Shanti Parva: Chapter 157

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೭

ಕಾಮ, ಕ್ರೋಧ ಮೊದಲಾದ ಹದಿಮೂರು ದೋಷಗಳ ನಿರೂಪಣೆ ಮತ್ತು ಅವುಗಳ ನಾಶದ ಉಪಾಯ (೧-೧೮).

12157001 ಯುಧಿಷ್ಠಿರ ಉವಾಚ|

12157001a ಯತಃ ಪ್ರಭವತಿ ಕ್ರೋಧಃ ಕಾಮಶ್ಚ ಭರತರ್ಷಭ|

12157001c ಶೋಕಮೋಹೌ ವಿವಿತ್ಸಾ[1] ಚ ಪರಾಸುತ್ವಂ ತಥಾ ಮದಃ||

12157002a ಲೋಭೋ ಮಾತ್ಸರ್ಯಮೀರ್ಷ್ಯಾ ಚ ಕುತ್ಸಾಸೂಯಾ ಕೃಪಾ ತಥಾ|

12157002c ಏತತ್ಸರ್ವಂ ಮಹಾಪ್ರಾಜ್ಞ ಯಾಥಾತಥ್ಯೇನ ಮೇ ವದ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾಪ್ರಾಜ್ಞ! ಕ್ರೋಧ, ಕಾಮ, ಶೋಕ, ಮೋಹ, ಪಡೆದುಕೊಳ್ಳಬೇಕೆನ್ನುವ ಆಸೆ, ಇತರರನ್ನು ಕೊಲ್ಲುವ ಇಚ್ಛೆ, ಮದ, ಲೋಭ, ಮಾತ್ಸರ್ಯ, ಈರ್ಷ್ಯೆ, ನಿಂದನೆ, ದೋಷದೃಷ್ಟಿ ಮತ್ತು ಕಂಜೂಸಿ (ದೈನ್ಯಭಾವ) ಈ ದೋಷಗಳು ಎಲ್ಲಿಂದ ಉತ್ಪನ್ನವಾಗುತ್ತವೆ? ಇವೆಲ್ಲವನ್ನೂ ನನಗೆ ತಿಳಿಯುವಂತೆ ಯಥಾವತ್ತಾಗಿ ಹೇಳು.”

12157003 ಭೀಷ್ಮ ಉವಾಚ|

12157003a ತ್ರಯೋದಶೈತೇಽತಿಬಲಾಃ ಶತ್ರವಃ ಪ್ರಾಣಿನಾಂ ಸ್ಮೃತಾಃ|

12157003c ಉಪಾಸತೇ ಮಹಾರಾಜ ಸಮಸ್ತಾಃ ಪುರುಷಾನಿಹ||

ಭೀಷ್ಮನು ಹೇಳಿದನು: “ಮಹಾರಾಜ! ಈ ಹದಿಮೂರನ್ನು ಪ್ರಾಣಿಗಳ ಅತಿಬಲಶಾಲೀ ಶತ್ರುಗಳೆಂದು ಹೇಳಲಾಗಿದೆ. ಇವು ಇಲ್ಲಿ ಮನುಷ್ಯರನ್ನು ಎಲ್ಲ ಕಡೆಗಳಿಂದ ಮುತ್ತಿಕೊಂಡಿರುತ್ತವೆ.

12157004a ಏತೇ ಪ್ರಮತ್ತಂ ಪುರುಷಮಪ್ರಮತ್ತಾ ನುದಂತಿ[2] ಹಿ|

12157004c ವೃಕಾ ಇವ ವಿಲುಂಪಂತಿ ದೃಷ್ಟ್ವೈವ ಪುರುಷೇತರಾನ್||

ಇವು ಪ್ರಮತ್ತವಾಗಿದ್ದುಕೊಂಡು ಅಪ್ರಮತ್ತ ಪುರುಷನನ್ನು ಪೀಡಿಸುತ್ತವೆ. ಅಂಥಹ ಪುರುಷರನ್ನು ನೋಡಿದೊಡನೆಯೇ ಇವು ತೋಳಗಳಂತೆ ಬಲಪೂರ್ವಕವಾಗಿ ಅವನ ಮೇಲೆ ಬೀಳುತ್ತವೆ.

