ದ್ರೋಣ ಪರ್ವ: ಘಟೋತ್ಕಚವಧ ಪರ್ವ
Contents
Toggle೧೩೪
ಕರ್ಣನು ಕೃಪನಿಗೆ ಆಡಿದ ಮಾತನ್ನು ಕೇಳಿ ಅಶ್ವತ್ಥಾಮನು ಕ್ರೋಧಿತನಾಗಲು ದುರ್ಯೋಧನನು ಅವನನ್ನು ಸಮಾಧಾನಗೊಳಿಸಿದುದು (೧-೮). ಕರ್ಣನ ಪರಾಕ್ರಮ (೯-೨೮). ಅರ್ಜುನನಿಂದ ಕರ್ಣನು ಪರಾಜಿತನಾದುದು (೨೯-೫೧). ಸ್ವಯಂ ದುರ್ಯೋಧನನೇ ಅರ್ಜುನನೊಡನೆ ಯುದ್ಧಕ್ಕೆ ಹೊರಡಲು ಅಶ್ವತ್ಥಾಮನು ಅವನನ್ನು ತಡೆದುದು (೫೨-೮೧).
07134001 ಸಂಜಯ ಉವಾಚ|
07134001a ತಥಾ ಪರುಷಿತಂ ದೃಷ್ಟ್ವಾ ಸೂತಪುತ್ರೇಣ ಮಾತುಲಂ|
07134001c ಖಡ್ಗಮುದ್ಯಮ್ಯ ವೇಗೇನ ದ್ರೌಣಿರಭ್ಯಪತದ್ದ್ರುತಂ||
ಸಂಜಯನು ಹೇಳಿದನು: “ಸೂತಪುತ್ರನು ಹಾಗೆ ಮಾವನೊಡನೆ ಕಟುವಾದ ಮಾತನಾಡಿದುದನ್ನು ನೋಡಿ ದ್ರೌಣಿಯು ಖಡ್ಗವನ್ನು ಎತ್ತಿಕೊಂಡು ವೇಗವಾಗಿ ಅಲ್ಲಿಗೆ ಧಾವಿಸಿಬಂದನು.
07134002 ಅಶ್ವತ್ಥಾಮೋವಾಚ|
07134002a ಕರ್ಣ ಪಶ್ಯ ಸುದುರ್ಬುದ್ಧೇ ತಿಷ್ಠೇದಾನೀಂ ನರಾಧಮ|
07134002c ಏಷ ತೇಽದ್ಯ ಶಿರಃ ಕಾಯಾದುದ್ಧರಾಮಿ ಸುದುರ್ಮತೇ||
ಅಶ್ವತ್ಥಾಮನು ಹೇಳಿದನು: “ಸುದುರ್ಬುದ್ಧೇ! ಕರ್ಣ! ನರಾಧಮ! ಸುದುರ್ಮತೇ! ಸ್ವಲ್ಪ ನಿಲ್ಲು! ನಿನ್ನ ಶಿರಸ್ಸನ್ನು ಈಗಲೇ ನಾನು ಶರೀರದಿಂದ ಹಾರಿಸಿಬಿಡುತ್ತೇನೆ!””
07134003 ಸಂಜಯ ಉವಾಚ|
07134003a ತಮುತ್ಪತಂತಂ ವೇಗೇನ ರಾಜಾ ದುರ್ಯೋಧನಃ ಸ್ವಯಂ|
07134003c ನ್ಯವಾರಯನ್ಮಹಾರಾಜ ಕೃಪಶ್ಚ ದ್ವಿಪದಾಂ ವರಃ||
ಸಂಜಯನು ಹೇಳಿದನು: “ಮಹಾರಾಜ! ಹೀಗೆ ವೇಗದಿಂದ ಮೇಲೆ ಬೀಳುತ್ತಿರುವ ಅಶ್ವತ್ಥಾಮನನ್ನು ಸ್ವಯಂ ರಾಜಾ ದುರ್ಯೋಧನ ಮತ್ತು ದ್ವಿಪದರಲ್ಲಿ ಶ್ರೇಷ್ಠ ಕೃಪರು ತಡೆದರು.
07134004 ಕರ್ಣ ಉವಾಚ|
07134004a ಶೂರೋಽಯಂ ಸಮರಶ್ಲಾಘೀ ದುರ್ಮತಿಶ್ಚ ದ್ವಿಜಾಧಮಃ|
07134004c ಆಸಾದಯತು ಮದ್ವೀರ್ಯಂ ಮುಂಚೇಮಂ ಕುರುಸತ್ತಮ||
ಕರ್ಣನು ಹೇಳಿದನು: “ಕುರುಸತ್ತಮ! ಇವನು ಶೂರ. ಸಮರಶ್ಲಾಘೀ. ದುರ್ಮತಿ ಮತ್ತು ದ್ವಿಜಾಧಮ. ನನ್ನ ವೀರ್ಯವನ್ನು ಎದುರಿಸಲಿ. ಇವನನ್ನು ಬಿಟ್ಟುಬಿಡು!”
07134005 ಅಶ್ವತ್ಥಾಮೋವಾಚ|
07134005a ತವೈತತ್ ಕ್ಷಮ್ಯತೇಽಸ್ಮಾಭಿಃ ಸೂತಾತ್ಮಜ ಸುದುರ್ಮತೇ|
07134005c ದರ್ಪಮುತ್ಸಿಕ್ತಂ ಏತತ್ತೇ ಫಲ್ಗುನೋ ನಾಶಯಿಷ್ಯತಿ||
ಅಶ್ವತ್ಥಾಮನು ಹೇಳಿದನು: “ಸುದುರ್ಮತೇ! ಸೂತಾತ್ಮಜ! ನಿನ್ನ ಈ ಅಪರಾಧವನ್ನು ಕ್ಷಮಿಸುತ್ತೇನೆ. ಆದರೆ ನಿನ್ನ ದರ್ಪ ಉತ್ಸಾಹವನ್ನು ಫಲ್ಗುನನು ನಾಶಗೊಳಿಸುತ್ತಾನೆ ಎನ್ನುವುದನ್ನು ನೆನಪಿನಲ್ಲಿಟ್ಟುಕೋ!”
07134006 ದುರ್ಯೋಧನ ಉವಾಚ|
07134006a ಅಶ್ವತ್ಥಾಮನ್ಪ್ರಸೀದಸ್ವ ಕ್ಷಂತುಮರ್ಹಸಿ ಮಾನದ|
07134006c ಕೋಪಃ ಖಲು ನ ಕರ್ತವ್ಯಃ ಸೂತಪುತ್ರೇ ಕಥಂ ಚನ||
ದುರ್ಯೋಧನನು ಹೇಳಿದನು: “ಅಶ್ವತ್ಥಾಮ! ಮಾನದ! ಶಾಂತನಾಗು. ಕ್ಷಮಿಸಬೇಕು. ಸೂತಪುತ್ರನೊಡನೆ ಎಂದೂ ಕೋಪಗೊಳ್ಳಬೇಡ!
07134007a ತ್ವಯಿ ಕರ್ಣೇ ಕೃಪೇ ದ್ರೋಣೇ ಮದ್ರರಾಜೇಽಥ ಸೌಬಲೇ|
07134007c ಮಹತ್ಕಾರ್ಯಂ ಸಮಾಯತ್ತಂ ಪ್ರಸೀದ ದ್ವಿಜಸತ್ತಮ||
ನೀನು, ಕರ್ಣ, ಕೃಪ, ದ್ರೋಣ, ಮದ್ರರಾಜ ಮತ್ತು ಸೌಬಲರ ಮೇಲೆ ಮಹಾ ಕಾರ್ಯವನ್ನು ವಹಿಸಿದ್ದೇನೆ. ಪ್ರಯತ್ನಮಾಡಿ! ಸಮಾಧಾನಗೊಳ್ಳು ದ್ವಿಜಸತ್ತಮ!
07134008a ಏತೇ ಹ್ಯಭಿಮುಖಾಃ ಸರ್ವೇ ರಾಧೇಯೇನ ಯುಯುತ್ಸವಃ|
07134008c ಆಯಾಂತಿ ಪಾಂಡವಾ ಬ್ರಹ್ಮನ್ನಾಹ್ವಯಂತಃ ಸಮಂತತಃ||
ನಮ್ಮ ಮುಂದಿರುವ ಪಾಂಡವರು ಎಲ್ಲರೂ ರಾಧೇಯನೊಡನೆ ಯುದ್ಧಮಾಡಲೋಸುಗ ಬರುತ್ತಿದ್ದಾರೆ. ಬ್ರಹ್ಮನ್! ಎಲ್ಲ ಕಡೆಗಳಿಂದ ಯುದ್ಧಕ್ಕೆ ಕರೆಯುತ್ತಿದ್ದಾರೆ.””
