Shanti Parva: Chapter 154

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೪

ಮನಸ್ಸು ಮತ್ತು ಇಂದ್ರಿಯಗಳ ಸಂಯಮರೂಪ ದಮೆಯ ಮಹಾತ್ಮ್ಯೆ (೧-೩೮).

12154001 ಯುಧಿಷ್ಠಿರ ಉವಾಚ|

12154001a ಸ್ವಾಧ್ಯಾಯಕೃತಯತ್ನಸ್ಯ ಬ್ರಾಹ್ಮಣಸ್ಯ[1] ಪಿತಾಮಹ|

12154001c ಧರ್ಮಕಾಮಸ್ಯ ಧರ್ಮಾತ್ಮನ್ಕಿಂ ನು ಶ್ರೇಯ ಇಹೋಚ್ಯತೇ||

ಯುಧಿಷ್ಠಿರನು ಹೇಳಿದನು: “ಧರ್ಮಾತ್ಮಾ! ಪಿತಾಮಹ! ಸ್ವಾಧ್ಯಾಯದಲ್ಲಿ ಯತ್ನಶೀಲನಾಗಿರುವ ಮತ್ತು ಧರ್ಮವನ್ನಾಚರಿಸಲು ಬಯಸುವ ಬ್ರಾಹ್ಮಣನಿಗೆ ಇಲ್ಲಿ ಯಾವುದು ಶ್ರೇಯವೆಂದು ಹೇಳಲಾಗಿದೆ?

12154002a ಬಹುಧಾದರ್ಶನೇ ಲೋಕೇ ಶ್ರೇಯೋ ಯದಿಹ ಮನ್ಯಸೇ|

12154002c ಅಸ್ಮಿಽಲ್ಲೋಕೇ ಪರೇ ಚೈವ ತನ್ಮೇ ಬ್ರೂಹಿ ಪಿತಾಮಹ||

ಪಿತಾಮಹ! ಇಲ್ಲಿ ಇದು ಶ್ರೇಯಸ್ಸು ಎನ್ನುವ ಅನೇಕ ದರ್ಶನಗಳು ಈ ಲೋಕದಲ್ಲಿವೆ. ಆದರೆ ನೀನು ಈ ಲೋಕ ಮತ್ತು ಪರಲೋಕಗಳಲ್ಲಿ ಯಾವುದನ್ನು ಶ್ರೇಯಸ್ಸೆಂದು ತಿಳಿದಿದ್ದೀಯೋ ಅದನ್ನು ನನಗೆ ಹೇಳು.

12154003a ಮಹಾಮಯಂ ಧರ್ಮಪಥೋ ಬಹುಶಾಖಶ್ಚ ಭಾರತ|

12154003c ಕಿಂ ಸ್ವಿದೇವೇಹ ಧರ್ಮಾಣಾಮನುಷ್ಠೇಯತಮಂ ಮತಮ್||

ಭಾರತ! ಧರ್ಮದ ಈ ಮಾರ್ಗವು ಅತ್ಯಂತ ದೊಡ್ಡದು. ಇದಕ್ಕೆ ಅನೇಕ ಕವಲುಗಳಿವೆ. ಈ ಧರ್ಮಗಳಲ್ಲಿ ಯಾವುದು ಸರ್ವೋತ್ತಮವಾದುದು ಮತ್ತು ಅನುಷ್ಠಾನಯೋಗ್ಯವಾದುದು ಎಂದು ಹೇಳಲಾಗಿದೆ?

12154004a ಧರ್ಮಸ್ಯ ಮಹತೋ ರಾಜನ್ಬಹುಶಾಖಸ್ಯ ತತ್ತ್ವತಃ|

12154004c ಯನ್ಮೂಲಂ ಪರಮಂ ತಾತ ತತ್ಸರ್ವಂ ಬ್ರೂಹ್ಯತಂದ್ರಿತಃ[2]||

ರಾಜನ್! ತತ್ತ್ವತಃ ಅನೇಕ ಶಾಖೆಗಳಿರುವ ಈ ಮಹಾ ಧರ್ಮದ ಪರಮ ಮೂಲವು ಯಾವುದು? ಆಯಾಸಗೊಳ್ಳದೇ ಅವೆಲ್ಲವನ್ನೂ ಹೇಳು.”

