Karna Parva: Chapter 50

ಕರ್ಣ ಪರ್ವ

೫೦

ಕರ್ಣನ ವಧೆಗಾಗಿ ಕೃಷ್ಣಾರ್ಜುನರು ರಣಭೂಮಿಗೆ ಪ್ರಸ್ಥಾನಗೊಂಡಿದುದು

ಕೃಷ್ಣನ ಸೂಚನೆಯಂತೆ ಅರ್ಜುನನು ಯುಧಿಷ್ಠಿರನ ಪಾದಗಳಿಗೆರೆಗಿ ಕ್ಷಮೆಯನ್ನು ಯಾಚಿಸಿದುದು (೧-೧೪). ಕರ್ಣನನ್ನು ಸಂಹರಿಸು ಎಂದು ಹೇಳಿ ಯುಧಿಷ್ಠಿರನು ಅರ್ಜುನನನ್ನು ಯುದ್ಧಕ್ಕೆ ಬೀಳ್ಕೊಂಡಿದುದು (೧೫-೩೪). ಕೃಷ್ಣಾರ್ಜುನರು ರಣಭೂಮಿಗೆ ಪ್ರಯಾಣಮಾಡುತ್ತಿದ್ದಾಗ ಆದ ಶಕುನಗಳು (೩೫-೪೭). ಅರ್ಜುನನ ಪರಾಕ್ರಮಗಳನ್ನು ವರ್ಣಿಸುತ್ತಾ ಕೃಷ್ಣನು ಯುದ್ಧದಲ್ಲಿ ಕರ್ಣನನ್ನು ಸಂಹರಿಸಲು ಅರ್ಜುನನಿಗೆ ಹೇಳಿದುದು (೪೮-೬೫).

Image result for mahabharata08050001 ಸಂಜಯ ಉವಾಚ|

08050001a ಇತಿ ಸ್ಮ ಕೃಷ್ಣವಚನಾತ್ಪ್ರತ್ಯುಚ್ಚಾರ್ಯ ಯುಧಿಷ್ಠಿರಂ|

08050001c ಬಭೂವ ವಿಮನಾಃ ಪಾರ್ಥಃ ಕಿಂ ಚಿತ್ಕೃತ್ವೇವ ಪಾತಕಂ||

ಸಂಜಯನು ಹೇಳಿದನು: “ಹೀಗೆ ಕೃಷ್ಣನ ಮಾತಿನಂತೆ ಯುಧಿಷ್ಠಿರನನ್ನು ನಿಂದಿಸಿ ಮಾತನಾಡಿದ ಪಾರ್ಥನು ಏನೋ ಪಾತಕವನ್ನು ಮಾಡಿದ್ದೇನೆಂದು ವಿಮನಸ್ಕನಾದನು.

08050002a ತತೋಽಬ್ರವೀದ್ವಾಸುದೇವಃ ಪ್ರಹಸನ್ನಿವ ಪಾಂಡವಂ|

08050002c ಕಥಂ ನಾಮ ಭವೇದೇತದ್ಯದಿ ತ್ವಂ ಪಾರ್ಥ ಧರ್ಮಜಂ|

08050002e ಅಸಿನಾ ತೀಕ್ಷ್ಣಧಾರೇಣ ಹನ್ಯಾ ಧರ್ಮೇ ವ್ಯವಸ್ಥಿತಂ||

ಆಗ ವಾಸುದೇವನು ನಗುತ್ತಿರುವನೋ ಎನ್ನುವಂತೆ ಪಾಂಡವನಿಗೆ ಹೇಳಿದನು: “ಪಾರ್ಥ! ಒಂದುವೇಳೆ ನೀನು ಹರಿತವಾಗಿರುವ ಖಡ್ಗದಿಂದ ಧರ್ಮದಲ್ಲಿ ವ್ಯವಸ್ಥಿತನಾದ ಧರ್ಮಜನನ್ನು ಕೊಂದಿದ್ದರೆ ನಿನ್ನ ಸ್ಥಿತಿಯು ಏನಾಗುತ್ತಿತ್ತು?

08050003a ತ್ವಮಿತ್ಯುಕ್ತ್ವೈವ ರಾಜಾನಮೇವಂ ಕಶ್ಮಲಮಾವಿಶಃ|

08050003c ಹತ್ವಾ ತು ನೃಪತಿಂ ಪಾರ್ಥ ಅಕರಿಷ್ಯಃ ಕಿಮುತ್ತರಂ|

08050003e ಏವಂ ಸುದುರ್ವಿದೋ ಧರ್ಮೋ ಮಂದಪ್ರಜ್ಞೈರ್ವಿಶೇಷತಃ||

ರಾಜನನ್ನು ನೀನು ಎಂದು ಕರೆದುದರಿಂದಲೇ ಇಷ್ಟೊಂದು ದುಃಖಿತನಾಗಿರುವೆ. ಆದರೆ ಪಾರ್ಥ! ನೃಪತಿಯನ್ನು ನೀನು ಸಂಹರಿಸಿದ್ದೇ ಆದರೆ ಅನಂತರ ನೀನು ಏನು ಮಾಡುತ್ತಿದ್ದೆ? ವಿಶೇಷವಾಗಿ ಮಂದಪ್ರಜ್ಞರಿಗೆ ಧರ್ಮವನ್ನು ತಿಳಿಯುವುದು ಕಷ್ಟಸಾಧ್ಯವಾದುದು.

08050004a ಸ ಭವಾನ್ಧರ್ಮಭೀರುತ್ವಾದ್ಧ್ರುವಮೈಷ್ಯನ್ಮಹತ್ತಮಃ|

08050004c ನರಕಂ ಘೋರರೂಪಂ ಚ ಭ್ರಾತುರ್ಜ್ಯೇಷ್ಠಸ್ಯ ವೈ ವಧಾತ್||

ಧರ್ಮಭೀರುವಾಗಿರುವ ನಿನ್ನ ಜ್ಯೇಷ್ಠಭ್ರಾತನನ್ನು ವಧಿಸಿದ್ದರೆ ಖಂಡಿತವಾಗಿಯೂ ನೀನು ಘೋರರೂಪದ ಮಹಾನರಕವನ್ನು ಪಡೆಯುತ್ತಿದ್ದೆ!

08050005a ಸ ತ್ವಂ ಧರ್ಮಭೃತಾಂ ಶ್ರೇಷ್ಠಂ ರಾಜಾನಂ ಧರ್ಮಸಂಹಿತಂ|

08050005c ಪ್ರಸಾದಯ ಕುರುಶ್ರೇಷ್ಠಮೇತದತ್ರ ಮತಂ ಮಮ||

ನೀನು ಈಗ ಕುರುಶ್ರೇಷ್ಠ, ಧರ್ಮಸಂಹಿತ, ಧರ್ಮಭೃತರಲ್ಲಿ ಶ್ರೇಷ್ಠ ರಾಜನನ್ನು ಪ್ರಸನ್ನಗೊಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ.

08050006a ಪ್ರಸಾದ್ಯ ಭಕ್ತ್ಯಾ ರಾಜಾನಂ ಪ್ರೀತಂ ಚೈವ ಯುಧಿಷ್ಠಿರಂ|

08050006c ಪ್ರಯಾಮಸ್ತ್ವರಿತಾ ಯೋದ್ಧುಂ ಸೂತಪುತ್ರರಥಂ ಪ್ರತಿ||

ಭಕ್ತಿ-ಪ್ರೀತಿಗಳಿಂದ ಯುಧಿಷ್ಠಿರನನ್ನು ಪ್ರಸನ್ನಗೊಳಿಸಿ ನಾವು ತ್ವರೆಮಾಡಿ ಯುದ್ಧಮಾಡಲು ಸೂತಪುತ್ರನ ರಥದ ಕಡೆ ಹೋಗೋಣ!

