Shanti Parva: Chapter 152

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೨

ಸಮಸ್ತ ಪಾಪಗಳಿಗೆ ಲೋಭವೇ ಕಾರಣವೆಂದು ಹೇಳುವುದು ಮತ್ತು ಶಿಷ್ಟ ಪುರುಷರ ವರ್ಣನೆ (೧-೩೨).

12152001 ಯುಧಿಷ್ಠಿರ ಉವಾಚ|

12152001a ಪಾಪಸ್ಯ ಯದಧಿಷ್ಠಾನಂ ಯತಃ ಪಾಪಂ ಪ್ರವರ್ತತೇ|

12152001c ಏತದಿಚ್ಚಾಮ್ಯಹಂ ಜ್ಞಾತುಂ ತತ್ತ್ವೇನ ಭರತರ್ಷಭ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಾಪದ ಅಧಿಷ್ಠಾನ[1]ವೇನು ಮತ್ತು ಯಾವುದರಿಂದ ಅದು ಹುಟ್ಟುತ್ತದೆ ಎನ್ನುವುದನ್ನು ಯಥಾರ್ಥರೂಪದಲ್ಲಿ ತಿಳಿಯಲು ಬಯಸುತ್ತೇನೆ.”

12152002 ಭೀಷ್ಮ ಉವಾಚ|

12152002a ಪಾಪಸ್ಯ ಯದಧಿಷ್ಠಾನಂ ತಚ್ಚೃಣುಷ್ವ ನರಾಧಿಪ|

12152002c ಏಕೋ ಲೋಭೋ ಮಹಾಗ್ರಾಹೋ ಲೋಭಾತ್ಪಾಪಂ ಪ್ರವರ್ತತೇ||

ಭೀಷ್ಮನು ಹೇಳಿದನು: “ನರಾಧಿಪ! ಪಾಪದ ಅಧಿಷ್ಠಾನವಿದೆ. ಅದನ್ನು ಕೇಳು. ಏಕಮಾತ್ರ ಲೋಭವೇ ಪಾಪದ ಅಧಿಷ್ಠಾನವು. ಮನುಷ್ಯನು ಮುಂದೆಹೋಗುವುದನ್ನು ಹಿಡಿದು ತಡೆಯುವುದೇ ಅದು. ಲೋಭದಿಂದಲೇ ಪಾಪವು ಹುಟ್ಟುತ್ತದೆ.

12152003a ಅತಃ ಪಾಪಮಧರ್ಮಶ್ಚ ತಥಾ ದುಃಖಮನುತ್ತಮಮ್|

12152003c ನಿಕೃತ್ಯಾ ಮೂಲಮೇತದ್ಧಿ ಯೇನ ಪಾಪಕೃತೋ ಜನಾಃ||

ಲೋಭದಿಂದಲೇ ಪಾಪ, ಅಧರ್ಮ ಮತ್ತು ಮಹಾ ದುಃಖದ ಉತ್ಪತ್ತಿಯಾಗುತ್ತದೆ. ಮೋಸ ಮತ್ತು ಕಪಟತನದ ಮೂಲ ಕಾರಣವೂ ಲೋಭವೇ. ಇದರ ಕಾರಣದಿಂದಲೇ ಮನುಷ್ಯರು ಪಾಪಾಚಾರಿಗಳಾಗುತ್ತಾರೆ.

12152004a ಲೋಭಾತ್ಕ್ರೋಧಃ ಪ್ರಭವತಿ ಲೋಭಾತ್ಕಾಮಃ ಪ್ರವರ್ತತೇ|

12152004c ಲೋಭಾನ್ಮೋಹಶ್ಚ ಮಾಯಾ ಚ ಮಾನಸ್ತಂಭಃ ಪರಾಸುತಾ||

ಲೋಭದಿಂದ ಕ್ರೋಧವುಂಟಾಗುತ್ತದೆ. ಲೋಭದಿಂದ ಕಾಮವು ಹುಟ್ಟುತ್ತದೆ. ಲೋಭದಿಂದ ಮೋಹ, ಮಾಯೆ, ಅಭಿಮಾನ, ಉದ್ಧಂಡತೆ ಮತ್ತು ಪರಾಧೀನತೆ ಮೊದಲಾದ ದೋಷಗಳು ಪ್ರಕಟವಾಗುತ್ತವೆ.

