Shanti Parva: Chapter 194

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೯೪

ಮನು-ಬೃಹಸ್ಪತಿ ಸಂವಾದ

ಬೃಹಸ್ಪತಿಯ ಪ್ರಶ್ನೆಗೆ ಉತ್ತರವಾಗಿ ಮನುವು ಕಾಮನಾ ತ್ಯಾಗ ಮತ್ತು ಜ್ಞಾನವನ್ನು ಪ್ರಶಂಸಿದುದು; ಪರಮಾತ್ಮತತ್ತ್ವದ ನಿರೂಪಣೆ (೧-೨೪).

12194001 ಯುಧಿಷ್ಠಿರ ಉವಾಚ|

12194001a ಕಿಂ ಫಲಂ ಜ್ಞಾನಯೋಗಸ್ಯ ವೇದಾನಾಂ ನಿಯಮಸ್ಯ ಚ|

12194001c ಭೂತಾತ್ಮಾ ವಾ ಕಥಂ ಜ್ಞೇಯಸ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಜ್ಞಾನಯೋಗ, ವೇದಗಳು ಮತ್ತು ನಿಯಮಗಳು ಇವುಗಳ ಪ್ರಯೋಜನವಾದರೂ ಏನು? ಭೂತಾತ್ಮನನ್ನು ನಾವು ಹೇಗೆ ತಿಳಿಯಬಲ್ಲೆವು? ಅದರ ಕುರಿತು ನನಗೆ ಹೇಳು.”

12194002 ಭೀಷ್ಮ ಉವಾಚ|

12194002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12194002c ಮನೋಃ ಪ್ರಜಾಪತೇರ್ವಾದಂ ಮಹರ್ಷೇಶ್ಚ ಬೃಹಸ್ಪತೇಃ||

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪ್ರಜಾಪತಿ ಮನು ಮತ್ತು ಮಹರ್ಷಿ ಬೃಹಸ್ಪತಿಯ ಸಂವಾದವನ್ನು ಉದಾಹರಿಸುತ್ತಾರೆ.

12194003a ಪ್ರಜಾಪತಿಂ ಶ್ರೇಷ್ಠತಮಂ ಪೃಥಿವ್ಯಾಂ

ದೇವರ್ಷಿಸಂಘಪ್ರವರೋ ಮಹರ್ಷಿಃ|

12194003c ಬೃಹಸ್ಪತಿಃ ಪ್ರಶ್ನಮಿಮಂ ಪುರಾಣಂ

ಪಪ್ರಚ್ಚ ಶಿಷ್ಯೋಽಥ ಗುರುಂ ಪ್ರಣಮ್ಯ||

ದೇವ-ಋಷಿಮಂಡಲದಲ್ಲಿ ಪ್ರಮುಖನಾದ ಮಹರ್ಷಿ ಬೃಹಸ್ಪತಿಯು ಪೃಥ್ವಿಯಲ್ಲಿಯೇ ಶ್ರೇಷ್ಠತಮ ಪ್ರಜಾಪತಿಗೆ ಶಿಷ್ಯನು ಗುರುವಿಗೆ ಹೇಗೋ ಹಾಗೆ ವಂದಿಸಿ ಈ ಪುರಾಣ ಪ್ರಶ್ನೆಯನ್ನು ಕೇಳಿದನು:

12194004a ಯತ್ಕಾರಣಂ ಮಂತ್ರ[1]ವಿಧಿಃ ಪ್ರವೃತ್ತೋ

ಜ್ಞಾನೇ ಫಲಂ ಯತ್ಪ್ರವದಂತಿ ವಿಪ್ರಾಃ|

12194004c ಯನ್ಮಂತ್ರಶಬ್ದೈರಕೃತಪ್ರಕಾಶಂ

ತದುಚ್ಯತಾಂ ಮೇ ಭಗವನ್ಯಥಾವತ್||

“ಭಗವನ್! ಯಾವ ಜಗತ್ಕಾರಣದ ಕುರಿತು ಮಂತ್ರವಿಧಿಗಳಲ್ಲಿ ಪ್ರವೃತ್ತರಾಗುತ್ತಾರೋ, ಯಾವುದು ಜ್ಞಾನದ ಫಲವೆಂದು ವಿಪ್ರರು ಹೇಳುತ್ತಾರೋ ಮತ್ತು ಯಾವುದು ಮಂತ್ರ ಶಬ್ದಗಳಿಂದ ಸಂಪೂರ್ಣಪ್ರಕಾಶಿತವಾಗುವುದಿಲ್ಲವೋ ಅದರ ಕುರಿತು ನನಗೆ ಯಥಾವತ್ತಾಗಿ ಹೇಳಬೇಕು.

