Drona Parva: Chapter 74

ದ್ರೋಣ ಪರ್ವ: ಜಯದ್ರಥವಧ ಪರ್ವ

೭೪

ಅರ್ಜುನನು ಸೇನೆಗಳನ್ನು ಸಂಹರಿಸಿ ದಾರಿಮಾಡಿಕೊಟ್ಟಂತೆ ಕೃಷ್ಣನು ರಥವನ್ನು ಸೈಂಧವನ ಕಡೆ ಓಡಿಸಲು ಕುದುರೆಗಳು ಬಳಲಿದುದು (೧-೧೬). ಅರ್ಜುನನು ಅವಂತಿಯ ವಿಂದಾನುವಿಂದರನ್ನು ವಧಿಸಿದುದು (೧೭-೩೩). ಬಳಲಿದ ಕುದುರೆಗಳಿಗೆ ನೀರುಕುಡಿಸಲು ಅರ್ಜುನನು ರಣರಂಗದ ಮಧ್ಯದಲ್ಲಿಯೇ ಸರೋವರವನ್ನು ನಿರ್ಮಿಸಿದುದು (೩೪-೫೮).

07074001 ಸಂಜಯ ಉವಾಚ|

07074001a ಪರಿವರ್ತಮಾನೇ ತ್ವಾದಿತ್ಯೇ ತತ್ರ ಸೂರ್ಯಸ್ಯ ರಶ್ಮಿಭಿಃ|

07074001c ರಜಸಾ ಕೀರ್ಯಮಾಣಾಶ್ಚ ಮಂದೀಭೂತಾಶ್ಚ ಸೈನಿಕಾಃ||

07074002a ತಿಷ್ಠತಾಂ ಯುಧ್ಯಮಾನಾನಾಂ ಪುನರಾವರ್ತತಾಮಪಿ|

07074002c ಭಜ್ಯತಾಂ ಜಯತಾಂ ಚೈವ ಜಗಾಮ ತದಹಃ ಶನೈಃ||

ಸಂಜಯನು ಹೇಳಿದನು: “ಆದಿತ್ಯನು ಅಲ್ಲಿ ಮರಳಿ ಹೋಗುತ್ತಿರಲು, ಮೇಲೆದ್ದ ಧೂಳಿನಿಂದ ಸೂರ್ಯನ ರಶ್ಮಿಯು ಕುಂದಿತವಾಗುತ್ತಿರಲು, ಸೈನಿಕರು ನಿಂತಿದ್ದರು, ಯುದ್ಧಮಾಡುತ್ತಿದ್ದರು, ಜಯವನ್ನು ಬಯಸಿ ಪುನಃ ಹಿಂದಿರುಗಿ ಬರುತ್ತಿದ್ದರು. ಹಾಗೆ ದಿನವು ಮೆಲ್ಲಗೆ ಕಳೆಯತೊಡಗಿತು.

07074003a ತಥಾ ತೇಷು ವಿಷಕ್ತೇಷು ಸೈನ್ಯೇಷು ಜಯಗೃದ್ಧಿಷು|

07074003c ಅರ್ಜುನೋ ವಾಸುದೇವಶ್ಚ ಸೈಂಧವಾಯೈವ ಜಗ್ಮತುಃ||

ಹಾಗೆ ಆ ಸೇನೆಗಳು ಜಯವನ್ನು ಬಯಸಿ ಹೋರಾಡುತ್ತಿರಲು ಅರ್ಜುನ ಮತ್ತು ವಾಸುದೇವರು ಸೈಂಧವನ ಕಡೆ ಹೊರಟರು.

07074004a ರಥಮಾರ್ಗಪ್ರಮಾಣಂ ತು ಕೌಂತೇಯೋ ನಿಶಿತೈಃ ಶರೈಃ|

07074004c ಚಕಾರ ತತ್ರ ಪಂಥಾನಂ ಯಯೌ ಯೇನ ಜನಾರ್ದನಃ||

ಕೌಂತೇಯನು ನಿಶಿತ ಶರಗಳಿಂದ ರಥಕ್ಕೆ ಬೇಕಾದಷ್ಟು ಮಾರ್ಗವನ್ನು ಮಾಡಿಕೊಡುತ್ತಿದ್ದನು. ಆ ಮಾರ್ಗದಲ್ಲಿ ಜನಾರ್ದನನು ಹೋಗುತ್ತಿದ್ದನು.

07074005a ಯತ್ರ ಯತ್ರ ರಥೋ ಯಾತಿ ಪಾಂಡವಸ್ಯ ಮಹಾತ್ಮನಃ|

07074005c ತತ್ರ ತತ್ರೈವ ದೀರ್ಯಂತೇ ಸೇನಾಸ್ತವ ವಿಶಾಂ ಪತೇ||

ವಿಶಾಂಪತೇ! ಎಲ್ಲೆಲ್ಲಿ ಮಹಾತ್ಮ ಪಾಂಡವನ ರಥವು ಹೋಗುತ್ತಿತ್ತೋ ಅಲ್ಲಲ್ಲಿ ನಿನ್ನ ಸೇನೆಯು ಸೀಳಿ ಹೋಗುತ್ತಿತ್ತು.

07074006a ರಥಶಿಕ್ಷಾಂ ತು ದಾಶಾರ್ಹೋ ದರ್ಶಯಾಮಾಸ ವೀರ್ಯವಾನ್|

07074006c ಉತ್ತಮಾಧಮಮಧ್ಯಾನಿ ಮಂಡಲಾನಿ ವಿದರ್ಶಯನ್||

ವೀರ್ಯವಾನ್ ದಾಶಾರ್ಹನು ತನ್ನ ರಥಶಿಕ್ಷಣವನ್ನು ತೋರಿಸಿದನು. ಉತ್ತಮ, ಅಧಮ ಮತ್ತು ಮಧ್ಯಮ ಮಂಡಲಗಳನ್ನು ಪ್ರದರ್ಶಿಸಿದನು.

