ಶಲ್ಯಪರ್ವ: ಗದಾಯುದ್ಧ ಪರ್ವ
Contents
Toggle೬೦
ಪಾಂಡವ ಯೋಧರು ಸಂತೋಷಗೊಂಡು ಭೀಮಸೇನನನ್ನು ಪ್ರಶಂಸಿದುದು (೧-೧೭). ಕೃಷ್ಣವಾಕ್ಯ (೧೮-೨೨). ದುರ್ಯೋಧನನು ವಾಸುದೇವನನ್ನು ನಿಂದಿಸಿದುದು (೨೩-೩೮). ವಾಸುದೇವ-ದುರ್ಯೋಧನರ ಸಂವಾದ (೩೯-೫೦). ದುರ್ಯೋಧನನನ್ನು ಗೌರವಿಸುವಂತಹ ಅದ್ಭುತ ನಿಮಿತ್ತಗಳನ್ನು ನೋಡಿ ಪಾಂಡವರ ಕಡೆಯವರೆಲ್ಲರೂ ಲಜ್ಜಿತರಾಗಲು, ಕೃಷ್ಣನು ಅವರನ್ನು ಸಮಾಧಾನಗೊಳಿಸಿದುದು (೫೧-೬೫).
09060001 ಧೃತರಾಷ್ಟ್ರ ಉವಾಚ
09060001a ಹತಂ ದುರ್ಯೋಧನಂ ದೃಷ್ಟ್ವಾ ಭೀಮಸೇನೇನ ಸಂಯುಗೇ|
09060001c ಪಾಂಡವಾಃ ಸೃಂಜಯಾಶ್ಚೈವ ಕಿಮಕುರ್ವತ ಸಂಜಯ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಭೀಮಸೇನನಿಂದ ಯುದ್ಧದಲ್ಲಿ ದುರ್ಯೋಧನನು ಹತನಾದುದನ್ನು ನೋಡಿ ಪಾಂಡವರು ಮತ್ತು ಸೃಂಜಯರು ಏನು ಮಾಡಿದರು?”
09060002 ಸಂಜಯ ಉವಾಚ
09060002a ಹತಂ ದುರ್ಯೋಧನಂ ದೃಷ್ಟ್ವಾ ಭೀಮಸೇನೇನ ಸಂಯುಗೇ|
09060002c ಸಿಂಹೇನೇವ ಮಹಾರಾಜ ಮತ್ತಂ ವನಗಜಂ ವನೇ||
09060003a ಪ್ರಹೃಷ್ಟಮನಸಸ್ತತ್ರ ಕೃಷ್ಣೇನ ಸಹ ಪಾಂಡವಾಃ|
ಸಂಜಯನು ಹೇಳಿದನು: “ಮಹಾರಾಜ! ವನದಲ್ಲಿ ಮದಿಸಿದ ಕಾಡಾನೆಯನ್ನು ಸಿಂಹವು ಹೇಗೋ ಹಾಗೆ ಯುದ್ಧದಲ್ಲಿ ದುರ್ಯೋಧನನನ್ನು ಭೀಮಸೇನನು ಹೊಡೆದುರುಳಿಸಲು ಕೃಷ್ಣನೊಂದಿಗೆ ಪಾಂಡವರು ಹರ್ಷಿತರಾದರು.
09060003c ಪಾಂಚಾಲಾಃ ಸೃಂಜಯಾಶ್ಚೈವ ನಿಹತೇ ಕುರುನಂದನೇ||
09060004a ಆವಿಧ್ಯನ್ನುತ್ತರೀಯಾಣಿ ಸಿಂಹನಾದಾಂಶ್ಚ ನೇದಿರೇ|
09060004c ನೈತಾನ್ ಹರ್ಷಸಮಾವಿಷ್ಟಾನಿಯಂ ಸೇಹೇ ವಸುಂಧರಾ||
ಕುರುನಂದನನು ಹತನಾಗಲು ಪಾಂಚಾಲರು ಮತ್ತು ಸೃಂಜಯರು ಉತ್ತರೀಯಗಳನ್ನು ಮೇಲೆ ಹಾರಿಸಿದರು ಮತ್ತು ಸಿಂಹನಾದಗೈದರು. ಹರ್ಷಿತರಾಗಿ ಕುಣಿದಾಡುತ್ತಿದ್ದ ಅವರ ಭಾರವನ್ನು ಹೊರಲು ವಸುಂಧರೆಗೂ ಸಾಧ್ಯವಾಗಲಿಲ್ಲ.
09060005a ಧನೂಂಷ್ಯನ್ಯೇ ವ್ಯಾಕ್ಷಿಪಂತ ಜ್ಯಾಶ್ಚಾಪ್ಯನ್ಯೇ ತಥಾಕ್ಷಿಪನ್|
09060005c ದಧ್ಮುರನ್ಯೇ ಮಹಾಶಂಖಾನನ್ಯೇ ಜಘ್ನುಶ್ಚ ದುಂದುಭೀಃ||
ಕೆಲವರು ಧನುಸ್ಸುಗಳನ್ನು ಟೇಂಕರಿಸಿದರು. ಇನ್ನು ಕೆಲವರು ಶಿಂಜನಿಗಳನ್ನು ಮೀಟುತ್ತಿದ್ದರು. ಕೆಲವರು ಮಹಾಶಂಖಗಳನ್ನು ಊದಿದರೆ ಇನ್ನು ಕೆಲವರು ದುಂದುಭಿಗಳನ್ನು ಮೊಳಗಿಸಿದರು.
09060006a ಚಿಕ್ರೀಡುಶ್ಚ ತಥೈವಾನ್ಯೇ ಜಹಸುಶ್ಚ ತವಾಹಿತಾಃ|
09060006c ಅಬ್ರುವಂಶ್ಚಾಸಕೃದ್ವೀರಾ ಭೀಮಸೇನಮಿದಂ ವಚಃ||
ನಿನಗೆ ಅಹಿತರಾಗಿದ್ದ ಕೆಲವರು ಕುಣಿದಾಡಿದರು. ಕೆಲವರು ಪರಿಹಾಸಮಾಡಿ ನಗುತ್ತಿದ್ದರು. ಆ ವೀರರು ಭೀಮಸೇನನ ಕುರಿತಾಗಿ ಈ ಮಾತುಗಳನ್ನಾಡುತ್ತಿದ್ದರು:
09060007a ದುಷ್ಕರಂ ಭವತಾ ಕರ್ಮ ರಣೇಽದ್ಯ ಸುಮಹತ್ಕೃತಂ|
09060007c ಕೌರವೇಂದ್ರಂ ರಣೇ ಹತ್ವಾ ಗದಯಾತಿಕೃತಶ್ರಮಂ||
“ಗದೆಯಲ್ಲಿ ಅತಿ ಪರಿಶ್ರಮಮಾಡಿರುವ ಕೌರವೇಂದ್ರನನ್ನು ಇಂದು ರಣದಲ್ಲಿ ಕೊಂದು ಮಹಾ ದುಷ್ಕರ ಕಾರ್ಯವನ್ನು ಎಸಗಿರುವೆ!
