Shanti Parva: Chapter 195

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೯೫

ಆತ್ಮತತ್ತ್ವ ಮತ್ತು ಬುದ್ಧಿಯೇ ಮೊದಲಾದ ಪ್ರಾಕೃತ ಪದಾರ್ಥಗಳ ವಿವೇಚನೆ; ಆತ್ಮತತ್ತ್ವದ ಸಾಕ್ಷಾತ್ಕಾರಕ್ಕೆ ಉಪಾಯ (೧-೨೩).

12195001 ಮನುರುವಾಚ|

12195001a ಅಕ್ಷರಾತ್ಖಂ ತತೋ ವಾಯುರ್ವಾಯೋರ್ಜ್ಯೋತಿಸ್ತತೋ ಜಲಮ್|

12195001c ಜಲಾತ್ ಪ್ರಸೂತಾ ಜಗತೀ ಜಗತ್ಯಾಂ ಜಾಯತೇ ಜಗತ್||

ಮನುವು ಹೇಳಿದನು: “ಅಕ್ಷರವಾದ ಬ್ರಹ್ಮವಸ್ತುವಿನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ ಮತ್ತು ಜಲದಿಂದ ಪೃಥ್ವಿಯೂ ಹುಟ್ಟಿವೆ. ಪೃಥ್ವಿಯಲ್ಲಿ ವಿಕಾರಕ್ಕೊಳಪಡುವ ಪದಾರ್ಥಗಳು ಹುಟ್ಟುತ್ತವೆ.

12195002a ಇಮೇ ಶರೀರೈರ್ಜಲಮೇವ ಗತ್ವಾ

ಜಲಾಚ್ಚ ತೇಜಃ ಪವನೋಽಂತರಿಕ್ಷಮ್|

12195002c ಖಾದ್ವೈ ನಿವರ್ತಂತಿ ನಭಾವಿನಸ್ತೇ

ಯೇ ಭಾವಿನಸ್ತೇ ಪರಮಾಪ್ನುವಂತಿ||

ಪಾರ್ಥಿವ ಶರೀರದಲ್ಲಿ ಹುಟ್ಟಿದ ಪ್ರಾಣಿಗಳು ಆಯುಸ್ಸು ಕಳೆದೊಡನೆಯೇ ಆರೋಹಣಕ್ರಮದಲ್ಲಿ ಮೊದಲು ಜಲದಲ್ಲಿ, ನಂತರ ಅಗ್ನಿಯಲ್ಲಿ, ನಂತರ ವಾಯುವಿನಲ್ಲಿ ಮತ್ತು ನಂತರ ಆಕಾಶದಲ್ಲಿ ವಿಲೀನವಾಗುತ್ತವೆ. ಪುನಃ ಸೃಷ್ಟಿಯಲ್ಲಿ ಅವರೋಹಣಕ್ರಮದಲ್ಲಿ ಭೂಮಿಗೆ ಬಂದು ಕರ್ಮಾನುಸಾರವಾಗಿ ನಾನಾಯೋನಿಗಳಲ್ಲಿ ಹುಟ್ಟುತ್ತವೆ. ಆದರೆ ಜ್ಞಾನಿಗಳು ಆಕಾಶತತ್ತ್ವದಿಂದ ಮೇಲೆ ಹೋಗಿ ಪರಮಮೋಕ್ಷವನ್ನು ಪಡೆಯುತ್ತಾರೆ.

12195003a ನೋಷ್ಣಂ ನ ಶೀತಂ ಮೃದು ನಾಪಿ ತೀಕ್ಷ್ಣಂ

ನಾಮ್ಲಂ ಕಷಾಯಂ ಮಧುರಂ ನ ತಿಕ್ತಮ್|

12195003c ನ ಶಬ್ದವನ್ನಾಪಿ ಚ ಗಂಧವತ್ತನ್

ನ ರೂಪವತ್ತತ್ಪರಮಸ್ವಭಾವಮ್||

ಆ ಪರಮತತ್ತ್ವವು ಸ್ವಾಭಾವಿಕವಾಗಿ ಬಿಸಿಯಾಗಿರುವುದಿಲ್ಲ, ತಣ್ಣಗಾಗಿಯೂ ಇರುವುದಿಲ್ಲ, ಮೃದುವಾಗಿರುವುದಿಲ್ಲ ಅಥವಾ ತೀಕ್ಷ್ಣವೂ ಆಗಿರುವುದಿಲ್ಲ. ಅದರ ರುಚಿಯು ಆಮ್ಲವಾಗಿಯೂ, ಕಷಾಯವಾಗಿಯೂ, ಸಿಹಿಯಾಗಿಯೂ ಅಥವಾ ಖಾರವಾಗಿಯೂ ಇಲ್ಲ. ಅದಕ್ಕೆ ಶಬ್ದವೂ ಇಲ್ಲ. ವಾಸನೆಯೂ ಇಲ್ಲ. ಅದಕ್ಕೆ ರೂಪವೂ ಇಲ್ಲ.

