Shanti Parva: Chapter 204

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೪

ಸಂಸಾರಚಕ್ರ ಮತ್ತು ಜೀವಾತ್ಮಸ್ಥಿತಿಗಳ ವರ್ಣನೆ (೧-೧೬).

12204001 ಗುರುರುವಾಚ|

12204001a ಚತುರ್ವಿಧಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|

12204001c ಅವ್ಯಕ್ತಪ್ರಭವಾನ್ಯಾಹುರವ್ಯಕ್ತನಿಧನಾನಿ ಚ|

12204001e ಅವ್ಯಕ್ತನಿಧನಂ[1] ವಿದ್ಯಾದವ್ಯಕ್ತಾತ್ಮಾತ್ಮಕಂ ಮನಃ||

ಗುರುವು ಹೇಳಿದನು: “ಜರಾಯುಜ, ಅಂಡಜ, ಸ್ವೇದಜ ಮತ್ತು ಉದ್ಭುಜ್ಜ – ಈ ನಾಲ್ಕು ಪ್ರಕಾರದ ಸ್ಥಾವರ-ಜಂಗಮ ಜೀವಿಗಳೆಲ್ಲವೂ ಅವ್ಯಕ್ತದಿಂದ ಉತ್ಪನ್ನವಾಗುತ್ತವೆ ಎಂದು ಹೇಳಿದ್ದಾರೆ ಮತ್ತು ಅವ್ಯಕ್ತದಲ್ಲಿಯೇ ಇವೆಲ್ಲವುಗಳ ಲಯವಾಗುತ್ತದೆ. ಯಾವುದರ ಲಕ್ಷಣಗಳು ವ್ಯಕ್ತವಾಗುವುದಿಲ್ಲವೋ ಅವುಗಳನ್ನು ಅವ್ಯಕ್ತ ಎಂದು ತಿಳಿಯಬೇಕು. ಅವ್ಯಕ್ತವಾದುದೂ ತ್ರಿಗುಣಾತ್ಮಕವಾಗಿರುತ್ತದೆ. ಹಾಗೆ ಮನಸ್ಸೂ ಕೂಡ ಅವ್ಯಕ್ತ ಪ್ರಕೃತಿಯಂತೆ ತ್ರಿಗುಣಾತ್ಮಕವಾಗಿದೆ.[2]

12204002a ಯಥಾಶ್ವತ್ಥಕಣೀಕಾಯಾಮಂತರ್ಭೂತೋ ಮಹಾದ್ರುಮಃ|

12204002c ನಿಷ್ಪನ್ನೋ ದೃಶ್ಯತೇ ವ್ಯಕ್ತಮವ್ಯಕ್ತಾತ್ಸಂಭವಸ್ತಥಾ||

ಸಾಸಿವೆ ಕಾಳಿನಷ್ಟು ಸಣ್ಣದಾಗಿರುವ ಅಶ್ವತ್ಥದ ಬೀಜದಲ್ಲಿ ಮಹಾವೃಕ್ಷವೇ ಅಡಗಿಕೊಂಡಿರುವಂತೆ ಮತ್ತು ಬೀಜವು ಮೊಳೆತು ಬೆಳೆದನಂತರ ಮಹಾವೃಕ್ಷವಾಗಿ ವ್ಯಕ್ತವಾಗುವಂತೆ ಅವ್ಯಕ್ತದಿಂದ ವ್ಯಕ್ತವಾದ ಜಗತ್ತು ಹುಟ್ಟಿಕೊಳ್ಳುತ್ತದೆ.

12204003a ಅಭಿದ್ರವತ್ಯಯಸ್ಕಾಂತಮಯೋ ನಿಶ್ಚೇತನಾವುಭೌ|

12204003c ಸ್ವಭಾವಹೇತುಜಾ ಭಾವಾ ಯದ್ವದನ್ಯದಪೀದೃಶಮ್||

ಲೋಹವು ನಿಶ್ಚೇತನವಾಗಿದ್ದರೂ ಆಯಸ್ಕಾಂತದ ಕಡೆಗೇ ಓಡುವ ಹಾಗೆ ಶರೀರವು ಹುಟ್ಟಿದೊಡನೆಯೇ ಪ್ರಾಣಿಯ ಸ್ವಾಭಾವಿಕ ಸಂಸ್ಕಾರ ಮತ್ತು ಅವಿದ್ಯಾ-ಕಾಮ-ಕರ್ಮಾದಿ ಇತರ ಗುಣಗಳೂ ಆ ಶರೀರದ ಕಡೆಯೇ ಸೆಳೆಯಲ್ಪಡುತ್ತವೆ[3].

