Shanti Parva: Chapter 198

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೯೮

ಪರಬ್ರಹ್ಮಪ್ರಾಪ್ತಿಯ ಉಪಾಯ (೧-೧೮).

12198001 ಮನುರುವಾಚ|

[1]12198001a ಜ್ಞಾನಂ ಜ್ಞೇಯಾಭಿನಿರ್ವೃತ್ತಂ ವಿದ್ಧಿ ಜ್ಞಾನಗುಣಂ ಮನಃ|

12198001c ಪ್ರಜ್ಞಾಕರಣಸಂಯುಕ್ತಂ ತತೋ ಬುದ್ಧಿಃ ಪ್ರವರ್ತತೇ||

ಮನುವು ಹೇಳಿದನು: “ಜ್ಞೇಯನಾದ ಪರಮಾತ್ಮನ ಅಸ್ತಿತ್ವವನ್ನು ಸಿದ್ಧಮಾಡಿಕೊಳ್ಳುವುದೇ ಜ್ಞಾನವೆಂದು ತಿಳಿ. ಜ್ಞಾನದ ಗುಣವುಳ್ಳ ಮನಸ್ಸು ಪ್ರಜ್ಞಾಕರಣಗಳಾದ ಇಂದ್ರಿಯಗಳನ್ನು ಸೇರಿಕೊಂಡಾಗ ಬುದ್ಧಿಯೂ ವಿಷಯಗಳ ಕಡೆಗೇ ಹೋಗುತ್ತದೆ.

12198002a ಯದಾ ಕರ್ಮಗುಣೋಪೇತಾ[2] ಬುದ್ಧಿರ್ಮನಸಿ ವರ್ತತೇ|

12198002c ತದಾ ಪ್ರಜ್ಞಾಯತೇ ಬ್ರಹ್ಮ ಧ್ಯಾನಯೋಗಸಮಾಧಿನಾ||

ಕರ್ಮಗುಣೋಪೇತ ಬುದ್ಧಿಯ ಹೃದಯದಲ್ಲಿ ನೆಲೆಸಿದಾಗ ಅಲ್ಲಿ ಧ್ಯಾನಯೋಗಸಮಾಧಿಯಿಂದ ಬ್ರಹ್ಮನ ಜ್ಞಾನವುಂಟಾಗುತ್ತದೆ.

12198003a ಸೇಯಂ ಗುಣವತೀ ಬುದ್ಧಿರ್ಗುಣೇಷ್ವೇವಾಭಿವರ್ತತೇ|

12198003c ಅವತಾರಾಭಿನಿಃಸ್ರೋತಂ ಗಿರೇಃ ಶೃಂಗಾದಿವೋದಕಮ್||

ಅದೇ ಬುದ್ಧಿಯು ಇಂದ್ರಿಯಗುಣಯುಕ್ತವಾದರೆ ನದಿಯ ನೀರು ಶಿಖರವನ್ನು ಬಿಟ್ಟು ಕೆಳಗೆ ಹರಿಯುವಂತೆ ಪರಮಾತ್ಮನ ಸಾನ್ನಿಧ್ಯದಿಂದ ಚ್ಯುತವಾಗಿ ವಿಷಯಗಳ ಕಡೆಗೇ ಹರಿದುಹೋಗುತ್ತದೆ.

12198004a ಯದಾ ನಿರ್ಗುಣಮಾಪ್ನೋತಿ ಧ್ಯಾನಂ ಮನಸಿ ಪೂರ್ವಜಮ್|

12198004c ತದಾ ಪ್ರಜ್ಞಾಯತೇ ಬ್ರಹ್ಮ ನಿಕಷ್ಯಂ ನಿಕಷೇ ಯಥಾ||

ಧ್ಯಾನದ ಮೂಲಕ ಬುದ್ಧಿಯು ತನ್ನ ಪೂರ್ವಜ ಆತ್ಮನ ನಿರ್ಗುಣತ್ವವನ್ನು ಪಡೆದುಕೊಂಡಾಗ ಒರೆಗಲ್ಲಿಗೆ ತಾಗಿಸಿದ ಚಿನ್ನದ ರೇಖೆಯಂತೆ ಬುದ್ಧಿಯಿಂದ ಬ್ರಹ್ಮವಸ್ತುವನ್ನು ಅರಿತುಕೊಳ್ಳುತ್ತದೆ.

