Shanti Parva: Chapter 150

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೫೦

ಶಲ್ಮಲಿ-ಪವನ ಸಂವಾದ

ನಾರದನು ಶಾಲ್ಮಲೀ ವೃಕ್ಷವನ್ನು ಪ್ರಶಂಸಿಸಿ ಪ್ರಶ್ನಿಸಿದುದು ಮತ್ತು ಅದರ ಅಹಂಕಾರವನ್ನು ಕಂಡು ನಿಂದಿಸಿದುದು (೧-೩೬).

[1]12150001 ಭೀಷ್ಮ ಉವಾಚ|

12150001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12150001c ಸಂವಾದಂ ಭರತಶ್ರೇಷ್ಠ ಶಲ್ಮಲೇಃ ಪವನಸ್ಯ ಚ||

ಭೀಷ್ಮನು ಹೇಳಿದನು: “ಭರತಶ್ರೇಷ್ಠ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪವನ ಮತ್ತು ಶಾಲ್ಮಲೀ[2] ವೃಕ್ಷಗಳ ನಡುವಿನ ಸಂವಾದವನ್ನು ಉದಾಹರಿಸುತ್ತಾರೆ.

12150002a ಹಿಮವಂತಂ ಸಮಾಸಾದ್ಯ ಮಹಾನಾಸೀದ್ವನಸ್ಪತಿಃ|

12150002c ವರ್ಷಪೂಗಾಭಿಸಂವೃದ್ಧಃ ಶಾಖಾಸ್ಕಂಧಪಲಾಶವಾನ್||

ಹಿಮಾಲಯ ಪರ್ವತದ ಮೇಲೆ ಒಂದು ಅತೀ ದೊಡ್ಡ ವೃಕ್ಷವಿತ್ತು. ಅದು ಅನೇಕ ವರ್ಷಗಳಿಂದ ಬೆಳೆದು ಪ್ರಬಲವಾಗಿತ್ತು. ಅದರ ಬುಡ, ಶಾಖೆಗಳು ಮತ್ತು ಎಲೆಗಳು ಸಮೃದ್ಧವಾಗಿದ್ದವು.

12150003a ತತ್ರ ಸ್ಮ ಮತ್ತಾ ಮಾತಂಗಾ ಧರ್ಮಾರ್ತಾಃ[3] ಶ್ರಮಕರ್ಶಿತಾಃ|

12150003c ವಿಶ್ರಮಂತಿ ಮಹಾಬಾಹೋ ತಥಾನ್ಯಾ ಮೃಗಜಾತಯಃ||

ಮಹಾಬಾಹೋ! ಅದರ ಕೆಳಗೆ ಅನೇಕ ಮದಿಸಿದ ಆನೆಗಳು ಮತ್ತು ಹಾಗೆಯೆ ಅನ್ಯ ಮೃಗಜಾತಿಗಳು ಬಿಸಿಲಿನಿಂದ ಆರ್ತರಾಗಿ ಮತ್ತು ಬಳಲಿಕೆಯಿಂದ ಪೀಡಿತರಾಗಿ ವಿಶ್ರಮಿಸುತ್ತಿದ್ದವು.

12150004a ನಲ್ವಮಾತ್ರಪರೀಣಾಹೋ ಘನಚ್ಚಾಯೋ ವನಸ್ಪತಿಃ|

12150004c ಶುಕಶಾರಿಕಸಂಘುಷ್ಟಃ ಫಲವಾನ್ಪುಷ್ಪವಾನಪಿ||

ಆ ವೃಕ್ಷದ ಎತ್ತರವು ನಾಲ್ಕುನೂರು ಮೊಳಗಳಿದ್ದವು. ಅದರ ನೆರಳು ಅತಿ ದೊಡ್ಡದಾಗಿಯೂ ದಟ್ಟವಾಗಿಯೂ ಇತ್ತು. ಅದರ ಮೇಲೆ ಗಿಳಿಗಳು ಮತ್ತು ಮೈನಾ ಪಕ್ಷಿಗಳು ಗೂಡುಕಟ್ಟಿದ್ದವು. ಆ ವೃಕ್ಷವು ಫಲ ಮತ್ತು ಹೂವುಗಳೆರಡರಿಂದಲೂ ತುಂಬಿತ್ತು.

12150005a ಸಾರ್ಥಿಕಾ ವಣಿಜಶ್ಚಾಪಿ ತಾಪಸಾಶ್ಚ ವನೌಕಸಃ|

12150005c ವಸಂತಿ ವಾಸಾನ್ಮಾರ್ಗಸ್ಥಾಃ ಸುರಮ್ಯೇ ತರುಸತ್ತಮೇ||

ದಲಗಳೊಂದಿಗೆ ಸಂಚರಿಸುತ್ತಿದ್ದ ವರ್ತಕರು, ವನೌಕಸ ತಾಪಸರೂ ಮತ್ತು ಇತರ ಪ್ರಯಾಣಿಕರೂ ಆ ರಮ್ಯ ವೃಕ್ಷಶ್ರೇಷ್ಠನ ಕೆಳಗೆ ತಂಗುತ್ತಿದ್ದರು.

