Drona Parva: Chapter 117

ದ್ರೋಣ ಪರ್ವ: ಜಯದ್ರಥವಧ ಪರ್ವ

೧೧೭

ಭೂರಿಶ್ರವ-ಸಾತ್ಯಕಿಯರ ವಾಗ್ಯುದ್ಧ (೧-೧೮). ಸಾತ್ಯಕಿ-ಭೂರಿಶ್ರವರ ಯುದ್ಧ (೧೯-೪೧). ಸಾತ್ಯಕಿಯನ್ನು ಉಳಿಸಲೋಸುಗ ಕೃಷ್ಣನ ಸೂಚನೆಯಂತೆ ಅರ್ಜುನನು ಖಡ್ಗವನ್ನು ಹಿಡಿದಿದ್ದ ಭೂರಿಶ್ರವನ ಬಾಹುವನ್ನು ಕತ್ತರಿಸಿದುದು (೪೨-೬೨).

07117001 ಸಂಜಯ ಉವಾಚ|

07117001a ತಮಾಪತಂತಂ ಸಂಪ್ರೇಕ್ಷ್ಯ ಸಾತ್ವತಂ ಯುದ್ಧದುರ್ಮದಂ|

07117001c ಕ್ರೋಧಾದ್ಭೂರಿಶ್ರವಾ ರಾಜನ್ಸಹಸಾ ಸಮುಪಾದ್ರವತ್||

ಸಂಜಯನು ಹೇಳಿದನು: “ರಾಜನ್! ಯುದ್ಧದುರ್ಮದ ಸಾತ್ವತನು ಮೇಲೆ ಬೀಳುತ್ತಿರುವುದನ್ನು ನೋಡಿದ ಭೂರಿಶ್ರವನು ಕ್ರೋಧದಿಂದ ಅವನನ್ನು ಒಮ್ಮೆಲೇ ಆಕ್ರಮಣಿಸಿದನು.

07117002a ತಮಬ್ರವೀನ್ಮಹಾಬಾಹುಃ ಕೌರವ್ಯಃ ಶಿನಿಪುಂಗವಂ|

07117002c ಅದ್ಯ ಪ್ರಾಪ್ತೋಽಸಿ ದಿಷ್ಟ್ಯಾ ಮೇ ಚಕ್ಷುರ್ವಿಷಯಮಿತ್ಯುತ||

ಆ ಮಹಾಬಾಹು ಕೌರವ್ಯನು ಶಿನಿಪುಂಗವನಿಗೆ ಹೇಳಿದನು: “ಇಂದು ನಿನ್ನನ್ನು ಪಡೆದೆ! ಒಳ್ಳೆಯದಾಯಿತು ಇಂದು ನೀನು ಕಣ್ಣಿಗೆ ಬಿದ್ದೆ!

07117003a ಚಿರಾಭಿಲಷಿತಂ ಕಾಮಮದ್ಯ ಪ್ರಾಪ್ಸ್ಯಾಮಿ ಸಂಯುಗೇ|

07117003c ನ ಹಿ ಮೇ ಮೋಕ್ಷ್ಯಸೇ ಜೀವನ್ಯದಿ ನೋತ್ಸೃಜಸೇ ರಣಂ||

ಬಹಳ ಸಮಯದಿಂದ ಬಯಸುತ್ತಿದ್ದ ನನಗೆ ಇಂದು ಸಂಯುಗದಲ್ಲಿ ದೊರಕಿದ್ದೀಯೆ! ಇಂದು ರಣವನ್ನು ಬಿಟ್ಟು ಹೋಗದೇ ಇದ್ದರೆ ನೀನು ನನ್ನಿಂದ ಜೀವಂತ ಹೋಗಲಾರೆ.

07117004a ಅದ್ಯ ತ್ವಾಂ ಸಮರೇ ಹತ್ವಾ ನಿತ್ಯಂ ಶೂರಾಭಿಮಾನಿನಂ|

07117004c ನಂದಯಿಷ್ಯಾಮಿ ದಾಶಾರ್ಹ ಕುರುರಾಜಂ ಸುಯೋಧನಂ||

ದಾಶಾರ್ಹ! ಶೂರನೆಂದು ನಿತ್ಯವೂ ಅಭಿಮಾನಿಯಾಗಿರುವ ನಿನ್ನನ್ನು ಇಂದು ಸಮರದಲ್ಲಿ ಕೊಂದು ಕುರುರಾಜ ಸುಯೋಧನನನ್ನು ಹರ್ಷಗೊಳಿಸುತ್ತೇನೆ.

07117005a ಅದ್ಯ ಮದ್ಬಾಣನಿರ್ದಗ್ಧಂ ಪತಿತಂ ಧರಣೀತಲೇ|

07117005c ದ್ರಕ್ಷ್ಯತಸ್ತ್ವಾಂ ರಣೇ ವೀರೌ ಸಹಿತೌ ಕೇಶವಾರ್ಜುನೌ||

ಇಂದು ರಣದಲ್ಲಿ ನನ್ನ ಬಾಣಗಳಿಂದ ದಗ್ಧನಾಗಿ ಧರಣೀತಲದಲ್ಲಿ ಬಿದ್ದ ನಿನ್ನನ್ನು ವೀರದ ಕೇಶವ-ಅರ್ಜುನರು ಒಟ್ಟಿಗೇ ನೋಡಲಿದ್ದಾರೆ.

07117006a ಅದ್ಯ ಧರ್ಮಸುತೋ ರಾಜಾ ಶ್ರುತ್ವಾ ತ್ವಾಂ ನಿಹತಂ ಮಯಾ|

07117006c ಸವ್ರೀಡೋ ಭವಿತಾ ಸದ್ಯೋ ಯೇನಾಸೀಹ ಪ್ರವೇಶಿತಃ||

ಇಂದು ನೀನು ನನ್ನಿಂತ ಹತನಾದೆಯೆಂದು ಕೇಳಿ ಸೇನೆಯನ್ನು ಪ್ರವೇಶಿಸಲು ಹೇಳಿದ ರಾಜಾ ಧರ್ಮಸುತನು ಸದ್ಯದಲ್ಲಿಯೇ ನಾಚಿಗೆಪಡುವವನಿದ್ದಾನೆ.

07117007a ಅದ್ಯ ಮೇ ವಿಕ್ರಮಂ ಪಾರ್ಥೋ ವಿಜ್ಞಾಸ್ಯತಿ ಧನಂಜಯಃ|

07117007c ತ್ವಯಿ ಭೂಮೌ ವಿನಿಹತೇ ಶಯಾನೇ ರುಧಿರೋಕ್ಷಿತೇ||

ಇಂದು ನೀನು ರಕ್ತದಲ್ಲಿ ತೋಯ್ದು ಹತನಾಗಿ ಭೂಮಿಯಮೇಲೆ ಮಲಗಿರಲು ಪಾರ್ಥ ಧನಂಜಯನು ನನ್ನ ವಿಕ್ರಮವನ್ನು ತಿಳಿದುಕೊಳ್ಳುತ್ತಾನೆ.

