Shanti Parva: Chapter 155

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೫

ತಪಸ್ಸಿನ ಮಹಿಮೆ (೧-೧೩).

12155001 ಭೀಷ್ಮ ಉವಾಚ|

12155001a ಸರ್ವಮೇತತ್ತಪೋಮೂಲಂ ಕವಯಃ ಪರಿಚಕ್ಷತೇ|

12155001c ನ ಹ್ಯತಪ್ತತಪಾ ಮೂಢಃ ಕ್ರಿಯಾಫಲಮವಾಪ್ಯತೇ||

ಭೀಷ್ಮನು ಹೇಳಿದನು: “ಈ ಎಲ್ಲವುಗಳ ಮೂಲವೂ ತಪಸ್ಸೆಂದು ವಿದ್ವಾಂಸರು ಹೇಳುತ್ತಾರೆ. ತಪಸ್ಸನ್ನು ಮಾಡದ ಮೂಢನಿಗೆ ಶುಭ ಕರ್ಮಗಳ ಫಲವು ದೊರೆಯುವುದಿಲ್ಲ.

12155002a ಪ್ರಜಾಪತಿರಿದಂ ಸರ್ವಂ ತಪಸೈವಾಸೃಜತ್ ಪ್ರಭುಃ|

12155002c ತಥೈವ ವೇದಾನ್ ಋಷಯಸ್ತಪಸಾ ಪ್ರತಿಪೇದಿರೇ||

ಪ್ರಭು ಪ್ರಜಾಪತಿಯು ತಪಸ್ಸಿನಿಂದಲೇ ಈ ಎಲ್ಲವನ್ನೂ ಸೃಷ್ಟಿಸಿದನು. ಹಾಗೆಯೇ ಋಷಿಗಳು ತಪಸ್ಸಿನಿಂದಲೇ ವೇದಗಳನ್ನು ಪಡೆದುಕೊಂಡರು.

12155003a ತಪಸೋ ಹ್ಯಾನುಪೂರ್ವ್ಯೇಣ ಫಲಮೂಲಾನಿಲಾಶನಾಃ[1]|

12155003c ತ್ರೀಽಲ್ಲೋಕಾಂಸ್ತಪಸಾ ಸಿದ್ಧಾಃ ಪಶ್ಯಂತಿ ಸುಸಮಾಹಿತಾಃ||

ಫಲ, ಮೂಲಗಳು ಮತ್ತು ಅನ್ನಗಳನ್ನು ಕ್ರಮೇಣವಾಗಿ ತಪಸ್ಸಿನಿಂದಲೇ ಸೃಷ್ಟಿಸಲಾಯಿತು. ತಪಸ್ಸಿನಿಂದ ಸಿದ್ಧರಾದ ಏಕಾಗ್ರಚಿತ್ತ ಮಹಾತ್ಮರು ಮೂರು ಲೋಕಗಳನ್ನೂ ಪ್ರತ್ಯಕ್ಷ ನೋಡುತ್ತಾರೆ.

12155004a ಔಷಧಾನ್ಯಗದಾದೀನಿ ತಿಸ್ರೋ ವಿದ್ಯಾಶ್ಚ ಸಂಸ್ಕೃತಾಃ[2]|

12155004c ತಪಸೈವ ಹಿ ಸಿಧ್ಯಂತಿ ತಪೋಮೂಲಂ ಹಿ ಸಾಧನಮ್||

ಔಷಧ, ಆರೋಗ್ಯ ಮೊದಲಾದವುಗಳು, ಮೂರು ವಿದ್ಯೆಗಳು ಮತ್ತು ಸತ್ಕರ್ಮಗಳು ತಪಸ್ಸಿನಿಂದಲೇ ಸಿದ್ಧಿಸುತ್ತವೆ. ಏಕೆಂದರೆ ಸಾಧನೆಗಳ ಮೂಲವೇ ತಪಸ್ಸು.

12155005a ಯದ್ದುರಾಪಂ ದುರಾಮ್ನಾಯಂ ದುರಾಧರ್ಷಂ ದುರುತ್ಸಹಮ್|

12155005c ಸರ್ವಂ ತತ್ತಪಸಾ ಶಕ್ಯಂ ತಪೋ ಹಿ ದುರತಿಕ್ರಮಮ್[3]||

ಪಡೆಯಲು ಕಷ್ಟಕರವಾಗಿರುವ, ಸುರಕ್ಷಿತವಾಗಿಟ್ಟುಕೊಳ್ಳಿರಲು ಅಸಾಧ್ಯವಾಗಿರುವ, ಸಹಿಸಲು ಕಷ್ಟಕರವಾಗಿರುವ ಮತ್ತು ನೆರವೇರಿಸಲು ಕಷ್ಟವಾದ ಎಲ್ಲವೂ ತಪಸ್ಸಿನಿಂದ ಶಕ್ಯವಾಗುತ್ತದೆ. ಏಕೆಂದರೆ ತಪಸ್ಸನ್ನು ಅತಿಕ್ರಮಿಸಲು ಸಾಧ್ಯವಿಲ್ಲ.