12152005a ಅಕ್ಷಮಾ ಹ್ರೀಪರಿತ್ಯಾಗಃ ಶ್ರೀನಾಶೋ ಧರ್ಮಸಂಕ್ಷಯಃ|

12152005c ಅಭಿಧ್ಯಾಪ್ರಜ್ಞತಾ ಚೈವ ಸರ್ವಂ ಲೋಭಾತ್ ಪ್ರವರ್ತತೇ||

ಅಸಹನಶೀಲತೆ, ನಿರ್ಲಜ್ಜತೆ, ಸಂಪತ್ತಿನಾಶ, ಧರ್ಮಕ್ಷಯ, ಚಿಂತೆ ಮತ್ತು ಅಪಯಶ – ಇವೆಲ್ಲವೂ ಲೋಭದಿಂದಲೇ ಉಂಟಾಗುತ್ತವೆ.

12152006a ಅನ್ಯಾಯಶ್ಚಾವಿತರ್ಕಶ್ಚ[2] ವಿಕರ್ಮಸು ಚ ಯಾಃ ಕ್ರಿಯಾಃ|

12152006c ಕೂಟ[3]ವಿದ್ಯಾದಯಶ್ಚೈವ ರೂಪೈಶ್ವರ್ಯಮದಸ್ತಥಾ||

12152007a ಸರ್ವಭೂತೇಷ್ವವಿಶ್ವಾಸಃ ಸರ್ವಭೂತೇಷ್ವನಾರ್ಜವಮ್|

12152007c ಸರ್ವಭೂತೇಷ್ವಭಿದ್ರೋಹಃ ಸರ್ವಭೂತೇಷ್ವಯುಕ್ತತಾ[4]|

ಲೋಭದಿಂದ ಅನ್ಯಾಯ, ತರ್ಕವಿಲ್ಲದಿರುವಿಕೆ, ಶಾಸ್ತ್ರವಿರುದ್ಧ ಕರ್ಮಗಳ ಪ್ರವೃತ್ತಿ, ಪಂಗಡ-ವಿದ್ಯೆ-ರೂಪ ಮತ್ತು ಐಶ್ವರ್ಯ ಮದ, ಸಮಸ್ತ ಪ್ರಾಣಿಗಳ ಮೇಲೂ ಅವಿಶ್ವಾಸ, ಸರ್ವ್ವಪ್ರಾಣಿಗಳೊಂದಿಗೂ ಕುಟಿಲತೆಯಿಂದ ವರ್ತಿಸುವುದು, ಸರ್ವಭೂತಗಳ ಮೇಲೂ ದ್ರೋಹ, ಮತ್ತು ಸರ್ವಭೂತಗಳ ತಿರಸ್ಕಾರ ಇವೇ ಮೊದಲಾದ ಪಾಪಗಳು ಉಂಟಾಗುವವು.

12152007e ಹರಣಂ ಪರವಿತ್ತಾನಾಂ ಪರದಾರಾಭಿಮರ್ಶನಮ್||

12152008a ವಾಗ್ವೇಗೋ ಮಾನಸೋ ವೇಗೋ ನಿಂದಾವೇಗಸ್ತಥೈವ ಚ|

12152008c ಉಪಸ್ಥೋದರಯೋರ್ವೇಗೋ ಮೃತ್ಯುವೇಗಶ್ಚ ದಾರುಣಃ||

12152009a ಈರ್ಷ್ಯಾವೇಗಶ್ಚ ಬಲವಾನ್ಮಿಥ್ಯಾವೇಗಶ್ಚ ದುಸ್ತ್ಯಜಃ|

12152009c ರಸವೇಗಶ್ಚ ದುರ್ವಾರಃ ಶ್ರೋತ್ರವೇಗಶ್ಚ ದುಃಸಹಃ||

12152010a ಕುತ್ಸಾ ವಿಕತ್ಥಾ ಮಾತ್ಸರ್ಯಂ ಪಾಪಂ ದುಷ್ಕರಕಾರಿತಾ|

12152010c ಸಾಹಸಾನಾಂ ಚ ಸರ್ವೇಷಾಮಕಾರ್ಯಾಣಾಂ ಕ್ರಿಯಾಸ್ತಥಾ||

ಪರಧನದ ಅಪಹರಣ, ಪರಸ್ತ್ರೀಯೊಡನೆ ಬಲಾತ್ಕಾರ, ವೇಗವಾಗಿ ಮಾತನಾಡುವುದು, ವೇಗವಾಗಿ ಯೋಚಿಸುವುದು, ನಿಂದಿಸುವ ವಿಶೇಷ ಪ್ರವೃತ್ತಿ, ಜನನೇಂದ್ರಿಯದ ವೇಗ, ಹೊಟ್ಟೆಯ ವೇಗ, ಮೃತ್ಯುವಿನ ಭಯಂಕರ ವೇಗ ಅರ್ಥಾತ್ ಆತ್ಮಹತ್ಯೆ, ಈರ್ಷೆಯ ಪ್ರಬಲ ವೇಗ, ಸುಳ್ಳಿನ ದುರ್ಜಯ ವೇಗ, ಅನಿವಾರ್ಯ ರಸನೇಂದ್ರಿಯದ ವೇಗ, ದುಃಸ್ಸಹ ಶ್ರೋತ್ರೇಂದ್ರಿಯದ ವೇಗ, ಘೃಣ, ಆತ್ಮಪ್ರಶಂಸನೆ, ಮಾತ್ಸರ್ಯ, ಪಾಪ, ದುಷ್ಕರ ಕರ್ಮಗಳ ಪ್ರವೃತ್ತಿ, ಅಯೋಗ್ಯ ಕರ್ಮಗಳನ್ನು ಮಾಡುವುದು ಇವೆಲ್ಲವುಗಳ ಕಾರಣವೂ ಲೋಭವೇ.

