Shanti Parva: Chapter 202

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೦೨

ವರಾಹರೂಪ

ಭಗವಾನ್ ವಿಷ್ಣುವು ವರಾಹ ರೂಪವನ್ನು ತಾಳಿ ದಾನವರನ್ನು ನಾಶಗೊಳಿಸಿ ದೇವತೆಗಳನ್ನು ರಕ್ಷಿಸುವುದು (೧-೩೩).

12202001 ಯುಧಿಷ್ಠಿರ ಉವಾಚ|

12202001a ಪಿತಾಮಹ ಮಹಾಪ್ರಾಜ್ಞ ಯುಧಿ ಸತ್ಯಪರಾಕ್ರಮ|

12202001c ಶ್ರೋತುಮಿಚ್ಚಾಮಿ ಕಾರ್ತ್ಸ್ನ್ಯೇನ ಕೃಷ್ಣಮವ್ಯಯಮೀಶ್ವರಮ್||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಯುದ್ಧದಲ್ಲಿ ಸತ್ಯಪರಾಕ್ರಮಿಯೇ! ಅವ್ಯಯ ಈಶ್ವರ ಕೃಷ್ಣನ ಕುರಿತು ಸಂಪೂರ್ಣವಾಗಿ ಕೇಳಬಯಸುತ್ತೇನೆ.

12202002a ಯಚ್ಚಾಸ್ಯ ತೇಜಃ ಸುಮಹದ್ಯಚ್ಚ ಕರ್ಮ ಪುರಾತನಮ್|

12202002c ತನ್ಮೇ ಸರ್ವಂ ಯಥಾತತ್ತ್ವಂ ಪ್ರಬ್ರೂಹಿ ಭರತರ್ಷಭ||

ಭರತರ್ಷಭ! ಇವನ ತೇಜಸ್ಸು ಎಂಥಹುದು ಮತ್ತು ಇವನ ಪುರಾತನ ಮಹಾಕರ್ಮಗಳ್ಯಾವುವು ಎನ್ನುವುದೆಲ್ಲವನ್ನೂ ಯಥಾವತ್ತಾಗಿ ಹೇಳು.

12202003a ತಿರ್ಯಗ್ಯೋನಿಗತಂ ರೂಪಂ ಕಥಂ ಧಾರಿತವಾನ್ ಹರಿಃ|

12202003c ಕೇನ ಕಾರ್ಯವಿಸರ್ಗೇಣ ತನ್ಮೇ ಬ್ರೂಹಿ ಪಿತಾಮಹ||

ಹರಿಯು ಹೇಗೆ ಮತ್ತು ಯಾವ ಕಾರ್ಯೋದ್ದೇಶದಿಂದ ತಿರ್ಯಗ್ಯೋನಿಯಲ್ಲಿ ರೂಪವನ್ನು ಧರಿಸಿದನು?”

12202004 ಭೀಷ್ಮ ಉವಾಚ|

12202004a ಪುರಾಹಂ ಮೃಗಯಾಂ ಯಾತೋ ಮಾರ್ಕಂಡೇಯಾಶ್ರಮೇ ಸ್ಥಿತಃ|

12202004c ತತ್ರಾಪಶ್ಯಂ ಮುನಿಗಣಾನ್ಸಮಾಸೀನಾನ್ಸಹಸ್ರಶಃ||

ಭೀಷ್ಮನು ಹೇಳಿದನು: “ಹಿಂದೆ ನಾನು ಬೇಟೆಗೆಂದು ಹೋದಾಗ ಮಾರ್ಕಂಡೇಯನ ಆಶ್ರಮಕ್ಕೆ ಹೋದೆ. ಅಲ್ಲಿ ಸಹಸ್ರಾರು ಮುನಿಗಣಗಳು ಸೇರಿದ್ದುದನ್ನು ನೋಡಿದೆ.

