Anushasana Parva: Chapter 90

ಅನುಶಾಸನ ಪರ್ವ: ದಾನಧರ್ಮ ಪರ್ವ

೯೦

ಶ್ರಾದ್ಧಗಳಲ್ಲಿ ಬ್ರಾಹ್ಮಣರ ಪರೀಕ್ಷೆ; ಪಂಕ್ತಿದೂಷಕ ಮತ್ತು ಪಂಕ್ತಿಪಾವನ ಬ್ರಾಹ್ಮಣರ ವರ್ಣನೆ (೧-೪೩).

13090001 ಯುಧಿಷ್ಠಿರ ಉವಾಚ|

13090001a ಕೀದೃಶೇಭ್ಯಃ ಪ್ರದಾತವ್ಯಂ ಭವೇಚ್ಚ್ರಾದ್ಧಂ ಪಿತಾಮಹ|

13090001c ದ್ವಿಜೇಭ್ಯಃ ಕುರುಶಾರ್ದೂಲ ತನ್ಮೇ ವ್ಯಾಖ್ಯಾತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಕುರುಶಾರ್ದೂಲ! ಎಂಥ ದ್ವಿಜರಿಗೆ ಶ್ರಾದ್ಧವನ್ನು ನೀಡಬೇಕು ಎನ್ನುವುದನ್ನು ನನಗೆ ಹೇಳಬೇಕು.”

13090002 ಭೀಷ್ಮ ಉವಾಚ|

13090002a ಬ್ರಾಹ್ಮಣಾನ್ನ ಪರೀಕ್ಷೇತ ಕ್ಷತ್ರಿಯೋ ದಾನಧರ್ಮವಿತ್|

13090002c ದೈವೇ ಕರ್ಮಣಿ ಪಿತ್ರ್ಯೇ ತು ನ್ಯಾಯ್ಯಮಾಹುಃ ಪರೀಕ್ಷಣಮ್||

ಭೀಷ್ಮನು ಹೇಳಿದನು: “ದಾನಧರ್ಮವಿದು ಕ್ಷತ್ರಿಯರು ದೇವಕಾರ್ಯಗಳಲ್ಲಿ ಬ್ರಾಹ್ಮಣರನ್ನು ಪರೀಕ್ಷಿಸಬಾರದು. ಆದರೆ ಪಿತೃಕಾರ್ಯಗಳಲ್ಲಿ ಅವರನ್ನು ಪರೀಕ್ಷಿಸುವುದು ನ್ಯಾಯಸಮ್ಮತವಾದುದು ಎಂದು ಹೇಳುತ್ತಾರೆ.

13090003a ದೇವತಾಃ ಪೂಜಯಂತೀಹ ದೈವೇನೈವೇಹ ತೇಜಸಾ|

13090003c ಉಪೇತ್ಯ ತಸ್ಮಾದ್ದೇವೇಭ್ಯಃ ಸರ್ವೇಭ್ಯೋ ದಾಪಯೇನ್ನರಃ||

ದೇವತೆಗಳು ದೈವ ತೇಜಸ್ಸಿನಿಂದ ಕೂಡಿದ್ದರೂ ಬ್ರಾಹ್ಮಣರನ್ನು ಪೂಜಿಸುತ್ತಾರೆ. ಆದುದರಿಂದ ದೇವತೆಗಳನ್ನುದ್ದೇಶಿಸಿ ನರನು ಸರ್ವ ಬ್ರಾಹ್ಮಣರಿಗೂ ದಾನಮಾಡಬೇಕು.

13090004a ಶ್ರಾದ್ಧೇ ತ್ವಥ ಮಹಾರಾಜ ಪರೀಕ್ಷೇದ್ಬ್ರಾಹ್ಮಣಾನ್ಬುಧಃ|

13090004c ಕುಲಶೀಲವಯೋರೂಪೈರ್ವಿದ್ಯಯಾಭಿಜನೇನ ಚ||

ಮಹಾರಾಜ! ಆದರೆ ಶ್ರಾದ್ಧಕ್ಕೆ ಆಹ್ವಾನಿಸುವಾಗ ತಿಳಿದವನು ಬ್ರಾಹ್ಮಣನ ಕುಲ, ಶೀಲ, ವಯಸ್ಸು, ರೂಪ, ವಿದ್ಯೆ ಮತ್ತು ವಂಶಜರನ್ನು ಪರೀಕ್ಷಿಸಬೇಕು.

13090005a ಏಷಾಮನ್ಯೇ ಪಂಕ್ತಿದೂಷಾಸ್ತಥಾನ್ಯೇ ಪಂಕ್ತಿಪಾವನಾಃ|

13090005c ಅಪಾಂಕ್ತೇಯಾಸ್ತು ಯೇ ರಾಜನ್ಕೀರ್ತಯಿಷ್ಯಾಮಿ ತಾನ್ಶೃಣು||

ಇವರಲ್ಲಿ ಕೆಲವರು ಪಂಕ್ತಿದೂಷಕರೂ ಮತ್ತು ಇನ್ನು ಕೆಲವರು ಪಂಕ್ತಿಪಾವನರೂ ಆಗಿರುತ್ತಾರೆ. ರಾಜನ್! ಅಪಾಂಕ್ತೇಯರ ಕುರಿತು ಹೇಳುತ್ತೇನೆ. ಅದನ್ನು ಕೇಳು.