12157005a ಏಭ್ಯಃ ಪ್ರವರ್ತತೇ ದುಃಖಮೇಭ್ಯಃ ಪಾಪಂ ಪ್ರವರ್ತತೇ|

12157005c ಇತಿ ಮರ್ತ್ಯೋ ವಿಜಾನೀಯಾತ್ಸತತಂ ಭರತರ್ಷಭ||

ಭರತರ್ಷಭ! ಇವುಗಳಿಂದಲೇ ದುಃಖವುಂಟಾಗುತ್ತದೆ ಮತ್ತು ಇವುಗಳ ಪ್ರೇರಣೆಯಿಂದಲೇ ಮನುಷ್ಯನು ಪಾಪಕರ್ಮಗಳನ್ನೆಸಗುತ್ತಾನೆ. ಮನುಷ್ಯರು ಸದಾ ಇದನ್ನು ಗಮನದಲ್ಲಿಟ್ಟುಕೊಂಡಿರಬೇಕು.

12157006a ಏತೇಷಾಮುದಯಂ ಸ್ಥಾನಂ ಕ್ಷಯಂ ಚ ಪುರುಷೋತ್ತಮ|

12157006c ಹಂತ ತೇ ವರ್ತಯಿಷ್ಯಾಮಿ ತನ್ಮೇ ನಿಗದತಃ ಶೃಣು[3]||

ಪುರುಷೋತ್ತಮ! ನಿಲ್ಲು! ಇವುಗಳ ಉದಯ ಸ್ಥಾನ ಮತ್ತು ಕ್ಷಯಗಳ ಕುರಿತು ಹೇಳುತ್ತೇನೆ[4]. ನಾನು ಹೇಳುವುದನ್ನು ಕೇಳು.

12157007a ಲೋಭಾತ್ ಕ್ರೋಧಃ ಪ್ರಭವತಿ ಪರದೋಷೈರುದೀರ್ಯತೇ|

12157007c ಕ್ಷಮಯಾ ತಿಷ್ಠತೇ ರಾಜನ್ ಶ್ರೀಮಾಂಶ್ಚ[5] ವಿನಿವರ್ತತೇ||

ರಾಜನ್! ಶ್ರೀಮಾನ್! ಲೋಭದಿಂದ ಕ್ರೋಧವುಂಟಾಗುತ್ತದೆ ಮತ್ತು ಇತರರ ದೋಷಗಳನ್ನು ನೋಡುವುದರಿಂದ ಕ್ರೋಧವು ಹೆಚ್ಚಾಗುತ್ತದೆ. ಕ್ಷಮೆಯಿಂದ ಕ್ರೋಧವು ನಿಂತುಕೊಳ್ಳುತ್ತದೆ ಮತ್ತು ಕ್ಷಮೆಯಿಂದಲೇ ಹಿಂದೆ ಸರಿಯುತ್ತದೆ.

12157008a ಸಂಕಲ್ಪಾಜ್ಜಾಯತೇ ಕಾಮಃ ಸೇವ್ಯಮಾನೋ ವಿವರ್ಧತೇ|

[6]12157008c ಅವದ್ಯದರ್ಶನಾದ್ವ್ಯೇತಿ ತತ್ತ್ವಜ್ಞಾನಾಚ್ಚ ಧೀಮತಾಮ್||

ಕಾಮವು ಸಂಕಲ್ಪದಿಂದ ಹುಟ್ಟುತ್ತದೆ ಮತ್ತು ಅದರ ಸೇವೆಗೈಯುವುದರಿಂದ ಹೆಚ್ಚಾಗುತ್ತದೆ. ಧೀಮತರ ತತ್ತ್ವಜ್ಞಾನದಿಂದ ಮತ್ತು ಕಾಮವನ್ನು ಅವಲೋಕಿಸದೇ ಇರುವುದರಿಂದ ಅದು ನಷ್ಟವಾಗುತ್ತದೆ.

