Shanti Parva: Chapter 197

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೯೭

ಪರಮಾತ್ಮ ಸಾಕ್ಷಾತ್ಕಾರದ ಉಪಾಯ ಮತ್ತು ಮಹತ್ವ (೧-೨೦).

12197001 ಮನುರುವಾಚ|

12197001a ಯಥಾ ವ್ಯಕ್ತಮಿದಂ ಶೇತೇ ಸ್ವಪ್ನೇ ಚರತಿ ಚೇತನಮ್|

12197001c ಜ್ಞಾನಮಿಂದ್ರಿಯಸಂಯುಕ್ತಂ ತದ್ವತ್ ಪ್ರೇತ್ಯ ಭವಾಭವೌ||

ಮನುವು ಹೇಳಿದನು: “ಸ್ವಪ್ನಾವಸ್ಥೆಯಲ್ಲಿ ಶರೀರವು ಮಲಗಿದ್ದರೂ ಚೇತನವು ಹೇಗೆ ಚಲಿಸುತ್ತಿರುವುದೋ ಹಾಗೆ ಮರಣಾನಂತರ ಜ್ಞಾನಸ್ವರೂಪೀ ಆತ್ಮವು ಇಂದ್ರಿಯಗಳೊಂದಿಗೆ ಪುನಃ ಇನ್ನೊಂದು ಶರೀರಗ್ರಹಣ ಮಾಡುತ್ತಾನೆ ಅಥವಾ ಮೋಕ್ಷವೆಂಬ ಸುಷುಪ್ತಿಯನ್ನು ಪಡೆದುಕೊಳ್ಳುತ್ತಾನೆ.

12197002a ಯಥಾಂಭಸಿ ಪ್ರಸನ್ನೇ ತು ರೂಪಂ ಪಶ್ಯತಿ ಚಕ್ಷುಷಾ|

12197002c ತದ್ವತ್ ಪ್ರಸನ್ನೇಂದ್ರಿಯವಾನ್ ಜ್ಞೇಯಂ ಜ್ಞಾನೇನ ಪಶ್ಯತಿ||

ತಿಳಿಯಾದ ಮತ್ತು ನಿಂತ ನೀರಿನಲ್ಲಿ ತನ್ನ ಕಣ್ಣುಗಳಿಂದಲೇ ತನ್ನ ರೂಪವನ್ನು ಹೇಗೆ ನೋಡಿಕೊಳ್ಳಬಹುದೋ ಹಾಗೆ ಇಂದ್ರಿಯಗಳನ್ನು ಪ್ರಸನ್ನಗೊಳಿಸಿಕೊಂಡವನು ಜ್ಞಾನದಿಂದಲೇ ಜ್ಞೇಯವನ್ನು ಕಂಡುಕೊಳ್ಳುತ್ತಾನೆ.

12197003a ಸ ಏವ ಲುಲಿತೇ ತಸ್ಮಿನ್ಯಥಾ ರೂಪಂ ನ ಪಶ್ಯತಿ|

12197003c ತಥೇಂದ್ರಿಯಾಕುಲೀಭಾವೇ ಜ್ಞೇಯಂ ಜ್ಞಾನೇ ನ ಪಶ್ಯತಿ||

ಕೊಳೆಯಾದ ಮತ್ತು ಚಂಚಲವಾದ ನೀರಿನಲ್ಲಿ ತನ್ನ ರೂಪವನ್ನು ಹೇಗೆ ನೋಡಲಿಕ್ಕಾಗುವುದಿಲ್ಲವೋ ಹಾಗೆ ಕಲಕಲ್ಪಟ್ಟ ಅಸ್ಥಿರ ಇಂದ್ರಿಯಗಳಿಂದ ಕೂಡಿದ ಬುದ್ಧಿಯುಳ್ಳ ಮನುಷ್ಯನು ಜ್ಞೇಯನನ್ನು ಜ್ಞಾನದಿಂದ ನೋಡಲಾರನು.

