Shanti Parva: Chapter 165

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೬೫

ಗೌತಮನು ರಾಕ್ಷಸರಾಜನಲ್ಲಿಂದ ಸುವರ್ಣರಾಶಿಯನ್ನು ತೆಗೆದುಕೊಂಡು ಹಿಂದಿರುಗಿದುದು ಮತ್ತು ತನ್ನ ಮಿತ್ರ ಬಕನನ್ನು ಕೊಂದು ತಿನ್ನುವುದರ ಕುರಿತು ಆಲೋಚಿಸಿದುದು (೧-೩೧).

12165001 ಭೀಷ್ಮ ಉವಾಚ|

12165001a ತತಃ ಸ ವಿದಿತೋ ರಾಜ್ಞಃ ಪ್ರವಿಶ್ಯ ಗೃಹಮುತ್ತಮಮ್|

12165001c ಪೂಜಿತೋ ರಾಕ್ಷಸೇಂದ್ರೇಣ ನಿಷಸಾದಾಸನೋತ್ತಮೇ||

ಭೀಷ್ಮನು ಹೇಳಿದನು: “ರಾಜನಿಗೆ ವಿಷಯವು ತಿಳಿದನಂತರ ಗೌತಮನು ಆ ಉತ್ತಮ ಗೃಹವನ್ನು ಪ್ರವೇಶಿಸಿ ರಾಕ್ಷಸೇಂದ್ರನಿಂದ ಪೂಜಿತನಾಗಿ ಉತ್ತಮ ಆಸನದಲ್ಲಿ ಕುಳಿತುಕೊಂಡನು.

12165002a ಪೃಷ್ಟಶ್ಚ ಗೋತ್ರಚರಣಂ ಸ್ವಾಧ್ಯಾಯಂ ಬ್ರಹ್ಮಚಾರಿಕಮ್|

12165002c ನ ತತ್ರ ವ್ಯಾಜಹಾರಾನ್ಯದ್ಗೋತ್ರಮಾತ್ರಾದೃತೇ ದ್ವಿಜಃ||

ವಿರೂಪಾಕ್ಷನು ಗೌತಮನಿಗೆ ಅವನ ಗೋತ್ರ, ಶಾಖೆ, ಮತ್ತು ಬ್ರಹ್ಮಚರ್ಯಪಾಲನ ಪೂರ್ವಕ ಮಾಡಿದ್ದ ಸ್ವಾಧ್ಯಾಯದ ಕುರಿತು ಕೇಳಿದನು. ಆದರೆ ದ್ವಿಜನು ತನ್ನ ಗೋತ್ರವಲ್ಲದೇ ಬೇರೆ ಯಾವ ವಿಷಯವನ್ನೂ ಹೇಳಲಿಲ್ಲ.

12165003a ಬ್ರಹ್ಮವರ್ಚಸಹೀನಸ್ಯ ಸ್ವಾಧ್ಯಾಯವಿರತಸ್ಯ ಚ|

12165003c ಗೋತ್ರಮಾತ್ರವಿದೋ ರಾಜಾ ನಿವಾಸಂ ಸಮಪೃಚ್ಚತ||

ಬಹ್ಮವರ್ಚಸಹೀನ, ಸ್ವಾಧ್ಯಾಯವಿರತ, ಗೋತ್ರಮಾತ್ರವನ್ನೇ ಅರಿತಿದ್ದ ಆ ಬ್ರಾಹ್ಮಣನಿಗೆ ರಾಜನು ಅವನ ವಾಸಸ್ಥಾನದ ಕುರಿತು ಕೇಳಿದನು:

12165004a ಕ್ವ ತೇ ನಿವಾಸಃ ಕಲ್ಯಾಣ ಕಿಂಗೋತ್ರಾ ಬ್ರಾಹ್ಮಣೀ ಚ ತೇ|

12165004c ತತ್ತ್ವಂ ಬ್ರೂಹಿ ನ ಭೀಃ ಕಾರ್ಯಾ ವಿಶ್ರಮಸ್ವ[1] ಯಥಾಸುಖಮ್||

“ಕಲ್ಯಾಣ! ನಿನ್ನ ನಿವಾಸಸ್ಥಾನವು ಎಲ್ಲಿದೆ? ನಿನ್ನ ಪತ್ನಿಯು ಯಾವ ಗೋತ್ರದವಳು? ಸರಿಯಾಗಿ ಹೇಳು. ಭಯಪಡಬೇಡ. ವಿಶ್ರಮಿಸಿ ಯಥಾಸುಖವಾಗಿ ಹೇಳು.”

12165005 ಗೌತಮ ಉವಾಚ|

12165005a ಮಧ್ಯದೇಶಪ್ರಸೂತೋಽಹಂ ವಾಸೋ ಮೇ ಶಬರಾಲಯೇ|

12165005c ಶೂದ್ರಾ ಪುನರ್ಭೂರ್ಭಾರ್ಯಾ ಮೇ ಸತ್ಯಮೇತದ್ಬ್ರವೀಮಿ ತೇ||

ಗೌತಮನು ಹೇಳಿದನು: “ನಾನು ಮಧ್ಯದೇಶದಲ್ಲಿ ಹುಟ್ಟಿದವನು. ವಾಸಿಸುವುದು ಶಬರಾಲಯದಲ್ಲಿ. ಮತ್ತೆ ನನ್ನ ಭಾರ್ಯೆಯು ಶೂದ್ರಳು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.””

12165006 ಭೀಷ್ಮ ಉವಾಚ|

12165006a ತತೋ ರಾಜಾ ವಿಮಮೃಶೇ ಕಥಂ ಕಾರ್ಯಮಿದಂ ಭವೇತ್|

12165006c ಕಥಂ ವಾ ಸುಕೃತಂ ಮೇ ಸ್ಯಾದಿತಿ ಬುದ್ಧ್ಯಾನ್ವಚಿಂತಯತ್||

ಭೀಷ್ಮನು ಹೇಳಿದನು: “ಆಗ ಈಗ ಹೇಗೆ ಕಾರ್ಯನಿರ್ವಹಿಸಬೇಕು ಎಂದು ರಾಜನು ವಿಮರ್ಶಿಸಿದನು. ನನಗೆ ಪುಣ್ಯವು ಹೇಗೆ ಪ್ರಾಪ್ತವಾಗಬಲ್ಲದು ಎಂದು ಬುದ್ಧಿಪೂರ್ವಕವಾಗಿ ಯೋಚಿಸಿದನು.

12165007a ಅಯಂ ವೈ ಜನನಾದ್ವಿಪ್ರಃ ಸುಹೃತ್ತಸ್ಯ ಮಹಾತ್ಮನಃ|

12165007c ಸಂಪ್ರೇಷಿತಶ್ಚ ತೇನಾಯಂ ಕಾಶ್ಯಪೇನ ಮಮಾಂತಿಕಮ್||

12165008a ತಸ್ಯ ಪ್ರಿಯಂ ಕರಿಷ್ಯಾಮಿ ಸ ಹಿ ಮಾಮಾಶ್ರಿತಃ ಸದಾ|

12165008c ಭ್ರಾತಾ ಮೇ ಬಾಂಧವಶ್ಚಾಸೌ ಸಖಾ ಚ ಹೃದಯಂಗಮಃ||

“ಜನ್ಮದಿಂದ ಇವನು ವಿಪ್ರನು ಮತ್ತು ಆ ಮಹಾತ್ಮಾ ರಾಜಧರ್ಮನ ಸಖನು. ಆ ಕಶ್ಯಪಕುಮಾರನೇ ಇವನನ್ನು ನನ್ನಲ್ಲಿಗೆ ಕಳುಹಿಸಿದ್ದಾನೆ. ಅದುದರಿಂದ ಅವನ ಪ್ರಿಯಕಾರ್ಯವನ್ನು ಅವಶ್ಯ ಮಾಡುತ್ತೇನೆ. ಅವನು ಸದಾ ನನ್ನ ಮೇಲೆ ಭರವಸೆಯನ್ನಿಟ್ಟಿದ್ದಾನೆ ಮತ್ತು ಅವನು ನನ್ನ ಭ್ರಾತಾ, ಬಾಂಧವ ಮತ್ತು ಹಾರ್ದಿಕ ಮಿತ್ರನೂ ಹೌದು.