07117008a ಚಿರಾಭಿಲಷಿತೋ ಹ್ಯದ್ಯ ತ್ವಯಾ ಸಹ ಸಮಾಗಮಃ|

07117008c ಪುರಾ ದೇವಾಸುರೇ ಯುದ್ಧೇ ಶಕ್ರಸ್ಯ ಬಲಿನಾ ಯಥಾ||

ಹಿಂದೆ ದೇವಾಸುರರ ಯುದ್ಧದಲ್ಲಿ ಶಕ್ರನು ಬಲಿಯೊಂದಿಗೆ ಯುದ್ಧಮಾಡಿದಂತೆ ನಿನ್ನೊಡನೆ ಯುದ್ಧಮಾಡಬೇಕೆಂಬ ಬಹುಕಾಲದ ನನ್ನ ಅಭಿಲಾಷೆಯು ಇಂದು ಪೂರೈಸಲಿದೆ.

07117009a ಅದ್ಯ ಯುದ್ಧಂ ಮಹಾಘೋರಂ ತವ ದಾಸ್ಯಾಮಿ ಸಾತ್ವತ|

07117009c ತತೋ ಜ್ಞಾಸ್ಯಸಿ ತತ್ತ್ವೇನ ಮದ್ವೀರ್ಯಬಲಪೌರುಷಂ||

ಸಾತ್ವತ! ಇಂದು ನಿನಗೆ ಮಹಾಘೋರ ಯುದ್ಧವನ್ನು ನೀಡುತ್ತೇನೆ. ಆಗ ನಿನಗೆ ನನ್ನ ಬಲಪೌರುಷವೇನೆಂದು ತಿಳಿಯುತ್ತದೆ.

07117010a ಅದ್ಯ ಸಮ್ಯಮನೀಂ ಯಾತಾ ಮಯಾ ತ್ವಂ ನಿಹತೋ ರಣೇ|

07117010c ಯಥಾ ರಾಮಾನುಜೇನಾಜೌ ರಾವಣಿರ್ಲಕ್ಷ್ಮಣೇನ ವೈ||

ರಾಮಾನುಜ ಲಕ್ಷ್ಮಣನಿಂದ ರಾವಣಿಯು ಹೇಗೆ ಯಮಲೋಕಕ್ಕೆ ಕಳುಹಿಸಲ್ಪಟ್ಟನೋ ಹಾಗೆ ಇಂದು ನೀನೂ ಕೂಡ ರಣದಲ್ಲಿ ನನ್ನಿಂದ ಹತನಾಗಿ ಯಮಲೋಕಕ್ಕೆ ಹೋಗುವೆ.

07117011a ಅದ್ಯ ಕೃಷ್ಣಶ್ಚ ಪಾರ್ಥಶ್ಚ ಧರ್ಮರಾಜಶ್ಚ ಮಾಧವ|

07117011c ಹತೇ ತ್ವಯಿ ನಿರುತ್ಸಾಹಾ ರಣಂ ತ್ಯಕ್ಷ್ಯಂತ್ಯಸಂಶಯಂ||

ಮಾಧವ! ಇಂದು ನೀನು ಹತನಾಗಲು ಕೃಷ್ಣ, ಪಾರ್ಥ ಮತ್ತು ಧರ್ಮರಾಜರು ನಿರುತ್ಸಾಹರಾಗಿ ರಣವನ್ನು ತೊರೆಯುವುದು ಖಂಡಿತ.

07117012a ಅದ್ಯ ತೇಽಪಚಿತಿಂ ಕೃತ್ವಾ ಶಿತೈರ್ಮಾಧವ ಸಾಯಕೈಃ|

07117012c ತತ್ಸ್ತ್ರಿಯೋ ನಂದಯಿಷ್ಯಾಮಿ ಯೇ ತ್ವಯಾ ನಿಹತಾ ರಣೇ||

ಮಾಧವ! ನಿಶಿತ ಸಾಯಕಗಳಿಂದ ಇಂದು ನಿನಗೆ ಪೂಜೆಗೈದು ನಿನ್ನಿಂದ ರಣದಲ್ಲಿ ಹತರಾದವರ ಸ್ತ್ರೀಯರಿಗೆ ಆನಂದವನ್ನುಂಟುಮಾಡುತ್ತೇನೆ.

07117013a ಚಕ್ಷುರ್ವಿಷಯಸಂಪ್ರಾಪ್ತೋ ನ ತ್ವಂ ಮಾಧವ ಮೋಕ್ಷ್ಯಸೇ|

07117013c ಸಿಂಹಸ್ಯ ವಿಷಯಂ ಪ್ರಾಪ್ತೋ ಯಥಾ ಕ್ಷುದ್ರಮೃಗಸ್ತಥಾ||

ಮಾಧವ! ಸಿಂಹದ ಆಹಾರವಾಗಿ ಬಂದ ಕ್ಷುದ್ರಮೃಗವು ಹೇಗೋ ಹಾಗೆ ನನ್ನ ದೃಷ್ಟಿಯ ಪರಿಧಿಯಲ್ಲಿ ಬಂದಿರುವ ನೀನು ಬಿಡುಗಡೆ ಹೊಂದಲಾರೆ.”

07117014a ಯುಯುಧಾನಸ್ತು ತಂ ರಾಜನ್ಪ್ರತ್ಯುವಾಚ ಹಸನ್ನಿವ|

07117014c ಕೌರವೇಯ ನ ಸಂತ್ರಾಸೋ ವಿದ್ಯತೇ ಮಮ ಸಂಯುಗೇ||

ರಾಜನ್! ಯುಯುಧಾನನಾದರೋ ಅವನಿಗೆ ನಗುತ್ತಾ ಉತ್ತರಿಸಿದನು: “ಕೌರವೇಯ! ಯುದ್ಧದಲ್ಲಿ ನನಗೆ ಭಯವೆಂಬುದೇ ಗೊತ್ತಿಲ್ಲ.

07117015a ಸ ಮಾಂ ನಿಹನ್ಯಾತ್ಸಂಗ್ರಾಮೇ ಯೋ ಮಾಂ ಕುರ್ಯಾನ್ನಿರಾಯುಧಂ|

07117015c ಸಮಾಸ್ತು ಶಾಶ್ವತೀರ್ಹನ್ಯಾದ್ಯೋ ಮಾಂ ಹನ್ಯಾದ್ಧಿ ಸಂಯುಗೇ||

ಸಂಗ್ರಾಮದಲ್ಲಿ ಯಾರು ನನ್ನನ್ನು ನಿರಾಯುಧನನ್ನಾಗಿ ಮಾಡುತ್ತಾರೋ ಅವರೇ ನನ್ನನ್ನು ಸಂಹರಿಸಬಲ್ಲರು. ಬಹಳ ವರ್ಷಗಳ ವರೆಗೆ ನನ್ನನ್ನು ಸಂಹರಿಸದಿದ್ದ ನೀನು ಇಂದು ಸಂಯುಗದಲ್ಲಿ ಕೊಲ್ಲಲಾರೆ.