12195004a ಸ್ಪರ್ಶಂ ತನುರ್ವೇದ ರಸಂ ತು ಜಿಹ್ವಾ

ಘ್ರಾಣಂ ಚ ಗಂಧಾನ್ ಶ್ರವಣೇ ಚ ಶಬ್ದಾನ್|

12195004c ರೂಪಾಣಿ ಚಕ್ಷುರ್ನ ಚ ತತ್ಪರಂ ಯದ್

ಗೃಹ್ಣಂತ್ಯನಧ್ಯಾತ್ಮವಿದೋ ಮನುಷ್ಯಾಃ||

ತನುವು ಸ್ಪರ್ಶವನ್ನು ತಿಳಿಯುತ್ತದೆ. ನಾಲಿಗೆಯು ರಸವನ್ನು, ಮೂಗು ವಾಸನೆಯನ್ನು, ಕಿವಿಯು ಶಬ್ದಗಳನ್ನು, ಕಣ್ಣು ರೂಪಗಳನ್ನು ತಿಳಿಯುತ್ತದೆ. ಆದರೆ ಅವು ಪರಬ್ರಹ್ಮವನ್ನು ತಿಳಿಯಲಾರವು. ಆದುದರಿಂದ ಅಧ್ಯಾತ್ಮಜ್ಞಾನವಿಲ್ಲದ ಮನುಷ್ಯರು ಪರಮಾತ್ಮತತ್ತ್ವವನ್ನು ಅನುಭವಿಸಲಾರರು.

12195005a ನಿವರ್ತಯಿತ್ವಾ ರಸನಂ ರಸೇಭ್ಯೋ

ಘ್ರಾಣಂ ಚ ಗಂಧಾಚ್ಚ್ರವಣೇ ಚ ಶಬ್ದಾತ್|

12195005c ಸ್ಪರ್ಶಾತ್ತನುಂ ರೂಪಗುಣಾತ್ತು ಚಕ್ಷುಸ್

ತತಃ ಪರಂ ಪಶ್ಯತಿ ಸ್ವಂ ಸ್ವಭಾವಮ್||

ನಾಲಿಗೆಯನ್ನು ರಸಗಳಿಂದಲೂ, ಮೂಗನ್ನು ಗಂಧಗಳಿಂದಲೂ, ಕಿವಿಯನ್ನು ಶಬ್ದಗಳಿಂದಲ್ಲೂ, ತ್ವಚೆಯನ್ನು ಸ್ಪರ್ಶದಿಂದಲೂ, ಕಣ್ಣುಗಳನ್ನು ರೂಪಗಳಿಂದಲೂ ಹಿಂದಿರುಗಿಸಿ ಅಂತರ್ಮುಖಗಳನ್ನಾಗಿ ಮಾಡಬೇಕು. ನಂತರವೇ ಮನುಷ್ಯನು ತನ್ನ ಮೂಲಸ್ವರೂಪ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

12195006a ಯತೋ ಗೃಹೀತ್ವಾ ಹಿ ಕರೋತಿ ಯಚ್ಚ

ಯಸ್ಮಿಂಶ್ಚ ತಾಮಾರಭತೇ ಪ್ರವೃತ್ತಿಮ್|

12195006c ಯಸ್ಮಿಂಶ್ಚ ಯದ್ಯೇನ ಚ ಯಶ್ಚ ಕರ್ತಾ

ತತ್ಕಾರಣಂ ತಂ ಸಮುಪಾಯಮಾಹುಃ[1]||

ಯಾವ ಕರ್ತನು ಯಾವ ಕಾರಣದಿಂದ ಯಾವ ಫಲವನ್ನುದೇಶಿಸಿ ಯಾವ ದೇಶ-ಕಾಲಗಳಲ್ಲಿ ಯಾವ ನಿಮಿತ್ತದಿಂದ ಮತ್ತು ಯಾವುದರ ಪ್ರಭಾವದಿಂದ ಪ್ರವೃತ್ತಿಮಾರ್ಗವನ್ನು ಅನುಸರಿಸಿ ಯಾವ ಕರ್ಮಗಳನ್ನು ಮಾಡುತ್ತಾನೋ ಇವುಗಳ ಕಾರಣನೇ ಎಲ್ಲವುಗಳ ಸ್ವರೂಪಭೂತ ಪರಬ್ರಹ್ಮ ಪರಮಾತ್ಮನೆಂದು ಹೇಳುತ್ತಾರೆ[2].

