Shanti Parva: Chapter 156

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೬

ಸತ್ಯದ ಲಕ್ಷಣ, ಸ್ವರೂಪ ಮತ್ತು ಮಹಿಮೆಯ ವರ್ಣನೆ (೧-೨೬).

12156001 ಯುಧಿಷ್ಠಿರ ಉವಾಚ|

12156001a ಸತ್ಯಂ ಧರ್ಮೇ ಪ್ರಶಂಸಂತಿ ವಿಪ್ರರ್ಷಿಪಿತೃದೇವತಾಃ|

12156001c ಸತ್ಯಮಿಚ್ಚಾಮ್ಯಹಂ ಶ್ರೋತುಂ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ವಿಪ್ರರ್ಷಿಗಳು, ಪಿತೃಗಳು ಮತ್ತು ದೇವತೆಗಳು ಧರ್ಮದಲ್ಲಿ ಸತ್ಯವನ್ನೇ ಪ್ರಶಂಸಿಸುತ್ತಾರೆ. ಸತ್ಯದ ಕುರಿತು ಕೇಳಲು ಬಯಸುತ್ತೇನೆ. ಅದರ ಕುರಿತು ಹೇಳು.

12156002a ಸತ್ಯಂ ಕಿಂಲಕ್ಷಣಂ ರಾಜನ್ಕಥಂ ವಾ ತದವಾಪ್ಯತೇ|

12156002c ಸತ್ಯಂ ಪ್ರಾಪ್ಯ ಭವೇತ್ಕಿಂ ಚ ಕಥಂ ಚೈವ ತದುಚ್ಯತೇ||

ರಾಜನ್! ಸತ್ಯದ ಲಕ್ಷಣವೇನು? ಅದನ್ನು ಹೇಗೆ ಪಡೆದುಕೊಳ್ಳಬಹುದು? ಸತ್ಯವನ್ನು ಪಾಲಿಸುವುದರಲ್ಲಿ ಯಾವ ಲಾಭವಿದೆ? ಅದು ಹೇಗಿರುತ್ತದೆ ಎಂದು ಹೇಳುತ್ತಾರೆ?”

12156003 ಭೀಷ್ಮ ಉವಾಚ|

12156003a ಚಾತುರ್ವರ್ಣ್ಯಸ್ಯ ಧರ್ಮಾಣಾಂ ಸಂಕರೋ ನ ಪ್ರಶಸ್ಯತೇ|

12156003c ಅವಿಕಾರಿತಮಂ ಸತ್ಯಂ ಸರ್ವವರ್ಣೇಷು ಭಾರತ||

ಭೀಷ್ಮನು ಹೇಳಿದನು: “ಭಾರತ! ನಾಲ್ಕೂ ವರ್ಣದವರ ಸಮ್ಮಿಶ್ರಣವನ್ನು ಉತ್ತಮವೆಂದು ಹೇಳುವುದಿಲ್ಲ. ನಿರ್ವಿಕಾರ ಸತ್ಯವು ಸರ್ವವರ್ಣದವರಲ್ಲಿಯೂ ಇದೆ.

12156004a ಸತ್ಯಂ ಸತ್ಸು ಸದಾ ಧರ್ಮಃ ಸತ್ಯಂ ಧರ್ಮಃ ಸನಾತನಃ|

12156004c ಸತ್ಯಮೇವ ನಮಸ್ಯೇತ ಸತ್ಯಂ ಹಿ ಪರಮಾ ಗತಿಃ||

ಸತ್ಪುರುಷರ ಧರ್ಮವು ಸದಾ ಸತ್ಯವೇ ಆಗಿದೆ. ಸತ್ಯವು ಸನಾತನ ಧರ್ಮವು. ಸತ್ಯಕ್ಕೇ ನಮಸ್ಕರಿಸಬೇಕು ಏಕೆಂದರೆ ಸತ್ಯವೇ ಪರಮ ಗತಿಯು.

