Shanti Parva: Chapter 203

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೩

ವಾರ್ಷ್ಣೇಯಾಧ್ಯಾತ್ಮ (ಗುರುಶಿಷ್ಯಸಂವಾದ)

ಗುರುಶಿಷ್ಯರ ಸಂವಾದವನ್ನು ಉದಾಹರಿಸುತ್ತಾ ಶ್ರೀಕೃಷ್ಣ ಸಂಬಂಧೀ ಆಧ್ಯಾತ್ಮತತ್ತ್ವದ ವರ್ಣನೆ (1-43).

12203001 ಯುಧಿಷ್ಠಿರ ಉವಾಚ|

12203001a ಯೋಗಂ ಮೇ ಪರಮಂ ತಾತ ಮೋಕ್ಷಸ್ಯ ವದ ಭಾರತ|

12203001c ತಮಹಂ ತತ್ತ್ವತೋ ಜ್ಞಾತುಮಿಚ್ಚಾಮಿ ವದತಾಂ ವರ||

ಯುಧಿಷ್ಠಿರನು ಹೇಳಿದನು: “ಭಾರತ! ಮಾತನಾಡುವವರಲ್ಲಿ ಶ್ರೇಷ್ಠ! ಅಯ್ಯಾ! ಮೋಕ್ಷದ ಪರಮ ಯೋಗದ ಕುರಿತು ಹೇಳು. ಅದನ್ನು ತತ್ತ್ವತಃ ತಿಳಿಯಬಯಸುತ್ತೇನೆ.”

12203002 ಭೀಷ್ಮ ಉವಾಚ|

12203002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12203002c ಸಂವಾದಂ ಮೋಕ್ಷಸಂಯುಕ್ತಂ ಶಿಷ್ಯಸ್ಯ ಗುರುಣಾ ಸಹ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಗುರುವಿನೊಂದಿಗೆ ಶಿಷ್ಯನ ಮೋಕ್ಷಸಂಯುಕ್ತ ಸಂವಾದವನ್ನು ಉದಾಹರಿಸುತ್ತಾರೆ.

12203003a ಕಶ್ಚಿದ್ಬ್ರಾಹ್ಮಣಮಾಸೀನಮಾಚಾರ್ಯಮೃಷಿಸತ್ತಮಮ್|

12203003c ಶಿಷ್ಯಃ ಪರಮಮೇಧಾವೀ ಶ್ರೇಯೋರ್ಥೀ ಸುಸಮಾಹಿತಃ|

12203003e ಚರಣಾವುಪಸಂಗೃಹ್ಯ ಸ್ಥಿತಃ ಪ್ರಾಂಜಲಿರಬ್ರವೀತ್||

ಓರ್ವ ಬ್ರಾಹ್ಮಣನು ಕುಳಿತಿದ್ದನು. ಆ ಆಚಾರ್ಯ ಋಷಿಸತ್ತಮನನ್ನು ಶ್ರೇಯಾರ್ಥಿಯಾದ ಪರಮಮೇಧಾವೀ ಶಿಷ್ಯನೋರ್ವನು ಸಮಾಹಿತನಾಗಿ ಚರಣಗಳನ್ನು ಹಿಡಿದು ನಿಂತು ಅಂಜಲೀಬದ್ಧನಾಗಿ ಹೇಳಿದನು:

12203004a ಉಪಾಸನಾತ್ ಪ್ರಸನ್ನೋಽಸಿ ಯದಿ ವೈ ಭಗವನ್ಮಮ|

12203004c ಸಂಶಯೋ ಮೇ ಮಹಾನ್ಕಶ್ಚಿತ್ತನ್ಮೇ ವ್ಯಾಖ್ಯಾತುಮರ್ಹಸಿ||

“ಭಗವನ್! ನನ್ನ ಉಪಾಸನೆಯಿಂದ ನೀನು ಪ್ರಸನ್ನನಾಗಿದ್ದರೆ ನನ್ನಲ್ಲಿರುವ ಈ ಮಹಾ ಸಂಶಯದ ಕುರಿತು ಹೇಳಬೇಕು.

12203005a ಕುತಶ್ಚಾಹಂ ಕುತಶ್ಚ ತ್ವಂ ತತ್ಸಮ್ಯಗ್ಬ್ರೂಹಿ ಯತ್ಪರಮ್|

12203005c ಕಥಂ ಚ ಸರ್ವಭೂತೇಷು ಸಮೇಷು ದ್ವಿಜಸತ್ತಮ|

12203005e ಸಮ್ಯಗ್ವೃತ್ತಾ ನಿವರ್ತಂತೇ ವಿಪರೀತಾಃ ಕ್ಷಯೋದಯಾಃ||

ದ್ವಿಜಸತ್ತಮ! ನಾನು ಎಲ್ಲಿಂದ? ನೀನು ಎಲ್ಲಿಂದ? ಇದರ ಕುರಿತು ಮತ್ತು ಪರಮತತ್ತ್ವವು ಯಾವುದು ಎನ್ನುವುದನ್ನೂ ಚೆನ್ನಾಗಿ ತಿಳಿಸಿ ಹೇಳು. ಸರ್ವಭೂತಗಳಲ್ಲಿ ಸಮನಾಗಿದ್ದರೂ ಎಲ್ಲವೂ ಹೇಗೆ ಕ್ಷಯ-ಉದಯಗಳೆಂಬ ವಿಪರೀತ ವಿಕಾರಗಳಾಗಿ ಪುನಃ ಪುನಃ ಹಿಂದಿರುಗುತ್ತಿರುತ್ತವೆ[1]?

12203006a ವೇದೇಷು ಚಾಪಿ ಯದ್ವಾಕ್ಯಂ ಲೌಕಿಕಂ ವ್ಯಾಪಕಂ ಚ ಯತ್|

12203006c ಏತದ್ವಿದ್ವನ್ಯಥಾತತ್ತ್ವಂ ಸರ್ವಂ ವ್ಯಾಖ್ಯಾತುಮರ್ಹಸಿ||

ವಿದ್ವನ್! ವೇದಗಳಲ್ಲಿರುವ ಲೌಕಿಕ ಮತ್ತು ವ್ಯಾಪಕ ವಾಕ್ಯಗಳೆಲ್ಲವಕ್ಕೂ ವ್ಯಾಖ್ಯಾನಮಾಡಬೇಕು.”

