Shanti Parva: Chapter 132

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೩೨

ಬಲದ ಮಹತ್ವ ಮತ್ತು ಪಾಪದ ಪ್ರಾಯಶ್ಚಿತ್ತ.

12132001 ಭೀಷ್ಮ ಉವಾಚ|

12132001a ಅತ್ರ ಕರ್ಮಾಂತವಚನಂ ಕೀರ್ತಯಂತಿ ಪುರಾವಿದಃ|

12132001c ಪ್ರತ್ಯಕ್ಷಾವೇವ ಧರ್ಮಾರ್ಥೌ ಕ್ಷತ್ರಿಯಸ್ಯ ವಿಜಾನತಃ|

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಹಿಂದಿನದನ್ನು ತಿಳಿದವರು ಈ ಕರ್ಮಾಂತವಚನವನ್ನು ಹೇಳುತ್ತಾರೆ: “ತಿಳುವಳಿಕೆಯಿದ್ದ ಕ್ಷತ್ರಿಯನಿಗೆ ಧರ್ಮಾರ್ಥಗಳು ಪ್ರತ್ಯಕ್ಷವಾದವುಗಳು.”

12132001e ತತ್ರ ನ ವ್ಯವಧಾತವ್ಯಂ ಪರೋಕ್ಷಾ ಧರ್ಮಯಾಪನಾ||

12132002a ಅಧರ್ಮೋ ಧರ್ಮ ಇತ್ಯೇತದ್ಯಥಾ ವೃಕಪದಂ ತಥಾ|

ಇದು ಧರ್ಮವೇ? ಇದನ್ನು ಮಾಡಬಹುದೇ? ಎಂಬ ಗೊಂದಲದಿಂದ ಮಾಡಬೇಕಾದ ಕರ್ತ್ಯವ್ಯದಲ್ಲಿ ವಿಳಂಬಮಾಡಬಾರದು. ಧರ್ಮದ ಪರಿಣಾಮವು ಪರೋಕ್ಷವಾದುದು. ತೋಳದ ಹೆಜ್ಜೆಯ ಗುರುತನ್ನು ಅದು ಚಿರತೆಯದ್ದೋ, ನಾಯಿಯದ್ದೋ ಅಥವಾ ತೋಳದ್ದೋ ಎಂದು ಗುರುತಿಸಲು ಸಾಧ್ಯವಾಗದಂತೆ ಆಪತ್ಕಾಲದಲ್ಲಿ ಅಧರ್ಮ ಮತ್ತು ಧರ್ಮವು ಯಾವುದೆಂದು ನಿರ್ಣಯಿಸಲು ಸಾಧ್ಯವಾಗುವುದಿಲ್ಲ.

12132002c ಧರ್ಮಾಧರ್ಮಫಲೇ ಜಾತು ನ ದದರ್ಶೇಹ ಕಶ್ಚನ||

12132003a ಬುಭೂಷೇದ್ಬಲವಾನೇವ ಸರ್ವಂ ಬಲವತೋ ವಶೇ|

ಧರ್ಮ-ಅಧರ್ಮಗಳ ಫಲವನ್ನು ಯಾರೂ ಎಂದೂ ಪ್ರತ್ಯಕ್ಷವಾಗಿ ಕಂಡಿಲ್ಲ. ಆದುದರಿಂದ ರಾಜನು ಬಲಿಷ್ಠನಾಗಿರಲು ಪ್ರಯತ್ನಿಸಬೇಕು. ಏಕೆಂದರೆ ಎಲ್ಲವೂ ಬಲಿಷ್ಠನ ವಶದಲ್ಲಿರುತ್ತದೆ.

12132003c ಶ್ರಿಯಂ ಬಲಮಮಾತ್ಯಾಂಶ್ಚ ಬಲವಾನಿಹ ವಿಂದತಿ||

12132004a ಯೋ ಹ್ಯನಾಢ್ಯಃ ಸ ಪತಿತಸ್ತದುಚ್ಚಿಷ್ಟಂ ಯದಲ್ಪಕಮ್|

ಬಲವಾನನು ಸಂಪತ್ತು, ಸೇನೆ ಮತ್ತು ಅಮಾತ್ಯರನ್ನು ಹೊಂದುತ್ತಾನೆ. ಅನಾಢ್ಯನು ಪತಿತನು ಮತ್ತು ಅವನಲ್ಲಿರುವ ಅಲ್ಪಧನವು ಉಚ್ಚಿಷ್ಟವಾದುದು ಎಂದು ಹೇಳುತ್ತಾರೆ.