12202005a ತತಸ್ತೇ ಮಧುಪರ್ಕೇಣ ಪೂಜಾಂ ಚಕ್ರುರಥೋ ಮಯಿ|

12202005c ಪ್ರತಿಗೃಹ್ಯ ಚ ತಾಂ ಪೂಜಾಂ ಪ್ರತ್ಯನಂದಮೃಷೀನಹಮ್||

ಆಗ ಅವರು ಮಧುಪರ್ಕದಿಂದ ನನ್ನನ್ನು ಪೂಜಿಸಿದರು. ಅವರ ಆ ಪೂಜೆಯನ್ನು ಸ್ವೀಕರಿಸಿ ನಾನು ಆ ಋಷಿಗಳನ್ನು ಪ್ರತಿನಂದಿಸಿದೆನು.

12202006a ಕಥೈಷಾ ಕಥಿತಾ ತತ್ರ ಕಶ್ಯಪೇನ ಮಹರ್ಷಿಣಾ|

12202006c ಮನಃಪ್ರಹ್ಲಾದಿನೀಂ ದಿವ್ಯಾಂ ತಾಮಿಹೈಕಮನಾಃ ಶೃಣು||

ಅಲ್ಲಿ ಮಹರ್ಷಿ ಕಶ್ಯಪನು ಹೇಳಿದ ಮನಸ್ಸನ್ನು ಆಹ್ಲಾದಿಸುವ ದಿವ್ಯಕಥೆಯನ್ನು ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.

12202007a ಪುರಾ ದಾನವಮುಖ್ಯಾ ಹಿ ಕ್ರೋಧಲೋಭಸಮನ್ವಿತಾಃ|

12202007c ಬಲೇನ ಮತ್ತಾಃ ಶತಶೋ ನರಕಾದ್ಯಾ ಮಹಾಸುರಾಃ||

ಹಿಂದೆ ನರಕಾದಿ ನೂರಾರು ಮಹಾಸುರರು ಮತ್ತು ದಾನವ ಮುಖ್ಯರು ಬಲಮತ್ತರಾಗಿ ಕ್ರೋಧಲೋಭಸಮನ್ವಿತರಾಗಿದ್ದರು.

12202008a ತಥೈವ ಚಾನ್ಯೇ ಬಹವೋ ದಾನವಾ ಯುದ್ಧದುರ್ಮದಾಃ|

12202008c ನ ಸಹಂತೇ ಸ್ಮ ದೇವಾನಾಂ ಸಮೃದ್ಧಿಂ ತಾಮನುತ್ತಮಾಮ್||

ಇವರಲ್ಲದೇ ಇನ್ನೂ ಇತರ ಅನೇಕ ಯುದ್ಧದುರ್ಮದ ದಾನವರು ಅನುತ್ತಮ ದೇವತೆಗಳ ಸಮೃದ್ಧಿಯನ್ನು ಸಹಿಸಿಕೊಂಡಿರಲಿಲ್ಲ.

12202009a ದಾನವೈರರ್ದ್ಯಮಾನಾಸ್ತು ದೇವಾ ದೇವರ್ಷಯಸ್ತಥಾ|

12202009c ನ ಶರ್ಮ ಲೇಭಿರೇ ರಾಜನ್ವಿಶಮಾನಾಸ್ತತಸ್ತತಃ||

ರಾಜನ್! ದಾನವರಿಂದ ಆಕ್ರಮಣಿಸಲ್ಪಟ್ಟ ದೇವತೆಗಳು ಮತ್ತು ದೇವರ್ಷಿಗಳು ಅಲ್ಲಿಂದಲ್ಲಿಗೆ ಓಡುತ್ತಾ ನೆಲೆಯೇ ಇಲ್ಲದಂತಾದರು.

12202010a ಪೃಥಿವೀಂ ಚಾರ್ತರೂಪಾಂ ತೇ ಸಮಪಶ್ಯನ್ದಿವೌಕಸಃ|

12202010c ದಾನವೈರಭಿಸಂಕೀರ್ಣಾಂ ಘೋರರೂಪೈರ್ಮಹಾಬಲೈಃ|

12202010e ಭಾರಾರ್ತಾಮಪಕೃಷ್ಟಾಂ ಚ ದುಃಖಿತಾಂ ಸಂನಿಮಜ್ಜತೀಮ್||

ಘೋರರೂಪದ ಮಹಾಬಲಶಾಲೀ ದಾನವರ ಗುಂಪುಗಳಿಂದ ತುಂಬಿಹೋಗಿ ಭಾರದಿಂದ ಬಳಲಿ ಸೋತು ದುಃಖಾರ್ತಳಾಗಿ ಮುಳುಗಿಹೋಗುತ್ತಿದ್ದ ಆರ್ತರೂಪೀ ಪೃಥ್ವಿಯನ್ನು ದಿವೌಕಸರು ನೋಡಿದರು.

