Shanti Parva: Chapter 193

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೯೩

ಜಾಪಕ ಬ್ರಾಹ್ಮಣನಿಗೂ ಇಕ್ಷ್ವಾಕುವಿಗೂ ಉತ್ತಮ ಗತಿಗಳು ಲಭಿಸಿದುದು; ಜಾಪಕನಿಗೆ ಲಭಿಸುವ ಫಲದ ಉತ್ಕೃಷ್ಟತೆ (೧-೩೨).

12193001 ಯುಧಿಷ್ಠಿರ ಉವಾಚ|

12193001a ಕಿಮುತ್ತರಂ ತದಾ ತೌ ಸ್ಮ ಚಕ್ರತುಸ್ತೇನ ಭಾಷಿತೇ|

12193001c ಬ್ರಾಹ್ಮಣೋ ವಾಥ ವಾ ರಾಜಾ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ವಿರೂಪನು ತನ್ನ ನಿಜಸ್ವರೂಪವನ್ನು ತಿಳಿಸಿ, ಬ್ರಾಹ್ಮಣನಿಗೂ ಮತ್ತು ರಾಜನಿಗೂ ಸಮಾನ ಲೋಕಗಳೇ ದೊರೆಯುವುದೆಂದು ಹೇಳಿದ ನಂತರ ಬ್ರಾಹ್ಮಣನಾಗಲೀ ಅಥವಾ ರಾಜನಾಗಲೀ ಏನು ಮಾಡಿದರು ಎನ್ನುವುದನ್ನು ನನಗೆ ಹೇಳು.

12193002a ಅಥ ವಾ ತೌ ಗತೌ ತತ್ರ ಯದೇತತ್ಕೀರ್ತಿತಂ ತ್ವಯಾ|

12193002c ಸಂವಾದೋ ವಾ ತಯೋಃ ಕೋಽಭೂತ್ಕಿಂ ವಾ ತೌ ತತ್ರ ಚಕ್ರತುಃ||

ಅಥವಾ ನೀನು ಹೇಳಿದಂತೆ ಅವರಿಬ್ಬರೂ ಪುಣ್ಯಲೋಕಗಳಿಗೆ ಹೊರಟು ಹೋದರೇ? ಅವರಿಬ್ಬರ ನಡುವೆ ಯಾವ ಸಂವಾದವು ನಡೆಯಿತು? ಅಲ್ಲಿ ಅವರು ಮುಂದೆ ಏನು ಮಾಡಿದರು?”

12193003 ಭೀಷ್ಮ ಉವಾಚ|

12193003a ತಥೇತ್ಯೇವಂ ಪ್ರತಿಶ್ರುತ್ಯ ಧರ್ಮಂ ಸಂಪೂಜ್ಯ ಚಾಭಿಭೋ|

12193003c ಯಮಂ ಕಾಲಂ ಚ ಮೃತ್ಯುಂ ಚ ಸ್ವರ್ಗಂ ಸಂಪೂಜ್ಯ ಚಾರ್ಹತಃ||

ಭೀಷ್ಮನು ಹೇಳಿದನು: “ವಿಭೋ! ರಾಜನ ಆ ಮಾತಿಗೆ ಬ್ರಾಹ್ಮಣನು ಹಾಗೆಯೇ ಆಗಲೆಂದು ಹೇಳಿ ಧರ್ಮ, ಯಮ, ಕಾಲ, ಮೃತ್ಯು ಮತ್ತು ಸ್ವರ್ಗ ಇವರನ್ನು ಯಥಾರ್ಹವಾಗಿ ಪೂಜಿಸಿದನು.