12203007 ಗುರುರುವಾಚ|

12203007a ಶೃಣು ಶಿಷ್ಯ ಮಹಾಪ್ರಾಜ್ಞ ಬ್ರಹ್ಮಗುಹ್ಯಮಿದಂ ಪರಮ್|

12203007c ಅಧ್ಯಾತ್ಮಂ ಸರ್ವಭೂತಾನಾಮಾಗಮಾನಾಂ ಚ ಯದ್ವಸು||

ಗುರುವು ಹೇಳಿದನು: “ಮಹಾಪ್ರಾಜ್ಞ ಶಿಷ್ಯ! ಪರಮ ಬ್ರಹ್ಮಗುಹ್ಯವಾದ ಮತ್ತು ಸರ್ವಭೂತಗಳಿಗೂ ಮತ್ತು ಶಾಸ್ತ್ರಗಳಿಗೂ ಐಶ್ವರ್ಯದಂತಿರುವ ಈ ಆಧ್ಯಾತ್ಮವನ್ನು ಕೇಳು.

12203008a ವಾಸುದೇವಃ ಸರ್ವಮಿದಂ[2] ವಿಶ್ವಸ್ಯ ಬ್ರಹ್ಮಣೋ ಮುಖಮ್|

12203008c ಸತ್ಯಂ ದಾನಮಥೋ ಯಜ್ಞಸ್ತಿತಿಕ್ಷಾ ದಮ ಆರ್ಜವಮ್||

ವಿಶ್ವದ ಮುಖನಾದ ಬ್ರಹ್ಮ[3], ಸತ್ಯ, ದಾನ, ಯಜ್ಞ, ಸಹನೆ, ಇಂದ್ರಿಯಸಂಯಮ ಮತ್ತು ಸರಳತೆ ಇವೆಲ್ಲವೂ ವಾಸುದೇವನೇ.

12203009a ಪುರುಷಂ ಸನಾತನಂ ವಿಷ್ಣುಂ ಯತ್ತದ್ವೇದವಿದೋ ವಿದುಃ|

12203009c ಸರ್ಗಪ್ರಲಯಕರ್ತಾರಮವ್ಯಕ್ತಂ ಬ್ರಹ್ಮ ಶಾಶ್ವತಮ್|

12203009e ತದಿದಂ ಬ್ರಹ್ಮ ವಾರ್ಷ್ಣೇಯಮಿತಿಹಾಸಂ ಶೃಣುಷ್ವ ಮೇ||

ವೇದವಿದುಗಳು ಸನಾತನ ಪುರುಷ ವಿಷ್ಣುವನ್ನು ಸೃಷ್ಟಿ-ಸ್ಥಿತಿ-ಲಯಕರ್ತಾರನೆಂದೂ ಅವ್ಯಕ್ತವೂ ಶಾಶ್ವತವೂ ಆದ ಬ್ರಹ್ಮವಸ್ತುವೆಂದೂ ತಿಳಿದಿದ್ದಾರೆ. ಅದೇ ಬ್ರಹ್ಮವಸ್ತುವೇ ವೃಷ್ಣಿಕುಲದಲ್ಲಿ ಅವತರಿಸಿದೆ. ಇದರ ಇತಿಹಾಸವನ್ನು ನನ್ನಿಂದ ಕೇಳು.

12203010a ಬ್ರಾಹ್ಮಣೋ ಬ್ರಾಹ್ಮಣೈಃ ಶ್ರಾವ್ಯೋ ರಾಜನ್ಯಃ ಕ್ಷತ್ರಿಯೈಸ್ತಥಾ|

[4]12203010c ಮಾಹಾತ್ಮ್ಯಂ ದೇವದೇವಸ್ಯ ವಿಷ್ಣೋರಮಿತತೇಜಸಃ|

12203010e ಅರ್ಹಸ್ತ್ವಮಸಿ ಕಲ್ಯಾಣ ವಾರ್ಷ್ಣೇಯಂ ಶೃಣು ಯತ್ಪರಮ್||

ಬ್ರಾಹ್ಮಣನು ಬ್ರಾಹ್ಮಣರಿಂದಲೂ, ಕ್ಷತ್ರಿಯನು ಕ್ಷತ್ರಿಯರಿಂದಲೂ ಅಮಿತತೇಜಸ್ವೀ ದೇವದೇವ ವಿಷ್ಣುವಿನ ಮಾಹಾತ್ಮ್ಯವನ್ನು ಕೇಳಬೇಕು. ಕಲ್ಯಾಣ! ನೀನಾದರೋ ವಾರ್ಷ್ಣೇಯನ ಮಹಾತ್ಮೆಯನ್ನು ಕೇಳಲು ಅರ್ಹನಾಗಿರುವೆ.

12203011a ಕಾಲಚಕ್ರಮನಾದ್ಯಂತಂ ಭಾವಾಭಾವಸ್ವಲಕ್ಷಣಮ್|

12203011c ತ್ರೈಲೋಕ್ಯಂ ಸರ್ವಭೂತೇಷು ಚಕ್ರವತ್ಪರಿವರ್ತತೇ||

ಸೃಷ್ಟಿ-ಸ್ಥಿತಿ-ಲಯ ಲಕ್ಷಣಗಳಿಂದ ಕೂಡಿರುವ, ಆದ್ಯಂತರಹಿತವಾದ ಕಾಲಚಕ್ರವು ಮೂರೂಲೋಕಗಳಲ್ಲಿ ಸರ್ವಭೂತಗಳಲ್ಲಿ ಚಕ್ರದಂತೆ ತಿರುಗುತ್ತಿರುತ್ತದೆ.