12152011a ಜಾತೌ ಬಾಲ್ಯೇಽಥ ಕೌಮಾರೇ ಯೌವನೇ ಚಾಪಿ ಮಾನವಃ|

12152011c ನ ಸಂತ್ಯಜತ್ಯಾತ್ಮಕರ್ಮ ಯನ್ನ ಜೀರ್ಯತಿ ಜೀರ್ಯತಃ||

12152012a ಯೋ ನ ಪೂರಯಿತುಂ ಶಕ್ಯೋ ಲೋಭಃ ಪ್ರಾಪ್ತ್ಯಾ ಕುರೂದ್ವಹ|

12152012c ನಿತ್ಯಂ ಗಂಭೀರತೋಯಾಭಿರಾಪಗಾಭಿರಿವೋದಧಿಃ|

ಕುರೂದ್ವಹ! ಮನುಷ್ಯನು ಹುಟ್ಟುವಾಗ, ಬಾಲ್ಯಾವಸ್ಥೆಯಲ್ಲಿ, ಕುಮಾರಾವಸ್ಥೆಯಲ್ಲಿ ಮತ್ತು ಯೌವನದಲ್ಲಿ ಲೋಭದ ಕಾರಣದಿಂದಲೇ ತನ್ನ ಪಾಪ ಕರ್ಮಗಳನ್ನು ತ್ಯಜಿಸಲು ಅಸಮರ್ಥನಾಗುತ್ತಾನೆ ಮತ್ತು ಮನುಷ್ಯನ ವೃದ್ಧಾಪ್ಯದಲ್ಲಿಯೂ ಲೋಭವು ಜೀರ್ಣವಾಗುವುದಿಲ್ಲ. ತುಂಬಿಹರಿಯುವ ನದಿಗಳು ಸೇರಿಕೊಂಡರೂ ಸಮುದ್ರವು ಹೇಗೆ ತುಂಬುವುದಿಲ್ಲವೋ ಹಾಗೆ ಎಷ್ಟೇ ಪದಾರ್ಥಗಳ ಲಾಭವಾದರೂ ಲೋಭದ ಹೊಟ್ಟೆಯು ಎಂದೂ ತುಂಬುವುದಿಲ್ಲ.

12152012e ನ ಪ್ರಹೃಷ್ಯತಿ ಲಾಭೈರ್ಯೋ ಯಶ್ಚ ಕಾಮೈರ್ನ ತೃಪ್ಯತಿ||

12152013a ಯೋ ನ ದೇವೈರ್ನ ಗಂಧರ್ವೈರ್ನಾಸುರೈರ್ನ ಮಹೋರಗೈಃ|

12152013c ಜ್ಞಾಯತೇ ನೃಪ ತತ್ತ್ವೇನ ಸರ್ವೈರ್ಭೂತಗಣೈಸ್ತಥಾ|

ಲೋಭಿಯು ಅತಿಯಾದ ಲಾಭವನ್ನು ಪಡೆದುಕೊಂಡರೂ ಸಂತುಷ್ಟನಾಗುವುದಿಲ್ಲ. ಕಾಮಭೋಗಗಳಿಂದ ಅವನು ಎಂದೂ ತೃಪ್ತನಾಗುವುದಿಲ್ಲ. ನೃಪ! ದೇವತೆಗಳಾಗಲೀ ಗಂಧರ್ವರಾಗಲೀ, ಅಸುರರರಾಗಲೀ, ಮಹಾ ಉರಗಗಳಾಗಲೀ ಮತ್ತು ಸರ್ವಭೂತಗಣಗಳೇ ಆಗಲೀ ಲೋಭದ ಸ್ವರೂಪವನ್ನು ಯಥಾರ್ಥವಾಗಿ ತಿಳಿದುಕೊಳ್ಳಲಾರರು.

