Anushasana Parva: Chapter 68

ಅನುಶಾಸನ ಪರ್ವ: ದಾನಧರ್ಮ ಪರ್ವ

೬೮

ಗೋದಾನಫಲ (೧-೨೧).

13068001 ಯುಧಿಷ್ಠಿರ ಉವಾಚ|

13068001a ಭೂಯ ಏವ ಕುರುಶ್ರೇಷ್ಠ ದಾನಾನಾಂ ವಿಧಿಮುತ್ತಮಮ್|

13068001c ಕಥಯಸ್ವ ಮಹಾಪ್ರಾಜ್ಞ ಭೂಮಿದಾನಂ ವಿಶೇಷತಃ||

ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞ! ಕುರುಶ್ರೇಷ್ಠ! ಉತ್ತಮ ದಾನಗಳ ವಿಧಿಯನ್ನು, ವಿಶೇಷವಾಗಿ ಭೂಮಿದಾನದ ಕುರಿತು, ಇನ್ನೊಮ್ಮೆ ಹೇಳು.

13068002a ಪೃಥಿವೀಂ ಕ್ಷತ್ರಿಯೋ ದದ್ಯಾದ್ಬ್ರಾಹ್ಮಣಸ್ತಾಂ ಸ್ವಕರ್ಮಣಾ|

13068002c ವಿಧಿವತ್ಪ್ರತಿಗೃಹ್ಣೀಯಾನ್ನ ತ್ವನ್ಯೋ ದಾತುಮರ್ಹತಿ||

ಕ್ಷತ್ರಿಯನು ಮಾತ್ರ ತನ್ನ ಕರ್ಮದಿಂದ ಬ್ರಾಹ್ಮಣರಿಗೆ ಭೂಮಿಯನ್ನು ಕೊಡಬಹುದು. ಮತ್ತು ಬ್ರಾಹ್ಮಣರೂ ಆ ದಾನವನ್ನು ವಿಧಿವತ್ತಾಗಿ ಕ್ಷತ್ರಿಯನಿಂದಲೇ ಪ್ರತಿಗ್ರಹಿಸಬಲ್ಲರು. ಅನ್ಯರು ಭೂಮಿಯನ್ನು ದಾನಮಾಡಲು ಅರ್ಹರಲ್ಲ.

13068003a ಸರ್ವವರ್ಣೈಸ್ತು ಯಚ್ಚಕ್ಯಂ ಪ್ರದಾತುಂ ಫಲಕಾಂಕ್ಷಿಭಿಃ|

13068003c ವೇದೇ ವಾ ಯತ್ಸಮಾಮ್ನಾತಂ ತನ್ಮೇ ವ್ಯಾಖ್ಯಾತುಮರ್ಹಸಿ||

ಫಲವನ್ನು ಬಯಸುವ ಸರ್ವ ವರ್ಣದವರೂ ದಾನಮಾಡಲು ಶಕ್ಯವಾದ ಮತ್ತು ವೇದದಲ್ಲಿ ಅಂತಹ ಯಾವ ದಾನದ ವರ್ಣನೆಯಿದೆಯೋ ಅದನ್ನು ನನಗೆ ಹೇಳಬೇಕು.”

13068004 ಭೀಷ್ಮ ಉವಾಚ|

13068004a ತುಲ್ಯನಾಮಾನಿ ದೇಯಾನಿ ತ್ರೀಣಿ ತುಲ್ಯಫಲಾನಿ ಚ|

13068004c ಸರ್ವಕಾಮಫಲಾನೀಹ ಗಾವಃ ಪೃಥ್ವೀ ಸರಸ್ವತೀ||

ಭೀಷ್ಮನು ಹೇಳಿದನು: “ಗೋವು, ಪೃಥ್ವಿ ಮತ್ತು ಸರಸ್ವತೀ ಈ ಮೂರು ಹೆಸರುಗಳು ಸಮನಾಗಿವೆ. ಈ ಮೂರನ್ನು ದಾನಮಾಡುವುದರಿಂದ ದೊರೆಯುವ ಪುಣ್ಯವು ಸಮನಾಗಿವೆ. ಈ ಮೂರೂ ಸರ್ವಕಾಮನೆಗಳನ್ನೂ ಫಲಿಸುತ್ತವೆ.

