Shanti Parva: Chapter 196

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೯೬

ಶರೀರೇಂದ್ರಿಯ-ಮನೋಬುದ್ಧಿಗಳಿಗಿಂತಲೂ ಅತಿರಿಕ್ತನಾದ ಆತ್ಮನ ನಿತ್ಯತ್ವದ ಪ್ರತಿಪಾದನೆ (೧-೨೩).

12196001 ಮನುರುವಾಚ|

12196001a ಯದಿಂದ್ರಿಯೈಸ್ತೂಪಕೃತಾನ್ಪುರಸ್ತಾತ್

ಪ್ರಾಪ್ತಾನ್ಗುಣಾನ್ಸಂಸ್ಮರತೇ ಚಿರಾಯ|

12196001c ತೇಷ್ವಿಂದ್ರಿಯೇಷೂಪಹತೇಷು ಪಶ್ಚಾತ್

ಸ ಬುದ್ಧಿರೂಪಃ ಪರಮಃ ಸ್ವಭಾವಃ||

ಮನುವು ಹೇಳಿದನು: “ಬುದ್ಧಿರೂಪನಾದ ಪರಮಶ್ರೇಷ್ಠನಾದ ಜೀವನು ಹಿಂದಿನ ಶರೀರದಿಂದ ನೂತನ ಶರೀರಕ್ಕೆ ಬರುವಾಗ ಆ ಶರೀರದಲ್ಲಿದ್ದ ಪಂಚೇಂದ್ರಿಯಗಳನ್ನು ಕಳೆದುಕೊಂಡರೂ ಅವುಗಳ ವಿಷಯಗಳನ್ನು ಸಂಸ್ಕಾರರೂಪದಲ್ಲಿ ತನ್ನಲ್ಲಿಯೇ ಇಟ್ಟುಕೊಂಡಿರುತ್ತಾನೆ. ಹಿಂದಿನ ಜನ್ಮದಲ್ಲಿ ಇಂದ್ರಿಯಗಳ ಮೂಲಕ ಅನುಭವಿಸಿದ ವಿಷಯಗಳನ್ನು ಬಹಳ ಕಾಲದ ವರೆಗೆ ಸ್ಮರಿಸುತ್ತಲೇ ಇರುತ್ತಾನೆ.

12196002a ಯಥೇಂದ್ರಿಯಾರ್ಥಾನ್ಯುಗಪತ್ಸಮಸ್ತಾನ್

ನಾವೇಕ್ಷತೇ ಕೃತ್ಸ್ನಮತುಲ್ಯಕಾಲಮ್|

12196002c ಯಥಾಬಲಂ ಸಂಚರತೇ ಸ ವಿದ್ವಾಂಸ್

ತಸ್ಮಾತ್ಸ ಏಕಃ ಪರಮಃ ಶರೀರೀ||

ಜೀವಾತ್ಮನು ಎಲ್ಲ ಕಾಲಗಳಲ್ಲಿಯೂ ಎಲ್ಲ ಜನ್ಮಗಳಲ್ಲಿಯೂ ಅನುಭವಿಸಿದ ಎಲ್ಲ ಇಂದ್ರಿಯ ವಿಷಯಗಳನ್ನೂ ತಾನೊಬ್ಬನೇ ಏಕಕಾಲದಲ್ಲಿ ನೋಡುತ್ತಾನೆ. ಜಾಗೃತ್-ಸ್ವಪ್ನ-ಸುಷುಪ್ತಿಗಳೆಂಬ ಬೇರೆ ಬೇರೆ ಅವಸ್ಥೆಗಳಲ್ಲಿ ಸಂಚರಿಸುತ್ತಾನೆ. ಆ ಕಾಲ-ಅವಸ್ಥೆ-ಇಂದ್ರಿಯವಿಷಯಗಳು ಬೇರೆಬೇರೆಯಾಗಿದ್ದರೂ ಅವೆಲ್ಲಕ್ಕೂ ಸಾಕ್ಷಿಯಾಗಿ ನಿಶ್ಚಲನಾಗಿರುವುದರಿಂದ ಈ ಜೀವಾತ್ಮನೇ ಪರಮ ವಿದ್ವಾಂಸನು.

