ಶಾಂತಿ ಪರ್ವ: ಆಪದ್ಧರ್ಮ ಪರ್ವ
Contents
Toggle೧೪೯
ಗೃಧ್ರಜಂಬುಕ ಸಂವಾದ
ಮೃತನಾದವನ ಪುನರ್ಜೀವನ ಪ್ರಾಪ್ತಿಯ ವಿಷಯದಲ್ಲಿ ಓರ್ವ ಬಾಲಕನು ಜೀವಿತನಾಗುವ ಕಥೆ; ಅಲ್ಲಿ ಹದ್ದು ಮತ್ತು ನರಿಯ ಸಂವಾದ (1-117).
12149001a ಶೃಣು ಪಾರ್ಥ ಯಥಾವೃತ್ತಮಿತಿಹಾಸಂ ಪುರಾತನಮ್|
12149001c ಗೃಧ್ರಜಂಬುಕಸಂವಾದಂ ಯೋ ವೃತ್ತೋ ವೈದಿಶೇ[2] ಪುರಾ||
ಭೀಷ್ಮನು ಹೇಳಿದನು: “ಪಾರ್ಥ! ಹಿಂದೆ ವಿದಿಶದಲ್ಲಿ ನಡೆದ ಪುರಾತನ ಇತಿಹಾಸವಾದ ಹದ್ದು ಮತ್ತು ನರಿಯ ಸಂವಾದವನ್ನು ನಡೆದಂತೆ ಕೇಳು.
[3]12149002a ದುಃಖಿತಾಃ ಕೇ ಚಿದಾದಾಯ ಬಾಲಮಪ್ರಾಪ್ತಯೌವನಮ್|
12149002c ಕುಲಸರ್ವಸ್ವಭೂತಂ ವೈ ರುದಂತಃ ಶೋಕವಿಹ್ವಲಾಃ||
ಇನ್ನೂ ಯೌವನವನ್ನು ಪಡೆಯದಿದ್ದ ಕುಲದ ಸರ್ವಸ್ವವಾಗಿದ್ದ ಬಾಲಕನನ್ನು ಎತ್ತಿಕೊಂಡು ಅವನ ಕೆಲವು ದುಃಖಿತ ಜನರು ಶೋಕವಿಹ್ವಲರಾಗಿ ರೋದಿಸುತ್ತಿದ್ದರು.
12149003a ಬಾಲಂ ಮೃತಂ ಗೃಹೀತ್ವಾಥ ಶ್ಮಶಾನಾಭಿಮುಖಾಃ ಸ್ಥಿತಾಃ|
12149003c ಅಂಕೇನಾಂಕಂ ಚ ಸಂಕ್ರಮ್ಯ ರುರುದುರ್ಭೂತಲೇ ತದಾ[4]||
ಆ ಮೃತ ಬಾಲಕನನ್ನು ಎತ್ತಿಕೊಂಡು ಅವರು ಶ್ಮಶಾನದ ಕಡೆ ಹೊರಟರು. ಅಲ್ಲಿ ಹೋಗಿ ಅವನನ್ನು ನೆಲದ ಮೇಲೆ ಇಟ್ಟುಕೊಂಡು ಅತ್ಯಂತ ದುಃಖಿತರಾಗಿ ರೋದಿಸಿದರು.
[5]12149004a ತೇಷಾಂ ರುದಿತಶಬ್ದೇನ ಗೃಧ್ರೋಽಭ್ಯೇತ್ಯ ವಚೋಽಬ್ರವೀತ್|
12149004c ಏಕಾತ್ಮಕಮಿಮಂ ಲೋಕೇ ತ್ಯಕ್ತ್ವಾ ಗಚ್ಚತ ಮಾಚಿರಮ್||
12149005a ಇಹ ಪುಂಸಾಂ ಸಹಸ್ರಾಣಿ ಸ್ತ್ರೀಸಹಸ್ರಾಣಿ ಚೈವ ಹಿ|
12149005c ಸಮಾನೀತಾನಿ ಕಾಲೇನ ಕಿಂ ತೇ ವೈ ಜಾತ್ವಬಾಂಧವಾಃ||
ಅವರ ರೋದನ ಶಬ್ಧವನ್ನು ಕೇಳಿ ಅಲ್ಲಿಗೆ ಬಂದ ಹದ್ದೊಂದು ಅವರಿಗೆ ಈ ಮಾತನ್ನಾಡಿತು: “ಈ ಲೋಕದಲ್ಲಿ ನಿಮಗಿರುವ ಈ ಒಬ್ಬನೇ ಮಗನನ್ನು ಇಲ್ಲಿ ಬಿಟ್ಟು ಹೊರಟು ಹೋಗಿರಿ. ತಡಮಾಡಬೇಡಿ. ಇಲ್ಲಿಗೆ ಕಾಲನು ಸಹಸ್ರಾರು ಸ್ತ್ರೀ-ಪುರುಷರನ್ನು ತರುತ್ತಾನೆ ಮತ್ತು ಅವರೆಲ್ಲರ ಬಂಧು ಬಾಂಧವರೂ ಅವರನ್ನು ಇಲ್ಲಿಯೇ ಬಿಟ್ಟು ಹೊರಟು ಹೋಗುತ್ತಾರೆ.
12149006a ಸಂಪಶ್ಯತ ಜಗತ್ಸರ್ವಂ ಸುಖದುಃಖೈರಧಿಷ್ಠಿತಮ್|
12149006c ಸಂಯೋಗೋ ವಿಪ್ರಯೋಗಶ್ಚ ಪರ್ಯಾಯೇಣೋಪಲಭ್ಯತೇ||
ಈ ಜಗತ್ತೆಲ್ಲವೂ ಸುಖ-ದುಃಖಗಳಿಂದ ವ್ಯಾಪ್ತವಾಗಿದೆ ನೋಡಿ! ಇಲ್ಲಿ ಎಲ್ಲರ ಸಂಯೋಗ-ವಿಯೋಗಗಳು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ.
12149007a ಗೃಹೀತ್ವಾ ಯೇ ಚ ಗಚ್ಚಂತಿ ಯೇಽನುಯಾಂತಿ ಚ ತಾನ್ಮೃತಾನ್|
12149007c ತೇಽಪ್ಯಾಯುಷಃ ಪ್ರಮಾಣೇನ ಸ್ವೇನ ಗಚ್ಚಂತಿ ಜಂತವಃ||
ಮೃತರನ್ನು ಶ್ಮಶಾನಕ್ಕೆ ತೆಗೆದುಕೊಂಡು ಹೋಗುವವರು ಮತ್ತು ಶ್ಮಶಾನಕ್ಕೆ ತೆಗೆದುಕೊಂಡು ಹೋಗದೇ ಇರುವವರು ಎಲ್ಲ ಜೀವಜಂತುಗಳೂ ತಮ್ಮ ಆಯಸ್ಸು ಪೂರ್ಣವಾದ ಕೂಡಲೇ ಈ ಜಗತ್ತಿನಿಂದ ಹೊರಟು ಹೋಗುತ್ತಾರೆ.
12149008a ಅಲಂ ಸ್ಥಿತ್ವಾ ಶ್ಮಶಾನೇಽಸ್ಮಿನ್ ಗೃಧ್ರಗೋಮಾಯುಸಂಕುಲೇ|
12149008c ಕಂಕಾಲಬಹುಲೇ ಘೋರೇ ಸರ್ವಪ್ರಾಣಿಭಯಂಕರೇ||
ಹದ್ದು-ನರಿಗಳ ಸಂಕುಲಗಳಿಂದ ಕೂಡಿರುವ, ಸರ್ವಪ್ರಾಣಿಗಳಿಗೂ ಭಯಂಕರವಾಗಿರುವ ಮತ್ತು ಅನೇಕ ಕಂಕಾಲಗಳಿರುವ ಈ ಘೋರ ಶ್ಮಶಾನದಲ್ಲಿ ನಿಂತುಕೊಳ್ಳಬೇಡಿ.
12149009a ನ ಪುನರ್ಜೀವಿತಃ ಕಶ್ಚಿತ್ಕಾಲಧರ್ಮಮುಪಾಗತಃ|
12149009c ಪ್ರಿಯೋ ವಾ ಯದಿ ವಾ ದ್ವೇಷ್ಯಃ ಪ್ರಾಣಿನಾಂ ಗತಿರೀದೃಶೀ||
ಪ್ರಿಯನಾಗಿರಲಿ ಅಥವಾ ದ್ವೇಷಿಯಾಗಿರಲಿ, ಕಾಲಧರ್ಮವನ್ನು ಸೇರಿದವರು ಪುನಃ ಜೀವಿತರಾಗುವುದಿಲ್ಲ. ಎಲ್ಲ ಪ್ರಾಣಿಗಳಿಗೂ ಇದೇ ಗತಿ.
12149010a ಸರ್ವೇಣ ಖಲು ಮರ್ತವ್ಯಂ ಮರ್ತ್ಯಲೋಕೇ ಪ್ರಸೂಯತಾ|
12149010c ಕೃತಾಂತವಿಹಿತೇ ಮಾರ್ಗೇ ಕೋ ಮೃತಂ ಜೀವಯಿಷ್ಯತಿ||
ಈ ಮರ್ತ್ಯಲೋಕದಲ್ಲಿ ಹುಟ್ಟಿದ ಎಲ್ಲರೂ ಸಾಯಲೇಬೇಕಲ್ಲವೇ? ಕೃತಾಂತನು ವಿಧಿಸಿದ ಮಾರ್ಗದಲ್ಲಿ ಹೋದ ಮೃತನನ್ನು ಯಾರು ತಾನೇ ಜೀವಿತಗೊಳಿಸಬಲ್ಲರು?
12149011a ಕರ್ಮಾಂತವಿಹಿತೇ ಲೋಕೇ ಚಾಸ್ತಂ ಗಚ್ಚತಿ ಭಾಸ್ಕರೇ|
12149011c ಗಮ್ಯತಾಂ ಸ್ವಮಧಿಷ್ಠಾನಂ ಸುತಸ್ನೇಹಂ ವಿಸೃಜ್ಯ ವೈ||
ಭಾಸ್ಕರನು ಅಸ್ತನಾಗುತ್ತಿದ್ದಾನೆ. ಜನರು ತಮ್ಮ ದಿನದ ಕೆಲಸಗಳನ್ನು ಮುಗಿಸಿ ನಿವೃತ್ತರಾಗುತ್ತಿದ್ದಾರೆ. ನೀವೂ ಕೂಡ ನಿಮ್ಮ ಸುತಸ್ನೇಹವನ್ನು ಬಿಟ್ಟು ನಿಮ್ಮ ಮನೆಗಳಿಗೆ ಹೊರಟು ಹೋಗಿರಿ.”
12149012a ತತೋ ಗೃಧ್ರವಚಃ ಶ್ರುತ್ವಾ ವಿಕ್ರೋಶಂತಸ್ತದಾ ನೃಪ|
12149012c ಬಾಂಧವಾಸ್ತೇಽಭ್ಯಗಚ್ಚಂತ ಪುತ್ರಮುತ್ಸೃಜ್ಯ ಭೂತಲೇ||
ನೃಪ! ಹದ್ದಿನ ಆ ಮಾತನ್ನು ಕೇಳಿ ಜೋರಾಗಿ ಅಳುತ್ತಾ ಆ ಬಾಂಧವರು ಪುತ್ರನನ್ನು ನೆಲದ ಮೇಲೆಯೇ ಬಿಟ್ಟು ಹೊರಟು ಹೋಗಲು ಸಿದ್ಧರಾದರು.
[6]12149013a ವಿನಿಶ್ಚಿತ್ಯಾಥ ಚ ತತಃ ಸಂತ್ಯಜಂತಃ ಸ್ವಮಾತ್ಮಜಮ್|
12149013c ನಿರಾಶಾ ಜೀವಿತೇ ತಸ್ಯ ಮಾರ್ಗಮಾರುಹ್ಯ ಧಿಷ್ಠಿತಾಃ||
ತಮ್ಮ ಆ ಮಗನ ಜೀವಿತದಲ್ಲಿ ನಿರಾಶರಾಗಿ ದುಃಖಿತರಾಗಿ ಅಲ್ಲಿಂದ ಹೊರಡಲು ನಿಶ್ಚಯಿಸಿ ಹೊರಟರು.
12149014a ಧ್ವಾಂಕ್ಷಭ್ರಸಮವರ್ಣಸ್ತು[7] ಬಿಲಾನ್ನಿಃಸೃತ್ಯ ಜಂಬುಕಃ|
12149014c ಗಚ್ಚಮಾನಾನ್ಸ್ಮ ತಾನಾಹ ನಿರ್ಘೃಣಾಃ ಖಲು ಮಾನವಾಃ||
ಆಗ ಮೋಡದ ಬಣ್ಣದ ನರಿಯೊಂದು ತನ್ನ ಬಿಲದಿಂದ ಹೊರಬಂದು ಹೊರಡುತ್ತಿದ್ದ ಅವರಿಗೆ ಹೇಳಿತು: “ಮನುಷ್ಯರೇ! ನೀವೆಷ್ಟು ನಿರ್ದಯಿಗಳು!
12149015a ಆದಿತ್ಯೋಽಯಂ ಸ್ಥಿತೋ ಮೂಢಾಃ ಸ್ನೇಹಂ ಕುರುತ ಮಾ ಭಯಮ್|
12149015c ಬಹುರೂಪೋ ಮುಹೂರ್ತಶ್ಚ ಜೀವೇತಾಪಿ ಕದಾ ಚನ||
ಮೂಢರೇ! ಸೂರ್ಯನು ಇನ್ನೂ ಮುಳುಗಿಲ್ಲ! ಭಯಪಡಬೇಡಿ. ಮಗುವಿಗೆ ಸ್ನೇಹವನ್ನು ತೋರಿಸಿ. ಅನೇಕ ಪ್ರಕಾರದ ಮುಹೂರ್ತಗಳು ಬರುತ್ತಿರುತ್ತವೆ. ಯಾವುದೋ ಶುಭ ಗಳಿಗೆಯಲ್ಲಿ ಇವನು ಜೀವಿತನೂ ಆಗಬಹುದು.
12149016a ಯೂಯಂ ಭೂಮೌ ವಿನಿಕ್ಷಿಪ್ಯ ಪುತ್ರಸ್ನೇಹವಿನಾಕೃತಾಃ|
12149016c ಶ್ಮಶಾನೇ ಪುತ್ರಮುತ್ಸೃಜ್ಯ ಕಸ್ಮಾದ್ಗಚ್ಚಥ ನಿರ್ಘೃಣಾಃ||
ನೀವು ಎಂಥಹ ನಿರ್ದಯಿಗಳು! ಪುತ್ರಸ್ನೇಹವನ್ನು ತ್ಯಜಿಸಿ ಈ ಪುತ್ರನನ್ನು ಶ್ಮಶಾನ ಭೂಮಿಗೆ ತಂದು ಹಾಕಿಬಿಟ್ಟಿರಿ! ಇವನನ್ನು ಇಲ್ಲಿ ಬಿಟ್ಟು ಎಲ್ಲಿ ಹೋಗುತ್ತಿದ್ದೀರಿ?