12193004a ಪೂರ್ವಂ ಯೇ ಚಾಪರೇ ತತ್ರ ಸಮೇತಾ ಬ್ರಾಹ್ಮಣರ್ಷಭಾಃ|

12193004c ಸರ್ವಾನ್ಸಂಪೂಜ್ಯ ಶಿರಸಾ ರಾಜಾನಂ ಸೋಽಬ್ರವೀದ್ವಚಃ||

ಮೊದಲೇ ಅಲ್ಲಿದ್ದ ಮತ್ತು ಆ ಸಮಯದಲ್ಲಿ ಬಂದು ಸೇರಿದ್ದ ಬ್ರಾಹ್ಮಣರ್ಷಭರೆಲ್ಲರನ್ನೂ ಶಿರಸಾ ಪೂಜಿಸಿ ಬ್ರಾಹ್ಮಣನು ರಾಜನಿಗೆ ಇಂತೆಂದನು:

12193005a ಫಲೇನಾನೇನ ಸಂಯುಕ್ತೋ ರಾಜರ್ಷೇ ಗಚ್ಚ ಪುಣ್ಯತಾಮ್|

12193005c ಭವತಾ ಚಾಭ್ಯನುಜ್ಞಾತೋ ಜಪೇಯಂ ಭೂಯ ಏವ ಹಿ||

“ರಾಜರ್ಷೇ! ನಾನು ನೀಡಿದ ಈ ಜಪಫಲದಿಂದ ಯುಕ್ತನಾಗಿ ಪುಣ್ಯಲೋಕಗಳಿಗೆ ಹೋಗು. ನಾನು ನಿನ್ನ ಅನುಜ್ಞೆಯನ್ನು ಪಡೆದು ಪುನಃ ಜಪದಲ್ಲಿ ತೊಡಗುತ್ತೇನೆ.

12193006a ವರಶ್ಚ ಮಮ ಪೂರ್ವಂ ಹಿ ದೇವ್ಯಾ ದತ್ತೋ ಮಹಾಬಲ|

12193006c ಶ್ರದ್ಧಾ ತೇ ಜಪತೋ ನಿತ್ಯಂ ಭವಿತೇತಿ ವಿಶಾಂ ಪತೇ||

ಮಹಾಬಲ! ವಿಶಾಂಪತೇ! ಹಿಂದೆ ದೇವಿಯು “ನಿನಗೆ ನಿತ್ಯವೂ ಜಪದಲ್ಲಿಯೇ ಶ್ರದ್ಧೆಯಿರಲಿ” ಎಂಬ ವರವನ್ನಿತ್ತಳು.”

12193007 ರಾಜೋವಾಚ|

12193007a ಯದ್ಯೇವಮಫಲಾ ಸಿದ್ಧಿಃ ಶ್ರದ್ಧಾ ಚ ಜಪಿತುಂ ತವ|

12193007c ಗಚ್ಚ ವಿಪ್ರ ಮಯಾ ಸಾರ್ಧಂ ಜಾಪಕಂ ಫಲಮಾಪ್ನುಹಿ||

ರಾಜನು ಹೇಳಿದನು: “ಇನ್ನೂ ಜಪಿಸುವುದರಲ್ಲಿಯೇ ನಿನಗೆ ಶ್ರದ್ಧೆಯಿದ್ದರೆ ಅದು ಅಫಲವಾಗುತ್ತದೆ. ವಿಪ್ರ! ನನ್ನ ಜೊತೆಯಲ್ಲಿಯೇ ಬಾ! ನನ್ನೊಡನೆ ನೀನು ಜಪದ ಫಲವನ್ನು ಉಪಭೋಗಿಸಬಹುದು.”

12193008 ಬ್ರಾಹ್ಮಣ ಉವಾಚ|

12193008a ಕೃತಃ ಪ್ರಯತ್ನಃ ಸುಮಹಾನ್ಸರ್ವೇಷಾಂ ಸಂನಿಧಾವಿಹ|

12193008c ಸಹ ತುಲ್ಯಫಲೌ ಚಾವಾಂ ಗಚ್ಚಾವೋ ಯತ್ರ ನೌ ಗತಿಃ||

ಬ್ರಾಹ್ಮಣನು ಹೇಳಿದನು: “ಇಲ್ಲಿ ಎಲ್ಲರ ಸನ್ನಿಧಾನದಲ್ಲಿ ನಿನಗೆ ನನ್ನ ಜಪಫಲವನ್ನು ಸಂಪೂರ್ಣವಾಗಿ ನಿನಗೆ ನೀಡಲು ನಾನು ಪ್ರಯತ್ನಿಸಿದೆ. ಆದರೆ ಈಗ ಇಬ್ಬರೂ ಸಮನಾದ ಫಲವನ್ನು ಪಡೆದುಕೊಂಡು ನಮ್ಮಿಬ್ಬರಿಗೂ ಯಾವ ಗತಿಗಳಿವೆಯೋ ಅಲ್ಲಿಗೆ ಒಟ್ಟಿಗೇ ಹೋಗೋಣ.””