12196003a ರಜಸ್ತಮಃ ಸತ್ತ್ವಮಥೋ ತೃತೀಯಂ

ಗಚ್ಚತ್ಯಸೌ ಜ್ಞಾನಗುಣಾನ್ವಿರೂಪಾನ್|

12196003c ತಥೇಂದ್ರಿಯಾಣ್ಯಾವಿಶತೇ ಶರೀರೀ

ಹುತಾಶನಂ ವಾಯುರಿವೇಂಧನಸ್ಥಮ್||

ಜೀವವು ರಜ, ತಮ ಮತ್ತು ಮೂರನೆಯದಾದ ಸತ್ತ್ವಗಳೆಂಬ ವಿರೂಪ ಜ್ಞಾನಗುಣಗಳನ್ನು ಹೊಂದಿರುತ್ತಾನೆ. ಆದರೆ ಅವನು ಅವುಗಳಿಗಿಂತ ಅತಿರಿಕ್ತನಾಗಿರುತ್ತಾನೆ. ವಾಯುವು ಕಟ್ಟಿಗೆಯಲ್ಲಿರುವ ಅಗ್ನಿಯನ್ನು ಪ್ರವೇಶಿಸುವಂತೆ ಜೀವವು ಶರೀರಸ್ಥ ಇಂದ್ರಿಯಗಳನ್ನು ಪ್ರವೇಶಿಸುತ್ತದೆ.

12196004a ನ ಚಕ್ಷುಷಾ ಪಶ್ಯತಿ ರೂಪಮಾತ್ಮನೋ

ನ ಪಶ್ಯತಿ ಸ್ಪರ್ಶಮಿಂದ್ರಿಯೇಂದ್ರಿಯಮ್|

12196004c ನ ಶ್ರೋತ್ರಲಿಂಗಂ ಶ್ರವಣೇ ನಿದರ್ಶನಂ

ತಥಾಗತಂ[1] ಪಶ್ಯತಿ ತದ್ವಿನಶ್ಯತಿ||

ಆತ್ಮದ ರೂಪವನ್ನು ಕಣ್ಣುಗಳಿಂದ ನೋಡಲಿಕ್ಕಾಗುವುದಿಲ್ಲ. ಸ್ಪರ್ಶೇಂದ್ರಿಯದಿಂದಲೂ ಈ ಇಂದ್ರಿಯವನ್ನು ನೋಡಲಿಕ್ಕಾಗುವುದಿಲ್ಲ. ಆತ್ಮದ ರೂಪವನ್ನು ಶ್ರವಣೇಂದ್ರಿಯದಿಂದಲೂ ತಿಳಿಯಲು ಸಾಧ್ಯವಿಲ್ಲ. ಯಾವಾಗ ಆತ್ಮನ ದರ್ಶನವಾಗುತ್ತದೆಯೋ ಆಗ ಇಂದ್ರಿಯಗಳೆಲ್ಲವೂ ನಾಶಹೊಂದುತ್ತವೆ.

12196005a ಶ್ರೋತ್ರಾದೀನಿ ನ ಪಶ್ಯಂತಿ ಸ್ವಂ ಸ್ವಮಾತ್ಮಾನಮಾತ್ಮನಾ|

12196005c ಸರ್ವಜ್ಞಃ ಸರ್ವದರ್ಶೀ ಚ ಕ್ಷೇತ್ರಜ್ಞಸ್ತಾನಿ ಪಶ್ಯತಿ||

ಶ್ರೋತ್ರಾದಿ ಇಂದ್ರಿಯಗಳು ಸ್ವಯಂ ತಮ್ಮನ್ನು ತಾವೇ ತಿಳಿದುಕೊಳ್ಳಲಾರವು[2]. ಹಾಗಿರುವಾಗ ಅವು ಸವರ್ಜ್ಞನೂ ಸರ್ವದರ್ಶಿಯೂ ಆದ ಕ್ಷೇತ್ರಜ್ಞನನ್ನು ಹೇಗೆ ತಾನೇ ಅರಿಯಬಲ್ಲವು?

