Shanti Parva: Chapter 173

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೭೩

ಕಾಶ್ಯಪ-ಸೃಗಾಲ ಸಂವಾದ

ಮನುಷ್ಯಯೋನಿಯ ಮಹತ್ವವನ್ನು ಹೇಳುತ್ತಾ ಆತ್ಮಹತ್ಯೆಯ ದೋಷಗಳನ್ನು ನಿರೂಪಿಸುವ ಕಾಶ್ಯಪ ಮತ್ತು ನರಿಯ ರೂಪದಲ್ಲಿದ್ದ ಇಂದ್ರನ ಸಂವಾದ (೧-೫೨).

12173001 ಯುಧಿಷ್ಠಿರ ಉವಾಚ|

12173001a ಬಾಂಧವಾಃ ಕರ್ಮ ವಿತ್ತಂ ವಾ ಪ್ರಜ್ಞಾ ವೇಹ ಪಿತಾಮಹ|

12173001c ನರಸ್ಯ ಕಾ ಪ್ರತಿಷ್ಠಾ ಸ್ಯಾದೇತತ್ ಪೃಷ್ಟೋ ವದಸ್ವ ಮೇ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮನುಷ್ಯನು ಬಾಂಧವರು, ಕರ್ಮ, ವಿತ್ತ ಅಥವಾ ಪ್ರಜ್ಞೆ ಇವುಗಳಲ್ಲಿ ಯಾವುದನ್ನು ಆಶ್ರಯಿಸಬೇಕು? ನನ್ನ ಈ ಪ್ರಶ್ನೆಗೆ ಉತ್ತರಿಸು.”

12173002 ಭೀಷ್ಮ ಉವಾಚ|

12173002a ಪ್ರಜ್ಞಾ ಪ್ರತಿಷ್ಠಾ ಭೂತಾನಾಂ ಪ್ರಜ್ಞಾ ಲಾಭಃ ಪರೋ ಮತಃ|

12173002c ಪ್ರಜ್ಞಾ ನೈಃಶ್ರೇಯಸೀ ಲೋಕೇ ಪ್ರಜ್ಞಾ ಸ್ವರ್ಗೋ ಮತಃ ಸತಾಮ್||

ಭೀಷ್ಮನು ಹೇಳಿದನು: “ಪ್ರಜ್ಞೆಯೇ ಭೂತಗಳಿಗೆ ಪ್ರಧಾನವಾದುದು. ಪ್ರಜ್ಞೆಯೇ ಪರಮ ಲಾಭವು. ಲೋಕದಲ್ಲಿ ಪ್ರಜ್ಞೆಯೇ ಶ್ರೇಯಸ್ಸನ್ನುಂಟುಮಾಡುತ್ತದೆ. ಸತ್ಪುರುಷರ ಪ್ರಕಾರ ಪ್ರಜ್ಞೆಯೇ ಸ್ವರ್ಗವು.

12173003a ಪ್ರಜ್ಞಯಾ ಪ್ರಾಪಿತಾರ್ಥೋ ಹಿ ಬಲಿರೈಶ್ವರ್ಯಸಂಕ್ಷಯೇ|

12173003c ಪ್ರಹ್ರಾದೋ ನಮುಚಿರ್ಮಂಕಿಸ್ತಸ್ಯಾಃ ಕಿಂ ವಿದ್ಯತೇ ಪರಮ್||

ತನ್ನ ಐಶ್ವರ್ಯವು ಕ್ಷೀಣವಾದಾಗ ಬಲಿಯು ಪ್ರಜ್ಞೆಯಿಂದಲೇ ಅದನ್ನು ಪಡೆದುಕೊಂಡನು. ಪ್ರಹ್ರಾದ, ನಮುಚಿ, ಮಂಕಿ ಇವರೂ ಕೂಡ ಪ್ರಜ್ಞೆಯನ್ನೇ ಆಶ್ರಯಿಸಿದ್ದರು. ಲೋಕದಲ್ಲಿ ಪ್ರಜ್ಞೆಗಿಂತ ಹೆಚ್ಚಿನದು ಯಾವುದಿದೆ?

12173004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12173004c ಇಂದ್ರಕಾಶ್ಯಪಸಂವಾದಂ ತನ್ನಿಬೋಧ ಯುಧಿಷ್ಠಿರ||

ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಇಂದ್ರ ಮತ್ತು ಕಾಶ್ಯಪರ ಸಂವಾದವನ್ನು ಉದಾಹರಿಸುತ್ತಾರೆ. ಯುಧಿಷ್ಠಿರ! ಅದನ್ನು ಕೇಳು.

12173005a ವೈಶ್ಯಃ ಕಶ್ಚಿದೃಷಿಂ ತಾತ ಕಾಶ್ಯಪಂ ಸಂಶಿತವ್ರತಮ್|

12173005c ರಥೇನ ಪಾತಯಾಮಾಸ ಶ್ರೀಮಾನ್ ದೃಪ್ತಸ್ತಪಸ್ವಿನಮ್||

ಅಯ್ಯಾ! ಶ್ರೀಮಂತ ವೈಶ್ಯನೊಬ್ಬನು ಸೊಕ್ಕಿನಿಂದ ಓರ್ವ ಸಂಶಿತವ್ರತ ಋಷಿ ಕಾಶ್ಯಪ ತಪಸ್ವಿಯನ್ನು ರಥದಿಂದ ಕೆಳಗೆ ಬೀಳಿಸಿದನು.

12173006a ಆರ್ತಃ ಸ ಪತಿತಃ ಕ್ರುದ್ಧಸ್ತ್ಯಕ್ತ್ವಾತ್ಮಾನಮಥಾಬ್ರವೀತ್|

12173006c ಮರಿಷ್ಯಾಮ್ಯಧನಸ್ಯೇಹ ಜೀವಿತಾರ್ಥೋ ನ ವಿದ್ಯತೇ||

ಆರ್ತನಾಗಿ ಕೆಳಗೆ ಬಿದ್ದು ಕ್ರುದ್ಧನಾದ ಅವನು ಆತ್ಮಹತ್ಯೆಗೆ ಉದ್ಯುಕ್ತನಾಗಿ ಇದನ್ನು ಹೇಳಿದನು: “ಈಗ ನಾನು ನನ್ನ ಪ್ರಾಣವನ್ನು ತೆಗೆದುಕೊಳ್ಳುತ್ತೇನೆ. ಏಕೆಂದರೆ ಈ ಸಂಸಾರದಲ್ಲಿ ನಿರ್ಧನ ಮನುಷ್ಯನ ಜೀವನವು ವ್ಯರ್ಥವಾದುದು.”

