Shanti Parva: Chapter 158

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೮

ನೃಶಂಸ ಅಥವಾ ಕ್ರೂರಿಯ ಲಕ್ಷಣಗಳು (೧-೧೩).

12158001 ಯುಧಿಷ್ಠಿರ ಉವಾಚ|

12158001a ಆನೃಶಂಸ್ಯಂ ವಿಜಾನಾಮಿ ದರ್ಶನೇನ ಸತಾಂ ಸದಾ|

12158001c ನೃಶಂಸಾನ್ನ ವಿಜಾನಾಮಿ ತೇಷಾಂ ಕರ್ಮ ಚ ಭಾರತ||

ಯುಧಿಷ್ಠಿರನು ಹೇಳಿದನು: “ಭಾರತ! ಸದಾ ಸತ್ಪುರುಷರ ದರ್ಶನದಿಂದ ಕೋಮಲವಾಗಿ ವರ್ತಿಸುವವರ ಕುರಿತು ತಿಳಿದಿದ್ದೇನೆ. ಆದರೆ ಕ್ರೂರಿಯಾಗಿರುವವರ ಮತ್ತು ಅವರ ಕರ್ಮಗಳ ಕುರಿತು ನನಗೆ ತಿಳಿದಿಲ್ಲ.

12158002a ಕಂಟಕಾನ್ಕೂಪಮಗ್ನಿಂ ಚ ವರ್ಜಯಂತಿ ಯಥಾ ನರಾಃ|

12158002c ತಥಾ ನೃಶಂಸಕರ್ಮಾಣಂ ವರ್ಜಯಂತಿ ನರಾ ನರಮ್||

ಮುಳ್ಳು, ಬಾವಿ ಮತ್ತು ಅಗ್ನಿಯನ್ನು ಹೇಗೆ ವರ್ಜಿಸುತ್ತಾರೋ ಹಾಗೆ ನರರು ಕ್ರೂರ ಕರ್ಮಗಳನ್ನೆಸಗುವ ಮನುಷ್ಯರನ್ನೂ ವರ್ಜಿಸುತ್ತಾರೆ.

12158003a ನೃಶಂಸೋ ಹ್ಯಧಮೋ ನಿತ್ಯಂ ಪ್ರೇತ್ಯ ಚೇಹ ಚ ಭಾರತ|

12158003c ತಸ್ಮಾದ್ಬ್ರವೀಹಿ ಕೌರವ್ಯ ತಸ್ಯ ಧರ್ಮವಿನಿಶ್ಚಯಮ್||

ಭಾರತ! ಕೌರವ್ಯ! ಕ್ರೂರಿಗಳು ನಿತ್ಯವೂ ಇಲ್ಲಿ ಮತ್ತು ಮರಣಾನಂತರವೂ ಅಧಮರಾಗಿಯೇ ಇರುತ್ತಾರೆ. ಆದುದರಿಂದ ಅಂಥವರ ಧರ್ಮವಿನಿಶ್ಚಯವನ್ನು ಹೇಳು.”