12196006a ಯಥಾ ಹಿಮವತಃ ಪಾರ್ಶ್ವಂ ಪೃಷ್ಠಂ ಚಂದ್ರಮಸೋ ಯಥಾ|

12196006c ನ ದೃಷ್ಟಪೂರ್ವಂ ಮನುಜೈರ್ನ ಚ ತನ್ನಾಸ್ತಿ ತಾವತಾ||

ಹಿಮಾಲಯದ ಇನ್ನೊಂದು ಪಾರ್ಶ್ವವನ್ನು ಮತ್ತು ಚಂದ್ರನ ಹಿಂಭಾಗವನ್ನು ಮನುಷ್ಯನು ಎಂದೂ ನೋಡಿರದೇ ಇದ್ದರೂ ಅವು ಇಲ್ಲವೆಂದು ಹೇಳಲಿಕ್ಕಾಗುವುದಿಲ್ಲ.

12196007a ತದ್ವದ್ಭೂತೇಷು ಭೂತಾತ್ಮಾ ಸೂಕ್ಷ್ಮೋ ಜ್ಞಾನಾತ್ಮವಾನಸೌ|

12196007c ಅದೃಷ್ಟಪೂರ್ವಶ್ಚಕ್ಷುರ್ಭ್ಯಾಂ ನ ಚಾಸೌ ನಾಸ್ತಿ ತಾವತಾ||

ಹಾಗೆಯೇ ಸಕಲ ಪ್ರಾಣಿಗಳ ಹೃದಯಾಂತರಾಳದಲ್ಲಿ ಜ್ಞಾನಸ್ವರೂಪೀ ಸೂಕ್ಷ್ಮಾತಿಸೂಕ್ಷ್ಮ ಆತ್ಮನು ಇದ್ದೇ ಇದ್ದಾನೆ. ಕಣ್ಣುಗಳಿಂದ ಅವನನ್ನು ನೋಡಲಿಕ್ಕಾಗುವುದಿಲ್ಲ ಎಂದ ಮಾತ್ರಕ್ಕೆ ಅವನು ಇಲ್ಲ ಎಂದು ಹೇಳಲಿಕ್ಕಾಗುವುದಿಲ್ಲ.

12196008a ಪಶ್ಯನ್ನಪಿ ಯಥಾ ಲಕ್ಷ್ಮ ಜಗತ್ಸೋಮೇ ನ ವಿಂದತಿ|

12196008c ಏವಮಸ್ತಿ ನ ವೇತ್ಯೇತನ್ನ ಚ ತನ್ನ ಪರಾಯಣಮ್||

ಜನರು ಚಂದ್ರನಲ್ಲಿರುವ ಕಲೆಗಳನ್ನು ನೋಡದೇ ಇದ್ದರೂ ಅದು ಇದ್ದೇ ಇರುತ್ತದೆ. ಅದಕ್ಕೆ ಕಾರಣಗಳನ್ನು ಅರಿಯದಿದ್ದರೂ ಅದಕ್ಕೆ ಕಾರಣಗಳು ಇದ್ದೇ ಇರುತ್ತವೆ. ಹಾಗೆಯೇ ನಮಗೆ ಕಾಣದಿದ್ದರೂ ಮೂಲವಾದ ಆತ್ಮವು ಇದ್ದೇ ಇದೆ.

12196009a ರೂಪವಂತಮರೂಪತ್ವಾದುದಯಾಸ್ತಮಯೇ ಬುಧಾಃ|

12196009c ಧಿಯಾ ಸಮನುಪಶ್ಯಂತಿ ತದ್ಗತಾಃ ಸವಿತುರ್ಗತಿಮ್||

ವಿದ್ವಾಂಸರು ಉದಯಕಾಲದಲ್ಲಿ ಕಾಣಿಸುಕೊಳ್ಳುವ ಮತ್ತು ಸಂಧ್ಯಾಕಾಲದಲ್ಲಿ ಅಸ್ತನಾಗುವ ಸೂರ್ಯನನ್ನು ಬುದ್ಧಿಯ ಮೂಲಕ ಸೂರ್ಯನು ಅಸ್ತಂಗತನಾಗಿದ್ದೇನೆ ಎಂದು ತಿಳಿದುಕೊಳ್ಳುತ್ತಾರೆ.

