Shanti Parva: Chapter 166

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೬೬

ಕೃತಘ್ನ ಗೌತಮನು ಮಿತ್ರ ರಾಜಧರ್ಮನನ್ನು ವಧಿಸಿದುದು ಮತ್ತು ರಾಕ್ಷಸರಿಂದ ಅವನ ಹತ್ಯೆ; ಕೃತಘ್ನನ ಮಾಂಸವು ಅಭಕ್ಷ್ಯವೆಂದು ಹೇಳಿದುದು (೧-೨೫).

12166001 ಭೀಷ್ಮ ಉವಾಚ|

12166001a ಅಥ ತತ್ರ ಮಹಾರ್ಚಿಷ್ಮಾನನಲೋ ವಾತಸಾರಥಿಃ|

12166001c ತಸ್ಯಾವಿದೂರೇ ರಕ್ಷಾರ್ಥಂ ಖಗೇಂದ್ರೇಣ ಕೃತೋಽಭವತ್||

ಭೀಷ್ಮನು ಹೇಳಿದನು: “ಆಗ ಅಲ್ಲಿಯೇ ಸ್ವಲ್ಪ ದೂರದಲ್ಲಿ ಗೌತಮನ ರಕ್ಷಣೆಗಾಗಿ ಖಗೇಂದ್ರನು ಅಗ್ನಿಯನ್ನು ಹೊತ್ತಿಸಿದ್ದನು. ಗಾಳಿಯ ಸಹಾಯದಿಂದ ಆ ಬೆಂಕಿಯು ಕಿಡಿಗಳನ್ನು ಹಾರಿಸುತ್ತಾ ಪ್ರಜ್ವಲಿತವಾಗಿ ಉರಿಯುತ್ತಿತ್ತು.

12166002a ಸ ಚಾಪಿ ಪಾರ್ಶ್ವೇ ಸುಷ್ವಾಪ ವಿಶ್ವಸ್ತೋ ಬಕರಾಟ್ತದಾ|

12166002c ಕೃತಘ್ನಸ್ತು ಸ ದುಷ್ಟಾತ್ಮಾ ತಂ ಜಿಘಾಂಸುರಜಾಗರತ್||

12166003a ತತೋಽಲಾತೇನ ದೀಪ್ತೇನ ವಿಶ್ವಸ್ತಂ ನಿಜಘಾನ ತಮ್|

12166003c ನಿಹತ್ಯ ಚ ಮುದಾ ಯುಕ್ತಃ ಸೋಽನುಬಂಧಂ ನ ದೃಷ್ಟವಾನ್||

ಬಕರಾಜನಾದರೋ ವಿಶ್ವಾಸದಿಂದ ಬೆಂಕಿಯ ಹತ್ತಿರವೇ ಮಲಗಿಕೊಂಡಿದ್ದನು. ದುಷ್ಟಾತ್ಮಾ ಕೃತಘ್ನನಾದರೋ ಅವನನ್ನು ಕೊಲ್ಲಲು ಬಯಸಿ ಎದ್ದು ಉರಿಯುತ್ತಿದ್ದ ಕೊಳ್ಳಿಯಿಂದ ವಿಶ್ವಾಸದಿಂದ ಮಲಗಿದ್ದ ಅವನನ್ನು ಕೊಂದನು. ಅವನನ್ನು ಕೊಂದು ಸಂತೋಷಗೊಂಡನು. ಅದರಿಂದಾಗಿ ಅವನು ಕಟ್ಟಿಕೊಂಡಿದ್ದ ಪಾಪವನ್ನು ಅವನು ಕಾಣಲಿಲ್ಲ.

12166004a ಸ ತಂ ವಿಪಕ್ಷರೋಮಾಣಂ ಕೃತ್ವಾಗ್ನಾವಪಚತ್ತದಾ|

12166004c ತಂ ಗೃಹೀತ್ವಾ ಸುವರ್ಣಂ ಚ ಯಯೌ ದ್ರುತತರಂ ದ್ವಿಜಃ||

ಸತ್ತ ಆ ಪಕ್ಷಿಯ ರೆಕ್ಕೆ-ರೋಮಗಳನ್ನು ಸುಲಿದು, ಅಗ್ನಿಯಲ್ಲಿ ಬೇಯಿಸಿ ಜೊತೆಯಲ್ಲಿ ತೆಗೆದುಕೊಂಡು ಚಿನ್ನದ ಭಾರವನ್ನು ಹೊತ್ತು ಆ ಬ್ರಾಹ್ಮಣನು ಬೇಗ ಬೇಗನೇ ಅಲ್ಲಿಂದ ಹೊರಟು ಹೋದನು.