09060008a ಇಂದ್ರೇಣೇವ ಹಿ ವೃತ್ರಸ್ಯ ವಧಂ ಪರಮಸಂಯುಗೇ|
09060008c ತ್ವಯಾ ಕೃತಮಮನ್ಯಂತ ಶತ್ರೋರ್ವಧಮಿಮಂ ಜನಾಃ||
ಮಹಾಸಮರದಲ್ಲಿ ಇಂದ್ರನು ವೃತ್ರನ ವಧೆಗೈದಂತೆ ನೀನು ಶತ್ರುವಿನ ವಧೆಗೈದೆಯೆಂದು ಜನರು ಭಾವಿಸಿದ್ದಾರೆ.
09060009a ಚರಂತಂ ವಿವಿಧಾನ್ಮಾರ್ಗಾನ್ಮಂಡಲಾನಿ ಚ ಸರ್ವಶಃ|
09060009c ದುರ್ಯೋಧನಮಿಮಂ ಶೂರಂ ಕೋಽನ್ಯೋ ಹನ್ಯಾದ್ವೃಕೋದರಾತ್||
ವಿವಿಧ ಮಾರ್ಗಗಳಲ್ಲಿ ಮತ್ತು ಮಂಡಲಾಕಾರಗಳಲ್ಲಿ ಎಲ್ಲಕಡೆ ತಿರುಗುತ್ತಿದ್ದ ಈ ಶೂರ ದುರ್ಯೋಧನನನ್ನು ವೃಕೋದರನಲ್ಲದೆ ಬೇರೆ ಯಾರು ಸಂಹರಿಸಬಲ್ಲವರಾಗಿದ್ದರು?
09060010a ವೈರಸ್ಯ ಚ ಗತಃ ಪಾರಂ ತ್ವಮಿಹಾನ್ಯೈಃ ಸುದುರ್ಗಮಂ|
09060010c ಅಶಕ್ಯಮೇತದನ್ಯೇನ ಸಂಪಾದಯಿತುಮೀದೃಶಂ||
ಇತರರಿಗೆ ಸುದುರ್ಗಮವಾಗಿದ್ದ ಈ ವೈರವೆಂಬ ಸಮುದ್ರವನ್ನು ನೀನು ದಾಟಿರುವೆ! ಈ ರೀತಿಯ ವಿಜಯವನ್ನು ಸಂಪಾದಿಸಲು ಬೇರೆ ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.
09060011a ಕುಂಜರೇಣೇವ ಮತ್ತೇನ ವೀರ ಸಂಗ್ರಾಮಮೂರ್ಧನಿ|
09060011c ದುರ್ಯೋಧನಶಿರೋ ದಿಷ್ಟ್ಯಾ ಪಾದೇನ ಮೃದಿತಂ ತ್ವಯಾ||
ವೀರ! ಒಳ್ಳೆಯದಾಯಿತು! ಮದಿಸಿದ ಆನೆಯಂತೆ ನೀನು ಸಂಗ್ರಾಮದಲ್ಲಿ ದುರ್ಯೋಧನನ ತಲೆಯನ್ನು ನಿನ್ನ ಕಾಲಿನಿಂದ ಒದೆದು ತುಳಿದೆ!
09060012a ಸಿಂಹೇನ ಮಹಿಷಸ್ಯೇವ ಕೃತ್ವಾ ಸಂಗರಮದ್ಭುತಂ|
09060012c ದುಃಶಾಸನಸ್ಯ ರುಧಿರಂ ದಿಷ್ಟ್ಯಾ ಪೀತಂ ತ್ವಯಾನಘ||
ಅನಘ! ಒಳ್ಳೆಯದಾಯಿತು ನೀನು ಸಿಂಹವು ಎಮ್ಮೆಯ ರಕ್ತವನ್ನು ಹೀರಿ ಕುಡಿಯುವಂತೆ ಅದ್ಭುತವಾಗಿ ಯುದ್ಧಮಾಡಿ ದುಃಶಾಸನನ ರಕ್ತವನ್ನು ಕುಡಿದೆ!
09060013a ಯೇ ವಿಪ್ರಕುರ್ವನ್ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಂ|
09060013c ಮೂರ್ಧ್ನಿ ತೇಷಾಂ ಕೃತಃ ಪಾದೋ ದಿಷ್ಟ್ಯಾ ತೇ ಸ್ವೇನ ಕರ್ಮಣಾ||
ಒಳ್ಳೆಯದಾಯಿತು! ಧರ್ಮಾತ್ಮ ರಾಜಾ ಯುಧಿಷ್ಠಿರನ ಕುರಿತು ಅಪರಾಧವೆಸಗಿದವರ ತಲೆಯ ಮೇಲೆ ಸಾಹಸದಿಂದ ನಿನ್ನ ಕಾಲನ್ನು ಮೆಟ್ಟಿದೆ.
09060014a ಅಮಿತ್ರಾಣಾಮಧಿಷ್ಠಾನಾದ್ವಧಾದ್ದುರ್ಯೋಧನಸ್ಯ ಚ|
09060014c ಭೀಮ ದಿಷ್ಟ್ಯಾ ಪೃಥಿವ್ಯಾಂ ತೇ ಪ್ರಥಿತಂ ಸುಮಹದ್ಯಶಃ||
ಭೀಮ! ಒಳ್ಳೆಯದಾಯಿತು! ದುರ್ಯೋಧನನನ್ನು ವಧಿಸಿ ಶತ್ರುಗಳ ಮೇಲೆ ಅಧಿಕಾರವನ್ನು ಸ್ಥಾಪಿಸಿದ ನಿನ್ನ ಈ ಮಹಾ ಯಶಸ್ಸು ಭೂಮಿಯಲ್ಲಿಯೇ ಪ್ರಥಿತವಾಗಿರುತ್ತದೆ!
09060015a ಏವಂ ನೂನಂ ಹತೇ ವೃತ್ರೇ ಶಕ್ರಂ ನಂದಂತಿ ಬಂದಿನಃ|
09060015c ತಥಾ ತ್ವಾಂ ನಿಹತಾಮಿತ್ರಂ ವಯಂ ನಂದಾಮ ಭಾರತ||
ಭಾರತ! ವೃತ್ರನು ಹತನಾಗಲು ಶಕ್ರನನ್ನು ವಂದಿಮಾಗಧರು ಹೇಗೆ ಗೌರವಿಸಿ ಆನಂದಿಸಿದರೋ ಹಾಗೆ ಅಮಿತ್ರನನ್ನು ಸಂಹರಿಸಿದ ನಿನ್ನನ್ನು ನಾವು ಗೌರವಿಸಿ ಆನಂದಿಸುತ್ತಿದ್ದೇವೆ.
09060016a ದುರ್ಯೋಧನವಧೇ ಯಾನಿ ರೋಮಾಣಿ ಹೃಷಿತಾನಿ ನಃ|
09060016c ಅದ್ಯಾಪಿ ನ ವಿಹೃಷ್ಯಂತಿ ತಾನಿ ತದ್ವಿದ್ಧಿ ಭಾರತ||
09060016e ಇತ್ಯಬ್ರುವನ್ಭೀಮಸೇನಂ ವಾತಿಕಾಸ್ತತ್ರ ಸಂಗತಾಃ||
ಭಾರತ! ದುರ್ಯೋಧನನ ವಧೆಯ ಸಮಯದಲ್ಲಿ ಹರ್ಷಗೊಂಡು ನಿಮಿರಿ ನಿಂತಿದ್ದ ನಮ್ಮ ರೋಮಕೋಟಿಗಳು ಈಗಲೂ ಕೂಡ ಹರ್ಷಗೊಂಡು ಹಾಗೆಯೇ ನಿಂತಿವೆ ಎನ್ನುವುದನ್ನು ತಿಳಿ!” ಅಲ್ಲಿ ನೆರೆದಿದ್ದ ವೀರಯೋಧರು ಭೀಮಸೇನನನ್ನು ಈ ರೀತಿ ಹೇಳಿ ಪ್ರಶಂಸಿಸಿದರು.