12152013e ಸ ಲೋಭಃ ಸಹ ಮೋಹೇನ ವಿಜೇತವ್ಯೋ ಜಿತಾತ್ಮನಾ||

12152014a ದಂಭೋ ದ್ರೋಹಶ್ಚ ನಿಂದಾ ಚ ಪೈಶುನ್ಯಂ ಮತ್ಸರಸ್ತಥಾ|

12152014c ಭವಂತ್ಯೇತಾನಿ ಕೌರವ್ಯ ಲುಬ್ಧಾನಾಮಕೃತಾತ್ಮನಾಮ್||

ಕೌರವ್ಯ! ಯಾರು ತನ್ನ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡಿದ್ದಾನೋ ಆ ಪುರುಷನು ಮೋಹಸಹಿತ ಲೋಭವನ್ನೂ ಗೆಲ್ಲಬೇಕು. ದಂಭ, ದ್ರೋಹ, ನಿಂದೆ, ಚಾಡಿಹೇಳುವುದು, ಮತ್ತು ಮಾತ್ಸರ್ಯ – ಈ ಎಲ್ಲ ದೋಷಗಳೂ ಅಜಿತಾತ್ಮ ಲೋಭಿಗಳಲ್ಲಿಯೇ ಇರುತ್ತವೆ.

12152015a ಸುಮಹಾಂತ್ಯಪಿ ಶಾಸ್ತ್ರಾಣಿ ಧಾರಯಂತಿ ಬಹುಶ್ರುತಾಃ|

12152015c ಚೇತ್ತಾರಃ ಸಂಶಯಾನಾಂ ಚ ಕ್ಲಿಶ್ಯಂತೀಹಾಲ್ಪಬುದ್ಧಯಃ||

ಬಹುಶ್ರುತ ವಿದ್ವಾಂಸರು ದೊಡ್ಡ ದೊಡ್ಡ ಶಾಸ್ತ್ರಗಳನ್ನೂ ಬಾಯಿಪಾಠ ಮಾಡಿಕೊಳ್ಳುತ್ತಾರೆ. ಎಲ್ಲರ ಶಂಕೆಗಳನ್ನೂ ನಿವಾರಿಸುತ್ತಾರೆ. ಆದರೆ ಲೋಭಕ್ಕೆ ಒಳಗಾದರೆ ಅವರು ಬುದ್ಧಿಯನ್ನು ಕಳೆದುಕೊಂಡು ಕಷ್ಟಪಡುತ್ತಾರೆ.

12152016a ದ್ವೇಷಕ್ರೋಧಪ್ರಸಕ್ತಾಶ್ಚ ಶಿಷ್ಟಾಚಾರಬಹಿಷ್ಕೃತಾಃ|

12152016c ಅಂತಃಕ್ಷುರಾ ವಾಙ್ಮಧುರಾಃ ಕೂಪಾಶ್ಚನ್ನಾಸ್ತೃಣೈರಿವ|

12152016e ಧರ್ಮವೈತಂಸಿಕಾಃ ಕ್ಷುದ್ರಾ ಮುಷ್ಣಂತಿ ಧ್ವಜಿನೋ ಜಗತ್||

ದ್ವೇಷ-ಕ್ರೋಧಗಳಲ್ಲಿ ಸಿಲುಕಿ ಶಿಷ್ಟಾಚಾರಗಳನ್ನು ಬಿಟ್ಟುಬಿಡುತ್ತಾರೆ ಮತ್ತು ಮೇಲಿಂದ ಸಿಹಿಮಾತುಗಳನ್ನಾಡಿ ಒಳಗಿನಿಂದ ಅತ್ಯಂತ ಕಠೋರರಾಗಿಬಿಡುತ್ತಾರೆ. ಅವರ ಪರಿಸ್ಥಿತಿಯು ಹುಲ್ಲುಗಳಿಂದ ಮುಚ್ಚಲ್ಪಟ್ಟ ಬಾವಿಯಂತಾಗಿಬಿಡುತ್ತದೆ. ಧರ್ಮದ ಹೆಸರಿನಲ್ಲಿ ಅವರು ಪ್ರಪಂಚಕ್ಕೇ ಮೋಸಮಾಡುತ್ತಾರೆ. ಆ ಕ್ಷುದ್ರ ಮನುಷ್ಯರು ಧರ್ಮಧ್ವಜಿಗಳಾಗಿ ಜಗತ್ತಿನ ಲೂಟಿಮಾಡುತ್ತಾರೆ.

12152017a ಕುರ್ವತೇ ಚ ಬಹೂನ್ಮಾರ್ಗಾಂಸ್ತಾಂಸ್ತಾನ್ ಹೇತುಬಲಾಶ್ರಿತಾಃ|

12152017c ಸರ್ವಂ ಮಾರ್ಗಂ ವಿಲುಂಪಂತಿ ಲೋಭಾಜ್ಞಾನೇಷು ನಿಷ್ಠಿತಾಃ||

ಯುಕ್ತಿಬಲವನ್ನಾಶ್ರಯಿಸಿ ಅನೇಕ ಅಸತ್ಯಮಾರ್ಗಗಳನ್ನು ತಂದೊಡ್ಡುತ್ತಾರೆ ಮತ್ತು ಲೋಭ-ಅಜ್ಞಾನಗಳಲ್ಲಿ ಮುಳುಗಿ ಸತ್ಪುರುಷರು ಸ್ಥಾಪಿಸಿದ ಮಾರ್ಗಗಳನ್ನು ನಾಶಮಾಡುತ್ತಾರೆ.