12193009 ಭೀಷ್ಮ ಉವಾಚ|

12193009a ವ್ಯವಸಾಯಂ ತಯೋಸ್ತತ್ರ ವಿದಿತ್ವಾ ತ್ರಿದಶೇಶ್ವರಃ|

12193009c ಸಹ ದೇವೈರುಪಯಯೌ ಲೋಕಪಾಲೈಸ್ತಥೈವ ಚ||

ಭೀಷ್ಮನು ಹೇಳಿದನು: “ಅವರಿಬ್ಬರ ಆ ನಿರ್ಧಾರವನ್ನು ತಿಳಿದ ತ್ರಿದಶೇಶ್ವರನು ದೇವತೆಗಳು ಮತ್ತು ಲೋಕಪಾಲರೊಂದಿಗೆ ಅಲ್ಲಿಗೆ ಆಗಮಿಸಿದನು.

12193010a ಸಾಧ್ಯಾ ವಿಶ್ವೇಽಥ ಮರುತೋ ಜ್ಯೋತೀಂಷಿ[1] ಸುಮಹಾಂತಿ ಚ|

12193010c ನದ್ಯಃ ಶೈಲಾಃ ಸಮುದ್ರಾಶ್ಚ ತೀರ್ಥಾನಿ ವಿವಿಧಾನಿ ಚ||

12193011a ತಪಾಂಸಿ ಸಂಯೋಗವಿಧಿರ್ವೇದಾಃ ಸ್ತೋಭಾಃ ಸರಸ್ವತೀ|

12193011c ನಾರದಃ ಪರ್ವತಶ್ಚೈವ ವಿಶ್ವಾವಸುರ್ಹಹಾ ಹುಹೂಃ||

12193012a ಗಂಧರ್ವಶ್ಚಿತ್ರಸೇನಶ್ಚ ಪರಿವಾರಗಣೈರ್ಯುತಃ|

12193012c ನಾಗಾಃ ಸಿದ್ಧಾಶ್ಚ ಮುನಯೋ ದೇವದೇವಃ ಪ್ರಜಾಪತಿಃ|

12193012e ವಿಷ್ಣುಃ ಸಹಸ್ರಶೀರ್ಷಶ್ಚ ದೇವೋಽಚಿಂತ್ಯಃ ಸಮಾಗಮತ್||

ಅವನೊಡನೆ ಸಾಧ್ಯರು, ವಿಶ್ವೇದೇವರು, ಮರುತ್ತರು, ಮಹಾ ನಕ್ಷತ್ರಗಳು, ನದಿಗಳು, ಪರ್ವತಗಳು, ಸಮುದ್ರಗಳು, ವಿವಿಧ ತೀರ್ಥಗಳು, ತಪಸ್ಸುಗಳು, ಸಂಯೋಗವಿಧಿಗಳು, ವೇದಗಳು, ಸ್ತೋಭಗಳು, ಸರಸ್ವತಿ, ನಾರದ, ಪರ್ವತ, ವಿಶ್ವಾವಸು, ಹಹಾ, ಹುಹೂ, ಪರಿವಾರ ಗಣಗಳೊಂದಿಗೆ ಗಂಧರ್ವ ಚಿತ್ರಸೇನ, ನಾಗರು, ಸಿದ್ಧರು, ಮುನಿಗಳು, ದೇವದೇವ ಪ್ರಜಾಪತಿ, ಸಹಸ್ರಶೀರ್ಷ ದೇವ ಅಚಿಂತ್ಯ ವಿಷ್ಣು – ಇವರೆಲ್ಲರೂ ಅಲ್ಲಿ ಸೇರಿದರು.