07074007a ತೇ ತು ನಾಮಾಂಕಿತಾಃ ಪೀತಾಃ ಕಾಲಜ್ವಲನಸನ್ನಿಭಾಃ|

07074007c ಸ್ನಾಯುನದ್ಧಾಃ ಸುಪರ್ವಾಣಃ ಪೃಥವೋ ದೀರ್ಘಗಾಮಿನಃ||

07074008a ವೈಣವಾಯಸ್ಮಯಶರಾಃ ಸ್ವಾಯತಾ ವಿವಿಧಾನನಾಃ|

07074008c ರುಧಿರಂ ಪತಗೈಃ ಸಾರ್ಧಂ ಪ್ರಾಣಿನಾಂ ಪಪುರಾಹವೇ||

07074009a ರಥಸ್ಥಿತಃ ಕ್ರೋಶಮಾತ್ರೇ ಯಾನಸ್ಯತ್ಯರ್ಜುನಃ ಶರಾನ್|

07074009c ರಥೇ ಕ್ರೋಶಮತಿಕ್ರಾಂತೇ ತಸ್ಯ ತೇ ಘ್ನಂತಿ ಶಾತ್ರವಾನ್||

ಹೋಗುತ್ತಿರುವ ರಥದಲ್ಲಿ ನಿಂತ ಅರ್ಜುನನು ತನ್ನ ನಾಮಾಂಕಿತವಾಗಿದ್ದ, ಹಿತ್ತಾಳೆಯ, ಕಾಲಜ್ವಲನದಂತಿರುವ, ಸ್ನಾಯುಗಳಿಂದ ಬಂಧಿಸಲ್ಪಟ್ಟ, ನೇರವಾದ, ದಪ್ಪನಾದ, ದೂರಹೋಗಬಲ್ಲ, ಬಿದಿರು ಅಥವಾ ಉಕ್ಕಿನಿಂದ ಮಾಡಲ್ಪಟ್ಟ, ವಿವಿಧ ಶತ್ರುಗಳ ಜೀವವನ್ನು ತೆಗೆದ, ಪಕ್ಷಿಗಳೊಡನೆ ಯುದ್ಧದಲ್ಲಿ ಪ್ರಾಣಿಗಳ ರಕ್ತವನ್ನು ಕುಡಿಯುವ ಶರಗಳನ್ನು ಕ್ರೋಶಮಾತ್ರ ದೂರ ಪ್ರಯೋಗಿಸಲು ಅವುಗಳು ಅವನ ರಥವು ಆ ಕ್ರೋಶ ದೂರವನ್ನು ದಾಟಿ ಬರುವಷ್ಟರಲ್ಲಿ ಶತ್ರುಗಳನ್ನು ಸಂಹರಿಸುತ್ತಿದ್ದವು.

07074010a ತಾರ್ಕ್ಷ್ಯಮಾರುತರಂಹೋಭಿರ್ವಾಜಿಭಿಃ ಸಾಧುವಾಹಿಭಿಃ|

07074010c ತಥಾಗಚ್ಚದ್ಧೃಷೀಕೇಶಃ ಕೃತ್ಸ್ನಂ ವಿಸ್ಮಾಪಯನ್ಜಗತ್||

ಗರುಡ-ಮಾರುತರಂತೆ ವೇಗವುಳ್ಳ ಸಾಧುವಾಹನಗಳಾದ ಕುದುರೆಗಳನ್ನು ಹೃಷೀಕೇಶನು ಹೇಗೆ ಓಡಿಸುತ್ತಿದ್ದನೆಂದರೆ ಅದರಿಂದ ಇಡೀ ಜಗತ್ತೇ ವಿಸ್ಮಯಗೊಂಡಿತು.

07074011a ನ ತಥಾ ಗಚ್ಚತಿ ರಥಸ್ತಪನಸ್ಯ ವಿಶಾಂ ಪತೇ|

07074011c ನೇಂದ್ರಸ್ಯ ನ ಚ ರುದ್ರಸ್ಯ ನಾಪಿ ವೈಶ್ರವಣಸ್ಯ ಚ||

ವಿಶಾಂಪತೇ! ಅದರಂತೆ ಸೂರ್ಯನ ರಥವಾಗಲೀ ಇಂದ್ರನ, ರುದ್ರನ ಅಥವಾ ವೈಶ್ರವಣನ ರಥವಾಗಲೀ ಓಡುವುದಿಲ್ಲ.

07074012a ನಾನ್ಯಸ್ಯ ಸಮರೇ ರಾಜನ್ಗತಪೂರ್ವಸ್ತಥಾ ರಥಃ|

07074012c ಯಥಾ ಯಯಾವರ್ಜುನಸ್ಯ ಮನೋಭಿಪ್ರಾಯಶೀಘ್ರಗಃ||

ರಾಜನ್! ಹೇಗೆ ಅರ್ಜುನನ ರಥವು ಮನಸ್ಸಿನ ಅಭಿಪ್ರಾಯಗಳಷ್ಟೇ ಶೀಘ್ರವಾಗಿ ಹೋಗುತ್ತಿತ್ತೋ ಹಾಗೆ ಬೇರೆ ಯಾರ ರಥವೂ ಈ ಹಿಂದೆ ರಣದಲ್ಲಿ ಓಡುತ್ತಿರಲಿಲ್ಲ.

07074013a ಪ್ರವಿಶ್ಯ ತು ರಣೇ ರಾಜನ್ಕೇಶವಃ ಪರವೀರಹಾ|

07074013c ಸೇನಾಮಧ್ಯೇ ಹಯಾಂಸ್ತೂರ್ಣಂ ಚೋದಯಾಮಾಸ ಭಾರತ||

ಭಾರತ! ರಾಜನ್! ರಣವನ್ನು ಪ್ರವೇಶಿಸಿ ಪರವೀರಹ ಕೇಶವನು ಸೇನೆಗಳ ಮಧ್ಯದಲ್ಲಿ ತಕ್ಷಣವೇ ಕುದುರೆಗಳನ್ನು ಪ್ರಚೋದಿಸಿದನು.