12156005a ಸತ್ಯಂ ಧರ್ಮಸ್ತಪೋ ಯೋಗಃ ಸತ್ಯಂ ಬ್ರಹ್ಮ ಸನಾತನಮ್|

12156005c ಸತ್ಯಂ ಯಜ್ಞಃ ಪರಃ ಪ್ರೋಕ್ತಃ ಸತ್ಯೇ ಸರ್ವಂ ಪ್ರತಿಷ್ಠಿತಮ್||

ಸತ್ಯವೇ ಧರ್ಮ, ತಪಸ್ಸು ಮತ್ತು ಯೋಗವು. ಸತ್ಯವು ಸನಾತನ ಬ್ರಹ್ಮವು. ಸತ್ಯವನ್ನು ಪರಮ ಯಜ್ಞವೆಂದು ಹೇಳುತ್ತಾರೆ. ಸತ್ಯದಲ್ಲಿಯೇ ಎಲ್ಲವೂ ಪ್ರತಿಷ್ಠಿತಗೊಂಡಿವೆ.

12156006a ಆಚಾರಾನಿಹ ಸತ್ಯಸ್ಯ ಯಥಾವದನುಪೂರ್ವಶಃ|

12156006c ಲಕ್ಷಣಂ ಚ ಪ್ರವಕ್ಷ್ಯಾಮಿ ಸತ್ಯಸ್ಯೇಹ ಯಥಾಕ್ರಮಮ್||

ಈಗ ನಾನು ಸತ್ಯದ ಆಚಾರ ಮತ್ತು ಲಕ್ಷಣಗಳನ್ನು ಯಥಾವತ್ತಾಗಿ ಹೇಳುತ್ತೇನೆ.

12156007a ಪ್ರಾಪ್ಯತೇ ಹಿ ಯಥಾ ಸತ್ಯಂ ತಚ್ಚ ಶ್ರೋತುಂ ತ್ವಮರ್ಹಸಿ|

12156007c ಸತ್ಯಂ ತ್ರಯೋದಶವಿಧಂ ಸರ್ವಲೋಕೇಷು ಭಾರತ||

ಹಾಗೆಯೇ ಸತ್ಯವು ಹೇಗೆ ಪ್ರಾಪ್ತವಾಗುತ್ತದೆ ಎನ್ನುವುದನ್ನೂ ನೀನು ಕೇಳಬೇಕು. ಭಾರತ! ಸರ್ವಲೋಕಗಳಲ್ಲಿ ಸತ್ಯವು ಈ ಹದಿಮೂರು ವಿಧಗಳಲ್ಲಿದೆ.

12156008a ಸತ್ಯಂ ಚ ಸಮತಾ ಚೈವ ದಮಶ್ಚೈವ ನ ಸಂಶಯಃ|

12156008c ಅಮಾತ್ಸರ್ಯಂ ಕ್ಷಮಾ ಚೈವ ಹ್ರೀಸ್ತಿತಿಕ್ಷಾನಸೂಯತಾ||

12156009a ತ್ಯಾಗೋ ಧ್ಯಾನಮಥಾರ್ಯತ್ವಂ ಧೃತಿಶ್ಚ ಸತತಂ ಸ್ಥಿರಾ|

12156009c ಅಹಿಂಸಾ ಚೈವ ರಾಜೇಂದ್ರ ಸತ್ಯಾಕಾರಾಸ್ತ್ರಯೋದಶ||

ರಾಜೇಂದ್ರ! ಸತ್ಯ, ಸಮತಾ, ದಮೆ, ಅಮಾತ್ಸರ್ಯ, ಕ್ಷಮೆ, ಲಜ್ಜೆ, ಸಹನಶೀಲನೆ, ಅನಸೂಯತೆ, ತ್ಯಾಗ, ಧ್ಯಾನ, ಆರ್ಯತ್ವ ಅಂದರೆ ಶ್ರೇಷ್ಠ ಆಚರಣೆ, ಸತತ ಸ್ಥಿರತೆಯಿಂದಿರುವ ಧೃತಿ, ಮತ್ತು ಅಹಿಂಸಾ – ಈ ಹದಿಮೂರು ಸತ್ಯದ ಆಕಾರಗಳು.