07117016a ಕಿಂ ಮೃಷೋಕ್ತೇನ ಬಹುನಾ ಕರ್ಮಣಾ ತು ಸಮಾಚರ|

07117016c ಶಾರದಸ್ಯೇವ ಮೇಘಸ್ಯ ಗರ್ಜಿತಂ ನಿಷ್ಫಲಂ ಹಿ ತೇ||

ಸೊಕ್ಕಿನಿಂದ ಹೇಳಿದ ಬಹಳ ಮಾತುಗಳನ್ನು ಕರ್ಮದಲ್ಲಿ ಮಾಡಿತೋರಿಸು. ಶರದೃತುವಿನ ಮೋಡದ ಗುಡುಗಿನಂತೆ ನಿನ್ನ ಈ ಕೂಗಾಟವು ನಿಷ್ಫಲವಾದುದು.

07117017a ಶ್ರುತ್ವೈತದ್ಗರ್ಜಿತಂ ವೀರ ಹಾಸ್ಯಂ ಹಿ ಮಮ ಜಾಯತೇ|

07117017c ಚಿರಕಾಲೇಪ್ಸಿತಂ ಲೋಕೇ ಯುದ್ಧಮದ್ಯಾಸ್ತು ಕೌರವ||

ವೀರ! ನಿನ್ನ ಈ ಗರ್ಜನೆಯನ್ನು ಕೇಳಿ ನನಗೆ ನಗು ಬರುತ್ತಿದೆ. ಕೌರವ! ಬಹುಕಾಲದಿಂದ ನೀನು ಬಯಸುತ್ತಿರುವ ಈ ಯುದ್ಧವು ಇಂದು ನಡೆಯಲಿ.

07117018a ತ್ವರತೇ ಮೇ ಮತಿಸ್ತಾತ ತ್ವಯಿ ಯುದ್ಧಾಭಿಕಾಂಕ್ಷಿಣಿ|

07117018c ನಾಹತ್ವಾ ಸನ್ನಿವರ್ತಿಷ್ಯೇ ತ್ವಾಮದ್ಯ ಪುರುಷಾಧಮ||

ಅಯ್ಯಾ ಪುರುಷಾಧಮ! ನಿನ್ನೊಡನೆ ಯುದ್ಧಮಾಡಲು ಬಯಸಿದ ನನ್ನ ಮತಿಯು ತ್ವರೆಮಾಡುತ್ತಿದೆ. ನಿನ್ನನ್ನು ಕೊಲ್ಲದೇ ನಾನಿಂದು ಹಿಂದಿರುಗುವುದಿಲ್ಲ.”

07117019a ಅನ್ಯೋನ್ಯಂ ತೌ ತದಾ ವಾಗ್ಭಿಸ್ತಕ್ಷಂತೌ ನರಪುಂಗವೌ|

07117019c ಜಿಘಾಂಸೂ ಪರಮಕ್ರುದ್ಧಾವಭಿಜಘ್ನತುರಾಹವೇ||

ಹೀಗೆ ಅನ್ಯೋನ್ಯರನ್ನು ವಾಗ್ಬಾಣಗಳಿಂದ ಗಾಯಗೊಳಿಸುತ್ತಾ ಆ ನರಪುಂಗವರು ಪರಮ ಕ್ರುದ್ಧರಾಗಿ ಪರಸ್ಪರರ ಪ್ರಾಣಗಳನ್ನು ತೆಗೆಯಲು ಬಯಸಿ ರಣರಂಗದಲ್ಲಿ ಹೋರಾಡಿದರು.

07117020a ಸಮೇತೌ ತೌ ನರವ್ಯಾಘ್ರೌ ಶುಷ್ಮಿಣೌ ಸ್ಪರ್ಧಿನೌ ರಣೇ|

07117020c ದ್ವಿರದಾವಿವ ಸಂಕ್ರುದ್ಧೌ ವಾಶಿತಾರ್ಥೇ ಮದೋತ್ಕಟೌ||

ಆ ಇಬ್ಬರು ನರವ್ಯಾಘ್ರ ಯೋಧರು ರಣದಲ್ಲಿ ಸ್ಪರ್ಧಿಸುತ್ತಾ ಹೆಣ್ಣಾನೆಗೆ ಮದೋತ್ಕಟ ಸಲಗಗಳೆರಡು ಸಂಕ್ರುದ್ಧರಾಗಿ ಹೋರಾಡುವಂತೆ ಪರಸ್ಪರರ ಮೇಲೆ ಎರಗಿದರು.

07117021a ಭೂರಿಶ್ರವಾಃ ಸಾತ್ಯಕಿಶ್ಚ ವವರ್ಷತುರರಿಂದಮೌ|

07117021c ಶರವರ್ಷಾಣಿ ಭೀಮಾನಿ ಮೇಘಾವಿವ ಪರಸ್ಪರಂ||

ಅರಿಂದಮ ಭೂರಿಶ್ರವ ಮತ್ತು ಸಾತ್ಯಕಿಯರು ಭಯಂಕರ ಮೋಡಗಳಂತೆ ಪರಸ್ಪರರ ಮೇಲೆ ಶರವರ್ಷಗಳನ್ನು ಸುರಿಸಿದರು.

07117022a ಸೌಮದತ್ತಿಸ್ತು ಶೈನೇಯಂ ಪ್ರಚ್ಚಾದ್ಯೇಷುಭಿರಾಶುಗೈಃ|

07117022c ಜಿಘಾಂಸುರ್ಭರತಶ್ರೇಷ್ಠ ವಿವ್ಯಾಧ ನಿಶಿತೈಃ ಶರೈಃ||

ಭರತಶ್ರೇಷ್ಠ! ಸೌಮದತ್ತಿಯಾದರೋ ಶೈನೇಯನನ್ನು ಆಶುಗಗಳಿಂದ ಮುಚ್ಚಿ ಸಂಹರಿಸಲು ಬಯಸಿ ನಿಶಿತ ಶರಗಳಿಂದ ಹೊಡೆದನು.

07117023a ದಶಭಿಃ ಸಾತ್ಯಕಿಂ ವಿದ್ಧ್ವಾ ಸೌಮದತ್ತಿರಥಾಪರಾನ್|

07117023c ಮುಮೋಚ ನಿಶಿತಾನ್ಬಾಣಾನ್ಜಿಘಾಂಸುಃ ಶಿನಿಪುಂಗವಂ||

ಇನ್ನೂ ಬೇರೆ ಹತ್ತರಿಂದ ಸಾತ್ಯಕಿಯನ್ನು ಹೊಡೆದು, ಆ ಶಿನಿಪುಂಗವನನ್ನು ಕೊಲ್ಲಲು ನಿಶಿತ ಬಾಣಗಳನ್ನು ಬಿಟ್ಟನು.