12152018a ಧರ್ಮಸ್ಯಾಹ್ರಿಯಮಾಣಸ್ಯ ಲೋಭಗ್ರಸ್ತೈರ್ದುರಾತ್ಮಭಿಃ|

12152018c ಯಾ ಯಾ ವಿಕ್ರಿಯತೇ ಸಂಸ್ಥಾ ತತಃ ಸಾಭಿಪ್ರಪದ್ಯತೇ||

ಲೋಭಗ್ರಸ್ತ ದುರಾತ್ಮರು ಅಪಹರಿಸಿ ವಿಕೃತಗೊಳಿಸಿದ ಧರ್ಮದ ಆಯಾ ಅಂಶಗಳು ಅದೇ ರೂಪಗಳಲ್ಲಿ ಪ್ರಚಲಿತವಾಗಿಬಿಡುತ್ತದೆ.

12152019a ದರ್ಪಃ ಕ್ರೋಧೋ ಮದಃ ಸ್ವಪ್ನೋ ಹರ್ಷಃ ಶೋಕೋಽತಿಮಾನಿತಾ|

12152019c ತತ ಏವ ಹಿ ಕೌರವ್ಯ ದೃಶ್ಯಂತೇ ಲುಬ್ಧಬುದ್ಧಿಷು|

ಕೌರವ್ಯ! ಲೋಭದಲ್ಲಿ ಮುಳುಗಿರುವವರಲ್ಲಿ ದರ್ಪ, ಕ್ರೋಧ, ಮದ, ದುಃಸ್ವಪ್ನ, ಹರ್ಷ, ಶೋಕ ಮತ್ತು ಅತಿ ಅಭಿಮಾನ ಇವೆಲ್ಲ ದೋಷಗಳೂ ಕಂಡುಬರುತ್ತವೆ.

12152019e ಏತಾನಶಿಷ್ಟಾನ್ಬುಧ್ಯಸ್ವ ನಿತ್ಯಂ ಲೋಭಸಮನ್ವಿತಾನ್||

12152020a ಶಿಷ್ಟಾಂಸ್ತು ಪರಿಪೃಚ್ಚೇಥಾ ಯಾನ್ವಕ್ಷ್ಯಾಮಿ ಶುಚಿವ್ರತಾನ್|

ಸದಾ ಲೋಭದಲ್ಲಿ ಮುಳುಗಿರುವವರನ್ನು ಅಶಿಷ್ಟರೆಂದು ತಿಳಿ. ಶಿಷ್ಟ ಪುರುಷರಲ್ಲಿಯೇ ನಿನ್ನ ಶಂಕೆಗಳನ್ನು ಕೇಳಬೇಕು. ಪವಿತ್ರ ನಿಯಮಗಳನ್ನು ಪಾಲಿಸುವ ಆ ಶಿಷ್ಟ ಪುರುಷರ ಪರಿಚಯವನ್ನು ನಿನಗೆ ನೀಡುತ್ತೇನೆ.

12152020c ಯೇಷು ವೃತ್ತಿಭಯಂ[5] ನಾಸ್ತಿ ಪರಲೋಕಭಯಂ ನ ಚ||

12152021a ನಾಮಿಷೇಷು ಪ್ರಸಂಗೋಽಸ್ತಿ ನ ಪ್ರಿಯೇಷ್ವಪ್ರಿಯೇಷು ಚ|

ಇವರಿಗೆ ವೃತ್ತಿಭಯವಿರುವುದಿಲ್ಲ. ಪರಲೋಕದ ಭಯವೂ ಇರುವುದಿಲ್ಲ. ಅವರಿಗೆ ಭೋಗಗಳಲ್ಲಿ ಆಸಕ್ತಿಯಿರುವುದಿಲ್ಲ ಮತ್ತು ಪ್ರಿಯ-ಅಪ್ರಿಯ ಸಂಗತಿಗಳೇ ಇರುವುದಿಲ್ಲ.