12132004c ಬಹ್ವಪಥ್ಯಂ ಬಲವತಿ ನ ಕಿಂ ಚಿತ್ತ್ರಾಯತೇ ಭಯಾತ್||

12132005a ಉಭೌ ಸತ್ಯಾಧಿಕಾರೌ ತೌ ತ್ರಾಯೇತೇ ಮಹತೋ ಭಯಾತ್|

ಬಲವಾನನಲ್ಲಿ ಅನೇಕ ದೋಷಗಳಿರಬಹುದು. ಆದರೆ ಅವುಗಳನ್ನು ಅವನು ಜೀರ್ಣಿಸಿಕೊಳ್ಳಬಲ್ಲನು. ಅವನ ಭಯದಿಂದ ಬೇರೆ ಯಾರೂ ಏನೂ ಹೇಳುವುದಿಲ್ಲ. ಸತ್ಯ ಮತ್ತು ಅಧಿಕಾರಗಳು ಒಬ್ಬನಲ್ಲಿಯೇ ಇದ್ದರೆ ಅದು ಮಹಾಭಯದಿಂದ ಪಾರುಮಾಡುತ್ತದೆ.

12132005c ಅತಿ ಧರ್ಮಾದ್ಬಲಂ ಮನ್ಯೇ ಬಲಾದ್ಧರ್ಮಃ ಪ್ರವರ್ತತೇ||

12132006a ಬಲೇ ಪ್ರತಿಷ್ಠಿತೋ ಧರ್ಮೋ ಧರಣ್ಯಾಮಿವ ಜಂಗಮಃ|

ಧರ್ಮಕ್ಕಿಂತಲೂ ಬಲವೇ ಹೆಚ್ಚಿನದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಬಲದಿಂದಲೇ ಧರ್ಮವು ನಡೆಯುತ್ತದೆ. ಧರಣಿಯಲ್ಲಿ ಜಂಗಮಗಳು ಹೇಗೋ ಹಾಗೆ ಬಲದಲ್ಲಿ ಧರ್ಮವು ಪ್ರತಿಷ್ಠಿತವಾಗಿದೆ.

12132006c ಧೂಮೋ ವಾಯೋರಿವ ವಶಂ ಬಲಂ ಧರ್ಮೋಽನುವರ್ತತೇ||

12132007a ಅನೀಶ್ವರೇ ಬಲಂ ಧರ್ಮೋ ದ್ರುಮಂ ವಲ್ಲೀವ ಸಂಶ್ರಿತಾ|

ಹೊಗೆಯು ಹೇಗೆ ಗಾಳಿಗೆ ಅಧೀನವಾಗಿ ಅದನ್ನೇ ಅನುಸರಿಸಿ ಹೋಗುವಂತೆ ಧರ್ಮವೂ ಬಲವನ್ನೇ ಅನುಸರಿಸಿ ಹೋಗುತ್ತದೆ. ಬಳ್ಳಿಯು ಮರವನ್ನೇ ಆಶ್ರಯಿಸಿ ವೃದ್ಧಿಹೊಂದುವಂತೆ ನಿರಾಶ್ರಯ ಧರ್ಮವು ಬಲವನ್ನೇ ಆಶ್ರಯಿಸಿ ವೃದ್ಧಿಹೊಂದುತ್ತದೆ.

12132007c ವಶ್ಯೋ ಬಲವತಾಂ ಧರ್ಮಃ ಸುಖಂ ಭೋಗವತಾಮಿವ|

12132007e ನಾಸ್ತ್ಯಸಾಧ್ಯಂ ಬಲವತಾಂ ಸರ್ವಂ ಬಲವತಾಂ ಶುಚಿ||

ಭೋಗ್ಯವಸ್ತುಗಳಿಂದ ಸಂಪನ್ನನಾಗಿರುವವನಿಗೆ ಸುಖವು ಹೇಗೋ ಹಾಗೆ ಬಲವಂತನಿಗೆ ಧರ್ಮವು ವಶವಾಗುತ್ತದೆ. ಬಲಶಾಲಿಗಳಿಗೆ ಅಸಾಧ್ಯವೆನ್ನುವುದು ಯಾವುದೂ ಇರುವುದಿಲ್ಲ. ಬಲವಂತನ ಎಲ್ಲವೂ ಶುಚಿಯಾದುದು ಎಂದೇ ಪರಿಗಣಿಸಲ್ಪಡುತ್ತದೆ.