07134009 ಸಂಜಯ ಉವಾಚ|
07134009a ಕರ್ಣೋಽಪಿ ರಥಿನಾಂ ಶ್ರೇಷ್ಠಶ್ಚಾಪಮುದ್ಯಮ್ಯ ವೀರ್ಯವಾನ್|
07134009c ಕೌರವಾಗ್ರ್ಯೈಃ ಪರಿವೃತಃ ಶಕ್ರೋ ದೇವಗಣೈರಿವ|
07134009e ಪರ್ಯತಿಷ್ಠತ ತೇಜಸ್ವೀ ಸ್ವಬಾಹುಬಲಮಾಶ್ರಿತಃ||
ಸಂಜಯನು ಹೇಳಿದನು: “ರಥಿಗಳಲ್ಲಿ ಶ್ರೇಷ್ಠ ವೀರ್ಯವಾನ್ ಕರ್ಣನೂ ಕೂಡ ದೇವಗಣಗಳಿಂದ ಪರಿವೃತ ಶಕ್ರನಂತೆ ಕೌರವ ಮುಖ್ಯರಿಂದ ಪರಿವೃತನಾಗಿ ತನ್ನ ಬಾಹುಬಲವನ್ನು ಆಶ್ರಯಿಸಿ ತೇಜಸ್ವಿಯಾಗಿ ಯುದ್ಧಕ್ಕೆ ನಿಂತನು.
07134010a ತತಃ ಪ್ರವವೃತೇ ಯುದ್ಧಂ ಕರ್ಣಸ್ಯ ಸಹ ಪಾಂಡವೈಃ|
07134010c ಸಂರಬ್ಧಸ್ಯ ಮಹಾರಾಜ ಸಿಂಹನಾದವಿನಾದಿತಂ||
ಮಹಾರಾಜ! ಆಗ ಪಾಂಡವರೊಡನೆ ಕರ್ಣನ ಸಿಂಹನಾದಗಳಿಂದ ಕೂಡಿದ ಭಯಂಕರ ಯುದ್ಧವು ಪ್ರಾರಂಭವಾಯಿತು.
07134011a ತತಸ್ತೇ ಪಾಂಡವಾ ರಾಜನ್ಪಾಂಚಾಲಾಶ್ಚ ಯಶಸ್ವಿನಃ|
07134011c ದೃಷ್ಟ್ವಾ ಕರ್ಣಂ ಮಹಾಬಾಹುಮುಚ್ಚೈಃ ಶಬ್ದಮಥಾನದನ್||
07134012a ಅಯಂ ಕರ್ಣಃ ಕುತಃ ಕರ್ಣಸ್ತಿಷ್ಠ ಕರ್ಣ ಮಹಾರಣೇ|
07134012c ಯುಧ್ಯಸ್ವ ಸಹಿತೋಽಸ್ಮಾಭಿರ್ದುರಾತ್ಮನ್ಪುರುಷಾಧಮ||
ರಾಜನ್! ಆಗ ಆ ಪಾಂಡವರು ಮತ್ತು ಯಶಸ್ವಿ ಪಾಂಚಾಲರು ಮಹಾಬಾಹು ಕರ್ಣನನ್ನು ನೋಡಿ “ಇವನೇ ಕರ್ಣ!”, “ಕರ್ಣನೆಲ್ಲಿದ್ದಾನೆ?”, “ಕರ್ಣ! ಮಹಾರಣದಲ್ಲಿ ನಿಲ್ಲು! ದುರಾತ್ಮನ್! ಪುರುಷಾಧಮ! ನಮ್ಮಡನೆ ಯುದ್ಧಮಾಡು!“ ಎಂದು ಉಚ್ಛ ಸ್ವರಗಳಲ್ಲಿ ಕೂಗಿದರು.
07134013a ಅನ್ಯೇ ತು ದೃಷ್ಟ್ವಾ ರಾಧೇಯಂ ಕ್ರೋಧರಕ್ತೇಕ್ಷಣಾಬ್ರುವನ್|
07134013c ಹನ್ಯತಾಮಯಮುತ್ಸಿಕ್ತಃ ಸೂತಪುತ್ರೋಽಲ್ಪಚೇತನಃ||
ಮತ್ತೆ ಕೆಲವರು ರಾಧೇಯನನ್ನು ನೋಡಿ ಕ್ರೋಧದಿಂದ ಕೆಂಗಣ್ಣರಾಗಿ ಹೇಳಿದರು: “ದುರಹಂಕಾರದಿಂದ ಮೆರೆಯುತ್ತಿರುವ ಈ ಅಲ್ಪಚೇತನ ಸೂತಪುತ್ರನನ್ನು ಸಂಹರಿಸಿರಿ!
07134014a ಸರ್ವೈಃ ಪಾರ್ಥಿವಶಾರ್ದೂಲೈರ್ನಾನೇನಾರ್ಥೋಽಸ್ತಿ ಜೀವತಾ|
07134014c ಅತ್ಯಂತವೈರೀ ಪಾರ್ಥಾನಾಂ ಸತತಂ ಪಾಪಪೂರುಷಃ||
ಇವನು ಬದುಕಿರುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲ ಪಾರ್ಥಿವಶಾರ್ದೂಲರಿಗಿಂತ ಈ ಪಾಪಪುರುಷನೇ ಸತತವೂ ಪಾರ್ಥರ ವೈರಿಯಾಗಿರುವವನು.
07134015a ಏಷ ಮೂಲಂ ಹ್ಯನರ್ಥಾನಾಂ ದುರ್ಯೋಧನಮತೇ ಸ್ಥಿತಃ|
07134015c ಹತೈನಮಿತಿ ಜಲ್ಪಂತಃ ಕ್ಷತ್ರಿಯಾಃ ಸಮುಪಾದ್ರವನ್||
ದುರ್ಯೋಧನನ ಮನಸ್ಸಿನಂತೆ ನಡೆದುಕೊಳ್ಳುತ್ತಿರುವ ಇವನೇ ಎಲ್ಲ ಅನರ್ಥಗಳಿಗೂ ಮೂಲ ಕಾರಣನಾಗಿದ್ದಾನೆ. ಇವನನ್ನು ಕೊಲ್ಲಿರಿ!” ಎಂದು ಮಾತನಾಡಿಕೊಳ್ಳುತ್ತಾ ಕ್ಷತ್ರಿಯರು ಆಕ್ರಮಿಸಿದರು.
07134016a ಮಹತಾ ಶರವರ್ಷೇಣ ಚಾದಯಂತೋ ಮಹಾರಥಾಃ|
07134016c ವಧಾರ್ಥಂ ಸೂತಪುತ್ರಸ್ಯ ಪಾಂಡವೇಯೇನ ಚೋದಿತಾಃ||
ಪಾಂಡವೇಯರಿಂದ ಪ್ರಚೋದಿತರಾಗಿ ಸೂತಪುತ್ರನನ್ನು ವಧಿಸುವ ಸಲುವಾಗಿ ಆ ಮಹಾರಥರು ಅವನನ್ನು ಮಹಾ ಶರವರ್ಷಗಳಿಂದ ಮುಚ್ಚಿಬಿಟ್ಟರು.
07134017a ತಾಂಸ್ತು ಸರ್ವಾಂಸ್ತಥಾ ದೃಷ್ಟ್ವಾ ಧಾವಮಾನಾನ್ಮಹಾರಥಾನ್|
07134017c ನ ವಿವ್ಯಥೇ ಸೂತಪುತ್ರೋ ನ ಚ ತ್ರಾಸಮಗಚ್ಚತ||
ತನ್ನ ಕಡೆಗೆ ರಭಸದಿಂದ ಬರುತ್ತಿದ್ದ ಆ ಮಹಾರಥರೆಲ್ಲರನ್ನು ನೋಡಿ ಸೂತಪುತ್ರನು ವ್ಯಥಿತನಾಗಲಿಲ್ಲ, ಭಯಪಡಲೂ ಇಲ್ಲ.
07134018a ದೃಷ್ಟ್ವಾ ನಗರಕಲ್ಪಂ ತಮುದ್ಧೂತಂ ಸೈನ್ಯಸಾಗರಂ|
07134018c ಪಿಪ್ರೀಷುಸ್ತವ ಪುತ್ರಾಣಾಂ ಸಂಗ್ರಾಮೇಷ್ವಪರಾಜಿತಃ||
07134019a ಸಾಯಕೌಘೇನ ಬಲವಾನ್ ಕ್ಷಿಪ್ರಕಾರೀ ಮಹಾಬಲಃ|
07134019c ವಾರಯಾಮಾಸ ತತ್ಸೈನ್ಯಂ ಸಮಂತಾದ್ಭರತರ್ಷಭ||
ಭರತರ್ಷಭ! ನಗರದಂತೆ ಉಕ್ಕಿಬರುತ್ತಿರುವ ಆ ಸೈನ್ಯಸಾಗರವನ್ನು ನೋಡಿ ನಿನ್ನ ಮಕ್ಕಳಿಗೆ ಪ್ರಿಯವನ್ನುಂಟು ಮಾಡುವ ಇಚ್ಛೆಯುಳ್ಳ, ಸಂಗ್ರಾಮಗಳಲ್ಲಿ ಅಪರಾಜಿತ ಮಹಾಬಲ ಬಲವಾನ್ ಕ್ಷಿಪ್ರಕಾರೀ ಕರ್ಣನು ಸಾಯಕಗಳ ಗಣಗಳಿಂದ ಆ ಸೇನೆಯನ್ನು ಎಲ್ಲ ಕಡೆಗಳಿಂದಲೂ ತಡೆದು ನಿಲ್ಲಿಸಿದನು.