13090006a ಕಿತವೋ ಭ್ರೂಣಹಾ ಯಕ್ಷ್ಮೀ ಪಶುಪಾಲೋ ನಿರಾಕೃತಿಃ|

13090006c ಗ್ರಾಮಪ್ರೇಷ್ಯೋ ವಾರ್ಧುಷಿಕೋ ಗಾಯನಃ ಸರ್ವವಿಕ್ರಯೀ||

13090007a ಅಗಾರದಾಹೀ ಗರದಃ ಕುಂಡಾಶೀ ಸೋಮವಿಕ್ರಯೀ|

13090007c ಸಾಮುದ್ರಿಕೋ ರಾಜಭೃತ್ಯಸ್ತೈಲಿಕಃ ಕೂಟಕಾರಕಃ||

13090008a ಪಿತ್ರಾ ವಿವದಮಾನಶ್ಚ ಯಸ್ಯ ಚೋಪಪತಿರ್ಗೃಹೇ|

13090008c ಅಭಿಶಸ್ತಸ್ತಥಾ ಸ್ತೇನಃ ಶಿಲ್ಪಂ ಯಶ್ಚೋಪಜೀವತಿ||

13090009a ಪರ್ವಕಾರಶ್ಚ ಸೂಚೀ ಚ ಮಿತ್ರಧ್ರುಕ್ಪಾರದಾರಿಕಃ|

13090009c ಅವ್ರತಾನಾಮುಪಾಧ್ಯಾಯಃ ಕಾಂಡಪೃಷ್ಠಸ್ತಥೈವ ಚ||

13090010a ಶ್ವಭಿರ್ಯಶ್ಚ ಪರಿಕ್ರಾಮೇದ್ಯಃ ಶುನಾ ದಷ್ಟ ಏವ ಚ|

13090010c ಪರಿವಿತ್ತಿಶ್ಚ ಯಶ್ಚ ಸ್ಯಾದ್ದುಶ್ಚರ್ಮಾ ಗುರುತಲ್ಪಗಃ|

13090010e ಕುಶೀಲವೋ ದೇವಲಕೋ ನಕ್ಷತ್ರೈರ್ಯಶ್ಚ ಜೀವತಿ||

[1]13090011a ಏತಾನಿಹ ವಿಜಾನೀಯಾದಪಾಂಕ್ತೇಯಾನ್ದ್ವಿಜಾಧಮಾನ್|

13090011c ಶೂದ್ರಾಣಾಮುಪದೇಶಂ ಚ ಯೇ ಕುರ್ವಂತ್ಯಲ್ಪಚೇತಸಃ||

ಜೂಜುಕೋರ, ಭ್ರೂಣಹತ್ಯೆಯನ್ನು ಮಾಡಿದವನು, ಕ್ಷಯರೋಗಿ, ಪಶುಪಾಲಕ, ಅವಿದ್ಯಾವಂತ, ಗ್ರಾಮಸೇವಕ, ಬಡ್ಡಿಯಿಂದ ಜೀವಿಸುವ, ಗಾಯಕ, ವಿವಿಧ ವಸ್ತುಗಳನ್ನು ಮಾರುವ, ಇತರರ ಮನೆಗೆ ಬೆಂಕಿಯನ್ನಿಟ್ಟ, ಕುಂಡ[2]ನ ಮನೆಯಲ್ಲಿ ಊಟಮಾಡಿದ, ಸೋಮಲತೆಯನ್ನು ಮಾರುವ, ಸಾಮುದ್ರಿಕಾಶಾಸ್ತ್ರದಿಂದ ಜೀವನವನ್ನು ನಿರ್ವಹಿಸುವ, ರಾಜಸೇವಕ, ಎಣ್ಣೆಯನ್ನು ಮಾರುವ, ಸುಳ್ಳುಸಾಕ್ಷಿಯನ್ನು ಹೇಳುವ, ತಂದೆಯೊಡನೆ ಜಗಳವಾಡಿದ, ಪತ್ನಿಯ ಉಪಪತಿಯನ್ನು ಮನೆಯಲ್ಲಿಟ್ಟುಕೊಂಡ, ಕಲಂಕಿತ ಕಳ್ಳ, ಶಿಲ್ಪವಿದ್ಯೆಯಿಂದಲೇ ಜೀವಿಸುವ, ಪರ್ವದಿನಗಳಲ್ಲಿ ಸ್ತ್ರೀಸಮಾಗಮವನ್ನು ಮಾಡುವ, ಚಾಡಿಕೋರ, ಮಿತ್ರದ್ರೋಹಿ, ಪರಸ್ತ್ರೀಲಂಪಟ, ವ್ರತಾನುಷ್ಠಾನರಹಿತ, ಅಧ್ಯಾಪಕ, ಆಯುಧಗಳನ್ನು ತಯಾರಿಸಿ ಮಾರಾಟಮಾಡುವ, ನಾಯಿಯ ಜೊತೆಯಲ್ಲಿ ತಿರುಗಾಡುವ, ನಾಯಿಯಿಂದ ಕಚ್ಚಿಸಿಕೊಂಡ, ಪರಿವಿತ್ತಿ[3], ಚರ್ಮರೋಗೀ, ಗುರುಪತ್ನಿಯೊಡನೆ ಸಂಭೋಗಿಸಿದ, ವೇಷಬದಲಿಸಿಕೊಳ್ಳುವ, ದೇವಸ್ಥಾನದ ಪೂಜೆಯಿಂದ ಜೀವಿಸುವ, ನಕ್ಷತ್ರಗಳ ಫಲಗಳನ್ನು ಹೇಳಿಕೊಂಡು ಜೀವಿಸುವ – ಈ ಎಲ್ಲ ಅಧಮ ವಿಪ್ರರೂ ಅಪಾಂಕ್ತೇಯರೆಂದು ತಿಳಿಯಬೇಕು. ಶೂದ್ರರಿಗೆ ವೇದೋಪದೇಶವನ್ನು ಮಾಡುವ ಮೂರ್ಖಬ್ರಾಹ್ಮಣರನ್ನೂ ಪಂಕ್ತಿಬಾಹರರೆಂದೇ ತಿಳಿಯಬೇಕು.

13090012a ಷಷ್ಟಿಂ ಕಾಣಃ ಶತಂ ಷಂಢಃ ಶ್ವಿತ್ರೀ ಯಾವತ್ ಪ್ರಪಶ್ಯತಿ|

13090012c ಪಂಕ್ತ್ಯಾಂ ಸಮುಪವಿಷ್ಟಾಯಾಂ ತಾವದ್ದೂಷಯತೇ ನೃಪ||

ನೃಪ! ಒಕ್ಕಣ್ಣನು ಪಂಕ್ತಿಯಲ್ಲಿರುವ ಅರುವತ್ತು ಜನರನ್ನೂ, ಷಂಢನು ನೂರು ಜನರನ್ನೂ, ತೊನ್ನುರೋಗವಿರುವವನು ತನ್ನ ಪಂಕ್ತಿಯಲ್ಲಿರುವ ಎಷ್ಟುಜನರನ್ನು ನೋಡುತ್ತಾನೋ ಅಷ್ಟು ಜನರನ್ನೂ ದೂಷಿತಗೊಳಿಸುತ್ತಾನೆ.

13090013a ಯದ್ವೇಷ್ಟಿತಶಿರಾ ಭುಂಕ್ತೇ ಯದ್ ಭುಂಕ್ತೇ ದಕ್ಷಿಣಾಮುಖಃ|

13090013c ಸೋಪಾನತ್ಕಶ್ಚ ಯದ್ಭುಂಕ್ತೇ ಸರ್ವಂ ವಿದ್ಯಾತ್ತದಾಸುರಮ್||

ತಲೆಯ ಮೇಲೆ ಮುಂಡಾಸನ್ನಿಟ್ಟುಕೊಂಡು ಮಾಡುವ ಭೋಜನ, ದಕ್ಷಿಣಾಭಿಮುಖವಾಗಿ ಕುಳಿತು ಮಾಡುವ ಭೋಜನ, ಪಾದರಕ್ಷೆಗಳನ್ನು ಧರಿಸಿಯೇ ಮಾಡುವ ಭೋಜನ ಇವೆಲ್ಲವೂ ಅಸುರಭೋಜನವೆಂದು ತಿಳಿಯಬೇಕು.

13090014a ಅಸೂಯತಾ ಚ ಯದ್ದತ್ತಂ ಯಚ್ಚ ಶ್ರದ್ಧಾವಿವರ್ಜಿತಮ್|

13090014c ಸರ್ವಂ ತದಸುರೇಂದ್ರಾಯ ಬ್ರಹ್ಮಾ ಭಾಗಮಕಲ್ಪಯತ್||

ಅಸೂಯೆಯಿಂದ ಮಾಡುವ ದಾನ, ಶ್ರದ್ಧೆಯಿಲ್ಲದೇ ಮಾಡುವ ದಾನ ಇವೆಲ್ಲವೂ ಅಸುರೇಂದ್ರರಿಗೆ ಎಂದು ಬ್ರಹ್ಮನು ವಿಭಜಿಸಿದ್ದಾನೆ.