12202011a ಅಥಾದಿತೇಯಾಃ ಸಂತ್ರಸ್ತಾ ಬ್ರಹ್ಮಾಣಮಿದಮಬ್ರುವನ್|

12202011c ಕಥಂ ಶಕ್ಯಾಮಹೇ ಬ್ರಹ್ಮನ್ದಾನವೈರುಪಮರ್ದನಮ್||

ಆಗ ಸಂತ್ರಸ್ತರಾದ ಅದಿತಿಯ ಪುತ್ರರು ಬ್ರಹ್ಮನಿಗೆ “ಬ್ರಹ್ಮನ್! ದಾನವರ ಈ ಉಪಟಳವನ್ನು ನಾವು ಹೇಗೆ ಸಹಿಸಿಕೊಳ್ಳಬಲ್ಲೆವು?” ಎಂದು ಕೇಳಿದರು.

12202012a ಸ್ವಯಂಭೂಸ್ತಾನುವಾಚೇದಂ ನಿಸೃಷ್ಟೋಽತ್ರ ವಿಧಿರ್ಮಯಾ|

12202012c ತೇ ವರೇಣಾಭಿಸಂಮತ್ತಾ ಬಲೇನ ಚ ಮದೇನ ಚ||

ಸ್ವಯಂಭುವು ಅವರಿಗೆ ಹೇಳಿದನು: “ಈ ವಿಪತ್ತಿಯನ್ನು ದೂರಮಾಡಲು ನಾನು ಒಂದು ಉಪಾಯವನ್ನು ಮಾಡಿದ್ದೇನೆ.

[1]12202013a ನಾವಭೋತ್ಸ್ಯಂತಿ ಸಂಮೂಢಾ ವಿಷ್ಣುಮವ್ಯಕ್ತದರ್ಶನಮ್|

12202013c ವರಾಹರೂಪಿಣಂ ದೇವಮಧೃಷ್ಯಮಮರೈರಪಿ||

ಆ ಸಮ್ಮೂಢರು ಅವ್ಯಕ್ತದರ್ಶನ ವಿಷ್ಣುವನ್ನು ಅರಿತಿಲ್ಲ. ಅಮರರಿಗೂ ದುರ್ಧರ್ಷನಾದ ಆ ದೇವನು ವರಾಹ ರೂಪವನ್ನು ಧರಿಸಿದ್ದಾನೆ.

12202014a ಏಷ ವೇಗೇನ ಗತ್ವಾ ಹಿ ಯತ್ರ ತೇ ದಾನವಾಧಮಾಃ|

12202014c ಅಂತರ್ಭೂಮಿಗತಾ ಘೋರಾ ನಿವಸಂತಿ ಸಹಸ್ರಶಃ|

12202014e ಶಮಯಿಷ್ಯತಿ ಶ್ರುತ್ವಾ ತೇ ಜಹೃಷುಃ ಸುರಸತ್ತಮಾಃ||

ಅವನು ವೇಗವಾಗಿ ಹೋಗಿ ಭೂಮಿಯ ಅಂತರ್ಗತರಾಗಿ ವಾಸಿಸುತ್ತಿರುವ ಸಹಸ್ರಾರು ಘೋರ ದಾನವಾಧಮರನ್ನು ಸಂಹರಿಸುತ್ತಾನೆ!” ಇದನ್ನು ಕೇಳಿ ಸುರಸತ್ತಮರು ಹರ್ಷಿತರಾದರು.

12202015a ತತೋ ವಿಷ್ಣುರ್ಮಹಾತೇಜಾ ವಾರಾಹಂ ರೂಪಮಾಶ್ರಿತಃ|

12202015c ಅಂತರ್ಭೂಮಿಂ ಸಂಪ್ರವಿಶ್ಯ ಜಗಾಮ ದಿತಿಜಾನ್ ಪ್ರತಿ||

ಆಗ ಮಹಾತೇಜಸ್ವೀ ವಿಷ್ಣುವು ವಾರಾಹರೂಪವನ್ನು ತಾಳಿ ಭೂಮಿಯನ್ನು ಪ್ರವೇಶಿಸಿ ದೈತ್ಯರ ಕಡೆ ಹೋದನು.

