Shanti Parva: Chapter 133

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೩೩

ಕಾಪವ್ಯಾನುಶಾಸನ

12133001 ಭೀಷ್ಮ ಉವಾಚ|

12133001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12133001c ಯಥಾ ದಸ್ಯುಃ ಸಮರ್ಯಾದಃ ಪ್ರೇತ್ಯಭಾವೇ ನ ನಶ್ಯತಿ||

ಭೀಷ್ಮನು ಹೇಳಿದನು: “ಮರ್ಯಾದೆಯಿಂದಿದ್ದ ದಸ್ಯುವು ದುರ್ಗತಿಯನ್ನು ಹೊಂದುವುದಿಲ್ಲ ಎನ್ನುವುದರ ಕುರಿತು ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

12133002a ಪ್ರಹರ್ತಾ ಮತಿಮಾನ್ ಶೂರಃ ಶ್ರುತವಾನನೃಶಂಸವಾನ್|

12133002c ರಕ್ಷನ್ನಕ್ಷಯಿಣಂ ಧರ್ಮಂ ಬ್ರಹ್ಮಣ್ಯೋ ಗುರುಪೂಜಕಃ||

12133003a ನಿಷಾದ್ಯಾಂ ಕ್ಷತ್ರಿಯಾಜ್ಜಾತಃ ಕ್ಷತ್ರಧರ್ಮಾನುಪಾಲಕಃ|

12133003c ಕಾಪವ್ಯೋ ನಾಮ ನೈಷಾದಿರ್ದಸ್ಯುತ್ವಾತ್ಸಿದ್ಧಿಮಾಪ್ತವಾನ್||

ಕಾಪವ್ಯ[1] ಎಂಬ ಹೆಸರಿನ ನೈಷಾದಿಯು ದಸ್ಯುವಾಗಿದ್ದರೂ ಸಿದ್ಧಿಯನ್ನು ಹೊಂದಿದನು. ಅವನು ಪ್ರಹಾರಕುಶಲನೂ, ಬುದ್ಧಿವಂತನೂ, ಶೂರನೂ, ಶಾಸ್ತ್ರಜ್ಞನೂ, ಅಕ್ರೂರಿಯೂ ಆಗಿದ್ದನು. ಆಶ್ರಮವಾಸಿಗಳ ಧರ್ಮವನ್ನು ರಕ್ಷಿಸುತ್ತಿದ್ದನು. ಬ್ರಹ್ಮಣ್ಯನೂ ಗುರುಪೂಜಕನೂ ಆಗಿದ್ದನು. ಅವನು ಕ್ಷತ್ರಾಣಿಯಲ್ಲಿ ನಿಷಾದನಿಂದ ಹುಟ್ಟಿದ್ದನು. ಕ್ಷತ್ರಧರ್ಮವನ್ನು ಪಾಲಿಸುತ್ತಿದ್ದನು.

12133004a ಅರಣ್ಯೇ ಸಾಯಪೂರ್ವಾಹ್ಣೇ ಮೃಗಯೂಥಪ್ರಕೋಪಿತಾ|

12133004c ವಿಧಿಜ್ಞೋ ಮೃಗಜಾತೀನಾಂ ನಿಪಾನಾನಾಂ ಚ ಕೋವಿದಃ||

ಅವನು ಸಾಯಂಕಾಲ ಮತ್ತು ಬೆಳಿಗ್ಗೆ ಅರಣ್ಯದಲ್ಲಿ ಮೃಗಸಮೂಹಗಳನ್ನು ಕುಪಿತಗೊಳಿಸುತ್ತಿದ್ದನು. ಅವನು ಮೃಗಜಾತಿಗಳ ವಿಧಿಗಳನ್ನು ತಿಳಿದುಕೊಂಡಿದ್ದನು. ನಿಷಾದರಲ್ಲಿಯೇ ಕೋವಿದನಾಗಿದ್ದನು.