12194005a ಯದರ್ಥಶಾಸ್ತ್ರಾಗಮಮಂತ್ರವಿದ್ಭಿರ್

ಯಜ್ಞೈರನೇಕೈರ್ವರಗೋಪ್ರದಾನೈಃ|

12194005c ಫಲಂ ಮಹದ್ಭಿರ್ಯದುಪಾಸ್ಯತೇ ಚ

ತತ್ಕಿಂ ಕಥಂ ವಾ ಭವಿತಾ ಕ್ವ ವಾ ತತ್||

ಅರ್ಥಶಾಸ್ತ್ರ-ಆಗಮ ಮಂತ್ರಗಳ ವಿದ್ವಾಂಸರು ಅನೇಕ ಯಜ್ಞಗಳು

ಮತ್ತು ಗೋದಾನಗಳ ಮೂಲಕ ಉಪಾಸಿಸುವ ಆ ಸುಖಮಯ ಫಲವು ಯಾವುದು? ಅದು ಹೇಗೆ ಪ್ರಾಪ್ತವಾಗುತ್ತದೆ ಮತ್ತು ಅದರ ಸ್ಥಿತಿಯೇನು?

12194006a ಮಹೀ ಮಹೀಜಾಃ ಪವನೋಽಂತರಿಕ್ಷಂ

ಜಲೌಕಸಶ್ಚೈವ ಜಲಂ ದಿವಂ ಚ|

12194006c ದಿವೌಕಸಶ್ಚೈವ ಯತಃ ಪ್ರಸೂತಾಸ್

ತದುಚ್ಯತಾಂ ಮೇ ಭಗವನ್ಪುರಾಣಮ್||

ಭಗವನ್! ಭೂಮಿ, ಭೂಮಿಯಲ್ಲಿ ಹುಟ್ಟಿದವುಗಳು, ಪವನ, ಅಂತರಿಕ್ಷ, ಜಲಜಂತುಗಳು, ಜಲ, ಸ್ವರ್ಗ, ದಿವೌಕಸರು ಯಾವುದರಿಂದ ಹುಟ್ಟಿವೆಯೋ ಆ ಪುರಾತನ ವಸ್ತುವು ಯಾವುದು? ಅದನ್ನು ನನಗೆ ಹೇಳು.

12194007a ಜ್ಞಾನಂ ಯತಃ ಪ್ರಾರ್ಥಯತೇ ನರೋ ವೈ

ತತಸ್ತದರ್ಥಾ ಭವತಿ ಪ್ರವೃತ್ತಿಃ|

12194007c ನ ಚಾಪ್ಯಹಂ ವೇದ ಪರಂ ಪುರಾಣಂ

ಮಿಥ್ಯಾಪ್ರವೃತ್ತಿಂ ಚ ಕಥಂ ನು ಕುರ್ಯಾಮ್||

ಮನುಷ್ಯನಿಗೆ ತಿಳಿದಿರುವುದನ್ನೇ ಅವನು ಬಯಸುತ್ತಾನೆ. ಅನಂತರ ಅದನ್ನು ಪಡೆಯಲು ಪ್ರವೃತ್ತನಾಗುತ್ತಾನೆ. ಆದರೆ ನನಗೆ ಆ ಪರಮ ಪುರಾಣ ವಸ್ತುವಿನ ಕುರಿತು ಜ್ಞಾನವೇ ಇಲ್ಲ. ಹಾಗಿರುವಾಗ ಅದನ್ನು ಪಡೆಯುವ ಮಿಥ್ಯಾಪ್ರವೃತ್ತಿಯನ್ನು ನಾನು ಏಕೆ ಮಾಡಬೇಕು?

12194008a ಋಕ್ಸಾಮಸಂಘಾಂಶ್ಚ ಯಜೂಂಷಿ ಚಾಹಂ

ಚಂದಾಂಸಿ ನಕ್ಷತ್ರಗತಿಂ ನಿರುಕ್ತಮ್|

12194008c ಅಧೀತ್ಯ ಚ ವ್ಯಾಕರಣಂ ಸಕಲ್ಪಂ

ಶಿಕ್ಷಾಂ ಚ ಭೂತಪ್ರಕೃತಿಂ ನ ವೇದ್ಮಿ||

ನಾನು ಋಕ್, ಸಾಮ ಮತ್ತು ಯಜುರ್ವೇದ ಹಾಗೂ ಛಂದ, ನಕ್ಷತ್ರಗಳ ಗತಿ, ನಿರುಕ್ತ, ವ್ಯಾಕರಣ, ಕಲ್ಪ, ಮತ್ತು ಶಿಕ್ಷೆಗಳ ಅಧ್ಯಯನ ಮಾಡಿಯೂ ನನಗೆ ಆಕಾಶವೇ ಮೊದಲಾದ ಪಂಚಭೂತಗಳ ಪ್ರಕೃತಿಯ ಜ್ಞಾನವುಂಟಾಗಿಲ್ಲ.