12196010a ತಥಾ ಬುದ್ಧಿಪ್ರದೀಪೇನ ದೂರಸ್ಥಂ ಸುವಿಪಶ್ಚಿತಃ|

12196010c ಪ್ರತ್ಯಾಸನ್ನಂ ನಿನೀಷಂತಿ ಜ್ಞೇಯಂ ಜ್ಞಾನಾಭಿಸಂಹಿತಮ್||

ಹಾಗೆಯೇ ಸುಜ್ಞಾನಿಗಳು ದೂರದಲ್ಲಿರುವುದನ್ನು ಹಾಗೂ ತಮ್ಮ ಹತ್ತಿರದಲ್ಲಿ ಹೃದಯಾಂತರಾಳದಲ್ಲಿಯೇ ಇರುವ ಜ್ಞೇಯ, ಜ್ಞಾನಶಬ್ದದಿಂದ ಸೂಚಿತನಾದ ಪರಬ್ರಹ್ಮ ಪರಮಾತ್ಮನನ್ನು ಬುದ್ಧಿಯೆಂಬ ಪ್ರಕಾಶದ ಮೂಲಕ ತಿಳಿದುಕೊಳ್ಳುತ್ತಾರೆ.

12196011a ನ ಹಿ ಖಲ್ವನುಪಾಯೇನ ಕಶ್ಚಿದರ್ಥೋಽಭಿಸಿಧ್ಯತಿ|

12196011c ಸೂತ್ರಜಾಲೈರ್ಯಥಾ ಮತ್ಸ್ಯಾನ್ಬಧ್ನಂತಿ ಜಲಜೀವಿನಃ||

12196012a ಮೃಗೈರ್ಮೃಗಾಣಾಂ ಗ್ರಹಣಂ ಪಕ್ಷಿಣಾಂ ಪಕ್ಷಿಭಿರ್ಯಥಾ|

12196012c ಗಜಾನಾಂ ಚ ಗಜೈರೇವಂ ಜ್ಞೇಯಂ ಜ್ಞಾನೇನ ಗೃಹ್ಯತೇ||

ಉಪಾಯವಿಲ್ಲದೇ ಯಾವುದೂ ಸಿದ್ಧಿಸುವುದಿಲ್ಲ. ಜಲಜೀವಿ ಬೆಸ್ತರು ಬಲೆಗಳನ್ನು ಬಳಸಿ ಮೀನನ್ನು ಹಿಡಿಯುತ್ತಾರೆ. ಬೇಡರು ಮೃಗಗಳನ್ನು ಬಳಸಿ ಮೃಗಗಳನ್ನೂ, ಪಕ್ಷಿಗಳನ್ನು ಬಳಸಿ ಪಕ್ಷಿಗಳನ್ನೂ, ಆನೆಗಳನ್ನು ಬಳಸಿ ಆನೆಗಳನ್ನೂ ಹಿಡಿಯುತ್ತಾರೆ. ಅದೇ ರೀತಿ ಜ್ಞಾನದಿಂದಲೇ ಜ್ಞೇಯನನ್ನು ಗ್ರಹಿಸಿಕೊಳ್ಳಬೇಕು.

12196013a ಅಹಿರೇವ ಹ್ಯಹೇಃ ಪಾದಾನ್ಪಶ್ಯತೀತಿ ನಿದರ್ಶನಮ್|

12196013c ತದ್ವನ್ಮೂರ್ತಿಷು ಮೂರ್ತಿಷ್ಠಂ ಜ್ಞೇಯಂ ಜ್ಞಾನೇನ ಪಶ್ಯತಿ||

ಹಾವು ಮಾತ್ರ ಅದರ ಹೆಜ್ಜೆಗಳನ್ನು ತಿಳಿದುಕೊಳ್ಳಬಹುದು ಎಂಬ ನಿದರ್ಶನವಿದೆ. ಅದೇ ರೀತಿ ಜ್ಞಾನಿಯು ಶರೀರಗಳಲ್ಲಿ ಶರೀರಸ್ಥನಾಗಿರುವ ಜ್ಞೇಯನನ್ನು ಜ್ಞಾನದ ಮೂಲಕವೇ ತಿಳಿಯುತ್ತಾನೆ.