12152021c ಶಿಷ್ಟಾಚಾರಃ ಪ್ರಿಯೋ ಯೇಷು ದಮೋ ಯೇಷು ಪ್ರತಿಷ್ಠಿತಃ||

12152022a ಸುಖಂ ದುಃಖಂ ಪರಂ ಯೇಷಾಂ ಸತ್ಯಂ ಯೇಷಾಂ ಪರಾಯಣಮ್|

ಅವರಿಗೆ ಶಿಷ್ಟಾಚಾರವು ಪ್ರಿಯವಾಗಿರುತ್ತದೆ. ಅವರಲ್ಲಿ ಇಂದ್ರಿಯಸಂಯಮವಿರುತ್ತದೆ. ಅವರಿಗೆ ಸುಖ-ದುಃಖಗಳು ಸಮಾನವಾಗಿರುತ್ತವೆ. ಸತ್ಯವೇ ಅವರ ಪರಮ ಆಶ್ರಯವಾಗಿರುತ್ತದೆ.

12152022c ದಾತಾರೋ ನ ಗೃಹೀತಾರೋ ದಯಾವಂತಸ್ತಥೈವ ಚ||

12152023a ಪಿತೃದೇವಾತಿಥೇಯಾಶ್ಚ ನಿತ್ಯೋದ್ಯುಕ್ತಾಸ್ತಥೈವ ಚ|

ಅವರು ಕೊಡುತ್ತಾರೆ; ತೆಗೆದುಕೊಳ್ಳುವುದಿಲ್ಲ. ಅವರು ಸ್ವಭಾವದಲ್ಲಿಯೇ ದಯಾವಂತರಾಗಿರುತ್ತಾರೆ. ಅವರು ದೇವತೆಗಳು, ಪಿತೃಗಳು ಮತ್ತು ಅತಿಥಿಗಳ ಸೇವಕರಾಗಿರುತ್ತಾರೆ ಮತ್ತು ಸತ್ಕರ್ಮ ಮಾಡುವುದರಲ್ಲಿ ಸದಾ ಉದ್ಯತರಾಗಿರುತ್ತಾರೆ.

12152023c ಸರ್ವೋಪಕಾರಿಣೋ ಧೀರಾಃ ಸರ್ವಧರ್ಮಾನುಪಾಲಕಾಃ||

12152024a ಸರ್ವಭೂತಹಿತಾಶ್ಚೈವ ಸರ್ವದೇಯಾಶ್ಚ ಭಾರತ|

ಭಾರತ! ಆ ಧೀರರು ಸರ್ವೋಪಕಾರಿಗಳಾಗಿರುತ್ತಾರೆ. ಸರ್ವಧರ್ಮಗಳನ್ನೂ ಪಾಲಿಸುವವರಾಗಿರುತ್ತಾರೆ. ಸರ್ವಭೂತಗಳ ಹಿತದಲ್ಲಿಯೇ ಇರುತ್ತಾರೆ ಮತ್ತು ಸರ್ವವನ್ನೂ ಕೊಡುವವರಾಗಿರುತ್ತಾರೆ.

12152024c ನ ತೇ ಚಾಲಯಿತುಂ ಶಕ್ಯಾ ಧರ್ಮವ್ಯಾಪಾರಪಾರಗಾಃ||

12152025a ನ ತೇಷಾಂ ಭಿದ್ಯತೇ ವೃತ್ತಂ ಯತ್ಪುರಾ ಸಾಧುಭಿಃ ಕೃತಮ್|

ಅವರನ್ನು ಸತ್ಕರ್ಮಗಳಿಂದ ವಿಚಲಿತರನ್ನಾಗಿ ಮಾಡಲಿಕ್ಕಾಗುವುದಿಲ್ಲ. ಅವರು ಕೇವಲ ಧರ್ಮಾನುಷ್ಠಾನಗಳಲ್ಲಿ ತತ್ಪರರಾಗಿರುತ್ತಾರೆ. ಹಿಂದಿನ ಶ್ರೇಷ್ಠ ಪುರುಷರು ಪಾಲಿಸುತ್ತಿದ್ದ ಸದಾಚಾರಗಳನ್ನೇ ಅವರೂ ಪಾಲಿಸುತ್ತಾರೆ. ಅವರ ಈ ಆಚಾರವು ಎಂದೂ ನಷ್ಟವಾಗುವುದಿಲ್ಲ.

12152025c ನ ತ್ರಾಸಿನೋ ನ ಚಪಲಾ ನ ರೌದ್ರಾಃ ಸತ್ಪಥೇ ಸ್ಥಿತಾಃ||

12152026a ತೇ ಸೇವ್ಯಾಃ ಸಾಧುಭಿರ್ನಿತ್ಯಂ ಯೇಷ್ವಹಿಂಸಾ ಪ್ರತಿಷ್ಠಿತಾ|

ಅವರು ಯಾರನ್ನೂ ಹೆದರಿಸುವುದಿಲ್ಲ. ಚಪಲತೆಯನ್ನು ತೋರಿಸುವುದಿಲ್ಲ. ಅವರ ಸ್ವಭಾವವು ಯಾರಿಗೂ ಭಯಂಕರವಾಗಿರುವುದಿಲ್ಲ. ಅವರು ಸದಾ ಸತ್ಪಥದಲ್ಲಿಯೇ ಇರುತ್ತಾರೆ. ಅವರಲ್ಲಿ ಅಹಿಂಸೆಯು ನಿತ್ಯವೂ ಪ್ರತಿಷ್ಠಿತಗೊಂಡಿರುತ್ತದೆ. ಅಂಥಹ ಸಾಧುಪುರುಷರ ಸೇವೆಯನ್ನು ಮಾಡು.