12198005a ಮನಸ್ತ್ವಪಹೃತಂ ಬುದ್ಧಿಮಿಂದ್ರಿಯಾರ್ಥನಿದರ್ಶನಮ್|

12198005c ನ ಸಮಕ್ಷಂ ಗುಣಾವೇಕ್ಷಿ ನಿರ್ಗುಣಸ್ಯ ನಿದರ್ಶನಮ್||

ಇಂದ್ರಿಯಾರ್ಥಗಳನ್ನು ಅನುಭವಿಸುವ ಮನಸ್ಸಿನಿಂದ ಅಪಹೃತವಾದ ಗುಣಾವೇಕ್ಷೀ ಬುದ್ಧಿಯು ಎದುರಿರುವ ನಿರ್ಗುಣತ್ವದ ನಿದರ್ಶನವನ್ನು ಕಾಣುವುದಿಲ್ಲ.

12198006a ಸರ್ವಾಣ್ಯೇತಾನಿ ಸಂವಾರ್ಯ ದ್ವಾರಾಣಿ ಮನಸಿ ಸ್ಥಿತಃ|

12198006c ಮನಸ್ಯೇಕಾಗ್ರತಾಂ ಕೃತ್ವಾ ತತ್ಪರಂ ಪ್ರತಿಪದ್ಯತೇ||

ಮನಸ್ಸಿನಲ್ಲಿ ಸ್ಥಿತಗೊಂಡಿರುವ ಇಂದ್ರಿಯಗಳೆಂಬ ಈ ಎಲ್ಲ ದ್ವಾರಗಳನ್ನೂ ಮುಚ್ಚಿ ಮನಸ್ಸನ್ನು ಏಕಾಗ್ರಗೊಳಿಸಿದಾಗ ಆ ತತ್ ಎನ್ನುವ ಪರಬ್ರಹ್ಮವಸ್ತುವಿನ ಅರಿವಾಗುತ್ತದೆ.

12198007a ಯಥಾ ಮಹಾಂತಿ ಭೂತಾನಿ ನಿವರ್ತಂತೇ ಗುಣಕ್ಷಯೇ|

12198007c ತಥೇಂದ್ರಿಯಾಣ್ಯುಪಾದಾಯ ಬುದ್ಧಿರ್ಮನಸಿ ವರ್ತತೇ||

ಗುಣಗಳು ಕ್ಷಯವಾದಾಗ ಹೇಗೆ ಪಂಚಮಹಾಭೂತಗಳು ಹಿಂದಿರುಗಿಹೋಗುತ್ತವೆಯೋ ಹಾಗೆ ಇಂದ್ರಿಯಗಳನ್ನು ಬದಿಗಿಟ್ಟರೆ ಬುದ್ಧಿಯು ಇಂದ್ರಿಯಸಹಿತ ಮನಸ್ಸನ್ನು ತನ್ನಲ್ಲಿಯೇ ವಿಲೀನಗೊಳಿಸಿಕೊಂಡು ಹೃದಯದಲ್ಲಿ ನೆಲೆಸುತ್ತದೆ.

12198008a ಯದಾ ಮನಸಿ ಸಾ ಬುದ್ಧಿರ್ವರ್ತತೇಽಂತರಚಾರಿಣೀ|

12198008c ವ್ಯವಸಾಯಗುಣೋಪೇತಾ ತದಾ ಸಂಪದ್ಯತೇ ಮನಃ||

ಆ ಬುದ್ಧಿಯು ತನ್ನೊಳಗೇ ಸಂಚರಿಸುತ್ತಿರುವ ಜ್ಞಾನದಲ್ಲಿ ನೆಲೆಸಿದಾಗ ಅದು ಜ್ಞಾನಮಯವೇ ಆಗಿಬಿಡುತ್ತದೆ.

12198009a ಗುಣವದ್ಭಿರ್ಗುಣೋಪೇತಂ ಯದಾ ಧ್ಯಾನಗುಣಂ ಮನಃ|

12198009c ತದಾ ಸರ್ವಗುಣಾನ್ ಹಿತ್ವಾ ನಿರ್ಗುಣಂ ಪ್ರತಿಪದ್ಯತೇ||

ಗುಣಗಳಿಂದ ಯುಕ್ತವಾದ ಇಂದ್ರಿಯಗಳ ಸಂಬಂಧದಲ್ಲಿರುವ ಮನಸ್ಸು ಧ್ಯಾನಯೋಗಸಂಪನ್ನವಾದಾಗ ಸರ್ವಗುಣಗಳನ್ನೂ ತ್ಯಜಿಸಿ ನಿರ್ಗುಣತ್ವವನ್ನು ಪಡೆದುಕೊಳ್ಳುತ್ತದೆ.