12173007a ತಥಾ ಮುಮೂರ್ಷುಮಾಸೀನಮಕೂಜಂತಮಚೇತಸಮ್|

12173007c ಇಂದ್ರಃ ಸೃಗಾಲರೂಪೇಣ ಬಭಾಷೇ ಕ್ರುದ್ಧಮಾನಸಮ್||

ಹೀಗೆ ಸಾಯುವ ಇಚ್ಛೆಯನ್ನಿಟ್ಟುಕೊಂಡು ಕುಳಿತು ಮೂರ್ಛಿತನಾಗಿ

ಏನನ್ನೂ ಮಾತನಾಡದೇ ಮನಸ್ಸಿನಲ್ಲಿಯೇ ಧನಕ್ಕಾಗಿ ಆಸೆಪಡುತ್ತಿದ್ದ ಅವನನ್ನು ನೋಡಿ ಇಂದ್ರನು ನರಿಯ ರೂಪವನ್ನು ಧರಿಸಿ ಕ್ರುದ್ಧಮಾನಸನಾಗಿದ್ದ ಅವನಿಗೆ ಹೇಳಿದನು:

12173008a ಮನುಷ್ಯಯೋನಿಮಿಚ್ಚಂತಿ ಸರ್ವಭೂತಾನಿ ಸರ್ವಶಃ|

12173008c ಮನುಷ್ಯತ್ವೇ ಚ ವಿಪ್ರತ್ವಂ ಸರ್ವ ಏವಾಭಿನಂದತಿ||

“ಸರ್ವಭೂತಗಳೂ ಸರ್ವಪ್ರಕಾರಗಳಿಂದಲೂ ಮನುಷ್ಯಯೋನಿಯನ್ನು ಬಯಸುತ್ತವೆ. ಮನುಷ್ಯರಲ್ಲಿಯೂ ಬ್ರಾಹ್ಮಣತ್ವವನ್ನು ಎಲ್ಲರೂ ಪ್ರಶಂಸಿಸುತ್ತಾರೆ.

12173009a ಮನುಷ್ಯೋ ಬ್ರಾಹ್ಮಣಶ್ಚಾಸಿ ಶ್ರೋತ್ರಿಯಶ್ಚಾಸಿ ಕಾಶ್ಯಪ|

12173009c ಸುದುರ್ಲಭಮವಾಪ್ಯೈತದದೋಷಾನ್ಮರ್ತುಮಿಚ್ಚಸಿ||

ಕಾಶ್ಯಪ! ನೀನಾದರೂ ಮನುಷ್ಯನು. ಬ್ರಾಹ್ಮಣನು ಮತ್ತು ಅದರಲ್ಲೂ ಶ್ರುತಿಗಳನ್ನು ಅಧ್ಯಯನಮಾಡಿದವನು. ಇಂಥಹ ಪರಮ ದುರ್ಲಭ ಶರೀರವನ್ನು ಪಡೆದೂ ಅದರಲ್ಲಿಯೂ ದೋಷವನ್ನು ಕಂಡು ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಉಚಿತವಲ್ಲ.

12173010a ಸರ್ವೇ ಲಾಭಾಃ ಸಾಭಿಮಾನಾ ಇತಿ ಸತ್ಯಾ ಬತ ಶ್ರುತಿಃ|

12173010c ಸಂತೋಷಣೀಯರೂಪೋಽಸಿ ಲೋಭಾದ್ಯದಭಿಮನ್ಯಸೇ||

ಎಲ್ಲ ಲಾಭಗಳೂ ಅಭಿಮಾನಯುಕ್ತವಾದವು ಎಂಬ ಸತ್ಯವನ್ನು ಶ್ರುತಿಗಳು ಹೇಳುತ್ತವೆ. ನಿನ್ನ ರೂಪವಾದರೋ ಸಂತೋಷಣೀಯವಾಗಿದೆ. ನೀನು ಲೋಭವಶನಾಗಿ ಅದರ ಅವಹೇಳನ ಮಾಡುತ್ತಿರುವೆ.

12173011a ಅಹೋ ಸಿದ್ಧಾರ್ಥತಾ ತೇಷಾಂ ಯೇಷಾಂ ಸಂತೀಹ ಪಾಣಯಃ|

[1]12173011c ಪಾಣಿಮದ್ಭ್ಯಃ ಸ್ಪೃಹಾಸ್ಮಾಕಂ ಯಥಾ ತವ ಧನಸ್ಯ ವೈ||

ಅಹೋ! ಯಾರಲ್ಲಿ ಎರಡು ಕೈಗಳಿವೆಯೋ ಅವನನ್ನೇ ಕೃತಾರ್ಥನೆಂದು ಮನ್ನಿಸುತ್ತೇನೆ. ನಿನಗೆ ಹೇಗೆ ಧನದ ಅಭಿಲಾಷೆಯಿದೆಯೋ ಹಾಗೆ ನನ್ನಂಥವರಿಗೆ ಮನುಷ್ಯರ ಎರಡು ಕೈಗಳನ್ನು ಪಡೆದುಕೊಳ್ಳುವ ಅಭಿಲಾಷೆಯಿರುತ್ತದೆ.

12173012a ನ ಪಾಣಿಲಾಭಾದಧಿಕೋ ಲಾಭಃ ಕಶ್ಚನ ವಿದ್ಯತೇ|

12173012c ಅಪಾಣಿತ್ವಾದ್ವಯಂ ಬ್ರಹ್ಮನ್ಕಂಟಕಾನ್ನೋದ್ಧರಾಮಹೇ[2]||

ನಮ್ಮ ಪ್ರಕಾರ ಕೈಗಳು ದೊರೆಯುವಷ್ಟು ಅಧಿಕ ಲಾಭವು ಬೇರೆ ಯಾವುದೂ ಇಲ್ಲ. ಬ್ರಹ್ಮನ್! ನಮ್ಮ ಶರೀರದಲ್ಲಿ ಮುಳ್ಳುಗಳು ಚುಚ್ಚಿಕೊಳ್ಳುತ್ತವೆ. ಆದರೆ ಕೈಯಿಲ್ಲದೇ ಇರುವ ಕಾರಣ ನಾವು ಅವುಗಳನ್ನು ಕೀಳಲಾರೆವು.

12173013a ಅಥ ಯೇಷಾಂ ಪುನಃ ಪಾಣೀ ದೇವದತ್ತೌ ದಶಾಂಗುಲೀ|

12173013c ಉದ್ಧರಂತಿ ಕೃಮೀನಂಗಾದ್ದಶಮಾನಾನ್ಕಷಂತಿ ಚ||

ಆದರೆ ದೇವದತ್ತವಾದ ಹತ್ತು ಬೆರಳುಗಳಿರುವ ಎರಡು ಕೈಗಳು ಯಾರಿಗಿದೆಯೋ ಅವರು ತಮ್ಮನ್ನು ಪೀಡಿಸುವ ಕೀಟಗಳನ್ನು ಅಂಗಗಳಿಂದ ಕೀಳಬಹುದು ಅಥವಾ ಸಾಯಿಸಬಹುದು.

