Aranyaka Parva: Chapter 163

ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ

೧೬೩

ಅರ್ಜುನನು ತಾನು ಪಾಶುಪತಾಸ್ತ್ರವನ್ನು ಪಡೆದುದನ್ನು ವರದಿಮಾಡಿದುದು

ಅರ್ಜುನನನ್ನು ಯುಧಿಷ್ಠಿರನು ಪ್ರಶ್ನಿಸುವುದು (೧-೮). ಅರ್ಜುನನು ತನಗಾದ ಅನುಭವಗಳ ಕುರಿತು ಹೇಳುವುದನ್ನು ಪ್ರಾರಂಭಿಸುವುದು; ತಾನು ಕಿರಾತರೂಪದಲ್ಲಿ ಬಂದಿದ್ದ ಹರನೊಂದಿಗೆ ಹೋರಾಡಿ ಪಾಶುಪತವನ್ನು ಪಡೆದುದರ ಕುರಿತು ಹೇಳಿದುದು (೯-೫೩).

03163001 ವೈಶಂಪಾಯನ ಉವಾಚ|

03163001a ಯಥಾಗತಂ ಗತೇ ಶಕ್ರೇ ಭ್ರಾತೃಭಿಃ ಸಹ ಸಂಗತಃ|

03163001c ಕೃಷ್ಣಯಾ ಚೈವ ಬೀಭತ್ಸುರ್ಧರ್ಮಪುತ್ರಮಪೂಜಯತ್||

ವೈಶಂಪಾಯನನು ಹೇಳಿದನು: “ಬಂದದಾರಿಯಲ್ಲಿ ಶಕ್ರನು ಹೊರಟುಹೋದನಂತರ ಕೃಷ್ಣೆ ಮತ್ತು ಭ್ರಾತೃಗಳನ್ನು ಕೂಡಿಕೊಂಡು ಬೀಭತ್ಸುವು ಧರ್ಮಪುತ್ರನನ್ನು ಪೂಜಿಸಿದನು.

03163002a ಅಭಿವಾದಯಮಾನಂ ತು ಮೂರ್ಧ್ನ್ಯುಪಾಘ್ರಾಯ ಪಾಂಡವಂ|

03163002c ಹರ್ಷಗದ್ಗದಯಾ ವಾಚಾ ಪ್ರಹೃಷ್ಟೋಽರ್ಜುನಮಬ್ರವೀತ್||

ಅಭಿನಂದಿಸುತ್ತಿರುವ ಪಾಂಡವನ ಮೂರ್ದ್ನಿಯನ್ನು ಚುಂಬಿಸಿ ಸಂತೋಷದಿಂದ ಹರ್ಷಗದ್ಗದ ಮಾತುಗಳಿಂದ ಅರ್ಜುನನಿಗೆ ಹೀಗೆ ಹೇಳಿದನು:

03163003a ಕಥಮರ್ಜುನ ಕಾಲೋಽಯಂ ಸ್ವರ್ಗೇ ವ್ಯತಿಗತಸ್ತವ|

03163003c ಕಥಂ ಚಾಸ್ತ್ರಾಣ್ಯವಾಪ್ತಾನಿ ದೇವರಾಜಶ್ಚ ತೋಷಿತಃ||

“ಅರ್ಜುನ! ಸ್ವರ್ಗದಲ್ಲಿ ನೀನು ಕಾಲವನ್ನು ಹೇಗೆ ಕಳೆದೆ? ನೀನು ಹೇಗೆ ದೇವರಾಜನನ್ನು ತೃಪ್ತಿಗೊಳಿಸಿ ಅಸ್ತ್ರಗಳನ್ನು ಪಡೆದೆ?

03163004a ಸಮ್ಯಗ್ವಾ ತೇ ಗೃಹೀತಾನಿ ಕಚ್ಚಿದಸ್ತ್ರಾಣಿ ಭಾರತ|

03163004c ಕಚ್ಚಿತ್ಸುರಾಧಿಪಃ ಪ್ರೀತೋ ರುದ್ರಶ್ಚಾಸ್ತ್ರಾಣ್ಯದಾತ್ತವ||

ಭಾರತ! ನೀನು ಅಸ್ತ್ರಗಳನ್ನು ಸರಿಯಾಗಿ ಪಡೆದುಕೊಂಡಿದ್ದೀಯಾ? ಸುರಾಧಿಪನು ನಿನ್ನ ಮೇಲೆ ಪ್ರೀತನಾದನೇ ಮತ್ತು ರುದ್ರನು ನಿನಗೆ ಅಸ್ತ್ರಗಳನ್ನು ಕೊಟ್ಟನೇ?

03163005a ಯಥಾ ದೃಷ್ಟಶ್ಚ ತೇ ಶಕ್ರೋ ಭಗವಾನ್ವಾ ಪಿನಾಕಧೃಕ್|

03163005c ಯಥಾ ಚಾಸ್ತ್ರಾಣ್ಯವಾಪ್ತಾನಿ ಯಥಾ ಚಾರಾಧಿತಶ್ಚ ತೇ||

03163006a ಯಥೋಕ್ತವಾಂಸ್ತ್ವಾಂ ಭಗವಾಂ ಶತಕ್ರತುರರಿಂದಮ|

03163006c ಕೃತಪ್ರಿಯಸ್ತ್ವಯಾಸ್ಮೀತಿ ತಚ್ಚ ತೇ ಕಿಂ ಪ್ರಿಯಂ ಕೃತಂ||

ಭಗವಾನ್ ಶಕ್ರನು ನಿನಗೆ ಹೇಗೆ ಕಂಡನು? ಪಿನಾಕಧೃತನಿಂದ ನೀನು ಅಸ್ತ್ರವನ್ನು ಹೇಗೆ ಪಡೆದೆ? ಅವನನ್ನು ನೀನು ಹೇಗೆ ಆರಾಧಿಸಿದೆ? ಅರಿಂದಮ! ಭಗವಾನ್ ಶತಕ್ರತುವು ನೀನು ನನ್ನನ್ನು ಸಂತೋಷಪಡಿಸಿದ್ದೀಯೆ ಎಂದು ಹೇಳಿದನಲ್ಲ! ಅವನಿಗೆ ಸಂತೋಷವನ್ನು ತರುವಂತಹ ಯಾವ ಕೆಲಸವನ್ನು ನೀನು ಮಾಡಿದೆ?