12194009a ಸ ಮೇ ಭವಾನ್ ಶಂಸತು ಸರ್ವಮೇತಜ್

[2]ಜ್ಞಾನೇ ಫಲಂ ಕರ್ಮಣಿ ವಾ ಯದಸ್ತಿ|

12194009c ಯಥಾ ಚ ದೇಹಾಚ್ಚ್ಯವತೇ ಶರೀರೀ

ಪುನಃ ಶರೀರಂ ಚ ಯಥಾಭ್ಯುಪೈತಿ||

ಜ್ಞಾನದ ಫಲವೇನು? ಕರ್ಮಗಳ ಫಲವೇನು? ಶರೀರಿಯು ದೇಹದಿಂದ ಹೇಗೆ ಹೊರಬೀಳುತ್ತಾನೆ ಮತ್ತು ಪುನಃ ಶರೀರವನ್ನು ಹೇಗೆ ಸೇರಿಕೊಳ್ಳುತ್ತಾನೆ? ಇವೆಲ್ಲವನ್ನೂ ನನಗೆ ವರ್ಣಿಸಬೇಕು.”

12194010 ಮನುರುವಾಚ|

12194010a ಯದ್ಯತ್ಪ್ರಿಯಂ ಯಸ್ಯ ಸುಖಂ ತದಾಹುಸ್

ತದೇವ ದುಃಖಂ ಪ್ರವದಂತ್ಯನಿಷ್ಟಮ್|

12194010c ಇಷ್ಟಂ ಚ ಮೇ ಸ್ಯಾದಿತರಚ್ಚ ನ ಸ್ಯಾದ್

ಏತತ್ಕೃತೇ ಕರ್ಮವಿಧಿಃ ಪ್ರವೃತ್ತಃ|

12194010e ಇಷ್ಟಂ ತ್ವನಿಷ್ಟಂ ಚ ನ ಮಾಂ ಭಜೇತೇತ್ಯ್

ಏತತ್ಕೃತೇ ಜ್ಞಾನವಿಧಿಃ ಪ್ರವೃತ್ತಃ||

ಮನುವು ಹೇಳಿದನು: “ಯಾರಿಗೆ ಯಾವುದು ಪ್ರಿಯವೋ ಅದನ್ನೇ ಸುಖವೆಂದು ಹೇಳುತ್ತಾರೆ. ಹಾಗೆಯೇ ಅಪ್ರಿಯವಾದುದನ್ನು ದುಃಖವೆಂದು ಹೇಳುತ್ತಾರೆ. ನನಗೆ ಇಷ್ಟವಾದುದು ಆಗಲಿ ಮತ್ತು ಅನಿಷ್ಟದ ನಿವಾರಣೆಯಾಗಲಿ ಎಂದು ಕರ್ಮವಿಧಿಯು ಪ್ರಾರಂಭಗೊಂಡಿತು. ಇಷ್ಟ-ಅನಿಷ್ಟಗಳೆರಡೂ ನನಗೆ ಪ್ರಾಪ್ತವಾಗದಿರಲೆಂದು ಜ್ಞಾನವಿಧಿಯು ಪ್ರಾರಂಭಗೊಂಡಿತು.

12194011a ಕಾಮಾತ್ಮಕಾಶ್ಚಂದಸಿ ಕರ್ಮಯೋಗಾ

ಏಭಿರ್ವಿಮುಕ್ತಃ ಪರಮಶ್ನುವೀತ|

12194011c ನಾನಾವಿಧೇ ಕರ್ಮಪಥೇ ಸುಖಾರ್ಥೀ

ನರಃ ಪ್ರವೃತ್ತೋ ನ ಪರಂ ಪ್ರಯಾತಿ|

[3]12194011e ಪರಂ ಹಿ ತತ್ಕರ್ಮಪಥಾದಪೇತಂ

ನಿರಾಶಿಷಂ ಬ್ರಹ್ಮಪರಂ ಹ್ಯವಶ್ಯಮ್||

ವೇದಗಳಲ್ಲಿರುವ ಕರ್ಮಯೋಗಗಳು ಕಾಮಾತ್ಮಕವಾಗಿವೆ. ಇವುಗಳಿಂದ ಮುಕ್ತನಾದವನೇ ಪರಮಾತ್ಮನನ್ನು ಪಡೆದುಕೊಳ್ಳಬಲ್ಲನು. ಸುಖಾರ್ಥಿಯಾಗಿ ನಾನಾ ವಿಧದ ಕರ್ಮಪಥದಲ್ಲಿ ಪ್ರವೃತ್ತನಾದ ನರನು ಪರಮಾತ್ಮನನ್ನು ಹೊಂದುವುದಿಲ್ಲ. ಆದರೆ ನಿಷ್ಕಾಮನಾಗಿ ಅದೇ ಕರ್ಮಪಥದಲ್ಲಿರುವವನು ಅವಶ್ಯವಾಗಿಯೂ ಪರಬ್ರಹ್ಮನನ್ನು ಪಡೆದುಕೊಳ್ಳುತ್ತಾನೆ.