07074014a ತತಸ್ತಸ್ಯ ರಥೌಘಸ್ಯ ಮಧ್ಯಂ ಪ್ರಾಪ್ಯ ಹಯೋತ್ತಮಾಃ|

07074014c ಕೃಚ್ಚ್ರೇಣ ರಥಮೂಹುಸ್ತಂ ಕ್ಷುತ್ಪಿಪಾಸಾಶ್ರಮಾನ್ವಿತಾಃ||

07074015a ಕ್ಷತಾಶ್ಚ ಬಹುಭಿಃ ಶಸ್ತ್ರೈರ್ಯುದ್ಧಶೌಂಡೈರನೇಕಶಃ|

07074015c ಮಂಡಲಾನಿ ವಿಚಿತ್ರಾಣಿ ವಿಚೇರುಸ್ತೇ ಮುಹುರ್ಮುಹುಃ||

07074016a ಹತಾನಾಂ ವಾಜಿನಾಗಾನಾಂ ರಥಾನಾಂ ಚ ನರೈಃ ಸಹ|

07074016c ಉಪರಿಷ್ಟಾದತಿಕ್ರಾಂತಾಃ ಶೈಲಾಭಾನಾಂ ಸಹಸ್ರಶಃ||

ಆಗ ಆ ರಥಸಮೂಹಗಳ ಮಧ್ಯೆ ಬಂದು ಆ ಉತ್ತಮ ಕುದುರೆಗಳಿಗೆ ಹಸಿವು-ಬಾಯಾರಿಕೆ-ಬಳಲಿಕೆಗಳಿಂದ ರಥವನ್ನು ಹೊರಲು ಕಷ್ಟವಾಯಿತು. ಅವು ಅನೇಕ ಶಸ್ತ್ರಗಳಿಂದ, ಅನೇಕ ಯುದ್ಧಶೌಂಡರಿಂದ ಗಾಯಗೊಂಡಿದ್ದವು. ಪುನಃ ಪುನಃ ವಿಚಿತ್ರ ಮಂಡಲಗಳಲ್ಲಿ ತಿರುಗಿ ಬಳಲಿದ್ದವು. ಹತವಾಗಿದ್ದ ಸಾವಿರಾರು ಕುದುರೆ-ಆನೆ-ರಥ-ನರರ ಹೆಣಗಳ ರಾಶಿಗಳನ್ನು ಹಾರಿ ಓಡಿ ಬಳಲಿದ್ದವು.

07074017a ಏತಸ್ಮಿನ್ನಂತರೇ ವೀರಾವಾವಂತ್ಯೌ ಭ್ರಾತರೌ ನೃಪ|

07074017c ಸಹಸೇನೌ ಸಮಾರ್ಚೇತಾಂ ಪಾಂಡವಂ ಕ್ಲಾಂತವಾಹನಂ||

ನೃಪ! ಈ ಮಧ್ಯದಲ್ಲಿ ಬಳಲಿದ ಕುದುರೆಗಳಿದ್ದ ಪಾಂಡವನನ್ನು ವೀರರಾದ ಅವಂತಿಯ ಸಹೋದರರು ಸೇನೆಗಳೊಂದಿಗೆ ಆಕ್ರಮಣಿಸಿದರು.

07074018a ತಾವರ್ಜುನಂ ಚತುಃಷಷ್ಟ್ಯಾ ಸಪ್ತತ್ಯಾ ಚ ಜನಾರ್ದನಂ|

07074018c ಶರಾಣಾಂ ಚ ಶತೇನಾಶ್ವಾನವಿಧ್ಯೇತಾಂ ಮುದಾನ್ವಿತೌ||

ಮುದಾನ್ವಿತರಾದ ಅವರು ಅರ್ಜುನನನ್ನು ಅರವತ್ನಾಲ್ಕು ಮತ್ತು ಜನಾರ್ದನನನ್ನು ಎಪ್ಪತ್ತು ಬಾಣಗಳಿಂದ ಹಾಗೂ ನೂರರಿಂದ ಕುದುರೆಗಳನ್ನು ಹೊಡೆದರು.

07074019a ತಾವರ್ಜುನೋ ಮಹಾರಾಜ ನವಭಿರ್ನತಪರ್ವಭಿಃ|

07074019c ಆಜಘಾನ ರಣೇ ಕ್ರುದ್ಧೋ ಮರ್ಮಜ್ಞೋ ಮರ್ಮಭೇದಿಭಿಃ||

ಮಹಾರಾಜ! ಮರ್ಮಜ್ಞ ಅರ್ಜುನನು ರಣದಲ್ಲಿ ಕ್ರುದ್ಧನಾಗಿ ಒಂಭತ್ತು ಮರ್ಮಭೇದಿ ನತಪರ್ವಗಳಿಂದ ಅವರನ್ನು ಹೊಡೆದನು.

07074020a ತತಸ್ತೌ ತು ಶರೌಘೇಣ ಬೀಭತ್ಸುಂ ಸಹಕೇಶವಂ|

07074020c ಆಚ್ಚಾದಯೇತಾಂ ಸಂರಬ್ಧೌ ಸಿಂಹನಾದಂ ಚ ನೇದತುಃ||

ಆಗ ಅವರಿಬ್ಬರೂ ಕ್ರೋಧಿತರಾಗಿ ಶರ ಸಮೂಹಗಳಿಂದ ಕೇಶವನೊಂದಿಗೆ ಬೀಭತ್ಸುವನ್ನು ಮುಚ್ಚಿ, ಸಿಂಹನಾದಗೈದರು.

07074021a ತಯೋಸ್ತು ಧನುಷೀ ಚಿತ್ರೇ ಭಲ್ಲಾಭ್ಯಾಂ ಶ್ವೇತವಾಹನಃ|

07074021c ಚಿಚ್ಚೇದ ಸಮರೇ ತೂರ್ಣಂ ಧ್ವಜೌ ಚ ಕನಕೋಜ್ಜ್ವಲೌ||

ಶ್ವೇತವಾಹನನಾದರೋ ಸಮರದಲ್ಲಿ ಕೂಡಲೇ ಭಲ್ಲಗಳೆರಡರಿಂದ ಅವರ ಬಣ್ಣದ ಧನುಸ್ಸುಗಳನ್ನೂ ಕನಕೋಜ್ಜ್ವಲ ಧ್ವಜಗಳನ್ನೂ ಕತ್ತರಿಸಿದನು.