12198010a ಅವ್ಯಕ್ತಸ್ಯೇಹ ವಿಜ್ಞಾನೇ ನಾಸ್ತಿ ತುಲ್ಯಂ ನಿದರ್ಶನಮ್|

12198010c ಯತ್ರ ನಾಸ್ತಿ ಪದನ್ಯಾಸಃ ಕಸ್ತಂ ವಿಷಯಮಾಪ್ನುಯಾತ್||

ಅವ್ಯಕ್ತಬ್ರಹ್ಮದ ನಿಜಸ್ವರೂಪವನ್ನು ತಿಳಿಯ ಪಡಿಸುವುದಕ್ಕೆ ಸಮನಾದ ನಿದರ್ಶನವೇ ಇಲ್ಲ. ಯಾವುದರ ಕುರಿತಾದ ಪದನ್ಯಾಸವೇ ಇಲ್ಲವೋ ಅದನ್ನು ತನ್ನ ವಿಷಯವನ್ನಾಗಿ ಯಾರು ತಾನೇ ಮಾಡಿಕೊಳ್ಳಬಲ್ಲರು?

12198011a ತಪಸಾ ಚಾನುಮಾನೇನ ಗುಣೈರ್ಜಾತ್ಯಾ ಶ್ರುತೇನ ಚ|

12198011c ನಿನೀಷೇತ್ತತ್ಪರಂ ಬ್ರಹ್ಮ ವಿಶುದ್ಧೇನಾಂತರಾತ್ಮನಾ||

ತಪಸ್ಸು, ಅನುಮಾನ, ಗುಣಗಳು, ಜಾತಿ ಮತ್ತು ವೇದಗಳಿಂದ ಅಂತಃಕರಣವನ್ನು ಶುದ್ಧಿಮಾಡಿಕೊಂಡು ಪರಬ್ರಹ್ಮ ಪರಮಾತ್ಮನನ್ನು ಹೊಂದಲು ಇಚ್ಛಿಸಬೇಕು.

12198012a ಗುಣಹೀನೋ ಹಿ ತಂ ಮಾರ್ಗಂ ಬಹಿಃ ಸಮನುವರ್ತತೇ|

12198012c ಗುಣಾಭಾವಾತ್ ಪ್ರಕೃತ್ಯಾ ಚ ನಿಸ್ತರ್ಕ್ಯಂ ಜ್ಞೇಯಸಂಮಿತಮ್||

ತಪಸ್ಸಿನ ಗುಣಗಳಿಂದ ವಿಹೀನನಾದವನು ಬಹಿರಂಗದಲ್ಲಿ ಮಾತ್ರ ಆಧ್ಯಾತ್ಮಮಾರ್ಗವನ್ನು ಅನುಸರಿಸಿರುತ್ತಿರುತ್ತಾನೆ. ಜ್ಞೇಯಸಂಮಿತನಾದ ಪರಬ್ರಹ್ಮನು ಗುಣಗಳಿಲ್ಲದೇ ಇರುವುದರಿಂದ ಸ್ವಾಭಾವಿಕವಾಗಿಯೇ ತರ್ಕಕ್ಕೆ ವಿಷಯನಾಗುವುದಿಲ್ಲ.

12198013a ನೈರ್ಗುಣ್ಯಾದ್ಬ್ರಹ್ಮ ಚಾಪ್ನೋತಿ ಸಗುಣತ್ವಾನ್ನಿವರ್ತತೇ|

12198013c ಗುಣಪ್ರಸಾರಿಣೀ ಬುದ್ಧಿರ್ಹುತಾಶನ ಇವೇಂಧನೇ||

ಗುಣಪ್ರಸಾರಿಣೀ ಬುದ್ಧಿಯು ಇಂಧನದಲ್ಲಿರುವ ಅಗ್ನಿಯಂತೆ ನಿರ್ಗುಣತ್ವದಿಂದ ಬ್ರಹ್ಮನ ಬಳಿಸಾರುತ್ತದೆ ಮತ್ತು ಸಗುಣತ್ವದಿಂದ ಬ್ರಹ್ಮನಿಂದ ದೂರವಾಗುತ್ತದೆ.