[7]12157009a ವಿರುದ್ಧಾನಿ ಹಿ ಶಾಸ್ತ್ರಾಣಿ ಪಶ್ಯಂತೀಹಾಲ್ಪಬುದ್ಧಯಃ|

12157009c ವಿವಿತ್ಸಾ ಜಾಯತೇ ತತ್ರ ತತ್ತ್ವಜ್ಞಾನಾನ್ನಿವರ್ತತೇ[8]||

ಧರ್ಮ ವಿರುದ್ಧ ಶಾಸ್ತ್ರಗಳನ್ನು ಅವಲೋಕಿಸುವ ಅಲ್ಪಬುದ್ಧಿಗಳಲ್ಲಿ ಅನುಚಿತ ಕರ್ಮಗಳನ್ನೆಸಗುವ ವಿವಿತ್ಸತೆಯು ಉತ್ಪನ್ನವಾಗುತ್ತದೆ. ಅದು ತತ್ತ್ವಜ್ಞಾನದಿಂದ ನಿವೃತ್ತಗೊಳ್ಳುತ್ತದೆ.

12157010a ಪ್ರೀತೇಃ ಶೋಕಃ ಪ್ರಭವತಿ ವಿಯೋಗಾತ್ತಸ್ಯ ದೇಹಿನಃ|

12157010c ಯದಾ ನಿರರ್ಥಕಂ ವೇತ್ತಿ ತದಾ ಸದ್ಯಃ ಪ್ರಣಶ್ಯತಿ||

ಪ್ರಿಯವಾದ ಜೀವಿಯ ವಿಯೋಗದಿಂದ ಶೋಕವುಂಟಾಗುತ್ತದೆ. ಶೋಕವು ನಿರರ್ಥಕವಾದುದು ಎಂದು ತಿಳಿದುಕೊಂಡಾಗ ಕೂಡಲೇ ಶೋಕದ ಶಾಂತಿಯಾಗಿಬಿಡುತ್ತದೆ.

12157011a ಪರಾಸುತಾ ಕ್ರೋಧಲೋಭಾದಭ್ಯಾಸಾಚ್ಚ ಪ್ರವರ್ತತೇ|

12157011c ದಯಯಾ ಸರ್ವಭೂತಾನಾಂ ನಿರ್ವೇದಾತ್ಸಾ ನಿವರ್ತತೇ||

ಕ್ರೋಧ, ಲೋಭ ಮತ್ತು ಅಭ್ಯಾಸದ ಕಾರಣಗಳಿಂದಾಗಿ ಪರಾಸುತಾ ಅರ್ಥಾತ್ ಇತರರನ್ನು ಕೊಲ್ಲುವ ಇಚ್ಛೆಯುಂಟಾಗುತ್ತದೆ. ಸಮಸ್ತ ಪ್ರಾಣಿಗಳ ಮೇಲೆ ದಯೆ ಮತ್ತು ವೈರಾಗ್ಯವುಂಟಾಗುವುದರಿಂದ ಅದು ನಿವೃತ್ತವಾಗಿಬಿಡುತ್ತದೆ.

12157012a ಸತ್ತ್ವತ್ಯಾಗಾತ್ತು ಮಾತ್ಸರ್ಯಮಹಿತಾನಿ ಚ ಸೇವತೇ|

12157012c ಏತತ್ತು ಕ್ಷೀಯತೇ ತಾತ ಸಾಧೂನಾಮುಪಸೇವನಾತ್||

ಅಯ್ಯಾ! ಸತ್ಯದ ತ್ಯಾಗ ಮತ್ತು ಅಹಿತರ ಸಂಗದೋಷದಿಂದ ಮಾತ್ಸರ್ಯವುಂಟಾಗುತ್ತದೆ. ಸತ್ಪುರುಷರ ಸೇವವೆಯಿಂದ ಮಾತ್ಸರ್ಯವು ಕ್ಷೀಣಿಸುತ್ತದೆ.