07074022a ಅಥಾನ್ಯೇ ಧನುಷೀ ರಾಜನ್ಪ್ರಗೃಹ್ಯ ಸಮರೇ ತದಾ|

07074022c ಪಾಂಡವಂ ಭೃಶಸಂಕ್ರುದ್ಧಾವರ್ದಯಾಮಾಸತುಃ ಶರೈಃ||

ರಾಜನ್! ಆಗ ಸಮರದಲ್ಲಿ ಬೇರೆ ಧನುಸ್ಸುಗಳನ್ನು ತೆಗೆದು ಕೊಂಡು, ತುಂಬಾ ಕ್ರುದ್ಧರಾಗಿ, ಪಾಂಡವನನ್ನು ಶರಗಳಿಂದ ಹೊಡೆಯತೊಡಗಿದರು.

07074023a ತಯೋಸ್ತು ಭೃಶಸಂಕ್ರುದ್ಧಃ ಶರಾಭ್ಯಾಂ ಪಾಂಡುನಂದನಃ|

07074023c ಚಿಚ್ಚೇದ ಧನುಷೀ ತೂರ್ಣಂ ಭೂಯ ಏವ ಧನಂಜಯಃ||

ಅವರ ಮೇಲೆ ತುಂಬಾ ಸಂಕ್ರುದ್ಧನಾದ ಪಾಂಡುನಂದನ ಧನಂಜಯನು ಬೇಗನೆ ಎರಡು ಶರಗಳಿಂದ ಅವರ ಧನುಸ್ಸುಗಳನ್ನು ಮತ್ತೊಮ್ಮೆ ತುಂಡರಿಸಿದನು.

07074024a ತಥಾನ್ಯೈರ್ವಿಶಿಖೈಸ್ತೂರ್ಣಂ ಹೇಮಪುಂಖೈಃ ಶಿಲಾಶಿತೈಃ|

07074024c ಜಘಾನಾಶ್ವಾನ್ಸಪದಾತಾಂಸ್ತಥೋಭೌ ಪಾರ್ಷ್ಣಿಸಾರಥೀ||

ಅನಂತರ ಕೂಡಲೇ ಹೇಮಪುಂಖವುಳ್ಳ, ಶಿಲಾಶಿತ ವಿಶಿಖಗಳಿಂದ ಅವರ ಕುದುರೆಗಳನ್ನೂ, ಪದಾತಿಗಳೊಂದಿಗೆ ಅವರ ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು.

07074025a ಜ್ಯೇಷ್ಠಸ್ಯ ಚ ಶಿರಃ ಕಾಯಾತ್ ಕ್ಷುರಪ್ರೇಣ ನ್ಯಕೃಂತತ|

07074025c ಸ ಪಪಾತ ಹತಃ ಪೃಥ್ವ್ಯಾಂ ವಾತರುಗ್ಣ ಇವ ದ್ರುಮಃ||

ಕ್ಷುರಪ್ರದಿಂದ ಹಿರಿಯವನ ಶಿರವನ್ನು ಕಾಯದಿಂದ ಬೇರ್ಪಡಿಸಲು ಅವನು ಭಿರುಗಾಳಿಗೆ ಸಿಕ್ಕ ವೃಕ್ಷದಂತೆ ಹತನಾಗಿ ಭೂಮಿಯ ಮೇಲೆ ಬಿದ್ದನು.

07074026a ವಿಂದಂ ತು ನಿಹತಂ ದೃಷ್ಟ್ವಾ ಅನುವಿಂದಃ ಪ್ರತಾಪವಾನ್|

07074026c ಹತಾಶ್ವಂ ರಥಮುತ್ಸೃಜ್ಯ ಗದಾಂ ಗೃಹ್ಯ ಮಹಾಬಲಃ||

07074027a ಅಭ್ಯದ್ರವತ ಸಂಗ್ರಾಮೇ ಭ್ರಾತುರ್ವಧಮನುಸ್ಮರನ್|

07074027c ಗದಯಾ ಗದಿನಾಂ ಶ್ರೇಷ್ಠೋ ನೃತ್ಯನ್ನಿವ ಮಹಾರಥಃ||

ವಿಂದನು ಹತನಾದುದನ್ನು ನೋಡಿ ಪ್ರತಾಪವಾನ್ ಮಹಾಬಲ ಗದಿಗಳಲ್ಲಿ ಶ್ರೇಷ್ಠ ಮಹಾರಥ ಅನುವಿಂದನು ಅಣ್ಣನ ವಧೆಯನ್ನು ನೆನೆದುಕೊಳ್ಳುತ್ತಾ, ಕುದುರೆಗಳನ್ನು ಕಳೆದುಕೊಂಡಿದ್ದ ರಥದಿಂದ ಇಳಿದು ಗದೆಯನ್ನು ಹಿಡಿದು ಗದೆಯೊಂದಿಗೆ ನೃತ್ಯವಾಡುತ್ತಿರುವನೋ ಎನ್ನುವಂತೆ ಸಂಗ್ರಾಮದಲ್ಲಿ ಮುನ್ನುಗ್ಗಿದ್ದನು.

07074028a ಅನುವಿಂದಸ್ತು ಗದಯಾ ಲಲಾಟೇ ಮಧುಸೂದನಂ|

07074028c ಸ್ಪೃಷ್ಟ್ವಾ ನಾಕಂಪಯತ್ಕ್ರುದ್ಧೋ ಮೈನಾಕಮಿವ ಪರ್ವತಂ||

ಅನುವಿಂದನು ಕೋಪಗೊಂಡು ಗದೆಯಿಂದ ಮಧುಸೂದನನ ಹಣೆಯ ಮೇಲೆ ಹೊಡೆಯಲು ಅವನು ಮೈನಾಕ ಪರ್ವತದಂತೆ ಹಂದಾಡಲಿಲ್ಲ.

07074029a ತಸ್ಯಾರ್ಜುನಃ ಶರೈಃ ಷಡ್ಭಿರ್ಗ್ರೀವಾಂ ಪಾದೌ ಭುಜೌ ಶಿರಃ|

07074029c ನಿಚಕರ್ತ ಸ ಸಂಚಿನ್ನಃ ಪಪಾತಾದ್ರಿಚಯೋ ಯಥಾ||

ಅರ್ಜುನನು ಆರು ಶರಗಳಿಂದ ಅವನ ಕುತ್ತಿಗೆಯನ್ನೂ, ಪಾದಗಳೆರಡನ್ನೂ, ಭುಜಗಳೆರಡನ್ನೂ ಮತ್ತು ಶಿರವನ್ನೂ ಕತ್ತರಿಸಲು ಅವನು ಪುಡಿಪುಡಿಯಾದ ಪರ್ವತದಂತೆ ತುಂಡಾಗಿ ಕೆಳಗೆ ಬಿದ್ದನು.