03163006e ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ಮಹಾದ್ಯುತೇ||

03163007a ಯಥಾ ತುಷ್ಟೋ ಮಹಾದೇವೋ ದೇವರಾಜಶ್ಚ ತೇಽನಘ|

03163007c ಯಚ್ಚಾಪಿ ವಜ್ರಪಾಣೇಸ್ತೇ ಪ್ರಿಯಂ ಕೃತಮರಿಂದಮ||

03163007e ಏತದಾಖ್ಯಾಹಿ ಮೇ ಸರ್ವಮಖಿಲೇನ ಧನಂಜಯ||

ಮಹಾದ್ಯುತೇ! ಇದನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ. ಅನಘ! ಅರಿಂದಮ! ಧನಂಜಯ! ನೀನು ಹೇಗೆ ಮಹಾದೇವನನ್ನು ಮತ್ತು ದೇವರಾಜನನ್ನು ತೃಪ್ತಿಗೊಳಿಸಿದೆ ಮತ್ತು ವಜ್ರಪಾಣಿಗೆ ಸಂತೋಷವನ್ನು ತರುವಂತೆ ಏನು ಮಾಡಿದೆ ಎನ್ನುವುದೆಲ್ಲವನ್ನೂ ಬಿಡದೇ ನನಗೆ ಹೇಳು.”

03163008 ಅರ್ಜುನ ಉವಾಚ|

03163008a ಶೃಣು ಹಂತ ಮಹಾರಾಜ ವಿಧಿನಾ ಯೇನ ದೃಷ್ಟವಾನ್|

03163008c ಶತಕ್ರತುಮಹಂ ದೇವಂ ಭಗವಂತಂ ಚ ಶಂಕರಂ||

03163009a ವಿದ್ಯಾಮಧೀತ್ಯ ತಾಂ ರಾಜಂಸ್ತ್ವಯೋಕ್ತಾಮರಿಮರ್ದನ|

ಅರ್ಜುನನು ಹೇಳಿದನು: “ಮಹಾರಾಜ! ರಾಜನ್! ಅರಿಮರ್ದನ! ಹಾಗಾದರೆ ನಾನು ಹೇಗೆ ಶತಕ್ರತುವನ್ನು ಮತ್ತು ದೇವ ಭಗವಂತ ಶಂಕರನನ್ನು ಕಂಡೆ ಮತ್ತು ಅವರಿಂದ ವಿದ್ಯೆಯನ್ನು ಪಡೆದೆ ಎನ್ನುವುದನ್ನು ನಿನಗೆ ಹೇಳುತ್ತೇನೆ ಕೇಳು.

03163009c ಭವತಾ ಚ ಸಮಾದಿಷ್ಟಸ್ತಪಸೇ ಪ್ರಸ್ಥಿತೋ ವನಂ||

03163010a ಭೃಗುತುಂಗಮಥೋ ಗತ್ವಾ ಕಾಮ್ಯಕಾದಾಸ್ಥಿತಸ್ತಪಃ|

ನಿನ್ನ ಆದೇಶದಂತೆ ನಾನು ತಪಸ್ಸಿಗಾಗಿ ವನಕ್ಕೆ ತೆರಳಿದೆನು. ಕಾಮ್ಯಕವನದಿಂದ ಭೃಗುತುಂಗಕ್ಕೆ ಹೋಗಿ ಅಲ್ಲಿ ತಪಸ್ಸಿನಲ್ಲಿ ತೊಡಗಿದೆ.

03163010c ಏಕರಾತ್ರೋಷಿತಃ ಕಂ ಚಿದಪಶ್ಯಂ ಬ್ರಾಹ್ಮಣಂ ಪಥಿ||

03163011a ಸ ಮಾಮಪೃಚ್ಚತ್ಕೌಂತೇಯ ಕ್ವಾಸಿ ಗಂತಾ ಬ್ರವೀಹಿ ಮೇ|

ಕೌಂತೇಯ! ನಾನು ಅಲ್ಲಿ ಒಂದು ರಾತ್ರಿ ಕಳೆದನಂತರ ದಾರಿಯಲ್ಲಿ ಓರ್ವ ಬ್ರಾಹ್ಮಣನನ್ನು ನೋಡಿದೆ. ಅವನು ನನ್ನನ್ನು ಕೇಳಿದನು: “ಎಲ್ಲಿಗೆ ಹೋಗುತ್ತಿದ್ದೀಯೆ? ನನಗೆ ಹೇಳು.”

03163011c ತಸ್ಮಾ ಅವಿತಥಂ ಸರ್ವಮಬ್ರುವಂ ಕುರುನಂದನ||

03163012a ಸ ತಥ್ಯಂ ಮಮ ತಚ್ಛೃತ್ವಾ ಬ್ರಾಹ್ಮಣೋ ರಾಜಸತ್ತಮ|

03163012c ಅಪೂಜಯತ ಮಾಂ ರಾಜನ್ಪ್ರೀತಿಮಾಂಶ್ಚಾಭವನ್ಮಯಿ||

ಕುರುನಂದನ! ನಾನು ಅವನಿಗೆ ಸತ್ಯವನ್ನೆಲ್ಲವನ್ನೂ ಹೇಳಿದೆ. ರಾಜನ್! ರಾಜಸತ್ತಮ! ನನ್ನಿಂದ ಸತ್ಯವನ್ನು ತಿಳಿದ ಆ ಬ್ರಾಹ್ಮಣನು ನನ್ನನ್ನು ಗೌರವಿಸಿದನು ಮತ್ತು ನನ್ನಿಂದ ಸಂತೋಷಪಟ್ಟನು.