12196014a ನೋತ್ಸಹಂತೇ ಯಥಾ ವೇತ್ತುಮಿಂದ್ರಿಯೈರಿಂದ್ರಿಯಾಣ್ಯಪಿ|

12196014c ತಥೈವೇಹ ಪರಾ ಬುದ್ಧಿಃ ಪರಂ ಬುದ್ಧ್ಯಾ ನ ಪಶ್ಯತಿ||

ಇಂದ್ರಿಯಗಳು ಇಂದ್ರಿಯಗಳ ಮೂಲಕ ಆತ್ಮನನ್ನು ಹೇಗೆ ತಿಳಿದುಕೊಳ್ಳಲಾರವೋ ಹಾಗೆ ಇಂದ್ರಿಯಗಳನ್ನೇ ಆಶ್ರಯಿಸಿರುವ ಬುದ್ಧಿಯೂ ಕೂಡ ಪರಮಬೋಧ್ಯವಾದ ಬ್ರಹ್ಮತತ್ತ್ವವನ್ನು ನೋಡಲಾರದು.

12196015a ಯಥಾ ಚಂದ್ರೋ ಹ್ಯಮಾವಾಸ್ಯಾಮಲಿಂಗತ್ವಾನ್ನ ದೃಶ್ಯತೇ|

12196015c ನ ಚ ನಾಶೋಽಸ್ಯ ಭವತಿ ತಥಾ ವಿದ್ಧಿ ಶರೀರಿಣಮ್||

ಅಮವಾಸ್ಯೆಯಂದು ಚಂದ್ರನು ಅವನ ಲಕ್ಷಣಗಳಿಂದ ಕಾಣಿಸಿಕೊಳ್ಳದೇ ಇದ್ದರೂ ಹೇಗೆ ನಾಶವಾಗಿರದೇ ಇರುತ್ತಾನೋ ಹಾಗೆ ಶರೀರದಲ್ಲಿರುವ ಆತ್ಮವು ಕಾಣದೇ ಇದ್ದರೂ ನಾಶವಾಗಿ ಹೋಯಿತೆಂದು ತಿಳಿಯಬಾರದು.

12196016a ಕ್ಷೀಣಕೋಶೋ ಹ್ಯಮಾವಾಸ್ಯಾಂ ಚಂದ್ರಮಾ ನ ಪ್ರಕಾಶತೇ|

12196016c ತದ್ವನ್ಮೂರ್ತಿವಿಯುಕ್ತಃ ಸನ್ ಶರೀರೀ ನೋಪಲಭ್ಯತೇ||

ಅಮವಾಸ್ಯೆಯಲ್ಲಿ ಚಂದ್ರಮನು ಕ್ಷೀಣಕೋಶನಾಗಿರುವುದರಿಂದ ಕಾಣುವುದಿಲ್ಲ. ಹಾಗೆಯೇ ಶರೀರದಿಂದ ವಿಮುಕ್ತನಾದ ಶರೀರಿಯು ನೋಡಲಿಕ್ಕೆ ಸಿಗುವುದಿಲ್ಲ.

12196017a ಯಥಾ ಕೋಶಾಂತರಂ[3] ಪ್ರಾಪ್ಯ ಚಂದ್ರಮಾ ಭ್ರಾಜತೇ ಪುನಃ|

12196017c ತದ್ವಲ್ಲಿಂಗಾಂತರಂ ಪ್ರಾಪ್ಯ ಶರೀರೀ ಭ್ರಾಜತೇ ಪುನಃ||

ಬೇರೆ ಕೋಶವನ್ನು ಪಡೆದುಕೊಂಡು ಪುನಃ ಚಂದ್ರನು ಬೆಳಗುವಂತೆ ಇನ್ನೊಂದು ದೇಹವನ್ನು ಪಡೆದುಕೊಂಡು ಆತ್ಮವು ಪುನಃ ಬೆಳಗುತ್ತದೆ.

