನ್ನು ತನ್ನವಲ್ಲವೆಂದು ಪರಿತ್ಯಜಿಸುವಂತೆ ತನ್ನವೆಂದು ಸಂಜ್ಞೆಗಳನ್ನು ಪಡೆದಿದ್ದರೂ ತನ್ನದಾಗಿರದ ಪುತ್ರನಾಮಕ ಕ್ರಿಮಿಗಳನ್ನೂ ಪರಿತ್ಯಜಿಸಬೇಕು.

12206011a ಶುಕ್ರತೋ ರಸತಶ್ಚೈವ ಸ್ನೇಹಾಜ್ಜಾಯಂತಿ[6] ಜಂತವಃ|

12206011c ಸ್ವಭಾವಾತ್ಕರ್ಮಯೋಗಾದ್ವಾ ತಾನುಪೇಕ್ಷೇತ ಬುದ್ಧಿಮಾನ್||

ವೀರ್ಯ, ರಸ ಮತ್ತು ಸ್ನೇಹಗಳಿಂದ ಜಂತುಗಳು ಸ್ವಭಾವತಃ ಅಥವಾ ಕರ್ಮಯೋಗದಿಂದ ಹುಟ್ಟುತ್ತವೆ. ಬುದ್ಧಿವಂತನು ಅವುಗಳನ್ನು ಉಪೇಕ್ಷಿಸಬೇಕು.

12206012a ರಜಸ್ತಮಸಿ ಪರ್ಯಸ್ತಂ ಸತ್ತ್ವಂ ತಮಸಿ ಸಂಸ್ಥಿತಮ್[7]|

12206012c ಜ್ಞಾನಾಧಿಷ್ಠಾನಮಜ್ಞಾನಂ[8] ಬುದ್ಧ್ಯಹಂಕಾರಲಕ್ಷಣಮ್||

ರಜವು ತಮಸ್ಸಿನಲ್ಲಿ ಆಶ್ರಿತವಾಗಿದೆ ಮತ್ತು ಸತ್ತ್ವವೂ ತಮಸ್ಸಿನಲ್ಲಿಯೇ ನೆಲೆಸಿದೆ. ಜ್ಞಾನವು ಅಜ್ಞಾನದ ಅಧಿಷ್ಠಾನವು ಮತ್ತು ಬುದ್ಧಿಯು ಅಹಂಕಾರದ ಲಕ್ಷಣವು.

12206013a ತದ್ಬೀಜಂ ದೇಹಿನಾಮಾಹುಸ್ತದ್ಬೀಜಂ ಜೀವಸಂಜ್ಞಿತಮ್|

12206013c ಕರ್ಮಣಾ ಕಾಲಯುಕ್ತೇನ ಸಂಸಾರಪರಿವರ್ತಕಮ್||

ದೇಹಿಗಳಲ್ಲಿರುವ ಅದನ್ನು ಬೀಜವೆಂದು ಹೇಳುತ್ತಾರೆ. ಆ ಬೀಜವನ್ನು ಜೀವ ಎಂದು ಕರೆಯುತ್ತಾರೆ. ಅದೇ ಕರ್ಮಗಳಿಂದ ಕಾಲಯುಕ್ತನಾಗಿ ಸಂಸಾರಚಕ್ರದಲ್ಲಿ ಸಿಲುಕಿ ತಿರುಗುತ್ತಿರುತ್ತದೆ.

12206014a ರಮತ್ಯಯಂ ಯಥಾ ಸ್ವಪ್ನೇ ಮನಸಾ ದೇಹವಾನಿವ|

12206014c ಕರ್ಮಗರ್ಭೈರ್ಗುಣೈರ್ದೇಹೀ ಗರ್ಭೇ ತದುಪಪದ್ಯತೇ||

ಮನಸ್ಸು ಸ್ವಪ್ನದಲ್ಲಿ ಹೇಗೆ ರಮಿಸುತ್ತದೆಯೋ ಹಾಗೆ ಜೀವವು ಈ ದೇಹದಲ್ಲಿ ರಮಿಸುತ್ತದೆ. ಕರ್ಮಗಳಲ್ಲಿರುವ ಗರ್ಭಗುಣಗಳಿಗೆ ತಕ್ಕಂತಹ ಗರ್ಭವನ್ನು ಜೀವವು ಪಡೆದುಕೊಳ್ಳುತ್ತದೆ[9].

12206015a ಕರ್ಮಣಾ ಬೀಜಭೂತೇನ ಚೋದ್ಯತೇ ಯದ್ಯದಿಂದ್ರಿಯಮ್|

12206015c ಜಾಯತೇ ತದಹಂಕಾರಾದ್ರಾಗಯುಕ್ತೇನ ಚೇತಸಾ||

ಬೀಜಭೂತವಾದ ಕರ್ಮಗಳು ಇಂದ್ರಿಯಗಳನ್ನು ಪ್ರಚೋದಿಸುತ್ತವೆ. ರಾಗಯುಕ್ತ ಚೇತನದಿಂದ ಅಹಂಕಾರವು ಹುಟ್ಟಿಕೊಳ್ಳುತ್ತದೆ.