13090015a ಶ್ವಾನಶ್ಚ ಪಂಕ್ತಿದೂಷಾಶ್ಚ ನಾವೇಕ್ಷೇರನ್ಕಥಂ ಚನ|

13090015c ತಸ್ಮಾತ್ಪರಿವೃತೇ ದದ್ಯಾತ್ತಿಲಾಂಶ್ಚಾನ್ವವಕೀರಯೇತ್||

ನಾಯಿಗಳು ಮತ್ತು ಪಂಕ್ತಿದೂಷಿತರು ಶ್ರಾದ್ಧವನ್ನು ಎಂದೂ ನೋಡಬಾರದು. ಆದುದರಿಂದಲೇ ಶ್ರಾದ್ಧವನ್ನು ಎಲ್ಲಕಡೆಗಳಿಂದಲೂ ಆವೃತವಾಗಿರುವ ಮತ್ತು ಸುತ್ತಲೂ ಎಳ್ಳನ್ನು ಚೆಲ್ಲಿರುವ ಸ್ಥಳದಲ್ಲಿ ಮಾಡಬೇಕು.

13090016a ತಿಲಾದಾನೇ ಚ ಕ್ರವ್ಯಾದಾ ಯೇ ಚ ಕ್ರೋಧವಶಾ ಗಣಾಃ[4]|

13090016c ಯಾತುಧಾನಾಃ ಪಿಶಾಚಾಶ್ಚ ವಿಪ್ರಲುಂಪಂತಿ ತದ್ಧವಿಃ||

ತಿಲವಿಲ್ಲದೇ ಮಾಡಿದ ಶ್ರಾದ್ಧವನ್ನು ಕ್ರವ್ಯಾದಗಳು, ಕ್ರೋಧವಶ ಗಣಗಳು, ಯಾತುಧಾನರು ಮತ್ತು ಪಿಶಾಚಿಗಳು ಅಪಹರಿಸುತ್ತಾರೆ.

13090017a ಯಾವದ್ಧ್ಯಪಂಕ್ತ್ಯಃ ಪಂಕ್ತ್ಯಾಂ ವೈ ಭುಂಜಾನಾನನುಪಶ್ಯತಿ|

13090017c ತಾವತ್ಫಲಾದ್ ಭ್ರಂಶಯತಿ ದಾತಾರಂ ತಸ್ಯ ಬಾಲಿಶಮ್||

ಅಪಂಕ್ತ್ಯನು ತನ್ನ ಪಂಕ್ತಿಯಲ್ಲಿ ಊಟಮಾಡುವ ಎಷ್ಟು ಜನರನ್ನು ನೋಡುತ್ತಾನೋ ಅವರಿಗೆ ಶ್ರಾದ್ಧನೀಡಿದ ಫಲವನ್ನು ಮೂರ್ಖತನದಿಂದ ತನ್ನನ್ನು ಆಹ್ವಾನಿಸಿದವನಿಗೆ ಸೇರದಂತೆ ಮಾಡುತ್ತಾನೆ.

13090018a ಇಮೇ ತು ಭರತಶ್ರೇಷ್ಠ ವಿಜ್ಞೇಯಾಃ ಪಂಕ್ತಿಪಾವನಾಃ|

13090018c ಯೇ ತ್ವತಸ್ತಾನ್ ಪ್ರವಕ್ಷ್ಯಾಮಿ ಪರೀಕ್ಷಸ್ವೇಹ ತಾನ್ದ್ವಿಜಾನ್||

ಭರತಶ್ರೇಷ್ಠ! ಇನ್ನು ಮುಂದೆ ನಾನು ಹೇಳುವವರನ್ನು ಪಂಕ್ತಿಪಾವನರೆಂದು ತಿಳಿಯಬೇಕು. ಅಂತಹ ದ್ವಿಜರನ್ನು ಪರೀಕ್ಷಿಸಿ ನಿಶ್ಚಯಿಸಿ ಶ್ರಾದ್ಧಕ್ಕೆ ಆಮಂತ್ರಿಸಬೇಕು.

13090019a ವೇದವಿದ್ಯಾವ್ರತಸ್ನಾತಾ ಬ್ರಾಹ್ಮಣಾಃ ಸರ್ವ ಏವ ಹಿ|

[5]13090019c ಪಾಂಕ್ತೇಯಾನ್ಯಾಂಸ್ತು ವಕ್ಷ್ಯಾಮಿ ಜ್ಞೇಯಾಸ್ತೇ ಪಂಕ್ತಿಪಾವನಾಃ||

ವೇದವ್ರತಗಳಿಂದ ಸ್ನಾತಕರಾದ ಸರ್ವ ಬ್ರಾಹ್ಮಣರೂ ಪಂಕ್ತಿಪಾವನರೆಂದು ತಿಳಿಯಬೇಕು. ಈಗ ನಾನು ಪಾಂಕ್ತೇಯರ ಕುರಿತು ಹೇಳುತ್ತೇನೆ.

13090020a ತ್ರಿಣಾಚಿಕೇತಃ ಪಂಚಾಗ್ನಿಸ್ತ್ರಿಸುಪರ್ಣಃ ಷಡಂಗವಿತ್|

13090020c ಬ್ರಹ್ಮದೇಯಾನುಸಂತಾನಶ್ಚಂದೋಗೋ ಜ್ಯೇಷ್ಠಸಾಮಗಃ||

13090021a ಮಾತಾಪಿತ್ರೋರ್ಯಶ್ಚ ವಶ್ಯಃ ಶ್ರೋತ್ರಿಯೋ ದಶಪೂರುಷಃ[6]|

ತ್ರಿಣಾಚಿಕೇತ[7]ವೆಂಬ ಮಂತ್ರವನ್ನು ಪಠಿಸುವವನು, ಪಂಚಾಗ್ನಿಗಳನ್ನು[8] ಪೂಜಿಸುವವನು, ತ್ರಿಸುಪರ್ಣವೆಂಬ[9] ಮಂತ್ರವನ್ನು ಪಠಿಸುವವನು, ಷಡಂಗಗಳನ್ನು[10] ತಿಳಿದಿರುವವನು, ವೇದವಿದರ ಪರಂಪರೆಯಲ್ಲಿ ಹುಟ್ಟಿದವನು, ಸಾಮವನ್ನು ಹಾಡುವವನು, ಜ್ಯೇಷ್ಠಸಾಮವನ್ನು[11] ಹಾಡುವವನು, ಮಾತಾಪಿತೃಗಳಿಗೆ ವಿಧೇಯನಾಗಿರುವವನು ಮತ್ತು ಹತ್ತು ತಲೆಮಾರುಗಳಿಂದ ಶ್ರೋತ್ರೀಯನಾಗಿರುವವನು – ಇವರು ಪಂಕ್ತಿಪಾವನರು.

13090021c ಋತುಕಾಲಾಭಿಗಾಮೀ ಚ ಧರ್ಮಪತ್ನೀಷು ಯಃ ಸದಾ|

13090021e ವೇದವಿದ್ಯಾವ್ರತಸ್ನಾತೋ ವಿಪ್ರಃ ಪಂಕ್ತಿಂ ಪುನಾತ್ಯುತ||

ಧರ್ಮಪತ್ನಿಯೊಡನೆ ಸದಾ ಋತುಕಾಲದಲ್ಲಿ ಮಾತ್ರ ಸಮಾಗಮಿಸುವ ವೇದವಿದ್ಯಾವ್ರತಸ್ನಾತಕ ವಿಪ್ರನು ಪಂಕ್ತಿಯನ್ನು ಪವಿತ್ರಗೊಳಿಸುತ್ತಾನೆ ಎಂದಿದೆ.