12133005a ಸರ್ವಕಾನನದೇಶಜ್ಞಃ ಪಾರಿಯಾತ್ರಚರಃ ಸದಾ|

12133005c ಧರ್ಮಜ್ಞಃ ಸರ್ವಭೂತಾನಾಮಮೋಘೇಷುರ್ದೃಢಾಯುಧಃ||

ಸರ್ವಕಾನನ ಪ್ರದೇಶಗಳನ್ನೂ ತಿಳಿದುಕೊಂಡಿದ್ದನು. ಸದಾ ಪಾರಿಯಾತ್ರ ಪರ್ವತದ ಮೇಲೆ ಸಂಚರಿಸುತ್ತಿದ್ದ ಅವನು ಸರ್ವಭೂತಗಳ ಧರ್ಮವನ್ನು ತಿಳಿದುಕೊಂಡಿದ್ದನು. ದೃಢಾಯುಧನಾಗಿದ್ದ ಅವನ ಪ್ರಹಾರವು ಎಂದೂ ವ್ಯರ್ಥವಾಗುತ್ತಿರಲಿಲ್ಲ.

12133006a ಅಪ್ಯನೇಕಶತಾಃ ಸೇನಾ ಏಕ ಏವ ಜಿಗಾಯ ಸಃ|

12133006c ಸ ವೃದ್ಧಾವಂಧಪಿತರೌ ಮಹಾರಣ್ಯೇಽಭ್ಯಪೂಜಯತ್||

ಅನೇಕ ನೂರು ಮಂದಿಗಳ ಸೇನೆಯನ್ನೂ ಒಬ್ಬನೇ ಗೆಲ್ಲುತ್ತಿದ್ದನು. ಅವನು ಆ ಮಹಾರಣ್ಯದಲ್ಲಿದ್ದ ಅಂಧ ವೃದ್ಧ ತಂದೆ-ತಾಯಿಯರ ಸೇವೆಗೈಯುತ್ತಿದ್ದನು.

12133007a ಮಧುಮಾಂಸೈರ್ಮೂಲಫಲೈರನ್ನೈರುಚ್ಚಾವಚೈರಪಿ|

12133007c ಸತ್ಕೃತ್ಯ ಭೋಜಯಾಮಾಸ ಸಮ್ಯಕ್ಪರಿಚಚಾರ ಚ||

ಮಧು, ಮಾಂಸ, ಮೂಲ, ಫಲಗಳು ಮತ್ತು ಅನ್ಯ ಆಹಾರಪದಾರ್ಥಗಳಿಂದ ಅವರನ್ನು ಸತ್ಕರಿಸಿ ಭೋಜನ ಮಾಡಿಸಿ ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಿದ್ದನು.

12133008a ಆರಣ್ಯಕಾನ್ ಪ್ರವ್ರಜಿತಾನ್ ಬ್ರಾಹ್ಮಣಾನ್ ಪರಿಪಾಲಯನ್|

12133008c ಅಪಿ ತೇಭ್ಯೋ ಮೃಗಾನ್ ಹತ್ವಾ ನಿನಾಯ ಚ ಮಹಾವನೇ||

ವಾನಪ್ರಸ್ಥಾಶ್ರಮದಲ್ಲಿದ್ದವರನ್ನೂ ಸಂನ್ಯಾಸಿ ಬ್ರಾಹ್ಮಣರನ್ನೂ ಪರಿಪಾಲಿಸುತ್ತಿದ್ದನು. ಮೃಗಗಳನ್ನು ಬೇಟೆಯಾಡಿ ಆ ಮಹಾವನದಲ್ಲಿದ್ದ ಅವರಿಗೆ ಕೊಂಡೊಯ್ಯುತ್ತಿದ್ದನು.

12133009a ಯೇ ಸ್ಮ ನ ಪ್ರತಿಗೃಹ್ಣಂತಿ ದಸ್ಯುಭೋಜನಶಂಕಯಾ|

12133009c ತೇಷಾಮಾಸಜ್ಯ ಗೇಹೇಷು ಕಾಲ್ಯ ಏವ ಸ ಗಚ್ಚತಿ||

ದಸ್ಯುವಿತ್ತ ಭೋಜನವನ್ನು ತಿನ್ನಬಾರದೆಂದು ಶಂಕಿಸಿ ಅವನಿತ್ತ ಭೋಜನವನ್ನು ಸ್ವೀಕರಿಸದೇ ಇದ್ದವರಿಗೆ ಅವನು ಫಲ-ಮೂಲಾದಿ ಆಹಾರಗಳನ್ನು ಬೆಳಿಗ್ಗೆಯೇ ಹೋಗಿ ಇಟ್ಟು ಬರುತ್ತಿದ್ದನು.