12195007a ಯಚ್ಚಾಭಿಭೂಃ ಸಾಧಕಂ ವ್ಯಾಪಕಂ ಚ[3]

ಯನ್ಮಂತ್ರವಚ್ಚಂಸ್ಯತೇ ಚೈವ ಲೋಕೇ|

12195007c ಯಃ ಸರ್ವಹೇತುಃ ಪರಮಾರ್ಥಕಾರೀ

ತತ್ಕಾರಣಂ ಕಾರ್ಯಮತೋ ಯದನ್ಯತ್||

ವ್ಯಾಪಕ-ವ್ಯಾಪ್ಯಗಳ ಸಾಧನವಾಗಿರುವ ಮತ್ತು ಲೋಕದಲ್ಲಿ ಸದಾ ಕೂಟಸ್ಥನಾಗಿರುವ, ಎಲ್ಲವಕ್ಕೂ ಕಾರಣವಾಗಿರುವ ಮತ್ತು ಎಲ್ಲವನ್ನೂ ಮಾಡುವ ಅವನೇ ಸರ್ವಕಾರಣನು. ಅವನನ್ನು ಬಿಟ್ಟು ಉಳಿದೆಲ್ಲವೂ ಕಾರ್ಯಮಾತ್ರವು.

12195008a ಯಥಾ ಚ ಕಶ್ಚಿತ್ಸುಕೃತೈರ್ಮನುಷ್ಯಃ

ಶುಭಾಶುಭಂ ಪ್ರಾಪ್ನುತೇಽಥಾವಿರೋಧಾತ್|

12195008c ಏವಂ ಶರೀರೇಷು ಶುಭಾಶುಭೇಷು

ಸ್ವಕರ್ಮಜೈರ್ಜ್ಞಾನಮಿದಂ ನಿಬದ್ಧಮ್||

ಮನುಷ್ಯನು ತಾನು ಮಾಡಿದ ಕರ್ಮಗಳಿಂದ ಶುಭಾಶುಭಫಲಗಳನ್ನು ಯಾವ ಅಡೆತಡೆಗಳಿಲ್ಲದೇ ಪಡೆದುಕೊಳ್ಳುವ ಹಾಗೆ ತನ್ನ ಕರ್ಮಗಳಿಗೆ ಅನುಸಾರವಾಗಿ ಪ್ರಾಪ್ತವಾಗುವ ಶುಭಾಶುಭಶರೀರಗಳಲ್ಲಿ ಈ ಚಿನ್ಮಯ ಜ್ಞಾನವು ಯಾವುದೇ ಅಡೆತಡೆಗಳಿಲ್ಲದೇ ನೆಲೆಸಿರುತ್ತದೆ.

12195009a ಯಥಾ ಪ್ರದೀಪಃ ಪುರತಃ ಪ್ರದೀಪ್ತಃ

ಪ್ರಕಾಶಮನ್ಯಸ್ಯ ಕರೋತಿ ದೀಪ್ಯನ್|

12195009c ತಥೇಹ ಪಂಚೇಂದ್ರಿಯದೀಪವೃಕ್ಷಾ

ಜ್ಞಾನಪ್ರದೀಪ್ತಾಃ ಪರವಂತ ಏವ||

ದೀಪವು ಹೇಗೆ ಸ್ವತಃ ಬೆಳಗುತ್ತಾ ತನ್ನ ಸುತ್ತಲಿರುವವುಗಳನ್ನು ಪ್ರಕಾಶಿತಗೊಳಿಸುತ್ತದೆಯೋ ಹಾಗೆ ಶರೀರರೂಪ ವೃಕ್ಷದಲ್ಲಿರುವ ಪಂಚೇಂದ್ರಿಯಗಳು ಚೈತನ್ಯರೂಪೀ ಜ್ಞಾನದ ಪ್ರಕಾಶದಿಂದ ಪ್ರಕಾಶಿತಗೊಂಡು ವಿಷಯಗಳನ್ನೂ ಪ್ರಕಾಶಿತಗೊಳಿಸುತ್ತವೆ[4].

12195010a ಯಥಾ ಹಿ ರಾಜ್ಞೋ ಬಹವೋ ಹ್ಯಮಾತ್ಯಾಃ

ಪೃಥಕ್ ಪ್ರಮಾಣಂ ಪ್ರವದಂತಿ ಯುಕ್ತಾಃ|

12195010c ತದ್ವಚ್ಚರೀರೇಷು ಭವಂತಿ ಪಂಚ

ಜ್ಞಾನೈಕದೇಶಃ ಪರಮಃ ಸ ತೇಭ್ಯಃ||

ಅನೇಕ ಅಮಾತ್ಯರು ರಾಜನ ಆಜ್ಞಾನುಸಾರ ಪ್ರತ್ಯೇಕ ಕಾರ್ಯಗಳಲ್ಲಿ ತೊಡಗಿ ಕಾಲ-ಕಾಲಕ್ಕೆ ತಮಗೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ರಾಜನಿಗೆ ತಿಳಿಯಪಡಿಸುವಂತೆ ಶರೀರದಲ್ಲಿರುವ ಪಂಚೇಂದ್ರಿಯಗಳು ತಮಗೆ ಸಂಬಂಧಿಸಿದ ವಿಷಯಗಳನ್ನು ಪ್ರತಿಕ್ಷಣದಲ್ಲಿಯೂ ಬುದ್ಧಿಗೆ ಒಪ್ಪಿಸುತ್ತವೆ. ಆದುದರಿಂದ ಅಂತಹ ಬುದ್ಧಿಗೂ ಮತ್ತು ಪಂಚೇಂದ್ರಿಗಳಿಗೂ ಚೈತನ್ಯವನ್ನು ನೀಡುವ ಜ್ಞಾನಸ್ವರೂಪೀ ಆತ್ಮವೊಂದೇ ಪಂಚೇಂದ್ರಿಯ-ಬುದ್ಧಿ-ಮನಸ್ಸುಗಳಿಗಿಂತಲೂ ಶ್ರೇಷ್ಠವಾದುದು.