12203012a ಯತ್ತದಕ್ಷರಮವ್ಯಕ್ತಮಮೃತಂ ಬ್ರಹ್ಮ ಶಾಶ್ವತಮ್|

12203012c ವದಂತಿ ಪುರುಷವ್ಯಾಘ್ರಂ ಕೇಶವಂ ಪುರುಷರ್ಷಭಮ್||

ಅಕ್ಷರವೂ ಅವ್ಯಕ್ತವೂ ಅಮೃತವೂ ಆಗಿರುವ ಶಾಶ್ವತ ಬ್ರಹ್ಮವಸ್ತುವನ್ನೇ ಪುರುಷರ್ಷಭ, ಪುರುಷವ್ಯಾಘ್ರ ಕೇಶವನೆಂದು ಹೇಳುತ್ತಾರೆ.

12203013a ಪಿತೃನ್ದೇವಾನೃಷೀಂಶ್ಚೈವ ತಥಾ ವೈ ಯಕ್ಷದಾನವಾನ್|

12203013c ನಾಗಾಸುರಮನುಷ್ಯಾಂಶ್ಚ ಸೃಜತೇ ಪರಮೋಽವ್ಯಯಃ||

ಆ ಪರಮ ಅವ್ಯಯನೇ ಪಿತೃಗಳನ್ನೂ, ಋಷಿಗಳನ್ನೂ, ಯಕ್ಷ-ದಾನವರನ್ನೂ, ನಾಗ-ಅಸುರ-ಮನುಷ್ಯರನ್ನೂ ಸೃಷ್ಟಿಸುತ್ತಾನೆ.

12203014a ತಥೈವ ವೇದಶಾಸ್ತ್ರಾಣಿ ಲೋಕಧರ್ಮಾಂಶ್ಚ ಶಾಶ್ವತಾನ್|

12203014c ಪ್ರಲಯೇ ಪ್ರಕೃತಿಂ ಪ್ರಾಪ್ಯ ಯುಗಾದೌ ಸೃಜತೇ ಪ್ರಭುಃ||

ಹಾಗೆಯೇ ಪ್ರಲಯದಲ್ಲಿ ಪ್ರಕೃತಿಯಲ್ಲಿ ಲಯವಾದ ಶಾಶ್ವತ ವೇದಶಾಸ್ತ್ರಗಳನ್ನೂ, ಲೋಕಧರ್ಮಗಳನ್ನೂ ಯುಗಾದಿಯಲ್ಲಿ ಪ್ರಭುವು ಸೃಷ್ಟಿಸುತ್ತಾನೆ.

12203015a ಯಥರ್ತುಷ್ವ್ ಋತುಲಿಂಗಾನಿ ನಾನಾರೂಪಾಣಿ ಪರ್ಯಯೇ|

12203015c ದೃಶ್ಯಂತೇ ತಾನಿ ತಾನ್ಯೇವ ತಥಾ ಬ್ರಹ್ಮಾಹರಾತ್ರಿಷು[5]||

ಋತುಗಳು ಬದಲಾಗುತ್ತಿದ್ದಂತೆ ಹೇಗೆ ಹಿಂದಿನ ವರ್ಷದಲ್ಲಿದ್ದಂತೆಯೇ ಬೇರೆ ಬೇರೆ ಋತುಲಕ್ಷಣ-ರೂಪಗಳು ಮೂಡಿಬರುತ್ತವೆಯೋ ಹಾಗೆಯೇ ಬ್ರಹ್ಮನ ಹಗಲು-ರಾತ್ರಿಗಳು ಹಿಂದಿನ ದಿನದ ಹಗಲು-ರಾತ್ರಿಗಳಂತೆಯೇ ಅಭಿವ್ಯಕ್ತವಾಗುತ್ತವೆ.

12203016a ಅಥ ಯದ್ಯದ್ಯದಾ ಭಾವಿ ಕಾಲಯೋಗಾದ್ಯುಗಾದಿಷು|

12203016c ತತ್ತದುತ್ಪದ್ಯತೇ ಜ್ಞಾನಂ ಲೋಕಯಾತ್ರಾವಿಧಾನಜಮ್||

ಕಾಲಕ್ರಮದಂತೆ ಆಯಾ ಯುಗಗಳ ಆದಿಯಲ್ಲಿ ಯಾವ ಯಾವ ವಸ್ತುಗಳು ಅಭಿವ್ಯಕ್ತವಾಗುತ್ತವೆಯೋ ಲೋಕವ್ಯವಹಾರವನ್ನು ಅನುಸರಿಸಿ ಆಯಾ ವಸ್ತುಗಳ ಜ್ಞಾನವೂ ಉಂಟಾಗುತ್ತದೆ.

12203017a ಯುಗಾಂತೇಽಂತರ್ಹಿತಾನ್ವೇದಾನ್ಸೇತಿಹಾಸಾನ್ಮಹರ್ಷಯಃ|

12203017c ಲೇಭಿರೇ ತಪಸಾ ಪೂರ್ವಮನುಜ್ಞಾತಾಃ ಸ್ವಯಂಭುವಾ||

ಯುಗಾಂತದಲ್ಲಿ ಅಂತರ್ಹಿತವಾಗಿದ್ದ ವೇದ-ಇತಿಹಾಸಗಳನ್ನು ಹಿಂದೆ ಮಹರ್ಷಿಗಳು ಸ್ವಯಂಭುವಿನ ಅನುಮತಿಯಂತೆ ತಪಸ್ಸಿನಿಂದ ಪುನಃ ಪಡೆದುಕೊಂಡರು.

12203018a ವೇದವಿದ್ವೇದ ಭಗವಾನ್ವೇದಾಂಗಾನಿ ಬೃಹಸ್ಪತಿಃ|

12203018c ಭಾರ್ಗವೋ ನೀತಿಶಾಸ್ತ್ರಂ ಚ ಜಗಾದ ಜಗತೋ ಹಿತಮ್||

ಆಗ ಜಗತ್ತಿನ ಹಿತಕ್ಕಾಗಿ ಸ್ವಯಂ ಭಗವಾನ್ ಬ್ರಹ್ಮನು ವೇದಗಳನ್ನೂ, ಬೃಹಸ್ಪತಿ-ಭಾರ್ಗವರು ನೀತಿಶಾಸ್ತ್ರವನ್ನೂ ಮಹರ್ಷಿಗಳಿಗೆ ಉಪದೇಶಿಸಿದರು.