12193013a ಅವಾದ್ಯಂತಾಂತರಿಕ್ಷೇ ಚ ಭೇರ್ಯಸ್ತೂರ್ಯಾಣಿ ಚಾಭಿಭೋ|

12193013c ಪುಷ್ಪವರ್ಷಾಣಿ ದಿವ್ಯಾನಿ ತತ್ರ ತೇಷಾಂ ಮಹಾತ್ಮನಾಮ್|

12193013e ನನೃತುಶ್ಚಾಪ್ಸರಃಸಂಘಾಸ್ತತ್ರ ತತ್ರ ಸಮಂತತಃ||

ವಿಭೋ! ಅಂತರಿಕ್ಷದಲ್ಲಿ ಭೇರಿ-ತೂರ್ಯಗಳು ಮೊಳಗಿದವು. ಆ ಮಹಾತ್ಮರ ಮೇಲೆ ದಿವ್ಯ ಪುಷ್ಪವೃಷ್ಟಿಯೂ ಆಯಿತು. ಅಲ್ಲಿ ಸುತ್ತಲೂ ಅಪ್ಸರಗಣಗಳು ನರ್ತಿಸಿದವು.

12193014a ಅಥ ಸ್ವರ್ಗಸ್ತಥಾ ರೂಪೀ ಬ್ರಾಹ್ಮಣಂ ವಾಕ್ಯಮಬ್ರವೀತ್|

12193014c ಸಂಸಿದ್ಧಸ್ತ್ವಂ ಮಹಾಭಾಗ ತ್ವಂ ಚ ಸಿದ್ಧಸ್ತಥಾ ನೃಪ||

ಆಗ ಮೂರ್ತಿಮತ್ತಾಗಿ ಬಂದಿದ್ದ ಸ್ವರ್ಗಪುರುಷನು ಬ್ರಾಹ್ಮಣ-ರಾಜರನ್ನು ಕುರಿತು ಹೇಳಿದನು: “ಮಹಾಭಾಗ! ನೀನು ಸಿದ್ಧಿಯನ್ನು ಪಡೆದಿರುವೆ. ನೃಪ! ನೀನೂ ಸಂಸಿದ್ಧನಾಗಿರುವೆ.”

12193015a ಅಥ ತೌ ಸಹಿತೌ ರಾಜನ್ನನ್ಯೋನ್ಯೇನ ವಿಧಾನತಃ|

12193015c ವಿಷಯಪ್ರತಿಸಂಹಾರಮುಭಾವೇವ ಪ್ರಚಕ್ರತುಃ||

ರಾಜನ್! ಆಗ ಅವರಿಬ್ಬರೂ ಅನ್ಯೋನ್ಯವಿಧಿಯಿಂದ ಒಟ್ಟಿಗೇ ತಮ್ಮ ಮನಸ್ಸನ್ನು ವಿಷಯಗಳ ಮೇಲಿಂದ ಹಿಂತೆಗೆದರು.

12193016a ಪ್ರಾಣಾಪಾನೌ ತಥೋದಾನಂ ಸಮಾನಂ ವ್ಯಾನಮೇವ ಚ|

12193016c ಏವಂ ತಾನ್ಮನಸಿ ಸ್ಥಾಪ್ಯ ದಧತುಃ ಪ್ರಾಣಯೋರ್ಮನಃ||

ಅನಂತರ ಪ್ರಾಣ-ಅಪಾನ-ಉದಾನ-ಸಮಾನ-ವ್ಯಾನಗಳನ್ನು ಹೃದಯದಲ್ಲಿ ಸ್ಥಾಪಿಸಿ, ಆ ಪ್ರಾಣಗಳಲ್ಲಿ ಮನಸ್ಸನ್ನು ಸ್ಥಾಪಿಸಿದರು.