12157013a ಕುಲಾಜ್ಜ್ಞಾನಾತ್ತಥೈಶ್ವರ್ಯಾನ್ಮದೋ ಭವತಿ ದೇಹಿನಾಮ್|

12157013c ಏಭಿರೇವ ತು ವಿಜ್ಞಾತೈರ್ಮದಃ ಸದ್ಯಃ ಪ್ರಣಶ್ಯತಿ||

ತನ್ನ ಉತ್ತಮ ಕುಲ, ಜ್ಞಾನ ಮತ್ತು ಐಶ್ವರ್ಯದಿಂದ ಜೀವಿಗಳಿಗೆ ಮದವುಂಟಾಗುತ್ತದೆ. ಇದರ ಯಥಾರ್ಥ ಸ್ವರೂಪವನ್ನು ತಿಳಿದುಕೊಂಡಾಗ ಇದೂ ಕೂಡ ಕೂಡಲೇ ನಾಶವಾಗಿಬಿಡುತ್ತದೆ.

12157014a ಈರ್ಷ್ಯಾ ಕಾಮಾತ್ ಪ್ರಭವತಿ ಸಂಘರ್ಷಾಚ್ಚೈವ[9] ಭಾರತ|

12157014c ಇತರೇಷಾಂ ತು ಮರ್ತ್ಯಾನಾಂ[10] ಪ್ರಜ್ಞಯಾ ಸಾ ಪ್ರಣಶ್ಯತಿ||

ಭಾರತ! ಕಾಮದಿಂದ ಮತ್ತು ಇತರರ ಹರ್ಷಗಳಿಂದ ಈರ್ಷ್ಯೆಯುಂಟಾಗುತ್ತದೆ. ಮರ್ತ್ಯರ ಕುರಿತಾದ ಪ್ರಜ್ಞೆಯಿಂದ ಇದು ನಾಶವಾಗುತ್ತದೆ.

12157015a ವಿಭ್ರಮಾಲ್ಲೋಕಬಾಹ್ಯಾನಾಂ ದ್ವೇಷ್ಯೈರ್ವಾಕ್ಯೈರಸಂಗತೈಃ|

12157015c ಕುತ್ಸಾ ಸಂಜಾಯತೇ ರಾಜನ್ನುಪೇಕ್ಷಾಭಿಃ[11] ಪ್ರಶಾಮ್ಯತಿ||

ರಾಜನ್! ಲೋಕಬಹಿಷ್ಕೃತ ಅಸಂಗತರ ದ್ವೇಷಪೂರ್ಣ ಭ್ರಮಿಕ ಮಾತುಗಳನ್ನು ಕೇಳುವುದರಿಂದ ನಿಂದಿಸುವ ಅಭ್ಯಾಸವುಂಟಾಗುತ್ತದೆ. ಅವರನ್ನು ಉಪೇಕ್ಷಿಸುವುದರಿಂದ ಅದು ನಾಶವಾಗುತ್ತದೆ.

12157016a ಪ್ರತಿಕರ್ತುಮಶಕ್ಯಾಯ ಬಲಸ್ಥಾಯಾಪಕಾರಿಣೇ|

12157016c ಅಸೂಯಾ ಜಾಯತೇ ತೀವ್ರಾ ಕಾರುಣ್ಯಾದ್ವಿನಿವರ್ತತೇ||

ತಮಗೆ ಅಪಕಾರವನ್ನೆಸಗಿದ ಬಲಶಾಲಿಗಳಿಗೆ ಪ್ರತೀಕಾರವನ್ನೆಸಗಲು ಅಶಕ್ಯರಾದಾಗ ಅಸೂಯೆಯು ಹುಟ್ಟುತ್ತದೆ. ತೀವ್ರ ಕಾರುಣ್ಯದಿಂದ ಅದು ಹಿಂದೆ ಸರಿಯುತ್ತದೆ.