12132008a ದುರಾಚಾರಃ ಕ್ಷೀಣಬಲಃ ಪರಿಮಾಣಂ ನಿಯಚ್ಚತಿ|

12132008c ಅಥ ತಸ್ಮಾದುದ್ವಿಜತೇ ಸರ್ವೋ ಲೋಕೋ ವೃಕಾದಿವ||

ದುರಾಚಾರಿಯೂ ಕ್ಷೀಣಬಲನೂ ಭಯವೊದಗಿದಾಗ ನಾಶಹೊಂದುತ್ತಾನೆ. ಆದುದರಿಂದ ಪ್ರಜೆಗಳು, ತೋಳದಿಂದ ಹೇಗೋ ಹಾಗೆ, ದುರ್ಬಲ ರಾಜನಿಂದ ಉದ್ವಿಗ್ನರಾಗುತ್ತಾರೆ.

12132009a ಅಪಧ್ವಸ್ತೋ ಹ್ಯವಮತೋ ದುಃಖಂ ಜೀವತಿ ಜೀವಿತಮ್|

12132009c ಜೀವಿತಂ ಯದವಕ್ಷಿಪ್ತಂ ಯಥೈವ ಮರಣಂ ತಥಾ||

ದುರ್ಬಲನು ತನ್ನ ಐಶ್ವರ್ಯದಿಂದಲೇ ವಂಚಿತನಾಗುತ್ತಾನೆ. ಎಲ್ಲರ ಅನಾದರಣೆಗೂ ಪಾತ್ರನಾಗುತ್ತಾನೆ. ದುಃಖದ ಬದುಕನ್ನು ಬಾಳುತ್ತಾನೆ. ಕ್ಷೀಣವಾದ ಜೀವಿತವು ಮರಣಕ್ಕೆ ಸಮನಾಗಿರುತ್ತದೆ.

12132010a ಯದೇನಮಾಹುಃ ಪಾಪೇನ ಚಾರಿತ್ರೇಣ ವಿನಿಕ್ಷತಮ್|

12132010c ಸ ಭೃಶಂ ತಪ್ಯತೇಽನೇನ ವಾಕ್ಶಲ್ಯೇನ ಪರಿಕ್ಷತಃ||

12132011a ಅತ್ರೈತದಾಹುರಾಚಾರ್ಯಾಃ ಪಾಪಸ್ಯ ಪರಿಮೋಕ್ಷಣೇ|

ಜನರು ಅವನಿಗೆ “ತನ್ನ ಪಾಪಚರಣೆಯಿಂದಲೇ ಇವನು ನಾಶಹೊಂದಿದ್ದಾನೆ” ಎಂದು ಹೇಳುತ್ತಾರೆ. ಈ ಮಾತಿನ ಮುಳ್ಳಿನಿಂದ ಚುಚ್ಚಲ್ಪಟ್ಟ ಅವನು ತುಂಬಾ ತಪಿಸುತ್ತಾನೆ. ಪಾಪದ ಪರಿಹಾರಕ್ಕೆ ಆಚಾರ್ಯರು ಈ ಉಪಾಯವನ್ನು ಹೇಳಿರುತ್ತಾರೆ.