12193017a ಉಪಸ್ಥಿತಕೃತೌ ತತ್ರ ನಾಸಿಕಾಗ್ರಮಧೋ ಭ್ರುವೌ|

12193017c ಕುಂಕುಣ್ಯಾಂ ಚೈವ ಮನಸಾ ಶನೈರ್ಧಾರಯತಃ ಸ್ಮ ತೌ||

ಕುಳಿತಿದ್ದ ಅವರಿಬ್ಬರೂ ಎರಡು ಹುಬ್ಬುಗಳ ಕೆಳಭಾಗದಲ್ಲಿ ನಾಸಿಕಾಗ್ರದಲ್ಲಿ ದೃಷ್ಟಿಯನ್ನಿಟ್ಟು ಭೃಕುಟಿಯಿಂದಲೂ ಮನಸ್ಸಿನಿಂದಲೂ ಪ್ರಾಣಾಪಾನಗಳನ್ನು ಆಜ್ಞಾಚಕ್ರದಲ್ಲಿ ನಿಲ್ಲಿಸಿದರು.

12193018a ನಿಶ್ಚೇಷ್ಟಾಭ್ಯಾಂ ಶರೀರಾಭ್ಯಾಂ ಸ್ಥಿರದೃಷ್ಟೀ ಸಮಾಹಿತೌ|

12193018c ಜಿತಾಸನೌ ತಥಾಧಾಯ ಮೂರ್ಧನ್ಯಾತ್ಮಾನಮೇವ ಚ||

ಹೀಗೆ ಅವರು ಚೇಷ್ಟಾರಹಿತ ಶರೀರವುಳ್ಳವರಾಗಿ ಜಿತಾತ್ಮರಾಗಿ ಭ್ರೂಮಧ್ಯದಲ್ಲಿರುವ ಆಜ್ಞಾಚಕ್ರದಲ್ಲಿಯೇ ಸ್ಥಿರವಾದ ದೃಷ್ಟಿಯನ್ನಿಟ್ಟು ಪ್ರಾಣಾಪಾನಗಳೊಂದಿಗಿದ್ದ ಮನಸ್ಸನ್ನು ಸುಷುಮ್ನಾನಾಡಿಯ ಮೂಲಕ ಸಹಸ್ರಾರದಲ್ಲಿ ಸ್ಥಾಪಿಸಿದರು.

12193019a ತಾಲುದೇಶಮಥೋದ್ದಾಲ್ಯ ಬ್ರಾಹ್ಮಣಸ್ಯ ಮಹಾತ್ಮನಃ|

12193019c ಜ್ಯೋತಿರ್ಜ್ವಾಲಾ ಸುಮಹತೀ ಜಗಾಮ ತ್ರಿದಿವಂ ತದಾ||

ಆಗ ಮಹಾತ್ಮ ಬ್ರಾಹ್ಮಣನ ತಾಲುದೇಶ[2]ವನ್ನು ಭೇದಿಸಿಕೊಂಡು ಜ್ಯೋತಿರ್ಮಯ ವಿಶಾಲ ಜ್ವಾಲೆಯೊಂದು ಹೊರಬಂದು ಸ್ವರ್ಗಲೋಕದ ಕಡೆ ಹೊರಟುಹೋಯಿತು.