12194012a ಪ್ರಜಾಃ ಸೃಷ್ಟಾ ಮನಸಾ ಕರ್ಮಣಾ ಚ

ದ್ವಾವಪ್ಯೇತೌ ಸತ್ಪಥೌ ಲೋಕಜುಷ್ಟೌ|

12194012c ದೃಷ್ಟ್ವಾ ಕರ್ಮ ಶಾಶ್ವತಂ ಚಾಂತವಚ್ಚ

ಮನಸ್ತ್ಯಾಗಃ ಕಾರಣಂ ನಾನ್ಯದಸ್ತಿ||

ಮನಸ್ಸು ಮತ್ತು ಕರ್ಮಗಳೊಂದಿಗೆ ಪ್ರಜೆಗಳ ಸೃಷ್ಟಿಯಾಯಿತು. ಆದುದರಿಂದ ಇವೆರಡೂ ಲೋಕಸೇವಿತ ಸನ್ಮಾರ್ಗರೂಪಗಳಾಗಿವೆ. ನೋಡಿದರೆ ಕರ್ಮಗಳಲ್ಲಿ ಶಾಶ್ವತ ಮತ್ತು ನಶ್ವರ[4] ಎಂಬ ಎರಡು ವಿಧಗಳಿವೆ. ಮನಸ್ಸಿನ ಕರ್ಮಫಲದ ತ್ಯಾಗವೇ ಕರ್ಮಗಳನ್ನು ಶಾಶ್ವತಗೊಳಿಸುತ್ತದೆ. ಬೇರೆ ಏನೂ ಇಲ್ಲ.

12194013a ಸ್ವೇನಾತ್ಮನಾ ಚಕ್ಷುರಿವ ಪ್ರಣೇತಾ

ನಿಶಾತ್ಯಯೇ ತಮಸಾ ಸಂವೃತಾತ್ಮಾ|

12194013c ಜ್ಞಾನಂ ತು ವಿಜ್ಞಾನಗುಣೇನ ಯುಕ್ತಂ

ಕರ್ಮಾಶುಭಂ ಪಶ್ಯತಿ ವರ್ಜನೀಯಮ್||

ರಾತ್ರಿಯು ಕಳೆದು ಅಂಧಕಾರದ ಆವರಣವು ಹೊರಟು ಹೋಗಲು ಕಣ್ಣುಗಳು ಹೇಗೆ ತಮ್ಮ ಸ್ವರೂಪವನ್ನು ಪಡೆದುಕೊಂಡು ಮಾರ್ಗದಲ್ಲಿರುವ, ಬಿಟ್ಟು ನಡೆಯಬೇಕಾದ ಮುಳ್ಳು-ಕಲ್ಲು ಇತ್ಯಾದಿಗಳನ್ನು ನೋಡುತ್ತವೆಯೋ ಹಾಗೆ ಮೋಹದ ಪರೆಯು ಸರಿದು ಜ್ಞಾನಪ್ರಕಾಶಯುಕ್ತ ಬುದ್ಧಿಗೂ ಕೂಡ ತ್ಯಜಿಸಲು ಯೋಗ್ಯವಾದ ಅಶುಭಕರ್ಮಗಳು ಸರಿಯಾಗಿ ಕಾಣುತ್ತವೆ.

12194014a ಸರ್ಪಾನ್ ಕುಶಾಗ್ರಾಣಿ ತಥೋದಪಾನಂ

ಜ್ಞಾತ್ವಾ ಮನುಷ್ಯಾಃ ಪರಿವರ್ಜಯಂತಿ|

12194014c ಅಜ್ಞಾನತಸ್ತತ್ರ ಪತಂತಿ ಮೂಢಾ

ಜ್ಞಾನೇ ಫಲಂ ಪಶ್ಯ ಯಥಾ ವಿಶಿಷ್ಟಮ್||

ಮಾರ್ಗದಲ್ಲಿ ಸರ್ಪಗಳಿವೆ, ಮುಳ್ಳುಗಳಿವೆ ಮತ್ತು ಬಾವಿಗಳಿವೆ ಎಂದು ತಿಳಿದ ಮನುಷ್ಯನು ಅವುಗಳನ್ನು ದೂರದಿಂದಲೇ ವರ್ಜಿಸಿ ನಡೆಯುತ್ತಾನೆ. ಅವುಗಳಿರುವ ಕಡೆ ಹೋಗುವುದಿಲ್ಲ. ಮೂಢ ಅಜ್ಞಾನಿಗಳು ಅವುಗಳಲ್ಲಿ ಬೀಳುತ್ತಾರೆ. ಜ್ಞಾನದ ಫಲವು ಎಷ್ಟು ವಿಶಿಷ್ಟ ಎನ್ನುವುದನ್ನು ನೋಡು.