12173014a ಹಿಮವರ್ಷಾತಪಾನಾಂ ಚ ಪರಿತ್ರಾಣಾನಿ ಕುರ್ವತೇ|

12173014c ಚೇಲಮನ್ನಂ ಸುಖಂ ಶಯ್ಯಾಂ ನಿವಾತಂ ಚೋಪಭುಂಜತೇ||

ಛಳಿ-ಮಳೆ-ಬಿಸಿಲುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಬಟ್ಟೆಗಳನ್ನು ಧರಿಸುತ್ತಾರೆ. ಸುಖವಾಗಿ ಅನ್ನವನ್ನು ಉಣ್ಣುತ್ತಾರೆ. ಹಾಸಿಗೆಯನ್ನು ಹಾಸಿ ಮಲಗುತ್ತಾರೆ ಮತ್ತು ಏಕಾಂತವನ್ನು ಉಪಭೋಗಿಸುತ್ತಾರೆ.

12173015a ಅಧಿಷ್ಠಾಯ ಚ ಗಾಂ ಲೋಕೇ ಭುಂಜತೇ ವಾಹಯಂತಿ ಚ|

12173015c ಉಪಾಯೈರ್ಬಹುಭಿಶ್ಚೈವ ವಶ್ಯಾನಾತ್ಮನಿ ಕುರ್ವತೇ||

ಕೈಗಳಿರುವ ಮನುಷ್ಯನು ಎತ್ತುಗಳನ್ನು ಕಟ್ಟಿದ ಬಂಡಿಯಲ್ಲಿ ಕುಳಿತು ಅದನ್ನು ಚಲಿಸುತ್ತಾರೆ ಮತ್ತು ಅನೇಕ ಉಪಾಯಗಳನ್ನುಪಯೋಗಿಸಿ ಪಶುಗಳನ್ನು ತಮ್ಮ ವಶಮಾಡಿಕೊಳ್ಳುತ್ತಾರೆ.

12173016a ಯೇ ಖಲ್ವಜಿಹ್ವಾಃ ಕೃಪಣಾ ಅಲ್ಪಪ್ರಾಣಾ ಅಪಾಣಯಃ|

12173016c ಸಹಂತೇ ತಾನಿ ದುಃಖಾನಿ ದಿಷ್ಟ್ಯಾ ತ್ವಂ ನ ತಥಾ ಮುನೇ||

ಮುನೇ! ಕೈಗಳಿಲ್ಲದೇ ದೀನ ದುರ್ಬಲ ಮತ್ತು ಅಲ್ಪಪ್ರಾಣ ಪ್ರಾಣಿಗಳು ಯಾವ ದುಃಖಗಳನ್ನು ಸಹಿಸಬೇಕಾಗುತ್ತದೆಯೋ ಆ ದುಃಖಗಳನ್ನು ಅದೃಷ್ಟವಶಾತ್ ನಿಮಗೆ ಸಹಿಸಬೇಕಾಗಿಲ್ಲ.

12173017a ದಿಷ್ಟ್ಯಾ ತ್ವಂ ನ ಸೃಗಾಲೋ ವೈ ನ ಕೃಮಿರ್ನ ಚ ಮೂಷಕಃ|

12173017c ನ ಸರ್ಪೋ ನ ಚ ಮಂಡೂಕೋ ನ ಚಾನ್ಯಃ ಪಾಪಯೋನಿಜಃ||

ಇದು ನಿನ್ನ ಸೌಭಾಗ್ಯವು ಏಕೆಂದರೆ ನೀನು ನರಿಯಲ್ಲಿ, ಕ್ರಿಮಿಯಲ್ಲ, ಇಲಿಯಲ್ಲ, ಸರ್ಪವಲ್ಲ, ಕಪ್ಪೆಯಲ್ಲ ಮತ್ತು ಅನ್ಯ ಪಾಪಯೋನಿಗಳಲ್ಲಿ ಹುಟ್ಟಿದವನಲ್ಲ.

12173018a ಏತಾವತಾಪಿ ಲಾಭೇನ ತೋಷ್ಟುಮರ್ಹಸಿ ಕಾಶ್ಯಪ|

12173018c ಕಿಂ ಪುನರ್ಯೋಽಸಿ ಸತ್ತ್ವಾನಾಂ ಸರ್ವೇಷಾಂ ಬ್ರಾಹ್ಮಣೋತ್ತಮಃ||

ಕಾಶ್ಯಪ! ಇಷ್ಟೇ ಲಾಭದಿಂದ ನೀನು ಸಂತುಷ್ಟನಾಗಬೇಕು. ನೀನು ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠನಾದ ಬ್ರಾಹ್ಮಣ ಎನ್ನುವುದಕ್ಕಿಂತ ಅಧಿಕ ಲಾಭವಾದರೂ ಯಾವುದಿದೆ?

12173019a ಇಮೇ ಮಾಂ ಕೃಮಯೋಽದಂತಿ ತೇಷಾಮುದ್ಧರಣಾಯ ಮೇ|

12173019c ನಾಸ್ತಿ ಶಕ್ತಿರಪಾಣಿತ್ವಾತ್ಪಶ್ಯಾವಸ್ಥಾಮಿಮಾಂ ಮಮ||

ನನ್ನನ್ನು ಈ ಕ್ರಿಮಿಗಳು ತಿನ್ನುತ್ತಿವೆ. ಆದರೆ ಅವುಗಳನ್ನು ಕಿತ್ತು ಬಿಸಾಡುವ ಶಕ್ತಿಯು ನನ್ನಲ್ಲಿಲ್ಲ. ಕೈಗಳಿಲ್ಲದೇ ಉಂಟಾದ ನನ್ನ ಈ ದುರ್ದಶೆಯನ್ನು ನೀನು ಪ್ರತ್ಯಕ್ಷ ನೋಡುತ್ತಿದ್ದೀಯೆ.

12173020a ಅಕಾರ್ಯಮಿತಿ ಚೈವೇಮಂ ನಾತ್ಮಾನಂ ಸಂತ್ಯಜಾಮ್ಯಹಮ್|

12173020c ನೇತಃ ಪಾಪೀಯಸೀಂ ಯೋನಿಂ ಪತೇಯಮಪರಾಮಿತಿ||

ಆತ್ಮಹತ್ಯೆಯು ಪಾಪ ಎಂದು ಯೋಚಿಸಿಯೇ ನಾನು ನನ್ನ ಶರೀರವನ್ನು ತ್ಯಜಿಸುತ್ತಿಲ್ಲ. ಆತ್ಮಹತ್ಯೆಮಾಡಿಕೊಂಡರೆ ಇದಕ್ಕಿಂತಲೂ ಪಾಪೀಯವಾದ ಯೋನಿಯಲ್ಲಿ ಬೀಳುತ್ತೇನೆ ಎನ್ನುವ ಭಯವಿದೆ.