07117024a ತಾನಸ್ಯ ವಿಶಿಖಾಂಸ್ತೀಕ್ಷ್ಣಾನಂತರಿಕ್ಷೇ ವಿಶಾಂ ಪತೇ|

07117024c ಅಪ್ರಾಪ್ತಾನಸ್ತ್ರಮಾಯಾಭಿರಗ್ರಸತ್ಸಾತ್ಯಕಿಃ ಪ್ರಭೋ||

ವಿಶಾಂಪತೇ! ಪ್ರಭೋ! ಆ ತೀಕ್ಷ್ಣ ವಿಶಾಖಗಳು ಬರುವುದರೊಳಗೆ ಅಂತರಿಕ್ಷದಲ್ಲಿಯೇ ಸಾತ್ಯಕಿಯು ಅಸ್ತ್ರಗಳಿಂದ ತುಂಡರಿಸಿದನು.

07117025a ತೌ ಪೃಥಕ್ ಶರವರ್ಷಾಭ್ಯಾಮವರ್ಷೇತಾಂ ಪರಸ್ಪರಂ|

07117025c ಉತ್ತಮಾಭಿಜನೌ ವೀರೌ ಕುರುವೃಷ್ಣಿಯಶಸ್ಕರೌ||

ಕುರು-ವೃಷ್ಣಿಯರ ಯಶಸ್ಕರರಾದ, ಉತ್ತಮ ಕುಲದಲ್ಲಿ ಜನಿಸಿದವರೂ ಆದ ಆ ವೀರರಿಬ್ಬರೂ ಮತ್ತೆ ಪರಸ್ಪರರ ಮೇಲೆ ಶರವರ್ಷಗಳನ್ನು ಸುರಿಸಿದರು.

07117026a ತೌ ನಖೈರಿವ ಶಾರ್ದೂಲೌ ದಂತೈರಿವ ಮಹಾದ್ವಿಪೌ|

07117026c ರಥಶಕ್ತಿಭಿರನ್ಯೋನ್ಯಂ ವಿಶಿಖೈಶ್ಚಾಪ್ಯಕೃಂತತಾಂ||

ಎರಡು ಹುಲಿಗಳು ತಮ್ಮ ಉಗುರುಗಳಿಂದ ಮತ್ತು ಮಹಾಗಜಗಳು ತಮ್ಮ ದಂತಗಳಿಂದ ಹೇಗೋ ಹಾಗೆ ಅವರಿಬ್ಬರೂ ರಥಶಕ್ತಿಗಳಿಂದ ಮತ್ತು ವಿಶಿಖಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

07117027a ನಿರ್ಭಿದಂತೌ ಹಿ ಗಾತ್ರಾಣಿ ವಿಕ್ಷರಂತೌ ಚ ಶೋಣಿತಂ|

07117027c ವ್ಯಷ್ಟಂಭಯೇತಾಮನ್ಯೋನ್ಯಂ ಪ್ರಾಣದ್ಯೂತಾಭಿದೇವಿನೌ||

ದೇಹಗಳನ್ನು ಜರ್ಝರಿಸುತ್ತಾ, ಗಾಯಗಳಿಂದ ರಕ್ತವನ್ನು ಸುರಿಸುತ್ತಾ ಅವರಿಬ್ಬರೂ ಅನ್ಯೋನ್ಯರ ಪ್ರಾಣಗಳನ್ನು ಪಣವಾಗಿಟ್ಟು ಜೂಜಾಡುತ್ತಿದ್ದರು.

07117028a ಏವಮುತ್ತಮಕರ್ಮಾಣೌ ಕುರುವೃಷ್ಣಿಯಶಸ್ಕರೌ|

07117028c ಪರಸ್ಪರಮಯುಧ್ಯೇತಾಂ ವಾರಣಾವಿವ ಯೂಥಪೌ||

ಹೀಗೆ ಆ ಇಬ್ಬರು ಉತ್ತಮಕರ್ಮಿಗಳು ಕುರು-ವೃಷ್ಣಿ ಯಶಸ್ಕರರು ಪರಸ್ಪರರೊಂದಿಗೆ ಆನೆಗಳ ಹಿಂಡಿನ ಸಲಗಗಳಂತೆ ಹೋರಾಡಿದರು.

07117029a ತಾವದೀರ್ಘೇಣ ಕಾಲೇನ ಬ್ರಹ್ಮಲೋಕಪುರಸ್ಕೃತೌ|

07117029c ಜಿಗೀಷಂತೌ ಪರಂ ಸ್ಥಾನಮನ್ಯೋನ್ಯಮಭಿಜಘ್ನತುಃ||

ಪರಮ ಸ್ಥಾನ ಬ್ರಹ್ಮಲೋಕವನ್ನೇ ಬಯಸಿದ್ದ ಅವರು ಅನ್ಯೋನ್ಯರನ್ನು ಕೊಲ್ಲಲು ಬಯಸಿ ಬಹಳ ಕಾಲ ಯುದ್ಧಮಾಡುತ್ತಿದ್ದರು.

07117030a ಸಾತ್ಯಕಿಃ ಸೌಮದತ್ತಿಶ್ಚ ಶರವೃಷ್ಟ್ಯಾ ಪರಸ್ಪರಂ|

07117030c ಹೃಷ್ಟವದ್ಧಾರ್ತರಾಷ್ಟ್ರಾಣಾಂ ಪಶ್ಯತಾಮಭ್ಯವರ್ಷತಾಂ||

ಸಾತ್ಯಕಿ-ಸೌಮದತ್ತಿಯರು ಪರಸ್ಪರರನ್ನು ಶರವೃಷ್ಟಿಗಳಿಂದ ಸುರಿಸಿ ಮುಚ್ಚಿಸಿ ನೋಡುತ್ತಿರುವ ಧಾರ್ತರಾಷ್ಟ್ರರ ಸಂತೋಷವನ್ನು ಹೆಚ್ಚಿಸಿದರು.

07117031a ಸಂಪ್ರೈಕ್ಷಂತ ಜನಾಸ್ತತ್ರ ಯುಧ್ಯಮಾನೌ ಯುಧಾಂ ಪತೀ|

07117031c ಯೂಥಪೌ ವಾಶಿತಾಹೇತೋಃ ಪ್ರಯುದ್ಧಾವಿವ ಕುಂಜರೌ||

ಹೆಣ್ಣಾನೆಯ ಸಲುವಾಗಿ ಗುಂಪುಗಳ ಒಡೆತನವನ್ನು ಹೊಂದಿರುವ ಎರಡು ಸಲಗಗಳು ಸೆಣೆಸಾಡುವಂತೆ ಪರಸ್ಪರರೊಡನೆ ಸೆಣಸಾಡುತ್ತಿದ್ದ ಆ ಸೇನಾಪತಿಗಳನ್ನು ನೋಡುತ್ತಾ ನಿಂತುಬಿಟ್ಟರು.