12165009a ಕಾರ್ತ್ತಿಕ್ಯಾಮದ್ಯ ಭೋಕ್ತಾರಃ ಸಹಸ್ರಂ ಮೇ ದ್ವಿಜೋತ್ತಮಾಃ|

12165009c ತತ್ರಾಯಮಪಿ ಭೋಕ್ತಾ ವೈ ದೇಯಮಸ್ಮೈ ಚ ಮೇ ಧನಮ್[2]||

ಇಂದು ಕಾರ್ತೀಕ ಪೂರ್ಣಿಮೆ. ಇಂದು ಸಹಸ್ರಾರು ದಿಜೋತ್ತಮರು ನನ್ನಲ್ಲಿ ಭೋಜನ ಮಾಡುತ್ತಾರೆ. ಅವರೊಂದಿಗೆ ಇವನೂ ಕೂಡ ಇಲ್ಲಿ ಭೋಜನ ಮಾಡುತ್ತಾನೆ. ಅವರಂತೆ ಇವನಿಗೂ ಕೂಡ ಧನವನ್ನು ನೀಡಿದರಾಯಿತು.”

12165010a ತತಃ ಸಹಸ್ರಂ ವಿಪ್ರಾಣಾಂ ವಿದುಷಾಂ ಸಮಲಂಕೃತಮ್|

12165010c ಸ್ನಾತಾನಾಮನುಸಂಪ್ರಾಪ್ತಮಹತಕ್ಷೌಮವಾಸಸಾಮ್||

ಆಗ ಅಲ್ಲಿಗೆ ಸಹಸ್ರಾರು ವಿದ್ವಾಂಸ ವಿಪ್ರರು ಸ್ನಾನಮಾಡಿ ರೇಷ್ಮೆ ವಸ್ತ್ರಗಳನ್ನುಟ್ಟು ಅಲಂಕಾರಮಾಡಿಕೊಂಡು ಅಲ್ಲಿಗೆ ಆಗಮಿಸಿದರು.

12165011a ತಾನಾಗತಾನ್ದ್ವಿಜಶ್ರೇಷ್ಠಾನ್ವಿರೂಪಾಕ್ಷೋ ವಿಶಾಂ ಪತೇ|

12165011c ಯಥಾರ್ಹಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ||

ವಿಶಾಂಪತೇ! ಆಗಮಿಸಿದ ಆ ದ್ವಿಜಶ್ರೇಷ್ಠರನ್ನು ವಿರೂಪಾಕ್ಷನು ಯಥಾರ್ಹವಾಗಿ ವಿಧಿಪೂರ್ವಕವಾಗಿ ಸ್ವಾಗತಿಸಿ ಸತ್ಕರಿಸಿದನು.

12165012a ಬೃಸ್ಯಸ್ತೇಷಾಂ ತು ಸಂನ್ಯಸ್ತಾ ರಾಕ್ಷಸೇಂದ್ರಸ್ಯ ಶಾಸನಾತ್|

12165012c ಭೂಮೌ ವರಕುಥಾಸ್ತೀರ್ಣಾಃ[3] ಪ್ರೇಷ್ಯೈರ್ಭರತಸತ್ತಮ||

ಭರತಸತ್ತಮ! ರಾಕ್ಷಸೇಂದ್ರನ ಆಜ್ಞೆಯಂತೆ ಸೇವಕರು ಅಲ್ಲಿ ನೆಲದ ಮೇಲೆ ಕುಶದ ಶ್ರೇಷ್ಠ ಆಸನಗಳನ್ನು ಹಾಸಿದರು.