12197004a ಅಬುದ್ಧಿರಜ್ಞಾನಕೃತಾ ಅಬುದ್ಧ್ಯಾ ದುಷ್ಯತೇ ಮನಃ|

12197004c ದುಷ್ಟಸ್ಯ ಮನಸಃ ಪಂಚ ಸಂಪ್ರದುಷ್ಯಂತಿ ಮಾನಸಾಃ||

ಅಜ್ಞಾನದಿಂದ ತಿಳಿಗೇಡಿತನವುಂಟಾಗುತ್ತದೆ. ತಿಳಿಗೇಡಿತನದಿಂದ ಮನಸ್ಸು ರಾಗ-ದ್ವೇಷಗಳಿಂದ ದೂಷಿತವಾಗುತ್ತದೆ. ದೂಷಿತ ಮನಸ್ಸು ತನ್ನ ಅಧೀನದಲ್ಲಿರುವ ಪಂಚೇಂದ್ರಿಯಗಳನ್ನೂ ದೂಷಿತಗೊಳಿಸುತ್ತದೆ.

12197005a ಅಜ್ಞಾನತೃಪ್ತೋ ವಿಷಯೇಷ್ವವಗಾಢೋ ನ ದೃಶ್ಯತೇ|

12197005c ಅದೃಷ್ಟ್ವೈವ ತು ಪೂತಾತ್ಮಾ ವಿಷಯೇಭ್ಯೋ ನಿವರ್ತತೇ||

ಅಜ್ಞಾನತೃಪ್ತನಾದವನು ವಿಷಯಗಳಲ್ಲಿಯೇ ಮುಳುಗಿರುವುದು ಕಂಡುಬರುತ್ತದೆ. ಅದೃಷ್ಟದಿಂದಲೇ ಅವನು ಪೂತಾತ್ಮನಾಗಿ ವಿಷಯಗಳಿಂದ ಹಿಂದೆಸರಿಯುತ್ತಾನೆ.

12197006a ತರ್ಷಚ್ಚೇದೋ ನ ಭವತಿ ಪುರುಷಸ್ಯೇಹ ಕಲ್ಮಷಾತ್|

12197006c ನಿವರ್ತತೇ ತಥಾ ತರ್ಷಃ ಪಾಪಮಂತಂ ಗತಂ ಯಥಾ||

ಪಾಪಕಲ್ಮಷದ ಕಾರಣದಿಂದ ಪುರುಷನಿಗೆ ತೃಷ್ಣೆಯು ಶಮನವಾಗುವುದಿಲ್ಲ. ಯಾವಾಗ ಪಾಪವು ನಾಶವಾಗುತ್ತದೆಯೋ ಆಗ ಅವನ ತೃಷ್ಣೆಯೂ ನಿವೃತ್ತಿಹೊಂದುತ್ತದೆ.

12197007a ವಿಷಯೇಷು ಚ ಸಂಸರ್ಗಾಚ್ಚಾಶ್ವತಸ್ಯ ನಸಂಶ್ರಯಾತ್|

12197007c ಮನಸಾ ಚಾನ್ಯದಾಕಾಂಕ್ಷನ್ಪರಂ ನ ಪ್ರತಿಪದ್ಯತೇ||

ವಿಷಯಗಳ ಸಂಸರ್ಗದಿಂದಾಗಿ, ಯಾವಾಗಲೂ ವಿಷಗಳನ್ನೇ ಆಶ್ರಯಿಸಿರುವುದರಿಂದಾಗಿ ಮತ್ತು ಮನಸ್ಸಿನಲ್ಲಿ ಪರಮಾತ್ಮನಲ್ಲದ ಅನ್ಯ ವಿಷಯವನ್ನು ಚಿಂತಿಸುವುದರಿಂದಾಗಿ ಅವನು ತನ್ನ ಕಲ್ಮಶತ್ವವನ್ನು ಕಳೆದುಕೊಂಡು ತಿಳಿಯಾಗುವುದಿಲ್ಲ.