12150006a ತಸ್ಯಾ ತಾ ವಿಪುಲಾಃ ಶಾಖಾ ದೃಷ್ಟ್ವಾ ಸ್ಕಂಧಾಂಶ್ಚ ಸರ್ವತಃ|

12150006c ಅಭಿಗಮ್ಯಾಬ್ರವೀದೇನಂ ನಾರದೋ ಭರತರ್ಷಭ||

ಭರತರ್ಷಭ! ಎಲ್ಲಕಡೆ ಹರಡಿದ್ದ ಅದರ ಆ ವಿಪುಲ ಶಾಖೆಗಳನ್ನೂ ಮತ್ತು ಬುಡವನ್ನೂ ನೋಡಿ ನಾರದನು ಆಗಮಿಸಿ ಅದಕ್ಕೆ ಇಂತೆಂದನು:

12150007a ಅಹೋ ನು ರಮಣೀಯಸ್ತ್ವಮಹೋ ಚಾಸಿ ಮನೋರಮಃ|

12150007c ಪ್ರೀಯಾಮಹೇ ತ್ವಯಾ ನಿತ್ಯಂ ತರುಪ್ರವರ ಶಲ್ಮಲೇ||

“ಅಹೋ ಶಲ್ಮಲೇ! ನೀನು ಅತ್ಯಂತ ರಮಣೀಯನೂ ಮನೋಹರನೂ ಆಗಿರುವೆ. ತರುಪ್ರವರ! ನಿನ್ನಿಂದ ನಮಗೆ ಸದಾ ಪ್ರಸನ್ನತೆಯೇ ಉಂಟಾಗುತ್ತದೆ.

12150008a ಸದೈವ ಶಕುನಾಸ್ತಾತ ಮೃಗಾಶ್ಚಾಧಸ್ತಥಾ ಗಜಾಃ|

12150008c ವಸಂತಿ ತವ ಸಂಹೃಷ್ಟಾ ಮನೋಹರತರಾಸ್ತಥಾ||

ಅಯ್ಯಾ! ಮನೋಹರ ವೃಕ್ಷವೇ! ನಿನ್ನ ಶಾಖೆಗಳ ಮೇಲೆ ಸದಾ ಅನೇಕ ಪಕ್ಷಿಗಳು ಮತ್ತು ಕೆಳಗೆ ಅನೇಕಾನೇಕ ಮೃಗಗಳು ಮತ್ತು ಆನೆಗಳು ಪ್ರಸನ್ನತಾ ಪೂರ್ವಕವಾಗಿ ತಂಗುತ್ತಿರುತ್ತವೆ.

12150009a ತವ ಶಾಖಾ ಮಹಾಶಾಖ ಸ್ಕಂಧಂ ಚ ವಿಪುಲಂ ತಥಾ|

12150009c ನ ವೈ ಪ್ರಭಗ್ನಾನ್ಪಶ್ಯಾಮಿ ಮಾರುತೇನ ಕಥಂ ಚನ||

ಮಹಾಶಾಖಾ! ನಿನ್ನ ಶಾಖೆಗಳನ್ನು ಮತ್ತು ದಪ್ಪನಾದ ಬುಡವನ್ನು ವಾಯುದೇವನು ಎಂದೂ ಮುರಿಯಲಿಲ್ಲ ಎನ್ನುವುದನ್ನು ನೋಡುತ್ತಿದ್ದೇನೆ.

12150010a ಕಿಂ ನು ತೇ ಮಾರುತಸ್ತಾತ ಪ್ರೀತಿಮಾನಥ ವಾ ಸುಹೃತ್|

12150010c ತ್ವಾಂ ರಕ್ಷತಿ ಸದಾ ಯೇನ ವನೇಽಸ್ಮಿನ್ಪವನೋ ಧ್ರುವಮ್||

ಅಯ್ಯಾ! ಈ ವನದಲ್ಲಿ ನಿನ್ನನ್ನು ಪವನನು ನಿಶ್ಚಿತರೂಪದಲ್ಲಿ ರಕ್ಷಿಸುತ್ತಿದ್ದಾನೆಂದರೆ ಮಾರುತನು ನಿನ್ನ ಮೇಲೆ ವಿಶೇಷವಾಗಿ ಪ್ರೀತಿಯನ್ನಿಟ್ಟಿದ್ದಾನೆಯೇ ಅಥವಾ ಅವನು ನಿನ್ನ ಮಿತ್ರನೇ?