07117032a ಅನ್ಯೋನ್ಯಸ್ಯ ಹಯಾನ್ ಹತ್ವಾ ಧನುಷೀ ವಿನಿಕೃತ್ಯ ಚ|

07117032c ವಿರಥಾವಸಿಯುದ್ಧಾಯ ಸಮೇಯಾತಾಂ ಮಹಾರಣೇ||

ಪರಸ್ಪರರ ಕುದುರೆಗಳನ್ನು ಸಂಹರಿಸಿ ಧನುಸ್ಸನ್ನು ಕತ್ತರಿಸಿ ಅವರು ವಿರಥರನ್ನಾಗಿಸಿ ಮಹಾರಣದಲ್ಲಿ ಒಟ್ಟಿಗೆ ಹೋರಾಡಿದನು.

07117033a ಆರ್ಷಭೇ ಚರ್ಮಣೀ ಚಿತ್ರೇ ಪ್ರಗೃಹ್ಯ ವಿಪುಲೇ ಶುಭೇ|

07117033c ವಿಕೋಶೌ ಚಾಪ್ಯಸೀ ಕೃತ್ವಾ ಸಮರೇ ತೌ ವಿಚೇರತುಃ||

ಎತ್ತಿನ ಚರ್ಮದಿಂದ ಮಾಡಿದ ಚಿತ್ರಿತ ವಿಶಾಲ ಶುಭ ಗುರಾಣಿಯನ್ನು ಇಬ್ಬರೂ ಹಿಡಿದು ಕತ್ತಿಯನ್ನು ಒರೆಯಿಂದ ತೆಗೆದು ಸಮರದಲ್ಲಿ ಸಂಚರಿಸತೊಡಗಿದರು.

07117034a ಚರಂತೌ ವಿವಿಧಾನ್ಮಾರ್ಗಾನ್ಮಂಡಲಾನಿ ಚ ಭಾಗಶಃ|

07117034c ಮುಹುರಾಜಘ್ನತುಃ ಕ್ರುದ್ಧಾವನ್ಯೋನ್ಯಮರಿಮರ್ದನೌ||

07117035a ಸಖಡ್ಗೌ ಚಿತ್ರವರ್ಮಾಣೌ ಸನಿಷ್ಕಾಂಗದಭೂಷಣೌ|

07117035c ರಣೇ ರಣೋತ್ಕಟೌ ರಾಜನ್ನನ್ಯೋನ್ಯಂ ಪರ್ಯಕರ್ಷತಾಂ||

ರಾಜನ್! ಖಡ್ಗಗಳನ್ನೂ, ಬಣ್ಣದ ಗುರಾಣಿಗಳನ್ನು ಹಿಡಿದು ಬಂಗಾರದ ಅಂಗದ ಭೂಷಿತ ಆ ರಣೋತ್ಕಟ ಅರಿಮರ್ದನರಿಬ್ಬರೂ ವಿವಿಧ ಮಾರ್ಗ-ಮಂಡಲಗಳಲ್ಲಿ ಸಂಚರಿಸುತ್ತಾ ಅನ್ಯೋನ್ಯರನ್ನು ಪ್ರಹರಿಸಿದರು.

07117036a ಮುಹೂರ್ತಮಿವ ರಾಜೇಂದ್ರ ಪರಿಕೃಷ್ಯ ಪರಸ್ಪರಂ|

07117036c ಪಶ್ಯತಾಂ ಸರ್ವಸೈನ್ಯಾನಾಂ ವೀರಾವಾಶ್ವಸತಾಂ ಪುನಃ||

ರಾಜೇಂದ್ರ! ಪರಸ್ಪರರೊಡನೆ ಸೆಣೆಸಾಡಿ, ಒಂದು ಕ್ಷಣ ವಿಶ್ರಾಂತಿ ಪಡೆದು ಸರ್ವ ಸೇನೆಗಳು ನೋಡುತ್ತಿದ್ದಂತೆ ಆ ವೀರರು ಪುನಃ ಹೋರಾಡ ತೊಡಗಿದರು.

07117037a ಅಸಿಭ್ಯಾಂ ಚರ್ಮಣೀ ಶುಭ್ರೇ ವಿಪುಲೇ ಚ ಶರಾವರೇ|

07117037c ನಿಕೃತ್ಯ ಪುರುಷವ್ಯಾಘ್ರೌ ಬಾಹುಯುದ್ಧಂ ಪ್ರಚಕ್ರತುಃ||

ಖಡ್ಗಗಳಿಂದ ಗುರಾಣಿಗಳನ್ನು ಕತ್ತರಿಸಿ ವಿಶಾಲ ಖಡ್ಗಗಳನ್ನು ಎಸೆದು ಆ ಪುರುಷವ್ಯಾಘ್ರರು ಬಾಹು ಯುದ್ಧದಲ್ಲಿ ತೊಡಗಿದರು.

07117038a ವ್ಯೂಢೋರಸ್ಕೌ ದೀರ್ಘಭುಜೌ ನಿಯುದ್ಧಕುಶಲಾವುಭೌ|

07117038c ಬಾಹುಭಿಃ ಸಮಸಜ್ಜೇತಾಮಾಯಸೈಃ ಪರಿಘೈರಿವ||

ವಿಶಾಲ ಎದೆಯ, ನೀಳ ಭುಜಗಳ, ಬಾಹುಯುದ್ಧಕುಶಲರಾದ ಅವರಿಬ್ಬರೂ ಕಬ್ಬಿಣದ ಪರಿಘಗಳಂತಿದ್ದ ಬಾಹುಗಳಿಂದ ಪರಸ್ಪರರನ್ನು ಪ್ರಹರಿಸಿದರು.

07117039a ತಯೋರಾಸನ್ಭುಜಾಘಾತಾ ನಿಗ್ರಹಪ್ರಗ್ರಹೌ ತಥಾ|

07117039c ಶಿಕ್ಷಾಬಲಸಮುದ್ಭೂತಾಃ ಸರ್ವಯೋಧಪ್ರಹರ್ಷಣಾಃ||

ಶಿಕ್ಷಾಬಲದಿಂದ ಕೂಡಿದ ಅವರ ಭುಜಾಘಾತ[1], ನಿಗ್ರಹ[2]-ಪ್ರಗ್ರಹ[3]ಗಳು ಸರ್ವಯೋಧರಿಗೂ ಹರ್ಷವನ್ನುಂಟುಮಾಡುತ್ತಿದ್ದವು.

07117040a ತಯೋರ್ನೃವರಯೋ ರಾಜನ್ಸಮರೇ ಯುಧ್ಯಮಾನಯೋಃ|

07117040c ಭೀಮೋಽಭವನ್ಮಹಾಶಬ್ದೋ ವಜ್ರಪರ್ವತಯೋರಿವ||

ರಾಜನ್! ಆ ನರಶ್ರೇಷ್ಠರು ಸಮರದಲ್ಲಿ ಯುದ್ಧಮಾಡುತ್ತಿರುವಾಗ ವರ್ಜಾಯುಧಕ್ಕೂ ಪರ್ವತಕ್ಕೂ ತಾಗುವ ಹಾಗೆ ಮಹಾ ಭಯಂಕರ ಶಬ್ಧವುಂಟಾಯಿತು.

