Aranyaka Parva: Chapter 162

ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ

೧೬೨

ಇಂದ್ರನ ಆಗಮನ (೧-೧೧). ಯುಧಿಷ್ಠಿರನಿಗೆ ಕಾಮ್ಯಕಕ್ಕೆ ಹಿಂದಿರುಗಲು ಹೇಳಿ ಇಂದ್ರನು ಮರಳಿದುದು (೧೨-೧೬).

03162001 ವೈಶಂಪಾಯನ ಉವಾಚ|

03162001a ಏತಸ್ಮಿನ್ನೇವ ಕಾಲೇ ತು ಸರ್ವವಾದಿತ್ರನಿಸ್ವನಃ|

03162001c ಬಭೂವ ತುಮುಲಃ ಶಬ್ದಸ್ತ್ವಂತರಿಕ್ಷೇ ದಿವೌಕಸಾಂ||

03162002a ರಥನೇಮಿಸ್ವನಶ್ಚೈವ ಘಂಟಾಶಬ್ಧಶ್ಚ ಭಾರತ|

03162002c ಪೃಥಗ್ವ್ಯಾಲಮೃಗಾಣಾಂ ಚ ಪಕ್ಷಿಣಾಂ ಚೈವ ಸರ್ವಶಃ||

03162003a ತಂ ಸಮಂತಾದನುಯಯುರ್ಗಂಧರ್ವಾಪ್ಸರಸಸ್ತಥಾ|

03162003c ವಿಮಾನೈಃ ಸೂರ್ಯಸಂಕಾಶೈರ್ದೇವರಾಜಮರಿಂದಮಂ||

ವೈಶಂಪಾಯನನು ಹೇಳಿದನು: “ಇದೇ ಸಮಯದಲ್ಲಿ ಅಂತರಿಕ್ಷದಲ್ಲಿ ದಿವೌಕಸರ ಸರ್ವವಾದ್ಯಗಳ ನಿನಾದವೂ ಸೇರಿ ತುಮುಲ ಶಬ್ಧವು ಕೇಳಿಬಂದಿತು. ಭಾರತ! ರಥದ ಗಾಲಿಯ ಶಬ್ಧ, ಘಂಟಾಶಬ್ಧ ಮತ್ತು ಎಲ್ಲ ವ್ಯಾಲಮೃಗಗಳ ಮತ್ತು ಪಕ್ಷಿಗಳ ಶಬ್ಧವು ಎಲ್ಲೆಡೆಯಲ್ಲಿಯೂ ಕೇಳಿಬಂದಿತು. ಸೂರ್ಯಸಂಕಾಶ ವಿಮಾನಗಳಲ್ಲಿ ದೇವರಾಜ ಅರಿಂದಮನನ್ನು ಸುತ್ತುವರೆದು ಗಂಧರ್ವ ಮತ್ತು ಅಪ್ಸರೆಯರು ಬರುತ್ತಿರುವುದು ಕಾಣಿಸಿತು.

03162004a ತತಃ ಸ ಹರಿಭಿರ್ಯುಕ್ತಂ ಜಾಂಬೂನದಪರಿಷ್ಕೃತಂ|

03162004c ಮೇಘನಾದಿನಮಾರುಹ್ಯ  ಶ್ರಿಯಾ ಪರಮಯಾ ಜ್ವಲನ್||

03162005a ಪಾರ್ಥಾನಭ್ಯಾಜಗಾಮಾಶು ದೇವರಾಜಃ ಪುರಂದರಃ|

03162005c ಆಗತ್ಯ ಚ ಸಹಸ್ರಾಕ್ಷೋ ರಥಾದವರುರೋಹ ವೈ||

ಆಗ ಬಂಗಾರದಿಂದ ಅಲಂಕರಿಸಲ್ಪಟ್ಟ ಮೇಘನಾದಮಾಡುತ್ತಿದ್ದ ಕುದುರೆಗಳನ್ನು ಕಟ್ಟಲ್ಪಟ್ಟಿದ್ದ ರಥವನ್ನೇರಿ, ತನ್ನ ಶ್ರೀಯಿಂದ ತುಂಬಾ ಪ್ರಜ್ವಲಿಸುತ್ತಿದ್ದ ಪುರಂದರ ದೇವರಾಜನು ಪಾರ್ಥರ ಬಳಿಬಂದನು. ಬಂದು ಆ ಸಹಸ್ರಾಕ್ಷನು ರಥದಿಂದ ಇಳಿದನು.