12158004 ಭೀಷ್ಮ ಉವಾಚ|

12158004a ಸ್ಪೃಹಾಸ್ಯಾಂತರ್ಹಿತಾ ಚೈವ ವಿದಿತಾರ್ಥಾ ಚ ಕರ್ಮಣಾ[1]|

12158004c ಆಕ್ರೋಷ್ಟಾ ಕ್ರುಶ್ಯತೇ ಚೈವ ಬಂಧಿತಾ ಬಧ್ಯತೇ ಚ ಯಃ[2]||

12158005a ದತ್ತಾನುಕೀರ್ತಿರ್ವಿಷಮಃ ಕ್ಷುದ್ರೋ ನೈಕೃತಿಕಃ ಶಠಃ|

12158005c ಅಸಂಭೋಗೀ[3] ಚ ಮಾನೀ ಚ ತಥಾ ಸಂಗೀ ವಿಕತ್ಥನಃ||

12158006a ಸರ್ವಾತಿಶಂಕೀ ಪರುಷೋ[4] ಬಾಲಿಶಃ ಕೃಪಣಸ್ತಥಾ|

12158006c ವರ್ಗಪ್ರಶಂಸೀ ಸತತಮಾಶ್ರಮದ್ವೇಷಸಂಕರೀ||

12158007a ಹಿಂಸಾವಿಹಾರೀ ಸತತಮವಿಶೇಷಗುಣಾಗುಣಃ|

12158007c ಬಹ್ವಲೀಕೋಽಮನಸ್ವೀ ಚ ಲುಬ್ಧೋಽತ್ಯರ್ಥಂ ನೃಶಂಸಕೃತ್||

ಭೀಷ್ಮನು ಹೇಳಿದನು: “ಮನಸ್ಸಿನಲ್ಲಿ ಅತ್ಯಂತ ಗಾಢ ಆಸೆಗಳನ್ನಿಟ್ಟುಕೊಂಡಿರುವ, ಕುತ್ಸಿತ ಕೆಲಸಗಳನ್ನು ಮಾಡಬಯಸುವ, ಇತರರನ್ನು ನಿಂದಿಸುವ ಮತ್ತು ಇತರರ ನಿಂದನೆಗೊಳಗಾಗುವ, ಇತರರಿಂದ ಬಂಧಿತನಾಗಿರುವ ಮತ್ತು ಇತರರನ್ನು ಬಂಧಿಸುವ, ತಾನು ಮಾಡಿದ ದಾನಗಳ ಕುರಿತು ಮತ್ತೆ ಮತ್ತೆ ಹೇಳಿಕೊಳ್ಳುವ, ಕ್ಷುದ್ರ, ನೀಚಕರ್ಮಗಳನ್ನೆಸಗುವ, ಶಠ, ಅಸಂಭೋಗೀ, ಅತಿಮಾನವಂತ, ವಿಷಯಾಸಕ್ತ, ಜಂಬಕೊಚ್ಚಿಕೊಳ್ಳುವ, ಎಲ್ಲರನ್ನೂ ಅತಿಯಾಗಿ ಶಂಕಿಸುವ, ಕ್ರೂರವಾಗಿ ಮಾತನಾಡುವ, ಮೂಢ, ಕೃಪಣ, ತನ್ನದೇ ವರ್ಗದವರನ್ನು ಪ್ರಶಂಸಿಸುವ, ಆಶ್ರಮದ್ವೇಷಿಯಾಗಿ ಸತತವೂ ವರ್ಣಸಂಕರಗಳನ್ನುಂಟುಮಾಡುವ, ಹಿಂಸಾವಿಹಾರೀ, ಸತತವೂ ಗುಣ-ಅವಗುಣಗಳನ್ನು ಸಮಾನವೆಂದು ತಿಳಿದುಕೊಳ್ಳುವ, ಅತಿಯಾಗಿ ಸುಳ್ಳುಹೇಳುವ, ಉದಾರ ಮನಸ್ಸಿಲ್ಲದ, ಲುಬ್ಧ – ಮನುಷ್ಯನು ಕ್ರೂರ ಕರ್ಮಿಯೆಂದು ಹೇಳಿದ್ದಾರೆ.

12158008a ಧರ್ಮಶೀಲಂ ಗುಣೋಪೇತಂ ಪಾಪ ಇತ್ಯವಗಚ್ಚತಿ|

12158008c ಆತ್ಮಶೀಲಾನುಮಾನೇನ[5] ನ ವಿಶ್ವಸಿತಿ ಕಸ್ಯ ಚಿತ್||

ಅವನು ಧರ್ಮಶೀಲ ಗುಣೋಪೇತರನ್ನೇ ಪಾಪಿಗಳೆಂದು ಅಪಮಾನಿಸುತ್ತಾನೆ. ತನ್ನ ಸ್ವಭಾವವನ್ನೇ ಆದರ್ಶವೆಂದು ತಿಳಿದು ಯಾರ ಮೇಲೂ ವಿಶ್ವಾಸನವನ್ನಿಟ್ಟಿರುವುದಿಲ್ಲ.

12158009a ಪರೇಷಾಂ ಯತ್ರ ದೋಷಃ ಸ್ಯಾತ್ತದ್ಗುಹ್ಯಂ ಸಂಪ್ರಕಾಶಯೇತ್|

12158009c ಸಮಾನೇಷ್ವೇವ ದೋಷೇಷು ವೃತ್ತ್ಯರ್ಥಮುಪಘಾತಯೇತ್||

ಇತರರ ಅವಹೇಳನವಾಗುತ್ತದೆಯೆಂದರೆ ಅವರ ಗುಪ್ತ ದೋಷಗಳನ್ನೂ ಬಹಿರಂಗಗೊಳಿಸಿಬಿಡುತ್ತಾನೆ. ಅವನ ಮತ್ತು ಇತರರ ಅಪರಾಧಗಳು ಒಂದೇ ಆಗಿದ್ದರೂ ತನ್ನ ವೃತ್ತಿಗಾಗಿ ಇತರರನ್ನು ನಾಶಪಡಿಸುತ್ತಾನೆ.