12198014a ಯಥಾ ಪಂಚ ವಿಮುಕ್ತಾನಿ ಇಂದ್ರಿಯಾಣಿ ಸ್ವಕರ್ಮಭಿಃ|

12198014c ತಥಾ ತತ್ಪರಮಂ ಬ್ರಹ್ಮ ವಿಮುಕ್ತಂ ಪ್ರಕೃತೇಃ ಪರಮ್||

ಪಂಚೇಂದ್ರಿಯಗಳು ತಮ್ಮ ಕಾರ್ಯರೂಪಗಳಾದ ಶಬ್ದ-ಸ್ಪರ್ಶಾದಿ ಗುಣಗಳಿಂದ ಭಿನ್ನವಾಗಿರುವಂತೆ ಪರಬ್ರಹ್ಮವಸ್ತುವೂ ಸದಾ ಪ್ರಕೃತಿಗಿಂತ ಸರ್ವಥಾ ಭಿನ್ನವಾಗಿದೆ.

12198015a ಏವಂ ಪ್ರಕೃತಿತಃ ಸರ್ವೇ ಪ್ರಭವಂತಿ ಶರೀರಿಣಃ|

12198015c ನಿವರ್ತಂತೇ ನಿವೃತ್ತೌ ಚ ಸರ್ಗಂ ನೈವೋಪಯಾಂತಿ ಚ||

ಹೀಗೆ ಎಲ್ಲ ಪ್ರಾಣಿಗಳೂ ಪ್ರಕೃತಿಯ ಕಾರಣದಿಂದ ಹುಟ್ಟು-ಸಾವುಗಳೆಂಬ ಸಂಸಾರಚಕ್ರದಲ್ಲಿ ಪ್ರವೃತ್ತವಾಗುತ್ತವೆ. ಅದೇ ಪ್ರಕೃತಿಯ ಸಹಾಯದಿಂದ ಅವು ಸಂಸಾರನಿವೃತ್ತಿಯನ್ನೂ ಹೊಂದಿ ಪುನಃ ಸೃಷ್ಟಿಗೊಳಗಾಗುವುದಿಲ್ಲ.

12198016a ಪುರುಷಃ ಪ್ರಕೃತಿರ್ಬುದ್ಧಿರ್ವಿಶೇಷಾಶ್ಚೇಂದ್ರಿಯಾಣಿ ಚ|

12198016c ಅಹಂಕಾರೋಽಭಿಮಾನಶ್ಚ ಸಂಭೂತೋ ಭೂತಸಂಜ್ಞಕಃ||

ಪುರುಷ, ಪ್ರಕೃತಿ, ಬುದ್ಧಿ, ಶಬ್ದಾದಿ ಐದು ವಿಶೇಷಗಳು ಅಥವಾ ವಿಷಯಗಳು ಹಾಗೂ ಹತ್ತು ಇಂದ್ರಿಯಗಳು[3], ಅಹಂಕಾರ, ಅಭಿಮಾನ ಮತ್ತು ಪಂಚ ಮಹಾಭೂತಗಳು – ಈ ಇಪ್ಪತ್ತೈದು ತತ್ತ್ವಗಳ ಸಮೂಹವನ್ನು “ಭೂತ” ಎಂದು ಕರೆಯುತ್ತಾರೆ.

12198017a ಏಕಸ್ಯಾದ್ಯಾ ಪ್ರವೃತ್ತಿಸ್ತು ಪ್ರಧಾನಾತ್ ಸಂಪ್ರವರ್ತತೇ|

12198017c ದ್ವಿತೀಯಾ ಮಿಥುನವ್ಯಕ್ತಿಮವಿಶೇಷಾನ್ನಿಯಚ್ಚತಿ||

ಬುದ್ಧಿಯೇ ಮೊದಲಾದ ಸಮೂಹದ ಮೊದಲಿನ ತತ್ತ್ವಗಳು ಪೃಕೃತಿಯಿಂದಲೇ ಉಂಟಾಗಿರುತ್ತವೆ. ಎರಡನೇ ಸೃಷ್ಟಿಯು ಸಾಮಾನ್ಯತಃ ಮೈಥುನಧರ್ಮದಿಂದಲೇ ಅಭಿವ್ಯಕ್ತವಾಗುತ್ತದೆ.