12149017a ನ ವೋಽಸ್ತ್ಯಸ್ಮಿನ್ಸುತೇ ಸ್ನೇಹೋ ಬಾಲೇ ಮಧುರಭಾಷಿಣಿ|
12149017c ಯಸ್ಯ ಭಾಷಿತಮಾತ್ರೇಣ ಪ್ರಸಾದಮುಪಗಚ್ಚಥ||
ಈ ಮಧುರ ಭಾಷಿಣೀ ಬಾಲಕನ ಮೇಲೆ ನಿಮಗೆ ಸ್ವಲ್ಪವೂ ಸುತಸ್ನೇಹವಿಲ್ಲವೆಂದು ತೋರುತ್ತಿದೆ. ಕೇವಲ ಯಾರ ತೊದಲು ಮಾತಿನಿಂದಲೇ ನೀವು ಸಂತೋಷಪಡುತ್ತಿದ್ದರೋ ಆ ಬಾಲಕನೇ ಇವನಲ್ಲವೇ?
12149018a ನ ಪಶ್ಯಥ[8] ಸುತಸ್ನೇಹಂ ಯಾದೃಶಃ ಪಶುಪಕ್ಷಿಣಾಮ್|
12149018c ನ ಯೇಷಾಂ ಧಾರಯಿತ್ವಾ ತಾನ್ ಕಶ್ಚಿದಸ್ತಿ ಫಲಾಗಮಃ||
12149019a ಚತುಷ್ಪಾತ್ ಪಕ್ಷಿಕೀಟಾನಾಂ ಪ್ರಾಣಿನಾಂ ಸ್ನೇಹಸಂಗಿನಾಮ್|
12149019c ಪರಲೋಕಗತಿಸ್ಥಾನಾಂ ಮುನಿಯಜ್ಞಕ್ರಿಯಾ ಇವ||
ಪಶುಪಕ್ಷಿಗಳಲ್ಲಿ ಯಾವರೀತಿಯ ಸುತಸ್ನೇಹವಿದೆಯೆಂಬುದನ್ನು ನೀವು ನೋಡಿಲ್ಲವೇ? ಪುತ್ರಸ್ನೇಹವನ್ನು ಧಾರಣೆಮಾಡಿರುವ ಅವರಿಗೆ ಯಾವ ಫಲವೂ ದೊರಕುವುದಿಲ್ಲ. ಯಜ್ಞಕ್ರಿಯೆಗಳನ್ನು ಮಾಡುವ ಮುನಿಗಳಿಗೆ ಪರಲೋಕದಲ್ಲಿ ದೊರಕುವ ಫಲವು ಸ್ನೇಹಸಂಗಿಗಳಾದ ಪಕ್ಷಿಕೀಟಾದಿ ಪ್ರಾಣಿಗಳಿಗೆ ದೊರೆಯಲಾರದು.
12149020a ತೇಷಾಂ ಪುತ್ರಾಭಿರಾಮಾಣಾಮಿಹ ಲೋಕೇ ಪರತ್ರ ಚ|
12149020c ನ ಗುಣೋ ದೃಶ್ಯತೇ ಕಶ್ಚಿತ್ ಪ್ರಜಾಃ ಸಂಧಾರಯಂತಿ ಚ||
ಪುತ್ರರಲ್ಲಿ ಸ್ನೇಹವನ್ನಿಟ್ಟುಕೊಳ್ಳುವ ಆ ಪಶುಪಕ್ಷಿಗಳಿಗೆ ಇಹ ಮತ್ತು ಪರಲೋಕದಲ್ಲಿ ಸಂತಾನ ಪಾಲನೆಯ ಯಾವ ಲಾಭವೂ ಕಾಣುವುದಿಲ್ಲ. ಆದರೂ ಅವು ತಮ್ಮ ಸಂತಾನಗಳನ್ನು ರಕ್ಷಿಸುತ್ತವೆ.
12149021a ಅಪಶ್ಯತಾಂ ಪ್ರಿಯಾನ್ ಪುತ್ರಾನ್ನೈಷಾಂ ಶೋಕೋಽನುತಿಷ್ಠತಿ|
12149021c ನ ಚ ಪುಷ್ಣಂತಿ ಸಂವೃದ್ಧಾಸ್ತೇ ಮಾತಾಪಿತರೌ ಕ್ವ ಚಿತ್||
ದೊಡ್ಡವರಾದ ನಂತರ ತಮ್ಮ ಮಾತಾ-ಪಿತೃಗಳ ಪಾಲನ-ಪೋಷಣೆಯನ್ನು ಮಾಡದೇ ಇದ್ದರೂ ಕೂಡ ಅವರು ತಮ್ಮ ಪ್ರೀತಿಯ ಮಕ್ಕಳನ್ನು ನೋಡದೇ ಇದ್ದರೆ ಅವರ ಶೋಕವು ನಿಲ್ಲುವುದಿಲ್ಲ.
12149022a ಮಾನುಷಾಣಾಂ ಕುತಃ ಸ್ನೇಹೋ ಯೇಷಾಂ ಶೋಕೋ ಭವಿಷ್ಯತಿ|
12149022c ಇಮಂ ಕುಲಕರಂ ಪುತ್ರಂ ಕಥಂ ತ್ಯಕ್ತ್ವಾ ಗಮಿಷ್ಯಥ||
ಆದರೆ ಮನುಷ್ಯರಲ್ಲಿ ಇಷ್ಟೊಂದು ಸ್ನೇಹವು ಎಲ್ಲಿಂದ ಎಂದು ಅವರಿಗೆ ಅಷ್ಟೊಂದು ಶೋಕವುಂಟಾಗುತ್ತದೆ? ಇವನು ನಿಮ್ಮ ಕುಲಕರ ಪುತ್ರನು. ಇವನನ್ನು ಬಿಟ್ಟು ನೀವು ಎಲ್ಲಿಗೆ ಹೋಗುತ್ತಿದ್ದೀರಿ?
12149023a ಚಿರಂ ಮುಂಚತ ಬಾಷ್ಪಂ ಚ ಚಿರಂ ಸ್ನೇಹೇನ ಪಶ್ಯತ|
12149023c ಏವಂವಿಧಾನಿ ಹೀಷ್ಟಾನಿ ದುಸ್ತ್ಯಜಾನಿ ವಿಶೇಷತಃ||
ಇವನಿಗಾಗಿ ಇನ್ನೂ ಸ್ವಲ್ಪ ಹೊತ್ತು ಕಣ್ಣೀರು ಸುರಿಸಿರಿ ಮತ್ತು ಇನ್ನೂ ಸ್ವಲ್ಪ ಹೊತ್ತು ಇವನನ್ನು ಸ್ನೇಹದಿಂದ ನೋಡಿರಿ. ಏಕೆಂದರೆ ಇಂತಹ ಪ್ರಿಯ ಸಂತಾನವನ್ನು ಬಿಟ್ಟು ಹೋಗುವುದು ಅತ್ಯಂತ ಕಷ್ಟವಾಗುತ್ತದೆ.
12149024a ಕ್ಷೀಣಸ್ಯಾರ್ಥಾಭಿಯುಕ್ತಸ್ಯ ಶ್ಮಶಾನಾಭಿಮುಖಸ್ಯ ಚ|
12149024c ಬಾಂಧವಾ ಯತ್ರ ತಿಷ್ಠಂತಿ ತತ್ರಾನ್ಯೋ ನಾವತಿಷ್ಠತೇ||
ಶರೀರವು ಕ್ಷೀಣವಾಗುತ್ತಿರುವ, ದರಿದ್ರನಾಗಿರುವ ಮತ್ತು ಶ್ಮಶಾನಾಭಿಮುಖನಾಗಿರುವವನ ಬಳಿ ಅವನ ಬಾಂಧವರು ನಿಂತುಕೊಳ್ಳುತ್ತಾರೆಯೇ ಹೊರತು ಬೇರೆ ಯಾರೂ ಅಲ್ಲಿರುವುದಿಲ್ಲ.
12149025a ಸರ್ವಸ್ಯ ದಯಿತಾಃ ಪ್ರಾಣಾಃ ಸರ್ವಃ ಸ್ನೇಹಂ ಚ ವಿಂದತಿ|
12149025c ತಿರ್ಯಗ್ಯೋನಿಷ್ವಪಿ ಸತಾಂ ಸ್ನೇಹಂ ಪಶ್ಯತ ಯಾದೃಶಮ್||
ಸರ್ವರಿಗೂ ಅವರವರ ಪ್ರಾಣಗಳು ಇಷ್ಟವಾಗಿರುತ್ತವೆ ಮತ್ತು ಎಲ್ಲರೂ ಇತರರ ಸ್ನೇಹವನ್ನು ಬಯಸುತ್ತಾರೆ. ತಿರ್ಯಗ್ಯೋನಿಗಳಲ್ಲಿರುವ ಪ್ರಾಣಿಗಳಲ್ಲಿಯೂ ತಮ್ಮ ಸಂತಾನಗಳ ಮೇಲೆ ಎಂತಹ ಪ್ರೇಮವಿರುತ್ತದೆ ಎನ್ನುವುದನ್ನು ನೋಡಿರಿ.
12149026a ತ್ಯಕ್ತ್ವಾ ಕಥಂ ಗಚ್ಚೇಥೇಮಂ ಪದ್ಮಲೋಲಾಯತಾಕ್ಷಕಮ್|
12149026c ಯಥಾ ನವೋದ್ವಾಹಕೃತಂ ಸ್ನಾನಮಾಲ್ಯವಿಭೂಷಿತಮ್||
ಸ್ನಾನ-ಮಾಲ್ಯಾ ವಿಭೂಷಿತನಾಗಿ ಹೊಸ ಮದುಮಗನಂತೆ ಕಾಣುವ ಈ ಪದ್ಮಲೋಲಾಯತಾಕ್ಷ[9]ನನ್ನು ಬಿಟ್ಟು ಹೇಗೆ ತಾನೇ ಹೋಗುತ್ತಿರುವಿರಿ?””
12149027 ಭೀಷ್ಮ ಉವಾಚ |
12149027a ಜಂಬುಕಸ್ಯ ವಚಃ ಶ್ರುತ್ವಾ ಕೃಪಣಂ ಪರಿದೇವತಃ|
12149027c ನ್ಯವರ್ತಂತ ತದಾ ಸರ್ವೇ ಶವಾರ್ಥಂ ತೇ ಸ್ಮ ಮಾನುಷಾಃ||
ಭೀಷ್ಮನು ಹೇಳಿದನು: “ಕೃಪಣನಾಗಿ ಪರಿವೇದಿಸುತ್ತಿದ್ದ ನರಿಯ ಆ ಮಾತನ್ನು ಕೇಳಿ ಆ ಎಲ್ಲ ಮನುಷ್ಯರೂ ಶವದ ಬಳಿ ಹಿಂದಿರುಗಿದರು.
12149028 ಗೃಧ್ರ ಉವಾಚ |
12149028a ಅಹೋ ಧಿಕ್ಸುನೃಶಂಸೇನ ಜಂಬುಕೇನಾಲ್ಪಮೇಧಸಾ|
12149028c ಕ್ಷುದ್ರೇಣೋಕ್ತಾ ಹೀನಸತ್ತ್ವಾ ಮಾನುಷಾಃ ಕಿಂ ನಿವರ್ತಥ||
ಹದ್ದು ಹೇಳಿತು: “ಅಯ್ಯೋ! ಈ ಕ್ಷುದ್ರ ಅಲ್ಪಬುದ್ಧಿಯ ಕ್ರೂರ ನರಿಗೆ ಧಿಕ್ಕಾರ! ಇದರ ಮಾತನ್ನು ಕೇಳಿ ಹೀನಸತ್ತ್ವರಾದ ಈ ಮನುಷ್ಯರು ಹಿಂದಿರುಗಿಬಿಟ್ಟರಲ್ಲಾ!
12149029a ಪಂಚಭೂತಪರಿತ್ಯಕ್ತಂ ಶೂನ್ಯಂ ಕಾಷ್ಠತ್ವಮಾಗತಮ್|
12149029c ಕಸ್ಮಾಚ್ಚೋಚಥ ನಿಶ್ಚೇಷ್ಟಮಾತ್ಮಾನಂ ಕಿಂ ನ ಶೋಚಥ||
ಪಂಚಭೂತಗಳಿಂದ ಪರಿತ್ಯಕ್ತನಾದ ಇವನು ಒಣ ಕಟ್ಟಿಗೆಯಂತಾಗಿಬಿಟ್ಟಿದ್ದಾನೆ. ನೀವು ಇವನಿಗಾಗಿ ಏಕೆ ಶೋಕಿಸುತ್ತಿರುವಿರಿ? ಒಂದು ದಿನ ನಿಮ್ಮದೂ ಇದೇ ಅವಸ್ಥೆಯಾಗುವುದು. ನಿಮ್ಮ ಕುರಿತು ಏಕೆ ಶೋಕಿಸುವುದಿಲ್ಲ?
12149030a ತಪಃ ಕುರುತ ವೈ ತೀವ್ರಂ ಮುಚ್ಯಧ್ವಂ ಯೇನ ಕಿಲ್ಬಿಷಾತ್|
12149030c ತಪಸಾ ಲಭ್ಯತೇ ಸರ್ವಂ ವಿಲಾಪಃ ಕಿಂ ಕರಿಷ್ಯತಿ||
ತೀವ್ರ ತಪಸ್ಸನ್ನಾಚರಿಸಿರಿ. ಅದರಿಂದ ನೀವು ಪಾಪಮುಕ್ತರಾಗುತ್ತೀರಿ. ತಪಸ್ಸಿನಿಂದ ಎಲ್ಲವನ್ನೂ ಪಡೆದುಕೊಳ್ಳಬಹುದು. ಏಕೆ ವಿಲಪಿಸುತ್ತಿದ್ದೀರಿ?
12149031a ಅನಿಷ್ಟಾನಿ ಚ ಭಾಗ್ಯಾನಿ ಜಾನೀತ ಸಹ ಮೂರ್ತಿಭಿಃ|
12149031c ಯೇನ ಗಚ್ಚತಿ ಲೋಕೋಽಯಂ[10] ದತ್ತ್ವಾ ಶೋಕಮನಂತಕಮ್||
ಅನಿಷ್ಟಗಳು ಮತ್ತು ಭಾಗ್ಯಗಳು ಶರೀದೊಂದಿಗೇ ಹುಟ್ಟುತ್ತವೆ. ಕೊನೆಯಿಲ್ಲದ ಶೋಕವನ್ನಿತ್ತು ಇವನು ಈ ಲೋಕವನ್ನು ಬಿಟ್ಟು ಹೊರಟುಹೋಗಿದ್ದಾನೆ.