12173021a ಮಧ್ಯೇ ವೈ ಪಾಪಯೋನೀನಾಂ ಸಾರ್ಗಾಲೀ ಯಾಮಹಂ ಗತಃ|

12173021c ಪಾಪೀಯಸ್ಯೋ ಬಹುತರಾ ಇತೋಽನ್ಯಾಃ ಪಾಪಯೋನಯಃ||

ನನ್ನ ಈಗಿನ ಈ ನರಿಯೋನಿಯು ಪಾಪಯೋನಿಗಳ ಗಣನೆಯಲ್ಲಿಯೂ ಬರುತ್ತದೆಯಾದರೂ ಇದಕ್ಕಿಂತಲೂ ನೀಚ ಶ್ರೇಣಿಯಲ್ಲಿ ಅನೇಕ ಪಾಪಯೋನಿಗಳಿವೆ.

12173022a ಜಾತ್ಯೈವೈಕೇ ಸುಖತರಾಃ ಸಂತ್ಯನ್ಯೇ ಭೃಶದುಃಖಿತಾಃ|

12173022c ನೈಕಾಂತಸುಖಮೇವೇಹ ಕ್ವ ಚಿತ್ಪಶ್ಯಾಮಿ ಕಸ್ಯ ಚಿತ್||

ಕೆಲವು ಯೋನಿಗಳಲ್ಲಿ ಹುಟ್ಟಿದರೆ ಹೆಚ್ಚಿನ ಸುಖವುಂಟಾಗುತ್ತದೆ ಮತ್ತು ಇನ್ನು ಕೆಲವು ಯೋನಿಗಳಲ್ಲಿ ಹುಟ್ಟಿದರೆ ಹೆಚ್ಚಿನ ದುಃಖವುಂಟಾಗುತ್ತದೆ. ಆದರೆ ನಾನು ಒಂದು ಯೋನಿಯಲ್ಲಿ ಹುಟ್ಟಿ ಸುಖವೇ ಸುಖವನ್ನು ಪಡೆದಿರುವುದನ್ನು ನೋಡಿಲ್ಲ.

12173023a ಮನುಷ್ಯಾ ಹ್ಯಾಢ್ಯತಾಂ ಪ್ರಾಪ್ಯ ರಾಜ್ಯಮಿಚ್ಚಂತ್ಯನಂತರಮ್|

12173023c ರಾಜ್ಯಾದ್ದೇವತ್ವಮಿಚ್ಚಂತಿ ದೇವತ್ವಾದಿಂದ್ರತಾಮಪಿ||

ಮನುಷ್ಯನು ಶ್ರೀಮಂತಿಕೆಯನ್ನು ಪಡೆದನಂತರ ರಾಜ್ಯವನ್ನು ಬಯಸುತ್ತಾನೆ. ರಾಜ್ಯದಿಂದ ದೇವತ್ವವನ್ನು ಬಯಸುತ್ತಾನೆ ಮತ್ತು ದೇವತ್ವದಿಂದ ಮತ್ತೆ ಇಂದ್ರಪದವಿಯನ್ನು ಪಡೆದುಕೊಳ್ಳಲು ಬಯಸುತ್ತಾನೆ.

12173024a ಭವೇಸ್ತ್ವಂ ಯದ್ಯಪಿ ತ್ವಾಢ್ಯೋ ನ ರಾಜಾ ನ ಚ ದೈವತಮ್|

12173024c ದೇವತ್ವಂ ಪ್ರಾಪ್ಯ ಚೇಂದ್ರತ್ವಂ ನೈವ ತುಷ್ಯೇಸ್ತಥಾ ಸತಿ||

ಒಂದು ವೇಳೆ ನೀನು ಧನಿಕನಾಗಿದ್ದರೂ ರಾಜನಾಗಲು ಸಾಧ್ಯವಿರಲಿಲ್ಲ ಏಕೆಂದರೆ ನೀನು ಓರ್ವ ಬ್ರಾಹ್ಮಣ. ಒಂದು ವೇಳೆ ನೀನು ರಾಜನಾದರೂ ದೇವತೆಯಾಗಲಾರೆ. ದೇವತ್ವ ಮತ್ತು ಇಂದ್ರಪದವಿಯನ್ನು ಪಡೆದುಕೊಂಡರೂ ನೀನು ಅದರಿಂದಲೂ ಸಂತುಷ್ಟನಾಗಲಾರೆ.

12173025a ನ ತೃಪ್ತಿಃ ಪ್ರಿಯಲಾಭೇಽಸ್ತಿ ತೃಷ್ಣಾ ನಾದ್ಭಿಃ ಪ್ರಶಾಮ್ಯತಿ|

12173025c ಸಂಪ್ರಜ್ವಲತಿ ಸಾ ಭೂಯಃ ಸಮಿದ್ಭಿರಿವ ಪಾವಕಃ||

ಪ್ರಿಯವಾದವುಗಳನ್ನು ಪಡೆದುಕೊಳ್ಳುವುದರಿಂದ ತೃಷ್ಣೆಯು ಎಂದೂ ಶಾಂತವಾಗುವುದಿಲ್ಲ. ಹೆಚ್ಚುತ್ತಿರುವ ತೃಷ್ಣೆಯು ನೀರಿನಿಂದಲೂ ತಣ್ಣಗಾಗುವುದಿಲ್ಲ. ಉರಿಯುತ್ತಿರುವ ಬೆಂಕಿಗೆ ಇಂಧನವನ್ನು ಹಾಕಿದರೆ ಅದು ಇನ್ನೂ ಪ್ರಜ್ವಲಿತವಾಗುತ್ತದೆ.

12173026a ಅಸ್ತ್ಯೇವ ತ್ವಯಿ ಶೋಕೋ ವೈ ಹರ್ಷಶ್ಚಾಸ್ತಿ ತಥಾ ತ್ವಯಿ|

12173026c ಸುಖದುಃಖೇ ತಥಾ ಚೋಭೇ ತತ್ರ ಕಾ ಪರಿದೇವನಾ||

ನಿನ್ನಲ್ಲಿಯೇ ಶೋಕವಿದೆ ಮತ್ತು ನಿನ್ನಲ್ಲಿಯೇ ಹರ್ಷವೂ ಇದೆ. ಸುಖದುಃಖಗಳೆರಡೂ ನಿನ್ನಲ್ಲಿಯೇ ಇರುವಾಗ ಈ ಪರಿವೇದನೆಯು ಏಕೆ?

12173027a ಪರಿಚ್ಚಿದ್ಯೈವ ಕಾಮಾನಾಂ ಸರ್ವೇಷಾಂ ಚೈವ ಕರ್ಮಣಾಮ್|

12173027c ಮೂಲಂ ರುಂಧೀಂದ್ರಿಯಗ್ರಾಮಂ[3] ಶಕುಂತಾನಿವ ಪಂಜರೇ||

ಎಲ್ಲ ಕಾಮನೆ ಮತ್ತು ಕರ್ಮಗಳ ಮೂಲವಾದ ಇಂದ್ರಿಯಗ್ರಾಮವನ್ನು ಪಂಜರದಲ್ಲಿಟ್ಟಿರುವ ಹಕ್ಕಿಯಂತೆ ತಡೆದಿಟ್ಟುಕೊಂಡಿರಬೇಕು. ಆಗ ಭಯವಿರುವುದಿಲ್ಲ.