12197008a ಜ್ಞಾನಮುತ್ಪದ್ಯತೇ ಪುಂಸಾಂ ಕ್ಷಯಾತ್ಪಾಪಸ್ಯ ಕರ್ಮಣಃ|

12197008c ಅಥಾದರ್ಶತಲಪ್ರಖ್ಯೇ ಪಶ್ಯತ್ಯಾತ್ಮಾನಮಾತ್ಮನಿ||

ಪಾಪಕರ್ಮಗಳ ನಾಶವಾದಾಗಲೇ ಮನುಷ್ಯನಿಗೆ ಜ್ಞಾನವುಂಟಾಗುತ್ತದೆ. ಆಗ ಅವನು ಸ್ವಚ್ಛ ಕನ್ನಡಿಯಲ್ಲಿ ಹೇಗೋ ಹಾಗೆ ತನ್ನಲ್ಲಿಯೇ ತನ್ನ ಆತ್ಮವನ್ನು ಕಾಣಬಹುದು.

12197009a ಪ್ರಸೃತೈರಿಂದ್ರಿಯೈರ್ದುಃಖೀ ತೈರೇವ ನಿಯತೈಃ ಸುಖೀ|

12197009c ತಸ್ಮಾದಿಂದ್ರಿಯರೂಪೇಭ್ಯೋ ಯಚ್ಚೇದಾತ್ಮಾನಮಾತ್ಮನಾ||

ಇಂದ್ರಿಯಗಳನ್ನು ವಿಷಯಗಳ ಕಡೆ ಹರಿಯ ಬಿಟ್ಟರೆ ದುಃಖಿಯಾಗುತ್ತಾನೆ. ಆ ಇಂದ್ರಿಯಗಳನ್ನೇ ನಿಯಂತ್ರಣದಲ್ಲಿಕೊಂಡರೆ ಸುಖಿಯಾಗುತ್ತಾನೆ. ಆದುದರಿಂದ ಇಂದ್ರಿಯರೂಪಗಳಾದ ಮನಸ್ಸು ಮತ್ತು ಬುದ್ಧಿಗಳನ್ನು ನಿಯಂತ್ರಿಸಿಕೊಂಡವನು ತನ್ನಲ್ಲಿರುವ ಆತ್ಮನನ್ನು ಕಂಡುಕೊಳ್ಳುತ್ತಾನೆ.

12197010a ಇಂದ್ರಿಯೇಭ್ಯೋ ಮನಃ ಪೂರ್ವಂ ಬುದ್ಧಿಃ ಪರತರಾ ತತಃ|

12197010c ಬುದ್ಧೇಃ ಪರತರಂ ಜ್ಞಾನಂ ಜ್ಞಾನಾತ್ಪರತರಂ ಪರಮ್||

ಇಂದ್ರಿಯಗಳಿಗಿಂತಲೂ ಮನಸ್ಸು ಶ್ರೇಷ್ಠವಾದುದು. ಮನಸ್ಸಿಗಿಂತಲೂ ಬುದ್ಧಿಯು ಶ್ರೇಷ್ಠವಾದುದು. ಬುದ್ಧಿಗಿಂತಲೂ ಜ್ಞಾನವು ಶ್ರೇಷ್ಠವಾದುದು. ಜ್ಞಾನಕ್ಕಿಂತಲೂ ಜ್ಞಾನಗಮ್ಯನಾದ ಪರಾತ್ಪರ ಪರಮಾತ್ಮನೇ ಶ್ರೇಷ್ಠನು.