12150011a ವಿವಾನ್ ಹಿ[4] ಪವನಃ ಸ್ಥಾನಾದ್ವೃಕ್ಷಾನುಚ್ಚಾವಚಾನಪಿ|

12150011c ಪರ್ವತಾನಾಂ ಚ ಶಿಖರಾಣ್ಯಾಚಾಲಯತಿ ವೇಗವಾನ್||

ಪವನನು ಎಷ್ಟು ವೇಗಶಾಲಿಯೆಂದರೆ ಚಿಕ್ಕ-ದೊಡ್ಡ ಮರಗಳನ್ನೇನು ಪರ್ವತಗಳ ಶಿಖರಗಳನ್ನು ಕೂಡ ಅವುಗಳ ಸ್ಥಾನಗಳಿಂದ ಅಲ್ಲಾಡಿಸಿಬಿಡುತ್ತಾನೆ.

12150012a ಶೋಷಯತ್ಯೇವ ಪಾತಾಲಂ ವಿವಾನ್ಗಂಧವಹಃ ಶುಚಿಃ|

12150012c ಹ್ರದಾಂಶ್ಚ ಸರಿತಶ್ಚೈವ ಸಾಗರಾಂಶ್ಚ ತಥೈವ ಹ||

ಗಂಧವಾಹೀ ಪವಿತ್ರ ವಾಯುವು ಪಾತಾಲ, ಸರೋವರ, ನದಿಗಳು ಮತ್ತು ಸಮುದ್ರಗಳನ್ನೂ ಕೂಡ ಒಣಗಿಸಿಬಿಡಬಲ್ಲನು.

12150013a ತ್ವಾಂ ಸಂರಕ್ಷೇತ ಪವನಃ ಸಖಿತ್ವೇನ ನ ಸಂಶಯಃ|

12150013c ತಸ್ಮಾದ್ಬಹಲಶಾಖೋಽಸಿ ಪರ್ಣವಾನ್ಪುಷ್ಪವಾನಪಿ||

ನಿನ್ನ ಮೇಲಿನ ಸಖಿತ್ವದಿಂದ ಪವನನು ನಿನ್ನನ್ನು ರಕ್ಷಿಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದಲೇ ನೀನು ಬಲವತ್ತಾದ ರೆಂಬೆಗಳಿಂದ ಕೂಡಿದ್ದೀಯೆ ಮತ್ತು ಎಲೆ-ಪುಷ್ಪಗಳಿಂದ ಸಮೃದ್ಧನಾಗಿದ್ದೀಯೆ.

12150014a ಇದಂ ಚ ರಮಣೀಯಂ ತೇ ಪ್ರತಿಭಾತಿ ವನಸ್ಪತೇ|

12150014c ಯದಿಮೇ ವಿಹಗಾಸ್ತಾತ ರಮಂತೇ ಮುದಿತಾಸ್ತ್ವಯಿ||

ಅಯ್ಯಾ ವನಸ್ಪತೇ! ನೀನು ಅತ್ಯಂತ ರಮಣೀಯನಾಗಿ ಕಾಣುತ್ತಿದ್ದೀಯೆ. ನಿನ್ನ ಮೇಲೆ ಪಕ್ಷಿಗಳು ಸಂತೋಷದಿಂದ ರಮಿಸುತ್ತಿವೆ.

12150015a ಏಷಾಂ ಪೃಥಕ್ಸಮಸ್ತಾನಾಂ ಶ್ರೂಯತೇ ಮಧುರಃ ಸ್ವರಃ|

12150015c ಪುಷ್ಪಸಂಮೋದನೇ ಕಾಲೇ ವಾಶತಾಂ ಸುಮನೋಹರಮ್||

ವಸಂತ ಋತುವಿನಲ್ಲಿ ಮನೋರಮವಾಗಿ ಕೂಗುವ ಈ ಪಕ್ಷಿಗಳ ಪ್ರತ್ಯೇಕವಾದ ಮತ್ತು ಒಟ್ಟಾದ ಮಧುರ ಸ್ವರಗಳು ಕೇಳಿಬರುತ್ತವೆ.

12150016a ತಥೇಮೇ ಮುದಿತಾ ನಾಗಾಃ ಸ್ವಯೂಥಕುಲಶೋಭಿನಃ|

12150016c ಘರ್ಮಾರ್ತಾಸ್ತ್ವಾಂ ಸಮಾಸಾದ್ಯ ಸುಖಂ ವಿಂದಂತಿ ಶಲ್ಮಲೇ||

ಶಲ್ಮಲೇ! ತಮ್ಮ ಯೂಥಕುಲದಲ್ಲಿ ಸುಶೋಭಿತ ಗಜರಾಜನು ಘೀಳಿಡುತ್ತಾ ಬಿಸಿಲಿನಿಂದ ಪೀಡಿತನಾಗಿ ನಿನ್ನ ಬಳಿಬಂದು ಸುಖವನ್ನು ಹೊಂದುತ್ತಾನೆ.