03163013a ತತೋ ಮಾಮಬ್ರವೀತ್ಪ್ರೀತಸ್ತಪ ಆತಿಷ್ಠ ಭಾರತ|

03163013c ತಪಸ್ವೀ ನಚಿರೇಣ ತ್ವಂ ದ್ರಕ್ಷ್ಯಸೇ ವಿಬುಧಾಧಿಪಂ||

ಅವನು ಪ್ರೀತಿಯಿಂದ ನನಗೆ ಹೇಳಿದನು: “ಭಾರತ! ತಪಸ್ಸಿಗೆ ನಿಲ್ಲು. ತಪಸ್ವಿಯಾಗಿ ನೀನು ಸ್ವಲ್ಪವೇ ಸಮಯದಲ್ಲಿ ವಿಬುಧಾಧಿಪನನ್ನು ನೋಡುವೆ.”

03163014a ತತೋಽಹಂ ವಚನಾತ್ತಸ್ಯ ಗಿರಿಮಾರುಹ್ಯ ಶೈಶಿರಂ|

03163014c ತಪೋಽತಪ್ಯಂ ಮಹಾರಾಜ ಮಾಸಂ ಮೂಲಫಲಾಶನಃ||

ಅವನ ಮಾತಿನಂತೆ ನಾನು ಶೀತಲ ಶಿಖರವನ್ನು ಏರಿ ಅಲ್ಲಿ ತಪಸ್ಸನ್ನು ತಪಿಸಿದೆನು. ಮಹಾರಾಜ! ಒಂದು ತಿಂಗಳು ಮೂಲಫಲಗಳನ್ನು ತಿನ್ನುತ್ತಿದ್ದೆ.

03163015a ದ್ವಿತೀಯಶ್ಚಾಪಿ ಮೇ ಮಾಸೋ ಜಲಂ ಭಕ್ಷಯತೋ ಗತಃ|

03163015c ನಿರಾಹಾರಸ್ತೃತೀಯೇಽಥ ಮಾಸೇ ಪಾಂಡವನಂದನ||

03163016a ಊರ್ಧ್ವಬಾಹುಶ್ಚತುರ್ಥಂ ತು ಮಾಸಮಸ್ಮಿ ಸ್ಥಿತಸ್ತದಾ|

03163016c ನ ಚ ಮೇ ಹೀಯತೇ ಪ್ರಾಣಸ್ತದದ್ಭುತಮಿವಾಭವತ್||

ಎರಡನೆಯ ತಿಂಗಳೂ ನಾನು ನೀರನ್ನು ಮಾತ್ರ ಕುಡಿಯುತ್ತಿದ್ದೆ. ಪಾಂಡವನಂದನ! ಮೂರನೆಯ ತಿಂಗಳು ನಿರಾಹಾರಿಯಾಗಿ ಕಳೆದೆ. ನಾಲ್ಕನೆಯ ತಿಂಗಳು ಬಾಹುಗಳನ್ನು ಮೇಲೆತ್ತಿ ನಿಂತುಕೊಂಡಿದ್ದೆ. ಆದರೂ ಕೂಡ ನಾನು ನನ್ನ ಪ್ರಾಣವನ್ನು ಕಳೆದುಕೊಳ್ಳಲಿಲ್ಲ. ಅದು ಅದ್ಭುತವೆಂದೇ ಅನ್ನಿಸಿತು.

03163017a ಚತುರ್ಥೇ ಸಮಭಿಕ್ರಾಂತೇ ಪ್ರಥಮೇ ದಿವಸೇ ಗತೇ|

03163017c ವರಾಹಸಂಸ್ಥಿತಂ ಭೂತಂ ಮತ್ಸಮೀಪಮುಪಾಗಮತ್||

03163018a ನಿಘ್ನನ್ಪ್ರೋಥೇನ ಪೃಥಿವೀಂ ವಿಲಿಖಂಶ್ಚರಣೈರಪಿ|

03163018c ಸಮ್ಮಾರ್ಜಂ ಜಠರೇಣೋರ್ವೀಂ ವಿವರ್ತಂಶ್ಚ ಮುಹುರ್ಮುಹುಃ||

ನಾಲ್ಕನೆಯ ತಿಂಗಳು ಮುಗಿದು ಮೊದಲನೆಯ ದಿವಸವೂ ಮುಗಿದಾಗ ವರಾಹ ರೂಪದಲ್ಲಿ ಓರ್ವ ರಾಕ್ಷಸನು ತನ್ನ ಕೋರೆದಾಡೆಗಳಿಂದ ಭೂಮಿಯನ್ನು ಕುಟ್ಟುತ್ತಾ, ತನ್ನ ಕಾಲಿನ ಉಗುರುಗಳಿಂದ ಕೆರೆಯುತ್ತಾ, ಹೊಟ್ಟೆಯಿಂದ ಸವೆಯುತ್ತಾ, ಮತ್ತೆ ಮತ್ತೆ ಉರುಳುತ್ತಾ ನನ್ನ ಬಳಿ ಬಂದನು.

03163019a ಅನು ತಸ್ಯಾಪರಂ ಭೂತಂ ಮಹತ್ಕೈರಾತಸಂಸ್ಥಿತಂ|

03163019c ಧನುರ್ಬಾಣಾಸಿಮತ್ಪ್ರಾಪ್ತಂ ಸ್ತ್ರೀಗಣಾನುಗತಂ ತದಾ||

ಅದರ ಹಿಂದೆಯೇ ಕಿರಾತನ ವೇಷದ ಮಹಾಕಾಯನು ಧನುರ್ಬಾಣಗಳನ್ನು ಹಿಡಿದು ಸ್ತ್ರೀಗಣಗಳಿಂದ ಕೂಡಿಕೊಂಡು ನಿಂತಿದ್ದನು.