12194015a ಕೃತ್ಸ್ನಸ್ತು ಮಂತ್ರೋ ವಿಧಿವತ್ ಪ್ರಯುಕ್ತೋ

ಯಜ್ಞಾ ಯಥೋಕ್ತಾಸ್ತ್ವಥ ದಕ್ಷಿಣಾಶ್ಚ|

12194015c ಅನ್ನಪ್ರದಾನಂ ಮನಸಃ ಸಮಾಧಿಃ

ಪಂಚಾತ್ಮಕಂ ಕರ್ಮಫಲಂ ವದಂತಿ||

ಮಂತ್ರವನ್ನು ವಿಧಿವತ್ತಾಗಿ ಮತ್ತು ಸಂಪೂರ್ಣವಾಗಿ ಉಚ್ಛರಿಸುವುದು, ವೇದೋಕ್ತವಾಗಿ ಯಜ್ಞಗಳನ್ನು ನಡೆಸುವುದು, ಯಥೋಕ್ತ ದಕ್ಷಿಣೆಗಳನ್ನು ಕೊಡುವುದು, ಅನ್ನದಾನ ಮತ್ತು ಎಲ್ಲ ಕರ್ಮಾನುಷ್ಠಾನಗಳಲ್ಲಿ ಮನಸ್ಸಿನ ಏಕಾಗ್ರತೆಯಲ್ಲಿರುವುದು – ಈ ಪಂಚಾತ್ಮಕ ಕರ್ಮಗಳೇ ಫಲವನ್ನು ನೀಡುತ್ತವೆ ಎಂದು ಹೇಳುತ್ತಾರೆ.

12194016a ಗುಣಾತ್ಮಕಂ ಕರ್ಮ ವದಂತಿ ವೇದಾಸ್

ತಸ್ಮಾನ್ಮಂತ್ರಾ ಮಂತ್ರಮೂಲಂ ಹಿ ಕರ್ಮ|

12194016c ವಿಧಿರ್ವಿಧೇಯಂ ಮನಸೋಪಪತ್ತಿಃ

ಫಲಸ್ಯ ಭೋಕ್ತಾ ತು ಯಥಾ ಶರೀರೀ||

ಕರ್ಮಗಳು ಗುಣಾತ್ಮಕವೆಂದು ಹೇಳುತ್ತಾರೆ. ಮಂತ್ರಗಳಲ್ಲಿಯೂ ಗುಣಭೇದಗಳಿವೆ[5]. ಈ ಮಂತ್ರಗಳಿಗೆ ಸಂಬಂಧಿಸಿದ ವಿಧಿಗಳಲ್ಲಿಯೂ ಗುಣಭೇದಗಳಿವೆ. ಈ ಕರ್ಮಗಳ ಪ್ರಯೋಗಗಳೂ ಸತ್ತ್ವ-ರಜಸ್ತಮೋಗುಣಾತ್ಮಗಳಾಗಿವೆ. ಈ ಕರ್ಮಗಳನ್ನು ಮಾಡುವವರ ಮನಸ್ಸಿನ ಆಶಯಗಳೂ ತ್ರಿಗುಣಾತ್ಮಕವಾಗಿರುತ್ತವೆ. ಫಲವನ್ನು ಅನುಭವಿಸುವ ಮನುಷ್ಯನೂ ಕೂಡ ಸಾತ್ತ್ವಿಕ, ರಾಜಸಿಕ ಅಥವಾ ತಾಮಸಿಕನಾಗಿರುತ್ತಾನೆ.

12194017a ಶಬ್ದಾಶ್ಚ ರೂಪಾಣಿ ರಸಾಶ್ಚ ಪುಣ್ಯಾಃ

ಸ್ಪರ್ಶಾಶ್ಚ ಗಂಧಾಶ್ಚ ಶುಭಾಸ್ತಥೈವ|

12194017c ನರೋ ನಸಂಸ್ಥಾನಗತಃ ಪ್ರಭುಃ ಸ್ಯಾದ್

ಏತತ್ಫಲಂ ಸಿಧ್ಯತಿ ಕರ್ಮಲೋಕೇ||

ಕರ್ಮಲೋಕದಲ್ಲಿ ಶಬ್ದಗಳು, ರೂಪಗಳು, ರಸಗಳು, ಪುಣ್ಯ ಸ್ಪರ್ಶಗಳೂ, ಶುಭಗಂಧಗಳೂ ಸಿದ್ಧಿಸುತ್ತವೆ. ಸತ್ಕರ್ಮಿಗಳಿಗೆ ಭೂಲೋಕದಲ್ಲಿ ಇವೆಲ್ಲವೂ ದೊರೆಯುತ್ತವೆ. ಸಕಾಮ ಕರ್ಮಿಗಳಿಗೆ ಪ್ರಭುವಿನ ಸಾಮೀಪ್ಯವು ದೊರೆಯುವುದಿಲ್ಲ.