12165013a ತಾಸು ತೇ ಪೂಜಿತಾ ರಾಜ್ಞಾ ನಿಷಣ್ಣಾ ದ್ವಿಜಸತ್ತಮಾಃ|

[4]12165013c ವ್ಯರಾಜಂತ ಮಹಾರಾಜ ನಕ್ಷತ್ರಪತಯೋ ಯಥಾ||

ಮಹಾರಾಜ! ಕುಳಿತುಕೊಂಡ ದ್ವಿಜಸತ್ತಮರನ್ನು ಪೂಜಿಸಿದ ರಾಜನು ಆಗ ನಕ್ಷತ್ರಪತಿ ಚಂದ್ರನಂತೆ ಕಂಗೊಳಿಸುತ್ತಿದ್ದನು.

12165014a ತತೋ ಜಾಂಬೂನದಾಃ ಪಾತ್ರೀರ್ವಜ್ರಾಂಕಾ ವಿಮಲಾಃ ಶುಭಾಃ|

12165014c ವರಾನ್ನಪೂರ್ಣಾ ವಿಪ್ರೇಭ್ಯಃ ಪ್ರಾದಾನ್ಮಧುಘೃತಾಪ್ಲುತಾಃ||

ಅನಂತರ ಅವನು ವಜ್ರಗಳನ್ನು ಹುದುಗಿಸಿದ್ದ ಬಂಗಾರದ ಸ್ವಚ್ಛ ಸುಂದರ ತಟ್ಟೆಗಳಲ್ಲಿ ತುಪ್ಪದಿಂದ ತಯಾರಿಸಿದ್ದ ಸಿಹಿಭಕ್ಷ್ಯವನ್ನು ಇಟ್ಟು ಬ್ರಾಹ್ಮಣರಿಗೆ ನೀಡಿದನು.

12165015a ತಸ್ಯ ನಿತ್ಯಂ ತಥಾಷಾಢ್ಯಾಂ ಮಾಘ್ಯಾಂ ಚ ಬಹವೋ ದ್ವಿಜಾಃ|

12165015c ಈಪ್ಸಿತಂ ಭೋಜನವರಂ ಲಭಂತೇ ಸತ್ಕೃತಂ ಸದಾ||

ಅವನಲ್ಲಿ ನಿತ್ಯವೂ ಆಷಾಢ ಮತ್ತು ಮಾಘಮಾಸಗಳ ಪೂರ್ಣಿಮೆಗಳಂದು ಅನೇಕ ದ್ವಿಜರು ಸತ್ಕಾರಪೂರ್ವಕ ತಮ್ಮ ಇಚ್ಛಾನುಸಾರವಾಗಿ ಉತ್ತಮ ಭೋಜನವನ್ನು ಮಾಡುತ್ತಿದ್ದರು.

12165016a ವಿಶೇಷತಸ್ತು ಕಾರ್ತ್ತಿಕ್ಯಾಂ ದ್ವಿಜೇಭ್ಯಃ ಸಂಪ್ರಯಚ್ಚತಿ|

12165016c ಶರದ್ವ್ಯಪಾಯೇ ರತ್ನಾನಿ ಪೌರ್ಣಮಾಸ್ಯಾಮಿತಿ ಶ್ರುತಿಃ||

ವಿಶೇಷವಾಗಿ ಕಾರ್ತೀಕ ಪೂರ್ಣಿಮೆಯಂದು ಶರದೃತುವು ಸಮಾಪ್ತವಾಗುವಾಗ ಅವನು ಬ್ರಾಹ್ಮಣರಿಗೆ ರತ್ನಗಳ ದಾನ ನೀಡುತ್ತಿದ್ದನು ಎಂದು ಕೇಳಿದ್ದೇವೆ.