12195011a ಯಥಾರ್ಚಿಷೋಽಗ್ನೇಃ ಪವನಸ್ಯ ವೇಗಾ

ಮರೀಚಯೋಽರ್ಕಸ್ಯ ನದೀಷು ಚಾಪಃ|

12195011c ಗಚ್ಚಂತಿ ಚಾಯಾಂತಿ ಚ ತನ್ಯಮಾನಾಸ್

ತದ್ವಚ್ಚರೀರಾಣಿ ಶರೀರಿಣಾಂ ತು||

ಅಗ್ನಿಯ ಜ್ವಾಲೆಗಳು, ವಾಯುವಿನ ವೇಗ, ಸೂರ್ಯನ ಕಿರಣಗಳು ಮತ್ತು ನದಿಯ ನೀರು – ಇವು ಹೇಗೆ ಬಂದು-ಹೋಗುತ್ತಿರುತ್ತವೆಯೋ ಹಾಗೆ ಶರೀರಿಗಳ ಶರೀರಗಳೂ ಕೂಡ ಹೋಗುತ್ತಿರುತ್ತವೆ ಮತ್ತು ಬರುತ್ತಿರುತ್ತವೆ.

12195012a ಯಥಾ ಚ ಕಶ್ಚಿತ್ಪರಶುಂ ಗೃಹೀತ್ವಾ

ಧೂಮಂ ನ ಪಶ್ಯೇಜ್ಜ್ವಲನಂ ಚ ಕಾಷ್ಠೇ|

12195012c ತದ್ವಚ್ಚರೀರೋದರಪಾಣಿಪಾದಂ

ಚಿತ್ತ್ವಾ ನ ಪಶ್ಯಂತಿ ತತೋ ಯದನ್ಯತ್||

ಕೊಡಲಿಯನ್ನು ತೆಗೆದುಕೊಂಡು ಕಟ್ಟಿಗೆಯನ್ನು ಸೀಳಿದರೆ ಅದರಲ್ಲಿ ಹೊಗೆಯಾಗಲೀ ಬೆಂಕಿಯಾಗಲೀ ಹೇಗೆ ಕಾಣುವುದಿಲ್ಲವೋ ಹಾಗೆ ಮನುಷ್ಯನ ಶರೀರವನ್ನಾಗಲೀ, ಹೊಟ್ಟೆ-ಕೈ-ಕಾಲುಗಳನ್ನಾಗಲೀ ಕತ್ತರಿಸಿದರೆ ಶರೀರಸ್ಥನಾಗಿರುವ ಆದರೆ ಶರೀರದಿಂದ ಭಿನ್ನನಾಗಿರುವ ಆತ್ಮನನ್ನು ಕಾಣಲು ಸಾಧ್ಯವಾಗುವುದಿಲ್ಲ.

12195013a ತಾನ್ಯೇವ ಕಾಷ್ಠಾನಿ ಯಥಾ ವಿಮಥ್ಯ

ಧೂಮಂ ಚ ಪಶ್ಯೇಜ್ಜ್ವಲನಂ ಚ ಯೋಗಾತ್|

12195013c ತದ್ವತ್ಸುಬುದ್ಧಿಃ ಸಮಮಿಂದ್ರಿಯತ್ವಾದ್

ಬುಧಃ ಪರಂ ಪಶ್ಯತಿ ಸ್ವಂ ಸ್ವಭಾವಮ್||

ಆದರೆ ಅದೇ ಕಟ್ಟಿಗೆಗಳನ್ನು ಮಥಿಸುವುದರಿಂದ ಹೊಗೆ ಮತ್ತು ಬೆಂಕಿಗಳನ್ನು ಹೇಗೆ ಕಾಣಬಹುದೋ ಹಾಗೆ ಯೋಗಯುಕ್ತನಾಗಿ ಮನಸ್ಸು-ಬುದ್ಧಿ ಮತ್ತು ಇಂದ್ರಿಯಗಳನ್ನು ಮಥಿಸಿದಾಗ ಜ್ಞಾನಿಯು ತನ್ನ ಸ್ವಭಾವವನ್ನು ಕಂಡುಕೊಳ್ಳುತ್ತಾನೆ.

