Shanti Parva: Chapter 205

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೫

ನಿಷಿದ್ಧಾಚರಣೆಗಳ ತ್ಯಾಗ; ಸತ್ತ್ವರಜಸ್ತಮೋಗುಣಗಳ ಕಾರ್ಯ ಮತ್ತು ಸತ್ತ್ವಗುಣವನ್ನು ಸೇವಿಸಬೇಕೆಂಬ ಉಪದೇಶ (1-33).

12205001 ಗುರುರುವಾಚ|

12205001a  ಪ್ರವೃತ್ತಿಲಕ್ಷಣೋ ಧರ್ಮೋ ಯಥಾಯಮುಪಪದ್ಯತೇ|

12205001c  ತೇಷಾಂ ವಿಜ್ಞಾನನಿಷ್ಠಾನಾಮನ್ಯತ್ತತ್ತ್ವಂ ನ ರೋಚತೇ||

ಗುರುವು ಹೇಳಿದನು: “ಪ್ರವೃತ್ತಿಲಕ್ಷಣಗಳಿರುವವರು ಕರ್ಮದಿಂದಲೇ ಧರ್ಮವನ್ನು ಪಡೆದುಕೊಳ್ಳಬಹುದೆಂದು ತಿಳಿದಿರುತ್ತಾರೆ. ಆದರೆ ವಿಜ್ಞಾನನಿಷ್ಠರು ಅದರಲ್ಲಿ ರುಚಿಯನ್ನಿಟ್ಟುಕೊಂಡಿರುವುದಿಲ್ಲ.[1]

12205002a  ದುರ್ಲಭಾ ವೇದವಿದ್ವಾಂಸೋ ವೇದೋಕ್ತೇಷು ವ್ಯವಸ್ಥಿತಾಃ|

12205002c  ಪ್ರಯೋಜನಮತಸ್ತ್ವತ್ರ[2] ಮಾರ್ಗಮಿಚ್ಚಂತಿ ಸಂಸ್ತುತಮ್||

ವೇದವಿದ್ವಾಂಸರು ಮತ್ತು ವೇದೋಕ್ತ ಕರ್ಮಗಳಲ್ಲಿ ವ್ಯವಸ್ಥಿತರಾದವರು ದುರ್ಲಭರು. ಆದರೆ ಬುದ್ಧಿವಂತರು ಹೆಚ್ಚು ಸಂಸ್ತುತವಾದ ಮತ್ತು ಹೆಚ್ಚು ಪ್ರಯೋಜನಕಾರಿಯಾದ ಮೋಕ್ಷಮಾರ್ಗವನ್ನೇ ಇಷ್ಟಪಡುತ್ತಾರೆ[3].

12205003a  ಸದ್ಭಿರಾಚರಿತತ್ವಾತ್ತು ವೃತ್ತಮೇತದಗರ್ಹಿತಮ್|

12205003c  ಇಯಂ ಸಾ ಬುದ್ಧಿರನ್ಯೇಯಂ ಯಯಾ ಯಾತಿ ಪರಾಂ ಗತಿಮ್||

ಸತ್ಪುರುಷರು ಯಾವಾಗಲೂ ದೋಷರಹಿತವಾದ ಮೋಕ್ಷಮಾರ್ಗವನ್ನೇ ಅನುಸರಿಸುತ್ತಾರೆ. ಮೋಕ್ಷಮಾರ್ಗದಲ್ಲಿ ಹೋಗಲು ನಿವೃತ್ತಾತ್ಮಕ ಬುದ್ಧಿಯಿರಬೇಕು. ಅಂಥವನು ಪರಮ ಗತಿಯನ್ನು ಹೊಂದುತ್ತಾನೆ.

12205004a  ಶರೀರವಾನುಪಾದತ್ತೇ ಮೋಹಾತ್ಸರ್ವಪರಿಗ್ರಹಾನ್|

12205004c  ಕಾಮಕ್ರೋಧಾದಿಭಿರ್ಭಾವೈರ್ಯುಕ್ತೋ ರಾಜಸತಾಮಸೈಃ||

ಶರೀರವನ್ನು ಪಡೆದ ಎಲ್ಲವೂ ಮೋಹದ ಸೆರೆಯಲ್ಲಿರುತ್ತದೆ. ಕಾಮ-ಕ್ರೋಧಾದಿ ಭಾವಗಳಿಂದ ಹಾಗೂ ರಾಜಸ-ತಾಮಸ ಗುಣಗಳಿಂದ ಕೂಡಿರುತ್ತದೆ.[4]

12205005a  ನಾಶುದ್ಧಮಾಚರೇತ್ತಸ್ಮಾದಭೀಪ್ಸನ್ದೇಹಯಾಪನಮ್|

12205005c ಕರ್ಮಣೋ ವಿವರಂ ಕುರ್ವನ್ನ ಲೋಕಾನಾಪ್ನುಯಾಚ್ಚುಭಾನ್||

ದೇಹಬಂಧನದಿಂದ ಮುಕ್ತನಾಗ ಬಯಸುವವನು ಅಶುದ್ಧ ಆಚರಣೆಗಳನ್ನು ಮಾಡಬಾರದು. ನಿಷ್ಕಾಮ ಕರ್ಮಗಳ ಮೂಲಕ ಮೋಕ್ಷದ ಬಾಗಿಲನ್ನು ತೆರೆದುಕೊಳ್ಳಬೇಕು. ಕಾಮ್ಯ ಕರ್ಮಗಳ ಮೂಲಕ ಸ್ವರ್ಗವೇ ಮೊದಲಾದ ಶುಭ ಲೋಕಗಳ ಇಚ್ಛೆಯನ್ನಿಟ್ಟುಕೊಳ್ಳಬಾರದು[5].