12173028a ನ ಖಲ್ವಪ್ಯರಸಜ್ಞಸ್ಯ ಕಾಮಃ ಕ್ವ ಚನ ಜಾಯತೇ|

12173028c ಸಂಸ್ಪರ್ಶಾದ್ದರ್ಶನಾದ್ವಾಪಿ ಶ್ರವಣಾದ್ವಾಪಿ ಜಾಯತೇ||

ಯಾವುದೇ ವಿಷಯದ ರಸವನ್ನು ತಿಳಿಯದವನಿಗೆ ಅವನ ಮನಸ್ಸಿನಲ್ಲಿ ಅದಕ್ಕಾಗಿ ಯಾವ ಕಾಮನೆಗಳು ಉಂಟಾಗುವುದಿಲ್ಲ. ಸ್ಪರ್ಶ, ನೋಡುವುದು ಮತ್ತು ಕೇಳುವುದರಿಂದಲೂ ಕಾಮನೆಗಳ ಉತ್ಪನ್ನವಾಗುತ್ತದೆ.

12173029a ನ ತ್ವಂ ಸ್ಮರಸಿ ವಾರುಣ್ಯಾ ಲಟ್ವಾಕಾನಾಂ ಚ ಪಕ್ಷಿಣಾಮ್|

12173029c ತಾಭ್ಯಾಂ ಚಾಭ್ಯಧಿಕೋ ಭಕ್ಷ್ಯೋ ನ ಕಶ್ಚಿದ್ವಿದ್ಯತೇ ಕ್ವ ಚಿತ್||

ನೀನು ವಾರುಣೀ ಮದ್ಯದ ಮತ್ತು ಲಟ್ವಾಕವೆಂಬ ಪಕ್ಷಿಯ ಮಾಂಸದ ರುಚಿಯನ್ನು ಎಂದೂ ಸ್ಮರಿಸಿಕೊಳ್ಳಲಾರೆ. ಏಕೆಂದರೆ ನೀನು ಮದ್ಯ-ಮಾಂಸಗಳನ್ನು ಸೇವಿಸುವುದಿಲ್ಲ. ಅದರೆ ಅವುಗಳನ್ನು ತಿಂದವರ ಪ್ರಕಾರ ಇವೆರಡಕ್ಕಿಂತಲೂ ಮಿಗಿಲಾದ ಪೇಯ-ಭಕ್ಷ್ಯಗಳೇ ಬೇರೊಂದಿಲ್ಲ.

12173030a ಯಾನಿ ಚಾನ್ಯಾನಿ ದೂರೇಷು[4] ಭಕ್ಷ್ಯಭೋಜ್ಯಾನಿ ಕಾಶ್ಯಪ|

12173030c ಯೇಷಾಮಭುಕ್ತಪೂರ್ವಂ ತೇ ತೇಷಾಮಸ್ಮೃತಿರೇವ ಚ||

ಕಾಶ್ಯಪ! ಯಾವ ಪ್ರಾಣಿಗೆ ಯಾವ ಭೋಜನವು ಪ್ರಿಯವಾದುದು ಎನ್ನುವುದು ನಿನಗೆ ತಿಳಿಯದು. ನೀನು ಆ ಪದಾರ್ಥಗಳನ್ನು ತಿನ್ನದೇ ಇರುವುದರಿಂದ ಅವುಗಳ ಸ್ಮರಣೆಯೂ ನಿನಗಿಲ್ಲ. ಆದುದರಿಂದ ಅವುಗಳ ಅಭಾವದ ಬಗ್ಗೆ ದುಃಖವೂ ನಿನಗಿಲ್ಲ.

12173031a ಅಪ್ರಾಶನಮಸಂಸ್ಪರ್ಶಮಸಂದರ್ಶನಮೇವ ಚ|

12173031c ಪುರುಷಸ್ಯೈಷ ನಿಯಮೋ ಮನ್ಯೇ ಶ್ರೇಯೋ ನ ಸಂಶಯಃ||

ಕುಡಿಯದೇ ಇರುವುದು ಅಥವಾ ತಿನ್ನದೇ ಇರುವುದು, ಮುಟ್ಟದೇ ಇರುವುದು ಮತ್ತು ನೋಡದೇ ಇರುವುದು  - ಈ ನಿಯಮಗಳನ್ನು ಅನುಸರಿಸುವುದು ಪುರುಷನ ಶ್ರೇಯಸ್ಸಿಗೆ ಕಾರಣಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ.

12173032a ಪಾಣಿಮಂತೋ ಧನೈರ್ಯುಕ್ತಾ ಬಲವಂತೋ ನ ಸಂಶಯಃ|

12173032c ಮನುಷ್ಯಾ ಮಾನುಷೈರೇವ ದಾಸತ್ವಮುಪಪಾದಿತಾಃ||

ಕೈಗಳಿರುವವರು ಬಲಿಷ್ಠರು ಮತ್ತು ಧನವಂತರು ಎನ್ನುವುದರಲ್ಲಿ ಸಂಶಯವಿಲ್ಲ. ಧನವಂತ ಮನುಷ್ಯರು ಮನುಷ್ಯರನ್ನೇ ದಾಸರನ್ನಾಗಿ ಮಾಡಿಕೊಳ್ಳುತ್ತಾರೆ.

12173033a ವಧಬಂಧಪರಿಕ್ಲೇಶೈಃ ಕ್ಲಿಶ್ಯಂತೇ ಚ ಪುನಃ ಪುನಃ|

12173033c ತೇ ಖಲ್ವಪಿ ರಮಂತೇ ಚ ಮೋದಂತೇ ಚ ಹಸಂತಿ ಚ||

ಧನವಂತರಿಂದ ದಾಸರು ವಧೆ-ಬಂಧನ ಮೊದಲಾದ ಕಷ್ಟಗಳನ್ನು ಪುನಃ ಪುನಃ ಅನುಭವಿಸುತ್ತಿರುತ್ತಾರೆ. ಹಾಗೆ ಪೀಡಿತರಾದವರೂ ಕೂಡ ರಮಿಸುತ್ತಾರೆ, ಸಂತೋಷಪಡುತ್ತಾರೆ ಮತ್ತು ನಗುತ್ತಾರೆ.