12157017a ಕೃಪಣಾನ್ಸತತಂ ದೃಷ್ಟ್ವಾ ತತಃ ಸಂಜಾಯತೇ ಕೃಪಾ|

12157017c ಧರ್ಮನಿಷ್ಠಾಂ ಯದಾ ವೇತ್ತಿ ತದಾ ಶಾಮ್ಯತಿ ಸಾ ಕೃಪಾ||

ಸತತವೂ ಕೃಪಣರನ್ನು ನೋಡುವುದರಿಂದ ಕೃಪಣತ್ವವು ಹುಟ್ಟುತ್ತದೆ. ಧರ್ಮನಿಷ್ಠರ ಉದಾರತೆಯನ್ನು ತಿಳಿದುಕೊಂಡಾಗ ಕೃಪಣತೆಯು ನಾಶವಾಗುತ್ತದೆ.

[12]12157018a ಏತಾನ್ಯೇವ ಜಿತಾನ್ಯಾಹುಃ ಪ್ರಶಮಾಚ್ಚ ತ್ರಯೋದಶ|

12157018c ಏತೇ ಹಿ ಧಾರ್ತರಾಷ್ಟ್ರಾಣಾಂ ಸರ್ವೇ ದೋಷಾಸ್ತ್ರಯೋದಶ|

12157018e ತ್ವಯಾ ಸರ್ವಾತ್ಮನಾ ನಿತ್ಯಂ ವಿಜಿತಾ ಜೇಷ್ಯಸೇ ಚ ತಾನ್[13]||

ಈ ಹದಿಮೂರು ದೋಷಗಳನ್ನು ಶಾಂತಿಯ ಮೂಲಕ ಗೆಲ್ಲಬಹುದು ಎಂದು ಹೇಳುತ್ತಾರೆ. ಧಾರ್ತರಾಷ್ಟ್ರರಲ್ಲಿ ಈ ಎಲ್ಲ ಹದಿಮೂರು ದೋಷಗಳೂ ಇದ್ದವು. ನಿತ್ಯವೂ ಸರ್ವಾತ್ಮನಾಗಿರುವ ನೀನು ಇವರೆಲ್ಲರನ್ನೂ ಗೆದ್ದಿರುವೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಲೋಭನಿರೂಪಣೇ ಸಪ್ತಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಲೋಭನಿರೂಪಣೆ ಎನ್ನುವ ನೂರಾಐವತ್ತೇಳನೇ ಅಧ್ಯಾಯವು.

[1] ವಿಧಿತ್ಸಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ವಿವಿತ್ಸಾ ಎಂದರೆ ಪಡೆದುಕೊಳ್ಳಬೇಕೆನ್ನುವ ಆಸೆ (ಜಿ.ಎನ್, ಚಕ್ರವರ್ತಿ, ಸಂಸ್ಕೃತ-ಕನ್ನಡ ನಿಘಂಟು) ಮತ್ತು ವಿಧಿತ್ಸಾ ಎಂದರೆ ಶಾಸ್ತ್ರಗಳ ವಿರುದ್ಧ ಹೋಗುವುದು. ಮುಂದಿನ ಶ್ಲೋಕ ೯ನ್ನು ನೋಡಿದರೆ ವಿಧಿತ್ಸಾ ಎನ್ನುವುದೇ ಸರಿಯೆಂದು ತೋರುತ್ತದೆ.