12205006a  ಲೋಹಯುಕ್ತಂ ಯಥಾ ಹೇಮ ವಿಪಕ್ವಂ ನ ವಿರಾಜತೇ|

12205006c  ತಥಾಪಕ್ವಕಷಾಯಾಖ್ಯಂ ವಿಜ್ಞಾನಂ ನ ಪ್ರಕಾಶತೇ||

ಲೋಹಯುಕ್ತ ಚಿನ್ನವು ಬೆಂಕಿಯಲ್ಲಿ ಸುಟ್ಟು ಶುದ್ಧವಾಗದೇ ತನ್ನ ಸ್ವರೂಪದಿಂದ ಹೇಗೆ ಪ್ರಕಾಶಿತಗೊಳ್ಳುವುದಿಲ್ಲವೋ ಹಾಗೆ ಚಿತ್ತದ ರಾಗಾದಿ ದೋಷಗಳನ್ನು ನಾಶಪಡಿಸದೆಯೇ ಜ್ಞಾನಸ್ವರೂಪ ಆತ್ಮನು ಪ್ರಕಾಶಿತನಾಗುವುದಿಲ್ಲ.[6]

12205007a  ಯಶ್ಚಾಧರ್ಮಂ ಚರೇನ್ಮೋಹಾತ್ಕಾಮಲೋಭಾವನು ಪ್ಲವನ್|

12205007c ಧರ್ಮ್ಯಂ ಪಂಥಾನಮಾಕ್ರಮ್ಯ ಸಾನುಬಂಧೋ ವಿನಶ್ಯತಿ||

ಮೋಹದಿಂದ ಕಾಮ-ಲೋಭವಶನಾಗಿ ಅಧರ್ಮವನ್ನು ಆಚರಿಸುವವನು ಮತ್ತು ಧರ್ಮಮಾರ್ಗವನ್ನು ಉಲ್ಲಂಘಿಸುವವನು ಮತ್ತೆ ಮತ್ತೆ ನಾಶಹೊಂದುತ್ತಾನೆ.[7]

12205008a ಬ್ದಾದೀನ್ವಿಷಯಾಂಸ್ತಸ್ಮಾದಸಂರಾಗಾದನುಪ್ಲವೇತ್|

12205008c ಕ್ರೋಧಹರ್ಷೌ ವಿಷಾದಶ್ಚ ಜಾಯಂತೇ ಹಿ ಪರಸ್ಪರಮ್||

ಆದುದರಿಂದ ರಾಗವಶನಾಗಿ ಶಬ್ದಾದಿ ವಿಷಯಗಳನ್ನು ಸೇವಿಸುತ್ತಿರಬಾರದು. ಏಕೆಂದರೆ ವಿಷಯಾಸಕ್ತಿಯಿಂದ ಕ್ರೋಧ-ಹರ್ಷ-ವಿಷಾದಗಳೆಂಬ ರಾಜಸಿಕ, ಸಾತ್ತ್ವಿಕ ಮತ್ತು ತಾಮಸಿಕ ಭಾವಗಳು ಒಂದರ ಮೇಲೆ ಒಂದರಂತೆ ಹುಟ್ಟಿಕೊಳ್ಳುತ್ತವೆ[8].

12205009a ಪಂಚಭೂತಾತ್ಮಕೇ ದೇಹೇ ಸತ್ತ್ವರಾಜಸತಾಮಸೇ|

12205009c ಕಮಭಿಷ್ಟುವತೇ ಚಾಯಂ ಕಂ ವಾ ಕ್ರೋಶತಿ ಕಿಂ ವದೇತ್||

ಪಂಚಭೂತಾತ್ಮಿಕವಾದ ಮತ್ತು ಸತ್ತ್ವರಜತಮೋಗುಣಗಳಿಂದ ಯುಕ್ತವಾದ ಈ ದೇಹದಲ್ಲಿ ವಾಸಿಸುವ ನಿರ್ವಿಕಾರ ಜೀವಾತ್ಮವು ಏನೆಂದು ಹೇಳಿ ಯಾರನ್ನು ನಿಂದಿಸಬಲ್ಲದು ಅಥವಾ ಯಾರನ್ನು ಸ್ತುತಿಸಬಲ್ಲದು?