12165017a ಸುವರ್ಣಂ ರಜತಂ ಚೈವ ಮಣೀನಥ ಚ ಮೌಕ್ತಿಕಮ್|

12165017c ವಜ್ರಾನ್ಮಹಾಧನಾಂಶ್ಚೈವ ವೈಡೂರ್ಯಾಜಿನರಾಂಕವಾನ್||

12165018a ರತ್ನರಾಶೀನ್ವಿನಿಕ್ಷಿಪ್ಯ ದಕ್ಷಿಣಾರ್ಥೇ ಸ ಭಾರತ|

12165018c ತತಃ ಪ್ರಾಹ ದ್ವಿಜಶ್ರೇಷ್ಠಾನ್ವಿರೂಪಾಕ್ಷೋ ಮಹಾಯಶಾಃ||

12165019a ಗೃಹ್ಣೀತ ರತ್ನಾನ್ಯೇತಾನಿ ಯಥೋತ್ಸಾಹಂ ಯಥೇಷ್ಟತಃ|

12165019c ಯೇಷು ಯೇಷು ಚ ಭಾಂಡೇಷು ಭುಕ್ತಂ ವೋ ದ್ವಿಜಸತ್ತಮಾಃ|

12165019e ತಾನ್ಯೇವಾದಾಯ ಗಚ್ಚಧ್ವಂ ಸ್ವವೇಶ್ಮಾನೀತಿ ಭಾರತ||

ಭಾರತ! ಭೋಜನಾನಂತರ ಬ್ರಾಹ್ಮಣರ ಸಮಕ್ಷಮದಲ್ಲಿ ಅನೇಕ ಚಿನ್ನ, ಬೆಳ್ಳಿ, ಮಣಿ, ಮುತ್ತು, ಬಹುಮೂಲ್ಯ ವಜ್ರ, ವೈಡೂರ್ಯ, ರಂಕುಮೃಗದ ಚರ್ಮ ಮತ್ತು ರತ್ನಗಳ ರಾಶಿಗಳನ್ನು ಮಾಡಿ ಮಹಾಬಲಿ ವಿರೂಪಾಕ್ಷನು ಆ ಶ್ರೇಷ್ಠ ಬ್ರಾಹ್ಮಣರಿಗೆ ಹೇಳಿದನು: “ದ್ವಿಜವರರೇ! ನೀವು ನಿಮ್ಮ ಇಚ್ಛೆ ಮತ್ತು ಉತ್ಸಾಹಗಳಿಗೆ ತಕ್ಕಂತೆ ಈ ರತ್ನಗಳನ್ನು ತೆಗೆದುಕೊಂಡು ಹೋಗಿ ಮತ್ತು ಯಾವ ಹರಿವಾಣಗಳಲ್ಲಿ ನೀವು ಭೋಜನವನ್ನು ಮಾಡಿದ್ದೀರೋ ಅವುಗಳನ್ನೂ ನಿಮ್ಮ ಮನೆಗಳಿಗೆ ಕೊಂಡೊಯ್ಯಿರಿ.”

12165020a ಇತ್ಯುಕ್ತವಚನೇ ತಸ್ಮಿನ್ರಾಕ್ಷಸೇಂದ್ರೇ ಮಹಾತ್ಮನಿ|

12165020c ಯಥೇಷ್ಟಂ ತಾನಿ ರತ್ನಾನಿ ಜಗೃಹುರ್ಬ್ರಾಹ್ಮಣರ್ಷಭಾಃ||

ಮಹಾತ್ಮ ರಾಕ್ಷಸೇಂದ್ರನು ಹೀಗೆ ಹೇಳಲು ಬ್ರಾಹ್ಮರ್ಷಭರು ಯಥೇಷ್ಟ ರತ್ನಗಳನ್ನು ತೆಗೆದುಕೊಂಡು ಹೋದರು.