07117041a ದ್ವಿಪಾವಿವ ವಿಷಾಣಾಗ್ರೈಃ ಶೃಂಗೈರಿವ ಮಹರ್ಷಭೌ|

07117041c ಯುಯುಧಾತೇ ಮಹಾತ್ಮಾನೌ ಕುರುಸಾತ್ವತಪುಂಗವೌ||

ಆನೆಗಳು ದಂತಗಳ ತುದಿಯಿಂದ, ಮಹಾ ಹೋರಿಗಳು ಕೋಡಿನ ತುದಿಯಿಂದ ಹೇಗೋ ಹಾಗೆ ಆ ಕುರು-ಸಾತ್ವತ ಪುಂಗವ ಮಹಾತ್ಮರು ಸೆಣಸಾಡಿದರು.

07117042a ಕ್ಷೀಣಾಯುಧೇ ಸಾತ್ವತೇ ಯುಧ್ಯಮಾನೇ

         ತತೋಽಬ್ರವೀದರ್ಜುನಂ ವಾಸುದೇವಃ|

07117042c ಪಶ್ಯಸ್ವೈನಂ ವಿರಥಂ ಯುಧ್ಯಮಾನಂ

         ರಣೇ ಕೇತುಂ ಸರ್ವಧನುರ್ಧರಾಣಾಂ||

ಸಾತ್ವತನು ಆಯುಧಗಳನ್ನು ಕಳೆದುಕೊಂಡು ಯುದ್ಧಮಾಡುತ್ತಿರಲು ವಾಸುದೇವನು ಅರ್ಜುನನಿಗೆ ಹೇಳಿದನು: “ಸರ್ವಧನುರ್ಧರರಲ್ಲಿ ಶ್ರೇಷ್ಠನಾದವನು ರಣದಲ್ಲಿ ವಿರಥನಾಗಿ ಯುದ್ಧಮಾಡುತ್ತಿರುವುದನ್ನು ನೋಡು!

07117043a ಪ್ರವಿಷ್ಟೋ ಭಾರತೀಂ ಸೇನಾಂ ತವ ಪಾಂಡವ ಪೃಷ್ಠತಃ|

07117043c ಯೋಧಿತಶ್ಚ ಮಹಾವೀರ್ಯೈಃ ಸರ್ವೈರ್ಭಾರತ ಭಾರತೈಃ||

ಪಾಂಡವ! ಭಾರತ! ನಿನ್ನ ಹಿಂದೆಯೇ ಭಾರತೀ ಸೇನೆಯನ್ನು ಪ್ರವೇಶಿಸಿ ಇವನು ಮಹಾವೀರ್ಯದಿಂದ ಎಲ್ಲ ಭಾರತರೊಂದಿಗೆ ಯುದ್ಧಮಾಡುತ್ತಿದ್ದಾನೆ.

07117044a ಪರಿಶ್ರಾಂತೋ ಯುಧಾಂ ಶ್ರೇಷ್ಠಃ ಸಂಪ್ರಾಪ್ತೋ ಭೂರಿದಕ್ಷಿಣಂ|

07117044c ಯುದ್ಧಕಾಂಕ್ಷಿಣಮಾಯಾಂತಂ ನೈತತ್ಸಮಮಿವಾರ್ಜುನ||

ಆಯಾಸಗೊಂಡಿರುವ ಯೋಧಶ್ರೇಷ್ಠನನ್ನು ಯುದ್ಧಾಕಾಂಕ್ಷಿ ಭೂರಿದಕ್ಷಿಣನು ತಡೆದಿರುವನು. ಅರ್ಜುನ! ಇದು ಸಮಾನರ ಯುದ್ಧವಲ್ಲ!”

07117045a ತತೋ ಭೂರಿಶ್ರವಾಃ ಕ್ರುದ್ಧಃ ಸಾತ್ಯಕಿಂ ಯುದ್ಧದುರ್ಮದಂ|

07117045c ಉದ್ಯಮ್ಯ ನ್ಯಹನದ್ರಾಜನ್ಮತ್ತೋ ಮತ್ತಮಿವ ದ್ವಿಪಂ||

ರಾಜನ್! ಆಗ ಭೂರಿಶ್ರವನು ಕ್ರುದ್ಧನಾಗಿ ಯುದದುರ್ಮದ ಸಾತ್ಯಕಿಯನ್ನು ಮದಿಸಿದ ಆನೆಯು ಇನ್ನೊಂದು ಮದಿಸಿದ ಆನೆಯನ್ನು ಹೇಗೋ ಹಾಗೆ ಪ್ರಯತ್ನಪೂರ್ವಕವಾಗಿ ಪ್ರಹರಿಸಿದನು.

07117046a ರಥಸ್ಥಯೋರ್ದ್ವಯೋರ್ಯುದ್ಧೇ ಕ್ರುದ್ಧಯೋರ್ಯೋಧಮುಖ್ಯಯೋಃ|

07117046c ಕೇಶವಾರ್ಜುನಯೋ ರಾಜನ್ಸಮರೇ ಪ್ರೇಕ್ಷಮಾಣಯೋಃ||

ರಾಜನ್! ಕ್ರುದ್ಧರಾದ ಆ ಯೋಧಮುಖ್ಯರ ಯುದ್ಧವನ್ನು ಸಮರದಲ್ಲಿ ರಥಸ್ಥರಾಗಿ ಕೇಶವಾರ್ಜುನರು ನೋಡುತ್ತಿದ್ದರು.

07117047a ಅಥ ಕೃಷ್ಣೋ ಮಹಾಬಾಹುರರ್ಜುನಂ ಪ್ರತ್ಯಭಾಷತ|

07117047c ಪಶ್ಯ ವೃಷ್ಣ್ಯಂಧಕವ್ಯಾಘ್ರಂ ಸೌಮದತ್ತಿವಶಂ ಗತಂ||

ಆಗ ಮಹಾಬಾಹು ಕೃಷ್ಣನು ಅರ್ಜುನನಿಗೆ ಪುನಃ ಹೇಳಿದನು: “ವೃಷ್ಣಿ-ಅಂಧಕರ ವ್ಯಾಘ್ರನು ಸೌಮದತ್ತಿಯ ವಶನಾಗಿರುವುದನ್ನು ನೋಡು!

07117048a ಪರಿಶ್ರಾಂತಂ ಗತಂ ಭೂಮೌ ಕೃತ್ವಾ ಕರ್ಮ ಸುದುಷ್ಕರಂ|

07117048c ತವಾಂತೇವಾಸಿನಂ ಶೂರಂ ಪಾಲಯಾರ್ಜುನ ಸಾತ್ಯಕಿಂ||

ದುಷ್ಕರ ಕರ್ಮಗಳನ್ನು ಮಾಡಿ ಬಳಲಿ ಭೂಮಿಗೆ ಕುಸಿದಿರುವ ನಿನ್ನ ಶೂರ ಶಿಷ್ಯ ಸಾತ್ಯಕಿಯನ್ನು ಪಾಲಿಸು ಅರ್ಜುನ!