03162006a ತಂ ದೃಷ್ಟ್ವೈವ ಮಹಾತ್ಮಾನಂ ಧರ್ಮರಾಜೋ ಯುಧಿಷ್ಠಿರಃ|

03162006c ಭ್ರಾತೃಭಿಃ ಸಹಿತಃ ಶ್ರೀಮಾನ್ದೇವರಾಜಮುಪಾಗಮತ್||

03162007a ಪೂಜಯಾಮಾಸ ಚೈವಾಥ ವಿಧಿವದ್ಭೂರಿದಕ್ಷಿಣಃ|

03162007c ಯಥಾರ್ಹಮಮಿತಾತ್ಮಾನಂ ವಿಧಿದೃಷ್ಟೇನ ಕರ್ಮಣಾ||

ಆ ಮಹಾತ್ಮ ದೇವರಾಜನನ್ನು ಕಂಡೊಡನೆಯೇ ಧರ್ಮರಾಜ ಯುಧಿಷ್ಠಿರನು ಸಹೋದರರ ಸಹಿತ ಅವನ ಬಳಿಬಂದನು. ಆ ಭೂರಿದಕ್ಷಿಣನು ವಿಧಿವತ್ತಾಗಿ, ವಿಧಿದೃಷ್ಟ ಕರ್ಮಗಳಿಂದ ಆ ಅಮಿತಾತ್ಮನನ್ನು ಪೂಜಿಸಿದನು.

03162008a ಧನಂಜಯಶ್ಚ ತೇಜಸ್ವೀ ಪ್ರಣಿಪತ್ಯ ಪುರಂದರಂ|

03162008c ಭೃತ್ಯವತ್ಪ್ರಣತಸ್ತಸ್ಥೌ ದೇವರಾಜಸಮೀಪತಃ||

ತೇಜಸ್ವಿ ಧನಂಜಯನು ಪುರಂದರನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಸೇವಕನಂತೆ ದೇವರಾಜನ ಸಮೀಪದಲ್ಲಿ ನಿಂತುಕೊಂಡನು.

03162009a ಆಪ್ಯಾಯತ ಮಹಾತೇಜಾಃ ಕುಂತೀಪುತ್ರೋ ಯುಧಿಷ್ಠಿರಃ|

03162009c ಧನಂಜಯಮಭಿಪ್ರೇಕ್ಷ್ಯ ವಿನೀತಂ ಸ್ಥಿತಮಂತಿಕೇ||

03162010a ಜಟಿಲಂ ದೇವರಾಜಸ್ಯ ತಪೋಯುಕ್ತಮಕಲ್ಮಷಂ|

03162010c ಹರ್ಷೇಣ ಮಹತಾವಿಷ್ಟಃ ಫಲ್ಗುನಸ್ಯಾಥ ದರ್ಶನಾತ್||

ಹತ್ತಿರದಲ್ಲಿ ಧನಂಜಯನು ವಿನೀತನಾಗಿ ನಿಂತಿರುವುದನ್ನು ನೋಡಿ ಮಹಾತೇಜಸ್ವಿ, ಕುಂತೀಪುತ್ರ ಯುಧಿಷ್ಠಿರನು ಫಲ್ಗುಣನ ದರ್ಶನದ ಮಹಾ ಹರ್ಷದಿಂದ ಆವಿಷ್ಟನಾಗಿ ದೇವರಾಜನ ತಪೋಯುಕ್ತ, ಅಕಲ್ಮಷ ಜಟಿಲಕ್ಕೆ ಮುತ್ತಿಟ್ಟನು.

03162011a ತಂ ತಥಾದೀನಮನಸಂ ರಾಜಾನಂ ಹರ್ಷಸಂಪ್ಲುತಂ|

03162011c ಉವಾಚ ವಚನಂ ಧೀಮಾನ್ದೇವರಾಜಃ ಪುರಂದರಃ||

ಆಗ ಧೀಮಾನ ದೇವರಾಜ ಪುರಂದರನು ದೀನಮನಸ್ಕ, ಹರ್ಷದಿಂದ ತೋಯ್ದಿದ್ದ ರಾಜನಿಗೆ ಈ ಮಾತುಗಳನ್ನಾಡಿದನು:

03162012a ತ್ವಮಿಮಾಂ ಪೃಥಿವೀಂ ರಾಜನ್ಪ್ರಶಾಸಿಷ್ಯಸಿ ಪಾಂಡವ|

03162012c ಸ್ವಸ್ತಿ ಪ್ರಾಪ್ನುಹಿ ಕೌಂತೇಯ ಕಾಮ್ಯಕಂ ಪುನರಾಶ್ರಮಂ||

“ರಾಜನ್! ಪಾಂಡವ! ನೀನು ಈ ಪೃಥ್ವಿಯನ್ನು ಆಳುತ್ತೀಯೆ. ಕೌಂತೇಯ! ನಿನಗೆ ಒಳ್ಳೆಯದಾಗಲಿ. ಪುನಃ ಕಾಮ್ಯಕವನಕ್ಕೆ ಹೋಗು.