12203019a ಗಾಂಧರ್ವಂ ನಾರದೋ ವೇದಂ ಭರದ್ವಾಜೋ ಧನುರ್ಗ್ರಹಮ್|

12203019c ದೇವರ್ಷಿಚರಿತಂ ಗಾರ್ಗ್ಯಃ ಕೃಷ್ಣಾತ್ರೇಯಶ್ಚಿಕಿತ್ಸಿತಮ್||

ಗಂಧರ್ವವೇದವನ್ನು ನಾರದನೂ, ಧನುರ್ವೇದವನ್ನು ಭರದ್ವಾಜನೂ, ಗಾರ್ಗ್ಯನು ದೇವರ್ಷಿಚರಿತ್ರೆಯನ್ನೂ ಮತ್ತು ಕೃಷ್ಣಾತ್ರೇಯನು ಚಿಕಿತ್ಸಶಾಸ್ತ್ರವನ್ನೂ ತಿಳಿದುಕೊಂಡರು.

12203020a ನ್ಯಾಯತಂತ್ರಾಣ್ಯನೇಕಾನಿ ತೈಸ್ತೈರುಕ್ತಾನಿ ವಾದಿಭಿಃ|

12203020c ಹೇತ್ವಾಗಮಸದಾಚಾರೈರ್ಯದುಕ್ತಂ ತದುಪಾಸ್ಯತೇ||

ತಾರ್ಕಿಕರು ಹೇಳಿದ್ದ ಅನೇಕ ನ್ಯಾಯತಂತ್ರಗಳನ್ನೂ ತಿಳಿದುಕೊಂಡರು. ವೇದ-ಶಾಸ್ತ್ರಗಳು ಹೇಳಿರುವ ಹೇತು ಮತ್ತು ಸದಾಚಾರಗಳಿಂದ ಯುಕ್ತವಾದ ಆ ಬ್ರಹ್ಮವಸ್ತುವನ್ನು ಉಪಾಸಿಸಿದರು. 

12203021a ಅನಾದ್ಯಂ ಯತ್ಪರಂ ಬ್ರಹ್ಮ ನ ದೇವಾ ನರ್ಷಯೋ ವಿದುಃ|

12203021c ಏಕಸ್ತದ್ವೇದ ಭಗವಾನ್ಧಾತಾ ನಾರಾಯಣಃ ಪ್ರಭುಃ||

ಆ ಅನಾದಿ ಪರಬ್ರಹ್ಮನನ್ನು ದೇವ-ಋಷಿಗಳೂ ಅರಿಯರು. ಧಾತಾ ಪ್ರಭು ನಾರಾಯಣನೊಬ್ಬನೇ ಅದನ್ನು ತಿಳಿದುಕೊಂಡಿದ್ದಾನೆ.

12203022a ನಾರಾಯಣಾದೃಷಿಗಣಾಸ್ತಥಾ ಮುಖ್ಯಾಃ ಸುರಾಸುರಾಃ|

12203022c ರಾಜರ್ಷಯಃ ಪುರಾಣಾಶ್ಚ ಪರಮಂ ದುಃಖಭೇಷಜಮ್||

ನಾರಾಯಣನಿಂದಲೇ ದುಃಖಕ್ಕೆ ಪರಮೌಷಧಿಯಾದ ಬ್ರಹ್ಮಜ್ಞಾನವನ್ನು ಋಷಿಗಣಗಳು, ಮುಖ್ಯ ಸುರಾಸುರರು, ಮತ್ತು ಪ್ರಾಚೀನ ರಾಜರ್ಷಿಗಳು ಪಡೆದುಕೊಂಡರು.

12203023a ಪುರುಷಾಧಿಷ್ಠಿತಂ ಭಾವಂ ಪ್ರಕೃತಿಃ ಸೂಯತೇ ಸದಾ|

12203023c ಹೇತುಯುಕ್ತಮತಃ ಸರ್ವಂ ಜಗತ್ಸಂಪರಿವರ್ತತೇ||

ಪುರುಷನಲ್ಲಿ ಕಾಣಿಸಿಕೊಳ್ಳುವ ಎಲ್ಲ ಭಾವಗಳನ್ನೂ ಪ್ರಕೃತಿಯೇ ಹುಟ್ಟಿಸುತ್ತದೆ. ಆ ಪ್ರಕೃತಿಯಿಂದಲೇ ಹೇತುಯುಕ್ತವಾದ ಸರ್ವ ಜಗತ್ತೂ ಹುಟ್ಟಿಕೊಳ್ಳುತ್ತದೆ.

12203024a ದೀಪಾದನ್ಯೇ ಯಥಾ ದೀಪಾಃ ಪ್ರವರ್ತಂತೇ ಸಹಸ್ರಶಃ|

12203024c ಪ್ರಕೃತಿಃ ಸೃಜತೇ ತದ್ವದಾನಂತ್ಯಾನ್ನಾಪಚೀಯತೇ||

ಒಂದು ದೀಪದಿಂದ ಸಹಸ್ರಾರು ಅನ್ಯ ದೀಪಗಳು ಹೊತ್ತಿಕೊಳ್ಳುವಂತೆ ಮತ್ತು ಸಾವಿರ ದೀಪಗಳನ್ನು ಹೊತ್ತಿಸಿದರೂ ಮೊದಲಿದ್ದ ದೀಪವು ತನ್ನ ಪೂರ್ಣಸ್ವರೂಪವನ್ನು ಕಳೆದುಕೊಳ್ಳದೇ ಇರುವಂತೆ, ಒಂದೇ ಪ್ರಕೃತಿಯು ಅಸಂಖ್ಯಾತ ಪದಾರ್ಥಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಆದರೂ ಅದು ತನ್ನ ಪೂರ್ಣಸ್ವರೂಪದಲ್ಲಿ ನ್ಯೂನತೆಯನ್ನು ಹೊಂದುವುದಿಲ್ಲ.