12195014a ಯಥಾತ್ಮನೋಽಂಗಂ ಪತಿತಂ ಪೃಥಿವ್ಯಾಂ

ಸ್ವಪ್ನಾಂತರೇ ಪಶ್ಯತಿ ಚಾತ್ಮನೋಽನ್ಯತ್|

12195014c ಶ್ರೋತ್ರಾದಿಯುಕ್ತಃ ಸುಮನಾಃ ಸುಬುದ್ಧಿರ್

ಲಿಂಗಾತ್ತಥಾ ಗಚ್ಚತಿ ಲಿಂಗಮನ್ಯತ್||

ಸ್ವಪ್ನದಲ್ಲಿ ತನ್ನ ಅಂಗಗಳು ಭೂಮಿಯ ಮೇಲೆ ಬಿದ್ದುದನ್ನು ಕಂಡವನು ಸ್ವಪ್ನದ ನಂತರ ಅದು ತಾನಲ್ಲ ಎಂದು ಹೇಗೆ ತಿಳಿದುಕೊಳ್ಳುತ್ತಾನೋ ಹಾಗೆ ತಾನು ಶ್ರೋತ್ರಾದಿ ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳಿಂದ ಯುಕ್ತನಾಗಿದ್ದರೂ ತಾನು ಅವುಗಳಿಗಿಂತ ಭಿನ್ನನಾದವನು ಎಂದು ಜ್ಞಾನಿಯು ತಿಳಿದುಕೊಳ್ಳುತ್ತಾನೆ.

12195015a ಉತ್ಪತ್ತಿವೃದ್ಧಿಕ್ಷಯಸಂನಿಪಾತೈರ್

ನ ಯುಜ್ಯತೇಽಸೌ ಪರಮಃ ಶರೀರೀ|

12195015c ಅನೇನ ಲಿಂಗೇನ ತು ಲಿಂಗಮನ್ಯದ್

ಗಚ್ಚತ್ಯದೃಷ್ಟಃ ಪ್ರತಿಸಂಧಿಯೋಗಾತ್[5]||

ಆತ್ಮವು ಶರೀರದಿಂದ ಸರ್ವಥಾ ಭಿನ್ನವಾಗಿದೆ. ಅದಕ್ಕೆ ಶರೀರದ ಉತ್ಪತ್ತಿ, ವೃದ್ಧಿ, ಕ್ಷಯ, ಮೃತ್ಯು ಮೊದಲಾದ ದೋಷಗಳ ಲೇಪವಿಲ್ಲ. ಆದರೆ ಪ್ರತಿಸಂಧಿಯೋಗ[6]ದಿಂದಾಗಿ ಅದೃಷ್ಟವಾದ ಸೂಕ್ಷ್ಮಶರೀರವು ಒಂದು ಶರೀರದಿಂದ ಇನ್ನೊಂದು ಶರೀರಕ್ಕೆ ಹೋಗುತ್ತಿರುತ್ತದೆ.

12195016a ನ ಚಕ್ಷುಷಾ ಪಶ್ಯತಿ ರೂಪಮಾತ್ಮನೋ

ನ ಚಾಪಿ ಸಂಸ್ಪರ್ಶಮುಪೈತಿ ಕಿಂ ಚಿತ್|

12195016c ನ ಚಾಪಿ ತೈಃ ಸಾಧಯತೇಽಥ ಕಾರ್ಯಂ

ತೇ ತಂ ನ ಪಶ್ಯಂತಿ ಸ ಪಶ್ಯತೇ ತಾನ್||

ಆತ್ಮನ ರೂಪವನ್ನು ಕಣ್ಣುಗಳಿಂದ ಲೋಡಲಿಕ್ಕಾಗುವುದಿಲ್ಲ. ಅದು ಇದು ಎಂದು ಅದನ್ನು ಮುಟ್ಟಿಯೂ ತಿಳಿಯಲಿಕ್ಕಾಗುವುದಿಲ್ಲ. ಯಾವುದಾದರೂ ಕಾರ್ಯಗಳನ್ನು ಮಾಡಿ ಅದನ್ನು ಸಾಧಿಸಲೂ ಸಾಧ್ಯವಿಲ್ಲ. ಈ ಇಂದ್ರಿಯಗಳ್ಯಾವುದರಿಂದಲೂ ಅವನನ್ನು ನೋಡಲು ಸಾಧ್ಯವಿಲ್ಲ. ಆದರೆ ಅವನು ಇಂದ್ರಿಯಗಳೆಲ್ಲವನ್ನೂ ನೋಡುತ್ತಿರುತ್ತಾನೆ.

