Shanti Parva: Chapter 151

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೧

ನಾರದನ ಮಾತುಗಳನ್ನು ಕೇಳಿ ವಾಯುವು ಶಾಲ್ಮಲಿಯನ್ನು ಬೆದರಿಸುವುದು ಮತ್ತು ಶಾಲ್ಮಲಿಯು ಮನಸ್ಸಿನಲ್ಲಿಯೇ ಯೋಚಿಸಿದುದು (೧-೧೮).  ಶಾಲ್ಮಲಿಯು ಸೋಲನ್ನು ಸ್ವೀಕರಿಸಿದುದು ಮತ್ತು ಬಲಶಾಲಿಯೊಂದಿಗೆ ವೈರವನ್ನು ಕಟ್ಟಿಕೊಳ್ಳಬಾರದೆಂಬ ಉಪದೇಶ (೧೯-೩೪).

[1]12151001 ಭೀಷ್ಮ ಉವಾಚ|

12151001a ಏವಮುಕ್ತ್ವಾ ತು ರಾಜೇಂದ್ರ ಶಲ್ಮಲಿಂ ಬ್ರಹ್ಮವಿತ್ತಮಃ|

12151001c ನಾರದಃ ಪವನೇ ಸರ್ವಂ ಶಲ್ಮಲೇರ್ವಾಕ್ಯಮಬ್ರವೀತ್||

ಭೀಷ್ಮನು ಹೇಳಿದನು: “ರಾಜೇಂದ್ರ! ಶಾಲ್ಮಲಿಗೆ ಹೀಗೆ ಹೇಳಿ ಬ್ರಹ್ಮವಿತ್ತಮ ನಾರದನು ಪವನನಿಗೆ ಶಾಲ್ಮಲಿಯ ಮಾತುಗಳೆಲ್ಲವನ್ನೂ ಹೇಳಿದನು.

12151002a ಹಿಮವತ್ಪೃಷ್ಠಜಃ ಕಶ್ಚಿಚ್ಚಲ್ಮಲಿಃ ಪರಿವಾರವಾನ್|

12151002c ಬೃಹನ್ಮೂಲೋ ಬೃಹಚ್ಚಾಖಃ ಸ ತ್ವಾಂ ವಾಯೋಽವಮನ್ಯತೇ||

“ವಾಯೋ! ಹಿಮಾಲಯದ ಪೃಷ್ಠಭಾಗದಲ್ಲಿ ಅತಿದೊಡ್ಡ ಪರಿವಾರಯುಕ್ತವಾದ ಒಂದು ಶಾಲ್ಮಲೀ ವೃಕ್ಷವಿದೆ. ದೊಡ್ಡ ಬುಡವಿರುವ ಮತ್ತು ವಿಶಾಲ ಶಾಖೆಗಳಿರುವ ಆ ವೃಕ್ಷವು ನಿನ್ನನ್ನು ಅಪಮಾನಿಸುತ್ತಿದೆ.

12151003a ಬಹೂನ್ಯಾಕ್ಷೇಪಯುಕ್ತಾನಿ ತ್ವಾಮಾಹ ವಚನಾನಿ ಸಃ|

12151003c ನ ಯುಕ್ತಾನಿ ಮಯಾ ವಾಯೋ ತಾನಿ ವಕ್ತುಂ ತ್ವಯಿ ಪ್ರಭೋ||

ಪ್ರಭೋ! ವಾಯೋ! ಅವನು ನಿನ್ನ ವಿಷಯದಲ್ಲಿ ಅನೇಕ ಆಕ್ಷೇಪಯುಕ್ತ ಮಾತುಗಳನ್ನಾಡಿದ್ದಾನೆ. ಅವುಗಳನ್ನು ನಿನ್ನ ಎದಿರು ಹೇಳುವುದು ಉಚಿತವಲ್ಲ.

12151004a ಜಾನಾಮಿ ತ್ವಾಮಹಂ ವಾಯೋ ಸರ್ವಪ್ರಾಣಭೃತಾಂ ವರಮ್|

12151004c ವರಿಷ್ಠಂ ಚ ಗರಿಷ್ಠಂ ಚ ಕ್ರೋಧೇ ವೈವಸ್ವತಂ ಯಥಾ||

ವಾಯೋ! ನಾನು ನಿನ್ನನ್ನು ಅರಿತಿದ್ದೇನೆ. ನೀನು ಸಮಸ್ತ ಪ್ರಾಣಭೃತರಲ್ಲಿ ಶ್ರೇಷ್ಠನು. ವರಿಷ್ಠನು ಮತ್ತು ಗರಿಷ್ಠನು. ಕ್ರೋಧದಲ್ಲಿ ನೀನು ವೈವಸ್ವತನ ಸಮನಾಗಿದ್ದೀಯೆ.”