12203025a ಅವ್ಯಕ್ತಕರ್ಮಜಾ ಬುದ್ಧಿರಹಂಕಾರಂ ಪ್ರಸೂಯತೇ|

12203025c ಆಕಾಶಂ ಚಾಪ್ಯಹಂಕಾರಾದ್ವಾಯುರಾಕಾಶಸಂಭವಃ||

ಅವ್ಯಕ್ತ ಪ್ರಕೃತಿಯ ಕರ್ಮದಿಂದ ಹುಟ್ಟಿದ ಬುದ್ಧಿಯು ಅಹಂಕಾರವನ್ನು ಹುಟ್ಟಿಸುತ್ತದೆ. ಆಕಾಶವು ಅಹಂಕಾರದಿಂದ ಹುಟ್ಟುತ್ತದೆ. ವಾಯುವು ಆಕಾಶದಿಂದ ಹುಟ್ಟುತ್ತದೆ.

12203026a ವಾಯೋಸ್ತೇಜಸ್ತತಶ್ಚಾಪಸ್ತ್ವದ್ಭ್ಯೋ ಹಿ ವಸುಧೋದ್ಗತಾ|

12203026c ಮೂಲಪ್ರಕೃತಯೋಽಷ್ಟೌ ತಾ ಜಗದೇತಾಸ್ವವಸ್ಥಿತಮ್||

ವಾಯುವಿನಿಂದ ತೇಜಸ್ಸೂ, ಅದರಿಂದ ಆಪವೂ ಮತ್ತು ಆಪದಿಂದ ವಸುಧೆಯೂ ಹುಟ್ಟಿಕೊಳ್ಳುತ್ತದೆ. ಯಾವುದರಲ್ಲಿ ಜಗತ್ತೆಲ್ಲವೂ ವ್ಯವಸ್ಥಿತವಾಗಿರುವುದೋ ಈ ಎಂಟನ್ನು ಮೂಲಪ್ರಕೃತಿಗಳು ಎನ್ನುತ್ತಾರೆ.

12203027a ಜ್ಞಾನೇಂದ್ರಿಯಾಣ್ಯತಃ ಪಂಚ ಪಂಚ ಕರ್ಮೇಂದ್ರಿಯಾಣ್ಯಪಿ|

12203027c ವಿಷಯಾಃ ಪಂಚ ಚೈಕಂ ಚ ವಿಕಾರೇ ಷೋಡಶಂ ಮನಃ||

ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು. ಐದು ವಿಷಯಗಳು ಮತ್ತು ಹದಿನಾರನೆಯ ಮನಸ್ಸು – ಈ ಹದಿನಾರನ್ನು ಮೂಲಪ್ರಕೃತಿಗಳ ವಿಕಾರಗಳೆಂದು ಹೇಳುತ್ತಾರೆ. ಈ ಹದಿನಾರರಲ್ಲಿ ಮನಸ್ಸು ಅಹಂಕಾರದ ವಿಕಾರವು. ಉಳಿದ ಹದಿನೈದು ಅವುಗಳ ಉತ್ಪತ್ತಿಗೆ ಕಾರಣವಾದ ಪಂಚಮಹಾಭೂತಗಳ ವಿಕಾರಗಳು.

12203028a ಶ್ರೋತ್ರಂ ತ್ವಕ್ಚಕ್ಷುಷೀ ಜಿಹ್ವಾ ಘ್ರಾಣಂ ಪಂಚೇಂದ್ರಿಯಾಣ್ಯಪಿ|

12203028c ಪಾದೌ ಪಾಯುರುಪಸ್ಥಶ್ಚ ಹಸ್ತೌ ವಾಕ್ಕರ್ಮಣಾಮಪಿ||

ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು – ಈ ಐದು ಜ್ಞಾನೇಂದ್ರಿಯಗಳು. ಪಾದಗಳು, ಗುದ, ಜನನೇಂದ್ರಿಯ, ಕೈಗಳು ಮತ್ತು ಮಾತು – ಈ ಐದು ಕರ್ಮೇಂದ್ರಿಯಗಳು.

12203029a ಶಬ್ದಃ ಸ್ಪರ್ಶೋಽಥ ರೂಪಂ ಚ ರಸೋ ಗಂಧಸ್ತಥೈವ ಚ|

12203029c ವಿಜ್ಞೇಯಂ ವ್ಯಾಪಕಂ ಚಿತ್ತಂ ತೇಷು ಸರ್ವಗತಂ ಮನಃ||

ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವು ಇಂದ್ರಿಯಾರ್ಥ ವಿಷಯಗಳು. ಈ ಹದಿನೈದರಲ್ಲಿಯೂ ಚಿತ್ತವು ವ್ಯಾಪಿಸಿದೆ ಎಂದು ತಿಳಿಯಬೇಕು. ಮನಸ್ಸು ಅವೆಲ್ಲವುಗಳನ್ನೂ ಪ್ರವೇಶಿಸುವಂಥಹುದು.

12203030a ರಸಜ್ಞಾನೇ ತು ಜಿಹ್ವೇಯಂ ವ್ಯಾಹೃತೇ ವಾಕ್ತಥೈವ ಚ|

12203030c ಇಂದ್ರಿಯೈರ್ವಿವಿಧೈರ್ಯುಕ್ತಂ ಸರ್ವಂ ವ್ಯಸ್ತಂ[6] ಮನಸ್ತಥಾ||

ವಿವಿಧ ಇಂದ್ರಿಯಗಳಿಂದ ಕೂಡಿದ ಮನಸ್ಸು ಎಲ್ಲವುಗಳಲ್ಲಿಯೂ ವ್ಯಸ್ತವಾಗಿರುತ್ತದೆ. ರಸವನ್ನು ತಿಳಿಯುವಾಗ ನಾಲಿಗೆಯು ಜ್ಞಾನೇಂದ್ರಿಯವಾಗುತ್ತದೆ. ಅದೇ ನಾಲಿಗೆಯನ್ನು ಮಾತನಾಡಲು ಬಳಸಿದಾಗ ವಾಗೇಂದ್ರಿಯವಾಗುತ್ತದೆ[7].