07134020a ತತಸ್ತು ಶರವರ್ಷೇಣ ಪಾರ್ಥಿವಾಸ್ತಮವಾರಯನ್|
07134020c ಧನೂಂಷಿ ತೇ ವಿಧುನ್ವಾನಾಃ ಶತಶೋಽಥ ಸಹಸ್ರಶಃ|
07134020e ಅಯೋಧಯಂತ ರಾಧೇಯಂ ಶಕ್ರಂ ದೈತ್ಯಗಣಾ ಇವ||
ಆಗ ಪಾರ್ಥಿವರು ಶರವರ್ಷಗಳಿಂದ ನೂರಾರು ಸಹಸ್ರಾರು ಧನುಸ್ಸುಗಳನ್ನು ಸೆಳೆಯುತ್ತಾ ತಡೆದು ದೈತ್ಯಗಣಗಳು ಶಕ್ರನನ್ನು ಹೇಗೋ ಹಾಗೆ ರಾಧೇಯನೊಡನೆ ಯುದ್ಧಮಾಡಿದರು.
07134021a ಶರವರ್ಷಂ ತು ತತ್ಕರ್ಣಃ ಪಾರ್ಥಿವೈಃ ಸಮುದೀರಿತಂ|
07134021c ಶರವರ್ಷೇಣ ಮಹತಾ ಸಮಂತಾದ್ವ್ಯಕಿರತ್ಪ್ರಭೋ||
ಪ್ರಭೋ! ಪಾರ್ಥಿವರು ಸುರಿಸುತ್ತಿದ್ದ ಆ ಶರವರ್ಷಗಳನ್ನು ಕರ್ಣನು ಮಹಾ ಶರವರ್ಷದಿಂದಲೇ ಎಲ್ಲಕಡೆಗಳಲ್ಲಿ ನಿವಾರಿಸಿದನು.
07134022a ತದ್ಯುದ್ಧಮಭವತ್ತೇಷಾಂ ಕೃತಪ್ರತಿಕೃತೈಷಿಣಾಂ|
07134022c ಯಥಾ ದೇವಾಸುರೇ ಯುದ್ಧೇ ಶಕ್ರಸ್ಯ ಸಹ ದಾನವೈಃ||
ಮಾಡಿದುದಕ್ಕೆ ಪ್ರತಿಯಾಗಿ ಮಾಡುವುದರಲ್ಲಿ ತೊಡಗಿದ ಅವರಿಬ್ಬರ ನಡುವೆ ದೇವಾಸುರರ ಯುದ್ಧದಲ್ಲಿ ದಾನವರೊಂದಿಗೆ ಶಕ್ರನ ಯುದ್ಧದಂತೆ ಯುದ್ಧವು ನಡೆಯಿತು.
07134023a ತತ್ರಾದ್ಭುತಮಪಶ್ಯಾಮ ಸೂತಪುತ್ರಸ್ಯ ಲಾಘವಂ|
07134023c ಯದೇನಂ ಸಮರೇ ಯತ್ತಾ ನಾಪ್ನುವಂತ ಪರೇ ಯುಧಿ||
ಅಲ್ಲಿ ನಾವು ಸೂತಪುತ್ರನ ಹಸ್ತಲಾಘವದ ಅದ್ಭುತವನ್ನು ನೋಡಿದೆವು. ಸಮರದಲ್ಲಿ ಶತ್ರುಗಳು ಪ್ರಯತ್ನಿಸಿದರೂ ಅವನ ಹತ್ತಿರಹೋಗಲು ಶಕ್ತರಾಗಲಿಲ್ಲ.
07134024a ನಿವಾರ್ಯ ಚ ಶರೌಘಾಂಸ್ತಾನ್ಪಾರ್ಥಿವಾನಾಂ ಮಹಾರಥಃ|
07134024c ಯುಗೇಷ್ವೀಷಾಸು ಚತ್ರೇಷು ಧ್ವಜೇಷು ಚ ಹಯೇಷು ಚ|
07134024e ಆತ್ಮನಾಮಾಂಕಿತಾನ್ಬಾಣಾನ್ರಾಧೇಯಃ ಪ್ರಾಹಿಣೋಚ್ಚಿತಾನ್||
ಪಾರ್ಥಿವರ ಶರೌಘಗಳನ್ನು ತಡೆಯುತ್ತಾ ಮಹಾರಥ ರಾಧೇಯನು ತನ್ನ ನಾಮಾಂಕಿತ ಬಾಣಗಳನ್ನು ರಥದ ನೊಗಗಳ ಮೇಲೆ, ಚತ್ರಗಳ ಮೇಲೆ, ಧ್ವಜಗಳ ಮೇಲೆ ಮತ್ತು ಕುದುರೆಗಳ ಮೇಲೆ ಪ್ರಯೋಗಿಸಿದನು.
07134025a ತತಸ್ತೇ ವ್ಯಾಕುಲೀಭೂತಾ ರಾಜಾನಃ ಕರ್ಣಪೀಡಿತಾಃ|
07134025c ಬಭ್ರಮುಸ್ತತ್ರ ತತ್ರೈವ ಗಾವಃ ಶೀತಾರ್ದಿತಾ ಇವ||
ಕರ್ಣನಿಂದ ಪೀಡಿತ ರಾಜರು ವ್ಯಾಕುಲರಾಗಿ ಛಳಿಯಿಂದ ಪೀಡಿತ ಗೋವುಗಳಂತೆ ಅಲ್ಲಿಂದಿಲ್ಲಿಗೆ ಭ್ರಮಿಸತೊಡಗಿದರು.
07134026a ಹಯಾನಾಂ ವಧ್ಯಮಾನಾನಾಂ ಗಜಾನಾಂ ರಥಿನಾಂ ತಥಾ|
07134026c ತತ್ರ ತತ್ರಾಭ್ಯವೇಕ್ಷಾಮಃ ಸಂಘಾನ್ಕರ್ಣೇನ ಪಾತಿತಾನ್||
ಕರ್ಣನಿಂದ ವಧೆಗೊಂಡು ಉರುಳಿಸಲ್ಪಟ್ಟ ಕುದುರೆ-ಆನೆ-ರಥಗಳ ಗುಂಪುಗಳನ್ನು ಅಲ್ಲಲ್ಲಿ ನೋಡಿದೆವು.
07134027a ಶಿರೋಭಿಃ ಪತಿತೈ ರಾಜನ್ಬಾಹುಭಿಶ್ಚ ಸಮಂತತಃ|
07134027c ಆಸ್ತೀರ್ಣಾ ವಸುಧಾ ಸರ್ವಾ ಶೂರಾಣಾಮನಿವರ್ತಿನಾಂ||
ರಾಜನ್! ಯುದ್ಧದಲ್ಲಿ ಹಿಂದಿರುಗದೇ ಹತರಾಗಿ ಬಿದ್ದಿದ್ದ ಶೂರರ ತಲೆಗಳಿಂದಲೂ ತೋಳುಗಳಿಂದಲೂ ರಣಾಂಗಣವು ವ್ಯಾಪ್ತವಾಗಿತ್ತು.
07134028a ಹತೈಶ್ಚ ಹನ್ಯಮಾನೈಶ್ಚ ನಿಷ್ಟನದ್ಭಿಶ್ಚ ಸರ್ವಶಃ|
07134028c ಬಭೂವಾಯೋಧನಂ ರೌದ್ರಂ ವೈವಸ್ವತಪುರೋಪಮಂ||
ಸತ್ತವರಿಂದಲೂ ಸಾಯುತ್ತಿರುವವರಿಂದಲೂ ಗಾಯಗೊಂಡು ಸಂಕಟಪಡುತ್ತಿರುವವರಿಂದಲೂ ಕೂಡಿದ್ದ ಆ ರಣಭೂಮಿಯು ಯಮರಾಜನ ಪಟ್ಟಣದಂತೆ ಬಹಳ ಭಯಂಕರವಾಗಿ ಕಾಣುತ್ತಿದ್ದಿತು.