12205010a ಸ್ಪರ್ಶರೂಪರಸಾದ್ಯೇಷು ಸಂಗಂ ಗಚ್ಚಂತಿ ಬಾಲಿಶಾಃ|

12205010c ನಾವಗಚ್ಚಂತ್ಯವಿಜ್ಞಾನಾದಾತ್ಮಜಂ ಪಾರ್ಥಿವಂ ಗುಣಮ್||

ಅಜ್ಞಾನಿಯು ಸ್ಪರ್ಶ, ರೂಪ, ಮತ್ತು ರಸಾದಿ ವಿಷಯಗಳಲ್ಲಿ ಆಸಕ್ತನಾಗಿರುತ್ತಾನೆ. ತನ್ನ ಶರೀರವು ಪೃಥ್ವಿಯ ವಿಕಾರವೆಂದು ಅವಿಜ್ಞಾನದ ಕಾರಣದಿಂದಾಗಿ ಅವನಿಗೆ ತಿಳಿದಿರುವುದಿಲ್ಲ.

12205011a ಮೃನ್ಮಯಂ ಶರಣಂ ಯದ್ವನ್ಮೃದೈವ ಪರಿಲಿಪ್ಯತೇ|

12205011c ಪಾರ್ಥಿವೋಽಯಂ ತಥಾ ದೇಹೋ ಮೃದ್ವಿಕಾರೈರ್ವಿಲಿಪ್ಯತೇ||

ಮಣ್ಣಿನ ಮನೆಯು ಮಣ್ಣಿನ ಲೇಪನದಿಂದಲೇ ಹೇಗೆ ಸುರಕ್ಷಿತವಾಗಿರುತ್ತದೆಯೋ ಹಾಗೆ ಪೃಥ್ವಿಯ ವಿಕಾರರೂಪವಾದ ಈ ಪಾರ್ಥಿವ ಶರೀರವು ಪೃಥ್ವಿಯ ವಿಕಾರಗಳಾದ ಅನ್ನಾದಿಗಳ ಸೇವನೆಯಿಂದಲೇ ನಾಶಹೊಂದದೇ ಸುರಕ್ಷಿತವಾಗಿರುತ್ತದೆ.[9]

12205012a ಮಧು ತೈಲಂ ಪಯಃ ಸರ್ಪಿರ್ಮಾಂಸಾನಿ ಲವಣಂ ಗುಡಃ|

12205012c ಧಾನ್ಯಾನಿ ಫಲಮೂಲಾನಿ ಮೃದ್ವಿಕಾರಾಃ ಸಹಾಂಭಸಾ||

ಜೇನುತುಪ್ಪ, ಎಣ್ಣೆ, ಹಾಲು, ತುಪ್ಪ, ಮಾಂಸ, ಉಪ್ಪು, ಬೆಲ್ಲ, ಧಾನ್ಯಗಳು ಮತ್ತು ಫಲಮೂಲಗಳು ಜಲದೊಂದಿಗಿನ ಪೃಥ್ವಿಯ ವಿಕಾರಗಳೇ ಆಗಿವೆ[10].

12205013a ಯದ್ವತ್ಕಾಂತಾರಮಾತಿಷ್ಠನ್ನೌತ್ಸುಕ್ಯಂ ಸಮನುವ್ರಜೇತ್|

12205013c ಶ್ರಮಾದಾಹಾರಮಾದದ್ಯಾದಸ್ವಾದ್ವಪಿ ಹಿ ಯಾಪನಮ್||

12205014a ತದ್ವತ್ಸಂಸಾರಕಾಂತಾರಮಾತಿಷ್ಠನ್ ಶ್ರಮತತ್ಪರಃ|

12205014c  ಯಾತ್ರಾರ್ಥಮದ್ಯಾದಾಹಾರಂ ವ್ಯಾಧಿತೋ ಭೇಷಜಂ ಯಥಾ||

ಅರಣ್ಯದಲ್ಲಿ ವಾಸಿಸುವ ತಪಸ್ವಿಯು ತುಂಬಾ ಹಸಿವೆಯಾದಾಗ ಸರಳವಾದ ಆಹಾರವನ್ನು, ಅದು ರುಚಿಯಾಗಿಲ್ಲದಿದ್ದರೂ, ಸೇವಿಸಿ ದೇಹಯಾಪನವನ್ನು ಮಾಡುವ ಹಾಗೆ ಸಂಸಾರವೆಂಬ ಈ ಅರಣ್ಯದಲ್ಲಿರುವವರು ಶ್ರಮವುಂಟಾದಾಗ ದೇಹಯಾತ್ರೆಗೆ ಎಷ್ಟುಬೇಕೋ ಅಷ್ಟೇ ಆಹಾರವನ್ನು ರೋಗಿಯು ಔಷಧಿಯನ್ನು ಸೇವಿಸುವಂತೆ ಚಿಕಿತ್ಸಾ ರೂಪದಲ್ಲಿ, ಸ್ವಲ್ಪ ಪ್ರಮಾಣದಲ್ಲಿ, ಸಿಹಿ-ಕಹಿಗಳಿಗೆ ಲಕ್ಷ್ಯ ಕೊಡದೇ ಸೇವಿಸಬೇಕು.