03163020a ತತೋಽಹಂ ಧನುರಾದಾಯ ತಥಾಕ್ಷಯ್ಯೌ ಮಹೇಷುಧೀ|

03163020c ಅತಾಡಯಂ ಶರೇಣಾಥ ತದ್ಭೂತಂ ಲೋಮಹರ್ಷಣ||

ಆಗ ನಾನು ಧನುಸ್ಸನ್ನು ಮತ್ತು ಅಕ್ಷಯ ಬತ್ತಳಿಕೆಯನ್ನು ತೆಗೆದುಕೊಂಡು ಶರದಿಂದ ಮೈನವಿರೇಳಿಸುವ ಆ ಭೂತವನ್ನು ಹೊಡೆದೆನು.

03163021a ಯುಗಪತ್ತತ್ಕಿರಾತಶ್ಚ ವಿಕೃಷ್ಯ ಬಲವದ್ಧನುಃ|

03163021c ಅಭ್ಯಾಜಘ್ನೇ ದೃಢತರಂ ಕಂಪಯನ್ನಿವ ಮೇ ಮನಃ||

ಅದೇ ಸಮಯದಲ್ಲಿ ಕಿರಾತನೂ ಕೂಡ ತನ್ನ ಬಲವಾದ ಧನುಸ್ಸಿನಿಂದ ನನ್ನ ಮನಸ್ಸನೇ ಅಲುಗಾಡಿಸುತ್ತಾನೋ ಎನ್ನುವಂತೆ ಅದಕ್ಕೆ ಜೋರಾಗಿ ಹೊಡೆದನು.

03163022a ಸ ತು ಮಾಮಬ್ರವೀದ್ರಾಜನ್ಮಮ ಪೂರ್ವಪರಿಗ್ರಹಃ|

03163022c ಮೃಗಯಾಧರ್ಮಮುತ್ಸೃಜ್ಯ ಕಿಮರ್ಥಂ ತಾಡಿತಸ್ತ್ವಯಾ||

ರಾಜನ್! ಅವನು ನನಗೆ ಹೇಳಿದನು: “ಅದನ್ನು ನಾನು ಮೊದಲು ಹೊಡೆದೆ. ಬೇಟೆಯ ಧರ್ಮವನ್ನು ತೊರೆದು ನೀನು ಏಕೆ ಅದನ್ನು ಹೊಡೆದೆ?

03163023a ಏಷ ತೇ ನಿಶಿತೈರ್ಬಾಣೈರ್ದರ್ಪಂ ಹನ್ಮಿ ಸ್ಥಿರೋ ಭವ|

03163023c ಸ ವರ್ಷ್ಮವಾನ್ಮಹಾಕಾಯಸ್ತತೋ ಮಾಮಭ್ಯಧಾವತ||

03163024a ತತೋ ಗಿರಿಮಿವಾತ್ಯರ್ಥಮಾವೃಣೋನ್ಮಾಂ ಮಹಾಶರೈಃ|

ಈ ನಿಶಿತ ಬಾಣಗಳಿಂದ ನಿನ್ನ ದರ್ಪವನ್ನು ಹಾರಿಸುತ್ತೇನೆ. ಸ್ಥಿರವಾಗಿರು.” ಆಗ ಆ ಮಹಾಕಾಯನು ನನ್ನ ಮೇಲೆ ಆಕ್ರಮಣ ಮಾಡಿ, ಶೈಲದಂತೆ ನಿಂತಿದ್ದ ನನ್ನನ್ನು ಬಾಣಗಳ ಮಳೆಯಿಂದ ಮುಚ್ಚಿದನು.

03163024c ತಂ ಚಾಹಂ ಶರವರ್ಷೇಣ ಮಹತಾ ಸಮವಾಕಿರಂ||

03163025a ತತಃ ಶರೈರ್ದೀಪ್ತಮುಖೈಃ ಪತ್ರಿತೈರನುಮಂತ್ರಿತೈಃ|

03163025c ಪ್ರತ್ಯವಿಧ್ಯಮಹಂ ತಂ ತು ವಜ್ರೈರಿವ ಶಿಲೋಚ್ಚಯಂ||

ಆಗ ನಾನು ಗಿರಿಯನ್ನು ಸಿಡುಲುಗಳಿಂದ ಆಕ್ರಮಣ ಮಾಡುವಂತೆ ಅವನನ್ನು ಉರಿಯುತ್ತಿರುವ ತುದಿಯುಳ್ಳ, ರೆಕ್ಕೆಗಳ ಕೊನೆಯುಳ್ಳ, ಮಂತ್ರಿತ ಮಹಾಶರಗಳ ಮಳೆಯಿಂದ ಎದುರಿಸಿದೆನು.

03163026a ತಸ್ಯ ತಚಶ್ತಧಾ ರೂಪಮಭವಚ್ಚ ಸಹಸ್ರಧಾ|

03163026c ತಾನಿ ಚಾಸ್ಯ ಶರೀರಾಣಿ ಶರೈರಹಮತಾಡಯಂ||

ಆಗ ಅವನು ನೂರು ರೂಪಗಳನ್ನು ತಳೆದನು. ಸಾವಿರ ರೂಪಗಳನ್ನು ತಳೆದನು. ನಾನು ಅವನ ಆ ಎಲ್ಲ ಶರೀರಗಳನ್ನೂ ಬಾಣಗಳಿಂದ ಹೊಡೆದೆನು.