12204004a ತದ್ವದವ್ಯಕ್ತಜಾ ಭಾವಾಃ ಕರ್ತುಃ ಕಾರಣಲಕ್ಷಣಾಃ|

12204004c ಅಚೇತನಾಶ್ಚೇತಯಿತುಃ ಕಾರಣಾದಭಿಸಂಹಿತಾಃ||

ಇದೇ ಪ್ರಕಾರ ಆ ಅವ್ಯಕ್ತದಿಂದ ಉತ್ಪನ್ನವಾದ ಉಪರ್ಯುಕ್ತ ಕಾರಣ-ಸ್ವರೂಪ ಭಾವಗಳು ಅಚೇತನಗಳಾಗಿದ್ದರೂ ಚೇತನ ಕರ್ತನೊಡನೆಯ ಸಂಬಂಧದಿಂದಾಗಿ ಚೇತನಾತ್ಮಕಗೊಂಡು ಕ್ರಿಯೆಗಳಿಗೆ ಕಾರಣಗಳಾಗುತ್ತವೆ[4].

12204005a ನ ಭೂಃ ಖಂ ದ್ಯೌರ್ನ ಭೂತಾನಿ ನರ್ಷಯೋ ನ ಸುರಾಸುರಾಃ|

12204005c ನಾನ್ಯದಾಸೀದೃತೇ ಜೀವಮಾಸೇದುರ್ನ ತು ಸಂಹಿತಮ್||

ಮೊದಲು ಪೃಥ್ವಿ, ಆಕಾಶ, ಸ್ವರ್ಗ, ಭೂತಗಣ, ಋಷಿಗಣ ಮತ್ತು ಸುರಾಸುರ ಗಣಗಳ್ಯಾವುವೂ ಇರಲಿಲ್ಲ. ಜೀವವೊಂದನ್ನು ಬಿಟ್ಟು ಬೇರೆ ಯಾವ ವಸ್ತುವಿನ ಅಸ್ತಿತ್ವವೂ ಇರಲಿಲ್ಲ. ಜಡ-ಜೀವಗಳ ಸಂಯೋಗವೂ ಇರಲಿಲ್ಲ.

12204006a ಸರ್ವನೀತ್ಯಾ[5] ಸರ್ವಗತಂ ಮನೋಹೇತು ಸಲಕ್ಷಣಮ್|

12204006c ಅಜ್ಞಾನಕರ್ಮ ನಿರ್ದಿಷ್ಟಮೇತತ್ಕಾರಣಲಕ್ಷಣಮ್||

ಆ ಜೀವವು ಎಲ್ಲವನ್ನೂ ತಿಳಿದಿರುತ್ತದೆ. ಎಲ್ಲದರಲ್ಲಿಯೂ ಇರುತ್ತದೆ. ಅದೇ ಲಕ್ಷಣಸಹಿತವಾದ ಮನಸ್ಸಿಗೆ ಕಾರಣ. ಕಾರಣ-ಲಕ್ಷಣಗಳಿಂದ ಕೂಡಿರುವ ಈ ಜಗತ್ತು ಅಜ್ಞಾನದಿಂದ ಆದುದು ಎಂದು ಹೇಳುತ್ತಾರೆ.

12204007a ತತ್ಕಾರಣೈರ್ಹಿ ಸಂಯುಕ್ತಂ ಕಾರ್ಯಸಂಗ್ರಹಕಾರಕಮ್|

12204007c ಯೇನೈತದ್ವರ್ತತೇ ಚಕ್ರಮನಾದಿನಿಧನಂ ಮಹತ್||

ಈ ಕಾರಣಗಳಿಂದ ಯುಕ್ತವಾಗಿ ಜೀವವು ಕರ್ಮಗಳನ್ನು ಸಂಗ್ರಹಿಸುತ್ತಿರುತ್ತದೆ. ಕರ್ಮದಿಂದ ವಾಸನಾ ಮತ್ತು ವಾಸನಗಳಿಂದ ಪುನಃ ಕರ್ಮ. ಹೀಗೆ ಈ ಮಹಾನ್ ಸಂಸಾರಚಕ್ರವು ಪ್ರಾರಂಭವಿಲ್ಲದೇ ಮತ್ತು ಅಂತ್ಯವೂ ಇಲ್ಲದೇ ನಡೆಯುತ್ತಿರುತ್ತದೆ.