12193020a ಹಾಹಾಕಾರಸ್ತತೋ ದಿಕ್ಷು ಸರ್ವಾಸು ಸುಮಹಾನಭೂತ್|

12193020c ತಜ್ಜ್ಯೋತಿಃ ಸ್ತೂಯಮಾನಂ ಸ್ಮ ಬ್ರಹ್ಮಾಣಂ ಪ್ರಾವಿಶತ್ತದಾ||

12193021a ತತಃ ಸ್ವಾಗತಮಿತ್ಯಾಹ ತತ್ತೇಜಃ ಸ ಪಿತಾಮಹಃ|

12193021c ಪ್ರಾದೇಶಮಾತ್ರಂ ಪುರುಷಂ ಪ್ರತ್ಯುದ್ಗಮ್ಯ ವಿಶಾಂ ಪತೇ||

ವಿಶಾಂಪತೇ! ಆಗ ಸರ್ವ ದಿಕ್ಕುಗಳಲ್ಲಿಯ ಹಾಹಾಕಾರವುಂಟಾಯಿತು. ಸ್ತುತಿಸಲ್ಪಡುತ್ತಿದ್ದ ಆ ಜ್ಯೋತಿಯು ಬ್ರಹ್ಮನನ್ನು ಪ್ರವೇಶಿಸಿತು. ಆಗ ಪ್ರಪಿತಾಮಹನು ಆ ತೇಜಸ್ಸಿಗೆ ಸ್ವಾಗತ ಎಂದು ಹೇಳಿದನು. ಆಗ ಬ್ರಹ್ಮನು ಮುಂದೆಹೋಗಿ ಚೋಟುದ್ದಮಾತ್ರವಿದ್ದ ಆ ಜ್ಯೋತಿರ್ಮಯ ಪುರುಷನನ್ನು ಬರಮಾಡಿಕೊಂಡನು.

12193022a ಭೂಯಶ್ಚೈವಾಪರಂ ಪ್ರಾಹ ವಚನಂ ಮಧುರಂ ಸ್ಮ ಸಃ|

12193022c ಜಾಪಕೈಸ್ತುಲ್ಯಫಲತಾ ಯೋಗಾನಾಂ ನಾತ್ರ ಸಂಶಯಃ||

ಅನಂತರ ಅವನಿಗೆ ಈ ಮಧುರ ಮಾತುಗಳನ್ನೂ ಆಡಿದನು: “ಜಾಪಕರಿಗೆ ಮತ್ತು ಯೋಗಶೀಲರಿಗೆ ಸಮಾನ ಫಲವು ಲಭಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

12193023a ಯೋಗಸ್ಯ ತಾವದೇತೇಭ್ಯಃ ಫಲಂ ಪ್ರತ್ಯಕ್ಷದರ್ಶನಮ್|

12193023c ಜಾಪಕಾನಾಂ ವಿಶಿಷ್ಟಂ ತು ಪ್ರತ್ಯುತ್ಥಾನಂ ಸಮಾಧಿಕಮ್[3]||

ಯೋಗಿಗಳಿಗೆ ದೊರೆಯುವ ಫಲವನ್ನು ಪ್ರತ್ಯಕ್ಷವಾಗಿಯೇ ನೋಡಿದ್ದಾರೆ. ಜಾಪಕರಿಗೆ ಯೋಗಿಗಳಿಗಿಂತಲೂ ವಿಶಿಷ್ಠ ಫಲವು ದೊರಕುವುದೆಂಬುದನ್ನು ತೋರಿಸುವುದಕ್ಕಾಗಿಯೇ ನಾನು ಆಸನದಿಂದ ಮೇಲೆದ್ದು ನಿನ್ನನ್ನು ಸ್ವಾಗತಿಸಿದೆ.

12193024a ಉಷ್ಯತಾಂ ಮಯಿ ಚೇತ್ಯುಕ್ತ್ವಾಚೇತಯತ್ಸ ತತಃ ಪುನಃ|

12193024c ಅಥಾಸ್ಯ ಪ್ರವಿವೇಶಾಸ್ಯಂ ಬ್ರಾಹ್ಮಣೋ ವಿಗತಜ್ವರಃ||

ಇನ್ನು ನನ್ನಲ್ಲಿಯೇ ವಾಸಿಸು!” ಎಂದು ಹೇಳಿ ಅವನಿಗೆ ಪುನಃ ತತ್ತ್ವಜ್ಞಾನವನ್ನು ನೀಡಿದನು. ಅನಂತರ ಬ್ರಾಹ್ಮಣನು ವಿಗತಜ್ವರನಾಗಿ ಬ್ರಹ್ಮನನ್ನು ಪ್ರವೇಶಿಸಿದನು.

12193025a ರಾಜಾಪ್ಯೇತೇನ ವಿಧಿನಾ ಭಗವಂತಂ ಪಿತಾಮಹಮ್|

12193025c ಯಥೈವ ದ್ವಿಜಶಾರ್ದೂಲಸ್ತಥೈವ ಪ್ರಾವಿಶತ್ತದಾ||

ರಾಜನೂ ಕೂಡ ಅದೇ ವಿಧಿಯಿಂದ ಪಿತಾಮಹ ಭಗವಂತನನ್ನು ದ್ವಿಜಶಾರ್ದೂಲನು ಹೇಗೋ ಹಾಗೆಯೇ ಪ್ರವೇಶಿಸಿದನು.