13068005a ಯೋ ಬ್ರೂಯಾಚ್ಚಾಪಿ ಶಿಷ್ಯಾಯ ಧರ್ಮ್ಯಾಂ ಬ್ರಾಹ್ಮೀಂ ಸರಸ್ವತೀಮ್|

13068005c ಪೃಥಿವೀಗೋಪ್ರದಾನಾಭ್ಯಾಂ ಸ ತುಲ್ಯಂ ಫಲಮಶ್ನುತೇ||

ಯಾರು ಶಿಷ್ಯನಿಗೆ ಧರ್ಮ ಬ್ರಾಹ್ಮೀ ಸರಸ್ವತಿಯನ್ನು ಉಪದೇಶಿಸುತ್ತಾನೋ ಅವನು ಭೂದಾನ ಮತ್ತು ಗೋದಾನ ಇವೆರಡರ ಫಲಗಳನ್ನೂ ಪಡೆಯುತ್ತಾನೆ.

13068006a ತಥೈವ ಗಾಃ ಪ್ರಶಂಸಂತಿ ನ ಚ ದೇಯಂ ತತಃ ಪರಮ್|

13068006c ಸಂನಿಕೃಷ್ಟಫಲಾಸ್ತಾ ಹಿ ಲಘ್ವರ್ಥಾಶ್ಚ ಯುಧಿಷ್ಠಿರ|

ಯುಧಿಷ್ಠಿರ! ಹಾಗೆಯೇ ಗೋದಾನವನ್ನೂ ಪ್ರಶಂಸಿಸಲಾಗಿದೆ. ಅದಕ್ಕಿಂತ ದೊಡ್ಡ ದಾನವು ಇಲ್ಲ. ಗೋದಾನದ ಫಲವು ಕೆಲವೇ ಸಮಯದಲ್ಲಿ ದೊರಕುತ್ತದೆ ಮತ್ತು ಅರ್ಥಸಿದ್ಧಿಗೆ ಕಾರಣವಾಗುತ್ತದೆ.

13068006e ಮಾತರಃ ಸರ್ವಭೂತಾನಾಂ ಗಾವಃ ಸರ್ವಸುಖಪ್ರದಾಃ||

13068007a ವೃದ್ಧಿಮಾಕಾಂಕ್ಷತಾ ನಿತ್ಯಂ ಗಾವಃ ಕಾರ್ಯಾಃ ಪ್ರದಕ್ಷಿಣಾಃ|

ಗೋವು ಸರ್ವಭೂತಗಳ ಮಾತೆ. ಸರ್ವಸುಖಗಳನ್ನೂ ನೀಡುವವಳು. ವೃದ್ಧಿಯನ್ನು ಬಯಸುವವರು ನಿತ್ಯವೂ ಗೋವಿನ ಪ್ರಕಕ್ಷಿಣೆ ಮಾಡಬೇಕು.