12149032a ಧನಂ ಗಾಶ್ಚ ಸುವರ್ಣಂ ಚ ಮಣಿರತ್ನಮಥಾಪಿ ಚ|
12149032c ಅಪತ್ಯಂ ಚ ತಪೋಮೂಲಂ ತಪೋಯೋಗಾಚ್ಚ ಲಭ್ಯತೇ||
ಧನ, ಗೋವುಗಳು, ಸುವರ್ಣ, ಮಣಿ-ರತ್ನಗಳು ಮತ್ತು ಸಂತಾನ ಇವುಗಳಿಗೆ ತಪಸ್ಸೇ ಮೂಲವು. ತಪೋಯೋಗದಿಂದಲೇ ಇವು ದೊರೆಯುತ್ತವೆ.
12149033a ಯಥಾಕೃತಾ ಚ ಭೂತೇಷು ಪ್ರಾಪ್ಯತೇ ಸುಖದುಃಖತಾ|
12149033c ಗೃಹೀತ್ವಾ ಜಾಯತೇ ಜಂತುರ್ದುಃಖಾನಿ ಚ ಸುಖಾನಿ ಚ||
ಹಿಂದೆ ಮಾಡಿದ ಕರ್ಮಗಳ ಅನುಸಾರ ಸುಖ-ದುಃಖಗಳನ್ನು ಪಡೆದುಕೊಂಡೇ ಜೀವಿಯು ಹುಟ್ಟುತ್ತಾನೆ ಮತ್ತು ತನ್ನ ಕರ್ಮಾನುಸಾರ ಸುಖ-ದುಃಖಗಳನ್ನು ಅನುಭವಿಸಿ ಹೊರಟುಹೋಗುತ್ತಾನೆ.
12149034a ನ ಕರ್ಮಣಾ ಪಿತುಃ ಪುತ್ರಃ ಪಿತಾ ವಾ ಪುತ್ರಕರ್ಮಣಾ|
12149034c ಮಾರ್ಗೇಣಾನ್ಯೇನ ಗಚ್ಚಂತಿ ತ್ಯಕ್ತ್ವಾ ಸುಕೃತದುಷ್ಕೃತೇ||
ತಂದೆಯ ಕರ್ಮದೊಂದಿಗೆ ಮಗನಿಗೆ ಮತ್ತು ಮಗನ ಕರ್ಮದೊಂದಿಗೆ ತಂದೆಯ ಯಾವ ಸಂಬಂಧವೂ ಇಲ್ಲ. ತಮ್ಮ ತಮ್ಮ ಪಾಪ-ಪುಣ್ಯಗಳ ಬಂಧನದಲ್ಲಿ ಬಂಧಿಸಲ್ಪಟ್ಟು ಜೀವಗಳು ಕರ್ಮಾನುಸಾರ ವಿಭಿನ್ನ ಮಾರ್ಗಗಳಲ್ಲಿ ಹೋಗುತ್ತಿರುತ್ತವೆ.
12149035a ಧರ್ಮಂ ಚರತ ಯತ್ನೇನ ತಥಾಧರ್ಮಾನ್ನಿವರ್ತತ[11]|
12149035c ವರ್ತಧ್ವಂ ಚ ಯಥಾಕಾಲಂ ದೈವತೇಷು ದ್ವಿಜೇಷು ಚ||
ನೀವು ಪ್ರಯತ್ನಪಟ್ಟು ಧರ್ಮದಲ್ಲಿಯೇ ನಡೆದುಕೊಳ್ಳಿ. ಅಧರ್ಮದಿಂದ ಹಿಂದೆಸರಿಯಿರಿ. ದೇವತೆಗಳು ಮತ್ತು ದ್ವಿಜರ ಸೇವೆಯಲ್ಲಿ ಯಥಾಕಾಲ ತತ್ಪರರಾಗಿರಿ.
12149036a ಶೋಕಂ ತ್ಯಜತ ದೈನ್ಯಂ ಚ ಸುತಸ್ನೇಹಾನ್ನಿವರ್ತತ|
12149036c ತ್ಯಜ್ಯತಾಮಯಮಾಕಾಶೇ ತತಃ ಶೀಘ್ರಂ ನಿವರ್ತತ||
ಶೋಕ ಮತ್ತು ದೀನತೆಗಳನ್ನು ತ್ಯಜಿಸಿ ಸುತಸ್ನೇಹದಿಂದ ನಿವೃತ್ತರಾಗಿರಿ. ಇವನನ್ನು ಇದೇ ಶೂನ್ಯ ಸ್ಥಳದಲ್ಲಿ ಬಿಟ್ಟು ಶೀಘ್ರವಾಗಿ ಹಿಂದೆಹೋಗಿ.
12149037a ಯತ್ಕರೋತಿ ಶುಭಂ ಕರ್ಮ ತಥಾಧರ್ಮಂ[12] ಸುದಾರುಣಮ್|
12149037c ತತ್ಕರ್ತೈವ ಸಮಶ್ನಾತಿ ಬಾಂಧವಾನಾಂ ಕಿಮತ್ರ ಹಿ||
ಶುಭ ಮತ್ತು ದಾರುಣ ಕರ್ಮಗಳನ್ನು ಮಾಡಿದರೆ ಅದರ ಫಲವನ್ನು ಕರ್ಮವನ್ನು ಮಾಡಿದವನೇ ಅನುಭವಿಸುತ್ತಾನೆ. ಅದರಲ್ಲಿ ಬಾಂಧವರೇನು ಮಾಡಬಲ್ಲರು?
12149038a ಇಹ ತ್ಯಕ್ತ್ವಾ ನ ತಿಷ್ಠಂತಿ ಬಾಂಧವಾ ಬಾಂಧವಂ ಪ್ರಿಯಮ್|
12149038c ಸ್ನೇಹಮುತ್ಸೃಜ್ಯ ಗಚ್ಚಂತಿ ಬಾಷ್ಪಪೂರ್ಣಾವಿಲೇಕ್ಷಣಾಃ||
ಬಾಂಧವರು ತಮ್ಮ ಪ್ರಿಯ ಬಾಂಧವನನ್ನು ಇಲ್ಲಿ ಇಟ್ಟು ಇಲ್ಲಿಯೇ ನಿಂತುಕೊಳ್ಳುವುದಿಲ್ಲ. ಸ್ನೇಹವನ್ನು ಬಿಟ್ಟು ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಸಿಕೊಂಡು ಹೊರಟು ಹೋಗುತ್ತಾರೆ.
12149039a ಪ್ರಾಜ್ಞೋ ವಾ ಯದಿ ವಾ ಮೂರ್ಖಃ ಸಧನೋ ನಿರ್ಧನೋಽಪಿ ವಾ|
12149039c ಸರ್ವಃ ಕಾಲವಶಂ ಯಾತಿ ಶುಭಾಶುಭಸಮನ್ವಿತಃ||
ಪ್ರಾಜ್ಞನಾಗಿರಲಿ ಅಥವಾ ಮೂರ್ಖನಾಗಿರಲೀ, ಧನಿಕನಾಗಿರಲಿ ಅಥವಾ ದರಿದ್ರನಾಗಿರಲಿ, ಎಲ್ಲರೂ ತಮ್ಮ ಶುಭಾಶುಭ ಕರ್ಮಫಲಗಳೊಂದಿಗೆ ಕಾಲವಶರಾಗುತ್ತಾರೆ.
12149040a ಕಿಂ ಕರಿಷ್ಯಥ ಶೋಚಿತ್ವಾ ಮೃತಂ ಕಿಮನುಶೋಚಥ|
12149040c ಸರ್ವಸ್ಯ ಹಿ ಪ್ರಭುಃ ಕಾಲೋ ಧರ್ಮತಃ ಸಮದರ್ಶನಃ||
ಶೋಕಿಸಿ ನೀವು ಏನು ಮಾಡಬಲ್ಲಿರಿ? ಈ ಮೃತನಿಗಾಗಿ ಏಕೆ ಶೋಕಿಸುತ್ತಿರುವಿರಿ? ಸರ್ವರಿಗೂ ಕಾಲನೇ ಪ್ರಭುವು ಮತ್ತು ಕಾಲನು ಧರ್ಮತಃ ಎಲ್ಲರ ಮೇಲೂ ಸಮಾನ ದೃಷ್ಟಿಯನ್ನಿಟ್ಟಿರುತ್ತಾನೆ.
12149041a ಯೌವನಸ್ಥಾಂಶ್ಚ ಬಾಲಾಂಶ್ಚ ವೃದ್ಧಾನ್ಗರ್ಭಗತಾನಪಿ|
12149041c ಸರ್ವಾನಾವಿಶತೇ ಮೃತ್ಯುರೇವಂಭೂತಮಿದಂ ಜಗತ್||
ಈ ಮೃತ್ಯುವು ಯುವಕರನ್ನು, ಬಾಲಕರನ್ನು, ವೃದ್ಧರನ್ನು ಮತ್ತು ಗರ್ಭದಲ್ಲಿರುವವರನ್ನು ಎಲ್ಲರನ್ನೂ ಪ್ರವೇಶಿಸುತ್ತಾನೆ. ಈ ಜಗತ್ತಿನ ಎಲ್ಲ ಜೀವಿಗಳ ದಶೆಯೂ ಇದೇ ಆಗಿರುತ್ತದೆ.”
12149042 ಜಂಬುಕ ಉವಾಚ |
12149042a ಅಹೋ ಮಂದೀಕೃತಃ ಸ್ನೇಹೋ ಗೃಧ್ರೇಣೇಹಾಲ್ಪಮೇಧಸಾ|
12149042c ಪುತ್ರಸ್ನೇಹಾಭಿಭೂತಾನಾಂ ಯುಷ್ಮಾಕಂ ಶೋಚತಾಂ ಭೃಶಮ್||
ನರಿಯು ಹೇಳಿತು: “ಅಯ್ಯೋ! ಈ ಮಂದಬುದ್ಧಿ ಹದ್ದು ನಿಮ್ಮ ಸ್ನೇಹವನ್ನು ಶಿಥಿಲಗೊಳಿಸಿಬಿಟ್ಟಿತು! ನೀವಾದರೋ ಪುತ್ರಸ್ನೇಹದಿಂದ ತುಂಬಿದವರಾಗಿ ಅತ್ಯಂತ ಶೋಕದಿಂದಿದ್ದೀರಿ.
12149043a ಸಮೈಃ ಸಮ್ಯಕ್ ಪ್ರಯುಕ್ತೈಶ್ಚ ವಚನೈಃ ಪ್ರಶ್ರಯೋತ್ತರೈಃ|
12149043c ಯದ್ಗಚ್ಚಥ ಜಲಸ್ಥಾಯಂ ಸ್ನೇಹಮುತ್ಸೃಜ್ಯ ದುಸ್ತ್ಯಜಮ್||
ಹದ್ದಿನ ಉತ್ತಮ ಯುಕ್ತಿಗಳಿಂದ ಕೂಡಿದ ನ್ಯಾಯಸಂಗತ ಮತ್ತು ವಿಶ್ವಾಸೋತ್ಪಾದಕ ವಚನಗಳಿಂದ ಪ್ರಭಾವಿತರಾಗಿ ಇವರೆಲ್ಲರೂ ತ್ಯಜಿಸಲು ಕಷ್ಟವಾದ ಸ್ನೇಹವನ್ನು ಪರಿತ್ಯಜಿಸಿ ಹೊರಟು ಹೋಗುತ್ತಿದ್ದಾರಲ್ಲಾ! ಇದೆಂಥಹ ಆಶ್ಚರ್ಯವು!
12149044a ಅಹೋ ಪುತ್ರವಿಯೋಗೇನ ಮೃತಶೂನ್ಯೋಪಸೇವನಾತ್|
12149044c ಕ್ರೋಶತಾಂ ವೈ ಭೃಶಂ ದುಃಖಂ ವಿವತ್ಸಾನಾಂ ಗವಾಮಿವ||
12149045a ಅದ್ಯ ಶೋಕಂ ವಿಜಾನಾಮಿ ಮಾನುಷಾಣಾಂ ಮಹೀತಲೇ|
12149045c ಸ್ನೇಹಂ ಹಿ ಕರುಣಂ ದೃಷ್ಟ್ವಾ ಮಮಾಪ್ಯಶ್ರೂಣ್ಯಥಾಗಮನ್||
ಅಯ್ಯೋ! ಪುತ್ರವಿಯೋಗದಿಂದ ಪೀಡಿತರಾಗಿ ಮೃತಕರ ಈ ಶೂನ್ಯ ಸ್ಥಾನಕ್ಕೆ ಬಂದು ಅತ್ಯಂತ ದುಃಖದಿಂದ ರೋದಿಸುತ್ತಿರುವ ಈ ಭೂತಲವಾಸೀ ಮನುಷ್ಯರ ಹೃದಯದಲ್ಲಿ ಕರುವಿಲ್ಲದ ಗೋವಿನಂತೆ ಎಷ್ಟೊಂದು ದುಃಖವಾಗುತ್ತಿರಲಿಕ್ಕಿಲ್ಲ? ಇದರ ಅನುಭವವು ಇಂದು ನನಗೆ ಆಗುತ್ತಿದೆ. ಏಕೆಂದರೆ ಇವರ ಸ್ನೇಹದ ನೆಪದಿಂದ ನನ್ನ ಕಣ್ಣುಗಳಿಂದಲೂ ಕಣ್ಣೀರು ಸುರಿಯುತ್ತಿದೆ!
12149046a ಯತ್ನೋ ಹಿ ಸತತಂ ಕಾರ್ಯಃ ಕೃತೋ ದೈವೇನ ಸಿಧ್ಯತಿ|
12149046c ದೈವಂ ಪುರುಷಕಾರಶ್ಚ ಕೃತಾಂತೇನೋಪಪದ್ಯತೇ||
ಅಭೀಷ್ಟಸಿದ್ಧಿಗಾಗಿ ಸದಾ ಪ್ರಯತ್ನಪಡುತ್ತಲೇ ಇರಬೇಕು. ಆಗ ದೈವಯೋಗದಿಂದ ಅದರ ಸಿದ್ಧಿಯಾಗುತ್ತದೆ. ದೈವ ಮತ್ತು ಪುರುಷಾರ್ಥ ಎರಡೂ ಕಾಲದಿಂದಲೇ ಸಂಪನ್ನವಾಗುತ್ತವೆ.