12196018a ಜನ್ಮವೃದ್ಧಿಕ್ಷಯಶ್ಚಾಸ್ಯ ಪ್ರತ್ಯಕ್ಷೇಣೋಪಲಭ್ಯತೇ|

12196018c ಸಾ ತು ಚಂದ್ರಮಸೋ ವ್ಯಕ್ತಿರ್ನ ತು ತಸ್ಯ ಶರೀರಿಣಃ||

ಯಾವ ಜನ್ಮ, ವೃದ್ಧಿ ಮತ್ತು ಕ್ಷಯಗಳು ಚಂದ್ರನಲ್ಲಿ ಪ್ರತ್ಯಕ್ಷವಾಗಿ ಕಾಣಿಸುತ್ತವೆಯೋ ಅವು ವಸ್ತುತಃ ಚಂದ್ರನ ವೃತ್ತಿಯಾಗಿರುವುದಿಲ್ಲ. ಚಂದ್ರಮಂಡಲಕ್ಕೆ ಸಂಬಂಧಿಸಿದ ವೃತ್ತಿಗಳಾಗಿರುತ್ತವೆ. ಅದೇ ರೀತಿ ಜನ್ಮ-ವೃದ್ಧಿ-ಕ್ಷಯಗಳು ದೇಹಕ್ಕೆ ಸಂಬಂಧಿಸಿದವುಗಳಾಗಿವೆಯೇ ಹೊರತು ದೇಹಿಗೆ ಸಂಬಂಧಿಸಿದವುಗಳಲ್ಲ.

12196019a ಉತ್ಪತ್ತಿವೃದ್ಧಿವ್ಯಯತೋ ಯಥಾ ಸ ಇತಿ ಗೃಹ್ಯತೇ|

12196019c ಚಂದ್ರ ಏವ ತ್ವಮಾವಾಸ್ಯಾಂ ತಥಾ ಭವತಿ ಮೂರ್ತಿಮಾನ್||

ಉತ್ಪತ್ತಿ-ವೃದ್ಧಿ-ವ್ಯಯಗಳನ್ನು ಹೊಂದಿದ್ದರೂ ಚಂದ್ರನು ಅವನೇ ಎಂದು ಹೇಗೆ ಹೇಳುತ್ತೇವೆಯೋ ಹಾಗೆ ಬೇರೆ ಬೇರೆ ಅವಸ್ಥೆಗಳ ದೇಹದಲ್ಲಿರುವವನೂ ಒಂದೇ ಎಂದು ತಿಳಿಯಬೇಕು.

12196020a ನಾಭಿಸರ್ಪದ್ವಿಮುಂಚದ್ವಾ ಶಶಿನಂ ದೃಶ್ಯತೇ ತಮಃ|

12196020c ವಿಸೃಜಂಶ್ಚೋಪಸರ್ಪಂಶ್ಚ ತದ್ವತ್ಪಶ್ಯ ಶರೀರಿಣಮ್||

ಅಂಧಕಾರರೂಪನಾದ ರಾಹುವು ಚಂದ್ರನನ್ನು ನುಂಗುವುದಾಗಲೀ ವಿಸರ್ಜಿಸುವುದಾಗಲೀ ಹೇಗೆ ಕಾಣುವುದಿಲ್ಲವೋ ಹಾಗೆ ಆತ್ಮವು ಶರೀರವನ್ನು ಪ್ರವೇಶಿಸುವುದು ಮತ್ತು ಬಿಟ್ಟು ಹೋಗುವುದು ಕಾಣುವುದಿಲ್ಲ.