[2] ಪುರುಷಮಪ್ರಮತ್ತಾಸ್ತುದಂತಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಏತೇಷಾಮುದಯಂ ಸ್ಥಾನಂ ಕ್ಷಯಂ ಚ ಪೃಥಿವೀಪತೇ| ಹಂತ ತೇ ಕಥಯಿಷ್ಯಾಮಿ ಕ್ರೋಧಸ್ಯೋತ್ಪತ್ತಿಮಾದಿತಃ|| ಯಥಾತತ್ತ್ವಂ ಕ್ಷಿತಿಪತೇ ತದಿಹೈಕಮನಾಃ ಶೃಣು| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ಈ ಮುಂದಿನ ಶ್ಲೋಕಗಳಲ್ಲಿ ಕುತ್ಸ ಮತ್ತು ಮೋಹ ಇವುಗಳ ನಿರೂಪಣೆಗಳಿಲ್ಲ. ಆದರೆ ಗೀತಾ ಪ್ರೆಸ್ ನಲ್ಲಿ ಮೋಹದ ನಿರೂಪಣೆಯಿದೆ. ಕುತ್ಸದ ನಿರೂಪಣೆಯಿಲ್ಲ.

[5] ಕ್ಷಮಯಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[6] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದೂವರೆ ಅಧಿಕ ಶ್ಲೋಕವಿದೆ: ಯದಾ ಪ್ರಾಜ್ಞೋ ವಿರಮತೇ ತದಾ ಸದ್ಯಃ ಪ್ರಣಶ್ಯತಿ|| ಪರಾಸುತಾ ಕ್ರೋಧಲೋಭಾದಭ್ಯಾಸಾಚ್ಚ ಪ್ರವರ್ತತೇ| ದಯಯಾ ಸರ್ವಭೂತಾನಾಂ ನಿರ್ವೇದಾತ್ಸಾ ನಿವರ್ತತೇ||

[7] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಜ್ಞಾನಪ್ರಭವೋ ಮೋಹಃ ಪಾಪಾಭ್ಯಾಸಾತ್ ಪ್ರವರ್ತತೇ| ಯದಾ ಪ್ರಾಜ್ಞೇಷು ರಮತೇ ತದಾ ಸದ್ಯಃ ಪ್ರಣಶ್ಯತಿ|| ಮೋಹವು ಹದಿಮೂರು ದೋಷಗಳಲ್ಲಿ ಸೇರಿಕೊಂಡಿರುವುದರಿಂದ ಈ ಶ್ಲೋಕವು ಅಗತ್ಯವಿದೆ ಎಂದು ತೋರುತ್ತದೆ.

[8] ವಿರುದ್ಧಾನೀಹ ಶಾಸ್ತ್ರಾಣಿ ಯೇ ಪಶ್ಯಂತಿ ಕುರೂದ್ವಹ| ವಿಧಿತ್ಸಾ ಜಾಯತೇ ತೇಷಾಂ ತತ್ತ್ವಜ್ಞಾನಾನ್ನಿವರ್ತತೇ|| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[9] ಸಂಹರ್ಷಾಚ್ಚೈವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇದೇ ಇಲ್ಲಿ ಸರಿಯೆಂದು ತೋರುತ್ತದೆ.

[10] ಸತ್ತ್ವಾನಾಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[11] ರಾಜನ್ ಲೋಕಾನ್ ಪ್ರೇಕ್ಷ್ಯಾಭಿಶಾಮ್ಯತಿ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[12] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಜ್ಞಾನಪ್ರಭವೋ ಲೋಭೋ ಭೂತಾನಾಂ ದೃಶ್ಯತೇ ಸದಾ| ಅಸ್ಥಿರತ್ವಂ ಚ ಭೋಗಾನಾಂ ದೃಷ್ಟ್ವಾ ಜ್ಞಾತ್ವಾ ನಿವರ್ತತೇ||

[13] ತ್ವಯಾ ಸತ್ಯಾರ್ಥಿನಾ ನಿತ್ಯಂ ವಿಜಿತಾ ಜ್ಯೇಷ್ಠಸೇವನಾತ್| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.