12195017a ಯಥಾ ಪ್ರದೀಪೇ[7] ಜ್ವಲತೋಽನಲಸ್ಯ

ಸಂತಾಪಜಂ ರೂಪಮುಪೈತಿ ಕಿಂ ಚಿತ್|

12195017c ನ ಚಾಂತರಂ ರೂಪಗುಣಂ ಬಿಭರ್ತಿ

ತಥೈವ ತದ್ದೃಶ್ಯತೇ ರೂಪಮಸ್ಯ||

ಬೆಂಕಿಯ ಹತ್ತಿರವಿದ್ದ ವಸ್ತುಗಳು ಅಗ್ನಿಯ ತಾಪ ಮೊದಲಾದ ಗುಣಗಳನ್ನು ಹಾಗೂ ಸ್ವಲ್ಪ ಪ್ರಮಾಣದಲ್ಲಿ ಅಗ್ನಿಯ ಸುಡುವ ಗುಣವನ್ನು ಪಡೆದುಕೊಂಡರೂ ಅವು ಅಗ್ನಿಯ ರೂಪಗುಣಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳುವುದಿಲ್ಲ. ಅದೇ ರೀತಿ ಆತ್ಮನ ಹತ್ತಿರವಿರುವ ಇಂದ್ರಿಯಗಳು ಆತ್ಮನ ಚೇತನರೂಪೀ ಗುಣವನ್ನು ಪಡೆದುಕೊಂಡರೂ ಅವು ಆತ್ಮನ ಸಂಪೂರ್ಣಗುಣಗಳನ್ನು ಪಡೆದುಕೊಳ್ಳುವುದಿಲ್ಲ. ಸಮೀಪವಿರುವ ಅಗ್ನಿಯ ರೂಪವನ್ನು ಇನ್ನೊಂದು ವಸ್ತುವು ಹೇಗೆ ಪಡೆದುಕೊಳ್ಳುತ್ತದೆಯೋ ಹಾಗೆ ಅಗ್ನಿಯೂ ಕೂಡ ಆ ವಸ್ತುವಿನ ರೂಪದಂತೆ ತೋರಿದರೂ ಆ ವಸ್ತುವಾಗುವುದಿಲ್ಲ.

12195018a ಯಥಾ ಮನುಷ್ಯಃ ಪರಿಮುಚ್ಯ ಕಾಯಮ್

ಅದೃಶ್ಯಮನ್ಯದ್ವಿಶತೇ ಶರೀರಮ್|

12195018c ವಿಸೃಜ್ಯ ಭೂತೇಷು ಮಹತ್ಸು ದೇಹಂ

ತದಾಶ್ರಯಂ ಚೈವ ಬಿಭರ್ತಿ ರೂಪಮ್||

ಹಾಗೆಯೇ ಮನುಷ್ಯನು ತನ್ನ ಶರೀರವನ್ನು ತೊರೆದು ಇನ್ನೊಂದು ಅದೃಶ್ಯ ಶರೀರವನ್ನು ಪ್ರವೇಶಿಸುವಾಗ ಪಂಚಭೂತಗಳಲ್ಲಿ ಸೇರಿದ ದೇಹವನ್ನು ತೊರೆದು ಇನ್ನೊಂದು ದೇಹವನ್ನು ಪ್ರವೇಶಿಸಿ ಅದರ ರೂಪವನ್ನೇ ಪಡೆದುಕೊಳ್ಳುತ್ತಾನೆ.

12195019a ಖಂ ವಾಯುಮಗ್ನಿಂ ಸಲಿಲಂ ತಥೋರ್ವೀಂ

ಸಮಂತತೋಽಭ್ಯಾವಿಶತೇ ಶರೀರೀ|

12195019c ನಾನಾಶ್ರಯಾಃ ಕರ್ಮಸು ವರ್ತಮಾನಾಃ

ಶ್ರೋತ್ರಾದಯಃ ಪಂಚ ಗುಣಾನ್ ಶ್ರಯಂತೇ||

ದೇಹಾಭಿಮಾನೀ ಜೀವವು ಶರೀರವನ್ನು ಬಿಡುವಾಗ ಶರೀರದಲ್ಲಿದ್ದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂ ತತ್ತ್ವಗಳು ಸಂಪೂರ್ಣವಾಗಿ ಆಯಾ ತತ್ತ್ವಗಳಲ್ಲಿ ಲೀನವಾಗುತ್ತವೆ. ಆದರೆ ಈ ಪಂಚಭೂತಗಳನ್ನು ಆಶ್ರಯಿಸಿರುವ ಶ್ರೋತ್ರಾದಿ ಪಂಚತತ್ತ್ವಗಳು ಲೀನವಾಗದೇ ತಮ್ಮ ತಮ್ಮ ಕರ್ಮಗಳಲ್ಲಿ ಪ್ರವೃತ್ತವಾಗಿದ್ದುಕೊಂಡು ಇನ್ನೊಂದು ಶರೀರದ ಪಂಚಭೂತಗಳ ಆಶ್ರಯವನ್ನು ಪಡೆದುಕೊಳ್ಳುತ್ತವೆ.