12156010a ಸತ್ಯಂ ನಾಮಾವ್ಯಯಂ ನಿತ್ಯಮವಿಕಾರಿ ತಥೈವ ಚ|

12156010c ಸರ್ವಧರ್ಮಾವಿರುದ್ಧಂ ಚ ಯೋಗೇನೈತದವಾಪ್ಯತೇ||

ನಿತ್ಯವೂ ಒಂದೇ ಆಗಿದ್ದು, ಅವಿನಾಶಿಯೂ ಅವಿಕಾರಿಯೂ ಆಗಿರುವುದೇ ಸತ್ಯ. ಸರ್ವಧರ್ಮಗಳಿಗೂ ಅವಿರೋಧವಾಗಿರುವ ಯೋಗದಿಂದಲೇ ಸತ್ಯದ ಪ್ರಾಪ್ತಿಯಾಗುತ್ತದೆ.

12156011a ಆತ್ಮನೀಷ್ಟೇ ತಥಾನಿಷ್ಟೇ ರಿಪೌ ಚ ಸಮತಾ ತಥಾ|

12156011c ಇಚ್ಚಾದ್ವೇಷಕ್ಷಯಂ ಪ್ರಾಪ್ಯ ಕಾಮಕ್ರೋಧಕ್ಷಯಂ ತಥಾ||

ತನ್ನ ಇಷ್ಟವಾಗಿರುವವರಲ್ಲಿ ಮತ್ತು ಅನಿಷ್ಟ ಶತ್ರುಗಳಲ್ಲಿ ಸಮನಾಗಿರುವುದೇ ಸಮತೆಯು. ಇಚ್ಛೆ (ರಾಗ), ದ್ವೇಷ ಹಾಗೂ ಕಾಮ-ಕ್ರೋಧಗಳನ್ನು ಕಳೆದುಕೊಳ್ಳುವುದೇ ಸಮತೆಯನ್ನು ಪಡೆದುಕೊಳ್ಳುವ ಉಪಾಯವು.

12156012a ದಮೋ ನಾನ್ಯಸ್ಪೃಹಾ ನಿತ್ಯಂ ಧೈರ್ಯಂ ಗಾಂಭೀರ್ಯಮೇವ ಚ|

12156012c ಅಭಯಂ ಕ್ರೋಧಶಮನಂ[1] ಜ್ಞಾನೇನೈತದವಾಪ್ಯತೇ||

ಬೇರೆಯವರ ವಸ್ತುಗಳನ್ನು ಬಯಸದೇ ಇರುವುದು, ಸದಾ ಗಂಭೀರವಾಗಿರುವುದು ಮತ್ತು ಧೈರ್ಯದಿಂದಿರುವುದು, ಭಯವನ್ನು ತ್ಯಜಿಸುವುದು ಮತ್ತು ಕ್ರೋಧವನ್ನು ತಣಿಸಿಕೊಳ್ಳುವುದು ಇವೆಲ್ಲವೂ ದಮೆಯ ಲಕ್ಷಣಗಳು. ಇದು ಜ್ಞಾನದಿಂದ ಪ್ರಾಪ್ತವಾಗುತ್ತದೆ.

12156013a ಅಮಾತ್ಸರ್ಯಂ ಬುಧಾಃ ಪ್ರಾಹುರ್ದಾನಂ ಧರ್ಮೇ ಚ ಸಂಯಮಮ್|

12156013c ಅವಸ್ಥಿತೇನ ನಿತ್ಯಂ ಚ ಸತ್ಯೇನಾಮತ್ಸರೀ ಭವೇತ್||

ದಾನ-ಧರ್ಮಗಳನ್ನು ಮಾಡುವಾಗ ಮನಸ್ಸನ್ನು ಸಂಯಮದಲ್ಲಿಟ್ಟುಕೊಳ್ಳುವುದನ್ನೇ ಅಮಾತ್ಸರ್ಯ ಎಂದು ತಿಳಿದವರು ಹೇಳುತ್ತಾರೆ. ನಿತ್ಯವೂ ಸತ್ಯಪಾಲನೆಯಿಂದಲೇ ಮನುಷ್ಯನು ಅಮತ್ಸರಿಯಾಗುತ್ತಾನೆ.