09060017a ತಾನ್ ಹೃಷ್ಟಾನ್ಪುರುಷವ್ಯಾಘ್ರಾನ್ಪಾಂಚಾಲಾನ್ಪಾಂಡವೈಃ ಸಹ|
09060017c ಬ್ರುವತಃ ಸದೃಶಂ ತತ್ರ ಪ್ರೋವಾಚ ಮಧುಸೂದನಃ||
ಹಾಗೆ ಒಟ್ಟಾಗಿ ಹರ್ಷದಿಂದ ಹೇಳುತ್ತಿದ್ದ ಪಾಂಚಾಲ-ಪಾಂಡವ ಪುರುಷವ್ಯಾಘ್ರರಿಗೆ ಮಧುಸೂದನನು ಹೇಳಿದನು:
09060018a ನ ನ್ಯಾಯ್ಯಂ ನಿಹತಃ ಶತ್ರುರ್ಭೂಯೋ ಹಂತುಂ ಜನಾಧಿಪಾಃ|
09060018c ಅಸಕೃದ್ವಾಗ್ಭಿರುಗ್ರಾಭಿರ್ನಿಹತೋ ಹ್ಯೇಷ ಮಂದಧೀಃ||
“ಜನಾಧಿಪರೇ! ಹತನಾಗಿರುವ ಶತ್ರುವನ್ನು ಪುನಃ ಪುನಃ ಕಠೋರ ಮಾತುಗಳಿಂದ ಪೀಡಿಸುವುದು ಸರಿಯಲ್ಲ. ಈ ಮಂದಬುದ್ಧಿಯು ಈಗಾಗಲೇ ಹತನಾಗಿಹೋಗಿದ್ದಾನೆ!
09060019a ತದೈವೈಷ ಹತಃ ಪಾಪೋ ಯದೈವ ನಿರಪತ್ರಪಃ|
09060019c ಲುಬ್ಧಃ ಪಾಪಸಹಾಯಶ್ಚ ಸುಹೃದಾಂ ಶಾಸನಾತಿಗಃ||
ಎಂದು ಪಾಪಿಗಳ ಸಹಾಯದಿಂದ ಸುಹೃದಯರ ಆದೇಶಗಳನ್ನು ಮೀರಿದನೋ ಅಂದೇ ಈ ಪಾಪಿ ಲುಬ್ಧನು ಹತನಾದನು.
09060020a ಬಹುಶೋ ವಿದುರದ್ರೋಣಕೃಪಗಾಂಗೇಯಸೃಂಜಯೈಃ|
09060020c ಪಾಂಡುಭ್ಯಃ ಪ್ರೋಚ್ಯಮಾನೋಽಪಿ ಪಿತ್ರ್ಯಮಂಶಂ ನ ದತ್ತವಾನ್||
ವಿದುರ, ದ್ರೋಣ, ಕೃಪ, ಗಾಂಗೇಯ, ಮತ್ತು ಸೃಂಜಯರು ಎಷ್ಟೇ ಹೇಳಿದರೂ ಇವನು ಪಾಂಡವರಿಗೆ ಅವರ ಪಿತ್ರಾಂಶವನ್ನು ನೀಡಲಿಲ್ಲ!
09060021a ನೈಷ ಯೋಗ್ಯೋಽದ್ಯ ಮಿತ್ರಂ ವಾ ಶತ್ರುರ್ವಾ ಪುರುಷಾಧಮಃ|
09060021c ಕಿಮನೇನಾತಿನುನ್ನೇನ ವಾಗ್ಭಿಃ ಕಾಷ್ಠಸಧರ್ಮಣಾ||
ಈ ಪುರುಷಾಧಮನು ಈಗ ಯಾರ ಮಿತ್ರನಾಗಿರಲೂ ಶತ್ರುವಾಗಿರಲೂ ಯೋಗ್ಯನಾಗಿಲ್ಲ. ಕಟ್ಟಿಗೆಯಂತೆ ಬಿದ್ದಿರುವ ಇವನನ್ನು ಕಠೋರ ಮಾತುಗಳಿಂದ ಬಗ್ಗಿಸಲು ಪ್ರಯತ್ನಿಸಿದರೆ ಏನು ಪ್ರಯೋಜನ?
09060022a ರಥೇಷ್ವಾರೋಹತ ಕ್ಷಿಪ್ರಂ ಗಚ್ಚಾಮೋ ವಸುಧಾಧಿಪಾಃ|
09060022c ದಿಷ್ಟ್ಯಾ ಹತೋಽಯಂ ಪಾಪಾತ್ಮಾ ಸಾಮಾತ್ಯಜ್ಞಾತಿಬಾಂಧವಃ||
ವಸುಧಾಧಿಪರೇ! ಬೇಗ ರಥಗಳನ್ನೇರಿ! ಹೋಗೋಣ! ಒಳ್ಳೆಯದಾಯಿತು ಈ ಪಾಪಾತ್ಮನು ತನ್ನ ಅಮಾತ್ಯರು ಮತ್ತು ಬಂಧು-ಬಾಂಧವರೊಡನೆ ಹತನಾಗಿದ್ದಾನೆ!”
09060023a ಇತಿ ಶ್ರುತ್ವಾ ತ್ವಧಿಕ್ಷೇಪಂ ಕೃಷ್ಣಾದ್ದುರ್ಯೋಧನೋ ನೃಪಃ|
09060023c ಅಮರ್ಷವಶಮಾಪನ್ನ ಉದತಿಷ್ಠದ್ವಿಶಾಂ ಪತೇ||
ವಿಶಾಂಪತೇ! ಕೃಷ್ಣನ ಈ ನಿಂದನೆಯನ್ನು ಕೇಳಿ ನೃಪ ದುರ್ಯೋಧನನು ಕೋಪವನ್ನು ತಡೆದುಕೊಳ್ಳಲಾರದೇ ಎದ್ದು ಕುಳಿತನು.
09060024a ಸ್ಫಿಗ್ದೇಶೇನೋಪವಿಷ್ಟಃ ಸ ದೋರ್ಭ್ಯಾಂ ವಿಷ್ಟಭ್ಯ ಮೇದಿನೀಂ|
09060024c ದೃಷ್ಟಿಂ ಭ್ರೂಸಂಕಟಾಂ ಕೃತ್ವಾ ವಾಸುದೇವೇ ನ್ಯಪಾತಯತ್||
ಅವನು ಎರಡು ಕೈಗಳನ್ನೂ ನೆಲಕ್ಕೆ ಊರಿಕೊಂಡು ಮೇಲೆದ್ದು ಪೃಷ್ಠವನ್ನು ಊರಿ ಕುಳಿತು, ಹುಬ್ಬನ್ನು ಗಂಟಿಕ್ಕಿ ಕೃಷ್ಣನನ್ನು ದುರುಗುಟ್ಟಿ ನೋಡಿದನು.