12151005a ಏವಂ ತು ವಚನಂ ಶ್ರುತ್ವಾ ನಾರದಸ್ಯ ಸಮೀರಣಃ|

12151005c ಶಲ್ಮಲಿಂ ತಮುಪಾಗಮ್ಯ ಕ್ರುದ್ಧೋ ವಚನಮಬ್ರವೀತ್||

ನಾರದನ ಈ ಮಾತನ್ನು ಕೇಳಿ ಸಮೀರಣನು ಕ್ರುದ್ಧನಾಗಿ ಶಾಲ್ಮಲೀ ವೃಕ್ಷದ ಬಳಿಬಂದು ಈ ಮಾತನ್ನಾಡಿದನು:

12151006a ಶಲ್ಮಲೇ ನಾರದೇ ಯತ್ತತ್ತ್ವಯೋಕ್ತಂ ಮದ್ವಿಗರ್ಹಣಮ್|

12151006c ಅಹಂ ವಾಯುಃ ಪ್ರಭಾವಂ ತೇ ದರ್ಶಯಾಮ್ಯಾತ್ಮನೋ ಬಲಮ್||

“ಶಾಲ್ಮಲೇ! ನೀನು ನಾರದನ ಎದಿರು ನನ್ನ ನಿಂದನೆಯನ್ನು ಮಾಡಿದ್ದೀಯೆ. ನಾನು ವಾಯು. ನಿನಗೆ ನನ್ನ ಬಲ ಮತ್ತು ಪ್ರಭಾವಗಳನ್ನು ತೋರಿಸುತ್ತೇನೆ.

12151007a ನಾಹಂ ತ್ವಾ ನಾಭಿಜಾನಾಮಿ[2] ವಿದಿತಶ್ಚಾಸಿ ಮೇ ದ್ರುಮ|

12151007c ಪಿತಾಮಹಃ ಪ್ರಜಾಸರ್ಗೇ ತ್ವಯಿ ವಿಶ್ರಾಂತವಾನ್ ಪ್ರಭುಃ||

ವೃಕ್ಷವೇ! ನೀನು ನನಗೆ ಗೊತ್ತಿಲ್ಲವೆಂದೇನಿಲ್ಲ. ನಾನು ನಿನ್ನನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಪಿತಾಮಹನು ಪ್ರಜೆಗಳನ್ನು ಸೃಷ್ಟಿಸುವಾಗ ನಿನ್ನ ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆದಿದ್ದನು.

12151008a ತಸ್ಯ ವಿಶ್ರಮಣಾದೇವ ಪ್ರಸಾದೋ ಯಃ ಕೃತಸ್ತವ|

12151008c ರಕ್ಷ್ಯಸೇ ತೇನ ದುರ್ಬುದ್ಧೇ ನಾತ್ಮವೀರ್ಯಾದ್ದ್ರುಮಾಧಮ||

ದುರ್ಬುದ್ಧೇ! ವೃಕ್ಷಗಳಲ್ಲಿ ಅಧಮ! ಅವನು ನಿನ್ನ ಕೆಳಗೆ ವಿಶ್ರಾಂತಿಹೊಂದಿದುರಿಂದಲೇ ನಾನು ನಿನ್ನ ಮೇಲೆ ಕೃಪೆಯನ್ನು ತೋರಿಸಿದ್ದೆ ಮತ್ತು ಇದೇ ನಿನ್ನ ರಕ್ಷೆಯಾಗಿತ್ತು. ನೀನು ನಿನ್ನ ವೀರ್ಯದಿಂದ ರಕ್ಷಿಸಲ್ಪಟ್ಟಿಲ್ಲ.