12149047a ಅನಿರ್ವೇದಃ ಸದಾ ಕಾರ್ಯೋ ನಿರ್ವೇದಾದ್ಧಿ ಕುತಃ ಸುಖಮ್|
12149047c ಪ್ರಯತ್ನಾತ್ ಪ್ರಾಪ್ಯತೇ ಹ್ಯರ್ಥಃ ಕಸ್ಮಾದ್ಗಚ್ಚಥ ನಿರ್ದಯಾಃ||
ಖೇದ ಮತ್ತು ಶಿಥಿಲತೆಗೆ ಎಂದೂ ಮನಸ್ಸಿನಲ್ಲಿ ಸ್ಥಾನವನ್ನೀಡಬಾರದು. ಖೇದವಿದ್ದರೆ ಸುಖವೆಲ್ಲಿಂದ ಬರುತ್ತದೆ? ಪ್ರಯತ್ನದಿಂದಲೇ ಅಭಿಲಾಷೆಗಳು ಪೂರ್ಣಗೊಳ್ಳುತ್ತವೆ. ಆದುದರಿಂದ ನೀವು ಈ ಬಾಲಕನ ರಕ್ಷಣೆಯ ಪ್ರಯತ್ನವನ್ನು ಬಿಟ್ಟು ನಿರ್ದಯಿಗಳಾಗಿ ಎಲ್ಲಿಗೆ ಹೋಗುತ್ತಿರುವಿರಿ?
12149048a ಆತ್ಮಮಾಂಸೋಪವೃತ್ತಂ ಚ ಶರೀರಾರ್ಧಮಯೀಂ ತನುಮ್|
12149048c ಪಿತೃಣಾಂ ವಂಶಕರ್ತಾರಂ ವನೇ ತ್ಯಕ್ತ್ವಾ ಕ್ವ ಯಾಸ್ಯಥ||
ಈ ಬಾಲಕನು ನಿಮ್ಮದೇ ರಕ್ತ-ಮಾಂಸಗಳಿಂದ ಮಾಡಲ್ಪಟ್ಟಿದ್ದಾನೆ. ನಿಮ್ಮ ಅರ್ಧಶರೀರದ ಸಮಾನನಾಗಿದ್ದಾನೆ ಮತ್ತು ಪಿತೃಗಳ ವಂಶವೃದ್ಧಿಮಾಡುವವನಾಗಿದ್ದಾನೆ. ಇವನನ್ನು ವನದಲ್ಲಿ ಬಿಟ್ಟು ಎಲ್ಲಿಗೆ ಹೋಗುತ್ತಿದ್ದೀರಿ?
12149049a ಅಥ ವಾಸ್ತಂ ಗತೇ ಸೂರ್ಯೇ ಸಂಧ್ಯಾಕಾಲ ಉಪಸ್ಥಿತೇ|
12149049c ತತೋ ನೇಷ್ಯಥ ವಾ ಪುತ್ರಮಿಹಸ್ಥಾ ವಾ ಭವಿಷ್ಯಥ||
ಆಗಲಿ! ಎಲ್ಲಿಯವರಿಗೆ ಸೂರ್ಯಾಸ್ತವಾಗುವುದಿಲ್ಲವೋ ಮತ್ತು ಸಂಧ್ಯಾಕಾಲವು ಉಪಸ್ಥಿತವಾಗುವುದೋ ಅಲ್ಲಿಯವರೆಗಾದರೂ ನೀವು ಇಲ್ಲಿ ನಿಲ್ಲಿ. ನಂತರ ನಿಮ್ಮ ಈ ಪುತ್ರನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಅಥವಾ ಇಲ್ಲಿಯೇ ಬಿಟ್ಟು ಹೋಗಿ.”
12149050 ಗೃಧ್ರ ಉವಾಚ |
12149050a ಅದ್ಯ ವರ್ಷಸಹಸ್ರಂ ಮೇ ಸಾಗ್ರಂ ಜಾತಸ್ಯ ಮಾನುಷಾಃ|
12149050c ನ ಚ ಪಶ್ಯಾಮಿ ಜೀವಂತಂ ಮೃತಂ ಸ್ತ್ರೀಪುಂನಪುಂಸಕಮ್||
ಹದ್ದು ಹೇಳಿತು: “ಮನುಷ್ಯರೇ! ನಾನು ಹುಟ್ಟಿ ಇಂದಿಗೆ ಒಂದು ಸಾವಿರ ವರ್ಷಕ್ಕಿಂತಲೂ ಹೆಚ್ಚಾಗಿದೆ. ಆದರೆ ನಾನು ಎಂದೂ ಯಾವುದೇ ಸ್ತ್ರೀ-ಪುರುಷ ಅಥವಾ ನಪುಂಸಕನು ಮರಣಾನಂತರ ಜೀವಿತನಾದುದನ್ನು ಕಂಡಿಲ್ಲ.
12149051a ಮೃತಾ ಗರ್ಭೇಷು ಜಾಯಂತೇ ಮ್ರಿಯಂತೇ ಜಾತಮಾತ್ರಕಾಃ|
12149051c ವಿಕ್ರಮಂತೋ ಮ್ರಿಯಂತೇ ಚ ಯೌವನಸ್ಥಾಸ್ತಥಾಪರೇ||
ಕೆಲವರು ಗರ್ಭದಲ್ಲಿಯೇ ಸತ್ತುಹೋಗುತ್ತಾರೆ. ಕೆಲವರು ಹುಟ್ಟುತ್ತಲೇ ಸತ್ತುಹೋಗುತ್ತಾರೆ. ಕೆಲವರು ನಡೆಯಲು ಬಂದಾಗ ಸಾಯುತ್ತಾರೆ. ಇನ್ನು ಕೆಲವರು ಯೌವನಾವಸ್ಥೆಯಲ್ಲಿ ಸತ್ತು ಹೋಗುತ್ತಾರೆ.
12149052a ಅನಿತ್ಯಾನೀಹ ಭಾಗ್ಯಾನಿ ಚತುಷ್ಪಾತ್ಪಕ್ಷಿಣಾಮಪಿ|
12149052c ಜಂಗಮಾಜಂಗಮಾನಾಂ[13] ಚಾಪ್ಯಾಯುರಗ್ರೇಽವತಿಷ್ಠತೇ||
ಈ ಲೋಕದಲ್ಲಿ ಪಶುಪಕ್ಷಿಗಳ ಭಾಗ್ಯಗಳೂ ಅನಿತ್ಯವಾದವು. ಸ್ಥಾವರ ಜಂಗಮಗಳ ಜೀವನದಲ್ಲಿಯೂ ಆಯಸ್ಸು ಪ್ರಧಾನವಾಗಿರುತ್ತದೆ.
12149053a ಇಷ್ಟದಾರವಿಯುಕ್ತಾಶ್ಚ ಪುತ್ರಶೋಕಾನ್ವಿತಾಸ್ತಥಾ|
12149053c ದಹ್ಯಮಾನಾಃ ಸ್ಮ ಶೋಕೇನ ಗೃಹಂ ಗಚ್ಚಂತಿ ನಿತ್ಯದಾ||
ಪ್ರಿಯ ಪತ್ನಿಯ ವಿಯೋಗದಿಂದ ಮತ್ತು ಪುತ್ರಶೋಕದಿಂದ ಸಂತಪ್ತರಾದ ಎಷ್ಟೊಂದು ಪ್ರಾಣಿಗಳು ಪ್ರತಿದಿನ ಶೋಕಾಗ್ನಿಯಲ್ಲಿ ಸುಡುತ್ತಾ ಈ ಶ್ಮಶಾನದಿಂದ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ!
12149054a ಅನಿಷ್ಟಾನಾಂ ಸಹಸ್ರಾಣಿ ತಥೇಷ್ಟಾನಾಂ ಶತಾನಿ ಚ|
12149054c ಉತ್ಸೃಜ್ಯೇಹ ಪ್ರಯಾತಾ ವೈ ಬಾಂಧವಾ ಭೃಶದುಃಖಿತಾಃ||
ಎಷ್ಟೋ ಬಾಂಧವರು ಅತ್ಯಂತ ದುಃಖಿತರಾಗಿ ಇಲ್ಲಿ ಸಾವಿರಾರು ಅಪ್ರಿಯ ಮತ್ತು ನೂರಾರು ಪ್ರಿಯ ವ್ಯಕ್ತಿಗಳನ್ನು ಬಿಟ್ಟು ಹೊರಟುಹೋಗಿದ್ದಾರೆ.
12149055a ತ್ಯಜ್ಯತಾಮೇಷ ನಿಸ್ತೇಜಾಃ ಶೂನ್ಯಃ ಕಾಷ್ಠತ್ವಮಾಗತಃ|
12149055c ಅನ್ಯದೇಹವಿಷಕ್ತೋ ಹಿ ಶಾವಂ ಕಾಷ್ಠಮುಪಾಸತೇ||
12149056a ಭ್ರಾಂತಜೀವಸ್ಯ ವೈ ಬಾಷ್ಪಂ ಕಸ್ಮಾದ್ಧಿತ್ವಾ ನ ಗಚ್ಚಥ|
12149056c ನಿರರ್ಥಕೋ ಹ್ಯಯಂ ಸ್ನೇಹೋ ನಿರರ್ಥಶ್ಚ ಪರಿಗ್ರಹಃ||
ಈ ಮೃತ ಬಾಲಕನು ತೇಜೋಹೀನನಾಗಿ ಒಣಗಿದ ಕಟ್ಟಿಗೆಯಂತೆ ಆಗಿಬಿಟ್ಟಿದ್ದಾನೆ. ಇವನ ಜೀವವು ಇನ್ನೊಂದು ಶರೀರದಲ್ಲಿ ಆಸಕ್ತವಾಗಿದೆ. ಈ ನಿಷ್ಪ್ರಾಣ ಬಾಲಕನ ಶವವು ಕಟ್ಟಿಗೆಯಂತೆ ಆಗಿಬಿಟ್ಟಿದೆ. ನೀವುಗಳು ಇವನನ್ನು ಇಲ್ಲಿಯೇ ಬಿಟ್ಟು ಏಕೆ ಹೊರಟುಹೋಗುತ್ತಿಲ್ಲ? ನಿಮ್ಮ ಈ ಸ್ನೇಹವು ನಿರರ್ಥಕವಾದುದು ಮತ್ತು ಈ ಪರಿಶ್ರಮದಲ್ಲಿ ಯಾವ ಫಲವೂ ಇಲ್ಲ.
12149057a ನ ಚಕ್ಷುರ್ಭ್ಯಾಂ ನ ಕರ್ಣಾಭ್ಯಾಂ ಸಂಶೃಣೋತಿ ಸಮೀಕ್ಷತೇ|
12149057c ತಸ್ಮಾದೇನಂ ಸಮುತ್ಸೃಜ್ಯ ಸ್ವಗೃಹಾನ್ಗಚ್ಚತಾಶು ವೈ||
ಇವನು ಕಣ್ಣುಗಳಿಂದ ನೋಡುತ್ತಿಲ್ಲ ಮತ್ತು ಕಿವಿಗಳಿಂದ ಕೇಳುತ್ತಿಲ್ಲ. ಆದುದರಿಂದ ನೀವು ಇವನನ್ನು ಇಲ್ಲಿಯೇ ಬಿಟ್ಟು ನಿಮ್ಮ ಮನೆಗಳಿಗೆ ಏಕೆ ತೆರಳುತ್ತಿಲ್ಲ?
12149058a ಮೋಕ್ಷಧರ್ಮಾಶ್ರಿತೈರ್ವಾಕ್ಯೈರ್ಹೇತುಮದ್ಭಿರನಿಷ್ಠುರೈಃ|
12149058c ಮಯೋಕ್ತಾ ಗಚ್ಚತ ಕ್ಷಿಪ್ರಂ ಸ್ವಂ ಸ್ವಮೇವ ನಿವೇಶನಮ್||
ನನ್ನ ಈ ಮಾತು ಬಹಳ ನಿಷ್ಠುರವಾದುದೆಂದು ತೋರುತ್ತದೆ. ಆದರೂ ಇದು ಹೇತುಗರ್ಭಿತವಾಗಿದೆ ಮತ್ತು ಮೋಕ್ಷಧರ್ಮದ ಕುರಿತಾಗಿದೆ. ಆದುದರಿಂದ ಇದನ್ನು ಒಪ್ಪಿಕೊಂಡು ನನ್ನ ಮಾತಿನಂತೆ ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ತೆರಳಿರಿ.
12149059a ಪ್ರಜ್ಞಾವಿಜ್ಞಾನಯುಕ್ತೇನ ಬುದ್ಧಿಸಂಜ್ಞಾಪ್ರದಾಯಿನಾ|
12149059c ವಚನಂ ಶ್ರಾವಿತಾ ರೂಕ್ಷಂ ಮಾನುಷಾಃ ಸಂನಿವರ್ತತ||
ಮನುಷ್ಯರೇ! ನಾನು ಪ್ರಜ್ಞೆ ಮತ್ತು ವಿಜ್ಞಾನಯುಕ್ತವಾದ ಮತ್ತು ಇತರರಿಗೂ ಬುದ್ಧಿಸಂಜ್ಞೆಗಳನ್ನು ನೀಡುವ ಮಾತನಾಡುತ್ತಿದ್ದೇನೆ. ಕಠೋರವಾದ ನನ್ನ ಈ ಮಾತನ್ನು ಕೇಳಿ ಹಿಂದಿರುಗಿರಿ.”
[14]12149060 ಜಂಬುಕ ಉವಾಚ |
12149060a ಇಮಂ ಕನಕವರ್ಣಾಭಂ ಭೂಷಣೈಃ ಸಮಲಂಕೃತಮ್|
12149060c ಗೃಧ್ರವಾಕ್ಯಾತ್ಕಥಂ ಪುತ್ರಂ ತ್ಯಜಧ್ವಂ ಪಿತೃಪಿಂಡದಮ್||
ನರಿಯು ಹೇಳಿತು: “ಬಂಗಾರದ ವರ್ಣದಿಂದ ಕೂಡಿರುವ ಮತ್ತು ಭೂಷಣಗಳಿಂದ ಸಮಲಂಕೃತನಾಗಿರುವ ಹಾಗೂ ಪಿತೃಪಿಂಡಗಳನ್ನು ನೀಡುವ ಈ ಪುತ್ರನನ್ನು ಹದ್ದಿನ ಮಾತನ್ನು ಕೇಳಿ ಹೇಗೆ ತಾನೇ ಬಿಟ್ಟುಹೋಗುತ್ತಿದ್ದೀರಿ?
12149061a ನ ಸ್ನೇಹಸ್ಯ ವಿರೋಧೋಽಸ್ತಿ ವಿಲಾಪರುದಿತಸ್ಯ ವೈ|
12149061c ಮೃತಸ್ಯಾಸ್ಯ ಪರಿತ್ಯಾಗಾತ್ತಾಪೋ ವೈ ಭವಿತಾ ಧ್ರುವಮ್||
ಈ ಮೃತ ಬಾಲಕನನ್ನು ಇಲ್ಲಿ ಬಿಟ್ಟು ಹೋಗುವುದರಿಂದ ನಿಮ್ಮ ಸ್ನೇಹವೇನೂ ಕಡಿಮೆಯಾಗುವುದಿಲ್ಲ ಮತ್ತು ನಿಮ್ಮ ಈ ರೋದನ-ವಿಲಾಪಗಳು ನಿಂತುಹೋಗುವುದಿಲ್ಲ. ಬದಲಾಗಿ ನಿಮ್ಮ ಸಂತಾಪವು ನಿಶ್ಚಯವಾಗಿ ಇನ್ನೂ ಹೆಚ್ಚಾಗುತ್ತದೆ.