12150017a ತಥೈವ ಮೃಗಜಾತೀಭಿರನ್ಯಾಭಿರುಪಶೋಭಸೇ|

12150017c ತಥಾ ಸಾರ್ಥಾಧಿವಾಸೈಶ್ಚ ಶೋಭಸೇ ಮೇರುವದ್ದ್ರುಮ||

ವೃಕ್ಷವೇ! ಹೀಗೆಯೇ ಇತರ ಜಾತಿಗಳ ಪಶುಗಳೂ ಕೂಡ ನಿನ್ನ ಶೋಭೆಯನ್ನು ಹೆಚ್ಚಿಸುತ್ತವೆ. ನೀನು ಎಲ್ಲರ ನಿವಾಸಸ್ಥಾನವಾಗಿರುವ ಕಾರಣದಿಂದ ಮೇರುಪರ್ವತದಂತೆ ಶೋಭಿಸುತ್ತೀಯೆ.

12150018a ಬ್ರಾಹ್ಮಣೈಶ್ಚ ತಪಃಸಿದ್ಧೈಸ್ತಾಪಸೈಃ ಶ್ರಮಣೈರಪಿ|

12150018c ತ್ರಿವಿಷ್ಟಪಸಮಂ ಮನ್ಯೇ ತವಾಯತನಮೇವ ಹ||

ಬ್ರಾಹ್ಮಣರಿಂದಲೂ, ತಪಃಸಿದ್ಧ ತಾಪಸರೂ, ಶ್ರಮಣರೂ[5] ಕೂಡಿರುವ ನಿನ್ನ ಈ ಸ್ಥಾನವು ನನಗೆ ಸ್ವರ್ಗದ ಸಮಾನವಾಗಿ ತೋರುತ್ತಿದೆ.

12150019a ಬಂಧುತ್ವಾದಥ ವಾ ಸಖ್ಯಾಚ್ಚಲ್ಮಲೇ ನಾತ್ರ ಸಂಶಯಃ|

12150019c ಪಾಲಯತ್ಯೇವ ಸತತಂ ಭೀಮಃ ಸರ್ವತ್ರಗೋಽನಿಲಃ||

ಶಲ್ಮಲೇ! ಬಂಧುತ್ವದಿಂದ ಅಥವಾ ಸಖ್ಯದಿಂದ ಸರ್ವತ್ರಗ ಭೀಮ ಅನಿಲನು ಸತತನೂ ನಿನ್ನನ್ನು ಪಾಲಿಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12150020a ನ್ಯಗ್ಭಾವಂ ಪರಮಂ ವಾಯೋಃ ಶಲ್ಮಲೇ ತ್ವಮುಪಾಗತಃ|

12150020c ತವಾಹಮಸ್ಮೀತಿ ಸದಾ ಯೇನ ರಕ್ಷತಿ ಮಾರುತಃ||

ಶಲ್ಮಲೇ! ನೀನು ವಾಯುವಿನ ಎದಿರು ಅತ್ಯಂತ ವಿನಮ್ರನಾಗಿ “ನಾನು ನಿನ್ನವನೇ ಆಗಿದ್ದೇನೆ” ಎಂದು ಹೇಳುತ್ತಿರಬಹುದು. ಆದುದರಿಂದಲೇ ಮಾರುತನು ಸದಾ ನಿನ್ನನ್ನು ರಕ್ಷಿಸುತ್ತಿರಬಹುದು.

12150021a ನ ತಂ ಪಶ್ಯಾಮ್ಯಹಂ ವೃಕ್ಷಂ ಪರ್ವತಂ ವಾಪಿ ತಂ ದೃಢಮ್|

12150021c ಯೋ ನ ವಾಯುಬಲಾದ್ಭಗ್ನಃ ಪೃಥಿವ್ಯಾಮಿತಿ ಮೇ ಮತಿಃ||

ವಾಯುವಿನ ಬಲದಿಂದ ಭಗ್ನವಾಗದ ಯಾವ ದೃಢ ವೃಕ್ಷವನ್ನಾಗಲೀ ಪರ್ವತವನ್ನಾಗಲೀ ಈ ಭೂಮಿಯಲ್ಲಿ ನೋಡಿಲ್ಲ ಎಂದು ನನ್ನ ಮತ.