12151009a ಯನ್ಮಾ ತ್ವಮವಜಾನೀಷೇ ಯಥಾನ್ಯಂ ಪ್ರಾಕೃತಂ ತಥಾ|

12151009c ದರ್ಶಯಾಮ್ಯೇಷ ಆತ್ಮಾನಂ ಯಥಾ ಮಾಮವಭೋತ್ಸ್ಯಸೇ[3]||

ಅನ್ಯ ಸಾಮಾನ್ಯರಂತೆ ನೀನು ನನ್ನನ್ನು ಅಪಮಾನಿಸಿರುವೆಯಾದುದರಿಂದ ನಾನು ನಿನಗೆ ನನ್ನ ಆ ರೂಪವನ್ನು ತೋರಿಸುತ್ತೇನೆ ಯಾವುದರಿಂದ ನೀನು ನನ್ನನ್ನು ಪುನಃ ಅಪಮಾನಿಸುವುದಿಲ್ಲ.”

12151010a ಏವಮುಕ್ತಸ್ತತಃ ಪ್ರಾಹ ಶಲ್ಮಲಿಃ ಪ್ರಹಸನ್ನಿವ|

12151010c ಪವನ ತ್ವಂ ವನೇ ಕ್ರುದ್ಧೋ ದರ್ಶಯಾತ್ಮಾನಮಾತ್ಮನಾ||

ಪವನನ ಆ ಮಾತನ್ನು ಕೇಳಿ ಶಾಲ್ಮಲಿಯು ನಗುತ್ತಾ ಹೇಳಿತು: “ಪವನ! ಕ್ರುದ್ಧನಾಗಿ ಸ್ವಯಂ ನೀನು ನಿನ್ನ ಎಲ್ಲ ಶಕ್ತಿಯನ್ನೂ ತೋರಿಸು!

12151011a ಮಯಿ ವೈ ತ್ಯಜ್ಯತಾಂ ಕ್ರೋಧಃ ಕಿಂ ಮೇ ಕ್ರುದ್ಧಃ ಕರಿಷ್ಯಸಿ|

12151011c ನ ತೇ ಬಿಭೇಮಿ ಪವನ ಯದ್ಯಪಿ ತ್ವಂ ಸ್ವಯಂಪ್ರಭುಃ[4]||

ಪವನ! ನಿನ್ನ ಕ್ರೋಧವನ್ನು ನನ್ನ ಮೇಲೆ ಸುರಿಸು. ನೀನು ಕ್ರುದ್ಧನಾಗಿ ನನಗೇನು ಮಾಡಬಲ್ಲೆ? ನೀನು ನನಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದರೂ ನಾನು ನಿನಗೆ ಹೆದರುವುದಿಲ್ಲ.”

12151012a ಇತ್ಯೇವಮುಕ್ತಃ ಪವನಃ ಶ್ವ ಇತ್ಯೇವಾಬ್ರವೀದ್ವಚಃ|

12151012c ದರ್ಶಯಿಷ್ಯಾಮಿ ತೇ ತೇಜಸ್ತತೋ ರಾತ್ರಿರುಪಾಗಮತ್||

ಇದನ್ನು ಕೇಳಿದ ಪವನನು ಹೇಳಿದನು: “ಆಯಿತು! ನಾಳೆ ನಾನು ನಿನಗೆ ನನ್ನ ಪರಾಕ್ರಮವನ್ನು ತೋರಿಸುತ್ತೇನೆ.” ಅಷ್ಟರಲ್ಲಿಯೇ ರಾತ್ರಿಯಾಯಿತು.

12151013a ಅಥ ನಿಶ್ಚಿತ್ಯ ಮನಸಾ ಶಲ್ಮಲಿರ್ವಾತಕಾರಿತಮ್|

12151013c ಪಶ್ಯಮಾನಸ್ತದಾತ್ಮಾನಮಸಮಂ ಮಾತರಿಶ್ವನಃ||

ಆಗ ಶಾಲ್ಮಲಿಯು ವಾಯುವು ಮಾಡಲಿರುವ ಕೃತ್ಯವನ್ನು ತನ್ನ ಮನಸ್ಸಿನಲ್ಲಿಯೇ ಯೋಚಿಸಿ ವಾಯುವಿಗೆ ಸಮನಾದ ಬಲಶಾಲಿಯು ತಾನು ಅಲ್ಲವೆಂದು ತಿಳಿದು ಯೋಚಿಸಿದನು:

12151014a ನಾರದೇ ಯನ್ಮಯಾ ಪ್ರೋಕ್ತಂ ಪವನಂ ಪ್ರತಿ ತನ್ಮೃಷಾ|

12151014c ಅಸಮರ್ಥೋ ಹ್ಯಹಂ ವಾಯೋರ್ಬಲೇನ ಬಲವಾನ್ ಹಿ ಸಃ||

“ನಾನು ನಾರದನ ಮುಂದೆ ಏನೆಲ್ಲ ಹೇಳಿದ್ದೆನೋ ಅವು ಸುಳ್ಳಿನ ಮಾತಾಗಿದ್ದವು. ನಾನು ವಾಯುವನ್ನು ಎದುರಿಸಲು ಅಸಮರ್ಥನಾಗಿದ್ದೇನೆ ಏಕೆಂದರೆ ಅವನು ನನಗಿಂತಲೂ ಹೆಚ್ಚಿನ ಬಲಶಾಲಿಯು.

12151015a ಮಾರುತೋ ಬಲವಾನ್ನಿತ್ಯಂ ಯಥೈನಂ ನಾರದೋಽಬ್ರವೀತ್|

12151015c ಅಹಂ ಹಿ ದುರ್ಬಲೋಽನ್ಯೇಭ್ಯೋ ವೃಕ್ಷೇಭ್ಯೋ ನಾತ್ರ ಸಂಶಯಃ||

12151016a ಕಿಂ ತು ಬುದ್ಧ್ಯಾ ಸಮೋ ನಾಸ್ತಿ ಮಮ ಕಶ್ಚಿದ್ವನಸ್ಪತಿಃ|

ನಾರದನು ಹೇಳಿದಂತೆ ವಾಯುವು ನಿತ್ಯ ಬಲಶಾಲಿಯು. ನಾನಾದರೋ ಇತರ ವೃಕ್ಷಗಳಿಗಿಂತಲೂ ದುರ್ಬಲನು. ಇದರಲ್ಲಿ ಸಂಶಯವಿಲ್ಲ. ಆದರೆ ಬುದ್ಧಿಯಲ್ಲಿ ಬೇರೆ ಯಾವ ವೃಕ್ಷವೂ ನನ್ನ ಸಮನಾಗಿಲ್ಲ.

12151016c ತದಹಂ ಬುದ್ಧಿಮಾಸ್ಥಾಯ ಭಯಂ ಮೋಕ್ಷ್ಯೇ ಸಮೀರಣಾತ್||

12151017a ಯದಿ ತಾಂ ಬುದ್ಧಿಮಾಸ್ಥಾಯ ಚರೇಯುಃ ಪರ್ಣಿನೋ ವನೇ|

12151017c ಅರಿಷ್ಟಾಃ ಸ್ಯುಃ ಸದಾ ಕ್ರುದ್ಧಾತ್ಪವನಾನ್ನಾತ್ರ ಸಂಶಯಃ||

ನಾನು ಬುದ್ಧಿಯನ್ನು ಆಶ್ರಯಿಸಿ ಸಮೀರಣನ ಭಯದಿಂದ ಮುಕ್ತನಾಗುತ್ತೇನೆ. ವನದಲ್ಲಿರುವ ಇತರ ವೃಕ್ಷಗಳೂ ಕೂಡ ತಮ್ಮ ಬುದ್ಧಿಯನ್ನು ಆಶ್ರಯಿಸಿದರೆ ನಿಸ್ಸಂದೇಹವಾಗಿ ಕುಪಿತ ವಾಯುವಿನಿಂದ ಅವರಿಗೆ ಯಾವ ಅನಿಷ್ಟವೂ ಆಗಲಾರದು.

12151018a ತೇಽತ್ರ ಬಾಲಾ ನ ಜಾನಂತಿ ಯಥಾ ನೈನಾನ್ಸಮೀರಣಃ|

12151018c ಸಮೀರಯೇತ ಸಂಕ್ರುದ್ಧೋ ಯಥಾ ಜಾನಾಮ್ಯಹಂ ತಥಾ||

ಆದರೆ ಅವರು ಮೂರ್ಖರು. ವಾಯುವು ಕುಪಿತನಾಗಿ ಹೇಗೆ ಅವರನ್ನು ಸದೆಬಡಿಯುತ್ತಾನೆ ಎನ್ನುವುದನ್ನು ತಿಳಿಯಲಾರರು. ನಾನು ಇವೆಲ್ಲವನ್ನೂ ಚೆನ್ನಾಗಿ ತಿಳಿದುಕೊಂಡಿದ್ದೇನೆ.”