12203031a ವಿದ್ಯಾತ್ತು ಷೋಡಶೈತಾನಿ ದೈವತಾನಿ ವಿಭಾಗಶಃ|

12203031c ದೇಹೇಷು ಜ್ಞಾನಕರ್ತಾರಮುಪಾಸೀನಮುಪಾಸತೇ||

ದೇವತೆಗಳ ರೂಪದಲ್ಲಿರುವ ಹತ್ತು ಇಂದ್ರಿಯಗಳು, ಐದು ಮಹಾಭೂತಗಳು ಮತ್ತು ಮನಸ್ಸು – ಈ ಹದಿನಾರು ತತ್ತ್ವಗಳು ದೇಹಗಳಲ್ಲಿ ನೆಲೆಸಿರುವ ಜ್ಞಾನಕರ್ತಾರನನ್ನು ಉಪಾಸಿಸುತ್ತಿರುತ್ತವೆ.

12203032a ತದ್ವತ್ಸೋಮಗುಣಾ ಜಿಹ್ವಾ ಗಂಧಸ್ತು ಪೃಥಿವೀಗುಣಃ|

12203032c ಶ್ರೋತ್ರಂ ಶಬ್ದಗುಣಂ ಚೈವ ಚಕ್ಷುರಗ್ನೇರ್ಗುಣಸ್ತಥಾ|

12203032e ಸ್ಪರ್ಶಂ ವಾಯುಗುಣಂ ವಿದ್ಯಾತ್ಸರ್ವಭೂತೇಷು ಸರ್ವದಾ||

ಸರ್ವದಾ ಸರ್ವಭೂತಗಳಲ್ಲಿ ನಾಲಿಗೆಯು ಸೋಮಗುಣವೆಂದೂ, ಗಂಧವು ಪೃಥ್ವೀಗುಣವೆಂದೂ, ಶ್ರೋತ್ರವು ಶಬ್ದಗುಣವೆಂದೂ, ಚಕ್ಷುವು ಅಗ್ನಿಗುಣವೆಂದೂ ಮತ್ತು ಸ್ಪರ್ಶವು ವಾಯುಗುಣವೆಂದೂ ತಿಳಿಯಬೇಕು.

12203033a ಮನಃ ಸತ್ತ್ವಗುಣಂ ಪ್ರಾಹುಃ ಸತ್ತ್ವಮವ್ಯಕ್ತಜಂ ತಥಾ|

12203033c ಸರ್ವಭೂತಾತ್ಮಭೂತಸ್ಥಂ ತಸ್ಮಾದ್ಬುಧ್ಯೇತ ಬುದ್ಧಿಮಾನ್||

ಮನಸ್ಸು ಸತ್ತ್ವಗುಣವೆಂದು ಹೇಳುತ್ತಾರೆ. ಸತ್ತ್ವವು ಅವ್ಯಕ್ತದಿಂದ ಹುಟ್ಟಿದುದು. ಇದರಿಂದಾಗಿ ಬುದ್ಧಿಮಾನ ಪರಮಾತ್ಮನು ಸರ್ವಭೂತಗಳಲ್ಲಿಯೂ ಆತ್ಮರೂಪನಾಗಿರುವನೆಂದು ತಿಳಿಯಬೇಕು.

12203034a ಏತೇ ಭಾವಾ ಜಗತ್ಸರ್ವಂ ವಹಂತಿ ಸಚರಾಚರಮ್|

12203034c ಶ್ರಿತಾ ವಿರಜಸಂ ದೇವಂ ಯಮಾಹುಃ ಪರಮಂ ಪದಮ್||

ಈ ರೀತಿ ಸತ್ತ್ವಾದಿ ಭಾವಗಳು ಜಗತ್ತಿನ ಎಲ್ಲ ಸಚರಾಚರಗಳಲ್ಲಿಯೂ ಹರಿಯುತ್ತಿರುತ್ತವೆ. ಅವು ಪರಮ ಪದವೆಂದು ಹೇಳುವ ವಿರಜಸ ದೇವನನ್ನು ಆಶ್ರಯಿಸಿಕೊಂಡಿರುತ್ತವೆ.

12203035a ನವದ್ವಾರಂ ಪುರಂ ಪುಣ್ಯಮೇತೈರ್ಭಾವೈಃ ಸಮನ್ವಿತಮ್|

12203035c ವ್ಯಾಪ್ಯ ಶೇತೇ ಮಹಾನಾತ್ಮಾ ತಸ್ಮಾತ್ಪುರುಷ ಉಚ್ಯತೇ||

ಈ ಹದಿನಾರು ತತ್ತ್ವಗಳಿಂದ ಸಂಪನ್ನವಾಗಿರುವ ಮತ್ತು ಒಂಬತ್ತು ಬಾಗಿಲುಗಳುಳ್ಳ ಈ ಪುಣ್ಯ ಪುರಿಯನ್ನೇ ವ್ಯಾಪಿಸಿಕೊಂಡು ಆ ಮಹಾನ್ ಆತ್ಮವು ಪವಡಿಸಿಕೊಂಡಿರುತ್ತದೆ. ಆದುದರಿಂದ ಅದಕ್ಕೆ ಪುರುಷ ಎಂದು ಹೇಳುತ್ತಾರೆ[8].