03163027a ಪುನಸ್ತಾನಿ ಶರೀರಾಣಿ ಏಕೀಭೂತಾನಿ ಭಾರತ|

03163027c ಅದೃಶ್ಯಂತ ಮಹಾರಾಜ ತಾನ್ಯಹಂ ವ್ಯಧಮಂ ಪುನಃ||

03163028a ಅಣುರ್ಬೃಹಚ್ಚಿರಾ ಭೂತ್ವಾ ಬೃಹಚ್ಚಾಣುಶಿರಾಃ ಪುನಃ|

03163028c ಏಕೀಭೂತಸ್ತದಾ ರಾಜನ್ಸೋಽಭ್ಯವರ್ತತ ಮಾಂ ಯುಧಿ||

ಭಾರತ! ಪುನಃ ಅವನ ಆ ಶರೀರಗಳು ಒಂದಾದವು. ಮಹಾರಾಜ! ಅವನು ಅದೃಶ್ಯನಾಗಲು ನಾನು ಪುನಃ ಅವನನ್ನು ಹೊಡೆದೆನು. ಒಂದು ಕ್ಷಣದಲ್ಲಿ ಅಣುರೂಪದ ದೇಹ ಮತ್ತು ಮಹಾಶಿರವನ್ನು ಪಡೆದನು. ಮತ್ತೆ ಪುನಃ ಅತಿಕಾಯನಾಗಿ ಅಣುಮಾತ್ರದ ಶಿರವನ್ನು ಪಡೆಯುತ್ತಿದ್ದನು. ರಾಜನ್! ಪುನಃ ಒಂದೇ ದೇಹವನ್ನು ಹೊಂದಿ ಅವನು ನನ್ನ ಮೇಲೆ ಯುದ್ಧಕ್ಕೆ ಬಂದನು.

03163029a ಯದಾಭಿಭವಿತುಂ ಬಾಣೈರ್ನೈವ ಶಕ್ನೋಮಿ ತಂ ರಣೇ|

03163029c ತತೋಽಹಮಸ್ತ್ರಮಾತಿಷ್ಠಂ ವಾಯವ್ಯಂ ಭರತರ್ಷಭ||

03163030a ನ ಚೈನಮಶಕಂ ಹಂತುಂ ತದದ್ಭುತಮಿವಾಭವತ್|

03163030c ತಸ್ಮಿನ್ಪ್ರತಿಹತೇ ಚಾಸ್ತ್ರೇ ವಿಸ್ಮಯೋ ಮೇ ಮಹಾನಭೂತ್||

ಭರತರ್ಷಭ! ನನ್ನ ಬಾಣಗಳಿಂದ ಅವನನ್ನು ಸೋಲಿಸಲು ಶಕ್ತನಲ್ಲ ಎಂದು ತಿಳಿದ ನಾನು ವಾಯವ್ಯಾಸ್ತ್ರವನ್ನು ತೆಗೆದುಕೊಂಡೆನು. ಆದರೆ ಅದ್ಭುತವೇನಾಯಿತೆಂದರೆ ಅದು ಅವನನ್ನು ಹೊಡೆಯಲು ಅಶಕ್ತವಾಯಿತು. ಆ ಅಸ್ತ್ರವು ಕೆಳಗುರುಳಲು ನನಗೆ ಮಹಾ ವಿಸ್ಮಯವಾಯಿತು.

03163031a ಭೂಯಶ್ಚೈವ ಮಹಾರಾಜ ಸವಿಶೇಷಮಹಂ ತತಃ|

03163031c ಅಸ್ತ್ರಪೂಗೇನ ಮಹತಾ ರಣೇ ಭೂತಮವಾಕಿರಂ||

ಮಹಾರಾಜ! ಪುನಃ ನಾನು ಜಾಗ್ರತೆಯಿಂದ ಮಹಾರಣ್ಯದಲ್ಲಿ ಆ ಭೂತವನ್ನು ಅಸ್ತ್ರಗಳ ಮಳೆಯಿಂದ ಆಕ್ರಮಣ ಮಾಡಿದೆನು.

03163032a ಸ್ಥೂಣಾಕರ್ಣಮಯೋಜಾಲಂ ಶರವರ್ಷಂ ಶರೋಲ್ಬಣಂ|

03163032c ಶೈಲಾಸ್ತ್ರಮಶ್ಮವರ್ಷಂ ಚ ಸಮಾಸ್ಥಾಯಾಹಮಭ್ಯಯಾಂ||

03163032e ಜಗ್ರಾಸ ಪ್ರಹಸಂಸ್ತಾನಿ ಸರ್ವಾಣ್ಯಸ್ತ್ರಾಣಿ ಮೇಽನಘ||

03163033a ತೇಷು ಸರ್ವೇಷು ಶಾಂತೇಷು ಬ್ರಹ್ಮಾಸ್ತ್ರಮಹಮಾದಿಶಂ|

ಅನಘ! ಅವನ ಮೇಲೆ ನಾನು ಸ್ಥೂಲಾಕರ್ಣ, ಅಯೋಜಾಲ, ಶರವರ್ಷ, ಶರೋಲ್ಬಣ, ಮತ್ತು ಶೈಲಾಸ್ತ್ರಗಳನ್ನು ಬಿಟ್ಟರೂ ಆ ಎಲ್ಲ ಅಸ್ತ್ರಗಳನ್ನೂ ಅವನು ನಗುತ್ತಾ ಹಿಡಿದನು. ಅವೆಲ್ಲವುಗಳನ್ನೂ ಶಾಂತಗೊಳಿಸಿದ ನಂತರ ನಾನು ಬ್ರಹ್ಮಾಸ್ತ್ರವನ್ನು ತೆಗೆದುಕೊಂಡೆನು.

03163033c ತತಃ ಪ್ರಜ್ವಲಿತೈರ್ಬಾಣೈಃ ಸರ್ವತಃ ಸೋಪಚೀಯತ||

03163033e ಉಪಚೀಯಮಾನಶ್ಚ ಮಯಾ ಮಹಾಸ್ತ್ರೇಣ ವ್ಯವರ್ಧತ||

ಆಗ ಅವನು ಪ್ರಜ್ವಲಿಸುವ ಬಾಣಗಳಿಂದ ಎಲ್ಲಕಡೆಯಿಂದಲೂ ಆವೃತನಾದನು. ನಾನು ಆ ಮಹಾಸ್ತ್ರವನ್ನು ಬಿಡಲು ಅವನು ದೇಹದಲ್ಲಿ ಬೆಳೆದನು.