12156014a ಅಕ್ಷಮಾಯಾಃ ಕ್ಷಮಾಯಾಶ್ಚ ಪ್ರಿಯಾಣೀಹಾಪ್ರಿಯಾಣಿ ಚ|

12156014c ಕ್ಷಮತೇ ಸರ್ವತಃ ಸಾಧುಃ ಸಾಧ್ವಾಪ್ನೋತಿ ಚ ಸತ್ಯವಾನ್||

ಪ್ರಿಯವಾಗಿರಲೀ ಮತ್ತು ಅಪ್ರಿಯವಾಗಿರಲೀ ಅಕ್ಷಮ್ಯವಾದವುಗಳನ್ನೂ ಕ್ಷಮಿಸುವುದೇ ಕ್ಷಮೆ. ಸತ್ಯವಂತ ಸಾಧುವಿಗೇ ಕ್ಷಮೆಯು ಪ್ರಾಪ್ತವಾಗುತ್ತದೆ.

12156015a ಕಲ್ಯಾಣಂ ಕುರುತೇ ಗಾಢಂ ಹ್ರೀಮಾನ್ನ ಶ್ಲಾಘತೇ ಕ್ವ ಚಿತ್[2]|

12156015c ಪ್ರಶಾಂತವಾಙ್ಮನಾ ನಿತ್ಯಂ ಹ್ರೀಸ್ತು ಧರ್ಮಾದವಾಪ್ಯತೇ||

ಗಾಢವಾದ ಕಲ್ಯಾಣವನ್ನು ಮಾಡಿಯೂ ತನ್ನನ್ನು ತಾನು ಹೊಗಳಿಕೊಳ್ಳದಿರುವವನೇ ಲಜ್ಜಾವಂತನು. ಪ್ರಶಾಂತ ಮಾತು-ಮನಸ್ಸುಗಳಿಂದ ಮತ್ತು ಧರ್ಮದಿಂದ ಲಜ್ಜೆಯು ಪ್ರಾಪ್ತವಾಗುತ್ತದೆ.

12156016a ಧರ್ಮಾರ್ಥಹೇತೋಃ ಕ್ಷಮತೇ ತಿತಿಕ್ಷಾ ಕ್ಷಾಂತಿರುಚ್ಯತೇ|

12156016c ಲೋಕಸಂಗ್ರಹಣಾರ್ಥಂ ತು ಸಾ ತು ಧೈರ್ಯೇಣ ಲಭ್ಯತೇ||

ಧರ್ಮಾರ್ಥಗಳಿಗಾಗಿ ಕಷ್ಟಗಳನ್ನು ಸಹಿಸಿಕೊಳ್ಳುವುದನ್ನೇ ತಿತಿಕ್ಷಾ ಅಥವಾ ಸಹನಶೀಲತೆ ಎನ್ನುತ್ತಾರೆ. ಲೋಕಸಂಗ್ರಹಣಾರ್ಥವಾಗಿ ಅದನ್ನು ಪಾಲಿಸಬೇಕು. ಅದು ಧೈರ್ಯದಿಂದ ಉಪಲಬ್ಧವಾಗುತ್ತದೆ.

12156017a ತ್ಯಾಗಃ ಸ್ನೇಹಸ್ಯ ಯಸ್ತ್ಯಾಗೋ ವಿಷಯಾಣಾಂ ತಥೈವ ಚ|

12156017c ರಾಗದ್ವೇಷಪ್ರಹೀಣಸ್ಯ ತ್ಯಾಗೋ ಭವತಿ ನಾನ್ಯಥಾ||

ವಿಷಯಗಳ ಕುರಿತಾದ ಸ್ನೇಹವನ್ನು ತ್ಯಜಿಸುವುದೇ ತ್ಯಾಗವು. ರಾಗ-ದ್ವೇಷಗಳನ್ನು ಕಳೆದುಕೊಳ್ಳುವುದರಿಂದಲೇ ತ್ಯಾಗದ ಸಿದ್ಧಿಯಾಗುತ್ತದೆ. ಅನ್ಯಥಾ ಇಲ್ಲ.