03162013a ಅಸ್ತ್ರಾಣಿ ಲಬ್ಧಾನಿ ಚ ಪಾಂಡವೇನ|

         ಸರ್ವಾಣಿ ಮತ್ತಃ ಪ್ರಯತೇನ ರಾಜನ್|

03162013c ಕೃತಪ್ರಿಯಶ್ಚಾಸ್ಮಿ ಧನಂಜಯೇನ|

         ಜೇತುಂ ನ ಶಕ್ಯಸ್ತ್ರಿಭಿರೇಷ ಲೋಕೈಃ||

ರಾಜನ್! ಪಾಂಡವನು ಪ್ರಯತ್ನಪಟ್ಟು ನನ್ನಿಂದ ಎಲ್ಲ ಅಸ್ತ್ರಗಳನ್ನೂ ಪಡೆದಿದ್ದಾನೆ. ಧನಂಜಯನು ನನಗೆ ಅತ್ಯಂತ ಸಂತೋಷವನ್ನು ನೀಡಿದ್ದಾನೆ. ಇವನನ್ನು ಲೋಕದಲ್ಲಿ ಯಾರೂ ಗೆಲ್ಲಲು ಶಕ್ಯರಿಲ್ಲ.”

03162014a ಏವಮುಕ್ತ್ವಾ ಸಹಸ್ರಾಕ್ಷಃ ಕುಂತೀಪುತ್ರಂ ಯುಧಿಷ್ಠಿರಂ|

03162014c ಜಗಾಮ ತ್ರಿದಿವಂ ಹೃಷ್ಟಃ ಸ್ತೂಯಮಾನೋ ಮಹರ್ಷಿಭಿಃ||

ಹೀಗೆ ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿ ಸಹಸ್ರಾಕ್ಷನು ಸಂತೋಷದಿಂದ ಸ್ತುತಿಸುತ್ತಿರುವ ಮಹರ್ಷಿಗಳೊಂದಿಗೆ ತ್ರಿದಿವಕ್ಕೆ ತೆರಳಿದನು.

03162015a ಧನೇಶ್ವರಗೃಹಸ್ಥಾನಾಂ ಪಾಂಡವಾನಾಂ ಸಮಾಗಮಂ|

03162015c ಶಕ್ರೇಣ ಯ ಇಮಂ ವಿದ್ವಾನಧೀಯೀತ ಸಮಾಹಿತಃ||

03162016a ಸಂವತ್ಸರಂ ಬ್ರಹ್ಮಚಾರೀ ನಿಯತಃ ಸಂಶಿತವ್ರತಃ|

03162016c ಸ ಜೀವೇತ ನಿರಾಬಾಧಃ ಸುಸುಖೀ ಶರದಾಂ ಶತಂ||

ಸಮಾಹಿತ ವಿಧ್ವಾಂಸರು ಒಂದು ವರ್ಷ ಬ್ರಹ್ಮಚಾರಿಗಳಾಗಿದ್ದು ನಿಯತ ಸಂಶಿತವ್ರತರಾಗಿದ್ದುಕೊಂಡು, ಧನೇಶ್ವರನ ಮನೆಯಲ್ಲಿ ತಂಗಿದ್ದ ಪಾಂಡವರ ಮತ್ತು ಶಕ್ರನ ಈ ಸಮಾಗಮದ ಕುರಿತು ಕೇಳುವವರು ನೂರು ವರ್ಷಗಳು ನಿರಾಬಾಧರಾಗಿ ಸುಖಿಗಳಾಗಿ ಜೀವಿಸುತ್ತಾರೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಇಂದ್ರಾಗಮನೇ ದ್ವಿಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಇಂದ್ರಾಗಮನದಲ್ಲಿ ನೂರಾಅರವತ್ತೆರಡನೆಯ ಅಧ್ಯಾಯವು.

Related image

Comments are closed.