12205015a ಸತ್ಯಶೌಚಾರ್ಜವತ್ಯಾಗೈರ್ಯಶಸಾ[11] ವಿಕ್ರಮೇಣ ಚ|

12205015c ಕ್ಷಾಂತ್ಯಾ ಧೃತ್ಯಾ ಚ ಬುದ್ಧ್ಯಾ ಚ ಮನಸಾ ತಪಸೈವ ಚ||

12205016a ಭಾವಾನ್ಸರ್ವಾನ್ಯಥಾವೃತ್ತಾನ್ಸಂವಸೇತ ಯಥಾಕ್ರಮಮ್|

12205016c ಶಾಂತಿಮಿಚ್ಚನ್ನದೀನಾತ್ಮಾ ಸಂಯಚ್ಚೇದಿಂದ್ರಿಯಾಣಿ ಚ||

ಸತ್ಯ, ಶೌಚ, ಸರಳತೆ, ತ್ಯಾಗ, ಯಶಸ್ಸು, ವಿಕ್ರಮ, ಕ್ಷಮೆ, ಧೈರ್ಯ, ಬುದ್ಧಿ, ಮನಸ್ಸು ಮತ್ತು ತಪಸ್ಸುಗಳ ಮೂಲಕ ಸರ್ವ ವಿಷಯಾತ್ಮಕ ಭಾವಗಳ ಮೇಲೆ ಆಲೋಚನಾತ್ಮಕ ದೃಷ್ಟಿಯನ್ನಿಟ್ಟು ಶಾಂತಿಯ ಇಚ್ಛೆಯಿಂದ ತನ್ನ ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಳ್ಳಬೇಕು.

12205017a ಸತ್ತ್ವೇನ ರಜಸಾ ಚೈವ ತಮಸಾ ಚೈವ ಮೋಹಿತಾಃ|

12205017c ಚಕ್ರವತ್ಪರಿವರ್ತಂತೇ ಹ್ಯಜ್ಞಾನಾಜ್ಜಂತವೋ ಭೃಶಮ್||

ಅಜಿತೇಂದ್ರಿಯ ಜೀವವು ಅಜ್ಞಾನವಶದಿಂದಾಗಿ ಸತ್ತ್ವ, ರಜ ಮತ್ತು ತಮೋಗುಣಗಳಿಂದ ಮೋಹಿತಗೊಂಡು ನಿರಂತರವಾಗಿ ಚಕ್ರದಂತೆ ತಿರುಗುತ್ತಿರುತ್ತದೆ.

12205018a ತಸ್ಮಾತ್ಸಮ್ಯಕ್ಪರೀಕ್ಷೇತ ದೋಷಾಜ್ಞಾನಸಂಭವಾನ್|

12205018c ಅಜ್ಞಾನಪ್ರಭವಂ ನಿತ್ಯಮಹಂಕಾರಂ[12] ಪರಿತ್ಯಜೇತ್||

ಆದುದರಿಂದ ಅಜ್ಞಾನದಿಂದುಂಟಾಗುವ ದೋಷಗಳನ್ನು ಚೆನ್ನಾಗಿ ಪರಿಶೀಲಿಸಬೇಕು. ಮತ್ತು ಅಜ್ಞಾನದಿಂದುಂಟಾಗುವ ಅಹಂಕಾರವನ್ನು ನಿತ್ಯವೂ ಪರಿತ್ಯಜಿಸಬೇಕು.

12205019a ಮಹಾಭೂತಾನೀಂದ್ರಿಯಾಣಿ ಗುಣಾಃ ಸತ್ತ್ವಂ ರಜಸ್ತಮಃ|

12205019c ತ್ರೈಲೋಕ್ಯಂ ಸೇಶ್ವರಂ ಸರ್ವಮಹಂಕಾರೇ ಪ್ರತಿಷ್ಠಿತಮ್||

ಪಂಚಮಹಾಭೂತಗಳು, ಇಂದ್ರಿಯಗಳು, ಶಬ್ದಾದಿ ಗುಣಗಳು, ಸತ್ತ್ವ-ರಜ ಮತ್ತು ತಮೋಗುಣಗಳು ಹಾಗೂ ಲೋಕಪಾಲರ ಸಹಿತ ಮೂರೂ ಲೋಕಗಳೂ ಅಹಂಕಾರದಲ್ಲಿಯೇ ಪ್ರತಿಷ್ಠಿತವಾಗಿವೆ.

12205020a ಯಥೇಹ ನಿಯತಂ ಕಾಲೋ ದರ್ಶಯತ್ಯಾರ್ತವಾನ್ಗುಣಾನ್|

12205020c ತದ್ವದ್ಭೂತೇಷ್ವಹಂಕಾರಂ ವಿದ್ಯಾದ್ಭೂತಪ್ರವರ್ತಕಮ್||

ನಿಯತ ಕಾಲವು ಹೇಗೆ ಋತುಗಳ ಗುಣ-ಲಕ್ಷಣಗಳನ್ನು ತೋರಿಸುತ್ತದೆಯೋ ಹಾಗೆ ಅಹಂಕಾರವೇ ಜೀವಿಗಳ ಕರ್ಮಪ್ರವರ್ತಕ ಎಂದು ತಿಳಿಯಬೇಕು.