12156018a ಆರ್ಯತಾ ನಾಮ ಭೂತಾನಾಂ ಯಃ ಕರೋತಿ ಪ್ರಯತ್ನತಃ|

12156018c ಶುಭಂ ಕರ್ಮ ನಿರಾಕಾರೋ ವೀತರಾಗತ್ವಮೇವ ಚ||

ಪ್ರಾಣಿಗಳ ಹಿತಕ್ಕಾಗಿ ಪ್ರಯತ್ನಪೂರ್ವಕವಾಗಿ ಶುಭ ಕರ್ಮಗಳನ್ನು ನಿರಾಕಾರನಾಗಿ ಮಾಡುತ್ತಿರುವುದಕ್ಕೇ ಆರ್ಯತಾ ಎಂಬ ಹೆಸರು. ಇದು ಅನುರಾಗವನ್ನು ತೊರೆಯುವುದರಿಂದಲೇ ಪ್ರಾಪ್ತವಾಗುತ್ತದೆ.

12156019a ಧೃತಿರ್ನಾಮ ಸುಖೇ ದುಃಖೇ ಯಥಾ ನಾಪ್ನೋತಿ ವಿಕ್ರಿಯಾಮ್|

12156019c ತಾಂ ಭಜೇತ ಸದಾ ಪ್ರಾಜ್ಞೋ ಯ ಇಚ್ಚೇದ್ಭೂತಿಮಾತ್ಮನಃ||

ಸುಖ ಅಥವಾ ದುಃಖವೊದಗಿದಾಗ ಮನೋವಿಕಾರಹೊಂದದೇ ಇರುವುದರ ಹೆಸರು ಧೃತಿ. ತನ್ನ ಉನ್ನತಿಯನ್ನು ಬಯಸುವ ಪ್ರಾಜ್ಞನು ಸದಾ ತನ್ನಲ್ಲಿ ಧೃತಿಯನ್ನಿಟ್ಟುಕೊಂಡಿರಬೇಕು.

12156020a ಸರ್ವಥಾ ಕ್ಷಮಿಣಾ ಭಾವ್ಯಂ ತಥಾ ಸತ್ಯಪರೇಣ ಚ|

12156020c ವೀತಹರ್ಷಭಯಕ್ರೋಧೋ ಧೃತಿಮಾಪ್ನೋತಿ ಪಂಡಿತಃ||

ಸರ್ವಥಾ ಕ್ಷಮಿಯಾಗಿರಬೇಕು ಮತ್ತು ಸತ್ಯ ತತ್ಪರನಾಗಿರಬೇಕು. ಹರ್ಷ-ಭಯ-ಕ್ರೋಧಗಳನ್ನು ಕಳೆದುಕೊಂಡ ಪಂಡಿತನು ಧೃತಿಯನ್ನು ಹೊಂದುತ್ತಾನೆ.

12156021a ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಗಿರಾ|

12156021c ಅನುಗ್ರಹಶ್ಚ ದಾನಂ ಚ ಸತಾಂ ಧರ್ಮಃ ಸನಾತನಃ||

ಮನಸ್ಸು, ಮಾತು ಮತ್ತು ಕರ್ಮಗಳಿಂದ ಸರ್ವಭೂತಗಳಿಗೂ ದ್ರೋಹವನ್ನೆಸಗದೇ ಇರುವುದು, ದಯೆ ಮತ್ತು ದಾನ ಇವು ಸತ್ಪುರುಷರ ಸನಾತನ ಧರ್ಮವು.

12156022a ಏತೇ ತ್ರಯೋದಶಾಕಾರಾಃ ಪೃಥಕ್ಸತ್ಯೈಕಲಕ್ಷಣಾಃ|

12156022c ಭಜಂತೇ ಸತ್ಯಮೇವೇಹ ಬೃಂಹಯಂತಿ ಚ ಭಾರತ||

ಭಾರತ! ಈ ಹದಿಮೂರು ಆಕಾರಗಳ ಪ್ರತ್ಯೇಕ ಪ್ರತ್ಯೇಕ ಧರ್ಮಗಳು ಸತ್ಯದ ಲಕ್ಷಣಗಳೇ ಆಗಿವೆ. ಇವುಗಳು ಸತ್ಯವನ್ನೇ ಆಶ್ರಯಿಸಿವೆ ಮತ್ತು ಸತ್ಯವನ್ನೇ ವೃದ್ಧಿಸುತ್ತವೆ.