12202016a ದೃಷ್ಟ್ವಾ ಚ ಸಹಿತಾಃ ಸರ್ವೇ ದೈತ್ಯಾಃ ಸತ್ತ್ವಮಮಾನುಷಮ್|

12202016c ಪ್ರಸಹ್ಯ ಸಹಸಾ ಸರ್ವೇ ಸಂತಸ್ಥುಃ ಕಾಲಮೋಹಿತಾಃ||

ಆ ಅಮಾನುಷ ಸತ್ತ್ವವನ್ನು ನೋಡಿ ಕಾಲಮೋಹಿತರಾದ ದೈತ್ಯರೆಲ್ಲರೂ ಒಂದಾಗಿ ಒಮ್ಮೆಲೇ ಅವನನ್ನು ಆಕ್ರಮಣಿಸಿದರು.

12202017a ಸರ್ವೇ ಚ ಸಮಭಿದ್ರುತ್ಯ ವರಾಹಂ ಜಗೃಹುಃ ಸಮಮ್|

12202017c ಸಂಕ್ರುದ್ಧಾಶ್ಚ ವರಾಹಂ ತಂ ವ್ಯಕರ್ಷಂತ ಸಮಂತತಃ||

ಅವರೆಲ್ಲರೂ ಧಾವಿಸಿ ಬಂದು ವರಾಹವನ್ನು ಚೆನ್ನಾಗಿ ಹಿಡಿದುಕೊಂಡರು ಮತ್ತು ಸಂಕ್ರುದ್ಧರಾಗಿ ಆ ವರಾಹವನ್ನು ಎಲ್ಲಕಡೆಗಳಿಂದ ಎಳೆಯತೊಡಗಿದರು.

12202018a ದಾನವೇಂದ್ರಾ ಮಹಾಕಾಯಾ ಮಹಾವೀರ್ಯಾ ಬಲೋಚ್ಚ್ರಿತಾಃ|

12202018c ನಾಶಕ್ನುವಂಶ್ಚ ಕಿಂ ಚಿತ್ತೇ ತಸ್ಯ ಕರ್ತುಂ ತದಾ ವಿಭೋ||

ವಿಭೋ! ಆಗ ಆ ಬಲೋಚ್ಛ್ರಿತ ಮಹಾವೀರ್ಯ ಮಹಾಕಾಯ ದಾನವೇಂದ್ರರು ಅವನಿಗೆ ಏನನ್ನು ಮಾಡಲೂ ಅಸಮರ್ಥರಾದರು.

12202019a ತತೋಽಗಮನ್ವಿಸ್ಮಯಂ ತೇ ದಾನವೇಂದ್ರಾ ಭಯಾತ್ತದಾ|

12202019c ಸಂಶಯಂ ಗತಮಾತ್ಮಾನಂ ಮೇನಿರೇ ಚ ಸಹಸ್ರಶಃ||

ಆಗ ದಾನವೇಂದ್ರರು ವಿಸ್ಮಿತರಾದರು ಮತ್ತು ಭಯಗ್ರಸ್ತರಾದರು. ಆ ಸಹಸ್ರಾರು ದಾನವರು ತಮ್ಮ ಕೊನೆಯೇ ಬಂದಿದೆಯೆಂದು ಸಂಶಯತಾಳಿದರು.