[1]12166005a ತತೋಽನ್ಯಸ್ಮಿನ್ಗತೇ ಚಾಹ್ನಿ ವಿರೂಪಾಕ್ಷೋಽಬ್ರವೀತ್ಸುತಮ್|

12166005c ನ ಪ್ರೇಕ್ಷೇ ರಾಜಧರ್ಮಾಣಮದ್ಯ ಪುತ್ರ ಖಗೋತ್ತಮಮ್||

ಎರಡನೇ ದಿನವೂ ಕಳೆಯಲು ವಿರೂಪಾಕ್ಷನು ತನ್ನ ಮಗನಿಗೆ ಹೇಳಿದನು: “ಪುತ್ರ! ಖಗೋತ್ತಮ ರಾಜಧರ್ಮನನ್ನು ಇಂದು ಕೂಡ ಕಾಣುತ್ತಿಲ್ಲ.

12166006a ಸ ಪೂರ್ವಸಂಧ್ಯಾಂ ಬ್ರಹ್ಮಾಣಂ ವಂದಿತುಂ ಯಾತಿ ಸರ್ವದಾ|

12166006c ಮಾಂ ಚಾದೃಷ್ಟ್ವಾ ಕದಾ ಚಿತ್ಸ ನ ಗಚ್ಚತಿ ಗೃಹಾನ್ಖಗಃ||

ಆ ಪಕ್ಷಿಯು ಪ್ರತಿದಿನ ಬೆಳಿಗ್ಗೆ ಬ್ರಹ್ಮನನ್ನು ವಂದಿಸಲು ಹೋಗುತ್ತಿದ್ದನು ಮತ್ತು ಅಲ್ಲಿಂದ ಹಿಂದಿರುವಾಗ ನನ್ನನ್ನು ಭೇಟಿಮಾಡದೇ ಮನೆಗೆ ಹೋಗುತ್ತಿರಲಿಲ್ಲ.

12166007a ಉಭೇ ದ್ವಿರಾತ್ರಂ ಸಂಧ್ಯೇ ವೈ ನಾಭ್ಯಗಾತ್ಸ ಮಮಾಲಯಮ್|

12166007c ತಸ್ಮಾನ್ನ ಶುಧ್ಯತೇ ಭಾವೋ ಮಮ ಸ ಜ್ಞಾಯತಾಂ ಸುಹೃತ್||

ಇಂದಿಗೆ ಎರಡು ಸಂಧ್ಯೆಗಳು ಕಳೆದವು. ಆದರೂ ಅವನು ನನ್ನ ಮನೆಗೆ ಬರಲಿಲ್ಲ. ಆದುದರಿಂದ ನನ್ನ ಮನಸ್ಸಿನಲ್ಲಿ ಸಂದೇಹವುಂಟಾಗಿದೆ. ನೀನು ನನ್ನ ಮಿತ್ರನ ಕುರಿತು ತಿಳಿದುಕೊಂಡು ಬಾ.

12166008a ಸ್ವಾಧ್ಯಾಯೇನ ವಿಯುಕ್ತೋ ಹಿ ಬ್ರಹ್ಮವರ್ಚಸವರ್ಜಿತಃ|

12166008c ತಂ ಗತಸ್ತತ್ರ ಮೇ ಶಂಕಾ ಹನ್ಯಾತ್ತಂ ಸ ದ್ವಿಜಾಧಮಃ||

ಆ ದ್ವಿಜಾಧಮನು ಸ್ವಾಧ್ಯಾಯರಹಿತನಾಗಿದ್ದನು ಮತ್ತು ಬ್ರಹ್ಮವರ್ಚಸ್ಸಿನಲ್ಲಿ ಶೂನ್ಯನಾಗಿದ್ದನು. ಅವನ ಮೇಲೆಯೇ ನನ್ನ ಶಂಕೆಯಿದೆ. ಅವನೇ ನನ್ನ ಮಿತ್ರನನ್ನು ಕೊಂದಿರಬಹುದು.