12155006a ಸುರಾಪೋಽಸಂಮತಾದಾಯೀ ಭ್ರೂಣಹಾ ಗುರುತಲ್ಪಗಃ|

12155006c ತಪಸೈವ ಸುತಪ್ತೇನ ನರಃ ಪಾಪಾದ್ವಿಮುಚ್ಯತೇ||

ಸುರಾಪಾನಮಾಡಿದ, ಸಮ್ಮತಿಯಿಲ್ಲದೇ ಪರರ ವಸ್ತುವನ್ನು ತೆಗೆದುಕೊಂಡ, ಭ್ರೂಣಹತ್ಯೆಮಾಡಿದ, ಮತ್ತು ಗುರುಪತ್ನಿಯೊಡನೆ ಮಲಗಿದ ನರನು ಚೆನ್ನಾಗಿ ತಪಿಸಿದ ತಪಸ್ಸಿನ ಮೂಲಕವೇ ತನ್ನ ಪಾಪದಿಂದ ಮುಕ್ತನಾಗುತ್ತಾನೆ.

12155007a ತಪಸೋ ಬಹುರೂಪಸ್ಯ ತೈಸ್ತೈರ್ದ್ವಾರೈಃ ಪ್ರವರ್ತತಃ|

12155007c ನಿವೃತ್ತ್ಯಾ ವರ್ತಮಾನಸ್ಯ ತಪೋ ನಾನಶನಾತ್ಪರಮ್||

ತಪಸ್ಸಿಗೆ ಬಹುರೂಪಗಳಿವೆ ಮತ್ತು ಬೇರೆ ಬೇರೆ ಜನರು ಬೇರೆ ಬೇರೆ ಮಾರ್ಗಗಳನ್ನು ಬಳಸಿ ತಪಸ್ಸನ್ನಾಚರಿಸುತ್ತಾರೆ. ಆದರೆ ನಿವೃತ್ತಿಮಾರ್ಗದವರಿಗೆ ಉಪವಾಸಕ್ಕಿಂತ ದೊಡ್ಡದಾದ ತಪಸ್ಸಿಲ್ಲ.

12155008a ಅಹಿಂಸಾ ಸತ್ಯವಚನಂ ದಾನಮಿಂದ್ರಿಯನಿಗ್ರಹಃ|

12155008c ಏತೇಭ್ಯೋ ಹಿ ಮಹಾರಾಜ ತಪೋ ನಾನಶನಾತ್ ಪರಮ್||

ಮಹಾರಾಜ! ಅಹಿಂಸೆ, ಸತ್ಯವಚನ, ದಾನ, ಮತ್ತು ಇಂದ್ರಿಯನಿಗ್ರಹ – ಇವುಗಳಿಗೂ ಹೆಚ್ಚಿನ ತಪಸ್ಸುಗಳಿವೆ. ಆದರೆ ಉಪವಾಸಕ್ಕಿಂತ ದೊಡ್ಡ ತಪಸ್ಸು ಇಲ್ಲ.

12155009a ನ ದುಷ್ಕರತರಂ ದಾನಾನ್ನಾತಿಮಾತರಮಾಶ್ರಮಃ|

12155009c ತ್ರೈವಿದ್ಯೇಭ್ಯಃ ಪರಂ ನಾಸ್ತಿ ಸಂನ್ಯಾಸಃ ಪರಮಂ ತಪಃ||

ದಾನಕ್ಕಿಂತ ಹೆಚ್ಚು ದುಷ್ಕರವಾದ ಕರ್ಮವಿಲ್ಲ. ತಾಯಿಗಿಂತ ದೊಡ್ಡ ಆಶ್ರಯವಿಲ್ಲ. ಮೂರು ವೇದಗಳಿಗಿಂತ ಹೆಚ್ಚಿನ ವಿದ್ಯೆಯಿಲ್ಲ ಮತ್ತು ಸಂನ್ಯಾಸಕ್ಕಿಂತ ಪರಮ ತಪಸ್ಸಿಲ್ಲ.