12133010a ತಂ ಬಹೂನಿ ಸಹಸ್ರಾಣಿ ಗ್ರಾಮಣಿತ್ವೇಽಭಿವವ್ರಿರೇ|

12133010c ನಿರ್ಮರ್ಯಾದಾನಿ ದಸ್ಯೂನಾಂ ನಿರನುಕ್ರೋಶಕಾರಿಣಾಮ್||

ಹೀಗೆ ನಡೆಯುತ್ತಿರಲು ಒಮ್ಮೆ ಅನೇಕ ಸಾವಿರ ದರೋಡೆಕೋರರು ಕಾಪವ್ಯನನ್ನು ತಮ್ಮ ಅಧಿಪತಿಯನ್ನಾಗಿ ಮಾಡಿಕೊಳ್ಳಬೇಕೆಂಬ ಆಶಯದಿಂದ ಅವನನ್ನು ಸುತ್ತುವರೆದು ಪ್ರಾರ್ಥಿಸಿದರು:

12133011 ದಸ್ಯವ ಊಚುಃ|

12133011a ಮುಹೂರ್ತದೇಶಕಾಲಜ್ಞ ಪ್ರಾಜ್ಞ ಶೀಲದೃಢಾಯುಧ[2]|

12133011c ಗ್ರಾಮಣೀರ್ಭವ ನೋ ಮುಖ್ಯಃ ಸರ್ವೇಷಾಮೇವ ಸಂಮತಃ||

ದಸ್ಯುಗಳು ಹೇಳಿದರು: “ನೀನು ದೇಶ, ಕಾಲ ಮತ್ತು ಮುಹೂರ್ತಗಳನ್ನು ತಿಳಿದಿರುವೆ. ಪ್ರಾಜ್ಞನಾಗಿರುವೆ. ಶೂರನೂ ದೃಢಾಯುಧನೂ ಆಗಿರುವೆ. ನಮ್ಮೆಲ್ಲರಿಗೂ ನೀನು ಸಮ್ಮತನಾಗಿರುವೆ. ಆದುದರಿಂದ ನೀನು ನಮಗೆ ಮುಖ್ಯನಾಗು.

12133012a ಯಥಾ ಯಥಾ ವಕ್ಷ್ಯಸಿ ನಃ ಕರಿಷ್ಯಾಮಸ್ತಥಾ ತಥಾ|

12133012c ಪಾಲಯಾಸ್ಮಾನ್ಯಥಾನ್ಯಾಯಂ ಯಥಾ ಮಾತಾ ಯಥಾ ಪಿತಾ||

ನೀನು ಯಾವ ಯಾವ ರೀತಿಯಲ್ಲಿ ಹೇಳುವೆಯೋ ನಾವು ಹಾಗೆಯೇ ಮಾಡುತ್ತೇವೆ. ತಂದೆ-ತಾಯಿಗಳು ಮಕ್ಕಳನ್ನು ಪಾಲಿಸುವಂತೆ ಯಥಾನ್ಯಾಯವಾಗಿ ನಮ್ಮನ್ನು ಪಾಲಿಸು.”

12133013 ಕಾಪವ್ಯ ಉವಾಚ|

12133013a ಮಾ ವಧೀಸ್ತ್ವಂ ಸ್ತ್ರಿಯಂ ಭೀರುಂ ಮಾ ಶಿಶುಂ ಮಾ ತಪಸ್ವಿನಮ್|

12133013c ನಾಯುಧ್ಯಮಾನೋ ಹಂತವ್ಯೋ ನ ಚ ಗ್ರಾಹ್ಯಾ ಬಲಾತ್ಸ್ತ್ರಿಯಃ||

ಕಾಪವ್ಯನು ಹೇಳಿದನು: “ನೀವು ಸ್ತ್ರೀಯರವನ್ನಾಗಲೀ, ಭಯಗೊಂಡಿರುವವರನ್ನಾಗಲೀ, ಶಿಶುಗಳನ್ನಾಗಲೀ, ತಪಸ್ವಿಯನ್ನಾಗಲೀ ಕೊಲ್ಲಬಾರದು. ನಿಮ್ಮೊಡನೇ ಯುದ್ಧಮಾಡದೇ ಇರುವವರನ್ನೂ ಕೊಲ್ಲಬಾರದು. ಸ್ತ್ರೀಯರನ್ನು ಬಲಾತ್ಕಾರವಾಗಿ ಅಪಹರಿಸಬಾರದು.