07134029a ತತೋ ದುರ್ಯೋಧನೋ ರಾಜಾ ದೃಷ್ಟ್ವಾ ಕರ್ಣಸ್ಯ ವಿಕ್ರಮಂ|
07134029c ಅಶ್ವತ್ಥಾಮಾನಮಾಸಾದ್ಯ ತದಾ ವಾಕ್ಯಮುವಾಚ ಹ||
ಕರ್ಣನ ಆ ವಿಕ್ರಮವನ್ನು ಕಂಡು ರಾಜಾ ದುರ್ಯೋಧನನು ಅಶ್ವತ್ಥಾಮನ ಬಳಿಸಾರಿ ಇಂತೆಂದನು:
07134030a ಯುಧ್ಯತೇಽಸೌ ರಣೇ ಕರ್ಣೋ ದಂಶಿತಃ ಸರ್ವಪಾರ್ಥಿವೈಃ|
07134030c ಪಶ್ಯೈತಾಂ ದ್ರವತೀಂ ಸೇನಾಂ ಕರ್ಣಸಾಯಕಪೀಡಿತಾಂ|
07134030e ಕಾರ್ತ್ತಿಕೇಯೇನ ವಿಧ್ವಸ್ತಾಮಾಸುರೀಂ ಪೃತನಾಮಿವ||
“ಇಗೋ ಕರ್ಣನು ಕವಚವನ್ನು ಧರಿಸಿ ಸರ್ವ ರಾಜರೊಂದಿಗೆ ರಣದಲ್ಲಿ ಯುದ್ಧಮಾಡುತ್ತಿದ್ದಾನೆ! ಕಾರ್ತಿಕೇಯನಿಂದ ಧ್ವಂಸಿತ ಅಸುರೀ ಸೇನೆಯು ಪಲಾಯನ ಮಾಡುವಂತೆ ಕರ್ಣನ ಸಾಯಕಗಳಿಂದ ಪೀಡಿತ ಸೇನೆಯು ಓಡಿಹೋಗುತ್ತಿರುವುದನ್ನು ನೋಡು!
07134031a ದೃಷ್ಟ್ವೈತಾಂ ನಿರ್ಜಿತಾಂ ಸೇನಾಂ ರಣೇ ಕರ್ಣೇನ ಧೀಮತಾ|
07134031c ಅಭಿಯಾತ್ಯೇಷ ಬೀಭತ್ಸುಃ ಸೂತಪುತ್ರಜಿಘಾಂಸಯಾ||
ಧೀಮತ ಕರ್ಣನಿಂದ ರಣದಲ್ಲಿ ಸೇನೆಯು ಈ ರೀತಿ ಸೋತುಹೋಗುತ್ತಿರುವುದನ್ನು ನೋಡಿ ಸೂತಪುತ್ರನನ್ನು ಕೊಲ್ಲಲು ಬಯಸಿ ಬೀಭತ್ಸುವು ಬರುತ್ತಿರಬಹುದು.
07134032a ತದ್ಯಥಾ ಪಶ್ಯಮಾನಾನಾಂ ಸೂತಪುತ್ರಂ ಮಹಾರಥಂ|
07134032c ನ ಹನ್ಯಾತ್ಪಾಂಡವಃ ಸಂಖ್ಯೇ ತಥಾ ನೀತಿರ್ವಿಧೀಯತಾಂ||
ಯುದ್ಧದಲ್ಲಿ ನಾವು ನೋಡುತ್ತಿರುವಾಗಲೇ ಮಹಾರಥ ಸೂತಪುತ್ರನನ್ನು ಪಾಂಡವನು ಕೊಲ್ಲದ ರೀತಿಯಲ್ಲಿ ಯುದ್ಧ ನೀತಿಯು ರೂಪಿಸಲ್ಪಡಲಿ!”
07134033a ತತೋ ದ್ರೌಣಿಃ ಕೃಪಃ ಶಲ್ಯೋ ಹಾರ್ದಿಕ್ಯಶ್ಚ ಮಹಾರಥಃ|
07134033c ಪ್ರತ್ಯುದ್ಯಯುಸ್ತದಾ ಪಾರ್ಥಂ ಸೂತಪುತ್ರಪರೀಪ್ಸಯಾ||
ಕೂಡಲೇ ದ್ರೌಣಿ, ಕೃಪ, ಶಲ್ಯ, ಮತ್ತು ಮಹಾರಥ ಹಾರ್ದಿಕ್ಯರು ಸೂತಪುತ್ರನನ್ನು ರಕ್ಷಿಸಲೋಸುಗ ಪಾರ್ಥನೊಡನೆ ಯುದ್ಧಮಾಡತೊಡಗಿದರು.
07134034a ಆಯಾಂತಂ ದೃಶ್ಯ ಕೌಂತೇಯಂ ವೃತ್ರಂ ದೇವಚಮೂಮಿವ|
07134034c ಪ್ರತ್ಯುದ್ಯಯೌ ತದಾ ಕರ್ಣೋ ಯಥಾ ಶಕ್ರಃ ಪ್ರತಾಪವಾನ್||
ದೇವಸೇನೆಯಮೇಲೆ ಆಕ್ರಮಣಿಸುತ್ತಿರುವ ವೃತ್ರನನ್ನು ಶಕ್ರನು ಹೇಗೋ ಹಾಗೆ ಪ್ರತಾಪವಾನ್ ಕರ್ಣನೂ ಕೂಡ ಮುಂದೆ ಬರುತ್ತಿರುವ ಕೌಂತೇಯನೊಡನೆ ಯುದ್ಧಮಾಡತೊಡಗಿದನು.”
07134035 ಧೃತರಾಷ್ಟ್ರ ಉವಾಚ|
07134035a ಸಂರಬ್ಧಂ ಫಲ್ಗುನಂ ದೃಷ್ಟ್ವಾ ಕಾಲಾಂತಕಯಮೋಪಮಂ|
07134035c ಕರ್ಣೋ ವೈಕರ್ತನಃ ಸೂತ ಪ್ರತ್ಯಪದ್ಯತ್ಕಿಮುತ್ತರಂ||
ಧೃತರಾಷ್ಟ್ರನು ಹೇಳಿದನು: “ಸೂತ! ಕಾಲಾಂತಕ ಯಮನಂತೆ ಕುಪಿತನಾಗಿ ಬರುತ್ತಿದ್ದ ಫಲ್ಗುನನನ್ನು ಕಂಡು ವೈಕರ್ತನ ಕರ್ಣನು ಪ್ರತಿಯಾಗಿ ಏನು ಉತ್ತರವನ್ನಿತ್ತನು?
07134036a ಸ ಹ್ಯಸ್ಪರ್ಧತ ಪಾರ್ಥೇನ ನಿತ್ಯಮೇವ ಮಹಾರಥಃ|
07134036c ಆಶಂಸತೇ ಚ ಬೀಭತ್ಸುಂ ಯುದ್ಧೇ ಜೇತುಂ ಸುದಾರುಣೇ||
ನಿತ್ಯವೂ ಆ ಮಹಾರಥನು ಪಾರ್ಥನೊಡನೆ ಸ್ಪರ್ಧಿಸುತ್ತಿದ್ದನು. ಸುದಾರುಣ ಯುದ್ಧದಲ್ಲಿ ಬೀಭತ್ಸುವನ್ನು ಗೆಲ್ಲಲು ಬಯಸುತ್ತಿದ್ದನು.
07134037a ಸ ತು ತಂ ಸಹಸಾ ಪ್ರಾಪ್ತಂ ನಿತ್ಯಮತ್ಯಂತವೈರಿಣಂ|
07134037c ಕರ್ಣೋ ವೈಕರ್ತನಃ ಸೂತ ಕಿಮುತ್ತರಮಪದ್ಯತ||
ಸೂತ! ಒಮ್ಮಿಂದೊಮ್ಮೆಲೇ ಎದುರಾಗಿಬಂದ ಆ ನಿತ್ಯ ಅತ್ಯಂತ ವೈರಿಯನ್ನು ಕಂಡು ವೈಕರ್ತನ ಕರ್ಣನು ಯಾವ ರೀತಿಯಲ್ಲಿ ಉತ್ತರ ಕೊಟ್ಟನು? ಮುಂದೇನು ಮಾಡಿದನು?”
07134038 ಸಂಜಯ ಉವಾಚ|
07134038a ಆಯಾಂತಂ ಪಾಂಡವಂ ದೃಷ್ಟ್ವಾ ಗಜಃ ಪ್ರತಿಗಜಂ ಯಥಾ|
07134038c ಅಸಂಭ್ರಾಂತತರಃ ಕರ್ಣಃ ಪರ್ತ್ಯುದೀಯಾದ್ಧನಂಜಯಂ||
ಸಂಜಯನು ಹೇಳಿದನು: “ಒಂದು ಸಲಗವು ಮತ್ತೊಂದು ಸಲಗವನ್ನು ಎದುರಿಸಲು ಹೋಗುವಂತೆ ತನ್ನ ಕಡೆಗೆ ಬರುತ್ತಿದ್ದ ಪಾಂಡವನನ್ನು ಕಂಡು ಕರ್ಣನು ಸ್ವಲ್ಪವೂ ಗಾಬರಿಗೊಳ್ಳದೇ ಧನಂಜಯನ ಮೇಲೆ ಎರಗಿದನು.