08050007a ಹತ್ವಾ ಸುದುರ್ಜಯಂ ಕರ್ಣಂ ತ್ವಮದ್ಯ ನಿಶಿತೈಃ ಶರೈಃ|

08050007c ವಿಪುಲಾಂ ಪ್ರೀತಿಮಾಧತ್ಸ್ವ ಧರ್ಮಪುತ್ರಸ್ಯ ಮಾನದ||

ಮಾನದ! ಸುದುರ್ಜಯ ಕರ್ಣನನ್ನು ಇಂದು ನಿಶಿತ ಶರಗಳಿಂದ ಸಂಹರಿಸಿ ಧರ್ಮಪುತ್ರನಿಗೆ ವಿಪುಲ ಸಂತೋಷವನ್ನು ನೀಡುವೆಯಂತೆ!

08050008a ಏತದತ್ರ ಮಹಾಬಾಹೋ ಪ್ರಾಪ್ತಕಾಲಂ ಮತಂ ಮಮ|

08050008c ಏವಂ ಕೃತೇ ಕೃತಂ ಚೈವ ತವ ಕಾರ್ಯಂ ಭವಿಷ್ಯತಿ||

ಮಹಾಬಾಹೋ! ಇದಕ್ಕೆ ಕಾಲವು ಪ್ರಾಪ್ತವಾಗಿದೆ ಎಂದು ನನಗನ್ನಿಸುತ್ತಿದೆ. ಹೀಗೆ ನೀನು ಮಾಡಿದರೆ ನಿನ್ನ ಕಾರ್ಯವು ಸಿದ್ಧಿಯಾಗುತ್ತದೆ.”

08050009a ತತೋಽರ್ಜುನೋ ಮಹಾರಾಜ ಲಜ್ಜಯಾ ವೈ ಸಮನ್ವಿತಃ|

08050009c ಧರ್ಮರಾಜಸ್ಯ ಚರಣೌ ಪ್ರಪೇದೇ ಶಿರಸಾನಘ||

ಮಹಾರಾಜ! ಅನಘ! ಆಗ ಅರ್ಜುನನು ಲಜ್ಜಾಸಮನ್ವಿತನಾಗಿ ಧರ್ಮರಾಜನ ಚರಣಗಳಲ್ಲಿ ಶಿರವನ್ನಿಟ್ಟು ನಮಸ್ಕರಿಸಿದನು.

08050010a ಉವಾಚ ಭರತಶ್ರೇಷ್ಠ ಪ್ರಸೀದೇತಿ ಪುನಃ ಪುನಃ|

08050010c ಕ್ಷಮಸ್ವ ರಾಜನ್ಯತ್ಪ್ರೋಕ್ತಂ ಧರ್ಮಕಾಮೇನ ಭೀರುಣಾ||

ಆ ಭರತಶ್ರೇಷ್ಠನು ಪುನಃ ಪುನಃ “ರಾಜನ್! ಧರ್ಮಕಾಮದಿಂದ ಭೀರುವಾದ ನಾನು ಹೇಳಿದುದನ್ನು ಕ್ಷಮಿಸಿ ಪ್ರಸೀದನಾಗು!” ಎಂದು ಹೇಳಿದನು.

08050011a ಪಾದಯೋಃ ಪತಿತಂ ದೃಷ್ಟ್ವಾ ಧರ್ಮರಾಜೋ ಯುಧಿಷ್ಠಿರಃ|

08050011c ಧನಂಜಯಮಮಿತ್ರಘ್ನಂ ರುದಂತಂ ಭರತರ್ಷಭ||

08050012a ಉತ್ಥಾಪ್ಯ ಭ್ರಾತರಂ ರಾಜಾ ಧರ್ಮರಾಜೋ ಧನಂಜಯಂ|

08050012c ಸಮಾಶ್ಲಿಷ್ಯ ಚ ಸಸ್ನೇಹಂ ಪ್ರರುರೋದ ಮಹೀಪತಿಃ||

ಪಾದಗಳಮೇಲೆ ಬಿದ್ದು ಅಳುತ್ತಿದ್ದ ಅಮಿತ್ರಘ್ನ ಧನಂಜಯನನ್ನು ನೋಡಿ ಭರತರ್ಷಭ ಧರ್ಮರಾಜ ಯುಧಿಷ್ಠಿರನು ತಮ್ಮ ಧನಂಜಯನನ್ನು ಮೇಲೆಬ್ಬಿಸಿದನು. ಮಹೀಪತಿ ರಾಜಾ ಧರ್ಮರಾಜನು ಅವನನ್ನು ಸ್ನೇಹಪೂರ್ವಕ ಆಲಂಗಿಸಿ ಅವನೊಡನೆ ರೋದಿಸಿದನು.

08050013a ರುದಿತ್ವಾ ತು ಚಿರಂ ಕಾಲಂ ಭ್ರಾತರೌ ಸುಮಹಾದ್ಯುತೀ|

08050013c ಕೃತಶೌಚೌ ನರವ್ಯಾಘ್ರೌ ಪ್ರೀತಿಮಂತೌ ಬಭೂವತುಃ||

ಬಹಳ ಹೊತ್ತು ರೋದಿಸಿ ಆ ಇಬ್ಬರು ಮಹಾದ್ಯುತಿ ನರವ್ಯಾಘ್ರ ಸಹೋದರರೂ ಶುಚಿಮಾಡಿಕೊಂಡು ಹರ್ಷಿತರಾದರು.

08050014a ತತ ಆಶ್ಲಿಷ್ಯ ಸ ಪ್ರೇಮ್ಣಾ ಮೂರ್ಧ್ನಿ ಚಾಘ್ರಾಯ ಪಾಂಡವಂ|

08050014c ಪ್ರೀತ್ಯಾ ಪರಮಯಾ ಯುಕ್ತಃ ಪ್ರಸ್ಮಯಂಶ್ಚಾಬ್ರವೀಜ್ಜಯಂ||

ಅನಂತರ ಪಾಂಡವನನ್ನು ಪ್ರೀತಿಯಿಂದ ಆಲಂಗಿಸಿ ನೆತ್ತಿಯನ್ನು ಆಘ್ರಾಣಿಸಿ ಪರಮ ಸಂತೋಷಯುಕ್ತನಾಗಿ ಮತ್ತು ವಿಸ್ಮಯನಾಗಿ ಜಯನಿಗೆ ಹೇಳಿದನು:

08050015a ಕರ್ಣೇನ ಮೇ ಮಹಾಬಾಹೋ ಸರ್ವಸೈನ್ಯಸ್ಯ ಪಶ್ಯತಃ|

08050015c ಕವಚಂ ಚ ಧ್ವಜಶ್ಚೈವ ಧನುಃ ಶಕ್ತಿರ್ಹಯಾ ಗದಾ|

08050015e ಶರೈಃ ಕೃತ್ತಾ ಮಹೇಷ್ವಾಸ ಯತಮಾನಸ್ಯ ಸಂಯುಗೇ||

“ಮಹಾಬಾಹೋ! ಸರ್ವಸೈನ್ಯವೂ ನೋಡುತ್ತಿದ್ದಂತೆಯೇ ರಣದಲ್ಲಿ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದ ಮಹೇಷ್ವಾಸ ಕರ್ಣನು ಶರಗಳಿಂದ ನನ್ನ ಕವಚ, ಧ್ವಜ, ಧನುಸ್ಸು, ಶಕ್ತಿ, ಕುದುರೆ, ಮತ್ತು ಗದೆಗಳನ್ನು ಕತ್ತರಿಸಿದನು.