13090022a ಅಥರ್ವಶಿರಸೋಽಧ್ಯೇತಾ ಬ್ರಹ್ಮಚಾರೀ ಯತವ್ರತಃ|

13090022c ಸತ್ಯವಾದೀ ಧರ್ಮಶೀಲಃ ಸ್ವಕರ್ಮನಿರತಶ್ಚ ಯಃ||

13090023a ಯೇ ಚ ಪುಣ್ಯೇಷು ತೀರ್ಥೇಷು ಅಭಿಷೇಕಕೃತಶ್ರಮಾಃ|

13090023c ಮಖೇಷು ಚ ಸಮಂತ್ರೇಷು ಭವಂತ್ಯವಭೃಥಾಪ್ಲುತಾಃ||

13090024a ಅಕ್ರೋಧನಾ ಅಚಪಲಾಃ ಕ್ಷಾಂತಾ ದಾಂತಾ ಜಿತೇಂದ್ರಿಯಾಃ|

13090024c ಸರ್ವಭೂತಹಿತಾ ಯೇ ಚ ಶ್ರಾದ್ಧೇಷ್ವೇತಾನ್ನಿಮಂತ್ರಯೇತ್|

13090024e ಏತೇಷು ದತ್ತಮಕ್ಷಯ್ಯಮೇತೇ ವೈ ಪಂಕ್ತಿಪಾವನಾಃ||

ಅಥರ್ವಣವೇದವನ್ನು ಅಧ್ಯಯನಮಾಡಿರುವ, ಬ್ರಹ್ಮಚಾರೀ, ಯತವ್ರತ, ಸತ್ಯವಾದೀ, ಧರ್ಮಶೀಲ, ಸ್ವಕರ್ಮನಿರತ, ಪುಣ್ಯತೀರ್ಥಗಳಲ್ಲಿ ಸ್ನಾನಮಾಡಲು ಶ್ರಮಿಸಿರುವ, ಮಂತ್ರಯುಕ್ತ ಯಜ್ಞಗಳಲ್ಲಿ ಅವಭೃತಸ್ನಾನಮಾಡಿರುವ, ಕ್ರೋಧರಹಿತ, ಚಾಪಲ್ಯವಿಲ್ಲದ, ಕ್ಷಮಾಶೀಲ, ಜಿತೇಂದ್ರಿಯ, ಸರ್ವಭೂತಹಿತರನ್ನು ಶ್ರಾದ್ಧಕ್ಕೆ ನಿಮಂತ್ರಿಸಬೇಕು. ಇವರೆಲ್ಲರೂ ಪಂಕ್ತಿಪಾವನರು ಮತ್ತು ಇವರಿಗೆ ನೀಡುವ ದಾನವು ಅಕ್ಷಯ ಫಲಗಳನ್ನು ನೀಡುತ್ತದೆ.

13090025a ಇಮೇ ಪರೇ ಮಹಾರಾಜ ವಿಜ್ಞೇಯಾಃ ಪಂಕ್ತಿಪಾವನಾಃ|

13090025c ಯತಯೋ ಮೋಕ್ಷಧರ್ಮಜ್ಞಾ ಯೋಗಾಃ ಸುಚರಿತವ್ರತಾಃ||

13090026a ಯೇ ಚೇತಿಹಾಸಂ ಪ್ರಯತಾಃ ಶ್ರಾವಯಂತಿ ದ್ವಿಜೋತ್ತಮಾನ್|

13090026c ಯೇ ಚ ಭಾಷ್ಯವಿದಃ ಕೇ ಚಿದ್ಯೇ ಚ ವ್ಯಾಕರಣೇ ರತಾಃ||

13090027a ಅಧೀಯತೇ ಪುರಾಣಂ ಯೇ ಧರ್ಮಶಾಸ್ತ್ರಾಣ್ಯಥಾಪಿ ಚ|

13090027c ಅಧೀತ್ಯ ಚ ಯಥಾನ್ಯಾಯಂ ವಿಧಿವತ್ತಸ್ಯ ಕಾರಿಣಃ||

13090028a ಉಪಪನ್ನೋ ಗುರುಕುಲೇ ಸತ್ಯವಾದೀ ಸಹಸ್ರದಃ|

13090028c ಅಗ್ರ್ಯಃ ಸರ್ವೇಷು ವೇದೇಷು ಸರ್ವಪ್ರವಚನೇಷು ಚ||

13090029a ಯಾವದೇತೇ ಪ್ರಪಶ್ಯಂತಿ ಪಂಕ್ತ್ಯಾಸ್ತಾವತ್ಪುನಂತ್ಯುತ|

13090029c ತತೋ ಹಿ ಪಾವನಾತ್ಪಂಕ್ತ್ಯಾಃ ಪಂಕ್ತಿಪಾವನ ಉಚ್ಯತೇ||

ಮಹಾರಾಜ! ಈಗ ಹೇಳುವ ಇತರರೂ ಪಂಕ್ತಿಪಾವನರೆಂದು ತಿಳಿಯಬೇಕು. ಮೋಕ್ಷಧರ್ಮಜ್ಞ ಯತಿಗಳು, ಯೋಗಿಗಳು, ಉತ್ತಮ ವ್ರತಗಳನ್ನಾಚರಿಸುವವರು, ದ್ವಿಜೋತ್ತಮರಿಗೆ ವಿನಯದಿಂದ ಇತಿಹಾಸವನ್ನು ಹೇಳುವವರು, ವೇದಭಾಷ್ಯವನ್ನು ತಿಳಿದವರು, ವ್ಯಾಕರಣದ ಅಧ್ಯಯನದಲ್ಲಿ ನಿರತರಾದವರು, ಪುರಾಣಗಳನ್ನು ಮತ್ತು ಧರ್ಮಶಾಸ್ತ್ರಗಳನ್ನು ಅಧ್ಯಯನಮಾಡಿದವರು ಮತ್ತು ಅಧ್ಯಯನ ಮಾಡಿದುದನ್ನು ವಿಧಿವತ್ತಾಗಿ ಮತ್ತು ಯಥಾನ್ಯಾಯವಾಗಿ ಆಚರಿಸುವವರು, ಗುರುಕುಲದಲ್ಲಿ ನಿಯತ ಕಾಲದವರೆಗೆ ಅಧ್ಯಯನಮಾಡಿದವರು, ಸಾವಿರಾರು ಸಂದರ್ಭಗಳಲ್ಲಿ ಸತ್ಯವಾದಿಗಳೆನಿಸಿಕೊಂಡವರು, ಸರ್ವ ವೇದಗಳಲ್ಲಿ ಮತ್ತು ಸರ್ವಪ್ರವಚನಗಳಲ್ಲಿ ಅಗ್ರಗಣ್ಯರೆನಿಸಿದವರು ಇವರೆಲ್ಲರೂ ಪಂಕ್ತಿಪಾವನರೆಂದು ಹೇಳುತ್ತಾರೆ. ಇವರು ತಮ್ಮ ಪಂಕ್ತಿಯಲ್ಲಿ ಎಷ್ಟು ಜನರನ್ನು ನೋಡುತ್ತಾರೋ ಅಷ್ಟು ಜನರನ್ನೂ ಪಾವನಗೊಳಿಸುತ್ತಾರೆ. ಪಂಕ್ತಿಯಲ್ಲಿರುವವರನ್ನು ಪಾವನಗೊಳಿಸುವುದರಿಂದ ಇವರನ್ನು ಪಂಕ್ತಿಪಾವನರೆಂದು ಹೇಳುತ್ತಾರೆ.