12204008a ಅವ್ಯಕ್ತನಾಭಂ ವ್ಯಕ್ತಾರಂ ವಿಕಾರಪರಿಮಂಡಲಮ್|

12204008c ಕ್ಷೇತ್ರಜ್ಞಾಧಿಷ್ಠಿತಂ ಚಕ್ರಂ ಸ್ನಿಗ್ಧಾಕ್ಷಂ ವರ್ತತೇ ಧ್ರುವಮ್||

ಅವ್ಯಕ್ತವೇ ಆ ಚಕ್ರದ ನಾಭಿ. ವ್ಯಕ್ತವೇ ಆ ಚಕ್ರದ ಅರೆಕಾಲುಗಳು. ಸುಖ-ದುಃಖಾದಿ ವಿಕಾರಗಳೇ ಅದರ ನೇಮಿ ಅಥವಾ ಪರಿಮಂಡಲವು. ಆಸಕ್ತಿಯು ಅದರ ಅಚ್ಚು. ನಿಶ್ಚಿತರೂಪದಲ್ಲಿ ತಿರುಗುತ್ತಿರುವ ಈ ಚಕ್ರದಲ್ಲಿ ಕ್ಷೇತ್ರಜ್ಞ ಜೀವಾತ್ಮನು ಚಾಲಕನಾಗಿ ಕುಳಿತಿರುತ್ತಾನೆ.

12204009a ಸ್ನಿಗ್ಧತ್ವಾತ್ತಿಲವತ್ಸರ್ವಂ ಚಕ್ರೇಽಸ್ಮಿನ್ಪೀಡ್ಯತೇ ಜಗತ್|

12204009c ತಿಲಪೀಡೈರಿವಾಕ್ರಮ್ಯ ಭೋಗೈರಜ್ಞಾನಸಂಭವೈಃ||

ಎಣ್ಣೆಯನ್ನು ತೆಗೆಯುವ ಸಲುವಾಗಿ ಜಿಡ್ಡಿನಿಂದ ಕೂಡಿದ ಎಳ್ಳನ್ನು ಗಾಣಕ್ಕೆ ಹಾಕಿ ಅರೆಯುವಂತೆ ಭೋಗ-ಅಜ್ಞಾನಗಳಿಂದ ಪೀಡಿತವಾದ ಈ ಜಗತ್ತು ಸಂಸಾರಚಕ್ರದಲ್ಲಿ ಸಿಲುಕಿ ಅರೆಯಲ್ಪಡುತ್ತದೆ.

12204010a ಕರ್ಮ ತತ್ಕುರುತೇ ತರ್ಷಾದಹಂಕಾರಪರಿಗ್ರಹಮ್|

12204010c ಕಾರ್ಯಕಾರಣಸಂಯೋಗೇ ಸ ಹೇತುರುಪಪಾದಿತಃ||

ಜೀವವು ಅಹಂಕಾರಕ್ಕೆ ಅಧೀನವಾಗಿ ತೃಷ್ಣೆಯ ಕಾರಣದಿಂದ ಕಾರ್ಯಗಳನ್ನು ಮಾಡುತ್ತದೆ. ಅದೇ ಮುಂದಿನ ಕಾರ್ಯ-ಕಾರಣಗಳ ಯೋಗಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿತವಾಗಿದೆ.

12204011a ನಾತ್ಯೇತಿ[6] ಕಾರಣಂ ಕಾರ್ಯಂ ನ ಕಾರ್ಯಂ ಕಾರಣಂ ತಥಾ|

12204011c ಕಾರ್ಯಾಣಾಂ ತೂಪಕರಣೇ ಕಾಲೋ ಭವತಿ ಹೇತುಮಾನ್||

ಕಾರ್ಯದ ಹಿಂದೆ ಕಾರಣವೂ ಇಲ್ಲ. ಕಾರ್ಯವೂ ಕಾರಣವನ್ನು ಅನುಸರಿಸುವುದಿಲ್ಲ. ಕಾರ್ಯ ಮತ್ತು ಪರಿಣಾಮಗಳೆರಡನ್ನೂ ಕಾಲವೇ ಮಾಡುತ್ತದೆ[7].

12204012a ಹೇತುಯುಕ್ತಾಃ ಪ್ರಕೃತಯೋ ವಿಕಾರಾಶ್ಚ ಪರಸ್ಪರಮ್|

12204012c ಅನ್ಯೋನ್ಯಮಭಿವರ್ತಂತೇ ಪುರುಷಾಧಿಷ್ಠಿತಾಃ ಸದಾ||

ಹೇತುಯುಕ್ತವಾದ ಎಂಟು ಮೂಲಪ್ರಕೃತಿಗಳೂ ಮತ್ತು ಅವುಗಳ ಹದಿನಾರು ವಿಕಾರಗಳೂ ಪುರುಷನಲ್ಲಿ ಅಧಿಷ್ಠಾನವನ್ನು ಹೊಂದಿ (ಆಶ್ರಯವನ್ನು ಪಡೆದು) ಪರಸ್ಪರ ಸೇರುತ್ತಿರುತ್ತವೆ ಮತ್ತು ಸೃಷ್ಟಿಯನ್ನು ವಿಸ್ತರಿಸುತ್ತಿರುತ್ತವೆ[8].

12204013a ಸರಜಸ್ತಾಮಸೈರ್ಭಾವೈಶ್ಚ್ಯುತೋ ಹೇತುಬಲಾನ್ವಿತಃ|

12204013c ಕ್ಷೇತ್ರಜ್ಞಮೇವಾನುಯಾತಿ ಪಾಂಸುರ್ವಾತೇರಿತೋ ಯಥಾ|

12204013e ನ ಚ ತೈಃ ಸ್ಪೃಶ್ಯತೇ ಭಾವೋ ನ ತೇ ತೇನ ಮಹಾತ್ಮನಾ||

ಧೂಳು ಗಾಳಿಯೊಡನೆಯೇ ಹೋಗುವಂತೆ ರಾಜಸ-ತಾಮಸ ಭಾವಗಳು ಮತ್ತು ಬಲಾನ್ವಿತ ಹೇತುಗಳು ಕ್ಷೇತ್ರಜ್ಞನನ್ನೇ ಹಿಂಬಾಲಿಸಿ ಹೋಗುತ್ತವೆ.[9] ಆದರೆ ಆ ಭಾವಗಳು ಮಹಾತ್ಮ ಜೀವವನ್ನು ಸ್ಪರ್ಶಿಸುವುದಿಲ್ಲ ಮತ್ತು ಜೀವವೂ ಅವುಗಳನ್ನು ಸ್ಪರ್ಶಿಸುವುದಿಲ್ಲ.