08050016a ಸೋಽಹಂ ಜ್ಞಾತ್ವಾ ರಣೇ ತಸ್ಯ ಕರ್ಮ ದೃಷ್ಟ್ವಾ ಚ ಫಲ್ಗುನ|

08050016c ವ್ಯವಸೀದಾಮಿ ದುಃಖೇನ ನ ಚ ಮೇ ಜೀವಿತಂ ಪ್ರಿಯಂ||

ಫಲ್ಗುನ! ಅವನನ್ನು ಮನಗಂಡು ಮತ್ತು ರಣದಲ್ಲಿ ಅವನ ಕರ್ಮವನ್ನು ನೋಡಿ ನಾನು ದುಃಖದಿಂದ ಕೃಶನಾಗುತ್ತಿದ್ದೇನೆ. ಜೀವಿತವಾಗಿರಲೂ ಇಷ್ಟವಾಗುತ್ತಿಲ್ಲ!

08050017a ತಮದ್ಯ ಯದಿ ವೈ ವೀರ ನ ಹನಿಷ್ಯಸಿ ಸೂತಜಂ|

08050017c ಪ್ರಾಣಾನೇವ ಪರಿತ್ಯಕ್ಷ್ಯೇ ಜೀವಿತಾರ್ಥೋ ಹಿ ಕೋ ಮಮ||

ವೀರ! ಒಂದು ವೇಳೆ ಇಂದು ನೀನು ಸೂತಜನನ್ನು ಸಂಹರಿಸದೇ ಇದ್ದರೆ ನಾನು ನನ್ನ ಪ್ರಾಣಗಳನ್ನೇ ಪರಿತ್ಯಜಿಸುತ್ತೇನೆ. ಮುಂದೆ ನಾನು ಜೀವಂತವಾಗಿರುವುದರ ಅರ್ಥವಾದರೂ ಏನಿದೆ?”

08050018a ಏವಮುಕ್ತಃ ಪ್ರತ್ಯುವಾಚ ವಿಜಯೋ ಭರತರ್ಷಭ|

08050018c ಸತ್ಯೇನ ತೇ ಶಪೇ ರಾಜನ್ಪ್ರಸಾದೇನ ತವೈವ ಚ|

08050018e ಭೀಮೇನ ಚ ನರಶ್ರೇಷ್ಠ ಯಮಾಭ್ಯಾಂ ಚ ಮಹೀಪತೇ||

ಭರತರ್ಷಭ! ಹೀಗೆ ಹೇಳಲು ವಿಜಯನು ಉತ್ತರಿಸಿದನು: “ರಾಜನ್! ನರಶ್ರೇಷ್ಠ! ಮಹೀಪತೇ! ಸತ್ಯ, ನಿನ್ನ ಪ್ರಸಾದ, ಭೀಮ ಮತ್ತು ಯಮಳರ ಮೇಲೆ ಆಣೆಯಿಟ್ಟು ಶಪಥಮಾಡುತ್ತಿದ್ದೇನೆ!

08050019a ಯಥಾದ್ಯ ಸಮರೇ ಕರ್ಣಂ ಹನಿಷ್ಯಾಮಿ ಹತೋಽಥ ವಾ|

08050019c ಮಹೀತಲೇ ಪತಿಷ್ಯಾಮಿ ಸತ್ಯೇನಾಯುಧಮಾಲಭೇ||

ಆಯುಧದ ಮೇಲೆ ಆಣೆಯಿಟ್ಟು ಹೇಳುತ್ತೇನೆ! ಇಂದು ಸಮರದಲ್ಲಿ ಕರ್ಣನನ್ನು ಕೊಲ್ಲುತ್ತೇನೆ ಅಥವಾ ಹತನಾಗಿ ಮಹೀತಲದಲ್ಲಿ ಬೀಳುತ್ತೇನೆ!”

08050020a ಏವಮಾಭಾಷ್ಯ ರಾಜಾನಮಬ್ರವೀನ್ಮಾಧವಂ ವಚಃ|

08050020c ಅದ್ಯ ಕರ್ಣಂ ರಣೇ ಕೃಷ್ಣ ಸೂದಯಿಷ್ಯೇ ನ ಸಂಶಯಃ|

08050020e ತದನುಧ್ಯಾಹಿ ಭದ್ರಂ ತೇ ವಧಂ ತಸ್ಯ ದುರಾತ್ಮನಃ||

ರಾಜನಿಗೆ ಹೀಗೆ ಹೇಳಿ ಅವನು ಮಾಧವನಿಗೆ ಈ ಮಾತನ್ನಾಡಿದನು: “ಕೃಷ್ಣ! ಇಂದು ರಣದಲ್ಲಿ ಕರ್ಣನನ್ನು ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ನಿನಗೆ ಮಂಗಳವಾಗಲಿ! ಆ ದುರಾತ್ಮನ ವಧೆಯನ್ನು ನೀನೂ ಕೂಡ ನಿರ್ಧರಿಸಿರುವಂತಿದೆ!”

08050021a ಏವಮುಕ್ತೋಽಬ್ರವೀತ್್ಪಾರ್ಥಂ ಕೇಶವೋ ರಾಜಸತ್ತಮ|

08050021c ಶಕ್ತೋಽಸ್ಮಿ ಭರತಶ್ರೇಷ್ಠ ಯತ್ನಂ ಕರ್ತುಂ ಯಥಾಬಲಂ||

ರಾಜಸತ್ತಮ! ಇದನ್ನು ಕೇಳಿದ ಕೇಶವನು ಪಾರ್ಥನಿಗೆ ಹೇಳಿದನು: “ಭರತಶ್ರೇಷ್ಠ! ಯಥಾಬಲ ಪ್ರಯತ್ನ ಮಾಡಲು ನೀನು ಶಕ್ತನಾಗಿರುವೆ!

08050022a ಏವಂ ಚಾಪಿ ಹಿ ಮೇ ಕಾಮೋ ನಿತ್ಯಮೇವ ಮಹಾರಥ|

08050022c ಕಥಂ ಭವಾನ್ರಣೇ ಕರ್ಣಂ ನಿಹನ್ಯಾದಿತಿ ಮೇ ಮತಿಃ||

ಮಹಾರಥ! ಇದೇ ನನ್ನ ನಿತ್ಯದ ಮನೋಕಾಮನೆಯೂ ಆಗಿದೆ. ನೀನು ರಣದಲ್ಲಿ ಹೇಗೆ ಕರ್ಣನನ್ನು ಕೊಲ್ಲುತ್ತೀಯೆ ಎನ್ನುವುದೂ ನನ್ನ ಅನುದಿನದ ಚಿಂತೆಯಾಗಿದೆ.”

08050023a ಭೂಯಶ್ಚೋವಾಚ ಮತಿಮಾನ್ಮಾಧವೋ ಧರ್ಮನಂದನಂ|

08050023c ಯುಧಿಷ್ಠಿರೇಮಂ ಬೀಭತ್ಸುಂ ತ್ವಂ ಸಾಂತ್ವಯಿತುಮರ್ಹಸಿ|

08050023e ಅನುಜ್ಞಾತುಂ ಚ ಕರ್ಣಸ್ಯ ವಧಾಯಾದ್ಯ ದುರಾತ್ಮನಃ||

ಮತಿಮಾನ್ ಮಾಧವನು ಧರ್ಮನಂದನನಿಗೆ ಪುನಃ ಇದನ್ನು ಹೇಳಿದನು: “ಯುಧಿಷ್ಠಿರ! ಈ ಬೀಭತ್ಸುವನ್ನು ನೀನು ಸಂತವಿಸಬೇಕಾಗಿದೆ. ದುರಾತ್ಮ ಕರ್ಣನ ವಧೆಗೆ ಇಂದು ಆಜ್ಞೆಯನ್ನೂ ನೀಡಬೇಕು!