[1]13068007c ಮಂಗಲಾಯತನಂ ದೇವ್ಯಸ್ತಸ್ಮಾತ್ಪೂಜ್ಯಾಃ ಸದೈವ ಹಿ||

13068008a ಪ್ರಚೋದನಂ ದೇವಕೃತಂ ಗವಾಂ ಕರ್ಮಸು ವರ್ತತಾಮ್|

13068008c ಪೂರ್ವಮೇವಾಕ್ಷರಂ ನಾನ್ಯದಭಿಧೇಯಂ ಕಥಂ ಚನ||

ಅವು ಮಂಗಲಾಯತ ದೇವಿಯರು. ಆದುದರಿಂದ ಸದೈವ ಅವನ್ನು ಪೂಜಿಸಬೇಕು. ದೇವತೆಗಳೂ ಕೂಡ ಯಜ್ಞದ ಸಮಯದಲ್ಲಿ ಎತ್ತುಗಳನ್ನು ಊಳುವ ಕಾರ್ಯದಲ್ಲಿ ಬಳಸಿದ್ದರು. ಆದುದರಿಂದ ಮೊದಲು ಯಜ್ಞಕ್ಕೆ ಮಾತ್ರ ಎತ್ತುಗಳನ್ನು ಕಟ್ಟಿ ಬಳಸುತ್ತಿದ್ದರು. ಆದುದರಿಂದ ಬೇರೆ ಯಾವ ಕಾರ್ಯದಲ್ಲಿಯೂ ಎತ್ತುಗಳನ್ನು ಕಟ್ಟಿ ಹೊಡೆಯಬಾರದು.

13068009a ಪ್ರಚಾರೇ ವಾ ನಿಪಾನೇ ವಾ ಬುಧೋ ನೋದ್ವೇಜಯೇತ ಗಾಃ|

13068009c ತೃಷಿತಾ ಹ್ಯಭಿವೀಕ್ಷಂತ್ಯೋ ನರಂ ಹನ್ಯುಃ ಸಬಾಂಧವಮ್||

ತಿಳಿದವನು ಗೋವನ್ನು ಸ್ವಚ್ಛಂದವಾಗಿ ಸಂಚರಿಸಲು ಬಿಡುತ್ತಾನೆ. ಯಾವುದೇ ಉಪದ್ರವವಿಲ್ಲದಲ್ಲಿ ಇರುವಂತೆ ನೋಡಿಕೊಳ್ಳುತ್ತಾನೆ. ಅದಕ್ಕೇ ಯಾವುದೇ ಉದ್ವೇಗವನ್ನೂ ನೀಡುವುದಿಲ್ಲ. ಬಾಯಾರಿಕೆಯಿಂದ ಮನುಷ್ಯನನ್ನು ನೋಡುವ ಗೋವು ಅವನನ್ನು ಬಾಂಧವರೊಡನೆ ಕೊಂದುಬಿಡುತ್ತದೆ.

13068010a ಪಿತೃಸದ್ಮಾನಿ ಸತತಂ ದೇವತಾಯತನಾನಿ ಚ|

13068010c ಪೂಯಂತೇ ಶಕೃತಾ ಯಾಸಾಂ ಪೂತಂ ಕಿಮಧಿಕಂ ತತಃ||

ಯಾವುದರ ಸಗಣಿಯಿಂದ ದೇವಾಲಯಗಳು ಮತ್ತು ಪಿತೃಸ್ಥಾನಗಳು ಪವಿತ್ರವಾಗುವವೋ ಆ ಗೋವಿಗಿಂತ ಪವಿತ್ರವಾದುದು ಬೇರೆ ಯಾವುದಿದೆ?

13068011a ಗ್ರಾಸಮುಷ್ಟಿಂ ಪರಗವೇ ದದ್ಯಾತ್ಸಂವತ್ಸರಂ ತು ಯಃ|

13068011c ಅಕೃತ್ವಾ ಸ್ವಯಮಾಹಾರಂ ವ್ರತಂ ತತ್ಸಾರ್ವಕಾಮಿಕಮ್||

ಒಂದು ವರ್ಷದ ಪರ್ಯಂತ ಪ್ರತಿದಿನವೂ ತಾನು ಏನೂ ತಿನ್ನುವುದರ ಮೊದಲೇ ಇನ್ನೊಬ್ಬರ ಗೋವಿಗೆ ಒಂದು ಮುಷ್ಟಿ ಹುಲ್ಲನ್ನು ತಿನ್ನಿಸುವವ ಸರ್ವ ಕಾಮನೆಗಳೂ ಫಲಿಸುತ್ತವೆ.