12166009a ದುರಾಚಾರಸ್ತು ದುರ್ಬುದ್ಧಿರಿಂಗಿತೈರ್ಲಕ್ಷಿತೋ ಮಯಾ|

12166009c ನಿಷ್ಕ್ರಿಯೋ ದಾರುಣಾಕಾರಃ ಕೃಷ್ಣೋ ದಸ್ಯುರಿವಾಧಮಃ||

ಲಕ್ಷಣಗಳಿಂದ ಅವನು ನನಗೆ ದುರಾಚಾರಿ ದುರ್ಬುದ್ಧಿ ಮತ್ತು ದಯಾಹೀನ ಎಂದು ಅನಿಸಿತ್ತು. ಅವನು ಆಕಾರದಲ್ಲಿಯೇ ಅತ್ಯಂತ ಭಯಾನಕ ದುಷ್ಟ ದಸ್ಯುವಿನಂತೆ ಅಧಮನಾಗಿ ಕಾಣುತ್ತಿದ್ದನು.

12166010a ಗೌತಮಃ ಸ ಗತಸ್ತತ್ರ ತೇನೋದ್ವಿಗ್ನಂ ಮನೋ ಮಮ|

12166010c ಪುತ್ರ ಶೀಘ್ರಮಿತೋ ಗತ್ವಾ ರಾಜಧರ್ಮನಿವೇಶನಮ್|

12166010e ಜ್ಞಾಯತಾಂ ಸ ವಿಶುದ್ಧಾತ್ಮಾ ಯದಿ ಜೀವತಿ ಮಾಚಿರಮ್||

ಆ ಗೌತಮನು ಇಲ್ಲಿಂದ ಹೊರಟು ಅಲ್ಲಿಗೇ ಹೋಗಿದ್ದನು. ಆದುದರಿಂದ ನನ್ನ ಮನಸ್ಸು ಉದ್ವಿಗ್ನಗೊಂಡಿದೆ. ಪುತ್ರ! ಶೀಘ್ರವೇ ಇಲ್ಲಿಂದ ರಾಜಧರ್ಮನ ಮನೆಗೆ ಹೋಗು. ಆ ವಿಶುದ್ಧಾತ್ಮನು ಜೀವಂತ ಇದ್ದಾನೋ ಇಲ್ಲವೋ ಎಂದು ತಿಳಿದುಕೊಂಡು ಬಾ. ವಿಲಂಬಮಾಡಬೇಡ.”

12166011a ಸ ಏವಮುಕ್ತಸ್ತ್ವರಿತೋ ರಕ್ಷೋಭಿಃ ಸಹಿತೋ ಯಯೌ|

12166011c ನ್ಯಗ್ರೋಧಂ ತತ್ರ ಚಾಪಶ್ಯತ್ಕಂಕಾಲಂ ರಾಜಧರ್ಮಣಃ||

ಇದನ್ನು ಕೇಳಿ ಅವನು ತ್ವರೆಮಾಡಿ ರಾಕ್ಷಸರೊಂದಿಗೆ ನ್ಯಗ್ರೋಧದ ಬಳಿ ಬಂದನು. ಅಲ್ಲಿ ಅವನು ರಾಜಧರ್ಮನ ರೆಕ್ಕೆಗಳು, ಎಲುಬುಗಳು ಮತ್ತು ಕಾಲುಗಳ ರಾಶಿಯನ್ನು ನೋಡಿದನು.

12166012a ಸ ರುದನ್ನಗಮತ್ಪುತ್ರೋ ರಾಕ್ಷಸೇಂದ್ರಸ್ಯ ಧೀಮತಃ|

12166012c ತ್ವರಮಾಣಃ ಪರಂ ಶಕ್ತ್ಯಾ ಗೌತಮಗ್ರಹಣಾಯ ವೈ||

ರಾಕ್ಷಸೇಂದ್ರನ ಆ ಧೀಮಂತ ಪುತ್ರನು ರೋದಿಸತೊಡಗಿದನು ಮತ್ತು ಪರಮ ಶಕ್ತಿಯಿಂದ ಆ ಗೌತಮನನ್ನು ಹಿಡಿಯಲು ತ್ವರೆಮಾಡಿದನು.