08050024a ಶ್ರುತ್ವಾ ಹ್ಯಯಮಹಂ ಚೈವ ತ್ವಾಂ ಕರ್ಣಶರಪೀಡಿತಂ|

08050024c ಪ್ರವೃತ್ತಿಂ ಜ್ಞಾತುಮಾಯಾತಾವಿಹ ಪಾಂಡವನಂದನ||

ಪಾಂಡವನಂದನ! ನೀನು ಕರ್ಣನ ಶರಗಳಿಂದ ಪೀಡಿತನಾದೆ ಎಂದು ಕೇಳಿದ ಇವನು ಮತ್ತು ನಾನು ನೀನು ಹೇಗಿರುವೆಯೆಂದು ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದೆವು.

08050025a ದಿಷ್ಟ್ಯಾಸಿ ರಾಜನ್ನಿರುಜೋ ದಿಷ್ಟ್ಯಾ ನ ಗ್ರಹಣಂ ಗತಃ|

08050025c ಪರಿಸಾಂತ್ವಯ ಬೀಭತ್ಸುಂ ಜಯಮಾಶಾಧಿ ಚಾನಘ||

ರಾಜನ್! ಅದೃಷ್ಟವಶಾತ್ ನೀನು ಅವನಿಂದ ಹತನಾಗಲಿಲ್ಲ. ಅದೃಷ್ಟವಶಾತ್ ನೀನು ಅವನ ಬಂಧಿಯಾಗಲಿಲ್ಲ. ಅನಘ! ಬೀಭತ್ಸುವನ್ನು ಸಂತವಿಸು ಮತ್ತು ಜಯದ ಆಶೀರ್ವಾದವನ್ನು ನೀಡು!”

08050026 ಯುಧಿಷ್ಠಿರ ಉವಾಚ|

08050026a ಏಹ್ಯೇಹಿ ಪಾರ್ಥ ಬೀಭತ್ಸೋ ಮಾಂ ಪರಿಷ್ವಜ ಪಾಂಡವ|

08050026c ವಕ್ತವ್ಯಮುಕ್ತೋಽಸ್ಮ್ಯಹಿತಂ ತ್ವಯಾ ಕ್ಷಾಂತಂ ಚ ತನ್ಮಯಾ||

ಯುಧಿಷ್ಠಿರನು ಹೇಳಿದನು: “ಬಾ ಪಾರ್ಥ ಬಾ! ಬೀಭತ್ಸೋ ಪಾಂಡವ! ನನ್ನನ್ನು ತಬ್ಬಿಕೋ! ನಿಂದ್ಯವಾದರೂ ಹಿತಕರವಾದ ಮಾತನ್ನೇ ನೀನು ಆಡಿರುವೆ. ನಾನು ಅವೆಲ್ಲವನ್ನೂ ಕ್ಷಮಿಸಿದ್ದೇನೆ!

08050027a ಅಹಂ ತ್ವಾಮನುಜಾನಾಮಿ ಜಹಿ ಕರ್ಣಂ ಧನಂಜಯ|

08050027c ಮನ್ಯುಂ ಚ ಮಾ ಕೃಥಾಃ ಪಾರ್ಥ ಯನ್ಮಯೋಕ್ತೋಽಸಿ ದಾರುಣಂ||

ನಾನು ನಿನಗೆ ಆಜ್ಞೆಮಾಡುತ್ತಿದ್ದೇನೆ! ಧನಂಜಯ! ಕರ್ಣನನ್ನು ಸಂಹರಿಸು! ಪಾರ್ಥ! ನಾನು ಹೇಳಿದ ದಾರುಣ ಮಾತುಗಳಿಂದ ಕೋಪಿಸಿಕೊಳ್ಳಬೇಡ!””

08050028 ಸಂಜಯ ಉವಾಚ|

08050028a ತತೋ ಧನಂಜಯೋ ರಾಜಂ ಶಿರಸಾ ಪ್ರಣತಸ್ತದಾ|

08050028c ಪಾದೌ ಜಗ್ರಾಹ ಪಾಣಿಭ್ಯಾಂ ಭ್ರಾತುರ್ಜ್ಯೇಷ್ಠಸ್ಯ ಮಾರಿಷ||

ಸಂಜಯನು ಹೇಳಿದನು: “ರಾಜನ್! ಮಾರಿಷ! ಆಗ ಧನಂಜಯನು ಜ್ಯೇಷ್ಠ ಭ್ರಾತನ ಪಾದಗಳನ್ನು ಕೈಗಳಿಂದ ಹಿಡಿದು ಶಿರಸಾ ಸಮಸ್ಕರಿಸಿದನು.

08050029a ಸಮುತ್ಥಾಪ್ಯ ತತೋ ರಾಜಾ ಪರಿಷ್ವಜ್ಯ ಚ ಪೀಡಿತಂ|

08050029c ಮೂರ್ಧ್ನ್ಯುಪಾಘ್ರಾಯ ಚೈವೈನಮಿದಂ ಪುನರುವಾಚ ಹ||

ಆಗ ರಾಜನು ಪೀಡಿತನಾಗಿದ್ದ ಅರ್ಜುನನನ್ನು ಮೇಲೆತ್ತಿ ನೆತ್ತಿಯನ್ನು ಆಘ್ರಾಣಿಸಿ ಪುನಃ ಇದನ್ನು ಹೇಳಿದನು:

08050030a ಧನಂಜಯ ಮಹಾಬಾಹೋ ಮಾನಿತೋಽಸ್ಮಿ ದೃಢಂ ತ್ವಯಾ|

08050030c ಮಾಹಾತ್ಮ್ಯಂ ವಿಜಯಂ ಚೈವ ಭೂಯಃ ಪ್ರಾಪ್ನುಹಿ ಶಾಶ್ವತಂ||

“ಧನಂಜಯ! ಮಹಾಬಾಹೋ! ನಿನ್ನ ದೃಢತೆಯಿಂದ ನನ್ನನ್ನು ಗೌರವಿಸಿರುವೆ! ಶಾಶ್ವತವಾದ ಮಹಾತ್ಮೆಯನ್ನೂ ವಿಜಯನ್ನೂ ಪಡೆಯುತ್ತೀಯೆ!”

08050031 ಅರ್ಜುನ ಉವಾಚ|

08050031a ಅದ್ಯ ತಂ ಪಾಪಕರ್ಮಾಣಂ ಸಾನುಬಂದಂ ರಣೇ ಶರೈಃ|

08050031c ನಯಾಂಯಂತಂ ಸಮಾಸಾದ್ಯ ರಾಧೇಯಂ ಬಲಗರ್ವಿತಂ||

ಅರ್ಜುನನು ಹೇಳಿದನು: “ಇಂದು ಆ ಪಾಪಕರ್ಮಿ ಬಲಗರ್ವಿತ ರಾಧೇಯನನ್ನು ರಣದಲ್ಲಿ ಎದುರಿಸಿ ಶರಗಳಿಂದ ಅವನನ್ನೂ ಅನುಯಾಯಿಗಳನ್ನೂ ಕಡೆಗಾಣಿಸುತ್ತೇನೆ!