12154005 ಭೀಷ್ಮ ಉವಾಚ|

12154005a ಹಂತ ತೇ ಕಥಯಿಷ್ಯಾಮಿ ಯೇನ ಶ್ರೇಯಃ ಪ್ರಪತ್ಸ್ಯಸೇ|

12154005c ಪೀತ್ವಾಮೃತಮಿವ ಪ್ರಾಜ್ಞೋ ಜ್ಞಾನತೃಪ್ತೋ ಭವಿಷ್ಯಸಿ||

ಭೀಷ್ಮನು ಹೇಳಿದನು: “ನಿಲ್ಲು. ನಿನಗೆ ನಾನು ಹೇಳುತ್ತೇನೆ. ಅದರಿಂದ ನೀನು ಶ್ರೇಯಸ್ಸನ್ನು ಪಡೆದುಕೊಳ್ಳಬಹುದು. ಅಮೃತವನ್ನು ಕುಡಿದರೆ ಹೇಗೆ ಪೂರ್ಣ ತೃಪ್ತಿಯಾಗುತ್ತದೆಯೋ ಹಾಗೆ ಪ್ರಾಜ್ಞನಾದ ನೀನು ಇದನ್ನು ಕೇಳಿ ಜ್ಞಾನತೃಪ್ತನಾಗುತ್ತೀಯೆ.

12154006a ಧರ್ಮಸ್ಯ ವಿಧಯೋ ನೈಕೇ ತೇ ತೇ ಪ್ರೋಕ್ತಾ ಮಹರ್ಷಿಭಿಃ|

12154006c ಸ್ವಂ ಸ್ವಂ ವಿಜ್ಞಾನಮಾಶ್ರಿತ್ಯ ದಮಸ್ತೇಷಾಂ ಪರಾಯಣಮ್||

ಮಹರ್ಷಿಗಳು ತಮ್ಮ ತಮ್ಮ ಜ್ಞಾನದ ಅನುಸಾರ ಧರ್ಮದ ಒಂದಲ್ಲ ಅನೇಕ ವಿಧಿಗಳನ್ನು ಹೇಳಿದ್ದಾರೆ. ದಮೆ[3]ಯೇ ಅವೆಲ್ಲವುಗಳ ಆಧಾರವಾಗಿದೆ.

12154007a ದಮಂ ನಿಃಶ್ರೇಯಸಂ ಪ್ರಾಹುರ್ವೃದ್ಧಾ ನಿಶ್ಚಯದರ್ಶಿನಃ|

12154007c ಬ್ರಾಹ್ಮಣಸ್ಯ ವಿಶೇಷೇಣ ದಮೋ ಧರ್ಮಃ ಸನಾತನಃ||

ನಿಶ್ಚಯದರ್ಶೀ ವೃದ್ಧರು ದಮೆಯೇ ಅತ್ಯಂತ ಶ್ರೇಯಸ್ಕರವಾದುದು ಎಂದು ಹೇಳುತ್ತಾರೆ. ವಿಶೇಷವಾಗಿ ದಮೆಯು ಬ್ರಾಹ್ಮಣರ ಸನಾತನ ಧರ್ಮವು.

12154008a ನಾದಾಂತಸ್ಯ[4] ಕ್ರಿಯಾಸಿದ್ಧಿರ್ಯಥಾವದುಪಲಭ್ಯತೇ|

12154008c ದಮೋ ದಾನಂ ತಥಾ ಯಜ್ಞಾನಧೀತಂ ಚಾತಿವರ್ತತೇ||

ದಮೆಯ ಕಾರಣದಿಂದಲೇ ಅವನಿಗೆ ಅವನ ಶುಭ ಕರ್ಮಗಳ ಯಥಾಪ್ರಕಾರ ಸಿದ್ಧಿ ಪ್ರಾಪ್ತವಾಗುತ್ತದೆ. ಆದುದರಿಂದ ದಮೆಯು ದಾನ, ಯಜ್ಞ ಮತ್ತು ಸ್ವಾಧ್ಯಾಯಕ್ಕಿಂತಲೂ ಹೆಚ್ಚಿನದು.

12154009a ದಮಸ್ತೇಜೋ ವರ್ಧಯತಿ ಪವಿತ್ರಂ ಚ ದಮಃ ಪರಮ್|

12154009c ವಿಪಾಪ್ಮಾ ತೇಜಸಾ ಯುಕ್ತಃ ಪುರುಷೋ ವಿಂದತೇ ಮಹತ್||

ದಮೆಯು ತೇಜಸ್ಸನ್ನು ವರ್ಧಿಸುತ್ತದೆ. ದಮೆಯು ಪರಮ ಪವಿತ್ರವಾದುದು. ದಮೆಯಿಂದ ಪಾಪರಹಿತನಾದ ತೇಜೋಯುಕ್ತ ಪುರುಷನು ಪರಮಪದವನ್ನು ಪಡೆದುಕೊಳ್ಳುತ್ತಾನೆ.

12154010a ದಮೇನ ಸದೃಶಂ ಧರ್ಮಂ ನಾನ್ಯಂ ಲೋಕೇಷು ಶುಶ್ರುಮ|

12154010c ದಮೋ ಹಿ ಪರಮೋ ಲೋಕೇ ಪ್ರಶಸ್ತಃ ಸರ್ವಧರ್ಮಿಣಾಮ್||

ದಮೆಯ ಸದೃಶವಾದ ಬೇರೆ ಯಾವ ಧರ್ಮವನ್ನೂ ನಾವು ಲೋಕಗಳಲ್ಲಿ ಕೇಳಿಲ್ಲ. ಲೋಕದಲ್ಲಿ ದಮೆಯೇ ಪರಮ ಧರ್ಮವು. ಇದು ಸರ್ವಧರ್ಮಿಗಳಿಗೂ ಪ್ರಶಸ್ತವಾದುದು.