12204014a ಸರಜಸ್ಕೋಽರಜಸ್ಕಶ್ಚ ಸ ವೈ ವಾಯುರ್ಯಥಾ ಭವೇತ್|

12204014c ತಥೈತದಂತರಂ ವಿದ್ಯಾತ್ ಕ್ಷೇತ್ರಕ್ಷೇತ್ರಜ್ಞಯೋರ್ಬುಧಃ|

12204014e ಅಭ್ಯಾಸಾತ್ಸ ತಥಾ ಯುಕ್ತೋ ನ ಗಚ್ಚೇತ್ಪ್ರಕೃತಿಂ ಪುನಃ||

ಅದು ಧೂಳನ್ನು ಹೊತ್ತಿಕೊಂಡಿರುವ ಗಾಳಿಯಂತೆ. ಗಾಳಿಯಲ್ಲಿಯೇ ಧೂಳಿರುವುದಿಲ್ಲ[10]. ಇವೆರಡೂ (ವಾಸನೆಗಳು ಮತ್ತು ಜೀವ) ಬೇರೆಬೇರೆಯಾಗಿರುವುದರಿಂದ ವಿದ್ವಾಂಸನು ಕ್ಷೇತ್ರ ಮತ್ತು ಕ್ಷೇತ್ರಜ್ಞರ ನಡುವಿನ ಅಂತರವನ್ನು ತಿಳಿದುಕೊಂಡಿರುತ್ತಾನೆ. ಇವೆರಡರ ತದಾತ್ಮ್ಯಕತ್ವದ ಅಭ್ಯಾಸಗುಣದಿಂದಾಗಿ ಜೀವನಿಗೆ ತನ್ನ ಶುದ್ಧ ಸ್ವರೂಪದ ಜ್ಞಾನವೇ ಇರುವುದಿಲ್ಲ[11].”

12204015a ಸಂದೇಹಮೇತಮುತ್ಪನ್ನಮಚ್ಚಿನದ್ಭಗವಾನೃಷಿಃ|

12204015c ತಥಾ ವಾರ್ತಾಂ ಸಮೀಕ್ಷೇತ ಕೃತಲಕ್ಷಣಸಂಮಿತಾಮ್||

ಹೀಗೆ ಭಗವಾನ್ ಋಷಿಯು ಶಿಷ್ಯನಲ್ಲಿ ಉತ್ಪನ್ನವಾಗಿದ್ದ ಸಂದೇಹವನ್ನು ತೊಡೆದುಹಾಕಿದನು. ಆದುದರಿಂದ ಯಾವ ಉಪಾಯವು ಉದ್ದೇಶಸಿದ್ಧಿಗೆ ಸಹಾಯಕವಾಗುವುದೋ ಅದನ್ನೇ ಹುಡುಕಬೇಕು.

12204016a ಬೀಜಾನ್ಯಗ್ನ್ಯುಪದಗ್ಧಾನಿ ನ ರೋಹಂತಿ ಯಥಾ ಪುನಃ|

12204016c ಜ್ಞಾನದಗ್ಧೈಸ್ತಥಾ ಕ್ಲೇಶೈರ್ನಾತ್ಮಾ ಸಂಬಧ್ಯತೇ ಪುನಃ||

ಬೆಂಕಿಯಲ್ಲಿ ಹುರಿದ ಬೀಜಗಳು ಪುನಃ ಮೊಳಕೆಗೊಳ್ಳದಂತೆ ಜ್ಞಾನಾಗ್ನಿಯಿಂದ ಅವಿದ್ಯಾದಿ ಎಲ್ಲ ಕ್ಲೇಶಗಳೂ ದಗ್ಧವಾದಾಗ ಜೀವಾತ್ಮನು ಪುನಃ ಈ ಸಂಸಾರದಲ್ಲಿ ಜನ್ಮತಾಳಬೇಕಾಗುವುದಿಲ್ಲ.

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ಚತುರಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾನಾಲ್ಕನೇ ಅಧ್ಯಾಯವು.

[1] ಅವ್ಯಕ್ತಲಕ್ಷಣಂ (ಭಾರತ ದರ್ಶನ/ಗೀತಾ ಪ್ರೆಸ್).

[2] All mobile and immobile beings belong to four categories. They are not manifest, alive, manifest and dead. Know that the mind exists in the atman, wich is not manifest. It is not manifest and it is destroyed. (Bibek Debroy)

[3] A piece of iron has no consciousness, but advances towards a lodestone. Some reasons and attributes are natural. But others are not like that. (Bibek Debroy)

[4] ಅದೇ ರೀತಿಯಲ್ಲಿ ಅವ್ಯಕ್ತದಿಂದ ಹುಟ್ಟಿದವುಗಳಾಗಿ ಕಾರಣಗಳೂ ಆಗಿರುವ ಕರ್ತೃವಿನ ಅಚೇತನವಾದ ಭಾವಗಳು ಚೈತನ್ಯವನ್ನು ತುಂಬುವ ಸರ್ವಕಾರಣನಾದ ಪರಮಾತ್ಮನಿಂದಲೇ ಒಟ್ಟಾಗಿ ಸೇರಲ್ಪಡುತ್ತವೆ. (ಭಾರತ ದರ್ಶನ)

Having become manifest, those attributes provide reasons and objectives to the doer. However, there also unconscious attributes that provide reasons for the consciousness to be collected. (Bibek Debroy)

[5] ಪೂರ್ವಂ ನಿತ್ಯಂ (ಭಾರತ ದರ್ಶನ/ಗೀತಾ ಪ್ರೆಸ್).