09060025a ಅರ್ಧೋನ್ನತಶರೀರಸ್ಯ ರೂಪಮಾಸೀನ್ನೃಪಸ್ಯ ತತ್|
09060025c ಕ್ರುದ್ಧಸ್ಯಾಶೀವಿಷಸ್ಯೇವ ಚ್ಚಿನ್ನಪುಚ್ಚಸ್ಯ ಭಾರತ||
ಭಾರತ! ಶರೀರದ ಅರ್ಧಭಾಗವು ಮಾತ್ರ ಮೇಲೆ ಎದ್ದಿದ್ದ ಅವನ ರೂಪವು ಬಾಲವನ್ನು ಕತ್ತರಿಸಿಕೊಂಡು ಕೃದ್ಧನಾಗಿ ಹೆಡೆಯಿತ್ತಿದ ವಿಷಸರ್ಪದಂತೆ ಕಾಣುತ್ತಿತ್ತು.
09060026a ಪ್ರಾಣಾಂತಕರಣೀಂ ಘೋರಾಂ ವೇದನಾಮವಿಚಿಂತಯನ್|
09060026c ದುರ್ಯೋಧನೋ ವಾಸುದೇವಂ ವಾಗ್ಭಿರುಗ್ರಾಭಿರಾರ್ದಯತ್||
ಆಗ ತನಗಾಗುತ್ತಿದ್ದ ಪ್ರಾಣಾಂತಕ ಘೋರ ವೇದನೆಯನ್ನೂ ಲೆಕ್ಕಿಸದೇ ದುರ್ಯೋಧನನು ವಾಸುದೇವನನ್ನು ಕಠೋರ ಮಾತುಗಳಿಂದ ನಿಂದಿಸಿದನು:
09060027a ಕಂಸದಾಸಸ್ಯ ದಾಯಾದ ನ ತೇ ಲಜ್ಜಾಸ್ತ್ಯನೇನ ವೈ|
09060027c ಅಧರ್ಮೇಣ ಗದಾಯುದ್ಧೇ ಯದಹಂ ವಿನಿಪಾತಿತಃ||
“ಕಂಸನ ದಾಸನ ಮಗನೇ! ಗದಾಯುದ್ಧದಲ್ಲಿ ಅಧರ್ಮಪೂರ್ವಕವಾಗಿ ನನ್ನನ್ನು ಕೆಳಗುರುಳಿಸಿದುದರಿಂದ ನಿನಗೆ ಸ್ವಲ್ಪವೂ ನಾಚಿಕೆಯಾಗುತ್ತಿಲ್ಲವೇ?
09060028a ಊರೂ ಭಿಂಧೀತಿ ಭೀಮಸ್ಯ ಸ್ಮೃತಿಂ ಮಿಥ್ಯಾ ಪ್ರಯಚ್ಚತಾ|
09060028c ಕಿಂ ನ ವಿಜ್ಞಾತಮೇತನ್ಮೇ ಯದರ್ಜುನಮವೋಚಥಾಃ||
ತೊಡೆಯನ್ನು ಮುರಿಯುವಂತೆ ಮೋಸದಿಂದ ಭೀಮನಿಗೆ ನೆನಪು ಮಾಡುವಾಗ ನೀನು ಅರ್ಜುನನೊಡನೆ ಏನು ಹೇಳಿದೆಯೆಂಬುದು ನನಗೆ ತಿಳಿದಿದೆ.
09060029a ಘಾತಯಿತ್ವಾ ಮಹೀಪಾಲಾನೃಜುಯುದ್ಧಾನ್ಸಹಸ್ರಶಃ|
09060029c ಜಿಹ್ಮೈರುಪಾಯೈರ್ಬಹುಭಿರ್ನ ತೇ ಲಜ್ಜಾ ನ ತೇ ಘೃಣಾ||
ಸತ್ಯದಿಂದ ಯುದ್ಧಮಾಡುತ್ತಿದ್ದ ಸಹಸ್ರಾರು ಮಹೀಪಾಲರನ್ನು ಅನೇಕ ಕುಟಿಲೋಪಾಯಗಳ ಮೂಲಕ ಸಂಹಾರ ಮಾಡಿಸಿರುವ ನಿನಗೆ ಲಜ್ಜೆಯೂ ಇಲ್ಲ, ಕರುಣೆಯೂ ಇಲ್ಲ.
09060030a ಅಹನ್ಯಹನಿ ಶೂರಾಣಾಂ ಕುರ್ವಾಣಃ ಕದನಂ ಮಹತ್|
09060030c ಶಿಖಂಡಿನಂ ಪುರಸ್ಕೃತ್ಯ ಘಾತಿತಸ್ತೇ ಪಿತಾಮಹಃ||
ಶಿಂಖಂಡಿಯನ್ನು ಎದುರಿಗೆ ತಂದು, ಅನುದಿನವೂ ಮಹಾ ಶೂರರೊಡನೆ ಮಹಾ ಯುದ್ಧವನ್ನು ಮಾಡುತ್ತಿದ್ದ ಪಿತಾಮಹನನ್ನು ಸಂಹರಿಸಿದೆ!
09060031a ಅಶ್ವತ್ಥಾಮ್ನಃ ಸನಾಮಾನಂ ಹತ್ವಾ ನಾಗಂ ಸುದುರ್ಮತೇ|
09060031c ಆಚಾರ್ಯೋ ನ್ಯಾಸಿತಃ ಶಸ್ತ್ರಂ ಕಿಂ ತನ್ನ ವಿದಿತಂ ಮಮ||
ದುರ್ಬುದ್ಧಿಯೇ! ಅಶ್ವತ್ಥಾಮವೆಂಬ ಆನೆಯನ್ನು ಕೊಂದು ಅಶ್ವತ್ಥಾಮನೇ ಸತ್ತನೆಂದು ಹೇಳಿ ಆಚಾರ್ಯನಿಂದ ಶಸ್ತ್ರತ್ಯಾಗಮಾಡಿಸಿದುದು ನನಗೆ ತಿಳಿದಿಲ್ಲವೇ?
09060032a ಸ ಚಾನೇನ ನೃಶಂಸೇನ ಧೃಷ್ಟದ್ಯುಮ್ನೇನ ವೀರ್ಯವಾನ್|
09060032c ಪಾತ್ಯಮಾನಸ್ತ್ವಯಾ ದೃಷ್ಟೋ ನ ಚೈನಂ ತ್ವಮವಾರಯಃ||
ಅಂತಹ ವೀರ್ಯವಾನನನ್ನು ಕ್ರೂರಿ ಧೃಷ್ಟದ್ಯುಮ್ನನು ಕೊಂದುದನ್ನು ನೀನು ನೋಡಿದರೂ ಅದನ್ನು ನೀನು ತಡೆಯಲಿಲ್ಲ!
09060033a ವಧಾರ್ಥಂ ಪಾಂಡುಪುತ್ರಸ್ಯ ಯಾಚಿತಾಂ ಶಕ್ತಿಮೇವ ಚ|
09060033c ಘಟೋತ್ಕಚೇ ವ್ಯಂಸಯಥಾಃ ಕಸ್ತ್ವತ್ತಃ ಪಾಪಕೃತ್ತಮಃ||
ಪಾಂಡುಪುತ್ರ ಅರ್ಜುನನ ವಧೆಗೆಂದು ಪಡೆದಿದ್ದ ಶಕ್ತಿಯನ್ನು ಘಟೋತ್ಕಚನ ವಧೆಗೆ ಬಳಸುವಂತೆ ನೀನು ಕುತ್ರಂತ್ರವನ್ನು ಮಾಡಿದೆ. ನಿನಗಿಂತ ಪಾಪಿಗಳು ಇನ್ನ್ಯಾರಿದ್ದಾರೆ?