08050032a ಯೇನ ತ್ವಂ ಪೀಡಿತೋ ಬಾಣೈರ್ದೃಢಮಾಯಮ್ಯ ಕಾರ್ಮುಕಂ|

08050032c ತಸ್ಯಾದ್ಯ ಕರ್ಮಣಃ ಕರ್ಣಃ ಫಲಂ ಪ್ರಾಪ್ಸ್ಯತಿ ದಾರುಣಂ||

ಕಾರ್ಮುಕವನ್ನು ದೃಢವಾಗಿ ಬಗ್ಗಿಸಿ ಬಾಣಗಳಿಂದ ನಿನ್ನನ್ನು ಪೀಡಿಸಿದ ಆ ಕರ್ಣನು ತನ್ನ ಕರ್ಮಗಳ ಧಾರುಣ ಫಲವನ್ನು ಇಂದು ಪಡೆಯುತ್ತಾನೆ.

08050033a ಅದ್ಯ ತ್ವಾಮಹಮೇಷ್ಯಾಮಿ ಕರ್ಣಂ ಹತ್ವಾ ಮಹೀಪತೇ|

08050033c ಸಭಾಜಯಿತುಮಾಕ್ರಂದಾದಿತಿ ಸತ್ಯಂ ಬ್ರವೀಮಿ ತೇ||

ಮಹೀಪತೇ! ಇಂದು ನಾನು ಕರ್ಣನನ್ನು ಕೊಂದೇ ನಿನ್ನ ಬಳಿ ಬರುತ್ತೇನೆ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ!

08050034a ನಾಹತ್ವಾ ವಿನಿವರ್ತೇಽಹಂ ಕರ್ಣಮದ್ಯ ರಣಾಜಿರಾತ್|

08050034c ಇತಿ ಸತ್ಯೇನ ತೇ ಪಾದೌ ಸ್ಪೃಶಾಮಿ ಜಗತೀಪತೇ||

ಜಗತೀಪತೇ! ಇಂದು ಕರ್ಣನನ್ನು ಸಂಹರಿಸದೇ ನಾನು ರಣರಂಗದಿಂದ ಹಿಂದಿರುಗುವುದಿಲ್ಲ. ನಿನ್ನ ಪಾದಗಳನ್ನು ಸ್ಪರ್ಷಿಸಿ ಆಣೆಯಿಟ್ಟು ಹೇಳುತ್ತೇನೆ!””

08050035 ಸಂಜಯ ಉವಾಚ|

08050035a ಪ್ರಸಾದ್ಯ ಧರ್ಮರಾಜಾನಂ ಪ್ರಹೃಷ್ಟೇನಾಂತರಾತ್ಮನಾ|

08050035c ಪಾರ್ಥಃ ಪ್ರೋವಾಚ ಗೋವಿಂದಂ ಸೂತಪುತ್ರವಧೋದ್ಯತಃ||

ಸಂಜಯನು ಹೇಳಿದನು: “ಧರ್ಮರಾಜನನ್ನು ಹೀಗೆ ಪ್ರಸನ್ನಗೊಳಿಸಿ ಒಳಗಿಂದೊಳಗೇ ಪ್ರಹೃಷ್ಟನಾಗಿ ಸೂತಪುತ್ರನ ವಧೆಗೆ ಸಿದ್ಧನಾದ ಪಾರ್ಥನು ಗೋವಿಂದನಿಗೆ ಹೇಳಿದನು:

08050036a ಕಲ್ಪ್ಯತಾಂ ಚ ರಥೋ ಭೂಯೋ ಯುಜ್ಯಂತಾಂ ಚ ಹಯೋತ್ತಮಾಃ|

08050036c ಆಯುಧಾನಿ ಚ ಸರ್ವಾಣಿ ಸಜ್ಜ್ಯಂತಾಂ ವೈ ಮಹಾರಥೇ||

“ಪುನಃ ರಥವು ಸಿದ್ಧವಾಗಲಿ. ಉತ್ತಮ ಹಯಗಳನ್ನು ಹೂಡಲಿ. ಸರ್ವ ಆಯುಧಗಳೂ ಮಹಾರಥದಲ್ಲಿ ಸಜ್ಜಾಗಿ ಇಡಲ್ಪಡಲಿ!

08050037a ಉಪಾವೃತ್ತಾಶ್ಚ ತುರಗಾಃ ಶಿಕ್ಷಿತಾಶ್ಚಾಶ್ವಸಾದಿನಃ|

08050037c ರಥೋಪಕರಣೈಃ ಸರ್ವೈರುಪಾಯಾಂತು ತ್ವರಾನ್ವಿತಾಃ||

ಕುದುರೆಸವಾರರಿಂದ ಪಳಗಿಸಲ್ಪಟ್ಟ ಮತ್ತು ತಿರುಗಾಡಿಸಲ್ಪಟ್ಟ ಕುದುರೆಗಳು ಸರ್ವ ರಥೋಪಕರಣಗಳೊಡನೆ ಬೇಗನೇ ಸಜ್ಜಾಗಲಿ!”

08050038a ಏವಮುಕ್ತೇ ಮಹಾರಾಜ ಫಲ್ಗುನೇನ ಮಹಾತ್ಮನಾ|

08050038c ಉವಾಚ ದಾರುಕಂ ಕೃಷ್ಣಃ ಕುರು ಸರ್ವಂ ಯಥಾಬ್ರವೀತ್|

08050038e ಅರ್ಜುನೋ ಭರತಶ್ರೇಷ್ಠಃ ಶ್ರೇಷ್ಠಃ ಸರ್ವಧನುಷ್ಮತಾಂ||

ಮಹಾರಾಜ! ಮಹಾತ್ಮ ಫಲ್ಗುನನು ಹೀಗೆ ಹೇಳಲು ಕೃಷ್ಣನು ದಾರುಕನಿಗೆ “ಸರ್ವಧನುಷ್ಮತರಲ್ಲಿ ಶ್ರೇಷ್ಠ ಭರತಶ್ರೇಷ್ಠ ಅರ್ಜುನನು ಹೇಳಿದಂತೆ ಎಲ್ಲವನ್ನೂ ಮಾಡು!” ಎಂದನು.

08050039a ಆಜ್ಞಪ್ತಸ್ತ್ವಥ ಕೃಷ್ಣೇನ ದಾರುಕೋ ರಾಜಸತ್ತಮ|

08050039c ಯೋಜಯಾಮಾಸ ಸ ರಥಂ ವೈಯಾಘ್ರಂ ಶತ್ರುತಾಪನಂ||

ರಾಜಸತ್ತಮ! ಕೃಷ್ಣನಿಂದ ಆಜ್ಞಾಪಿತನಾದ ದಾರುಕನು ವ್ಯಾಘ್ರಚರ್ಮದಿಂದ ಆಚ್ಛಾದಿತವಾದ ಮತ್ತು ಶತ್ರುಗಳನ್ನು ಸುಡಬಲ್ಲ ಆ ರಥವನ್ನು ಸಜ್ಜುಗೊಳಿಸಿದನು.

08050040a ಯುಕ್ತಂ ತು ರಥಮಾಸ್ಥಾಯ ದಾರುಕೇಣ ಮಹಾತ್ಮನಾ|

08050040c ಆಪೃಚ್ಚ್ಯ ಧರ್ಮರಾಜಾನಂ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ|

08050040e ಸಮಂಗಲಸ್ವಸ್ತ್ಯಯನಮಾರುರೋಹ ರಥೋತ್ತಮಂ||

ಮಹಾತ್ಮ ದಾರುಕನಿಂದ ಸಿದ್ಧಗೊಳಿಸಲ್ಪಟ್ಟ ರಥವನ್ನು ನೋಡಿ ಅರ್ಜುನನು ಧರ್ಮರಾಜನ ಆಶೀರ್ವಾದ ಮತ್ತು ಬ್ರಾಹ್ಮಣರ ಸ್ವಸ್ತಿವಾಚನವನ್ನು ಕೇಳಿಸಿಕೊಂಡು ಸುಮಂಗಲಯುಕ್ತವಾದ ಆ ಉತ್ತಮ ರಥವನ್ನೇರಿದನು.