12151019a ತತೋ ನಿಶ್ಚಿತ್ಯ ಮನಸಾ ಶಲ್ಮಲಿಃ ಕ್ಷುಭಿತಸ್ತದಾ|

12151019c ಶಾಖಾಃ ಸ್ಕಂಧಾನ್ ಪ್ರಶಾಖಾಶ್ಚ ಸ್ವಯಮೇವ ವ್ಯಶಾತಯತ್||

ಮನಸ್ಸಿನಲ್ಲಿ ಈ ರೀತಿ ನಿಶ್ಚಯಿಸಿ ಶಾಲ್ಮಲಿಯು ಕ್ಷುಭಿತನಾಗಿ ಸ್ವಯಂ ತಾನೇ ತನ್ನ ಶಾಖೆಗಳನ್ನೂ, ರೆಂಬೆಗಳನ್ನೂ, ಉಪಶಾಖೆಗಳನ್ನೂ ಕೆಳಗೆ ಬೀಳಿಸಿಬಿಟ್ಟನು.

12151020a ಸ ಪರಿತ್ಯಜ್ಯ ಶಾಖಾಶ್ಚ ಪತ್ರಾಣಿ ಕುಸುಮಾನಿ ಚ|

12151020c ಪ್ರಭಾತೇ ವಾಯುಮಾಯಾಂತಂ ಪ್ರತ್ಯೈಕ್ಷತ ವನಸ್ಪತಿಃ||

ಆ ವೃಕ್ಷವು ರೆಂಬೆಗಳನ್ನೂ, ಎಲೆ-ಕುಸುಮಗಳನ್ನೂ ಬೀಳಿಸಿ ಬೆಳಗಾಗುವಾಗ ವಾಯುವು ಬರುವುದನ್ನು ನಿರೀಕ್ಷಿಸಿದನು.

12151021a ತತಃ ಕ್ರುದ್ಧಃ ಶ್ವಸನ್ವಾಯುಃ ಪಾತಯನ್ವೈ ಮಹಾದ್ರುಮಾನ್|

12151021c ಆಜಗಾಮಾಥ ತಂ ದೇಶಂ ಸ್ಥಿತೋ ಯತ್ರ ಸ ಶಲ್ಮಲಿಃ||

ಆಗ ವಾಯುವು ಕ್ರುದ್ಧನಾಗಿ ಏದುಸಿರುಬಿಡುತ್ತಾ ಮಹಾವೃಕ್ಷಗಳನ್ನು ಬೀಳಿಸುತ್ತಾ ಶಾಲ್ಮಲಿಯು ಇದ್ದ ಪ್ರದೇಶಕ್ಕೆ ಆಗಮಿಸಿದನು.

12151022a ತಂ ಹೀನಪರ್ಣಂ ಪತಿತಾಗ್ರಶಾಖಂ

ವಿಶೀರ್ಣಪುಷ್ಪಂ ಪ್ರಸಮೀಕ್ಷ್ಯ ವಾಯುಃ|

12151022c ಉವಾಚ ವಾಕ್ಯಂ ಸ್ಮಯಮಾನ ಏನಂ

ಮುದಾ ಯುತಂ ಶಲ್ಮಲಿಂ ರುಗ್ಣಶಾಖಮ್||

ಎಲೆಗಳಿಂದ ರಹಿತನಾಗಿದ್ದ, ಮುಖ್ಯ ಶಾಖೆಗಳು ಕೆಳಗೆ ಬಿದ್ದಿದ್ದ, ಪುಷ್ಪಗಳನ್ನು ನೆಲದ ಮೇಲೆ ಹಾಸಿದ್ದ ಮತ್ತು ರೆಂಬೆಗಳು ಕತ್ತರಿಸಲ್ಪಟ್ಟ ಆ ವೃಕ್ಷವನ್ನು ನೋಡಿ ವಾಯುವು ಮುದಿತನಾಗಿ ಮುಗುಳ್ನಗುತ್ತಾ ಹೇಳಿದನು:

12151023a ಅಹಮಪ್ಯೇವಮೇವ ತ್ವಾಂ ಕುರ್ವಾಣಃ ಶಲ್ಮಲೇ ರುಷಾ|

12151023c ಆತ್ಮನಾ ಯತ್ ಕೃತಂ ಕೃತ್ಸ್ನಂ ಶಾಖಾನಾಮಪಕರ್ಷಣಮ್||

12151024a ಹೀನಪುಷ್ಪಾಗ್ರಶಾಖಸ್ತ್ವಂ ಶೀರ್ಣಾಂಕುರಪಲಾಶವಾನ್|

12151024c ಆತ್ಮದುರ್ಮಂತ್ರಿತೇನೇಹ ಮದ್ವೀರ್ಯವಶಗೋಽಭವಃ||

“ಶಾಲ್ಮಲೇ! ನಾನೂ ಕೂಡ ರೋಷಗೊಂಡು ನಿನ್ನನ್ನು ಹೀಗೆಯೇ ಮಾಡಬೇಕೆಂದಿದ್ದೆ. ಸ್ವಯಂ ನೀನೇ ಈ ಕಷ್ಟ ಕೆಲಸವನ್ನು ಮಾಡಿಕೊಂಡುಬಿಟ್ಟಿದ್ದೀಯೆ. ನಿನ್ನ ರೆಂಬೆಗಳು ಕೆಳಗೆ ಬಿದ್ದುಬಿಟ್ಟಿವೆ. ಹೂವುಗಳು, ಎಲೆಗಳು, ಮೊಗ್ಗುಗಳು ಮತ್ತು ಅಂಕುರಗಳು ಎಲ್ಲವೂ ನಾಶವಾಗಿಬಿಟ್ಟಿವೆ. ನೀನು ನಿನ್ನದೇ ದುರ್ಬುದ್ದಿಯಿಂದ ಈ ವಿಪತ್ತನ್ನು ತಂದುಕೊಂಡಿದ್ದೀಯೆ. ನಿನಗೆ ನನ್ನ ಬಲವೀರ್ಯಗಳ ಬಲಿಯಾಗಬೇಕಾಯಿತು.”

12151025a ಏತಚ್ಚ್ರುತ್ವಾ ವಚೋ ವಾಯೋಃ ಶಲ್ಮಲಿರ್ವ್ರೀಡಿತಸ್ತದಾ|

12151025c ಅತಪ್ಯತ ವಚಃ ಸ್ಮೃತ್ವಾ ನಾರದೋ ಯತ್ತದಾಬ್ರವೀತ್||

ವಾಯುವಿನ ಈ ಮಾತನ್ನು ಕೇಳಿ ಶಾಲ್ಮಲಿಯು ಲಜ್ಜಿತಗೊಂಡು ನಾರದನು ಹೇಳಿದ್ದ ಮಾತುಗಳನ್ನು ಸ್ಮರಿಸಿಕೊಂಡು ಪಶ್ಚಾತ್ತಾಪ ಪಟ್ಟಿತು.

12151026a ಏವಂ ಯೋ ರಾಜಶಾರ್ದೂಲ ದುರ್ಬಲಃ ಸನ್ಬಲೀಯಸಾ|

12151026c ವೈರಮಾಸಜ್ಜತೇ ಬಾಲಸ್ತಪ್ಯತೇ ಶಲ್ಮಲಿರ್ಯಥಾ||

ರಾಜಶಾರ್ದೂಲ! ಇದೇ ರೀತಿಯಲ್ಲಿ ಸ್ವಯಂ ದುರ್ಬಲನಾಗಿದ್ದು ಬಲಶಾಲಿಯೊಂದಿಗೆ ವೈರವನ್ನು ಕಟ್ಟಿಕೊಳ್ಳುವ ಮೂರ್ಖನು ಶಾಲ್ಮಲಿಯಂತೆ ಪಶ್ಚಾತ್ತಾಪಪಡಬೇಕಾಗುತ್ತದೆ.

12151027a ತಸ್ಮಾದ್ವೈರಂ ನ ಕುರ್ವೀತ ದುರ್ಬಲೋ ಬಲವತ್ತರೈಃ|

12151027c ಶೋಚೇದ್ಧಿ ವೈರಂ ಕುರ್ವಾಣೋ ಯಥಾ ವೈ ಶಲ್ಮಲಿಸ್ತಥಾ||

ಆದುದರಿಂದ ದುರ್ಬಲನು ಬಲವತ್ತರವಾದವರೊಡನೆ ವೈರವನ್ನು ಕಟ್ಟಿಕೊಳ್ಳಬಾರದು. ಹಾಗೆ ವೈರವನ್ನು ಕಟ್ಟಿಕೊಳ್ಳುವವನು ಶಾಲ್ಮಲಿಯಂತೆ ಶೋಚನೀಯ ಸ್ಥಿತಿಯನ್ನು ಹೊಂದುತ್ತಾನೆ.