12154011a ಪ್ರೇತ್ಯ ಚಾಪಿ ಮನುಷ್ಯೇಂದ್ರ ಪರಮಂ ವಿಂದತೇ ಸುಖಮ್|

12154011c ದಮೇನ ಹಿ ಸಮಾಯುಕ್ತೋ ಮಹಾಂತಂ ಧರ್ಮಮಶ್ನುತೇ||

ಮನುಷ್ಯೇಂದ್ರ! ದಮೆಯಿಂದ ಮರಣಾನಂತರವೂ ಪರಮ ಸುಖವನ್ನು ಪಡೆದುಕೊಳ್ಳುತ್ತಾನೆ. ದಮೆಯಿಂದ ಸಮಾಯುಕ್ತನಾದವನು ಮಹಾ ಪರಮ ಧರ್ಮವನ್ನು ಪಡೆದುಕೊಳ್ಳುತ್ತಾನೆ.

12154012a ಸುಖಂ ದಾಂತಃ ಪ್ರಸ್ವಪಿತಿ ಸುಖಂ ಚ ಪ್ರತಿಬುಧ್ಯತೇ|

12154012c ಸುಖಂ ಪರ್ಯೇತಿ ಲೋಕಾಂಶ್ಚ ಮನಶ್ಚಾಸ್ಯ ಪ್ರಸೀದತಿ||

ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿದ ದಾಂತನು ಸುಖವಾಗಿಯೇ ಮಲಗುತ್ತಾನೆ, ಎಚ್ಚೆತ್ತಿರುವಾಗಲೂ ಸುಖವಾಗಿರುತ್ತಾನೆ ಮತ್ತು ಸುಖವಾಗಿಯೇ ಲೋಕಕಾರ್ಯಗಳಲ್ಲಿ ತೊಡಗಿರುತ್ತಾನೆ. ಅವನ ಮನಸ್ಸೂ ಕೂಡ ಪ್ರಸನ್ನವಾಗಿರುತ್ತದೆ.

12154013a ಅದಾಂತಃ ಪುರುಷಃ ಕ್ಲೇಶಮಭೀಕ್ಷ್ಣಂ ಪ್ರತಿಪದ್ಯತೇ|

12154013c ಅನರ್ಥಾಂಶ್ಚ ಬಹೂನನ್ಯಾನ್ ಪ್ರಸೃಜತ್ಯಾತ್ಮದೋಷಜಾನ್||

ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿಕೊಂಡಿರದ ಅದಾಂತ ಪುರುಷನು ನಿರಂತರವಾಗಿ ಕ್ಲೇಶಗಳನ್ನು ಅನುಭವಿಸುತ್ತಾನೆ. ತನ್ನದೇ ದೋಷದಿಂದ ಇನ್ನೂ ಅನೇಕ ಅನರ್ಥಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.

12154014a ಆಶ್ರಮೇಷು ಚತುರ್ಷ್ವಾಹುರ್ದಮಮೇವೋತ್ತಮಂ ವ್ರತಮ್|

12154014c ತಸ್ಯ ಲಿಂಗಾನಿ ವಕ್ಷ್ಯಾಮಿ ಯೇಷಾಂ ಸಮುದಯೋ ದಮಃ||

ನಾಲ್ಕು ಆಶ್ರಮದವರಿಗೂ ದಮೆಯೇ ಉತ್ತಮ ವ್ರತವೆಂದು ಹೇಳಲಾಗಿದೆ. ಈಗ ನಾನು ದಮೆಯು ಉದಯವಾಗಿರುವವನಲ್ಲಿ ಕಾಣುವ ಲಕ್ಷಣಗಳನ್ನು ಹೇಳುತ್ತೇನೆ.