12133014a ಸರ್ವಥಾ ಸ್ತ್ರೀ ನ ಹಂತವ್ಯಾ ಸರ್ವಸತ್ತ್ವೇಷು ಯುಧ್ಯತಾ|

12133014c ನಿತ್ಯಂ ಗೋಬ್ರಾಹ್ಮಣೇ ಸ್ವಸ್ತಿ ಯೋದ್ಧವ್ಯಂ ಚ ತದರ್ಥತಃ||

ಸರ್ವಜೀವಿಗಳಲ್ಲಿ ಸರ್ವಥಾ ಸ್ತ್ರೀಯರನ್ನು ಕೊಲ್ಲಬಾರದು. ನಿತ್ಯವೂ ಬ್ರಾಹ್ಮಣರ ಹಿತಕ್ಕಾಗಿ ಯುದ್ಧಮಾಡಬೇಕು. ಅವಶ್ಯವಿದ್ದರೆ ಬ್ರಾಹ್ಮಣನ ಸಲುವಾಗಿಯೂ ಯುದ್ಧಮಾಡಬೇಕು.

12133015a ಸಸ್ಯಂ ಚ ನಾಪಹಂತವ್ಯಂ ಸೀರವಿಘ್ನಂ ಚ ಮಾ ಕೃಥಾಃ|

12133015c ಪೂಜ್ಯಂತೇ ಯತ್ರ ದೇವಾಶ್ಚ ಪಿತರೋಽತಿಥಯಸ್ತಥಾ||

ಹೊಲದಲ್ಲಿದ್ದ ಬೆಳೆಗಳನ್ನು ಅಪಹರಿಸಬಾರದು. ವಿವಾಹಾದಿ ಸಮಾರಂಭಗಳಿಗೆ ವಿಘ್ನವನ್ನುಂಟುಮಾಡಬಾರದು. ದೇವತೆಗಳು, ಪಿತೃಗಳು ಮತ್ತು ಅತಿಥಿಗಳ ಪೂಜೆಯಾಗುತ್ತಿರುವಲ್ಲಿ ಹಲ್ಲೆಗಳನ್ನು ನಡೆಸಬಾರದು.

12133016a ಸರ್ವಭೂತೇಷ್ವಪಿ ಚ ವೈ ಬ್ರಾಹ್ಮಣೋ ಮೋಕ್ಷಮರ್ಹತಿ|

12133016c ಕಾರ್ಯಾ ಚಾಪಚಿತಿಸ್ತೇಷಾಂ ಸರ್ವಸ್ವೇನಾಪಿ ಯಾ ಭವೇತ್||

ಸರ್ವಭೂತಗಳಲ್ಲಿಯೂ ಬ್ರಾಹ್ಮಣನು ನಮ್ಮಿಂದ ಮುಕ್ತನಾಗಲು ಅರ್ಹನಾಗಿದ್ದಾನೆ. ಅವರನ್ನು ಬಿಟ್ಟುಬಿಡುವುದಲ್ಲದೇ ನಮ್ಮ ಸರ್ವಸ್ವದಿಂದಲೂ ಅವರ ಅಭಿವೃದ್ಧಿಗೆ ಪ್ರಯತ್ನಪಡಬೇಕು.

12133017a ಯಸ್ಯ ಹ್ಯೇತೇ ಸಂಪ್ರರುಷ್ಟಾ ಮಂತ್ರಯಂತಿ ಪರಾಭವಮ್|

12133017c ನ ತಸ್ಯ ತ್ರಿಷು ಲೋಕೇಷು ತ್ರಾತಾ ಭವತಿ ಕಶ್ಚನ||

ಯಾರಕುರಿತು ಬ್ರಾಹ್ಮಣರು ರೋಷಗೊಂಡು ಅವನ ಪರಾಭವಕ್ಕೆ ಯೋಚಿಸುವರೋ ಅವನನ್ನು ಮೂರು ಲೋಕಗಳಲ್ಲಿ ಯಾರೂ ರಕ್ಷಿಸಲಿಕ್ಕಾಗುವುದಿಲ್ಲ.

12133018a ಯೋ ಬ್ರಾಹ್ಮಣಾನ್ಪರಿಭವೇದ್ವಿನಾಶಂ ವಾಪಿ ರೋಚಯೇತ್|

12133018c ಸೂರ್ಯೋದಯ ಇವಾವಶ್ಯಂ[3] ಧ್ರುವಂ ತಸ್ಯ ಪರಾಭವಃ||

ಬಾಹ್ಮಣರನ್ನು ಕಾಡುವವನು ಮತ್ತು ಅವರ ವಿನಾಶವನ್ನು ಬಯಸುವವನ ಪರಾಭವವು ಅವಶ್ಯವಾಗಿ ಸೂರ್ಯೋದಯದಷ್ಟೇ ನಿಶ್ಚಿತವಾದುದು.