12150022a ತ್ವಂ ಪುನಃ ಕಾರಣೈರ್ನೂನಂ ಶಲ್ಮಲೇ ರಕ್ಷ್ಯಸೇ ಸದಾ|

12150022c ವಾಯುನಾ ಸಪರೀವಾರಸ್ತೇನ ತಿಷ್ಠಸ್ಯಸಂಶಯಮ್||

ಶಲ್ಮಲೇ! ಅವಶ್ಯವಾಗಿಯೂ ಯಾವುದೋ ಕಾರಣದಿಂದ ಪ್ರೇರಿತನಾಗಿ ವಾಯುದೇವನು ನಿಶ್ಚಿತರೂಪದಲ್ಲಿ ಸಪರಿವಾರ ನಿನ್ನ ರಕ್ಷಣೆಯನ್ನು ಮಾಡುತ್ತಿದ್ದಾನೆ. ಇದರಿಂದಲೇ ನೀನು ಹೀಗೆ ನಿಂತಿದ್ದೀಯೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.”

12150023 ಶಲ್ಮಲಿರುವಾಚ|

12150023a ನ ಮೇ ವಾಯುಃ ಸಖಾ ಬ್ರಹ್ಮನ್ನ ಬಂಧುರ್ನ ಚ ಮೇ ಸುಹೃತ್|

12150023c ಪರಮೇಷ್ಠೀ ತಥಾ ನೈವ ಯೇನ ರಕ್ಷತಿ ಮಾನಿಲಃ||

ಶಲ್ಮಲಿಯು ಹೇಳಿತು: “ಬ್ರಹ್ಮನ್! ವಾಯುವು ನನ್ನ ಸಖನೂ ಅಲ್ಲ, ಬಂಧುವೂ ಅಲ್ಲ, ಸುಹೃದನೂ ಅಲ್ಲ. ನನ್ನನ್ನು ರಕ್ಷಿಸಲು ಆ ಅನಿಲನು ಪರಮೇಷ್ಠಿ ಬ್ರಹ್ಮನೂ ಅಲ್ಲ.

12150024a ಮಮ ತೇಜೋಬಲಂ ವಾಯೋರ್ಭೀಮಮಪಿ ಹಿ ನಾರದ|

12150024c ಕಲಾಮಷ್ಟಾದಶೀಂ ಪ್ರಾಣೈರ್ನ ಮೇ ಪ್ರಾಪ್ನೋತಿ ಮಾರುತಃ||

ನಾರದ! ನನ್ನ ತೇಜೋಬಲವು ವಾಯುವಿಗಿಂತ ಭಯಂಕರವಾಗಿದೆ. ವಾಯುವು ನನ್ನ ಪ್ರಾಣಶಕ್ತಿಯ ಹದಿನೆಂಟರಲ್ಲಿ ಒಂದು ಅಂಶದಷ್ಟನ್ನೂ ಹೊಂದಿಲ್ಲ. 

12150025a ಆಗಚ್ಚನ್ಪರಮೋ[6] ವಾಯುರ್ಮಯಾ ವಿಷ್ಟಂಭಿತೋ ಬಲಾತ್|

12150025c ರುಜನ್ ದ್ರುಮಾನ್ಪರ್ವತಾಂಶ್ಚ ಯಚ್ಚಾನ್ಯದಪಿ ಕಿಂ ಚನ||

ವಾಯುವ ಪರಮ ಬಲದಿಂದ ವೃಕ್ಷ, ಪರ್ವತ ಮತ್ತು ಇತರ ವಸ್ತುಗಳನ್ನು ಮುರಿಯುತ್ತಾ ನನ್ನ ಬಳಿ ಬಂದಾಗ ನಾನು ಬಲದಿಂದ ಅವನ ವೇಗವನ್ನು ತಡೆಯುತ್ತೇನೆ.

12150026a ಸ ಮಯಾ ಬಹುಶೋ ಭಗ್ನಃ ಪ್ರಭಂಜನ್ವೈ ಪ್ರಭಂಜನಃ|

12150026c ತಸ್ಮಾನ್ನ ಬಿಭ್ಯೇ ದೇವರ್ಷೇ ಕ್ರುದ್ಧಾದಪಿ ಸಮೀರಣಾತ್||

ದೇವರ್ಷೇ! ಈ ರೀತಿ ನಾನು ಧ್ವಂಸಮಾಡುವ ವಾಯುವಿನ ಗತಿಯನ್ನು ಅನೇಕ ಬಾರಿ ತಡೆದಿದ್ದೇನೆ. ಅದರಿಂದ ಅವನು ಕುಪಿತನಾದರೂ ನನಗೆ ಅವನ ಭಯವಿಲ್ಲ.”