13068012a ಸ ಹಿ ಪುತ್ರಾನ್ಯಶೋರ್ಥಂ ಚ ಶ್ರಿಯಂ ಚಾಪ್ಯಧಿಗಚ್ಚತಿ|

13068012c ನಾಶಯತ್ಯಶುಭಂ ಚೈವ ದುಃಸ್ವಪ್ನಂ ಚ ವ್ಯಪೋಹತಿ||

ಅವನು ಪುತ್ರ, ಯಶಸ್ಸು, ಧನ ಮತ್ತು ಸಂಪತ್ತನ್ನು ಪಡೆದುಕೊಳ್ಳುತ್ತಾನೆ. ಅಶುಭಗಳು ಮತ್ತು ದುಃಸ್ವಪ್ನಗಳು ಅದರಿಂದ ನಾಶವಾಗುತ್ತವೆ.”

13068013 ಯುಧಿಷ್ಠಿರ ಉವಾಚ|

13068013a ದೇಯಾಃ ಕಿಂಲಕ್ಷಣಾ ಗಾವಃ ಕಾಶ್ಚಾಪಿ ಪರಿವರ್ಜಯೇತ್|

13068013c ಕೀದೃಶಾಯ ಪ್ರದಾತವ್ಯಾ ನ ದೇಯಾಃ ಕೀದೃಶಾಯ ಚ||

ಯುಧಿಷ್ಠಿರನು ಹೇಳಿದನು: “ಯಾವ ಲಕ್ಷಣಗಳುಳ್ಳ ಗೋವುಗಳನ್ನು ದಾನಮಾಡಬೇಕು ಮತ್ತು ಯಾವ ಲಕ್ಷಣಗಳಿರುವವನ್ನು ದಾನಮಾಡಬಾರದು? ಎಂಥವರಿಗೆ ಗೋವನ್ನು ದಾನಮಾಡಬೇಕು ಮತ್ತು ಎಂಥವರಿಗೆ ಅದನ್ನು ದಾನಮಾಡಬಾರದು?”

13068014 ಭೀಷ್ಮ ಉವಾಚ|

13068014a ಅಸದ್ವೃತ್ತಾಯ ಪಾಪಾಯ ಲುಬ್ಧಾಯಾನೃತವಾದಿನೇ|

13068014c ಹವ್ಯಕವ್ಯವ್ಯಪೇತಾಯ ನ ದೇಯಾ ಗೌಃ ಕಥಂ ಚನ||

ಭೀಷ್ಮನು ಹೇಳಿದನು: “ಸದ್ವ್ಯವಹಾರಗಳಿಲ್ಲದ ಪಾಪಿಗೆ, ಲುಬ್ಧನಿಗೆ, ಸುಳ್ಳುಹೇಳುವವನಿಗೆ, ಮತ್ತು ಹವ್ಯ-ಕವ್ಯಗಳನ್ನು ಮಾಡದಿದ್ದವನಿಗೆ ಯಾವುದೇ ಗೋವನ್ನು ದಾನಮಾಡಬಾರದು.

13068015a ಭಿಕ್ಷವೇ ಬಹುಪುತ್ರಾಯ ಶ್ರೋತ್ರಿಯಾಯಾಹಿತಾಗ್ನಯೇ|

13068015c ದತ್ತ್ವಾ ದಶಗವಾಂ ದಾತಾ ಲೋಕಾನಾಪ್ನೋತ್ಯನುತ್ತಮಾನ್||

ಅನೇಕ ಮಕ್ಕಳಿರುವ, ಶ್ರೋತ್ರಿ, ಅಗ್ನಿಹೋತ್ರಿ ಮತ್ತು ಗೋವು ಬೇಕೆಂದು ಯಾಚಿಸುವ ಬ್ರಾಹ್ಮಣನಿಗೆ ಹತ್ತು ಗೋವುಗಳನ್ನು ದಾನಮಾಡಿದ ದಾತಾರನು ಅನುತ್ತಮ ಲೋಕಗಳನ್ನು ಪಡೆದುಕೊಳ್ಳುತ್ತಾನೆ.