12195020a ಶ್ರೋತ್ರಂ ಖತೋ ಘ್ರಾಣಮಥೋ ಪೃಥಿವ್ಯಾಸ

ತೇಜೋಮಯಂ ರೂಪಮಥೋ ವಿಪಾಕಃ|

12195020c ಜಲಾಶ್ರಯಃ ಸ್ವೇದ ಉಕ್ತೋ ರಸಶ್ಚ

ವಾಯ್ವಾತ್ಮಕಃ ಸ್ಪರ್ಶಕೃತೋ ಗುಣಶ್ಚ||

ಆಕಾಶದಿಂದ ಶ್ರೋತ್ರೇಂದ್ರಿಯ (ಮತ್ತು ಅದರ ವಿಷಯವಾದ ಶಬ್ದ) ಮತ್ತು ಪೃಥ್ವಿಯಿಂದ ಘ್ರಾಣೇಂದ್ರಿಯ (ಮತ್ತು ಅದರ ವಿಷಯವಾದ ವಾಸನೆ) ಗಳುಂಟಾಗುತ್ತವೆ. ಮತ್ತು ರೂಪ-ವಿಪಾಕಗಳು ತೇಜೋಮಯವು. ಬೆವರು ಮತ್ತು ರಸ ಇವು ಜಲಾಶ್ರಯವೆಂದು ಹೇಳುತ್ತಾರೆ. ಹಾಗೂ ಸ್ಪರ್ಶಗುಣವು ವಾಯ್ವಾತ್ಮಕವು.

12195021a ಮಹತ್ಸು ಭೂತೇಷು ವಸಂತಿ ಪಂಚ

ಪಂಚೇಂದ್ರಿಯಾರ್ಥಾಶ್ಚ ತಥೇಂದ್ರಿಯೇಷು|

12195021c ಸರ್ವಾಣಿ ಚೈತಾನಿ ಮನೋನುಗಾನಿ

ಬುದ್ಧಿಂ ಮನೋಽನ್ವೇತಿ ಮನಃ ಸ್ವಭಾವಮ್||

ಪಂಚೇಂದ್ರಿಯಗಳು ಅವುಗಳ ವಿಷಯಗಳೊಂದಿಗೆ ಐದು ಮಹಾಭೂತಗಳಲ್ಲಿ ನಿವಾಸಿಸುತ್ತಿರುತ್ತವೆ. ಆದರೆ ಇವೆಲ್ಲವೂ ಮನಸ್ಸಿನ ಅನುಗಾಮಿಗಳು. ಮನಸ್ಸು ಬುದ್ಧಿಯನ್ನು ಅನುಸರಿಸುತ್ತದೆ ಮತ್ತು ಬುದ್ಧಿಯು ಆತ್ಮವನ್ನು ಅನುಸರಿಸುತ್ತದೆ.

12195022a ಶುಭಾಶುಭಂ ಕರ್ಮ ಕೃತಂ ಯದಸ್ಯ

ತದೇವ ಪ್ರತ್ಯಾದದತೇ ಸ್ವದೇಹೇ|

12195022c ಮನೋಽನುವರ್ತಂತಿ ಪರಾವರಾಣಿ

ಜಲೌಕಸಃ ಸ್ರೋತ ಇವಾನುಕೂಲಮ್||

ಜೀವಾತ್ಮವು ಒಂದು ದೇಹವನ್ನು ತೊರೆದು ಇನ್ನೊಂದು ದೇಹವನ್ನು ಸೇರಿದಾಗ ಅದು ಹಿಂದೆ ಮಾಡಿದ ಶುಭಾಶುಭಕರ್ಮಗಳ ಫಲವನ್ನು ತನ್ನ ದೇಹದಲ್ಲಿಯೇ ಪಡೆದುಕೊಳ್ಳುತ್ತದೆ. ನೀರು ಪ್ರವಾಹವನ್ನು ಅನುಸರಿಸಿ ಹೋಗುವಂತೆ ಮನಸ್ಸು ಪೂರ್ವಕೃತ ಕರ್ಮಫಲಗಳನ್ನು ಅನುಸರಿಸಿ ಹೋಗುತ್ತಿರುತ್ತದೆ.