12133019a ಇಹೈವ ಫಲಮಾಸೀನಃ ಪ್ರತ್ಯಾಕಾಂಕ್ಷತಿ ಶಕ್ತಿತಃ[4]|

12133019c ಯೇ ಯೇ ನೋ ನ ಪ್ರದಾಸ್ಯಂತಿ ತಾಂಸ್ತಾನ್ಸೇನಾಭಿಯಾಸ್ಯತಿ||

ಇಲ್ಲಿಯೇ ಇದ್ದುಕೊಂಡು ಶಕ್ತಿಯಾದಷ್ಟು ಫಲವನ್ನು ನಿರೀಕ್ಷಿಸುತ್ತಿರಬೇಕು[5]. ಯಾರು ಕೊಡುವುದಿಲ್ಲವೋ ಅಂಥವರ ಮೇಲೆ ಮಾತ್ರ ಆಕ್ರಮಣ ಮಾಡಬೇಕು.

12133020a ಶಿಷ್ಟ್ಯರ್ಥಂ ವಿಹಿತೋ ದಂಡೋ ನ ವಧಾರ್ಥಂ ವಿನಿಶ್ಚಯಃ[6]|

12133020c ಯೇ ಚ ಶಿಷ್ಟಾನ್ಪ್ರಬಾಧಂತೇ ಧರ್ಮಸ್ತೇಷಾಂ ವಧಃ ಸ್ಮೃತಃ||

ದುಷ್ಟರನ್ನು ಶಿಕ್ಷಿಸುವ ಸಲುವಾಗಿಯೇ ದಂಡವು ವಿಹಿತವಾಗಿದೆ. ವಧೆಗಾಗಿ ಅದನ್ನು ಬಳಸಬಾರದು. ಶಿಷ್ಟರನ್ನು ಯಾರು ಬಾಧಿಸುತ್ತಾರೋ ಅವರನ್ನು ವಧಿಸುವುದೇ ಧರ್ಮವೆಂದು ಹೇಳಿದ್ದಾರೆ.

12133021a ಯೇ ಹಿ ರಾಷ್ಟ್ರೋಪರೋಧೇನ ವೃತ್ತಿಂ[7] ಕುರ್ವಂತಿ ಕೇ ಚನ|

12133021c ತದೇವ ತೇಽನು ಮೀಯಂತೇ ಕುಣಪಂ ಕೃಮಯೋ ಯಥಾ||

ರಾಷ್ಟ್ರವನ್ನು ಹಾಳುಮಾಡುವ ವೃತ್ತಿಯಲ್ಲಿರುವವರು ಹೆಣಕ್ಕೆ ಮುತ್ತಿರುವ ಕೃಮಿಗಳಂತೆ ನಾಶವಾಗುತ್ತಾರೆ.

12133022a ಯೇ ಪುನರ್ಧರ್ಮಶಾಸ್ತ್ರೇಣ ವರ್ತೇರನ್ನಿಹ ದಸ್ಯವಃ|

12133022c ಅಪಿ ತೇ ದಸ್ಯವೋ ಭೂತ್ವಾ ಕ್ಷಿಪ್ರಂ ಸಿದ್ಧಿಮವಾಪ್ನುಯುಃ||

ದಸ್ಯುಗಳಾಗಿದ್ದರೂ ಪುನಃ ದರ್ಮಶಾಸ್ತ್ರಗಳಲ್ಲಿರುವಂತೆ ವರ್ತಿಸಿದರೆ ಅವರು ದಸ್ಯುಗಳಾಗಿದ್ದುಕೊಂಡೂ ಬೇಗನೆ ಸಿದ್ಧಿಯನ್ನು ಹೊಂದುತ್ತಾರೆ.””

12133023 ಭೀಷ್ಮ ಉವಾಚ|

12133023a ತತ್ಸರ್ವಮುಪಚಕ್ರುಸ್ತೇ ಕಾಪವ್ಯಸ್ಯಾನುಶಾಸನಮ್|

12133023c ವೃತ್ತಿಂ[8] ಚ ಲೇಭಿರೇ ಸರ್ವೇ ಪಾಪೇಭ್ಯಶ್ಚಾಪ್ಯುಪಾರಮನ್||

ಭೀಷ್ಮನು ಹೇಳಿದನು: “ಅವರೆಲ್ಲರು ಕಾಪವ್ಯನ ಅನುಶಾಸನದಂತೆಯೇ ನಡೆದುಕೊಂಡರು. ಅವರೆಲ್ಲರೂ ವೃತ್ತಿಗಳನ್ನು ಪಡೆದುಕೊಂಡು ಪಾಪಗಳಿಂದಲೂ ವಿಮುಕ್ತರಾದರು.