13068016a ಯಂ ಚೈವ ಧರ್ಮಂ ಕುರುತೇ ತಸ್ಯ ಪುಣ್ಯಫಲಂ ಚ ಯತ್|

13068016c ಸರ್ವಸ್ಯೈವಾಂಶಭಾಗ್ದಾತಾ ತನ್ನಿಮಿತ್ತಂ ಪ್ರವೃತ್ತಯಃ||

ಆ ಗೋವಿನಿಂದ ಅವನು ಯಾವ ಪುಣ್ಯಕರ್ಮಗಳನ್ನು ಮಾಡುತ್ತಾನೋ ಅದರ ಫಲದ ಒಂದು ಅಂಶಕ್ಕೆ ಗೋದಾನಮಾಡಿದವನೂ ಭಾಗಿಯಾಗುತ್ತಾನೆ.

13068017a ಯಶ್ಚೈನಮುತ್ಪಾದಯತಿ ಯಶ್ಚೈನಂ ತ್ರಾಯತೇ ಭಯಾತ್|

13068017c ಯಶ್ಚಾಸ್ಯ ಕುರುತೇ ವೃತ್ತಿಂ ಸರ್ವೇ ತೇ ಪಿತರಸ್ತ್ರಯಃ||

ಯಾವುದು ಹುಟ್ಟಿಸುತ್ತದೆಯೋ, ಯಾವುದು ಭಯದಿಂದ ರಕ್ಷಿಸುತ್ತದೆಯೋ ಮತ್ತು ಯಾವುದರಿಂದ ಜೀವನ ವೃತ್ತಿಯು ನಡೆಯುತ್ತದೆಯೋ ಈ ಮೂರೂ ತಂದೆಯಂತೆಯೇ.

13068018a ಕಲ್ಮಷಂ ಗುರುಶುಶ್ರೂಷಾ ಹಂತಿ ಮಾನೋ ಮಹದ್ಯಶಃ|

13068018c ಅಪುತ್ರತಾಂ ತ್ರಯಃ ಪುತ್ರಾ ಅವೃತ್ತಿಂ ದಶ ಧೇನವಃ||

ಗುರುಶುಶ್ರೂಷೆಯು ಪಾಪವನ್ನು ಕಳೆಯುತ್ತದೆ. ಅಭಿಮಾನವು ಮಹಾ ಯಶಸ್ಸನ್ನೂ ನಾಶಗೊಳಿಸುತ್ತದೆ. ಮೂರು ಪುತ್ರರು ಪುತ್ರರಿಲ್ಲದ ಶೋಕವನ್ನು ನಾಶಗೊಳಿಸುತ್ತದೆ ಮತ್ತು ಹತ್ತು ಹಸುಗಳು ಜೀವನ ವೃತ್ತಿಯನ್ನು ನೀಡುತ್ತವೆ.