12194018a ಯದ್ಯಚ್ಚರೀರೇಣ ಕರೋತಿ ಕರ್ಮ

ಶರೀರಯುಕ್ತಃ ಸಮುಪಾಶ್ನುತೇ ತತ್|

12194018c ಶರೀರಮೇವಾಯತನಂ ಸುಖಸ್ಯ

ದುಃಖಸ್ಯ ಚಾಪ್ಯಾಯತನಂ ಶರೀರಮ್||

ಶರೀರದಿಂದ ಮಾಡುವ ಕರ್ಮಗಳ ಫಲಗಳನ್ನು ಶರೀರಯುಕ್ತನಾಗಿಯೇ ಅನುಭವಿಸುತ್ತಾನೆ. ಆದುದರಿಂದ ಶರೀರವೇ ಸುಖಕ್ಕೆ ಅನುಭವಸ್ಥಾನವು ಮತ್ತು ಶರೀರವೇ ದುಃಖಕ್ಕೇ ಅನುಭವಸ್ಥಾನವು.

12194019a ವಾಚಾ ತು ಯತ್ಕರ್ಮ ಕರೋತಿ ಕಿಂ ಚಿದ್

ವಾಚೈವ ಸರ್ವಂ ಸಮುಪಾಶ್ನುತೇ ತತ್|

12194019c ಮನಸ್ತು ಯತ್ಕರ್ಮ ಕರೋತಿ ಕಿಂ ಚಿನ್

ಮನಃಸ್ಥ ಏವಾಯಮುಪಾಶ್ನುತೇ ತತ್||

ಮನುಷ್ಯನು ಮಾತಿನಿಂದ ಮಾಡಿದ ಕರ್ಮಫಲವೆಲ್ಲವನ್ನೂ ಮಾತಿನ ಮೂಲಕವೇ ಉಪಭೋಗಿಸುತ್ತಾನೆ. ಹಾಗೆಯೇ ಮನಸ್ಸಿನಿಂದ ಮಾಡಿದ ಕರ್ಮಗಳ ಫಲವನ್ನು ಅವನು ಮನಸ್ಸಿನ ಮೂಲಕವೇ ಪಡೆದುಕೊಳ್ಳುತ್ತಾನೆ.

12194020a ಯಥಾಗುಣಂ ಕರ್ಮಗಣಂ[6] ಫಲಾರ್ಥೀ

ಕರೋತ್ಯಯಂ ಕರ್ಮಫಲೇ ನಿವಿಷ್ಟಃ|

12194020c ತಥಾ ತಥಾಯಂ ಗುಣಸಂಪ್ರಯುಕ್ತಃ

ಶುಭಾಶುಭಂ ಕರ್ಮಫಲಂ ಭುನಕ್ತಿ||

ಸತ್ತ್ವರಜಸ್ತಮೋಗುಣಗಳಿಂದ ಪ್ರೇರಿತನಾದ ಫಲಾರ್ಥಿಯು ಯಾವ ಗುಣದ ಕರ್ಮಗಳನ್ನು ಹೇಗೆ ಮಾಡುವನೋ ಆಯಾ ಕರ್ಮಗಳ ತ್ರಿಗುಣಾತ್ಮಿಕ ರೂಪದ ಫಲವನ್ನು ಹಾಗೆಯೇ ಅನುಭವಿಸುತ್ತಾನೆ.

12194021a ಮತ್ಸ್ಯೋ ಯಥಾ ಸ್ರೋತ ಇವಾಭಿಪಾತೀ

ತಥಾ ಕೃತಂ ಪೂರ್ವಮುಪೈತಿ ಕರ್ಮ|

12194021c ಶುಭೇ ತ್ವಸೌ ತುಷ್ಯತಿ ದುಷ್ಕೃತೇ ತು

ನ ತುಷ್ಯತೇ ವೈ ಪರಮಃ ಶರೀರೀ||

ಮೀನುಗಳು ಪ್ರವಾಹವನ್ನನುಸರಿಸಿ ಹೋಗುವಂತೆ ಮನುಷ್ಯನು ತಾನು ಹಿಂದೆಮಾಡಿದ ಕರ್ಮಫಲಗಳೊಡನೆ ಈ ಸಂಸಾರಸಾಗರದಲ್ಲಿ ತೇಲಿಕೊಂಡು ಹೋಗುತ್ತಿರುತ್ತಾನೆ. ಪರಮ ಶ್ರೇಷ್ಠವಾದ ಮನುಷ್ಯನ ಶರೀರದಲ್ಲಿರುವ ಜೀವವು ಶುಭಫಲಗಳಿಂದ ಆನಂದಿಸುತ್ತಾನೆ ಮತ್ತು ದುಷ್ಫಲಗಳಿಂದ ದುಃಖಿಸುತ್ತಾನೆ.