03163034a ತತಃ ಸಂತಾಪಿತೋ ಲೋಕೋ ಮತ್ಪ್ರಸೂತೇನ ತೇಜಸಾ|

03163034c ಕ್ಷಣೇನ ಹಿ ದಿಶಃ ಖಂ ಚ ಸರ್ವತೋಽಭಿವಿದೀಪಿತಂ||

ಆಗ ಲೋಕಗಳೆಲ್ಲವೂ ತೇಜಸ್ಸಿನಿಂದ ಸಂತಾಪಗೊಂಡಿತು. ಒಂದು ಕ್ಷಣಕಾಲ ಎಲ್ಲ ದಿಕ್ಕುಗಳೂ ಆಕಾಶವೂ ಎಲ್ಲಕಡೆಯಿಂದಲೂ ಉರಿಯತೊಡಗಿತು.

03163035a ತದಪ್ಯಸ್ತ್ರಂ ಮಹಾತೇಜಾಃ ಕ್ಷಣೇನೈವ ವ್ಯಶಾತಯತ್|

03163035c ಬ್ರಹ್ಮಾಸ್ತ್ರೇ ತು ಹತೇ ರಾಜನ್ಭಯಂ ಮಾಂ ಮಹದಾವಿಶತ್||

ಆಗ ಆ ಮಹಾತೇಜಸ್ವಿಯು ಕ್ಷಣದಲ್ಲಿಯೇ ಆ ಅಸ್ತ್ರವನ್ನೂ ಹಿಡಿದು ಬಿಸಾಡಿದನು. ರಾಜನ್! ಬ್ರಹ್ಮಾಸ್ತ್ರವೂ ಹತವಾಗಲು ನನ್ನನ್ನು ಮಹಾಭಯವು ಆವರಿಸಿತು.

03163036a ತತೋಽಹಂ ಧನುರಾದಾಯ ತಥಾಕ್ಷಯ್ಯೌ ಮಹೇಷುಧೀ|

03163036c ಸಹಸಾಭ್ಯಹನಂ ಭೂತಂ ತಾನ್ಯಪ್ಯಸ್ತ್ರಾಣ್ಯಭಕ್ಷಯತ್||

ಆಗ ನಾನು ಧನುಸ್ಸನ್ನು ಹಿಡಿದು ಅಕ್ಷಯ ಬತ್ತಳಿಕೆಯಿಂದ ಬಾಣಗಳನ್ನು ತೆಗೆದು ಆ ಭೂತನನ್ನು ಜೋರಾಗಿ ಹೊಡೆದೆನು. ಆದರೆ ಅವನು ಆ ಆಯುಧಗಳನ್ನೂ ನುಂಗಿಹಾಕಿದನು.

03163037a ಹತೇಷ್ವಸ್ತ್ರೇಷು ಸರ್ವೇಷು ಭಕ್ಷಿತೇಷ್ವಾಯುಧೇಷು ಚ|

03163037c ಮಮ ತಸ್ಯ ಚ ಭೂತಸ್ಯ ಬಾಹುಯುದ್ಧಮವರ್ತತ||

ನನ್ನ ಅಸ್ತ್ರಗಳೆಲ್ಲವೂ ಹತವಾದನಂತರ ಮತ್ತು ಆಯುಧಗಳನ್ನು ಅವನು ಭಕ್ಷಿಸಿದ ನಂತರ ನನ್ನ ಮತ್ತು ಆ ಭೂತದ ನಡುವೆ ಬಾಹುಯುದ್ಧವು ನಡೆಯಿತು.

03163038a ವ್ಯಾಯಾಮಂ ಮುಷ್ಟಿಭಿಃ ಕೃತ್ವಾ ತಲೈರಪಿ ಸಮಾಹತೌ|

03163038c ಅಪಾತಯಚ್ಚ ತದ್ಭೂತಂ ನಿಶ್ಚೇಷ್ಟೋ ಹ್ಯಗಮಂ ಮಹೀಂ||

ನಾವು ಮುಷ್ಟಿಗಳಿಂದ ಮತ್ತು ಅಂಗೈಗಳಿಂದ ಪರಸ್ಪರರನ್ನು ಹೊಡೆದೆವು. ಆಗ ಆ ಭೂತನು ನನ್ನನ್ನು ನೆಲದ ಮೇಲೆ ಕೆಡಗಿ ಉರುಳಿಸಿ ನಿಶ್ಚೇಷ್ಟನನ್ನಾಗಿ ಮಾಡಿದನು.

03163039a ತತಃ ಪ್ರಹಸ್ಯ ತದ್ಭೂತಂ ತತ್ರೈವಾಂತರಧೀಯತ|

03163039c ಸಹ ಸ್ತ್ರೀಭಿರ್ಮಹಾರಾಜ ಪಶ್ಯತೋ ಮೇಽದ್ಭುತೋಪಮಂ||

ಮಹಾರಾಜ! ಅನಂತರ ಆ ಭೂತನು ಜೋರಾಗಿ ನಕ್ಕು ನಾನು ನೋಡುತ್ತಿದ್ದಂತೆಯೇ ಸ್ತ್ರೀಯರೊಂದಿಗೆ ಅಲ್ಲಿಯೇ ಅಂತರ್ಧಾನನಾದನು. ನನಗೆ ಅದು ಅದ್ಭುತವೆನಿಸಿತು.

03163040a ಏವಂ ಕೃತ್ವಾ ಸ ಭಗವಾಂಸ್ತತೋಽನ್ಯದ್ರೂಪಮಾತ್ಮನಃ|

03163040c ದಿವ್ಯಮೇವ ಮಹಾರಾಜ ವಸಾನೋಽದ್ಭುತಮಂಬರಂ||

03163041a ಹಿತ್ವಾ ಕಿರಾತರೂಪಂ ಚ ಭಗವಾಂಸ್ತ್ರಿದಶೇಶ್ವರಃ|

03163041c ಸ್ವರೂಪಂ ದಿವ್ಯಮಾಸ್ಥಾಯ ತಸ್ಥೌ ತತ್ರ ಮಹೇಶ್ವರಃ||

ಹೀಗೆ ಮಾಡಿದ ಆ ಭಗವಂತನು ಕಿರಾತನ ರೂಪವನ್ನು ತೊರೆದು ಅನ್ಯರೂಪವನ್ನು ಧರಿಸಿದನು. ಮಹಾರಾಜ ಆ ದಿವ್ಯರೂಪದಲ್ಲಿ ಭಗವಾನ್ ತ್ರಿದಶೇಶ್ವರನು ಅದ್ಭುತ ಅಂಬರವನ್ನು ಧರಿಸಿದ್ದನು. ದಿವ್ಯವಾದ ಸ್ವರೂಪದಲ್ಲಿ ಮಹೇಶ್ವರನು ಅಲ್ಲಿ ನಿಂತಿದ್ದನು.