12149062a ಶ್ರೂಯತೇ ಶಂಬುಕೇ ಶೂದ್ರೇ ಹತೇ ಬ್ರಾಹ್ಮಣದಾರಕಃ|
12149062c ಜೀವಿತೋ ಧರ್ಮಮಾಸಾದ್ಯ ರಾಮಾತ್ಸತ್ಯಪರಾಕ್ರಮಾತ್||
ಸತ್ಯಪರಾಕ್ರಮೀ ರಾಮನು ಶಂಬುಕ ಎಂಬ ಹೆಸರಿನ ಶೂದ್ರನನ್ನು ಕೊಂದನಂತರ ಆ ಧರ್ಮದ ಪ್ರಭಾವದಿಂದ ಓರ್ವ ಮೃತ ಬ್ರಾಹ್ಮಣ ಪುತ್ರನು ಜೀವಿತನಾದನೆಂದು ಕೇಳಿದ್ದೇವೆ.
12149063a ತಥಾ ಶ್ವೇತಸ್ಯ ರಾಜರ್ಷೇರ್ಬಾಲೋ ದಿಷ್ಟಾಂತಮಾಗತಃ|
12149063c ಶ್ವೋಽಭೂತೇ ಧರ್ಮನಿತ್ಯೇನ ಮೃತಃ ಸಂಜೀವಿತಃ ಪುನಃ||
ಹಾಗೆಯೇ ರಾಜರ್ಷಿ ಶ್ವೇತನ ಬಾಲಕನು ತೀರಿಕೊಂಡಿದ್ದನು. ಆದರೆ ಧರ್ಮನಿಷ್ಠ ಶ್ವೇತನು ಅವನನ್ನು ಪುನಃ ಜೀವಿತಗೊಳಿಸಿದ್ದನು.
12149064a ತಥಾ ಕಶ್ಚಿದ್ಭವೇತ್ಸಿದ್ಧೋ ಮುನಿರ್ವಾ ದೇವತಾಪಿ ವಾ|
12149064c ಕೃಪಣಾನಾಮನುಕ್ರೋಶಂ ಕುರ್ಯಾದ್ವೋ ರುದತಾಮಿಹ||
ಹೀಗೆಯೇ ಯಾರಾದರೂ ಸಿದ್ಧ ಮುನಿ ಅಥವಾ ದೇವತೆಯು ದೊರಕಿದರೆ ದುಃಖದಿಂದ ರೋದಿಸುತ್ತಿರುವ ನಿಮ್ಮ ಮೇಲೆ ದಯೆಯನ್ನುಂಟುಮಾಡಬಹುದು.””
12149065 ಭೀಷ್ಮ ಉವಾಚ |
12149065a ಇತ್ಯುಕ್ತಾಃ ಸಂನ್ಯವರ್ತಂತ ಶೋಕಾರ್ತಾಃ ಪುತ್ರವತ್ಸಲಾಃ|
12149065c ಅಂಕೇ ಶಿರಃ ಸಮಾಧಾಯ ರುರುದುರ್ಬಹುವಿಸ್ತರಮ್||
ಭೀಷ್ಮನು ಹೇಳಿದನು: “ನರಿಯು ಹೀಗೆ ಹೇಳಲು ಪುತ್ರವತ್ಸಲ ಬಾಂಧವರು ಶೋಕದಿಂದ ಪೀಡಿತರಾಗಿ ಹಿಂದಿರುಗಿದರು ಮತ್ತು ಬಾಲಕನ ತಲೆಯನ್ನು ತಮ್ಮ ತೊಡೆಯಮೇಲಿಟ್ಟುಕೊಂಡು ಜೋರಾಗಿ ರೋದಿಸತೊಡಗಿದರು.
[15]12149066 ಗೃಧ್ರ ಉವಾಚ |
12149066a ಅಶ್ರುಪಾತಪರಿಕ್ಲಿನ್ನಃ ಪಾಣಿಸ್ಪರ್ಶನಪೀಡಿತಃ|
12149066c ಧರ್ಮರಾಜಪ್ರಯೋಗಾಚ್ಚ ದೀರ್ಘಾಂ ನಿದ್ರಾಂ ಪ್ರವೇಶಿತಃ||
ಹದ್ದು ಹೇಳಿತು: “ನಿಮ್ಮ ಕಣ್ಣೀರಿನಿಂದ ತೋಯಿಸುತ್ತಿರುವ ಮತ್ತು ನೀವು ಕೈಗಳಿಂದ ಒತ್ತುತ್ತಿರುವ ಈ ಬಾಲಕನು ಧರ್ಮರಾಜನ ಪ್ರಯೋಗದಿಂದ ದೀರ್ಘನಿದ್ರೆಯನ್ನು ಪ್ರವೇಶಿಸಿಬಿಟ್ಟಿದ್ದಾನೆ.
12149067a ತಪಸಾಪಿ ಹಿ ಸಂಯುಕ್ತೋ ನ ಕಾಲೇ ನೋಪಹನ್ಯತೇ[16]|
12149067c ಸರ್ವಸ್ನೇಹಾವಸಾನಂ[17] ತದಿದಂ ತತ್ ಪ್ರೇತಪತ್ತನಮ್||
ತಪಸ್ಸಿನಿಂದ ಸಂಯುಕ್ತರಾಗಿರುವವರೂ ಕಾಲವನ್ನು ಮೀರಲಾರರು. ಈ ಪ್ರೇತಪಟ್ಟಣದಲ್ಲಿ ಎಲ್ಲ ಸ್ನೇಹಗಳೂ ಕೊನೆಗೊಳ್ಳುತ್ತವೆ.
12149068a ಬಾಲವೃದ್ಧಸಹಸ್ರಾಣಿ ಸದಾ ಸಂತ್ಯಜ್ಯ ಬಾಂಧವಾಃ|
12149068c ದಿನಾನಿ ಚೈವ ರಾತ್ರೀಶ್ಚ ದುಃಖಂ ತಿಷ್ಠಂತಿ ಭೂತಲೇ||
ಭೂತಲದಲ್ಲಿ ಸಹಸ್ರಾರು ಬಾಲಕರು ಮತ್ತು ವೃದ್ಧರನ್ನು ಸದಾ ತ್ಯಜಿಸಿ ಬಾಂಧವರು ದಿನ ರಾತ್ರಿ ದುಃಖಪಡುತ್ತಿರುತ್ತಾರೆ.
12149069a ಅಲಂ ನಿರ್ಬಂಧಮಾಗಮ್ಯ ಶೋಕಸ್ಯ ಪರಿವಾರಣಮ್|
12149069c ಅಪ್ರತ್ಯಯಂ ಕುತೋ ಹ್ಯಸ್ಯ ಪುನರದ್ಯೇಹ ಜೀವಿತಮ್||
ಪುನಃ ಪುನಃ ಹಿಂದಿರುಗಿ ಬಂದು ಶೋಕಪಡುವುದರಿಂದ ಶೋಕವು ಕಡಿಮೆಯಾಗುವುದಿಲ್ಲ. ಇನ್ನು ಇವನು ಜೀವಿತಗೊಳ್ಳುವ ಯಾವ ಭರವಸೆಯೂ ಇಲ್ಲವಾಗಿದೆ. ಇಂದು ಇವನ ಪುನರ್ಜೀವನವು ಹೇಗೆ ಸಾಧ್ಯವಿದೆ?
12149070a ನೈಷ ಜಂಬುಕವಾಕ್ಯೇನ ಪುನಃ ಪ್ರಾಪ್ಸ್ಯತಿ ಜೀವಿತಮ್|
12149070c ಮೃತಸ್ಯೋತ್ಸೃಷ್ಟದೇಹಸ್ಯ ಪುನರ್ದೇಹೋ ನ ವಿದ್ಯತೇ||
ನರಿಯ ಮಾತಿನಿಂದ ಇವನು ಪುನಃ ಜೀವವನ್ನು ಪಡೆದುಕೊಳ್ಳುವುದಿಲ್ಲ. ಒಮ್ಮೆ ದೇಹವನ್ನು ಬಿಟ್ಟುಹೋದ ಜೀವವು ಪುನಃ ಆ ದೇಹವನ್ನು ಸೇರುವುದಿಲ್ಲ.
12149071a ನ ವೈ ಮೂರ್ತಿಪ್ರದಾನೇನ ನ ಜಂಬುಕಶತೈರಪಿ|
12149071c ಶಕ್ಯೋ ಜೀವಯಿತುಂ ಹ್ಯೇಷ ಬಾಲೋ ವರ್ಷಶತೈರಪಿ||
ನೂರಾರು ನರಿಗಳು ತಮ್ಮ ಶರೀರವನ್ನು ಬಲಿಕೊಟ್ಟರೂ ನೂರು ವರ್ಷಗಳಾದರೂ ಈ ಬಾಲಕನ್ನು ಜೀವಿತಗೊಳಿಸಲು ಶಕ್ಯವಿಲ್ಲ.
12149072a ಅಪಿ ರುದ್ರಃ ಕುಮಾರೋ ವಾ ಬ್ರಹ್ಮಾ ವಾ ವಿಷ್ಣುರೇವ ವಾ|
12149072c ವರಮಸ್ಮೈ ಪ್ರಯಚ್ಚೇಯುಸ್ತತೋ ಜೀವೇದಯಂ ಶಿಶುಃ||
ರುದ್ರ, ಕುಮಾರ ಕಾರ್ತಿಕೇಯ ಅಥವಾ ಬ್ರಹ್ಮ ಅಥವಾ ವಿಷ್ಣು ಇವನಿಗೆ ವರವನ್ನಿತ್ತರೆ ಈ ಶಿಶುವು ಪುನಃ ಜೀವಿತಗೊಳ್ಳಬಹುದು.
12149073a ನ ಚ ಬಾಷ್ಪವಿಮೋಕ್ಷೇಣ ನ ಚಾಶ್ವಾಸಕೃತೇನ ವೈ|
12149073c ನ ದೀರ್ಘರುದಿತೇನೇಹ ಪುನರ್ಜೀವೋ ಭವಿಷ್ಯತಿ||
ಕಣ್ಣೀರು ಸುರಿಸುವುದರಿಂದ ಅಥವಾ ದೀರ್ಘ ನಿಟ್ಟುಸಿರುಬಿಡುವುದರಿಂದ ಅಥವಾ ಬಹಳ ಹೊತ್ತು ಅಳುತ್ತಿರುವುದರಿಂದ ಇವನು ಪುನಃ ಜೀವಿತನಾಗುವುದಿಲ್ಲ.
12149074a ಅಹಂ ಚ ಕ್ರೋಷ್ಟುಕಶ್ಚೈವ ಯೂಯಂ ಚೈವಾಸ್ಯ ಬಾಂಧವಾಃ|
12149074c ಧರ್ಮಾಧರ್ಮೌ ಗೃಹೀತ್ವೇಹ ಸರ್ವೇ ವರ್ತಾಮಹೇಽಧ್ವನಿ||
ನಾನು, ಈ ನರಿ ಮತ್ತು ಇವನ ಬಾಂಧವರಾದ ನೀವು ಎಲ್ಲರೂ ಧರ್ಮ ಮತ್ತು ಅಧರ್ಮವನ್ನು ಹೊತ್ತು ಇಲ್ಲಿ ನಮ್ಮ ನಮ್ಮ ದಾರಿಯಲ್ಲಿ ಸಾಗುತ್ತಿದ್ದೇವೆ.
12149075a ಅಪ್ರಿಯಂ ಪರುಷಂ ಚಾಪಿ ಪರದ್ರೋಹಂ ಪರಸ್ತ್ರಿಯಮ್|
12149075c ಅಧರ್ಮಮನೃತಂ ಚೈವ ದೂರಾತ್ ಪ್ರಾಜ್ಞೋ ನಿವರ್ತಯೇತ್||
ಪ್ರಾಜ್ಞನಾದವನು ಅಪ್ರಿಯವಾದುದನ್ನು, ಕಠೋರತೆಯನ್ನು, ಪರದ್ರೋಹವನ್ನು, ಪರಸ್ತ್ರೀಯನ್ನು, ಅಧರ್ಮವನ್ನು ಮತ್ತು ಸುಳ್ಳನ್ನು ದೂರದಿಂದಲೇ ತಡೆಯಬೇಕು.
12149076a ಸತ್ಯಂ ಧರ್ಮಂ ಶುಭಂ ನ್ಯಾಯ್ಯಂ ಪ್ರಾಣಿನಾಂ ಮಹತೀಂ ದಯಾಮ್|
12149076c ಅಜಿಹ್ಮತ್ವಮಶಾಠ್ಯಂ ಚ ಯತ್ನತಃ ಪರಿಮಾರ್ಗತ||
ಸತ್ಯ, ಧರ್ಮ, ಶುಭ, ನ್ಯಾಯ, ಪ್ರಾಣಿಗಳ ಮೇಲೆ ಅತಿ ದೊಡ್ಡ ದಯೆ, ಕುಟಿಲತೆಯಿಲ್ಲದಿರುವುದು, ಶಠತ್ವದ ತ್ಯಾಗ ಇವುಗಳನ್ನು ಪ್ರಯತ್ನಪೂರ್ವಕವಾಗಿ ಅನುಸರಿಸಬೇಕು.
12149077a ಮಾತರಂ ಪಿತರಂ ಚೈವ ಬಾಂಧವಾನ್ಸುಹೃದಸ್ತಥಾ|
12149077c ಜೀವತೋ ಯೇ ನ ಪಶ್ಯಂತಿ ತೇಷಾಂ ಧರ್ಮವಿಪರ್ಯಯಃ||
ತಾಯಿ-ತಂದೆಯರು, ಬಾಂಧವರು ಮತ್ತು ಸುಹೃದರು ಜೀವಿಸಿರುವಾಗ ಆವರನ್ನು ಚೆನ್ನಾಗಿ ನೋಡಿಕೊಳ್ಳದೇ ಇರುವವರಿಗೆ ಧರ್ಮಹಾನಿಯುಂಟಾಗುತ್ತದೆ.
12149078a ಯೋ ನ ಪಶ್ಯತಿ ಚಕ್ಷುರ್ಭ್ಯಾಂ ನೇಂಗತೇ ಚ ಕಥಂ ಚನ|
12149078c ತಸ್ಯ ನಿಷ್ಠಾವಸಾನಾಂತೇ ರುದಂತಃ ಕಿಂ ಕರಿಷ್ಯಥ||
ಕಣ್ಣುಗಳಿಂದ ನೋಡದ ಮತ್ತು ಅಂಗಾಂಗಗಳನ್ನೂ ಹಂದಾಡಿಸದೇ ಇರುವವನ ಜೀವನವು ಅಂತ್ಯವಾಗಲು ನೀವು ರೋದಿಸಿ ಏನು ತಾನೇ ಮಾಡಬಲ್ಲಿರಿ?””