09060034a ಚಿನ್ನಬಾಹುಃ ಪ್ರಾಯಗತಸ್ತಥಾ ಭೂರಿಶ್ರವಾ ಬಲೀ|
09060034c ತ್ವಯಾ ನಿಸೃಷ್ಟೇನ ಹತಃ ಶೈನೇಯೇನ ದುರಾತ್ಮನಾ||
ಬಾಹುವು ತುಂಡಾಗಿ ಪ್ರಾಯೋಪವೇಶಮಾಡಿದ್ದ ಬಲಶಾಲೀ ಭೂರಿಶ್ರವನನ್ನು ನಿನ್ನದೇ ಸೂಚನೆಯಂತೆ ದುರಾತ್ಮ ಶೈನೇಯನು ಸಂಹರಿಸಿದನು!
09060035a ಕುರ್ವಾಣಶ್ಚೋತ್ತಮಂ ಕರ್ಮ ಕರ್ಣಃ ಪಾರ್ಥಜಿಗೀಷಯಾ|
09060035c ವ್ಯಂಸನೇನಾಶ್ವಸೇನಸ್ಯ ಪನ್ನಗೇಂದ್ರಸುತಸ್ಯ ವೈ||
ಕರ್ಣನು ಪಾರ್ಥನ ಸಂಹಾರವೆಂಬ ಉತ್ತಮ ಕರ್ಮವನ್ನು ಮಾಡಹೊರಟಿದ್ದಾಗ ನೀನು ಪನ್ನಗೇಂದ್ರನ ಮಗ ಅಶ್ವಸೇನನನ್ನು ಮೋಸದಿಂದ ತಡೆದೆ!
09060036a ಪುನಶ್ಚ ಪತಿತೇ ಚಕ್ರೇ ವ್ಯಸನಾರ್ತಃ ಪರಾಜಿತಃ|
09060036c ಪಾತಿತಃ ಸಮರೇ ಕರ್ಣಶ್ಚಕ್ರವ್ಯಗ್ರೋಽಗ್ರಣೀರ್ನೃಣಾಂ||
ಮತ್ತೆ ನರಾಗ್ರ ಕರ್ಣನು ಸಮರದಲ್ಲಿ ಹುಗಿದುಹೋಗಿದ್ದ ರಥಚಕ್ರವನ್ನು ಮೇಲೆತ್ತಲು ಪ್ರಯತ್ನಿಸುತ್ತಾ ಸಂದಿಗ್ಧ ಸಮಯದಲ್ಲಿದ್ದಾಗ ನೀನು ಅವನನ್ನು ಕೊಲ್ಲಿಸಿದೆ!
09060037a ಯದಿ ಮಾಂ ಚಾಪಿ ಕರ್ಣಂ ಚ ಭೀಷ್ಮದ್ರೋಣೌ ಚ ಸಂಯುಗೇ|
09060037c ಋಜುನಾ ಪ್ರತಿಯುಧ್ಯೇಥಾ ನ ತೇ ಸ್ಯಾದ್ವಿಜಯೋ ಧ್ರುವಂ||
ಒಂದು ವೇಳೆ ನೀನು ನನ್ನೊಡನೆ, ಕರ್ಣನೊಡನೆ ಅಥವಾ ಭೀಷ್ಮ-ದ್ರೋಣರೊಡನೆ ಸಮರದಲ್ಲಿ ನಿಜವಾದ ಯುದ್ಧವನ್ನೇ ಮಾಡಿದ್ದಿದ್ದರೆ ವಿಜಯವು ಖಂಡಿತವಾಗಿಯೂ ನಿನ್ನದಾಗುತ್ತಿರಲಿಲ್ಲ!
09060038a ತ್ವಯಾ ಪುನರನಾರ್ಯೇಣ ಜಿಹ್ಮಮಾರ್ಗೇಣ ಪಾರ್ಥಿವಾಃ|
09060038c ಸ್ವಧರ್ಮಮನುತಿಷ್ಠಂತೋ ವಯಂ ಚಾನ್ಯೇ ಚ ಘಾತಿತಾಃ||
ಪುನಃ ಸ್ವಧರ್ಮದಲ್ಲಿ ನಿರತರಾಗಿದ್ದ ನಮ್ಮವರಾದ ಇತರ ಪಾರ್ಥಿವರನ್ನೂ ನೀನು ಅನಾರ್ಯ ಕುಟಿಲಮಾರ್ಗಗಳನ್ನು ಬಳಸಿ ಸಂಹರಿಸಿದೆ!”
09060039 ವಾಸುದೇವ ಉವಾಚ
09060039a ಹತಸ್ತ್ವಮಸಿ ಗಾಂಧಾರೇ ಸಭ್ರಾತೃಸುತಬಾಂಧವಃ|
09060039c ಸಗಣಃ ಸಸುಹೃಚ್ಚೈವ ಪಾಪಮಾರ್ಗಮನುಷ್ಠಿತಃ||
ವಾಸುದೇವನು ಹೇಳಿದನು: “ಗಾಂಧಾರೇ! ಪಾಪಮಾರ್ಗಗಳಲ್ಲಿ ನಡೆಯುತ್ತಿದ್ದ ನೀನು ಸಹೋದರರು, ಮಕ್ಕಳು, ಬಾಂಧವರು ಮತ್ತು ಸ್ನೇಹಿತ ಗಣಗಳೊಂದಿಗೆ ಹತನಾಗಿದ್ದೀಯೆ!
09060040a ತವೈವ ದುಷ್ಕೃತೈರ್ವೀರೌ ಭೀಷ್ಮದ್ರೋಣೌ ನಿಪಾತಿತೌ|
09060040c ಕರ್ಣಶ್ಚ ನಿಹತಃ ಸಂಖ್ಯೇ ತವ ಶೀಲಾನುವರ್ತಕಃ||
ನಿನ್ನ ದುಷ್ಕೃತಗಳಿಂದಾಗಿಯೇ ಭೀಷ್ಮ-ದ್ರೋಣರೂ ಹತರಾದರು. ನಿನ್ನ ನಡತೆಯನ್ನೇ ಅನುಸರಿಸಿದ ಕರ್ಣನೂ ಕೂಡ ಯುದ್ಧದಲ್ಲಿ ಹತನಾದನು.
09060041a ಯಾಚ್ಯಮಾನೋ ಮಯಾ ಮೂಢ ಪಿತ್ರ್ಯಮಂಶಂ ನ ದಿತ್ಸಸಿ|
09060041c ಪಾಂಡವೇಭ್ಯಃ ಸ್ವರಾಜ್ಯಾರ್ಧಂ ಲೋಭಾಚ್ಚಕುನಿನಿಶ್ಚಯಾತ್||
ಮೂಢ! ಲೋಭದಿಂದ ಮತ್ತು ಶಕುನಿಯ ನಿಶ್ಚಯದಂತೆ ನೀನು ಪಾಂಡವರ ಪಿತ್ರಾರ್ಜಿತ ಅರ್ಧರಾಜ್ಯವನ್ನು ಅವರಿಗೆ ಕೊಡು ಎಂದು ಬೇಡಿಕೊಂಡರೂ ಕೊಡಲಿಲ್ಲ.