12193026a ಸ್ವಯಂಭುವಮಥೋ ದೇವಾ ಅಭಿವಾದ್ಯ ತತೋಽಬ್ರುವನ್|

[4]12193026c ಜಾಪಕಾರ್ಥಮಯಂ ಯತ್ನಸ್ತದರ್ಥಂ ವಯಮಾಗತಾಃ||

ಆಗ ದೇವತೆಗಳು ಸ್ವಯಂಭುವಿಗೆ ಅಭಿವಂದಿಸಿ ಹೇಳಿದರು: “ಜಾಪಕನಿಗಾಗಿ ನೀನು ಮಾಡಿದ ಈ ಯತ್ನವನ್ನು ನೋಡಲೋಸುಗವೇ ನಾವು ಬಂದಿದ್ದೇವೆ.

12193027a ಕೃತಪೂಜಾವಿಮೌ ತುಲ್ಯಂ ತ್ವಯಾ ತುಲ್ಯಫಲಾವಿಮೌ|

12193027c ಯೋಗಜಾಪಕಯೋರ್ದೃಷ್ಟಂ ಫಲಂ ಸುಮಹದದ್ಯ ವೈ|

12193027e ಸರ್ವಾಽಲ್ಲೋಕಾನತೀತ್ಯೈತೌ ಗಚ್ಚೇತಾಂ ಯತ್ರ ವಾಂಚಿತಮ್||

ನೀನು ಇವರಿಬ್ಬರನ್ನೂ ಸಮಾನರೂಪದಿಂದ ಆದರಿಸಿದೆ ಮತ್ತು ಇಬ್ಬರೂ ಒಂದೇ ಸ್ಥಿತಿಯಲ್ಲಿ ತಲುಪಿ ಸಮಾನ ಫಲಗಳಿಗೆ ಭಾಗಿಗಳಾದರು. ಯೋಗಿ ಮತು ಜಾಪಕರಿಗೆ ದೊರೆಯುವ ಮಹಾಫಲಗಳನ್ನು ನಾವು ಪ್ರತ್ಯಕ್ಷ ನೋಡಿದೆವು. ಅವರು ಸಂಪೂರ್ಣಲೋಕಗಳನ್ನೂ ಹಾರಿ ಅವರಿಗೆ ಇಚ್ಛೆಯಿರುವಲ್ಲಿಗೆ ಹೋಗಬಲ್ಲರು.”

12193028 ಬ್ರಹ್ಮೋವಾಚ|

12193028a ಮಹಾಸ್ಮೃತಿಂ ಪಠೇದ್ಯಸ್ತು ತಥೈವಾನುಸ್ಮೃತಿಂ ಶುಭಾಮ್|

12193028c ತಾವಪ್ಯೇತೇನ ವಿಧಿನಾ ಗಚ್ಚೇತಾಂ ಮತ್ಸಲೋಕತಾಮ್||

12193029a ಯಶ್ಚ ಯೋಗೇ ಭವೇದ್ಭಕ್ತಃ ಸೋಽಪಿ ನಾಸ್ತ್ಯತ್ರ ಸಂಶಯಃ|

12193029c ವಿಧಿನಾನೇನ ದೇಹಾಂತೇ ಮಮ ಲೋಕಾನವಾಪ್ನುಯಾತ್|

12193029e ಗಮ್ಯತಾಂ ಸಾಧಯಿಷ್ಯಾಮಿ ಯಥಾಸ್ಥಾನಾನಿ ಸಿದ್ಧಯೇ||

ಬ್ರಹ್ಮನು ಹೇಳಿದನು: “ಮಹಾಸ್ಮೃತಿ ಮತ್ತು ಶುಭ ಅನುಸ್ಮೃತಿಯನ್ನು ಪಠಿಸುವವನೂ ಇದೇ ವಿಧಾನದಿಂದ ನನ್ನ ಲೋಕವನ್ನು ಸೇರುತ್ತಾನೆ. ಯೋಗದ ಭಕ್ತನಾಗಿರುವವನೂ ಕೂಡ ಇದೇ ವಿಧಿಯಿಂದ ದೇಹಾಂತದಲ್ಲಿ ನನ್ನ ಲೋಕಗಳನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಈಗ ನೀವು ಯಥಾಸ್ಥಾನಗಳಿಗೆ ತೆರಳಿರಿ. ನಾನೂ ಕೂಡ ನಿಮ್ಮ ಅಭೀಷ್ಟಸಿದ್ಧಿಗಾಗಿ ಸಾಧಿಸುತ್ತಿರುತ್ತೇನೆ.””