12152026c ಕಾಮಕ್ರೋಧವ್ಯಪೇತಾ ಯೇ ನಿರ್ಮಮಾ ನಿರಹಂಕೃತಾಃ|

12152026e ಸುವ್ರತಾಃ ಸ್ಥಿರಮರ್ಯಾದಾಸ್ತಾನುಪಾಸ್ಸ್ವ ಚ ಪೃಚ್ಚ ಚ||

ಯಾರು ಕಾಮ-ಕ್ರೋಧರಹಿತರಾಗಿರುವರೋ, ಮಮತೆ ಮತ್ತು ಅಹಂಕಾರ ಶೂನ್ಯರಾಗಿರುವರೋ, ಉತ್ತಮ ವ್ರತವನ್ನು ಪಾಲಿಸುತ್ತಿರುವರೋ ಮತ್ತು ಧರ್ಮಮರ್ಯಾದೆಯನ್ನು ಸ್ಥಿರವಾಗಿ ಉಳಿಸಿಕೊಳ್ಳುವರೋ ಆ ಮಹಾಪುರುಷರ ಸಂಗವನ್ನು ಮಾಡಿಕೋ. ಅವರಲ್ಲಿ ನಿನ್ನ ಸಂದೇಹಗಳನ್ನು ಕೇಳಿಕೋ.

12152027a ನ ಗವಾರ್ಥಂ[6] ಯಶೋರ್ಥಂ ವಾ ಧರ್ಮಸ್ತೇಷಾಂ ಯುಧಿಷ್ಠಿರ|

12152027c ಅವಶ್ಯಕಾರ್ಯ ಇತ್ಯೇವ ಶರೀರಸ್ಯ ಕ್ರಿಯಾಸ್ತಥಾ||

ಯುಧಿಷ್ಠಿರ! ಯಾರಿಗೆ ಧರ್ಮಪಾಲನೆಯು ಧನಕ್ಕಾಗಿ ಅಥವಾ ಕೀರ್ತಿಗಾಗಿ ಇಲ್ಲವೋ ಅವರು ಶಾರೀರಕ ಕ್ರಿಯಗಳನ್ನು ಅವಶ್ಯಕ ಕರ್ತವ್ಯಗಳೆಂದೇ ತಿಳಿದು ಮಾಡುತ್ತಾರೆ.

12152028a ನ ಭಯಂ ಕ್ರೋಧಚಾಪಲ್ಯಂ ನ ಶೋಕಸ್ತೇಷು ವಿದ್ಯತೇ|

12152028c ನ ಧರ್ಮಧ್ವಜಿನಶ್ಚೈವ ನ ಗುಹ್ಯಂ ಕಿಂ ಚಿದಾಸ್ಥಿತಾಃ||

ಯಾರಲ್ಲಿ ಭಯ, ಕ್ರೋಧ, ಚಾಪಲ್ಯ ಮತ್ತು ಶೋಕಗಳಿರುವುದಿಲ್ಲವೋ ಅವರು ಧರ್ಮಧ್ವಜಿಗಳು ಅಂದರೆ ಪಾಖಂಡಿಗಳಾಗಿರುವುದಿಲ್ಲ. ಅವರು ಯಾವುದೇ ಗೋಪನೀಯ ಪಾಖಂಡಪೂರ್ಣ ಧರ್ಮವನ್ನು ಆಚರಿಸುತ್ತಿರುವುದಿಲ್ಲ.

12152029a ಯೇಷ್ವಲೋಭಸ್ತಥಾಮೋಹೋ ಯೇ ಚ ಸತ್ಯಾರ್ಜವೇ ರತಾಃ|

12152029c ತೇಷು ಕೌಂತೇಯ ರಜ್ಯೇಥಾ ಯೇಷ್ವತಂದ್ರೀಕೃತಂ ಮನಃ||

ಕೌಂತೇಯ! ಯಾರಲ್ಲಿ ಲೋಭ-ಮೋಹಗಳ ಅಭಾವವಿರುವುದೋ, ಯಾರು ಸತ್ಯ ಮತ್ತು ಸರಳತೆಯಲ್ಲಿ ಸ್ಥಿತರಾಗಿರುವರೋ ಮತ್ತು ಎಂದೂ ಸದಾಚಾರಗಳಿಂದ ಭ್ರಷ್ಟರಾಗದ ಪುರುಷರೊಂದಿಗೆ ನೀನು ಸ್ನೇಹವನ್ನಿಟ್ಟುಕೊಳ್ಳಬೇಕು.