12166013a ತತೋಽವಿದೂರೇ ಜಗೃಹುರ್ಗೌತಮಂ ರಾಕ್ಷಸಾಸ್ತದಾ|

12166013c ರಾಜಧರ್ಮಶರೀರಂ ಚ ಪಕ್ಷಾಸ್ಥಿಚರಣೋಂಝಿತಮ್||

ಅನಂತರ ಅನತಿದೂರದಲ್ಲಿಯೇ ಆ ರಾಕ್ಷಸರು ಗೌತಮನನ್ನು ಹಿಡಿದರು. ಅವನ ಜೊತೆಯಲ್ಲಿ ರೆಕ್ಕೆ-ಎಲುಬು-ಕಾಲುಗಳಿಲ್ಲದ ರಾಜಧರ್ಮನ ಶರೀರವನ್ನೂ ಹಿಡಿದರು.

12166014a ತಮಾದಾಯಾಥ ರಕ್ಷಾಂಸಿ ದ್ರುತಂ ಮೇರುವ್ರಜಂ ಯಯುಃ|

12166014c ರಾಜ್ಞಶ್ಚ ದರ್ಶಯಾಮಾಸುಃ ಶರೀರಂ ರಾಜಧರ್ಮಣಃ|

12166014e ಕೃತಘ್ನಂ ಪುರುಷಂ ತಂ ಚ ಗೌತಮಂ ಪಾಪಚೇತಸಮ್||

ಗೌತಮನನ್ನು ಹಿಡಿದುಕೊಂಡು ಆ ರಾಕ್ಷಸರು ಶೀಘ್ರವೇ ಮೇರುವ್ರಜಕ್ಕೆ ಹೋದರು. ಅಲ್ಲಿ ಅವರು ರಾಜನಿಗೆ ರಾಜಧರ್ಮನ ಮೃತ ಶರೀರವನ್ನು ತೋರಿಸಿದರು ಮತ್ತು ಪಾಪಾಚಾರೀ ಕೃತಘ್ನ ಗೌತಮನನ್ನು ಎದಿರು ನಿಲ್ಲಿಸಿದರು.

12166015a ರುರೋದ ರಾಜಾ ತಂ ದೃಷ್ಟ್ವಾ ಸಾಮಾತ್ಯಃ ಸಪುರೋಹಿತಃ|

12166015c ಆರ್ತನಾದಶ್ಚ ಸುಮಹಾನಭೂತ್ತಸ್ಯ ನಿವೇಶನೇ||

12166016a ಸಸ್ತ್ರೀಕುಮಾರಂ ಚ ಪುರಂ ಬಭೂವಾಸ್ವಸ್ಥಮಾನಸಮ್|

ಅವನನ್ನು ನೋಡಿ ರಾಜನು ಅಮಾತ್ಯ-ಪುರೋಹಿತರೊಂದಿಗೆ ರೋದಿಸಿದನು. ಅವನ ಮನೆಯಲ್ಲಿ ಸ್ತ್ರೀ-ಕುಮಾರರ ಜೋರಾದ ಆರ್ತನಾದದಿಂದ ಪುರವೇ ಅಸ್ವಸ್ಥಮಾನಸವಾಯಿತು.

12166016c ಅಥಾಬ್ರವೀನ್ನೃಪಃ ಪುತ್ರಂ ಪಾಪೋಽಯಂ ವಧ್ಯತಾಮಿತಿ||

12166017a ಅಸ್ಯ ಮಾಂಸೈರಿಮೇ ಸರ್ವೇ ವಿಹರಂತು ಯಥೇಷ್ಟತಃ|

12166017c ಪಾಪಾಚಾರಃ ಪಾಪಕರ್ಮಾ ಪಾಪಾತ್ಮಾ ಪಾಪನಿಶ್ಚಯಃ|

12166017e ಹಂತವ್ಯೋಽಯಂ ಮಮ ಮತಿರ್ಭವದ್ಭಿರಿತಿ ರಾಕ್ಷಸಾಃ||

ಆಗ ಆ ನೃಪನು ತನ್ನ ಮಗನಿಗೆ ಈ ಪಾಪಿಯನ್ನು ವಧಿಸು ಎಂದು ಹೇಳಿದನು. “ಇವನ ಮಾಂಸವನ್ನು ಸರ್ವ ರಾಕ್ಷಸರೂ ಯಥೇಷ್ಟವಾಗಿ ಉಪಯೋಗಿಸಲಿ. ರಾಕ್ಷಸರೇ! ಇವನು ಪಾಪಾಚಾರಿ, ಪಾಪಕರ್ಮಿ ಮತ್ತು ಪಾಪಾತ್ಮನು. ಇವನ ಎಲ್ಲ ಸಾಧನಗಳೂ ಪಾಪಮಯವೇ ಆಗಿವೆ. ಆದುದರಿಂದ ನೀವು ಇವನನ್ನು ವಧಿಸಬೇಕು. ಇದು ನನ್ನ ಮತ.”