13090030a ಕ್ರೋಶಾದರ್ಧತೃತೀಯಾತ್ತು ಪಾವಯೇದೇಕ ಏವ ಹಿ|

13090030c ಬ್ರಹ್ಮದೇಯಾನುಸಂತಾನ ಇತಿ ಬ್ರಹ್ಮವಿದೋ ವಿದುಃ||

ಬ್ರಹ್ಮಜ್ಞಾನಿಗಳ ವಂಶದಲ್ಲಿ ಹುಟ್ಟಿರುವ ಬ್ರಾಹ್ಮಣನೊಬ್ಬನೇ ಮುರುವರೆ ಕ್ರೋಶಗಳಷ್ಟು[12] ದೂರದ ವರೆಗೆ ಇರುವ ಪರಿಸರವನ್ನು ಪಾವನಗೊಳಿಸುತ್ತಾನೆ ಎಂದು ಬ್ರಹ್ಮವಿದರು ತಿಳಿದಿದ್ದಾರೆ.

13090031a ಅನೃತ್ವಿಗನುಪಾಧ್ಯಾಯಃ ಸ ಚೇದಗ್ರಾಸನಂ ವ್ರಜೇತ್|

13090031c ಋತ್ವಿಗ್ಭಿರನನುಜ್ಞಾತಃ ಪಂಕ್ತ್ಯಾ ಹರತಿ ದುಷ್ಕೃತಮ್||

ಋತ್ವಿಜನಲ್ಲದ್ದಿದ್ದರೂ ಮತ್ತು ಉಪಾಧ್ಯಾಯನಲ್ಲದಿದ್ದರೂ ಋತ್ವಿಜರಿಂದ ಅನುಜ್ಞೆಯನ್ನು ಪಡೆದು ಅಗ್ರಾಸವನ್ನು ಪಡೆದಿರುವವನು ಕೂಡ ಪಂಕ್ತಿಯಲ್ಲಿ ದೋಷವನ್ನು ಹರಣಮಾಡುತ್ತಾನೆ.

13090032a ಅಥ ಚೇದ್ವೇದವಿತ್ಸರ್ವೈಃ ಪಂಕ್ತಿದೋಷೈರ್ವಿವರ್ಜಿತಃ|

13090032c ನ ಚ ಸ್ಯಾತ್ಪತಿತೋ ರಾಜನ್ಪಂಕ್ತಿಪಾವನ ಏವ ಸಃ||

ರಾಜನ್! ವೇದವಿದನಾಗಿದ್ದು ಸಕಲವಿಧದ ಪಂಕ್ತಿದೋಷಗಳಿಂದ ವಿವರ್ಜಿತನಾದವನೂ ಪತಿತನಾಗಿಲ್ಲದೇ ಇದ್ದರೆ ಪಂಕ್ತಿಪಾವನನಾಗುತ್ತಾನೆ.

13090033a ತಸ್ಮಾತ್ಸರ್ವಪ್ರಯತ್ನೇನ ಪರೀಕ್ಷ್ಯಾಮಂತ್ರಯೇದ್ದ್ವಿಜಾನ್|

13090033c ಸ್ವಕರ್ಮನಿರತಾನ್ದಾಂತಾನ್ಕುಲೇ ಜಾತಾನ್ಬಹುಶ್ರುತಾನ್||

ಆದುದರಿಂದ ಸರ್ವಪ್ರಯತ್ನದಿಂದಲೂ ಪರೀಕ್ಷಿಸಿಯೇ ದ್ವಿಜರನ್ನು ಶ್ರಾದ್ಧಕ್ಕೆ ಆಮಂತ್ರಿಸಬೇಕು. ಸ್ವಕರ್ಮನಿರತರನ್ನೂ, ಸತ್ಕುಲಪ್ರಸೂತರನ್ನೂ ಮತ್ತು ಬಹುಶ್ರುತರನ್ನೂ ಆಹ್ವಾನಿಸಬೇಕು.

13090034a ಯಸ್ಯ ಮಿತ್ರಪ್ರಧಾನಾನಿ ಶ್ರಾದ್ಧಾನಿ ಚ ಹವೀಂಷಿ ಚ|

13090034c ನ ಪ್ರೀಣಾತಿ ಪಿತೄನ್ದೇವಾನ್ಸ್ವರ್ಗಂ ಚ ನ ಸ ಗಚ್ಚತಿ||

ಮಿತ್ರರೇ ಪ್ರಧಾನರಾಗಿರುವ ಶ್ರಾದ್ಧಗಳು ಮತ್ತು ಹವಿಸ್ಸುಗಳು ಪಿತೃಗಳನ್ನಾಗಲೀ ದೇವತೆಗಳನ್ನಾಗಲೀ ತೃಪ್ತಿಗೊಳಿಸುವುದಿಲ್ಲ. ಅಂತಹ ಶ್ರಾದ್ಧಕರ್ತನು ಸ್ವರ್ಗಕ್ಕೂ ಹೋಗುವುದಿಲ್ಲ.

13090035a ಯಶ್ಚ ಶ್ರಾದ್ಧೇ ಕುರುತೇ ಸಂಗತಾನಿ

ನ ದೇವಯಾನೇನ ಪಥಾ ಸ ಯಾತಿ|

13090035c ಸ ವೈ ಮುಕ್ತಃ ಪಿಪ್ಪಲಂ ಬಂಧನಾದ್ವಾ

ಸ್ವರ್ಗಾಲ್ಲೋಕಾಚ್ಚ್ಯವತೇ ಶ್ರಾದ್ಧಮಿತ್ರಃ||

ಶ್ರಾದ್ಧದಲ್ಲಿ ಬ್ರಾಹ್ಮಣನಿಗೆ ಭೋಜನಮಾಡಿಸಿ ಅವನೊಡನೆ ಸ್ನೇಹವನ್ನು ಬೆಳೆಸುವವನು ದೇವಯಾನದಲ್ಲಿ ಪರಲೋಕಕ್ಕೆ ಹೋಗುವುದಿಲ್ಲ. ಶ್ರಾದ್ಧದ ಮೂಲಕ ಮಿತ್ರತ್ವವನ್ನು ಬೆಳೆಸುವವರು ಅಶ್ವತ್ಥದ ಫಲವು ತೊಟ್ಟಿನಿಂದ ಕಳಚಿ ಬೀಳುವಂತೆ ಸ್ವರ್ಗದಿಂದ ಚ್ಯುತರಾಗುತ್ತಾರೆ.

13090036a ತಸ್ಮಾನ್ಮಿತ್ರಂ ಶ್ರಾದ್ಧಕೃನ್ನಾದ್ರಿಯೇತ

ದದ್ಯಾನ್ಮಿತ್ರೇಭ್ಯಃ ಸಂಗ್ರಹಾರ್ಥಂ ಧನಾನಿ|

13090036c ಯಂ ಮನ್ಯತೇ ನೈವ ಶತ್ರುಂ ನ ಮಿತ್ರಂ

ತಂ ಮಧ್ಯಸ್ಥಂ ಭೋಜಯೇದ್ಧವ್ಯಕವ್ಯೇ||

ಆದುದರಿಂದ ಶ್ರಾದ್ಧಕರ್ಮದಲ್ಲಿ ಮಿತ್ರನನ್ನು ನಿಮಂತ್ರಿಸಬಾರದು. ಮಿತ್ರಸಂಗ್ರಹಕ್ಕಾಗಿ ಹಣವನ್ನಾದರೂ ಕೊಡಬಹುದು. ಅದರೆ ಹವ್ಯ-ಕವ್ಯಗಳಲ್ಲಿ ಮಿತ್ರ ಅಥವಾ ಶತ್ರುವೆಂಬ ಭಾವನೆಯಿಲ್ಲದ ಮಧ್ಯಸ್ಥನನ್ನೇ ಕರೆದು ಭೋಜನಮಾಡಿಸಬೇಕು.