12151028a ನ ಹಿ ವೈರಂ ಮಹಾತ್ಮಾನೋ ವಿವೃಣ್ವಂತ್ಯಪಕಾರಿಷು|

12151028c ಶನೈಃ ಶನೈರ್ಮಹಾರಾಜ ದರ್ಶಯಂತಿ ಸ್ಮ ತೇ ಬಲಮ್||

ಮಹಾರಾಜ! ಮಹಾಮನಸ್ವೀ ಪುರುಷನು ತನ್ನನ್ನು ಅವಹೇಳನ ಮಾಡುವವನ ಮೇಲೆ ವೈರಭಾವವನ್ನು ಪ್ರಕಟಿಸುವುದಿಲ್ಲ. ಅವರು ನಿಧಾನವಾಗಿ ತಮ್ಮ ಬಲವನ್ನು ತೋರಿಸುತ್ತಾರೆ.

12151029a ವೈರಂ ನ ಕುರ್ವೀತ ನರೋ ದುರ್ಬುದ್ಧಿರ್ಬುದ್ಧಿಜೀವಿನಾ|

12151029c ಬುದ್ಧಿರ್ಬುದ್ಧಿಮತೋ ಯಾತಿ ತೂಲೇಷ್ವಿವ[5] ಹುತಾಶನಃ||

ದುರ್ಬುದ್ಧಿ ನರನು ಬುದ್ಧಿಜೀವಿಯೊಡನೆ ವೈರವನ್ನು ಮಾಡಬಾರದು. ಏಕೆಂದರೆ ಹತ್ತಿಯ ರಾಶಿಯನ್ನು ಹುತಾಶನನು ಹೇಗೋ ಹಾಗೆ ಬುದ್ಧಿಮಾನನ ಬುದ್ಧಿಯು ಸುಡುತ್ತದೆ.

12151030a ನ ಹಿ ಬುದ್ಧ್ಯಾ ಸಮಂ ಕಿಂ ಚಿದ್ವಿದ್ಯತೇ ಪುರುಷೇ ನೃಪ|

12151030c ತಥಾ ಬಲೇನ ರಾಜೇಂದ್ರ ನ ಸಮೋಽಸ್ತೀತಿ ಚಿಂತಯೇತ್||

ರಾಜೇಂದ್ರ! ನೃಪ! ಪುರುಷನಲ್ಲಿ ಬುದ್ಧಿಯ ಸಮಾನ ಬೇರೆ ಯಾವುದೂ ಇಲ್ಲ. ಜಗತ್ತಿನಲ್ಲಿ ಬುದ್ಧಿಬಲದಿಂದ ಯುಕ್ತನಾಗಿರುವವನನ್ನು ಎದುರಿಸುವ ಬೇರೆ ಯಾವ ಪುರುಷನೂ ಇಲ್ಲ.

12151031a ತಸ್ಮಾತ್ ಕ್ಷಮೇತ ಬಾಲಾಯ ಜಡಾಯ ಬಧಿರಾಯ[6] ಚ|

12151031c ಬಲಾಧಿಕಾಯ ರಾಜೇಂದ್ರ ತದ್ದೃಷ್ಟಂ ತ್ವಯಿ ಶತ್ರುಹನ್||

ರಾಜೇಂದ್ರ! ಶತ್ರುಹನ್! ಆದುದರಿಂದ ಬಾಲಕ, ಜಡ, ಕಿವುಡ ಮತ್ತು ಬಲದಲ್ಲಿ ತನಗಿಂತಲೂ ಅಧಿಕನಾಗಿರುವವನು – ಇವರೆಲ್ಲರೂ ಮಾಡಿದ ಪ್ರತಿಕೂಲ ಕರ್ಮಗಳನ್ನು ಕ್ಷಮಿಸಿಬಿಡಬೇಕು. ಈ ಕ್ಷಮಾಭಾವವನ್ನು ನಿನ್ನಲ್ಲಿ ಕಾಣುತ್ತಿದ್ದೇನೆ.