12154015a ಕ್ಷಮಾ ಧೃತಿರಹಿಂಸಾ ಚ ಸಮತಾ ಸತ್ಯಮಾರ್ಜವಮ್|

12154015c ಇಂದ್ರಿಯಾವಜಯೋ ದಾಕ್ಷ್ಯಂ ಮಾರ್ದವಂ ಹ್ರೀರಚಾಪಲಮ್||

12154016a ಅಕಾರ್ಪಣ್ಯಮಸಂರಂಭಃ ಸಂತೋಷಃ ಪ್ರಿಯವಾದಿತಾ|

12154016c ಅವಿವಿತ್ಸಾನಸೂಯಾ ಚಾಪ್ಯೇಷಾಂ ಸಮುದಯೋ ದಮಃ||

ಕ್ಷಮೆ, ಧೀರತೆ, ಅಹಿಂಸೆ, ಸಮತಾ, ಸತ್ಯವಾದಿತ್ವ, ಸರಳತೆ, ಇಂದ್ರಿಯ ವಿಜಯ, ದಕ್ಷತೆ, ಕೋಮಲತೆ, ಲಜ್ಜೆ, ಸ್ಥಿರತೆ, ಉದಾರತೆ, ಕ್ರೋಧವಿಲ್ಲದಿರುವುದು, ಸಂತೋಷ, ಪ್ರಿಯ ಮಾತು, ಯಾರಿಗೂ ಕಷ್ಟವನ್ನುಂಟುಮಾಡದೇ ಇರುವುದು, ಮತ್ತು ಇನ್ನೊಬ್ಬರ ದೋಷಗಳನ್ನು ಹುಡುಕದಿರುವುದು – ಈ ಸದ್ಗುಣಗಳು ಕಾಣಿಸಿಕೊಂಡರೆ ಅದನ್ನೇ ದಮೆ ಎಂದು ಹೇಳಬಹುದು.

12154017a ಗುರುಪೂಜಾ ಚ ಕೌರವ್ಯ ದಯಾ ಭೂತೇಷ್ವಪೈಶುನಮ್|

12154017c ಜನವಾದೋಽಮೃಷಾವಾದಃ ಸ್ತುತಿನಿಂದಾವಿವರ್ಜನಮ್||

12154018a ಕಾಮಃ ಕ್ರೋಧಶ್ಚ ಲೋಭಶ್ಚ ದರ್ಪಃ ಸ್ತಂಭೋ ವಿಕತ್ಥನಮ್|

12154018c ಮೋಹ ಈರ್ಷ್ಯಾವಮಾನಶ್ಚೇತ್ಯೇತದ್ದಾಂತೋ ನ ಸೇವತೇ||

ಕೌರವ್ಯ! ದಾಂತನಲ್ಲಿ ಗುರುಜನರ ಕುರಿತು ಆದರದ ಭಾವ, ಸಮಸ್ತ ಪ್ರಾಣಿಗಳ ಮೇಲೆ ದಯೆ ಮತ್ತು ಯಾರನ್ನೂ ನಿಂದಿಸದೇ ಇರುವ ಸ್ವಭಾವಗಳಿರುತ್ತವೆ. ಕಾಮ, ಕ್ರೋಧ, ಲೋಭ, ದರ್ಪ, ಜಡತೆ, ಜಂಬ ಕೊಚ್ಚಿಕೊಳ್ಳುವುದು, ಮೋಹ, ಈರ್ಷ್ಯೆ, ಅಪಮಾನ ಈ ದುರ್ಗುಣಗಳು ದಾಂತನ ಬಳಿಯೂ ಸುಳಿಯುವುದಿಲ್ಲ.

12154019a ಅನಿಂದಿತೋ ಹ್ಯಕಾಮಾತ್ಮಾಥಾಲ್ಪೇಚ್ಚೋಽಥಾನಸೂಯಕಃ|

12154019c ಸಮುದ್ರಕಲ್ಪಃ ಸ ನರೋ ನ ಕದಾ ಚನ ಪೂರ್ಯತೇ||

ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವವನಿಗೆ ನಿಂದೆಯುಂಟಾಗುವುದಿಲ್ಲ. ಅವನ ಮನಸ್ಸಿನಲ್ಲಿ ಯಾವ ಕಾಮನೆಗಳೂ ಹುಟ್ಟುವುದಿಲ್ಲ. ಅವನು ಸಣ್ಣ ಸಣ್ಣ ವಸ್ತುಗಳಿಗಾಗಿ ಇನ್ನೊಬ್ಬರ ಎದಿರು ಕೈ ಚಾಚುವುದಿಲ್ಲ ಅಥವಾ ತುಚ್ಛ ವಿಷಯ-ಸುಖಗಳ ಅಭಿಲಾಷೆಯನ್ನಿಟ್ಟುಕೊಂಡಿರುವುದಿಲ್ಲ. ಇನ್ನೊಬ್ಬರ ದೋಷಗಳನ್ನು ನೋಡುವುದಿಲ್ಲ. ಅವನು ಸಮುದ್ರದಂತೆ ಅಗಾಧವಾಗಿಯೂ ಗಂಭೀರನಾಗಿಯೂ ಇರುತ್ತಾನೆ. ಸಮುದ್ರವು ಹೇಗೆ ಅನಂತ ಜಲರಾಶಿಯನ್ನು ಪಡೆದುಕೊಂಡೂ ತುಂಬಿ ಉಕ್ಕುವುದಿಲ್ಲವೋ ಹಾಗೆ ಅವನೂ ಕೂಡ ನಿರಂತರ ಧರ್ಮಸಂಚಯದಿಂದ ತೃಪ್ತಿಯನ್ನೇ ಹೊಂದುವುದಿಲ್ಲ.