12165021a ತತೋ ಮಹಾರ್ಹೈಸ್ತೇ ಸರ್ವೇ ರತ್ನೈರಭ್ಯರ್ಚಿತಾಃ ಶುಭೈಃ|

12165021c ಬ್ರಾಹ್ಮಣಾ ಮೃಷ್ಟವಸನಾಃ ಸುಪ್ರೀತಾಃ ಸ್ಮ ತದಾಭವನ್||

ಆಗ ಆ ಮಹಾರ್ಹ ಸುಂದರ ರತ್ನಗಳಿಂದ ಪೂಜಿತರಾದ ಉಜ್ವಲ ವಸ್ತ್ರಧಾರೀ ಬ್ರಾಹ್ಮಣರೆಲ್ಲರೂ ಪ್ರೀತಮನಸ್ಕರಾದರು.

12165022a ತತಸ್ತಾನ್ರಾಕ್ಷಸೇಂದ್ರಶ್ಚ ದ್ವಿಜಾನಾಹ ಪುನರ್ವಚಃ|

12165022c ನಾನಾದಿಗಾಗತಾನ್ರಾಜನ್ರಾಕ್ಷಸಾನ್ ಪ್ರತಿಷಿಧ್ಯ ವೈ||

12165023a ಅಧ್ಯೈಕದಿವಸಂ ವಿಪ್ರಾ ನ ವೋಽಸ್ತೀಹ ಭಯಂ ಕ್ವ ಚಿತ್|

12165023c ರಾಕ್ಷಸೇಭ್ಯಃ ಪ್ರಮೋದಧ್ವಮಿಷ್ಟತೋ ಯಾತ ಮಾಚಿರಮ್||

ರಾಜನ್! ಅನಂತರ ರಾಕ್ಷಸರಾಜ ವಿರೂಪಾಕ್ಷನು ನಾನಾ ದೇಶಗಳಿಂದ ಬಂದಿದ್ದ ರಾಕ್ಷಸರಿಗೆ ಹಿಂಸೆಯನ್ನು ನಿಷೇಧಿಸಿ ಬ್ರಾಹ್ಮಣರಿಗೆ ಹೇಳಿದನು: “ವಿಪ್ರಗಣವೇ! ಇಂದು ಒಂದು ದಿನ ನಿಮಗೆ ರಾಕ್ಷಸರಿಂದ ಯಾವ ರೀತಿಯ ಭಯವೂ ಇರುವುದಿಲ್ಲ. ಆದುದರಿಂದ ಆನಂದಿಸಿ ಮತ್ತು ಶೀಘ್ರವೇ ನಿಮ್ಮ ಅಭೀಷ್ಟ ಸ್ಥಳಗಳಿಗೆ ಹೊರಟುಹೋಗಿರಿ. ವಿಲಂಬಮಾಡಬೇಡಿ!”

12165024a ತತಃ ಪ್ರದುದ್ರುವುಃ ಸರ್ವೇ ವಿಪ್ರಸಂಘಾಃ ಸಮಂತತಃ|

12165024c ಗೌತಮೋಽಪಿ ಸುವರ್ಣಸ್ಯ ಭಾರಮಾದಾಯ ಸತ್ವರಃ||

12165025a ಕೃಚ್ಚ್ರಾತ್ಸಮುದ್ವಹನ್ವೀರ ನ್ಯಗ್ರೋಧಂ ಸಮುಪಾಗಮತ್|

12165025c ನ್ಯಷೀದಚ್ಚ ಪರಿಶ್ರಾಂತಃ ಕ್ಲಾಂತಶ್ಚ ಕ್ಷುಧಿತಶ್ಚ ಹ||

ಇದನ್ನು ಕೇಳಿ ಎಲ್ಲ ಬ್ರಾಹ್ಮಣ ಸಮುದಾಯವೂ ಎಲ್ಲ ದಿಕ್ಕುಗಳಲ್ಲಿ ಓಡಿ ಹೋಯಿತು. ಗೌತಮನೂ ಕೂಡ ಸುವರ್ಣದ ಭಾರವನ್ನು ಹೊತ್ತು ಅತ್ಯಂತ ಕಷ್ಟದಿಂದ ಎದ್ದೂ ಬಿದ್ದೂ ಬೇಗ ಬೇಗನೆ ನಡೆಯುತ್ತಾ ನ್ಯಗ್ರೋಧ ವೃಕ್ಷವನ್ನು ತಲುಪಿದನು. ಆಯಾಸಗೊಂಡು ಅಲ್ಲಿಯೇ ಕುಳಿತುಕೊಂಡನು. ಅವನು ಹಸಿದಿದ್ದನು ಮತ್ತು ಆಯಾಸಗೊಂಡಿದ್ದನು.