12193030 ಭೀಷ್ಮ ಉವಾಚ|

12193030a ಇತ್ಯುಕ್ತ್ವಾ ಸ ತದಾ ದೇವಸ್ತತ್ರೈವಾಂತರಧೀಯತ|

12193030c ಆಮಂತ್ರ್ಯ ತಂ ತತೋ ದೇವಾ ಯಯುಃ ಸ್ವಂ ಸ್ವಂ ನಿವೇಶನಮ್||

ಭೀಷ್ಮನು ಹೇಳಿದನು: “ಹೀಗೆ ಹೇಳಿ ಆ ದೇವನು ಅಲ್ಲಿಯೇ ಅಂತರ್ಧಾನನಾದನು. ಅವನ ಅನುಜ್ಞೆಯನ್ನು ಪಡೆದು ದೇವತೆಗಳೂ ತಮ್ಮ ತಮ್ಮ ನಿವೇಶನಗಳಿಗೆ ತೆರಳಿದರು.

12193031a ತೇ ಚ ಸರ್ವೇ ಮಹಾತ್ಮಾನೋ ಧರ್ಮಂ ಸತ್ಕೃತ್ಯ ತತ್ರ ವೈ|

12193031c ಪೃಷ್ಠತೋಽನುಯಯೂ ರಾಜನ್ಸರ್ವೇ ಸುಪ್ರೀತಮಾನಸಾಃ||

ರಾಜನ್! ಯಮ, ಕಾಲ, ಮೃತ್ಯು – ಈ ಎಲ್ಲ ಮಹಾತ್ಮರೂ ಕೂಡ ಧರ್ಮನನ್ನು ಸತ್ಕರಿಸಿ ಸುಪ್ರೀತಮಾನಸರಾಗಿ ಅವನನ್ನೇ ಮುಂದೆಮಾಡಿಕೊಂಡು ತೆರಳಿದರು.

12193032a ಏತತ್ಫಲಂ ಜಾಪಕಾನಾಂ ಗತಿಶ್ಚೈವ ಪ್ರಕೀರ್ತಿತಾ|

12193032c ಯಥಾಶ್ರುತಂ ಮಹಾರಾಜ ಕಿಂ ಭೂಯಃ ಶ್ರೋತುಮಿಚ್ಚಸಿ||

ಮಹಾರಾಜ! ಹೀಗೆ ಜಾಪಕರ ಫಲ ಮತ್ತು ಗತಿಗಳ ಕುರಿತು ಕೇಳಿದ ಹಾಗೆ ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಾಪಕೋಪಾಖ್ಯಾನೇ ತ್ರಿನವತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಾಪಕೋಪಾಖ್ಯಾನ ಎನ್ನುವ ನೂರಾತೊಂಭತ್ಮೂರನೇ ಅಧ್ಯಾಯವು.

[1] ವಾದ್ಯಾನಿ (ಗೀತಾ ಪ್ರೆಸ್).

[2] ವಿಶುದ್ಧ ಚಕ್ರ (ಭಾರತ ದರ್ಶನ).

[3] ಸಮಾಹಿತಮ್| (ಗೀಟಾ ಪ್ರೆಸ್/ಭಾರತ ದರ್ಶನ).

[4] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಜಾಪಕಾನಾಂ ವಿಶಿಷ್ಠಂ ತು ಪ್ರತ್ಯುತ್ಥಾನಂ ಸಮಾಹಿತಮ್| (ಗೀತಾ ಪ್ರೆಸ್).

Comments are closed.