12195023a ಚಲಂ ಯಥಾ ದೃಷ್ಟಿಪಥಂ[8] ಪರೈತಿ

ಸೂಕ್ಷ್ಮಂ ಮಹದ್ರೂಪಮಿವಾಭಿಪಾತಿ|

12195023c ಸ್ವರೂಪಮಾಲೋಚಯತೇ ಚ ರೂಪಂ

ಪರಂ ತಥಾ ಬುದ್ಧಿಪಥಂ ಪರೈತಿ||

ವೇಗವಾಗಿ ಚಲಿಸುತ್ತಿರುವ ವಾಹನದಲ್ಲಿ ಕುಳಿತಿರುವವನಿಗೆ ಮಾರ್ಗದ ಪಕ್ಕದಲ್ಲಿರುವ ಮರ-ಗಿಡಗಳು ಓಡುತ್ತಿರುವಂತೆ ಕಾಣುತ್ತಿರುತ್ತವೆ. ವಾಸ್ತವವಾಗಿ ಅವು ಚಲಿಸುತ್ತಿರುವುದಿಲ್ಲ. ಅದೇ ರೀತಿ ಪ್ರಾಣಿಗಳ ಶರೀರದಲ್ಲಿರುವ ಕೂಟಸ್ಥನು ನಿರ್ವಿಕಾರನಾಗಿದ್ದರೂ ಬುದ್ಧಿಯ ವಿಕಾರದಿಂದ ಅವನೂ ವಿಕೃತನಾಗಿ ಕಾಣುತ್ತಾನೆ. ಸೂಕ್ಷ್ಮ ಪದಾರ್ಥವು ಭೂತಗನ್ನಡಿಯಲ್ಲಿ ದೊಡ್ಡದಾಗಿ ಕಾಣುವಂತೆ ಆತ್ಮವು ಬುದ್ಧಿಯ ಗೋಚರದಲ್ಲಿ ಬಂದಾಗ ಆತ್ಮವೂ ತನ್ನ ವಿಕಾರವನ್ನು ಹೊಂದಿರುವಂತೆಯೇ ಕಾಣುತ್ತದೆ. ಮುಖವು ವಿಕಾರವಾಗಿಲ್ಲದೇ ಶುದ್ಧವಾಗಿದ್ದರೂ ಹೊಲಸಾದ ಕನ್ನಡಿಯಲ್ಲಿ ಮುಖನೋಡಿಕೊಂಡಾಗ ಹೊಲಸಾಗಿಯೇ ಕಾಣುವಂತೆ ನಿತ್ಯಶುದ್ಧನಾದ ಆತ್ಮನು ಬುದ್ಧಿಯ ಕನ್ನಡಿಯಲ್ಲಿ ಬುದ್ಧಿಯ ವಿಕಾರಗಳಿಂದ ಕೂಡಿದವನಂತೆಯೇ ಕಾಣುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮನುಬೃಹಸ್ಪತಿಸಂವಾದೇ ಪಂಚನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮನುಬೃಹಸ್ಪತಿಸಂವಾದ ಎನ್ನುವ ನೂರಾತೊಂಭತ್ತೈದನೇ ಅಧ್ಯಾಯವು.

[1] ಸಮುದಾಯಮಾಹುಃ| (ಭಾರತ ದರ್ಶನ).

[2] ಯಸ್ಮಿನ್ಸರ್ವಂ ಯತಃ ಸರ್ವಂ ಯಃ ಸರ್ವೇ ಸರ್ವತಶ್ಚ ಯಃ| ಯಶ್ಚ ಸರ್ವಮಯೋ ನಿತ್ಯಂ ತಸ್ಮೈ ಸರ್ವಾತ್ಮನೇ ನಮಃ|| ಪರಮಾತ್ಮನು ಸರ್ವಸ್ವರೂಪೀ. ಸರ್ವಾಧಾರ. ಸರ್ವಪ್ರವೃತ್ತಿಗಲಿಗೂ ಅಧಿಕರಣ ಮತ್ತು ಕಾರಣ. ಕರ್ತೃ, ಕರ್ಮ, ಕಾರಣಸಮುದಾಯಕ್ಕೆ ಅವನೇ ಕಾರಣ. (ಶಾಂತಿ ಪರ್ವ, ರಾಜಧರ್ಮಪರ್ವ, ಅಧ್ಯಾಯ ೪೭, ಶ್ಲೋಕ ೫೪).

[3] ಯದ್ವ್ಯಾಪ್ಯಭೂದ್ವ್ಯಾಪಕಂ ಸಾಧಕಂ ಚ (ಭಾರತ ದರ್ಶನ/ಗೀತಾ ಪ್ರೆಸ್).

[4] ಇಂದ್ರಿಯಗಳ ಪ್ರಕಾಶವು ಚಿನ್ಮಯಪ್ರಕಾಶದ ಅಧೀನವಾಗಿರುವುದರಿಂದ ಅವು ಪರಾಧೀನವಾಗಿವೆ. ಅವು ಸ್ವತಃ ಪ್ರಕಾಶಗೊಳಿಸಲು ಸಮರ್ಥವಲ್ಲ (ಗೀತಾ ಪ್ರೆಸ್).

[5] ಫಲಸಂನಿಯೋಗಾತ್| (ಭಾರತ ದರ್ಶನ/ಗೀತಾ ಪ್ರೆಸ್).

[6] ಪೂರ್ವಕೃತಕರ್ಮಫಲಗಳ ಸಂಬಂಧದಿಂದಾಗಿ (ಗೀತಾ ಪ್ರೆಸ್).

[7] ಸಮೀಪೇ (ಗೀತಾ ಪ್ರೆಸ್).

[8] ದೃಷ್ಟಿಕಥಂ (ಭಾರತ ದರ್ಶನ/ಗೀತಾ ಪ್ರೆಸ್).

Comments are closed.