09060042a ವಿಷಂ ತೇ ಭೀಮಸೇನಾಯ ದತ್ತಂ ಸರ್ವೇ ಚ ಪಾಂಡವಾಃ|
09060042c ಪ್ರದೀಪಿತಾ ಜತುಗೃಹೇ ಮಾತ್ರಾ ಸಹ ಸುದುರ್ಮತೇ||
ದುರ್ಬುದ್ಧೇ! ನೀನು ಭೀಮಸೇನನಿಗೆ ವಿಷವನ್ನುಣಿಸಿದೆ. ಪಾಂಡವರೆಲ್ಲರನ್ನೂ ಅವರ ತಾಯಿಯೊಂದಿಗೆ ಜತುಗೃಹದಲ್ಲಿ ಸುಡಲು ಪ್ರಯತ್ನಿಸಿದೆ.
09060043a ಸಭಾಯಾಂ ಯಾಜ್ಞಸೇನೀ ಚ ಕೃಷ್ಟಾ ದ್ಯೂತೇ ರಜಸ್ವಲಾ|
09060043c ತದೈವ ತಾವದ್ದುಷ್ಟಾತ್ಮನ್ ವಧ್ಯಸ್ತ್ವಂ ನಿರಪತ್ರಪಃ||
ದುಷ್ಟಾತ್ಮ! ರಜಸ್ವಲೆ ಯಾಜ್ಞಸೇನಿಯನ್ನು ದ್ಯೂತದ ಸಭೆಗೆ ಎಳೆದುತಂದ ಅಪರಾಧಕ್ಕಾಗಿ ನಿನ್ನನ್ನು ಅಂದೇ ಸಂಹರಿಸಬೇಕಿತ್ತು!
09060044a ಅನಕ್ಷಜ್ಞಂ ಚ ಧರ್ಮಜ್ಞಂ ಸೌಬಲೇನಾಕ್ಷವೇದಿನಾ|
09060044c ನಿಕೃತ್ಯಾ ಯತ್ಪರಾಜೈಷೀಸ್ತಸ್ಮಾದಸಿ ಹತೋ ರಣೇ||
ಜೂಜನ್ನು ಅರಿತಿರದ ಧರ್ಮಜ್ಞನನ್ನು ಅಕ್ಷವಿದ್ಯೆಯನ್ನು ಚೆನ್ನಾಗಿ ತಿಳಿದಿದ್ದ ಸೌಬಲನ ಮೂಲಕ ಮೋಸದಿಂದ ಜಯಿಸಿದ ಕಾರಣ ನೀನಿಂದು ರಣದಲ್ಲಿ ಹತನಾಗಿದ್ದೀಯೆ!
09060045a ಜಯದ್ರಥೇನ ಪಾಪೇನ ಯತ್ ಕೃಷ್ಣಾ ಕ್ಲೇಶಿತಾ ವನೇ|
09060045c ಯಾತೇಷು ಮೃಗಯಾಂ ತೇಷು ತೃಣಬಿಂದೋರಥಾಶ್ರಮೇ||
09060046a ಅಭಿಮನ್ಯುಶ್ಚ ಯದ್ಬಾಲ ಏಕೋ ಬಹುಭಿರಾಹವೇ|
09060046c ತ್ವದ್ದೋಷೈರ್ನಿಹತಃ ಪಾಪ ತಸ್ಮಾದಸಿ ಹತೋ ರಣೇ||
ವನದಲ್ಲಿ ಪಾಂಡವರು ಬೇಟೆಗೆಂದು ಹೋಗಿದ್ದಾಗ ತೃಣಬಿಂದುವಿನ ಆಶ್ರಮದಲ್ಲಿ ಪಾಪಿ ಜಯದ್ರಥನ ಮೂಲಕ ಕೃಷ್ಣೆಯನ್ನು ಪೀಡಿಸಿದುದು ಮತ್ತು ಬಾಲಕ ಅಭಿಮನ್ಯು ಒಬ್ಬನನ್ನೇ ಅನೇಕರು ಯುದ್ಧದಲ್ಲಿ ಸಂಹರಿಸಿದುದು – ಈ ದೋಷ ಪಾಪಗಳಿಂದಾಗಿ ನೀನು ಇಂದು ರಣದಲ್ಲಿ ಹತನಾಗಿದ್ದೀಯೆ!”
09060047 ದುರ್ಯೋಧನ ಉವಾಚ
09060047a ಅಧೀತಂ ವಿಧಿವದ್ದತ್ತಂ ಭೂಃ ಪ್ರಶಾಸ್ತಾ ಸಸಾಗರಾ|
09060047c ಮೂರ್ಧ್ನಿ ಸ್ಥಿತಮಮಿತ್ರಾಣಾಂ ಕೋ ನು ಸ್ವಂತತರೋ ಮಯಾ||
ದುರ್ಯೋಧನನು ಹೇಳಿದನು: “ಕಲಿತಿದ್ದೇನೆ! ವಿಧಿವತ್ತಾಗಿ ದಾನಗಳನ್ನಿತ್ತಿದ್ದೇನೆ! ಶತ್ರುಗಳ ತಲೆಯನ್ನು ಮೆಟ್ಟಿ ಸಾಗರಪರ್ಯಂತವಾದ ಭೂಮಿಯನ್ನು ಆಳಿದ್ದೇನೆ! ಇವೆಲ್ಲವನ್ನೂ ನನಗಿಂತಲೂ ಹೆಚ್ಚು ಮಾಡಿದವರು ಯಾರಿದ್ದಾರೆ?
09060048a ಯದಿಷ್ಟಂ ಕ್ಷತ್ರಬಂಧೂನಾಂ ಸ್ವಧರ್ಮಮನುಪಶ್ಯತಾಂ|
09060048c ತದಿದಂ ನಿಧನಂ ಪ್ರಾಪ್ತಂ ಕೋ ನು ಸ್ವಂತತರೋ ಮಯಾ||
ಸ್ವಧರ್ಮದಲ್ಲಿಯೇ ದೃಷ್ಟಿಯಿಟ್ಟುಕೊಂಡಿರುವ ಕ್ಷತ್ರಬಂಧುಗಳಿಗೆ ಇಷ್ಟವಾದ ನಿಧನವು ನನಗೆ ಪ್ರಾಪ್ತವಾಗಿದೆ. ಇದಕ್ಕಿಂತಲೂ ಹೆಚ್ಚಿನದು ಯಾರಿಗೆ ದೊರಕಿದೆ?