13090037a ಯಥೋಷರೇ ಬೀಜಮುಪ್ತಂ ನ ರೋಹೇನ್

ನ ಚಾಸ್ಯೋಪ್ತಾ ಪ್ರಾಪ್ನುಯಾದ್ಬೀಜಭಾಗಮ್|

13090037c ಏವಂ ಶ್ರಾದ್ಧಂ ಭುಕ್ತಮನರ್ಹಮಾಣೈರ್

ನ ಚೇಹ ನಾಮುತ್ರ ಫಲಂ ದದಾತಿ||

ಚೌಳಿರುವ ಭೂಮಿಯಲ್ಲಿ ಬಿತ್ತಿದ ಬೀಜವು ಬೆಳೆಯುವುದಿಲ್ಲ, ಬಿತ್ತಿದವನಿಗೆ ಬೀಜವೂ ಸಿಗುವುದಿಲ್ಲ. ಅದೇ ರೀತಿ ಅನರ್ಹರಿಗೆ ನೀಡಿದ ಶ್ರಾದ್ಧಭೋಜನವು ಶ್ರಾದ್ಧಕರ್ತೃವಿಗೆ ಇಹದಲ್ಲಿಯಾಗಲೀ ಪರದಲ್ಲಿಯಾಗಲೀ ಫಲವನ್ನು ನೀಡುವುದಿಲ್ಲ.

13090038a ಬ್ರಾಹ್ಮಣೋ ಹ್ಯನಧೀಯಾನಸ್ತೃಣಾಗ್ನಿರಿವ ಶಾಮ್ಯತಿ|

13090038c ತಸ್ಮೈ ಶ್ರಾದ್ಧಂ ನ ದಾತವ್ಯಂ ನ ಹಿ ಭಸ್ಮನಿ ಹೂಯತೇ||

ಹುಲ್ಲಿಗೆ ಬಿದ್ದ ಬೆಂಕಿಯು ಅದನ್ನು ಬೇಗ ನಾಶಮಾಡುವಂತೆ ಸ್ವಾಧ್ಯಾಯಹೀನನಾದ ಬ್ರಾಹ್ಮಣನು ಬೇಗನೇ ತೇಜೋಹೀನನಾಗುತ್ತಾನೆ. ಆದುದರಿಂದ ಅಧ್ಯಯನವನ್ನು ಮಾಡದೇ ಇರುವವರನ್ನು ಶ್ರಾದ್ಧಕ್ಕೆ ಆಹ್ವಾನಿಸಬಾರದು. ಯಾರೇ ಆಗಲೀ ಬೂದಿಯಲ್ಲಿ ಹೋಮಮಾಡುವುದಿಲ್ಲ ತಾನೇ?

13090039a ಸಂಭೋಜನೀ ನಾಮ ಪಿಶಾಚದಕ್ಷಿಣಾ

ಸಾ ನೈವ ದೇವಾನ್ನ ಪಿತೄನುಪೈತಿ|

13090039c ಇಹೈವ ಸಾ ಭ್ರಾಮ್ಯತಿ ಕ್ಷೀಣಪುಣ್ಯಾ

ಶಾಲಾಂತರೇ ಗೌರಿವ ನಷ್ಟವತ್ಸಾ||

ಸಂಭೋಜಿನೀ[13] ಅಥವಾ ಪರಸ್ಪರರ ಶ್ರಾದ್ಧಗಳಲ್ಲಿ ನಿಮಂತ್ರಿತರಾಗಿ ವಿನಿಮಯ ಮಾಡಿಕೊಳ್ಳುವ ದಕ್ಷಿಣೆಯನ್ನು ಪಿಶಾಚದಕ್ಷಿಣೆ ಎನ್ನುತ್ತಾರೆ. ಇದರಿಂದ ಶ್ರಾದ್ಧದ ಹವಿಸ್ಸು ದೇವತೆಗಳನ್ನಾಗಲೀ ಪಿತೃಗಳನ್ನಾಗಲೀ ತಲುಪುವುದಿಲ್ಲ.

13090040a ಯಥಾಗ್ನೌ ಶಾಂತೇ ಘೃತಮಾಜುಹೋತಿ

ತನ್ನೈವ ದೇವಾನ್ನ ಪಿತೄನುಪೈತಿ|

13090040c ತಥಾ ದತ್ತಂ ನರ್ತನೇ ಗಾಯನೇ ಚ

ಯಾಂ ಚಾನೃಚೇ ದಕ್ಷಿಣಾಮಾವೃಣೋತಿ||

13090041a ಉಭೌ ಹಿನಸ್ತಿ ನ ಭುನಕ್ತಿ ಚೈಷಾ

ಯಾ ಚಾನೃಚೇ ದಕ್ಷಿಣಾ ದೀಯತೇ ವೈ|

13090041c ಆಘಾತನೀ ಗರ್ಹಿತೈಷಾ ಪತಂತೀ

ತೇಷಾಂ ಪ್ರೇತಾನ್ಪಾತಯೇದ್ದೇವಯಾನಾತ್||

ಅಗ್ನಿಯು ಆರಿಹೋಗುವಾಗ ಮಾಡುವ ಘೃತಹೋಮವು ದೇವತೆಗಳಿಗೂ ಸೇರುವುದಿಲ್ಲ, ಪಿತೃಗಳಿಗೂ ಸೇರುವುದಿಲ್ಲ. ಹಾಗೆಯೇ ನರ್ತಕನಿಗೂ, ಗಾಯಕನಿಗೂ ಮತ್ತು ಸುಳ್ಳುಹೇಳುವವನಿಗೂ ನೀಡುವ ದಕ್ಷಿಣೆಗಳು ವ್ಯರ್ಥವಾಗುತ್ತವೆ. ಅಪಾತ್ರನಿಗೆ ಕೊಟ್ಟ ದಕ್ಷಿಣೆಯು ಕೊಟ್ಟವನಿಗೂ ಮತ್ತು ಅದನ್ನು ತೆಗೆದುಕೊಂಡವನಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಇಬ್ಬರನ್ನೂ ವಿನಾಶಗೊಳಿಸುತ್ತದೆ. ಇಷ್ಟು ಮಾತ್ರವಲ್ಲದೇ ಆ ಆಘಾತವನ್ನುಂಟುಮಾಡುವ ಮತ್ತು ಅತಿನಿಂದಿತ ದಕ್ಷಿಣೆಯು ಕೊಟ್ಟವನ ಪಿತೃಗಳನ್ನು ದೇವಯಾನದಿಂದ ಬೀಳಿಸುತ್ತದೆ.