07117049a ನ ವಶಂ ಯಜ್ಞಶೀಲಸ್ಯ ಗಚ್ಚೇದೇಷ ವರಾರಿಹನ್|

07117049c ತ್ವತ್ಕೃತೇ ಪುರುಷವ್ಯಾಘ್ರ ತದಾಶು ಕ್ರಿಯತಾಂ ವಿಭೋ||

ಪುರುಷವ್ಯಾಘ್ರ! ವಿಭೋ! ನಿನಗಾಗಿ ಹೋರಾಡುತ್ತಿರುವ ಇವನು ಯಜ್ಞಶೀಲ[4]ನ ವಶನಾಗದಂತೆ ಪ್ರಯತ್ನಿಸು!”

07117050a ಅಥಾಬ್ರವೀದ್ಧೃಷ್ಟಮನಾ ವಾಸುದೇವಂ ಧನಂಜಯಃ|

07117050c ಪಶ್ಯ ವೃಷ್ಣಿಪ್ರವೀರೇಣ ಕ್ರೀಡಂತಂ ಕುರುಪುಂಗವಂ|

07117050e ಮಹಾದ್ವಿಪೇನೇವ ವನೇ ಮತ್ತೇನ ಹರಿಯೂಥಪಂ||

ಆಗ ಸಂತೋಷದಿಂದ ಧನಂಜಯನು ವಾಸುದೇವನಿಗೆ ಹೇಳಿದನು: “ಸಿಂಹರಾಜನು ವನದಲ್ಲಿ ಗಜರಾಜನೊಂದಿಗೆ ಸೆಣಸಾಡುವಂತೆ ವೃಷ್ಣಿಪ್ರವೀರನೊಡನೆ ಆಟವಾಡುತ್ತಿರುವ ಕುರುಪುಂಗವನನ್ನು ನೋಡು!”

07117051a ಹಾಹಾಕಾರೋ ಮಹಾನಾಸೀತ್ಸೈನ್ಯಾನಾಂ ಭರತರ್ಷಭ|

07117051c ಯದುದ್ಯಮ್ಯ ಮಹಾಬಾಹುಃ ಸಾತ್ಯಕಿಂ ನ್ಯಹನದ್ಭುವಿ||

ಭರತರ್ಷಭ! ಆ ಮಹಾಬಾಹು ಭೂರಿಶ್ರವನು ಸಾತ್ಯಕಿಯನ್ನು ಕುಕ್ಕಿ ನೆಲಕ್ಕೆ ಕೆಡವಲು ಸೇನೆಗಳಲ್ಲಿ ಮಹಾ ಹಾಹಾಕಾರವುಂಟಾಯಿತು.

07117052a ಸ ಸಿಂಹ ಇವ ಮಾತಂಗಂ ವಿಕರ್ಷನ್ಭೂರಿದಕ್ಷಿಣಃ|

07117052c ವ್ಯರೋಚತ ಕುರುಶ್ರೇಷ್ಠಃ ಸಾತ್ವತಪ್ರವರಂ ಯುಧಿ||

ಕುರುಶ್ರೇಷ್ಠ ಭೂರಿದಕ್ಷಿಣ[5]ನು ಸಿಂಹವೊಂದು ಆನೆಯನ್ನು ಹೇಗೋ ಹಾಗೆ ಯುದ್ಧದಲ್ಲಿ ಸಾತ್ವತಪ್ರವರನನ್ನು ಗಿರಗಿರನೆ ತಿರುಗಿಸಿದನು.

07117053a ಅಥ ಕೋಶಾದ್ವಿನಿಷ್ಕೃಷ್ಯ ಖಡ್ಗಂ ಭೂರಿಶ್ರವಾ ರಣೇ|

07117053c ಮೂರ್ಧಜೇಷು ನಿಜಗ್ರಾಹ ಪದಾ ಚೋರಸ್ಯತಾಡಯತ್||

ಆಗ ರಣದಲ್ಲಿ ಭೂರಿಶ್ರವನು ಒರೆಯಿಂದ ಖಡ್ಗವನ್ನು ಎಳೆದು ತೆಗೆದು, ಅವನ ಮುಡಿಯನ್ನು ಹಿಡಿದು ಕಾಲಿನಿಂದ ಎದೆಗೆ ಒದೆದನು.

07117054a ತಥಾ ತು ಪರಿಕೃಷ್ಯಂತಂ ದೃಷ್ಟ್ವಾ ಸಾತ್ವತಮಾಹವೇ|

07117054c ವಾಸುದೇವಸ್ತತೋ ರಾಜನ್ಭೂಯೋಽರ್ಜುನಮಭಾಷತ||

ರಾಜನ್! ಹಾಗೆ ಆಹವದಲ್ಲಿ ಎಳೆದಾಡಲ್ಪಡುತ್ತಿದ್ದ ಸಾತ್ವತನನ್ನು ನೋಡಿ ವಾಸುದೇವನು ಇನ್ನೊಮ್ಮೆ ಅರ್ಜುನನಿಗೆ ಹೇಳಿದನು:

07117055a ಪಶ್ಯ ವೃಷ್ಣ್ಯಂಧಕವ್ಯಾಘ್ರಂ ಸೌಮದತ್ತಿವಶಂ ಗತಂ|

07117055c ತವ ಶಿಷ್ಯಂ ಮಹಾಬಾಹೋ ಧನುಷ್ಯನವರಂ ತ್ವಯಾ||

“ಮಹಾಬಾಹೋ! ವೃಷ್ಣಿ-ಅಂಧಕರ ವ್ಯಾಘ್ರ, ಧನುರ್ವಿದ್ಯೆಯಲ್ಲಿ ನಿನಗಿಂಥ ಕಡಿಮೆಯಿಲ್ಲದ ನಿನ್ನ ಶಿಷ್ಯನು ಸೌಮದತ್ತಿಯ ವಶನಾಗಿರುವುದನ್ನು ನೋಡು!

07117056a ಅಸತ್ಯೋ ವಿಕ್ರಮಃ ಪಾರ್ಥ ಯತ್ರ ಭೂರಿಶ್ರವಾ ರಣೇ|

07117056c ವಿಶೇಷಯತಿ ವಾರ್ಷ್ಣೇಯಂ ಸಾತ್ಯಕಿಂ ಸತ್ಯವಿಕ್ರಮಂ||

ಪಾರ್ಥ! ರಣದಲ್ಲಿ ಭೂರಿಶ್ರವನು ವಾರ್ಷ್ಣೇಯ ಸತ್ಯವಿಕ್ರಮ ಸಾತ್ಯಕಿಯನ್ನು ಮೀರಿಸಿದನೆಂದರೆ ವಿಕ್ರಮವೆಂಬುದೇ ಅಸತ್ಯವಾಗಿಬಿಡುತ್ತದೆ[6].”