09060049a ದೇವಾರ್ಹಾ ಮಾನುಷಾ ಭೋಗಾಃ ಪ್ರಾಪ್ತಾ ಅಸುಲಭಾ ನೃಪೈಃ|
09060049c ಐಶ್ವರ್ಯಂ ಚೋತ್ತಮಂ ಪ್ರಾಪ್ತಂ ಕೋ ನು ಸ್ವಂತತರೋ ಮಯಾ||
ನೃಪರಿಗೆ ಸುಲಭವಲ್ಲದ ದೇವತೆಗಳಿಗೆ ತಕ್ಕುದಾದ ಮನುಷ್ಯ ಭೋಗಗಳನ್ನು ನಾನು ಅನುಭವಿಸಿದ್ದೇನೆ. ಉತ್ತಮ ಐಶ್ವರ್ಯವನ್ನು ಪಡೆದುಕೊಂಡೆ. ಇವುಗಳನ್ನು ನನಗಿಂತಲೂ ಹೆಚ್ಚು ಪಡೆದಿರುವವರು ಯಾರಿದ್ದಾರೆ?
09060050a ಸಸುಹೃತ್ಸಾನುಬಂಧಶ್ಚ ಸ್ವರ್ಗಂ ಗಂತಾಹಮಚ್ಯುತ|
09060050c ಯೂಯಂ ವಿಹತಸಂಕಲ್ಪಾಃ ಶೋಚಂತೋ ವರ್ತಯಿಷ್ಯಥ||
ಅಚ್ಯುತ! ಸುಹೃದಯರೊಡನೆ ಮತ್ತು ಅನುಯಾಯಿಗಳೊಡನೆ ನಾನು ಸ್ವರ್ಗಕ್ಕೆ ಹೋಗುತ್ತಿದ್ದೇನೆ. ನೀವುಗಳು ಸಂಕಲ್ಪಗಳಿಲ್ಲದೇ ಶೋಕಿಸುತ್ತಾ ಜೀವಿಸುವಿರಿ!””
09060051 ಸಂಜಯ ಉವಾಚ
09060051a ಅಸ್ಯ ವಾಕ್ಯಸ್ಯ ನಿಧನೇ ಕುರುರಾಜಸ್ಯ ಭಾರತ|
09060051c ಅಪತತ್ಸುಮಹದ್ವರ್ಷಂ ಪುಷ್ಪಾಣಾಂ ಪುಣ್ಯಗಂಧಿನಾಂ||
ಸಂಜಯನು ಹೇಳಿದನು: “ಭಾರತ! ಕುರುರಾಜನ ಈ ಮಾತುಗಳನ್ನು ಮುಗಿಸುತ್ತಿದ್ದಂತೆಯೇ ಪುಣ್ಯ ಸುಗಂಧಯುಕ್ತ ಪುಷ್ಪಗಳ ಮಹಾವೃಷ್ಟಿಯಾಯಿತು.
09060052a ಅವಾದಯಂತ ಗಂಧರ್ವಾ ಜಗುಶ್ಚಾಪ್ಸರಸಾಂ ಗಣಾಃ|
09060052c ಸಿದ್ಧಾಶ್ಚ ಮುಮುಚುರ್ವಾಚಃ ಸಾಧು ಸಾಧ್ವಿತಿ ಭಾರತ||
ಭಾರತ! ಗಂಧರ್ವರು ವಾದ್ಯಗಳನ್ನು ನುಡಿಸಿದರು ಮತ್ತು ಅಪ್ಸರಗಣಗಳು ಹಾಡಿದರು. ಸಿದ್ಧರು ಪುನಃ ಪುನಃ “ಸಾಧು! ಸಾಧು!” ಎಂದು ಉದ್ಗರಿಸಿದರು.
09060053a ವವೌ ಚ ಸುರಭಿರ್ವಾಯುಃ ಪುಣ್ಯಗಂಧೋ ಮೃದುಃ ಸುಖಃ|
09060053c ವ್ಯರಾಜತಾಮಲಂ ಚೈವ ನಭೋ ವೈಡೂರ್ಯಸಂನಿಭಂ||
ಪುಣ್ಯಗಂಧಯುಕ್ತವಾದ, ಮೃದುವಾದ, ಸುಖಕರವಾದ ಮಂದವಾಯುವು ಬೀಸಿತು. ದಿಕ್ಕುಗಳು ಪ್ರಕಾಶಗೊಂಡವು. ಆಕಾಶವು ವೈಡೂರ್ಯದಂತೆ ಹೊಳೆಯಿತು.
09060054a ಅತ್ಯದ್ಭುತಾನಿ ತೇ ದೃಷ್ಟ್ವಾ ವಾಸುದೇವಪುರೋಗಮಾಃ|
09060054c ದುರ್ಯೋಧನಸ್ಯ ಪೂಜಾಂ ಚ ದೃಷ್ಟ್ವಾ ವ್ರೀಡಾಮುಪಾಗಮನ್||
ದುರ್ಯೋಧನನನ್ನು ಗೌರವಿಸುವಂತಹ ಈ ಅದ್ಭುತಗಳನ್ನು ನೋಡಿ ವಾಸುದೇವ ಪುರಃಸರರಾದ ಅವರು ಅತ್ಯಂತ ಲಜ್ಜಿತರಾದಿರು.
09060055a ಹತಾಂಶ್ಚಾಧರ್ಮತಃ ಶ್ರುತ್ವಾ ಶೋಕಾರ್ತಾಃ ಶುಶುಚುರ್ಹಿ ತೇ|
09060055c ಭೀಷ್ಮಂ ದ್ರೋಣಂ ತಥಾ ಕರ್ಣಂ ಭೂರಿಶ್ರವಸಮೇವ ಚ||
ಭೀಷ್ಮ, ದ್ರೋಣ, ಕರ್ಣ ಮತ್ತು ಭೂರಿಶ್ರವಸರು ಅಧರ್ಮದಿಂದ ಹತರಾದುದನ್ನು ಕೇಳಿ ಶೋಕಾರ್ತರಾಗಿ ದುಃಖಿಸಿದರು.
09060056a ತಾಂಸ್ತು ಚಿಂತಾಪರಾನ್ದೃಷ್ಟ್ವಾ ಪಾಂಡವಾನ್ದೀನಚೇತಸಃ|
09060056c ಪ್ರೋವಾಚೇದಂ ವಚಃ ಕೃಷ್ಣೋ ಮೇಘದುಂದುಭಿನಿಸ್ವನಃ||
ದೀನಚೇತಸ ಪಾಂಡವರು ಅಪಾರ ಚಿಂತೆಯಲ್ಲಿರುವುದನ್ನು ಕಂಡ ಕೃಷ್ಣನು ಮೋಡಗಳ ಗುಡುಗಿನಂತಹ ಧ್ವನಿಯಲ್ಲಿ ಈ ಮಾತುಗಳನ್ನಾಡಿದನು:
09060057a ನೈಷ ಶಕ್ಯೋಽತಿಶೀಘ್ರಾಸ್ತ್ರಸ್ತೇ ಚ ಸರ್ವೇ ಮಹಾರಥಾಃ|
09060057c ಋಜುಯುದ್ಧೇನ ವಿಕ್ರಾಂತಾ ಹಂತುಂ ಯುಷ್ಮಾಭಿರಾಹವೇ||
“ಅತಿ ಶೀಘ್ರವಾಗಿ ಅಸ್ತ್ರಗಳನ್ನು ಪ್ರಯೋಗಿಸಬಲ್ಲ ಈ ಎಲ್ಲ ಮಹಾರಥ ವಿಕ್ರಾಂತರನ್ನೂ ನ್ಯಾಯಯುದ್ಧದಲ್ಲಿ ನೀವು ಸಂಹರಿಸಲು ಶಕ್ಯರಾಗಿರಲಿಲ್ಲ.