08050041a ತಸ್ಯ ರಾಜಾ ಮಹಾಪ್ರಾಜ್ಞೋ ಧರ್ಮರಾಜೋ ಯುಧಿಷ್ಠಿರಃ|

08050041c ಆಶಿಷೋಽಯುಂಕ್ತ ಪರಮಾ ಯುಕ್ತಾಃ ಕರ್ಣವಧಂ ಪ್ರತಿ||

ಮಹಾಪ್ರಾಜ್ಞ ಧರ್ಮರಾಜ ಯುಧಿಷ್ಠಿರನು ಅವನಿಗೆ ಕರ್ಣವಧೆಯ ಕುರಿತು ಪರಮ ಆಶೀರ್ವಚನಗಳನ್ನಿತ್ತನು.

08050042a ತಂ ಪ್ರಯಾಂತಂ ಮಹೇಷ್ವಾಸಂ ದೃಷ್ಟ್ವಾ ಭೂತಾನಿ ಭಾರತ|

08050042c ನಿಹತಂ ಮೇನಿರೇ ಕರ್ಣಂ ಪಾಂಡವೇನ ಮಹಾತ್ಮನಾ||

ಭಾರತ! ಆ ಮಹೇಷ್ವಾಸನು ಹೋಗುತ್ತಿರುವುದನ್ನು ನೋಡಿ ಭೂತಗಳು ಮಹಾತ್ಮ ಪಾಂಡವನಿಂದ ಕರ್ಣನು ಹತನಾದನೆಂದೇ ಭಾವಿಸಿದವು.

08050043a ಬಭೂವುರ್ವಿಮಲಾಃ ಸರ್ವಾ ದಿಶೋ ರಾಜನ್ಸಮಂತತಃ|

08050043c ಚಾಷಾಶ್ಚ ಶತಪತ್ರಾಶ್ಚ ಕ್ರೌಂಚಾಶ್ಚೈವ ಜನೇಶ್ವರ|

08050043e ಪ್ರದಕ್ಷಿಣಮಕುರ್ವಂತ ತದಾ ವೈ ಪಾಂಡುನಂದನಂ||

ರಾಜನ್! ಸುತ್ತಲೂ ಎಲ್ಲ ದಿಕ್ಕುಗಳೂ ವಿಮಲವಾದವು. ಜನೇಶ್ವರ! ನವಿಲುಗಳೂ, ಸಾರಸಗಳೂ ಮತ್ತು ಕ್ರೌಂಚಪಕ್ಷಿಗಳೂ ಪಾಂಡುನಂದನನ್ನು ಪ್ರದಕ್ಷಿಣೆ ಮಾಡಿ ಹಾರುತ್ತಿದ್ದವು.

08050044a ಬಹವಃ ಪಕ್ಷಿಣೋ ರಾಜನ್ಪುಂನಾಮಾನಃ ಶುಭಾಃ ಶಿವಾಃ|

08050044c ತ್ವರಯಂತೋಽರ್ಜುನಂ ಯುದ್ಧೇ ಹೃಷ್ಟರೂಪಾ ವವಾಶಿರೇ||

ರಾಜನ್! ಅನೇಕ ಶುಭವಾದ ಮಂಗಳಕರ ಗಂಡುಪಕ್ಷಿಗಳು ಅರ್ಜುನನನ್ನು ಯುದ್ಧಕ್ಕೆ ತ್ವರೆಮಾಡುತ್ತಿರುವವೋ ಎನ್ನುವಂತೆ ಸಂತೋಷದಿಂದ ಕೂಗುತ್ತಿದ್ದವು.

08050045a ಕಂಕಾ ಗೃಧ್ರಾ ವಡಾಶ್ಚೈವ ವಾಯಸಾಶ್ಚ ವಿಶಾಂ ಪತೇ|

08050045c ಅಗ್ರತಸ್ತಸ್ಯ ಗಚ್ಚಂತಿ ಭಕ್ಷ್ಯಹೇತೋರ್ಭಯಾನಕಾಃ||

ವಿಶಾಂಪತೇ! ಭಯಾನಕ ಹದ್ದುಗಳೂ, ರಣಹದ್ದುಗಳೂ, ಗಿಡುಗಗಳೂ ಮತ್ತು ಕಾಗೆಗಳು ಮಾಂಸದ ಸಲುವಾಗಿ ಅವನ ಮುಂದೆ ಮುಂದೆ ಹೋಗುತ್ತಿದ್ದವು.

08050046a ನಿಮಿತ್ತಾನಿ ಚ ಧನ್ಯಾನಿ ಪಾರ್ಥಸ್ಯ ಪ್ರಶಶಂಸಿರೇ|

08050046c ವಿನಾಶಮರಿಸೈನ್ಯಾನಾಂ ಕರ್ಣಸ್ಯ ಚ ವಧಂ ತಥಾ||

ಧನ್ಯ ನಿಮಿತ್ತಗಳು ಪಾರ್ಥನನ್ನು ಪ್ರಶಂಶಿಸಿದವು ಮತ್ತು ಹಾಗೆಯೇ ಅರಿಸೇನೆಗಳ ವಿನಾಶವನ್ನೂ ಕರ್ಣನ ವಧೆಯನ್ನೂ ಸೂಚಿಸಿದವು.

08050047a ಪ್ರಯಾತಸ್ಯಾಥ ಪಾರ್ಥಸ್ಯ ಮಹಾನ್ಸ್ವೇದೋ ವ್ಯಜಾಯತ|

08050047c ಚಿಂತಾ ಚ ವಿಪುಲಾ ಜಜ್ಞೇ ಕಥಂ ನ್ವೇತದ್ಭವಿಷ್ಯತಿ||

ಹಾಗೆ ಪಾರ್ಥನು ಪ್ರಯಾಣಿಸುತ್ತಿರುವಾಗ ಅವನಿಗೆ ಅತಿಯಾದ ಬೆವರುಂಟಾಯಿತು. ಇದು ಏಕೆ ಹೀಗಾಗುತ್ತಿದೆ ಎಂಬ ವಿಪುಲ ಚಿಂತೆಯೂ ಅವನಿಗುಂಟಾಯಿತು.

08050048a ತತೋ ಗಾಂಡೀವಧನ್ವಾನಮಬ್ರವೀನ್ಮಧುಸೂದನಃ|

08050048c ದೃಷ್ಟ್ವಾ ಪಾರ್ಥಂ ತದಾಯಸ್ತಂ ಚಿಂತಾಪರಿಗತಂ ತದಾ||

ಹಾಗೆ ಚಿಂತಾಪರನಾಗಿದ್ದ ಪಾರ್ಥನನ್ನು ನೋಡಿ ಮಧುಸೂದನನು ಗಾಂಡೀವಧನ್ವಿಗೆ ಹೀಗೆ ಹೇಳಿದನು:

08050049a ಗಾಂಡೀವಧನ್ವನ್ಸಂಗ್ರಾಮೇ ಯೇ ತ್ವಯಾ ಧನುಷಾ ಜಿತಾಃ|

08050049c ನ ತೇಷಾಂ ಮಾನುಷೋ ಜೇತಾ ತ್ವದನ್ಯ ಇಹ ವಿದ್ಯತೇ||

“ಗಾಂಡೀವಧನ್ವಿಯೇ! ನಿನ್ನ ಧನುಸ್ಸಿನಿಂದ ನೀನು ಸಂಗ್ರಾಮದಲ್ಲಿ ಯಾರನ್ನು ಜಯಿಸಿದ್ದೀಯೋ ಅವರನ್ನು ಅನ್ಯ ಮಾನವರು ಜಯಿಸಲು ಸಾಧ್ಯವಾಗುತ್ತಿರಲಿಲ್ಲ.