12205021a ಸಂಮೋಹಕಂ ತಮೋ ವಿದ್ಯಾತ್ ಕೃಷ್ಣಮಜ್ಞಾನಸಂಭವಮ್|

12205021c ಪ್ರೀತಿದುಃಖನಿಬದ್ಧಾಂಶ್ಚ ಸಮಸ್ತಾಂಸ್ತ್ರೀಥೋ ಗುಣಾನ್|

12205021e ಸತ್ತ್ವಸ್ಯ ರಜಸಶ್ಚೈವ ತಮಸಶ್ಚ ನಿಬೋಧ ತಾನ್||

ತಮೋಗುಣವು ಸಮ್ಮೋಹಕವೆಂದು ತಿಳಿಯಬೇಕು. ಅಜ್ಞಾನದಿಂದ ಹುಟ್ಟುವ ಅದು ಕಪ್ಪುಬಣ್ಣದ್ದಾಗಿದೆ. ಸಮಸ್ತ ಪ್ರೀತಿ-ದುಃಖಗಳೂ ಸತ್ತ್ವ, ರಜ ಮತ್ತು ತಮಗಳೆಂಬ ಮೂರು ಗುಣಗಳಿಗೆ ಸಂಬಂಧಿಸಿವೆ. ಅವುಗಳ ಕುರಿತು ಕೇಳು.

12205022a ಪ್ರಮೋಹೋ[13] ಹರ್ಷಜಃ ಪ್ರೀತಿರಸಂದೇಹೋ ಧೃತಿಃ ಸ್ಮೃತಿಃ|

12205022c ಏತಾನ್ಸತ್ತ್ವಗುಣಾನ್ವಿದ್ಯಾದಿಮಾನ್ರಾಜಸತಾಮಸಾನ್||

12205023a ಕಾಮಕ್ರೋಧೌ ಪ್ರಮಾದಶ್ಚ ಲೋಭಮೋಹೌ ಭಯಂ ಕ್ಲಮಃ|

12205023c ವಿಷಾದಶೋಕಾವರತಿರ್ಮಾನದರ್ಪಾವನಾರ್ಯತಾ||

ನಿರ್ಗೊಂದಲ, ಹರ್ಷ, ಪ್ರೀತಿ, ಅಸಂದೇಹ, ಧೃತಿ ಮತ್ತು ಸ್ಮೃತಿ – ಇವು ಸತ್ತ್ವಗುಣಗಳು ಎಂದು ತಿಳಿ. ಕಾಮ, ಕ್ರೋಧ, ಪ್ರಮಾದ, ಲೋಭ, ಮೋಹ, ಭಯ, ಆಯಾಸ, ವಿಷಾದ, ಶೋಕ, ಮಾನ, ದರ್ಪ, ಮತ್ತು ಅನಾರ್ಯತೆ ಇವು ರಜೋಗುಣ-ತಮೋಗುಣಗಳ ಕಾರ್ಯವೆಂದು ತಿಳಿಯಬೇಕು.

12205024a ದೋಷಾಣಾಮೇವಮಾದೀನಾಂ ಪರೀಕ್ಷ್ಯ ಗುರುಲಾಘವಮ್|

12205024c ವಿಮೃಶೇದಾತ್ಮಸಂಸ್ಥಾನಾಮೇಕೈಕಮನುಸಂತತಮ್||

ಇವೇ ಮೊದಲಾದ ದೋಷಗಳನ್ನು ಪರೀಕ್ಷಿಸಿ, ಅವುಗಳ ಪ್ರಮಾಣವು ತನ್ನಲ್ಲಿ ಹೆಚ್ಚಾಗಿದೆಯೋ ಕಡಿಮೆಯಾಗಿದೆಯೋ ಎನ್ನುವುದನ್ನು ವಿಮರ್ಶಿಸಿ ತನ್ನಲ್ಲಿರುವ ಎಲ್ಲ ದೋಷಗಳನ್ನೂ ದೂರೀಕರಿಸಲು ಸತತವಾಗಿ ಪ್ರಯತ್ನಿಸಬೇಕು.”

12205025 ಶಿಷ್ಯ ಉವಾಚ|

12205025a ಕೇ ದೋಷಾ ಮನಸಾ ತ್ಯಕ್ತಾಃ ಕೇ ಬುದ್ಧ್ಯಾ ಶಿಥಿಲೀಕೃತಾಃ|

12205025c ಕೇ ಪುನಃ ಪುನರಾಯಾಂತಿ ಕೇ ಮೋಹಾದಫಲಾ ಇವ||

ಶಿಷ್ಯನು ಹೇಳಿದನು: “ಯಾವ ದೋಷಗಳನ್ನು ಮನಸ್ಸಿನ ಮೂಲಕ ತ್ಯಜಿಸುತ್ತಾರೆ ಮತ್ತು ಯಾವುದನ್ನು ಬುದ್ಧಿಯ ಮೂಲಕ ಶಿಥಿಲಗೊಳಿಸುತ್ತಾರೆ? ಯಾವ ದೋಷಗಳು ಪುನಃ ಪುನಃ ಬರುತ್ತಲೇ ಇರುತ್ತವೆ? ಮತ್ತು ಯಾವ ದೋಷಗಳು ಅಜ್ಞಾನದ ಕಾರಣದಿಂದ ನಿಷ್ಫಲವಾದಂತೆ ತೋರುತ್ತವೆ?