12173034a ಅಪರೇ ಬಾಹುಬಲಿನಃ ಕೃತವಿದ್ಯಾ ಮನಸ್ವಿನಃ|

12173034c ಜುಗುಪ್ಸಿತಾಂ ಸುಕೃಪಣಾಂ ಪಾಪಾಂ ವೃತ್ತಿಮುಪಾಸತೇ||

ಬಾಹುಬಲವುಳ್ಳ, ವಿದ್ಯಾವಂತರಾದ ಮತ್ತು ಮನಸ್ವೀ ಜನರು ಅನೇಕ ಮಂದಿ ಜುಗುಪ್ಸಿತ, ನಿಂದ್ಯ ಮತ್ತು ಪಾಪಪೂರ್ಣ ವೃತ್ತಿಯಿಂದಲೇ ಜೀವಿಸುತ್ತಿರುತ್ತಾರೆ.

12173035a ಉತ್ಸಹಂತೇ ಚ ತೇ ವೃತ್ತಿಮನ್ಯಾಮಪ್ಯುಪಸೇವಿತುಮ್|

12173035c ಸ್ವಕರ್ಮಣಾ ತು ನಿಯತಂ ಭವಿತವ್ಯಂ ತು ತತ್ತಥಾ||

ಪಾಪವೃತ್ತಿಯನ್ನು ಬಿಟ್ಟು ಅವರು ಅನ್ಯ ವೃತ್ತಿಗಳನ್ನು ಆಶ್ರಯಿಸಲು ಉತ್ಸುಕರಾಗಿರುತ್ತಾರೆ. ಆದರೆ ಅವರವರ ಪ್ರಾರಬ್ಧ ಕರ್ಮಗಳಿಗನುಸಾರವಾಗಿ ಯಾವ ವೃತ್ತಿಯು ಅವರಿಗೆ ನಿಯತವಾಗಿರುವುದೋ ಅದೇ ವೃತ್ತಿಯಲ್ಲಿ ಇರಬೇಕಾದುದು ಅವರಿಗೆ ಅನಿವಾರ್ಯವಾಗುತ್ತದೆ.

12173036a ನ ಪುಲ್ಕಸೋ ನ ಚಂಡಾಲ ಆತ್ಮಾನಂ ತ್ಯಕ್ತುಮಿಚ್ಚತಿ|

12173036c ಅಸಂತುಷ್ಟಃ ಸ್ವಯಾ ಯೋನ್ಯಾ ಮಾಯಾಂ ಪಶ್ಯಸ್ವ ಯಾದೃಶೀಮ್||

ಪುಲ್ಕಸನಾಗಲೀ ಚಾಂಡಾಲನಾಗಲೀ ಕೀಳು ಜಾತಿಯಲ್ಲಿ ಹುಟ್ಟಿದ ಕಾರಣಕ್ಕಾಗಿಯೇ ಪ್ರಾಣಪರಿತ್ಯಾಗ ಮಾಡಲು ಇಚ್ಛಿಸುವುದಿಲ್ಲ. ಅವನು ತನ್ನ ಹುಟ್ಟಿನ ವಿಷಯದಲ್ಲಿ ಸಂತುಷ್ಟನಾಗಿಯೇ ಇರುತ್ತಾನೆ. ಭಗವಂತನ ಮಾಯೆಯು ಹೇಗಿರುವುದು ಎನ್ನುವುದನ್ನಾದರೂ ನೋಡು!

12173037a ದೃಷ್ಟ್ವಾ ಕುಣೀನ್ಪಕ್ಷಹತಾನ್ಮನುಷ್ಯಾನಾಮಯಾವಿನಃ|

12173037c ಸುಸಂಪೂರ್ಣಃ ಸ್ವಯಾ ಯೋನ್ಯಾ ಲಬ್ಧಲಾಭೋಽಸಿ ಕಾಶ್ಯಪ||

ಕಾಶ್ಯಪ! ಲೋಕದಲ್ಲಿ ಕುರುಡರಿದ್ದಾರೆ, ಕಿವುಡರಿದ್ದಾರೆ, ಹೆಳವರಿದ್ದಾರೆ, ಕುಂಟರಿದ್ದಾರೆ, ಪಾರ್ಶ್ವಹೊಡೆದು ಒಂದು ಭಾಗವನ್ನೇ ಕಳೆದುಕೊಂಡಿರುವವರಿದ್ದಾರೆ ಮತ್ತು ಯಾವಾಗಲೂ ರೋಗಸ್ಥರಾಗಿರುವವರಿದ್ದಾರೆ. ಅಂತಹ ಯಾವ ನ್ಯೂನತೆಗಳೂ ಇಲ್ಲದೇ ನೀನು ಸರ್ವಾಂಗಗಳಿಂದ ಪರಿಪೂರ್ಣನಾಗಿರುವೆ. ಜನ್ಮದಿಂದ ಬ್ರಾಹ್ಮಣತ್ವವು ನಿನಗೆ ಲಭಿಸಿದೆ. ಇದು ನಿನಗೆ ಲಾಭದಾಯಕವಲ್ಲವೇ?

12173038a ಯದಿ ಬ್ರಾಹ್ಮಣ ದೇಹಸ್ತೇ ನಿರಾತಂಕೋ ನಿರಾಮಯಃ|

12173038c ಅಂಗಾನಿ ಚ ಸಮಗ್ರಾಣಿ ನ ಚ ಲೋಕೇಷು ಧಿಕ್ಕೃತಃ||

ಬ್ರಾಹ್ಮಣ! ನಿನ್ನ ದೇಹವು ನಿರಾತಂಕವೂ ನಿರಾಮಯವೂ ಆಗಿದೆ. ನಿನ್ನ ಅಂಗಗಳು ಸಮಗ್ರವಾಗಿವೆ. ಲೋಕವೂ ನಿನ್ನನ್ನು ಧಿಕ್ಕರಿಸುತ್ತಿಲ್ಲ.

12173039a ನ ಕೇನ ಚಿತ್ ಪ್ರವಾದೇನ ಸತ್ಯೇನೈವಾಪಹಾರಿಣಾ|

12173039c ಧರ್ಮಾಯೋತ್ತಿಷ್ಠ ವಿಪ್ರರ್ಷೇ ನಾತ್ಮಾನಂ ತ್ಯಕ್ತುಮರ್ಹಸಿ||

ವಿಪ್ರರ್ಷೇ! ಜಾತಿಭ್ರಂಶಕವಾದ ಸತ್ಯವಾದ ಯಾವ ಕಳಂಕವೂ ನಿನಗಿಲ್ಲ. ಆದುದರಿಂದ ಧರ್ಮಕಾರ್ಯಗಳನ್ನು ಮಾಡಲು ಎದ್ದೇಳು. ಆತ್ಮಹತ್ಯೆಯು ನಿನಗೆ ಯೋಗ್ಯವಲ್ಲ.