08050050a ದೃಷ್ಟಾ ಹಿ ಬಹವಃ ಶೂರಾಃ ಶಕ್ರತುಲ್ಯಪರಾಕ್ರಮಾಃ|

08050050c ತ್ವಾಂ ಪ್ರಾಪ್ಯ ಸಮರೇ ವೀರಂ ಯೇ ಗತಾಃ ಪರಮಾಂ ಗತಿಂ||

ಶಕ್ರತುಲ್ಯಪರಾಕ್ರಮವುಳ್ಳ ಅನೇಕ ಶೂರರು ಸಮರದಲ್ಲಿ ನಿನ್ನನ್ನು ಎದುರಿಸಿ ವೀರರ ಪರಮ ಗತಿಯನ್ನು ಹೊಂದಿರುವುದನ್ನು ನೋಡಿದ್ದೇವೆ!

08050051a ಕೋ ಹಿ ದ್ರೋಣಂ ಚ ಭೀಷ್ಮಂ ಚ ಭಗದತ್ತಂ ಚ ಮಾರಿಷ|

08050051c ವಿಂದಾನುವಿಂದಾವಾವಂತ್ಯೌ ಕಾಂಬೋಜಂ ಚ ಸುದಕ್ಷಿಣಂ||

08050052a ಶ್ರುತಾಯುಷಂ ಮಹಾವೀರ್ಯಮಚ್ಯುತಾಯುಷಮೇವ ಚ|

08050052c ಪ್ರತ್ಯುದ್ಗಮ್ಯ ಭವೇತ್ ಕ್ಷೇಮೀ ಯೋ ನ ಸ್ಯಾತ್ತ್ವಮಿವ ಕ್ಷಮೀ||

ಮಾರಿಷ! ದ್ರೋಣ, ಭೀಷ್ಮ, ಭಗದತ್ತ, ಅವಂತಿಯ ವಿಂದಾನುವಿಂದರು, ಕಾಂಬೋಜದ ಸುದಕ್ಷಿಣ, ಮಯಾವೀರ್ಯ ಶ್ರುತಾಯುಷ ಮತ್ತು ಅಚ್ಯುತಾಯುಷರನ್ನು ಎದುರಿಸಿ ನೀನಲ್ಲದೇ ಬೇರೆ ಯಾರಿಗೆ ತಾನೇ ಕ್ಷೇಮದಿಂದ ಇರಲು ಸಾಧ್ಯವಾಗುತ್ತಿತ್ತು?

08050053a ತವ ಹ್ಯಸ್ತ್ರಾಣಿ ದಿವ್ಯಾನಿ ಲಾಘವಂ ಬಲಂ ಏವ ಚ|

08050053c ವೇಧಃ ಪಾತಶ್ಚ ಲಕ್ಷಶ್ಚ ಯೋಗಶ್ಚೈವ ತವಾರ್ಜುನ|

08050053e ಅಸಮ್ಮೋಹಶ್ಚ ಯುದ್ಧೇಷು ವಿಜ್ಞಾನಸ್ಯ ಚ ಸಂನತಿಃ||

ನಿನ್ನಲ್ಲಿ ದಿವ್ಯಾಸ್ತ್ರಗಳು, ಲಾಘವವೂ, ಬಲವೂ ಇವೆ. ಅರ್ಜುನ! ಲಕ್ಷ್ಯಭೇದನ ಪಾತನಗಳು ನಿನಗೆ ಚೆನ್ನಾಗಿ ತಿಳಿದಿವೆ. ಯುದ್ಧದಲ್ಲಿ ನೀನು ಸಮ್ಮೋಹನನಾಗುವುದಿಲ್ಲ. ಮತ್ತು ನಿನ್ನಲ್ಲಿ ವಿಶೇಷ ಜ್ಞಾನವಿದೆ.

08050054a ಭವಾನ್ದೇವಾಸುರಾನ್ಸರ್ವಾನ್ ಹನ್ಯಾತ್ಸಹಚರಾಚರಾನ್|

08050054c ಪೃಥಿವ್ಯಾಂ ಹಿ ರಣೇ ಪಾರ್ಥ ನ ಯೋದ್ಧಾ ತ್ವತ್ಸಮಃ ಪುಮಾನ್||

ಪಾರ್ಥ! ನೀನು ದೇವಾಸುರರನ್ನೂ ಸಚರಾಚರ ಸರ್ವವನ್ನೂ ಪೃಥ್ವಿಯನ್ನೂ ನಾಶಗೊಳಿಸಬಲ್ಲೆ. ರಣದಲ್ಲಿ ನಿನ್ನ ಸಮನಾದ ಪುರುಷ ಯೋಧನು ಇಲ್ಲ!

08050055a ಧನುರ್ಗ್ರಹಾ ಹಿ ಯೇ ಕೇ ಚಿತ್ ಕ್ಷತ್ರಿಯಾ ಯುದ್ಧದುರ್ಮದಾಃ|

08050055c ಆ ದೇವಾತ್ತ್ವತ್ಸಮಂ ತೇಷಾಂ ನ ಪಶ್ಯಾಮಿ ಶೃಣೋಮಿ ವಾ||

ದೇವತೆಗಳ ಪರ್ಯಂತವಾಗಿ ಯುದ್ಧದುರ್ಮದರಾದ ಧನುಸ್ಸನ್ನು ಹಿಡಿದಿರುವ ಕ್ಷತ್ರಿಯರೇನೋ ಇದ್ದಾರೆ. ಆದರೆ ಅವರಲ್ಲಿ ನಿನ್ನ ಸಮನಾಗಿರುವವರನ್ನು ನಾನು ನೋಡಿಲ್ಲ. ಕೇಳಿಯೂ ಇಲ್ಲ.

08050056a ಬ್ರಹ್ಮಣಾ ಚ ಪ್ರಜಾಃ ಸೃಷ್ಟಾ ಗಾಂಡೀವಂ ಚ ಮಹಾದ್ಭುತಂ|

08050056c ಯೇನ ತ್ವಂ ಯುಧ್ಯಸೇ ಪಾರ್ಥ ತಸ್ಮಾನ್ನಾಸ್ತಿ ತ್ವಯಾ ಸಮಃ||

ಬ್ರಹ್ಮನಿಂದ ಪ್ರಜೆಗಳೂ ಮತ್ತು ಈ ಮಹಾದ್ಭುತವಾದ ಗಾಂಡೀವವೂ ಸೃಷ್ಟಿಸಲ್ಪಟ್ಟವು. ಪಾರ್ಥ! ಅದರಿಂದ ನೀನು ಯುದ್ಧಮಾಡುತ್ತಿರುವೆ! ನಿನ್ನ ಸಮನಾಗಿರುವವರು ಯಾರೂ ಇಲ್ಲ!

08050057a ಅವಶ್ಯಂ ತು ಮಯಾ ವಾಚ್ಯಂ ಯತ್ಪಥ್ಯಂ ತವ ಪಾಂಡವ|

08050057c ಮಾವಮಂಸ್ಥಾ ಮಹಾಬಾಹೋ ಕರ್ಣಮಾಹವಶೋಭಿನಂ||

ಆದರೂ ಪಾಂಡವ! ನಿನ್ನ ಹಿತದಲ್ಲಿ ನಾನು ಈ ಮಾತನ್ನು ಹೇಳುವುದು ಅವಶ್ಯಕವಾಗಿದೆ. ಮಹಾಬಾಹೋ! ಆಹವಶೋಭೀ ಕರ್ಣನನ್ನು ಅವಗಣಿಸಬೇಡ!