12133024a ಕಾಪವ್ಯಃ ಕರ್ಮಣಾ ತೇನ ಮಹತೀಂ ಸಿದ್ಧಿಮಾಪ್ತವಾನ್|

12133024c ಸಾಧೂನಾಮಾಚರನ್ ಕ್ಷೇಮಂ ದಸ್ಯೂನ್ಪಾಪಾನ್ನಿವರ್ತಯನ್||

ಕಾಪವ್ಯನು ಸಾಧುಗಳಿಗೆ ಕ್ಷೇಮವನ್ನುಂಟುಮಾಡುತ್ತಿದ್ದುದರಿಂದ ಮತ್ತು ದಸ್ಯುಗಳನ್ನು ಪಾಪಕರ್ಮಗಳಿಂದ ವಿಮುಖರನ್ನಾಗಿ ಮಾಡಿದ್ದುದರಿಂದ ಮಹಾ ಸಿದ್ಧಿಯನ್ನು ಪಡೆದುಕೊಂಡನು.

12133025a ಇದಂ ಕಾಪವ್ಯಚರಿತಂ ಯೋ ನಿತ್ಯಮನುಕೀರ್ತಯೇತ್|

12133025c ನಾರಣ್ಯೇಭ್ಯಃ ಸ ಭೂತೇಭ್ಯೋ ಭಯಮಾರ್ಚೇತ್ಕದಾ ಚನ||

ಈ ಕಾಪವ್ಯಚರಿತವನ್ನು ನಿತ್ಯವೂ ಕೀರ್ತನೆಮಾಡುವವನು ಅರಣ್ಯವಾಸೀ ಪ್ರಾಣಿಗಳಿಂದ ಕಿಂಚಿತ್ತೂ ಭಯವುಂಟಾಗುವುದಿಲ್ಲ.

12133026a ಭಯಂ ತಸ್ಯ ನ ಮರ್ತ್ಯೇಭ್ಯೋ ನಾಮರ್ತ್ಯೇಭ್ಯಃ ಕಥಂ ಚನ[9]|

12133026c ನ ಸತೋ ನಾಸತೋ[10] ರಾಜನ್ಸ ಹ್ಯರಣ್ಯೇಷು ಗೋಪತಿಃ||

ಭಾರತ! ಅವನಿಗೆ ಮರ್ತ್ಯರಿಂದಲೂ ಅಮಾನುಷರಿಂದಲೂ ಎಂದೂ ಭಯವಿರುವುದಿಲ್ಲ. ರಾಜನ್! ಅಂಥವನು ಅರಣ್ಯಕ್ಕೇ ಅಧಿಪತಿಯಾಗಬಹುದು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಕಾಪವ್ಯಚರಿತೇ ತ್ರಿಸ್ತ್ರಿಂಶಾತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ  ಕಾಪವ್ಯಚರಿತ ಎನ್ನುವ ನೂರಾಮೂವತ್ಮೂರನೇ ಅಧ್ಯಾಯವು.

 

[1] ಕಾಯವ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ದೃಢವ್ರತಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಸೂರ್ಯೋದಯ ಇವ ಧ್ವಾಂತೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಪ್ರತ್ಯಾಕಾಂಕ್ಷೇತ ಸರ್ವಶಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಇಲ್ಲಿಯೇ ಇದ್ದುಕೊಂಡು ದಾರಿಹೋಕರಿಂದ ಹಣದ ಸುಲಿಗೆಯನ್ನು ಮಾಡಬೇಕು (ಭಾತರ ದರ್ಶನ).

[6] ನ ವೃದ್ಧ್ಯರ್ಥಂ ವಿನಿಶ್ಚಯಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ವೃದ್ಧಿಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ವೃದ್ಧಿಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[9] ನ ಭಯಂ ತಸ್ಯ ಭೂತೇಭ್ಯಃ ಸರ್ವೇಭ್ಯಶ್ಚೈವ ಭಾರತ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[10] ನಾಸತೋ ವಿದ್ಯತೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.