12203036a ಅಜರಃ ಸೋಽಮರಶ್ಚೈವ ವ್ಯಕ್ತಾವ್ಯಕ್ತೋಪದೇಶವಾನ್|

12203036c ವ್ಯಾಪಕಃ ಸಗುಣಃ ಸೂಕ್ಷ್ಮಃ ಸರ್ವಭೂತಗುಣಾಶ್ರಯಃ||

ಆ ಪುರುಷನು ಅಜರನು. ಅಮರನು, ವ್ಯಕ್ತಾವ್ಯಕ್ತಪ್ರೇರಕನು. ವ್ಯಾಪಕನು, ಸಗುಣನು. ಸೂಕ್ಷ್ಮನು. ಮತ್ತು ಸರ್ವಭೂತಗಳಿಗೂ ಗುಣಗಳಿಗೂ ಆಶ್ರಯನು.

12203037a ಯಥಾ ದೀಪಃ ಪ್ರಕಾಶಾತ್ಮಾ ಹ್ರಸ್ವೋ ವಾ ಯದಿ ವಾ ಮಹಾನ್|

12203037c ಜ್ಞಾನಾತ್ಮಾನಂ ತಥಾ ವಿದ್ಯಾತ್ಪುರುಷಂ ಸರ್ವಜಂತುಷು||

ದೀಪವು ಸಣ್ಣದೇ ಆಗಿರಲಿ ಅಥವಾ ದೊಡ್ಡದೇ ಆಗಿರಲಿ ಪ್ರಕಾಶಸ್ವರೂಪವೇ ಆಗಿರುವಂತೆ ಸರ್ವಪ್ರಾಣಿಗಳಲ್ಲಿಯೂ ಇರುವ ಪುರುಷನು ಜ್ಞಾನಸ್ವರೂಪನೆಂದು ತಿಳಿಯಬೇಕು.

12203038a ಸೋಽತ್ರ[9] ವೇದಯತೇ ವೇದ್ಯಂ ಸ ಶೃಣೋತಿ ಸ ಪಶ್ಯತಿ|

12203038c ಕಾರಣಂ ತಸ್ಯ ದೇಹೋಽಯಂ ಸ ಕರ್ತಾ ಸರ್ವಕರ್ಮಣಾಮ್||

ಅವನು ಅಲ್ಲಿ ತಿಳಿಯಬೇಕಾದುದನ್ನು ತಿಳಿದುಕೊಳ್ಳುತ್ತಾನೆ. ಕೇಳುತ್ತಾನೆ. ನೋಡುತ್ತಾನೆ. ಈ ದೇಹವು ಅವನಿಗೆ ಕರಣಗಳಾಗಿದ್ದರೆ ಅವನೇ ಸರ್ವಕರ್ಮಗಳ ಕರ್ತೃವಾಗಿದ್ದಾನೆ.

12203039a ಅಗ್ನಿರ್ದಾರುಗತೋ ಯದ್ವದ್ಭಿನ್ನೇ ದಾರೌ ನ ದೃಶ್ಯತೇ|

12203039c ತಥೈವಾತ್ಮಾ ಶರೀರಸ್ಥೋ ಯೋಗೇನೈವಾತ್ರ ದೃಶ್ಯತೇ||

ಕಟ್ಟಿಗೆಯನ್ನು ಸೀಳಿದರೆ ಕಟ್ಟಿಗೆಯಲ್ಲಿರುವ ಅಗ್ನಿಯು ಹೇಗೆ ಕಾಣುವುದಿಲ್ಲವೋ ಹಾಗೆ ಶರೀರಸ್ಥನಾಗಿರುವ ಆತ್ಮನನ್ನು ಅದರಲ್ಲಿ ನೋಡಲಿಕ್ಕಾಗುವುದಿಲ್ಲ. ಯೋಗದಿಂದ ಮಾತ್ರ ಅವನನ್ನು ನೋಡಬಲ್ಲೆವು.

[10]12203040a ನದೀಷ್ವಾಪೋ ಯಥಾ ಯುಕ್ತಾ ಯಥಾ ಸೂರ್ಯೇ ಮರೀಚಯಃ|

12203040c ಸಂತನ್ವಾನಾ ಯಥಾ ಯಾಂತಿ[11] ತಥಾ ದೇಹಾಃ ಶರೀರಿಣಾಮ್||

ನದಿಗಳು ಹೇಗೆ ನೀರಿನಿಂದ ಕೂಡಿವೆಯೋ ಮತ್ತು ಸೂರ್ಯನು ಹೇಗೆ ಕಿರಣಗಳಿಂದ ಕೂಡಿರುವನೋ ಮತ್ತು ಹೇಗೆ ಅವು ಒಟ್ಟಿಗೇ ಹೋಗುತ್ತಿರುವವೋ ಹಾಗೆ ದೇಹಗಳು ಜೀವಾತ್ಮನನ್ನು ಕೂಡಿದ್ದು ಜೊತೆಯಲ್ಲಿಯೇ ನಡೆಯುತ್ತಿರುತ್ತವೆ.

12203041a ಸ್ವಪ್ನಯೋಗೇ ಯಥೈವಾತ್ಮಾ ಪಂಚೇಂದ್ರಿಯಸಮಾಗತಃ|

12203041c ದೇಹಮುತ್ಸೃಜ್ಯ ವೈ ಯಾತಿ ತಥೈವಾತ್ರೋಪಲಭ್ಯತೇ||

ಸ್ವಪ್ನದ ಸಮಯದಲ್ಲಿ ಪಂಚೇಂದ್ರಿಯಯುಕ್ತ ಜೀವಾತ್ಮನು ಹೇಗೆ ದೇಹವನ್ನು ಬಿಟ್ಟು ಬೇರೆ ಕಡೆ ಹೋಗಿರುತ್ತಾನೋ ಹಾಗೆ ಮರಣಾನಂತರವೂ ಈ ಶರೀರವನ್ನು ಬಿಟ್ಟು ಬೇರೆ ಶರೀರವನ್ನು ಆಶ್ರಯಿಸುತ್ತಾನೆ.