07134039a ತಮಾಪತಂತಂ ವೇಗೇನ ವೈಕರ್ತನಮಜಿಹ್ಮಗೈಃ|
07134039c ವಾರಯಾಮಾಸ ತೇಜಸ್ವೀ ಪಾಂಡವಃ ಶತ್ರುತಾಪನಃ||
ತೇಜಸ್ವೀ ಶತ್ರುತಾಪನ ಪಾಂಡವನು ವೇಗದಿಂದ ತನ್ನಮೇಲೆ ಬೀಳುತ್ತಿದ್ದ ವೈಕರ್ತನನನ್ನು ಜಿಹ್ಮಗಗಳಿಂದ ತಡೆದನು.
07134040a ತಂ ಕರ್ಣಃ ಶರಜಾಲೇನ ಚಾದಯಾಮಾಸ ಮಾರಿಷ|
07134040c ವಿವ್ಯಾಧ ಚ ಸುಸಂಕ್ರುದ್ಧಃ ಶರೈಸ್ತ್ರಿಭಿರಜಿಹ್ಮಗೈಃ||
ಮಾರಿಷ! ಕರ್ಣನು ಅವನನ್ನು ಶರಜಾಲಗಳಿಂದ ಮುಚ್ಚಿಬಿಟ್ಟನು ಮತ್ತು ಸಂಕ್ರುದ್ಧನಾಗಿ ಮೂರು ಜಿಹ್ಮಗಗಳಿಂದ ಹೊಡೆದನು.
07134041a ತಸ್ಯ ತಲ್ಲಾಘವಂ ಪಾರ್ಥೋ ನಾಮೃಷ್ಯತ ಮಹಾಬಲಃ|
07134041c ತಸ್ಮೈ ಬಾಣಾಂ ಶಿಲಾಧೌತಾನ್ಪ್ರಸನ್ನಾಗ್ರಾನಜಿಹ್ಮಗಾನ್||
07134042a ಪ್ರಾಹಿಣೋತ್ಸೂತಪುತ್ರಾಯ ತ್ರಿಂಶತಂ ಶತ್ರುತಾಪನಃ|
ಅವನ ಆ ಹಸ್ತಲಾಘವವನ್ನು ಮಹಾಬಲ ಪಾರ್ಥನು ಸಹಿಸಿಕೊಳ್ಳಲಿಲ್ಲ. ಆ ಶತ್ರುತಾಪನನು ಸೂತಪುತ್ರನ ಮೇಲೆ ಮೊನಚಾದ ತುದಿಗಳುಳ್ಳ, ಕಲ್ಲಿನಮೇಲೆ ಮಸೆದ ಮುನ್ನೂರು ಜಿಹ್ಮಗ ಬಾಣಗಳನ್ನು ಪ್ರಯೋಗಿಸಿದನು.
07134042c ವಿವ್ಯಾಧ ಚೈನಂ ಸಂರಬ್ಧೋ ಬಾಣೇನೈಕೇನ ವೀರ್ಯವಾನ್||
07134043a ಸವ್ಯೇ ಭುಜಾಗ್ರೇ ಬಲವಾನ್ನಾರಾಚೇನ ಹಸನ್ನಿವ|
07134043c ತಸ್ಯ ವಿದ್ಧಸ್ಯ ವೇಗೇನ ಕರಾಚ್ಚಾಪಂ ಪಪಾತ ಹ||
ಕುಪಿತನಾಗಿ ವೀರ್ಯವಾನ್ ಅರ್ಜುನನು ನಸುನಗುತ್ತಾ ಒಂದೇ ಬಾಣದಿಂದ ಅವನ ಎಡಭುಜಕ್ಕೆ ಬಲವನ್ನುಪಯೋಗಿಸಿ ಹೊಡೆದನು. ವೇಗವಾಗಿ ಗಾಯಗೊಂಡ ಅವನ ಕೈಯಿಂದ ಧನುಸ್ಸು ಕಳಚಿ ಬಿದ್ದಿತು.
07134044a ಪುನರಾದಾಯ ತಚ್ಚಾಪಂ ನಿಮೇಷಾರ್ಧಾನ್ಮಹಾಬಲಃ|
07134044c ಚಾದಯಾಮಾಸ ಬಾಣೌಘೈಃ ಫಲ್ಗುನಂ ಕೃತಹಸ್ತವತ್||
ಆ ಚಾಪವನ್ನು ಪುನಃ ತೆಗೆದುಕೊಂಡು ಮಹಾಬಲನು ಸಿದ್ಧಹಸ್ತನಂತೆ ಬಾಣಗಳ ಸಮೂಹಗಳಿಂದ ಫಲ್ಗುನನನ್ನು ಮುಚ್ಚಿದನು.
07134045a ಶರವೃಷ್ಟಿಂ ತು ತಾಂ ಮುಕ್ತಾಂ ಸೂತಪುತ್ರೇಣ ಭಾರತ|
07134045c ವ್ಯಧಮಚ್ಚರವರ್ಷೇಣ ಸ್ಮಯನ್ನಿವ ಧನಂಜಯಃ||
ಭಾರತ! ಧನಂಜಯನು ನಸುನಗುತ್ತಲೇ ಶರವರ್ಷಗಳಿಂದ ಸೂತಪುತ್ರನ ಶರವೃಷ್ಟಿಯನ್ನು ನಿರಸನಗೊಳಿಸಿದನು.
07134046a ತೌ ಪರಸ್ಪರಮಾಸಾದ್ಯ ಶರವರ್ಷೇಣ ಪಾರ್ಥಿವ|
07134046c ಚಾದಯೇತಾಂ ಮಹೇಷ್ವಾಸೌ ಕೃತಪ್ರತಿಕೃತೈಷಿಣೌ||
ಪಾರ್ಥಿವ! ಶರವರ್ಷಗಳಿಂದ ಪರಸ್ಪರರನ್ನು ಮುಚ್ಚುತ್ತಾ ಆ ಮಹೇಷ್ವಾಸರು ಮಾಡಿದುದಕ್ಕೆ ಪ್ರತಿಯಾಗಿ ಮಾಡಲು ತೊಡಗಿದರು.
07134047a ತದದ್ಭುತಮಭೂದ್ಯುದ್ಧಂ ಕರ್ಣಪಾಂಡವಯೋರ್ಮೃಧೇ|
07134047c ಕ್ರುದ್ಧಯೋರ್ವಾಶಿತಾಹೇತೋರ್ವನ್ಯಯೋರ್ಗಜಯೋರಿವ||
ಕಾವಿಗೆ ಬಂದ ಹೆಣ್ಣಾನೆಯ ಸಲುವಾಗಿ ಎರಡು ಸಲಗಗಳ ನಡುವೆ ಹೇಗೋ ಹಾಗೆ ಕ್ರುದ್ಧ ಕರ್ಣ-ಪಾಂಡವರ ನಡುವೆ ಅತಿ ಅಧ್ಭುತ ಯುದ್ಧವು ನಡೆಯಿತು.
07134048a ತತಃ ಪಾರ್ಥೋ ಮಹೇಷ್ವಾಸೋ ದೃಷ್ಟ್ವಾ ಕರ್ಣಸ್ಯ ವಿಕ್ರಮಂ|
07134048c ಮುಷ್ಟಿದೇಶೇ ಧನುಸ್ತಸ್ಯ ಚಿಚ್ಚೇದ ತ್ವರಯಾನ್ವಿತಃ||
ಆಗ ಮಹೇಷ್ವಾಸ ಅರ್ಜುನನು ಕರ್ಣನ ವಿಕ್ರಮವನ್ನು ಕಂಡು ತ್ವರೆಮಾಡಿ ಅವನ ಧನುಸ್ಸನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿದನು.
07134049a ಅಶ್ವಾಂಶ್ಚ ಚತುರೋ ಭಲ್ಲೈರನಯದ್ಯಮಸಾದನಂ|
07134049c ಸಾರಥೇಶ್ಚ ಶಿರಃ ಕಾಯಾದಹರಚ್ಚತ್ರುತಾಪನಃ||
ಆ ಶತ್ರುತಾಪನನು ನಾಲ್ಕು ಕುದುರೆಗಳನ್ನೂ ಭಲ್ಲಗಳಿಂದ ಯಮಸಾದನಕ್ಕೆ ಕಳುಹಿಸಿ ಸಾರಥಿಯ ಶಿರವನ್ನೂ ಅವನ ದೇಹದಿಂದ ಬೇರ್ಪಡಿಸಿದನು.