12166018a ಇತ್ಯುಕ್ತಾ ರಾಕ್ಷಸೇಂದ್ರೇಣ ರಾಕ್ಷಸಾ ಘೋರವಿಕ್ರಮಾಃ|

12166018c ನೈಚ್ಚಂತ ತಂ ಭಕ್ಷಯಿತುಂ ಪಾಪಕರ್ಮಾಯಮಿತ್ಯುತ||

ರಾಕ್ಷಸೇಂದ್ರನು ಹೀಗೆ ಹೇಳಲು ಘೋರವಿಕ್ರಮಿ ರಾಕ್ಷಸರು ಆ ಪಾಪಕರ್ಮಿಯನ್ನು ತಿನ್ನಲು ಬಯಸಲಿಲ್ಲ.

12166019a ದಸ್ಯೂನಾಂ ದೀಯತಾಮೇಷ ಸಾಧ್ವದ್ಯ ಪುರುಷಾಧಮಃ|

12166019c ಇತ್ಯೂಚುಸ್ತಂ ಮಹಾರಾಜ ರಾಕ್ಷಸೇಂದ್ರಂ ನಿಶಾಚರಾಃ||

12166020a ಶಿರೋಭಿಶ್ಚ ಗತಾ ಭೂಮಿಮೂಚೂ ರಕ್ಷೋಗಣಾಧಿಪಮ್|

12166020c ನ ದಾತುಮರ್ಹಸಿ ತ್ವಂ ನೋ ಭಕ್ಷಣಾಯಾಸ್ಯ ಕಿಲ್ಬಿಷಮ್||

ಮಹಾರಾಜ! ಆ ನಿಶಾಚರರು ರಾಕ್ಷಸರಾಜನಿಗೆ ಇಂತೆಂದರು: “ಪ್ರಭೋ! ಈ ನರಾಧಮನ ಮಾಂಸವನ್ನು ದಸ್ಯುಗಳಿಗೆ ಕೊಡಬೇಕು. ಇವನ ಪಾಪವನ್ನು ತಿನ್ನಲು ನಮಗೆ ಕೊಡಬೇಡ.” ಹೀಗೆ ಸಮಸ್ತ ರಾಕ್ಷಸರೂ ರಾಕ್ಷಸರಾಜನ ಚರಣಗಳಲ್ಲಿ ತಲೆಗಳನ್ನಿಟ್ಟು ಪ್ರಾರ್ಥಿಸಿದರು.

12166021a ಏವಮಸ್ತ್ವಿತಿ ತಾನಾಹ ರಾಕ್ಷಸೇಂದ್ರೋ ನಿಶಾಚರಾನ್|

12166021c ದಸ್ಯೂನಾಂ ದೀಯತಾಮೇಷ ಕೃತಘ್ನೋಽದ್ಯೈವ ರಾಕ್ಷಸಾಃ||

ಇದನ್ನು ಕೇಳಿ ರಾಕ್ಷಸರಾಜನು ಆ ನಿಶಾಚರರಿಗೆ ಹೇಳಿದನು: “ರಾಕ್ಷಸರೇ! ಹಾಗೆಯೇ ಆಗಲಿ! ಈ ಕೃತಘ್ನನನ್ನು ಇಂದೇ ದಸ್ಯುಗಳಿಗೆ ನೀಡಬೇಕು!”

12166022a ಇತ್ಯುಕ್ತೇ ತಸ್ಯ ತೇ ದಾಸಾಃ ಶೂಲಮುದ್ಗರಪಾಣಯಃ|

12166022c ಚಿತ್ತ್ವಾ ತಂ ಖಂಡಶಃ ಪಾಪಂ ದಸ್ಯುಭ್ಯಃ ಪ್ರದದುಸ್ತದಾ||

ರಾಜನು ಹೀಗೆ ಹೇಳಲು ಅವನ ದಾಸರು ಶೂಲ-ಮುದ್ಗರಗಳನ್ನು ಹಿಡಿದು ಆ ಪಾಪಿಯನ್ನು ಕಡಿದು ತುಂಡು ತುಂಡು ಮಾಡಿ ದಸ್ಯುಗಳಿಗೆ ನೀಡಿದರು.