12197011a ಅವ್ಯಕ್ತಾತ್ಪ್ರಸೃತಂ ಜ್ಞಾನಂ ತತೋ ಬುದ್ಧಿಸ್ತತೋ ಮನಃ|

12197011c ಮನಃ ಶ್ರೋತ್ರಾದಿಭಿರ್ಯುಕ್ತಂ ಶಬ್ದಾದೀನ್ಸಾಧು ಪಶ್ಯತಿ||

ಆ ಅವ್ಯಕ್ತ ಪರಮಾತ್ಮನಿಂದಲೇ ಅವನನ್ನು ತಿಳಿಯುವ ಜ್ಞಾನವು ಪ್ರಕಟವಾಗುತ್ತದೆ. ಆ ಜ್ಞಾನದಿಂದ ಬುದ್ಧಿಯೂ ಮತ್ತು ಬುದ್ಧಿಯಿಂದ ಮನಸ್ಸೂ ಪ್ರಕಟವಾಗುವವು. ಆ ಮನಸ್ಸೇ ಶ್ರೋತ್ರಾದಿ ಇಂದ್ರಿಗಳಲ್ಲಿ ಅಭಿವ್ಯಕ್ತಗೊಂಡು ಶಬ್ದಾದಿ ವಿಷಯಗಳನ್ನು ಚೆನ್ನಾಗಿ ಅನುಭವಿಸುತ್ತದೆ.

12197012a ಯಸ್ತಾಂಸ್ತ್ಯಜತಿ ಶಬ್ದಾದೀನ್ರ್ವಾಶ್ಚ ವ್ಯಕ್ತಯಸ್ತಥಾ|

12197012c ವಿಮುಂಚತ್ಯಾಕೃತಿಗ್ರಾಮಾಂಸ್ತಾನ್ಮುಕ್ತ್ವಾಮೃತಮಶ್ನುತೇ||

ಶಬ್ದಾದಿ ವಿಷಯಗಳನ್ನೂ, ಅವುಗಳಿಗೆ ಆಶ್ರಯಭೂತವಾದ ಎಲ್ಲ ಪ್ರಾಕೃತ ಗುಣಸಮುದಾಯಗಳಾದ ವ್ಯಕ್ತ ತತ್ತ್ವಗಳನ್ನೂ ಪರಿತ್ಯಜಿಸಿದವನು ಅಮೃತಪಾನಮಾಡುತ್ತಾನೆ.

12197013a ಉದ್ಯನ್ ಹಿ ಸವಿತಾ ಯದ್ವತ್ಸೃಜತೇ ರಶ್ಮಿಮಂಡಲಮ್|

12197013c ಸ ಏವಾಸ್ತಮುಪಾಗಚ್ಚಂಸ್ತದೇವಾತ್ಮನಿ ಯಚ್ಚತಿ||

12197014a ಅಂತರಾತ್ಮಾ ತಥಾ ದೇಹಮಾವಿಶ್ಯೇಂದ್ರಿಯರಶ್ಮಿಭಿಃ|

12197014c ಪ್ರಾಪ್ಯೇಂದ್ರಿಯಗುಣಾನ್ಪಂಚ ಸೋಽಸ್ತಮಾವೃತ್ಯ ಗಚ್ಚತಿ||

ಸೂರ್ಯನು ಉದಯಿಸುತ್ತಿದ್ದಂತೆ ತನ್ನ ರಶ್ಮಿಮಂಡಲವನ್ನು ಸೃಷ್ಟಿಸುತ್ತಾನೆ. ಮತ್ತು ಅಸ್ತನಾಗುತ್ತಿದ್ದಂತೆ ಅವನು ತನ್ನ ರಶ್ಮಿಮಂಡಲವನ್ನು ಹಿಂತೆಗೆದುಕೊಳ್ಳುತ್ತಾನೆ. ಅದೇ ರೀತಿಯಲ್ಲಿ ಅಂತರಾತ್ಮನು ಇಂದ್ರಿಯಗಳೆಂಬ ರಶ್ಮಿಗಳ ಸಮೇತನಾಗಿ ದೇಹವನ್ನು ಹೊಕ್ಕು ಆ ದೇಹದ ಮೂಲಕವಾಗಿಯೇ ಇಂದ್ರಿಯಗಳ ಗುಣಗಳನ್ನು ಗ್ರಹಣಮಾಡುತ್ತಿರುತ್ತಾನೆ. ಪುನಃ ಜೀವನು ಆ ಶರೀರವನ್ನು ಬಿಟ್ಟುಹೋಗುವಾಗ ಪಂಚೇಂದ್ರಿಯಗಳನ್ನು ತನ್ನಲ್ಲಿಯೇ ಉಪಸಂಹರಿಸಿಕೊಂಡು ಹೊರಟುಹೋಗುತ್ತಾನೆ.