12206016a ಶಬ್ದರಾಗಾಚ್ಚ್ರೋತ್ರಮಸ್ಯ ಜಾಯತೇ ಭಾವಿತಾತ್ಮನಃ|

12206016c ರೂಪರಾಗಾತ್ತಥಾ ಚಕ್ಷುರ್ಘ್ರಾಣಂ ಗಂಧಚಿಕೀರ್ಷಯಾ||

ಶಬ್ದರಾಗದಿಂದ ಜೀವಕ್ಕೆ ಕಿವಿಗಳು ಹುಟ್ಟಿಕೊಳ್ಳುತ್ತವೆ. ರೂಪರಾಗದಿಂದ ಅವನ ಕಣ್ಣುಗಳು ಮತ್ತು ಗಂಧದ ಆಸೆಯಿಂದ ಮೂಗು ಹುಟ್ಟಿಕೊಳ್ಳುತ್ತವೆ.

12206017a ಸ್ಪರ್ಶನೇಭ್ಯಸ್ತಥಾ[10] ವಾಯುಃ ಪ್ರಾಣಾಪಾನವ್ಯಪಾಶ್ರಯಃ|

12206017c ವ್ಯಾನೋದಾನೌ ಸಮಾನಶ್ಚ ಪಂಚಧಾ ದೇಹಯಾಪನಾ||

ಸ್ವರ್ಶನವೂ ಮತ್ತು ಶರೀರಯತ್ರೆಗಾಗಿ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಐದು ವಾಯುಗಳು ಹುಟ್ಟಿಕೊಳ್ಳುತ್ತವೆ.

12206018a ಸಂಜಾತೈರ್ಜಾಯತೇ ಗಾತ್ರೈಃ ಕರ್ಮಜೈರ್ಬ್ರಹ್ಮಣಾ[11] ವೃತಃ|

12206018c ದುಃಖಾದ್ಯಂತೈರ್ದುಃಖಮಧ್ಯೈರ್ನರಃ ಶಾರೀರಮಾನಸೈಃ||

ಹುಟ್ಟುವಾಗಲೇ ಜೀವವು ಕರ್ಮಜ ಶರೀರಗಳಿಂದ ಹುಟ್ಟುತ್ತದೆ. ಜೀವವು ಪುನಃ ಕರ್ಮಗಳಲ್ಲಿಯೇ ತೊಡಗುತ್ತದೆ. ಹೀಗೆ ಮನುಷ್ಯನು ಪ್ರಾರಂಭದಲ್ಲಿ, ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಶಾರೀರಿಕ ಮಾನಸಿಕ ದುಃಖಗಳಿಗೊಳಗಾಗುತ್ತಾನೆ.

12206019a ದುಃಖಂ ವಿದ್ಯಾದುಪಾದಾನಾದಭಿಮಾನಾಚ್ಚ ವರ್ಧತೇ|

12206019c ತ್ಯಾಗಾತ್ತೇಭ್ಯೋ ನಿರೋಧಃ ಸ್ಯಾನ್ನಿರೋಧಜ್ಞೋ ವಿಮುಚ್ಯತೇ||

ದೇಹಧಾರಣೆ ಮಾಡುವುದರಿಂದ ದುಃಖವು ಪ್ರಾಪ್ತವಾಗುತ್ತದೆ ಮತ್ತು ಶರೀರದ ಮೇಲಿನ ಅಭಿಮಾನದಿಂದ ಆ ದುಃಖವು ಮತ್ತಷ್ಟು ಹೆಚ್ಚುತ್ತದೆ. ತ್ಯಾಗದಿಂದ ದುಃಖವನ್ನು ನಿವಾರಿಸಬಹುದು ಮತ್ತು ತ್ಯಾಗವನ್ನು ತಿಳಿದವನು ಮುಕ್ತನಾಗುತ್ತಾನೆ.

12206020a ಇಂದ್ರಿಯಾಣಾಂ ರಜಸ್ಯೇವ ಪ್ರಭವಪ್ರಲಯಾವುಭೌ|

12206020c ಪರೀಕ್ಷ್ಯ ಸಂಚರೇದ್ವಿದ್ವಾನ್ಯಥಾವಚ್ಚಾಸ್ತ್ರಚಕ್ಷುಷಾ||

ಇಂದ್ರಿಯಗಳ ಉತ್ಪತ್ತಿ ಮತ್ತು ಲಯ – ಎರಡೂ ರಜೋಗುಣದಿಂದಲೇ ಉಂಟಾಗುತ್ತದೆ. ವಿದ್ವಾಂಸನು ಶಾಸ್ತ್ರದೃಷ್ಟಿಯಿಂದ ಇದನ್ನು ಚೆನ್ನಾಗಿ ಪರೀಕ್ಷಿಸಿ ಯಥೋಚಿತವಾಗಿ ನಡೆದುಕೊಳ್ಳಬೇಕು.