12198018a ಧರ್ಮಾದುತ್ಕೃಷ್ಯತೇ ಶ್ರೇಯಸ್ತಥಾಶ್ರೇಯೋಽಪ್ಯಧರ್ಮತಃ|

12198018c ರಾಗವಾನ್ ಪ್ರಕೃತಿಂ ಹ್ಯೇತಿ ವಿರಕ್ತೋ ಜ್ಞಾನವಾನ್ಭವೇತ್||

ಧರ್ಮದಿಂದ ಶ್ರೇಯಸ್ಸಿನ ಅಭಿವೃದ್ಧಿಯಾಗುತ್ತದೆ. ಅಧರ್ಮದಿಂದ ಅಶ್ರೇಯಸ್ಸುಂಟಾಗುತ್ತದೆ. ರಾಗವಂತನು ಪ್ರಕೃತಿಯಲ್ಲಿಯೇ ಇರುತ್ತಾನೆ. ವಿರಕ್ತನು ಜ್ಞಾನವಂತನಾಗುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮನುಬೃಹಸ್ಪತಿಸಂವಾದೇ ಅಷ್ಟನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮನುಬೃಹಸ್ಪತಿಸಂವಾದ ಎನ್ನುವ ನೂರಾತೊಂಭತ್ತೆಂಟನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ದುಃಖೋಪಘಾತೇ ಶರೀರೇ ಮಾನಸೇ ಚಾಪ್ಯುಪಸ್ಥಿತೇ| ಯಸ್ಮಿನ್ನ ಶಕ್ಯತೇ ಕರ್ತುಂ ಯತ್ನಸ್ತಂ ನಾನುಚಿಂತಯೇತ್|| ಭೈಷಜ್ಯಮೇತದ್ದುಃಖಸ್ಯ ಯದೇತನ್ನಾನುಚಿಂತಯೇತ್| ಚಿಂತಮಾನಂ ಹಿ ಚಾಭ್ಯೇತಿ ಭೂಯಶ್ಚಾಪಿ ಪ್ರವರ್ತತೇ|| ಪ್ರಜ್ಞಯಾ ಮಾನಸಂ ದುಃಖಂ ಹನ್ಯಾತ್ಶಾರೀರಮೌಷಧೈಃ| ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್|| ಅನಿತ್ಯಂ ಯೌವನಂ ರೂಪಂ ಜೀವಿತಂ ದ್ರವ್ಯಸಂಚಯಃ| ಆರೋಗ್ಯಂ ಪ್ರಿಯಸಂವಾಸೋ ಗೃಧ್ಯೇತ್ತತ್ರ ನ ಪಂಡಿತಃ|| ನ ಜಾನಪದಿಕಂ ದುಃಖಮೇಕಃ ಶೋಚಿತುಮರ್ಹತಿ| ಅಶೋಚನ್ಪ್ರತಿ ಕುರ್ವೀತ ಯದಿ ಪಶ್ಯೇದುಪಕ್ರಮಮ್|| ಸುಖಾದ್ದುಃಖತರಂ ದುಃಖಂ ಜೀವಿತೇ ನಾಸ್ತಿ ಸಂಶಯಃ| ಸ್ನಿಗ್ಧಸ್ಯ ಚೇಂದ್ರಿಯಾರ್ಥೇಷು ಮೋಹಾನ್ಮರಣಪ್ರಿಯಮ್|| ಪರಿತ್ಯಜತಿ ಯೋ ದುಃಖಂ ಸುಖಂ ವಾಪ್ಯುಭಯಂ ನರಃ| ಅಭ್ಯೇತಿ  ಬ್ರಹ್ಮಸೋಽತ್ಯಂತಂ ನ ತೇ ಶೋಚಂತಿ ಪಂಡಿತಾಃ|| ದುಃಖಮರ್ಥಾ ಹಿ ಯುಜ್ಯಂತ ನ ಚ ತೇ ಸುಖಮ್| ದುಃಖೇನ ಚಾಧಿಗಮ್ಯಂತೇ ನಾಶಮೇಷಾಂ ನ ಚಿಂತಯೇತ್|| (ಭಾರತ ದರ್ಶನ/ಗೀತಾ ಪ್ರೆಸ್).

[2] ಕರ್ಮಗುಣೈರ್ಹೀನಾ (ಭಾರತ ದರ್ಶನ/ಗೀತಾ ಪ್ರೆಸ್).

[3] ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು.

Comments are closed.