12173040a ಯದಿ ಬ್ರಹ್ಮನ್ ಶೃಣೋಷ್ಯೇತಚ್ಚ್ರದ್ದಧಾಸಿ ಚ ಮೇ ವಚಃ|

12173040c ವೇದೋಕ್ತಸ್ಯ ಚ ಧರ್ಮಸ್ಯ ಫಲಂ ಮುಖ್ಯಮವಾಪ್ಸ್ಯಸಿ||

ಬ್ರಹ್ಮನ್! ನೀನೇನಾದರೂ ನನ್ನ ಮಾತನ್ನು ಕೇಳುವುದಾದರೆ ಮತ್ತು ನನ್ನ ಮಾತಿನಲ್ಲಿ ಶ್ರದ್ಧೆಯಿಡುವುದಾದರೆ, ವೇದೋಕ್ತ ಧರ್ಮದ ಮುಖ್ಯ ಫಲವನ್ನೇ ಪಡೆದುಕೊಳ್ಳುತ್ತೀಯೆ.

12173041a ಸ್ವಾಧ್ಯಾಯಮಗ್ನಿಸಂಸ್ಕಾರಮಪ್ರಮತ್ತೋಽನುಪಾಲಯ|

12173041c ಸತ್ಯಂ ದಮಂ ಚ ದಾನಂ ಚ ಸ್ಪರ್ಧಿಷ್ಠಾ ಮಾ ಚ ಕೇನ ಚಿತ್||

ನೀನು ಅಪ್ರಮತ್ತನಾಗಿದ್ದುಕೊಂಡು ಸ್ವಾಧ್ಯಾಯ ಮತ್ತು ಅಗ್ನಿಸಂಸ್ಕಾರಗಳನ್ನು ಅನುಸರಿಸು. ಸತ್ಯ, ದಮ, ದಾನಗಳನ್ನು ಆಚರಿಸು ಮತ್ತು ಯಾರೊಂದಿಗೂ ಸ್ಪರ್ಧಿಸಬೇಡ.

12173042a ಯೇ ಕೇ ಚನ ಸ್ವಧ್ಯಯನಾಃ ಪ್ರಾಪ್ತಾ ಯಜನಯಾಜನಮ್|

12173042c ಕಥಂ ತೇ ಜಾತು ಶೋಚೇಯುರ್ಧ್ಯಾಯೇಯುರ್ವಾಪ್ಯಶೋಭನಮ್||

ನಿನ್ನಂತೆಯೇ ಚೆನ್ನಾಗಿ ಅಧ್ಯಯನ ಮಾಡಿ ಯಜ್ಞ-ಯಾಜನಗಳಲ್ಲಿ ನಿರತರಾದ ಬ್ರಾಹ್ಮಣರು ಯಾವ ಕಾರಣದಿಂದ ದುಃಖಪಡುತ್ತಾರೆ? ಪ್ರಾಣಪರಿತ್ಯಾಗವೆಂಬ ಅಶುಭಕಾರ್ಯವನ್ನು ಏಕೆ ಚಿಂತಿಸುತ್ತಾರೆ?

12173043a ಇಚ್ಚಂತಸ್ತೇ ವಿಹಾರಾಯ ಸುಖಂ ಮಹದವಾಪ್ನುಯುಃ|

12173043c ಉತ ಜಾತಾಃ ಸುನಕ್ಷತ್ರೇ ಸುತೀರ್ಥಾಃ ಸುಮುಹೂರ್ತಜಾಃ||

ಒಳ್ಳೆಯ ನಕ್ಷತ್ರ. ಶುಭತಿಥಿ, ಮತ್ತು ಒಳ್ಳೆಯ ಮುಹೂರ್ತದಲ್ಲಿ ಹುಟ್ಟಿದವರು ಯಜ್ಞ-ಯಾಜನಗಳನ್ನು ಬಯಸಿ ಮಹಾ ಸುಖವನ್ನು ಪಡೆಯುತ್ತಾರೆ.

12173044a ನಕ್ಷತ್ರೇಷ್ವಸುರೇಷ್ವನ್ಯೇ ದುಸ್ತೀರ್ಥಾ ದುರ್ಮುಹೂರ್ತಜಾಃ|

12173044c ಸಂಪತಂತ್ಯಾಸುರೀಂ ಯೋನಿಂ ಯಜ್ಞಪ್ರಸವವರ್ಜಿತಾಮ್||

ಅಸುರನಕ್ಷತ್ರದಲ್ಲಿ, ದೂಷಿತ ತಿಥಿಯಲ್ಲಿ, ಮತ್ತು ಅಶುಭ ಮುಹೂರ್ತದಲ್ಲಿ ಹುಟ್ಟಿರುವ ಕೆಲವರು ಯಜ್ಞಮಾಡದೇ ಮಕ್ಕಳನ್ನು ಪಡೆದುಕೊಳ್ಳದೇ ಅವಸಾನಾನಂತರದಲ್ಲಿ ಅಸುರೀ ಯೋನಿಗಳಲ್ಲಿ ಹುಟ್ಟುತ್ತಾರೆ.

12173045a ಅಹಮಾಸಂ ಪಂಡಿತಕೋ ಹೈತುಕೋ ವೇದನಿಂದಕಃ|

12173045c ಆನ್ವೀಕ್ಷಿಕೀಂ ತರ್ಕವಿದ್ಯಾಮನುರಕ್ತೋ ನಿರರ್ಥಿಕಾಮ್||

ಹಿಂದಿನ ಜನ್ಮದಲ್ಲಿ ನಾನು ಓರ್ವ ಪಂಡಿತನಾಗಿದ್ದೆ. ಕುತರ್ಕಗಳನ್ನು ಬಳಸಿ ವೇದಗಳನ್ನು ನಿಂದಿಸುತ್ತಿದ್ದೆ. ಪ್ರತ್ಯಕ್ಷಪ್ರಮಾಣವನ್ನೇ ಆಧರಿಸಿ ನಿರರ್ಥಕ ತರ್ಕವಿದ್ಯೆಯಲ್ಲಿ ನನಗೆ ಹೆಚ್ಚಿನ ಅನುರಾಗವಿತ್ತು.

12173046a ಹೇತುವಾದಾನ್ ಪ್ರವದಿತಾ ವಕ್ತಾ ಸಂಸತ್ಸು ಹೇತುಮತ್|

12173046c ಆಕ್ರೋಷ್ಟಾ ಚಾಭಿವಕ್ತಾ ಚ ಬ್ರಹ್ಮಯಜ್ಞೇಷು ವೈ ದ್ವಿಜಾನ್||

ವಿದ್ವತ್ಸಭೆಗಳಲ್ಲಿ ನಾನು ಯುಕ್ತಿಯುಕ್ತಮಾತುಗಳನ್ನು ತರ್ಕಬದ್ಧವಾಗಿ ಹೇಳಿ ಇತರ ದ್ವಿಜರು ಶ್ರದ್ಧಾಪೂರ್ವಕವಾಗಿ ವೇದವಾಕ್ಯಗಳನ್ನು ವಿಚಾರಮಾಡುತ್ತಿದ್ದರೆ ಅವರನ್ನು ಖಂಡಿಸುತ್ತಿದ್ದೆನು ಮತ್ತು ನಿಂದಿಸುತ್ತಿದ್ದೆನು.