12206021a ಜ್ಞಾನೇಂದ್ರಿಯಾಣೀಂದ್ರಿಯಾರ್ಥಾನ್ನೋಪಸರ್ಪಂತ್ಯತರ್ಷುಲಮ್|

12206021c ಜ್ಞಾತೈಶ್ಚ ಕಾರಣೈರ್ದೇಹೀ[12] ನ ದೇಹಂ ಪುನರರ್ಹತಿ||

ಆಸೆಯೇ ಇಲ್ಲದವನಿಗೆ ಜ್ಞಾನೇಂದ್ರಿಯಗಳು ಇಂದ್ರಿಯಾರ್ಥಗಳನ್ನು (ವಿಷಯಗಳನ್ನು) ಒದಗಿಸಿಕೊಡುವುದಿಲ್ಲ. ದೇಹಧಾರಣೆಗೆ ಕಾರಣವನ್ನು ತಿಳಿದುಕೊಂಡವನು ಪುನಃ ಶರೀರಧಾರಣೆ ಮಾಡಬೇಕಾಗುವುದಿಲ್ಲ.[13]

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ಷಡಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಆರನೇ ಅಧ್ಯಾಯವು.

[1] ವಿದುಸ್ತಂ (ಭಾರತ ದರ್ಶನ/ಗೀತಾ ಪ್ರೆಸ್).

[2] ನಷ್ಟಜ್ಞಾನಾ ವಿಚೇತಸಃ| (ಭಾರತ ದರ್ಶನ/ಗೀತಾ ಪ್ರೆಸ್).

[3] ಕ್ರೋಧಂ (ಭಾರತ ದರ್ಶನ/ಗೀತಾ ಪ್ರೆಸ್).

[4] ನರೋಽತೀಯಾದ್ವಿಶೇಷತಃ| (ಭಾರತ ದರ್ಶನ/ಗೀತಾ ಪ್ರೆಸ್).

[5] ಶೂನ್ಯ ದೇವತೆ (ಭಾರತ ದರ್ಶನ/ಗೀತಾ ಪ್ರೆಸ್).

[6] ದೇಹಾಜ್ಜಾಯಂತಿ (ಭಾರತ ದರ್ಶನ/ಗೀತಾ ಪ್ರೆಸ್)

[7] ಸತ್ತ್ವಂ ಚ ರಜಸಿ ಸ್ಥಿತಮ್| (ಭಾರತ ದರ್ಶನ/ಗೀತಾ ಪ್ರೆಸ್).

[8] ಜ್ಞಾನಾಧಿಷ್ಠಾನಮವ್ಯಕ್ತಂ (ಭಾರತ ದರ್ಶನ/ಗೀತಾ ಪ್ರೆಸ್).

[9] ಯಾವ ರೀತಿಯಲ್ಲಿ ಸ್ವಪ್ನಾವಸ್ಥೆಯಲ್ಲಿದ್ದಾಗ ಜೀವನು ಮನಸ್ಸಿನ ಮೂಲಕ ಮತ್ತೊಂದು ಶರೀರವನ್ನು ಧರಿಸಿದವನಂತೆ ಕ್ರೀಡೆಯಾಡುತ್ತಾನೋ ಹಾಗೆ ಕರ್ಮಗರ್ಭಿತ ಗುಣಗಳಿಂದ ಕೂಡಿದ ಜೀವನು ತಾಯಿಯ ಗರ್ಭದಲ್ಲಿ ಸ್ವಪ್ನದಂತಹ ಸ್ಥಿತಿಯನ್ನು ಹೊಂದುತ್ತಾನೆ (ಭಾರತ ದರ್ಶನ).

[10] ಸ್ಪರ್ಶನೇ ತ್ವಕ್ತಥಾ ವಾಯುಃ (ಭಾರತ ದರ್ಶನ/ಗೀತಾ ಪ್ರೆಸ್).

[11] ಕರ್ಮಜೈರ್ವರ್ಷ್ಮಣಾ (ಭಾರತ ದರ್ಶನ/ಗೀತಾ ಪ್ರೆಸ್).

[12] ಹೀನಶ್ಚ ಕರಣೈರ್ದೇಹೀ (ಭಾರತ ದರ್ಶನ/ಗೀತಾ ಪ್ರೆಸ್).

[13] Even if one accomplishes the objective of satisfying the senses, a person who knows can use the senses of knowledge to determine the reasons. Such a being does not have to accept a body again. (Bibek Debroy)

Comments are closed.