12154020a ಅಹಂ ತ್ವಯಿ ಮಮ ತ್ವಂ ಚ ಮಯಿ ತೇ ತೇಷು ಚಾಪ್ಯಹಮ್|

12154020c ಪೂರ್ವಸಂಬಂಧಿಸಂಯೋಗಾನ್ನೈತದ್ದಾಂತೋ ನಿಷೇವತೇ||

“ನಾನು ನಿನ್ನೊಡನೆ ಸ್ನೇಹದಿಂದಿದ್ದೇನೆ, ನೀನು ನನ್ನಲ್ಲಿ ಸ್ನೇಹದಿಂದಿದ್ದೀಯೆ, ಅವರು ನನ್ನಲ್ಲಿ ಅನುರಕ್ತರಾಗಿದ್ದಾರೆ ಮತ್ತು ನಾನು ಅವರಲ್ಲಿ” ಈ ರೀತಿಯ ಪೂರ್ವ ಸಂಬಂಧ-ಸಂಯೋಗಗಳನ್ನು ದಾಂತನು ಯೋಚಿಸುವುದಿಲ್ಲ.

12154021a ಸರ್ವಾ ಗ್ರಾಮ್ಯಾಸ್ತಥಾರಣ್ಯಾ ಯಾಶ್ಚ ಲೋಕೇ ಪ್ರವೃತ್ತಯಃ|

12154021c ನಿಂದಾಂ ಚೈವ ಪ್ರಶಂಸಾಂ ಚ ಯೋ ನಾಶ್ರಯತಿ ಮುಚ್ಯತೇ||

ಲೋಕದಲ್ಲಿ ಗ್ರಾಮೀಣರ ಮತ್ತು ವನವಾಸಿಗಳ ಸರ್ವಪ್ರವೃತ್ತಿಗಳನ್ನು ಮತ್ತು ನಿಂದೆ-ಪ್ರಶಂಸೆಗಳನ್ನು ಆಶ್ರಯಿಸಿದೇ ಇರುವವರು ಮೋಕ್ಷವನ್ನು ಹೊಂದುತ್ತಾರೆ.

12154022a ಮೈತ್ರೋಽಥ ಶೀಲಸಂಪನ್ನಃ ಸುಸಹಾಯಪರಶ್ಚ ಯಃ[5]|

12154022c ಮುಕ್ತಶ್ಚ ವಿವಿಧೈಃ ಸಂಗೈಸ್ತಸ್ಯ ಪ್ರೇತ್ಯ ಮಹತ್ ಫಲಮ್||

ಮೈತ್ರೀಭಾವವಿರುವ, ಶೀಲಸಂಪನ್ನ, ಇತರರಿಗೆ ಸಹಾಯಮಾಡುವ, ವಿವಿಧ ಸಂಗಗಳಿಂದ ಮುಕ್ತನಾಗಿರುವವನಿಗೆ ಮರಣಾನಂತರ ಮಹಾ ಫಲವು ದೊರೆಯುತ್ತದೆ.

12154023a ಸುವೃತ್ತಃ ಶೀಲಸಂಪನ್ನಃ ಪ್ರಸನ್ನಾತ್ಮಾತ್ಮವಿದ್ಬುಧಃ|

12154023c ಪ್ರಾಪ್ಯೇಹ ಲೋಕೇ ಸತ್ಕಾರಂ ಸುಗತಿಂ ಪ್ರತಿಪದ್ಯತೇ||

ಸದಾಚಾರೀ, ಶೀಲಸಂಪನ್ನ, ಪ್ರಸನ್ನಾತ್ಮಾ, ಆತ್ಮಜ್ಞಾನವಿರುವವನು ಈ ಲೋಕದಲ್ಲಿ ಸತ್ಕಾರಗಳನ್ನು ಪಡೆದು ಮರಣಾನಂತರ ಸದ್ಗತಿಯನ್ನು ಹೊಂದುತ್ತಾನೆ.

12154024a ಕರ್ಮ ಯಚ್ಚುಭಮೇವೇಹ ಸದ್ಭಿರಾಚರಿತಂ ಚ ಯತ್|

12154024c ತದೇವ ಜ್ಞಾನಯುಕ್ತಸ್ಯ ಮುನೇರ್ಧರ್ಮೋ ನ ಹೀಯತೇ||

ಯಾವುದನ್ನು ಶುಭಕರ್ಮವೆಂದು ಹೇಳಲಾಗಿದೆಯೋ ಮತ್ತು ಸತ್ಪುರುಷರು ಹೇಗೆ ನಡೆದುಕೊಂಡಿದ್ದರೋ ಅದೇ ಜ್ಞಾನಯುಕ್ತ ಮುನಿಯ ಧರ್ಮ. ಅದರಿಂದ ಅವನ ಧರ್ಮವು ಎಂದೂ ನಷ್ಟವಾಗುವುದಿಲ್ಲ.