12155010a ಇಂದ್ರಿಯಾಣೀಹ ರಕ್ಷಂತಿ ಧನಧಾನ್ಯಾಭಿಗುಪ್ತಯೇ[4]|

12155010c ತಸ್ಮಾದರ್ಥೇ ಚ ಧರ್ಮೇ ಚ ತಪೋ ನಾನಶನಾತ್ಪರಮ್||

ಇಲ್ಲಿ ಧನ-ಧಾನ್ಯಗಳನ್ನು ರಕ್ಷಿಸಿಕೊಳ್ಳಲು ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುತ್ತಾರೆ. ಆದರೆ ಧರ್ಮ ಮತ್ತು ಅರ್ಥ ಇವೆರಡರ ಸಿದ್ಧಿಗೂ ತಪಸ್ಸೇ ಶ್ರೇಷ್ಠ ಸಾಧನವು ಮತ್ತು ಉಪವಾಸಕ್ಕಿಂತ ದೊಡ್ಡ ತಪಸ್ಸು ಇನ್ನೊಂದಿಲ್ಲ.

12155011a ಋಷಯಃ ಪಿತರೋ ದೇವಾ ಮನುಷ್ಯಾ ಮೃಗಸತ್ತಮಾಃ[5]|

12155011c ಯಾನಿ ಚಾನ್ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ||

12155012a ತಪಃಪರಾಯಣಾಃ ಸರ್ವೇ ಸಿಧ್ಯಂತಿ ತಪಸಾ ಚ ತೇ|

12155012c ಇತ್ಯೇವಂ ತಪಸಾ ದೇವಾ ಮಹತ್ತ್ವಂ ಚಾಪ್ಯವಾಪ್ನುವನ್[6]||

ಋಷಿಗಳು, ಪಿತೃಗಳು, ದೇವತೆಗಳು, ಮನುಷ್ಯರು, ಮೃಗಪಕ್ಷಿಗಳು, ಮತ್ತು ಅನ್ಯ ಸ್ಥಾವರ-ಚರ ಭೂತಗಳು ಎಲ್ಲರೂ ತಪಸ್ಸಿನಲ್ಲಿಯೇ ತತ್ಪರರಾಗಿದ್ದಾರೆ. ತಪಸ್ಸಿನಿಂದಲೇ ಅವರಿಗೆ ಸಿದ್ಧಿಯುಂಟಾಗುತ್ತದೆ. ಇದೇ ರೀತಿಯಲ್ಲಿ ತಪಸ್ಸಿನಿಂದಲೇ ದೇವತೆಗಳು ಮಹತ್ತ್ವವನ್ನು ಪಡೆದುಕೊಂಡರು.

12155013a ಇಮಾನೀಷ್ಟವಿಭಾಗಾನಿ ಫಲಾನಿ ತಪಸಾ ಸದಾ|

12155013c ತಪಸಾ ಶಕ್ಯತೇ ಪ್ರಾಪ್ತುಂ ದೇವತ್ವಮಪಿ ನಿಶ್ಚಯಾತ್||

ಭಿನ್ನ ಭಿನ್ನ ಅಭೀಷ್ಟಗಳು ತಪಸ್ಸಿನಿಂದಲೇ ಸುಲಭಗೊಳ್ಳುತ್ತವೆ.  ನಿಶ್ಚಯವಾಗಿಯೂ ತಪಸ್ಸಿನಿಂದ ದೇವತ್ವವನ್ನೂ ಪಡೆದುಕೊಳ್ಳಬಹುದು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ತಪಃಪ್ರಶಂಸಾಯಾಂ ಪಂಚಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ತಪಃಪ್ರಶಂಸಾ ಎನ್ನುವ ನೂರಾಐವತ್ತೈದನೇ ಅಧ್ಯಾಯವು.

[1] ತಪಸೈವ ಸಸರ್ಜಾನ್ನಂ ಫಲಮೂಲಾನಿ ಯಾನಿ ಚ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ಔಷಧಾನ್ಯಗದಾದೀನಿ ಕ್ರಿಯಾಶ್ಚ ವಿವಿಧಾಸ್ತಥಾ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಯದ್ದುರಾಪಂ ಭವೇತ್ಕಿಂಚಿತ್ತತ್ಸರ್ವಂ ತಪಸೋ ಭವೇತ್| ಐಶ್ವರ್ಯಮೃಷಯಃ ಪ್ರಾಪ್ತಾಸ್ತಪಸೈವ ನ ಸಂಶಯಃ|| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ಸ್ವರ್ಗಧರ್ಮಾಭಿಗುಪ್ತಯೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಇದೇ ಸರಿಯೆಂದು ತೋರುತ್ತದೆ.

[5] ಮೃಗಪಕ್ಷಿಣಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಇದೇ ಸರಿಯೆಂದು ತೋರುತ್ತದೆ.

[6] ಪ್ರತಿಪೇದಿರೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.