07074030a ತತಸ್ತೌ ನಿಹತೌ ದೃಷ್ಟ್ವಾ ತಯೋ ರಾಜನ್ಪದಾನುಗಾಃ|

07074030c ಅಭ್ಯದ್ರವಂತ ಸಂಕ್ರುದ್ಧಾಃ ಕಿರಂತಃ ಶತಶಃ ಶರಾನ್||

ರಾಜನ್! ಅವರು ಹತರಾದುದನ್ನು ನೋಡಿ ಅವರ ಪದಾನುಗರು ಸಂಕ್ರುದ್ಧರಾಗಿ ನೂರಾರು ಶರಗಳನ್ನು ಎರಚುತ್ತಾ ಆಕ್ರಮಣಿಸಿದರು.

07074031a ತಾನರ್ಜುನಃ ಶರೈಸ್ತೂರ್ಣಂ ನಿಹತ್ಯ ಭರತರ್ಷಭ|

07074031c ವ್ಯರೋಚತ ಯಥಾ ವಹ್ನಿರ್ದಾವಂ ದಗ್ಧ್ವಾ ಹಿಮಾತ್ಯಯೇ||

ಭರತರ್ಷಭ! ಅವರನ್ನು ಕೂಡಲೇ ಶರಗಳಿಂದ ಸಂಹರಿಸಿ ಛಳಿಗಾಲದ ಕೊನೆಯಲ್ಲಿ ಅರಣ್ಯವನ್ನು ದಹಿಸಿ ಪ್ರಜ್ವಲಿಸುವ ಅಗ್ನಿಯಂತೆ ಅರ್ಜುನನು ವಿರಾಜಿಸಿದನು.

07074032a ತಯೋಃ ಸೇನಾಮತಿಕ್ರಮ್ಯ ಕೃಚ್ಚ್ರಾನ್ನಿರ್ಯಾದ್ಧನಂಜಯಃ|

07074032c ವಿಬಭೌ ಜಲದಾನ್ಭಿತ್ತ್ವಾ ದಿವಾಕರ ಇವೋದಿತಃ||

ಕಷ್ಟದಿಂದ ಅವರ ಸೇನೆಯನ್ನು ಅತಿಕ್ರಮಿಸಿ ಮೋಡದ ಆವರಣವನ್ನು ಒಡೆದು ಉದಯಿಸುವ ಸೂರ್ಯನಂತೆ ಕಂಡನು.

07074033a ತಂ ದೃಷ್ಟ್ವಾ ಕುರವಸ್ತ್ರಸ್ತಾಃ ಪ್ರಹೃಷ್ಟಾಶ್ಚಾಭವನ್ಪುನಃ|

07074033c ಅಭ್ಯವರ್ಷಂಸ್ತದಾ ಪಾರ್ಥಂ ಸಮಂತಾದ್ಭರತರ್ಷಭ||

ಭರತರ್ಷಭ! ಅವನು ಬಳಲಿದುದನ್ನು ಕಂಡು ಸಂತೋಷಗೊಂಡು ಕುರುಗಳು ಪುನಃ ಪಾರ್ಥನನ್ನು ಎಲ್ಲ ಕಡೆಗಳಿಂದ ಆಕ್ರಮಣಿಸಿದರು.

07074034a ಶ್ರಾಂತಂ ಚೈನಂ ಸಮಾಲಕ್ಷ್ಯ ಜ್ಞಾತ್ವಾ ದೂರೇ ಚ ಸೈಂಧವಂ|

07074034c ಸಿಂಹನಾದೇನ ಮಹತಾ ಸರ್ವತಃ ಪರ್ಯವಾರಯನ್||

ಅವನು ಆಯಾಸಗೊಂಡಿದುದನ್ನು ಮತ್ತು ಸೈಂಧವನು ಇನ್ನೂ ದೂರದಲ್ಲಿರುವುದನ್ನು ತಿಳಿದು ಮಹಾ ಸಿಂಹನಾದದಿಂದ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದರು.

07074035a ತಾಂಸ್ತು ದೃಷ್ಟ್ವಾ ಸುಸಂರಬ್ಧಾನುತ್ಸ್ಮಯನ್ಪುರುಷರ್ಷಭಃ|

07074035c ಶನಕೈರಿವ ದಾಶಾರ್ಹಮರ್ಜುನೋ ವಾಕ್ಯಮಬ್ರವೀತ್||

ಸುಸಂರಬ್ಧರಾಗಿರುವ ಅವರನ್ನು ನೋಡಿ ನಸುನಕ್ಕು ಪುರುಷರ್ಷಭ ಅರ್ಜುನನು ದಾಶಾರ್ಹನಿಗೆ ಮೆಲ್ಲನೆ ನುಡಿದನು:

07074036a ಶರಾರ್ದಿತಾಶ್ಚ ಗ್ಲಾನಾಶ್ಚ ಹಯಾ ದೂರೇ ಚ ಸೈಂಧವಃ|

07074036c ಕಿಮಿಹಾನಂತರಂ ಕಾರ್ಯಂ ಜ್ಯಾಯಿಷ್ಠಂ ತವ ರೋಚತೇ||

“ಕುದುರೆಗಳು ಬಾಣಗಳಿಂದ ಗಾಯಗೊಂಡಿವೆ ಮತ್ತು ಬಳಲಿವೆ. ಸೈಂಧವನೂ ದೂರದಲ್ಲಿದ್ದಾನೆ. ಈಗ ಮತ್ತು ಮುಂದೆ ಮಾಡಬೇಕಾಗಿರುವ ಕೆಲಸವ್ಯಾವುದು? ನಿನಗೆ ಏನು ಅನಿಸುತ್ತದೆ?