07117057a ಏವಮುಕ್ತೋ ಮಹಾಬಾಹುರ್ವಾಸುದೇವೇನ ಪಾಂಡವಃ|

07117057c ಮನಸಾ ಪೂಜಯಾಮಾಸ ಭೂರಿಶ್ರವಸಮಾಹವೇ||

ರಣದಲ್ಲಿ ಮಹಾಬಾಹು ವಾಸುದೇವನು ಹೀಗೆ ಹೇಳಲು ಪಾಂಡವನು ಮನಸ್ಸಿನಲ್ಲಿಯೇ ಭೂರಿಶ್ರವನನ್ನು ಪ್ರಶಂಸಿಸಿದನು.

07117058a ವಿಕರ್ಷನ್ಸಾತ್ವತಶ್ರೇಷ್ಠಂ ಕ್ರೀಡಮಾನ ಇವಾಹವೇ|

07117058c ಸಂಹರ್ಷಯತಿ ಮಾಂ ಭೂಯಃ ಕುರೂಣಾಂ ಕೀರ್ತಿವರ್ಧನಃ||

07117059a ಪ್ರವರಂ ವೃಷ್ಣಿವೀರಾಣಾಂ ಯನ್ನ ಹನ್ಯಾದ್ಧಿ ಸಾತ್ಯಕಿಂ|

07117059c ಮಹಾದ್ವಿಪಮಿವಾರಣ್ಯೇ ಮೃಗೇಂದ್ರ ಇವ ಕರ್ಷತಿ||

“ಕುರುಗಳ ಕೀರ್ತಿವರ್ಧನನು ಸಾತ್ವತಶ್ರೇಷ್ಠನನ್ನು ಎಳೆದಾಡಿ ರಣಕ್ರೀಡೆಯಾಡುವಂತಿದ್ದಾನೆ. ಅರಣ್ಯದಲ್ಲಿ ಸಿಂಹವು ಮಹಾ ಆನೆಯೊಂದನ್ನು ಹೇಗೋ ಹಾಗೆ ಅವನು ವೃಷ್ಣಿವೀರರಲ್ಲಿ ಶ್ರೇಷ್ಠ ಸಾತ್ಯಕಿಯನ್ನು ಎಳೆದಾಡುತ್ತಿದ್ದಾನೆ. ಅವನನ್ನು ಇನ್ನೂ ಕೊಲ್ಲದೇ ನನ್ನ ಸಂತೋಷವನ್ನು ಹೆಚ್ಚಿಸುತ್ತಿದ್ದಾನೆ!”

07117060a ಏವಂ ತು ಮನಸಾ ರಾಜನ್ಪಾರ್ಥಃ ಸಂಪೂಜ್ಯ ಕೌರವಂ|

07117060c ವಾಸುದೇವಂ ಮಹಾಬಾಹುರರ್ಜುನಃ ಪ್ರತ್ಯಭಾಷತ||

ರಾಜನ್! ಹೀಗೆ ಮನಸ್ಸಿನಲ್ಲಿಯೇ ಕೌರವನನ್ನು ಗೌರವಿಸಿ ಪಾರ್ಥ ಮಹಾಬಾಹು ಅರ್ಜುನನು ವಾಸುದೇವನಿಗೆ ಉತ್ತರಿಸಿದನು:

07117061a ಸೈಂಧವಾಸಕ್ತದೃಷ್ಟಿತ್ವಾನ್ನೈನಂ ಪಶ್ಯಾಮಿ ಮಾಧವ|

07117061c ಏಷ ತ್ವಸುಕರಂ ಕರ್ಮ ಯಾದವಾರ್ಥೇ ಕರೋಮ್ಯಹಂ||

“ಸೈಂಧವನಲ್ಲಿಯೇ ಆಸಕ್ತನಾಗಿ ಗುರಿಯಿಟ್ಟಿರುವ ನಾನು ಇವನನ್ನು ನೋಡಲಿಲ್ಲ ಮಾಧವ! ಇದು ಒಳ್ಳೆಯ ಕೆಲಸವಲ್ಲದಿದ್ದರೂ[7] ನಾನು ಇದನ್ನು ಯಾದವನಿಗಾಗಿ ಮಾಡುತ್ತೇನೆ!”

07117062a ಇತ್ಯುಕ್ತ್ವಾ ವಚನಂ ಕುರ್ವನ್ವಾಸುದೇವಸ್ಯ ಪಾಂಡವಃ|

07117062c ಸಖಡ್ಗಂ ಯಜ್ಞಶೀಲಸ್ಯ ಪತ್ರಿಣಾ ಬಾಹುಮಚ್ಚಿನತ್||

ಹೀಗೆ ಹೇಳಿ ವಾಸುದೇವನ ಮಾತಿನಂತೆ ಮಾಡುತ್ತಾ ಪಾಂಡವನು ಪತ್ರಿಯಿಂದ ಖಡ್ಗವನ್ನು ಹಿಡಿದಿದ್ದ ಯಜ್ಞಶೀಲನ ಬಾಹುವನ್ನು ಕತ್ತರಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಭೂರಿಶ್ರವೋಬಾಹುಚ್ಛೇದೇ ಸಪ್ತದಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಭೂರಿಶ್ರವಬಾಹುಚ್ಛೇದ ಎನ್ನುವ ನೂರಾಹದಿನೇಳನೇ ಅಧ್ಯಾಯವು.

Image result for lotus against white background

[1] ಬಲಗೈಯಿಂದ ಎಡಭುಜವನ್ನೂ ಎಡಗೈಯಿಂದ ಬಲಭುಜವನ್ನೂ ತಟ್ಟಿಕೊಳ್ಳುವುದು

[2] ಎರಡು ಕೈಗಳಿಂದ ಎದುರಾಳಿಯ ಎರಡು ಕೈಗಳನ್ನು ಹಿಡಿದುಕೊಳ್ಳುವುದು

[3] ಕುತ್ತಿಗೆಗೆ ಕೈ ಹಾಕಿ ಬಗ್ಗಿಸುವುದು

[4] ಭೂರಿಶ್ರವ

[5] ಭೂರಿಶ್ರವ

[6] ಇಲ್ಲವಾಗಿಬಿಡುತ್ತದೆ

[7] ಯುದ್ಧದಲ್ಲಿ ಇಬ್ಬರು ಪರಸ್ಪರರೊಂದಿಗೆ ಯುದ್ಧಮಾಡುತ್ತಿರುವಾಗ ಮಧ್ಯದಲ್ಲಿ ಮೂರನೆಯವನು ಯಾವುದೇ ಸೂಚನೆಯನ್ನು ಕೊಡದೇ ಹೊಡೆಯುವುದು ಯುದ್ಧದಲ್ಲಿ ಮಾಡುವಂಥಹುದಲ್ಲ.

Comments are closed.