12154025a ನಿಷ್ಕ್ರಮ್ಯ ವನಮಾಸ್ಥಾಯ ಜ್ಞಾನಯುಕ್ತೋ ಜಿತೇಂದ್ರಿಯಃ|

12154025c ಕಾಲಾಕಾಂಕ್ಷೀ ಚರನ್ನೇವಂ ಬ್ರಹ್ಮಭೂಯಾಯ ಕಲ್ಪತೇ||

ಮನೆಯಿಂದ ಹೊರಟು ಅರಣ್ಯವನ್ನು ಸೇರಿ ಮೃತ್ಯುಕಾಲವನ್ನೇ ಪ್ರತೀಕ್ಷಿಸುತ್ತಾ ಸಂಚರಿಸುವ ಜ್ಞಾನಯುಕ್ತ ಜಿತೇಂದ್ರಿಯನು ಬ್ರಹ್ಮಭಾವವನ್ನು ಹೊಂದಲು ಸಮರ್ಥನಾಗುತ್ತಾನೆ.

12154026a ಅಭಯಂ ಯಸ್ಯ ಭೂತೇಭ್ಯೋ ಭೂತಾನಾಮಭಯಂ ಯತಃ|

12154026c ತಸ್ಯ ದೇಹಾದ್ವಿಮುಕ್ತಸ್ಯ ಭಯಂ ನಾಸ್ತಿ ಕುತಶ್ಚನ||

ಅನ್ಯ ಜೀವಿಗಳಿಗೆ ಅಭಯದಾಯಕನಾದ ಮತ್ತು ಅನ್ಯ ಜೀವಿಗಳಿಗೆ ಭಯಪಡದ ಆ ದೇಹಾಭಿಮಾನರಹಿತ ಮಹಾತ್ಮನಿಗೆ ಎಲ್ಲಿಂದಲೂ ಭಯವಿರುವುದಿಲ್ಲ.

12154027a ಅವಾಚಿನೋತಿ ಕರ್ಮಾಣಿ ನ ಚ ಸಂಪ್ರಚಿನೋತಿ ಹ|

12154027c ಸಮಃ ಸರ್ವೇಷು ಭೂತೇಷು ಮೈತ್ರಾಯಣಗತಿಶ್ಚರೇತ್||

ಅವನು ಪ್ರಾರಬ್ಧ ಕರ್ಮಗಳನ್ನು ಕ್ಷೀಣಿಸಿಕೊಳ್ಳುತ್ತಾನೆ ಮತ್ತು ಹೊಸ ಕರ್ಮಗಳನ್ನು ಸಂಪಾದಿಸಿಕೊಳ್ಳುವುದಿಲ್ಲ. ಸರ್ವ ಭೂತಗಳಲ್ಲಿಯೂ ಸಮಭಾವವನ್ನಿರಿಸಿ ಎಲ್ಲರ ಮಿತ್ರರಂತೆ ಅಭಯದಾನ ನೀಡುತ್ತಾ ಸಂಚರಿಸುತ್ತಾನೆ.

12154028a ಶಕುನೀನಾಮಿವಾಕಾಶೇ ಜಲೇ ವಾರಿಚರಸ್ಯ ವಾ|

12154028c ಯಥಾ ಗತಿರ್ನ ದೃಶ್ಯೇತ ತಥಾ ತಸ್ಯ ನ ಸಂಶಯಃ||

ಆಕಾಶದಲ್ಲಿ ಹಾರುವ ಪಕ್ಷಿಗಳ ಮತ್ತು ನೀರಿನಲ್ಲಿ ಸಂಚರಿಸುವ ಜಲಚರ ಜಂತುಗಳ ಪಾದಚಿಹ್ನೆಯು ಹೇಗೆ ಕಾಣಲು ಸಿಗುವುದಿಲ್ಲವೋ ಹಾಗೆ ಜ್ಞಾನಿಯ ಗತಿಯನ್ನು ತಿಳಿದುಕೊಳ್ಳಲೂ ಸಾಧ್ಯವಾಗುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ.

12154029a ಗೃಹಾನುತ್ಸೃಜ್ಯ ಯೋ ರಾಜನ್ಮೋಕ್ಷಮೇವಾಭಿಪದ್ಯತೇ|

12154029c ಲೋಕಾಸ್ತೇಜೋಮಯಾಸ್ತಸ್ಯ ಕಲ್ಪಂತೇ ಶಾಶ್ವತೀಃ ಸಮಾಃ||

ರಾಜನ್! ಮನೆಯನ್ನು ತೊರೆದು ಮೋಕ್ಷವನ್ನು ಅರಸಿ ಹೋಗುವವನಿಗೆ ಅನಂತ ವರ್ಷಗಳ ದಿವ್ಯ ತೇಜೋಮಯ ಲೋಕವು ಪ್ರಾಪ್ತವಾಗುತ್ತದೆ.