12202020a ತತೋ ದೇವಾದಿದೇವಃ ಸ ಯೋಗಾತ್ಮಾ ಯೋಗಸಾರಥಿಃ|

12202020c ಯೋಗಮಾಸ್ಥಾಯ ಭಗವಾಂಸ್ತದಾ ಭರತಸತ್ತಮ||

12202021a ವಿನನಾದ ಮಹಾನಾದಂ ಕ್ಷೋಭಯನ್ದೈತ್ಯದಾನವಾನ್|

12202021c ಸಂನಾದಿತಾ ಯೇನ ಲೋಕಾಃ ಸರ್ವಾಶ್ಚೈವ ದಿಶೋ ದಶ||

ಭರತಸತ್ತಮ! ಆಗ ದೇವಾದಿದೇವ ಯೋಗಾತ್ಮಾ ಯೋಗಸಾರಥಿ ಭಗವಂತನು ಯೋಗವನ್ನು ಆಶ್ರಯಿಸಿ ದೈತ್ಯದಾನವರನ್ನು ಕ್ಷೋಭೆಗೊಳಿಸುತ್ತಾ ಮಹಾನಾದವನ್ನು ಗರ್ಜಿಸಿದನು. ಅವನ ಆ ಗರ್ಜನೆಯಿಂದ ಸರ್ವಲೋಕಗಳೂ ಹತ್ತು ದಿಕ್ಕುಗಳೂ ಕ್ಷೋಭೆಗೊಂಡವು.

12202022a ತೇನ ಸಂನಾದಶಬ್ದೇನ ಲೋಕಾಃ ಸಂಕ್ಷೋಭಮಾಗಮನ್|

12202022c ಸಂಭ್ರಾಂತಾಶ್ಚ ದಿಶಃ ಸರ್ವಾ ದೇವಾಃ ಶಕ್ರಪುರೋಗಮಾಃ||

ಅವನ ಆ ಸಂನಾದಶಬ್ದದಿಂದ ಲೋಕಗಳಲ್ಲೆ ಕ್ಷೋಭೆಯುಂಟಾಯಿತು. ಶಕ್ರನೇ ಮೊದಲಾದ ದೇವತೆಗಳೆಲ್ಲರೂ ಮತ್ತು ಎಲ್ಲ ದಿಕ್ಕುಗಳೂ ಸಂಭ್ರಾಂತಗೊಂಡವು.

12202023a ನಿರ್ವಿಚೇಷ್ಟಂ ಜಗಚ್ಚಾಪಿ ಬಭೂವಾತಿಭೃಶಂ ತದಾ|

12202023c ಸ್ಥಾವರಂ ಜಂಗಮಂ ಚೈವ ತೇನ ನಾದೇನ ಮೋಹಿತಮ್||

ಅವನ ಆ ನಾದದಿಂದ ಮೋಹಿತಗೊಂಡ ಸ್ಥಾವರ ಜಂಗಮಗಳೊಂದಿಗೆ ಜಗತ್ತೇ ಅತ್ಯಂತ ನಿರ್ವಿಚೇಷ್ಟವಾಯಿತು.

12202024a ತತಸ್ತೇ ದಾನವಾಃ ಸರ್ವೇ ತೇನ ಶಬ್ದೇನ ಭೀಷಿತಾಃ|

12202024c ಪೇತುರ್ಗತಾಸವಶ್ಚೈವ ವಿಷ್ಣುತೇಜೋವಿಮೋಹಿತಾಃ||

ಆಗ ಅವನ ಶಬ್ದದಿಂದ ಭೀಷಿತರಾಗಿ ವಿಷ್ಣುವಿನ ತೇಜಸ್ಸಿನಿಂದ ವಿಮೋಹಿತರಾಗಿ ಸರ್ವ ದಾನವರೂ ಪ್ರಾಣತೊರೆದು ಬಿದ್ದರು.

12202025a ರಸಾತಲಗತಾಂಶ್ಚೈವ ವರಾಹಸ್ತ್ರಿದಶದ್ವಿಷಃ|

12202025c ಖುರೈಃ ಸಂದಾರಯಾಮಾಸ ಮಾಂಸಮೇದೋಸ್ಥಿಸಂಚಯಮ್||

ರಸಾತಲಕ್ಕೂ ಹೋಗಿ ವರಾಹನು ತನ್ನ ಖುರಗಳಿಂದ ಸುರದ್ವೇಷಿಗಳನ್ನು ಸೀಳಿ ಅವರ ಮಾಂಸ-ಮೇದ-ಅಸ್ತಿಗಳ ರಾಶಿಯನ್ನೇ ಮಾಡಿದನು.