07134050a ಅಥೈನಂ ಚಿನ್ನಧನ್ವಾನಂ ಹತಾಶ್ವಂ ಹತಸಾರಥಿಂ|
07134050c ವಿವ್ಯಾಧ ಸಾಯಕೈಃ ಪಾರ್ಥಶ್ಚತುರ್ಭಿಃ ಪಾಂಡುನಂದನಃ||
ಮತ್ತೆ ಧನುಸ್ಸನ್ನು ಕಳೆದುಕೊಂಡ, ಕುದುರೆಗಳನ್ನು ಕಳೆದುಕೊಂಡ ಮತ್ತು ಸಾರಥಿಯನ್ನು ಕಳೆದುಕೊಂಡ ಅವನನ್ನು ಪಾಂಡುನಂದನ ಪಾರ್ಥನು ನಾಲ್ಕು ಸಾಯಕಗಳಿಂದ ಗಾಯಗೊಳಿಸಿದನು.
07134051a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ನರರ್ಷಭಃ|
07134051c ಆರುರೋಹ ರಥಂ ತೂರ್ಣಂ ಕೃಪಸ್ಯ ಶರಪೀಡಿತಃ||
ಆಗ ಶರಪೀಡಿತ ನರರ್ಷಭ ಕರ್ಣನು ಕುದುರೆಗಳು ಹತವಾದ ರಥದಿಂದ ಬೇಗನೇ ಹಾರಿ ತಕ್ಷಣವೇ ಕೃಪನ ರಥವನ್ನೇರಿದನು.
07134052a ರಾಧೇಯಂ ನಿರ್ಜಿತಂ ದೃಷ್ಟ್ವಾ ತಾವಕಾ ಭರತರ್ಷಭ|
07134052c ಧನಂಜಯಶರೈರ್ನುನ್ನಾಃ ಪ್ರಾದ್ರವಂತ ದಿಶೋ ದಶ||
ಭರತರ್ಷಭ! ರಾಧೇಯನು ಸೋತಿದುದನ್ನು ಕಂಡ ನಿನ್ನವರು ಧನಂಜಯನ ಶರಗಳಿಗೆ ಹೆದರಿ ದಿಕ್ಕು ದಿಕ್ಕುಗಳಿಗೆ ಓಡಿ ಹೋದರು.
07134053a ದ್ರವತಸ್ತಾನ್ಸಮಾಲೋಕ್ಯ ರಾಜಾ ದುರ್ಯೋಧನೋ ನೃಪ|
07134053c ನಿವರ್ತಯಾಮಾಸ ತದಾ ವಾಕ್ಯಂ ಚೇದಮುವಾಚ ಹ||
ನೃಪ! ಓಡಿ ಹೋಗುತ್ತಿರುವ ಅವರನ್ನು ನೋಡಿ ರಾಜಾ ದುರ್ಯೋಧನನು ಈ ಮಾತುಗಳಿಂದ ಅವರನ್ನು ಹಿಂದಿರುಗಲು ಪ್ರಚೋದಿಸಿದನು:
07134054a ಅಲಂ ದ್ರುತೇನ ವಃ ಶೂರಾಸ್ತಿಷ್ಠಧ್ವಂ ಕ್ಷತ್ರಿಯರ್ಷಭಾಃ|
07134054c ಏಷ ಪಾರ್ಥವಧಾಯಾಹಂ ಸ್ವಯಂ ಗಚ್ಚಾಮಿ ಸಮ್ಯುಗೇ|
07134054e ಅಹಂ ಪಾರ್ಥಾನ್ ಹನಿಷ್ಯಾಮಿ ಸಪಾಂಚಾಲಾನ್ಸಸೋಮಕಾನ್||
“ಕ್ಷತ್ರಿಯರ್ಷಭರೇ! ಪಲಾಯನ ಮಾಡುವುದನ್ನು ನಿಲ್ಲಿಸಿ! ಶೂರರಂತೆ ಯುದ್ಧಮಾಡಿ! ಪಾರ್ಥನನ್ನು ವಧಿಸಲು ಸ್ವಯಂ ನಾನೇ ಅವನೊಡನೆ ಯುದ್ಧಕ್ಕೆ ಹೋಗುತ್ತೇನೆ. ನಾನು ಸೋಮಕ-ಪಾಂಚಾಲರೊಂದಿಗೆ ಪಾರ್ಥರನ್ನು ಸಂಹರಿಸುತ್ತೇನೆ.
07134055a ಅದ್ಯ ಮೇ ಯುಧ್ಯಮಾನಸ್ಯ ಸಹ ಗಾಂಡೀವಧನ್ವನಾ|
07134055c ದ್ರಕ್ಷ್ಯಂತಿ ವಿಕ್ರಮಂ ಪಾರ್ಥಾಃ ಕಾಲಸ್ಯೇವ ಯುಗಕ್ಷಯೇ||
ಯುಗಕ್ಷಯದ ಕಾಲನಂತೆ ಗಾಂಡೀವಧನ್ವಿಯೊಡನೆ ಯುದ್ಧಮಾಡುವ ನನ್ನ ಈ ವಿಕ್ರಮವನ್ನು ಪಾರ್ಥರು ಇಂದು ನೋಡಲಿದ್ದಾರೆ!
07134056a ಅದ್ಯ ಮದ್ಬಾಣಜಾಲಾನಿ ವಿಮುಕ್ತಾನಿ ಸಹಸ್ರಶಃ|
07134056c ದ್ರಕ್ಷ್ಯಂತಿ ಸಮರೇ ಯೋಧಾಃ ಶಲಭಾನಾಮಿವಾಯತೀಃ||
ಇಂದು ಸಮರದಲ್ಲಿ ಯೋಧರು ನನ್ನಿಂದ ಶಲಭಗಳಂತೆ ಹೊರಹೊಮ್ಮುವ ಸಹಸ್ರಾರು ಬಾಣಗಳ ಜಾಲಗಳನ್ನು ನೋಡುವವರಿದ್ದಾರೆ!
07134057a ಅದ್ಯ ಬಾಣಮಯಂ ವರ್ಷಂ ಸೃಜತೋ ಮಮ ಧನ್ವಿನಃ|
07134057c ಜೀಮೂತಸ್ಯೇವ ಘರ್ಮಾಂತೇ ದ್ರಕ್ಷ್ಯಂತಿ ಯುಧಿ ಸೈನಿಕಾಃ||
ಬೇಸಗೆಯ ಕೊನೆಯಲ್ಲಿ ಮೋಡಗಳು ಮಳೆಸುರಿಸುವಂತೆ ನನ್ನ ಧನುಸ್ಸಿನಿಂದ ಬಾಣಮಯ ಮಳೆಯನ್ನು ಸೃಷ್ಟಿಸುವ ನನ್ನನ್ನು ಇಂದು ಯುದ್ಧದಲ್ಲಿ ಸೈನಿಕರು ನೋಡಲಿದ್ದಾರೆ!
07134058a ಜೇಷ್ಯಾಮ್ಯದ್ಯ ರಣೇ ಪಾರ್ಥಂ ಸಾಯಕೈರ್ನತಪರ್ವಭಿಃ|
07134058c ತಿಷ್ಠಧ್ವಂ ಸಮರೇ ಶೂರಾ ಭಯಂ ತ್ಯಜತ ಫಲ್ಗುನಾತ್||
07134059a ನ ಹಿ ಮದ್ವೀರ್ಯಮಾಸಾದ್ಯ ಫಲ್ಗುನಃ ಪ್ರಸಹಿಷ್ಯತಿ|
07134059c ಯಥಾ ವೇಲಾಂ ಸಮಾಸಾದ್ಯ ಸಾಗರೋ ಮಕರಾಲಯಃ||
ಇಂದು ನತಪರ್ವಗಳಿಂದ ನಾನು ರಣದಲ್ಲಿ ಪಾರ್ಥನನ್ನು ಜಯಿಸುತ್ತೇನೆ. ಶೂರರೇ! ಫಲ್ಗುನನ ಭಯವನ್ನು ತೊರೆದು ಸಮರದಲ್ಲಿ ನಿಲ್ಲಿ! ನನ್ನ ವೀರ್ಯವನ್ನು ಎದುರಿಸಿ ಫಲ್ಗುನನು ತೀರವನ್ನು ಮುಟ್ಟಿದ ಮಕರಾಲಯ ಸಾಗರವು ಹೇಗೋ ಹಾಗೆ ಮುಂದುವರೆಯಲಾರ!”
07134060a ಇತ್ಯುಕ್ತ್ವಾ ಪ್ರಯಯೌ ರಾಜಾ ಸೈನ್ಯೇನ ಮಹತಾ ವೃತಃ|
07134060c ಫಲ್ಗುನಂ ಪ್ರತಿ ದುರ್ಧರ್ಷಃ ಕ್ರೋಧಸಂರಕ್ತಲೋಚನಃ||
ಹೀಗೆ ಹೇಳಿ ಮಹಾ ಸೇನೆಯಿಂದ ಪರಿವೃತನಾಗಿ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ದುರ್ಧರ್ಷ ರಾಜನು ಫಲ್ಗುನನಿದ್ದಲ್ಲಿಗೆ ಹೊರಟನು.