12165026a ತತಸ್ತಮಭ್ಯಗಾದ್ರಾಜನ್ರಾಜಧರ್ಮಾ ಖಗೋತ್ತಮಃ|

12165026c ಸ್ವಾಗತೇನಾಭ್ಯನಂದಚ್ಚ ಗೌತಮಂ ಮಿತ್ರವತ್ಸಲಃ||

ರಾಜನ್! ಆಗ ಅಲ್ಲಿಗೆ ಖಗೋತ್ತಮ ಮಿತ್ರವತ್ಸಲ ರಾಜಧರ್ಮನು ಆಗಮಿಸಿ ಗೌತಮನನ್ನು ಸ್ವಾಗತಿಸಿ ಅಭಿನಂದಿಸಿದನು.

12165027a ತಸ್ಯ ಪಕ್ಷಾಗ್ರವಿಕ್ಷೇಪೈಃ ಕ್ಲಮಂ ವ್ಯಪನಯತ್ಖಗಃ|

12165027c ಪೂಜಾಂ ಚಾಪ್ಯಕರೋದ್ಧೀಮಾನ್ಭೋಜನಂ ಚಾಪ್ಯಕಲ್ಪಯತ್||

ಆ ಧೀಮಾನ್ ಪಕ್ಷಿಯು ತನ್ನ ರೆಕ್ಕೆಗಳ ತುದಿಗಳನ್ನು ಚಲಿಸಿ ಅವನಿಗೆ ಗಾಳಿ ಬೀಸಿ ಅವನ ಎಲ್ಲ ಆಯಾಸವನ್ನೂ ದೂರಮಾಡಿದನು. ಅನಂತರ ಅವನನ್ನು ಪೂಜಿಸಿ ಅವನಿಗೆ ಭೋಜನದ ವ್ಯವಸ್ಥೆಯನ್ನೂ ಮಾಡಿದನು.

12165028a ಸ ಭುಕ್ತವಾನ್ಸುವಿಶ್ರಾಂತೋ ಗೌತಮೋಽಚಿಂತಯತ್ತದಾ|

12165028c ಹಾಟಕಸ್ಯಾಭಿರೂಪಸ್ಯ ಭಾರೋಽಯಂ ಸುಮಹಾನ್ಮಯಾ|

12165028e ಗೃಹೀತೋ ಲೋಭಮೋಹಾದ್ವೈ ದೂರಂ ಚ ಗಮನಂ ಮಮ||

ಊಟಮಾಡಿ ವಿಶ್ರಾಂತಿಪಡೆದ ಗೌತಮನು ಈ ರೀತಿ ಯೋಚಿಸತೊಡಗಿದನು: “ಮೋಹ-ಲೋಭಗಳಿಂದ ನಾನು ಈ ಮಹಾ ಭಾರವಾದ ಸುಂದರ ಚಿನ್ನದ ಗಂಟನ್ನು ಎತ್ತಿಕೊಂಡು ಬಂದೆ! ಇನ್ನೂ ನನಗೆ ಬಹಳ ದೂರ ಹೋಗಬೇಕಾಗಿದೆ.