12196021a ಯಥಾ ಚಂದ್ರಾರ್ಕಸಂಯುಕ್ತಂ ತಮಸ್ತದುಪಲಭ್ಯತೇ|

12196021c ತದ್ವಚ್ಚರೀರಸಂಯುಕ್ತಃ ಶರೀರೀತ್ಯುಪಲಭ್ಯತೇ||

ಗ್ರಹಣಕಾಲದಲ್ಲಿ ಹೇಗೆ ಸೂರ್ಯ-ಚಂದ್ರರೊಡನೆ ಸೇರಿರುವ ತಮಸ್ಸಿನ ಆವಿರ್ಭಾವವಾಗುತ್ತದೆಯೋ ಹಾಗೆ ಶರೀರದೊಡನೆ ಸೇರಿಕೊಂಡಾಗ ಆತ್ಮನು ಶರೀರಿಯಾಗಿಯೇ ಪ್ರತೀತನಾಗುತ್ತಾನೆ.

12196022a ಯಥಾ ಚಂದ್ರಾರ್ಕನಿರ್ಮುಕ್ತಃ ಸ ರಾಹುರ್ನೋಪಲಭ್ಯತೇ|

12196022c ತದ್ವಚ್ಚರೀರನಿರ್ಮುಕ್ತಃ ಶರೀರೀ ನೋಪಲಭ್ಯತೇ||

ಗ್ರಹಣಾನಂತರ ಚಂದ್ರ-ಸೂರ್ಯರನ್ನು ಬಿಟ್ಟುಹೋದ ರಾಹುವು ಹೇಗೆ ಕಣ್ಣಿಗೆ ಕಾಣುವುದಿಲ್ಲವೋ ಹಾಗೆ ಶರೀರದಿಂದ ವಿಮುಕ್ತನಾದ ಆತ್ಮನೂ ಯಾರಿಗೂ ಕಾಣುವುದಿಲ್ಲ.

12196023a ಯಥಾ ಚಂದ್ರೋ ಹ್ಯಮಾವಾಸ್ಯಾಂ ನಕ್ಷತ್ರೈರ್ಯುಜ್ಯತೇ ಗತಃ|

12196023c ತದ್ವಚ್ಚರೀರನಿರ್ಮುಕ್ತಃ ಫಲೈರ್ಯುಜ್ಯತಿ ಕರ್ಮಣಃ||

ಅಮವಾಸ್ಯೆಯ ನಂತರ ಚಂದ್ರನು ಹೇಗೆ ಪುನಃ ದೃಶ್ಯನಾಗಿ ನಕ್ಷತ್ರಗಳೊಂದಿಗೆ ಸೇರಿರುತ್ತಾನೋ ಅದೇ ರೀತಿ ಒಂದು ಶರೀರವನ್ನು ಬಿಟ್ಟುಹೋದ ಆತ್ಮನು ತಾನು ಮಾಡಿದ ಕರ್ಮಫಲಗಳೊಡನೆ ದೇಹಾಂತರವನ್ನು ಪ್ರವೇಶಿಸುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮನುಬೃಹಸ್ಪತಿಸಂವಾದೇ ಷಟ್ನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮನುಬೃಹಸ್ಪತಿಸಂವಾದ ಎನ್ನುವ ನೂರಾತೊಂಭತ್ತಾರನೇ ಅಧ್ಯಾಯವು.

[1] ತಥಾ ಕೃತಂ (ಭಾರತ ದರ್ಶನ/ಗೀತಾ ಪ್ರೆಸ್).

[2] ತನಗೆ ರೆಪ್ಪೆಗಳಿವೆಯೇ? ಕಪ್ಪಾಗಿರುವುದೇ? ಬೆಕ್ಕಿನ ಕಣ್ಣಿನಂತೆ ಬಿಳಿಯ ಛಾಯಾಯುಕ್ತವಾಗಿರುವುದೇ? ಎಂಬ ಅರಿವು ಸ್ವತಃ ಕಣ್ಣಿಗೇ ಇರುವುದಿಲ್ಲ. (ಭಾರತ ದರ್ಶನ).

[3] ಯಥಾಕಾಶಾಂತರಂ (ಭಾರತ ದರ್ಶನ/ಗೀತಾ ಪ್ರೆಸ್).

Comments are closed.