13090042a ಋಷೀಣಾಂ ಸಮಯಂ ನಿತ್ಯಂ ಯೇ ಚರಂತಿ ಯುಧಿಷ್ಠಿರ|

13090042c ನಿಶ್ಚಿತಾಃ ಸರ್ವಧರ್ಮಜ್ಞಾಸ್ತಾನ್ದೇವಾ ಬ್ರಾಹ್ಮಣಾನ್ವಿದುಃ||

ಯುಧಿಷ್ಠಿರ! ಋಷಿಗಳು ಹೇಳಿರುವ ಧರ್ಮಮಾರ್ಗದಲ್ಲಿಯೇ ಯಾವಾಗಲೂ ನಡೆಯುವ, ನಿಶ್ಚಯಜ್ಞಾನವುಳ್ಳ, ಮತ್ತು ಸಂಪೂರ್ಣಧರ್ಮವನ್ನು ತಿಳಿದಿರುವವರೇ ಬ್ರಾಹ್ಮಣರೆಂದು ದೇವತೆಗಳು ತಿಳಿದಿರುತ್ತಾರೆ.

13090043a ಸ್ವಾಧ್ಯಾಯನಿಷ್ಠಾ ಋಷಯೋ ಜ್ಞಾನನಿಷ್ಠಾಸ್ತಥೈವ ಚ|

13090043c ತಪೋನಿಷ್ಠಾಶ್ಚ ಬೋದ್ಧವ್ಯಾಃ ಕರ್ಮನಿಷ್ಠಾಶ್ಚ ಭಾರತ||

ಭಾರತ! ಋಷಿಗಳಲ್ಲಿ ಕೆಲವರು ಸ್ವಾಧ್ಯಾಯನಿಷ್ಠರಾಗಿರುತ್ತಾರೆ. ಕೆಲವರು ಜ್ಞಾನನಿಷ್ಠರಾಗಿರುತ್ತಾರೆ. ಕೆಲವರು ತಪೋನಿಷ್ಠರಾಗಿರುತ್ತಾನೆ. ಮತ್ತು ಕೆಲವರು ಕರ್ಮನಿಷ್ಠರಾಗಿರುತ್ತಾರೆ ಎಂದು ತಿಳಿಯಬೇಕು.

13090044a ಕವ್ಯಾನಿ ಜ್ಞಾನನಿಷ್ಠೇಭ್ಯಃ ಪ್ರತಿಷ್ಠಾಪ್ಯಾನಿ ಭಾರತ|

13090044c ತತ್ರ ಯೇ ಬ್ರಾಹ್ಮಣಾಃ ಕೇ ಚಿನ್ನ ನಿಂದತಿ ಹಿ ತೇ ವರಾಃ[14]||

ಭಾರತ! ಶ್ರಾದ್ಧಗಳಿಗೆ ಜ್ಞಾನನಿಷ್ಠರನ್ನು ಕರೆಯಬೇಕು. ಬ್ರಾಹ್ಮಣರನ್ನು ಯಾವರೀತಿಯಲ್ಲೂ ನಿಂದಿಸದೇ ಇರುವವರು ಶ್ರೇಷ್ಠರು.

13090045a ಯೇ ತು ನಿಂದಂತಿ ಜಲ್ಪೇಷು ನ ತಾನ್ಶ್ರಾದ್ಧೇಷು ಭೋಜಯೇತ್|

13090045c ಬ್ರಾಹ್ಮಣಾ ನಿಂದಿತಾ ರಾಜನ್ ಹನ್ಯುಸ್ತ್ರಿಪುರುಷಂ ಕುಲಮ್||

13090046a ವೈಖಾನಸಾನಾಂ ವಚನಮೃಷೀಣಾಂ ಶ್ರೂಯತೇ ನೃಪ|

13090046c ದೂರಾದೇವ ಪರೀಕ್ಷೇತ ಬ್ರಾಹ್ಮಣಾನ್ ವೇದಪಾರಗಾನ್|

13090046e ಪ್ರಿಯಾನ್ವಾ ಯದಿ ವಾ ದ್ವೇಷ್ಯಾಂಸ್ತೇಷು ತಚ್ಚ್ರಾದ್ಧಮಾವಪೇತ್||

ಮಾತನಾಡುವಾಗ ಬ್ರಾಹ್ಮಣರನ್ನು ನಿಂದಿಸುವವರನ್ನು ಶ್ರಾದ್ಧಭೋಜನಕ್ಕೆ ಕರೆಯಬಾರದು. ರಾಜನ್! ನೃಪ! ವೈಖಾನಸ ಋಷಿಗಳು ಈ ವಿಷಯದಲ್ಲಿ ಹೀಗೆ ಹೇಳಿದ್ದಾರೆ: “ನಿಂದಿತರಾದ ಬ್ರಾಹ್ಮಣರು ನಿಂದಿಸಿದವನ ಮುಂದಿನ ಮೂರು ತಲೆಮಾರುಗಳನ್ನು ನಾಶಪಡಿಸುತ್ತಾರೆ. ವೇದಪಾರಗ ಬ್ರಾಹ್ಮಣರನ್ನು ದೂರದಿಂದಲೇ ಪರೀಕ್ಷಿಸಬೇಕು. ವೇದಜ್ಞನು ಪ್ರಿಯನಾಗಿರಲಿ ಅಪ್ರಿಯನಾಗಿರಲಿ ಅವನನ್ನು ಶ್ರಾದ್ಧಭೋಜನಕ್ಕೆ ನಿಮಂತ್ರಿಸಬೇಕು.”

13090047a ಯಃ ಸಹಸ್ರಂ ಸಹಸ್ರಾಣಾಂ ಭೋಜಯೇದನೃಚಾಂ ನರಃ|

13090047c ಏಕಸ್ತಾನ್ಮಂತ್ರವಿತ್ಪ್ರೀತಃ ಸರ್ವಾನರ್ಹತಿ ಭಾರತ||

ಭಾರತ! ಅಪಾತ್ರರಾದ ಹತ್ತು ಲಕ್ಷಜನರಿಗೆ ಭೋಜನಮಾಡಿಸುವುದು ವ್ಯರ್ಥವಾಗುತ್ತದೆ. ಮಂತ್ರವಿದನಾದ ಒಬ್ಬನೇ ಬ್ರಾಹ್ಮಣನು ಲಕ್ಷಮಂದಿ ಅಪಾತ್ರರಿಗೆ ವೆಚ್ಚಮಾಡಿದ ಧನವನ್ನು ಪಡೆಯಲು ಸಮರ್ಥನಾಗಿರುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಶ್ರಾದ್ಧಕಲ್ಪೇ ನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ತೊಂಭತ್ತನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಈದೃಷೈರ್ಬ್ರಾಹ್ಮಣೈರ್ಭುಕ್ರಮಪಾಂಕೇಯೈರ್ಯುಧಿಷ್ಠಿರ| ರಕ್ಷಾಂಸಿ ಗಚ್ಛತೇ ಹವ್ಯಮಿತ್ಯಾಹುರ್ಬ್ರಹ್ಮವಾದಿನಃ|| ಶ್ರಾದ್ಧಂ ಭುಕ್ತ್ವಾ ತ್ವಧೀಯೀತ ವೃಷಲೀತಲ್ಪಗಶ್ಚ ಯಃ| ಪುರೀಷೇ ತಸ್ಯ ತೇ ಮಾಂಸಂ ಪಿತರಸ್ತಸ್ಯ ಶೇರತೇ|| ಸೋಮವಿಕ್ರಯಿಣೇ ವಿಷ್ಠಾ ಭಿಷಜೇ ಪೂಯಶೋಣಿತಮ್| ನಷ್ಟಂ ದೇವಲಕೇ ದತ್ತಮಪ್ರತಿಷ್ಠಂ ಚ ವಾರ್ಧುಷೇ|| ಯತ್ತು ವಾಣಿಜಕೇ ದತ್ತಂ ನೇಹ ನಾಮುತ್ರ ತದ್ಭವೇತ್|| ಭಸ್ಮನೀವ ಹುತಂ ಹವ್ಯಂ ತಥಾ ಪೌನರ್ಭವೇ ದ್ವಿಜೇ| ಯೇ ತು ಧರ್ಮವ್ಯಪೇತೇಷು ಚಾರಿತ್ರಾಪಗತೇಷು ಚ| ಹವ್ಯಂ ಕವ್ಯಂ ಪ್ರಯಚ್ಛಂತಿ ತೇಷಾಂ ತತ್ಪ್ರೇತ್ಯ ನಶ್ಯತಿ|| ಜ್ಞಾನಪೂರ್ವಂ ತು ಯೇ ತೇಭ್ಯಃ ಪ್ರಯಚ್ಛಂತ್ಯಲ್ಪಬುದ್ಧಯಃ| ಪುರೀಷಂ ಭುಂಜತೇ ತೇಷಾಂ ಪಿತರಃ ಪ್ರೇತ್ಯ ನಿಶ್ಚಯಃ|| (ಭಾರತ ದರ್ಶನ/ಗೀತಾ ಪ್ರೆಸ್).