03163042a ಅದೃಶ್ಯತ ತತಃ ಸಾಕ್ಷಾದ್ಭಗವಾನ್ಗೋವೃಷಧ್ವಜಃ|

03163042c ಉಮಾಸಹಾಯೋ ಹರಿದೃಗ್ಬಹುರೂಪಃ ಪಿನಾಕಧೃಕ್||

ಆಗ ಹಳದಿಬಣ್ಣದ ಕಣ್ಣುಗಳ, ಬಹುರೂಪಿ, ಪಿನಾಕವನ್ನು ಹಿಡಿದ ಸಾಕ್ಷಾತ್ ಭಗವಾನ್ ಗೋವೃಷಧ್ವಜನು ಉಮೆಯೊಂದಿಗೆ ನನಗೆ ಕಾಣಿಸಿಕೊಂಡನು.

03163043a ಸ ಮಾಮಭ್ಯೇತ್ಯ ಸಮರೇ ತಥೈವಾಭಿಮುಖಂ ಸ್ಥಿತಂ|

03163043c ಶೂಲಪಾಣಿರಥೋವಾಚ ತುಷ್ಟೋಽಸ್ಮೀತಿ ಪರಂತಪ||

ಪರಂತಪ! ನಾನೂ ಕೂಡ ಸಮರದಲ್ಲಿ ಅವನ ಎದುರು ನಿಂತಾಗ, ತುಷ್ಟನಾಗಿದ್ದೇನೆ ಎಂದು ಶೂಲಪಾಣಿಯು ನನಗೆ ನುಡಿದನು.

03163044a ತತಸ್ತದ್ಧನುರಾದಾಯ ತೂಣೌ ಚಾಕ್ಷಯ್ಯಸಾಯಕೌ|

03163044c ಪ್ರಾದಾನ್ ಮಮೈವ ಭಗವಾನ್ವರಯಸ್ವೇತಿ ಚಾಬ್ರವೀತ್||

ಅನಂತರ ಭಗವಾನನು ಬಿಲ್ಲು ಮತ್ತು ಅಕ್ಷಯ ಶರಗಳನ್ನುಳ್ಳ ಬತ್ತಳಿಕೆಯನ್ನು ನನಗೆ ಕೊಟ್ಟನು ಮತ್ತು ವರವನ್ನು ಕೇಳು ಎಂದು ಹೇಳಿದನು.

03163045a ತುಷ್ಟೋಽಸ್ಮಿ ತವ ಕೌಂತೇಯ ಬ್ರೂಹಿ ಕಿಂ ಕರವಾಣಿ ತೇ|

03163045c ಯತ್ತೇ ಮನೋಗತಂ ವೀರ ತದ್ಬ್ರೂಹಿ ವಿತರಾಮ್ಯಹಂ||

03163045e ಅಮರತ್ವಮಪಾಹಾಯ ಬ್ರೂಹಿ ಯತ್ತೇ ಮನೋಗತಂ||

“ಕೌಂತೇಯ! ನಾನು ನಿನ್ನಿಂದ ತೃಪ್ತನಾಗಿದ್ದೇನೆ. ಹೇಳು. ನಿನಗೇನು ಮಾಡಲಿ? ವೀರ! ನಿನ್ನ ಮನೋಗತವೇನಿದೆಯೋ ಅದನ್ನು ಹೇಳು. ನಾನು ಕೊಡುತ್ತೇನೆ. ಅಮರತ್ವವನ್ನು ಬಿಟ್ಟು ನಿನ್ನ ಮನಸ್ಸಿನಲ್ಲಿರುವುದನ್ನು ಹೇಳು.”

03163046a ತತಃ ಪ್ರಾಂಜಲಿರೇವಾಹಮಸ್ತ್ರೇಷು ಗತಮಾನಸಃ|

03163046c ಪ್ರಣಮ್ಯ ಶಿರಸಾ ಶರ್ವಂ ತತೋ ವಚನಮಾದದೇ||

ಆಗ ನಾನು ಕೈಗಳನ್ನು ಮುಗಿದು ಅಸ್ತ್ರಗಳ ಮೇಲೆಯೇ ಮನಸ್ಸನ್ನಿಟ್ಟು ಶರ್ವನಿಗೆ ನಮಸ್ಕರಿಸಿ ಈ ಮಾತುಗಳನ್ನು ಹೇಳಿದೆನು.

03163047a ಭಗವಾನ್ಮೇ ಪ್ರಸನ್ನಶ್ಚೇದೀಪ್ಸಿತೋಽಯಂ ವರೋ ಮಮ|

03163047c ಅಸ್ತ್ರಾಣೀಚ್ಚಾಮ್ಯಹಂ ಜ್ಞಾತುಂ ಯಾನಿ ದೇವೇಷು ಕಾನಿ ಚಿತ್||

03163047e ದದಾನೀತ್ಯೇವ ಭಗವಾನಬ್ರವೀತ್ತ್ರ್ಯಂಬಕಶ್ಚ ಮಾಂ||

“ಭಗವಂತನು ನನ್ನ ಮೇಲೆ ಪ್ರಸನ್ನನಾಗಿದ್ದರೆ ನಾನು ಈ ವರವನ್ನು ಇಚ್ಛಿಸುತ್ತೇನೆ. ದೇವತೆಗಳಲ್ಲಿ ಏನೆಲ್ಲ ಅಸ್ತ್ರಗಳಿವೆಯೋ ಅವುಗಳನ್ನು ತಿಳಿಯಲು ಬಯಸುತ್ತೇನೆ.” “ಕೊಡುತ್ತೇನೆ” ಎಂದು ಭಗವಾನ್ ತ್ರ್ಯಂಬಕನು ನನಗೆ ಹೇಳಿದನು.