12154030a ಸಂನ್ಯಸ್ಯ ಸರ್ವಕರ್ಮಾಣಿ ಸಂನ್ಯಸ್ಯ ವಿಧಿವತ್ತಪಃ|

12154030c ಸಂನ್ಯಸ್ಯ ವಿವಿಧಾ ವಿದ್ಯಾಃ ಸರ್ವಂ ಸಂನ್ಯಸ್ಯ ಚೈವ ಹ||

12154031a ಕಾಮೇಷು ಚಾಪ್ಯನಾವೃತ್ತಃ ಪ್ರಸನ್ನಾತ್ಮಾತ್ಮವಿಚ್ಚುಚಿಃ|

12154031c ಪ್ರಾಪ್ಯೇಹ ಲೋಕೇ ಸತ್ಕಾರಂ ಸ್ವರ್ಗಂ ಸಮಭಿಪದ್ಯತೇ||

ಸರ್ವಕರ್ಮಗಳನ್ನೂ ತ್ಯಾಗಮಾಡಿ, ತಪಸ್ಸನ್ನೂ ತ್ಯಾಗಮಾಡಿ, ವಿವಿಧ ವಿದ್ಯೆಗಳನ್ನೂ ತ್ಯಾಗಮಾಡಿ , ಮತ್ತು ಸರ್ವವನ್ನೂ ತ್ಯಾಗಮಾಡಿ, ಕಾಮಗಳನ್ನು ತೊರೆದು ಪ್ರಸನ್ನಾತ್ಮನೂ ಶುಚಿಯೂ ಆಗಿರುವವನಿಗೆ ಈ ಲೋಕದಲ್ಲಿ ಸತ್ಕಾರ ಮತ್ತು ಪರಲೋಕದಲ್ಲಿ ಸ್ವರ್ಗವು ದೊರೆಯುತ್ತದೆ.

12154032a ಯಚ್ಚ ಪೈತಾಮಹಂ ಸ್ಥಾನಂ ಬ್ರಹ್ಮರಾಶಿಸಮುದ್ಭವಮ್|

12154032c ಗುಹಾಯಾಂ ಪಿಹಿತಂ ನಿತ್ಯಂ ತದ್ದಮೇನಾಭಿಪದ್ಯತೇ||

ಬ್ರಹ್ಮರಾಶಿಯಿಂದ ಉತ್ಪನ್ನನಾಗಿರುವ ಪಿತಾಮಹ ಬ್ರಹ್ಮನ ಉತ್ತಮ ಧಾಮವು ಹೃದಯಗುಹೆಯಲ್ಲಿ ಅಡಗಿಕೊಂಡಿದೆ. ಅದನ್ನು ದಮೆಯಿಂದಲೇ ನಿತ್ಯವೂ ಪಡೆದುಕೊಳ್ಳಬಹುದು.

12154033a ಜ್ಞಾನಾರಾಮಸ್ಯ ಬುದ್ಧಸ್ಯ ಸರ್ವಭೂತಾವಿರೋಧಿನಃ|

12154033c ನಾವೃತ್ತಿಭಯಮಸ್ತೀಹ ಪರಲೋಕೇ ಭಯಂ ಕುತಃ||

ಯಾವ ಪ್ರಾಣಿಯೊಡನೆಯೂ ವಿರೋಧವಿಲ್ಲದ ಮತ್ತು ಜ್ಞಾನಸ್ವರೂಪ ಆತ್ಮನಲ್ಲಿ ರಮಿಸುತ್ತಿರುವ ಜ್ಞಾನಿಗೆ ಈ ಲೋಕದಲ್ಲಿ ಪುನಃ ಜನ್ಮತಾಳುವ ಭಯವಿರುವುದಿಲ್ಲ. ಹಾಗಿರುವಾಗ ಅವನಿಗೆ ಪರಲೋಕದ ಭಯವು ಎಲ್ಲಿಂದ?

12154034a ಏಕ ಏವ ದಮೇ ದೋಷೋ ದ್ವಿತೀಯೋ ನೋಪಪದ್ಯತೇ|

12154034c ಯದೇನಂ ಕ್ಷಮಯಾ ಯುಕ್ತಮಶಕ್ತಂ ಮನ್ಯತೇ ಜನಃ||

ದಮೆಯಲ್ಲಿ ಒಂದೇ ಒಂದು ದೋಷವಿದೆ. ಎರಡನೆಯದು ಇಲ್ಲ. ಅದು ಏನೆಂದರೆ ಕ್ಷಮಾಶೀಲನಾಗಿರುವುದರ ಕಾರಣದಿಂದ ಅವನನ್ನು ಜನರು ಅಸಮರ್ಥನೆಂದು ತಿಳಿದುಕೊಳ್ಳುತ್ತಾರೆ.