07074037a ಬ್ರೂಹಿ ಕೃಷ್ಣ ಯಥಾತತ್ತ್ವಂ ತ್ವಂ ಹಿ ಪ್ರಾಜ್ಞತಮಃ ಸದಾ|

07074037c ಭವನ್ನೇತ್ರಾ ರಣೇ ಶತ್ರೂನ್ವಿಜೇಷ್ಯಂತೀಹ ಪಾಂಡವಾಃ||

ಕೃಷ್ಣ! ಇದ್ದುದನ್ನು ಇದ್ದಹಾಗೆ ಹೇಳು. ಸದಾ ನಿನಗೆ ಹೆಚ್ಚಾಗಿ ತಿಳಿದಿರುತ್ತದೆ. ರಣದಲ್ಲಿ ಶತ್ರುಗಳನ್ನು ಜಯಿಸುವ ಪಾಂಡವರಿಗೆ ನೀನೇ ನೇತಾರ.

07074038a ಮಮ ತ್ವನಂತರಂ ಕೃತ್ಯಂ ಯದ್ವೈ ತತ್ಸನ್ನಿಬೋಧ ಮೇ|

07074038c ಹಯಾನ್ವಿಮುಚ್ಯ ಹಿ ಸುಖಂ ವಿಶಲ್ಯಾನ್ಕುರು ಮಾಧವ||

ಈಗ ನಾನು ಏನನ್ನು ಮಾಡಬೇಕೆಂದು ನನಗೆ ಹೇಳು. ಮಾಧವ! ಕುದುರೆಗಳನ್ನು ಬಿಚ್ಚಿ ಅವುಗಳಿಗೆ ಅಂಟಿಕೊಂಡಿರುವ ಬಾಣಗಳನ್ನು ಕೀಳು!”

07074039a ಏವಮುಕ್ತಸ್ತು ಪಾರ್ಥೇನ ಕೇಶವಃ ಪ್ರತ್ಯುವಾಚ ತಂ|

07074039c ಮಮಾಪ್ಯೇತನ್ಮತಂ ಪಾರ್ಥ ಯದಿದಂ ತೇ ಪ್ರಭಾಷಿತಂ||

ಪಾರ್ಥನು ಹೀಗೆ ಹೇಳಲು ಕೇಶವನು ಅವನಿಗೆ ಉತ್ತರಿಸಿದನು: “ಪಾರ್ಥ! ನೀನು ಏನು ಹೇಳುತ್ತಿದ್ದೀಯೋ ಅದು ನನ್ನ ಮತವೂ ಆಗಿದೆ.”

07074040 ಅರ್ಜುನ ಉವಾಚ|

07074040a ಅಹಮಾವಾರಯಿಷ್ಯಾಮಿ ಸರ್ವಸೈನ್ಯಾನಿ ಕೇಶವ|

07074040c ತ್ವಮಪ್ಯತ್ರ ಯಥಾನ್ಯಾಯಂ ಕುರು ಕಾರ್ಯಮನಂತರಂ||

ಅರ್ಜುನನು ಹೇಳಿದನು: “ಕೇಶವ! ನಾನು ಸರ್ವ ಸೇನೆಗಳನ್ನೂ ತಡೆಯುತ್ತೇನೆ. ನೀನು ಈಗ ಮಾಡಬೇಕಾದುದನ್ನು ಮಾಡು!””

07074041 ಸಂಜಯ ಉವಾಚ|

07074041a ಸೋಽವತೀರ್ಯ ರಥೋಪಸ್ಥಾದಸಂಭ್ರಾಂತೋ ಧನಂಜಯಃ|

07074041c ಗಾಂಡೀವಂ ಧನುರಾದಾಯ ತಸ್ಥೌ ಗಿರಿರಿವಾಚಲಃ||

ಸಂಜಯನು ಹೇಳಿದನು: “ಧನಂಜಯನು ಗಾಬರಿಗೊಳ್ಳದೇ ರಥದಿಂದ ಕೆಳಗಿಳಿದು ಗಾಂಡೀವ ಧನುಸ್ಸನ್ನು ಹಿಡಿದು ಗಿರಿಯಂತೆ ಅಚಲವಾಗಿ ನಿಂತನು.

07074042a ತಮಭ್ಯಧಾವನ್ಕ್ರೋಶಂತಃ ಕ್ಷತ್ರಿಯಾ ಜಯಕಾಂಕ್ಷಿಣಃ|

07074042c ಇದಂ ಚಿದ್ರಮಿತಿ ಜ್ಞಾತ್ವಾ ಧರಣೀಸ್ಥಂ ಧನಂಜಯಂ||

ಆಗ ಇದೇ ಅವಕಾಶವೆಂದು ತಿಳಿದು ಜಯಕಾಂಕ್ಷಿ ಕ್ಷತ್ರಿಯುರು ಕೂಗುತ್ತಾ ಅವನನ್ನು ಆಕ್ರಮಣಿಸಿದರು.

07074043a ತಮೇಕಂ ರಥವಂಶೇನ ಮಹತಾ ಪರ್ಯವಾರಯನ್|

07074043c ವಿಕರ್ಷಂತಶ್ಚ ಚಾಪಾನಿ ವಿಸೃಜಂತಶ್ಚ ಸಾಯಕಾನ್||

ಅವನೊಬ್ಬನನ್ನು ಮಹಾ ರಥಸಮೂಹಗಳೊಂದಿಗೆ, ಚಾಪಗಳನ್ನು ಎಳೆಯುತ್ತಾ ಸಾಯಕಗಳನ್ನು ಬಿಡುತ್ತಾ ಸುತ್ತುವರೆದರು.

07074044a ಅಸ್ತ್ರಾಣಿ ಚ ವಿಚಿತ್ರಾಣಿ ಕ್ರುದ್ಧಾಸ್ತತ್ರ ವ್ಯದರ್ಶಯನ್|

07074044c ಚಾದಯಂತಃ ಶರೈಃ ಪಾರ್ಥಂ ಮೇಘಾ ಇವ ದಿವಾಕರಂ||

ಕ್ರುದ್ಧರಾಗಿ ವಿಚಿತ್ರ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಸೂರ್ಯನನ್ನು ಮೋಡಗಳಂತೆ ಪಾರ್ಥನನ್ನು ಶರಗಳಿಂದ ಮುಚ್ಚಿದರು.