03163048a ರೌದ್ರಮಸ್ತ್ರಂ ಮದೀಯಂ ತ್ವಾಮುಪಸ್ಥಾಸ್ಯತಿ ಪಾಂಡವ|

03163048c ಪ್ರದದೌ ಚ ಮಮ ಪ್ರೀತಃ ಸೋಽಸ್ತ್ರಂ ಪಾಶುಪತಂ ಪ್ರಭುಃ||

03163049a ಉವಾಚ ಚ ಮಹಾದೇವೋ ದತ್ತ್ವಾ ಮೇಽಸ್ತ್ರಂ ಸನಾತನಂ|

03163049c ನ ಪ್ರಯೋಜ್ಯಂ ಭವೇದೇತನ್ಮಾನುಷೇಷು ಕಥಂ ಚನ||

“ಪಾಂಡವ! ನನ್ನ ಈ ರೌದ್ರಾಸ್ತ್ರವು ನಿನ್ನ ಬಳಿ ಇರುತ್ತದೆ.” ನನ್ನ ಮೇಲೆ ಪ್ರೀತಿಗೊಂಡು ಆ ಪ್ರಭುವು ನನಗೆ ಅವನ ಪಾಶುಪತವನ್ನು ಕೊಟ್ಟನು. ನನಗೆ ಆ ಸನಾತನ ಅಸ್ತ್ರವನ್ನಿತ್ತು ಮಹಾದೇವನು ಹೇಳಿದನು: “ಇದನ್ನು ಮನುಷ್ಯರ ಮೇಲೆ ಎಂದೂ ಪ್ರಯೋಗಿಸಬಾರದು.

03163050a ಪೀಡ್ಯಮಾನೇನ ಬಲವತ್ಪ್ರಯೋಜ್ಯಂ ತೇ ಧನಂಜಯ|

03163050c ಅಸ್ತ್ರಾಣಾಂ ಪ್ರತಿಘಾತೇ ಚ ಸರ್ವಥೈವ ಪ್ರಯೋಜಯೇಃ||

ಧನಂಜಯ! ನೀನು ಬಲವಾಗಿ ಪೀಡಿಸಲ್ಪಟ್ಟರೆ ಇದನ್ನು ಪ್ರಯೋಗಿಸಬಹುದು. ಅಸ್ತ್ರಗಳನ್ನು ಪ್ರತಿಘಾತಿಸಲು ಬಿಟ್ಟು ಬೇರೆ ಯಾವ ಕಾರಣಕ್ಕೂ ಇದನ್ನು ಪ್ರಯೋಗಿಸಬಾರದು.”

03163051a ತದಪ್ರತಿಹತಂ ದಿವ್ಯಂ ಸರ್ವಾಸ್ತ್ರಪ್ರತಿಷೇಧನಂ|

03163051c ಮೂರ್ತಿಮನ್ಮೇ ಸ್ಥಿತಂ ಪಾರ್ಶ್ವೇ ಪ್ರಸನ್ನೇ ಗೋವೃಷಧ್ವಜೇ||

03163052a ಉತ್ಸಾದನಮಮಿತ್ರಾಣಾಂ ಪರಸೇನಾನಿಕರ್ತನಂ|

03163052c ದುರಾಸದಂ ದುಷ್ಪ್ರಹಸಂ ಸುರದಾನವರಾಕ್ಷಸೈಃ||

ಗೋವೃಷಧ್ವಜನ ಪ್ರಸನ್ನತೆಯಿಂದ ಎಲ್ಲ ಅಸ್ತ್ರಗಳನ್ನು ಸೋಲಿಸಬಲ್ಲ, ಅಮಿತ್ರರ ಶಾಪವಾದ, ಪರಸೇನೆಯನ್ನು ಕಡಿಯಬಲ್ಲ, ದುರಾಸದ, ಸುರ-ದಾನವ-ರಾಕ್ಷಸರಿಂದಲೂ ಗೆಲ್ಲಲಸಾಧ್ಯವಾದ ಅಪ್ರತಿಹತ ದಿವ್ಯ ಅಸ್ತ್ರವು ಮೂರ್ತಿಮತ್ತಾಗಿ ನನ್ನ ಪಕ್ಕದಲ್ಲಿ ನಿಂತಿತು.

03163053a ಅನುಜ್ಞಾತಸ್ತ್ವಹಂ ತೇನ ತತ್ರೈವ ಸಮುಪಾವಿಶಂ|

03163053c ಪ್ರೇಕ್ಷತಶ್ಚೈವ ಮೇ ದೇವಸ್ತತ್ರೈವಾಂತರಧೀಯತ||

ಅವನಿಂದ ಅಪ್ಪಣೆಪಡೆದು ನಾನು ಅಲ್ಲಿಯೇ ಕುಳಿತುಕೊಂಡೆನು. ನಾನು ನೋಡುತ್ತಿದ್ದಂತೆಯೇ ಆ ದೇವನು ಅಲ್ಲಿಯೇ ಅಂತರ್ಧಾನನಾದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಗಂಧಮಾದನವಾಸೇ ಯುಧಿಷ್ಠಿರಾರ್ಜುನ ಸಂವಾದೇ ತ್ರಿಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಗಂಧಮಾದನವಾಸದಲ್ಲಿ ಯುಧಿಷ್ಠಿರಾರ್ಜುನರ ಸಂವಾದದಲ್ಲಿ ನೂರಾಅರವತ್ಮೂರನೆಯ ಅಧ್ಯಾಯವು.

Related image

Comments are closed.