12194022a ಯತೋ ಜಗತ್ಸರ್ವಮಿದಂ ಪ್ರಸೂತಂ

ಜ್ಞಾತ್ವಾತ್ಮವಂತೋ ವ್ಯತಿಯಾಂತಿ ಯತ್ತತ್|

12194022c ಯನ್ಮಂತ್ರಶಬ್ದೈರಕೃತಪ್ರಕಾಶಂ

ತದುಚ್ಯಮಾನಂ ಶೃಣು ಮೇ ಪರಂ ಯತ್||

ಯಾವುದರಿಂದ ಈ ಜಗತ್ತೆಲ್ಲವೂ ಹುಟ್ಟಿದೆಯೋ, ಯಾವುದರ ಜ್ಞಾನದಿಂದ ಆತ್ಮವಂತರು ಪರಮಪದವನ್ನು ಪಡೆಯುತ್ತಾರೋ ಮತ್ತು ಯಾವುದನ್ನು ಮಂತ್ರಶಬ್ದಗಳೂ ಸಂಪೂರ್ಣವಾಗಿ ತೋರಿಸಲಾರವೋ ಆ ಪರಮ ವಸ್ತುವಿನ ವರ್ಣನೆಯನ್ನು ಕೇಳು.

12194023a ರಸೈರ್ವಿಯುಕ್ತಂ ವಿವಿಧೈಶ್ಚ ಗಂಧೈರ್

ಅಶಬ್ದಮಸ್ಪರ್ಶಮರೂಪವಚ್ಚ|

12194023c ಅಗ್ರಾಹ್ಯಮವ್ಯಕ್ತಮವರ್ಣಮೇಕಂ

ಪಂಚಪ್ರಕಾರಂ ಸಸೃಜೇ ಪ್ರಜಾನಾಮ್||

ಆ ಬ್ರಹ್ಮವಸ್ತುವು ವಿವಿಧ ರಸಗಳಿಂದಲೂ ವಿವಿಧ ಗಂಧಗಳಿಂದಲೂ ವಿಯುಕ್ತವಾಗಿದೆ. ಅದಕ್ಕೆ ಶಬ್ದವಿಲ್ಲ, ಸ್ಪರ್ಶವಿಲ್ಲ ಮತ್ತು ರೂಪವೂ ಇಲ್ಲ. ಅದನ್ನು ಗ್ರಹಿಸಲು ಸಾಧ್ಯವಿಲ್ಲ. ಅದು ಅವ್ಯಕ್ತವು. ಅವರ್ಣನೀಯವು. ಅದು ಒಂದೇ ಆಗಿದ್ದರೂ ಐದು ಪ್ರಕಾರದ ವಿಷಯಗಳನ್ನು ಪ್ರಜೆಗಳಿಗಾಗಿ ಸೃಷ್ಟಿಸಿದೆ.

12194024a ನ ಸ್ತ್ರೀ ಪುಮಾನ್ವಾಪಿ ನಪುಂಸಕಂ ಚ

ನ ಸನ್ನ ಚಾಸತ್ಸದಸಚ್ಚ ತನ್ನ|

12194024c ಪಶ್ಯಂತಿ ಯದ್ಬ್ರಹ್ಮವಿದೋ ಮನುಷ್ಯಾಸ್

ತದಕ್ಷರಂ ನ ಕ್ಷರತೀತಿ ವಿದ್ಧಿ||

ಆ ಬ್ರಹ್ಮವಸ್ತುವು ಸ್ತ್ರೀಯೂ ಅಲ್ಲ ಪುರುಷನೂ ಅಲ್ಲ, ನಪುಂಸಕನೂ ಅಲ್ಲ. ಅದು ಇದೆ. ಅದು ಇಲ್ಲ ಕೂಡ. ಮನುಷ್ಯರು ತಮ್ಮಲ್ಲಿಯೇ ಕಾಣುವ ಆ ಬ್ರಹ್ಮವಸ್ತುವು ಅಕ್ಷರವಾದುದು. ಅದಕ್ಕೆ ನಾಶವೆನ್ನುವುದಿಲ್ಲ ಎಂದು ತಿಳಿ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮನುಬೃಹಸ್ಪತಿಸಂವಾದೇ ಚತುರ್ನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮನುಬೃಹಸ್ಪತಿಸಂವಾದ ಎನ್ನುವ ನೂರಾತೊಂಭತ್ನಾಲ್ಕನೇ ಅಧ್ಯಾಯವು.