12158010a ತಥೋಪಕಾರಿಣಂ ಚೈವ ಮನ್ಯತೇ ವಂಚಿತಂ ಪರಮ್|

12158010c ದತ್ತ್ವಾಪಿ ಚ ಧನಂ ಕಾಲೇ ಸಂತಪತ್ಯುಪಕಾರಿಣೇ||

ತನಗೆ ಉಪಕಾರಮಾಡಿದವರನ್ನೂ ತನ್ನ ಪರಮ ವಂಚನೆಯ ಜಾಲದಲ್ಲಿ ಇರಿಸಿಕೊಳ್ಳುತ್ತಾನೆ. ಅವರಿಗೆ ಧನವನ್ನಿತ್ತಿದ್ದರೂ ಬಹುಕಾಲದ ವರೆಗೆ ಪಶ್ಚಾತ್ತಾಪಪಡುತ್ತಿರುತ್ತಾನೆ.

12158011a ಭಕ್ಷ್ಯಂ ಭೋಜ್ಯಮಥೋ ಲೇಹ್ಯಂ ಯಚ್ಚಾನ್ಯತ್ಸಾಧು ಭೋಜನಮ್|

12158011c ಪ್ರೇಕ್ಷಮಾಣೇಷು ಯೋಽಶ್ನೀಯಾನ್ನೃಶಂಸ ಇತಿ ತಂ ವಿದುಃ||

ಭಕ್ಷ್ಯ, ಭೋಜ್ಯ, ಲೇಹಗಳು, ಮತ್ತು ಅನ್ಯ ಉತ್ತಮ ಭೋಜನವನ್ನು ಇನ್ನೊಬ್ಬರು ನೋಡುತ್ತಿದ್ದರೂ ಅವರಿಗೆ ಕೊಡದೇ ತಾನೊಬ್ಬನೇ ತಿನ್ನುವವನನ್ನು ಕ್ರೂರಿ ಎಂದು ತಿಳಿಯಬೇಕು.

12158012a ಬ್ರಾಹ್ಮಣೇಭ್ಯಃ ಪ್ರದಾಯಾಗ್ರಂ ಯಃ ಸುಹೃದ್ಭಿಃ ಸಹಾಶ್ನುತೇ|

12158012c ಸ ಪ್ರೇತ್ಯ ಲಭತೇ ಸ್ವರ್ಗಮಿಹ ಚಾನಂತ್ಯಮಶ್ನುತೇ||

ಮೊದಲು ಬ್ರಾಹ್ಮಣರಿಗೆ ಕೊಟ್ಟು ನಂತರ ಸುಹೃದಯರೊಂದಿಗೆ ಊಟ ಮಾಡುವವನು ಇಲ್ಲಿ ಅನಂತ ಸುಖವನ್ನು ಭೋಗಿಸುತ್ತಾನೆ ಮತ್ತು ಮರಣಾನಂತರ ಸ್ವರ್ಗಲೋಕವನ್ನು ಪಡೆಯುತ್ತಾನೆ.

12158013a ಏಷ ತೇ ಭರತಶ್ರೇಷ್ಠ ನೃಶಂಸಃ ಪರಿಕೀರ್ತಿತಃ|

12158013c ಸದಾ ವಿವರ್ಜನೀಯೋ ವೈ ಪುರುಷೇಣ ಬುಭೂಷತಾ||

ಭರತಶ್ರೇಷ್ಠ!  ಹೀಗೆ ನಿನಗೆ ನೃಶಂಸನ ಕುರಿತು ಹೇಳಿದ್ದೇನೆ.  ಕಲ್ಯಾಣವನ್ನು ಬಯಸುವ ಪುರುಷನು ಸದಾ ನೃಶಂಸರನ್ನು ವರ್ಜಿಸಬೇಕು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ನೃಶಂಸಾಖ್ಯಾನೇ ಅಷ್ಟಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ನೃಶಂಸಾಖ್ಯಾನ ಎನ್ನುವ ನೂರಾಐವತ್ತೆಂಟನೇ ಅಧ್ಯಾಯವು.

[1] ಸ್ಪೃಹಾ ಸ್ಯಾದ್ ಗರ್ಹಿತಾ ಚೈವ ವಿಧಿತ್ಸಾ ಚೈವ ಕರ್ಮಣಾಮ್| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ವಂಚಿತೋ ಬುಧ್ಯತೇ ಸ ಚ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಅಸಂವಿಭಾಗೀ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ಪುರುಷೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[5] ಆತ್ಮಶೀಲಪ್ರಮಾಣೇನ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.