09060058a ಉಪಾಯಾ ವಿಹಿತಾ ಹ್ಯೇತೇ ಮಯಾ ತಸ್ಮಾನ್ನರಾಧಿಪಾಃ|
09060058c ಅನ್ಯಥಾ ಪಾಂಡವೇಯಾನಾಂ ನಾಭವಿಷ್ಯಜ್ಜಯಃ ಕ್ವ ಚಿತ್||
ಆದುದರಿಂದ ನರಾಧಿಪರೇ! ನಾನು ಉಪಾಯಗಳನ್ನು ಬಳಸಿದುದರಿಂದ ಅವರು ಹತರಾದರು. ಅನ್ಯಥಾ ಪಾಂಡವರಿಗೆ ಜಯವು ಎಂದೂ ದೊರೆಯುತ್ತಿರಲಿಲ್ಲ!
09060059a ತೇ ಹಿ ಸರ್ವೇ ಮಹಾತ್ಮಾನಶ್ಚತ್ವಾರೋಽತಿರಥಾ ಭುವಿ|
09060059c ನ ಶಕ್ಯಾ ಧರ್ಮತೋ ಹಂತುಂ ಲೋಕಪಾಲೈರಪಿ ಸ್ವಯಂ||
ಆ ಎಲ್ಲ ನಾಲ್ವರು ಮಹಾತ್ಮರೂ ಭೂಮಿಯಲ್ಲಿ ಅತಿರಥರಾಗಿದ್ದರು. ಧರ್ಮಪೂರ್ವಕವಾಗಿ ಅವರನ್ನು ಸಂಹರಿಸಿಸಲು ಸ್ವಯಂ ಲೋಕಪಾಲರಿಗೂ ಶಕ್ಯವಿರಲಿಲ್ಲ.
09060060a ತಥೈವಾಯಂ ಗದಾಪಾಣಿರ್ಧಾರ್ತರಾಷ್ಟ್ರೋ ಗತಕ್ಲಮಃ|
09060060c ನ ಶಕ್ಯೋ ಧರ್ಮತೋ ಹಂತುಂ ಕಾಲೇನಾಪೀಹ ದಂಡಿನಾ||
ಹಾಗೆಯೇ ಯುದ್ಧದಲ್ಲಿ ಶ್ರಮವನ್ನೇ ಕಾಣದ ಗದಾಪಾಣಿ ಧಾರ್ತರಾಷ್ಟ್ರನನ್ನು ಧರ್ಮಪೂರ್ವಕ ಸಂಹರಿಸಲು ದಂಡಾಪಾಣಿ ಕಾಲನಿಗೂ ಶಕ್ಯವಿಲ್ಲವಾಗಿತ್ತು.
09060061a ನ ಚ ವೋ ಹೃದಿ ಕರ್ತವ್ಯಂ ಯದಯಂ ಘಾತಿತೋ ನೃಪಃ|
09060061c ಮಿಥ್ಯಾವಧ್ಯಾಸ್ತಥೋಪಾಯೈರ್ಬಹವಃ ಶತ್ರವೋಽಧಿಕಾಃ||
ನೃಪ! ಈ ರೀತಿಯಾಗಿ ಸಂಹರಿಸಿದೆವೆಂದು ನೀನು ನೊಂದುಕೊಳ್ಳಬಾರದು. ಅಧಿಕ ಬಲಶಾಲೀ ಶತ್ರುಗಳನ್ನು ಅನೇಕ ಮಿಥ್ಯೋಪಾಯಗಳಿಂದ ವಧಿಸಬೇಕಾಗುತ್ತದೆ.
09060062a ಪೂರ್ವೈರನುಗತೋ ಮಾರ್ಗೋ ದೇವೈರಸುರಘಾತಿಭಿಃ|
09060062c ಸದ್ಭಿಶ್ಚಾನುಗತಃ ಪಂಥಾಃ ಸ ಸರ್ವೈರನುಗಮ್ಯತೇ||
ಹಿಂದೆ ಅಸುರಘಾತಿ ದೇವತೆಗಳೂ ಕೂಡ ಇದೇ ಮಾರ್ಗವನ್ನು ಅನುಸರಿಸಿದ್ದರು. ಸಾಧುಗಳೆಲ್ಲರೂ ಇದೇ ಮಾರ್ಗವನ್ನು ಅನುಸರಿಸುತ್ತಾರೆ.
09060063a ಕೃತಕೃತ್ಯಾಃ ಸ್ಮ ಸಾಯಾಹ್ನೇ ನಿವಾಸಂ ರೋಚಯಾಮಹೇ|
09060063c ಸಾಶ್ವನಾಗರಥಾಃ ಸರ್ವೇ ವಿಶ್ರಮಾಮೋ ನರಾಧಿಪಾಃ||
ಕೃತಕೃತ್ಯರಾಗಿದ್ದೇವೆ. ಸಾಯಂಕಾಲವೂ ಆಗಿದೆ. ನಾವೆಲ್ಲರೂ ನಮ್ಮ ನಮ್ಮ ನಿವಾಸಗಳಿಗೆ ತೆರಳಲು ಬಯಸುತ್ತಿದ್ದೇವೆ. ನರಾಧಿಪರೇ! ಕುದುರೆ-ಆನೆ-ರಥಗಳೊಂದಿಗೆ ಎಲ್ಲರೂ ವಿಶ್ರಮಿಸೋಣ!”
09060064a ವಾಸುದೇವವಚಃ ಶ್ರುತ್ವಾ ತದಾನೀಂ ಪಾಂಡವೈಃ ಸಹ|
09060064c ಪಾಂಚಾಲಾ ಭೃಶಸಂಹೃಷ್ಟಾ ವಿನೇದುಃ ಸಿಂಹಸಂಘವತ್||
ವಾಸುದೇವನ ಮಾತನ್ನು ಕೇಳಿ ತುಂಬಾ ಹರ್ಷಿತರಾಗಿ ಪಾಂಡವರೊಂದಿಗೆ ಪಾಂಚಾಲರು ಸಿಂಹಗಳ ಹಿಂದಿನಂತೆ ಗರ್ಜಿಸಿದರು.
09060065a ತತಃ ಪ್ರಾಧ್ಮಾಪಯನ್ ಶಂಖಾನ್ಪಾಂಚಜನ್ಯಂ ಚ ಮಾಧವಃ|
09060065c ಹೃಷ್ಟಾ ದುರ್ಯೋಧನಂ ದೃಷ್ಟ್ವಾ ನಿಹತಂ ಪುರುಷರ್ಷಭಾಃ||
ದುರ್ಯೋಧನನು ಹತನಾದುದನ್ನು ನೋಡಿ ಹರ್ಷಗೊಂಡ ಆ ಪುರುಷರ್ಷಭರು ಶಂಖಗಳನ್ನೂ ಮಾಧವನು ಪಾಂಚಜನ್ಯವನ್ನೂ ಜೋರಾಗಿ ಊದಿ ಮೊಳಗಿಸಿದರು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಕೃಷ್ಣಪಾಂಡವದುರ್ಯೋಧನಸಂವಾದೇ ಷಷ್ಟಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಕೃಷ್ಣಪಾಂಡವದುರ್ಯೋಧನಸಂವಾದ ಎನ್ನುವ ಅರವತ್ತನೇ ಅಧ್ಯಾಯವು.