12203042a ಕರ್ಮಣಾ ವ್ಯಾಪ್ಯತೇ ಪೂರ್ವಂ ಕರ್ಮಣಾ ಚೋಪಪದ್ಯತೇ[12]|

12203042c ಕರ್ಮಣಾ ನೀಯತೇಽನ್ಯತ್ರ ಸ್ವಕೃತೇನ ಬಲೀಯಸಾ||

ಕರ್ಮಗಳೇ ಹಿಂದಿನ ಶರೀರಗಳನ್ನು ವ್ಯಾಪಿಸಿಕೊಂಡಿರುತ್ತವೆ. ಕರ್ಮಗಳಿಂದಲೇ ಇನ್ನೊಂದು ಶರೀರವನ್ನು ಪಡೆದುಕೊಳ್ಳುತ್ತದೆ. ತಾನು ಮಾಡಿದ ಕರ್ಮಗಳ ಬಲದಿಂದಲೇ ಅವನು ಅನ್ಯ ಶರೀರವನ್ನು ಪಡೆದುಕೊಳ್ಳುತ್ತಾನೆ.

12203043a ಸ ತು ದೇಹಾದ್ಯಥಾ ದೇಹಂ ತ್ಯಕ್ತ್ವಾನ್ಯಂ ಪ್ರತಿಪದ್ಯತೇ|

12203043c ತಥಾ ತಂ ಸಂಪ್ರವಕ್ಷ್ಯಾಮಿ ಭೂತಗ್ರಾಮಂ ಸ್ವಕರ್ಮಜಮ್||

ಜೀವಾತ್ಮನು ಹೇಗೆ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಪಡೆದುಕೊಳ್ಳುತ್ತಾನೋ ಹಾಗೆ ತನ್ನ ಕರ್ಮದಿಂದ ಸ್ಥಾವರ-ಜಂಗಮ ರೂಪಗಳನ್ನು ಹೇಗೆ ಪಡೆಯುತ್ತಾನೆ ಎನ್ನುವುದನ್ನು ನಿನಗೆ ವಿಷದವಾಗಿ ಹೇಳುತ್ತೇನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾರ್ಷ್ಣೇಯಾಧ್ಯಾತ್ಮಕಥನೇ ತ್ರ್ಯಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾರ್ಷ್ಣೇಯಾಧ್ಯಾತ್ಮಕಥನ ಎನ್ನುವ ಇನ್ನೂರಾಮೂರನೇ ಅಧ್ಯಾಯವು.

[1] ಪೃಥ್ವಿಯೇ ಮೊದಲಾದ ಪಂಚ ಮಹಾಭೂತಗಳು ಸರ್ವತ್ರ ಸಮನಾಗಿವೆ. ಎಲ್ಲ ಪ್ರಾಣಿಗಳ ಶರೀರಗಳೂ ಈ ಪಂಚ ಮಹಾಭೂತಗಳಿಂದ ನಿರ್ಮಿಸಲ್ಪಟ್ಟಿವೆ. ಹೀಗಿದ್ದರೂ ಶರೀರಗಳಲ್ಲಿ ಕ್ಷಯ ಮತ್ತು ವೃದ್ಧಿಗಳೆಂಬ ವಿಪರಿತ ವಿಕಾರಗಳು ಹೇಗುಂಟಾಗುತ್ತವೆ? (ಭಾರತ ದರ್ಶನ).

[2] ಪರಮಿದಂ (ಗೀತಾ ಪ್ರೆಸ್/ಭಾರತ ದರ್ಶನ).

[3] ಸಂಪೂರ್ಣ ವೇದಗಳಿಗೂ ಮುಖಪ್ರಾಯವಾಗಿರುವ ಓಂಕಾರ ಅಥವಾ ಪ್ರಣವ (ಭಾರತ ದರ್ಶನ/ಗೀತಾ ಪ್ರೆಸ್).

[4] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ವೈಶ್ಯೋ ವೈಶೈಸ್ತಥಾ ಶ್ರಾವ್ಯಃ ಶೂದ್ರಃ ಶೂದ್ರೈರ್ಮಹಾಮನಾಃ| (ಭಾರತ ದರ್ಶನ/ಗೀತಾ ಪ್ರೆಸ್).

[5] ತಥಾ ಭಾವಾ ಯುಗಾದಿಷು| (ಭಾರತ ದರ್ಶನ/ಗೀತಾ ಪ್ರೆಸ್).

[6] ವ್ಯಕ್ತಂ (ಭಾರತ ದರ್ಶನ/ಗೀತಾ ಪ್ರೆಸ್).

[7] ಮನಸ್ಸು ಇಂದ್ರಿಯಗಳನ್ನು ಪ್ರವೇಶಿಸದೇ ಇಂದ್ರಿಯಗಳು ಸ್ವತಂತ್ರವಾಗಿ ಯಾವುದನ್ನೂ ಮಾಡಲಾರವು (ಭಾರತ ದರ್ಶನ).

[8] ಪುರು ಶೇತೇ ಇತಿ ಪುರುಷಃ (ಭಾರತ ದರ್ಶನ).

[9] ಶ್ರೋತ್ರಂ (ಭಾರತ ದರ್ಶನ/ಗೀತಾ ಪ್ರೆಸ್).

[10] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಗ್ನಿರ್ಯಥಾ ಹ್ಯುಪಾಯೇನ ಮಥಿತ್ಯಾ ದಾರು ದೃಶ್ಯತೇ| ತಥೈವಾತ್ಮಾ ಶರೀರಸ್ಥೋ ಯೋಗೇನೈವಾತ್ರ ದೃಶ್ಯತೇ|| (ಭಾರತ ದರ್ಶನ/ಗೀತಾ ಪ್ರೆಸ್).

[11] ಸಂತತತ್ವಾದ್ಯಥಾ (ಭಾರತ ದರ್ಶನ/ಗೀತಾ ಪ್ರೆಸ್).

[12] ಕರ್ಮಣಾ ಬಾಧ್ಯತೇ ರೂಪಂ ಕರ್ಮಣಾ ಚೋಪಲಭ್ಯತೇ| (ಭಾರತ ದರ್ಶನ).

Comments are closed.