[2] ಪತಿಯು ಜೀವಿಸಿರುವಾಗ ಪರಪುರುಷನಿಂದ ಹುಟ್ಟಿದವನು ಕುಂಡ (ಭಾರತ ದರ್ಶನ).

[3] ತಮ್ಮನಿಗೆ ಮದುವೆಯಾದರೂ ಮದುವೆಯಾಗದೇ ಇರುವ ಅಣ್ಣ (ಭಾರತ ದರ್ಶನ).

[4] ತಿಲೈರ್ವಿರಹಿತಂ ಶ್ರಾದ್ಧಂ ಕೃತಂ ಕ್ರೋಧವಶೇನ ಚ| (ಭಾರತ ದರ್ಶನ/ಗೀತಾ ಪ್ರೆಸ್).

[5] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಸದಾಚಾರಪರಾಶ್ಚೈವ ವಿಜ್ಞೇಯಾಃ ಸರ್ವಪಾವನಾಃ|| (ಭಾರತ ದರ್ಶನ).

[6] ಈ ಶ್ಲೋಕಗಳಿಗೂ ವಿಷ್ಣುಪುರಾಣದ ತೃತೀಯಾಂಶದ ಪಂಚದಶೋಽಧ್ಯಾಯದ ಮೊದಲ ನಾಲ್ಕು ಶ್ಲೋಗಳಿಗೂ ಹೊಂದಿಕೆಯಿದೆ: ಔರ್ವ ಉವಾಚ| ಬ್ರಾಹ್ಮಣಾನ್ಭೋಜಯೇತ್ ಶ್ರಾದ್ಧೇ ಯದ್ಗುಣಾಂಸ್ತಾನ್ನಿಬೋಧ ಮೇ| ತ್ರಿಣಾಚಿಕೇತಸ್ತ್ರಿಮಧುಸ್ತ್ರಿಸುಪರ್ಣಷ್ಷಡಂಗವಿತ್|| ವೇದವಿತ್ ಶ್ರೋತ್ರಿಯೋ ಯೋಗೀ ತಥಾ ವೈ ಜ್ಯೇಷ್ಠಸಾಮಗಃ| ಋತ್ವಿಕ್ ಸ್ವಸ್ರೇಯದೌಹಿತ್ರಜಾಮಾತೃಶ್ವಶುರಾಸ್ತಥಾ|| ಮಾತುಲೋಥ ತಪೋನಿಷ್ಠಃ ಪಂಚಾಗ್ನ್ಯಭಿರತಸ್ತಥಾ| ಶಿಷ್ಯಾಸ್ಸಂಬಂಧಿನಶ್ಚೈವ ಮಾತಾಪಿತೃರತಶ್ಚ ಯಃ|| ಏತಾನ್ನಿಯೋಜಯೇತ್ ಶ್ರಾದ್ಧೇ ಪೂರ್ವೋಕ್ತಾನ್ ಪ್ರಥಮೇ ನೃಪ| ಬ್ರಾಹ್ಮಣಾನ್ ಪಿತೃತುಷ್ಟ್ಯರ್ಥಮನುಕಲ್ಪೇಷ್ವನಂತರಾನ್||

[7] ದ್ವಿತೀಯ ಕಠದಲ್ಲಿ ಬರುವ "ಅಯಂವಾವ ಯಃ ಪವತೇ" ಇತ್ಯಾದಿ ಮೂರು ಅನುವಾಕಗಳನ್ನು ಪಠಿಸತಕ್ಕವನು ಮತ್ತು ಅದರಂತೆ ಅನುಷ್ಠಾನ ಮಾಡತಕ್ಕವನು.

[8] ಪವನ, ಪಾವನ, ತ್ರೇತಾ, ಗಾರ್ಹ್ಯಪತ್ಯ, ಆವಹನೀಯ ಅಗ್ನಿಗಳು.

[9] "ಬ್ರಹ್ಮಮೇತು ಮಾಂ" ಇತ್ಯಾದಿ ಮೂರು ಅನುವಾಕಗಳನ್ನು ಅಧ್ಯಯನ ಮಾಡಿದವನು ಮತ್ತು ಅದಕ್ಕೆ ಸಂಬಂಧಿಸಿದ ವ್ರತವನ್ನು ಮಾಡತಕ್ಕವನು.

[10] ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ.

[11] "ಮೂರ್ಧಾನಂ ದಿವಃ" ಇತ್ಯಾದಿ ಋಗ್ವಿಶೇಷಕ್ಕೆ ಗೀತೆಯನ್ನು ಸೇರಿಸಿದಾಗ ಜ್ಯೇಷ್ಠಸಾಮವೆನಿಸುತ್ತದೆ.

[12] ಹತ್ತೂವರೆ ಮೈಲಿಗಳವರೆಗೆ (ಭಾರತ ದರ್ಶನ).

[13] ದೇವದತ್ತನು ಮಾಡುವ ಶ್ರಾದ್ಧಕ್ಕೆ ಸೋಮದತ್ತನನ್ನು ಕರೆಯುವುದು, ಸೋಮದತ್ತನು ಮಾಡುವ ಶ್ರಾದ್ಧಕ್ಕೆ ದೇವದತ್ತನನ್ನು ಕರೆಯುವುದು ಇದು ಪರಸ್ಪರ ನಿಮಂತ್ರಣ. ದೇವದತ್ತನು ಕೊಡುವಷ್ಟೇ ದಕ್ಷಿಣೆಯನ್ನು ಸೋಮದತ್ತನೂ ಕೊಡುವುದು ಇದು ದಕ್ಷಿಣಾವಿನಿಮಯ (ಭಾರತ ದರ್ಶನ).

[14] ನರಾಃ (ಭಾರತ ದರ್ಶನ/ಗೀತಾ ಪ್ರೆಸ್).

Comments are closed.