12197015a ಪ್ರಣೀತಂ ಕರ್ಮಣಾ ಮಾರ್ಗಂ ನೀಯಮಾನಃ ಪುನಃ ಪುನಃ|

12197015c ಪ್ರಾಪ್ನೋತ್ಯಯಂ ಕರ್ಮಫಲಂ ಪ್ರವೃದ್ಧಂ ಧರ್ಮಮಾತ್ಮವಾನ್||

ಪಾಪ-ಪುಣ್ಯದಾಯಕವಾದ ಕರ್ಮಗಳನ್ನೇ ಆಶ್ರಯಿಸಿರುವ ಪ್ರವೃತ್ತಿಪ್ರಧಾನವಾದ ಅಥವಾ ರಾಜಸಿಕ ಗುಣಪ್ರಧಾನ ಜೀವಾತ್ಮವು ಕರ್ಮಗಳ ಮೂಲಕ ಕರ್ಮಮಾರ್ಗಗಳಲ್ಲಿಯೇ ಪುನಃ ಪುನಃ ಸೆಳೆಯಲ್ಪಡುತ್ತಾ ಸುಖ-ದುಃಖ ರೂಪ ಕರ್ಮಫಲಗಳನ್ನೇ ಅನುಭವಿಸುತ್ತಿರುತ್ತಾನೆ.

12197016a ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ|

12197016c ರಸವರ್ಜಂ ರಸೋಽಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ||

ನಿರಾಹಾರೀ ಮನುಷ್ಯನ ವಿಷಯಗಳೆಲ್ಲವೂ ಹಿಂದಿರುಗಿ ಹೋಗುತ್ತವೆ. ಶಬ್ದಾದಿ ವಿಷಯ ಸುಖಗಳು ಅವನನ್ನು ಬಿಟ್ಟು ಹೋಗುತ್ತವೆ. ಆದರೆ ವಿಷಯಾಸಕ್ತಿಯು ಬಿಟ್ಟುಹೋಗುವುದಿಲ್ಲ. ಪರಾತ್ಪರನಾದ ಪರಮಾತ್ಮನನ್ನು ನೋಡುವುದರಿಂದ ಆ ವಿಷಯಾಸಕ್ತಿಯೂ ಹೊರಟುಹೋಗುತ್ತದೆ.

12197017a ಬುದ್ಧಿಃ ಕರ್ಮಗುಣೈರ್ಹೀನಾ ಯದಾ ಮನಸಿ ವರ್ತತೇ|

12197017c ತದಾ ಸಂಪದ್ಯತೇ ಬ್ರಹ್ಮ ತತ್ರೈವ ಪ್ರಲಯಂ ಗತಮ್||

ಬುದ್ಧಿಯು ಕರ್ಮಗುಣರಹಿತವಾಗಿ ಹೃದಯದಲ್ಲಿ ನೆಲೆಸಿದಾಗ ಬ್ರಹ್ಮಭಾವವುಂಟಾಗುತ್ತದೆ. ಆ ಬ್ರಹ್ಮಭಾವದಲ್ಲಿ ಎಲ್ಲವೂ ಲೀನವಾಗುತ್ತದೆ.