12149079 ಭೀಷ್ಮ ಉವಾಚ |
12149079a ಇತ್ಯುಕ್ತಾಸ್ತಂ ಸುತಂ ತ್ಯಕ್ತ್ವಾ ಭೂಮೌ ಶೋಕಪರಿಪ್ಲುತಾಃ|
12149079c ದಹ್ಯಮಾನಾಃ ಸುತಸ್ನೇಹಾತ್ ಪ್ರಯಯುರ್ಬಾಂಧವಾ ಗೃಹಾನ್||
ಭೀಷ್ಮನು ಹೇಳಿದನು: “ಹದ್ದು ಹೀಗೆ ಹೇಳಲು ಶೋಕದಲ್ಲಿ ಮುಳುಗಿಹೋಗಿದ್ದ ಬಂಧುಗಳು ತಮ್ಮ ಪುತ್ರನನ್ನು ನೆಲದ ಮೇಲೆ ಮಲಗಿಸಿ ಅವನ ಮೇಲಿನ ಸ್ನೇಹದಿಂದ ಸುಡುತ್ತಾ ತಮ್ಮ ಮನೆಗಳ ಕಡೆ ಹೊರಟರು.
12149080 ಜಂಬುಕ ಉವಾಚ |
12149080a ದಾರುಣೋ ಮರ್ತ್ಯಲೋಕೋಽಯಂ ಸರ್ವಪ್ರಾಣಿವಿನಾಶನಃ|
12149080c ಇಷ್ಟಬಂಧುವಿಯೋಗಶ್ಚ ತಥೈವಾಲ್ಪಂ ಚ ಜೀವಿತಮ್||
ನರಿಯು ಹೇಳಿತು: “ಈ ಮರ್ತ್ಯಲೋಕವು ಅತ್ಯಂತ ದಾರುಣವಾದುದು. ಇಲ್ಲಿ ಸಮಸ್ತ ಪ್ರಾಣಿಗಳ ನಾಶವೇ ನಡೆಯುತ್ತದೆ. ಪ್ರಿಯ ಬಂಧುಜನರಿಗೆ ವಿಯೋಗದ ಕಷ್ಟವೂ ಪ್ರಾಪ್ತವಾಗುತ್ತದೆ. ಇಲ್ಲಿಯ ಜೀವನವು ಅತಿ ಅಲ್ಪವಾದುದು.
12149081a ಬಹ್ವಲೀಕಮಸತ್ಯಂ ಚ ಪ್ರತಿವಾದಾಪ್ರಿಯಂವದಮ್|
12149081c ಇಮಂ ಪ್ರೇಕ್ಷ್ಯ ಪುನರ್ಭಾವಂ ದುಃಖಶೋಕಾಭಿವರ್ಧನಮ್||
12149082a ನ ಮೇ ಮಾನುಷಲೋಕೋಽಯಂ ಮುಹೂರ್ತಮಪಿ ರೋಚತೇ|
ಈ ಲೋಕದಲ್ಲಿ ಎಲ್ಲವೂ ಅಸತ್ಯ ಮತ್ತು ಅತ್ಯಂತ ಕಹಿಯಾದುದು. -ವಿರುದ್ಧವಾಗಿ ಮಾತನಾಡುವವರು ಬಹಳಷ್ಟು ಇದ್ದಾರೆ. ಆದರೆ ಪ್ರಿಯವಾಗಿ ಮಾತನಾಡುವವರು ಬಹಳ ವಿರಳ. ಇಲ್ಲಿಯ ಭಾವವು ಶೋಕ ಮತ್ತು ದುಃಖಗಳನ್ನು ಹೆಚ್ಚಿಸುವಂತಹುದು. ಇದನ್ನು ನೋಡಿ ನನಗೆ ಈ ಮನುಷ್ಯಲೋಕವು ಒಂದು ಮುಹೂರ್ತಕಾಲವೂ ಇಷ್ಟವಾಗುವುದಿಲ್ಲ.
12149082c ಅಹೋ ಧಿಗ್ಗೃಧ್ರವಾಕ್ಯೇನ ಸಂನಿವರ್ತಥ ಮಾನುಷಾಃ||
12149083a ಪ್ರದೀಪ್ತಾಃ ಪುತ್ರಶೋಕೇನ ಯಥೈವಾಬುದ್ಧಯಸ್ತಥಾ|
12149083c ಕಥಂ ಗಚ್ಚಥ ಸಸ್ನೇಹಾಃ ಸುತಸ್ನೇಹಂ ವಿಸೃಜ್ಯ ಚ|
12149083E ಶ್ರುತ್ವಾ ಗೃಧ್ರಸ್ಯ ವಚನಂ ಪಾಪಸ್ಯೇಹಾಕೃತಾತ್ಮನಃ||
ಅಯ್ಯೋ! ಮನುಷ್ಯರಿಗೆ ಧಿಕ್ಕಾರ! ಪಾಪಿಯೂ, ಅಕೃತಾತ್ಮನೂ ಆದ ಈ ಹದ್ದಿನ ಮಾತನ್ನು ಕೇಳಿ ಪುತ್ರಶೋಕದಿಂದ ಪೀಡಿತರಾದ ನೀವು ಬುದ್ಧಿಯಿಲ್ಲದವರಂತೆ ಹೊರಟುಹೋಗುತ್ತಿದ್ದೀರಿ! ಸುತಸ್ನೇಹವನ್ನು ಬಿಟ್ಟು ಸ್ನೇಹವುಳ್ಳವರಾದ ನೀವು ಎಲ್ಲಿಗೆ ಹೋಗುತ್ತಿದ್ದೀರಿ?
12149084a ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್|
12149084c ಸುಖದುಃಖಾನ್ವಿತೇ ಲೋಕೇ ನೇಹಾಸ್ತ್ಯೇಕಮನಂತಕಮ್||
ಸುಖದ ನಂತರ ದುಃಖವೂ ದುಃಖದ ನಂತರ ಸುಖವೂ ಬರುತ್ತಿರುತ್ತದೆ. ಸುಖ ಮತ್ತು ದುಃಖಗಳು ನಿರಂತರವಾಗಿ ನಡೆಯುತ್ತಿರುವ ಈ ಲೋಕದಲ್ಲಿ ಸುಖ ಅಥವಾ ದುಃಖವು ಒಂದೇ ಇರುವುದಿಲ್ಲ.
12149085a ಇಮಂ ಕ್ಷಿತಿತಲೇ ನ್ಯಸ್ಯ ಬಾಲಂ ರೂಪಸಮನ್ವಿತಮ್|
12149085c ಕುಲಶೋಕಾಕರಂ[18] ಮೂಢಾಃ ಪುತ್ರಂ ತ್ಯಕ್ತ್ವಾ ಕ್ವ ಯಾಸ್ಯಥ||
12149086a ರೂಪಯೌವನಸಂಪನ್ನಂ ದ್ಯೋತಮಾನಮಿವ ಶ್ರಿಯಾ|
ಈ ರೂಪಸಮನ್ವಿತ ಬಾಲಕನು ನಿಮ್ಮ ಕುಲದ ಶೋಭೆಯನ್ನು ಹೆಚ್ಚಿಸುವವನು. ರೂಪಯೌವನ ಸಂಪನ್ನನು. ಅಗ್ನಿಯ ಕಾಂತಿಯಿಂದ ಹೊಳೆಯುತ್ತಿರುವನು. ಮೂಢರೇ! ಈ ಬಾಲಕನನ್ನು ನೆಲದ ಮೇಲೆ ಇರಿಸಿ ನೀವು ಎಲ್ಲಿಗೆ ಹೋಗುತ್ತಿದ್ದೀರಿ?
12149086c ಜೀವಂತಮೇನಂ ಪಶ್ಯಾಮಿ ಮನಸಾ ನಾತ್ರ ಸಂಶಯಃ||
12149087a ವಿನಾಶಶ್ಚಾಪ್ಯನರ್ಹೋಽಸ್ಯ ಸುಖಂ ಪ್ರಾಪ್ಸ್ಯಥ ಮಾನುಷಾಃ|
ಮನುಷ್ಯರೇ! ನಾನು ನನ್ನ ಮನಸ್ಸಿನಲ್ಲಿ ಇವನು ಜೀವಂತನಾಗಿರುವನೆಂದೇ ಕಾಣುತ್ತಿದ್ದೇನೆ. ಇದರಲ್ಲಿ ಸಂಶಯವಿಲ್ಲ. ಇವನ ನಾಶವಾಗಿಲ್ಲ. ನಿಮಗೆ ಅವಶ್ಯವಾಗಿಯೂ ಸುಖವುಂಟಾಗುತ್ತದೆ.
12149087c ಪುತ್ರಶೋಕಾಗ್ನಿದಗ್ಧಾನಾಂ ಮೃತಮಪ್ಯದ್ಯ ವಃ ಕ್ಷಮಮ್||
12149088a ದುಃಖಸಂಭಾವನಾಂ[19] ಕೃತ್ವಾ ಧಾರಯಿತ್ವಾ ಸ್ವಯಂ ಸುಖಮ್|
12149088c ತ್ಯಕ್ತ್ವಾ ಗಮಿಷ್ಯಥ ಕ್ವಾದ್ಯ ಸಮುತ್ಸೃಜ್ಯಾಲ್ಪಬುದ್ಧಿವತ್||
ಪುತ್ರಶೋಕಾಗ್ನಿಯಲ್ಲಿ ಬೆಂದು ಸ್ವಯಂ ನೀವೂ ಮೃತರಾದವರಂತೆ ಆಗಿಬಿಟ್ಟಿದ್ದೀರಿ. ಆದುದರಿಂದ ಈ ರೀತಿ ನೀವು ಹಿಂದಿರುಗಿ ಹೋಗುವುದು ಉಚಿತವಲ್ಲ. ಇವನಿಗೆ ದುಃಖವನ್ನಿತ್ತು ಸ್ವಯಂ ನೀವು ಸುಖವನ್ನು ಪಡೆದುಕೊಂಡು ಇವನನ್ನು ಇಂದು ಇಲ್ಲಿಯೇ ಬಿಟ್ಟು ಅಲ್ಪಬುದ್ಧಿಯವರಂತೆ ಎಲ್ಲಿಗೆ ಹೋಗುತ್ತಿದ್ದೀರಿ?””
12149089 ಭೀಷ್ಮ ಉವಾಚ|
12149089a ತಥಾ ಧರ್ಮವಿರೋಧೇನ ಪ್ರಿಯಮಿಥ್ಯಾಭಿಧ್ಯಾಯಿನಾ|
12149089c ಶ್ಮಶಾನವಾಸಿನಾ ನಿತ್ಯಂ ರಾತ್ರಿಂ ಮೃಗಯತಾ ತದಾ||
12149090a ತತೋ ಮಧ್ಯಸ್ಥತಾಂ ನೀತಾ ವಚನೈರಮೃತೋಪಮೈಃ|
12149090c ಜಂಬುಕೇನ ಸ್ವಕಾರ್ಯಾರ್ಥಂ ಬಾಂಧವಾಸ್ತಸ್ಯ ಧಿಷ್ಠಿತಾಃ||
ಭೀಷ್ಮನು ಹೇಳಿದನು: “ಆ ನರಿಯು ಸದಾ ಶ್ಮಶಾನ ಭೂಮಿಯಲ್ಲಿಯೇ ವಾಸಿಸುತ್ತಿತ್ತು ಮತ್ತು ತನ್ನ ಕಾರ್ಯಸಾಧನೆಗೆ ರಾತ್ರಿಯಾಗುವುದನ್ನೇ ಕಾಯುತ್ತಿತ್ತು. ಆದುದರಿಂದ ಅದು ಧರ್ಮವಿರೋಧೀ, ಸುಳ್ಳು ಮತ್ತು ಅಮೃತಸಮಾನ ಮಾತನ್ನಾಡಿ ಆ ಬಾಲಕನ ಬಾಂಧವರನ್ನು ಮಧ್ಯದಲ್ಲಿಯೇ ಹಿಡಿದಿಟ್ಟುಕೊಂಡಿತ್ತು. ಅವರು ಹೊರಟು ಹೋಗುತ್ತಲೂ ಇರಲಿಲ್ಲ ಮತ್ತು ಅಲ್ಲಿಯೇ ನಿಲ್ಲುತ್ತಲೂ ಇರಲಿಲ್ಲ. ಅಂತ್ಯದಲ್ಲಿ ಅವರಿಗೆ ಅಲ್ಲಿಯೇ ನಿಲ್ಲಬೇಕಾಯಿತು.
12149091 ಗೃಧ್ರ ಉವಾಚ|
12149091a ಅಯಂ ಪ್ರೇತಸಮಾಕೀರ್ಣೋ ಯಕ್ಷರಾಕ್ಷಸಸೇವಿತಃ|
12149091c ದಾರುಣಃ ಕಾನನೋದ್ದೇಶಃ ಕೌಶಿಕೈರಭಿನಾದಿತಃ||
ಹದ್ದು ಹೇಳಿತು: “ಈ ಪ್ರದೇಶವು ಪ್ರೇತಗಳಿಂದ ತುಂಬಿಕೊಂಡಿದೆ. ಯಕ್ಷ ರಾಕ್ಷಸರು ಇಲ್ಲಿಗೆ ಬರುತ್ತಿರುತ್ತಾರೆ. ಹಲವಾರು ಗೂಬೆಗಳು ಕೂಗಿ ಕರೆಯುತ್ತಿವೆ. ಆದುದರಿಂದ ಈ ಕಾನನ ಪ್ರದೇಶವು ಅತ್ಯಂತ ದಾರುಣವಾಗಿದೆ.
12149092a ಭೀಮಃ ಸುಘೋರಶ್ಚ ತಥಾ ನೀಲಮೇಘಸಮಪ್ರಭಃ|
12149092c ಅಸ್ಮಿನ್ ಶವಂ ಪರಿತ್ಯಜ್ಯ ಪ್ರೇತಕಾರ್ಯಾಣ್ಯುಪಾಸತ||
ಭಯಂಕರವಾದ ಘೋರವಾದ ಮತ್ತು ನೀಲಮೇಘದ ಸಮನಾದ ಕತ್ತಲೆಯು ಕವಿಯುತ್ತಿದೆ. ಈ ಶವವನ್ನು ಇಲ್ಲಿಯೇ ಬಿಟ್ಟು ನೀವು ಪ್ರೇತಕಾರ್ಯಗಳಲ್ಲಿ ತೊಡಗಿರಿ.
12149093a ಭಾನುರ್ಯಾವನ್ನ ಯಾತ್ಯಸ್ತಂ ಯಾವಚ್ಚ ವಿಮಲಾ ದಿಶಃ|
12149093c ತಾವದೇನಂ ಪರಿತ್ಯಜ್ಯ ಪ್ರೇತಕಾರ್ಯಾಣ್ಯುಪಾಸತ||
ಸೂರ್ಯನು ಮುಳುಗುವುದರೊಳಗೆ ಮತ್ತು ದಿಕ್ಕುಗಳು ನಿರ್ಮಲವಾಗಿರುವಾಗಿರುವಾಗಲೇ ಇವನನ್ನು ಇಲ್ಲಿಯೇ ಬಿಟ್ಟು ಪ್ರೇತಕಾರ್ಯಗಳಲ್ಲಿ ತೊಡಗಿರಿ.