07134061a ತಂ ಪ್ರಯಾಂತಂ ಮಹಾಬಾಹುಂ ದೃಷ್ಟ್ವಾ ಶಾರದ್ವತಸ್ತದಾ|
07134061c ಅಶ್ವತ್ಥಾಮಾನಮಾಸಾದ್ಯ ವಾಕ್ಯಮೇತದುವಾಚ ಹ||
ಹಾಗೆ ಹೋಗುತ್ತಿದ್ದ ಆ ಮಹಾಬಾಹುವನ್ನು ನೋಡಿ ಶಾರದ್ವತನು ಅಶ್ವತ್ಥಾಮನ ಬಳಿಸಾರಿ ಈ ಮಾತನ್ನಾಡಿದನು:
07134062a ಏಷ ರಾಜಾ ಮಹಾಬಾಹುರಮರ್ಷೀ ಕ್ರೋಧಮೂರ್ಚಿತಃ|
07134062c ಪತಂಗವೃತ್ತಿಮಾಸ್ಥಾಯ ಫಲ್ಗುನಂ ಯೋದ್ಧುಮಿಚ್ಚತಿ||
“ಈ ಮಹಾಬಾಹು ಅಸಹನಶೀಲ ರಾಜನು ಕ್ರೋಧದಿಂದ ಮೂರ್ಛಿತನಾಗಿ ಪತಂಗದ ಸ್ವಭಾವವನ್ನನ್ನುಸರಿಸಿ ಫಲ್ಗುನನೊಂದಿಗೆ ಯುದ್ಧಮಾಡಲು ಬಯಸುತ್ತಾನೆ!
07134063a ಯಾವನ್ನಃ ಪಶ್ಯಮಾನಾನಾಂ ಪ್ರಾಣಾನ್ಪಾರ್ಥೇನ ಸಂಗತಃ|
07134063c ನ ಜಹ್ಯಾತ್ಪುರುಷವ್ಯಾಘ್ರಸ್ತಾವದ್ವಾರಯ ಕೌರವಂ||
ಪುರುಷವ್ಯಾಘ್ರ! ನಾವು ನೋಡುತ್ತಿರುವಂತೆಯೇ ಪಾರ್ಥನೊಂದಿಗೆ ಹೋರಾಡಿ ಪ್ರಾಣಗಳನ್ನು ತ್ಯಜಿಸದಂತೆ ಕೌರವನನ್ನು ತಡೆದು ಯುದ್ಧದಿಂದ ನಿಲ್ಲಿಸು!
07134064a ಯಾವತ್ಫಲ್ಗುನಬಾಣಾನಾಂ ಗೋಚರಂ ನಾಧಿಗಚ್ಚತಿ|
07134064c ಕೌರವಃ ಪಾರ್ಥಿವೋ ವೀರಸ್ತಾವದ್ವಾರಯ ತಂ ದ್ರುತಂ||
07134065a ಯಾವತ್ಪಾರ್ಥಶರೈರ್ಘೋರೈರ್ನಿರ್ಮುಕ್ತೋರಗಸಮ್ನಿಭೈಃ|
07134065c ನ ಭಸ್ಮೀಕ್ರಿಯತೇ ರಾಜಾ ತಾವದ್ಯುದ್ಧಾನ್ನಿವಾರ್ಯತಾಂ||
ಸರ್ಪಗಳಂತೆ ಹೊರಬರುವ ಪಾರ್ಥನ ಶರಸಮೂಹಗಳಿಂದ ರಾಜನು ಭಸ್ಮೀಭೂತನಾಗಬಾರದೆಂದು ರಾಜನನ್ನು ನೀನು ತಡೆಯಬೇಕು!
07134066a ಅಯುಕ್ತಮಿವ ಪಶ್ಯಾಮಿ ತಿಷ್ಠತ್ಸ್ವಸ್ಮಾಸು ಮಾನದ|
07134066c ಸ್ವಯಂ ಯುದ್ಧಾಯ ಯದ್ರಾಜಾ ಪಾರ್ಥಂ ಯಾತ್ಯಸಹಾಯವಾನ್||
ಮಾನದ! ನಾವು ಇಲ್ಲಿಯೇ ಇರುವಾಗ ನಮ್ಮ ಸಹಾಯವನ್ನು ಕೇಳದೇ ಸ್ವಯಂ ತಾನೇ ಪಾರ್ಥನೊಡನೆ ರಾಜನು ಹೋಗಿದ್ದುದು ಸರಿಯಲ್ಲವೆಂದು ನನಗನ್ನಿಸುತ್ತದೆ.
07134067a ದುರ್ಲಭಂ ಜೀವಿತಂ ಮನ್ಯೇ ಕೌರವ್ಯಸ್ಯ ಕಿರೀಟಿನಾ|
07134067c ಯುಧ್ಯಮಾನಸ್ಯ ಪಾರ್ಥೇನ ಶಾರ್ದೂಲೇನೇವ ಹಸ್ತಿನಃ||
ಸಿಂಹದೊಡನೆ ಹೋರಾಡುವ ಆನೆಯಂತೆ ಕಿರೀಟಿಯೊಂದಿಗೆ ಯುದ್ಧಮಾಡುತ್ತಿರುವ ಕೌರವನನ್ನು ಪಾರ್ಥನು ಜೀವಂತವಿಡುವುದು ದುರ್ಲಭವೆಂದು ನನಗನ್ನಿಸುತ್ತದೆ.”
07134068a ಮಾತುಲೇನೈವಮುಕ್ತಸ್ತು ದ್ರೌಣಿಃ ಶಸ್ತ್ರಭೃತಾಂ ವರಃ|
07134068c ದುರ್ಯೋಧನಮಿದಂ ವಾಕ್ಯಂ ತ್ವರಿತಂ ಸಮಭಾಷತ||
ಸೋದರಮಾವನು ಹೀಗೆ ಹೇಳಲು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೌಣಿಯು ತ್ವರೆಮಾಡಿ ದುರ್ಯೋಧನನಿಗೆ ಈ ಮಾತನ್ನಾಡಿದನು:
07134069a ಮಯಿ ಜೀವತಿ ಗಾಂಧಾರೇ ನ ಯುದ್ಧಂ ಗಂತುಮರ್ಹಸಿ|
07134069c ಮಾಮನಾದೃತ್ಯ ಕೌರವ್ಯ ತವ ನಿತ್ಯಂ ಹಿತೈಷಿಣಂ||
“ಗಾಂಧಾರೇ! ಕೌರವ್ಯ! ನಿತ್ಯವೂ ನಿನ್ನ ಹಿತೈಷಿಯಾಗಿರುವ ನನ್ನನ್ನು ಅನಾದರಿಸಿ ನಾನು ಜೀವಿತವಾಗಿರುವಾಗಲೇ ನೀನು ಯುದ್ಧಕ್ಕೆ ಹೋಗುವುದು ಸರಿಯಲ್ಲ!
07134070a ನ ಹಿ ತೇ ಸಂಭ್ರಮಃ ಕಾರ್ಯಃ ಪಾರ್ಥಸ್ಯ ವಿಜಯಂ ಪ್ರತಿ|
07134070c ಅಹಮಾವಾರಯಿಷ್ಯಾಮಿ ಪಾರ್ಥಂ ತಿಷ್ಠ ಸುಯೋಧನ||
ಸುಯೋಧನ! ಪಾರ್ಥನಿಗೆ ವಿಜಯದೊರೆಯುವಂತೆ ಅವಸರದಲ್ಲಿ ಯಾವ ಕಾರ್ಯವನ್ನೂ ಮಾಡಬೇಡ. ಪಾರ್ಥನನ್ನು ನಾನು ತಡೆಯುತ್ತೇನೆ. ನಿಲ್ಲು!”
07134071 ದುರ್ಯೋಧನ ಉವಾಚ|
07134071a ಆಚಾರ್ಯಃ ಪಾಂಡುಪುತ್ರಾನ್ವೈ ಪುತ್ರವತ್ಪರಿರಕ್ಷತಿ|
07134071c ತ್ವಮಪ್ಯುಪೇಕ್ಷಾಂ ಕುರುಷೇ ತೇಷು ನಿತ್ಯಂ ದ್ವಿಜೋತ್ತಮ||
ದುರ್ಯೋಧನನು ಹೇಳಿದನು: “ದ್ವಿಜೋತ್ತಮ! ಆಚಾರ್ಯನು ಪಾಂಡುಪುತ್ರರನ್ನು ಪುತ್ರರಂತೆ ಪರಿರಕ್ಷಿಸುತ್ತಾರೆ. ನೀನೂ ಕೂಡ ಅವರ ಕುರಿತು ನಿತ್ಯವೂ ಉಪೇಕ್ಷಿಸುತ್ತಿರುವೆ.