12152030a ಯೇ ನ ಹೃಷ್ಯಂತಿ ಲಾಭೇಷು ನಾಲಾಭೇಷು ವ್ಯಥಂತಿ ಚ|

12152030c ನಿರ್ಮಮಾ ನಿರಹಂಕಾರಾಃ ಸತ್ತ್ವಸ್ಥಾಃ ಸಮದರ್ಶಿನಃ||

12152031a ಲಾಭಾಲಾಭೌ ಸುಖದುಃಖೇ ಚ ತಾತ

ಪ್ರಿಯಾಪ್ರಿಯೇ ಮರಣಂ ಜೀವಿತಂ ಚ|

12152031c ಸಮಾನಿ ಯೇಷಾಂ ಸ್ಥಿರವಿಕ್ರಮಾಣಾಂ

ಬುದ್ಧಾತ್ಮನಾಂ ಸತ್ತ್ವಮವಸ್ಥಿತಾನಾಮ್||

12152032a ಸುಖಪ್ರಿಯೈಸ್ತಾನ್ಸುಮಹಾಪ್ರತಾಪಾನ್

ಯತ್ತೋಽಪ್ರಮತ್ತಶ್ಚ ಸಮರ್ಥಯೇಥಾಃ[7]|

12152032c ದೈವಾತ್ಸರ್ವೇ ಗುಣವಂತೋ ಭವಂತಿ

ಶುಭಾಶುಭಾ ವಾಕ್ಪ್ರಲಾಪಾ ಯಥೈವ||

ಅಯ್ಯಾ! ಯಾರು ಲಾಭವಾದಾಗ ಹರ್ಷಿತರಾಗುವುದಿಲ್ಲವೋ ಮತ್ತು ನಷ್ಟವಾದಾಗ ವ್ಯಥಿತರಾಗುವುದಿಲ್ಲವೋ ಆ ನಿರ್ಮಮ, ನಿರಹಂಕಾರ, ಸತ್ತ್ವಸ್ಥ ಸಮದರ್ಶಿಗಳು; ಹಾಗೂ ಯಾರಿಗೆ ಲಾಭ-ನಷ್ಟಗಳು, ಸುಖ-ದುಃಖಗಳು, ಪ್ರಿಯ-ಅಪ್ರಿಯಗಳು ಮತ್ತು ಮರಣ-ಜೀವಿತಗಳು ಸಮಾನವಾಗಿರುವವೋ ಆ ಸುದೃಢ ಪರಾಕ್ರಮಿ, ಆತ್ಮಬುದ್ಧಿಶಾಲೀ, ಸತ್ತ್ವದಲ್ಲಿಯೇ ನೆಲೆಸಿರುವವರೂ ಆದ ಸುಖಪ್ರಿಯ ಮಹಾಪ್ರತಾಪವಾನ್, ಅಪ್ರಮತ್ತರು ಸಮರ್ಥರು. ಇವರೆಲ್ಲರೂ ದೈವದಿಂದಲೇ ಗುಣವಂತರಾಗಿರುತ್ತಾರೆ. ಶುಭ-ಅಶುಭಗಳ ಕುರಿತು ಅವರ ಮಾತುಗಳು ಯಥಾರ್ಥವಾಗಿರುತ್ತವೆ. ಅನ್ಯರು ಕೇವಲ ವಾರ್ತಾಲಾಪಮಾಡುತ್ತಿರುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಆಪನ್ಮೂಲಭೂತದೋಷಕಥನೇ ದ್ವಾಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಆಪನ್ಮೂಲಭೂತದೋಷಕಥನ ಎನ್ನುವ ನೂರಾಐವತ್ತೆರಡನೇ ಅಧ್ಯಾಯವು.

[1] ವಾಸಸ್ಥಾನ.

[2] ಅತ್ಯಾಗಶ್ಚಾತಿತರ್ಷಶ್ಚ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಕುಲ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ಸರ್ವಭೂತೇಷ್ವಸತ್ಕೃತಿಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[5] ಯೇಷ್ವಾವೃತ್ತಿಭಯಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[6] ಧನಾರ್ಥಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[7] ಧರ್ಮಪ್ರಿಯಾಂಸ್ತಾನ್ ಸುಮಹಾನುಭಾವಾನ್ ದಾಂತೋಽಪ್ರಮತ್ತಶ್ಚ ಸಮರ್ಚಯೇಥಾಃ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.