08050058a ಕರ್ಣೋ ಹಿ ಬಲವಾನ್ ಧೃಷ್ಟಃ ಕೃತಾಸ್ತ್ರಶ್ಚ ಮಹಾರಥಃ|

08050058c ಕೃತೀ ಚ ಚಿತ್ರಯೋಧೀ ಚ ದೇಶೇ ಕಾಲೇ ಚ ಕೋವಿದಃ||

ಏಕೆಂದರೆ ಕರ್ಣನು ಬಲವಾನನು. ಅಭಿಮಾನಿಯು. ಅಸ್ತ್ರವಿದನು. ಮಹಾರಥನು. ಯುದ್ಧಕುಶಲನು. ವಿತ್ರಯೋಧಿಯು. ಮತ್ತು ದೇಶ-ಕಾಲಗಳ ಕೋವಿದನು.

08050059a ತೇಜಸಾ ವಹ್ನಿಸದೃಶೋ ವಾಯುವೇಗಸಮೋ ಜವೇ|

08050059c ಅಂತಕಪ್ರತಿಮಃ ಕ್ರೋಧೇ ಸಿಂಹಸಂಹನನೋ ಬಲೀ||

ತೇಜಸ್ಸಿನಲ್ಲಿ ವಹ್ನಿಸದೃಶನು. ವೇಗದಲ್ಲಿ ವಾಯುವಿನ ವೇಗಸಮನು. ಕ್ರೋಧದಲ್ಲಿ ಅಂತಕನಂತೆ ಮತ್ತು ಬಲದಲ್ಲಿ ಸಿಂಹದಂತೆ.

08050060a ಅಯೋರತ್ನಿರ್ಮಹಾಬಾಹುರ್ವ್ಯೂಢೋರಸ್ಕಃ ಸುದುರ್ಜಯಃ|

08050060c ಅತಿಮಾನೀ ಚ ಶೂರಶ್ಚ ಪ್ರವೀರಃ ಪ್ರಿಯದರ್ಶನಃ||

ಎತ್ತರವಾಗಿರುವನು. ಮಾಹಾಬಾಹು. ವಿಶಾಲ ಎದೆಯುಳ್ಳವನು. ಜಯಿಸಲು ಕಷ್ಟಕರನಾದವನು. ಅತಿಮಾನಿನಿಯು. ಶೂರ, ಪ್ರವೀರ ಮತ್ತು ನೋಡಲು ಸುಂದರನು.

08050061a ಸರ್ವೈರ್ಯೋಧಗುಣೈರ್ಯುಕ್ತೋ ಮಿತ್ರಾಣಾಮಭಯಂಕರಃ|

08050061c ಸತತಂ ಪಾಂಡವದ್ವೇಷೀ ಧಾರ್ತರಾಷ್ಟ್ರಹಿತೇ ರತಃ||

ಯೋಧನ ಸರ್ವ ಗುಣಗಳಿಂದಲೂ ಕೂಡಿದವನು. ಮಿತ್ರರಿಗೆ ಅಭಯವನ್ನುಂಟುಮಾಡುವವನು. ಸತತವೂ ಪಾಂಡವದ್ವೇಷಿಯಾಗಿರುವನು ಮತ್ತು ಧಾರ್ತರಾಷ್ಟ್ರರ ಹಿತದಲ್ಲಿ ನಿರತನಾಗಿರುವವನು.

08050062a ಸರ್ವೈರವಧ್ಯೋ ರಾಧೇಯೋ ದೇವೈರಪಿ ಸವಾಸವೈಃ|

08050062c ಋತೇ ತ್ವಾಮಿತಿ ಮೇ ಬುದ್ಧಿಸ್ತ್ವಮದ್ಯ ಜಹಿ ಸೂತಜಂ||

ರಾಧೇಯನು ನಿನ್ನನ್ನು ಮಾತ್ರ ಬಿಟ್ಟು ಎಲ್ಲರಿಂದಲೂ, ವಾಸವನೊಂದಿಗೆ ದೇವತೆಗಳಿಂದಲೂ, ಅವಧ್ಯನು ಎಂದು ನನ್ನ ಯೋಚನೆ. ಇಂದು ಸೂತಜನನ್ನು ಕೊಲ್ಲು!

08050063a ದೇವೈರಪಿ ಹಿ ಸಂಯತ್ತೈರ್ಬಿಭ್ರದ್ಭಿರ್ಮಾಂಸಶೋಣಿತಂ|

08050063c ಅಶಕ್ಯಃ ಸಮರೇ ಜೇತುಂ ಸರ್ವೈರಪಿ ಯುಯುತ್ಸುಭಿಃ||

ಮಾಂಸಶೋಣಿತಯುಕ್ತವಾದ ಶರೀರಗಳನ್ನು ಧರಿಸಿ ದೇವತೆಗಳು ಯುದ್ಧೋತ್ಸುಕರಾಗಿ ಬಂದರೂ ಸಮರದಲ್ಲಿ ಅವರೆಲ್ಲರಿಂದ ಇವನನ್ನು ಜಯಿಸಲು ಶಕ್ಯವಾಗುವುದಿಲ್ಲ.

08050064a ದುರಾತ್ಮಾನಂ ಪಾಪಮತಿಂ ನೃಶಂಸಂ

         ದುಷ್ಟಪ್ರಜ್ಞಂ ಪಾಂಡವೇಯೇಷು ನಿತ್ಯಂ|

08050064c ಹೀನಸ್ವಾರ್ಥಂ ಪಾಂಡವೇಯೈರ್ವಿರೋಧೇ

         ಹತ್ವಾ ಕರ್ಣಂ ಧಿಷ್ಠಿತಾರ್ಥೋ ಭವಾದ್ಯ||

ಇಂದು ಆ ದುರಾತ್ಮನನ್ನೂ, ಪಾಪಮತಿಯನ್ನೂ, ನೃಶಂಸನನ್ನೂ, ನಿತ್ಯವೂ ಪಾಂಡವರೊಡನೆ ದುಷ್ಟನಾಗಿ ನಡೆದುಕೊಂಡುಬಂದಿರುವ, ಹೀನಸ್ವಾರ್ಥಿ, ಪಾಂಡವೇಯರ ವಿರೋಧೀ ಕರ್ಣನನ್ನು ಸಂಹರಿಸಿ ನಿನ್ನ ಮನೋರಥವನ್ನು ಪೂರೈಸಿಕೋ!

08050065a ವೀರಂ ಮನ್ಯತ ಆತ್ಮಾನಂ ಯೇನ ಪಾಪಃ ಸುಯೋಧನಃ|

08050065c ತಮದ್ಯ ಮೂಲಂ ಪಾಪಾನಾಂ ಜಯ ಸೌತಿಂ ಧನಂಜಯ||

ಧನಂಜಯ! ಯಾರಿಂದಾಗಿ ಸುಯೋಧನನು ತನ್ನನ್ನು ವೀರನೆಂದು ತಿಳಿದುಕೊಂಡಿದ್ದಾನೋ ಅವನ ಪಾಪಗಳ ಮೂಲ ಸೌತಿಯನ್ನು ಇಂದು ಜಯಿಸು!””

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕೃಷ್ಣಾರ್ಜುನಸಂವಾದೇ ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಾರ್ಜುನಸಂವಾದ ಎನ್ನುವ ಐವತ್ತನೇ ಅಧ್ಯಾಯವು.

Related image

Comments are closed.