12166023a ದಸ್ಯವಶ್ಚಾಪಿ ನೈಚ್ಚಂತ ತಮತ್ತುಂ ಪಾಪಕಾರಿಣಮ್|

12166023c ಕ್ರವ್ಯಾದಾ ಅಪಿ ರಾಜೇಂದ್ರ ಕೃತಘ್ನಂ ನೋಪಭುಂಜತೇ||

ರಾಜೇಂದ್ರ! ಆ ದಸ್ಯುಗಳೂ ಕೂಡ ಆ ಪಾಪಕಾರಿಣಿಯ ಮಾಂಸವನ್ನು ತಿನ್ನಲು ಬಯಸಲಿಲ್ಲ. ಮಾಂಸಾಹಾರೀ ಜೀವಜಂತುಗಳೂ ಕೂಡ ಕೃತಘ್ನನ ಮಾಂಸವನ್ನು ತಿನ್ನುವುದಿಲ್ಲ.

12166024a ಬ್ರಹ್ಮಘ್ನೇ ಚ ಸುರಾಪೇ ಚ ಚೋರೇ ಭಗ್ನವ್ರತೇ ತಥಾ|

12166024c ನಿಷ್ಕೃತಿರ್ವಿಹಿತಾ ರಾಜನ್ ಕೃತಘ್ನೇ ನಾಸ್ತಿ ನಿಷ್ಕೃತಿಃ||

ರಾಜನ್! ಬ್ರಹ್ಮಘ್ನ, ಕುಡುಕ, ಕಳ್ಳ ಮತ್ತು ವ್ರತಭಂಗಮಾಡುವವರಿಗೆ ಶಾಸ್ತ್ರಗಳಲ್ಲಿ ಪ್ರಾಯಶ್ಚಿತ್ತ ವಿಧಿಗಳಿವೆ. ಆದರೆ ಕೃತಘ್ನನಿಗೆ ಉದ್ಧಾರಹೊಂದಲು ಯಾವ ಉಪಾಯವನ್ನೂ ಹೇಳಿಲ್ಲ.

12166025a ಮಿತ್ರದ್ರೋಹೀ ನೃಶಂಸಶ್ಚ ಕೃತಘ್ನಶ್ಚ ನರಾಧಮಃ|

12166025c ಕ್ರವ್ಯಾದೈಃ ಕೃಮಿಭಿಶ್ಚಾನ್ಯೈರ್ನ ಭುಜ್ಯಂತೇ ಹಿ ತಾದೃಶಾಃ||

ಮಿತ್ರದ್ರೋಹೀ, ನೃಶಂಸ, ಕೃತಘ್ನ ಮತ್ತು ನರಾಧಮ – ಇಂತಹ ಮನುಷ್ಯರ ಮಾಂಸವನ್ನು ಮಾಂಸಭಕ್ಷೀ ಜೀವ-ಜಂತುಗಳೂ ಮತ್ತು ಹುಳಗಳೂ ತಿನ್ನುವುದಿಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕೃತಘ್ನೋಪಾಖ್ಯಾನೇ ಷಷ್ಟಷಷ್ಟ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕೃತಘ್ನೋಪಾಖ್ಯಾನ ಎನ್ನುವ ನೂರಾಅರವತ್ತಾರನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ತತೋ ದಾಕ್ಷಾಯಣೀಪುತ್ರಂ ನಾಗತಂ ತಂ ತು ಭಾರತ| ವಿರೂಪಾಕ್ಷಶ್ಚಿಂತಯನ್ವೈ ಹೃದಯೇನ ವಿದೂಯತಾ|| ಅರ್ಥಾತ್: ಭಾರತ! ಆ ದಿನ ದಾಕ್ಷಾಯಣಿಯ ಪುತ್ರ ರಾಜಧರ್ಮನು ಬರದೇ ಇದ್ದುದನ್ನು ನೋಡು ವಿರೂಪಾಕ್ಷನು ವ್ಯಾಕುಲ ಹೃದಯಿಯಾಗಿ ಚಿಂತಿಸತೊಡಗಿದನು. (ಗೀತಾ ಪ್ರೆಸ್).

Comments are closed.