12149094a ನದಂತಿ ಪರುಷಂ ಶ್ಯೇನಾಃ ಶಿವಾಃ ಕ್ರೋಶಂತಿ ದಾರುಣಾಃ|
12149094c ಮೃಗೇಂದ್ರಾಃ ಪ್ರತಿನಂದಂತಿ ರವಿರಸ್ತಂ ಚ ಗಚ್ಚತಿ||
ಇಲ್ಲಿ ತೋಳಗಳು ಕ್ರೂರವಾಗಿ ಕೂಗುತ್ತಿವೆ. ನರಿಗಳು ದಾರುಣವಾಗಿ ಕೂಗುತ್ತಿವೆ. ಮೃಗೇಂದ್ರ ಸಿಂಹಗಳು ಗರ್ಜಿಸುತ್ತಿವೆ. ರವಿಯು ಅಸ್ತಂಗತನಾಗುತ್ತಿದ್ದಾನೆ.
12149095a ಚಿತಾಧೂಮೇನ ನೀಲೇನ ಸಂರಜ್ಯಂತೇ ಚ ಪಾದಪಾಃ|
12149095c ಶ್ಮಶಾನೇ ಚ ನಿರಾಹಾರಾಃ ಪ್ರತಿನಂದಂತಿ ದೇಹಿನಃ||
ಚಿತೆಯ ಕಪ್ಪು ಹೊಗೆಗಳಿಂದ ಇಲ್ಲಿರುವ ವೃಕ್ಷಗಳೂ ಅದೇ ಬಣ್ಣವನ್ನು ಹೊಂದಿವೆ. ಶ್ಮಶಾನದಲ್ಲಿರುವ ನಿರಾಹಾರ ಪ್ರಾಣಿಗಳು ಗರ್ಜಿಸುತ್ತಿವೆ.
12149096a ಸರ್ವೇ ವಿಕ್ರಾಂತವೀರ್ಯಾಶ್ಚ[20] ಅಸ್ಮಿನ್ ದೇಶೇ ಸುದಾರುಣಾಃ|
12149096c ಯುಷ್ಮಾನ್ ಪ್ರಧರ್ಷಯಿಷ್ಯಂತಿ ವಿಕೃತಾ ಮಾಂಸಭೋಜನಾಃ||
ಈ ದಾರುಣ ಪ್ರದೇಶದಲ್ಲಿರುವ ಎಲ್ಲ ಪ್ರಾಣಿಗಳೂ ವಿಕ್ರಾಂತವೀರ್ಯವುಳ್ಳವುಗಳಾಗಿವೆ. ಮಾಂಸಾಹಾರಿಗಳಾದ ಈ ವಿಕೃತ ಪ್ರಾಣಿಗಳು ನಿಮ್ಮನ್ನು ಬೆದರಿಸುತ್ತಿವೆ.
12149097a ದೂರಾಚ್ಚಾಯಂ[21] ವನೋದ್ದೇಶೋ ಭಯಮತ್ರ ಭವಿಷ್ಯತಿ|
12149097c ತ್ಯಜ್ಯತಾಂ ಕಾಷ್ಠಭೂತೋಽಯಂ ಮೃಷ್ಯತಾಂ ಜಾಂಬುಕಂ ವಚಃ||
ಈ ವನಪ್ರದೇಶವು ಕ್ರೂರಮೃಗಗಳಿಂದ ತುಂಬಿಕೊಂಡಿದೆ. ಇನ್ನು ಇಲ್ಲಿ ನಿಮಗೆ ಅತ್ಯಂತ ದೊಡ್ಡ ಭಯವನ್ನು ಎದುರಿಸಬೇಕಾಗುತ್ತದೆ. ಈ ಬಾಲಕನಾದರೋ ಈಗ ಕಟ್ಟಿಗೆಯಂತಾಗಿಬಿಟ್ಟಿದ್ದಾನೆ. ಇವನನ್ನು ಬಿಟ್ಟುಬಿಡಿ ಮತ್ತು ನರಿಯ ಮಾತಿನ ಲೋಭಕ್ಕೆ ಸಿಲುಕಿಕೊಳ್ಳಬೇಡಿ.
12149098a ಯದಿ ಜಂಬುಕವಾಕ್ಯಾನಿ ನಿಷ್ಫಲಾನ್ಯನೃತಾನಿ ಚ|
12149098c ಶ್ರೋಷ್ಯಥ ಭ್ರಷ್ಟವಿಜ್ಞಾನಾಸ್ತತಃ ಸರ್ವೇ ವಿನಂಕ್ಷ್ಯಥ||
ಒಂದು ವೇಳೆ ನೀವು ವಿವೇಕಭ್ರಷ್ಟರಾಗಿ ನರಿಯ ಸುಳ್ಳು ಮತ್ತು ನಿಷ್ಫಲ ಮಾತುಗಳನ್ನು ಕೇಳುತ್ತಾ ಇದ್ದರೆ ಎಲ್ಲರೂ ನಾಶವಾಗಿ ಹೋಗುತ್ತೀರಿ.”
12149099 ಜಂಬುಕ ಉವಾಚ|
12149099a ಸ್ಥೀಯತಾಂ ನೇಹ ಭೇತವ್ಯಂ ಯಾವತ್ತಪತಿ ಭಾಸ್ಕರಃ|
12149099c ತಾವದಸ್ಮಿನ್ಸುತಸ್ನೇಹಾದನಿರ್ವೇದೇನ ವರ್ತತ||
12149100a ಸ್ವೈರಂ ರುದತ ವಿಸ್ರಬ್ಧಾಃ ಸ್ವೈರಂ ಸ್ನೇಹೇನ ಪಶ್ಯತ|
[22]12149100c ಸ್ಥೀಯತಾಂ ಯಾವದಾದಿತ್ಯಃ ಕಿಂ ವಃ ಕ್ರವ್ಯಾದಭಾಷಿತೈಃ||
ನರಿಯು ಹೇಳಿತು: “ನಿಲ್ಲಿ! ಹೆದರಬೇಡಿ! ಎಲ್ಲಿಯವರೆಗೆ ಭಾಸ್ಕರನು ಬೆಳಕನ್ನು ನೀಡುತ್ತಾನೋ ಅಲ್ಲಿಯವರೆಗೆ ನೀವು ಸ್ವಲ್ಪವೂ ಹೆದರಬೇಕಾಗಿಲ್ಲ. ಅಲ್ಲಿಯವರೆಗೆ ಈ ಬಾಲಕನ ಮೇಲಿರುವ ನಿಮ್ಮ ಸ್ನೇಹವನ್ನು ತೋರಿಸಿ ಮಮತಾಪೂರ್ಣರಾಗಿ ನಡೆದುಕೊಳ್ಳಿ. ನಿರ್ಭಯರಾಗಿ ದೀರ್ಘಕಾಲದವರೆಗೆ ಸ್ನೇಹದೃಷ್ಟಿಯಿಂದ ನೋಡಿರಿ ಮತ್ತು ಬೇಕಾದಷ್ಟು ರೋದಿಸಿರಿ. ಆದಿತ್ಯನು ಕಾಣುವವರೆಗೆ ಇಲ್ಲಿಯೇ ನಿಲ್ಲಿ. ಈ ಮಾಂಸಾಹಾರೀ ಹದ್ದಿನ ಮಾತಿನಿಂದೇನಾಗಬೇಕಾಗಿದೆ?
12149101a ಯದಿ ಗೃಧ್ರಸ್ಯ ವಾಕ್ಯಾನಿ ತೀವ್ರಾಣಿ ರಭಸಾನಿ ಚ|
12149101c ಗೃಹ್ಣೀತ ಮೋಹಿತಾತ್ಮಾನಃ ಸುತೋ ವೋ ನ ಭವಿಷ್ಯತಿ||
ಒಂದು ವೇಳೆ ನೀವು ಈ ಹದ್ದಿನ ತೀವ್ರವೂ ರಭಸವೂ ಆದ ಮಾತುಗಳನ್ನು ಸ್ವೀಕರಿಸಿ ಮೋಹಿತಾತ್ಮರಾದರೆ ನಿಮ್ಮ ಈ ಸುತನಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ.””
12149102 ಭೀಷ್ಮ ಉವಾಚ|
12149102a ಗೃಧ್ರೋಽನಸ್ತಮಿತೇ ತ್ವಾಹ ಗತೇಽಸ್ತಮಿತಿ ಜಂಬುಕಃ|
12149102c ಮೃತಸ್ಯ ತಂ ಪರಿಜನಮೂಚತುಸ್ತೌ ಕ್ಷುಧಾನ್ವಿತೌ||
ಭೀಷ್ಮನು ಹೇಳಿದನು: “ಆ ಹದ್ದು ಮತ್ತು ನರಿಗಳು ಹಸಿದಿದ್ದವು ಮತ್ತು ತಮ್ಮ ಉದ್ದೇಶ ಸಾಧನೆಗಾಗಿ ಮೃತಕನ ಬಂಧುಗಳೊಂದಿಗೆ ಹೀಗೆ ಮಾತನಾಡುತ್ತಿದ್ದವು. ಹದ್ದು ಸೂರ್ಯಾಸ್ತವಾಗಿ ಹೋಯಿತು ಎಂದು ಹೇಳುತ್ತಿತ್ತು ಮತ್ತು ನರಿಯು ಇನ್ನೂ ಸೂರ್ಯಾಸ್ತವಾಗಿಲ್ಲ ಎಂದು ಹೇಳುತ್ತಿತ್ತು.
12149103a ಸ್ವಕಾರ್ಯದಕ್ಷಿಣೌ ರಾಜನ್ ಗೃಧ್ರೋ ಜಂಬುಕ ಏವ ಚ|
12149103c ಕ್ಷುತ್ಪಿಪಾಸಾಪರಿಶ್ರಾಂತೌ ಶಾಸ್ತ್ರಮಾಲಂಬ್ಯ ಜಲ್ಪತಃ||
ರಾಜನ್! ಹದ್ದು ಮತ್ತು ನರಿ ತಮ್ಮ ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವುದರಲ್ಲಿ ಕಂಕಣಬದ್ಧರಾಗಿದ್ದರು. ಅವರಿಬ್ಬರನ್ನೂ ಹಸಿವು ಬಾಯಾರಿಕೆಗಳು ಕಾಡುತ್ತಿದ್ದವು ಮತ್ತು ಇಬ್ಬರೂ ಶಾಸ್ತ್ರಗಳನ್ನು ಆಧರಿಸಿ ಮಾತನಾಡುತ್ತಿದ್ದವು.
12149104a ತಯೋರ್ವಿಜ್ಞಾನವಿದುಷೋರ್ದ್ವಯೋರ್ಜಂಬುಕಪತ್ರಿಣೋಃ[23]|
12149104c ವಾಕ್ಯೈರಮೃತಕಲ್ಪೈರ್ಹಿ ಪ್ರಾತಿಷ್ಠಂತ ವ್ರಜಂತಿ ಚ||
ಅವುಗಳಲ್ಲಿ ಒಂದು ನರಿಯಾಗಿತ್ತು ಮತ್ತು ಇನ್ನೊಂದು ಪಕ್ಷಿಯಾಗಿತ್ತು. ಅವೆರಡೂ ಜ್ಞಾನದ ಮಾತುಗಳನ್ನು ತಿಳಿದಿದ್ದವು. ಆ ಇಬ್ಬರ ಅಮೃತರೂಪೀ ಮಾತುಗಳಿಂದ ಪ್ರಭಾವಿತರಾಗಿ ಆ ಮೃತಕನ ಮನುಷ್ಯ ಬಾಂಧವರು ಒಮ್ಮೆ ಅಲ್ಲಿಯೇ ನಿಲ್ಲುತ್ತಿದ್ದರು ಮತ್ತು ಕೆಲವೊಮ್ಮೆ ಹಿಂದಿರುಗಿ ಹೋಗುತ್ತಿದ್ದರು.
12149105a ಶೋಕದೈನ್ಯಸಮಾವಿಷ್ಟಾ ರುದಂತಸ್ತಸ್ಥಿರೇ ತದಾ|
12149105c ಸ್ವಕಾರ್ಯಕುಶಲಾಭ್ಯಾಂ ತೇ ಸಂಭ್ರಾಮ್ಯಂತೇ ಹ ನೈಪುಣಾತ್||
ಶೋಕ ಮತ್ತು ದೈನ್ಯತೆಯಿಂದ ಆವಿಷ್ಟರಾಗಿ ಅವರು ರೋದಿಸುತ್ತಾ ಅಲ್ಲಿಯೇ ನಿಂತುಕೊಂಡರು. ತಮ್ಮ ತಮ್ಮ ಕಾರ್ಯಸಿದ್ಧಿಯನ್ನು ಮಾಡಿಕೊಳ್ಳುವುದರಲ್ಲಿ ಕುಶಲರಾಗಿದ್ದ ಹದ್ದು ಮತ್ತು ನರಿಗಳು ನಿಪುಣತೆಯಿಂದ ಅವರನ್ನು ಚಕ್ರದಂತೆ ತಿರುಗಿಸುತ್ತಿದ್ದರು.
12149106a ತಥಾ ತಯೋರ್ವಿವದತೋರ್ವಿಜ್ಞಾನವಿದುಷೋರ್ದ್ವಯೋಃ|
12149106c ಬಾಂಧವಾನಾಂ ಸ್ಥಿತಾನಾಂ ಚ ಉಪಾತಿಷ್ಠತ ಶಂಕರಃ||
12149107a ತತಸ್ತಾನಾಹ ಮನುಜಾನ್ವರದೋಽಸ್ಮೀತಿ ಶೂಲಭೃತ್|
ಜ್ಞಾನ-ವಿಜ್ಞಾನದ ವಿಷಯಗಳನ್ನು ತಿಳಿದಿದ್ದ ಆ ಎರಡೂ ಜಂತುಗಳ ನಡುವೆ ಈ ರೀತಿ ವಾದ-ವಿವಾದವು ನಡೆಯುತ್ತಿದ್ದಾಗ ಮೃತಕನ ಬಾಂಧವರು ಅಲ್ಲಿಯೇ ನಿಂತಿದ್ದರು. ಇಷ್ಟರಲ್ಲಿಯೇ ದೇವಿಯಿಂದ ಪ್ರೇರಿತನಾದ ದೇವ ಶಂಕರನು ಅವರ ಎದಿರು ಪ್ರಕಟನಾದನು. ಅವನ ಕಣ್ಣುಗಳು ಕರುಣಾರಸದಿಂದ ಒದ್ದೆಯಾಗಿತ್ತು. ವರದಾಯಕ ಶಂಕರನು ಆ ಮನುಷ್ಯರಿಗೆ “ನಿಮಗೆ ವರವನ್ನು ನೀಡುತ್ತೇನೆ” ಎಂದು ಹೇಳಿದನು.