13068019a ವೇದಾಂತನಿಷ್ಠಸ್ಯ ಬಹುಶ್ರುತಸ್ಯ

ಪ್ರಜ್ಞಾನತೃಪ್ತಸ್ಯ ಜಿತೇಂದ್ರಿಯಸ್ಯ|

13068019c ಶಿಷ್ಟಸ್ಯ ದಾಂತಸ್ಯ ಯತಸ್ಯ ಚೈವ

ಭೂತೇಷು ನಿತ್ಯಂ ಪ್ರಿಯವಾದಿನಶ್ಚ||

13068020a ಯಃ ಕ್ಷುದ್ಭಯಾದ್ವೈ ನ ವಿಕರ್ಮ ಕುರ್ಯಾನ್

ಮೃದುರ್ದಾಂತಶ್ಚಾತಿಥೇಯಶ್ಚ ನಿತ್ಯಮ್|

13068020c ವೃತ್ತಿಂ ವಿಪ್ರಾಯಾತಿಸೃಜೇತ ತಸ್ಮೈ

ಯಸ್ತುಲ್ಯಶೀಲಶ್ಚ ಸಪುತ್ರದಾರಃ||

ವೇದಾಂತನಿಷ್ಠ, ಬಹುವಿದ್ವಾಂಸ, ಪ್ರಜ್ಞಾನತೃಪ್ತ, ಜಿತೇಂದ್ರಿಯ, ಶಿಷ್ಟ, ದಾಂತ, ಪ್ರಯತ್ನಶೀಲ, ಜೀವಿಗಳೊಡನೆ ನಿತ್ಯವೂ ಪ್ರಿಯವಾಗಿ ಮಾತನಾಡುವ, ಹಸಿವು-ಭಯಗಳಲ್ಲಿಯೂ ಕೆಟ್ಟಕರ್ಮಗಳನ್ನು ಮಾಡದ, ಮೃದುಸ್ವಭಾವದ, ಶಾಂತ, ಅತಿಥಿಪ್ರಿಯ, ಹೆಂಡತಿ-ಮಕ್ಕಳಿರುವ ಬ್ರಾಹ್ಮಣನಿಗೆ ನಿತ್ಯವೂ ಜೀವನ ವೃತ್ತಿಯನ್ನು ಮಾಡಿಕೊಡಬೇಕು.

13068021a ಶುಭೇ ಪಾತ್ರೇ ಯೇ ಗುಣಾ ಗೋಪ್ರದಾನೇ

ತಾವಾನ್ದೋಷೋ ಬ್ರಾಹ್ಮಣಸ್ವಾಪಹಾರೇ|

13068021c ಸರ್ವಾವಸ್ಥಂ ಬ್ರಾಹ್ಮಣಸ್ವಾಪಹಾರೋ

ದಾರಾಶ್ಚೈಷಾಂ ದೂರತೋ ವರ್ಜನೀಯಾಃ||

ಗುಣಯುಕ್ತ ಪಾತ್ರ ಬ್ರಾಹ್ಮಣನಿಗೆ ಗೋದಾನಮಾಡುವುದರಿಂದ ಯಾವ ಶುಭ ಪುಣ್ಯವು ದೊರೆಯುವುದೋ ಅಷ್ಟೇ ದೋಷವು ಬ್ರಾಹ್ಮಣನ ಸಂಪತ್ತನ್ನು ಅಪಹರಿಸುವುದರಿಂದ ದೊರೆಯುತ್ತದೆ. ಸರ್ವಾವಸ್ಥೆಯಲ್ಲಿ ಬ್ರಾಹ್ಮಣರ ಸ್ವತ್ತನ್ನು ಅಪಹರಿಸಬಾರದು ಮತ್ತು ಅವರ ಪತ್ನಿಯರ ಸಂಗವನ್ನು ದೂರದಿಂದಲೇ ವರ್ಜಿಸಬೇಕು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋದಾನಮಹಾತ್ಮ್ಯೇ ಅಷ್ಟಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋದಾನಮಹಾತ್ಮ್ಯೆ ಎನ್ನುವ ಅರವತ್ತೆಂಟನೇ ಅಧ್ಯಾಯವು.

Image result for flowers against white background

[1] ಇದಕ್ಕೆ ಮೊದಲು ಗೋರಖಪುರ ಸಂಪುಟದಲ್ಲೀ ಈ ಶ್ಲೋಕಾರ್ಧವಿದೆ: ಸಂತಾಡ್ಯಾ ನ ತು ಪಾದೇನ ಗವಾಂ ಮಧ್ಯೇ ನ ಚ ವ್ರಜೇತ್|

Comments are closed.