12173047a ನಾಸ್ತಿಕಃ ಸರ್ವಶಂಕೀ ಚ ಮೂರ್ಖಃ ಪಂಡಿತಮಾನಿಕಃ|

12173047c ತಸ್ಯೇಯಂ ಫಲನಿರ್ವೃತ್ತಿಃ ಸೃಗಾಲತ್ವಂ ಮಮ ದ್ವಿಜ||

ದ್ವಿಜ! ನಾನು ನಾಸ್ತಿಕನಾಗಿದ್ದೆ ಮತ್ತು ಎಲ್ಲವನ್ನೂ ಸಂಶಯದಿಂದಲೇ ಕಾಣುತ್ತಿದ್ದೆ. ಮೂರ್ಖನೇ ಆಗಿದ್ದರೂ ನಾನೊಬ್ಬ ಮಹಾಪಂಡಿತನೆಂಬ ದುರಭಿಮಾನವಿತ್ತು. ಅದರ ಫಲವಾಗಿಯೇ ಈಗ ನನಗೆ ಈ ನರಿಯ ಜನ್ಮವುಂಟಾಗಿದೆ.

12173048a ಅಪಿ ಜಾತು ತಥಾ ತತ್ ಸ್ಯಾದಹೋರಾತ್ರಶತೈರಪಿ|

12173048c ಯದಹಂ ಮಾನುಷೀಂ ಯೋನಿಂ ಸೃಗಾಲಃ ಪ್ರಾಪ್ನುಯಾಂ ಪುನಃ||

ನರಿಯಾಗಿರುವ ನಾನು ಹಗಲು-ರಾತ್ರಿ ನೂರಾರು ದಿನಗಳು ಅನವರತವಾಗಿ ಸಾಧನೆ ಮಾಡಿದರೂ ಪಾಪಗಳನ್ನು ಕಳೆದುಕೊಂಡು ಮನುಷ್ಯಜನ್ಮವನ್ನು ಮುಂದೆ ಯಾವಾಗಲಾದರೂ ಪಡೆದುಕೊಳ್ಳುತ್ತೇನೆಯೇ?

12173049a ಸಂತುಷ್ಟಶ್ಚಾಪ್ರಮತ್ತಶ್ಚ ಯಜ್ಞದಾನತಪೋರತಿಃ|

12173049c ಜ್ಞೇಯಜ್ಞಾತಾ ಭವೇಯಂ ವೈ ವರ್ಜ್ಯವರ್ಜಯಿತಾ ತಥಾ||

ಮುಂದೇನಾದರೂ ನಾನು ಮನುಷ್ಯನಾಗಿ ಹುಟ್ಟಿದರೆ ಸಂತುಷ್ಟನಾಗಿರುತ್ತೇನೆ. ಅಪ್ರಮತ್ತನಾಗಿರುತ್ತೇನೆ. ಯಜ್ಞ-ದಾನ-ತಪಸ್ಸಿನಲ್ಲಿ ನಿರತನಾಗಿರುತ್ತೇನೆ. ಯಾವುದನ್ನು ತಿಳಿಯಬೇಕೋ ಅದನ್ನು ತಿಳಿದುಕೊಳ್ಳುತ್ತೇನೆ. ತ್ಯಾಗಮಾಡಬೇಕಾದುದನ್ನು ತ್ಯಾಗಮಾಡುತ್ತೇನೆ.”

12173050a ತತಃ ಸ ಮುನಿರುತ್ಥಾಯ ಕಾಶ್ಯಪಸ್ತಮುವಾಚ ಹ|

12173050c ಅಹೋ ಬತಾಸಿ ಕುಶಲೋ ಬುದ್ಧಿಮಾನಿತಿ ವಿಸ್ಮಿತಃ||

ಆಗ ಮುನಿ ಕಾಶ್ಯಪ ಮೇಲೆದ್ದು ಹೇಳಿದನು: “ಅತ್ಯಾಶ್ಚರ್ಯ! ನೀನು ಮಾತನಾಡುವುದರಲ್ಲಿ ಕುಶಲನಾಗಿರುವೆ ಮತ್ತು ಬುದ್ಧಿವಂತನೂ ಆಗಿರುವೆ!”

12173051a ಸಮವೈಕ್ಷತ ತಂ ವಿಪ್ರೋ ಜ್ಞಾನದೀರ್ಘೇಣ ಚಕ್ಷುಷಾ|

12173051c ದದರ್ಶ ಚೈನಂ ದೇವಾನಾಮಿಂದ್ರಂ ದೇವಂ ಶಚೀಪತಿಮ್||

ಹೀಗೆ ಹೇಳಿ ಆ ವಿಪ್ರನು ತನ್ನ ಜ್ಞಾನಚಕ್ಷುವಿನಿಂದ ದೀರ್ಘವಾಗಿ ನರಿಯನ್ನು ನೋಡಿದನು. ಆಗ ಅವನು ಅಲ್ಲಿ ದೇವತೆಗಳ ಇಂದ್ರ ದೇವ ಶಚೀಪತಿಯನ್ನು ಕಂಡನು.

12173052a ತತಃ ಸಂಪೂಜಯಾಮಾಸ ಕಾಶ್ಯಪೋ ಹರಿವಾಹನಮ್|

12173052c ಅನುಜ್ಞಾತಶ್ಚ ತೇನಾಥ ಪ್ರವಿವೇಶ ಸ್ವಮಾಶ್ರಮಮ್||

ಆಗ ಕಾಶ್ಯಪನು ಹರಿವಾಹನನನ್ನು ಪೂಜಿಸಿ, ಅವನ ಅನುಜ್ಞೆಯನ್ನು ಪಡೆದು ತನ್ನ ಆಶ್ರಮವನ್ನು ಪ್ರವೇಶಿಸಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಸೃಗಾಲಕಾಶ್ಯಪಸಂವಾದೇ ತ್ರಿಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಸೃಗಾಲಕಾಶ್ಯಪಸಂವಾದ ಎನ್ನುವ ನೂರಾಎಪ್ಪತ್ಮೂರನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಅತೀವ ಸ್ಪೃಹಯೇ ತೇಷಾಂ ಯೇಷಾಂ ಸಂತೀಹ ಪಾಣಯಃ| (ಗೀತಾ ಪ್ರೆಸ್).

[2] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಜಂತೂನುಚ್ಚಾವಚಾನಂಗೇ ದಶತೋ ನ ಕಷಾಮ ವಾ|| (ಗೀತಾ ಪ್ರೆಸ್).

[3] ಬುದ್ಧೀಂದ್ರಿಯಗ್ರಾಮಂ (ಗೀತಾ ಪ್ರೆಸ್/ಭಾರತ ದರ್ಶನ).

[4] ಭೂತೇಷು (ಗೀತಾ ಪ್ರೆಸ್/ಭಾರತ ದರ್ಶನ).

Comments are closed.