12151032a ಅಕ್ಷೌಹಿಣ್ಯೋ ದಶೈಕಾ ಚ ಸಪ್ತ ಚೈವ ಮಹಾದ್ಯುತೇ|

12151032c ಬಲೇನ ನ ಸಮಾ ರಾಜನ್ನರ್ಜುನಸ್ಯ ಮಹಾತ್ಮನಃ||

ಮಹಾದ್ಯುತೇ! ರಾಜನ್! ಹದಿನೆಂಟು ಅಕ್ಷೌಹಿಣೀ ಸೇನೆಯೂ ಮಹಾತ್ಮಾ ಅರ್ಜುನನ ಸಮನಾಗಿರಲಿಲ್ಲ.

12151033a ಹತಾಸ್ತಾಶ್ಚೈವ ಭಗ್ನಾಶ್ಚ ಪಾಂಡವೇನ ಯಶಸ್ವಿನಾ|

12151033c ಚರತಾ ಬಲಮಾಸ್ಥಾಯ ಪಾಕಶಾಸನಿನಾ ಮೃಧೇ||

ಪಾಂಡು ಮತ್ತು ಇಂದ್ರರ ಯಶಸ್ವೀ ಪುತ್ರನು ತನ್ನ ಬಲವನ್ನಾಶ್ರಯಿಸಿ ಇಲ್ಲಿ ರಣದಲ್ಲಿ ಸಂಚರಿಸುತ್ತಿದ್ದ ಸಮಸ್ತ ಸೇನೆಗಳನ್ನೂ ಸದೆಬಡಿದು ನಾಶಗೊಳಿಸಿದನು.

12151034a ಉಕ್ತಾಸ್ತೇ ರಾಜಧರ್ಮಾಶ್ಚ ಆಪದ್ಧರ್ಮಾಶ್ಚ ಭಾರತ|

12151034c ವಿಸ್ತರೇಣ ಮಹಾರಾಜ ಕಿಂ ಭೂಯಃ ಪ್ರಬ್ರವೀಮಿ ತೇ||

ಭಾರತ! ಮಹಾರಾಜ! ನಾನು ನಿನಗೆ ರಾಜಧರ್ಮ ಮತ್ತು ಆಪದ್ಧರ್ಮಗಳ ಕುರಿತು ವಿಸ್ತಾರವಾಗಿ ಹೇಳಿದ್ದೇನೆ. ನಿನಗೆ ಇನ್ನೂ ಏನನ್ನು ಹೇಳಬೇಕು?”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಪವನಶಾಲ್ಮಲಿಸಂವಾದೇ ಏಕಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಪವನಶಾಲ್ಮಲಿಸಂವಾದ ಎನ್ನುವ ನೂರಾಐವತ್ತೊಂದನೇ ಅಧ್ಯಾಯವು.

[1] ಗೀತಾ ಪ್ರೆಸ್ ನಲ್ಲಿ ಈ ಅಧ್ಯಾಯವೂ ಕೂಡ ಎರಡು ಅಧ್ಯಾಯಗಳನ್ನಾಗಿ ಕೊಡಲಾಗಿದೆ. ಶ್ಲೋಕ ೧-೧೮ ಒಂದು ಅಧ್ಯಾಯ ಮತ್ತು ೧೯-೩೪ ಇನ್ನೊಂದು ಅಧ್ಯಾಯ.

[2] ಅಹಂ ತ್ವಾಮಭಿಜಾನಾಮಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಯಥಾ ಮಾಂ ನಾವಮನ್ಯಸೇ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ಗೀತಾ ಪ್ರೆಸ್ ನಲ್ಲಿ ಇದರ ನಂತರ ಈ ಅಧಿಕ ಶ್ಲೋಕಗಳಿವೆ: ಬಲಾಧಿಕೋಽಹಂ ತ್ವತ್ತಶ್ಚ ನ ಭೀಃ ಕಾರ್ಯಾ ಮಯಾ ತವ| ಯೇ ತು ಬುದ್ಧ್ಯಾ ಹಿ ಬಲಿನಸ್ತೇ ಭವಂತಿ ಬಲೀಯಸಃ| ಪ್ರಾಣಮಾತ್ರಬಲಾ ಯೇ ವೈ ನೈವ ತೇ ಬಲಿನೋ ಮತಾಃ||

[5] ತೃಣೇಷ್ವಿವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[6] ಜಡಾಂಧಬಧಿರಾಯ ಚ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.