[1] ಯತ್ರ (ಗೀತಾ ಪ್ರೆಸ್/ಭಾರತ ದರ್ಶನ).

[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಸಾಮಾನ್ಯಶಬ್ಧೈಶ್ಚ ವಿಶೇಷಣೈಶ್ಚ ಸ ಮೇ ಭವಾನ್ ಶಂಸತು ತಾವದೇತ| (ಗೀತಾ ಪ್ರೆಸ್/ಭಾರತ ದರ್ಶನ).

[3] ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಬೃಹಸ್ಪತಿರುವಾಚ| ಇಷ್ಟಂ ತ್ವನಿಷ್ಟಂ ಚ ಸುಖಾಸುಖೇ ಚ ಸಾಶೀಸ್ತ್ವವಚ್ಛಂದತಿ ಕರ್ಮಭಿಶ್ಚ| ಮನುರುವಾಚ| ಏಭಿರ್ವಿಮುಕ್ತಃ ಪರಮಾವಿವೇಶ ಏತತ್ಕೃತೇ ದರ್ಮವಿಧಿಃ ಪ್ರವೃತ್ತಃ| ಕಾಮಾತ್ಮಕಾಂಶ್ಛಂದತಿ ಕರ್ಮಯೋಗ ಏಭಿರ್ವಿಮುಕ್ತಃ ಪರಮಾದದೀತ|| ಆತ್ಮಾದಿಭಿಃ ಕರ್ಮಭಿರಿಂಧ್ಯಮಾನೋ ಧರ್ಮೇ ಪ್ರವೃತ್ತೋ ದ್ಯುತಿಮಾನ್ಸುಖಾರ್ಥೀ| ಅರ್ಥಾತ್: ಬೃಹಸ್ಪತಿಯು ಹೇಳಿದನು: “ಸುಖವು ಇಷ್ಟವಾಗಿರುತ್ತದೆ ಮತ್ತು ದುಃಖವು ಅನಿಷ್ಟವಾಗಿರುತ್ತದೆ. ಅಂತಹ ಸುಖದ ಪ್ರಾಪ್ತಿಯು ವೇದೋಕ್ತಕರ್ಮಗಳನ್ನು ಮಾಡುವುದರಿಂದ ಲಭಿಸುತ್ತದೆ.” ಮನುವು ಹೇಳಿದನು: “ಕಾಮಗಳಿಂದ ವಿಮುಕ್ತನಾಗಿ ನಿಷ್ಕಾಮಭಾವದಿಂದ ಕರ್ಮಗಳನ್ನು ಮಾಡುವವನು ಪರಬ್ರಹ್ಮಪರಮಾತ್ಮನನ್ನು ಸೇರುತ್ತಾನೆ. ಈ ಕಾರಣದಿಂದಲೇ ನಿಷ್ಕಾಮಕರ್ಮಯೋಗವೆಂಬ ವಿಧಿಯು ಪ್ರವೃತ್ತವಾಗಿದೆ. (ಗೀತಾ ಪ್ರೆಸ್/ಭಾರತ ದರ್ಶನ).

[4] ಮೋಕ್ಷದ ಹೇತುಭೂತ ಕರ್ಮವು ಸನಾತನವು ಮತ್ತು ನಶ್ವರ ಭೋಗಗಳ ಪ್ರಾಪ್ತಿಗಾಗಿ ಮಾಡುವ ಕರ್ಮಗಳು ನಾಶಯುಕ್ತ ಕರ್ಮಗಳು (ಗೀತಾ ಪ್ರೆಸ್).

[5] ಅಗ್ನಿಮೀಳೇ ಪುರೋಹಿತಂ ಎಂಬ ಮಂತ್ರವು ಸಾತ್ತ್ವಕ ಮಂತ್ರ. ಇಷ್ಟತ್ವೋರ್ಜೇತ್ವಾ ಎಂಬ ಮಂತ್ರವು ರಾಜಸಮಂತ್ರ. ಸರ್ವಂ ಪ್ರವಿಧ್ಯ ಹೃದಯಂ ಪ್ರವಿಧ್ಯ ಎಂಬ ಮಂತ್ರವು ತಾಮಸ ಮಂತ್ರ (ಭಾರತ ದರ್ಶನ).

[6] ಯಥಾ ಯಥಾ ಕರ್ಮಗುಣಂ (ಭಾರತ ದರ್ಶನ).

Comments are closed.