12150027 ನಾರದ ಉವಾಚ|

12150027a ಶಲ್ಮಲೇ ವಿಪರೀತಂ ತೇ ದರ್ಶನಂ ನಾತ್ರ ಸಂಶಯಃ|

12150027c ನ ಹಿ ವಾಯೋರ್ಬಲೇನಾಸ್ತಿ ಭೂತಂ ತುಲ್ಯಬಲಂ ಕ್ವ ಚಿತ್||

ನಾರದನು ಹೇಳಿದನು: “ಶಲ್ಮಲೇ! ಈ ವಿಷಯದಲ್ಲಿ ನಿನ್ನ ದೃಷ್ಟಿಯು ವಿಪರೀತವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಏಕೆಂದರೆ ವಾಯುವಿನ ಬಲದ ಸಮಾನ ಯಾವ ಜೀವಿಯ ಬಲವೂ ಇಲ್ಲ.

12150028a ಇಂದ್ರೋ ಯಮೋ ವೈಶ್ರವಣೋ ವರುಣಶ್ಚ ಜಲೇಶ್ವರಃ|

12150028c ನ ತೇಽಪಿ ತುಲ್ಯಾ ಮರುತಃ ಕಿಂ ಪುನಸ್ತ್ವಂ ವನಸ್ಪತೇ||

ವನಸ್ಪತೇ! ಇಂದ್ರ, ಯಮ, ವೈಶ್ರವಣ ಕುಬೇರ ಮತ್ತು ಜಲೇಶ್ವರ ವರುಣ ಇವರೂ ಕೂಡ ವಾಯುವಿನ ಸಮಾನ ಬಲಶಾಲಿಗಳಲ್ಲ. ಇನ್ನು ನಿನ್ನಂತಹ ಸಾಧಾರಣ ವೃಕ್ಷವೇನು?

12150029a ಯದ್ಧಿ ಕಿಂ ಚಿದಿಹ ಪ್ರಾಣಿ ಶಲ್ಮಲೇ ಚೇಷ್ಟತೇ ಭುವಿ|

12150029c ಸರ್ವತ್ರ ಭಗವಾನ್ವಾಯುಶ್ಚೇಷ್ಟಾಪ್ರಾಣಕರಃ ಪ್ರಭುಃ||

ಶಲ್ಮಲೇ! ಭುವಿಯಲ್ಲಿ ಯಾವ ಜೀವಿಯೂ ಸ್ವಲ್ಪವಾದರೂ ಚಲಿಸುತ್ತಿದೆ ಎಂದರೆ ಆ ಚಲನಾಶಕ್ತಿ ಮತ್ತು ಜೀವವನ್ನು ನೀಡುವವನು ಸರ್ವತ್ರ ಸಾಮರ್ಥ್ಯಶಾಲೀ ಪ್ರಭು ಭಗವಾನ್ ವಾಯುವೇ ಆಗಿದ್ದಾನೆ.

12150030a ಏಷ ಚೇಷ್ಟಯತೇ ಸಮ್ಯಕ್ ಪ್ರಾಣಿನಃ ಸಮ್ಯಗಾಯತಃ|

12150030c ಅಸಮ್ಯಗಾಯತೋ ಭೂಯಶ್ಚೇಷ್ಟತೇ ವಿಕೃತೋ ನೃಷು||

ಇವನು ಸರಿಯಾಗಿ ಪ್ರಾಣವೇ ಮೊದಲಾದ ರೂಪಗಳಲ್ಲಿ ವಿಸ್ತರಿತನಾದಾಗ ಸಮಸ್ತ ಪ್ರಾಣಿಗಳಲ್ಲಿಯೂ ಚಲನೆಯುಂಟಾಗುತ್ತದೆ ಮತ್ತು ಇವನು ಸರಿಯಾಗಿ ಕೆಲಸಮಾಡದಿದ್ದರೆ ಪ್ರಾಣಿಗಳ ಶರೀರದಲ್ಲಿ ವಿಕೃತಿಯುಂಟಾಗುತ್ತದೆ.

12150031a ಸ ತ್ವಮೇವಂವಿಧಂ ವಾಯುಂ ಸರ್ವಸತ್ತ್ವಭೃತಾಂ ವರಮ್|

12150031c ನ ಪೂಜಯಸಿ ಪೂಜ್ಯಂ ತಂ ಕಿಮನ್ಯದ್ಬುದ್ಧಿಲಾಘವಾತ್||

ಸರ್ವಸತ್ತ್ವಗಳಲ್ಲಿಯೇ ಶ್ರೇಷ್ಠ ಪೂಜ್ಯ ವಾಯುವನ್ನು ಈ ರೀತಿ ನೀನು ಗೌರವಿಸುವುದಿಲ್ಲವೆಂದಾದರೆ ಇದು ನಿನ್ನ ಬುದ್ಧಿಯ ಲಘುತ್ವವಲ್ಲದೇ ಇನ್ನೇನು?