12165029a ನ ಚಾಸ್ತಿ ಪಥಿ ಭೋಕ್ತವ್ಯಂ ಪ್ರಾಣಸಂಧಾರಣಂ ಮಮ|

12165029c ಕಿಂ ಕೃತ್ವಾ ಧಾರಯೇಯಂ ವೈ ಪ್ರಾಣಾನಿತ್ಯಭ್ಯಚಿಂತಯತ್||

ಮಾರ್ಗದಲ್ಲಿ ನನ್ನ ಪ್ರಾಣಗಳನ್ನು ಉಳಿಸುವಂತೆ ತಿನ್ನಲು ಏನೂ ಎಲ್ಲ. ಏನನ್ನು ಮಾಡಿ ನಾನು ನನ್ನ ಪ್ರಾಣಗಳನ್ನು ಉಳಿಸಿಕೊಳ್ಳಬಲ್ಲೆನು?” ಹೀಗೆ ಅವನು ಚಿಂತಾಮಗ್ನನಾದನು.

12165030a ತತಃ ಸ ಪಥಿ ಭೋಕ್ತವ್ಯಂ ಪ್ರೇಕ್ಷಮಾಣೋ ನ ಕಿಂ ಚನ|

12165030c ಕೃತಘ್ನಃ ಪುರುಷವ್ಯಾಘ್ರ ಮನಸೇದಮಚಿಂತಯತ್||

12165031a ಅಯಂ ಬಕಪತಿಃ ಪಾರ್ಶ್ವೇ ಮಾಂಸರಾಶಿಃ ಸ್ಥಿತೋ ಮಮ|

12165031c ಇಮಂ ಹತ್ವಾ ಗೃಹೀತ್ವಾ ಚ ಯಾಸ್ಯೇಽಹಂ ಸಮಭಿದ್ರುತಮ್||

ಪುರುಷವ್ಯಾಘ್ರ! ಮಾರ್ಗದಲ್ಲಿ ಅವನಿಗೆ ತಿನ್ನಲು ಏನೂ ಇಲ್ಲವೆನ್ನುವುದನ್ನು ಕಂಡ ಆ ಕೃತಘ್ನನು ಮನಸ್ಸಿನಲ್ಲಿಯೇ ಈ ರೀತಿ ಯೋಚಿಸಿದನು: “ಈ ಮಾಂಸರಾಶಿ ಬಕಪತಿಯು ನನ್ನ ಹತ್ತಿರವೇ  ಇದ್ದಾನಲ್ಲಾ! ಇವನನ್ನೇ ಕೊಂದು ತೆಗೆದುಕೊಂಡು ಇಲ್ಲಿಂದ ಬೇಗನೇ ಹೊರಡುತ್ತೇನೆ!””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕೃತಘ್ನೋಪಾಖ್ಯಾನೇ ಪಂಚಷಷ್ಟ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕೃತಘ್ನೋಪಾಖ್ಯಾನ ಎನ್ನುವ ನೂರಾಅರವತ್ತೈದನೇ ಅಧ್ಯಾಯವು.

[1] ವಿಶ್ವಸಸ್ವ (ಗೀತಾ ಪ್ರೆಸ್).

[2] ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಸ ಚಾದ್ಯ ದಿವಸಃ ಪುಣ್ಯೋ ಹ್ಯತಿಥಿಶ್ಚಾಯಮಾಗತಃ| ಸಂಕಲ್ಪಿತಂಚೈವ ಧನಂ ಕಿಂ ವಿಚಾರ್ಯಮತಃ ಪರಂ|| (ಗೀತಾ ಪ್ರೆಸ್).

[3] ವರಕುಶಾಃ ಸ್ತೀರ್ಣಾಃ (ಗೀತಾ ಪ್ರೆಸ್).

[4] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ತಿಲದರ್ಭೋದಕಏನಾಥ ಅರ್ಚಿತಾ ವಿಧಿವದ್ದ್ವಿಜಾಃ| ವಿಶ್ವೇಧೇವಾಃ ಸಪಿತರಃ ಸಾಗ್ನಯಶ್ಚೋಪಕಲ್ಪಿತಾಃ| ವಿಲಿಪ್ತಾಃ ಪುಶ್ಪವಂತಶ್ಚ ಸುಪ್ರಚಾರಾಃ ಸುಪೂಜಿತಾಃ|| (ಗೀತಾ ಪ್ರೆಸ್).

Comments are closed.