12205026a ಕೇಷಾಂ ಬಲಾಬಲಂ ಬುದ್ಧ್ಯಾ ಹೇತುಭಿರ್ವಿಮೃಶೇದ್ಬುಧಃ|

12205026c ಏತತ್ಸರ್ವಂ ಸಮಾಚಕ್ಷ್ವ ಯಥಾ ವಿದ್ಯಾಮಹಂ ಪ್ರಭೋ||

ಪ್ರಭೋ! ಬುದ್ಧಿವಂತನು ತನ್ನ ಬುದ್ಧಿ ಮತ್ತು ಯುಕ್ತಿಗಳ ಮೂಲಕ ಯಾವ ದೋಷಗಳ ಬಲಾಬಲಗಳನ್ನು ವಿಮರ್ಶಿಸಬೇಕು? ಪ್ರಭೋ! ಇವೆಲ್ಲವನ್ನು ನನಗೆ ತಿಳಿಯುವಂತೆ ಹೇಳಬೇಕು.”

12205027 ಗುರುರುವಾಚ|

12205027a ದೋಷೈರ್ಮೂಲಾದವಚ್ಚಿನ್ನೈರ್ವಿಶುದ್ಧಾತ್ಮಾ ವಿಮುಚ್ಯತೇ|

12205027c ವಿನಾಶಯತಿ ಸಂಭೂತಮಯಸ್ಮಯಮಯೋ ಯಥಾ|

12205027e ತಥಾಕೃತಾತ್ಮಾ ಸಹಜೈರ್ದೋಷೈರ್ನಶ್ಯತಿ ರಾಜಸೈಃ[14]||

ಗುರುವು ಹೇಳಿದನು: “ಶುದ್ಧಾತ್ಮನು ಈ ದೋಷಗಳನ್ನು ಬೇರುಸಹಿತ ಕಿತ್ತುತೆಗೆದು ವಿಮುಕ್ತನಾಗುತ್ತಾನೆ[15]. ಲೋಹದಿಂದ ಮಾಡಲ್ಪಟ್ಟ ಉಳಿಯ ತುದಿಯು ಲೋಹವನ್ನು ಕತ್ತರಿಸುತ್ತಾ ತಾನೂ ಮೊಂಡಾಗಿ ಹೋಗುವಂತೆ ಶುದ್ಧವಾದ ಬುದ್ಧಿಯು ರಜೋಗುಣಜನಿತ ಸಹಜ ದೋಷಗಳನ್ನು ನಾಶಪಡಿಸಿ ಅವುಗಳೊಂದಿಗೆ ತಾನೂ ಕೂಡ ಶಾಂತವಾಗಿಬಿಡುತ್ತದೆ.[16]

12205028a ರಾಜಸಂ ತಾಮಸಂ ಚೈವ ಶುದ್ಧಾತ್ಮಾಕರ್ಮಸಂಭವಮ್[17]|

12205028c ತತ್ಸರ್ವಂ ದೇಹಿನಾಂ ಬೀಜಂ ಸರ್ವಮಾತ್ಮವತಃ ಸಮಮ್||

ಆತ್ಮಗಳಿರುವ ಸರ್ವ ದೇಹಗಳಲ್ಲಿಯೂ ರಾಜಸ, ತಾಮಸ ಮತ್ತು ಶುದ್ಧಾತ್ಮಕರ್ಮಗಳನ್ನುಂಟುಮಾಡುವ ಸತ್ತ್ವಗುಣ ಇವು ಬೀಜಗಳಂತಿರುತ್ತವೆ. ಆದರೂ ಆತ್ಮವತರಿಗೆ ಸತ್ತ್ವಗುಣವೇ ಸಮತೆಗೆ (ಬ್ರಹ್ಮಪ್ರಾಪ್ತಿಗೆ) ಸಾಧನವಾಗುತ್ತದೆ.

12205029a ತಸ್ಮಾದಾತ್ಮವತಾ ವರ್ಜ್ಯಂ ರಜಶ್ಚ ತಮ ಏವ ಚ|

12205029c ರಜಸ್ತಮೋಭ್ಯಾಂ ನಿರ್ಮುಕ್ತಂ ಸತ್ತ್ವಂ ನಿರ್ಮಲತಾಮಿಯಾತ್||

ಆದುದರಿಂದ ಆತ್ಮವತನು ರಜ ಮತ್ತು ತಮೋಗುಣಗಳನ್ನು ಸಂಪೂರ್ಣವಾಗಿ ವರ್ಜಿಸಬೇಕು. ರಜೋತಮೋಗುಣಗಳಿಂದ ಮುಕ್ತವಾದ ಜೀವವು ನಿರ್ಮಲತೆಯನ್ನು ಹೊಂದುತ್ತದೆ.