12202026a ನಾದೇನ ತೇನ ಮಹತಾ ಸನಾತನ ಇತಿ ಸ್ಮೃತಃ|

12202026c ಪದ್ಮನಾಭೋ ಮಹಾಯೋಗೀ ಭೂತಾಚಾರ್ಯಃ ಸ ಭೂತರಾಟ್||

ಅವನ ಆ ಮಹಾ ನಾದದಿಂದ ಪದ್ಮನಾಭ ಮಹಾಯೋಗೀ ಭೂತಾಚಾರ್ಯ ಭೂತರಾಟ್ ವಿಷ್ಣುವು “ಸನಾತನ” ಎಂದಾದನು.

12202027a ತತೋ ದೇವಗಣಾಃ ಸರ್ವೇ ಪಿತಾಮಹಮುಪಾಬ್ರುವನ್|

12202027c ನಾದೋಽಯಂ ಕೀದೃಶೋ ದೇವ ನೈನಂ ವಿದ್ಮ ವಯಂ ವಿಭೋ|

12202027e ಕೋಽಸೌ ಹಿ ಕಸ್ಯ ವಾ ನಾದೋ ಯೇನ ವಿಹ್ವಲಿತಂ ಜಗತ್||

ಆಗ ಸರ್ವ ದೇವಗಣಗಳೂ ಪಿತಾಮಹನಿಗೆ ಹೇಳಿದವು: “ದೇವ! ಇದು ಎಂತಹ ನಾದವು? ವಿಭೋ! ನಾವು ಇದನ್ನು ತಿಳಿಯಲಾರೆವು. ಅವನು ಯಾರು ಮತ್ತು ಇದು ಯಾರ ಗರ್ಜನೆ? ಇದರಿಂದ ಜಗತ್ತೇ ವಿಹ್ವಲಿತವಾಗಿಬಿಟ್ಟಿದೆ!”

12202028a ಏತಸ್ಮಿನ್ನಂತರೇ ವಿಷ್ಣುರ್ವಾರಾಹಂ ರೂಪಮಾಸ್ಥಿತಃ|

12202028c ಉದತಿಷ್ಠನ್ಮಹಾದೇವಃ ಸ್ತೂಯಮಾನೋ ಮಹರ್ಷಿಭಿಃ||

ಈ ಮಧ್ಯದಲ್ಲಿ ವಾರಾಹರೂಪವನ್ನು ಧರಿಸಿದ್ದ ಮಹಾದೇವ ವಿಷ್ಣುವು ಮಹರ್ಷಿಗಳು ಸ್ತುತಿಸುತ್ತಿರಲು ಮೇಲಕ್ಕೆದ್ದನು.

12202029 ಪಿತಾಮಹ ಉವಾಚ|

12202029a ನಿಹತ್ಯ ದಾನವಪತೀನ್ಮಹಾವರ್ಷ್ಮಾ ಮಹಾಬಲಃ|

12202029c ಏಷ ದೇವೋ ಮಹಾಯೋಗೀ ಭೂತಾತ್ಮಾ ಭೂತಭಾವನಃ||

12202030a ಸರ್ವಭೂತೇಶ್ವರೋ ಯೋಗೀ ಯೋನಿರಾತ್ಮಾ ತಥಾತ್ಮನಃ|

12202030c ಸ್ಥಿರೀಭವತ ಕೃಷ್ಣೋಽಯಂ ಸರ್ವಪಾಪಪ್ರಣಾಶನಃ||

ಪಿತಾಮಹನು ಹೇಳಿದನು: “ದಾನವಪತಿಗಳನ್ನು ಸಂಹರಿಸಿ ಬರುತ್ತಿರುವ ಈ ಮಹಾಕಾಯ ಮಹಾಬಲ ಮಹಾಯೋಗೀ ಭೂತಾತ್ಮಾ ಭೂತಭಾವನನು ದೇವ ಕೃಷ್ಣನು. ಇವನೇ ಸರ್ವಭೂತೇಶ್ವರನು. ಯೋಗಿಯು. ಆತ್ಮಯೋನಿಯು. ಸರ್ವಪಾಪಗಳನ್ನು ಕಳೆಯುವ ಪರಮಾತ್ಮನು. ಆದುದರಿಂದ ನೀವು ಧೈರ್ಯತಾಳಿರಿ.