12149107c ತೇ ಪ್ರತ್ಯೂಚುರಿದಂ ವಾಕ್ಯಂ ದುಃಖಿತಾಃ ಪ್ರಣತಾಃ ಸ್ಥಿತಾಃ||
12149108a ಏಕಪುತ್ರವಿಹೀನಾನಾಂ ಸರ್ವೇಷಾಂ ಜೀವಿತಾರ್ಥಿನಾಮ್|
12149108c ಪುತ್ರಸ್ಯ ನೋ ಜೀವದಾನಾಜ್ಜೀವಿತಂ ದಾತುಮರ್ಹಸಿ||
ಆಗ ಆ ದುಃಖಿತ ಮನುಷ್ಯರು ಭಗವಂತನಿಗೆ ಪ್ರಣಮಿಸಿ ಎದ್ದು ನಿಂತು ಹೀಗೆ ಹೇಳಿದರು: “ಪ್ರಭೋ! ಈ ಒಬ್ಬನೇ ಮಗನಿಂದ ವಿಹೀನರಾಗಿ ನಾವು ಮೃತರಾದಂತೆಯೇ ಆಗಿಬಿಟ್ಟಿದ್ದೇವೆ. ನೀನು ನಮ್ಮ ಈ ಪುತ್ರನನ್ನು ಜೀವಿತಗೊಳಿಸಿ ಜೀವನಾರ್ಥಿಗಳಾದ ನಮ್ಮೆಲ್ಲರಿಗೂ ಜೀವನದಾನದ ಕೃಪೆ ಮಾಡು.”
12149109a ಏವಮುಕ್ತಃ ಸ ಭಗವಾನ್ವಾರಿಪೂರ್ಣೇನ ಪಾಣಿನಾ[24]|
12149109c ಜೀವಂ ತಸ್ಮೈ ಕುಮಾರಾಯ ಪ್ರಾದಾದ್ವರ್ಷಶತಾಯ ವೈ||
ನೀರು ತುಂಬಿದ ಕಣ್ಣುಗಳುಳ್ಳ ಅವರು ಭಗವಂತನಿಗೆ ಹೀಗೆ ಹೇಳಲು ಅವನು ಆ ಬಾಲಕನನ್ನು ಜೀವಿತಗೊಳಿಸಿದನು ಮತ್ತು ಅವನಿಗೆ ನೂರು ವರ್ಷಗಳ ಆಯುಷ್ಯವನ್ನು ದಯಪಾಲಿಸಿದನು.
12149110a ತಥಾ ಗೋಮಾಯುಗೃಧ್ರಾಭ್ಯಾಮದದತ್ ಕ್ಷುದ್ವಿನಾಶನಮ್|
12149110c ವರಂ ಪಿನಾಕೀ ಭಗವಾನ್ಸರ್ವಭೂತಹಿತೇ ರತಃ||
ಇಷ್ಟೇ ಅಲ್ಲದೇ ಸರ್ವಭೂತಹಿತಕಾರೀ ಪಿನಾಕಪಾಣೀ ಭಗವಾನ್ ಶಿವನು ಹದ್ದು ಮತ್ತು ನರಿಗಳಿಗೆ ಅವರ ಹಸಿವೆಯು ನೀಗುವಂತೆ ವರವನ್ನಿತ್ತನು.
12149111a ತತಃ ಪ್ರಣಮ್ಯ ತಂ ದೇವಂ ಶ್ರೇಯೋ[25]ಹರ್ಷಸಮನ್ವಿತಾಃ|
12149111c ಕೃತಕೃತ್ಯಾಃ ಸುಖಂ ಹೃಷ್ಟಾಃ ಪ್ರಾತಿಷ್ಠಂತ ತದಾ ವಿಭೋ||
ವಿಭೋ! ಆಗ ಅವರೆಲ್ಲರೂ ಶ್ರೇಯ-ಹರ್ಷಗಳಿಂದ ಉಲ್ಲಸಿತರಾಗಿ ಕೃತಕೃತ್ಯರಾಗಿ ಮಹಾದೇವನನ್ನು ಪ್ರಣಮಿಸಿದರು ಮತ್ತು ಸುಖ ಹಾಗೂ ಪ್ರಸನ್ನತೆಗಳೊಂದಿಗೆ ಅಲ್ಲಿಂದ ಹೊರಟರು.
12149112a ಅನಿರ್ವೇದೇನ ದೀರ್ಘೇಣ ನಿಶ್ಚಯೇನ ಧ್ರುವೇಣ ಚ|
12149112c ದೇವದೇವಪ್ರಸಾದಾಚ್ಚ ಕ್ಷಿಪ್ರಂ ಫಲಮವಾಪ್ಯತೇ||
ವೇದನೆಗಳಿಗೊಳಗಾಗದೇ ದೃಢ ಮತ್ತು ಪ್ರಬಲ ನಿಶ್ಚಯದಿಂದ ಪ್ರಯತ್ನಮಾಡಿದರೆ ದೇವಾಧಿದೇವನ ಪ್ರಸಾದದಿಂದ ಬೇಗನೇ ಫಲವನ್ನು ಪಡೆದುಕೊಳ್ಳುತ್ತಾರೆ.
12149113a ಪಶ್ಯ ದೇವಸ್ಯ ಸಂಯೋಗಂ ಬಾಂಧವಾನಾಂ ಚ ನಿಶ್ಚಯಮ್|
12149113c ಕೃಪಣಾನಾಂ ಹಿ ರುದತಾಂ ಕೃತಮಶ್ರುಪ್ರಮಾರ್ಜನಮ್||
12149114a ಪಶ್ಯ ಚಾಲ್ಪೇನ ಕಾಲೇನ ನಿಶ್ಚಯಾನ್ವೇಷಣೇನ ಚ|
ದೈವಸಂಯೋಗ ಮತ್ತು ಆ ಬಂಧು-ಬಾಂಧವರ ದೃಢ ನಿಶ್ಚಯವನ್ನು ನೋಡು! ಇದರಿಂದಾಗಿ ಸ್ವಲ್ಪವೇ ಸಮಯದಲ್ಲಿ ದೀನತಾಪೂರ್ವಕವಾಗಿ ರೋದಿಸುತ್ತಿದ್ದ ಆ ಮನುಷ್ಯರ ಕಣ್ಣೀರನ್ನು ಒರೆಸಲಾಯಿತು. ಇದು ಅವರು ನಿಶ್ಚಯಪೂರ್ವಕವಾಗಿ ಮಾಡಿದ ಅನುಸಂಧಾನ ಮತ್ತು ಪ್ರಯತ್ನದ ಫಲವು.
12149114c ಪ್ರಸಾದಂ ಶಂಕರಾತ್ಪ್ರಾಪ್ಯ ದುಃಖಿತಾಃ ಸುಖಮಾಪ್ನುವನ್||
12149115a ತೇ ವಿಸ್ಮಿತಾಃ ಪ್ರಹೃಷ್ಟಾಶ್ಚ ಪುತ್ರಸಂಜೀವನಾತ್ಪುನಃ|
ಶಂಕರನ ಕೃಪೆಯಿಂದಾಗಿ ಆ ದುಃಖಿತ ಜನರು ಸುಖವನ್ನು ಪಡೆದುಕೊಂಡರು. ಪುತ್ರನು ಪುನರ್ಜೀವಿತನಾದ ಆ ಆಶ್ಚರ್ಯವನ್ನು ಕಂಡು ಪ್ರಹೃಷ್ಟರೂ ವಿಸ್ಮಿತರೂ ಆದರು.
12149115c ಬಭೂವುರ್ಭರತಶ್ರೇಷ್ಠ ಪ್ರಸಾದಾಚ್ಚಂಕರಸ್ಯ ವೈ||
12149116a ತತಸ್ತೇ ತ್ವರಿತಾ ರಾಜನ್ ಶ್ರುತ್ವಾ ಶೋಕಮಘೋದ್ಭವಮ್|
12149116c ವಿವಿಶುಃ ಪುತ್ರಮಾದಾಯ ನಗರಂ ಹೃಷ್ಟಮಾನಸಾಃ||
ಭರತಶ್ರೇಷ್ಠ! ರಾಜನ್! ಶಂಕರನ ಪ್ರಸಾದದಿಂದ ಆ ಎಲ್ಲರೂ ಪುತ್ರಶೋಕವನ್ನು ತ್ಯಜಿಸಿ ಪ್ರಸನ್ನಚಿತ್ತರಾಗಿ ಪುತ್ರನನ್ನು ಜೊತೆಯಲ್ಲಿ ಕರೆದುಕೊಂಡು ತಮ್ಮ ನಗರವನ್ನು ಪ್ರವೇಶಿಸಿದರು.
12149116E ಏಷಾ ಬುದ್ಧಿಃ ಸಮಸ್ತಾನಾಂ ಚಾತುರ್ವರ್ಣ್ಯೇ ನಿದರ್ಶಿತಾ
12149117a ಧರ್ಮಾರ್ಥಮೋಕ್ಷಸಂಯುಕ್ತಮಿತಿಹಾಸಮಿಮಂ ಶುಭಮ್|
12149117c ಶ್ರುತ್ವಾ ಮನುಷ್ಯಃ ಸತತಮಿಹ ಪ್ರೇತ್ಯ ಚ ಮೋದತೇ||
ಚಾತುರ್ವರ್ಣ್ಯದವರೆಲ್ಲರಿಗೂ ಇದು ಬುದ್ಧಿ ಪ್ರದರ್ಶಕವಾಗಿದೆ. ಧರ್ಮ, ಅರ್ಥ ಮತ್ತು ಮೋಕ್ಷಯುಕ್ತವಾದ ಈ ಶುಭ ಇತಿಹಾಸವನ್ನು ಸದಾ ಕೇಳುವುದರಿಂದ ಮನುಷ್ಯನು ಇಹ ಮತ್ತು ಪರಲೋಕಗಳಲ್ಲಿ ಆನಂದವನ್ನು ಅನುಭವಿಸುತ್ತಾನೆ.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಗೃಧ್ರಗೋಮಾಯುಸಂವಾದೇ ಕುಮಾರಸಂಜೀವನೇ ಏಕೋನಪಂಚಾಶದಧಿಕಶತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಗೃಧ್ರಗೋಮಾಯುಸಂವಾದೇ ಕುಮಾರಸಂಜೀವನ ಎನ್ನುವ ನೂರಾನಲ್ವತ್ತೊಂಭತ್ತನೇ ಅಧ್ಯಾಯವು.
[1] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಯುಧಿಷ್ಠಿರ ಉವಾಚ| ಕಚ್ಚಿತ್ಪಿತಾಮಹೇನಾಸೀಚ್ಛೃತಂ ವಾ ದೃಷ್ಟಮೇವ ಚ| ಕಚ್ಚಿನ್ಮರ್ತ್ಯೋ ಮೃತೋ ರಾಜನ್ ಪುನರುಜ್ಜೀವಿತೋಽಭವತ್||
[2] ನೈಮಿಷೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[3] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಕಸ್ಯಾಚಿದ್ಬ್ರಾಹ್ಮಣಸ್ಯಾಸೀದ್ದುಃಖಲಬ್ಧಃ ಸುತೋ ಮೃತಃ| ಬಾಲ ಏವ ವಿಶಾಲಾಕ್ಷೋ ಬಾಲಗ್ರಹನಿಪೀಡಿತಃ||
[4] ರುರುದುರ್ಭೃಶದುಃಖಿತಾಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[5] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಶೋಚಂತಸ್ತಸ್ಯ ಪೂರ್ವೋಕ್ತಾನ್ ಭಾಷಿತಾಂಶ್ಚಾಸಕೃತ್ ಪುನಃ| ತಂ ಬಾಲಂ ಭೂತಲೇ ಕ್ಷಿಪ್ಯ ಪ್ರತಿಗಂತುಂ ನ ಶಕ್ನುಯುಃ||
[6] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ವಿನಿಷ್ಚಿತ್ಯಾಥ ಚ ತದಾ ವಿಕೋಶಂತಸ್ತತಸ್ತತಃ| ಮೃತಮಿತ್ಯೇವ ಗಚ್ಛಂತೋ ನಿರಾಶಾಸ್ತಸ್ಯ ದರ್ಶನೇ||
[7] ಧ್ವಾಂಕ್ಷಪಕ್ಷಸವರ್ಣಸ್ತು ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[8] ತೇ ಪಶ್ಯತ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[9] ಕಮಲದ ದಳದಳಗಳಂತಹ ವಿಶಾಲ ಮತ್ತು ಚಂಚಲ ಕಣ್ಣುಗಳಿರುವ
[10] ಬಾಲೋಽಯಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[11] ನ ಚಾಧರ್ಮೇ ಮನಃ ಕೃಥಾಃ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[12] ತಥಾ ಕರ್ಮ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[13] ಜಂಗಮಾನಾಂ ನಗಾನಾಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[14] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕವಿದೆ: ಶೋಕೋ ದ್ವಿಗುಣತಾಂ ಯಾತ್ ದೃಷ್ಟ್ವಾ ಸ್ಮೃತ್ವಾ ಚ ಚೇಷ್ಟಿತಮ್| ಇತ್ಯೇತದ್ವಚನಂ ಶೃತ್ವಾ ಸಂನಿವೃತ್ತಾಸ್ತು ಮಾನುಷಾಃ| ಅಪಶ್ಯತ್ತಂ ತದಾ ಸುಪ್ತಂ ದ್ರುತಮಾಗತ್ಯ ಜಂಬುಕಃ||
[15] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತೇಷಾಂ ರುದಿತಶಬ್ದೇನ ಗೃಧ್ರೋಽಭ್ಯೇತ್ಯ ವಚೋಽಬ್ರವೀತ್|
[16] ಧನವಂತೋ ಮಹಾಧಿಯಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[17] ಸರ್ವೇ ಮೃತ್ಯುವಶಂ ಯಾಂತಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[18] ಕುಲಶೋಭಾಕರಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[19] ಸುಖಸಂಭಾವನಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[20] ವಿಕ್ರಾಂತದೇಹಾಶ್ಚ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[21] ಕ್ರೂರಶ್ಚಾಯಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[22] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ದಾರುಣೇಽಸ್ಮಿನ್ವನೋದ್ದೇಶೇ ಭಯಂ ವೋ ನ ಭವಿಷ್ಯತಿ| ಅಯಂ ಸೌಮ್ಯೋ ವನೋದ್ದೇಶೇ ಪಿತೄಣಾಂ ನಿಧನಾಕರಃ||
[23] ಮೃಗಪತತ್ರಿಣೋಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[24] ಚಕ್ಷುಷಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇಲ್ಲಿ ಇದೇ ಸರಿಯೆಂದು ತೋರುತ್ತದೆ.
[25] ಪ್ರಾಯೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).