07074045a ಅಭ್ಯದ್ರವಂತ ವೇಗೇನ ಕ್ಷತ್ರಿಯಾಃ ಕ್ಷತ್ರಿಯರ್ಷಭಂ|

07074045c ರಥಸಿಂಹಂ ರಥೋದಾರಾಃ ಸಿಂಹಂ ಮತ್ತಾ ಇವ ದ್ವಿಪಾಃ||

ಸಿಂಹವನ್ನು ಮದಿಸಿದ ಆನೆಗಳು ಹೇಗೋ ಹಾಗೆ ವೇಗದಿಂದ ಕ್ಷತ್ರಿಯ ರಥೋದಾರರು ಆ ಕ್ಷತ್ರಿಯರ್ಷಭ ರಥಸಿಂಹನನ್ನು ಆಕ್ರಮಣಿಸಿದರು.

07074046a ತತ್ರ ಪಾರ್ಥಸ್ಯ ಭುಜಯೋರ್ಮಹದ್ಬಲಮದೃಶ್ಯತ|

07074046c ಯತ್ಕ್ರುದ್ಧೋ ಬಹುಲಾಃ ಸೇನಾಃ ಸರ್ವತಃ ಸಮವಾರಯತ್||

ಹೀಗೆ ಕ್ರುದ್ಧವಾಗಿದ್ದ ಅನೇಕ ಸೇನೆಗಳಿಂದ ಎಲ್ಲಕಡೆಗಳಿಂದ ಸುತ್ತುವರೆಯಲ್ಪಟ್ಟಿದ್ದ ಪಾರ್ಥನ ಭುಜಗಳ ಮಹಾಬಲವನ್ನು ಅಲ್ಲಿ ನೋಡಿದೆವು.

07074047a ಅಸ್ತ್ರೈರಸ್ತ್ರಾಣಿ ಸಂವಾರ್ಯ ದ್ವಿಷತಾಂ ಸರ್ವತೋ ವಿಭುಃ|

07074047c ಇಷುಭಿರ್ಬಹುಭಿಸ್ತೂರ್ಣಂ ಸರ್ವಾನೇವ ಸಮಾವೃಣೋತ್||

ಅಸ್ತ್ರಗಳಿಂದ ಅಸ್ತ್ರಗಳನ್ನು ನಿವಾರಿಸಿ ವಿಭುವು ಕೂಡಲೇ ಎಲ್ಲರೂ ನೋಡುತ್ತಿದ್ದಂತೆಯೇ ಅನೇಕ ಬಾಣಗಳಿಂದ ಎಲ್ಲರನ್ನೂ ಮುಚ್ಚಿಬಿಟ್ಟನು.

07074048a ತತ್ರಾಂತರಿಕ್ಷೇ ಬಾಣಾನಾಂ ಪ್ರಗಾಢಾನಾಂ ವಿಶಾಂ ಪತೇ|

07074048c ಸಂಘರ್ಷೇಣ ಮಹಾರ್ಚಿಷ್ಮಾನ್ಪಾವಕಃ ಸಮಜಾಯತ||

ವಿಶಾಂಪತೇ! ಅಂತರಿಕ್ಷದಲ್ಲಿ ಬಹುಸಂಖ್ಯಾತ ಬಾಣಗಳ ಸಂಘರ್ಷದಿಂದಾಗಿ ಜೋರಾಗಿ ಜ್ವಾಲೆಗಳ ಬೆಂಕಿಯು ಹುಟ್ಟಿಕೊಂಡಿತು.

07074049a ತತ್ರ ತತ್ರ ಮಹೇಷ್ವಾಸೈಃ ಶ್ವಸದ್ಭಿಃ ಶೋಣಿತೋಕ್ಷಿತೈಃ|

07074049c ಹಯೈರ್ನಾಗೈಶ್ಚ ಸಂಭಿನ್ನೈರ್ನದದ್ಭಿಶ್ಚಾರಿಕರ್ಶನೈಃ||

07074050a ಸಂರಬ್ಧೈಶ್ಚಾರಿಭಿರ್ವೀರೈಃ ಪ್ರಾರ್ಥಯದ್ಭಿರ್ಜಯಂ ಮೃಧೇ|

07074050c ಏಕಸ್ಥೈರ್ಬಹುಭಿಃ ಕ್ರುದ್ಧೈರೂಷ್ಮೇವ ಸಮಜಾಯತ||

ರಕ್ತದಿಂದ ತೋಯ್ದು ಹೋಗಿ ನಿಟ್ಟುಸಿರು ಬಿಡುತ್ತಿದ್ದ ಮಹೇಷ್ವಾಸರಿಂದಲೂ, ಶತ್ರುನಾಶಕ ಬಾಣಗಳಿಂದ ಹೊಡೆಯಲ್ಪಟ್ಟು ಕಿರುಚಿಕೊಳ್ಳುತ್ತಿರುವ ಕುದುರೆ-ಆನೆಗಳಿಂದಲೂ, ಯುದ್ಧದಲ್ಲಿ ಜಯವನ್ನು ಬಯಸಿ ಗಾಬರಿಯಿಂದ ಹೋರಾಡುತ್ತಿದ್ದ ಶತ್ರುವೀರರಿಂದಲೂ, ಕ್ರುದ್ಧರಾಗಿ ಅನೇಕರು ಒಂದೇ ಸ್ಥಳದಲ್ಲಿ ನಿಂತಿರುವ ಅಲ್ಲಿ ಬಿಸಿಯು ಹುಟ್ಟಿಕೊಂಡಿತು.