12205030a  ಅಥ ವಾ ಮಂತ್ರವದ್ಬ್ರೂಯುರ್ಮಾಂಸಾದಾನಾಂ ಯಜುಷ್ಕೃತಮ್[18]|

12205030c ಹೇತುಃ ಸ ಏವಾನಾದಾನೇ ಶುದ್ಧಧರ್ಮಾನುಪಾಲನೇ||

ಕೆಲವರು ಮಂತ್ರಯುಕ್ತ ಬಲಿ ಮತ್ತು ಯಜ್ಞಗಳು ಶುದ್ಧಧರ್ಮವನ್ನು ಪಾಲಿಸುವುದರಲ್ಲಿ ಕಾರಣಗಳಾಗುತ್ತವೆ ಎಂದು ಹೇಳುತ್ತಾರೆ.

12205031a ರಜಸಾ ಧರ್ಮಯುಕ್ತಾನಿ ಕಾರ್ಯಾಣ್ಯಪಿ ಸಮಾಪ್ನುಯಾತ್|

12205031c ಅರ್ಥಯುಕ್ತಾನಿ ಚಾತ್ಯರ್ಥಂ ಕಾಮಾನ್ಸರ್ವಾಂಶ್ಚ ಸೇವತೇ||

ಆದರೆ ರಜೋಗುಣಯುಕ್ತನಾಗಿ ಅಥವಾ ಅರ್ಥಸಿದ್ದಿಗಾಗಿ ಮಾಡುವ ಧರ್ಮಕರ್ಮಗಳೆಲ್ಲವೂ ಕಾಮವನ್ನೇ ಪೂರೈಸುವಂಥಹುಗಳಾಗುತ್ತವೆ.

12205032a ತಮಸಾ ಲೋಭಯುಕ್ತಾನಿ ಕ್ರೋಧಜಾನಿ ಚ ಸೇವತೇ|

12205032c ಹಿಂಸಾವಿಹಾರಾಭಿರತಸ್ತಂದ್ರೀನಿದ್ರಾಸಮನ್ವಿತಃ||

ತಮೋಗುಣವು ಲೋಭವನ್ನು ಸೇರಿಕೊಂಡಾಗ ಅದು ಕ್ರೋಧವನ್ನೇ ಸೇವಿಸುತ್ತದೆ. ಹಿಂಸಾಚಾರಗಳಲ್ಲಿ ತೊಡಗಿ ರತಿಸುಖ, ಆಲಸ್ಯ ಮತ್ತು ನಿದ್ರೆಗಳಲ್ಲಿಯೇ ನಿರತವಾಗಿರುತ್ತದೆ.

12205033a ಸತ್ತ್ವಸ್ಥಃ ಸಾತ್ತ್ವಿಕಾನ್ಭಾವಾನ್ ಶುದ್ಧಾನ್ಪಶ್ಯತಿ ಸಂಶ್ರಿತಃ|

12205033c ಸ ದೇಹೀ ವಿಮಲಃ ಶ್ರೀಮಾನ್ ಶುದ್ಧೋ ವಿದ್ಯಾಸಮನ್ವಿತಃ||

ಆದರೆ ಸತ್ತ್ವಗುಣದಲ್ಲಿರುವವನು ಸಾತ್ತ್ವಿಕ ಶುದ್ಧ ಭಾವಗಳನ್ನು ತಾಳುತ್ತಾನೆ. ಶುದ್ಧವಾದವುಗಳನ್ನೇ ನೋಡುತ್ತಾನೆ ಮತ್ತು ಆಶ್ರಯಿಸುತ್ತಾನೆ. ಆ ದೇಹದಲ್ಲಿರುವ ಜೀವವು ವಿಮಲವೂ, ಶ್ರೀಮಾನನೂ, ಶುದ್ಧನೂ ವಿದ್ಯಾಸಮನ್ವಿತನೂ ಆಗಿರುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ಪಂಚಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಐದನೇ ಅಧ್ಯಾಯವು.

[1] ಕರ್ಮನಿಷ್ಠರಿಗೆ ಪ್ರವೃತ್ತಿಲಕ್ಷಣಗಳಿಂದ ಕೂಡಿರುವ ಧರ್ಮವು ಬಹಳವಾಗಿ ರುಚಿಸುತ್ತದೆ. ಅದೇ ರೀತಿಯಲ್ಲಿ ಜ್ಞಾನನಿಷ್ಠರಾಗಿರುವವರಿಗೆ ಜ್ಞಾನಕ್ಕಿಂತಲೂ ಬೇರೆ ಯಾವ ತತ್ತ್ವವೂ ರುಚಿಸುವುದಿಲ್ಲ. (ಭಾರತ ದರ್ಶನ)

[2] ಪ್ರಯೋಜನಮಂ ಮಹತ್ವಾತ್ತು (ಗೀತಾ ಪ್ರೆಸ್/ಭಾರತ ದರ್ಶನ).