07134072a ಮಮ ವಾ ಮಂದಭಾಗ್ಯತ್ವಾನ್ಮಂದಸ್ತೇ ವಿಕ್ರಮೋ ಯುಧಿ|
07134072c ಧರ್ಮರಾಜಪ್ರಿಯಾರ್ಥಂ ವಾ ದ್ರೌಪದ್ಯಾ ವಾ ನ ವಿದ್ಮ ತತ್||
ನೀನು ಯುದ್ಧದಲ್ಲಿ ನಿನ್ನ ವಿಕ್ರಮವನ್ನು ಕಡಿಮೆ ತೋರಿಸುತ್ತಿದ್ದೀಯೆ. ಇದು ನನ್ನ ದುರ್ಭಾಗ್ಯದಿಂದಲೋ ಅಥವಾ ಧರ್ಮರಾಜ ಅಥವಾ ದ್ರೌಪದಿಯ ಮೇಲಿನ ಪ್ರೀತಿಯಿಂದಲೋ ಅರ್ಥವಾಗುತ್ತಿಲ್ಲ.
07134073a ಧಿಗಸ್ತು ಮಮ ಲುಬ್ಧಸ್ಯ ಯತ್ಕೃತೇ ಸರ್ವಬಾಂಧವಾಃ|
07134073c ಸುಖಾರ್ಹಾಃ ಪರಮಂ ದುಃಖಂ ಪ್ರಾಪ್ನುವಂತ್ಯಪರಾಜಿತಾಃ||
ಯಾವುದರಿಂದಾಗಿ ಸುಖಾರ್ಹ ನನ್ನ ಸರ್ವ ಬಾಂಧವರೂ ಅಪರಾಜಿತರಾಗಿ ಪರಮ ದುಃಖವನ್ನು ಹೊಂದಿರುವರೋ ಆ ನನ್ನ ಲೋಭಕ್ಕೆ ಧಿಕ್ಕಾರ!
07134074a ಕೋ ಹಿ ಶಸ್ತ್ರಭೃತಾಂ ಮುಖ್ಯೋ ಮಹೇಶ್ವರಸಮೋ ಯುಧಿ|
07134074c ಶತ್ರೂನ್ನ ಕ್ಷಪಯೇಚ್ಚಕ್ತೋ ಯೋ ನ ಸ್ಯಾದ್ಗೌತಮೀಸುತಃ||
ಶಸ್ತ್ರಭೃತರಲ್ಲಿ ಮುಖ್ಯನಾದ ಗೌತಮೀಸುತ ಅಶ್ವತ್ಥಾಮನ ಹೊರತಾಗಿ ಯುದ್ಧದಲ್ಲಿ ಮಹೇಶ್ವರಸಮನಾದ ಯಾರುತಾನೇ ಶತ್ರುಗಳನ್ನು ನಾಶಗೊಳಿಸಬಲ್ಲನು?
07134075a ಅಶ್ವತ್ಥಾಮನ್ಪ್ರಸೀದಸ್ವ ನಾಶಯೈತಾನ್ಮಮಾಹಿತಾನ್|
07134075c ತವಾಸ್ತ್ರಗೋಚರೇ ಶಕ್ತಾಃ ಸ್ಥಾತುಂ ದೇವಾಪಿ ನಾನಘ||
ಅಶ್ವತ್ಥಾಮ! ಅನಘ! ಪ್ರಸನ್ನನಾಗು! ನನ್ನ ಹಿತಕ್ಕಾಗಿ ಇವರನ್ನು ನಾಶಗೊಳಿಸು. ನಿನ್ನ ಅಸ್ತ್ರಗಳ ಮುಂದೆ ದೇವತೆಗಳೂ ನಿಲ್ಲಲು ಶಕ್ತರಿಲ್ಲ.
07134076a ಪಾಂಚಾಲಾನ್ಸೋಮಕಾಂಶ್ಚೈವ ಜಹಿ ದ್ರೌಣೇ ಸಹಾನುಗಾನ್|
07134076c ವಯಂ ಶೇಷಾನ್ ಹನಿಷ್ಯಾಮಸ್ತ್ವಯೈವ ಪರಿರಕ್ಷಿತಾಃ||
ದ್ರೌಣಿ! ಅನುಗರೊಂದಿಗೆ ಪಾಂಚಾಲರನ್ನೂ ಸೋಮಕರನ್ನು ಕೊಲ್ಲು! ನಿನ್ನಿಂದಲೇ ರಕ್ಷಿತರಾದ ನಾವು ಉಳಿದವರನ್ನು ಸಂಹರಿಸುತ್ತೇವೆ.
07134077a ಏತೇ ಹಿ ಸೋಮಕಾ ವಿಪ್ರ ಪಾಂಚಾಲಾಶ್ಚ ಯಶಸ್ವಿನಃ|
07134077c ಮಮ ಸೈನ್ಯೇಷು ಸಂರಬ್ಧಾ ವಿಚರಂತಿ ದವಾಗ್ನಿವತ್||
ವಿಪ್ರ! ಯಶಸ್ವಿ ಸೋಮಕ ಪಾಂಚಾಲರಿಂದ ಕಾಡ್ಗಿಚ್ಚಿಗೆ ಸಿಲುಕಿದವರಂತೆ ನನ್ನ ಸೈನಿಕರು ಗಾಬರಿಯಿಂದ ಓಡಿ ಹೋಗುತ್ತಿದ್ದಾರೆ.
07134078a ತಾನ್ವಾರಯ ಮಹಾಬಾಹೋ ಕೇಕಯಾಂಶ್ಚ ನರೋತ್ತಮ|
07134078c ಪುರಾ ಕುರ್ವಂತಿ ನಿಃಶೇಷಂ ರಕ್ಷ್ಯಮಾಣಾಃ ಕಿರೀಟಿನಾ||
ಮಹಾಬಾಹೋ! ನರೋತ್ತಮ! ಕಿರೀಟಿಯ ರಕ್ಷಣೆಯಲ್ಲಿ ಇವರು ಮತ್ತು ಕೇಕಯರು ನಮ್ಮವರು ನಿಃಶೇಷವಾಗುವಂತೆ ಮಾಡುವುದರೊಳಗೆ ಇವರನ್ನು ತಡೆ!
07134079a ಆದೌ ವಾ ಯದಿ ವಾ ಪಶ್ಚಾತ್ತವೇದಂ ಕರ್ಮ ಮಾರಿಷ|
07134079c ತ್ವಮುತ್ಪನ್ನೋ ಮಹಾಬಾಹೋ ಪಾಂಚಾಲಾನಾಂ ವಧಂ ಪ್ರತಿ||
ಮಹಾಬಾಹೋ! ಮಾರಿಷ! ಮೊದಲಾಗಲೀ ಕಡೆಯಲ್ಲಾಗಲೀ ನೀನು ಈ ಕೆಲಸವನ್ನು ಮಾಡು. ಪಾಂಚಾಲರ ವಧೆಗೋಸ್ಕರವೇ ನೀನು ಜನ್ಮತಳೆದಿರುವೆ!
07134080a ಕರಿಷ್ಯಸಿ ಜಗತ್ಸರ್ವಮಪಾಂಚಾಲಂ ಕಿಲಾಚ್ಯುತ|
07134080c ಏವಂ ಸಿದ್ಧಾಬ್ರುವನ್ವಾಚೋ ಭವಿಷ್ಯತಿ ಚ ತತ್ತಥಾ||
ಅಚ್ಯುತ! ಜಗತ್ತನ್ನು ಸರ್ವ ಪಾಂಚಾಲರಿಂದ ಮುಕ್ತಗೊಳಿಸುತ್ತೀಯೆಲ್ಲವೇ? ಹೀಗೆ ಸಿದ್ಧರು ಹೇಳಿದ್ದರು. ಅದು ಹಾಗೆಯೇ ಆಗುತ್ತದೆ.
07134081a ನ ತೇಽಸ್ತ್ರಗೋಚರೇ ಶಕ್ತಾಃ ಸ್ಥಾತುಂ ದೇವಾಃ ಸವಾಸವಾಃ|
07134081c ಕಿಮು ಪಾರ್ಥಾಃ ಸಪಾಂಚಾಲಾಃ ಸತ್ಯಂ ಏತದ್ವಚೋ ಮಮ||
ನಿನ್ನ ಅಸ್ತ್ರಗಳ ಮಾರ್ಗದಲ್ಲಿ ವಾಸವ ಸಹಿತ ದೇವತೆಗಳೂ ನಿಲ್ಲಲು ಶಕ್ತರಲ್ಲ. ಇನ್ನು ಪಾಂಚಾಲರೊಂದಿಗೆ ಪಾರ್ಥರು ಯಾವ ಲೆಖ್ಕಕ್ಕೆ? ಇದು ನನ್ನ ಸತ್ಯನುಡಿ!””
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ದುರ್ಯೋಧನವಾಕ್ಯೇ ಚತುಸ್ತ್ರಿಂಶಾಧಿಕಶತತಮೋಽಧ್ಯಾಯಃ ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ದುರ್ಯೋಧನವಾಕ್ಯ ಎನ್ನುವ ನೂರಾಮೂವತ್ನಾಲ್ಕನೇ ಅಧ್ಯಾಯವು.