12150032a ಅಸಾರಶ್ಚಾಸಿ ದುರ್ಬುದ್ಧೇ ಕೇವಲಂ ಬಹು ಭಾಷಸೇ|

12150032c ಕ್ರೋಧಾದಿಭಿರವಚ್ಚನ್ನೋ ಮಿಥ್ಯಾ ವದಸಿ ಶಲ್ಮಲೇ||

ಶಲ್ಮಲೇ! ದುರ್ಬುದ್ಧೇ! ನೀನು ಸಾರಹೀನನು. ಕೇವಲ ಅತಿಯಾಗಿ ಮಾತನಾಡುತ್ತೀಯೆ. ಕ್ರೋಧ ಮೊದಲಾದ ದುರ್ಗುಣಗಳಿಂದ ಪ್ರೇರಿತನಾಗಿ ಸುಳ್ಳು ಹೇಳುತ್ತಿದ್ದೀಯೆ.

12150033a ಮಮ ರೋಷಃ ಸಮುತ್ಪನ್ನಸ್ತ್ವಯ್ಯೇವಂ ಸಂಪ್ರಭಾಷತಿ|

12150033c ಬ್ರವೀಮ್ಯೇಷ ಸ್ವಯಂ ವಾಯೋಸ್ತವ ದುರ್ಭಾಷಿತಂ ಬಹು||

ನೀನು ಈ ರೀತಿ ಮಾತನಾಡುವುದರಿಂದ ನನ್ನ ಮನದಲ್ಲಿ ರೋಷವುಂಟಾಗಿದೆ. ಸ್ವಯಂ ನಾನೇ ವಾಯುವಿಗೆ ನಿನ್ನ ಈ ದುರ್ವಚನಗಳನ್ನು ತಿಳಿಸುತ್ತೇನೆ.

12150034a ಚಂದನೈಃ ಸ್ಪಂದನೈಃ[7] ಶಾಲೈಃ ಸರಲೈರ್ದೇವದಾರುಭಿಃ|

12150034c ವೇತಸೈರ್ಬಂಧನೈಶ್ಚಾಪಿ ಯೇ ಚಾನ್ಯೇ ಬಲವತ್ತರಾಃ||

12150035a ತೈಶ್ಚಾಪಿ ನೈವಂ ದುರ್ಬುದ್ಧೇ ಕ್ಷಿಪ್ತೋ ವಾಯುಃ ಕೃತಾತ್ಮಭಿಃ|

12150035c ತೇ ಹಿ ಜಾನಂತಿ ವಾಯೋಶ್ಚ ಬಲಮಾತ್ಮನ ಏವ ಚ||

12150036a ತಸ್ಮಾತ್ತೇ ವೈ ನಮಸ್ಯಂತಿ ಶ್ವಸನಂ ದ್ರುಮಸತ್ತಮಾಃ|

12150036c ತ್ವಂ ತು ಮೋಹಾನ್ನ ಜಾನೀಷೇ ವಾಯೋರ್ಬಲಮನಂತಕಮ್[8]||

ಚಂದನ, ನೆಮ್ಮಿಗಿಡ, ಶಾಲ, ಸರಲ, ದೇವದಾರು, ಬಾಗಿರುವ ಬೆತ್ತ, ಮತ್ತು ಅನ್ಯ ಬಲವತ್ತರ ಕೃತಾತ್ಮ ವೃಕ್ಷಗಳೂ ವಾಯುವನ್ನು ನಿನ್ನಂತೆ ಆಕ್ಷೇಪಿಸುವುದಿಲ್ಲ. ದುರ್ಬುದ್ಧೇ!  ಅವರು ವಾಯುವಿನ ಮತ್ತು ತಮ್ಮ ಬಲವನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದುದರಿಂದ ಆ ಶ್ರೇಷ್ಠ ವೃಕ್ಷಗಳು ವಾಯುದೇವನ ಎದಿರು ತಲೆಬಾಗುತ್ತಾರೆ. ನೀನಾದರೋ ಮೋಹಪರವಶನಾಗಿ ವಾಯುವಿನ ಅನಂತ ಬಲವನ್ನು ತಿಳಿದುಕೊಂಡಿಲ್ಲ.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಪವನಶಾಲ್ಮಲಿಸಂವಾದೇ ಪಂಚಾಶದಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಪವನಶಾಲ್ಮಲಿಸಂವಾದ ಎನ್ನುವ ನೂರಾಐವತ್ತನೇ ಅಧ್ಯಾಯವು.

[1] ಗೀತಾ ಪ್ರೆಸ್ ನಲ್ಲಿ ಈ ಒಂದು ಅಧ್ಯಾಯವನ್ನು ಎರಡು ಅಧ್ಯಾಯಗಳನ್ನಾಗಿ ನೀಡಲಾಗಿದೆ. ೧-೧೯ ಶ್ಲೋಕಗಳು ಒಂದು ಅಧ್ಯಾಯವಾದರೆ ೨೦-೩೬ ಶ್ಲೋಕಗಳು ಇನ್ನೊಂದು ಅಧ್ಯಾಯವಾಗಿದೆ.

ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಯುಧಿಷ್ಠಿರನ ಪ್ರಶ್ನೆಯನ್ನೊಡಗೂಡಿದ ಈ ಮೂರು ಅಧಿಕ ಶ್ಲೋಕಗಳಿವೆ: ಯುಧಿಷ್ಠಿರ ಉವಾಚ| ಬಲಿನಃ ಪ್ರತ್ಯಮಿತ್ರಸ್ಯ ನಿತ್ಯಮಾಸನ್ನವರ್ತಿನಃ| ಉಪಕಾರಾಪಕಾರಾಭ್ಯಾಂ ಸಮರ್ಥಸ್ಯೋದ್ಯತಸ್ಯ ಚ|| ಮೋಹಾದ್ವಿಕತ್ಥನಾಮಾತ್ರೈರಸಾರೋಽಲ್ಪಬಲೋ ಲಘುಃ| ವಾಗ್ಭಿರಪ್ರತಿರೂಪಾಭಿರಭಿದ್ರುಹಾ ಪಿತಾಮಹ|| ಆತ್ಮನೋ ಬಲಮಾಸ್ಥಾಯ ಕಥಂ ವರ್ತೇತ ಮಾನವಃ| ಆಗಚ್ಛತೋಽತಿಕ್ರುದ್ಧಸ್ಯ ತಸ್ಯೋದ್ಧರಣಕಾಮ್ಯಯಾ|| ಅರ್ಥಾತ್ – ಯುಧಿಷ್ಠಿರನು ಹೇಳಿದನು: “ಬಲವಂತ, ನಿತ್ಯ ನಿಕಟವರ್ತಿ, ಉಪಕಾರ ಮತ್ತು ಅಪಕಾರಮಾಡುವುದರಲ್ಲಿ ಸಮರ್ಥ ಹಾಗೂ ನಿತ್ಯವೂ ಉದ್ಯೋಗಶೀಲ ಶತ್ರುವೆನೊಡನೆ ಯಾರಾದರೂ ಅಲ್ಪ ಬಲಶಾಲೀ, ಸಾರವಿಲ್ಲದ ಮತ್ತು ಎಲ್ಲ ವಿಷಯಗಳಲ್ಲಿಯೂ ಸ್ವಲ್ಪವೇ ಸಾಮರ್ಥ್ಯವಿರುವ ಮನುಷ್ಯನು ಮೋಹವಶನಾಗಿ ಜಂಬ ಕೊಚ್ಚಿಕೊಳ್ಳುತ್ತಾ ಅಯೋಗ್ಯ ಮಾತನಾಡಿ ವೈರವನ್ನು ಕಟ್ಟಿಕೊಂಡರೆ ಆ ಬಲವಾನ್ ಶತ್ರುವು ಅತ್ಯಂತ ಕುಪಿತನಾಗಿ ಆ ದುರ್ಬಲ ಮನುಷ್ಯನನ್ನು ಕಿತ್ತೊಗೆಯಲು ಆಕ್ರಮಣಿಸಿದರೆ ಆಗ ಆ ಆಕ್ರಾಂತ ಮನುಷ್ಯನು ತನ್ನದೇ ಬಲದ ಮೇಲೆ ಭರವಸೆಯನ್ನಿಟ್ಟು ಹೇಗೆ ಆ ಆಕ್ರಮಣಕಾರಿಯೊಡನೆ ವರ್ತಿಸಬೇಕು?

[2] ಬೂರುಗದ ಮರ https://kn.wikipedia.org/s/9s9 .

[3] ಘರ್ಮಾರ್ತಾಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಇದೇ ಶಬ್ಧವು ಸರಿಯೆಂದು ತೋರುತ್ತದೆ.

[4] ಭಗವಾನ್ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[5] ಭಿಕ್ಷುಗಳು, ಯಾಚಕರು, ಧ್ಯಾನಪರ ಯೋಗಿಗಳು.

[6] ಪರುಷೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[7] ಸ್ಯಂದನೈಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಈ ಶಬ್ಧವೇ ಸರಿಯಾಗಿ ತೋರುತ್ತದೆ. ಸ್ಯಂದನ ಎಂದರೆ ತಿನಿಷವೃಕ್ಷ ಅಥವಾ ನೆಮ್ಮಿ ಗಿಡ.

[8] ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಶ್ಲೋಕಾರ್ಧವಿದೆ: ಏವಂ ತಸ್ಮಾದ್ಗಮಿಷ್ಯಾಮಿ ಸಕಾಶಂ ಮಾತರಿಷ್ವನಃ||

Comments are closed.