07074051a ಶರೋರ್ಮಿಣಂ ಧ್ವಜಾವರ್ತಂ ನಾಗನಕ್ರಂ ದುರತ್ಯಯಂ|

07074051c ಪದಾತಿಮತ್ಸ್ಯಕಲಿಲಂ ಶಂಖದುಂದುಭಿನಿಸ್ವನಂ||

07074052a ಅಸಂಖ್ಯೇಯಮಪಾರಂ ಚ ರಜೋಽಽಭೀಲಮತೀವ ಚ|

07074052c ಉಷ್ಣೀಷಕಮಠಚ್ಚನ್ನಂ ಪತಾಕಾಫೇನಮಾಲಿನಂ||

07074053a ರಥಸಾಗರಮಕ್ಷೋಭ್ಯಂ ಮಾತಂಗಾಂಗಶಿಲಾಚಿತಂ|

07074053c ವೇಲಾಭೂತಸ್ತದಾ ಪಾರ್ಥಃ ಪತ್ರಿಭಿಃ ಸಮವಾರಯತ್||

ಆಗ ಬಾಣಗಳೇ ಅಲೆಗಳಾಗಿದ್ದ, ಧ್ವಜಗಳೇ ಸುಳಿಗಳಂತಿದ್ದ, ಆನೆಗಳೇ ಮೊಸಳೆಗಳಂತಿದ್ದ, ಪದಾತಿಗಳೇ ಮೀನಿನ ಸಮೂಹಗಳಂತಿದ್ದ, ಶಂಖದುಂದುಭಿಗಳೇ ಭೋರ್ಗರೆತವಾಗಿದ್ದ, ಶಿರಸ್ತ್ರಾಣಗಳೇ ಆಮೆಗಳಂತಿದ್ದ, ಪತಾಕೆಗಳೇ ನೊರೆಗಳ ಸಾಲಿನಂತಿದ್ದ, ಆನೆಗಳೇ ಕಲ್ಲುಬಂಡೆಗಳಂತಿದ್ದ ದಾಟಲಸಾದ್ಯವಾದ, ಅಸಂಖ್ಯವಾದ, ಅಪಾರವಾದ, ಉಕ್ಕಿ ಬರುತ್ತಿರುವ ಆ ರಥಸಾಗರವನ್ನು ಪಾರ್ಥನು ತೀರದಂತಾಗಿ ಪತ್ರಿಗಳಿಂದ ತಡೆದನು.

07074054a ತತೋ ಜನಾರ್ದನಃ ಸಂಖ್ಯೇ ಪ್ರಿಯಂ ಪುರುಷಸತ್ತಮಂ|

07074054c ಅಸಂಭ್ರಾಂತೋ ಮಹಾಬಾಹುರರ್ಜುನಂ ವಾಕ್ಯಮಬ್ರವೀತ್||

ಆಗ ರಣರಂಗದಲ್ಲಿ ಮಹಾಬಾಹು ಜನಾರ್ದನನು ಗಾಬರಿಗೊಳ್ಳದೇ ಇದ್ದ ಪುರುಷಸತ್ತಮ ಪ್ರಿಯ ಅರ್ಜುನನಿಗೆ ಹೀಗೆ ಹೇಳಿದನು:

07074055a ಉದಪಾನಮಿಹಾಶ್ವಾನಾಂ ನಾಲಮಸ್ತಿ ರಣೇಽರ್ಜುನ|

07074055c ಪರೀಪ್ಸಂತೇ ಜಲಂ ಚೇಮೇ ಪೇಯಂ ನ ತ್ವವಗಾಹನಂ||

“ಅರ್ಜುನ! ಕದಡಿದ ನೀರಿದೆ. ಸ್ನಾನಮಾಡಿಸಬಹುದು. ಆದರೆ ರಣದಲ್ಲಿ ಕುದುರೆಗಳು ಕುಡಿಯಲು ಯೋಗ್ಯವಾದ ನೀರನ್ನು ಬಯಸುತ್ತವೆ. ಸ್ನಾನಮಾಡುವಂತಹುದನ್ನಲ್ಲ!”

07074056a ಇದಮಸ್ತೀತ್ಯಸಂಭ್ರಾಂತೋ ಬ್ರುವನ್ನಸ್ತ್ರೇಣ ಮೇದಿನೀಂ|

07074056c ಅಭಿಹತ್ಯಾರ್ಜುನಶ್ಚಕ್ರೇ ವಾಜಿಪಾನಂ ಸರಃ ಶುಭಂ||

“ಇದೋ ಇಲ್ಲಿದೆ!” ಎಂದು ಹೇಳಿ ಅಸಂಭ್ರಾಂತನಾದ ಅರ್ಜುನನು ಅಸ್ತ್ರದಿಂದ ಮೇದಿನಿಯನ್ನು ಭೇದಿಸಿ ಕುದುರೆಗಳು ಕುಡಿಯಲು ಯೋಗ್ಯವಾದ ಶುಭ ಸರೋವರವನ್ನು ನಿರ್ಮಿಸಿದನು.

07074057a ಶರವಂಶಂ ಶರಸ್ಥೂಣಂ ಶರಾಚ್ಚಾದನಮದ್ಭುತಂ|

07074057c ಶರವೇಶ್ಮಾಕರೋತ್ಪಾರ್ಥಸ್ತ್ವಷ್ಟೇವಾದ್ಭುತಕರ್ಮಕೃತ್||

ಅದ್ಭುತಕರ್ಮಿ ಪಾರ್ಥನು ತ್ವಷ್ಟನಂತೆ ಬಾಣಗಳಿಂದಲೇ ಗಳುಗಳನ್ನೂ, ಬಾಣಗಳಿಂದಲೇ ಕಂಬಗಳನ್ನೂ, ಬಾಣಗಳಿಂದಲೇ ಚಪ್ಪರವನ್ನೂ ಮಾಡಿ ಶರಗಳ ಒಂದು ಮನೆಯನ್ನೇ ನಿರ್ಮಿಸಿದನು.

07074058a ತತಃ ಪ್ರಹಸ್ಯ ಗೋವಿಂದಃ ಸಾಧು ಸಾಧ್ವಿತ್ಯಥಾಬ್ರವೀತ್|

07074058c ಶರವೇಶ್ಮನಿ ಪಾರ್ಥೇನ ಕೃತೇ ತಸ್ಮಿನ್ಮಹಾರಣೇ||

ಆ ಮಹಾರಣದಲ್ಲಿ ಪಾರ್ಥನು ಮಾಡಿದ ಶರಗಳ ಮನೆಯನ್ನು ನೋಡಿ ಗೋವಿಂದನು ನಕ್ಕು “ಸಾಧು! ಸಾಧು!” ಎಂದು ಹೊಗಳಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ವಿಂದಾನುವಿಂದವಧೇ ಅರ್ಜುನಸರೋನಿರ್ಮಾಣೇ ಚತುಃಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ವಿಂದಾನುವಿಂದವಧೇ ಅರ್ಜುನಸರೋನಿರ್ಮಾಣ ಎನ್ನುವ ಎಪ್ಪತ್ನಾಲ್ಕನೇ ಅಧ್ಯಾಯವು.

Related image

Comments are closed.