[3] ಬುದ್ಧಿವಂತರಾದವರು ವೇದೋಕ್ತ ಸ್ವರ್ಗ ಮತ್ತು ಮೋಕ್ಷಗಳಲ್ಲಿ ಮಹತ್ವಪೂರ್ಣವೂ ಪ್ರಶಂಸನೀಯವೂ ಆದ ಮೋಕ್ಷ ಮಾರ್ಗವನ್ನೇ ಅನುಸರಿಸಲು ಇಚ್ಛೆಪಡುತ್ತಾರೆ. (ಭಾರತ ದರ್ಶನ)

[4] ದೇಹಾಭಿಮಾನಿ ಪುರುಷನು ಮೋಹವಶನಾಗಿ ಕ್ರೋಧ-ಲೋಭಗಳೇ ಮೊದಲಾದ ರಾಜಸ-ತಾಮಸ ಭಾವಗಳಿಂದ ಯುಕ್ತನಾಗಿ ಎಲ್ಲ ವಿಧದ ವಸ್ತುಗಳನ್ನೂ ಸಂಗ್ರಹಿಸುತ್ತಾ ಹೋಗುತ್ತಾನೆ (ಭಾರತ ದರ್ಶನ/ಗೀತಾ ಪ್ರೆಸ್).

[5] Having driven deeds into a hole, one obtains the auspicious worlds. (Bibek Debroy)

[6] When gold is mixed with iron, it becomes impure and does not shine. In that way, if mixed with the impure and the astringent, knowleddge no longer shines. (Bibek Debroy)

ಚಿತ್ತದಲ್ಲಿರುವ ರಾಗ-ದ್ವೇಷಾದಿ ದೋಷಗಳಿಂದ ಕೂಡಿದ ಆತ್ಮವು ಆ ದೋಷಗಳು ಜ್ಞಾನದಿಂದ ಪಕ್ವವಾದ ಹೊರತು ಪ್ರಕಾಶಿಸುವುದಿಲ್ಲ (ಭಾರತ ದರ್ಶನ).

[7] ಜ್ಞಾತಿ-ಬಾಂಧವರೊಂದಿಗೆ ವಿನಾಶಹೊಂದುತ್ತಾನೆ (ಭಾರತ ದರ್ಶನ/ಗೀತಾ ಪ್ರೆಸ್).

[8] Anger, delight and misery feed on each other. (Bibek Debroy)

[9] A house made of earth is pastered with earth. Like that, this body is made out of earth and is attached to earth. (Bibek Debroy)

[10] ಜಲವೂ ಪೃಥ್ವಿಯ ವಿಕಾರವು ಎಂದೂ ಇದೆ (ಭಾರತ ದರ್ಶನ/ಗೀತಾ ಪ್ರೆಸ್).

[11] ವರ್ಚಸಾ (ಭಾರತ ದರ್ಶನ/ಗೀತಾ ಪ್ರೆಸ್).

[12] ದುಃಖಮಹಂಕಾರಂ (ಭಾರತ ದರ್ಶನ/ಗೀತಾ ಪ್ರೆಸ್).

[13] ಪ್ರಸಾದೋ (ಭಾರತ ದರ್ಶನ/ಗೀತಾ ಪ್ರೆಸ್).

[14] ತಾಮಸೈಃ (ಭಾರತ ದರ್ಶನ/ಗೀತಾ ಪ್ರೆಸ್).

[15] ಅಂತಃಕರಣ ಶುದ್ಧಿಯಿಂದ ಈ ದೋಷಗಳನ್ನು ಬೇರುಸಹಿತ ಕಿತ್ತು ಮುಕ್ತನಾಗಬಹುದು.

[16] ತ್ರಿಗುಣಗಳು ಬುದ್ಧಿಯಲ್ಲಿ ಇರುವವರೆಗೆ ಅದು ಆತ್ಮವಸುತ್ವಿನಿಂದ ಬೇರೆಯಾಗಿರುತ್ತದೆ. ಆದರೆ ತ್ರಿಗುಣಾತೀತವಾದನಂತರ ಆ ಬುದ್ಧಿಯು ತ್ರಿಗುಣಾತೀತನಾದ ಪರಮಾತ್ಮನಲ್ಲಿಯೇ ಲೀನವಾಗಿಬಿಡುತ್ತದೆ. ಆದುದರಿಂದ ದೋಷಗಳನ್ನು ನಾಶಗೊಳಿಸಿದ ಬುದ್ಧಿಯು ತಾನೂ ನಾಶವಾಗುತ್ತದೆ. (ಭಾರತ ದರ್ಶನ)

[17] ಶುದ್ಧಾತ್ಮಕಮಅಲ್ಮಷಮ್| (ಭಾರತ ದರ್ಶನ/ಗೀತಾ ಪ್ರೆಸ್).

[18] ಅಥವಾ ಮಂತ್ತ್ರವದ್ಬ್ರೂಯುರಾತ್ಮಾದಾನಾಯ ದುಷ್ಕೃತಮ್| (ಭಾರತ ದರ್ಶನ/ಗೀತಾ ಪ್ರೆಸ್).

Comments are closed.