12154035a ಏತಸ್ಯ ತು ಮಹಾಪ್ರಾಜ್ಞ ದೋಷಸ್ಯ ಸುಮಹಾನ್ಗುಣಃ|

12154035c ಕ್ಷಮಾಯಾಂ ವಿಪುಲಾ ಲೋಕಾಃ ಸುಲಭಾ ಹಿ ಸಹಿಷ್ಣುನಾ||

ಮಹಾಪ್ರಾಜ್ಞ! ಇದೊಂದು ದೋಷವೇ ಅದರ ಮಹಾಗುಣವಾಗಿದೆ. ಕ್ಷಮೆಯಿಂದ ಸಹಿಷ್ಣುವಿಗೆ ವಿಪುಲ ಲೋಕಗಳು ಸುಲಭವಾಗುತ್ತವೆ.

12154036a ದಾಂತಸ್ಯ ಕಿಮರಣ್ಯೇನ ತಥಾದಾಂತಸ್ಯ ಭಾರತ|

12154036c ಯತ್ರೈವ ಹಿ ವಸೇದ್ದಾಂತಸ್ತದರಣ್ಯಂ ಸ ಆಶ್ರಮಃ||

ಭಾರತ! ಸಂಯಮಿಯು ಅರಣ್ಯಕ್ಕೆ ಹೋಗುವ ಅವಶ್ಯಕತೆಯಾದರೂ ಏನಿದೆ? ಮತ್ತು ಅಸಂಯಮಿಯು ಅರಣ್ಯಕ್ಕೆ ಹೋಗುವುದರಿಂದ ಲಾಭವಾದರೂ ಏನಿದೆ? ಸಂಯಮಿಯು ಎಲ್ಲಿಯೇ ಇರಲಿ ಅದೇ ಅವನಿಗೆ ವನ ಮತ್ತು ಆಶ್ರಮವು.””

12154037 ವೈಶಂಪಾಯನ ಉವಾಚ|

12154037a ಏತದ್ ಭೀಷ್ಮಸ್ಯ ವಚನಂ ಶ್ರುತ್ವಾ ರಾಜಾ ಯುಧಿಷ್ಠಿರಃ|

12154037c ಅಮೃತೇನೇವ ಸಂತೃಪ್ತಃ ಪ್ರಹೃಷ್ಟಃ ಸಮಪದ್ಯತ||

ವೈಶಂಪಾಯನನು ಹೇಳಿದನು: “ಭೀಷ್ಮನ ಈ ಮಾತನ್ನು ಕೇಳಿ ರಾಜಾ ಯುಧಿಷ್ಠಿರನು ಅಮೃತವನ್ನು ಕುಡಿದವನಂತೆಯೇ ಸಂತೃಪ್ತನಾಗಿ ಪ್ರಹೃಷ್ಟನಾದನು.

12154038a ಪುನಶ್ಚ ಪರಿಪಪ್ರಚ್ಚ ಭೀಷ್ಮಂ ಧರ್ಮಭೃತಾಂ ವರಮ್|

12154038c ತಪಃ ಪ್ರತಿ ಸ ಚೋವಾಚ ತಸ್ಮೈ ಸರ್ವಂ ಕುರೂದ್ವಹ||

ಕರೂದ್ವಹ! ಅವನು ಪುನಃ ಧರ್ಮಭೃತರಲ್ಲಿ ಶ್ರೇಷ್ಠ ಭೀಷ್ಮನಲ್ಲಿ ತಪಸ್ಸಿನ ಕುರಿತು ಕೇಳಿದನು. ಆಗ ಭೀಷ್ಮನು ಅವನಿಗೆ ಈ ವಿಷಯದಲ್ಲಿ ಎಲ್ಲವನ್ನೂ ಹೇಳಿದನು.

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ದಮಕಥನೇ ಚತುಷ್ಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ದಮನಕಥನ ಎನ್ನುವ ನೂರಾಐವತ್ನಾಲ್ಕನೇ ಅಧ್ಯಾಯವು.

[1] ಸ್ವಾಧ್ಯಾಯೇ ಕೃತಯತ್ನಸ್ಯ ನರಸ್ಯ ಚ ಪಿತಾಮಹ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ಬ್ರೂಹ್ಯಶೇಷತಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಮನೋನಿಗ್ರಹ ಅಥವಾ ಸಂಯಮ ಮತ್ತು ಇಂದ್ರಿಯ ನಿಗ್ರಹ ಅಥವಾ ಸಂಯಮ.

[4] ದಮಾತ್ತಸ್ಯ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[5] ಪ್ರಸನ್ನಾತ್ಮಾಽತ್ಮವಿಚ್ಚ ಯಃ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.