12202031a ಕೃತ್ವಾ ಕರ್ಮಾತಿಸಾಧ್ವೇತದಶಕ್ಯಮಮಿತಪ್ರಭಃ|

12202031c ಸಮಾಯಾತಃ ಸ್ವಮಾತ್ಮಾನಂ ಮಹಾಭಾಗೋ ಮಹಾದ್ಯುತಿಃ|

12202031e ಪದ್ಮನಾಭೋ ಮಹಾಯೋಗೀ ಭೂತಾತ್ಮಾ ಭೂತಭಾವನಃ||

ಈ ಅಮಿತಪ್ರಭ ಮಹಾಭಾಗ ಮಹಾದ್ಯುತಿ ಮಹಾಯೋಗೀ ಭೂತಾತ್ಮಾ ಭೂತಭಾವನ ಪದ್ಮನಾಭನು ಇನ್ನೊಬ್ಬರಿಂದ ಮಾಡಲು ಅಶಕ್ಯವಾದ ಅತಿ ಕರ್ಮವನ್ನು ಮಾಡಿ ಪೂರೈಸಿ ಬರುತ್ತಿದ್ದಾನೆ.

12202032a ನ ಸಂತಾಪೋ ನ ಭೀಃ ಕಾರ್ಯಾ ಶೋಕೋ ವಾ ಸುರಸತ್ತಮಾಃ|

12202032c ವಿಧಿರೇಷ ಪ್ರಭಾವಶ್ಚ ಕಾಲಃ ಸಂಕ್ಷಯಕಾರಕಃ|

12202032e ಲೋಕಾನ್ಧಾರಯತಾನೇನ ನಾದೋ ಮುಕ್ತೋ ಮಹಾತ್ಮನಾ||

ಸುರಸತ್ತಮರೇ! ಸಂತಾಪಪಡಬೇಡಿರಿ! ಭಯಪಡಬೇಡಿ! ಶೋಕಿಸಬೇಡಿ. ಇವನೇ ವಿಧಿ. ಪ್ರಭಾವ. ಮತ್ತು ಸಂಕ್ಷಯಕಾರಕ ಕಾಲನು. ಈ ಮಹಾತ್ಮನು ಲೋಕಗಳನ್ನು ಉದ್ಧರಿಸುವ ಸಲುವಾಗಿ ಈ ಮಹಾನಾದವನ್ನು ಗರ್ಜಿಸಿದನು.

12202033a ಸ ಏವ ಹಿ ಮಹಾಭಾಗಃ ಸರ್ವಲೋಕನಮಸ್ಕೃತಃ|

12202033c ಅಚ್ಯುತಃ ಪುಂಡರೀಕಾಕ್ಷಃ ಸರ್ವಭೂತಸಮುದ್ಭವಃ[2]||

ಅವನೇ ಮಹಾಭಾಗ. ಸರ್ವಲೋಕನಮಸ್ಕೃತ. ಅಚ್ಯುತ. ಪುಂಡರೀಕಾಕ್ಷ ಮತ್ತು ಸರ್ವಭೂತಸಮುದ್ಭವನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅಂತರ್ಭೂಮಿವಿಕ್ರೀಡಿನಂ ನಾಮ ದ್ವ್ಯಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಅಂತರ್ಭೂಮಿವಿಕ್ರೀಡಿನ ಎನ್ನುವ ಇನ್ನೂರಾಎರಡನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ತೇ ವರೇಣಾಭಿಸಂಪನ್ನಾ ಬಲೇನ ಚ ಮದೇನ ಚ| (ಗೀತಾ ಪ್ರೆಸ್).

[2] ಇದರ ನಂತರ ಗೀತಾ ಪ್ರೆಸ್ ನಲ್ಲಿ ನಾರದನಿಗೆ ಅನುಸ್ಮೃತಿಸ್ತೋತ್ರದ ಉಪದೇಶ ಮತ್ತು ನಾರದನ ಸ್ತುತಿಗಳನ್ನು ಒಳಗೂಡಿದ  ದಕ್ಷಿಣಾತ್ಯ ಪಾಠದ ೮೬.೫ ಅಧಿಕ ಶ್ಲೋಕಗಳಿವೆ. ಇವುಗಳನ್ನು ಪರಿಶಿಷ್ಠದಲ್ಲಿ ಕೊಡಲಾಗಿದೆ.

Comments are closed.