12156023a ನಾಂತಃ ಶಕ್ಯೋ ಗುಣಾನಾಂ ಹಿ ವಕ್ತುಂ ಸತ್ಯಸ್ಯ ಭಾರತ|

12156023c ಅತಃ ಸತ್ಯಂ ಪ್ರಶಂಸಂತಿ ವಿಪ್ರಾಃ ಸಪಿತೃದೇವತಾಃ||

ಭಾರತ! ಸತ್ಯದ ಅನಂತ ಗುಣಗಳನ್ನು ಹೇಳಲು ಶಕ್ಯವಿಲ್ಲ. ಆದುದರಿಂದ ಪಿತೃಗಳು ಮತ್ತು ದೇವತೆಗಳೊಂದಿಗೆ ವಿಪ್ರರು ಸತ್ಯವನ್ನು ಪ್ರಶಂಸಿಸುತ್ತಾರೆ.

12156024a ನಾಸ್ತಿ ಸತ್ಯಾತ್ಪರೋ ಧರ್ಮೋ ನಾನೃತಾತ್ಪಾತಕಂ ಪರಮ್|

12156024c ಸ್ಥಿತಿರ್ಹಿ ಸತ್ಯಂ ಧರ್ಮಸ್ಯ ತಸ್ಮಾತ್ಸತ್ಯಂ ನ ಲೋಪಯೇತ್||

ಸತ್ಯಕ್ಕಿಂತಲೂ ಪರಮ ಧರ್ಮವಿಲ್ಲ. ಸುಳ್ಳಿಗಿಂತ ಪರಮ ಪಾತಕವಿಲ್ಲ. ಸತ್ಯವೇ ಧರ್ಮದ ಸ್ಥಿತಿಯು. ಆದುದರಿಂದ ಸತ್ಯವನ್ನು ಎಂದೂ ಲೋಪಗೊಳಿಸಬಾರದು.

12156025a ಉಪೈತಿ ಸತ್ಯಾದ್ದಾನಂ ಹಿ ತಥಾ ಯಜ್ಞಾಃ ಸದಕ್ಷಿಣಾಃ|

12156025c ವ್ರತಾಗ್ನಿಹೋತ್ರಂ ವೇದಾಶ್ಚ ಯೇ ಚಾನ್ಯೇ ಧರ್ಮನಿಶ್ಚಯಾಃ||

ದಾನ, ದಕ್ಷಿಣಾಯುಕ್ತ ಯಜ್ಞಗಳು, ವ್ರತಾಗ್ನಿಹೋಮಗಳು, ವೇದಗಳು ಮತ್ತು ಅನ್ಯ ಧರ್ಮನಿಶ್ಚಯಗಳಿಂದ ದೊರೆಯುವ ಫಲವನ್ನು ಸತ್ಯದಿಂದಲೇ ಪಡೆದುಕೊಳ್ಳಬಹುದು.

12156026a ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಮ್|

12156026c ಅಶ್ವಮೇಧಸಹಸ್ರಾದ್ಧಿ ಸತ್ಯಮೇವಾತಿರಿಚ್ಯತೇ||

ಸಹಸ್ರ ಅಶ್ವಮೇಧಗಳ ಫಲ ಮತ್ತು ಸತ್ಯ ಇವೆರಡರ ತುಲನೆ ಮಾಡಿದರೆ ನಿಶ್ಚಯವಾಗಿಯೂ ಸಹಸ್ರ ಅಶ್ವಮೇಧಗಳಿಗಿಂತ ಸತ್ಯವೇ ಹೆಚ್ಚಿನದಾಗಿರುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಸತ್ಯಪ್ರಶಂಸಾಯಾಂ ಷಟ್ಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಸತ್ಯಪ್ರಶಂಸಾ ಎನ್ನುವ ನೂರಾಐವತ್ತಾರನೇ ಅಧ್ಯಾಯವು.

[1] ರೋಗಶಮನಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಆದರೆ ಇಲ್ಲ ಕ್ರೋಧಶಮನಂ ಎನ್ನುವುದೇ ಸರಿಯೆಂದು ತೋರುತ್ತದೆ.

[2] ಕಲ್ಯಾಣಂ ಕುರುತೇ ಬಾಢಂ ಧೀಮಾನ್ನ ಗ್ಲಾಯತೇ ಕ್ವಚಿತ್| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.