12132011c ತ್ರಯೀಂ ವಿದ್ಯಾಂ ನಿಷೇವೇತ ತಥೋಪಾಸೀತ ಸ ದ್ವಿಜಾನ್||

12132012a ಪ್ರಸಾದಯೇನ್ಮಧುರಯಾ ವಾಚಾಪ್ಯಥ ಚ ಕರ್ಮಣಾ|

12132012c ಮಹಾಮನಾಶ್ಚೈವ ಭವೇದ್ವಿವಹೇಚ್ಚ ಮಹಾಕುಲೇ||

12132013a ಇತ್ಯಸ್ಮೀತಿ ವದೇದೇವಂ ಪರೇಷಾಂ ಕೀರ್ತಯನ್ಗುಣಾನ್|

12132013c ಜಪೇದುದಕಶೀಲಃ ಸ್ಯಾತ್ಪೇಶಲೋ ನಾತಿಜಲ್ಪನಃ||

12132014a ಬ್ರಹ್ಮಕ್ಷತ್ರಂ ಸಂಪ್ರವಿಶೇದ್ಬಹು ಕೃತ್ವಾ ಸುದುಷ್ಕರಮ್|

12132014c ಉಚ್ಯಮಾನೋಽಪಿ ಲೋಕೇನ ಬಹು ತತ್ತದಚಿಂತಯನ್||

ಪಾಪಲಿಪ್ತ ರಾಜನು ಮೂರು ವೇದಗಳ ಅಧ್ಯಯನ ಮಾಡಬೇಕು. ಬ್ರಾಹ್ಮಣರ ಸೇವೆಯನ್ನು ಮಾಡಬೇಕು. ಸುಮಧುರ ಮಾತುಗಳಿಂದ ಮತ್ತು ಸತ್ಕರ್ಮಗಳಿಂದ ಅವರನ್ನು ಪ್ರಸನ್ನಗೊಳಿಸಬೇಕು. ಉದಾರಹೃದಯಿಯಾಗಿರಬೇಕು. ಉಚ್ಚಕುಲದ ಕನ್ಯೆಯನ್ನು ವಿವಾಹವಾಗಬೇಕು. ತನ್ನ ಪರಿಚಯ ಮಾಡಿಕೊಳ್ಳಬೇಕು ಮತ್ತು ಪರರ ಗುಣಗಳನ್ನು ಪ್ರಶಂಸಿಸಬೇಕು. ಸ್ನಾನಮಾಡಿ ಜಪಿಸಬೇಕು. ಮೃದುಸ್ವಭಾವದವನಾಗಿರಬೇಕು. ಹೆಚ್ಚು ಮಾತನಾಡಬಾರದು. ಜನರು ಪಾಪಕರ್ಮಿ ಎಂದು ಹೇಳುತ್ತಿದ್ದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು. ಸುದುಷ್ಕರವಾದ ಅನೇಕ ಪುಣ್ಯಕರ್ಮಗಳನ್ನು ಮಾಡಿ ಬ್ರಾಹ್ಮಣ-ಕ್ಷತ್ರಿಯರ ಸಮಾಜದಲ್ಲಿ ಪ್ರವೇಶಿಸಬೇಕು.

12132015a ಅಪಾಪೋ ಹ್ಯೇವಮಾಚಾರಃ ಕ್ಷಿಪ್ರಂ ಬಹುಮತೋ ಭವೇತ್|

12132015c ಸುಖಂ ವಿತ್ತಂ ಚ ಭುಂಜೀತ ವೃತ್ತೇನೈತೇನ ಗೋಪಯೇತ್|

12132015e ಲೋಕೇ ಚ ಲಭತೇ ಪೂಜಾಂ ಪರತ್ರ ಚ ಮಹತ್ಫಲಮ್||

ಇವುಗಳನ್ನು ಆಚರಿಸಿ ರಾಜನು ಅಪಾಪಿಯಾಗಬಹುದು ಮತ್ತು ಕ್ಷಿಪ್ರದಲ್ಲಿಯೇ ಬಹುಮತನಾಗಬಹುದು. ಈ ಆಚರಣೆಗಳಿಂದ ಸುಖ-ವಿತ್ತಗಳನ್ನು ಭುಂಜಿಸಬಹುದು ಮತ್ತು ಅವುಗಳನ್ನು ರಕ್ಷಿಸಿಕೊಳ್ಳಬಹುದು. ಈ ಲೋಕದಲ್ಲಿ ಗೌರವಪಾತ್ರನಾಗುತ್ತಾನೆ ಮತ್ತು ಪರಲೋಕದಲ್ಲಿ ಮಹಾಫಲವನ್ನು ಪಡೆದುಕೊಳ್ಳುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ದ್ವಾತ್ರಿಂಶಾತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ನೂರಾಮೂವತ್ತೆರಡನೇ ಅಧ್ಯಾಯವು.

Comments are closed.