[6] ನಾಭ್ಯೇತಿ (ಭಾರತ ದರ್ಶನ/ಗೀತಾ ಪ್ರೆಸ್).

[7] ಕಾರಣವು ಕಾರ್ಯವನ್ನು ಪ್ರವೇಶಿಸುವುದಿಲ್ಲ ಮತ್ತು ಕಾರ್ಯವೂ ಕಾರಣವನ್ನು ಪ್ರವೇಶಿಸುವುದಿಲ್ಲ. ಕಾರ್ಯಮಾಡುವ ಸಮಯದಲ್ಲಿ ಕಾಲವೇ ಅದರ ಸಿದ್ಧಿ ಮತ್ತು ಅಸ್ತಿದ್ಧಿಗಳಲ್ಲಿ ಹೇತುವಾಗುತ್ತದೆ (ಗೀತಾ ಪ್ರೆಸ್).

[8] But Prakriti is united with the reasons and the transformations work against each other. They transgress each other. However, Purusha is always established over them. (Bibek Debroy)

[9] ಸ್ಥೂಲದೇಹವನ್ನು ಪರಿತ್ಯಜಿಸಿದ ನಂತರ ಸೂಕ್ಷ್ಮ ಶರೀರವು ರಾಜಸ-ತಾಮಸ ಭಾವಗಳಿಂದ ಕೂಡಿ ವಾಸನಾಬಲದಿಂದ ಯುಕ್ತವಾಗಿ ಗಾಯಿಯಿಂದ ಎಬ್ಬಿಸಲ್ಪಟ್ಟ ಧೂಳಿನಂತೆ ಕ್ಷೇತ್ರಜ್ಞ (ಜೀವ) ನನ್ನೇ ಅನುಸರಿಸಿ ಹೋಗುತ್ತದೆ. (ಹಿಂದಿನ ಜನ್ಮದ ವಾಸನೆಗಳೊಡನೆ ಜೀವನು ಸೂಕ್ಷ್ಮಶರೀರವನ್ನು ಪ್ರವೇಶಿಸಿ ಅನಂತರ ಆ ಸೂಕ್ಷ್ಮಶರೀರದೊಡನೆ ಮತ್ತೊಂದು ಸ್ಥೂಲಶರೀರವನ್ನು ಪ್ರವೇಶಿಸುತ್ತಾನೆ.) (ಭಾರತ ದರ್ಶನ)

[10] ಧೂಳಿನಿಂದ ರಹಿತವಾದ ಗಾಳಿಯು ಕೆಲವು ಸಮಯಗಳಲ್ಲಿ ಧೂಳಿನಿಂದ ಕೂಡಿರುವಂತೆ ಕಾಣುವ ಹಾಗೆ ಆತ್ಮನು ರಾಜಸ-ತಾಮಸಾದಿ ಭಾವಗಳಿಂದ ಕೂಡಿರುವಂತೆ ತೋರುತ್ತಾನೆ. ವಾಯುವೆಂದಿಗೂ ಧೂಳಿನಿಂದ ಕೂಡಿರದಂತೆ ಜೀವವೆಂದಿಗೂ ರಾಜಸ-ತಾಮಸಾದಿ ಗುಣಗಳಿಂದ ಕೂಡಿದವನಾಗಿರುವುದಿಲ್ಲ. (ಭಾರತ ದರ್ಶನ)

[11] ಅಭ್ಯಾಸಬಲದಿಂದಲೂ ವಾಸನಾಬಲದಿಂದಲೂ ಜೀವನು ದೇಹಾತ್ಮಭಾವವನ್ನು ಹೊಂದಿಬಿಟ್ಟಿರುವುದರಿಂದ ಶುದ್ಧಸ್ವರೂಪದ ಕಡೆ ಹೋಗಲಾರನು. (ಭಾರತ ದರ್ಶನ)

If one practices one does not have to go to Prakriti again. (Bibek Debroy)

Comments are closed.