12197018a ಅಸ್ಪರ್ಶನಮಶೃಣ್ವಾನಮನಾಸ್ವಾದಮದರ್ಶನಮ್|

12197018c ಅಘ್ರಾಣಮವಿತರ್ಕಂ ಚ ಸತ್ತ್ವಂ ಪ್ರವಿಶತೇ ಪರಮ್||

ಸ್ಪರ್ಶ-ಶ್ರವಣ-ರಸನ-ದರ್ಶನ-ಘ್ರಾಣ ಮತ್ತು ಸಂಕಲ್ಪ-ವಿಕಲ್ಪಗಳಿಲ್ಲದ ಬುದ್ಧಿಯನ್ನು ಪರಮ ಸತ್ತ್ವವು ಪ್ರವೇಶಿಸುತ್ತದೆ, ಅರ್ಥಾತ್ ಜೀವಾತ್ಮವು ಸತ್ತ್ವಗುಣಪ್ರಧಾನವಾಗುತ್ತದೆ.  

12197019a ಮನಸ್ಯಾಕೃತಯೋ ಮಗ್ನಾ ಮನಸ್ತ್ವತಿಗತಂ ಮತಿಮ್|

12197019c ಮತಿಸ್ತ್ವತಿಗತಾ ಜ್ಞಾನಂ ಜ್ಞಾನಂ ತ್ವಭಿಗತಂ ಪರಮ್||

ವಿಷಯರೂಪವಾದ ಶಬ್ದಾದಿ ಸಕಲ ಆಕೃತಿಗಳೂ ಮನಸ್ಸಿನಲ್ಲಿ ಲಯವಾಗುತ್ತವೆ. ಮನಸ್ಸು ಬುದ್ಧಿಯಲ್ಲಿಯೂ ಬುದ್ಧಿಯು ಜ್ಞಾನದಲ್ಲಿಯೂ, ಜ್ಞಾನವು ಪರಮಾತ್ಮನಲ್ಲಿಯೂ ಅನುಕ್ರಮವಾಗಿ ಲಯಹೊಂದುತ್ತವೆ.

12197020a ಇಂದ್ರಿಯೈರ್ಮನಸಃ ಸಿದ್ಧಿರ್ನ ಬುದ್ಧಿಂ ಬುಧ್ಯತೇ ಮನಃ|

12197020c ನ ಬುದ್ಧಿರ್ಬುಧ್ಯತೇಽವ್ಯಕ್ತಂ ಸೂಕ್ಷ್ಮಸ್ತ್ವೇತಾನಿ ಪಶ್ಯತಿ||

ಇಂದ್ರಿಯಗಳಿಂದ ಮನಸ್ಸನ್ನು ತಿಳಿದುಕೊಳ್ಳಲಿಕ್ಕಾಗುವುದಿಲ್ಲ. ಮನಸ್ಸು ಬುದ್ಧಿಯನ್ನು ತಿಳಿದಿರುವುದಿಲ್ಲ. ಬುದ್ಧಿಯು ಸೂಕ್ಷ್ಮವಾದ ಆತ್ಮವನ್ನು ತಿಳಿದಿರುವುದಿಲ್ಲ. ಆದರೆ ಅವ್ಯಕ್ತವಾದ ಆ ಆತ್ಮವು  ಬುದ್ಧಿ, ಮನಸ್ಸು, ಇಂದ್ರಿಯಗಳು ಮತ್ತು ಇಂದ್ರಿಯಾರ್ಥಗಳು – ಇವೆಲ್ಲವುಗಳನ್ನೂ ತಿಳಿದಿರುತ್ತದೆ. ಮತ್ತು ಸಾಕ್ಷಿಯಾಗಿ ಇವೆಲ್ಲವುಗಳ ಕ್ರಿಯೆಗಳನ್ನೂ ನೋಡುತ್ತಿರುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮನುಬೃಹಸ್ಪತಿಸಂವಾದೇ ಸಪ್ತನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮನುಬೃಹಸ್ಪತಿಸಂವಾದ ಎನ್ನುವ ನೂರಾತೊಂಭತ್ತೇಳನೇ ಅಧ್ಯಾಯವು.

Comments are closed.